Demo image Demo image Demo image Demo image Demo image Demo image Demo image Demo image

ಗೆಳೆಯಾ ಬರುತೇನಿ ಮನದಾಗ ಇಡೋ ನೀನು!

 • ಸೋಮವಾರ, ಜುಲೈ 27, 2009
 • ಬಿಸಿಲ ಹನಿ
 • ಗೆಳೆಯಾ,
  ಈಗಷ್ಟೆ ಪಾಠ, ಪ್ರವಚನ, ಪರೀಕ್ಷೆ, ಮೌಲ್ಯಮಾಪನ ಅಂತೆಲ್ಲಾ ವರ್ಷಾಂತ್ಯದ ವೃತ್ತಿ ಬದುಕಿನ ಜಂಜಾಟಗಳನ್ನು ಮುಗಿಸಿ ಒಂದು ತಿಂಗಳ ಕಾಲ ನೆಮ್ಮದಿಯಾಗಿ ನಿಮ್ಮ ದೇಶದಲ್ಲಿದ್ದು ಬಾ ಎಂದು ಇಲ್ಲಿನ ನಮ್ಮ ವಿಶ್ವ ವಿದ್ಯಾನಿಲಯವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಬಳ ಸಮೇತ ನಮ್ಮನ್ನು ಸ್ವದೇಶಕ್ಕೆ ಕಳಿಸಿಕೊಡುತ್ತಿದೆ. ನಿಮಗೆ ತಿಳಿದಂತೆ ಈ ಬ್ಲಾಗ್ ಲೋಕ ನನಗೆ ನನ್ನದೇ ಆದಂತ ಸಾಹಿತ್ಯಿಕ ಹಾಗು ಸಾಂಸ್ಕೃತಿಕ ವಲಯವನ್ನು ನಿರ್ಮಿಸಿಕೊಟ್ಟಿದೆ. ಕಳೆದ ಸಾರಿ ಬಂದಾಗ ಹೆಂಡತಿ, ಮಗಳೊಂದಿಗೆ ಕಾಲ ಕಳೆದಿದ್ದಲ್ಲದೆ ನನ್ನ ಜೀವದ ಗೆಳೆಯ ಮಂಜುನನ್ನು ಕಟ್ಟಿಕೊಂಡು ಅಲ್ಲಿ ಇಲ್ಲಿ ಸುತ್ತಾಡಿದ್ದಾಯಿತು. ಆದರೆ ಈ ಸಾರಿ ನಾನಿರುವಷ್ಟು ಸಮಯವನ್ನು ನನ್ನ ಬ್ಲಾಗ್ ಗೆಳೆಯರೊಂದಿಗೆ, ಮೇ ಫ್ಲಾವರ್ ಮಿಡಿಯಾದವರೊಂದಿಗೆ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿಮ್ಮೆಲ್ಲರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಕಳೆಯಬೇಕೆಂದುಕೊಂಡಿರುವೆ. ನಾನು ಸಧ್ಯದಲ್ಲಿ ಅಂದರೆ ಇನ್ನೆರಡು ಮೂರು ದಿವಸದಲ್ಲಿ ಬೆಂಗಳೂರಿಗೆ ಬರುವವನಿದ್ದೇನೆ. ಬಂದ ಮೇಲೆ ನನ್ನ ಬ್ಲಾಗ್ ಗೆಳೆಯ/ಗೆಳತಿಯರನ್ನು ಭೇಟಿ ಆಗಬೇಕೆಂದಿರುವೆ. ಆದ್ದರಿಂದ ತಾವು ತಮ್ಮ ಫೋನ್ ನಂಬರ್ ಕೊಟ್ಟರೆ ಒಳಿತು. ಬಂದ ಮೇಲೆ ನಿಮ್ಮನ್ನು contact ಮಾಡೆತ್ತೇನೆ. ನಿಮಗೆಲ್ಲ ಸಮಯವಿದ್ದರೆ ಒಂದುಕಡೆ ಭೇಟಿಯಾಗಿ ಮನತುಂಬಿ ಮಾತಾಡೋಣ, ನಕ್ಕು ನಲಿಯೋಣ. ನಾನು ನಾಳೆ ಅಂದರೆ ಜುಲೈ 27 ರಂದು ಇಲ್ಲಿಂದ ಸಂಜೆ ಐದಕ್ಕೆ ಹೊರಟು ಬೆಳಿಗ್ಗೆ 1 ಗಂಟೆಗೆ ದುಬೈ ತಲುಪಿ ಅಲ್ಲಿಂದ ಬೆಳಿಗ್ಗೆ 3.30 ರ ಬೆಂಗಳೂರಿನ ಕನೆಕ್ಟಿಂಗ್ ಫ್ಲೈಟ್ ಹಿಡಿದು ಬೆಳಿಗ್ಗೆ 9 ಕ್ಕೆ ಬೆಂಗಳೂರನ್ನು ಜುಲೈ 28 ರಂದು ತಲುಪುವೆ. ಅಲ್ಲಿಂದಾಚೆ ನನ್ನ ಮೊಬೈಲ್ ನಂಬರ್ 98445 49386/87 ರಲ್ಲಿ ನಾನು ಸದಾ ಲಭ್ಯ. ಅದರಿಂದಾಚೆ ಬರಿ ಮಾತು! ಮಾತು! ಮಾತು! ನಡುನಡುವೆ ಒಂದಿಷ್ಟು ಹರಟೆ, ಖುಶಿ ಅಂತೆಲ್ಲಾ ಕಾಲ ಕಳೆಯುವದೇ ಕೆಲಸ. ಹೊರಡುವಾಗ ಒಂದಿಷ್ಟು ಹಸಿ ಹಸಿ ನೆನಪುಗಳನ್ನು ಹಾಗೂ ನಿಮ್ಮ ಭೇಟಿಯ ಕ್ಷಣಗಳನ್ನು ಮನದ ತುಂಬಾ ಹೊತ್ತು ಹೊರಡುತ್ತೇನೆ. ಆಗಬಹುದಲ್ಲವೆ?

  ಇದಲ್ಲದೆ ಇದೆ ಅವಧಿಯಲ್ಲಿ ತಂಗಿಯ ಸೀಮಂತ ಕಾರಣಕ್ಕೆ ಊರಿಗೆ ತೆರಳಬೇಕಾಗಿದೆ. ನನಗೆ ಬದುಕು ನೀಡಿದ ಬೆಂಗಳೂರನ್ನು ನೋಡಿ ಮನದಣಿಯಬೇಕಿದೆ. ಅದರಲ್ಲೂ ನನಗಿಷ್ಟವಾದ ಜಯನಗರ 4th ಬ್ಲಾಕ್‍ನ ಮೂಲೆ ಮೂಲೆ ಸುತ್ತಾಡಬೇಕಿದೆ. ಜೀವದ ಗೆಳೆಯ ಮಂಜುವಿನೊಂದಿಗೆ ಮನೆಗೆ ಹತ್ತಿರವಾದ ಯಡಿಯೂರು ಸರ್ಕ‌ಲ್‍ನಲ್ಲಿ ಸಿಗುವ ಮಿರ್ಚಿ, ಬೋಂಡಾ, ಪಾನಿಪೂರಿ, ಇಡ್ಲಿ ತಿನ್ನಬೇಕಿದೆ. ಸಾಧ್ಯವಾದರೆ ಸುರಿವ ಮಳೆಯ ಮಧ್ಯ ಗೆಳೆಯ ರಾಘು, ಮಂಜುವಿನೊಂದಿಗೆ ಹಿತಮಿತವಾಗಿ ಒಂದಿಷ್ಟು ಗುಂಡು ಹಾಕುತ್ತಾ ನಾವು ನಾವೇ ಕಾಲೆಳೆದುಕೊಳ್ಳಬೇಕಾಗಿದೆ, ರೇಗಿಸಿಕೊಳ್ಳಬೇಕಿದೆ. ಜೊತೆಗೆ ಮನದ ಮಾತುಗಳನ್ನು ಬಿಚ್ಚಿಡುತ್ತಾ ಬದುಕಲ್ಲಿ ಇನ್ನಷ್ಟು ಮುಂದೆ ಬರಲು ಏನು ಮಾಡಬಹುದು ಎಂಬುದನ್ನು ಯೋಚಿಸುತ್ತಾ ಸುಂದರ ಸಂಜೆಗಳನ್ನು ಕಳೆಯಬೇಕಿದೆ. ಮದುವೆಯೇ ಬೇಡ ಎನ್ನುತ್ತಿರುವ ಗೆಳೆಯ ಮಂಜುವಿನ ಮನಸ್ಸು ಬದಲಾಯಿಸಬೇಕಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮೂರಾಬಟ್ಟಿಯಾದ ಕೆಲವರ ಬದುಕನ್ನು ಸರಿಪಡಿಸಬೇಕಾಗಿದೆ. ಬೆಂಗಳೂರಲ್ಲಿ ಸ್ವಂತಕ್ಕೆ ಮನೆ/ಸೈಟೊಂದನ್ನು ಖರೀದಿಸಬೇಕಿದೆ. ಕಾಲೇಜು ಗೆಳೆಯ ರಾಜೀವನ ಮಗಳನ್ನು ನೋಡಲು ಮಂಡ್ಯಕ್ಕೆ ಹೋಗಬೇಕಿದೆ. ಇನ್ನೋರ್ವ ಕಾಲೇಜು ಗೆಳೆಯ ಶರತ್‍ನನ್ನು ಭೇಟಿ ಮಾಡಿ ಅವನ ಸುಧಾರಿಸುತ್ತಿರುವ ಆರೋಗ್ಯದ ಬಗ್ಗೆ ವಿಚಾರಿಸಬೇಕಾಗಿದೆ. ಇಷ್ಟೆಲ್ಲವನ್ನು ಒಂದು ತಿಂಗಳ ಅವಧಿಯಲ್ಲಿ ಮಾಡುತ್ತೇನೆಯೇ? ಗೊತ್ತಿಲ್ಲ. ಹೀಗೆಲ್ಲಾ ಯೋಚಿಸುತ್ತಿರುವಂತೆಯೇ ರಾಬರ್ಟ್ ಫ್ರಾಸ್ಟನ ಸಾಲುಗಳು ನೆನಪಾಗುತ್ತವೆ.
  “The woods are lovely, dark, and deep,
  But I have promises to keep,
  And miles to go before I sleep,
  And miles to go before I sleep.”
  ಮನಸ್ಸು ಮತ್ತೆ ಕಾರ್ಯೋನ್ಮುಖವಾಗುತ್ತದೆ. ಇನ್ನು ಒಂದು ತಿಂಗಳು ನನ್ನ ಕೆಲಸದಲ್ಲಿ ಬಿಜಿಯಾಗಿರುವದರಿಂದ ನಿಮ್ಮ ಬ್ಲಾಗುಗಳಿಗೆ ಭೇಟಿ ನೀಡಿ ಪ್ರತಿಕ್ರಿಯಿಸುವದು ಆಗದೆ ಇರಬಹುದು. ಅದಕ್ಕಾಗಿ ತಮ್ಮ ಕ್ಷಮೆಯಿರಲಿ. ಹಾಗೆಯೇ “ಬಿಸಿಲ ಹನಿ”ಯು ಕೂಡ ಒಂದು ತಿಂಗಳು ಕಾಲ ವಿರಾಮ ತೆಗೆದುಕೊಳ್ಳುತ್ತಿದೆ. ಹೆಚ್ಚಿಗೆ ಏನೂ ಇಲ್ಲ. ಎಲ್ಲ ಅಲ್ಲಿ ಬಂದ ಮೇಲೆ.
  -ಉದಯ ಇಟಗಿ

  ನಾನೂ ಹಾಫ್ ಸೆಂಚ್ಯುರಿ ಬಾರಿಸಿಬಿಟ್ಟೆ!

 • ಭಾನುವಾರ, ಜುಲೈ 19, 2009
 • ಬಿಸಿಲ ಹನಿ
 • ಆತ್ಮೀಯರೆ,
  ಇದು ನನ್ನ ಐವತ್ತನೇ ಪೋಸ್ಟ್! ಅರೆರೆ ಇಷ್ಟು ಬೇಗನೆ ಅರ್ಧ ಶತಕ ಬಾರಿಸಿಬಿಟ್ಟೆನೆ? ನನಗೇ ಆಶ್ಚರ್ಯ! ಮೊನ್ನೆ ಮೊನ್ನೆ ತಾನೆ ಬ್ಲಾಗ್ ಓಪನ್ ಮಾಡಿದ್ದೇನಲ್ಲ? ಅದು ಇಷ್ಟು ಬೇಗ ಐವತ್ತು ಪೋಸ್ಟ್ಗಳಿಂದ ತುಂಬಿ ಹೋಯಿತೆ? ಹೌದು, ಎಂದು ಹೇಳುತ್ತಿದೆ ನನ್ನ ಡ್ಯಾಶ್ ಬೋರ್ಡು! ಹಾಗೆ ನೋಡಿದರೆ ನನ್ನ ಬ್ಲಾಗಿನ ಡ್ಯಾಶ್ ಬೋರ್ಡು ಹಿಂದಿನ ಪೋಸ್ಟಿಗೇ “ಇದುವರೆಗೂ ೫೦ ಪೋಸ್ಟಗಳನ್ನು ಮಾಡಿರುವಿರಿ” ಎಂಬ ಸೂಚನೆಯನ್ನು ಈಗಾಗಲೆ ತೋರಿಸಿದೆ. ಅಂದರೆ ಈಗ ಬರೆಯುವದು ೫೧ನೇ ಪೋಸ್ಟ್. ಆದರೆ ಅದು ಸಂಖ್ಯೆಗಳ ಪ್ರಕಾರ. ಲೇಖನಗಳ ವಿವಿಧತೆಗಳ ಪ್ರಕಾರ ಇದು ನನ್ನ ಐವತ್ತನೇ ಪೋಸ್ಟ್! ಏಕೆಂದರೆ ನನ್ನ ಹಿಂದಿನ ಪೋಸ್ಟ್ “ಅಪ್ಪ” ನನ್ನು ಈಗಾಗಲೆ ಪ್ರಕಟಿಸಿದ್ದೆ. ಅಪ್ಪಂದಿರ ವಿಶೇಷ ದಿನಕ್ಕಾಗಿ ಅದನ್ನು ಮತ್ತೆ ಪ್ರಕಟಿಸಬೇಕಾಗಿಬಂದಿದ್ದರಿಂದ ಅದು ಐವತ್ತನೇ ಪೋಸ್ಟಾಯಿತು, ಹಾಗೂ ಈಗ ಬರೆಯುತ್ತಿರುವದು ೫೧ನೇ ಪೋಸ್ಟ್! ಡ್ಯಾಶ್ ಬೋರ್ಡ್ ಎಣಿಕೆಯ ಪ್ರಕಾರ ಇದು ಐವತ್ತನೇ ಪೋಸ್ಟಾದರೂ ನನ್ನ ಎಣಿಕೆಯ ಪ್ರಕಾರ ಇದು ೫೦ನೇ ಪೋಸ್ಟ್. ಏನೆ ಇರಲಿ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹಗಳಿಂದ ನಾನೂ ಹಾಫ್ ಸೆಂಚ್ಯುರಿ ಬಾರಿಸಿಬಿಟ್ಟೆನೆಂದು ಹೇಳಲು ಹರ್ಷ, ಹೆಮ್ಮೆ ಆಗುತ್ತಿದೆ!

  ನಾನು ಮೊದಲಿನಿಂದಲೂ ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡವನಲ್ಲ. ಯಾವಾಗಲೋ ಬಿಡುವಿದ್ದಾಗ, ಮೂಡು ಬಂದಾಗ ಏನೋ ಒಂದನ್ನು ಗೀಚಿ ಇಡುತ್ತಿದ್ದೆ. ಆನಂತರ ಏಕೋ ಗೊತ್ತಿಲ್ಲ ಅದು ಅನುವಾದತ್ತ ತಿರುಗಿಕೊಂಡಿತು. ಬರೆದಿದ್ದನ್ನು ಪತ್ರಿಕೆಗೆ ಕಳಿಸುತ್ತಿದ್ದೆನಾದರೂ ಅದೇಕೋ ಪ್ರಕಟವಾಗುತ್ತಲೇ ಇರಲಿಲ್ಲ. ಆದರೆ ಆಗಾಗ ಬರೆಯುವದನ್ನು ಮಾತ್ರ ನಿಲ್ಲಿಸಲಿಲ್ಲ. ಹಾಗೆ ನೋಡಿದರೆ ನನ್ನ ಬರವಣಿಗೆ ಗಂಭೀರತೆಯನ್ನು ಪಡೆದುಕೊಂಡಿದ್ದು ನಾನು ಬ್ಲಾಗ್ ಓಪನ್ ಮಾಡಿದ ಮೇಲೆಯೇ.


  ನಾನು ಲಿಬಿಯಾಗೆ ಬಂದ ಮೇಲೆ ಇಲ್ಲಿ ಸಾಕಷ್ಟು ಸಮಯವಿರುತ್ತಿತ್ತು. ಭಾರತದಲ್ಲಿರುವಂತೆ ಇಲ್ಲಿ ತರಗತಿಗಳು ಮುಗಿದ ಮೇಲೂ ಕಾಲೇಜಿನಲ್ಲಿಯೇ ಉಳಿಯುವ ಅವಶ್ಯಕತೆಯಿರಲಿಲ್ಲ. ಹೀಗಾಗಿ ಸಾಕಷ್ಟು ಸಮಯ ಸಿಗುತ್ತಿತ್ತು. ಈ ಬಿಡುವಿನ ಸಮಯವನ್ನು ಹೇಗೆ ಕಳೆಯುವದು ಎಂದು ಯೋಚಿಸುತ್ತಿದ್ದಾಗಲೇ ನಾನು ಮತ್ತೆ ಅನುವಾದದಲ್ಲಿ ತೊಡಗಿಕೊಂಡೆ. ಈ ಸಂದರ್ಭದಲ್ಲಿಯೇ ನಾನು ಸಾಕಷ್ಟು ಕವನಗಳನ್ನು ಅನುವಾದಿಸಿಟ್ಟೆ. ಆದರೆ ಲೇಖನಗಳನ್ನು ಬರೆಯುವದನ್ನಾಗಲಿ, ಅಥವಾ ಗದ್ಯವನ್ನು ಬರೆಯುವದನ್ನಾಗಲಿ ಮಾಡಿರಲಿಲ್ಲ. ಈ ಸಾರಿ ರಜೆಯ ಮೇಲೆ ಬೆಂಗಳೂರಿಗೆ ಬಂದಾಗ ಸ್ನೇಹಿತ ರಾಘುನನ್ನು ಭೇಟಿ ಮಾಡಲು ಉಡುಪಿಗೆ ಹೋಗಿದ್ದೆ. ಅಲ್ಲಿ ಈಗಾಗಲೆ ನಾನು ಸ್ನೇಹಿತನಿಗೆ ಬರೆದ ಪತ್ರಗಳನ್ನು ಓದಿ ಮೆಚ್ಚಿಕೊಂಡಿದ್ದ ಅವನ ಹೆಂಡತಿ “ನಿಮಗೆ ಹೇಗೂ ಸಾಕಷ್ಟು ಫ್ರಿ ಟೈಂ ಇರುತ್ತಲ್ಲ. ಏನಾದರು ಯಾಕೆ ಬರೆಯಬಾರದು?” ಎಂದು ಹೇಳಿದರು. ಅದೇಕೋ ಈ ವಿಷಯ ಈ ಸಾರಿ ನನ್ನ ತಲೆಹೊಕ್ಕು ಕೊರೆಯತೊಡಗಿತು. ಅಲ್ಲಿಂದ ಬರುವಾಗ ಇನ್ನುಮುಂದೆ ನನ್ನ ಬಿಡುವಿನ ವೇಳೆಯಲ್ಲಿ ಸಾಕಷ್ಟು ಬರೆಯಬೇಕು ಎಂದು ತೀರ್ಮಾನಿಸಿಕೊಂಡೇ ಬಂದೆ. ಬಂದ ಮೇಲೆ ತಕ್ಷಣ ಕಾರ್ಯೋನ್ಮುಖನಾಗಿ ಬರೆಯುತ್ತಾ ಬಂದೆ. ನಂತರ ನನ್ನದೇ ಒಂದು ಬ್ಲಾಗ್ ತೆರೆದರೆ ಹೇಗೆ ಎಂದನಿಸಿ ಬ್ಲಾಗ್ ತೆರೆಯಲು ಮುಂದಾದೆ.

  ನಾನು ಈ ಮೊದಲು ಬ್ಲಾಗ್ ಬಗ್ಗೆ ಕೇಳಿದ್ದೆನಾದರು ಅದನ್ನು ಹೇಗೆ ಓಪನ್ ಮಾಡುವದೆಂದು ಗೊತ್ತಿರಲಿಲ್ಲ. ನಿಧಾನವಾಗಿ ಬ್ರೌಸ್ ಮಾಡುತ್ತಾ ಮಾಡುತ್ತಾ ಎಲ್ಲವನ್ನೂ ಕಲಿತುಕೊಂಡು ಡಿಸೆಂಬರ್ ೨೪, ೨೦೦೮ ರಂದು ನನ್ನದೇ ಒಂದು ಬ್ಲಾಗ್ ಓಪನ್ ಮಾಡಿದೆ. ಅಂದೇ ಗೆಳೆಯ ಮಂಜುವಿನ ಹುಟ್ಟು ಹಬ್ಬವಾಗಿದ್ದರಿಂದ ಈ ಹಿಂದೆ ಅವನ ಹುಟ್ಟು ಹಬ್ಬಕ್ಕೆಂದು ಉಡುಗೊರೆಯಾಗಿ ಕೊಟ್ಟ ಕವನವನ್ನೇ ಪ್ರಕಟಿಸುವದರ ಮೂಲಕ ಬ್ಲಾಗ್ ಲೋಕಕ್ಕೆ ಕಾಲಿಟ್ಟೆ. ಅದರಿಂದಾಚೆ ಬಹಳಷ್ಟು ಪದ್ಯಗಳನ್ನು ಬರೆಯುತ್ತಾ ಬಂದೆ. ಒಬ್ಬೊಬ್ಬರಾಗಿ ಬ್ಲಾಗ್ ಗೆಳೆಯರು ಪರಿಚಯವಾಯಿತು. ಅವರ ಬ್ಲಾಗಿಗೆ ಭೇಟಿ ಕೊಟ್ಟು ಅವರ ಲೇಖನಗಳನ್ನು ಓದಿದೆ. ಸ್ಪೂರ್ತಿಗೊಂಡು ನಾನೂ ಯಾಕೆ ಲೇಖನಗಳನ್ನು ಬರೆದು ನೋಡಬಾರದು ಎನಿಸಿ ಆರಂಭಿಸಿಯೇ ಬಿಟ್ಟೆ. ಅಲ್ಲಿಯವರೆಗೆ ಬರಿ ಕವನಕ್ಕಷ್ಟೆ ಸೀಮಿತವಾಗಿದ್ದ ನನ್ನ ಬರವಣಿಗೆ ನಿಧಾನವಾಗಿ ಲೇಖನಗಳಿಗೂ ವಿಸ್ತಾರಗೊಂಡಿತು. ಮೊದಲು ಬೇಂದ್ರೆಯವರ “ಹುಬ್ಬಳ್ಳಿಯಾಂವಾ” ಕವನದ ಮೇಲೆ ಬರೆದೆ. ಆನಂತರ “ಇಲ್ಲಿ ಎಲ್ಲವೂ ಒಬಾಮಯವಾಗುತ್ತಿದೆ” ಹಾಗೂ “ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?” ಎನ್ನುವ ಲೇಖನಗಳನ್ನು ಬರೆದೆ. “ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?” ಎನ್ನುವ ಲೇಖನವನ್ನು ”ದ್ಯಾಟ್ಸ್ ಕನ್ನಡ” ಕ್ಕೆ ಕಳಿಸಿಕೊಟ್ಟೆ. ಎರಡೇ ದಿನದಲ್ಲಿ ಸಂಪಾದಕರಿಂದ “Good stuff! Glad to publish.” ಎನ್ನುವ ಈಮೇಲ್ ಬಂತು. ಕುಣಿದು ಕುಪ್ಪಳಿಸಬಿಟ್ಟೆ. ಏಕೆಂದರೆ ಸಂಪಾದಕರೊಬ್ಬರು ಮೊಟ್ಟ ಮೊದಲ ಬಾರಿಗೆ ನನ್ನ ಲೇಖನವನ್ನು ಮೆಚ್ಚಿಕೊಂಡು ಪಕಟಿಸುತ್ತಿರುವದು ಇದೇ ಮೊದಲ ಬಾರಿಯಾಗಿತ್ತು. ಅಲ್ಲಿಂದ ಆತ್ಮವಿಶ್ವಾಸ ಮೂಡಿ ಒಂದೊಂದಾಗಿ ಬರೆಯುತ್ತಾ ಬಂದೆ. ನೋಡ ನೋಡುತ್ತಿದ್ದಂತೆ ನನ್ನೊಳಗಿನ ಬರಹಗಾರ ಬೆಳೆದೇ ಬಿಟ್ಟ! ಮೆಲ್ಲಗೆ ಬೇರೆ ಬರಹಗಾರರ ಒಡನಾಟಕ್ಕೆ ಬಂದು ಅವರ ಬಳಗಕ್ಕೂ ಸೇರಿಕೊಂಡುಬಿಟ್ಟೆ! ನಿಜಕ್ಕೂ ನನ್ನೊಳಗಿನ ಬರಹಗಾರನನ್ನು ಈ ಬ್ಲಾಗ್ ಬರಹ ಹೊರಗೆಳೆದು ತಂದಿದೆ. ಇದು ನನ್ನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಬದುಕಿಗಾಗಿ ತೆರೆದುಕೊಂಡ ಒಂದು ಸಣ್ಣ ಕಿಟಕಿ. ಆದರೆ ಇಂದು ಅದು ಹೆಬ್ಬಾಗಿಲಾಗಿ ನಿರ್ಮಾಣವಾಗಿದೆ.


  ನನ್ನ ಬ್ಲಾಗ್ ಬರಿ ಅನುವಾದಗಳಿಂದ ತುಂಬಿಹೋಗಿವೆ. ಹೀಗೆ ಅನುವಾದಿಸುವದರಲ್ಲಿ ಹೆಚ್ಚು ತೃಪ್ತಿ ತಂದು ಕೊಟ್ಟ ಕವನಗಳೆಂದರೆ “ಕಾಡು ಮತ್ತು ನದಿ”, “Time”, “ಮೇಣದ ಅರಮನೆ”, “ಶಾಕುಂತಳೆಯ ಸ್ವಗತಗಳು”, “ಒಗಟು”, “ಒಗಟಿಗೆ ಉತ್ತರ” ಮುಂತಾದವು. ಅದರಲ್ಲೂ ನಾನು ಮತ್ತೆ ಮತ್ತೆ ಮೆಲುಕುಹಾಕುವ ನನಗಿಷ್ಟವಾದ ಅನುವಾದದ ಕವನವೆಂದರೆ “ನಾನು ನಿನ್ನ ಬೇರೆ ಪ್ರಿಯಕರನಂತಲ್ಲ, ಪ್ರಿಯೆ!” ಎನ್ನುವ ಕವನ. ಇನ್ನು ಲೇಖನಗಳ ವಿಷಯದ ಬಗ್ಗೆ ಹೇಳುವದಾದರೆ ನಾನಿನ್ನೂ ಉತ್ತಮ ಲೇಖನಗಳನ್ನು ಬರೆಯಬೇಕಾಗಿದೆ. ಬರೆದಿದ್ದರಲ್ಲಿ “ಇಲ್ಲಿ ಎಲ್ಲವೂ ಒಬಾಮಯವಾಗುತ್ತಿದೆ”, “ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?” ಎಂಬ ಲೇಖನಗಳು ಅಡ್ಡಿಯಿಲ್ಲ ಎನ್ನುವಷ್ಟರಮಟ್ಟಿಗೆ ತೃಪ್ತಿ ತಂದುಕೊಟ್ಟಿವೆ. ಕೆಲವರು ಎರಡು, ಮೂರು, ನಾಲ್ಕು ಬ್ಲಾಗುಗಳನ್ನು ಒಟ್ಟಿಗೆ ತೆರೆದು ಕೊನೆಗೆ ನಿರ್ವಹಿಸಲಾಗದೆ ಒಂದಕ್ಕೇ ಜೋತು ಬಿದ್ದ ಉದಾಹರಣೆಗಳುಂಟು ಅಥವಾ ಎಲ್ಲವೂ ಮುಚ್ಚಿಹೋಗಿರುವದುಂಟು ಅಥವಾ ಒಂದು ಬ್ಲಾಗಲ್ಲಿ ಪ್ರಕಟಿಸಿದ್ದನ್ನೇ ಇನ್ನೊಂದು ಬ್ಲಾಗಲ್ಲಿ ಪ್ರಕಟಿಸುವದುಂಟು. ಏಕೆಂದರೆ ನನಗೆ ತಿಳಿದ ಮಟ್ಟಿಗೆ ಎರಡರಲ್ಲೂ ಏಕಕಾಲಕ್ಕೆ ಹೊಸತನ್ನು ಕೊಡುವದು ತುಂಬಾ ಕಷ್ಟ. ಒಂದು ವೇಳೆ ಎರಡರಲ್ಲೂ ಹೊಸತನ್ನು ಕೊಡುವ ಬ್ಲಾಗರ್ಸ್ ಇದ್ದರೆ ಅವರಿಗೆ ನನ್ನದೊಂದು ಹ್ಯಾಟ್ಸಾಫ್! ಈ ಕಾರಣಕ್ಕಾಗಿ ನಾನು ಒಂದೇ ಬ್ಲಾಗಿನಲ್ಲಿ ಕನ್ನಡ, ಇಂಗ್ಲೀಷ್ ಭಾಷೆಗಳೆರಡರಲ್ಲೂ ಒಟ್ಟೊಟ್ಟಿಗೆ ಬರೆಯುತ್ತಾ ಬಂದೆ. ಹಾಗೆ ನೋಡಿದರೆ ನಾನು ನನ್ನ ಕಾಲೇಜು ಮ್ಯಾಗಜೀನ್‍ಗಳಿಗೆ ಇಂಗ್ಲೀಷ್ ಲೇಖನಗಳನ್ನು ಬರೆದಿದ್ದು ಬಿಟ್ಟರೆ ಮತ್ತೆ ಬರೆದಿದ್ದಿಲ್ಲ. ಬರುಬರುತ್ತಾ ಅದು ಕೂಡ ಅನುವಾದಗಳಿಗೆ ಸೀಮಿತವಾಗಿ ಹೋಯಿತು. ಆ ಅನುವಾದಗಳನ್ನೆ ನನ್ನ ಬ್ಲಾಗಲ್ಲಿ ಪ್ರಕಟಿಸಿದ್ದೆ. ಅವಕ್ಕೆ ಪ್ರತಿಕ್ರಿಯೆ ಬಂದದ್ದು ತುಂಬಾ ಕಡಿಮೆ.

  ಯಾರ ಹಂಗಿಗೊಳಗಾಗದೆ, ಯಾವುದೇ ಮುಲಾಜಿಲ್ಲದೆ ನಮಗನಿಸಿದ್ದನ್ನು ಬರೆಯಲು ಹುಟ್ಟಿಕೊಂಡ ಬ್ಲಾಗಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು. ನಾನು ಈಗಾಗಲೆ ಹೇಳಿದಂತೆ ಅದು ನನ್ನೊಳಗಿನ ಬರಹಗಾರನನ್ನು ಬಡಿದೆಬ್ಬಿಸಿದೆ. ನನಗೆ ನನ್ನದೆ ಆದ ಬರಹಗಾರರ ವಲಯವನ್ನು ನಿರ್ಮಿಸಿಕೊಟ್ಟಿದೆ. ಸಮಾನ ಆಸಕ್ತರು, ಸಮಾನ ದುಃಖಿಗಳು, ಒಳ್ಳೊಳ್ಳೆ ಸ್ನೇಹಿತರನ್ನು ಕಟ್ಟಿಕೊಟ್ಟಿದೆ. ಇದೀಗ ಬರಹಕ್ಕೂ ನನಗೂ ಎಂಥ ಗಾಢ ಸಂಬಂಧ ಬೆಳೆದಿದೆಯೆಂದರೆ ಬರೆಯದೆ ಹೋದರೆ ನಾನಿಲ್ಲ, ನಾನಿಲ್ಲದೆ ಹೋದರೆ ಬರಹವಿಲ್ಲ ಎಂದೆನಿಸಿಬಿಟ್ಟಿದೆ. ಬರೆಯದೆ ಹೋದರೆ ಏನನ್ನೋ ಕಳೆದುಕೊಂಡ ಚಡಪಡಿಕೆ. ಈ ನಿಟ್ಟಿನಲ್ಲಿ ನಾನು ಇಷ್ಟರಮಟ್ಟಿಗೆ ಬೆಳೆಯಲು ಕಾರಣ ಕರ್ತರಾದ ನನ್ನ ಸಹ ಬ್ಲಾಗಿಗರಿಗೆ, ಸ್ನೇಹಿತರಿಗೆ, ಹಾಗೂ ಹಿತೈಷಿಗಳಿಗೆ ನನ್ನ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಬ್ಲಾಗ್ ಓಪನ್ ಮಾಡಿ ಎರಡು ತಿಂಗಳಿಗೆಲ್ಲ “ಕೆಂಡ ಸಂಪಿಗೆ” ಯಲ್ಲಿ ಜಿತೆಂದ್ರವರು ನನ್ನ ಬ್ಲಾಗನ್ನು ಪರಿಚಯಿಸಿದ್ದರು. ಅದಕ್ಕಾಗಿ ಅವರಿಗೂ ನಾನು ಆಭಾರಿಯಾಗಿದ್ದೇನೆ. ಅದನ್ನು ನಿಮ್ಮ ಅವಗಾಹನೆಗಾಗಿ ಸೈಡ್ ಬಾರಿನಲ್ಲಿ ಪೇಸ್ಟ್ ಮಾಡಿರುವೆ.

  ನಿಮ್ಮ ಪ್ರೀತಿ, ವಿಶ್ವಾಸ, ಹಾಗೂ ಸಹಕಾರಗಳು ಇದೇ ರಿತಿ ಮುಂದುವರೆಯಲಿ ಎಂದು ಆಶಿಸುತ್ತಾ ಮುಂದಿನ ದಿನಗಳಲ್ಲಿ ಬರಹದ ಹೊಳೆಯಲ್ಲಿ ನಾವು ನೀವೆಲ್ಲ ಕಾಗದದ ದೋಣಿಗಳನ್ನು ತೇಲಿ ಬಿಡುತ್ತಾ ದೂರ ತೀರವ ಸೇರೋಣ ಅಲ್ವೆ?

  ಇನ್ನೊಂದು ವಿಷಯವನ್ನು ನಾನು ನಿಮಗೆ ಹೇಳಲೇಬೇಕು. ಅದೇನೆಂದರೆ ಹದಿನೈದು ಇಪ್ಪತ್ತು ದಿವಸಗಳಿಂದ ನಾನು ಇಲ್ಲಿ ವಾರ್ಷಿಕ ಪರಿಕ್ಷೆಯ ಕೆಲಸದಲ್ಲಿ ನಿರತವಾಗಿದ್ದರಿಂದ ನನಗೆ ಹೊಸದೇನನ್ನೂ ಬರೆಯಲು ಆಗಿಲ್ಲ ಹಾಗೂ ನಿಮ್ಮ ಬ್ಲಾಗುಗಳಿಗೆ ಭೇಟಿಕೊಟ್ಟು ಪ್ರತಿಕ್ರಿಯಿಸಲಾಗಿರಲಿಲ್ಲ. ಇದು ಇನ್ನು ಸ್ವಲ್ಪ ದಿನ ಹಾಗೆ ಮುಂದುವರೆಯುತ್ತದೆ. ಯಥಾಸ್ಥಿತಿಗೆ ಮರಳುವವರೆಗೂ ನಿಮ್ಮೆಲ್ಲರ ಕ್ಷಮೆಯಿರಲಿ.

  ನಾನು ಈಗಾಗಲೆ ಹೇಳಿದಂತೆ ಹೊಸದೇನನ್ನೂ ಬರೆಯಲಾಗಿಲ್ಲವಾದ್ದರಿಂದ ನಾನು ನನ್ನ ವಿದ್ಯಾರ್ಥಿ ದಿನಗಳಲ್ಲಿ ಗೀಚಿಟ್ಟ ಕವನವೊಂದನ್ನೇ ಇಲ್ಲಿ ನೀಡುತ್ತಿದ್ದೇನೆ. ಓದಿ ಅಭಿಪ್ರಾಯಿಸಿ. Happy reading!

  ಬನ್ನಿ ಕನಸುಗಳೇ ಬನ್ನಿ

  ಓ! ಬನ್ನಿ ಕನಸುಗಳೇ ಬನ್ನಿ ಬೇಗ
  ವಾಸ್ತವಿಕತೆಯ ಅಗ್ನಿ ಕುಂಡದಲಿ
  ಕೊತ ಕೊತನೆ ಕುದಿದು ಬೆಂದು
  ಬೇಸತ್ತಿದ್ದೇನೆ ಬನ್ನಿ ಕನಸುಗಳೆ ಬನ್ನಿ
  ನಿಮ್ಮೊಂದಿಗೆ ನನ್ನೂ ಕೊಂಡೊಯ್ಯ ಬನ್ನಿ.
  ಚಿಂತೆಗಳ ಸಂತೆಯಲಿ ಕೊರಗಿ ಕೊರಗಿ
  ಸೊರಗಿದ್ದೇನೆ ಬನ್ನಿ ಕನಸುಗಳೇ ಬನ್ನಿ
  ಈ ಚಿಂತೆಗಳ ಹತ್ತಿಕ್ಕಿ ನನ್ನನ್ನೂ
  ನಿಮ್ಮ ಸುಂದರ ಲೋಕಕ್ಕೆ ಕೊಂಡೊಯ್ಯ ಬನ್ನಿ
  ಈ ನೋವು, ಈ ನಿರಾಶೆ,
  ಈ ಸೋಲು, ಈ ಹತಾಶೆ
  ಎಂದೆಂದಿಗೂ ಈ ವಾಸ್ತವಿಕತೆಯಲಿ
  ಇದ್ದದ್ದೇ ಬನ್ನಿ ಕನಸುಗಳೇ ಬನ್ನಿ
  ನಾನೂ ನಿಮ್ಮೊಂದಿಗೆ ಕ್ಷಣಹೊತ್ತು
  ನನ್ನ ಇರುವಿಕೆಯ ಮರೆತು ವಿಹರಿಸುವೆ
  ಬನ್ನಿ ಕನಸುಗಳೇ ಬನ್ನಿ ಬೇಗ!

  ( ಆಂಗ್ಲ ಕವಿ John Keats ನ ‘Ode to a Nightingale’ ಕವನದ ಪ್ರೇರಣೆ)

  -ಉದಯ ಇಟಗಿ.