ನಸುಕಿನ ನಸುಬೆಳಕಿನಲ್ಲಿ ತನ್ನ
ದಾರಿಯನ್ನು ತಡಕಾಡುತ್ತಾ, ಮಿನಾ ನಿನ್ನೆ ರಾತ್ರಿ ತನ್ನ ಮಂಚದ ಪಕ್ಕದಲ್ಲಿ ನೇತುಹಾಕಿದ್ದ
ತೋಳುಗಳಿಲ್ಲದ ತನ್ನ ಗೌನನ್ನು ತೆಗೆದು ಹಾಕಿಕೊಳ್ಳುತ್ತಾ ತನ್ನ ಟ್ರಂಕಿನಲ್ಲಿ ಅದರ ಕೃತಕ
ತೋಳುಗಳಿಗಾಗಿ ಹುಡುಕಾಡಿದಳು.
ಅಲ್ಲಿ ಅವು ಸಿಗದೇ ಹೋದಾಗ
ಗೋಡೆಯ ಮೇಲಿನ ಮೊಳೆಗಳಲ್ಲಿ ಮತ್ತು ಕದದ ಸಂಧಿಯಲ್ಲಿ ಒಂಚೂರು ಸದ್ದಾಗದಂತೆ, ಸದ್ದಾದರೆ ಅದೇ
ಕೋಣೆಯಲ್ಲಿ ಮಲಗಿದ್ದ ತನ್ನ ಕುರುಡಜ್ಜಿ ಎಚ್ಚರಗೊಳ್ಳಬಹುದೆಂದುಕೊಂಡು ಸಾವಕಾಶವಾಗಿ
ಹುಡುಕತೊಡಗಿದಳು. ಕತ್ತಲಿಗೆ ಅವಳ ಕಣ್ಣುಗಳು ಹೊಂದಿಕೊಳ್ಳುತ್ತಿದ್ದಂತೆ, ಅವಳ ಅಜ್ಜಿ ಅದಾಗಲೇ
ಎದ್ದಿದ್ದಾಳೆ ಎಂಬುದನ್ನು ಗಮನಿಸಿದಳು. ಹಾಗಾಗಿ ಅವಳು ತನ್ನ ಅಜ್ಜಿಯ ಬಳಿ ತೋಳುಗಳ ಬಗ್ಗೆ
ವಿಚಾರಿಸಲು ನೇರವಾಗಿ ಅಡುಗೆ ಮನೆಗೆ ಹೋದಳು.
“ಅವು ಬಚ್ಚಲು ಮನೆಯಲ್ಲಿವೆ.”
ಕುರುಡಜ್ಜಿ ಹೇಳಿದಳು. “ನಿನ್ನೆ ಮಧ್ಯಾಹ್ನ ನಾನು ಅವನ್ನು ಒಗೆದು ಹಾಕಿದೆ.”
ಅವು ಅಲ್ಲಿದ್ದವು. ಗೋಡೆಯ ಎರಡೂ
ಬದಿಯ ಮೊಳೆಗಳಿಗೆ ಹೊಡೆದಿದ್ದ ತಂತಿಯ ಮೇಲೆ ಅವನ್ನು ನೇತುಹಾಕಲಾಗಿತ್ತು. ಅವಿನ್ನೂ ಹಸಿಯಾಗಿದ್ದವು.
ಮಿನಾ ಮತ್ತೆ ಅಡುಗೆ ಮನೆಗೆ ಮರಳಿ ಅವನ್ನು ಒಣಗಿಸಲು ಕಲ್ಲಿನ ಒಲೆಯ ಮೇಲಿಟ್ಟಳು. ಅವಳ ಮುಂದೆ
ಕುರುಡಜ್ಜಿ ಕಾಫಿಯನ್ನು ಕದಡುತ್ತಾ ತನ್ನ ನಿಷ್ಪ್ರಯೋಜಕ ಕಣ್ಣು ಗುಡ್ಡೆಗಳನ್ನು ಹೊರಾಂಗಣದಲ್ಲಿ
ಇಟ್ಟಿಗೆಗಳ ಬಡುವಿನ ಮೇಲಿಟ್ಟಿದ್ದ ಔಷಧೀಯ ಗಿಡಮೂಲಿಕೆಗಳತ್ತ ನೆಟ್ಟಳು.
“ನನ್ನ ಬಟ್ಟೆಗಳನ್ನು ಮತ್ತೆ
ಒಗೆಯೋಕೆ ಹೋಗಬೇಡ.” ಮಿನಾ ಹೇಳಿದಳು. “ಈ ದಿನಗಳಲ್ಲಿ ಬಿಸಿಲನ್ನು ನೆಚ್ಚಿಕೊಳ್ಳೊದಿಕ್ಕೆ
ಆಗೋದಿಲ್ಲ.”
ಕುರುಡಜ್ಜಿ ಧ್ವನಿ ಬಂದತ್ತ
ತನ್ನ ಮುಖವನ್ನು ತಿರುಗಿಸಿದಳು.
“ನನಗೆ ಇದು ತಿಂಗಳದ ಮೊದಲ
ಶುಕ್ರುವಾರ ಎನ್ನುವದು ಮರೆತುಹೋಗಿತ್ತು.” ಅವಳು ಹೇಳಿದಳು.
ಕಾಫಿ ಆಗಿದೆಯೋ ಇಲ್ವೋ ಎಂಬುದನ್ನು
ತಿಳಿದುಕೊಳ್ಳಲು ಆಕೆ ಒಮ್ಮೆ ಆಳವಾಗಿ ಉಸಿರೆಳೆದುಕೊಂಡು ಕೆಟಲ್‍ನ್ನು ಒಲೆಯ ಮೇಲಿಂದ ಇಳಿಸಿದಳು.
“ಇವುಗಳ ಕೆಳಗಡೆ ಒಂದು ಕಾಗದದ
ತುಂಡಿಡು, ಯಾಕಂದ್ರೆ ಈ ಕಲ್ಲುಗಳು ಮಸಿ ಹಿಡಿದಿವೆ.”
ಕುರುಡಜ್ಜಿ ಹೇಳಿದಳು.
ಮಿನಾ ಆ ಕಲ್ಲಿನ ಒಲೆಯ ಮೇಲೆ
ತನ್ನ ತೋರುಬೆರಳಿನಿಂದ ಒಮ್ಮೆ ಉಜ್ಜಿ ನೋಡಿದಳು. ಅಲ್ಲಿ ಮಸಿ ಹೆಕ್ಕಳಗಟ್ಟಿತ್ತು. ಅದಕ್ಕೆ
ತೋಳುಗಳು ತಾಕದಂತೆ ನೋಡಿಕೊಂಡರೆ ಅವು ಕೊಳೆಯಾಗುವ ಸಂಭವವಿರಲಿಲ್ಲ.
ಕುರುಡಜ್ಜಿ ತನಗೊಂದು ಕಪ್ ಕಾಫಿ
ಮಾಡಿಕೊಂಡಳು.
“ನಿನಗೆ ಕೋಪ ಬಂದಿದೆ.” ಅವಳು
ಖುರ್ಚಿಯನ್ನು ಹೊರಾಂಗಣಕ್ಕೆ ತಳ್ಳುತ್ತಾ ಹೇಳಿದಳು. “ನೀನು ಕೋಪಗೊಂಡಾಗ ಪ್ರಾರ್ಥಿಸುವದು ಅಪಚಾರವಾಗುತ್ತದೆ.”
ಅವಳು ತನ್ನ ಕಾಫಿ ಕುಡಿಯಲು ತೆರೆದ ಒಳಾಂಗಣದಲ್ಲಿದ್ದ ಗುಲಾಬಿಗಳ ಮುಂದೆ ಕುಳಿತಳು. ಪ್ರಾರ್ಥನೆಗಾಗಿ
ಮೂರನೇ ಗಂಟೆ ಬಾರಿಸಿದಾಗ, ಮಿನಾ ಒಲೆಯ ಮೇಲಿಂದ ತನ್ನ ತೋಳುಗಳನ್ನು ಎಳೆದುಕೊಂಡಳು. ಅವಿನ್ನೂ
ಹಸಿಯಾಗಿದ್ದವು. ಆದರೂ ಅವನ್ನೇ ಹಾಕಿಕೊಂಡಳು. ಫಾದರ್ ಏಂಜಿಲ್, ಅವಳು ಬರೀ ತೋಳುಗಳಲ್ಲಿ ಹೋದರೆ
ಅವಳಿಗೆ ಪ್ರಾರ್ಥಿಸಲು ಬಿಡಲಾರ. ಅವಳು ಮುಖವನ್ನು ತೊಳೆಯದೆ ಬರೀ ಒಂದು ವಸ್ತ್ರದಿಂದ ಅದನ್ನು ಒರೆಸಿಕೊಂಡು
ತನ್ನ ಪ್ರಾರ್ಥನೆಯ ಪುಸ್ತಕ ಮತ್ತು ರೇಶ್ಮೆಯ ಸ್ಕಾರ್ಫನ್ನು ಎತ್ತಿಕೊಂಡು ಹೊರನಡೆದಳು. ಕಾಲು
ಗಂಟೆಯ ಬಳಿಕ ಮತ್ತೆ ವಾಪಾಸಾದಳು.
“ನೀನಲ್ಲಿಗೆ ಒಂದಿಷ್ಟು
ಪ್ರಾರ್ಥನೆಗಳು ಮುಗಿದ ಮೇಲೆ ಹೋಗುತ್ತೀಯ ಅಂತಾ ಕಾಣುತ್ತೆ.” ಕುರುಡಜ್ಜಿ ಗುಲಾಬಿಗಳ ಮುಂದೆ
ಕುಳಿತುಕೊಳ್ಳುತ್ತಾ ಅನುಮಾನ ವ್ಯಕ್ತಪಡಿಸಿದಳು.
ಮಿನಾ ನೇರವಾಗಿ ಔಟ್ಹೌಸ್ ಕಡೆಗೆ
ಹೋದಳು.
“ನಾನು ಪ್ರಾರ್ಥನೆಗೆ ಹೋಗಲಾರೆ.”
ಅವಳು ಹೇಳಿದಳು “ನನ್ನ ತೊಳುಗಳು ಹಸಿಯಾಗಿವೆ ಮತ್ತು ನನ್ನ ಬೇರೆ ಯಾವ ಬಟ್ಟೆಗಳೂ
ಇಸ್ತ್ರಿಯಾಗಿಲ್ಲ.”
ಅವಳಿಗೆ ಕುರುಡಜ್ಜಿ ತನ್ನನ್ನು
ಹಿಂಬಾಲಿಸುತ್ತಿದ್ದಾಳೆ ಎಂದನಿಸಿತು.
“ಇವತ್ತು ಮೊದಲ ಶುಕ್ರವಾರ. ಈ
ದಿನ ತುಂಬಾ ಪವಿತ್ರವಾದದ್ದು. ನೀನು ಈ ಪ್ರಾರ್ಥನಗೆ ಹೋಗುವದಿಲ್ಲವೇ?” ಕುರುಡಜ್ಜಿ ಕೇಳಿದಳು.
ಔಟ್ಹೌಸಿನಿಂದ ಮರಳುವಾಗ ಮಿನಾ
ಒಂದು ಕಪ್ ಕಾಫಿಯನ್ನು ತೆಗೆದುಕೊಂಡು ಬಾಗಿಲ ಬಳಿ ಕುರುಡಜ್ಜಿಯ ಪಕ್ಕ ಕುಳಿತಳು. ಆದರೆ ಅವಳಿಗೆ
ಕಾಫಿ ರುಚಿಸಲಿಲ್ಲ.
“ಇದು ನಿನ್ನ ತಪ್ಪು.” ಅವಳು
ಅಸಹನೆಯಿಂದ ಗೊಣಗಿದಳು. ಕಂಗಳಲ್ಲಿ ನೀರಿತ್ತು.
“ನೀನು ಅಳುತ್ತಿರುವಿ.”
ಕುರುಡಜ್ಜಿ ಉದ್ಗರಿಸಿದಳು.
ಅವಳು ನೀರುಣಿಸುವ
ಬಿಂದಿಗೆಯನ್ನು ಕೆಳಗಿಟ್ಟು “ನೀನು ಅಳುತ್ತಿರುವೆ.” ಎಂದು ಮತ್ತೆ ಹೇಳುತ್ತಾ ಒಳಾಂಗಣವನ್ನು
ಬಿಟ್ಟು ಬಂದಳು.
“ನೀನು ನಿನ್ನ ತಪ್ಪನ್ನು
ಒಪ್ಪಿಕೋ. ನಿನ್ನಿಂದಾಗಿ ನನಗೆ ಮೊದಲ ಶುಕ್ರವಾರದ ಪ್ರಾರ್ಥನೆ ತಪ್ಪಿಹೋಯಿತು.”
ಮಿನಾ ಬೆಡ್ ರೂಮಿನ ಬಾಗಿಲು
ಮುಚ್ಚಬಹುದೆಂದು ಕುರುಡಜ್ಜಿ ಅಲ್ಲೇ ನಿಂತಳು. ನಂತರ
ಹೊರಾಂಗಣದ ತುದಿಯವರೆಗೆ ತಡಕಾಡುತ್ತಾ ನಡೆದುಕೊಂಡು ಹೋದಳು. ಅಲ್ಲಿ ನೆಲದ ಮೇಲೆ ಕಾಫಿ
ಕಪ್ ಹಾಗೇ ಇತ್ತು. ಅವಳು ಅದರಲ್ಲಿನ ಕಾಫಿಯನ್ನು ಕಿತ್ತಲಿಗೆ ಮರಳಿ ಸುರಿಯುತ್ತಾ ಹೇಳಿದಳು.
“ನಾನು ಬೇಕಂತಲೇ ಮಾಡಿದ್ದಲ್ಲ.
ಆ ದೇವರಿಗೂ ಗೊತ್ತಿದೆ ನನ್ನ ಮನಸ್ಸು ಎಷ್ಟು ಪರಿಶುದ್ಧವಾಗಿದೆಯೆಂದು.”
ಅಷ್ಟರಲ್ಲಿ ಮಿನಾಳ ತಾಯಿ ಬೆಡ್‍ರೂಂನಿಂದ
ಹೊರಗೆ ಬಂದಳು.
“ಯಾರ ಜೊತೆ
ಮಾತನಾಡುತ್ತಿದ್ದಿಯಾ?” ಆಕೆ ಕೇಳಿದಳು.
“ಯಾರ ಜೊತೆನೂ ಇಲ್ಲ.”
ಕುರುಡಜ್ಜಿ ತಣ್ಣನೆಯ ದನಿಯಲ್ಲಿ ಹೇಳಿದಳು. “ನನಗೆ ಹುಚ್ಚು ಹಿಡಿತಾ ಇದೆ.”
ತನ್ನ ರೂಮಿನೊಳಗೆ ಹೋಗಿ ಮಿನಾ
ಬಾಗಿಲನ್ನು ಮುಚ್ಚಿ ತನ್ನ ಕುಪ್ಪಸದೊಳಗಿಂದ ಮೂರು ಸಣ್ಣ ಬೀಗದ ಕೈಗಳನ್ನು ಹೊರತೆಗೆದಳು. ಅದರ
ಒಂದು ಬೀಗದ ಕೈಯಿಂದ ತನ್ನ ಡ್ರೆಸ್ಸಿಂಗ್ ಟೇಬಲ್ಲಿನ ಕೆಳಗಿನ ಡ್ರಾಯರನ್ನು ತೆರೆದು ಅದರೊಳಗಿಂದ
ಒಂದು ಚಿಕ್ಕ ಮರದ ಪೆಟ್ಟಿಗೆಯನ್ನು ಹೊರತೆಗೆದಳು. ಇನ್ನೊಂದು ಕೀಯನ್ನು ಉಪಯೋಗಿಸಿ ಅದರ
ಮುಚ್ಚಳವನ್ನು ತೆರೆದಳು. ಅದರಲ್ಲಿ ಪತ್ರಗಳ ಪ್ಯಾಕೆಟೊಂದನ್ನು ಬಣ್ಣದ ಕಾಗದದಲ್ಲಿ ಎಲಾಸ್ಟಿಕ್
ಬ್ಯಾಂಡ್ ಹಾಕಿಟ್ಟಿದ್ದರು. ಅವನ್ನು ತನ್ನ ಕುಪ್ಪಸದೊಳಗೆ ತುರುಕಿಕೊಂಡಳು. ಟ್ರಂಕ್‍ನ್ನು ಮತ್ತೆ
ಅದರ ಜಾಗದಲ್ಲಿಟ್ಟು ಡ್ರಾಯರಿನ ಬೀಗ ಹಾಕಿದಳು. ನಂತರ ಔಟ್ಹೌಸ್‍ಗೆ ಹೋಗಿ ಪತ್ರಗಳನ್ನು ಗುಂಡಿಯ
ಕೆಳಗೆ ಬಚ್ಚಿಟ್ಟಳು.
“ನಾನು, ನೀನು ಪ್ರಾರ್ಥನೆಗೆ ಹೋಗಿದ್ದೀಯಾ
ಅಂದುಕೊಂಡಿದ್ದೆ.” ಅವಳ ತಾಯಿ ಹೇಳಿದಳು.
“ಅವಳಿಗೆ
ಹೋಗಲಿಕ್ಕಾಗಲಿಲ್ಲ.” ಕುರುಡಜ್ಜಿ ನಡುವೆ ಬಾಯಿ ಹಾಕಿದಳು. “ಇವತ್ತು ಮೊದಲ ಶುಕ್ರವಾರ ಅನ್ನೋದು
ಮರೆತುಹೋಗಿ ನಾನು ಅವಳ ತೋಳುಗಳನ್ನು ನಿನ್ನೆ ಮಧ್ಯಾಹ್ನ ಒಗೆದುಹಾಕಿದೆ.”
“ಅವಿನ್ನೂ ಒದ್ದೆಯಾಗಿವೆ.”
ಮಿನಾ ಗೊಣಗಿದಳು.
“ಈಗ ನಿನಗೆ ತುಂಬಾ ಕೆಲಸವಿದೆ
ಅಂತಾ ಕಾಣುತ್ತದೆ, ಅಲ್ವಾ?” ಕುರುಡಜ್ಜಿ ಕೇಳಿದಳು.
“ಹೌದು, ಈಸ್ಟರ್ ಹಬ್ಬದ ದಿನ
ನಾನು ನೂರೈವತ್ತು ಡಜನ್ ಗುಲಾಬಿಗಳನ್ನು ತಲುಪಿಸಬೇಕಿದೆ.” ಮಿನಾ ಉತ್ತರಿಸದಳು.
ಆವತ್ತು ಸೂರ್ಯ ಬಹಳ ಬೇಗನೆ
ಉದಯಿಸಿದ. ಏಳು ಗಂಟೆಯಷ್ಟೊತ್ತಿಗೆ ಮಿನಾ ತನ್ನ ಕೋಣೆಯಲ್ಲಿಯೇ ಕೃತಕ ಗುಲಾಬಿಗಳ ವರ್ಕ್ ಶಾಪ್
ಆರಂಭಿಸಿದಳು. ಅವಳು ಒಂದು ಬುಟ್ಟಿ ತುಂಬಾ ಪಕಳೆಗಳು. ವಯರ್, ಎಲಾಸ್ಟಿಕ್, ಎರಡು ಕತ್ತರಿಗಳು,
ದಾರದುಂಡೆ, ಹಾಗೂ ಅಂಟಿನ ಬಾಟಲನ್ನಿಟ್ಟುಕೊಂಡು ತನ್ನ ಕೆಲಸ ಆರಂಭಿಸಿದಳು. ಸ್ವಲ್ಪ ಹೊತ್ತಿನ ನಂತರ
ಟ್ರಿನಿದಾದ್ ತನ್ನ ಕಂಕುಳಲ್ಲಿ ಒಂದು ಕಾರ್ಡ್ಬೋರ್ಡ್ ಪೆಟ್ಟಿಗೆಯನ್ನಿಟ್ಟುಕೊಂಡು ಬಂದಳು.
“ನೀನಿನ್ನೂ ಯಾಕೆ
ಪ್ರಾರ್ಥನೆಗೆ ಹೋಗಿಲ್ಲ?”
“ನನ್ನ ಹತ್ತಿರ
ತೋಳುಗಳಿರಲಿಲ್ಲ.” ಮಿನಾ ಹೇಳಿದಳು.
“ಯಾರನ್ನಾದರು ಕೇಳಿದ್ದರೆ ಕಡ
ಕೊಡುತ್ತಿದ್ದರೇನೋ?” ಎಂದು ಹೇಳುತ್ತಾ ಟ್ರಿನಿದಾದ್ ಪಕಳೆಗಳಿದ್ದ ಬುಟ್ಟಿಯ ಬಳಿ
ಖುರ್ಚಿಯೊಂದನ್ನೆಳೆದುಕೊಂಡು ಕುಳಿತಳು.
“ನಂಗೆ ಆಗಲೇ ತಡವಾಗಿತ್ತು.”
ಮಿನಾ ಹೇಳಿದಳು.
ಅವಳು ಒಂದು ಗುಲಾಬಿಯನ್ನು ಮಾಡಿ
ಮುಗಿಸಿದಳು. ನಂತರ ಬುಟ್ಟಿಯನ್ನು ತನ್ನೆಡೆಗೆ ಎಳೆದುಕೊಂಡು ಅದರಲ್ಲಿದ್ದ ಪಕಳೆಗಳನ್ನು
ಕತ್ತರಿಯಿಂದ ಸುರುಳಿ ಸುರುಳಿಯಾಗಿ ಸುತ್ತಿದಳು. ಟ್ರಿನಿದಾದ್ ತನ್ನ ಕೈಯಲ್ಲಿದ್ದ ಕಾರ್ಡ್ಬೋರ್ಡ್
ಪೆಟ್ಟಿಗೆಯನ್ನು ಕೆಳಗಿಟ್ಟು ಅವಳ ಕೆಲಸಕ್ಕೆ ಕೈಜೋಡಿಸಿದಳು.
ಮಿನಾ ಆ ಪೆಟ್ಟಿಗೆಯನ್ನು
ಗಮನಿಸಿ “ನೀನು ಶೂಗಳನ್ನು ಕೊಂಡೆಯಾ?” ಎಂದು ಕೇಳಿದಳು.
“ಇಲ್ಲ. ಅವು ಸತ್ತ ಇಲಿಗಳು.”
ಟ್ರಿನಿದಾದ್ ಹೇಳಿದಳು.
ಟ್ರಿನಿದಾದ್ ಪಕಳೆಗಳನ್ನು
ಸುತ್ತುವದರಲ್ಲಿ ಪರಿಣಿತಳಾಗಿದ್ದರಿಂದ ಮಿನಾ ಹಸಿರು ಕಾಗದದಲ್ಲಿ ಸುತ್ತಿದ ಕಾಂಡಗಳನ್ನು
ತಯಾರಿಸುವದರಲ್ಲಿ ಮಗ್ನಳಾದಳು. ಅವರಿಬ್ಬರೂ ಸೂರ್ಯ ಕೋಣೆಯೊಳಕ್ಕೆ ಬಂದಿದ್ದನ್ನು ಕೂಡಾ ಗಮನಿಸದೇ
ಮೌನದಲ್ಲೇ ಕೆಲಸ ಮಾಡುತ್ತಿದ್ದರು. ಕಾಂಡ ಮಾಡುವದನ್ನು ಮುಗಿಸಿದ ಮೇಲೆ ಮಿನಾ ಟ್ರಿನಿದಾದಾನ ಕಡೆ
ತಿರುಗಿದಳು. ಆದರೆ ಅವಳ ಮನಸ್ಸು ಇನ್ನೆಲ್ಲೋ ಇತ್ತು. ಟ್ರಿನಿದಾದಾ ಕಾಲು ಚಾಚಿಕೊಂಡು ಕುಳಿತು
ಅತ್ಯಂತ ಶ್ರದ್ಧೆಯಿಂದ ತನ್ನ ಬೆರಳತುದಿಗಳಿಂದ ಪಕಳೆಗಳನ್ನು ಸುತ್ತುತ್ತಿದ್ದಳು. ಮಿನಾ, ಅವಳು
ಗಂಡಸರ ಶೂಗಳನ್ನು ಹಾಕಿಕೊಂಡಿರುವದನ್ನು ಗಮನಿಸಿದಳು. ಟ್ರಿನಿದಾದಾ ಅವಳ ದೃಷ್ಟಿಯಿಂದ ತಪ್ಪಿಸಿಕೊಳ್ಳಲು
ತಲೆಯನ್ನು ಎತ್ತದೆ, ನಿಧಾನಕ್ಕೆ ತನ್ನ ಕಾಲುಗಳನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾ ಕೇಳಿದಳು.
“ಏನಾಯ್ತು?”
ಮಿನಾ ಅವಳೆಡೆಗೆ ತಿರುಗುತ್ತಾ
ಹೇಳಿದಳು.
“ಅವನು ಹೊರಟು ಹೋದ.”
ಟ್ರಿನಿದಾದಾ ಕತ್ತರಿಯನ್ನು ಕೈ
ಬಿಟ್ಟಳು.
“ಇಲ್ಲ....”
“ನಿಜವಾಗ್ಲೂ. ಅವನು ಹೊರಟು
ಹೋದ.” ಮಿನಾ ಮತ್ತೆ ಹೇಳಿದಳು.
ಟ್ರಿನಿದಾದಾ ಅವಳನ್ನು ಕಣ್ಣು
ಮಿಟುಕಿಸದೆಯೇ ನೋಡಿದಳು. ಅವಳ ಹುಬ್ಬು ಗಂಟಿಕ್ಕಿದವು.
“ಈಗೇನು ಮಾಡೋದು?”
ಮಿನಾ ತನ್ನ ಧ್ವನಿಯಲ್ಲಿ
ಯಾವೊಂದು ಕಂಪನವಿಲ್ಲದೇ ಹೇಳಿದಳು.
“ಏನೂ ಇಲ್ಲ.”
ಟ್ರಿನಿದಾದಾ ಹತ್ತು ಘಂಟೆಗೆ
ಮುಂಚೆಯೇ ಹೋದಳು.
ಬಚ್ಚಿಟ್ಟ ರಹಸ್ಯವನ್ನು ಬಿಚ್ಚಿಟ್ಟು
ಹಗುರಾದ ಮಿನಾ ಸತ್ತ ಇಲಿಗಳನ್ನು ಎಸೆಯಲು ಔಟ್ಹೌಸ್ ಕಡೆಗೆ ಹೋದಳು. ಕುರುಡಜ್ಜಿ ಗುಲಾಬಿ
ಗಿಡಗಳನ್ನು ಕತ್ತರಿಸುತ್ತಿದ್ದಳು.
“ನಾನು ಬೇಕಾದ್ರೆ ಬಾಜಿ ಕಟ್ತಿನಿ
ಈ ಪೆಟ್ಟೆಗೆಯಲ್ಲೇನಿದೆ ಎಂದು ಹೇಳ್ತಿಯಾ?” ತನ್ನ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಕುರುಡಜ್ಜಿಯನ್ನು
ಸ್ವಲ್ಪ ಛೇಡಿಸೋಣವೆಂದು ಮಿನಾ ಅವಳನ್ನು ತಡೆದು ಕೇಳಿದಳು.
ಮಿನಾ ಒಮ್ಮೆ ಪೆಟ್ಟಿಗೆಯನ್ನು
ಅಲ್ಲಾಡಿಸಿದಳು. ಕುರುಡಜ್ಜಿ ಹತ್ತಿರದಿಂದ ಆ ಸದ್ದನ್ನು ಕೇಳಿದಳು.
“ಇನ್ನೊಂದು ಸಾರಿ
ಅಲ್ಲಾಡಿಸು.” ಆಕೆ ಕೇಳಿದಳು.
ಮಿನಾ ಮತ್ತೊಮ್ಮೆ
ಅಲ್ಲಾಡಿಸಿದಳು. ಕುರುಡಜ್ಜಿ ತೋರುಬೆರಳಿನಿಂದ ತನ್ನ ಕಿವಿಯ ಕೆಳತುದಿಯನ್ನೆಳೆದು ಲಕ್ಷ್ಯಗೊಟ್ಟು
ಕೇಳಿದಳು. ಊಹೂಂ, ಆಗಲೂ ಗೊತ್ತಾಗಲಿಲ್ಲ. ಹೀಗೇ ಮೂರು ಬಾರಿ ಕೇಳಿದಳು. ಆಗಲೂ ಪೆಟ್ಟಿಗೆಯಲ್ಲಿದ್ದ
ವಸ್ತುಗಳೇನೆಂದು ಅವಳಿಗೆ ಕಂಡುಹಿಡಯಲಾಗಲಿಲ್ಲ.
“ಅವು ನಿನ್ನೆ ರಾತ್ರಿ
ಚರ್ಚಿನ ಬಲೆಯಲ್ಲಿ ಬಿದ್ದ ಇಲಿಗಳು.” ಮಿನಾ ಹೇಳಿದಳು.
ಮರಳಿ ಬರುವಾಗ ಅವಳು ಏನನ್ನೂ
ಮಾತನಾಡದೆ ಕುರುಡಜ್ಜಿಯ ಪಕ್ಕದಲ್ಲಿಯೇ ಹಾದುಹೋದಳು. ಆದರೆ ಕುರುಡಜ್ಜಿ ಅವಳನ್ನು ಹಿಂಬಾಲಿಸಿದಳು.
ಅವಳು ರೂಮಿಗೆ ಹೋದ ಮೇಲೆ ಮುಚ್ಚಿದ ಕಿಟಕಿಯ ಪಕ್ಕದಲ್ಲಿ ಮಿನಾ ಒಬ್ಬಂಟಿಯಾಗಿ ಕುಳಿತು ಕೃತಕ
ಗುಲಾಬಿಗಳಿಗೆ ಕೊನೆಯ ರೂಪವನ್ನು ಕೊಡತೊಡಗಿದಳು.
“ಮಿನಾ,” ಕುರಡಜ್ಜಿ
ಹೇಳಿದಳು, “ಜೀವನದಲ್ಲಿ ನೀನು ಖುಶಿಖುಶಿಯಾಗಿರಬೇಕಾದರೆ ಅಪರಿಚಿತರನ್ನು ಗಣನೆಗೆ ತೆಗೆದುಕೊಳ್ಳಬೇಡ.”
ಮಿನಾ ಏನೊಂದನ್ನು ಮಾತನಾಡದೆ
ಸುಮ್ಮನೆ ಅವಳತ್ತ ನೋಡಿದಳು. ಕುರುಡಜ್ಜಿ ಅವಳ ಮುಂದೆ ಕುಳಿತುಕೊಳ್ಳತ್ತಾ ಅವಳಿಗೆ ಸಹಾಯ ಮಾಡಲು
ಬಂದಳು. ಆದರೆ ಮಿನಾ ಬೇಡವೆಂದಳು.
“ನೀನು ಪ್ರಾರ್ಥನೆಗೆ ಯಾಕೆ
ಹೋಗಲಿಲ್ಲ?” ಕುರುಡಜ್ಜಿ ಕೇಳಿದಳು.
“ಬೇರೆಯವರಿಗಿಂತ ನಿನಗೇ
ಚನ್ನಾಗಿ ಗೊತ್ತಿದೆ.” ಮಿನಾ ಕಟುಕಿದಳು.
“ಅದು ತೋಳುಗಳಿಗೋಸ್ಕರಾನೇ
ಆಗಿದ್ದರೆ ನೀನು ಮನೆಯಿಂದ ಆಚೆ ಕೂಡಾ ಹೋಗುತ್ತಿರಲಿಲ್ಲ,” ಕುರುಡಜ್ಜಿ ಹೇಳಿದಳು, “ನೀನು ಹೋಗುವ ದಾರಿಯಲ್ಲಿ
ನಿನಗೆ ಯಾರೋ ಸಿಕ್ಕರು, ಮತ್ತವರು ನಿನಗೆ ಇಷ್ಟವಾಗದ್ದನ್ನು
ಹೇಳಿದರು, ಅಲ್ಲವೇ?”
“ನಿನಗೆ ತಲೆ ಕೆಟ್ಟಿದೆ.” ಮಿನಾ
ಹೇಳಿದಳು.
“ನೀನು ಇವತ್ತು
ಬೆಳಿಗ್ಗಿನಿಂದ ಔಟ್ಹೌಸ್ ಕಡೆಗೆ ಎರಡು ಸಾರಿ ಹೋಗಿಬಂದಿ.” ಕುರುಡಜ್ಜಿ ಹೇಳಿದಳು, “ನೀನು ಯಾವತ್ತೂ
ಒಂದು ಸಾರಿಗಿಂತ ಹೆಚ್ಚು ಸಾರಿ ಔಟ್ಹೌಸಿಗೆ ಹೋಗುವದಿಲ್ಲ.”
ಮಿನಾ ಗುಲಾಬಿಗಳನ್ನು ತಯಾರು
ಮಾಡುವದರಲ್ಲಿ ಮುಂದುವರಿದಳು.
“ನೀನು ಡ್ರಾಯರಿನಲ್ಲಿ ಏನು
ಇಟ್ಟಿದ್ದೀಯಾ? ಅದನ್ನು ನಂಗೆ ತೋರಿಸ್ತಿಯಾ?” ಕುರುಡಜ್ಜಿ ಕೇಳಿದಳು.
ಮಿನಾ ಗುಲಾಬಿಯೊಂದನ್ನು
ಕಿಟಕಿಯ ಕಟ್ಟಿಗೆ ಸಿಕ್ಕಿಸಿ ತನ್ನ ಕುಪ್ಪಸದೊಳಗಿಂದ ಮೂರು ಬೀಗದ ಕೈಗಳನ್ನು ತೆಗೆದು ಅವನ್ನು
ಕುರುಡಜ್ಜಿಯ ಕೈಯಲ್ಲಿಟ್ಟು ಮತ್ತೆ ಅವನ್ನು ಅವಳ ಬೆರಳುಗಳಿಂದ ಮುಚ್ಚಿದಳು.
“ಸ್ವತಃ ನೀನೇ ಹೋಗಿ ನಿನ್ನ ಕಂಗಳಿಂದಲೇ
ನೋಡು.” ಅವಳು ಹೇಳಿದಳು.
ಅವಳ ಅಜ್ಜಿ ಅವನ್ನು ತನ್ನ
ಬೆರಳ ತುದಿಯಿಂದ ಮುಟ್ಟಿನೋಡಿ ಪರೀಕ್ಷಿಸುತ್ತಾ ಹೇಳಿದಳು.
“ಔಟ್ಹೌಸಿನಲ್ಲಿ ಗುಂಡಿ ಎಲ್ಲಿದೆ
ಎಂದು ನನಗೇನು ಗೊತ್ತು? ಅದನ್ನು ನಾನು ಹೇಗೆ ತಾನೇ ನೋಡಬಲ್ಲೆ?”
ಮಿನಾ ತಲೆಯೆತ್ತಿ ನೋಡಿದಳು.
ಕುರುಡಜ್ಜಿ ತಾನು ಗುಂಡಿಯಲ್ಲಿ ಪತ್ರಗಳನ್ನಿಡುವದನ್ನು ಗಮನಿಸಿದ್ದಾಳೆ ಎಂದವಳಿಗನಿಸಿತು.
“ನನ್ನ ವಸ್ತುಗಳ ಬಗ್ಗೆ
ನಿನಗೆ ಅಷ್ಟೊಂದು ಆಸಕ್ತಿಯಿದ್ದರೆ ನೀನೇ ಔಟ್ಹೌಸಿಗೆ ಹೋಗಿ ನೋಡು.” ಅವಳು ಟೀಕಿಸಿದಳು.
ಕುರುಡಜ್ಜಿ ಅವಳ ಟೀಕೆಯನ್ನು
ಉಪೇಕ್ಷಿಸಿದಳು.
“ನೀನು ಹಾಸಿಗೆಯಲ್ಲಿ ಕುಳಿತು
ನಸುಕಿನವರೆಗೂ ಏನನ್ನೋ ಬರೆಯುವದನ್ನು ನಾನು ಗಮನಿಸಿದ್ದೇನೆ.” ಕುರುಡಜ್ಜಿ ಹೇಳಿದಳು, “ಸಣ್ಣ ದೀಪವೊಂದನ್ನು
ಹೊತ್ತಿಸಿ ನೀನು ಬರೆಯಲು ಆರಂಭಿಸಿದೊಡನೆ ಬರೀ ನಿನ್ನ ಉಸಿರಾಟವೊಂದರಿಂದಲೇ ನೀನು ಏನನ್ನು
ಬರೆಯುತ್ತಿರುವಿ ಎಂದು ನಾನು ಹೇಳಬಲ್ಲೆ.”
ಮಿನಾ ವಿಚಲಿತಳಾಗಲಿಲ್ಲ.
“ಸರಿ,” ಅವಳು ತಲೆಯನ್ನೆತ್ತದೆ
ಹೇಳಿದಳು “ಅದಕ್ಕೆ ಏನಿವಾಗ?”
“ಏನೂ ಇಲ್ಲ,” ಕುರುಡಜ್ಜಿ
ಪ್ರತಿಕ್ರಿಯೆಸಿದಳು, “ಅದೇ ನಿನ್ನನ್ನು ಶುಕ್ರವಾರದ ಪ್ರಾರ್ಥನೆಯನ್ನು ತಪ್ಪಿಸಿಕೊಳ್ಳುವಂತೆ
ಮಾಡಿದ್ದು.”
ಮಿನ ದಾರದುಂಡೆ, ಕತ್ತರಿ,
ಕಾಂಡಗಳು ಹಾಗೂ ಮುಗಿಸದಿರುವ ಗುಲಾಬಿಗಳನ್ನು ತನ್ನ ಎರಡೂ ಕೈಗಳಲ್ಲಿ ಎತ್ತಿಕೊಂಡು ಬುಟ್ಟಿಯಲ್ಲಿಟ್ಟಳು.
ನಂತರ ಕುರುಡಜ್ಜಿಗೆ ಎದುರಾಗಿ ನಿಂತು “ಹಾಗಾದ್ರೆ, ನಾನು ಔಟ್ಹೌಸಿಗೆ ಏನು ಮಾಡಲು ಹೋದೆನೆಂದು
ನಿನಗೆ ಹೇಳಲೇಬೇಕಾ?” ಎಂದು ಕೇಳಿದಳು. ಮಿನಾ
ತನ್ನ ಪ್ರಶ್ನೆಗೆ ತಾನೇ ಉತ್ತರಿಸುವವರೆಗೂ ಇಬ್ಬರೂ ಮೌನದಲ್ಲಿ ಉಳಿದರು.
“ನಾನು ಶೌಚಕ್ಕೆ ಹೋಗಿದ್ದೆ.”
ಅವಳ ಅಜ್ಜಿ ಮೂರೂ ಬೀಗದ
ಕೈಗಳನ್ನು ಬುಟ್ಟಿಯಲ್ಲೆಸೆದು “ಚನ್ನಾಗಿ ಸುಳ್ಳು ಹೇಳುತ್ತೀ. ಬಹುಶಃ, ನೀನು ಬೇರೆ ಏನಾದರು ಕಾರಣ
ಹೇಳಿದ್ದರೆ ನಾನು ನಂಬುತ್ತಿದ್ದೆನೇನೋ!” ಎಂದು ಅವಳು ಗೊಣಗುತ್ತಾ ತನ್ನ ದಾರಿಯನ್ನು ಅಡುಗೆ ಮನೆ
ಕಡೆಗೆ ಬೆಳಸಿದಳು.
ಮಿನಾಳ ತಾಯಿ ಆ ಕಡೆಯಿಂದ
ಮುಳ್ಳಿನ ಕಾಂಡಗಳನ್ನು ಹಿಡಿದು ಕಾರಿಡಾರಿನ ಮೂಲಕ ಬಂದಳು.
“ಏನ್ ನಡಿತಿದೆ ಇಲ್ಲಿ?”
ಅವಳು ಕೇಳಿದಳು.
“ನಂಗೆ ತಲೆ ಕೆಟ್ಟಿದೆ,”
ಕುರುಡಜ್ಜಿ ಹೇಳಿದಳು, “ಆದರೆ ನಾನು ಎಲ್ಲಿಯವರೆಗೂ ಯಾರಿಗೂ ಕಲ್ಲು ಹೊಡೆಯುವದಿಲ್ಲವೋ ಅಲ್ಲಿವರೆಗೂ ಯಾರೂ ನನ್ನನ್ನು
ಹುಚ್ಚಾಸ್ಪತ್ರೆಗೆ ಸೇರಿಸೋದಿಲ್ಲ.”
ಮೂಲ ಸ್ಪ್ಯಾನಿಷ್:
ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಜ್
ಕನ್ನಡಕ್ಕೆ: ಉದಯ್
ಇಟಗಿ