Demo image Demo image Demo image Demo image Demo image Demo image Demo image Demo image

ಒಂದು ಕಾಲದಲ್ಲಿ....

  • ಸೋಮವಾರ, ಏಪ್ರಿಲ್ 27, 2009
  • ಬಿಸಿಲ ಹನಿ
  • ಮಗನೆ, ಒಂದು ಕಾಲದಲ್ಲಿ
    ಜನ ಮನಬಿಚ್ಚಿ ನಗುತ್ತಿದ್ದರು
    ಅದು ಅವರ ಕಂಗಳಲ್ಲಿ ಹೊಳೆಯುತ್ತಿತ್ತು.
    ಆದರೀಗ ಬರಿ ಹಲ್ಲುಬೀರಿ ನಗುತ್ತಾರೆ
    ಹಾಗೆ ನಗುವಾಗ ಅವರ ಶೀತಲ ಕಂಗಳು
    ನನ್ನ ನೆರಳ ಹಿಂದೆ ಏನನ್ನೋ ಹುಡುಕುತ್ತಿರುತ್ತವೆ.

    ನಿಜಕ್ಕೂ ಒಂದು ಕಾಲವಿತ್ತು
    ಅಲ್ಲಿ ಜನ ಮನಃಪೂರ್ವಕವಾಗಿ ಕೈ ಕುಲುಕುತ್ತಿದ್ದರು.
    ಆದರೀಗ ಅದು ಕಾಣೆಯಾಗಿದೆ ಮಗನೆ.
    ಈಗ ಮನಸ್ಸಿಲ್ಲದೆ ಬರಿ ಕೈಯನಷ್ಟೆ ಕುಲುಕುತ್ತಾರೆ
    ಹಾಗೆ ಕುಲುಕುವಾಗ ಅವರ ಎಡಗೈ
    ನನ್ನ ಖಾಲಿ ಜೇಬನ್ನು ಬಡಿದು ನೋಡುತ್ತದೆ.

    ಅವರು ಹೇಳುತ್ತಾರೆ
    “ಇದು ನಿಮ್ಮ ಮನೆಯಿದ್ದಂತೆ”, “ಪುನಃ ಬನ್ನಿ”.
    ನಾನು ಪುನಃ ಅವರ ಮನೆಗೆ ಹೋಗುತ್ತೇನೆ
    ನಮ್ಮದೇ ಮನೆ ಎಂದುಕೊಳ್ಳುತ್ತೇನೆ
    ಒಂದು ಸಾರಿ, ಎರಡು ಸಾರಿ.
    ಮೂರನೆಯ ಸಾರಿ ಸಾಧ್ಯವೇ ಇಲ್ಲ!
    ಅದಾಗಲೆ ಬಾಗಿಲು ಮುಚ್ಚಿಬಿಟ್ಟಿರುತ್ತದೆ.

    ನಾನೀಗ ಬಹಳಷ್ಟು ಸಂಗತಿಗಳನ್ನು ಕಲಿತುಕೊಂಡಿದ್ದೇನೆ, ಮಗನೆ!
    ಬೇರೆ ಬೇರೆ ಬಟ್ಟೆಗಳನ್ನು ಧರಿಸುವದನ್ನು ಕಲಿತಂತೆ
    ಬೇರೆ ಬೇರೆ ಮುಖಭಾವಗಳನ್ನು ಧರಿಸುವದನ್ನು ಸಹ.
    ಮನೆಯಲ್ಲೊಂದು ಮುಖಭಾವ! ಆಫೀಸಿನಲ್ಲೊಂದು ಮುಖಭಾವ!
    ಬೀದಿಯಲ್ಲೊಂದು ಮುಖಭಾವ! ಅತಿಥಿಗಳಿಗೊಂದು ಮುಖಭಾವ!
    ವಿವಿಧ ನಗೆಗಳೊಂದಿಗೆ ವಿವಿಧ ಮುಖಭಾವ!
    ಇದೀಗ ನಗುತ್ತಲೇ ಇರುತ್ತೇನೆ ಸದಾ ನಗುವ ಚಿತ್ರಪಟದಂತೆ!

    ಈಗ ನಾನೂ ಸಹ ಕಲಿತಿದ್ದೇನೆ
    ಬರಿ ಹಲ್ಲುಬೀರಿ ನಗುವದನ್ನು
    ಹಾಗೂ ಮನಸ್ಸಿಲ್ಲದೆ ಕೈ ಕುಲುಕುವದನ್ನು!
    “ಪೀಡೆ ತೊಲಗಿದರೆ ಸಾಕು” ಎಂದು ಕಾಯ್ದು
    ಕೊನೆಯಲ್ಲಿ “ಒಳ್ಳೆಯದು: ಹೋಗಿ ಬಾ” ಎಂದು ಮುಗುಳುನಗೆ ಬೀರುವದನ್ನು!
    ಹರ್ಷವಾಗಿರದಿದ್ದರೂ “ನಿಮ್ಮನ್ನು ಭೇಟಿಯಾಗಲು ಹರ್ಷಿಸುತ್ತೇನೆ!” ಎಂದು ಉದ್ಗರಿಸುವದನ್ನು!
    ಹಾಗೂ ಮಾತನಾಡಿ ಬೇಸರವಾಗಿದ್ದರೂ ಸಹ
    “ನಿಮ್ಮೊಂದಿಗೆ ಮಾತನಾಡಿದ್ದು ಖುಶಿಯಾಯಿತು” ಎಂದು ಹೇಳುವದನ್ನು!

    ಮಗನೆ, ನನ್ನ ನಂಬು
    ನಿನ್ನಂತಿರಬೇಕಾದರೆ ನಾನು ಏನಾಗಿದ್ದೆನೋ
    ಮತ್ತೆ ಅದಾಗ ಬಯಸುವೆ.
    ಇನ್ನಾದರು ಸತ್ತ ಭಾವಗಳೊಂದಿಗೆ ಬದುಕುವದನ್ನು ಬಿಟ್ಟು
    ಬಹಳಷ್ಟನ್ನು ನಾನು ಮತ್ತೆ ಕಲಿಯಬೇಕಿದೆ
    ಹೇಗೆ ಬದುಕಬೇಕೆಂಬುದನ್ನು? ಹೇಗೆ ನಗಬೇಕೆಂಬುದನ್ನು?
    ಏಕೆಂದರೆ ಕನ್ನಡಿಯಲ್ಲಿನ ನನ್ನ ನಗು
    ಹಾವಿನ ವಿಷದ ಹಲ್ಲುಗಳಂತೆ
    ನನ್ನ ವಿಷದ ಹಲ್ಲುಗಳನಷ್ಟೇ ತೋರಿಸುತ್ತದೆ.

    ಅದಕ್ಕೆ ಮಗನೆ, ಮತ್ತೆ ತೋರಿಸುಕೊಡು
    ಹೇಗೆ ನಗಬೇಕೆಂಬುದನ್ನು.
    ಹೇಳಿಕೊಡು ಒಂದುಕಾಲದಲ್ಲಿ
    ನಿನ್ನಂತಿರಬೇಕಾದರೆ
    ಹೇಗೆ ನಗುತ್ತಿದ್ದೆನೆಂದು?
    ಹೇಗೆ ನಗುತ್ತಿದ್ದೆನೆಂದು?

    ಇಂಗ್ಲೀಷ ಮೂಲ: ಗೇಬ್ರಿಯಲ್ ಒಕಾರಾ
    ಕನ್ನಡಕ್ಕೆ: ಉದಯ ಇಟಗಿ
    ಚಿತ್ರ ಕೃಪೆ: http://www.flickr.com/ awe2020

    ನನ್ನೊಳಗಿನ ಬರಹಗಾರ ರೂಪಗೊಂಡಿದ್ದು (ಕೊನೆಯ ಭಾಗ)

  • ಶುಕ್ರವಾರ, ಏಪ್ರಿಲ್ 24, 2009
  • ಬಿಸಿಲ ಹನಿ
  • ನಾನು ತೆಗೆದುಕೊಂಡ ಇಂಗ್ಲೀಷ ಸಾಹಿತ್ಯದ ಓದು ಒಂದು ಹೊಸ ಪ್ರಪಂಚವನ್ನೇ ತೆರೆದಿಟ್ಟಿತು. ಇಂಗ್ಲೀಷ ಕವನಗಳು, ಕಾದಂಬರಿಗಳು ನಾನು ಕೇಳಿರದ ಕಂಡಿರದ ಲೋಕವನ್ನು ಪರಿಚಯಿಸಿದವು. ಅಲ್ಲದೆ ಆಧುನಿಕ ಕನ್ನಡ ಸಾಹಿತ್ಯದ ಕೆಲವು ಮಹತ್ವದ ಕೃತಿಗಳು ಇಂಗ್ಲೀಷ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿವೆ ಎನ್ನುವ ಸತ್ಯ ಗೊತ್ತಾಯಿತು. ನಾನೂ ಸಹ ಜಾನ್ ಕೀಟ್ಸನ “Ode to a Nightingale” ಕವನದ ಪ್ರಭಾವಕ್ಕೆ ಒಳಗಾಗಿ “ಓ ಕನಸುಗಳೆ ಬನ್ನಿ” ಎನ್ನುವ ಕವನವೊಂದನ್ನು ಬರೆದೆ. ಅದಲ್ಲದೆ ಗೇಬ್ರಿಯಲ್ ಓಕಾರನ “Once Upon a Time.....” ಕವನದಿಂದ ಸ್ಪೂರ್ತಿಗೊಂಡು “To My Son” ಎನ್ನುವ ಇಂಗ್ಲೀಷ ಕವಿತೆಯನ್ನೂ ಬರೆದೆ. ಅದನ್ನು ನಮ್ಮ ಇಂಗ್ಲೀಷ ವಿಭಾಗದ ಮುಖ್ಯಸ್ಥರು ತುಂಬಾ ಮೆಚ್ಚಿಕೊಂಡು ಕಾಲೇಜಿನ ಪ್ರಾಂಶುಪಾಲರ ಸಹಿಯೊಂದಿಗೆ ನೋಟೀಸ್ ಬೋರ್ಡ್ ಮೇಲೆ ನೇತುಹಾಕಿದ್ದರು. ನಾನು ಬಿ.ಎ. ಕಡೆಯ ವರ್ಷದಲ್ಲಿರಬೇಕಾದರೆ ನನ್ನ ಕೆಲವು ಕವನಗಳು ನಮ್ಮ ಕಾಲೇಜು ಮ್ಯಾಗಜೀನ್ “ತೆನೆ”ಯಲ್ಲಿ ಪ್ರಕಟವಾದವು. ಆನಂತರ ನಾನು ಆಗೊಮ್ಮೆ ಈಗೊಮ್ಮೆ ಸ್ಥಳೀಯ ಪತ್ರಿಕೆಗಳಿಗೆ ಕಳಿಸದೆನೆಂದು ಕಾಣುತ್ತದೆ. ಆದರೆ ಅವು ಯಾವುತ್ತೂ ಪ್ರಕಟವಾಗಲೇ ಇಲ್ಲ.

    ಬಿ.ಎ. ಮುಗಿಸಿದ ಮೇಲೆ ಆರ್ಥಿಕ ಮುಗ್ಗಟ್ಟಿನಿಂದ ಓದು ಮುಂದುವರಿಸಲಾಗದೆ ದೂರಶಿಕ್ಷಣದಲ್ಲಿ ಎಮ್.ಎ ಇಂಗ್ಲೀಷ ಓದುತ್ತಾ ಬೆಂಗಳೂರಿನಲ್ಲಿ ಇಂಗ್ಲೀಷ ಟೀಚರ್ ಆಗಿ ಕೆಲಸ ಮಾಡತೊಡಗಿದೆ. ಎಮ್.ಎ ಓದುವ ಭರಾಟೆಯಲ್ಲಿ ಹಾಗೂ ಕೆಲಸದ ಒತ್ತಡದ ನಡುವೆ ಆಗೊಮ್ಮೆ ಈಗೊಮ್ಮೆ ಬರೆಯುವ ಪ್ರವೃತ್ತಿಯೂ ನಿಂತುಹೋಯಿತು. ಆಶ್ಚರ್ಯವೆಂದರೆ ನಾನು ಸ್ಕೂಲಿನಲ್ಲಿ ಕೆಲಸ ಮಾಡುತ್ತಿರಬೇಕಾದರೆ ಒಂದು ಸಾರಿ ಜಿ. ಎಸ್. ಶಿವರುದ್ರಪ್ಪನವರ “ಯಾವುದೀ ಪ್ರವಾಹವು” ಎನ್ನುವ ಕವನವನ್ನು ಬಿಡುವಿನ ವೇಳೆಯಲ್ಲಿ ಓದುತ್ತಿದ್ದೆ. ತಕ್ಷಣ ಅದೇನನ್ನಿಸಿತೊ ಗೊತ್ತಿಲ್ಲ ಇದನ್ನು ಇಂಗ್ಲೀಷಗೆ ಯಾಕೆ ಅನುವಾದ ಮಾಡಬಾರದು ಎಂದು ಅನುವಾದಿಸಿಯೂ ಬಿಟ್ಟೆ. ಅನುವಾದಿಸಿದ ನಂತರ ಅದನ್ನು ನಮ್ಮ ಪ್ರಾಂಶುಪಾಲರಾದ ಪ್ರೊ. ಸ್ವಾಮಿನಾಥನ್ ಅವರಿಗೆ ತೋರಿಸಿದ್ದೆ. ಅವರು ಅದನ್ನು ಮೆಚ್ಚಿಕೊಂಡು ಚನ್ನಾಗಿದೆ ಎಂದು ಹೇಳಿ ಸ್ವಲ್ಪ ತಿದ್ದಿಕೊಟ್ಟಿದ್ದರು. ಹಾಗೆ ಹುಟ್ಟಿಕೊಂಡ ನನ್ನೊಳಗಿನ ಅನುವಾದಕ ಮತ್ತೆ ನಾನು ಲೆಕ್ಚರರ್ ಆಗಿ ಕೆಲಸಕ್ಕೆ ಸೇರುವವರೆಗೂ ಅದೇಕೋ ಹೊರಬರುವ ಮನಸ್ಸು ಮಾಡಲೇ ಇಲ್ಲ.

    ಒಂದು ಸಾರಿ ಲಂಕೇಶ್ ಪತ್ರಿಕೆಯಲ್ಲಿ ದೀಪಾವಳಿ ವಿಶೇಷಾಂಕಕ್ಕಾಗಿ “ಮದುವೆ” ಬಗ್ಗೆ ಓದುಗರಿಂದ ಅಭಿಪ್ರಾಯ ಕೇಳಿದ್ದರು. ನಾನೂ ಏಕೆ ಬರೆಯಬಾರದೆಂದು “ಮದುವೆ” ಬಗ್ಗೆ ನನ್ನ ಅನಿಸಿಕೆಯನ್ನು ಬರೆದು ಕಳಿಸಿದೆ. ಆದರೆ ಅದೇಕೋ ಪ್ರಕಟವಾಗಲೇ ಇಲ್ಲ. ಆದರೆ ನಾನು ಬರೆದ ಲೇಖನ ತೃಪ್ತಿ ತಂದುಕೊಟ್ಟಿದ್ದರಿಂದ ಲೇಖನ ಬರೆಯಲು ಅಡ್ಡಿಯಿಲ್ಲವೆಂದುಕೊಂಡು ಅಂದಿನಿಂದ ಯಾವಗಲೋ ಸಮಯವಿದ್ದಾಗ ಚಿಕ್ಕ ಚಿಕ್ಕ ಲೇಖನಗಳನ್ನು ಬರೆದಿಡತೊಡಗಿದೆ. ಅದುವರೆಗೂ ನಾನು ಲೇಖನಗಳನ್ನು ಯಾವತ್ತೂ ಬರೆಯಲು ಪ್ರಯತ್ನಿಸಿರಲಿಲ್ಲ. ಈ ಮಧ್ಯ ಗೆಳೆಯರಿಗೆ ಬರೆಯುತ್ತಿದ್ದ ನನ್ನ ಪತ್ರಗಳು ಬರಿ ಪತ್ರಗಳಾಗಿರಲಿಲ್ಲ. ಅದರಲ್ಲೊಂದಿಷ್ಟು ಕವಿತೆಯ ಸಾಲುಗಳು, ಯಾರದೋ ಕತೆಯ ಚರ್ಚೆಗಳು, ಪ್ರಶಸ್ತಿ ಪಡೆದ ಚಿತ್ರಗಳ ವಿಮರ್ಶೆ ಏನೆಲ್ಲ ಇರುತ್ತಿದ್ದವು. ನಾನು ಇತ್ತೀಚಿಗೆ ಬರೆದ “ನಾ ಕಂಡಂತೆ ಬೇಂದ್ರೆಯವರ ಹುಬ್ಬಳ್ಳಿಯಾಂವಾ” ಎನ್ನುವ ಲೇಖನವು ಹಿಂದೊಮ್ಮೆ ಜೀವದ ಗೆಳೆಯ ಮಂಜುವಿಗೆ ಬರೆದ ಪತ್ರವಾಗಿತ್ತು. ನನ್ನ ಪತ್ರಗಳನ್ನು ಮೆಚ್ಚಿಕೊಂಡ ಸ್ನೇಹಿತರು “ನಿನ್ನ ಪತ್ರಗಳು ಅದ್ಭುತವಾಗಿರುತ್ತವೆ. ನೀನೇಕೆ ಏನಾದರು ಬರೆದು ಪ್ರಕಟಿಸಬಾರದು?” ಎಂದು ಸಲಹೆ ನೀಡುತ್ತಿದ್ದರು. ನಾನು ನಕ್ಕು ಸುಮ್ಮನಾಗುತ್ತಿದ್ದನೆ ಹೊರತು ಯಾವತ್ತೂ ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಲೇ ಇಲ್ಲ. ಗೆಳೆಯ ಮಂಜುವಿನ ಮೂಲಕ ಪರಿಚಯವಾದ ಚಿತ್ರ ನಿರ್ಮಾಪಕ ದಿವಂಗತ ಅಬ್ಬಯ್ಯನಾಯ್ಡುವರ ಮಗ ರಮೇಶ ಅಬ್ಬಯ್ಯನಾಯ್ದುವರು ನನ್ನ ಪತ್ರಗಳನ್ನು ಓದಿ “ನಿಮ್ಮ ಬರವಣಿಗೆ ಚನ್ನಾಗಿದೆ. ನೀವೊಂದು ಕತೆ ಬರೆದುಕೊಡಿ. ನಾನದನ್ನು ಸಿನೆಮಾ ಮಾಡುತ್ತೇನೆ” ಎಂದು ದುಂಬಾಲು ಬಿದ್ದಿದ್ದರು. ನಾನು ಆಗಷ್ಟೆ ಕಾಲೇಜು ಲೆಕ್ಚರರಾಗಿ ಸೇರಿಕೊಂಡಿದ್ದರಿಂದ ಹಾಗೂ ತರಗತಿಗಳಿಗೆ ಸಾಕಷ್ಟು ತಯಾರಾಗಿ ಹೋಗಬೇಕಾಗಿದ್ದರಿಂದ ನನಗೆ ಕತೆಯ ಬಗ್ಗೆ ಯೋಚಿಸಲೂ ಪುರುಸೊತ್ತಿರಲಿಲ್ಲ. ಹೀಗಾಗಿ ಬರೆಯಲು ಹೋಗಲಿಲ್ಲ. ಅವರು ಆಗಾಗ್ಗೆ ಫೋನ್ ಮಾಡಿ “ಆಯ್ತಾ, ಆಯ್ತಾ” ಎಂದು ಕೇಳುತ್ತಲೇ ಇದ್ದರು. ನಾನು ಮುಂದೂಡುತ್ತಲೇ ಇದ್ದೆ. ಕೊನೆಗೆ ನನ್ನ ನಿರಾಸಾಕ್ತಿಯನ್ನು ನೋಡಿ ಅವರು ಕೇಳುವದನ್ನೇ ಬಿಟ್ಟರು. ಹೀಗೆ ಸಿನಿಮಾ ಮಾಧ್ಯಮದಲ್ಲಿ ಕೆಲಸ ಮಾಡುವ ಅವಕಾಶವೊಂದನ್ನು ಕಳೆದುಕೊಂಡೆ.

    ನಾನು ಎಮ್.ಎ. ಮುಗಿಸಿ ಕಾಲೇಜೊಂದರಲ್ಲಿ ಕೆಲಸಕ್ಕೆ ಸೇರಿದಾಗ ಅಲ್ಲಿ ನನ್ನ ಕನ್ನಡ ಉಪನ್ಯಾಸಕ ಮಿತ್ರರಾದ ನಟರಾಜ್ ಅವರು ನನ್ನ ಕವನಗಳನ್ನು ನೋಡಿ ಬರೆಯಿರಿ ಚನ್ನಾಗಿವೆ ಎಂದು ಹೇಳಿದರು. ನಮ್ಮಿಬ್ಬರಿಗೂ ಸಮಾನ ಆಸಕ್ತಿಗಳಿದ್ದುದರಿಂದ ನಾವು ಸಾಹಿತ್ಯದ ಬಗ್ಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು. ಹೀಗೆ ಚರ್ಚಿಸುವದರಲ್ಲಿಯೇ ಕಾಲ ಕಳೆಯುತ್ತಿದ್ದನೇ ಹೊರತು ಬರೆಯಲು ಪ್ರಯತ್ನ ಪಡಲೇ ಇಲ್ಲ. ಅಲ್ಲದೇ ಪಿ. ಯು. ಕಾಲೇಜಿನ ಕನ್ನಡ ವಿಭಾಗದಲ್ಲಿ ಕನ್ನಡದ ಖ್ಯಾತ ವಿಮರ್ಶಕ ಪ್ರೊ. ಕಿ.ರಂ. ನಾಗರಾಜವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿಯವರು ನನ್ನೊಟ್ಟಿಗೆ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಬಿಡುವಿನ ವೇಳೆಯಲ್ಲಿ ಸ್ಟಾಫ್ ರೂಮಿನಲ್ಲಿ ಕುಳಿತುಕೊಂಡು ಏನನ್ನಾದರೂ ಅನುವಾದಿಸುತ್ತಲೇ ಇರುತ್ತಿದ್ದರು. ಅದಾಗಲೆ ಅವರು ಲೋರ್ಕಾನ ನಾಟಕಗಳನ್ನು, ಸಿಲ್ವಿಯಾ ಪ್ಲಾಥಳ ಕವನಗಳನ್ನು ಕನ್ನಡಕ್ಕೆ ಅನುವಾದಿಸಿ ಒಳ್ಳೆಯ ಅನುವಾದಕಿಯೆಂದು ಹೆಸರುವಾಸಿಯಾಗಿದ್ದರು. “ನೀವು ಹೇಗೆ ಅನುವಾದಿಸುತ್ತೀರಿ?” ಎಂದು ನಾನೊಮ್ಮೆ ಅವರನ್ನು ಕೇಳಿದ್ದಾಗ “ಅದನ್ನು ತಿಳಿಯಲು ನನ್ನ ಪುಸ್ತಕಗಳನ್ನು ಓದಿ” ಎಂದು ತಾವು ಪ್ರಕಟಿಸಿದ ಒಂದೆರಡು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದರು. ನಾನು ಓದಿ ಅವರ ಅನುವಾದದ ಕೌಶಲ್ಯಕ್ಕೆ ಬೆರಗಾಗಿದ್ದೆನೆ ಹೊರತು ಮುಂದೊಮ್ಮೆ ನಾನು ಸಹ ಅನುವಾದದೆಡೆಗೆ ವಾಲಿಕೊಂಡು ನನ್ನ ಬರಹದ ಬಹುಪಾಲು ಅನುವಾದಕ್ಕೇ ಮೀಸಲಾಗಿರುತ್ತದೆಂದು ಊಹೆ ಕೂಡ ಮಾಡಿರಲಿಲ್ಲ! ಪರೋಕ್ಷವಾಗಿ ವಿಜಯಲಕ್ಷ್ಮಿ ಮೇಡಂವರ ಅನುವಾದದ ಕಲೆ ನನ್ನ ಮೇಲೆ ಪರಿಣಾಮ ಬೀರಿತೆ? ಅಥವಾ ನನ್ನೊಳಗೆ ಆಗಲೇ ಹುಟ್ಟಿ ಮಲಗಿದ್ದ ಅನುವಾದಕನನ್ನು ಎಚ್ಚರಗೊಳಿಸಿತೆ? ಗೊತ್ತಿಲ್ಲ. ಆದರೆ ಅವರೊಟ್ಟಿಗೆ ಕೆಲಸ ಮಾಡುವ ಅದೃಷ್ಟ ನನಗಿರಲಿಲ್ಲವೆಂದು ಕಾಣುತ್ತದೆ. ಅವರು ನಾನು ಕಾಲೇಜನ್ನು ಸೇರಿದ ಒಂದು ವರ್ಷಕ್ಕೇ ಕ್ಯಾನ್ಸರ್ ರೋಗಕ್ಕೆ ತುತ್ತಾದರು. ಮುಂದೆ ಕೆಲವು ವ್ಯಯಕ್ತಿಕ ಕಾರಣಗಳಿಗಾಗಿ ನಾನು ಆ ಕಾಲೇಜನ್ನು ಬಿಟ್ಟು ಬೇರೆ ಕಾಲೇಜನ್ನು ಸೇರಿದೆ.

    ನಾನು ಜೀವನದಲ್ಲಿ ಲೆಕ್ಚರರ್ ಆಗುವ ಗುರಿಯೊಂದನ್ನು ಬಿಟ್ಟರೆ ಬೇರೆ ಯಾವುದನ್ನೂ ಸಾಕಷ್ಟು ಅಳೆದು ತೂಗಿ ಯೋಜನೆ ಹಾಕಿಕೊಂಡು ಕೆಲಸ ಮಾಡಿಲ್ಲ. ಬಂದದ್ದನ್ನು ಬಂದಹಾಗೆ ಸ್ವೀಕರಿಸುತ್ತಾ, ಅನುಭವಿಸುತ್ತಾ, ನಿಭಾಯಿಸುತ್ತಾ ಬಂದಿದ್ದೇನೆ. ಬರವಣಿಗೆಯ ವಿಷಯದಲ್ಲಿ ಕೂಡ ಈ ಮಾತು ನಿಜವಾಗಿದೆ. ಎಲ್ಲವನ್ನೂ ಆಕಸ್ಮಿಕವಾಗಿ ಆರಂಭಿಸಿದೆ: ಅನುವಾದವನ್ನೂ ಕೂಡ! ಆದರೆ ದಿನ ಕಳೆದಂತೆ ಅನುವಾದತ್ತ ನನ್ನ ಒಲವು ಜಾಸ್ತಿಯಾಯಿತು. ಹೀಗೇಕೆ ಆಯಿತೆಂದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಇದು ಕೂಡ ನಾನು ಬರವಣಿಗೆಯನ್ನು ಆರಂಭಿಸಿದಷ್ಟೆ ಆಕಸ್ಮಿಕವಾಗಿತ್ತು. ಬಹುಶಃ ಏನನ್ನೂ ಹೊಸದಾಗಿ ಯೋಚಿಸುವ ತಾಪತ್ರಯವಿಲ್ಲದೆ ಇದ್ದುದನ್ನು ಇದ್ದಕ್ಕಿದ್ದಂತೆ ಕನ್ನಡಕ್ಕೆ ಹತ್ತಿರವಾಗುವಂತೆ ತರುವದಷ್ಟೆ ಆಗಿದ್ದರಿಂದಲೋ ಅಥವಾ ನನ್ನ ಆಸಕ್ತಿ ಮತ್ತೆ ಮತ್ತೆ ಅನುವಾದತ್ತ ತಿರುಗುತ್ತಿದ್ದರಿಂದಲೋ ಏನೋ ನಾನು ಪಾಠ ಮಾಡುತ್ತಿದ್ದ ಕವನಗಳನ್ನೆ ಅನುವಾದಿಸುತ್ತಾ ಬಂದೆ. ಹೀಗೆ ನಾನು ಅನುವಾದಿಸಿದ ಮೊಟ್ಟ ಮೊದಲ ಕವನ ದ್ವಿತಿಯ ಪಿ.ಯು.ಸಿ.ಯ ಇಂಗ್ಲೀಷ ಪಠ್ಯಪುಸ್ತಕದಲ್ಲಿನ “I am not that woman” ಎನ್ನುವ ಕವನ. ಅದನ್ನು “ಆ ಹೆಂಗಸು ನಾನಲ್ಲ...” ಎನ್ನುವ ಹೆಸರಿನಲ್ಲಿ ಅನುವಾದಿಸಿದೆ. ನನ್ನ ಅನುವಾದ ಹೇಗಿರಬಹುದೆಂದು ತಿಳಿಯಲು ಇದನ್ನು ಬೆಂಗಳೂರಿನ “ಭಾರತೀಯ ಭಾಷಾಂತಾರ ಅಧ್ಯಯನ ಸಂಸ್ಥೆ”ಗೆ ಕಳಿಸಿಕೊಟ್ಟೆ. ಹದಿನೈದು ದಿವಸಗಳ ನಂತರ ನಿಮ್ಮ ಅನುವಾದ ಎಲ್ಲ ರೀತಿಯಿಂದಲೂ ಚನ್ನಾಗಿದೆ ಎಂದು ಮೆಚ್ಚುಗೆಯ ಪತ್ರವೊಂದು ನನ್ನ ವಿಳಾಸಕ್ಕೆ ಬಂತು. ಉತ್ಸಾಹಗೊಂಡು ಬೇರೆ ಬೇರೆ ಕವನಗಳನ್ನು ಕನ್ನಡಕ್ಕೆ ಅನುವಾದಿಸುತ್ತಾ ಬಂದೆ. ನನ್ನ ಅನುವಾದ ದಿನದಿಂದ ದಿನಕ್ಕೆ ಪ್ರೌಢತೆಯನ್ನು ಪಡೆದುಕೊಳ್ಳುತ್ತಿದೆ ಎಂದು ನನಗೇ ಅನಿಸುತ್ತಿತ್ತು. ಈ ಮಧ್ಯ ಹಿಂದೆ ಒಂದು ಸಾರಿ ಇಂಗ್ಲೀಷಗೆ ಅನುವಾದಿಸಿದ್ದೆನಲ್ಲ? ಮತ್ತೆ ಏಕೆ ಅದನ್ನೂ ಸಹ ಮುಂದುವರಿಸಬಾರದು ಎನಿಸಿ ಕೆಲವು ಕವನಗಳನ್ನು ಇಂಗ್ಲೀಷಗೆ ಅನುವಾದಿಸಿದೆ. ಹೀಗೆ ಅನುವಾದಿಸುವದರಲ್ಲಿ ಹೆಚ್ಚು ತೃಪ್ತಿ ತಂದು ಕೊಟ್ಟ ಕವನಗಳೆಂದರೆ “ಕಾಡು ಮತ್ತು ನದಿ”, “Time” , “ಮೇಣದ ಅರಮನೆ”, “ಶಾಕುಂತಳೆಯ ಸ್ವಗತಗಳು”, “ಒಗಟು”, “ಒಗಟಿಗೆ ಉತ್ತರ” ಮುಂತಾದವು. ಅದರಲ್ಲೂ ನಾನು ಮತ್ತೆ ಮತ್ತೆ ಮೆಲುಕುಹಾಕುವ ನನಗಿಷ್ಟವಾದ ಅನುವಾದದ ಕವನವೆಂದರೆ “ನಾನು ನಿನ್ನ ಬೇರೆ ಪ್ರಿಯಕರನಂತಲ್ಲ, ಪ್ರಿಯೆ” ಎನ್ನುವ ಕವನ. ಇವೆಲ್ಲವನ್ನು ಇತ್ತೀಚಿಗಷ್ಟೆ ಅನುವಾದಿಸಿದ್ದು.

    ನಾನು ಏನನ್ನೇ ಅನುವಾದಿಸಲಿ ಅದು ಕನ್ನಡದ್ದು ಎನ್ನುವಷ್ಟರಮಟ್ಟಿಗೆ ಅನುವಾದಿಸಬೇಕೆಂಬುದು ನನ್ನಾಸೆ. ಮೊದಲಿಗೆ ನಾನು ಅನುವಾದಿಸಬೇಕಾದ್ದನ್ನು ಐದಾರು ಬಾರಿಯಾದರೂ ಓದುತ್ತೇನೆ. ಹಾಗೆ ಓದುವಾಗ ಹೊಳೆಯುವ ಪದಗಳನ್ನು, ಸಾಲುಗಳನ್ನು ಒಂದೆಡೆ ನೋಟ್ ಮಾಡಿಕೊಳ್ಳುತ್ತೇನೆ. ಆನಂತರ ಮೊದಲು ಇಂಗ್ಲೀಷನಿಂದ ಕನ್ನಡಕ್ಕೆ ಅನುವಾದಿಸುತ್ತೇನೆ. ತದನಂತರ ಕನ್ನಡದಿಂದ ಕನ್ನಡಕ್ಕೆ ಅನುವಾದಿಸುತ್ತಾ ಬರುತ್ತೇನೆ. ನಾನು ಅನುವಾದಿಸುವಾಗ ಇದು ಕನ್ನಡದ್ದೇ ಅನಿಸುವಷ್ಟರಮಟ್ಟಿಗೆ ಅನುವಾದಿಸಲು ಪದಗಳಿಗಾಗಿ, ಸಾಲುಗಳಿಗಾಗಿ ತಡಕಾಡುತ್ತೇನೆ. ಮತ್ತೆ ಮತ್ತೆ ಪ್ರಯತ್ನಿಸುತ್ತೇನೆ. ತೀರ ಆಗದೇ ಹೋದಾಗ ಭಾವಾನುವಾದ ಮಾಡಲು ಪ್ರಯತ್ನಿಸುತ್ತೇನೆ. ಅದೂ ಆಗದಿದ್ದರೆ ಮೂಲ ಅರ್ಥಕ್ಕೆ ಧಕ್ಕೆಯಾಗದಂತೆ ರೂಪಾಂತರಿಸಲು ನೋಡುತ್ತೇನೆ. ಇದ್ಯಾವುದು ಫಲಿಸದೇ ಹೋದಾಗ ಕೈ ಬಿಡುತ್ತೇನೆ. ಕೆಲವು ಸಾರಿ ಇದನ್ನು ಅನುವಾದಿಸಲಾಗುವದಿಲ್ಲವೆಂದುಕೊಂಡು ಅರ್ಧಂಬರ್ಧ ಅನುವಾದಿಸಿ ನಿಲ್ಲಿಸಿಬಿಟ್ಟಿರುತ್ತೇನೆ. ನಂತರ ಅದನ್ನೇ ಅದ್ಭುತ ಎನಿಸುವಷ್ಟರಮಟ್ಟಿಗೆ ಅನುವಾದಿಸಿರುತ್ತೇನೆ. ಅನುವಾದ ಎನ್ನುವದು ಕೂದಲನ್ನು ಸೀಳಿದಷ್ಟೆ ಕಠಿಣವಾದ ಕೆಲಸ ಎಂದು ಬಹಳಷ್ಟು ಜನ ಹೇಳುವದನ್ನು ನಾನು ಕೇಳಿದ್ದೇನೆ. ಆದರೆ ಇದುವರೆಗೂ ನನಗೆ ಈ ರೀತಿ ಅನಿಸಿಯೇ ಇಲ್ಲ. ಬಹುಶಃ ನಾನಿನ್ನೂ ದೊಡ್ಡ ದೊಡ್ದ ಗ್ರಂಥಗಳನ್ನು ಅನುವಾದಿಸಲು ಕೈ ಹಾಕದೆ ಇರುವದರಿಂದ ಈ ರೀತಿ ಅನಿಸಿಲ್ಲವೋ ಏನೋ ಗೊತ್ತಿಲ್ಲ! ಮುಂದೆ ಅನಿಸಿದರೂ ಅನಿಸಬಹುದು.

    ಹೀಗೆ ದಿನದಿಂದ ದಿನಕ್ಕೆ ನನ್ನ ಬರವಣಿಗೆ ಪ್ರಬುದ್ಧತೆಯನ್ನು ಪಡೆದುಕೊಳ್ಳುತ್ತಿತ್ತು. ಆದರೂ ಯಾವ ಪತ್ರಿಕೆಗೂ ಕಳಿಸಲಿಲ್ಲ. ಏಕೋ ನಾನು ಕಳಿಸಿದ್ದು ಪ್ರಕಟವಾಗುತ್ತನೇ ಇರಲಿಲ್ಲ. ಒಂದು ಸಾರಿ ನಮ್ಮ ಕಾಲೇಜಿನ ಮ್ಯಾಗಜೀನಲ್ಲಿ ನನ್ನ ಎರಡು ಅನುವಾದಿತ ಕವನಗಳು ಪ್ರಕಟವಾದವು. ಇದನ್ನು ನೋಡಿ ನಮ್ಮ ಕನ್ನಡ ಅಧ್ಯಾಪಕಿ ಶ್ರೀಮತಿ ಚಂದ್ರಕಾಂತವರು (“ಬತ್ತದ ತೊರೆ” ಬ್ಲಾಗ್ ಒಡತಿ) “ಚನ್ನಾಗಿ ಬರೆದಿದ್ದೀರಿ, ಬರೆಯುತ್ತಿರಿ” ಎಂದು ಹೇಳಿದರು. ಆಕೆ ಅದಾಗಲೇ ಪತ್ರಿಕೆಗಳಲ್ಲಿ ಕತೆ, ಹಾಸ್ಯ ಲೇಖನಗಳನ್ನು ಬರೆದು ಹೆಸರಾಗಿದ್ದರು. ನಾನು ಅವರ ಮಾತಿಗೆ ಹೂಂಗುಟ್ಟಿ ಸುಮ್ಮನಾಗಿದ್ದೆ. ಇವರಲ್ಲದೆ ನನ್ನ ಹೆಂಡತಿ “ಬರಿ ಅನುವಾದಿಸುವದನ್ನು ಬಿಟ್ಟು ಏನಾದರು ಬರೆಯಿರಿ” ಎಂದು ಸಲಹೆ ಕೊಟ್ಟಾಗ ಹಗುರವಾಗಿ ತೆಗೆದುಕೊಂಡಿದ್ದೆ.

    ನಾನು ಲಿಬಿಯಾಗೆ ಬಂದ ಮೇಲೆ ಇಲ್ಲಿ ಸಾಕಷ್ಟು ಸಮಯವಿರುತ್ತಿತ್ತು. ಭಾರತದಲ್ಲಿರುವಂತೆ ಇಲ್ಲಿ ತರಗತಿಗಳು ಮುಗಿದ ಮೇಲೂ ಕಾಲೇಜಿನಲ್ಲಿಯೇ ಉಳಿಯುವ ಅವಶ್ಯಕತೆಯಿರಲಿಲ್ಲ. ಹೀಗಾಗಿ ಸಾಕಷ್ಟು ಸಮಯ ಸಿಗುತ್ತಿತ್ತು. ಈ ಬಿಡುವಿನ ಸಮಯವನ್ನು ಹೇಗೆ ಕಳೆಯುವದು ಎಂದು ಯೋಚಿಸುತ್ತಿದ್ದಾಗಲೇ ನಾನು ಮತ್ತೆ ಅನುವಾದದಲ್ಲಿ ತೊಡಗಿಕೊಂಡೆ. ಈ ಸಂದರ್ಭದಲ್ಲಿಯೇ ನಾನು ಸಾಕಷ್ಟು ಕವನಗಳನ್ನು ಅನುವಾದಿಸಿಟ್ಟೆ. ಆದರೆ ಲೇಖನಗಳನ್ನು ಬರೆಯುವದನ್ನಾಗಲಿ, ಅಥವಾ ಗದ್ಯವನ್ನು ಬರೆಯುವದನ್ನಾಗಲಿ ಮಾಡಿರಲಿಲ್ಲ. ಈ ಸಾರಿ ರಜೆಯ ಮೇಲೆ ಬೆಂಗಳೂರಿಗೆ ಬಂದಾಗ ಸ್ನೇಹಿತ ರಾಘುನನ್ನು ಭೇಟಿ ಮಾಡಲು ಉಡುಪಿಗೆ ಹೋಗಿದ್ದೆ. ಅಲ್ಲಿ ಈಗಾಗಲೆ ನಾನು ಸ್ನೇಹಿತನಿಗೆ ಬರೆದ ಪತ್ರಗಳನ್ನು ಓದಿ ಮೆಚ್ಚಿಕೊಂಡಿದ್ದ ಅವನ ಹೆಂಡತಿ “ನಿಮಗೆ ಹೇಗೂ ಸಾಕಷ್ಟು ಫ್ರಿ ಟೈಂ ಇರುತ್ತಲ್ಲ. ಏನಾದರು ಯಾಕೆ ಬರೆಯಬಾರದು?” ಎಂದು ಹೇಳಿದರು. ಅದೇಕೋ ಈ ವಿಷಯ ಈ ಸಾರಿ ನನ್ನ ತಲೆಹೊಕ್ಕು ಕೊರೆಯತೊಡಗಿತು. ಅಲ್ಲಿಂದ ಬರುವಾಗ ಇನ್ನುಮುಂದೆ ನನ್ನ ಬಿಡುವಿನ ವೇಳೆಯಲ್ಲಿ ಸಾಕಷ್ಟು ಬರೆಯಬೇಕು ಎಂದು ತೀರ್ಮಾನಿಸಿಕೊಂಡೇ ಬಂದೆ. ಬರುವಾಗ ನನ್ನ ಭಾವ ಮೈದುನ ಮತ್ತು ನನ್ನ ಅಣ್ಣ ಇವರಿಬ್ಬರೂ ಒಂದಿಷ್ಟು ಆನ್ ಲೈನ್ ಪತ್ರಿಕೆಗಳ ವಿಳಾಸವನ್ನು ಕೊಟ್ಟರು. ಬಂದ ಮೇಲೆ ತಕ್ಷಣ ಕಾರ್ಯೋನ್ಮುಖನಾಗಿ ಬರೆಯುತ್ತಾ ಬಂದೆ.

    ನಾನು ಬರೆದ ಪದ್ಯಗಳನ್ನು ಕೆಂಡ ಸಂಪಿಗೆಗೆ ಕಳಿಸಿದೆ. ಅದೇಕೋ ಪ್ರಕಟವಾಗಲಿಲ್ಲ. ಆನಂತರ ಸಂಪದದ ಮೊರೆಹೊಕ್ಕೆ. ಅಲ್ಲಿ ನಾವು ನಾವೇ ಬರೆದು ಪ್ರಕಟಿಸಬಹುದಾಗಿದ್ದರಿಂದ ಸಂಪಾದಕರ ಮರ್ಜಿಗೆ ಕಾಯುವಂತಿರಲಿಲ್ಲ. ಪರಿಣಾಮವಾಗಿ ಅಲ್ಲೊಂದಿಷ್ಟು ನನ್ನ ಲೇಖನಗಳು, ಪದ್ಯಗಳು ವಿಜೃಂಭಿಸಿದವು. ನಾನು ಈ ಮೊದಲು ಬ್ಲಾಗ್ ಬಗ್ಗೆ ಕೇಳಿದ್ದೆನಾದರು ಅದನ್ನು ಹೇಗೆ ಓಪನ್ ಮಾಡುವದೆಂದು ಗೊತ್ತಿರಲಿಲ್ಲ. ನಿಧಾನವಾಗಿ ಬ್ರೌಸ್ ಮಾಡುತ್ತಾ ಮಾಡುತ್ತಾ ಎಲ್ಲವನ್ನೂ ಕಲಿತುಕೊಂಡು ಡಿಸೆಂಬರ್ ೨೪, ೨೦೦೮ ರಂದು ನನ್ನದೇ ಒಂದು ಬ್ಲಾಗ್ ಓಪನ್ ಮಾಡಿದೆ. ಅಂದೇ ಗೆಳೆಯ ಮಂಜುವಿನ ಹುಟ್ಟು ಹಬ್ಬವಾಗಿದ್ದರಿಂದ ಈ ಹಿಂದೆ ಅವನ ಹುಟ್ಟು ಹಬ್ಬಕ್ಕೆಂದು ಉಡುಗೊರೆಯಾಗಿ ಕೊಟ್ಟ ಕವನವನ್ನೇ ಪ್ರಕಟಿಸುವದರ ಮೂಲಕ ಬ್ಲಾಗ್ ಲೋಕಕ್ಕೆ ಕಾಲಿಟ್ಟೆ. ಅದರಿಂದಾಚೆ ಬಹಳಷ್ಟು ಪದ್ಯಗಳನ್ನು ಬರೆಯುತ್ತಾ ಬಂದೆ. ಒಬ್ಬೊಬ್ಬರಾಗಿ ಬ್ಲಾಗ್ ಗೆಳೆಯರು ಪರಿಚಯವಾಯಿತು. ಅವರ ಬ್ಲಾಗಿಗೆ ಭೇಟಿ ಕೊಟ್ಟು ಅವರ ಲೇಖನಗಳನ್ನು ಓದಿದೆ. ಸ್ಪೂರ್ತಿಗೊಂಡು ನಾನು ಯಾಕೆ ಲೇಖನಗಳನ್ನು ಬರೆದು ನೋಡಬಾರದು ಎನಿಸಿ ಆರಂಭಿಸಿಯೇ ಬಿಟ್ಟೆ. ಅಲ್ಲಿಯವರೆಗೆ ಬರಿ ಕವನಕ್ಕಷ್ಟೆ ಸೀಮಿತವಾಗಿದ್ದ ನನ್ನ ಬರವಣಿಗೆ ನಿಧಾನವಾಗಿ ಲೇಖನಗಳಿಗೂ ವಿಸ್ತಾರಗೊಂಡಿತು. ಮೊದಲು ಬೇಂದ್ರೆಯವರ “ಹುಬ್ಬಳ್ಳಿಯಾಂವಾ” ಕವನದ ಮೇಲೆ ಬರೆದೆ. ಆನಂತರ “ಇಲ್ಲಿ ಎಲ್ಲವೂ ಒಬಾಮಯವಾಗುತ್ತಿದೆ” ಹಾಗೂ “ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?” ಎನ್ನುವ ಲೇಖನಗಳನ್ನು ಬರೆದೆ. “ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?” ಎನ್ನುವ ಲೇಖನವನ್ನು ”ದ್ಯಾಟ್ಸ್ ಕನ್ನಡ” ಕ್ಕೆ ಕಳಿಸಿಕೊಟ್ಟೆ. ಎರಡೇ ದಿನದಲ್ಲಿ ಸಂಪಾದಕರಿಂದ “Good stuff! Glad to publish.” ಎನ್ನುವ ಈಮೇಲ್ ಬಂತು. ಕುಣಿದು ಕುಪ್ಪಳಿಸಬಿಟ್ಟೆ. ಏಕೆಂದರೆ ಸಂಪಾದಕರೊಬ್ಬರು ಮೊಟ್ಟ ಮೊದಲ ಬಾರಿಗೆ ನನ್ನ ಲೇಖನವನ್ನು ಮೆಚ್ಚಿಕೊಂಡು ಪಕಟಿಸುತ್ತಿರುವದು ಇದೇ ಮೊದಲ ಬಾರಿಯಾಗಿತ್ತು. ಅಲ್ಲಿಂದ ಆತ್ಮವಿಶ್ವಾಸ ಮೂಡಿ ಒಂದೊಂದಾಗಿ ಬರೆಯುತ್ತಾ ಬಂದೆ. ನೋಡ ನೋಡುತ್ತಿದ್ದಂತೆ ನನ್ನೊಳಗಿನ ಬರಹಗಾರ ಬೆಳೆದೇ ಬಿಟ್ಟ! ಮೆಲ್ಲಗೆ ಬೇರೆ ಬರಹಗಾರರ ಒಡನಾಟಕ್ಕೆ ಬಂದು ಅವರ ಬಳಗಕ್ಕೂ ಸೇರಿಕೊಂಡುಬಿಟ್ಟೆ!

    ನಾನು ಮೊದಲೇ ಹೇಳಿದಂತೆ ಬರಹ ಎನ್ನುವದು ಒಂದು ಸಹಜ ಪ್ರಕ್ರಿಯೆ. ಅದು ಜಿನುಗುತ್ತಾ ಜಿನುಗುತ್ತಾ ಹೊಳೆಯಾಗಿ ಹರಿಯುತ್ತದೆ! ಬರೆಯುತ್ತಾ ಬರೆಯುತ್ತಾ ಬಲಗೊಳ್ಳುತ್ತದೆ! ಹಾಗೆ ಹೊಳೆಯಾಗಿ ಹರಿಸುವದು, ಬಲಗೊಳ್ಳಿಸುವದು ಎಲ್ಲ ನಮ್ಮ ಕೈಯಲ್ಲಿದೆ. ಸ್ವಲ್ಪ ಅಭಿರುಚಿ, ಪ್ರಯತ್ನ, ಶ್ರದ್ಧೆ, ಜೊತೆಗೆ ಬರೆಯುವ ಮನಸ್ಸಿದ್ದರೆ ಏನು ಬೇಕಾದರು ಬರೆಯಬಹುದು. ಅದಕ್ಕೆ ನಾನೇ ಸಾಕ್ಷಿ!

    ನಾನೇಕೆ ಬರೆಯುತ್ತೇನೆ? ಈ ಪ್ರಶ್ನೆಗೆ ವನ್ಸ್ ಅಗೇನ್ ಇಂತಿಂಥದೇ ಅಂತ ಸ್ಪಷ್ಟವಾದ ಕಾರಣ ನನಗೆ ಗೊತ್ತಿಲ್ಲ! ನನಗನಿಸಿದ್ದನ್ನು, ಅನುಭವಿಸಿದ್ದನ್ನು, ಕಂಡಿದ್ದನ್ನು, ಕೇಳಿದ್ದನ್ನು, ಇಷ್ಟವಾಗಿದ್ದನ್ನು ಬರೆಯುತ್ತಾ ಹೋಗುತ್ತೆನೆ. ಆ ಮೂಲಕ ಒಮ್ಮೆ ಬರೆದು ಹಗುರಾಗುತ್ತೇನೆ. ಬರೆಯುವಾಗ ಪ್ರೀ ರೈಟಿಂಗ್, ರೀ ರೈಟಿಂಗ್, ಎಡಿಟಿಂಗ್ ಎಂದೆಲ್ಲಾ ಏನೇನೋ ಸರ್ಕಸ್ ಮಾಡಿ ಲೇಖನವೊಂದನ್ನು ಸಿದ್ಧಪಡಿಸುವಷ್ಟೊತ್ತಿಗೆ ಸಾಕು ಸಾಕಾಗಿರುತ್ತದೆ. ಆದರೂ ಬರಹವನ್ನು ಬಿಡಲಾರೆ. ಅದನ್ನು ಪ್ರೀತಿಸುವದನ್ನು ನಿಲ್ಲಿಸಲಾರೆ. ಇದೀಗ ಬರಹಕ್ಕೂ ನನಗೂ ಎಂಥ ಗಾಢ ಸಂಬಂಧ ಬೆಳೆದಿದೆಯೆಂದರೆ ಬರೆಯದೆ ಹೋದರೆ ನಾನಿಲ್ಲ, ನಾನಿಲ್ಲದೆ ಹೋದರೆ ಬರಹವಿಲ್ಲ ಎಂದೆನಿಸಿಬಿಟ್ಟಿದೆ. ಬರೆಯದೆ ಹೋದರೆ ಏನನ್ನೋ ಕಳೆದುಕೊಂಡಿರುವೆನೇನೋ ಅನಿಸುತ್ತದೆ. ಆ ನಿಟ್ಟಿನಲ್ಲಿ ನಾನಿನ್ನೂ ಬರೆಯುವದು ಬಹಳಷ್ಟಿದೆ. ಅನುವಾದಿಸುವದು ಸಾಕಷ್ಟಿದೆ. ಬರೆಯಬೇಕು ನನ್ನೆದೆ ಕದವ ತೆರೆದು. ಬರೆಯಲೇಬೇಕು ನನಗನಿಸಿದ್ದನ್ನು, ಕೇಳಿದ್ದನ್ನು, ಕಂಡಿದ್ದನ್ನು ಹಾಗೂ ನಾನಭವಿಸಿದ್ದನ್ನು. ಆ ಮೂಲಕ ನನ್ನೊಳಗನ್ನು ಉಚ್ಛಾಟಿಸಬೇಕು, ತೆರೆದುಕೊಳ್ಳಬೇಕು. ಬರಹದಲ್ಲಿ ಒಮ್ಮೆ ಎಲ್ಲವನ್ನೂ ಬಿಚ್ಚಿ ಬೆತ್ತಲಾಗಬೇಕು, ಬೆತ್ತಲಾಗಿಸಬೇಕು, ಮುಖವಾಡಗಳನ್ನು ಕಳಚಿಟ್ಟು ಒಮ್ಮೆ ಎಲ್ಲವನ್ನೂ ಬರೆದು ಹಗುರಾಗಬೇಕು. ನಾ ಅಂದುಕೊಂಡಂತೆ, ನಾನಿರುವಂತೆ, ನಾ ಬದುಕಿದಂತೆ ಎಲ್ಲವನ್ನೂ ಬರೆಯಬಲ್ಲೆನೆ? ಹಾಗೆ ಬರೆದು ದಕ್ಕಿಸಿಕೊಳ್ಳುವ ತಾಕತ್ತು ನನಗಿದೆಯೇ? ಅದು ಸಾಧ್ಯವೆ? ಸುಲಭವೆ? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.
    -ಉದಯ ಇಟಗಿ

    -ಉದಯ ಇಟಗಿ
    ಚಿತ್ರ ಕೃಪೆ : www.flickr.com

    ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಭಾಗ-೨

  • ಶನಿವಾರ, ಏಪ್ರಿಲ್ 18, 2009
  • ಬಿಸಿಲ ಹನಿ
  • ನನಗೆ ಮೊದಲಿನಿಂದಲೂ ಹೇಳಿಕೊಳ್ಳುವಂಥ ಬರೆಯುವ ತುಡಿತವೇನೂ ಇರಲಿಲ್ಲ. ಆದರೆ ಓದುವ ತುಡಿತಕ್ಕೆ ಏನೂ ಕೊರತೆಯಿರಲಿಲ್ಲ. ಕತೆ, ಕಾದಂಬರಿಗಳನ್ನು ಓದುತ್ತಲೇ ಇರುತ್ತಿದ್ದೆ. ಒಂದೊಂದು ಸಾರಿ ಮನೆಯವರಿಂದ “ಬರಿ ಕತೆ, ಕಾದಂಬರಿ ಓದಿದರೆ, ಪಠ್ಯಪುಸ್ತಕಗಳನ್ನು ಓದೋದು ಯಾವಾಗ?” ಎಂದು ಬೈಸಿಕೊಂಡಿದ್ದಿದೆ. ಹಾಗೆ ನೋಡಿದರೆ ನಾನು ಮೊಟ್ಟ ಮೊದಲಿಗೆ ಬರೆದಿದ್ದು ತೀರ ಆಕಸ್ಮಿಕವಾಗಿ. ಅಲ್ಲಿ ಯಾವುದೇ ಪೂರ್ವಯೋಜನೆಗಳಾಗಲಿ, ಸಿದ್ಧತೆಗಳಾಗಲಿ ಇರಲಿಲ್ಲ. ನನಗಿನ್ನೂ ಚನ್ನಾಗಿ ನೆನಪಿದೆ. ನಾನು ಮೊಟ್ಟಮೊದಲಿಗೆ ಬರೆದಿದ್ದು “ಮಳೆ” ಎನ್ನುವ ಕವನವನ್ನು. ಅದು ನಾನು S.S.L.C ಓದುತ್ತಿರಬೇಕಾದರೆ ಬರೆದಿದ್ದು. ಮಳೆಗಾಲದ ಒಂದು ದಿನ ಯಾವುದೋ leisure period ಇತ್ತು. ಕ್ಲಾಸ್ ರೂಮಿನಲ್ಲಿ ಕುಳಿತಂತೆ ಹೊರಗೆ ಮಳೆ ಹುಯ್ಯತೊಡಗಿತು. ಮೆಲ್ಲಗೆ ಮಳೆಮಣ್ಣಿನ ವಾಸನೆ ಮೂಗಿಗೆ ಅಡರಲಾರಂಭಿಸಿತು. ತಕ್ಷಣ ಅದೇನನ್ನಿಸಿತೋ ಗೊತ್ತಿಲ್ಲ ನೋಟ್ ಪುಸ್ತಕದ ಕೊನೆಯಲ್ಲಿ “ಹುಯ್ಯಿತು ಮಳೆ/ತೊಳೆಯಿತು ಕೊಳೆ” ಎಂದೇನೋ ಬಾಲಿಶವಾಗಿ ಬರೆದಿಟ್ಟೆ. ಆಮೇಲೆ ಅದನ್ನು ಮರೆತೂಬಿಟ್ಟೆ! ನಂತರ ಅದೆಲ್ಲಿ ಕಳೆದುಹೋಯಿತೋ ಗೊತ್ತಿಲ್ಲ. ಪುನಃ ಎರಡು ತಿಂಗಳು ಕಳೆದ ಮೇಲೆ ನಾನು ಬರೆದಿದ್ದನ್ನೇ ಜ್ಞಾಪಿಸಿಕೊಂಡು ಮತ್ತೆ ಅದೇ ಕವನವನ್ನು ಬರೆದೆ. ಈ ಸಾರಿ ಮುಂಚೆಗಿಂತ ಪರ್ವಾಗಿಲ್ಲ ಎನ್ನುವಷ್ಟರಮಟ್ಟಿಗೆ ಬರೆದಿದ್ದೇನೆಂದು ಅನಿಸುತಿತ್ತು. ಆದರೆ ಬಾಲಿಶತನ ಇನ್ನೂ ಮಾಯವಾಗಿರಲಿಲ್ಲ. ನಂತರ “ಹೊಸವರ್ಷ” ಎನ್ನುವ ಕವನವನ್ನು ಹಾಗು ಒಂದೆರಡು ಚುಟುಕುಗಳನ್ನು ಬರೆದೆನಂದು ಕಾಣುತ್ತದೆ. ಬರೆದಿದ್ದನ್ನು ಯಾಕೆ ಸಂಗ್ರಹಿಸಿಡಬಾರದೆಂದೆನಿಸಿ ನಾನು ಬರೆದ ಕವನಗಳನ್ನು ಒಂದೆಡೆ ಸಂಗ್ರಹಿಸಡತೊಡಗಿದೆ. ಆಮೇಲೆ ಪರೀಕ್ಷೆ ಅದು ಇದೂಂತಾ ಆಗಾಗ ಏನನ್ನೋ ಗೀಚಿಡುವದು ಕೂಡ ನಿಂತುಹೋಯಿತು. ನಮ್ಮ ಓದಿನ ಅವಧಿ ಮುಗಿಯುತ್ತಿದ್ದಂತೆ ನಾವೆಲ್ಲಾ ಸಹಪಾಠಿಗಳಿಂದ “ಆಟೋಗ್ರಾಫ್” ತೆಗೆದುಕೊಳ್ಳುವದು ಪರಿಪಾಠವಷ್ಟೆ? ಹೀಗಿರಬೇಕಾದರೆ ನನ್ನ ಸಹಪಾಠಿಯೊಬ್ಬಳು ಆಟೋಗ್ರಾಫ್ ಕೊಟ್ಟಳು. ಅದರಲ್ಲಿ “What do you want to become in future?” ಎನ್ನುವ ಕಾಲಂ ಇತ್ತು. ಎಲ್ಲರೂ ಡಾಕ್ಟರ್, ಇಂಜಿನೀಯರ್ ಅಂತ ಏನೇನೋ ಬರೆದಿದ್ದರೆ ನಾನು ಮಾತ್ರ ನನಗೆ ಅರಿವಿಲ್ಲದಂತೆ “writer” ಆಗುತ್ತೇನೆ ಎಂದು ಬರೆದುಕೊಟ್ಟಿದ್ದೆ. ಇದನ್ನು ನಾನು ಅಳೆದು ತೂಗಿ ಸಾಕಷ್ಟು ಯೋಚಿಸಿ ಬರೆದದ್ದಲ್ಲ. ಆಗ ತಾನೆ ಏನೇನೋ ಬರೆಯಲು ಆರಂಭಿಸಿದ ಹುಮ್ಮುಸ್ಸಿನಲ್ಲಿ ಬರೆದು ಕೊಟ್ಟಿದ್ದು.

    ನಾನು ಮುಂದೆ P.U.C. ವ್ಯಾಸಂಗಕ್ಕಾಗಿ ಧಾರವಾಡದ ಕಿಟ್ಟೆಲ್ ಸಾಯಿನ್ಸ್ ಕಾಲೇಜನ್ನು ಸೇರಿದೆ. ಅಲ್ಲಿ ನಮ್ಮದೇ ಕಾಲೇಜಿನ ಆರ್ಟ್ಸ್ ವಿಭಾಗದಲ್ಲಿ ದ.ರಾ.ಬೇಂದ್ರೆಯವರ ಮಗ ವಾಮನ ಬೇಂದ್ರೆಯವರು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಅವರ ಶಿಫಾರಸ್ಸಿನಡಿ ಪ್ರತಿವಾರವೂ ಒಬ್ಬೊಬ್ಬ ವಿದ್ಯಾರ್ಥಿಯ ಕವನವು ನೋಟಿಸ್ ಬೋರ್ಡಿನ ಮೇಲೆ ಕಂಗೊಳಿಸುತ್ತಿತ್ತು. ಇದನ್ನು ನೋಡಿ ನಾನೂ ಏಕೆ ಬರೆಯಬಾರದು ಎನ್ನುವ ತುಡಿತ ಮತ್ತೆ ತೀವ್ರವಾಯಿತು. ಆದರೆ ಹಾಗೆ ಬರೆದು ನೋಟಿಸ್ ಬೋರ್ಡಿನ ಮೇಲೆ ಹಾಕುವ ಅವಕಾಶ ಆರ್ಟ್ಸ್ ವಿದ್ಯಾರ್ಥಿಗಳಿಗೆ ಮಾತ್ರ ಇದ್ದುದರಿಂದ ನನ್ನ ಈ ತುಡಿತ ತಣ್ಣಗಾಯಿತು. ಇದನ್ನು ಬಿಟ್ಟರೆ ಕಾಲೇಜು ಮ್ಯಾಗಜೀನ್ಗೆ ಬರೆಯುವ ಅವಕಾಶವಿತ್ತಾದರೂ ನಾನು ಬರೆಯುವ ಕವನಗಳು ಗುಣಮಟ್ಟದಲ್ಲಿ ಹೇಳಿಕೊಳ್ಳುವಂಥ ವಾಗಿರಲಿಲ್ಲವಾದ್ದರಿಂದ ಬಹುಶಃ ಪ್ರಕಟವಾಗಲಾರವು ಎಂದು ನನ್ನಷ್ಟಕ್ಕೆ ನಾನೇ ಕಲ್ಪಿಸಿಕೊಂಡು ಅವುಗಳನ್ನು ಕಳಿಸಲು ಹೋಗುತ್ತಿರಲಿಲ್ಲ. ಈ ಮಧ್ಯ ನಾನು ಬರೆಯುವದು ಅಷ್ಟು ಚನ್ನಾಗಿಲ್ಲ ಹಾಗು ಬರವಣಿಗೆ ನನಗೆ ಒಗ್ಗದು ಎಂದುಕೊಂಡು ಬರೆಯುವದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ನಾನು ವಿಜ್ಞಾನವನ್ನು ಬಲವಂತವಾಗಿ ತೆಗೆದುಕೊಂಡಿದ್ದರಿಂದ ಅದರಲ್ಲಿ ಎಳ್ಳಷ್ಟೂ ಆಸಕ್ತಿಯಿರಲಿಲ್ಲ. ಹೀಗಾಗಿ ಕ್ಲಾಸುಗಳನ್ನು ತಪ್ಪಿಸಿ ಧಾರವಾಡದ ವಿದ್ಯಾವರ್ಧಕ ಸಂಘದ ವಾಚನಾಲಯದಲ್ಲಿ ಕತೆ ಕಾದಂಬರಿಗಳನ್ನು ಓದತೊಡಗಿದೆ. ಕಾವ್ಯವೆಂದರೆ ಅಷ್ಟಕ್ಕಷ್ಟೆ. ಆದರೆ ಭಾವಗೀತೆಗಳನ್ನು ಪ್ರೀತಿಯಿಂದ ಕೇಳುತ್ತಿದ್ದೆ. ಮೊದಲಿನಿಂದಲೂ ನಮ್ಮ ಪಠ್ಯಪುಸ್ತಕದಲ್ಲಿನ ಕವನಗಳನ್ನು ಬಿಟ್ಟರೆ ನಾನು ಯಾವತ್ತೂ ಬೇರೆ ಕವನಗಳನ್ನು ಓದಿದ್ದಿಲ್ಲ. ಅವು ನಿಜಕ್ಕೂ ನನ್ನ ಗ್ರಹಿಕೆಗೆ ನಿಲುಕುತ್ತಿರಲಿಲ್ಲವೋ ಅಥವಾ ಕಾವ್ಯವನ್ನು ಓದಿ ಅರ್ಥಮಾಡಿಕೊಳ್ಳುವಷ್ಟು ನನ್ನ ಬುದ್ಧಿಮಟ್ಟ ಬೆಳೆದಿರಲಿಲ್ಲವೋ ನನಗೆ ಗೊತ್ತಿಲ್ಲ. ಅಚ್ಚರಿಯೆಂದರೆ ನನ್ನ ಮೊದಲ ಬರವಣಿಗೆ ಶುರುವಾಗಿದ್ದೇ ಕವನ ಬರೆಯುವದರ ಮೂಲಕ ಹಾಗೂ ನನ್ನ ಮುಂಚಿನ ಬರವಣಿಗೆ ಬರಿ ಕವನ ಬರೆಯುವದಕ್ಕಷ್ಟೆ ಸೀಮಿತವಾಗಿತ್ತು. ಕೆಲವರು ಹೇಳುತ್ತಾರೆ-ಕವನ ಬರೆಯುವದಕ್ಕೆ ಸಾಕಷ್ಟು ಕವಿಗಳನ್ನು ಓದಿಕೊಂಡಿರಬೇಕು, ಅಧ್ಯಯನಶೀಲರಾಗಿರಬೇಕು ಹಾಗೆ ಹೀಗೆ ಎಂದು. ಆದರೆ ನಾನೂ ಇದ್ಯಾವುದನ್ನು ಒಪ್ಪುವದಿಲ್ಲ. ಏಕೆಂದರೆ ನಾನು ಬಿ.ಎ ಹಾಗೂ ಎಮ್.ಎ ತರಗತಿಗಳಲ್ಲಿ ಇಂಗ್ಲೀಷ ಕಾವ್ಯವನ್ನು ಶಿಸ್ತುಬದ್ಧವಾಗಿ ಅಭ್ಯಸಿಸುವದು ಅನಿವಾರ್ಯವಾಗಿದ್ದರಿಂದ ಅದನ್ನು ಆಳವಾಗಿ ಅಧ್ಯಯನ ಮಾಡಿದಷ್ಟು ಯಾವತ್ತೂ ಕನ್ನಡ ಕಾವ್ಯವನ್ನು ಶಿಸ್ತುಬದ್ಧವಾಗಿ ಅಧ್ಯಯನ ಮಾಡಲೇ ಇಲ್ಲ. ಆದರೂ ಕಾವ್ಯದಿಂದಲೇ ನನ್ನ ಬರವಣಿಗೆ ಶುರುವಾಯಿತೆಂದರೆ ನನಗೆ ಈಗಲೂ ನಂಬಲಿಕ್ಕೆ ಆಗುವದಿಲ್ಲ! ಹೀಗಾಗಿ ಕಾವ್ಯವೊಂದನ್ನೇ ಅಲ್ಲ ಏನೇ ಬರೆಯಲು ಜೀವನಾನುಭವ ಹಾಗು ಭಾಷೆಯ ಮೇಲೆ ಹಿಡಿತವಿದ್ದರೆ ಸಾಕು, ಅದ್ಭುತವಾದದ್ದು ತಾನೇ ತಾನಾಗಿ ಹರಿದು ಬರುತ್ತದೆ.

    ನನಗೆ ವಿಜ್ಞಾನದಲ್ಲಿ ಆಸಕ್ತಿಯಿಲ್ಲದ ಪರಿಣಾಮವಾಗಿ P.U.C.ಯಲ್ಲಿ ಫೇಲಾಗಿ ಮುಂದಿನ ಎರಡು ವರ್ಷ ನನ್ನ ಬದುಕು ದುಸ್ತರವಾಯಿತು. ಆಗ ಮತ್ತೆ ಬರೆಯತೊಡಗಿದೆ. ಏಕೆ ಬರೆಯತೊಡಗಿದೆ ಎಂದು ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಈ ಸಲ ಸ್ವಲ್ಪ ಗಂಭೀರವಾಗಿಯೇ ಬರೆಯತೊಡಗಿದೆ. ಆಗ ಮೊದಲಿಗಿಂತ ನನ್ನ ಬರವಣಿಗೆ ಸುಧಾರಿಸಿದೆ ಎಂದು ನನಗೇ ಅನಿಸಿದ್ದರಿಂದ ಆತ್ಮವಿಶ್ವಾಸದಿಂದ ಬರೆಯುತ್ತಾ ಹೋದೆ. ನಾನು P.U.C.ಯಲ್ಲಿರಬೇಕಾದರೆ ನಡೆದ ಬಾಬ್ರಿ ಮಸಿದಿ ಗಲಾಟೆಯ ಬಿಸಿ ಇನ್ನೂ ಆಗಾಗ ಅಲ್ಲಲ್ಲಿ ತಟ್ಟುತ್ತಿತ್ತು. ಇದನ್ನೇ ವಸ್ತುವನ್ನಾಗಿಟ್ಟುಕೊಂಡು “ಅಜ್ಜ ಮತ್ತು ನಾವು” ಎನ್ನುವ ಕವನ ಬರೆದೆ. ೧೯೯೩ರಲ್ಲಿ ಲಾತೂರ್ ಮತ್ತು ಕಿಲಾರಿ ಗ್ರಾಮಗಳಲ್ಲಿ ಭೂಕಂಪ ಸಂಭವಿಸಿ ಅಪಾರ ಸಾವು ನೋವು ಉಂಟಾಗಿ ಒಂದು ವರ್ಷ ಕಳೆದ ಮೇಲೆ ಅದರ ನೆನಪಿಗೋಸ್ಕರ “ಲಾತೂರ್ ಮತ್ತು ಕಿಲಾರಿ ಗ್ರಾಮಗಳ ಭೂಕಂಪ ದುರಂತ-ಒಂದು ನೆನಪು” ಎನ್ನುವ ಕವನವನ್ನು ಬರೆದೆ. ಇದಾದ ಮೇಲೆ “ಕಾಲೇಜು ಹುಡುಗರು”, “ಈ ಹುಡುಗಿಯರಿಗೆ” ಎನ್ನುವ ಕವನಗಳನ್ನು ಬರೆದೆ. ಈ ಮಧ್ಯ ಹದಿಹರೆಯಕ್ಕೆ ಕಾಲಿಟ್ಟ ಮೇಲೂ ಪ್ರೀತಿಸಲು ಹುಡುಗಿಯೊಂದು ಸಿಗಲಿಲ್ಲ ಎನ್ನುವ ಹಪಹಪಿಕೆಯೊಂದಿಗೆ “ಹುಡುಗಿ ನೀ ಬೇಗ ಬಾ” ಎಂದು ವಿನಂತಿಸಿಕೊಳ್ಳುತ್ತಾ ಕೆಳಗಿನ ಪದ್ಯವನ್ನು ಬರೆದೆ.
    “ಹುಡುಗಿ ನೀ ಬೇಗ ಬಾ
    ಖಾಲಿ ಖಾಲಿಯಿರುವ
    ನನ್ನ ಹೃದಯ ಖೋಲಿಯ ಕೀಲಿ
    ತೆಗೆದು ನೀ ಭದ್ರವಾಗಿ ತಳವೂರಲು...........”
    ಒಂದು ಮಧ್ಯಮರ್ಗದ ಗೃಹಸ್ಥನೋಬ್ಬನ ಆರ್ಥಿಕ ಸಂಕಷ್ಟಗಳನ್ನು ನೋಡಿ ಬೇಸತ್ತು ಹೋಗಿ ಇದನ್ನು ವಿವರಿಸಲೆಂದೇ “ಕಿರುಗುಡುವ ಮಂಚ” ಎನ್ನುವ ಕವನವನ್ನು ಬರೆದೆ. ಇದು ಆಳದಲ್ಲಿ ಮಧ್ಯಮರ್ಗದ ಗ್ರಹಸ್ಥನೊಬ್ಬನ ಆರ್ಥಿಕ ಸಂಕಷ್ಟಗಳನ್ನು ಒತ್ತಿ ವಿವರಿಸಿದರೆ ಮೇಲುನೋಟಕ್ಕೆ ಇದರಲ್ಲಿ ಲೈಂಗಿಕತೆಯ ಭಾವ ದಟ್ಟವಾಗಿದೆ ಎನಿಸುತ್ತಿತ್ತು. ಅದನ್ನು ಓದಿದ ಕೆಲವರು ನಾನೇನೋ ಮಹಾಪರಾಧ ಮಾಡಿರುವೆನೇನೋ ಎನ್ನುವ ತರ ನೋಡಿದ್ದರು. ಕೆಲವರು ನನಗಾಗ ಹದಿನೆಂಟು ದಾಟಿದ್ದರೂ ಈಗಲೇ ಬರೆಯಬಾರದಾಗಿತ್ತು ಎಂದು ಉಪದೇಶಿಸಿದ್ದರು. ಇನ್ನು ನನ್ನ ಹೈಸ್ಕೂಲು ಸ್ನೇಹಿತರು “ಏನು ಅನುಭವದಿಂದ ಬರೆದಿದ್ದಾ?” ಎಂದು ತುಂಟತನದ ಮಾತುಗಳನ್ನಾಡಿದ್ದರು. ನಾನು ನಕ್ಕು “ಅನುಭವಾನೂ ಇಲ್ಲ, ಏನೂ ಇಲ್ಲ ಬರಿ ಕಲ್ಪನೆಯಷ್ಟೆ” ಎಂದು ಹೇಳಿದ್ದೆ. ಯಾಕೆ ಜನ ಒಳಾರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರದೆ ಮೇಲುನೋಟಕ್ಕೆ ಕಂಡಿದ್ದನ್ನು ಮಾತ್ರ ಹೈಲೈಟ್ ಮಾಡುತ್ತಾರೆ? ಲೈಂಗಿಕತೆಯಂಥ ವಿಷಯವನ್ನು ಹದಿಹರೆಯದ ಹುಡುಗನೊಬ್ಬ ಬರಿ ಕಲ್ಪಿಸಿಕೊಂಡು ಬರೆದರೆ ಏನು ತಪ್ಪು? ಜನ ಏಕೆ ಅಪಾರ್ಥ ಮಾಡಿಕೊಳ್ಳಬೇಕು? ಎಂದು ನನ್ನಷ್ಟಕ್ಕೆ ನಾನೇ ಕೇಳಿಕೊಳ್ಳುತ್ತಿದ್ದೆ. ಆದರೆ ನಾನು ಬೆಳೆಯುತ್ತಾ ಹೋದಂತೆ ಭಾರತದಂಥ ದೇಶದಲ್ಲಿ ಲೈಂಗಿಕತೆಯಂಥ ವಿಷಯವನ್ನು ಯಾವಾಗಲೂ ಗುಟ್ಟಾಗಿ ಮಾತನಾಡಿ ಮುಗಿಸುವದರಿಂದ ಈ ತರದ ಪ್ರತಿಕ್ರಿಯೆಗಳು ಬರುವದು ಸರ್ವೇಸಾಮಾನ್ಯ ಎಂದು ಕಂಡುಕೊಂಡಿದ್ದೇನೆ. ಹೀಗೆ ಬರೆದಿದ್ದನ್ನು ಆಗೊಮ್ಮೆ ಈಗೊಮ್ಮೆ ನಾನೇ ಓದಿ ಖುಶಿ ಪಡುತ್ತಿದ್ದೆನೆ ಹೊರತು ಯಾವ ಪತ್ರಿಕೆಗೂ ಕಳಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಬಾಲಿಶ ಪದ್ಯಗಳನ್ನು ಯಾರು ತಾನೆ ಪ್ರಕಟಿಸಿಯಾರು?

    ಮುಂದೆ ನಾನು ಬಿ.ಎ ಓದಲು ಮಂಡ್ಯಕ್ಕೆ ಬಂದಾಗ ನನ್ನಲ್ಲಿ ಮೊಳಕೆಯೊಡೆದಿದ್ದ ಬರಹಗಾರನನ್ನು ಬೆಳೆಯುವಂತೆ ಮಾಡಿದ್ದು ನಮ್ಮ ಕನ್ನಡ ಪ್ರೊಫೆಸರಾದ ಮರಿಗೌಡರು. ಅವರ ಉತ್ತೇಜನ, ಪ್ರೋತ್ಸಾಹದಿಂದ ನಾನು ಮತ್ತೆ ಬರೆಯತೊಡಗಿದೆ. ಅವರ ತರಗತಿಯ ಕೊನೆಯಲ್ಲಿ ನಾನು ಬರೆದ ಕವನಗಳನ್ನು ಓದುವಂತೆ ಹೇಳುತ್ತಿದ್ದರು. ಆಗೆಲ್ಲಾ ಖುಶಿಯಾಗಿ ನಾನು ಬರೆದ ಕವನಗಳನ್ನು ಹೆಮ್ಮೆಯಿಂದ ಓದಿ ಹೇಳುತ್ತಿದ್ದೆ. ಹೀಗಾಗಿ ನಾನು ಕಾಲೇಜಿನಲ್ಲಿ ಬಹಳ ಬೇಗನೆ ತುಂಬಾ ಪೊಪ್ಯುಲರಾದೆ. ನಾನು ಕವನ ಬರೆಯುವ ವಿಷಯ ನಮ್ಮ ಇಂಗ್ಲೀಷ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಹೊಳ್ಳರವರ ಕಿವಿಗೂ ಬಿತ್ತು. ಈ ಕಾರಣಕ್ಕಾಗಿ ಅವರು ನಮ್ಮ ಕಾಲೇಜಿನಲ್ಲಿ ಆ ವರ್ಷವಷ್ಟೆ ಆರಂಭಿಸಿದ literary clubಗೆ ನನ್ನನ್ನು joint secretaryಯನ್ನಾಗಿ ಮಾಡಿದರು. ಹೀಗೆ ಕ್ಲಾಸ್ ರೂಮಿನಲ್ಲಿ ಕವನಗಳನ್ನು ಓದುತ್ತಿರಬೇಕಾದರೆ ಒಂದು ಸಾರಿ “ಒಂದು ಹುಡುಗಿಯ ಸ್ವಗತ” ಎನ್ನುವ ಕವನವನ್ನು ಓದಿದೆ. ಅದನ್ನು ಯಾವಾಗ ಬರೆದಿದ್ದೆನೋ ಗೊತ್ತಿಲ್ಲ! ಆದರದನ್ನು ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲದಕ್ಕೂ ಹೆಣ್ಣನ್ನು ಹೇಗೆ ಶೋಷಿಸಲಾಗುತ್ತೆ ಹಾಗೂ ಹೇಗೆ ಅವಳನ್ನು ಅಪವಾದಕ್ಕೆ ಗುರಿಮಾಡಲಾಗುತ್ತೆ ಎನ್ನುವ ಹಿನ್ನೆಲೆಯಲ್ಲಿ ಬರೆದಿದ್ದೆ. ಇದನ್ನು ಒಪ್ಪಿಕೊಳ್ಳುತ್ತಲೇ ಈ ವ್ಯವಸ್ಥೆಯ ವಿರುದ್ಧ ಹುಡುಗಿಯೋರ್ವಳು ತನ್ನದೆ ಮಾತಿನಲ್ಲಿ ಹೇಗೆ ತಣ್ಣನೆಯ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಾಳೆ ಎನ್ನುವದನ್ನು ಆ ಕವನದಲ್ಲಿ ಹರಿತವಾದ ಶಬ್ದಗಳ ಮೂಲಕ ವಿವರಿಸಿದ್ದೆ. ಇದನ್ನು ಕೇಳಿದ ಮೇಲೆ ಹುಡುಗಿಯರಂತೂ ನನ್ನನ್ನು ಬಹಳಷ್ಟು ಇಷ್ಟಪಡತೊಡಗಿದರು. ಇವರ ಮೂಲಕ ನನ್ನ ಶೀನಿಯರ್ ಹುಡುಗಿಯರಿಗೂ ಈ ವಿಷಯ ತಲುಪಿ ಅವರೆಲ್ಲ ನನ್ನ ಸ್ನೇಹಿತರಾದರು. ನನ್ನ ಪುರುಷ ಸಹಪಾಠಿಗಳೆಲ್ಲ “femnist” ಎಂದು ಕಟುಕಿಯಾಡಿದರು. ಒಂದೊಂದು ಸಾರಿ ಹುಡುಗಿಯರು ಬೇಕಂತಲೆ “ಏನು, ನಿಮ್ಮ ಮುಂದಿನ ಕವನ ಮತ್ತೆ ಹುಡುಗಿಯರ ಮೇಲೇನಾ?” ಎಂದು ಕೇಳಿ ತುಂಟನಗೆ ಬೀರುತ್ತಿದ್ದರು. ಆಗೆಲ್ಲಾ ಯೌವನದ ಸಹಜ ಪುಳಕಗಳೆದ್ದು ನನ್ನಷ್ಟಕ್ಕೆ ನಾನೇ ಪ್ರೇಮಲೋಕದಲ್ಲಿ ತೇಲಾಡಿದ್ದಿದೆ.
    -ಉದಯ ಇಟಗಿ
    ಚಿತ್ರ ಕೃಪೆ: www.flickr.com

    ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಭಾಗ-೧

  • ಮಂಗಳವಾರ, ಏಪ್ರಿಲ್ 14, 2009
  • ಬಿಸಿಲ ಹನಿ
  • “ಪ್ರತಿಯೊಬ್ಬರಲ್ಲೂ ಒಬ್ಬ ಬರಹಗಾರ ಇದ್ದೇ ಇರುತ್ತಾನೆ” ಹೀಗೆಂದು ಯಾರು ಹೇಳಿದರೋ ನನಗೆ ಗೊತ್ತಿಲ್ಲ. ಈ ಮಾತನ್ನು ನಾನು ಅಕ್ಷರಶಃ ಒಪ್ಪುತ್ತೇನೆ. ಆದರೆ ಆ ಬರಹಗಾರ ಯಾವಾಗ ಮತ್ತು ಹೇಗೆ ಮೊಳಕೆಯೊಡೆದು ಹೊರಬರುತ್ತಾನೆ ಎಂದು ಹೇಳುವದು ಸ್ವಲ್ಪ ಕಷ್ಟವೇ. ಹಾಗೂ ಅವನನ್ನು ಬೆಳೆಸುವದು ಬಿಡುವದು ಆಯಾ ವ್ಯಕ್ತಿಯ ಅಭಿರುಚಿ, ಅಭಿವ್ಯಕ್ತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಇದಲ್ಲದೆ ಬರಹಗಾರನ ಹಿನ್ನೆಲೆ, ಪರಿಸರ, ಸ್ಪೂರ್ತಿ, ಪ್ರೋತ್ಸಾಹಗಳು ಅವನ ಬೆಳೆವಣಿಗೆಗೆ ಸಾಕಷ್ಟು ಸಹಾಯಕಾರಿಯಾಗುತ್ತವೆ. ಕೆಲವರು ಮನೆಯಲ್ಲಿನ ಸಾಹಿತ್ಯಕ ವಾತಾವಾರಣದಿಂದ, ಕೆಲವರು ಯಾರದೋ ಸ್ಪೂರ್ತಿಯಿಂದ. ಕೆಲವರು ಯಾವುದೋ ಘಟನೆಯ ಪರಿಣಾಮದಿಂದ, ಕೆಲವರು ಯಾರದೋ ಪ್ರೋತ್ಸಾಹದಿಂದ, ಕೆಲವರು ಸುಮ್ಮನಿರಲಾರದೆ ಏನನ್ನೋ ಗೀಚುತ್ತಾ ಗೀಚುತ್ತಾ ಮೆಲ್ಲಗೆ ಬರಹಗಾರರಾಗಿ ಮೊಳಕೆಯೊಡೆದು ಹೊರಬರುತ್ತಾರೆ. ಇನ್ನು ಕೆಲವರು ತಮ್ಮ ಖಾಸಗಿ ಜೀವನದ ಸಂಗತಿಗಳನ್ನು ಅತ್ತ ಯಾರೊಂದಿಗೂ ಹೇಳಿಕೊಳ್ಳದೆ ಇತ್ತ ತಮ್ಮೊಳಗೆ ಹಿಡಿದಿಟ್ಟುಕೊಳ್ಳಲಾರದೆ ಒಳಗೊಳಗೆ ಒದ್ದಾಡುವ ಘಳಿಗೆಯಲ್ಲಿ ಅಕ್ಷರಗಳ ರೂಪದಲ್ಲಿ ಹೊರಗೆ ಚೆಲ್ಲಿ ಹಗುರಾಗುವದರ ಮೂಲಕ ಬರಹಗಾರರಾಗಿ ಬೆಳೆಯುತ್ತಾರೆ. ಮತ್ತೆ ಕೆಲವರು ಪ್ರೀತಿ, ಪ್ರೇಮದಲ್ಲಿ ಬಿದ್ದು ಪ್ರಿಯತಮನನ್ನೋ, ಪ್ರಿಯತಮೆಯನ್ನೋ ಮೆಚ್ಚಿಸಲು ಏನನ್ನೋ ಬರೆಯುತ್ತಾ ಬರೆಯುತ್ತಾ ದಿನಕಳೆದಂತೆ ಪ್ರಬುದ್ಧ ಬರಹಗಾರರಾಗಿ ಬೆಳೆಯುತ್ತಾರೆ. ಹೀಗೆ ಬರವಣೆಗಿಗೆ ಯಾವುದಾದರೊಂದು ನೆಪ ಅಥವಾ ಕಾರಣ ಬೇಕಷ್ಟೆ! ಆನಂತರ ಅದು ಜಿನುಗುತ್ತಾ ಜಿನುಗುತ್ತಾ ಹೊಳೆಯಾಗಿ ಹರಿಯುತ್ತದೆ! ಬರೆಯುತ್ತಾ ಬರೆಯುತ್ತಾ ಬಲಗೊಳ್ಳುತ್ತದೆ! ಇದು ಒಬ್ಬ ಬರಹಗಾರ ಬೆಳೆದು ಬರುವ ಬಗೆ!

    ಹಾಗಾದರೆ ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಯಾವಾಗ ಮತ್ತು ಹೇಗೆ? ಈ ಪ್ರಶ್ನೆಗೆ ಖರೆ ಖರೆ ಎನ್ನುವಂಥ ಇಂತಿಂಥದೇ ಉತ್ತರ ಇಲ್ಲವಾದರೂ ಹುಡುಕಲು ಪ್ರಯತ್ನಿಸಿದರೆ ಕೆಲವು ಉತ್ತರಗಳು ನಾ ಮುಂದು ತಾ ಮುಂದೆಂದು ನನ್ನ ಸುತ್ತ ಸುತ್ತುತ್ತಾ ಗಿರಿಗಿಟ್ಲಿ ಆಡತೊಡಗುತ್ತವೆ.

    ಮೊಟ್ಟ ಮೊದಲಿಗೆ ದೊಡ್ದಪ್ಪ ಹೊಳೆದಂಡೆಯ ಉಸುಕಿನ ಮೇಲೆ ನನ್ನ ಹೆಸರನ್ನು ಬರದು ತೋರಿಸಿ ಅದರಂತೆ ಬರೆ ಎಂದು ಹೇಳಿದಾಗ ಬೆರಗಿನಿಂದ ಬರೆದೆನಲ್ಲ, ಆಗ ಏನಾದರು ನನ್ನೊಳಗಿನ ಬರಹಗಾರ ಮೊಳಕೆಯೊಡೆದನಾ? ಅಥವಾ ಮೊಟ್ಟ ಮೊದಲಿಗಾದ ಅವಮಾನವನ್ನು ಯಾರೊಂದಿಗೂ ಹಂಚಿಕೊಳ್ಳಲಾರದೆ ನೋಟ್ ಪುಸ್ತಕದಲ್ಲಿ ಹುದುಗಿ ಹೇಗೆ ವ್ಯಕ್ತಪಡಿಸುವದು ಎಂದು ಗೊತ್ತಾಗದೆ ನನ್ನಷ್ಟಕ್ಕೆ ನಾನೇ ಬಿಕ್ಕುತ್ತಾ ಅರೆ ಬರೆ ಗೆರೆಗಳನ್ನು ಎಳೆದೆನಲ್ಲ, ಆಗ ಏನಾದರು ಆ ಬರಹಗಾರ ಮಿಸುಕಾಡಿದನಾ? ಅಥವಾ ಗೌರಜ್ಜಿಯ ಕುತೂಹಲಭರಿತ ಕತೆಗಳನ್ನು ಕೇಳುತ್ತಾ ಕೇಳುತ್ತಾ ನಾನು ಅವುಗಳನ್ನು ಮತ್ತೆ ಅಕ್ಷರಗಳಲ್ಲಿ ಮರುಕುಳಿಸುವ ಪ್ರಯತ್ನಮಾಡಿದೆನಲ್ಲ, ಆಗ ಏನಾದರು ಆ ಬರಹಗಾರ ಹೊರಬರಲು ಪ್ರಯತ್ನಿಸಿದನಾ? ಅಥವಾ ಶಾಲೆಯಲ್ಲಿ ಮೇಷ್ಟ್ರು ’ಸಾಕುಪ್ರಾಣಿ’ ಯ ಮೇಲೆ ಪ್ರಬಂಧ ಬರೆಯಲು ಹೇಳಿದಾಗ ಅದನ್ನು ಬರೆದು ಅವರಿಂದ ಶಹಭಾಸ್ಗಿರಿ ಗಿಟ್ಟಿಸಿದೆನಲ್ಲ, ಆಗ ಏನಾದರು ನನ್ನೊಳಗಿನ ಬರಹಗಾರ ರೂಪಗೊಂಡನಾ? ಅಥವಾ ಇವೆಲ್ಲವೂ ಒಟ್ಟಾಗಿ ನನ್ನೊಳಗಿನ ಬರಹಗಾರ ಮೂಡಿಬರಲು ಚಡಪಡಿಸಿದನಾ? ಇವೆಲ್ಲಕ್ಕೂ ಉತ್ತರ ಮಾತ್ರ ಒಂದೇ ಗೊತ್ತಿಲ್ಲ! ಗೊತ್ತಿಲ್ಲ!! ಗೊತ್ತಿಲ್ಲ!!!

    ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಹೇಗೆ ಎಂಬುದನ್ನು ಬಗೆಯುತ್ತಾ ಹೋದರೆ ಅದಕ್ಕೆ ಕಾರಣವಾದ ಹಿನ್ನೆಲೆ, ಪರಿಸರ, ವ್ಯಕ್ತಿಗಳು, ಪ್ರಯತ್ನಗಳು ಎಲ್ಲವೂ ನೆನಪಾಗುತ್ತವೆ. ಹಾಗೆ ನೋಡಿದರೆ ನಾನು ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು ತೀರಾ ಇತ್ತೀಚಿಗಷ್ಟೆ! ಅಂದರೆ ಈಗ್ಗೆ ಐದು ತಿಂಗಳು ಹಿಂದೆ ನನ್ನದೊಂದು ಬ್ಲಾಗು ಶುರು ಮಾಡಿದ ಮೇಲೆ! ಬ್ಲಾಗು ಆರಂಭಿಸಿದ ಮೇಲೆ ಏನಾದರು ಬರೆಯಲೆಬೇಕಲ್ಲ? ಸರಿ, ಬರವಣಿಗೆಯನ್ನು ತೀರಾ ಪ್ರೊಫೆಷನಲ್ಲಾಗಿ ತೆಗೆದುಕೊಂಡಿರುವೆನೇನೋ ಎನ್ನುವಷ್ಟರಮಟ್ಟಿಗೆ ಹಟಕ್ಕೆ ಬಿದ್ದು ಬರೆಯುತ್ತಾ ಬಂದೆ. ನಾನು ಕಂಡಿದ್ದನ್ನು, ಕೇಳಿದ್ದನ್ನು. ಅನುಭವಿಸಿದ್ದನ್ನು, ಓದಿದ್ದನ್ನು, ಇಷ್ಟವಾದದ್ದನ್ನು ಅಕ್ಷರಗಳಲ್ಲಿ ಇಳಿಸತೊಡಗಿದೆ. ನೋಡ ನೋಡುತ್ತಿದ್ದಂತೆ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ನನ್ನ ಬ್ಲಾಗು ಮೂವತ್ತೆಂಟು ಪೋಸ್ಟಗಳಿಂದ ರಾರಾಜಿಸತೊಡಗಿತು.

    ನಾನು ಓದಿನಲ್ಲಿ ಸದಾ ಮುಂದಿದ್ದ ಕಾರಣಕ್ಕೆ ದೊಡ್ಡಪ್ಪ ನನಗೆ ಯಾವಾಗಲೂ ಕತೆ, ಕಾಮಿಕ್ಷ್ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಜೊತೆಗೆ ಗೌರಜ್ಜಿ, ದೊಡ್ಡಮ್ಮರ ಹಾಡು, ಕತೆ ಕೇಳುತ್ತಾ ಬೆಳೆದಿದ್ದರಿಂದ ನನಗೆ ಮೊದಲಿನಿಂದಲೂ ಸಾಹಿತ್ಯದತ್ತ ವಿಶೇಷ ಆಕರ್ಷಣೆ. ಬಹುಶಃ ಈ ಕಾರಣದಿಂದಲೇನೋ ನನ್ನೊಳಗಿನ ಬರಹಗಾರ ಬಾಲ್ಯದಿಂದಲೇ ಹರಳುಗಟ್ಟುತ್ತಾ ಬಂದಿರಬಹುದು. ನಾನು ಬೆಳೆದಂತೆ ಕತೆ, ಕಾದಂಬರಿ ಓದುವ ಹುಚ್ಚು ಹೆಚ್ಚಾಯಿತು. ಅದನ್ನು ಮತ್ತಷ್ಟು ಹೆಚ್ಚಿಸಿದವರು ನನ್ನ ದೊಡ್ದಪ್ಪನ ಮಕ್ಕಳಾದ ಬಸಮ್ಮಕ್ಕ ಮತ್ತು ರವಿ ಅಣ್ಣ. ನಾನು ರಜೆಗೆಂದು ನನ್ನ ದೊಡ್ಡಪ್ಪನ ಊರಾದ ಅಳವಂಡಿಗೆ ಹೋಗುತ್ತಿದ್ದೆ. ಅಲ್ಲಿ ನಮ್ಮ ದೊಡ್ದಪ್ಪ ಮನೆಗೆ ಬಹುಶಃ ಎಲ್ಲ ವಾರಪತ್ರಿಕೆ, ಮಾಸಪತ್ರಿಕೆ ಮತ್ತು ದಿನಪತ್ರಿಕೆಯೊಂದನ್ನು ತರಿಸುತ್ತಿದ್ದರು. ಅವನ್ನೆಲ್ಲ ನಾವು ಮುಗಿಬಿದ್ದು ಓದುತ್ತಿದ್ದೆವು. ಅದಲ್ಲದೆ ವಾಚನಾಲಯದಿಂದ ನನ್ನ ಅಕ್ಕ ಸಾಕಷ್ಟು ಕಾದಂಬರಿಗಳನ್ನು ತಂದು ಓದುತ್ತಿದ್ದುದರಿಂದ ಅವಳೊಂದಿಗೆ ನಾನೂ ಓದಿ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆ. ನನ್ನ ಅಣ್ಣ ಓದುತ್ತಿದ್ದುದು ವೆಟರ್ನರಿ ಸಾಯಿನ್ಸ್ ಆದರೂ ಅವನಿಗೆ ಮೊದಲಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿಯಿತ್ತು. ಅವನು ರಜೆಗೆ ಬರುವಾಗಲೆಲ್ಲಾ ಕನ್ನಡದ ಮಹತ್ವದ ಲೇಖಕರ ಪುಸ್ತಕಗಳನ್ನು ಕೊಂಡು ತರುತ್ತಿದ್ದ. ಅವನ್ನೆಲ್ಲ ಒಬ್ಬರಾದ ಮೇಲೆ ಒಬ್ಬರು ಓದಿ “ಇದು ಹೀಗಿರಬೇಕಿತ್ತು, ಅದು ಹಾಗಿರಬೇಕಿತ್ತು” ಎಂದೆಲ್ಲಾ ಚರ್ಚಿಸುತ್ತಿದ್ದೆವು. ಈ ಎಲ್ಲ ಅಂಶಗಳು ನನ್ನೊಳಗಿನ ಬರಹಗಾರನನ್ನು ಮೊದಲಿನಿಂದಲೂ ಬಡಿದೆಬ್ಬಿಸುತ್ತಾ ಅವನಿಗೊಂದು ರೂಪರೇಷೆ ನೀಡಿದವು ಎಂಬುದು ನನ್ನ ಅಭಿಪ್ರಾಯ.

    -ಉದಯ ಇಟಗಿ
    ಚಿತ್ರ ಕೃಪೆ: http://www.flickr.com/

    ಹುಚ್ಚರು

  • ಸೋಮವಾರ, ಏಪ್ರಿಲ್ 06, 2009
  • ಬಿಸಿಲ ಹನಿ

  • ಹುಚ್ಚರಿಗೆ
    ಜಾತಿಯಿಲ್ಲ, ಧರ್ಮವಿಲ್ಲ
    ತೄತಿಯಲಿಂಗಿಗಳು ಇವರು
    ಸದಾ ಸಿದ್ಧಾಂತಗಳ ಹೊರಗೆ ಬದುಕುತ್ತಾರೆ
    ಇವರ ಮುಗ್ಧತೆಗೆ ನಾವು ಪಾತ್ರರಲ್ಲ

    ಇವರಾಡುವ ಭಾಷೆ
    ಕನಸಿನ ಭಾಷೆಯಲ್ಲ
    ದು ಕಟುವಾಸ್ತವ ಸತ್ಯ
    ಇವರ ಪ್ರೀತಿ
    ತಿಂಗಳ ಬೆಳಕಿನಂಥ ಪ್ರೀತಿ
    ಉಕ್ಕಿ ಹರಿಯುವದದು
    ಬೆಳದಿಂಗಳ ಹಾಲಾಗಿ
    ಹುಣ್ಣಿಮೆಯ ದಿನ

     ಇವರು
    ಮುಗಿಲಿನತ್ತ ನೋಡುತ್ತಾ
    ನಾವು ಕೇಳಿರದ ದೇವರನ್ನು ನೋಡುತ್ತಾರೆ
    ಆ ದೇವತೆಗಳ ರೆಕ್ಕೆಗಳನ್ನು ಸಹ ಅಲುಗಾಡಿಸುತ್ತಾರೆ.
    ನಾವು ಕಲ್ಪನಾ ಲೋಕದಲ್ಲಿ ವಿಹರಿಸುವಾಗ
    ನಮ್ಮನ್ನು ಪರಿಹಾಸ ಮಾಡುತ್ತಾರೆ
    ಅವರು ಹೇಳುತ್ತಾರೆ ನೊಣಗಳಿಗೂ ಸಹ ಆತ್ಮವಿದೆ ಎಂದು..

    ಒಂದೊಂದು ಸಾರಿ
    ಗಿಡಮರಗಳು ರಕ್ತ ಕಾರುವದನ್ನು ಕಾಣುತ್ತಾರೆ
    ಮಗದೊಮ್ಮೆ ಬೀದಿಗಳಲ್ಲಿ
    ಸಿಂಹಗಳು ಘರ್ಜಿಸುತ್ತಿವೆಯೆಂದು ಹೇಳುತ್ತಾರೆ
    ಅವರೂ ಸಹ ನಮ್ಮಂತೆ
    ಬೆಕ್ಕಿನ ಕಂಗಳಲ್ಲಿ ಸ್ವರ್ಗ ಹೊಳೆಯುವದನ್ನು ಕಂಡು
    ಖುಶಿಪಡುತ್ತಾರೆ.
    ಆದರೆ ಇರುವೆಗಳು
    ಹಿಮ್ಮೇಳದಲ್ಲಿ ಹಾಡುವದನ್ನು
    ಅವರು ಮಾತ್ರ ಕೇಳಬಲ್ಲರು!

    ಗಾಳಿಯನ್ನು ತಟ್ಟಿ ಮಲಗಿಸುವಾಗ
    ಅವರು ಮೆಡಿಟೇರಿಯನ್ ಸಮುದ್ರದಲ್ಲಿನ
    ಸುಂಟರಗಾಳಿಯನ್ನು ದಮನಮಾಡುತ್ತಾರೆ
    ಮತ್ತು ತಮ್ಮ ದೊಡ್ಡದಾದ ಹೆಜ್ಜೆಗಳಿಂದ
    ಸಿಡಿಯುವ ಜ್ವಾಲಾಮುಖಿಗಳನ್ನು ಮೆಟ್ಟಿನಿಲ್ಲುತ್ತಾರೆ

    ಇವರಿಗೆ ತಮ್ಮದೇ ಆದ
    ಕಾಲ ಮಾಪನಗಳಿವೆ
    ಕಾಲದಾಚೆಯ ಕಾಲವಾಗಿ
    ಬದುಕುವ ಇವರಿಗೆ
    ನಮ್ಮ ಮೊದಲ ಶತಮಾನ
    ಅವರಿಗದು ಎರಡನೆಯದು.
    ಇಪ್ಪತ್ತೇ ಸೆಕೆಂಡುಗಳಲ್ಲಿ
    ಅವರು ಕ್ರಿಸ್ತನನ್ನು ತಲುಪುತ್ತಾರೆ
    ಇನ್ನಾರೇ ಆರು ಸೆಕೆಂಡುಗಳಲ್ಲಿ ಬುದ್ಧನೊಂದಿಗೆ ಇರುತ್ತಾರೆ


    ಒಂದೇ ದಿನದಲ್ಲಿ ಬಿಗ್ ಬ್ಯಾಂಗ್
    ವಿಶ್ವ ಸೃಷ್ಟಿಯನ್ನು ಗ್ರಹಿಸುತ್ತಾರೆ

    ಏನನ್ನೋ ಚಡಪಡಿಸುತ್ತಾ ಶತಪಥ ತಿರುಗಾಡುತ್ತಾರೆ
    ಹಾಗೂ ತಮ್ಮ ಭೂಮಿಯಿನ್ನೂ ಕುದಿಯುತ್ತಿದೆ ಎಂದು ಭಾವಿಸುತ್ತಾರೆ,

    ಒಟ್ಟಿನಲ್ಲಿ
    ಹುಚ್ಚರು ನಮ್ಮಂತೆ ಹುಚ್ಚರಲ್ಲ ಬಿಡಿ!

    ಮಲಯಾಳಂ ಮೂಲ: ಕೆ. ಸಚ್ಚಿದಾನಂದ
    ಇಂಗ್ಲೀಷಿಗೆ: ಕೆ. ಸಚ್ಚಿದಾನಂದ
    ಕನ್ನಡಕ್ಕೆ: ಉದಯ್ ಇಟಗಿ