Demo image Demo image Demo image Demo image Demo image Demo image Demo image Demo image

ನನ್ನ ಚಹಾತೋಟ ಮತ್ತು ನೀಲಿಹಕಕ್ಕಿಯ ಮೇಲೊಂದು ಸಣ್ಣ ವಿಮರ್ಶೆ

 • ಸೋಮವಾರ, ಜನವರಿ 16, 2023
 • ಬಿಸಿಲ ಹನಿ
 • ಭಾರತದ ವರ್ಚಸ್ವಿ ಭಾಷೆಗಳಿಂದ ಕನ್ನಡಕ್ಕೆ ತಕ್ಕಮಟ್ಟಿಗೆ ಅನುವಾದಗಳು ಆಗುತ್ತಿರುತ್ತವೆ. ಆದರೆ, ನಮ್ಮ ಲಕ್ಷ್ಯದ ಅಂಚಿನಲ್ಲಿ ಉಳಿದುಬಿಡುವ ಅನೇಕ ಭಾರತೀಯ ಭಾಷೆಗಳ ಶ್ರೀಮಂತ ಸಾಹಿತ್ಯ ಓದಿಗೆ ದಕ್ಕದೇ ಉಳಿದು ಬಿಡುತ್ತದೆ. ಈ ಹಿನ್ನೆಲೆಯಲ್ಲಿ ನಾವು ಮಾಡಬೇಕಾದ ಕೆಲಸ ತುಂಬಾ ಇದೆ. ಹಾಗಾಗಿ, ಉದಯ ಇಟಗಿ ಅವರು ಅಸ್ಸಾಮಿಯಾ ಭಾಷೆಯಿಂದ ಕನ್ನಡಕ್ಕೆ ತಂದಿರುವ ಕಮಲ್ ಕುಮಾರ್ ತಂತಿ ಅವರ ಕವನ ಸಂಕಲನ ಗಮನಾರ್ಹವಾಗಿದೆ.
  ಸುಮಾರು 62 ಕವನಗಳನ್ನು ಹೊಂದಿರುವ "ನನ್ನ ಚಹಾ ತೋಟ ಮತ್ತು ನೀಲಿ ಹಕ್ಕಿ" ಇಂಗ್ಲೀಷಿನ ಮುಖಾಂತರ ಕನ್ನಡಕ್ಕೆ ಬಂದಿದೆ. ಹಲವಾರು ಅಸಾಮಿಯಾ ಕವಿಗಳು ಲಯಬದ್ಧವಾಗಿ ಭಾಷೆಯನ್ನು ಬಳಸುವುದಿದೆ. ಇಂಗ್ಲೀಷ್ ಅನುವಾದಕರು ಆ ರಿದಂ ಅನ್ನು ಸೂಚಿಸುವ ಪ್ರಯತ್ನ ಮಾಡಿದ್ದಾರೆ. ಇಟಗಿ ಅವರ ಅನುವಾದದ ಸೊಗಸು ಎಂದರೆ ಅವರು ತುಂಬಾ ಸ್ಪಷ್ಟತೆ ಇರುವಂತೆ ನೋಡಿಕೊಳ್ಳುತ್ತಾರೆ. ಅನುವಾದಗಳು ಕೆಲವೊಮ್ಮೆ ಅಸಂಗತವಾಗುವ ಸಮಸ್ಯೆ ಇರುತ್ತದೆ. ಇಟಗಿ ಎಲ್ಲ ಕಡೆ ನೇರ ಸಂವಹನಕ್ಕೆ ಒತ್ತು ಕೊಟ್ಟಿರುವುದು ಕಾಣುತ್ತದೆ.
  ಕುವೆಂಪು ಭಾಷಾ ಭಾರತಿ ಪ್ರಕಟಿಸಿರುವ ಈ ಸಂಕಲನ ಕನ್ನಡ ಕಾವ್ಯಾಸಕ್ತರಿಗೆ ಖಂಡಿತ ಖುಷಿ ಕೊಡಬಲ್ಲ ಪುಸ್ತಕ. ಒಂದು ಪುಟ್ಟ ಕವನ ನೋಡಿ:
  "ನಾನು ನಿಮ್ಮ ಒಡನಾಡಿ" 

  ಎಲೆಗಳಿಗೆ ಜೋಗುಳ ಹಾಡಿ ಮಲಗಿಸುವಂಥ
  ಮಂತ್ರ ನಿಮಗೆ ಗೊತ್ತಿದೆ 
  ನಾನು ನಿಮ್ಮ ಒಡನಾಡಿ 
  ಕಾಡಿನ ಇನ್ನೊಂದು ಹೆಸರೇನು? 
  ನಿಮ್ಮ ಹಿತ್ತಲಿನಲ್ಲಿ ನೆರಳಿನ ಸಾಲು 
  ಆತ್ಮೀಯ ಭಿಕ್ಷು, ನಿಮ್ಮ ಮೌನದ ಮನೆ ಎಲ್ಲಿದೆ, 
  ನಿಮ್ಮ ನದಿ ಎಲ್ಲಿದೆ, ನಿಮ್ಮ ಹಿನ್ನೆಲೆ ಸಂಗೀತ ಎಲ್ಲಿದೆ?
  ಒಳಗೆ ಕತ್ತಲ ರಾತ್ರಿ 
  ಹಿಮ-ಚುಂಬಿಸಿದ ಬೆಟ್ಟಗಳು 
  ನಾನು ನಿಮ್ಮನ್ನು ಎಲ್ಲಿಯೂ ನೋಡಲಿಲ್ಲ 
  ಎಲೆಗಳಿಗೆ ಜೋಗುಳ ಹಾಡಿ ಮಲಗಿಸುವಂಥ 
  ಮಂತ್ರ ನಿಮಗೆ ಗೊತ್ತಿದೆ 
  ನಿಮ್ಮ ಇನ್ನೊಂದು ಹೆಸರೇನು?
  ನಾನು ನಿಮ್ಮ ಒಡನಾಡಿ
  **