Demo image Demo image Demo image Demo image Demo image Demo image Demo image Demo image

ನಾ ಕಂಡಂತೆ ಬೇಂದ್ರೆಯವರ "ಹುಬ್ಬಳ್ಳಿಯಾಂವಾ"

  • ಮಂಗಳವಾರ, ಜನವರಿ 20, 2009
  • ಬಿಸಿಲ ಹನಿ
  • ನಾನು ಮೊನ್ನೆ ನನ್ನ ಅಚ್ಚು ಮಿಚ್ಚಿನ ಕವಿ ಬೇಂದ್ರೆಯವರ ಹಾಡುಗಳನ್ನು ಸೀಡಿ ಪ್ಲೇಯರ್‍ನಲ್ಲಿ ಕೇಳುತ್ತಿದ್ದಾಗ ಅದರಲ್ಲಿನ ಒಂದು ಹಾಡು "ಹುಬ್ಬಳ್ಳಿಯಾಂವಾ" ನನ್ನನ್ನು ತಟ್ಟನೆ ಹಿಡಿದು ನಿಲ್ಲಿಸಿಬಿಟ್ಟಿತು. ಮತ್ತೆ ಮತ್ತೆ ರಿವೈಂಡ್ ಮಾಡಿ ಮತ್ತೆ ಮತ್ತೆ ಕೇಳಿದೆ. ಕೇಳಿದಷ್ಟು ನನ್ನ ಬುದ್ಧಿ ಭಾವಗಳೆರಡೂ ಹೊಸ ಹೊಳಹುಗಳನ್ನು ಹುಡುಕಿ ಹೊರಟವು. ನಾನದನ್ನು ಈ ಮೊದಲು ಸಾಕಷ್ಟು ಸಾರಿ ಕೇಳಿದ್ದೇನಾದರೂ ಈ ಬಾರಿ ಕೇಳುವಾಗ ಅದೇಕೋ ಗೊತ್ತಿಲ್ಲ ಅಲ್ಲಿ ಬಳಸಿದ ವಸ್ತು, ಭಾಷೆ, ಶಬ್ಧಭಂಡಾರ ಮತ್ತು ಹದವಾದ ಲಯಗಾರಿಕೆಗಳು ನನ್ನನ್ನು ತೀವ್ರವಾಗಿ ಆಕರ್ಷಿಸಿ ಈ ಲೇಖನ ಬರೆಯುವಂತೆ ಪ್ರೇರೇಪಿಸಿತು. ಈ ಹಾಡನ್ನು ಅಷ್ಟೇ ಭಾವಪೂರ್ಣವಾಗಿ ಸ್ನೇಹಾ ಹಂಪಿಹೊಳಿಯವರು ಧಾರವಾಡದ ಕನ್ನಡವನ್ನಾಡಿ ರೂಡಿಯಿದ್ದುದರಿಂದ, ಬೇರೆ ಗಾಯಕರಂತೆ ಅದರ accentನ್ನು ಕೆಡಿಸಿ ಹಾಡದೆ ಬೇಂದ್ರೆ ಹಾಡನ್ನು ಹೇಗೆ ಹಾಡಬೇಕೋ ಹಾಗೆ ಹಾಡಿದ್ದಾರೆ. ನನ್ನ ಪ್ರಕಾರ ಬೇಂದ್ರೆಯವರ ಆಡು ಭಾಷೆಯಲ್ಲಿರುವ ಹಾಡುಗಳನ್ನು ಆ ಭಾಷೆಯನ್ನು ಆಡುವವರೇ ಹಾಡಿದರೆ ಚೆಂದ. ಆಗಲೇ ಅದಕ್ಕೊಂದು ಲಯ, ಗತ್ತು, ನಾದ, ಸೊಗಡು ಹಾಗೂ ಸ್ಪಷ್ಟತೆಯಿರುವದು.
    ನಾನು ಬೇಂದ್ರೆಯವರ ಕವನವನ್ನು ವಿಮರ್ಶೆ ಮಾಡುವಷ್ಟು ಪ್ರಖಾಂಡ ಪಂಡಿತನೂ ಅಲ್ಲ ವಿಮರ್ಶೆಯ ಒಳಹರಿವುಗಳನ್ನರಿತ ವಿಮರ್ಶಕನೂ ಅಲ್ಲ. ಒಬ್ಬ ಸಾಮಾನ್ಯ ಓದುಗನಾಗಿ ಬೇಂದ್ರೆಯವರ ಈ ಕವನ ನನ್ನ ಗ್ರಹಿಕೆಗೆ ನಿಲುಕಿದ್ದೆಷ್ಟು ಎಂಬುದನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
    ಇದೊಂದು ವಿರಹಗೀತೆ. ಪ್ರೇಯಸಿ ತನ್ನ ಪ್ರಿಯಕರನಿಗಾಗಿ ಹಂಬಲಿಸುವ ವಿರಹಗೀತೆಯಾಗಲಿ, ಹೆಂಡತಿ ತನ್ನ ಗಂಡನ ಬರುವಿಕೆಗಾಗಿ ಕಾಯುವ ವಿರಹಗೀತೆಯಾಗಲಿ ಅಲ್ಲ ಇದು. ಸೂಳೆಯೊಬ್ಬಳು (ಯಲ್ಲಮ್ಮ ಜೋಗತಿ) ಈಗಾಗಲೇ ತನ್ನೊಂದಿಗೆ ಉಡ್ಕಿ ಮಾಡಿಕೊಂಡು ವಾರಕ್ಕೆ ಮೂರು ಸಾರಿ ಲೆಕ್ಕದಲ್ಲಿ ಬಂದು ಅವಳೊಂದಿಗೆ ಸೇರಿ ಹೋದವನಿಗಾಗಿ (ಗಿರಾಕಿಗಾಗಿ) ಹಪಹಪಿಸುವ ಹಾಡಿದು. ಅವನು ಹುಬ್ಬಳ್ಳಿಯಾಂವಾ. ಹಾಗಾದರೆ ಆ ಜೋಗತಿ ಎಲ್ಲಿಯವಳು? ಧಾರವಾಡದವಳಾ? ಕಲಘಟಗಿಯವಳಾ? ಬೆಳಗಾವಿಯವಳಾ? ಸೌದತ್ತಿಯವಳಾ? ಗೊತ್ತಿಲ್ಲ. ಕವನದುದ್ದಕ್ಕೂ ಈ ಪ್ರಶ್ನೆ ನಿಗೂಢವಾಗಿ ಉಳಿಯುತ್ತದೆ. ಅವಳು ಎಲ್ಲಿಯವಳಾದರೇನು? ಕವನದಲ್ಲಿ ಇದು ಮುಖ್ಯವಾಗದೆ ಅವಳ ಹಂಬಲಿಕೆಯಷ್ಟೆ ನಮಗೆ ಮುಖ್ಯವಾಗುತ್ತದೆ. ಮೇಲಾಗಿ ಜೋಗತಿಯರಿಗೆ ಇಂಥದೇ ಅಂತ ಒಂದು ನಿರ್ಧಿಷ್ಟ ಊರು ಇರುವದಿಲ್ಲ.

    ಈ ಹುಬ್ಬಳ್ಳಿಯಾಂವಾ ಮತ್ತು ಜೋಗತಿಯ ನಡುವೆ ಈಗಾಗಲೇ ಏನೋ ಮನಸ್ತಾಪ ಬಂದು ಅದು ಪ್ರಕೋಪಕ್ಕೆ ತಿರುಗಿ ಇಬ್ಬರಲ್ಲೂ ವಿರಸ ಉಂಟಾಗಿದೆ. ಹಾಗಾಗಿ ವಾರಕ್ಕೆ ಮೂರುಸಾರಿಯಾದರೂ ಬಂದು ಹೋಗುವವ ಇನ್ನೂ ಬಂದಿಲ್ಲ. ಜೋಗತಿಯಲ್ಲಿ ಆತಂಕವೆದ್ದಿದೆ. ಒಬ್ಬ ಸೂಳೆಗೆ ಎಷ್ಟೊಂದು ಗಿರಾಕಿಗಳು! ಆದರೆ ಈ ಸೂಳೆಗೆ ಈ ಗಿರಾಕಿಯೇ ಯಾಕೆ ಬೇಕು? ಅವನು ಬರದೆ ಹೋದರೆ ಯಾಕಿಷ್ಟೊಂದು ಆತಂಕ? ಯಾವ ಗಿರಾಕಿಯಾದರಾದೀತು! ಎಂದು ನೀವು ಕೇಳಬಹುದು. ಆದರೆ ಕವನ ಬೆಳೆದಂತೆ ನಮಗೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಅವರದು ಬರಿ ಸೂಳೆ-ಗಿರಾಕಿ ಸಂಬಂಧವಲ್ಲ. ಗಂಡ ಹೆಂಡತಿಯರಷ್ಟೇ ಪವಿತ್ರವಾದ ಸಂಬಂಧವಲ್ಲದ ಸಂಬಂಧವದು. ಕವನ ಆರಂಭವಾಗುವದೇ ಅವಳ ಈ ಆತಂಕದೊಂದಿಗೆ-
    "ಇನ್ನೂ ಯಾಕ ಬರಲಿಲ್ಲಂವ ಹುಬ್ಬಳ್ಳಿಯಾಂವಾ
    ವಾರದಾಗ ಮೂರು ಸರತಿ ಬಂದು ಹೋದಂವಾ"
    ಅವಳ ಈ ಆತಂಕವನ್ನು ಶಮನಗೊಳಿಸಿಕೊಳ್ಳುವುದು ಹೇಗೇ? ಅವನ ವೇಶಭೂಷಣ, ಹಾವಭಾವ, ತೋರ್ಕೆಗಳನ್ನು ನೆನಪಿಸಿಕೊಳ್ಳುವದರ ಮೂಲಕ ಕ್ಷಣ ಕಾಲ ತನ್ನ ಆತಂಕವನ್ನು ಮರೆಯಲು ಪ್ರಯತ್ನಿಸುತ್ತಾಳೆ.
    "ಭಾರಿ ಜರದ ವಾರಿ ರುಮಾಲು ಸುತ್ತಿಕೊಂಡಾಂವಾ
    ತುಂಬು-ಮೀಸಿ ತೀಡಿಕೊಂತ ಹುಬ್ಬು ಹಾರಿಸಂವಾ"
    ಅವನು ರಸಿಕ. ಅವನೊಳಗೆ ಕವಿಯಿದ್ದಾನೆ. ಹಾಡುಗಾರನಿದ್ದಾನೆ. ಇದೆಲ್ಲದಕ್ಕೂ ಅವಳು ಮನಸೋತಿದ್ದಾಳೆ. ಇದನ್ನು ಮುಂದಿನ ಸಾಲುಗಳಲ್ಲಿ ತೆರೆದಿಡುತ್ತಾಳೆ.
    "ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
    ಏನ ಅಂದರ ಏನೋ ಕಟ್ಟಿ ಹಾಡ ಹಾಡಂವಾ"

    ಇಂಥ ರಸಿಕನನ್ನು ಯಾವ ಹೆಣ್ಣು ತಾನೆ ಇಷ್ಟಪಡುವದಿಲ್ಲ? ಈ ಕವನದ ಸೂಳೆ ಸಾಮಾನ್ಯ ಸೂಳೆಯಲ್ಲ. ಯಲ್ಲಮ್ಮ ದೇವರ ಹೆಸರಲ್ಲಿ ಜೋಗತಿ ಆದವಳು. ಇವಳು ಗರತಿಯಾಗುವ ಸಾಮಾಜಿಕ ಹಕ್ಕನ್ನು ಕಳೆದುಕೊಂಡಿದ್ದಾಳೆ. ಇಂಥವಳಿಗೆ ಈ ರಸಿಕ ಕಟ್ಟಿ ಕೊಡುವ ಕನಸನ್ನು ಎರಡನೆಯ ನುಡಿಯಲ್ಲಿ ಹಾಡುತ್ತಾಳೆ.
    "ತಾಳಿ ಮಣಿಗೆ ಬ್ಯಾಳಿ ಮಣಿ ನಿನಗ ಬೇಕೇನಂದಾಂವಾ
    ಬಂಗಾರ-ಹುಡಿಲೇ ಭಂಡಾರವ ಬೆಳಿಸೇನೆಂದಾಂವಾ"
    ಜೋಗತಿಯರು ಎಲ್ಲಮ್ಮನ ಹೆಸರಿನಲ್ಲಿ ತಾಳಿಯನ್ನು ಕಟ್ಟಿಕೊಳ್ಳುತ್ತಾರೆ. ತಾಳಿಯ ಮದ್ಯದಲ್ಲಿರುವ ಎರಡು ಬೇಳೆಗಳು ಕೇವಲ ಮದುವೆಯಾದ ಗರತಿಯ ಸೊತ್ತು. ದೇವರ ಹೆಸರಲ್ಲಿ ಸೂಳೆಯಾದವಳಿಗೆ ಈ ಬೇಳೆಗಳನ್ನು ಹಾಕಿಕೊಳ್ಳುವ ಹಕ್ಕಿಲ್ಲ. ಹೀಗಾಗಿ ಅವಳಿಗೆ ಗರತಿಯಾಗುವ ಅಸಾಧ್ಯ ಕನಸನ್ನು ಕಲ್ಪನೆಯಲ್ಲಿ ಕಟ್ಟಿಕೊಡುವದರ ಮೂಲಕ ಅವಳನ್ನು ಮರಳು ಮಾಡುತ್ತಾನೆ. ಗರತಿಯಾಗುವ ಈ ಭಾವವೇ ಅವಳನ್ನು ಪ್ರಸನ್ನಗೊಳಿಸುತ್ತದೆ. ಈ ಜೋಗತಿಯರ ಸಂಪತ್ತೆಂದರೆ ಯಲ್ಲಮ್ಮನ ಗುಡಿಯಿಂದ ತಂದ ಭಂಡಾರ. ಆ ಭಂಡಾರವನ್ನು ಬಂಗಾರದ ಹುಡಿಯಿಂದ ತುಂಬುತ್ತೇನೆನ್ನುವ ಔದಾರ್ಯವನ್ನು ತೋರುತ್ತಾನೆ. ಅಂದರೆ ನಮಗಿಲ್ಲಿ ಗೊತ್ತಾಗುವದು ಇವನೊಬ್ಬ ಶ್ರೀಮಂತನೆಂದು. ಈ ಸಿರಿವಂತ ತನ್ನ ಮೊದಲ ಹೆಜ್ಜೆಗಳನ್ನು ಕಸುಬಿನವರ (professional prostitutes) ಮನೆಗಳಲ್ಲಿ ಹಾಕಿದ್ದಾನೆ; ಅವರಾದ ಮೇಲೆ ಅದಕ್ಕೂ ಹೆಚ್ಚಿನ ಸ್ತರದ ಬಸವಿಯರ (temple prostitutes) ತಾಣಗಳನ್ನು ದಾಟಿ ಬಂದಿದ್ದಾನೆ. ಇದೀಗ ಬಸವಿಯರಿಗಿಂತ ಹೆಚ್ಚಿನ ಸ್ತರದಲ್ಲಿರುವ ಜೋಗತಿಯ ಜೊತೆಗೆ ಇವನ ಸಂಬಂಧ.
    "ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
    ಜೋಗತೇರಗೆ ಮೂಗತಿ ಅಂತ ನನಗ ಅಂದಾಂವಾ"
    ಆ ಜೋಗತಿಯನ್ನು ಜೋಗತಿಯರಲ್ಲಿಯೇ ಶ್ರೇಷ್ಠ ಎಂದು ಕರೆಯುತ್ತಾನೆ. ಇಂಥ ಗಂಡಸನ್ನು ಯಾವ ಹೆಣ್ಣು ತಾನೆ ಇಷ್ಟಪಡುವದಿಲ್ಲ? ಅವನು ಕೊಡುವ ದೈಹಿಕ ಸುಖಕ್ಕಿಂತ ಮಾನಸಿಕ ಸುಖವು ಅವಳಿಗೆ ಹೆಚ್ಚು ಪ್ರಿಯವಾಗುತ್ತದೆ. ಅವನ ಸಾಮಿಪ್ಯ ಆಪ್ತವೆನಿಸುತ್ತದೆ. ಹೀಗಾಗಿ ಅವನೊಬ್ಬ ಗಿರಾಕಿಯಿದ್ದರೂ ಸಹ ಕೆಲಸ ಮುಗಿದ ಮೇಲೆ ಅವನನ್ನು ಹೋಗಲು ಬಿಡುವದಿಲ್ಲ. ಇರು ಎಂದು ಬೇಡುತ್ತಾಳೆ. ಅವನು ಅದನ್ನು ಲೆಕ್ಕಿಸದೇ ಹೊರಟಾಗ ಮಾರಿ ತೆಳಗ ಹಾಕುತ್ತಾಳೆ. ಅವಳ ಸಪ್ಪೆ ಮುಖ ನೋಡಿ ತನ್ನ ನಿರ್ಧಾರವನ್ನು ಬದಲಿಸಿ ಅವಳನ್ನು ಸಂತುಷ್ಟಗೊಳಿಸುತ್ತಾನೆ.
    "ಇರು ಅಂದ್ರ ಬರ್ತೀನಂತ ಎದ್ದು ಹೊರಡಾಂವಾ
    ಮಾರಿ ತೆಳಗ ಹಾಕಿತಂದ್ರ ಇದ್ದು ಬಿಡಂವಾ"
    ಮುಂದುವರೆದು ಅವನ ರಸಿಕತೆಯನ್ನು, ಆಟಗಳನ್ನು ಮುಂದಿನ ಸಾಲುಗಳಲ್ಲಿ ಮತ್ತೊಮ್ಮೆ ಅನಾವರಣಗೊಳಿಸುತ್ತಾಳೆ.
    "ಹಿಡಿ ಹಿಡಿಲೇ ರೊಕ್ಕಾ ತೆಗೆದು ಹಿಡಿ ಹಿಡಿ ಅನ್ನಾಂವಾ
    ಖರೇ ಅಂತ ಕೈ ಮಾಡಿದರ ಹಿಡಿದ ಬಿಡಂವಾ"
    ಇಲ್ಲಿ ಕವಿ ಬೇಂದ್ರೆ ’ಹಿಡಿ’ ಎನ್ನುವ ಪದದೊಂದಿಗೆ ಎಷ್ಟು ಚನ್ನಾಗಿ ಆಟವಾಡಿದ್ದಾರೆ ನೋಡಿ. ಹೀಗೆ ಪದಗಳನ್ನು ಹಿಗ್ಗಿಸಿ ಬಗ್ಗಿಸಿ ಅವುಗಳೊಂದಿಗೆ ಆಟವಾಡುವ ಕಲೆ ಬೇಂದ್ರೆಗೆ ಮಾತ್ರ ಗೊತ್ತಿತ್ತು. ಅದಕ್ಕೆ ಅಲ್ಲವೇ ಅವರನ್ನು ಶಬ್ದಗಾರುಡಿಗ ಎಂದು ಕರೆಯುತ್ತಿದ್ದುದು.

    ಏನೇ ಮಾಡಿದರೂ ಅವಳೇನಿದ್ದರೂ ಸೂಳೆ. ಮಡದಿಯಾಗಲಾರಳು. ಅವನು ಅವಳಿಗೆ ಸಂಪೂರ್ಣವಾಗಿ commit ಆಗಲಾರ. ಅವನು practical. ಅವನಿಗೆ ತನ್ನ ಇತಿಮಿತಿಗಳ ಅರಿವಿದೆ. ಬಹುಶಃ ಅವನಿಗೆ ಈಗಾಗಲೆ ಮದುವೆಯಾಗಿದೆ. ಅಥವಾ ಸೂಳೆ ಎಂಬ ಕಾರಣಕ್ಕೆ ಅವಳನ್ನು ಮದುವೆಯಾಗಿ ಸಮಾಜದ ತಿರಸ್ಕಾರಕ್ಕೆ ಗುರಿಯಾಗಲಾರ. ಅವಳಿಗೇನಿದ್ದರೂ ಎರಡನೆ ಸ್ಥಾನ. ಈ ಕಟು ವಾಸ್ತವವನ್ನು ಬಹಳ ಸೂಚ್ಯವಾಗಿ "ಚಹಾದ ಜೋಡಿ ಚೂಡಾದ್ಹಾಂಗ ನೀ ನನಗ" ಎಂದು ಹೇಳುತ್ತಾನೆ. ಆದರದು ಅವಳಿಗೆ ಕೋಪ ತರಿಸುತ್ತದೆ. ಅವಳು impractical. Sillyಯಾಗಿ ಯೋಚಿಸುತ್ತಾಳೆ. ಒಂದು ಕ್ಷಣ ತಾನು ಸೂಳೆ ಎಂಬುದನ್ನು ಮರೆತು ಅವನಿಗೆ ಮಡದಿಯಾಗುವ ಕನಸನ್ನು ಕಾಣುತ್ತಾಳೆ. ವಾಸ್ತವ ಸತ್ಯವನ್ನು ಭರಿಸಲಾರದೆ, ಅಲ್ಲಿದ್ದು ಅನುಭವಿಸಲಾರದೆ ಅಸಾಧ್ಯವಾದುದನ್ನು ಕನಸು ಕಾಣುವ ತನ್ನ ಸ್ಥಿತಿಗೆ ಒಂದು ರೀತಿಯ ಸ್ವಯಂ ಮರುಕವನ್ನು ಅನುಭವಿಸುತ್ತಾಳೆ. ಅವಳಿಗೇನಿದ್ದರೂ ಕಲ್ಪನಾ ಲೋಕವೇ ಇಷ್ಟ. ಇದನ್ನರಿತ ಆ ಹುಡುಗ ತಕ್ಷಣ ತನ್ನ ಮಾತಿನ ಧಾಟಿಯನ್ನು ಬದಲಿಸಿ "ಚೌಡಿಯಲ್ಲ ನೀ ಚೂಡಾಮಣಿ" ಅಂತ ರಮಿಸುತ್ತಾನೆ. ಅವಳು ಘಾಟಿ ಹೆಂಗಸು. ಅಷ್ಟಕ್ಕೆ ಸುಮ್ಮನಾಗುವವಳಲ್ಲ. ಅವನೂ ಅಷ್ಟೆ ಬಲು ಚಾಲಾಕಿನ ಹುಡುಗ. ಸಮಾಜಕ್ಕೆ ಸಡ್ಡು ಹೊಡೆದು ಬಹಿರಂಗವಾಗಿ ಅವಳನ್ನು ಮದುವೆಯಾಗಿ ’ಪತ್ನಿ’ ಎಂದು ಘೋಷಿಸಲಾರ. ಹಾಗೆ ಅವಳನ್ನು ಬಿಟ್ಟಿರಲಾರ. ಹಾಗಾಗಿ ಅವನು "ಬೆರಳಿಗುಂಗುರ ಮೂಗಿನ್ಯಾಗ ಮೂಗುಬಟ್ಟು" ಇಡುವದರ ಮೂಲಕ ಪತ್ನಿ ಸ್ಥಾನವನ್ನು ಕಲ್ಪಿಸುತ್ತಾನೆ. ವಾಸ್ತವದಲ್ಲಿ ಅವಾಸ್ತವವನ್ನು, ಸತ್ಯದಲ್ಲಿ ಮಿಥ್ಯವನ್ನು ತರುತ್ತಾನೆ. ಆಗ ಅವಳು ಒಂದು ರೀತಿಯ ಮಾನಸಿಕ ರಕ್ಷಣೆಯನ್ನು ಪಡೆಯುತ್ತಾಳೆ. ಇದು ಅವನ ಸಂದಿಗ್ಧತೆಯ ಫಲವೋ ಅಥವಾ ಹೆಂಗಸರಿಗೆ ಸದಾ ಕಲ್ಪನೆಗಳೇ ಇಷ್ಟವಾಗುವದರಿಂದ ಅವರನ್ನು ಅವುಗಳ ಮಿತಿಯಲ್ಲಿಯೇ ನಡೆಸಿಕೊಳ್ಳುವ ಕಲೆಯೋ ಗೊತ್ತಾಗುವದಿಲ್ಲ.

    ಮುಂದಿನ ನುಡಿಯಲ್ಲಿ ಅವಳು ತುಸು practical ಆದಂತೆ ಕಾಣುತ್ತಾಳೆ. ಅವನ ಮಡದಿಯಾಗುವ ಕನಸು ಕಾಣುತ್ತಾ ಧೇನಸ್ಥ ಸ್ಥಿತಿಯನ್ನು ಅನುಭವಿಸುವದನ್ನು ನಿಲ್ಲಿಸಿ ವಾಸ್ತವಕ್ಕೆ ಹಿಂತಿರುಗುತ್ತಾಳೆ. ಅವನು ನಗು ಮುಖದವನು. ಹೆಣ್ಣುಗಳನ್ನು ಒಲಿಸಿಕೊಳ್ಳುವ ಕಲೆ ಅವನಿಗೆ ಸಿದ್ಧಿಸಿದೆ. ಇಂಥವನ ಪ್ರೀತಿ ಸಿಕ್ಕಿದ್ದೇ ಹೆಚ್ಚು ಎಂದು ಭಾವಿಸುತ್ತಾಳೆ. ಇವನ ಹೆಂಡತಿ ಆಗುವದಕ್ಕೆ ತನಗೂ ಸಾಧ್ಯವಿಲ್ಲ, ತನ್ನ ಗಂಡನಾಗುವದಕ್ಕೆ ಅವನಿಗೂ ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಅರಿಯುತ್ತಾಳೆ. ಇವನೇ ನನಗೆ ಜನ್ಮ ಜನ್ಮಕೆ ಗೆಳೆಯನಾಗಿ ಸಿಕ್ಕರೆ ಸಾಕು ಎಂದು ತೃಪ್ತಿಪಟ್ಟುಕೊಳ್ಳುತ್ತಾಳೆ.
    "ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
    ಎದಿ ಮ್ಯಾಗಿನ ಗೆಣತಿನ ಮಾಡಿ ಇಟ್ಟುಕೊಂಡಂವಾ"
    ಇಲ್ಲಿ ಬೇಂದ್ರೆ ಹೆಣ್ಣಿನ ಮನಸ್ಸನ್ನು ಬಹಳ ಸೂಕ್ಸ್ಮವಾಗಿ ವಿಶ್ಲೇಷಿಸುತ್ತಾರೆ. ಹೆಣ್ಣಿಗೆ ಅಸಾಧ್ಯವಾದುದನ್ನು ಕಲ್ಪಿಸಿಕೊಳ್ಳುವ ಶಕ್ತಿಯೂ ಇದೆ, ಅದು ಈಡೇರದೆಹೋದಾಗ ತನ್ನೆಲ್ಲ ಇಲ್ಲದಿರುವಿಕೆಗಳ ಹಪಹಪಿಕೆಯೊಂದಿಗೆ ವಸ್ತು ಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ಬದುಕುವ ಮನಸ್ಸೂ ಇದೆ ಎಂದು ಹೇಳುತ್ತಾರೆ.

    ಇಂಥ ನೆಚ್ಚಿನ ಗೆಳೆಯನೊಡನೆ ಯಾವ ಕಾರಣಕ್ಕಾಗಿ ಮನಸ್ತಾಪ ಬಂತೋ ಆತ ಇವಳೊಂದಿಗೆ ಮುನಿಸಿಕೊಂಡಿದ್ದಾನೆ. ಅವಳೆಡೆಗೆ ಹೋಗುವದನ್ನು ನಿಲ್ಲಿಸಿದ್ದಾನೆ. ಅವಳ ಆತಂಕ ಇಮ್ಮುಡಿಯಾಗಿದೆ. ತನ್ನೆಲ್ಲಾ ಹ್ಯಾಂವ್ ಬಿಟ್ಟು ಹುಚ್ಚಿಯಂತೆ ಅವರಿವರನ್ನು ಕೇಳುತ್ತಾ ಬೀದಿ ಬೀದಿಯಲ್ಲಿ ಅವನಿಗಾಗಿ ಹುಡುಕುತ್ತಾಳೆ.
    "ಯಲ್ಲಿ ಮಲ್ಲಿ ಪಾರಿ ತಾರಿ ನೋಡಿರೇನ್ರಂವಾ
    ನಿಂಗಿ ಸಂಗಿ ಸಾವಂತರಿ ಎಲ್ಹಾನ ನನ್ನಾಂವ
    ಸೆಟ್ಟರ ಹುಡುಗ ಸೆಟಗೊಂಡು ಹೋದಾ ಅಂತಾ ನನ್ನ ಜೀಂವಾ
    ಹಾದಿ ಬೀದಿ ಹುಡುಕತೈತ್ರೆ ಬಿಟ್ಟ ಎಲ್ಲಾ ಹ್ಯಾಂವಾ"
    ಇಲ್ಲಿ ಮತ್ತೊಂದು ವ್ಯಂಗ ಇದೆ. ಈತ ಸೆಟ್ಟರ ಹುಡುಗ. ದುಡ್ಡಿದ್ದವ. ಈತ ಸೆಡವು ಮಾಡಿಕೊಂಡು ಹೋದರೆ ಅವಳ ಬದುಕು ನಡೆಯುವದಾದರೂ ಹೇಗೆ? ಅದು ಕಟು ವಾಸ್ತವ. ಹೀಗಾಗಿ ಅವನಿಗಾಗಿ ಹುಡುಕಾಟ ಮುಂದುವರಿಸುತ್ತಾಳೆ. ಅವಳ ಈ ಹುಡುಕಾಟದೊಂದಿಗೆ ಕವನ ಅಂತ್ಯಗೊಳ್ಳುತ್ತದೆ.

    ಜಗತ್ತಿನ ಯಾವ ಕವಿ ತಾನೆ ಇಷ್ಟೊಂದು ಚನ್ನಾಗಿ ಸೂಳೆ-ಗಿರಾಕಿ ಸಂಬಂಧವನ್ನು ವರ್ಣಿಸಿದ್ದಾನೆ? ಮುಂದೆ ಹುಬ್ಬಳ್ಳಿಯಾಂವಾ ಬರುತ್ತಾನಾ? ಬಂದು ಅವಳನ್ನು ಸೇರುತ್ತಾನಾ? ಮತ್ತೆ ಎಂದಿನಂತೆ ಅವರಿಬ್ಬರೂ ಒಂದಾಗುತ್ತಾರಾ? ಕವನದಲ್ಲಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಅವರಿಬ್ಬರ ಮಧುರ ಬಾಂಧವ್ಯವನ್ನು ಕಟ್ಟಿಕೊಡುವದಷ್ಟೆ ಕವನದ ಕೆಲಸ. ಕವನ ಇವರಿಬ್ಬರ ಸರಿ-ತಪ್ಪು, ಸತ್ಯ-ಮಿಥ್ಯ, ವಾಸ್ತವ-ಕಲ್ಪನೆ, ತರ್ಕ-ಅತರ್ಕಗಳ ನಡುವೆ ನಡೆಯುವ ಗೊಂದಲದ ಬದುಕನ್ನು ಚಿತ್ರಿಸುತ್ತದೆ. ಇಂಥ ದ್ವಂದ್ವ, ಸಂದಿಗ್ಧತೆಗಳ ನಡುವೆಯಲ್ಲವೇ ನಾವು ಬದುಕುವದು?!

    -ಉದಯ ಇಟಗಿ

    [ನೆರವು- ಸುನಾಥವರ "ಸಲ್ಲಾಪ" ಬ್ಲಾಗ್]

    4 ಕಾಮೆಂಟ್‌(ಗಳು):

    sunaath ಹೇಳಿದರು...

    ಒಬ್ಬ ಜೋಗತಿ ಹಾಗು ಅವಳ ಗಿರಾಕಿಯ ನಡುವಿನ ಸಂಬಂಧಗಳನ್ನು ಬೇಂದ್ರೆ ಕವನರೂಪದಲ್ಲಿ ಹಾಡಿದ್ದರೆ, ಅಷ್ಟೇ ಚೆನ್ನಾಗಿ ಅದರ ವಿಶ್ಲೇಷಣೆಯನ್ನು ಮಾಡಿದ್ದೀರಿ.
    ಅಭಿನಂದನೆಗಳು, ಉದಯ!

    ಬಿಸಿಲ ಹನಿ ಹೇಳಿದರು...

    ಸುನಾಥ್ ಸರ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹಾಗೆ ನಿಮ್ಮ ಲೇಖನದ ಕೆಲವು ಸಾಲುಗಳನ್ನು ನನ್ನ ಲೇಖನದಲ್ಲಿ ಉಪಯೋಗಿಸಲು ಅನುಮತಿ ನೀಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ ಹಾಗೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಮೇಲಿನ ಪ್ರೀತಿ ಹೀಗೆ ಇರಲಿ.

    ತೇಜಸ್ವಿನಿ ಹೆಗಡೆ ಹೇಳಿದರು...

    ಉದಯ ಅವರೆ,

    ಈ ಮೊದಲು ಈ ಕವನದ ವಿಶ್ಲೇಷಣೆಯನ್ನು ಸಲಾಪದಲ್ಲೂ ನೋಡಿದ್ದೆ. ಇದಕ್ಕೂ ಮೊದಲು ಬೇಂದ್ರೇಯವರ ಕುರಿತೇ ಒಂದು ಅಧ್ಯಯನ ಕನ್ನಡ ಎಂ.ಎ.ಯಲ್ಲೂ ಇತ್ತು. ಆ ದಿನಗಳಿಂದ ಬೇಂದ್ರೆಯವರು ನನ್ನ ಅಚ್ಚುಮೆಚ್ಚಿನ ಕವಿಗಳಲ್ಲೋರ್ವರಾದರು. ಪ್ರಸ್ತುತ ಕವನವನ್ನು ನಿಮ್ಮದೇ ಆದ ನಿರೂಪಣಾ ಶೈಲಿಯಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ವೇಶ್ಯೆಗೂ ಒಂದು ಸುಂದರ ಮನಸಿದೆ. ಕಂದಾಚಾರ, ಕೆಟ್ಟ(ಕೆಲವು) ಸಂಪ್ರದಾಯಗಳಿಂದಾಗಿ ಆಕೆ ಈ ರೀತಿ ಆಗಿರಬಹುದು. ಆಕೆ ಮಾರಿಕೊಂಡಿದ್ದು ತನ್ನ ಮೈಯನ್ನೇ ಹೊರತು ಮನಸನ್ನಲ್ಲಾ...ಎಂದು ನವಿರಾಗಿ ಹೇಳುತ್ತಾ..ಕೊನೆಗೆ ವಿಷಾದವನ್ನು ಓದುಗರ ಮನಸಿನೊಳಗೇ ತುಂಬುವ ಶಕ್ತಿ ಇದೆ ಈ ಕವನಕ್ಕೆ. ಹೆಣ್ಣಿನ ಮನಸಿನೊಳಗಿನ ವಿಪ್ಲವಗಳನ್ನು ತುಂಬಾ ಸರಳವಾಗಿಯಾದರೂ ಮನೋಜ್ಞವಾಗಿ ಹೇಳುವಂತಹ ಮಹಾನ್ ಕವಿ "ಬೇಂದ್ರೆಯವರು". ಅಂತಹವರ ಕವನಗಳನ್ನು ಓದಿ ಅರ್ಥೈಸಿಕೊಳ್ಳುವುದೇ ಒಂದು ಭಾಗ್ಯ.

    ಬಿಸಿಲ ಹನಿ ಹೇಳಿದರು...

    ತೇಜಸ್ವಿನಿಯವರೆ,
    ನನ್ನ ಲೇಖನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವದರ ಜೊತೆಗೆ ತುಂಬಾ ಚನ್ನಾಗಿ ಬೇಂದ್ರೆ ಬಗ್ಗೆ ಹೇಳಿದ್ದೀರಿ. ಬೇಂದ್ರೆಯನ್ನು ಬಗೆದಷ್ಟು ಭಿನ್ನ ಭಿನ್ನವಾದ ಅರ್ಥಗಳೊಂದಿಗೆ ಹೊರಬರುತ್ತಾರೆ. Thanks for your nice comment.