Demo image Demo image Demo image Demo image Demo image Demo image Demo image Demo image

ಕತ್ತಲಲ್ಲಿ ಕಂಡ ಮುಖ

 • ಶನಿವಾರ, ಏಪ್ರಿಲ್ 26, 2014
 • ಬಿಸಿಲ ಹನಿ


 • ಮಿಸ್ಟರ್ ಆಲಿವರ್ ಒಬ್ಬ ಆಂಗ್ಲೋ-ಇಂಡಿಯನ್. ಆತ ಸಿಮ್ಲಾದ ಹೊರವಲಯದ ಹಿಲ್-ಸ್ಟೇಶನ್‍ನಲ್ಲಿದ್ದ ಪ್ರತಿಷ್ಟಿತ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಒಂದು ದಿನ ಆತ ಕತ್ತಲಾಗುವವರೆಗೂ ಸಿಮ್ಲಾ ಬಜಾರಿನಲ್ಲಿ ಒಂದಷ್ಟು ಸುತ್ತಾಡಿ ಊರ ಹೊರವಲಯದಲ್ಲಿದ್ದ ತನ್ನ ಶಾಲೆಗೆ ಹಿಂದಿರುಗುವಾಗ ತಡರಾತ್ರಿಯಾಗಿತ್ತು. ಮುಂಚಿನಿಂದಲೂ ಈ ಸ್ಕೂಲು ಎಲ್ಲಾ ತೆರದಲ್ಲೂ ಮಿಕ್ಕೆಲ್ಲಾ ಪ್ರತಿಷ್ಟಿತ ಇಂಗ್ಲೀಷ್ ಪಬ್ಲಿಕ್ ಸ್ಕೂಲುಗಳಿಗಿಂತ ಒಂದು ಕೈ ಹೆಚ್ಚೇ ಮುಂದಿತ್ತಲ್ಲದೇ ಆ ಶಾಲೆಯ ಬಹುತೇಕ ಹುಡುಗರು ಶ್ರೀಮಂತ ವರ್ಗದವರಾಗಿದ್ದರು. ಅವರು ಯಾವಾಗಲೂ ಶಾಲೆಯ ಸಮವಸ್ತ್ರವಾಗಿ ಬ್ಲೇಜರ್, ಕ್ಯಾಪ್ ಮತ್ತು ಟೈಗಳನ್ನು ಧರಿಸುತ್ತಿದ್ದರು. ಆ ಶಾಲೆ ಎಷ್ಟು ಪ್ರಸಿದ್ಧಿಯಾಗಿತ್ತೆಂದರೆ ಒಂದು ಸಾರಿ ‘ಲೈಫ್ ಮ್ಯಾಗಜೀನ್’ ತನ್ನ ವಿಶೇಷ ಸಂಚಿಕೆಯೊಂದರಲ್ಲಿ ಆ ಶಾಲೆಯನ್ನು “ಈಟಾನ್ ಆಫ್ ದ ಈಸ್ಟ್” ಎಂದು ಬಣ್ಣಿಸಿತ್ತು. ಆ ಶಾಲೆಯಲ್ಲಿಯೇ ಮಿಸ್ಟರ್ ಆಲಿವರ್ ತುಂಬಾ ವರ್ಷಗಳಿಂದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು.

  ಸಿಮ್ಲಾ ಬಜಾರ್ ಸಿನಿಮಾ ಥೇಟರ್ಗಳು ಮತ್ತು ರೆಸ್ಟೋರೆಂಟ್‍ಗಳಿಂದ ಕೂಡಿದ ಒಂದು ಮುಖ್ಯ ಆಕರ್ಷಣೀಯ ಕೇಂದ್ರವಾಗಿತ್ತು. ಅದು ಸ್ಕೂಲಿನಿಂದ ಮೂರು ಮೈಲಿಗಳಷ್ಟು ದೂರವಿತ್ತು. ಮಿಸ್ಟರ್ ಆಲಿವರ್ ಇನ್ನೂ ಅವಿವಾಹಿತನಾಗಿದ್ದರಿಂದ ಆತ ಪ್ರತಿ ಸಂಜೆ ಸಿಮ್ಲಾ ಬಜಾರಿಗೆ ಬಂದು ಬೇಜಾರು ಕಳೆಯುವವರೆಗೂ ಸ್ವಲ್ಪ ಹೊತ್ತು ಸುತ್ತಾಡಿ ಕತ್ತಲಾದ ಮೇಲೆ ಪೈನ್ ಮರಗಳ ಕಾಡಿನ ಮೂಲಕ ತನ್ನ ಶಾಲೆಗೆ ವಾಪಾಸಾಗುತ್ತಿದ್ದನು.

  ಆವತ್ತು ಹಾಗೆಯೇ ಸಿಮ್ಲಾ ಬಜಾರಿನಲ್ಲಿ ಒಂದಷ್ಟು ಸುತ್ತಾಡಿಕೊಂಡು ಕತ್ತಲಾದ ಮೇಲೆ ಪೈನ್ ಮರಗಳ ಕಾಡಿನ ಮೂಲಕ ತನ್ನ ಶಾಲೆಗೆ ಹಿಂದಿರಿಗುತ್ತಿದ್ದನು. ಆ ಕಾಡಿನ ಪೈನ್ ಮರಗಳು ಜೋರು ಗಾಳಿ ಬೀಸಿದಾಗಲೊಮ್ಮೆ ಒಂದು ರೀತಿಯ ವಿಚಿತ್ರ ಮತ್ತು ವಿಲಕ್ಷಣ ಸದ್ದನ್ನು ಹೊರಡಿಸುತ್ತಿದ್ದುದರಿಂದ ಬಹಳಷ್ಟು ಜನ ಮುಖ್ಯ ರಸ್ತೆಯಲ್ಲಿಯೇ ನಡೆದುಹೋಗುತ್ತಿದ್ದರು. ಆದರೆ ಮಿಸ್ಟರ್ ಆಲಿವರ್ ಅಷ್ಟೊಂದು ಪುಕ್ಕಲನಾಗಿರಲಿಲ್ಲ. ಆತ ತನ್ನ ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ಕಾಲ್ದಾರಿಗುಂಟ ಧೈರ್ಯದಿಂದ ಸಾಗತೊಡಗಿದ. ಆದರವನ ಟಾರ್ಚಿನ ಬ್ಯಾಟರಿಗಳು ತೀರಿಹೋಗುತ್ತಿದ್ದರಿಂದ ಅದರ ಬೆಳಕು ಬಿಟ್ಟು ಬಿಟ್ಟು ಬರುತ್ತಿತ್ತು. ಹೀಗೇ ನಡೆಯುತ್ತಾ ನಡೆಯುತ್ತಾ ಅವನು ಒಂದು ಕಡಿದಾದ ದಾರಿಗೆ ಬರುತ್ತಿದ್ದಂತೆಯೇ ಅವನ ಟಾರ್ಚಿನ ಮಂದ ಬೆಳಕು ಪಕ್ಕದ ಕಲ್ಲುಬಂಡೆಯ ಮೇಲೆ ಒಬ್ಬಂಟಿಯಾಗಿ ಕುಳಿತಿದ್ದ ಹುಡುಗನ ಮೇಲೆ ಬಿತ್ತು. ಆ ಹುಡುಗನನ್ನು ನೋಡಿದವನೇ ಆಲಿವರ್ ಒಂದು ಕ್ಷಣ ಗಲಿಬಿಲಿಯಾಗಿ ನಿಂತುಬಿಟ್ಟ. ಕತ್ತಲಾದ ಮೇಲೆ ಶಾಲೆಯ ಹುಡುಗರ್ಯಾರೂ ಹೊರಬರುವಂತಿಲ್ಲ. ಆದರೆ ಇಷ್ಟೊತ್ತಲ್ಲಿ ಹುಡುಗನೊಬ್ಬ ಒಬ್ಬಂಟಿಯಾಗಿ ಕುಳಿತಿರುವನಲ್ಲ? ಯಾರಿರಬಹುದು? ನೋಡಿಯೇ ಬಿಡೋಣವೆಂದು ಸ್ವಲ್ಪ ಮುಂದೆ ಬಂದನು.
  “ಮಗನೇ, ಇಲ್ಲೇನು ಮಾಡುತ್ತಿರುವೆ?” ಎಂದು ಕೇಳುತ್ತಾ ಮಿಸ್ಟರ್ ಆಲಿವರ್ ಅವನ ಸಮೀಪಕ್ಕೆ ಬಂದನು. ಸಮೀಪಕ್ಕೆ ಹೋದರೆ ಆ ಹುಡುಗ ಯಾರೆಂದು ಕಂಡುಹಿಡಿಯಬಹುದೆನ್ನುವದು ಅವನ ಉದ್ದೇಶವಾಗಿತ್ತು. ಒಂದು ಕ್ಷಣ ಅಲ್ಲೇನೋ ತೊಂದರೆಯಾಗಿದೆಯೆಂದು ಮಿಸ್ಟರ್ ಆಲಿವರ್ ನಿಗೆ ಅನಿಸಿತು. ಆ ಹುಡುಗ ಅಳುತ್ತಿರುವಂತೆ ಕಂಡಿತು. ಅವನು ತನ್ನೆರಡೂ ಕೈಗಳಿಂದ ಮುಖವನ್ನು ಮುಚ್ಚಿಕೊಂಡು ತಲೆತಗ್ಗಿಸಿ ಅಳುತ್ತಾ ಕೂತಿರುವಂತೆ ಭಾಸವಾಯಿತು. ಜೊತೆಗೆ ಅವನ ದೇಹವು ಸೆಳವು ಬಂದವರ ತರ ಒಂದೇ ಸಮನೆ ನಡುಗುತ್ತಿತ್ತು. ಅದೊಂದು ವಿಚಿತ್ರ, ಶಬ್ದರಹಿತ ಅಳುವಾಗಿತ್ತು. ಮಿಸ್ಟರ್ ಆಲಿವರ್ ಕೊಂಚ ಕಳವಳಗೊಂಡನು.  

  “ವೆಲ್. ವ್ಹಾಟ್ ಈಸ್ ದ ಮ್ಯಾಟರ್?” ಮಿಸ್ಟರ್ ಆಲಿವರ್ ತನ್ನ ಕಳವಳವನ್ನು ಕಾಳಜಿಯನ್ನಾಗಿ ಪರಿವರ್ತಿಸುತ್ತಾ ಕೇಳಿದನು. “ಯಾಕೆ ಅಳುತ್ತಿರುವೆ?” ಆ ಹುಡುಗ ಉತ್ತರ ಕೊಡುವದನ್ನಾಗಲಿ ತಲೆ ಎತ್ತಿ ನೋಡುವದನ್ನಾಗಲಿ ಮಾಡಲಿಲ್ಲ. ಆತ ಮೌನವಾಗಿ ಬಿಕ್ಕಳಿಸುತ್ತಲೇ ಇದ್ದುದರಿಂದ ಅವನ ದೇಹ ನಡುಗುತ್ತಲೇ ಇತ್ತು. “ಕಮಾನ್ ಬಾಯ್, ಇಲ್ಲೇನು ಮಾಡುತ್ತಿದ್ದಿಯಾ? ನೀನು ಇಷ್ಟೊತ್ತಲ್ಲಿ ಹೊರಗಡೆ ಬರಬಾರದು. ಏನಾದರು ತೊಂದರೆಯಿದ್ದರೆ ನನಗೆ ಹೇಳು. ಎಲ್ಲಿ, ಒಮ್ಮೆ ನನ್ನ ಕಣ್ಣೆತ್ತಿ ನೋಡು.” ಹುಡುಗ ತಲೆ ಎತ್ತಿದ. ತನ್ನೆರೆಡೂ ಕೈಗಳನ್ನು ಮುಖದ ಮೇಲಿಂದ ತೆಗೆದು ತನ್ನ ಶಿಕ್ಷಕನತ್ತ ಒಮ್ಮೆ ನೋಡಿದ. ಆಲಿವರ್ನ ಟಾರ್ಚಿನ ಬೆಳಕು ಆ ಹುಡುಗನ ಮುಖದ ಮೇಲೆ ಬಿತ್ತು.

  ಆಲಿವರ್ ಒಮ್ಮೆಗೇ ದಿಗ್ಭ್ರಾಂತನಾಗಿ ನಿಂತುಬಿಟ್ಟ. ಆ ಹುಡುಗನ ಮುಖ ಒಂದು ದುಂಡನೆಯ ಆಕಾರದಲ್ಲಿತ್ತೇ ಹೊರತು ಅದಕ್ಕೆ ಕಿವಿ, ಬಾಯಿ, ಕಣ್ಣು ಏನೂ ಇರಲಿಲ್ಲ. ಅದನ್ನು ಮುಖವೆಂದು ಕರೆಯಬೇಕೋ ಬೇಡವೋ ಎಂದು ಅವನಿಗೆ ಗೊತ್ತಾಗಲಿಲ್ಲ. ಅವನ ತಲೆಯ ಮೇಲೆ ಶಾಲೆಯ ಕ್ಯಾಪಿತ್ತು. ಮಿಸ್ಟರ್ ಆಲಿವರ್ನ ಧೈರ್ಯವೆಲ್ಲಾ ಒಮ್ಮಿಂದೊಮ್ಮಿಲೇ ಉಡುಗಿಹೋಗಿ ಅವನ ಕೈಗಳು ಗಡಗಡನೆ ನಡುಗತೊಡಗಿದವು. ಭಯಕ್ಕೆ ಅವನು ಹಿಡಿದಿದ್ದ ಟಾರ್ಚು ಕೈಯಿಂದ ಕೆಳಕ್ಕೆ ಬಿತ್ತು. ಆತ ಸರಕ್ಕನೇ ತಿರುಗಿದವನೇ ಹೆಲ್ಪ್ ಹೆಲ್ಪ್ ಎಂದು ಕೂಗುತ್ತಾ, ತಡವರಿಸುತ್ತಾ, ದೇಕಿಕೊಂಡು ಒಂದೇ ಸಮನೇ ಓಡತೊಡಗಿದನು. ಅವನು ಶಾಲಾ ಕಟ್ಟಡಗಳತ್ತ ಇನ್ನೂ ಓಡುತ್ತಲೇ ಇದ್ದ. ಅಷ್ಟರಲ್ಲಿ ದಾರಿಯ ಮಧ್ಯದಲ್ಲಿ ಯಾವುದೋ ವ್ಯಕ್ತಿ ಲಾಟೀನನ್ನು ಹಿಡಿದುಕೊಂಡು ಬರುವದು ಗೋಚರಿಸಿತು. ಆ ವ್ಯಕ್ತಿ ಹತ್ತಿರ ಬರುತ್ತಿದ್ದಂತೆ ಮಿಸ್ಟರ್ ಆಲಿವರ್ ಅದು ಸ್ಕೂಲಿನ ವಾಚ್ಮ್ಯಾನ್ ಇರಬೇಕೆಂದುಕೊಂಡು ಏದುಸಿರುಬಿಡುತ್ತಾ ನಿಂತನು. “ಏನ್ ಸಾಹೇಬ್ರೇ?” ವಾಚ್ಮ್ಯಾನ್ ಕೇಳಿದನು “ಏನಾದ್ರು ಅಪಘಾತವಾಯಿತೇ? ಯಾಕೆ ಓಡುತ್ತಿದ್ದೀರಿ?” 

  “ನಾನು ಭಯಂಕರವಾಗಿರುವ ದೃಶ್ಯವೊಂದನ್ನು ಕಂಡೆ- ಆ ಕಾಡಿನಲ್ಲಿ ಒಂದು ಹುಡುಗ ಅಳುತ್ತಿರುವದನ್ನು ನೋಡ್ದೆ-ಆ ಹುಡುಗನಿಗೆ ಮುಖವೇ ಇರಲಿಲ್ಲ!” 

  “ಮುಖವೇ ಇರಲಿಲ್ವಾ ಸಾಹೇಬ್ರೇ!?”

  “ಇಲ್ಲ, ಕಣ್ಣು, ಮೂಗು, ಬಾಯಿ ಏನೂ ಇರಲಿಲ್ಲ!

  “ಅಂದ್ರೆ, ಅದು ಹೀಗಿತ್ತಾ ಸಾಹೇಬ್ರೇ?” ಎಂದು ಕೇಳುತ್ತಾ ವಾಚ್ಮ್ಯಾನ್ ತನ್ನ ಮುಖಕ್ಕೆ ಲಾಟೀನನ್ನು ಹಿಡಿದನು. ಆ ವಾಚ್ಮ್ಯಾನ್‍ಗೆ ಕಣ್ಣಾಗಲಿ, ಕಿವಿಯಾಗಲಿ, ಬಾಯಿಯಾಗಲಿ, ಏನಂದರೆ ಏನೂ ಇರಲಿಲ್ಲ! ಹುಬ್ಬು ಕೂಡಾ ಇರಲಿಲ್ಲ! ಮಿಸ್ಟರ್ ಆಲಿವರ್ ಅವನನ್ನು ಭಯದಿಂದ ಬಿಟ್ಟಗಣ್ಣು ಬಿಟ್ಟಂತೆ ನೋಡುತ್ತಿದ್ದಂತೆಯೇ ಅವನ ಕೈಲಿದ್ದ ಲಾಟೀನು ಗಾಳಿಗೆ ಆರಿಹೋಯಿತು.

  ಮೂಲ ಇಂಗ್ಲೀಷ್: ರಸ್ಕಿನ್ ಬಾಂಡ್
  ಕನ್ನಡಕ್ಕೆ: ಉದಯ್ ಇಟಗಿ