Demo image Demo image Demo image Demo image Demo image Demo image Demo image Demo image

ಇತ್ತೀಚೆಗಿನ ಒಂದು ದಿನ

  • ಭಾನುವಾರ, ಜೂನ್ 29, 2014
  • ಬಿಸಿಲ ಹನಿ

  • ಅರಿಲಿಯೋ ಎಸ್ಕೋವರ್ ಸೋಮವಾರ ಬೆಳಿಗ್ಗೆ ಎದ್ದಾಗ ವಾತಾವರಣ ಸ್ವಲ್ಪ ಬಿಸಿಯಾಗಿತ್ತು. ಮಳೆ ಇರಲಿಲ್ಲ. ದಿನಾಲು ಬೆಳಿಗ್ಗೆ ಬೇಗ ಏಳುವ, ಡೆಂಟಲ್ ಕೋರ್ಸನ್ನು ಮಾಡದಯೇ ಡೆಂಟಿಸ್ಟ್ ಆದ ಈತ ಆರು ಗಂಟೆಯಷ್ಟೊತ್ತಿಗೆ ತನ್ನ ಕ್ಲಿನಿಕ್ಕಿನ ಬಾಗಿಲು ತೆರೆದಿದ್ದ. ಆತ ಗ್ಲಾಸ್ ಕೇಸಿನಿಂದ  ಇನ್ನೂ ಪ್ಲಾಸ್ಟರ್ ಮೌಲ್ಡ್ಗಳಲ್ಲಿರಿಸಿದ್ದ ಕೆಲವು ಕೃತಕ ಹಲ್ಲುಗಳನ್ನು ಹೊರತೆಗೆದು ಪ್ರದರ್ಶನಕ್ಕೆನ್ನುವ ರೀತಿಯಲ್ಲಿ ಅಳತೆಗನುಸಾರವಾಗಿ ಟೆಬಲ್ ಮೇಲೆ ಜೋಡಿಸಿಟ್ಟಿದ್ದ ಉಪಕರಣಗಳ ಜೊತೆಯಲ್ಲಿಯೇ ಅವನ್ನೂ ಇಟ್ಟನು. ಅವನು ಕಾಲರ್ ಇಲ್ಲದ ಪಟ್ಟಾಪಟ್ಟಿಯ ಅಂಗಿಯನ್ನು ಹಾಗೂ ಇಳಿಬಿದ್ದ ಪಟ್ಟಿಗಳ ಪ್ಯಾಂಟ್‍ನ್ನು ಧರಿಸಿದ್ದ. ಕುತ್ತಿಗೆಯಲ್ಲಿ ಬಂಗಾರದ ಸರವಿತ್ತು. ಆತ ಬಡಕಲನಾಗಿದ್ದು ಸಂದರ್ಭಕ್ಕೆ ಕೊಂಚವೂ ಹೊಂದಿಕೊಳ್ಳದಂತೆ ನೆಟ್ಟಗೆ ನಿಂತಿದ್ದು ಅದು ಕಿವುಡನೊಬ್ಬ ನಿಂತಿರುವಂತೆ ಕಾಣಿಸುತ್ತಿತ್ತು.   

    ಟೆಬಲ್ ಮೇಲೆ ವಸ್ತುಗಳನ್ನು ಸರಿಯಾಗಿ ಜೋಡಿಸಿಟ್ಟ ಮೇಲೆ ಡ್ರಿಲ್ಲನ್ನು ಖುರ್ಚಿಯೆಡೆಗೆ ಎಳೆದುಕೊಂಡು ಕೃತಕ ಹಲ್ಲುಗಳನ್ನು ಪಾಲಿಷ್ ಮಾಡಲು ಕುಳಿತ. ಅವನು ತಾನು ಮಾಡುತ್ತಿದ್ದ ಕೆಲಸದ ಬಗ್ಗೆ ಯೋಚನೆ ಮಾಡುತ್ತಿದ್ದಂತೆ ಕಾಣಿಸದೆ ಒಂದೇ ಸಮನೆ ಕೆಲಸ ಮಾಡುತ್ತಾ ಅಗತ್ಯವಿರದಿದ್ದರೂ ಡ್ರಿಲ್ಲನ್ನು ಕಾಲಿನಿಂದ ಒತ್ತುತ್ತಿದ್ದ. ಅವನು ಎಂಟು ಗಂಟೆಗೆ ಕೆಲಸವನ್ನು ಕೆಲವು ಕ್ಷಣ ನಿಲ್ಲಿಸಿ, ಕಿಟಕಿಯ ಮೂಲಕ ಹೊರಗೆ ನೋಡಿದ. ಅಲ್ಲಿ ಬಿಸಿಲಿನಲ್ಲಿ ಎರಡು ಡೇಗೆ ಹಕ್ಕಿಗಳು ತಮ್ಮ ಮೈ ಕಾಯಿಸುತ್ತಾ ಪಕ್ಕದ ಮನೆಯ ಕಂಪೌಂಡಿನ ಮೇಲೆ ಚಿಂತೆಯಲ್ಲಿ ಮುಳುಗಿರುವಂತೆ ಕುಳಿತಿದ್ದವು. ಊಟದ ಸಮಯದ ಹೊತ್ತಿಗೆ ಮತ್ತೆ ಮಳೆ ಬರಬಹುದೆಂಬ ಆಲೋಚನೆಯಲ್ಲಿ ಕೆಲಸ ಮುಂದುವರಿಸಿದ. ಅಷ್ಟರಲ್ಲಿ ಹನ್ನೊಂದು ವರ್ಷದ ಅವನ ಮಗನ ಕೀರಲು ಧ್ವನಿ ಅವನ ಏಕಾಗ್ರತೆಗೆ ಭಂಗ ತಂದಿತು.

    'ಪಪ್ಪಾ'

    '
    ಏನು?'

    '
    ನೀನು ಅವರ ಹಲ್ಲು ಕೀಳ್ತೀಯಾ ಅಂತಾ ಮೇಯರ್ ಕೇಳ್ತಿದಾರೆ'.

    '
    ನಾನಿಲ್ಲಿ ಇಲ್ಲ ಅಂತ ಅವರಿಗೆ ಹೇಳ್ಬಿಡು'.

    ಅವನು ಬಂಗಾರದ ಹಲ್ಲನ್ನು ಪಾಲಿಷ್ ಮಾಡುತ್ತಿದ್ದ. ಅದನ್ನು ಕೈಯಳತೆಯ ದೂರದಲ್ಲಿ ಹಿಡಿದು, ಕಿರುಗಣ್ಣು ಮಾಡಿಕೊಂಡು ಪರೀಕ್ಷಿಸಿದ.  ಅವನ ಮಗ ಒಳಗಿನ ರೂಮಿನಿಂದ ಮತ್ತೆ ಕೂಗಿದ.

    'ಅವರಿಗೆ ನಿನ್ನ ಧ್ವನಿ ಕೇಳಿಸಿದೆ. ನೀನು ಇಲ್ಲೇ ಇದೀಯ ಅಂತ ಹೇಳ್ತಿದಾರೆ'.

    ಅವನು ಹಲ್ಲನ್ನು ಪರೀಕ್ಷಿಸುವುದನ್ನು ಮುಂದುವರಿಸಿದ. ಕೆಲಸವನ್ನು ಮುಗಿಸಿದ ನಂತರ ಅದನ್ನು ಟೇಬಲ್ಲಿನ ಮೇಲಿಟ್ಟು ಹೇಳಿದ.

    “ಈಗ ಪರ್ವಾಗಿಲ್ಲ.”

    ಅವನು ತ್ತೊಮ್ಮೆ ಡ್ರಿಲ್ಲನ್ನು ಉಪಯೋಗಿಸಿದ. ಇನ್ನೂ ಸರಿ ಮಾಡಬೇಕಾದವುಗಳನ್ನು ಕಾರ್ಡ್ಬೋರ್ಡ್ ಪೆಟ್ಟಿಗೆಯಿಂದ ತೆಗೆದು, ಬಂಗಾರವನ್ನು ಪಾಲಿಷ್ ಮಾಡ ತೊಡಗಿದ.

    '
    ಪಪ್ಪಾ'

    '
    ಏನು?'

    ಅವನು ಮುಖಭಾವವನ್ನು ಬದಲಾಯಿಸಿರಲಿಲ್ಲ.

    '
    ನೀನು ಅವರ ಹಲ್ಲನ್ನು ಕೀಳದಿದ್ದರೆ ನಿನ್ನನ್ನು ಶೂಟ್ ಮಾಡ್ತೀನಿ ಅಂತಾ ಅವರು ಹೇಳ್ತಿದಾರೆ'.

    ಅವನು ಸ್ವಲ್ಪವೂ ವಿಚಲಿತನಾಗದೆ ಸಾವಧಾನದಿಂದ ಡ್ರಿಲ್ ಪೆಡಲ್ ಒತ್ತುವುದನ್ನು ನಿಲ್ಲಿಸಿದ. ಕುರ್ಚಿಯಿಂದ ಅದನ್ನು ಸ್ವಲ್ಪ ದೂರಕ್ಕೆ ತಳ್ಳಿ, ಟೇಬಲ್ಲಿನ ಕೆಳಗಿನ ಡ್ರಾವನ್ನು ಸಂಪೂರ್ಣವಾಗಿ  ಹೊರಗೆಳೆದ. ಅದರಲ್ಲೊಂದು ರಿವಾಲ್ವರ್ ಇತ್ತು. ಅವನದನ್ನು ಮುಟ್ಟುತ್ತಾ  'ಓ. ಕೆ. ಅವರಿಗೆ ಬಂದು ಶೂಟ್ ಮಾಡಲಿಕ್ಕೆ ಹೇಳು' ಎಂದ.

    ಅವನು ಕುರ್ಚಿಯನ್ನು ಬಾಗಿಲಿಗೆ ಎದುರಾಗಿ ಹಾಕಿದ. ಅವನ ಕೈ ಡ್ರಾದ ಅಂಚಿನ ಮೇಲಿತ್ತು. ಮೇಯರ್ ಬಾಗಿಲ ಬಳಿ ಕಾಣಿಸಿಕೊಂಡ. ಅವನು ಮುಖದ ಎಡ ಭಾಗವನ್ನು ಮಾತ್ರ ಶೇವ್ ಮಾಡಿಕೊಂಡಿದ್ದ. ಇನ್ನೊಂದು ಭಾಗ ನೋವಿನಿಂದ ಊದಿಕೊಂಡಿದ್ದರಿಂದ ಆ ಭಾಗದಲ್ಲಿ  ಶೇವ್ ಮಾಡಲಾಗದೆ ಐದು ದಿನದ ಗಡ್ಡ ಹಾಗೆ ಇತ್ತು.

    ಅವನ ಕಣ್ಣುಗಳಲ್ಲಿ ಅನೇಕ ದಿನಗಳ ವಿಷಾದ ಮಡುಗಟ್ಟಿರುವದು ಡೆಂಟಿಸ್ಟ್ಗೆ ಕಾಣಿಸಿತು. ಅವನು ಬೆರಳ ತುದಿಯಿಂದ ಡ್ರಾ ಒಳಗೆ ತಳ್ಳಿ, 'ಕುಳಿತುಕೊಳ್ಳಿ' ಎಂದು ಮೆಲ್ಲಗೆ ಹೇಳಿದ.

    '
    ನಮಸ್ಕಾರ'  ಮೇಯರ್ ಶುಭಾಶಯ ಹೇಳಿದ.

    'ನಮಸ್ಕಾರ'. ಡೆಂಟಿಸ್ಟ್ ಮರುಶುಭಾಶಯ ತಿಳಿಸಿದ.

    ಸಲಕರಣೆಗಳು ಕುದಿಯುತ್ತಿದ್ದ ಹಾಗೆ ಮೇಯರ್ ಹಿಂದಕ್ಕೊರಗಿ ತಲೆಯನ್ನು ಕುರ್ಚಿಗೆ ಆನಿಸಿದ. ಅವನಿಗೆ ಕೊಂಚ ಹಿತವೆನಿಸಿತು. ಅವನ ಉಸಿರಿನಲ್ಲಿ ಕಾವಿರಲಿಲ್ಲ. ಅದು ಕೆಳದರ್ಜೆಯ ಕ್ಲಿನಿಕ್ಕು. ಅಲ್ಲಿ ಒಂದು ಹಳೆ ಮರದ ಕುರ್ಚಿ, ಪೆಡಲ್ ಡ್ರಿಲ್, ಸೆರಾಮಿಕ್ ಬಾಟಲುಗಳಿದ್ದ ಗಾಜಿನ ಕೇಸ್ ಇದ್ದವು. ಕುರ್ಚಿಯ ಎದುರು ಒಂದು ಕಿಟಕಿಯಿದ್ದು ಅದಕ್ಕೆ ಭುಜದೆತ್ತರ ಕರ್ಟನ್ ಇತ್ತು. ಡೆಂಟಿಸ್ಟ್ ಹತ್ತಿರ ಬರುತ್ತಿದ್ದಂತೆ ಮೇಯರ್ ತನ್ನ ಹಿಮ್ಮಡಿಗಳನ್ನು ನೆಲಕ್ಕೊತ್ತಿ, ಬಾಯಿ ತೆಗೆದ.
    ಅರಿಲಿಯೋ ಎಸ್ಕೋವರ್ ಅವನ ತಲೆಯನ್ನು ಬೆಳಕಿನ ಕಡೆ ತಿರುಗಿಸಿದ. ಹಾಳಾಗಿದ್ದ ಹಲ್ಲನ್ನು ಪರೀಕ್ಷಿಸಿ ಮೇಯರ್ ದವಡೆಯನ್ನು ಜಾಗರೂಕತೆಯಿಂದ ಬೆರಳಿನಿಂದ ಮುಚ್ಚಿದ.

    'ಇದನ್ನು ಅನಸ್ತೇಷಿಯಾ ಕೊಡದೆ ಕೀಳಬೇಕಾಗುತ್ತೆ'  ಡೆಂಟಿಸ್ಟ್ ಹೇಳಿದ.

    'ಯಾಕೆ?'

    'ಅದರಲ್ಲಿ ಕೀವು ತುಂಬಿಕೊಂಡಿದೆ.’

    ಮೇಯರ್ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ.  ಅವನು 'ಸರಿ ಹಾಗಾದ್ರೆ' ಎಂದು ಹೇಳಿ ನಸುನಗಲು ಪ್ರಯತ್ನಿಸಿದ. ಆದರೆ ಡೆಂಟಿಸ್ಟ್ ಅದಕ್ಕೆ ಪ್ರತಿಯಾಗಿ ನಗಲಿಲ್ಲ. ಅವನು ಸ್ಟರಿಲೈಸ್ ಮಾಡಿದ ಸಲಕರಣೆಗಳ ಬೇಸಿನ್ನನ್ನು ಟೇಬಲ್ ಮೇಲಿಟ್ಟು ಇಕ್ಕಳಗಳಿಂದ ಅವನ್ನು ಹೊರತೆಗೆದ. ನಂತರ ಉಗುಳುವ ಬೇಸಿನ್ನನ್ನು ಶೂ ತುದಿಯಿಂದ ತಳ್ಳಿ, ಕೈ ತೊಳೆಯಲು ವಾಶ್ ಬೇಸಿನ್ ಬಳಿ ಹೋದ. ಅವನು ಇದೆಲ್ಲವನ್ನೂ ಮೇಯರ್ ಕಡೆ ನೋಡದೆ ಮಾಡಿದ. ಅದರೆ ಮೇಯರ್ ಮಾತ್ರ ಕಣ್ಣು ಮಿಟುಕಿಸದೆ  ಅವನನ್ನು ಹಾಗೆ ನೋಡುತ್ತಿದ್ದ.

    ಅದು ಕೆಳಗಿನ ವಿಸ್ಡಮ್ ಹಲ್ಲು. ಡೆಂಟಿಸ್ಟ್ ತನ್ನ ಕಾಲಗಲಿಸಿ, ಬಿಸಿ ಇಕ್ಕಳದಿಂದ ಅವನ ಹಲ್ಲನ್ನು ಹಿಡಿದ. ಮೇಯರ್ ಕುರ್ಚಿಯ ಕೈಗಳನ್ನು ಬಲವಾಗಿ ಅದುಮಿ, ಶಕ್ತಿ ಮೀರಿ ಕಾಲುಗಳನ್ನು ನೆಲಕ್ಕೊತ್ತಿದ. ಅವನಿಗೆ ಉಚ್ಚೆಯೆಲ್ಲಾ ಹೋಗಿ ಕಿಡ್ನಿ ಖಾಲಿಖಾಲಿಯಾದಂತೆ ಅನಿಸಿತು. ಅದರೆ ಕಿಂಚಿತ್ ಶಬ್ದವನ್ನೂ ಮಾಡಲಿಲ್ಲ. ಡೆಂಟಿಸ್ಟ್ ತನ್ನ ಮುಂಗೈಯನ್ನು ಮಾತ್ರ ಅಲ್ಲಾಡಿಸಿದ. ಯಾವುದೇ ದ್ವೇಷವಿಲ್ಲದೆ, ಕಹಿ ಬೆರೆತ  ದನಿಯಲ್ಲಿ ಹೇಳಿದ, 'ಈಗ ನೀನು ನಮ್ಮ ಕಡೆಯ ಇಪ್ಪತ್ತು ಜನ ಸತ್ತಿದ್ದಕ್ಕೆ ಬೆಲೆ ತೆರಬೇಕು'.

    ಮೇಯರ್ಗೆ ದವಡೆಯ ಮೂಳೆಗಳು ಜಜ್ಜಿ ಹೋದಂತಾಗಿ, ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಹಲ್ಲು ಹೊರಗೆ ಬರುವ ತನಕ ಉಸಿರು ಬಿಗಿಹಿಡಿದಿದ್ದ. ಆನಂತರ ಅವನದನ್ನು ನೀರುದುಂಬಿದ ಕಂಗಳಲ್ಲಿ ನೋಡಿದ. ಅವನಿಗೆ ಆ ನೋವಿನ ಮುಂದೆ ಕಳೆದ ಐದು ರಾತ್ರಿಗಳ ನೋವು ಏನೇನೂ ಅಲ್ಲ ಎಂದನಿಸಿತು.

    ಮೇಯರ್ ಏದುಸಿರು ಬಿಡುತ್ತಾ, ಬೆವರುತ್ತಾ ಉಗುಳುವ ಬೇಸಿನ್‍ಗೆ ಬಾಗಿ ನಿಂತು ಪ್ಯಾಂಟಿನ ಜೇಬಿನೊಳಗೆ ಕರ್ಚೀಫ್ಗಾಗಿ ಕೈಹಾಕಿದ. ಡೆಂಟಿಸ್ಟ್ ಅವನಿಗೆ ಒಂದು ಒಳ್ಳೆಯ ಬಟ್ಟೆ ಕೊಟ್ಟು, 'ನಿಮ್ಮ ಕಣ್ಣೀರನ್ನು ಒರೆಸಿಕೊಳ್ಳಿ' ಎಂದ.

    ಮೇಯರ್ ಒರೆಸಿಕೊಂಡ. ಅವನು ಭಯದಿಂದ ನಡುಗುತ್ತಿದ್ದ. ಡೆಂಟಿಸ್ಟ್ ಕೈ ತೊಳೆಯುತ್ತಿದ್ದಂತೆ ಒಂದು ಕ್ಷಣ ಮೇಯರ‍್ಗೆ  ಮೇಲ್ಛಾವಣಿ ಉದುರುತ್ತಿರುವಂತೆ, ಗೋಡೆಯ ಮೇಲೊಂದು  ಜೇಡರ ಬಲೆಯಿರುವಂತೆ  ಮತ್ತು ಅದರಲ್ಲಿ ಒಂದಷ್ಟು  ಮೊಟ್ಟೆಗಳು ಹಾಗೂ ಸತ್ತ ಹುಳುಗಳಿರುವಂತೆ ಕಾಣಿಸಿತು. ತನ್ನ ಕೈಗಳನ್ನು ಒರೆಸಿಕೊಳ್ಳುತ್ತಾ ಡೆಂಟಿಸ್ಟ್ ಮರಳಿ ಬಂದು 'ಉಪ್ಪು ನೀರು ಮುಕ್ಕಳಿಸಿ, ಮಲಗಿಕೊಳ್ಳಿ' ಎಂದು ಹೇಳಿದ.  ಮೇಯರ್ ಅವನಿಗೆ ಒಂದು ಮಿಲಿಟರಿ ಸೆಲ್ಯೂಟ್ ಹೊಡೆದು  ಕಾಲು ನೀಟಿಕೊಂಡು ಎದ್ದು ಬಾಗಿಲ ಬಳಿಗೆ ಹೋದ.

    '
    ಬಿಲ್ ಕಳಿಸಿ' ಮೇಯರ್ ಹೇಳಿದ.

    '
    ನಿಮಗಾ ಅಥವಾ ನಿಮ್ಮಆಫಿಸಿಗಾ?'

    ಮೇಯರ್ ಅವನ ಕಡೆ ನೋಡಲಿಲ್ಲ. ಅವನು ಬಾಗಿಲು ಹಾಕಿ ಪರದೆಯ ಮೂಲಕ ಹೇಳಿದ.

    '
    ಹಳೇ ರೀತೀನೇ'.

    ಸ್ಪಾನಿಷ್ ಮೂಲ: ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಜ್
    ಕನ್ನಡಕ್ಕೆ : ಉದಯ್ ಇಟಗಿ


    ಇವತ್ತಿನ ಅಂದರೆ ಮೇ 4, 2014 ರ "ಉದಯವಾಣಿ"ಯಲ್ಲಿ ಈ ಕಥೆ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ.
    http://epaper.udayavani.com/PDFDisplay.aspx?Er=1&Edn=Manipal&Id=1703284