Demo image Demo image Demo image Demo image Demo image Demo image Demo image Demo image

ಅಪ್ಪ

 • ಶುಕ್ರವಾರ, ಜೂನ್ 19, 2009
 • ಬಿಸಿಲ ಹನಿ
 • ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಅಪ್ಪ ಎಂದರೆ ಒಂದು ಸಣ್ಣ ಗದರಿಕೆಯೊಂದಿಗೆ ಪ್ರೀತಿಯ ಮಳೆಯಲ್ಲಿ ತೋಯಿಸುವವ. ಅಪ್ಪ ಎಂದರೆ ಇನ್ನೂ ಏನೇನೋ.................! ಆದರೆ ನನ್ನ ಅಪ್ಪ ಇದ್ಯಾವುದನ್ನು ನನಗೆ ಕೊಡಲಿಲ್ಲ. ದುಡಿಯದ, ಬೇಜವಬ್ದಾರಿ ನನ್ನ ಅಪ್ಪ ಹಚ್ಚನೆಯ ಬದುಕನ್ನು ಕಟ್ಟಿ ಕೊಡುವದನ್ನಾಗಲಿ ಅಥವಾ ಬೆಚ್ಚನೆಯ ಪ್ರೀತಿಯನ್ನು ಹೊದಿಸುವ ಪ್ರಯತ್ನವನ್ನಾಗಲಿ ಮಾಡಲೇ ಇಲ್ಲ. ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರ ಜಗತ್ತಿನಾದ್ಯಾಂತ ಎಲ್ಲ ಮಕ್ಕಳಿಗೆ ಅಪ್ಪ ಪ್ರೀತಿಯ ನೆನಪಾಗಿ ಉಕ್ಕಿದರೆ ನನಗೆ ಬಿಕ್ಕಾಗಿ ಕಾಡುತ್ತಾನೆ. ಆದರೂ ಅವನನ್ನು ಅಪ್ಪ ಅಲ್ಲ ಎಂದು ಹೇಳಲಾದೀತೆ? ಅಥವಾ ಅಪ್ಪ ಇದ್ಯಾವುದನ್ನೂ ನನಗೆ ಕೊಡದೇ ಇದ್ದ ಕಾರಣಕ್ಕೆನೇ ನಾನು ಇಷ್ಟೊಂದು ಗಟ್ಟಿಯಾಗಿ ಬೆಳೆದೆನೇ? ನನಗೆ ಗೊತ್ತಿಲ್ಲ!

  ಅಪ್ಪ ಕೆಟ್ಟವನೋ, ಕೄರನೋ, ಬೇಜವಾಬ್ದಾರಿಯುತನೋ ಯಾವತ್ತಿದ್ದರೂ ಅಪ್ಪ ಅಪ್ಪನೇ! ಅವನನ್ನು ಬಿಟ್ಟುಕೊಡಲಾಗದು. ಏಕೆಂದರೆ ಈ ಸಮಾಜದಲ್ಲಿ ಅವನಿಂದಲೇ ನಮಗೊಂದು ಐಡಿಂಟಿಟಿ ಸಿಕ್ಕಿದ್ದು! ಅವನಿಂದಲೇ ನಮ್ಮ ಹುಟ್ಟಿಗೊಂದು ಮರ್ಯಾದೆ ದೊರಕಿದ್ದು! ಅವನೇ ಗೊತ್ತಿಲ್ಲದೆ ಹುಟ್ಟಿದ್ದರೆ ನಮಗೆ ಕಾಸು ಕಿಮ್ಮತ್ತು ಬೆಲೆಯೂ ಇರುತ್ತಿರಲಿಲ್ಲ ಅಲ್ಲವೆ?

  ಹಾಗಾಗಿ ಅಪ್ಪನೆಡೆಗೆ ಪ್ರೀತಿಯೋ, ಗೌರವವೋ, ಅನಾದರವೋ, ದ್ವೇಷವೋ, ತಿರಸ್ಕಾರವೋ, ಸಂಘರ್ಷವೋ ಏನೇ ಇದ್ದರೂ ಅವನನ್ನು ಅಪ್ಪ ಎಂದು ಒಪ್ಪಿ ನಡೆಯುವ ಅನಿವಾರ್ಯತೆ ಮತ್ತು ಸಾಮಾಜಿಕ ಬದ್ಧತೆ ಇದ್ದೇ ಇದೆ. ಆ ಕಾರಣಕ್ಕೆನೇ ಅವನು ನಮಗೆ ನಮ್ಮೆಲ್ಲ ದ್ವೇಷಗಳ ನಡುವೆಯೂ ಆಪ್ತವಾಗುತ್ತಾನೆ. ಅವನನ್ನೇ ಮತ್ತೆ ಮತ್ತೆ ಅಪ್ಪ ಎಂದು ಹೇಳುತ್ತಾ ಒಪ್ಪಿ ನಡೆಯುತ್ತೇವೆ. ಏಕೆಂದರೆ ಅಪ್ಪನನ್ನು ಆಯ್ಕೆ ಮಾಡಿಕೊಳ್ಳಲಾಗದು.

  ನಾಳಿದ್ದು ಭಾನುವಾರ ಅಪ್ಪಂದಿರ ದಿನ. ಆ ವಿಶೇಷ ದಿನಕ್ಕಾಗಿ ನನ್ನ ಅಪ್ಪನನ್ನು ನಾ ಕಂಡಂತೆ, ಅವನಿರುವಂತೆ ಅತ್ಯಂತ ನಿರ್ಭಿಡೆಯಿಂದ ಕವನದಲ್ಲಿ ಹಿಡಿದಿಟ್ಟಿದ್ದೇನೆ. ಈ ಹಿಂದೆ ಇದನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲಾಗಿತ್ತು. ಆದರೆ ಅಪ್ಪಂದಿರ ವಿಶೇಷ ದಿನಕ್ಕಾಗಿ ಇದನ್ನು ಪುನರ್ ಪ್ರಕಟಿಸಲಾಗುತ್ತಿದೆ. ಸಹೃದಯವರಾದ ನೀವು ಹೇಗೆ ಸ್ಪಂದಿಸುವಿರೆಂದು ಕಾಯ್ದು ನೋಡುವೆ.

  ಅಜ್ಜ ನೆಗೆದು ಬೀಳುವ ಮೊದಲೇ
  ಅವ್ವನ್ನು ಮದುವೆಯಾಗಿ
  ಇದ್ದ ಹೊಲ ಗದ್ದೆಗಳಲ್ಲಿ
  ಮೈ ಕೈ ಕೆಸರು ಮಾಡಿಕೊಳ್ಲದೆ
  ಅವ್ವ ಮಾಡಿಕೊಟ್ಟ ಬಿಸಿ ಬಿಸಿ ರೊಟ್ಟಿಯನ್ನು
  ಗಡದ್ದಾಗಿ ತಿಂದು ತೇಗಿ
  ಎಲ್ಲ ಭಾರವನ್ನು ಅವಳ ತಲೆ ಮೇಲೆ ಹಾಕಿ
  ತಾನು ಮಾತ್ರ ಇಸ್ಪೀಟಾಡುತ್ತ
  ಹೆಸರಿಗೆ ಮಾತ್ರ ಮನೆ ಯಜಮಾನನಾದ.

  ದುಡಿಯಲು ಗೊತ್ತಿರದ ಷಂಡ
  ಮೂರು ಮಕ್ಕಳನ್ನು ಹೆತ್ತು ಗಂಡಸೆನಿಸಿಕೊಂಡ.
  ಹುಟ್ಟಿಸಿದ ಮಕ್ಕಳನ್ನೂ ಸಾಕಲಾಗದೆ
  ಅವರಿವರ(ಬಂಧುಗಳ) ಮನೆಯಲ್ಲಿ ಬಿಟ್ಟು
  ತಾನು ಮಾತ್ರ ತನ್ನದೇ ಗೂಡಿನಲ್ಲಿ
  ಹಚ್ಚಗೆ ತಿಂದು ಬೆಚ್ಚಗೆ ಮಲಗಿ
  ಅವ್ವನ ಪ್ರೀತಿಯನ್ನೂ ನಮ್ಮಿಂದ ಕಸಿದುಕೊಂಡು
  ಅವಳನ್ನೂ ತನ್ನ ಜೊತೆಯಲ್ಲಿ ನಮ್ಮ ತಿರಸ್ಕಾರಕ್ಕೆ ಗುರಿಮಾಡಿದ.

  ಅಪ್ಪ ಏನೂ ಕಿಸಿಯದಿದ್ದರೂ
  ಅವ್ವನ ಮೇಲೆ ಸದಾ ಇವನ ರುದ್ರನರ್ತನ
  ಅವ್ವ ಇವನ ಆರ್ಭಟಕ್ಕೆ ಹೆದರಿ ಹಿಕ್ಕೆ ಹಾಕುತ್ತಾ
  ಒಳಗೊಳಗೆ ಎಲ್ಲವನ್ನು ನುಂಗುತ್ತಾ ಬೇಯುತ್ತಾ
  ಹೊಲದಲ್ಲೂ ದುಡಿದು ಮನೆಯಲ್ಲೂ ಮಾಡಿ
  ಸದಾ ಇವನ ಸೇವೆಗೆ ನಿಂತಳು.

  ಹೊತ್ಹೊತ್ತಿಗೆ ಚಾ ಕುಡಿದು
  ಬುಸ್ಸ್ ಬುಸ್ಸ್ ಎಂದು ಚುಟ್ಟ ಸೇದಿ
  ಗೊರ ಗೊರ ಕೆಮ್ಮಿ
  ಮೈಯೆಲ್ಲ ಗೂರಿ ಬಂದವರ ತರ
  ಪರಾ ಪರಾ ಕೆರೆದು
  ಆಗೊಮ್ಮೆ ಈಗೊಮ್ಮೆ ಜಡ್ಡಿಗೆ ಬಿದ್ದು
  ಸತ್ಹಾಂಗ ಮಾಡಿ
  ಒಮ್ಮಿಂದೊಮ್ಮೆಲೆ ಮೇಲೆದ್ದು ಗುಟುರು
  ಹಾಕುವ ಮುದಿ ಗೂಳಿ ಇವನು.

  ಅವರಿವರ ಹಂಗಿನ ಮಾತುಗಳನ್ನು ಕೇಳುತ್ತಾ
  ಮಕ್ಕಳೆಲ್ಲ ಕಷ್ಟಬಿದ್ದು ಓದಿ ಕೈಗೆ ಬಂದ ಮೇಲೆ
  ಅರವತ್ತರ ಅರಳು ಮರಳೆಂಬಂತೆ
  ಅಥವಾ ಕೆಟ್ಟ ಮೇಲೆ ಬುದ್ಧಿ ಬಂತೆಂಬಂತೆ
  ಹೊಲಕ್ಕೆ ದುಡಿಯಲು ಹೋಗಿ "ಹೀರೋ" ಆಗಲೆತ್ನಿಸಿದ್ದೂ ಇದೆ.
  ಅಲ್ಲಿ ದುಡಿದಿದ್ದೆಷ್ಟೋ
  ಆ ಖರ್ಚು ಈ ಖರ್ಚೆಂದು
  ಮಕ್ಕಳ ಹತ್ತಿರ ಕಾಸು ಪೀಕುತ್ತ
  ಅsssಬ್ಬ ಎಂದು ಡೇಗು ಹೊಡೆದು
  ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುವದು ಮುಂದುವರಿದೇ ಇದೆ!

  ಇದೀಗ ಯಾರಾದರು
  "ಎಲ್ಲಿ ನಿನ್ನ ಮಕ್ಕಳು?"ಎಂದು ಕೇಳಿದರೆ
  ಮೈ ಕುಣಿಸಿ ಎದೆಯುಬ್ಬಿಸಿ
  "ಇವರೇ" ಎಂದು ನಮ್ಮೆಡೆಗೆ ತೋರಿಸುತ್ತಾನೆ.
  ನಾವೂ ಅಷ್ಟೇ ಯಾರಾದರು ನಮ್ಮನ್ನು
  "ಯಾರು ನೀವು?" ಎಂದು ಕೇಳಿದರೆ
  "ಮಲ್ಲೇಶಪ್ಪನ ಮಕ್ಕಳು" ಎಂದು ಹೇಳುತ್ತೇವೆ!

  -ಉದಯ ಇಟಗಿ

  ಪ್ರವೇಶನ.......

 • ಶುಕ್ರವಾರ, ಜೂನ್ 12, 2009
 • ಬಿಸಿಲ ಹನಿ

 • ನನಗೆ ರಾಜಕೀಯ ಗೊತ್ತಿಲ್ಲ,
  ಆದರೆ ರಾಜಕೀಯದಲ್ಲಿರುವವರು ಗೊತ್ತು.
  ಅವರ ಹೆಸರುಗಳನ್ನು ದಿನಗಳು, ತಿಂಗಳುಗಳ ಹೆಸರುಗಳನ್ನು
  ಹೇಳಿದಷ್ಟೇ ಸುಲಭವಾಗಿ ಪಟಪಟನೆ ಹೇಳಬಲ್ಲೆ-ಅದು ನೆಹರೂವಿನಿಂದ ಶುರುವಾಗುತ್ತದೆ.
  ನಾನೊಬ್ಬ ಭಾರತೀಯಳು, ಕಂದು ಬಣ್ಣದವಳು, ಮಲಾಬಾರಿನಲ್ಲಿ ಹುಟ್ಟಿದವಳು.
  ನಾನು ಮೂರು ಭಾಷೆಗಳಲ್ಲಿ ಮಾತನಾಡುತ್ತೇನೆ,
  ಎರಡರಲ್ಲಿ ಬರೆಯುತ್ತೇನೆ, ಒಂದರಲ್ಲಿ ಧೇನಿಸುತ್ತೇನೆ.

  ಇಂಗ್ಲೀಷಿನಲ್ಲಿ ಬರೆಯಬೇಡ, ಅದು ನಿನ್ನ ಮಾತೃಭಾಷೆಯಲ್ಲ: ಅವರು ಹೇಳಿದರು
  ವಿಮರ್ಶಕರೇ, ಸ್ನೇಹಿತರೇ, ಹಾಗೂ ನನ್ನ ಬಂಧುಗಳೇ,
  ನೀವು ನನ್ನನ್ನೇಕೆ ಬಿಡಲಾರಿರಿ ನನಗಿಷ್ಟವಾದ ಭಾಷೆಯಲ್ಲಿ ಮಾತನಾಡಲು?
  ನಾನಾಡುವ ಭಾಷೆ ನನ್ನದು, ಕೇವಲ ನನ್ನದು
  ಅದರ ಸ್ವರೂಪ ವಿರೂಪಗಳೆಲ್ಲವೂ ನನ್ನವೇ, ನನ್ನೊಬ್ಬಳದು ಮಾತ್ರ!
  ಅರ್ಧ ಇಂಗ್ಲೀಷ್, ಅರ್ಧ ತಾಯ್ನುಡಿ-ಬಹುಶಃ ನಿಮಗೆಲ್ಲ
  ತಮಾಷೆಯಾಗಿ ಕಾಣಬಹುದು- ಆದರದು ಪ್ರಾಮಾಣಿಕವಾಗಿರುತ್ತದೆ,
  ನಾನು ಜೀವಂತವಾಗಿರುವಷ್ಟೇ ಸಹ ದೂ ಜೀವಂತವಾಗಿರುತ್ತದೆ.
  ನೀವೇಕೆ ಅದನ್ನು ಗುರುತಿಸಲಾರಿರೆ?
  ಅದು ನನ್ನ ಖುಶಿಗಳನ್ನು ಧ್ವನಿಸುತ್ತದೆ, ಆಸೆಗಳನ್ನು ಅಭಿವ್ಯಕ್ತಿಸುತ್ತದೆ.
  ಕಾಗೆ ಅರಚುವಂತೆ ಸಿಂಹ ಘರ್ಜಿಸುವಂತೆ
  ನಾನು ಕೂಡಾ ಅದರಲ್ಲಿ ಚೀರಬಲ್ಲೆ,
  ಕೇಕೆ ಹಾಕಬಲ್ಲೆ,
  ಮನದ ಅಳಲನ್ನು ತೋಡಿಕೊಳ್ಳಬಲ್ಲೆ.

  ನಾನು ಚಿಕ್ಕವಳಾಗಿದ್ದೆ, ನಂತರ ಅವರು ನಾನು ದೊಡ್ದವಳಾಗಿದ್ದೇನೆಂದು ಹೇಳಿದರು.
  ಏಕೆಂದರೆ ನಾನು ಎತ್ತರಕ್ಕೆ ಬೆಳೆದಿದ್ದೆ, ನನ್ನ ಅಂಗಾಂಗಗಳು ಊದಿಕೊಂಡು
  ಒಂದೆರಡು ಕಡೆ ಕೂದಲು ಸಹ ಮೊಳೆತಿದ್ದವು.
  ನಾನು ಅವನ ಬಳಿ ಏನು ಬೇಡಬೇಕೆಂದು ಗೊತ್ತಾಗದೆ ಪ್ರೀತಿಯನ್ನು ಬೇಡಿದೆ.
  ಆದರೆ ಅವನು ಹದಿನಾರರ ಹುಡುಗನನ್ನು ಯಾವೊಂದು ಮುಜುಗರವಿಲ್ಲದೆ
  ಮಲಗುವ ಕೋಣೆಗೆ ಎಳೆದುಕೊಂಡುಬಂದು ಬಾಗಿಲು ಮುಚ್ಚಿದ.
  ಅವನು ನನಗೆ ಹೊಡೆಯಲಿಲ್ಲ
  ಆದರೆ ನನ್ನೊಳಗಿನ ಹೆಣ್ತನಕ್ಕೆ ಹೊಡೆತ ಬಿದ್ದಿತ್ತು.
  ನನ್ನ ಮೊಲೆ, ಯೋನಿಗಳು ಭಾರವಾದಂತೆನಿಸಿ ನಾನು ಜಜ್ಜಿಹೋದ ಅನುಭವ.
  ನನ್ನ ಮೇಲೆ ನಾನೇ ಕನಿಕರಪಡುತ್ತಾ ಮುದುಡಿಕೊಂಡು ಕುಳಿತೆ.
  ಅಲ್ಲಿಂದಾಚೆ ನಾನು ಅಂಗಿ ಧರಿಸಿದೆ, ತಮ್ಮನ ಪ್ಯಾಂಟು ಹಾಕಿಕೊಂಡೆ,
  ಕೂದಲನ್ನು ಸಣ್ಣದಾಗಿ ಕತ್ತರಿಸಿದೆ,
  ನನ್ನ ಹೆಣ್ತನವನ್ನು ಸಂಪೂರ್ಣವಾಗಿ ಕಡೆಗಣಿಸಿದೆ.
  ಸೀರೆ ಉಡು, ಹುಡುಗಿಯಂತಿರು, ಹೆಣ್ಣಾಗು, ಹೆಂಡತಿಯಾಗು,
  ಕಸೂತಿ ಹಾಕು, ಅಡಿಗೆ ಮಾಡು, ಆಳುಗಳ ಜೊತೆ ಬಿಗುವಾಗಿರು,
  ಹೊಂದಿಕೊ, ತಕ್ಕನಾಗಿ ನಡೆದಿಕೊ
  ಅಬ್ಬಬ್ಬ, ಎಷ್ಟೊಂದು ಉಪದೇಶಗಳು!
  ಗೋಡೆಯ ಮೇಲೆ ಕೂರಬೇಡ, ಕಿಟಕಿಯಲ್ಲಿ ಇಣುಕುಬೇಡ
  ಆಮಿಯಾಗಿರು, ಅಥವಾ ಕಮಲಾ ಗಿರು ಅಥವಾ
  ಮಾಧವಿ ಕುಟ್ಟಿಯಾಗಿದ್ದರೆ ಇನ್ನೂ ಒಳಿತು.
  ಹೆಸರೊಂದನ್ನು, ಕೆಲಸವೊಂದನ್ನು ಆಯ್ದುಕೊಳ್ಳಲು ಇದು ತಕ್ಕ ಸಮಯ
  ಸೋಗಲಾಡಿತನ ಬಿಡು, ಭ್ರಾಂತಿಯಾದವರ ತರ ವರ್ತಿಸಬೇಡ,
  ಕಾಮತ್ಮೋನ್ನಳಾಗಿ ಕಾಣಿಸಬೇಡ,
  ಪ್ರೀತಿ ಸಿಗದೆ ಹೋದರೆ ಜೋರು ದನಿಯಲ್ಲಿ
  ಮುಜುಗುರವಾಗುವಂತೆ ಅಳಬೇಡ.............ಎಷ್ಟೊಂದು ಆಜ್ಞೆಗಳು!

  ನನಗೊಬ್ಬ ಗಂಡು ಸಿಕ್ಕ, ನಾನು ಅವನನ್ನೇ ಪ್ರೀತಿಸಿದೆ.
  ಅವನನ್ನು ಹೆಸರು ಹಿಡಿದು ಕರೆಯಬೇಡಿ
  ಏಕೆಂದರೆ ಅವನಿಗೆ ಹೆಸರಿಲ್ಲ.
  ಅವನು ಎಲ್ಲ ಗಂಡಸರ ತರ ಹೆಣ್ಣನ್ನು ಬಯಸುವವ
  ನಾನು ಎಲ್ಲ ಹೆಂಗಸರ ತರ ಪೀತಿಯನ್ನು ಬಯಸುವವಳು
  ಅವನು ನದಿಯಂತೆ ಅಬ್ಬರಿಸಿ ಉಕ್ಕಿ ಉಕ್ಕಿ ಹರಿ
  ನಾನು ಆಯಾಸವಿಲ್ಲದೆ ಪ್ರಶಾಂತ ಸಮುದ್ರದಂತೆ ಒಳಗೆ ಎಳೆದುಕೊಳ್ಳುತ್ತಾ ಹೋದೆ
  .
  ನಾನು ಸಿಕ್ಕ ಸಿಕ್ಕವರನೆಲ್ಲ ಕೇಳಿದೆ
  ನೀನು ಯಾರು?” ಎಂದು, ಉತ್ತರವೊಂದೇ ನಾನು ನಾನೇ
  ಈ ಜಗದಲ್ಲಿ ನಾನು ನಾನೇಎಂದು ಕರೆದುಕೊಳ್ಳುವವ
  ಒರೆಯಲ್ಲಿ ಭದ್ರವಾಗಿ ಮುಚ್ಚಿಟ್ಟ ಖಡ್ಗದಂತೆ!
  ನಾನು ಹನ್ನೆರಡು ಗಂಟೆಯಲ್ಲಿ, ಮಧ್ಯರಾತ್ರಿಯಲ್ಲಿ, ಅಪರಿಚಿತ ಪಟ್ಟಣಗಳ ಹೋಟೆಲ್ಗಳಲ್ಲಿ
  ಎಲ್ಲೆಂದರಲ್ಲಿ, ಯಾವಾಗೆಂದರವಾಗ ಮನಸೋ ಇಚ್ಛೆ ಕುಡಿಯುತ್ತೇನೆ,
  ನಗುತ್ತೇನೆ, ಕಾಮದೋಕುಳಿಯಲ್ಲಿ ಮಿಂದೇಳುತ್ತೇನೆ,
  ಆಮೇಲೆ ನನ್ನಷ್ಟಕ್ಕೆ ನಾನೇ ನಾಚಿಕೆಪಟ್ಟುಕೊಳ್ಳೂತ್ತಾ,
  ಖುಷಿಯಿಂದ ಕೇಕೆ ಹಾಕಿ ಸತ್ತವಳ ತರ ಬೀಳುತ್ತೇನೆ.

  ನಾನು ಪಾಪಿ, ನಾನು ಸಂತೆ
  ನಾನು ಪತಿವೃತೆ, ನಾನು ಹಾದರಗಿತ್ತಿ
  ನನ್ನ ಖುಶಿಗಳು ನಿನ್ನವಲ್ಲ,
  ನನ್ನ ನೋವುಗಳೂ ನಿನ್ನವಲ್ಲ,
  ಹಾಗಾಗಿ ನಾನು ನಾನೇ!
  ನಾನು ನಾನೇ!!


  ಮೂಲ ಇಂಗ್ಲೀಷ್: ಕಮಲಾ ದಾಸ್
  ಕನ್ನಡಕ್ಕೆ: ಉದಯ್ ಇಟಗಿ


  ಉರಿದು ಬಿದ್ದ ಉಲ್ಕೆ-ಕಮಲಾ ದಾಸ್

 • ಮಂಗಳವಾರ, ಜೂನ್ 02, 2009
 • ಬಿಸಿಲ ಹನಿ
 • “I was child, and later they
  Told me I grew, for I became tall, my limbs
  Swelled and one or two places sprouted hair.
  When I asked for love, not knowing what else to ask
  For, he drew a youth of sixteen into the
  Bedroom and closed the door,
  He did not beat me
  But my sad woman-body felt so beaten.
  The weight of my breasts and womb crushed me.
  I shrank Pitifully.
  Then … I wore a shirt and my
  Brother’s trousers, cut my hair short and ignored
  My womanliness.
  Dress in sarees, be girl
  Be wife, they said.
  Be embroiderer, be cook,
  Be a quarreler with servants.
  Fit in. Oh,Belong, cried the categorizers.”
  ಹೀಗೆ ಧಡಲ್ ಧಡಲ್ ಎಂದು ಗುಡುಗಿನಂತೆ ಗುಡು ಗುಡುಸುತ್ತಾ ಆರ್ಭಟಿಸುತ್ತಾ ಸಾಗಿ ಬಂದು ಒಮ್ಮೆಲೆ ಸಿಡಿದು ಬೆಚ್ಚಿ ಬೀಳಿಸುವಂಥ ಸಾಲುಗಳನ್ನು ಬರೆಯುವ ತಾಕತ್ತಾದರು ಬೇರೆ ಯಾರಿಗಿತ್ತು-ಕಮಲಾ ದಾಸ್‍ರನ್ನು ಬಿಟ್ಟರೆ? ಅವರ ಓರಿಗೆಯ ಲೇಖಕಿಯರೆಲ್ಲಾ ಇನ್ನೂ ಕಟಿಬದ್ಧ ಸಂಪ್ರದಾಯಸ್ಥ ಸಮಾಜದ ಮರ್ಯಾದೆಯ ಮುಸುಕಿನಡಿಯಲ್ಲಿಯೇ ಕುಳಿತುಕೊಂಡು ಸಾಮಾನ್ಯ ಸ್ತ್ರೀ ಸಂವೇದನೆಯಂಥ ವಿಷಯಗಳ ಬಗ್ಗೆ ಬರೆಯಲೂ ಸಹ ಮೀನ-ಮೇಷ ಎಣಿಸುತ್ತಿರುವ ಸಂದರ್ಭದಲ್ಲಿ ಕಮಲಾ ದಾಸ್ ಅವರಿಗಿಂತ ಎಷ್ಟೋ ಹೆಜ್ಜೆ ಮುಂದೆ ಹೋಗಿ ಯಾರ ಮುಲಾಜಿಲ್ಲದೆ ಅತ್ಯಂತ ನಿರ್ಭಿಡೆಯಿಂದ ಸ್ತ್ರೀ ಲೈಂಗಿಕ ಸ್ವಾಂತಂತ್ರ್ಯದಂಥ ವಿಷಯಗಳ ಬಗ್ಗೆ ಮೈ ಚಳಿ ಬಿಟ್ಟು ಬರೆದರು. ಆ ಮೂಲಕ ಬೆತ್ತಲಾದರು. ಹಾಗೆ ನೋಡಿದರೆ ಕಮಲಾ ದಾಸ್ ತಮ್ಮ ಬರಹದಲ್ಲಿ ಯಾವಾಗಲೂ ಬೆತ್ತಲಾದವರೇ! ಅವರಲ್ಲಿ ಮುಚ್ಚುಮರೆ ಎನ್ನುವದೇ ಇರಲಿಲ್ಲ! ಅವರ ಬದುಕು ಸದಾ ಒಂದು ತೆರೆದಿಟ್ಟ ಪುಸ್ತಕವಾಗಿತ್ತು. ಆರಂಭದಿಂದ ಅಂತ್ಯದವರೆಗೆ ಯಾರಿಗೂ ಕೇರ್ ಮಾಡದೆ ತಮಗನಿಸಿದ್ದನ್ನು ಬರೆದರು ಮತ್ತು ಆ ಮೂಲಕ ತಮ್ಮ ಮುಂದಿನ ಪೀಳಿಗೆಯ ಲೇಖಕಿಯರಿಗೆ ಹೀಗೂ ಬರೆಯಬಹುದೆಂದು ತೋರಿಸಿಕೊಟ್ಟರು. ಇದಲ್ಲದೆ ಅವರು ಯಾವಾಗಲು ತಮ್ಮ ಸುತ್ತಮುತ್ತಲಿನವರಿಗಿಂತ ಒಂದೆರಡು ಹೆಜ್ಜೆ ಮುಂದೆ ಹೋಗಿ ತಮಗ ತೋಚಿದಂತೆ ಬದುಕಲು ಪ್ರಯತ್ನಿಸಿದರು ಮತ್ತು ಹಾಗೆ ಬದುಕಿದರು ಕೂಡ. ಈ ಒಂದು ವಿಷಯದಲ್ಲಿ ಮಾತ್ರವಲ್ಲ ಬಹಳಷ್ಟು ವಿಷಯಗಳಲ್ಲಿ ಅವರು ತಮ್ಮ ಸಮಕಾಲೀನರಿಗಿಂತ ಎಷ್ಟೋ ದಶಕಗಳಷ್ಟು ಮುಂದೆ ಇದ್ದರು. ಈ ಕಾರಣಕ್ಕಾಗಿಯೇ ಅವರು ಒಂದು ಕಡೆ ಸ್ತ್ರೀ ಸಮುದಾಯದ ಧ್ವನಿಯಾದರು, ಇನ್ನೊಂದೆಡೆ ತಮ್ಮ ಸುತ್ತಮುತ್ತಲಿನವರ ವಿರೋಧವನ್ನು ಕಟ್ಟಿಕೊಂಡು ಸಂಪ್ರದಾಯವಾದಿಗಳ ನಿದ್ದೆಯನ್ನು ಕೆಡಿಸಿದರು. ಇನ್ನು ಮುಂದೆ ಆ ಸ್ತ್ರೀ ಸಮುದಾಯದ ಧ್ವನಿಯಾಗುವವರು ಯಾರು? ಸಂಪ್ರದಾಯವಾದಿಗಳ ನಿದ್ದೆಯನ್ನು ಕೆಡಿಸುವವರು ಯಾರು? ಬಹುಶಃ ಯಾರೂ ಇಲ್ಲ! ಏಕೆಂದರೆ ಆ ತಾಕತ್ತು ಇದ್ದದ್ದು ಕಮಲಾವರಿಗೆ ಮಾತ್ರ! ಆರಂಭದಿಂದ ಅಂತ್ಯದವರೆಗೂ ಬರಹದಲ್ಲಿ ಮಾತ್ರವಲ್ಲ ತಮ್ಮ ಬದುಕಿನಲ್ಲೂ ಸಹ ಯಾರಿಗೂ ಜಗ್ಗದೆ ಕುಗ್ಗದೆ ಉರಿವ ಉಲ್ಕೆಯಾಗಿ ಬೇರೆಯವರನ್ನು ಬೆಚ್ಚಿಬೀಳಿಸುತ್ತಲೇ ಬದುಕಿದ ಕಮಲಾ ದಾಸ್ ಇನ್ನಿಲ್ಲ ಎಂದು ಒಪ್ಪಿಕೊಳ್ಲಲು ಮನಸ್ಸು ಒಪ್ಪುತ್ತಾದರು ಹೇಗೆ? ನಾನಿರುವಾಗಲೇ ನನ್ನ ಬಗ್ಗೆ ಇದ್ದಕ್ಕಿದ್ದಂತೆ ನಾನೇ ಬರೆದುಕೊಂಡಾಗಿದೆ. ಇನ್ನು ನೀವು ಬರೆಯಲು ಏನು ತಾನೆ ಉಳಿದಿದೆ? ಎಂಬಂತೆ ವನ್ಸ್ ಅಗೇನ್ ಯಾರಿಗೂ ಕೇರ್ ಮಾಡದೆ ನಮ್ಮನ್ನೆಲ್ಲ ಬಿಟ್ಟು ಎದ್ದು ಹೋಗಿದ್ದಾರೆ ಕಮಲಾ. ಹಾಗೆ ನೋಡಿದರೆ ಕಮಲಾ ಬಗ್ಗೆ ಬರೆಯಲು ಕುಳಿತರೆ ಬಹಳಷ್ಟನ್ನು ಬರೆಯಬಹುದು; ಅವರ ತಿಕ್ಕಲುತನಗಳು, ಅವರ ವಿಕ್ಷಿಪ್ತತೆ, ಅವರ ಅವಿವೇಕತನ, ಅವರ ಗೊಂದಲಗಳು, ಅವರ ಪ್ರೇಮ-ಕಾಮಗಳು....... ಒಂದೇ? ಎರಡೇ? ಒಂದೊಂದು ವಿಷಯದ ಬಗ್ಗೆ ಬರೆದರೂ ಒಂದೊಂದು ಸುದೀರ್ಘ ಲೇಖನವಾಗುತ್ತದೆ.  
  ಅಸಲಿಗೆ ಕಮಲಾ ದಾಸ್ ನನಗೆ ತಮ್ಮ ಕಾವ್ಯದ ಮೂಲಕ ಪರಿಚಯವಾಗಿದ್ದೇ ನಾನು ಎಂ ಎ ಓದುತ್ತಿರುವಾಗ. ಅಲ್ಲಿಯವರೆಗೆ ನನಗೆ ಬರಿ ಸರೋಜಿನಿ ನಾಯ್ಡು, ತೋರು ದತ್, ಶಶಿ ದೇಶಪಾಂಡೆ, ಅನಿತಾ ದೇಸಾಯಿಯವರ ಬಗ್ಗೆ ಗೊತ್ತಿತ್ತೆ ಹೊರತು ಕಮಲಾ ದಾಸ್ ಬಗ್ಗೆ ಗೊತ್ತಿರಲಿಲ್ಲ. ಆದರೆ ಎಂ.ಎ ದಲ್ಲಿ “Indian Writing in English” ಎಂಬ ಪ್ರತ್ಯೇಕ ಪತ್ರಿಕೆಯೊಂದರ ಪಠ್ಯದಲ್ಲಿ ಇಬ್ಬರು ಕವಿಯತ್ರಿಯರ ಬಗ್ಗೆ ಓದಬೇಕಿತ್ತು-ಒಂದು ಸರೋಜಿನಿ ನಾಯ್ಡು ಇನ್ನೊಂದು ಕಮಲಾ ದಾಸ್. ಮೊದಲಿನಿಂದಲೂ ಸರೋಜಿನಿ ನಾಯ್ಡುವರ ಕಾವ್ಯದ ಪರಿಚಯ ಅಲ್ಪ ಸ್ವಲ್ಪವಾಗಿ ಗೊತ್ತಿದ್ದರಿಂದ ಹಾಗೂ ಅವರು ಹೆಚ್ಚು ಪೌರಾಣಿಕ ವಿಷಯಗಳ ಬಗ್ಗೆ, ಇಲ್ಲಿನ ಬೀದಿಗಳ ಬಗ್ಗೆ, ಬಜಾರುಗಳ ಬಗ್ಗೆ, ಬಳೆ ಮಾರುವವರ ಬಗ್ಗೆ, ಮೊಸರು ಮಾರುವವರ ಬಗ್ಗೆ, ಮೀನುಗಾರರ ಬಗ್ಗೆ ಬರೆಯುತ್ತಿದ್ದುದರಿಂದಲೋ ಏನೋ ಅವರ ಕಾವ್ಯದ ಝಲಕು ನನ್ನನ್ನು ಅಷ್ಟಾಗಿ ಆಕರ್ಷಿಸಿಲೇ ಇಲ್ಲ. ಇದಕ್ಕೆ ತದ್ವಿರುದ್ಧ ಎಂಬಂತೆ ಕಮಲಾ ದಾಸ್‍ರ ಕಾವ್ಯ ವಿಷಯದ ಆಯ್ಕೆಯಲ್ಲಿ ಭಿನ್ನವಾಗಿದ್ದು ಗುಂಡೇಟಿನಿಂದ ಹೊಡೆದಂತೆ ಬೆಚ್ಚಿಬೀಳಿಸುತ್ತಿದ್ದುದರಿಂದ ನಾನು ಅವರನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು. ನಮಗೆ ಇದ್ದಿದ್ದೇ ಮೂರು ಕವನಗಳು-An Introduction, The Freaks, ಹಾಗೂ My Grandmother’s House. ಮೊದಲೆರಡು ಕವನಗಳು ಸ್ತ್ರೀವಾದಿ ಕವನಗಳಾಗಿದ್ದರೆ ಕೊನೆಯದರಲ್ಲಿ ಅವಳ ಬಾಲ್ಯದ ನೆನಪುಗಳ ಆಗರವಿತ್ತು. ನಾನು ಮುಂದೆ ಅವರ ಬೇರೆ ಬೇರೆ ಕವನಗಳನ್ನು ಓದಿ ಅವರ ಕವನ ಕೌಶಲ್ಯಕ್ಕೆ ಬೆರಗಾಗಿದ್ದಿದೆ. ಅನಿಸಿದ್ದನ್ನು ಅಂದುಕೊಂಡಂತೆ ನೇರವಾಗಿ ಹೇಳುತ್ತಾ ಉಚ್ಛಾಟಿಸುತ್ತಾ ಸಾಗುವ ಅವರ ಕವನದ ಸಾಲುಗಳು ಬರಿ ಕವನದ ಸಾಲುಗಳಾಗಿರಲಿಲ್ಲ. ದಿಢೀರಂತ ಸ್ತ್ರೀ ಕುಲದ ಹೊಸತನಕ್ಕಾಗಿ ಹಾತೊರೆಯುವ ತುಡಿಯುವ ಆರ್ಭಟದ ಧ್ವನಿಗಳಾಗಿದ್ದವು. ಈ ಸಮಾಜದಲ್ಲಿ ಆರ್ಭಟಿಸದೇ ಹೋದರೆ ಹೆಣ್ಣುಮಕ್ಕಳಿಗೆ ನ್ಯಾಯ ಸಿಗದು ಎನ್ನುವದನ್ನು ಅವರು ಮನಗಂಡಂತಿತ್ತು. ಅದಕೆಂದೇ ಅವರ ಕಾವ್ಯ, ಲೇಖನಗಳು ಕೂಡ ಗುಡುಗು ಸಿಡಿಲುಗಳಂತೆ ಆರ್ಭಟಿಸುತ್ತಿದ್ದವು. ಸದಾ ಅವರ ಲೇಖನಿ ಕತ್ತಿಯಷ್ಟೇ ಹರಿತವಾಗಿರುತ್ತಿತ್ತು. ವಿಪರ್ಯಾಸವೆಂದರೆ ಅವರ revolutionary attitude ಮೊದಮೊದಲು over ಎನ್ನುವಷ್ಟರಮಟ್ಟಕ್ಕೆ ವಿಜೃಂಬಿಸಿತಾದರೂ ಕೊನೆಕೊನೆಯಲ್ಲಿ ಅದಕ್ಕೆ ತದ್ವಿರುದ್ಧವೆಂಬಂತೆ ಆ attitude ಅವರಲ್ಲಿ ಇಲ್ಲವೇನೋ ಎಂಬಂತೆ ತಣ್ಣನೆಯ ಹಾದಿಯಲ್ಲಿ ಸಾಗಿತು. 
  ಕಮಲಾ ದಾಸ್ ಬರೆಯತೊಡಗಿದ್ದೇ ಮದುವೆಯಾದ ಮೇಲೆ. ಅದಕ್ಕೆ ಅವರ ಗಂಡನ ಪ್ರೋತ್ಸಾಹವಿದ್ದರೂ ಅದರಲ್ಲಿ ಮನೆಗೆ ಒಂದಿಷ್ಟು ಅಡಿಷನಲ್ ಇನ್ಕಂ ಆಗುತ್ತದಲ್ಲ ಎನ್ನುವ ಅವರ ದೂರಾಲೋಚನೆಯಿತ್ತು. ಕಮಲಾ ದಾಸ್‍ವರೇ ಹೇಳುವಂತೆ ಅವರ ಬರವಣಿಗೆ ಶುರುವಾಗುತ್ತಿದ್ದುದೇ ರಾತ್ರಿ ಎಲ್ಲರೂ ಉಂಡು ಮಲಗಿದ ಮೇಲೆ. ಹಗಲು ಹೊತ್ತು ಮನೆಗೆಲಸ, ಮಕ್ಕಳ ಆರೈಕೆ ಅದು ಇದೂಂತ ಸಮಯ ಕಳೆದು ಬರೆಯಲು ಬಿಡುವಾಗುತ್ತಿದ್ದುದೇ ರಾತ್ರಿ ವೇಳೆಯಲ್ಲಿ. ಇರುವ ಚಿಕ್ಕ ಮನೆಯಲ್ಲಿ ಅಡುಗೆಮನೆಯೇ ಪ್ರಶಸ್ತವಾದ ಜಾಗವಾಗಿದ್ದರಿಂದ ಅಲ್ಲಿಯೇ ಕುಳಿತುಕೊಂಡು ತರಕಾರಿ ಕತ್ತರಿಸಲೆಂದಿಟ್ಟಿದ್ದ ಟೇಬಲ್‍ನ್ನೇ ಉಪಯೋಗಿಸಿಕೊಂಡು ಬರೆದರು. ಆದರೂ ಅವರ ಸಾಹಿತ್ಯದೆಲ್ಲೆಲ್ಲೂ ಅಡುಗೆ ಮನೆಯ ವಾಸನೆಯಾಗಲಿ ಅದರ ಛಾಯೆಯಾಗಲಿ ಕಾಣಿಸಲಿಲ್ಲ. ಅದೇನಿದ್ದರೂ ಅಡುಗೆ ಮನೆಯನ್ನು ಬಿಟ್ಟು ಮಾರು ದೂರ ಸಾಗಿತ್ತು. ಏಕ ಕಾಲಕ್ಕೆ ಮಲಯಾಳಂ ಹಾಗೂ ಇಂಗ್ಲೀಷನಲ್ಲಿ ಬರೆಯುತ್ತಾ ಹೋದರು. ೧೯೬೪ ರಲ್ಲಿ “The Sirens” ಹಾಗೂ ೧೯೬೫ ರಲ್ಲಿ “Summer in Calcutta” ಎನ್ನುವ ಕವನ ಸಂಕಲನಗಳನ್ನು ಹೊರತಂದರು. ಅದರಲ್ಲಿ ಪ್ರೀತಿ, ಪ್ರೇಮ ಅದರಿಂದುಂಟಾಗುವ ನೋವು ಹತಾಶೆ ಹಾಗೂ ಸ್ತ್ರೀ ಲೈಂಗಿಕ ವಿಷಯಗಳ ಬಗ್ಗೆ ಬರೆದರು. ಓದುಗರು ಮೊದ ಮೊದಲು ಅನುಕಂಪದಿಂದ ಸ್ಪಂದಿಸಿದರೆ ಬರು ಬರುತ್ತಾ ಅವರ ಅತಿಯಾದ ಮುಕ್ತತೆಯನ್ನು ಟೀಕಿಸುತ್ತಾ ಬಂದರು. ಆದರೆ ಇದ್ಯಾವುದಕ್ಕೆ ಜಗ್ಗದೆ ಕಮಲಾ ತಮ್ಮ ಪಾಡಿಗೆ ತಾವು ಬರೆಯುತ್ತಾ ಹೋದರು. ತದನಂತರದಲ್ಲಿ ಅವರು ಕಾವ್ಯ ಬರೆಯುವದನ್ನು ಕಡಿಮೆ ಮಾಡಿದರು. ಅದಕ್ಕೆ ಅವರು ಕೊಟ್ಟ ಕಾರಣ “ಈ ದೇಶದಲ್ಲಿ ಕಾವ್ಯ ಅಷ್ಟು ಸಲೀಸಾಗಿ ಮಾರಾಟವಾಗಲಾರದು” ಎಂದು. ಈ ಸಂದರ್ಭದಲ್ಲಿಯೇ ಅವರು ಕಾವ್ಯ ಪ್ರಾಕಾರದಿಂದ ಗದ್ಯ ಪ್ರಾಕಾರಕ್ಕೆ ಹೊರಳಿ ಕತೆ, ಕಾದಂಬರಿಗಳನ್ನು ಬರೆದರು.
  ಕಮಲಾ ದಾಸ್‍ರು ತಾವು ಬಳಸುವ ಭಾಷೆಯಲ್ಲಿ ಹಾಗೂ ಪದಗಳ ಆಯ್ಕೆಯಲ್ಲಿ ತೀರ ಜುಗ್ಗರಾಗಿದ್ದರು ಎಂಬುದು ವಿಮರ್ಶಕರ ಅಭಿಪ್ರಾಯವಾಗಿತ್ತು. ಅದಲ್ಲದೆ ಅವರು ಕಾವ್ಯದ ಇತಿ-ಮಿತಿಗಳನ್ನು ದಾಟಿ ಬರೆದರು ಎಂಬುದು ಅವರ ಮೇಲಿದ್ದ ಆಪಾದನೆಯಾಗಿತ್ತು. ಆದರೆ ನನಗನಿಸಿದಂತೆ ಕಮಲಾವರು ಏನನ್ನು ಹೇಳಬೇಕೋ ಎಷ್ಟನ್ನು ಹೇಳಬೇಕೋ ಅಷ್ಟನ್ನು ಮಾತ್ರ ಅತ್ಯಂತ ಸರಳವಾಗಿ, ನೇರವಾಗಿ ಯಾವುದೇ ಪ್ರತಿಮೆಗಳನ್ನಾಗಲಿ, ಸಂಕೇತಗಳನ್ನಾಗಲಿ ಬಳಸದೆ ಎಲ್ಲರಿಗೂ ಅರ್ಥವಾಗುವಂತೆ ಸ್ಪಷ್ಟವಾಗಿ ಹೇಳಿದರು. ಬಹುಶಃ ಹೀಗೆ ಹೇಳಿದ್ದರಿಂದಲೋ ಏನೋ ಅವರು ವಿಮರ್ಶಕರಿಗೆ ಸುಲಭವಾಗಿ ಅರ್ಥವಾಗಿ ಎಲ್ಲರೂ ಅವರ ಬಗ್ಗೆ ತಲೆಗೊಂದು ಮಾತಾಡುವಂತಾಯಿತು.
  ತಮ್ಮ 42ನೇ ವಯಸ್ಸಿನಲ್ಲಿ “My Story” ಎನ್ನುವ ಆತ್ಮಕತೆ ಬರೆಯುವದರ ಮೂಲಕ ಅದುವರೆಗೂ ತಮ್ಮ ಎದೆಯೊಳಗೆ ಬಚ್ಚಿಟ್ಟುಕೊಂಡಿದ್ದ ರಹಸ್ಯಗಳನ್ನು ಬಿಚ್ಚಿಟ್ಟು ತಮ್ಮ ಸುತ್ತಮುತ್ತಲಿನವರನ್ನು ದಿಗ್ಬ್ರಮೆಗೊಳಿಸಿದರು. ತಮ್ಮ ಗಂಡನೊಟ್ಟಿಗಿನ ದಣಿದ ಸಂಬಂಧದ ಬಗ್ಗೆ, ಮತ್ತು ಅವರ ಸಲಿಂಗ ಕಾಮದ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಂಡು ಬಿರುಗಾಳಿಯನ್ನೇ ಎಬ್ಬಿಸಿದರು. ಮಾತ್ರವಲ್ಲ ಅದೇ ಒಂದು ನೆಪವನ್ನು ಇಟ್ಟುಕೊಂಡು ಪ್ರೀತಿಯ ಹುಡುಕಾಟದ ಹೆಸರಿನಲ್ಲಿ ತಮ್ಮ ದೇಹ ತೃಷೆಯನ್ನು ತೀರಿಸಿಕೊಂಡರು. ಪುರುಷರು ವಿವಾಹೇತರ ಸಂಬಂಧಗಳನ್ನು ಇಟ್ಟುಕೊಳ್ಳುವದಾದರೆ ಸ್ತ್ರೀಯರೂ ಏಕೆ ಇಟ್ಟುಕೊಳ್ಳಬಾರದು ಎಂದು ಹೇಳುವದರ ಮೂಲಕ ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡರು. ಇದ್ಯಾವ ಸೀಮೆಯ ನ್ಯಾಯ ಹೆಣ್ಣಿಗೊಂದು ನಡವಳಿಕೆ? ಗಂಡಿಗೊಂದು ನಡವಳಿಕೆ? ಎಂದು ಪ್ರಶ್ನಿಸಿ ಸಂಪ್ರದಾಯವಾದಿಗಳ ನಿದ್ದೆ ಕೆಡಿಸಿದರು. ಈಗಾಗಲೇ ಕೇರಳದ ಕೆಲವು ಶ್ರೀಮಂತ ಹೆಂಗಸರು ವಿವಾಹೇತರ ಸಂಬಧಗಳನ್ನು ಇಟ್ಟುಕೊಂಡಿದ್ದರಿಂದ ಅದನ್ನೆಲ್ಲಿ ಈಕೆ ಬಯಲಿಗೆಳೆದು ಬಿಡುತ್ತಾಳೋ ಎಂದು ಹೆದರಿ ಅವರು ಕಮಲಾರವರನ್ನು ಮಾಟ ಮಂತ್ರಗಳ ಮೂಲಕ ಕೊಲ್ಲಲು ಹೋಗಿದ್ದಿದೆ.
  ಕಮಲಾ ದಾಸ್ ನೇರ ನುಡಿಗೆ ನಡೆಗೆ ಹೆಸರಾಗಿದ್ದೇನೋ ಸತ್ಯ. ಆದರೆ ಒಂದೊಂದು ಸಾರಿ ಅವರು ಬದುಕಿದ ರೀತಿ-ರಿವಾಜುಗಳು ಅವರ ಬರಹಕ್ಕೆ ಮತ್ತು ಹೇಳಿಕೆಗಳಿಗೆ ತುಂಬಾ ವ್ಯತಿರಿಕ್ತವಾಗಿರುತ್ತಿದ್ದವು. ಸಾಕಷ್ಟು ವೈರುಧ್ಯಗಳ ನಡುವೆ ಬದುಕಿದವರು ಆಕೆ. ತಮ್ಮ ಕಾವ್ಯದಲ್ಲಿ, ಬರಹಗಳಲ್ಲಿ ಅಷ್ಟೊಂದು assertive, bold, revolutionary ಯಾಗಿದ್ದ ಅವರು ವಯಸ್ಸಿನಲ್ಲಿ ತೀರ ದೊಡ್ಡವರಾದ ತಮ್ಮ ಗಂಡನೊಂದಿಗೆ ಸಾಕಷ್ಟು ಬಿನ್ನಾಭಿಪ್ರಾಯವಿದ್ದರೂ ಹಾಗೂ ಸಂಬಂಧ ಕಿತ್ತು ಹೋಗುವಷ್ಟರ ಮಟ್ಟಕ್ಕೆ ಬಂದರೂ ಅವರನ್ನು ಒಪ್ಪಿಕೊಂಡು ನಡೆದರೆ ವಿನಃ ವೈವಾಹಿಕ ಜೀವನದಿಂದ ಹೊರಬರಲು ಪ್ರಯತ್ನಪಡಲೇ ಇಲ್ಲ. ಅಂದರೆ ಬೇರೆಯವರಿಗೆ assertive, bold, revolutionary ಯಾಗಿ ಇರಲು ಹೇಳಿ ತಾವು ಮಾತ್ರ mild ಆಗಿ ಬದುಕಿದರು. ಕಟಿಬದ್ಧ ಸಮಾಜವನ್ನು ಟಿಕಿಸುತ್ತಲೇ ಅದರೊಟ್ಟಿಗೆ ರಾಜಿ ಮಾಡಿಕೊಂಡರು. ತಮ್ಮ ಬರಹಗಳಲ್ಲಿ ಅಷ್ಟೊಂದು assertive, bold ಹಾಗು independent ಆಗಿದ್ದ ಅವರು ಕೊನೆ ಕೊನೆಯಲ್ಲಿ ತಮ್ಮ ಗಂಡನ ಮೇಲೆ ತೀರ ಅವಲಂಬಿತರಾದರು. ಅವರೇ ಹೇಳುತ್ತಾರೆ “ಗಂಡ ಸತ್ತ ಮೇಲೆ ತೀರ ಒಂಟಿತನ ಅನುಭವಿಸಿದ್ದೇನೆ ಹಾಗೂ ಗಂಡ ಸತ್ತ ಹೆಣ್ಣನ್ನು ಇಂದಿಗೂ ಸಮಾಜ ನಡೆಸಿಕೊಳ್ಳುವ ರೀತಿಗೆ ಬೇಸರಪಟ್ಟಿದ್ದೇನೆ. ಕಮಲಾರಂಥ ಸ್ತ್ರೀವಾದಿ ಲೇಖಕಿಯ ಬಾಯಿಂದ ಬರುವಂತಹ ಮಾತುಗಳೇ ಇವು?  ಅಂದರೆ ಬರಹದಲ್ಲಿ ಮಾತ್ರ ಪ್ರತಿಭಟಿಸುತ್ತಾ, ರೊಚ್ಚಿಗೇಳುತ್ತಾ ನಿಜ ಜೀವನದಲ್ಲಿ ರಾಜಿಯಾಗುತ್ತ ಇತರೆ ಟಿಪಿಕಲ್ ಭಾರತೀಯ ಹೆಣ್ಣುಮಕ್ಕಳಂತೆಯೇ ಬದುಕಿದರು ಆಕೆ. ಆ ಕಾರಣಕ್ಕಾಗಿಯೇ ನಾನು ಎಂ.ಎ ಇಂಗ್ಲೀಷ್ ಮಾಡುವಾಗ ಅವರ ಕವನಗಳನ್ನು ಓದಿ ಅವರನ್ನು ಆರಾಧಿಸತೊಡಗಿದವನು ಬರುಬರುತ್ತಾ ಅವರ ಬಗ್ಗೆ ಗೌರವ ಕಳೆದುಕೊಂಡೆನು.  ಏಕೆಂದರೆ ಕಮಲಾ ಬದುಕಿದಂತೆ ಬರೆದರೆ ಹೊರತು ಬರೆದಂತೆ ಬಹುಶಃ ಬದುಕಲೇ ಇಲ್ಲ.
  ಕಮಲಾ ದಾಸ್ ವಿವಾದಗಳಿಗೆ ಮತ್ತೊಂದು ಹೆಸರು. ವಿವಾದಗಳೇ ಇವರನ್ನು ಹುಡುಕಿಕೊಂಡು ಬರುತ್ತಿದ್ದವೋ ಅಥವಾ ಅವರೇ ವಿವಾದಗಳನ್ನು ಹುಡುಕಿಕೊಂಡು ಹೋಗುತ್ತಿದ್ದರೋ ಗೊತ್ತಿಲ್ಲ ಸದಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿರುತ್ತಿದ್ದರು. ಒಂದೊಂದು ಸಾರಿ ಏನೋ ಒಂದು ಹೇಳಿಕೆಯನ್ನು ನೀಡಿ ತದನಂತರದಲ್ಲಿ ಅದಕ್ಕೆ ತದ್ವಿರುದ್ಧವಾದ ಇನ್ನೊಂದು ಹೇಳಿಕೆಯನ್ನು ನೀಡುವದರ ಮೂಲಕ ಜನರನ್ನು ತಬ್ಬಿಬ್ಬು ಮಾಡುತ್ತಿದ್ದರು. “ನೀವೇಕೆ ಹೀಗೇ?” ಅಂತ ಪತ್ರಕರ್ತೆಯೊಬ್ಬಳು ಕೇಳಿದ್ದಾಗ “ನಾನಿರುವದೇ ಹಾಗೆ. ನನ್ನ ಹೇಳಿಕೆಗಳು, ನನ್ನ ನಂಬಿಕೆಗಳು ಸದಾ ಬದಲಾಗುತ್ತಿರುತ್ತವೆ” ಎಂದು ಹೇಳಿ ಬೆಚ್ಚಿಬೀಳಿಸಿದ್ದರು. ಕೆಲವೊಮ್ಮೆ ಅವರ ಹೇಳಿಕೆಗಳು ಅತಿರೇಕ ಎನಿಸುವಷ್ಟರ ಮಟ್ಟಿಗೆ ಹೋಗುತ್ತಿದ್ದವು. ನನಗೆ ಆಶ್ಚರ್ಯ ಎನಿಸುವದು ೧೯೯೯ ರಲ್ಲಿ ಅವರು ಹಿಂದುತ್ವದಿಂದ ಇಸ್ಲಾಂಗೆ ಮತಾಂತರಗೊಂಡಾಗ ನಡೆದ ಒಂದು ಘಟನೆ. ಬೇರೆಲ್ಲ ಸ್ತ್ರೀವಾದಿ ಮುಸ್ಲಿಂ ಲೇಖಕಿಯರೆಲ್ಲ (ಕನ್ನಡವೂ ಸೇರಿದಂತೆ) ಬುರ್ಖಾ ಪದ್ದತಿ ಒಂದು ಅನಿಷ್ಟ ಪದ್ದತಿ ಅದು ಹೆಣ್ಣನ್ನು ಬಾಹ್ಯ ಪ್ರಪಂಚದ ಸಂಪರ್ಕಕ್ಕೆ ಬಾರದಂತೆ ತಡೆಹಿಡಿಯುವ ಒಂದು ಸಾಧನ ಎಂದು ತೀವ್ರವಾಗಿ ಖಂಡಿಸಿ ಅದನ್ನು ತೊಡೆದು ಹಾಕಿದರೆ ಕಮಲಾ ದಾಸ್ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ “ಬುರ್ಖಾ ಹೆಣ್ಣಿಗಿರುವ ಒಂದು ಅದ್ಭುತವಾದ ಉಡುಪು. ಅದು ಹೆಣ್ಣಿಗೆ ಯಾವಾಗಲೂ ಒಂದು ರಕ್ಷಣಾ ಭಾವವನ್ನು ಒದಗಿಸುತ್ತದೆ. ಇಸ್ಲಾಂ ಧರ್ಮ ಮಾತ್ರ ಹೆಣ್ಣಿಗೆ ರಕ್ಷಣೆಯನ್ನು ನೀಡಬಲ್ಲದು” ಎನ್ನುವಂಥ ಅತಿರೇಕದ ಹೇಳಿಕೆಯೊಂದನ್ನು ನೀಡಿ ಹಿಂದು ಉಗ್ರವಾದಿಗಳನ್ನು ರೊಚ್ಚಿಗೆಬ್ಬಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೃಷ್ಣನ ಅಪಾರ ಭಕ್ತೆಯಾಗಿದ್ದ ಆಕೆ “ಇದೀಗ ನಾನು ಕೃಷ್ಣನನ್ನು ಅಲ್ಲಾಹುನನ್ನಾಗಿ ಮಾಡಿದ್ದೇನೆ” ಎನ್ನುವ ಮತಾಂಧೀಯ ಹೇಳಿಕೆಯೊಂದನ್ನು ನೀಡಿ ಹಿಂದೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವದರ ಮೂಲಕ ದೊಡ್ದ ವಿವಾದವನ್ನೇ ಹುಟ್ಟು ಹಾಕಿದರು. ಇಂಥ ಹೇಳಿಕೆಗಳನ್ನು ಕೊಡುವಾಗ ಆಕೆಯ ಬುದ್ಧಿಗೆ ಮಂಕು ಕವಿದಿತ್ತೇ? ಅಥವಾ ಇಸ್ಲಾಂ ಸಂಘಟನೆಗಳು ಅವರಿಗೆ ಈ ರೀತಿ ಪ್ರಚಾರ ಮಾಡೆಂದು ಒತ್ತಡ ಹೇರಿದ್ದವೆ?  
  ಏನೇ ಇರಲಿ. 1984 ರಲ್ಲಿ ನೋಬೆಲ್ ಪಾರಿತೋಷಕದವರಿಗೂ ತಲುಪಿ ಬಂದ ಈ ಲೇಖಕಿ ಮೊದಮೊದಲು ಬದುಕಿದಂತೆ ದಿಟ್ಟವಾಗಿ ಬರೆದರು. ಆಮೇಲಾಮೇಲೆ ತಾವು ಬರೆದಿದ್ದುಕ್ಕೆ ತದ್ವಿರುದ್ಧವಾಗಿ ಗೋಜಲು ಗೋಜಲಾಗಿ ಬದುಕಿದರು. ಕಮಲಾ ಅವರ ವ್ಯಕ್ತಿತ್ವವೇ ಅಂಥದು. ಯಾರ ಕೈಗೂ ಸಿಗದಂಥದು. ಬರಿ ಗೋಜಲು ಗೋಜಲು! ನಾವು ಅವರನ್ನು ಹಿಡಿಯಲು ಹೋದಷ್ಟು ಅವರು ನುಣುಚಿಕೊಳ್ಳುತ್ತಾರೆ. ಬಗೆದಷ್ಟು ಅವರು ನಿಗೂಢವಾಗುತ್ತಾ ಹೋಗುತ್ತಾರೆ. ಕೆಣಕಿದಷ್ಟು ಗೊಂದಲವಾಗಿ ಕಾಡುತ್ತಾರೆ. ಒಟ್ಟಿನಲ್ಲಿ ಅನೇಕ ವೈರುಧ್ಯಗಳ ಆಗರ ಆಕೆ! 

  -ಉದಯ್ ಇಟಗಿ