Demo image Demo image Demo image Demo image Demo image Demo image Demo image Demo image

ಒಗಟಿಗೆ ಉತ್ತರ

 • ಬುಧವಾರ, ಡಿಸೆಂಬರ್ 31, 2008
 • ಬಿಸಿಲ ಹನಿ

 • ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬಿಯ ಮೂಲದ ಅಮೇರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾದಿ ಜೀವನದ ಅರ್ಥದ ಹುದುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವದನ್ನು ತನ್ನ ಪ್ರಸಿದ್ಧ ಅರೇಬಿ ಕವನ "ಒಗಟು"ನಲ್ಲಿ ವಿವರಿಸುತ್ತಾನೆ. ಇದಕ್ಕೆ ಪ್ರತ್ಯುತ್ತರವಾಗಿ ರೇಬಿ ಇಲ್ ಸಯ್ಯದ್ ಅಬ್ದುಲ್ ಹಲೀಮ್ ತನ್ನ "ಒಗಟಿಗೆ ಉತ್ತರ" ಎಂಬ ಕವನದಲ್ಲಿ ಜೀವನದ ಅರ್ಥದ ಹುದುಕಾಟವೇ ಒಂದು ವ್ಯರ್ಥ ಪ್ರಯತ್ನ ಅದೊಂದು ಬಂದಂತೆ ಬಂದಹಾಗೆ ಸ್ವೀಕರಿಸಿ ಉಳಿದು ಬೆಳೆಯುವ ಪ್ರಕ್ರಿಯೆ ಎಂದು ವಿವರಿಸುತ್ತಾನೆ.

  ನಾನು ಬಂದಿದ್ದೇನೆ ಈ ಜಗಕೆ ಬದುಕಲು
  ಹೇಗೆ ಬಂದೆ? ಯಾಕೆ ಬಂದೆ?
  ಇವುಗಳ ಗೊಡವೆ ಯಾಕೆ?
  ಬದುಕಲೆಂದೇ ಬಂದಿದ್ದೇನೆ:ಬದುಕಬೇಕು
  ಕಾರಣ ಅಕಾರಣಗಳನ್ನು ತಿಳಿಯುವ ಹುಚ್ಚು ಯಾಕೆ?
  ಬದುಕು ರಹಸ್ಯಗಳನ್ನು ಬೇಧಿಸುವ ಆಟವಲ್ಲ
  ಅಥವಾ ಸಾಕೆಂದು ಬಿಟ್ಟು ಹೊರಡುವದಲ್ಲ
  ಅದೊಂದು ಉಳಿದು ಬೆಳೆಯುವ ಸಾಹಸ ಪ್ರಕ್ರಿಯೆ!
  ಭೂಮಿ ಸಾಗರದ ಜೀವಿಗಳೆಲ್ಲ ಹಾಯಾಗಿ ಬದುಕುವಾಗ
  ಮನುಷ್ಯರಿಗೇಕೆ ಆಗದು?
  ಈ ಸೂಕ್ಷ್ಮ ಜನರಿಗೇಕೆ ಅರ್ಥವಾಗೊಲ್ಲ?
  ನನಗೆ ಆಶ್ಚರ್ಯ!

  ನನ್ನ ಹಾದಿ ಯಾವುದದು?
  ದೂರವಿದೆಯೋ?ಹತ್ತಿರವಿದೆಯೋ?
  ಇದನ್ನೆಲ್ಲ ಹುಡುಕುವ ವ್ಯರ್ಥ ಪ್ರಯತ್ನ ಯಾಕೆ?
  ಇಲ್ಲಿ ಯಾವುದೇ ಸಿದ್ಧ ಹಾದಿಗಳಿಲ್ಲ
  ಸುಮ್ಮನೆ ನಡೆಯುತ್ತಾ ಹೋದಂತೆ
  ಅದು ತಾನೆ ತಾನಾಗಿ ಮೂಡುವದು
  ಈ ಸತ್ಯ ಜನರಿಗೇಕೆ ತಿಳಿಯುವದಿಲ್ಲ?
  ನನಗೆ ಆಶ್ಚ್ರರ್ಯ!

  ಇದು ನನ್ನ ಬದುಕು
  ನಾನು ನಾನಾಗಿ ನಡೆಯಬೇಕು
  ನಾನು ನಾನೇನಾ?
  ಅಥವಾ ಬೇರೇನಾ ಎನ್ನುವ ಗೊಂದಲ ಯಾಕೆ?
  ನನಗೆ ನಾನೇ ಒಡೆಯ, ನನ್ನ ಆಯ್ಕೆಯಲ್ಲಿ ನಾನು ಸ್ವತಂತ್ರ.
  ಸರಿಯೋ? ತಪ್ಪೋ?
  ಎಲ್ಲ ನನ್ನ ಕೈಲಿದೆ.

  ನನ್ನ ತಾತ ಮುತ್ತಾತರಂತೆ
  ದೇವರು ನನಗೂ ಬುದ್ಧಿಯನ್ನಿಟ್ಟು ಕಳುಹಿದ್ದಾನೆ
  ನಾನು ಸುಮ್ಮನೆ ದೀಪ ಹಚ್ಚುತ್ತಾ ಸಾಗಬೇಕು
  ಕತ್ತಲಡಿಯಿರುವ ರಹಸ್ಯಗಳೆಲ್ಲ
  ತಾನೇ ತಾನಾಗಿ ಬಯಲಾಗುತ್ತವೆ.
  ಸುಮ್ಮನೆ ಗುಟ್ಟು ಒಳಗುಟ್ಟುಗಳನ್ನು
  ಒಡೆಯುವ ಉಸಾಬರಿ ಯಾಕೆ?
  ಈ ಸರಳ ಸಂಗತಿ ಜನರಿಗೇಕೆ ಅರ್ಥವಾಗೊಲ್ಲ?
  ನನಗೆ ಆಶ್ಚರ್ಯ!
  ಅರೇಬಿ ಮೂಲ: ರೇಬಿ ಇಲ್ ಸಯ್ಯದ್ ಅಬ್ದುಲ್ ಹಲೀಮ್
  ಇಂಗ್ಲೀಷ ಭಾವಾನುವಾದ: ಐಮಾನ್ ಅಲ್ ಖತೀಬ್
  ಕನ್ನಡ ರೂಪಾಂತರ: ಉದಯ ಇಟಗಿ

  ಒಗಟು

 • ಬಿಸಿಲ ಹನಿ


 • ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬೀಯ ಮೂಲದ ಅಮೇರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾದಿ ಜೀವನದ ಅರ್ಥದ ಹುಡುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವದನ್ನು ತನ್ನ ಪ್ರಸಿದ್ಧ ಅರೇಬಿ ಕವನ "ಒಗಟು"ನಲ್ಲಿ ವಿವರಿಸುತ್ತಾನೆ.


  ನಾನು ಎಲ್ಲಿಂದ ಬಂದೆನೋ ಗೊತ್ತಿಲ್ಲ, ಆದರೆ ಬಂದೆ.

  ನನ್ನ ಮುಂದೆ ಹಾದಿ ಹಾಸಿತ್ತು, ನಡೆದೆ.

  ನನಗೆ ಬೇಕೋ ಬೇಡವೋ ನಡೆಯುತ್ತಲೇ ಇರಬೇಕು, ನಡೆಯುತ್ತಿದ್ದೇನೆ.

  ನಾನು ಹೇಗೆ ಬಂದೆ? ಯಾಕೆ ಬಂದೆ?

  ನನ್ನ ದಾರಿಯನ್ನು ಹೇಗೆ ಕಂಡೆ?

  ನನಗೆ ಗೊತ್ತಿಲ್ಲ!


  ಈ ಹುಡುಕಾಟದಲ್ಲಿ

  ನಾನುಹೊಸಬನೋ? ಹಳಬನೋ?

  ಸ್ವತಂತ್ರನೋ? ಬಂಧಿಯೋ?

  ನಡೆಯುತ್ತಿದ್ದೇನೆಯೋ? ನಡೆಸಲ್ಪಡುತ್ತಿದ್ದೇನೆಯೋ?

  ಉತ್ತರ ತಿಳಿಯುವ ಆಸೆ,

  ಆದರೆ ತಿಳಿಯುತ್ತೇನೆಯೇ?

  ಗೊತ್ತಿಲ್ಲ!


  ನನ್ನ ಹಾದಿ, ಯಾವುದದು?

  ದೂರವಿದೆಯೋ? ಹತ್ತಿರವಿದೆಯೋ?

  ಮೇಲೇರುತ್ತಿದ್ದೇನೆಯೋ? ಕೆಳಗಿಳಿಯುತ್ತಿದ್ದೇನೆಯೋ?

  ಸಾಗುತ್ತಿರುವದು ನಾನೋ? ದಾರಿಯೋ?

  ಅಥವಾ ನಾವಿಬ್ಬರು (ನಾನು ಮತ್ತು ಹಾದಿ) ನಿಂತಿದ್ದೇವೆಯೋ?

  ಓಡುತ್ತಿರುವದು ಕಾಲ ಮಾತ್ರವೋ?

  ನನಗೆ ಗೊತ್ತಿಲ್ಲ!


  ನಾನು ಹುಟ್ಟುವ ಮುನ್ನ ನಾನು ನಾನಾಗಿದ್ದೆನೆ?

  ಅಥವಾ ಬೇರೇನಾದರಾಗಿದ್ದೆನೆ?

  ಈ ಒಗಟಿಗೆ ಉತ್ತರವಿದೆಯೆ?

  ಅಥವಾ ಇಲ್ಲವೇ ಇಲ್ಲವೋ?

  ನನಗೆ ಗೊತ್ತಿಲ್ಲ! ಯಾಕೆ ಗೊತ್ತಿಲ್ಲ?

  ಗೊತ್ತಿಲ್ಲ ಅಷ್ಟೇ!


  ಅರಬಿ ಮೂಲ: ಇಲ್ಯಾ ಅಬು ಮಾದಿ

  ಇಂಗ್ಲೀಷಗೆ: ಮುಸ್ತಾಫಾ ಮಲೈಖಾ

  ಕನ್ನಡಕ್ಕೆ: ಉದಯ ಇಟಗಿ

  ಶೇಕ್ಷಪೀಯರನ ತಂಗಿ

 • ಬಿಸಿಲ ಹನಿ
 • ಶೇಕ್ಷಪೀಯರನ ಕಾಲದಲ್ಲಿ ಅವನಷ್ಟೇ ಸಮರ್ಥವಾಗಿ ಯಾರಿಗಾದರು ನಾಟಕಗಳನ್ನು ಬರೆಯಲು ಸಾಧ್ಯವಿತ್ತಾ ಎಂದು ಒಂದು ಸಾರಿ ಸುಮ್ಮನೆ ಯೋಚಿಸುವದಾದರೆ ನಮಗೆ ಸಿಗುವದು ಅವನ ತಂಗಿ. ಬರಹದಲ್ಲಿ ಪ್ರತಿಭೆಯಲ್ಲಿ ಅವನಷ್ಟೇ ಸಮರ್ಥವಾಗಿದ್ದವಳು. ಅವಳ ಹೆಸರು ಜುಡಿತ್.

  ಶೇಕ್ಷಪಿಯರ್ ವ್ಯಾಕರಣದ ಶಾಲೆಗೆ ತಾನೇ ಹೋದ. ಅಲ್ಲಿ ಲ್ಯಾಟಿನ್, ವರ್ಜಿಲ್, ಹೋರೆಸ್ ಮತ್ತು ತರ್ಕಶಾಸ್ತ್ರ ಕಲಿತನು. ಎಲ್ಲರಿಗೂ ತಿಳಿದಿರುವಂತೆ ಶೇಕ್ಷಪಿಯರ್ ಒಬ್ಬ ಸಾಹಸಿ ಹುಡುಗನಾಗಿದ್ದ. ಯಾವಾಗಲೂ ಮೊಲಗಳನ್ನು ಹಿಡಿಯುವದು, ಜಿಂಕೆಗಳನ್ನು ಬೇಟೆಯಾಡುವದು ಅವನ ಕೆಲಸವಾಗಿತ್ತು. ಮುಂದೆ ಪಕ್ಕದ ಊರಿನ ಹುಡುಗಿಯನ್ನು ಮದುವೆಗೆ ಮುನ್ನ ಬಸಿರು ಮಾಡಿದ್ದರಿಂದ ಅವಳನ್ನೇ ಮದುವೆಯಾಗಬೇಕಾಗಿ ಬಂತು. ಅವಳಿಂದ ಮಗುವನ್ನೂ ಪಡೆದ. ಈ ಮಧ್ಯೆ ಅವರಪ್ಪನ ವ್ಯಾಪಾರ ನಷ್ಟಕ್ಕೀಡಾಗಿ ಮನೆಯ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿತು. ಧುತ್ತೆಂದು ಎರಗಿದ ಈ ಎಲ್ಲ ಅವಘಡಗಳಿಂದಾಗಿ ಆತ ಲಂಡನ್ ಗೆ ಕೆಲಸ ಹುಡುಕಿ ಹೋಗಬೇಕಾಯಿತು. ಅಲ್ಲಿ ರಂಗಮಂದಿರವೊಂದರಲ್ಲಿ ನಾಟಕ ನೋಡಲು ಬರುವಾಗ ಶ್ರೀಮಂತ ಜನರು ತರುವ ಕುದರೆಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿದ. ಅವನಿಗೆ ನಾಟಕಗಳಲ್ಲಿ ತುಂಬಾ ಆಸಕ್ತಿಯಿದ್ದುದರಿಂದ ಮುಂದೆ ಬಹಳ ಬೇಗನೆ ನಟನಾಗಿ, ನಾಟಕಕಾರನಾಗಿ ಭಡ್ತಿ ಪಡೆದ. ಇದರಿಂದ ಅವನಿಗೆ ಪ್ರಚಾರವೂ ಸಿಕ್ಕಿ ವಿಶ್ವದ ಅಗ್ರಮಾನ್ಯ ನಾಟಕಕಾರೆಂದೆನಿಸಿಕೊಂಡ.

  ಈ ಮಧ್ಯ ಅವನ ಅಸಾಧಾರಣ ಪ್ರತಿಭಾವಂತ ತಂಗಿ ಮನೆಯಲ್ಲಿ ಹಾಗೆ ಉಳಿದಳು. ಅವಳು ಅವನಷ್ಟೇ ಸಾಹಸಿ, ಕಲ್ಪನಾತೀತ ಮತ್ತು ಉತ್ಸಾಹದ ಚಿಲುಮೆಯಾಗಿದ್ದಳು. ಆದರೆ ಅವಳನ್ನು ಶಾಲೆಗೆ ಕಳಿಸಲಿಲ್ಲ. ಅವಳಿಗೆ ವ್ಯಾಕರಣ, ತರ್ಕಶಾಸ್ತ್ರ ಓದಲು ಅವಕಾಶವಿರಲಿಲ್ಲ. ಬರಿ ಹೊರೇಸ್ ಮತ್ತು ವರ್ಜಿಲ್ ಓದಬಹುದಿತ್ತು. ತನ್ನ ಅಣ್ಣನ ಪುಸ್ತಕಗಳನ್ನು ಆಗಾಗ್ಗೆ ತೆಗೆದು ಓದುತ್ತಿದ್ದಳು. ಹೀಗೆ ಓದಲು ಕುಳಿತಾಗಲೆಲ್ಲ ಅವಳ ತಂದೆ ತಾಯಿ ಅವಳಿಗೆ ಕಾಲುಚೀಲಗಳನ್ನು ಹೆಣೆಯಲು ಅಥವಾ ಅಡಿಗೆ ಮಾಡಲು ಹೇಳುತ್ತಿದ್ದರು. ಜೊತೆಗೆ ಪುಸ್ತಕಗಳೊಂದಿಗೆ ಕಾಲ ಕಳೆಯಬೇಡೆಂಬ ಎಚ್ಚರಕೆಯ ಮಾತು ಬೇರೆ ಇರುತ್ತಿತ್ತು. ಇದನ್ನು ಅವಳಿಗೆ ನೋವಾಗದಂತೆ ಸಾವಧಾನವಾಗಿ ಹೇಳಿದರೂ ಅದರ ತೀಕ್ಷ್ಣತೆ ಅವಳನ್ನು ತಟ್ಟದೆ ಬಿಡುತ್ತಿರಲಿಲ್ಲ. ತಂದೆತಾಯಿಗಳಿಗೆ ಮಗಳ ಮೇಲೆ ಪ್ರಿತಿಯಿದ್ದರೂ ಅಂದಿನ ಸಾಮಾಜಿಕ ಕಟ್ಟುಪಾಡುಗಳಿಗೆ ಹೆದರಿ ಸುಮ್ಮನಿರಬೇಕಾಯಿತು. ಇದೆಲ್ಲದರ ನಡುವೆ ಅವಳು ಆಗೊಮ್ಮೆ ಈಗೊಮ್ಮೆ ಏನನ್ನೋ ಗೀಚುತ್ತಿದ್ದಳು. ಗೀಚಿದ್ದನ್ನು ಜಾಗೂರುಕತೆಯಿಂದ ಬಚ್ಚಿಡಬೇಕಾಗುತ್ತಿತ್ತು ಅಥವಾ ಸುಡಬೇಕಾಗುತ್ತಿತ್ತು.

  ಪ್ರಾಯಕ್ಕೆ ಕಾಲಿಡುವ ಮುನ್ನವೇ ಅವಳನ್ನು ಒಬ್ಬ ಉಣ್ಣೆ ವ್ಯಾಪಾರಿಗೆ ಮದುವೆ ಮಾಡಿಕೊಟ್ಟರು. ಅವಳಿಗೆ ಮದುವೆ ಇಷ್ಟವಿರಲಿಲ್ಲ. ಬೇಡವೆಂದು ಅತ್ತಳು. ಅದಕ್ಕೋಸ್ಕರ ಅವಳಪ್ಪನಿಂದ ಒದೆ ತಿಂದಳು. ಅವನು ಮದುವೆ ವಿಚಾರದಲ್ಲಿ ತನ್ನನ್ನು ನೋಯಿಸುವದಾಗಲಿ, ಅವಮಾನಿಸುವದಾಗಲಿ ಮಾಡಬೇಡೇಂದು ಕೇಳಿಕೊಂಡ. ಕಣ್ಣಲ್ಲಿ ನೀರಿತ್ತು. ವಿಧಿಯಿಲ್ಲದೆ ಒಪ್ಪಬೇಕಾಯಿತು. ಬೇಸಿಗೆಯ ಒಂದು ರಾತ್ರಿ ಸಣ್ಣಪೆಟ್ಟಿಗೆಯೊಳಗೆ ತನ್ನ ಸಾಮಾನುಗಳನ್ನು ತುಂಬಿಕೊಂಡು ಯಾರಿಗೂ ಹೇಳದೆ ಮನೆಯನ್ನು ಬಿಟ್ಟು ಲಂಡನ್ ಕಡೆಗೆ ನಡೆದಳು. ಆಗ ಅವಳಿಗಿನ್ನೂ ಹದಿನೇಳು ತುಂಬಿರಲಿಲ್ಲ. ಆದರೂ ಅವಳಿಗೆ ಪದಗಳ ಜೋಡಣೆಯಲ್ಲಿ ಅಣ್ಣನಷ್ಟೇ ತೀಕ್ಷ್ಣ ಗ್ರಹಿಕೆ, ಚಾಕಚಕ್ಯತೆಯಿತ್ತು. ಒಮ್ಮೊಮ್ಮೆ ಅವನನ್ನೂ ಮೀರಿಸುತ್ತಿದ್ದಳು. ಅವನಂತೆ ಅವಳಿಗೂ ನಾಟಕದಲ್ಲಿ ಆಸಕ್ತಿಯಿತ್ತು. ರಂಗಮಂದಿರದ ಬಾಗಿಲಲ್ಲಿ ನಿಂತು ನಾನು ನಟಿಸುತ್ತೇನೆ ಎಂದಳು. ಅವಳನ್ನು ನೋಡಿ ನಕ್ಕರು. ಮ್ಯಾನೇಜರ್ ಅವಳನ್ನು ಅಪಹಾಸ್ಯ ಮಾಡಿದ. ಸ್ತ್ರಿ ನಟರ ಬಗ್ಗೆ ಕುಹಕವಾಡಿದ. ಯಾವ ಹೆಣ್ಣೂ ನಟಿ ಆಗುವದಕ್ಕೆ ಸಾಧ್ಯವಿಲ್ಲವೆಂದ. ಅವಳಿಗೆ ಇಷ್ಟವಾದ ರಂಗದಲ್ಲಿ ತರಬೇತಿ ಸಿಗಲಿಲ್ಲ. ಊಟಕ್ಕಾಗಿ ಬೀದಿ ಬೀದಿ ಅಲೆದಳು. ಆದರೂ ನಾಟಕ ಬರೆಯುವದರಲ್ಲಿ ಅವಳ ಆಸಕ್ತಿ ಕುಂದಲಿಲ್ಲ.


  ಅವಳ ಮುಖದಲ್ಲಿ ಶೇಕ್ಷಪಿಯರನ ಕಳೆಯಿತ್ತು. ಅದೇ ಬೂದುಗಣ್ಣುಗಳು, ದುಂಡಗಿನ ಹುಬ್ಬುಗಳು. ಜೊತೆಗೆ ಪುಟಿಯುವ ತಾರುಣ್ಯವಿತ್ತು. ಕೊನೆಗೆ ನಾಟಕ ಕಂಪನಿಯ ಮ್ಯಾನೇಜರ್ ನಿಕ್ ಗ್ರೀನ್ ಅವಳಿಗೆ ನಾಟಕದಲ್ಲಿ ಅವಕಾಶ ನೀಡುತ್ತೇನೆಂದು ನಂಬಿಸಿ ಮಗುವೊದನ್ನು ಕರುಣಿಸಿ ಕೈ ಬಿಟ್ಟ. ಬರಿ ಹೆಂಗಸಿನ ದೇಹದ ಮೇಲೆ ಆಸೆಯಿದ್ದವನಿಗೆ ಅವಳ ಕವಿ ಹೃದಯ ಹೇಗೆ ಕಂಡೀತು? ಮುಂದೆ ಜೀವನದಲ್ಲಿ ಹತಾಶೆಗೊಂಡು ಚಳಿಗಾಲದ ಒಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಳು. ಅವಳ ಶವವನ್ನು ಇಂದು ಲಂಡನ್ನಲ್ಲಿರುವ ಪ್ರಸಿದ್ಧ ಮಧ್ಯದಂಗಡಿ "ಆನೆ ಮತ್ತು ಅರಮನೆ"ಯ ಕೆಳಗೆ ಹೂಳಲಾಗಿದೆ.

  ಜುಡಿತ್ ಗೆ ಎಲ್ಲ ಪ್ರೊತ್ಷಾಹ ಸಿಕ್ಕಿ ಬದುಕುಳಿದಿದ್ದರೆ ಬಹುಶಃ ಅವಳು ಶೇಕ್ಷಪಿಯರನ ಹೆಸರನ್ನೂ ಅಳಿಸಿ ಹಾಕುತ್ತಿದ್ದಳೇನೊ! [ಆಧಾರ-Verginia Woolf's Shakespeare's Sister]

  ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ

 • ಬಿಸಿಲ ಹನಿ


 • ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ!

  ಅವನು ನಿನಗೆ ಮೋಡ ತಂದು ಕೊಟ್ಟರೆ

  ನಾನು ನಿನಗೆ ಮಳೆ ಹನಿಯಾಗಿ ಸುರಿಯುವೆ

  ಅವನು ನಿನಗೆ ಉರಿವ ದೀಪ ಕೊಟ್ಟರೆ

  ನಾನು ನಿನಗೆ ಹೊಳೆವ ಚಂದಿರನನ್ನು ತರುವೆ

  ಅವನು ನಿನಗೆ ಮರದ ಹೂಗಳನ್ನು ಕಿತ್ತುಕೊಟ್ಟರೆ

  ನಾನು ನಿನಗೆ ಮರವಾಗಿ ನೆರಳನಿಡುವೆ

  ಅವನು ನಿನಗೆ ಹಡಗನ್ನು ಕೊಟ್ಟರೆ

  ನಾನದರ ನಾವಿಕನಾಗಿ ಜೊತೆಯಲ್ಲಿ ಸಾಗುವೆ.


  ಅರೇಬಿ ಮೂಲ: ನಿಜಾರ್ ಖಬ್ಬಾನಿ

  ಕನ್ನಡಕ್ಕೆ: ಉದಯ ಇಟಗಿ

  ’ಗಂಡುಹಕ್ಕಿ’, ಸ್ತ್ರೀಯರು, ಪ್ರಸ್ತುತ ಸಮಾಜ ಮತ್ತು ನಾನು.

 • ಶನಿವಾರ, ಡಿಸೆಂಬರ್ 27, 2008
 • ಬಿಸಿಲ ಹನಿ
 • ಕರ್ನಾಟಕ ಲೇಖಕಿಯರ ಸಂಘದಿಂದ ಪ್ರಕಟವಾದ "ಲೇಖಕಿಯರ ಸಣ್ಣ ಕತೆಗಳು-ಭಾಗ ೨" ರಲ್ಲಿ ಅಚ್ಚಾದ ಟಿ. ಸಿ. ಪೂರ್ಣಿಮಾರವರ "ಗಂಡುಹಕ್ಕಿಗೆ ರೆಕ್ಕೆ ಇಲ್ಲವೆ?" ಕತೆಯನ್ನು ಇತ್ತೀಚಿಗೆ ಓದಿದೆ. ಕತೆ ಅದ್ಭುತವಾಗಿದೆ. ಬಹಳಷ್ಟು ಲೇಖಕಿಯರು ಹೆಣ್ಣಿನ ಶೋಷಣೆ, ಅವಳ ಸ್ವಾತಂತ್ರ್ಯ ಹರಣ, ಅವಳ ಮೇಲಿನ ದಬ್ಬಾಳಿಕೆ ಬರಿ ಇಂಥದೇ ವಿಷಯಗಳ ಬಗ್ಗೆ ಬರೆಯುತ್ತಿರುವಾಗ ಪೂರ್ಣಿಮಾರವರು ಮಾತ್ರ ಬದಲಾಗುತ್ತಿರುವ ಸಮಾಜದಲ್ಲಿ ಬದಲಾಗುತ್ತಿರುವ ಮಹಿಳೆಯರ ಮನೋಭಾವ, ಅವರ ತಣ್ಣನೆಯ ಕ್ರೌರ್ಯ ಮತ್ತು ಆ ಮೂಲಕ ಮದುವೆಯೆಂಬ ಬಂಧನದಲ್ಲಿ ಗಂಡಸು ಹೇಗೆ ಶೋಷಣೆ, ಹತಾಶೆ, ನಿರಾಶೆ ಮತ್ತು ಅಸಹಾಯಕತೆಗೆ ಒಳಗಾಗುತ್ತಿದ್ದಾನೆ ಎಂಬುದನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಈ ಕಾರಣಕ್ಕೆ ಕತೆ ಓದುಗರ ಗಮನವನ್ನು ಸೆಳೆಯುತ್ತದೆ.

  ಕಾಲ ಬದಲಾದಂತೆ ಹೆಣ್ಣಿನ ಸ್ಥಾನ ಮಾನ ಬದಲಾದದ್ದು ನಿಜ. ಆದರೆ ಎಷ್ಟು ಬದಲಾಗಿವೆಯೆಂದರೆ ಇವತ್ತಿನ ಹೆಂಗಸರು ಬರಿ ಹಕ್ಕು, ಸ್ವಾತಂತ್ರ್ಯ, ಅಧಿಕಾರದ ಬಗ್ಗೆ ಮಾತನಾಡುತ್ತಾ (ಎಲ್ಲ ಹೆಂಗಸರು ಅಂತ ನಾನು ಹೇಳುತ್ತಿಲ್ಲ. ಆದರೆ ಹಾಗೆ ಮಾತನಾಡುವವರ ಸಂಖ್ಯೆ ಜಾಸ್ತಿಯಿದೆ.) ತಮ್ಮ ಮೂಲ ಕರ್ತವ್ಯ, ಜವಾಬ್ದಾರಿ, ಮಾನವೀಯ ಮೌಲ್ಯಗಳನ್ನು ಮರೆತು ತಾವಾಯಿತು ತಮ್ಮ ಗಂಡ, ಮಕ್ಕಳಾಯಿತು ಎಂದು ಸ್ವಾರ್ಥಿಗಳಾಗುತ್ತಿದ್ದಾರೆ. ಗಂಡ ಮಕ್ಕಳ ವಿಷಯದಲ್ಲೂ ಕೂಡ ಸರಿಯಾಗಿ ಒದಗಿಸಬೇಕಾದ ನ್ಯಾಯ ಒದಗಿಸುತ್ತಿಲ್ಲ. ಆ ಮಾತು ಬೇರೆ.

  ಕತೆಯ ಕೊನೆಯಲ್ಲಿ ಕಥಾನಾಯಕನಾಡುವ ಮಾತುಗಳು ಬದಲಾದ ಸಮಾಜದಲ್ಲಿ ಬದಲಾದ ಸ್ತ್ರೀಯರ ಆಲೋಚನೆಗಳ ಮೇಲೆ ಬೆಳಕು ಚೆಲ್ಲುವದರ ಮೂಲಕ ಓದುಗರನ್ನು ದಿಗ್ಭ್ರಮೆಗೊಳಿಸುತ್ತವೆ. ಯಾಕೋ ಈ ಸ್ತ್ರೀ ಸ್ವಾತಂತ್ರ್ಯ , ಆರ್ಥಿಕ ಸಮಾನತೆ, ಮತ್ತು ಸ್ತ್ರೀ ವಾದಗಳು ಅವಶ್ಯಕತೆಗಿಂತ ಮಿತಿಮೀರಿ ಬೆಳೆದು ಸಮಾಜದ ಸ್ವಾಸ್ಥ್ಯವನ್ನು ಹದೆಗೆಡಿಸುತ್ತಿವೆ ಎಂದೆನಿಸುತ್ತದೆ. ಕತೆಯಲ್ಲಿನ "ಇದೇನೂ ನನ್ನ ನಿರ್ಧಾರವಲ್ಲ, ಒಂದು ಸಲಹೆಯನ್ನು ಹೇಳೋದು. ಸರಿ ಕಂಡ್ರೆ ಒಪ್ಕೊಳ್ಳಿ ಇಲ್ದೇ ಹೋದ್ರೆ ಬಿಟ್ಬಿಡಿ." ಎಂದು ಸೂಕ್ಷ್ಮವಾಗಿ ಹೇಳಿ ಜಾರಿಕೊಳ್ಳುವ ಸವಿತೆಯರು, ಗಂಡನ ಬಲಹೀನತೆಯನ್ನೇ ಬಂಡವಾಳವಾಗಿಸಿ ಅವನನ್ನು ಶೋಷಿಸುವ ಶ್ವೇತೆಯರು, "ನನ್ನ ಕೈಲಾಗೊಲ್ಲ ಇನ್ನಿಬ್ರು ಸೊಸೆಂದ್ರು ಇದಾರಲ್ಲ. ಕೇಳಿ ನೋಡಿ" ಎಂದು ಹೇಳಿ ಮೆತ್ತಗೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜಾಣ ಚಂಪಕೆಯರು ಮನೆ ಮನೆಗೂ ಸಿಗುತ್ತಾರೆ.

  ನಾನು ಈ ಮೊದಲು ಸ್ತ್ರೀಪರ ಖಾಳಜಿಗಳನ್ನು ಹೊಂದಿದ್ದೆ. ಆದರೆ ದಿನ ಕಳೆದಂತೆ ವಿವಾಹಿತ ಪುರುಷರ ಆತ್ಮಹತ್ಯೆ ಮತ್ತು ಅವರ ಮೇಲಿನ ದಬ್ಬಾಳಿಕೆ ಹೆಚ್ಚುತ್ತಿರುವದನ್ನು ಕಂಡು ಈ ಮದುವೆಯೆಂಬ ವ್ಯವಸ್ಥೆಯಲ್ಲಿ ಹೆಚ್ಚಾಗಿ ನಲುಗುತ್ತಿರುವದು ಹೆಣ್ಣಲ್ಲ ಗಂಡೆಂದು ಗೊತ್ತಾಯಿತು. ಅದಕ್ಕೆ ಪೂರಕ ಎನ್ನುವಂತೆ ಪೂರ್ಣಿಮಾರವರ ಕತೆ ವಿವಾಹಿತ ಗಂಡಸಿನ ತೊಳಲಾಟ, ನಲುಗಾಟ ಮತ್ತು ಅವನ ಅಸಹಾಯಕತೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಇವತ್ತು ಗಂಡನಿಗೆ ಪ್ರೀತಿಯಿಂದ ಕುಡಿಯಲಿಕ್ಕೆ ನೀರು ಕೊಡುವದು ಕೂಡ ತಮ್ಮ ಅಹಂಗೆ, ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವಿಷಯವೆಂದು ಭಾವಿಸುತ್ತಿದ್ದಾರೆ. ಇನ್ನು ಅತ್ತೆ ಮಾವಂದಿರ ವಿಷಯವಂತು ದೂರವೇ ಉಳಿಯಿತು.

  ಮದುವೆಯಾಗುವ ವಿದ್ಯಾವಂತ/ಉದ್ಯೋಗಸ್ಥ ಹೆಣ್ಣುಮಕ್ಕಳು ಪ್ರೀತಿ, ಅಂತಃಕರಣದ ಬಗ್ಗೆ ಮಾತನಾಡದೆ ಬರಿ ಹಕ್ಕು, ಅಧಿಕಾರ, ಸಮಾನತೆ, ಖಾಸಗಿತನದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನಮ್ಮ ದೌರ್ಭಾಗ್ಯ ಮತ್ತು ಇವತ್ತಿನ ಸಾಮಾಜಿಕ ಬದುಕಿನ ವ್ಯಂಗ ಕೂಡ! ಏನಾಗಿದೆ ಈ ಹೆಂಗಸರಿಗೆ? ನಾಲ್ಕು ಜನಕ್ಕೆ ಬುದ್ಧಿ ಹೇಳುವ ವಿದ್ಯಾವಂತೆಯರು ಸ್ವಾತಂತ್ರ್ಯದ ಹೆಸರಿನಲ್ಲಿ ಬದುಕಿನ ನಿಜವಾದ ಗಮ್ಯತೆಯನ್ನು ಕಳೆದುಕೊಳ್ಳುತ್ತಿರುವದು ವಿಪರ್ಯಾಸ! ಈ ಆಧುನಿಕ ಸೀತೆಯರು ಒಳಗೂ ನೆನೆಯುವದಿಲ್ಲ, ಹೊರಗೂ ನೆನೆಯುವದಿಲ್ಲ. ಇನ್ನು ಇವರಿಗೆ ವಿದ್ಯೆ ಯಾಕೆ ಬೇಕು? ವಿಕಸನ ಯಾಕೆ ಬೇಕು? ಅಥವಾ ಅವರರ್ಥದಲ್ಲಿ ವಿದ್ಯೆಯೆಂದರೆ ಇದೇನಾ? ವಿಕಸನವೆಂದರೆ ಇದೇನಾ? ಇದಕ್ಕೆ ಪರಿಹಾರವಿಲ್ಲವೆ?

  ಇವತ್ತು ನಾನು ತಿಳಿದಿರುವಂತೆ ಬಹಳಷ್ಟು ಗಂಡಸರು flexible ಆಗಿದ್ದಾರೆ. ಹೊಂದಾಣಿಕೆ ಸ್ವಭಾವದವರಾಗಿದ್ದಾರೆ. ಉದ್ಯೋಗಸ್ಥ ಮಹಿಳೆಯರ ಅವಶ್ಯಕತೆಗೆ ತಕ್ಕಂತೆ ಮನೆಯ ಹಿರಿಯರೂ ಬದಲಾಗಿದ್ದಾರೆ. ಆದರೂ ಈ ಹೆಂಗಸರದು ನಖರಾ ಜಾಸ್ತಿಯಾಗುತ್ತಿದೆ. ಅತ್ತೆ, ಮಾವ, ಮೈದುನರು ಒಳ್ಳೆಯವರಾಗಿದ್ದರೂ ಏನೊ ಒಂದು ನೆಪ ಹೇಳಿ ಜಾರಿಕೊಳ್ಳುತ್ತಾ, ರೊಳ್ಳೆ ತೆಗೆಯುತ್ತಾ ಗಂಡನನ್ನು ಕುಕ್ಕಿ ತಿನ್ನುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇವರಿಗೆ ಗಂಡನ ಮನೆ ಕಡೆಯವರು ಯಾರೂ ಬೇಡ. ಹಾಗಂತ ಗಂಡಸರೇನಾದರೂ ಅವರ ಮನೆ ಕಡೆಯವರ ಬಗ್ಗೆ ಅಸಡ್ಡೆ ತೋರಿಸಿದರೆ ಉರಿದು ಬೀಳುವ ಜಾಯಮಾನದವರು. ಮೊನ್ನೆ ಪತ್ರಿಕೆ ಯೊಂದರಲ್ಲಿ ಪ್ರಕಟವಾದ ಸುದ್ದಿಯಂತೆ ಈ ವರ್ಷ ಕೇವಲ ಭಾರತದಲ್ಲಿ ವಿವಾಹಿತ ಗಂಡಸರ ಆತ್ಮಹತ್ಯೆ ಸಂಖ್ಯೆ ೫೫,೦೦೦ ದಾಟಿದೆ. ಎಂದ ಮೇಲೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಬಹುದಲ್ಲವೆ? ಇದನ್ನೆಲ್ಲ ಸರಿಪಡಿಸೋಕೆ ಆಗೊಲ್ವೆ? ಇದಕ್ಕೆಲ್ಲ ಪರಿಹಾರವಿಲ್ವೆ? ಸುಮ್ಮನೆ ಯೋಚಿಸುತ್ತಾ ಕುಳಿತಿರುವೆ.........

  (ಈ ಲೇಖನ ಖಂಡಿತ ಗಂಡಸರ ಪರವಾಗಿ ಅಥವಾ ಸ್ತ್ರೀಯರ ವಿರೋಧವಾಗಿ ಬರೆದಿದ್ದಲ್ಲ. ಪ್ರಸ್ತುತ ಸಮಾಜದಲ್ಲಿ ಹೆಚ್ಚುತ್ತಿರುವ ಪುರುಷರ ಮೇಲಿನ ದಬ್ಬಾಳಿಕೆಯ ಸಂಖ್ಯಾಧಾರಗಳು ಮತ್ತು ಅದಕ್ಕೆ ಪರೋಕ್ಷವಾಗಿ ಪೂರಕವಾಗಿರುವಂತೆ "ಗಂಡು ಹಕ್ಕಿಗೆ ರೆಕ್ಕೆ ಇಲ್ಲವೆ?" ಕತೆಗೆ ಪ್ರತಿಕಿಯಿಸುತ್ತಾ ಬರೆದಿದ್ದು.)


  ಮಂಜುವಿಗೆ

 • ಶುಕ್ರವಾರ, ಡಿಸೆಂಬರ್ 26, 2008
 • ಬಿಸಿಲ ಹನಿ
 • ಜೀವದ ಗೆಳೆಯ ಮಂಜು ಮತ್ತು ನಾನು ಬೆಂಗಳೂರಿನ ಎಲಿಚೇನಹಳ್ಳಿ ರೂಮೊಂದರಲ್ಲಿ ಸುಮಾರು ಒಂದು ವರ್ಷ ಒಟ್ಟಿಗೆ ಇದ್ದೆವು. ಆದರೆ ಡಿಸೆಂಬರ್ ೧೯೯೯ ರಲ್ಲಿ ಅವರ ತಂದೆಗೆ ಮಂಡ್ಯದಿಂದ ಬೆಂಗಳೂರಿಗೆ ಟ್ರಾನ್ಷಫರ್ ಆಗಿದ್ದರಿಂದ ಅವನು ಅನಿವಾರ್ಯ ಕಾರಣಗಳಿಂದ ನನ್ನ ರೂಮನ್ನು ಬಿಟ್ಟು ತಮ್ಮ ಮನೆಗೆ ಹೋಗಬೇಕಾಯಿತು. ಹಾಗೆ ಹೊರಟ ಸಂದರ್ಭದಲ್ಲಿ ಬರೆದ ಕವನವಿದು. ಇದನ್ನು ೨.೧೨.೧೯೯೯ರಂದು ಬರೆದಿದ್ದು.
  ಗೆಳೆಯಾ,
  ಬದುಕಿನ ಬುತ್ತಿಯಿಂದ
  ಹಿಡಿ ಹಿಡಿ ನೆನಪುಗಳನ್ನು
  ಹೆಕ್ಕಿ ಹೆಕ್ಕಿ ತೆಗೆದವರು ನಾವು
  ಕಟ್ಟಿಟ್ಟ ಕನಸುಗಳನ್ನು ಬಿಚ್ಚಿಟ್ಟು
  ರಮ್ಯವಾಗಿ ಹಂಚಿಕೊಂಡವರು ನಾವು
  ಬಸಿದು ಹೋದ ಬದುಕಿನ
  ಗಸಿ ಗಸಿಯನ್ನು ಬಿಡದೆ
  ಮೊಗೆಮೊಗೆದು ಕುಡಿದವರು ನಾವು
  ಎದೆಯ ನೋವುಗಳಿಗೆ ಕದವ ಹಾಕದೆ
  ತೆರೆದು ತೋರಿದವರು ನಾವು
  ಸಂಜೆ ಮಲ್ಲಿಗೆಯ ಸವಿಗಂಪನ್ನು
  ಸವಿಯುತ್ತಾ ಅದೆಷ್ಟೋ ಸುಂದರ
  ಸಂಜೆಗಳನ್ನು ಕಳೆದವರು ನಾವು
  ನಾಳೆಗಳ ಕುರಿತು ಗಂಟೆಗಟ್ಟಲೆ
  ಹರಟುತ್ತಾ ಅದ್ಭುತ ರಾತ್ರಿಗಳನ್ನು
  ಕಳೆದವರು ನಾವು
  ಎದೆಗೆ ಎದೆ ಕೊಟ್ಟು
  ಹೆಗಲಿಗೆ ಹೆಗಲು ಕೊಟ್ಟು
  ಈ ಬಾಳ ಪಯಣದಲಿ
  ಜೊತೆ ಜೊತೆಯಾಗಿ ನಿಂತವರು ನಾವು
  ಬಿಂಬ-ಪ್ರತಿಬಿಂಬಗಳಾದವರು ನಾವು
  ಹೇಗೆ ಬೀಳ್ಕೊಡಲಿ ನಿನ್ನ?
  ನೀ ಹೊರಟು ನಿಂತಿರುವೆ
  ನಿನ್ನದೇ ಗೂಡಿಗೆ.

  ಗೆಳೆಯಾ,
  ನನಗೆ ಗೊತ್ತು ಇಲ್ಲಿ
  ಅಗಲಿಕೆ ಅನಿವಾರ್ಯವೆಂದು
  ಆದರೂ ಏಕೋ ಎದೆ ಭಾರವಾಗುತ್ತಿದೆ
  ಕಣ್ಣುಗಳು ತೇವಗೊಳ್ಳುತ್ತಿವೆ
  ಹೇಗೆ ಸ್ಪಂದಿಸಲಿ ನಿನ್ನ ನಿರ್ಗಮನಕೆ?
  Anyway, ಕೊಡುತ್ತಿದ್ದೇನೆ ನಿನಗೆ
  ಹಿಡಿ ಹಿಡಿ ನೆನಪುಗಳನ್ನು
  ಹಸಿ ಹಸಿ ಪ್ರೀತಿಯನ್ನು
  ಎದೆಯ ಭಾವನೆಗಳನ್ನು ಹೊರಗೆಡವಿಟ್ಟ ಈ ಕವನವನ್ನು!
  ಶುಭವಾಗಲಿ ನಿನಗೆ.
  ್ರೀತಿಯಿಂದ
  ಉದಯ ಇಟಗಿ

  ಅಪ್ಪ

 • ಬುಧವಾರ, ಡಿಸೆಂಬರ್ 24, 2008
 • ಬಿಸಿಲ ಹನಿ
 • ಅಪ್ಪ ಎಂದರೆ ಆಸರೆ. ಅಪ್ಪ ಎಂದರೆ ನೆರಳು. ಅಪ್ಪ ಎಂದರೆ ಸ್ಪೂರ್ತಿ. ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ. ಅಪ್ಪ ಎಂದರೆ ಒಂದು ಸಣ್ಣ ಗದರಿಕೆಯೊಂದಿಗೆ ಮಕ್ಕಳನ್ನು ಪ್ರೀತಿಯ ಮಳೆಯಲ್ಲಿ ತೋಯಿಸುವವ. ಅಪ್ಪ ಎಂದರೆ ಇನ್ನೂ ಏನೇನೋ.................! ಆದರೆ ನನ್ನ ಅಪ್ಪ ಇದ್ಯಾವುದನ್ನು ನನಗೆ ಕೊಡಲಿಲ್ಲ. ದುಡಿಯದ, ಬೇಜವಬ್ದಾರಿ ನನ್ನ ಅಪ್ಪ ಹಚ್ಚನೆಯ ಬದುಕನ್ನು ಕಟ್ಟಿ ಕೊಡುವ ಅಥವಾ ಬೆಚ್ಚನೆಯ ಪ್ರೀತಿಯನ್ನು ಹೊದಿಸುವ ಕಿಂಚಿತ್ತೂ ಪ್ರಯತ್ನವನ್ನು ಮಾಡಲಿಲ್ಲ. ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರ ಜಗತ್ತಿನಾದ್ಯಾಂತ ಎಲ್ಲ ಮಕ್ಕಳಿಗೆ ಅಪ್ಪ ಪ್ರೀತಿಯ ನೆನಪಾಗಿ ಉಕ್ಕಿದರೆ ನನಗೆ ಬಿಕ್ಕಾಗಿ ಕಾಡುತ್ತಾನೆ. ಆದರೂ ಅವನನ್ನು ಅಪ್ಪ ಅಲ್ಲ ಎಂದು ಹೇಳಲಾದೀತೆ? ಅಥವಾ ಅಪ್ಪ ಇದ್ಯಾವುದನ್ನೂ ನನಗೆ ಕೊಡದೇ ಇದ್ದ ಕಾರಣಕ್ಕೆ ನಾನು ಇಷ್ಟೊಂದು ಗಟ್ಟಿಯಾಗಿ ಬೆಳೆದೆನೇ? ನನಗೆ ಗೊತ್ತಿಲ್ಲ!

  ಅಜ್ಜ ನೆಗೆದು ಬೀಳುವ ಮೊದಲೇ
  ಅವ್ವನ್ನು ಮದುವೆಯಾಗಿ
  ಇದ್ದ ಹೊಲ ಗದ್ದೆಗಳಲ್ಲಿ
  ಮೈ ಕೈ ಕೆಸರು ಮಾಡಿಕೊಳ್ಳದೇ
  ಅವ್ವ ಮಾಡಿಕೊಟ್ಟ ಬಿಸಿ ಬಿಸಿ ರೊಟ್ಟಿಯನ್ನು
  ಗಡದ್ದಾಗಿ ತಿಂದು ತೇಗಿ
  ಎಲ್ಲ ಭಾರವನ್ನು ಅವಳ ತಲೆ ಮೇಲೆ ಹಾಕಿ
  ತಾನು ಮಾತ್ರ ಇಸ್ಪೀಟಾಡುತ್ತ
  ಹೆಸರಿಗೆ ಮಾತ್ರ ಮನೆ ಯಜಮಾನನಾದ.

  ದುಡಿಯಲು ಗೊತ್ತಿರದ ಷಂಡ
  ಮೂರು ಮಕ್ಕಳನ್ನು ಹೆತ್ತು ಗಂಡಸೆನಿಸಿಕೊಂಡ.
  ಹುಟ್ಟಿಸಿದ ಮಕ್ಕಳನ್ನೂ ಸಾಕಲಾಗದೆ
  ಅವರಿವರ (ಬಂಧುಗಳ) ಮನೆಯಲ್ಲಿ ಬಿಟ್ಟು
  ತಾನು ಮಾತ್ರ ತನ್ನದೇ ಗೂಡಿನಲ್ಲಿ
  ಹಚ್ಚಗೆ ತಿಂದು ಬೆಚ್ಚಗೆ ಮಲಗಿ
  ಅವ್ವನ ಪ್ರೀತಿಯನ್ನೂ ನಮ್ಮಿಂದ ಕಸಿದುಕೊಂಡು
  ಅವಳನ್ನೂ ತನ್ನ ಜೊತೆಯಲ್ಲಿ ನಮ್ಮ ತಿರಸ್ಕಾರಕ್ಕೆ ಗುರಿಮಾಡಿದ.

  ಅಪ್ಪ ಏನೂ ಕಿಸಿಯದಿದ್ದರೂ
  ಅವ್ವನ ಮೇಲೆ ಸದಾ ಇವನ ರುದ್ರನರ್ತನ
  ಅವ್ವ ಇವನ ಆರ್ಭಟಕ್ಕೆ ಹೆದರಿ ಹಿಕ್ಕೆ ಹಾಕುತ್ತಾ
  ಒಳಗೊಳಗೆ ಎಲ್ಲವನ್ನು ನುಂಗುತ್ತಾ ಬೇಯುತ್ತಾ
  ಹೊಲದಲ್ಲೂ ದುಡಿದು ಮನೆಯಲ್ಲೂ ಮಾಡಿ
  ಸದಾ ಇವನ ಸೇವೆಗೆ ನಿಂತಳು.

  ಹೊತ್ಹೊತ್ತಿಗೆ ಚಾ ಕುಡಿದು
  ಬುಸ್ ಬುಸ್ ಎಂದು ಚುಟ್ಟ ಸೇದಿ
  ಗೊರ ಗೊರ ಕೆಮ್ಮಿ
  ಮೈಯೆಲ್ಲ ಗೂರಿ ಬಂದವರ ತರ
  ಪರಾ ಪರಾ ಕೆರೆದು
  ಆಗೊಮ್ಮೆ ಈಗೊಮ್ಮೆ ಜಡ್ಡಿಗೆ ಬಿದ್ದು
  ಸತ್ಹಾಂಗ ಮಾಡಿ
  ಒಮ್ಮಿಂದೊಮ್ಮೆಲೆ ಮೆಲೆದ್ದು
  ಗುಟುರು ಹಾಕುವ ಮುದಿ ಗೂಳಿ ಇವನು.

  ಅವರಿವರ ಹಂಗಿನ ಮಾತುಗಳನ್ನು ಕೇಳುತ್ತಾ
  ಮಕ್ಕಳೆಲ್ಲ ಕಷ್ಟಬಿದ್ದು ಓದಿ
  ಕೈಗೆ ಬಂದ ಮೇಲೆ
  ಅರವತ್ತರ ಅರಳು ಮರಳೆಂಬಂತೆ
  ಅಥವಾ ಕೆಟ್ಟ ಮೇಲೆ ಬುದ್ಧಿ ಬಂತೆಂಬಂತೆ
  ಹೊಲಕ್ಕೆ ದುಡಿಯಲು ಹೋಗಿ "ಹೀರೋ" ಆಗಲೆತ್ನಿಸಿದ್ದೂ ಇದೆ.
  ಅಲ್ಲಿ ದುಡಿದಿದ್ದೆಷ್ಟೋ
  ಆ ಖರ್ಚು ಈ ಖರ್ಚೆಂದು
  ಹಕ್ಕಿನಿಂದ ಮಕ್ಕಳ ಹತ್ತಿರ ಕಾಸು ಪೀಕುತ್ತ
  ಅsssಬ್ಬ ಎಂದು ಡೇಗು ಹೊಡೆದು
  ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುವದು
  ಮುಂದುವರಿದೇ ಇದೆ!

  ಇದೀಗ ಯಾರಾದರು "ಎಲ್ಲಿ ನಿನ್ನ ಮಕ್ಕಳು?"
  ಎಂದು ಕೇಳಿದರೆ ಮೈ ಕುಣಿಸಿ ಎದೆಯುಬ್ಬಿಸಿ
  "ಇವರೇ" ಎಂದು ನಮ್ಮೆಡೆಗೆ ತೋರಿಸುತ್ತಾನೆ.
  ನಾವೂ ಅಷ್ಟೇ "ಯಾರು ನೀವು?’ ಎಂದು
  ಯಾರಾದರು ಕೇಳಿದರೆ
  "ಮಲ್ಲೇಶಪ್ಪನ ಮಕ್ಕಳು" ಎಂದು ಹೇಳುತ್ತೇವೆ.

  -ಉದಯ ಇಟಗಿ


  ಅವ್ವ

 • ಬಿಸಿಲ ಹನಿ


 • ಎರಿ ಮಣ್ಣಿನ ಕರಿ ಬಣ್ಣದ್ಹಾಂಗ
  ಇರೋ ನನ್ನವ್ವ
  ಅಂಥಾ ಗಂಡನ್ನ ಕಟಗೊಂಡು
  ಪಡಬಾರದ್ದ ಪಟ್ಟು
  ಏಗಬಾರದ್ದ ಏಗಿ
  ಊರಾಗ ನಾಲ್ಕು ಮಂದಿ
  ಹೌದು ಹೌದು ಅನ್ನೋಹಂಗ
  ಬಾಳೆ ಮಾಡದಾಕಿ.

  ಅಂಥಾ ಎಡಾ ಹೊಲದಾಗ
  ದುಮು ದುಮು ಬಿಸಿಲಾಗ
  ಬೆವರು ಹರಿಸಿ ಬಂಗಾರ ಬೆಳಿತೇನಿ
  ಅಂತ ಹೋದಾಕಿ.
  ಬಂಗಾರ ಇಲ್ದ ಬೆಳ್ಳಿ ಇಲ್ದ
  ಬರೆ ಎರಡು ಸೀರ್ಯಾಗ
  ಜೀವನಾ ಕಂಡಾಕಿ.

  ಹೊಲ್ದಾನ ಹ್ವಾರೆನೂ ಮಾಡಿ
  ಮನ್ಯಾಂದೂ ನೋಡಿ
  ಯಾವಾಗ್ಲೂ ಮಾರಿ ದುಮು ದುಮು ಉರಿಸ್ಕೋಂತ
  ಮನ್ಯಾಗ ಕೂತ್ಗೊಂಡು ತಿನ್ನೋ ಗಂಡನ್ನೂ ಸಂಭಾಳಿಸಿ
  ಹಾಡ ಹಾಡತಾ ಹಾಡಾದಾಕಿ.

  ಇಂಥಾ ಗಂಡನ್ನ ಕಟಗೊಂಡ ಮ್ಯಾಲೆ
  ಮಕ್ಕಳ್ನ ಹಂತ್ಯಾಕ ಇಟಗೊಂಡು
  ಜ್ವಾಪಾನ ಮಾಡಲಾರದ
  ದೈನೇಸಿಪಟಗೊಂಡು
  ಬ್ಯಾರೆದವರ ಹತ್ರ ಇಟ್ಟು
  ವಿಲ ವಿಲ ಅಂತ ಒದ್ದಾಡದಕಿ.

  ಮಕ್ಕಳು ಕೈಗೆ ಬಂದ ಮ್ಯಾಲೆ
  ಅವರಂತ್ಯಾಕಿದ್ದು ಜೀವನದ ಸುಖ ಕಾಣತೇನಿ
  ಅಂತ ಆಸೆ ಪಟ್ಟಾಕಿ.
  ಕಟಗೊಂಡ ಗಂಡ
  ತನ್ನ ಜೊತಿ ಮಕ್ಕಳ ಹತ್ರ ಇರಲಾರದಕ
  ಬಿಡಲಾರದ್ದ ಕರ್ಮ ಅನ್ಕೊಂಡು
  ಹೊಳ್ಳಿ ಊರಿಗೆ ಹೋದಾಕಿ.

  ಬರೆ ಬಿಸಿಲಾಗ ದುಡ್ಕೊಂತ
  ಬಿಸಿಲುಂಡು ಬೆಳದಿಂಗಳ
  ನಗಿ ನಕ್ಕು ಬೆಳಕು ಹರಿಸಿದಾಕಿ.
  ಮಣ್ಣಾಗ ಹುಟ್ಟಿ
  ಮಣ್ಣಾಗ ಬೆಳೆದು
  ಮಣ್ಣಾಗಿ ಹೋದಾಕಿ.
  -ಉದಯ ಇಟಗಿ

  ಅಂತರಂಗದ ಪಿಸುಮಾತುಗಳು

 • ಭಾನುವಾರ, ಡಿಸೆಂಬರ್ 21, 2008
 • ಬಿಸಿಲ ಹನಿ • [ಈಗ್ಗೆ ಎಂಟು ವರ್ಷಗಳ ಹಿಂದೆ ಜೀವದ ಗೆಳೆಯ ಮಂಜುವಿನ ೨೭ ನೇ ಹುಟ್ಟು ಹಬ್ಬಕ್ಕೆ ಉಡುಗೂರೆಯಾಗಿ ನೀಡಿದ ಕವನವಿದು.ಅದನ್ನೇ ಇಲ್ಲಿ ಪುನರ್ ರೂಪಿಸಲಾಗಿದೆ.]
  ಪ್ರೀತಿಯ ಮಂಜು,
  ಡಿಸೆಂಬರ್ ೨೪ ಕ್ಕೆ ನಿನಗೆ ೨೭ ವಸಂತಗಳು ತುಂಬುತ್ತವೆ.ನಿನ್ನ ಹುಟ್ಟು ಹಬ್ಬದಂದು ಶುಭಹಾರೈಕೆಗಳೊಡನೆ ನಾ ನಿನಗೆ ಹೇಳಲೇಬೇಕಾದ ಮಾತುಗಳಿವೆ.ಅವು ಬರಿ ಮಾತುಗಳಲ್ಲ ಅಂತರಂಗದ ಪಿಸುಮಾತುಗಳು.ಕೇಳಿಸಿಕೊ ನಿನ್ನ ಎದೆ ಕದವ ತೆರೆದು.


  ನಿನ್ನೆ ಬದುಕು ಬೆರಳ ಸಂದಿಯಿಂದ
  ಹನಿಹನಿಯಾಗಿ ಸೋರಿಹೋಗುತ್ತಿತ್ತು
  ಹವಣಿಕೆಯಿತ್ತು ನಿನ್ನಲ್ಲಿ ಬದುಕನ್ನು
  ಬೊಗಸೆಯಲ್ಲಿ ಹಿಡಿದಿಡುವ ಹವಣಿಕೆ
  ಬಿಕ್ಕುಗಳಿದ್ದವು ಸಾಂತ್ವನವಿಲ್ಲದ ಬಿಕ್ಕುಗಳು
  ಕನಸುಗಳಿದ್ದವು ಖಾಲಿ ಖಾಲಿ ಕನಸುಗಳು
  ಅಸೆಗಳಿದ್ದವು ಅರಳದ ಆಸೆಗಳು
  ಬಯಕೆಗಳಿದ್ದವು ಬಂಜರದ ಬಯಕೆಗಳು
  ಆದರೂ ಏರಿ ಬಂದೆ ನೀ
  ಬದುಕು ಎಸೆದ ಹರಿದ ಹಗ್ಗವನ್ನು ಹಿಡಿದು
  ಕೈ ಬೀಸಿ ಕರೆದಿತ್ತು ಬದುಕು
  ಹರಿದು ಹೋದೆ ನೀ
  ಝರಿಯಾಗಿ ತೊರೆಯಾಗಿ
  ಬದುಕು ಗೆಲ್ಲುವ ಛಲಗಾರನಾಗಿ
  ಇದೀಗ ಬದುಕ ತುಂಬಾ ಶ್ರಾವಣದ ಮಳೆ
  ಕತ್ತಲು ಕರಗಿ ಫಳ್ ಫಳ್ ಎಂದು
  ಹೊಳೆಯುವ ಬೆಳ್ಮಿಂಚು
  ಆಗಸದ ತುಂಬಾ ನೂರು ಹಕ್ಕಿಗಳ ಸಡಗರದ ಸದ್ದು
  ಬೆಳ್ಳಿಚುಕ್ಕಿ ಬೆಳಗು ಬಾಗಿಲ ಸರಿಸಿ
  ನಗುವ ಹೊತ್ತು
  ಬಿಚ್ಚಿಕೊಂಡು ನಿಂತಿದೆ ನಿನ್ನೆದುರಿಗೆ
  ಚಿತ್ತಾರದ ಬದುಕು
  ಮೊಗೆದುಕೋ ಅಲ್ಲಿ ನಿನ್ನದೇ ಜೀವಜಲವನ್ನು
  ನನಸಾಗಿಸು ಸವಿಯದೇ ಬಿಟ್ಟ ಸವಿಗನಸುಗಳನ್ನು
  ಪ್ರೀತಿಸದೆ ಬಿಟ್ಟ ಆಸೆ ಆಕಾಂಕ್ಷೆಗಳನ್ನು
  ಅರೆಬರೆ ಗೆಲವುಗಳನ್ನು
  ನಾಳೆ ಬದುಕು ನೆನಪುಗಳ
  ಕನಸುಗಳ ಬುದ್ಭದಗಳ
  ಪುಳಕಗಳ ಹೂಬನವನ್ನು ಹೊತ್ತು ಬರಲಿ
  ಮತ್ತೆ ಬದುಕು ನಿತ್ಯ ಸಂತಸವಾಗಲಿ
  ನಿತ್ಯ ವಸಂತವಾಗಲಿ.
  ಮಂಜು,
  ಹುಟ್ಟು ಹಬ್ಬದ ಉಡುಗೂರೆಯಾಗಿ
  ಕೊಡುತ್ತಿದ್ದೇನೆ ನಿನಗೆ
  ನನ್ನ-ನಿನ್ನ ಸಾಂಗತ್ಯದ ನೆನಪುಗಳನ್ನು
  ಒಂದು ಸ್ನೇಹದ ಸಿಹಿ ಸುಖವನ್ನು
  ಕೊಟ್ಟಷ್ಟು ಕೊನರಿ ಅಕ್ಷಯವಾಗುವ ಪ್ರೀತಿಯನ್ನು
  ಕವನವಾಗಿಸಿದ ನನ್ನ ಅಂತರಂಗದ ಪಿಸುಮಾತುಗಳನ್ನು.

  ನಿನ್ನ ಪ್ರೀತಿಯ
  ಉದಯ ಇಟಗಿ
  ೨೪.೧೨.೨೦೦೦