Demo image Demo image Demo image Demo image Demo image Demo image Demo image Demo image

ಬಿಳಿ ಸಾಹೇಬನಿಗೊಂದು ಭೋಜನಕೂಟ

 • ಭಾನುವಾರ, ನವೆಂಬರ್ 11, 2012
 • ಬಿಸಿಲ ಹನಿ
 • ಈ ಸಂಜೆ ಮಿಸ್ಟರ್ ಶಾಮನಾಥನು ತನ್ನ ಮೇಲಾಧಿಕಾರಿಗಾಗಿ ತನ್ನ ಮನೆಯಲ್ಲಿ ಭೋಜನಕೂಟವೊಂದನ್ನು ಏರ್ಪಡಿಸಿದ್ದಾನೆ. ಹೀಗಾಗಿ ಬೆಳಿಗ್ಗೆಯಿಂದ ಅವನು ಮತ್ತು ಅವನ ಹೆಂಡತಿ ಮಿಸೆಸ್ ಶಾಮನಾಥ್ ಒಂದಲ್ಲಾ ಒಂದು ಕೆಲಸದಲ್ಲಿ ಮುಳುಗಿಹೋಗಿದ್ದಾರೆ. ಅದೆಷ್ಟೊಂದು ತಮ್ಮ ಕೆಲಸದಲ್ಲಿ ಮುಳುಗಿದ್ದಾರೆಂದರೆ ಇಬ್ಬರಿಗೂ ತಮ್ಮ ಬೆವರನ್ನು ಒರೆಸಿಕೊಳ್ಳವಷ್ಟು ಪುರುಸೊತ್ತಾಗಲಿ, ಸಮಯವಾಗಲಿ ಸಿಕ್ಕಿಲ್ಲ.

  ಮಿಸೆಸ್ ಶಾಮನಾಥ್ ಇವತ್ತು ಕೆಲಸದ ಗಡಿಬಿಡಿಯಲ್ಲಿ ಒಂದು ಗೌನುನಷ್ಟೇ ಹಾಕಿಕೊಂಡು ತನ್ನ ಕೂದಲನ್ನು ಬಾಚದೆ ಹಾಗೆ ತುರುಬು ಕಟ್ಟಿ ಬಿಟ್ಟಿದ್ದಳು. ಆದರೆ ಮುಖಕ್ಕೆ ಪೌಡರ್ ಮತ್ತು ಕೆನ್ನೆಗೆ ಕೆಂಪು ಬಳಿದುಕೊಳ್ಳುವದನ್ನು ಮರೆತಿರಲಿಲ್ಲ. ಮಿಸ್ಟರ್ ಶಾಮನಾಥ್ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಸಿಗರೇಟ್ ಮೇಲೆ ಸಿಗರೇಟ್ ಸೇದುತ್ತಾ ಅತ್ತಿಂದಿತ್ತ ಆತಂಕದಲ್ಲಿ ಸುಳಿದಾಡುತ್ತಿದ್ದ. ಇಬ್ಬರೂ ಒಬ್ಬರಿಗೊಬ್ಬರು “ಅದನ್ನು ಮಾಡು, ಇದನ್ನು ಮಾಡು, ಅದನ್ನಿಲ್ಲಿಡು, ಇದನ್ನಿಲ್ಲಿಡು” ಎಂದು ಹೇಳುತ್ತಾ ಆ ಕೋಣೆಯಿಂದ ಈ ಕೋಣೆಗೆ ಈ ಕೋಣೆಯಿಂದ ಆ ಕೋಣೆಗೆ ಅವಸರವಸರವಾಗಿ ಓಡಾಡುತ್ತಿದ್ದರು.

  ಅಂತಿಮವಾಗಿ ಎಲ್ಲ ತಯಾರಿಗಳು ಮುಗಿದಾಗ ಸಂಜೆ ಐದು ಘಂಟೆಯಾಗಿತ್ತು. ವರಾಂಡದಲ್ಲಿ ಒಂದು ಟೇಬಲ್, ಒಂದಿಷ್ಟು ಖುರ್ಚಿಗಳು, ಸ್ಟೂಲ್‍ಗಳು, ನ್ಯಾಪ್ಕಿನ್‍ಗಳು ಮತ್ತು ಹೂದಾನಿಗಳನ್ನು ಜೋಡಿಸಿಡಲಾಯಿತು. ಕುಳಿತುಕೊಳ್ಳುವ ಕೊಠಡಿಯಲ್ಲಿ ಕುಡಿತಕ್ಕೆ ಏರ್ಪಾಡು ಮಾಡಲಾಯಿತು. ದಿನ ಬಳಕೆಯ ಅನವಶ್ಯಕ ವಸ್ತುಗಳನ್ನೆಲ್ಲಾ ಕಪಾಟುಗಳ ಹಿಂದೆ ಹಾಗೂ ಮಂಚಗಳ ಕೆಳಗೆ ಬಚ್ಚಿಡಲಾಯಿತು. ತಯಾರಿಯೆಲ್ಲಾ ಮುಗಿದಾದ ಮೇಲೆ ಶಾಮನಾಥನಿಗೆ ಇದ್ದಕ್ಕಿದ್ದಂತೆ ತನ್ನ ಅಮ್ಮನ ಬಗ್ಗೆ ಯೋಚನೆ ಶುರುವಾಯಿತು. ಅವಳನ್ನು ಏನು ಮಾಡುವದು? ಎಲ್ಲಿ ಬಚ್ಚಿಡುವದು? ಇಡೀ ಕಾರ್ಯಕ್ರಮಕ್ಕೆ ಆಕೆ ಒಂದು ದೊಡ್ಡ ತೊಡರಾಗುವಂತೆ ಭಾಸವಾಗತೊಡಗಿದಳು.

  ಇಷ್ಟು ಹೊತ್ತು ಅವನಾಗಲಿ, ಅವನ ತಕ್ಕ ಹೆಂಡತಿಯಾಗಲಿ ಈ ವಿಷಯದ ಬಗ್ಗೆ ಒಂಚೂರು ತಲೆಕೆಡಿಸಿಕೊಂಡಿರಲಿಲ್ಲ. ಮಿಸ್ಟರ್ ಶಾಮನಾಥನು ಮಿಸೆಸ್ ಶಾಮನಾಥನೆಡೆಗೆ ತಿರುಗುತ್ತಾ ಇಂಗ್ಲೀಷಿನಲ್ಲಿ ಕೇಳಿದ “ಅಮ್ಮನನ್ನು ಏನು ಮಾಡುವದು?”

  ಮಿಸೆಸ್ ಶಾಮನಾಥ ತನ್ನ ಕೆಲಸವನ್ನು ನಿಲ್ಲಿಸಿ ಒಂದು ಕ್ಷಣ ಯೋಚಿಸಿ ಹೇಳಿದಳು “ಆಕೆಯನ್ನು ನಮ್ಮ ಮನೆಯ ಹಿಂದೆ ಇರುವ ಆಕೆಯ ಗೆಳತಿಯ ಮನೆಗೆ ಕಳಿಸಿಬಿಡಿ. ಈ ರಾತ್ರಿ ಅಲ್ಲೇ ಉಳಿದು ಬೆಳಿಗ್ಗೆ ಎದ್ದು ಬರಲಿ.”

  ಶಾಮನಾಥನು ಸಿಗರೇಟೊಂದನ್ನು ಬಾಯಲ್ಲಿಟ್ಟುಕೊಳ್ಳುತ್ತಾ ತನ್ನ ಹೆಂಡತಿಯನ್ನು ಒಮ್ಮೆ ದಿಟ್ಟಿಸಿ ನೋಡಿದ. ಮರುಕ್ಷಣ ಏನನ್ನೋ ಯೋಚಿಸಿ ತನ್ನ ತಲೆಯನ್ನು ಅಲ್ಲಾಡಿಸುತ್ತಾ ಹೇಳಿದ, “ಬೇಡ. ಅಲ್ಲಿಗೆ ಕಳಿಸುವದು ಬೇಡ. ಇವತ್ತು ಅಮ್ಮ ಅಲ್ಲಿಗೆ ಹೋದರೆ ನಾಳೆಯಿಂದ ಆ ಮುದುಕಿ ಮತ್ತೆ ನಮ್ಮ ಮನೆಗೆ ಬರುವದಿಕ್ಕೆ ಶುರುಮಾಡುತ್ತೆ. ಅದು ನಂಗೆ ಬೇಕಿಲ್ಲ. ನಿನಗೇ ಗೊತ್ತಲ್ಲ? ಈ ಹಿಂದೆ ಆಕೆಯನ್ನು ದೂರವಿಡಲು ನಾವು ಎಷ್ಟೊಂದು ಕಷ್ಟಪಡಬೇಕಾಯಿತೆಂದು? ಬದಲಿಗೆ, ಅಮ್ಮನಿಗೆ ಬೇಗನೆ ಊಟ ಮಾಡಿ ಅವಳ ಕೋಣೆಯಲ್ಲಿರಲು ಹೇಳಿದರಾಯಿತು. ಹೇಗೂ ಅತಿಥಿಗಳು ಬರೋದು ಎಂಟು ಘಂಟೆಗೆ! ಅಷ್ಟರಲ್ಲಿ ಅವಳು ಎಲ್ಲ ಮುಗಿಸಿ ಕೋಣೆಯಲ್ಲಿದ್ದರಾಯಿತು.”

  ಇಬ್ಬರಿಗೂ ಅದೊಂದು ಒಳ್ಳೆಯ ಸಲಹೆಯಂತೆ ಕಂಡಿತು ಮತ್ತದನ್ನು ಒಟ್ಟಿಗೆ ಅನುಮೋದಿಸಿದರು. ಆದರೆ ಮಿಸೆಸ್ ಶಾಮನಾಥ್ ಇದ್ದಕ್ಕಿದ್ದಂತೆ ಏನನ್ನೋ ಜ್ಞಾಪಿಸಿಕೊಳ್ಳುತ್ತಾ ಹೇಳಿದಳು “ನಿಮಗೇ ಗೊತ್ತೇ ಇದೆ! ಅತ್ತೆ ಜೋರಾಗಿ ಗೊರಕೆ ಹೊಡೆಯುತ್ತಾರೆ! ಇಲ್ಲಿ ವರಾಂಡದಲ್ಲಿ ಎಲ್ಲ ಜನ ಊಟ ಮಾಡುವಾಗ ಅವರು ಅಕಸ್ಮಾತ್ ನಿದ್ದೆ ಹೋಗಿ ಗೊರಕೆ ಹೊಡೆಯೋಕೆ ಶುರು ಮಾಡಿದರೆ ಏನು ಮಾಡೋದು? ಅವರ ರೂಮು ಬೇರೆ ವರಾಂಡಾದ ಪಕ್ಕದಲ್ಲಿಯೇ ಇದೆ!”

  “ಹಾಗಾದರೆ ಆಕೆಯನ್ನು ಆಕೆಯ ಕೋಣೆಗೆ ಬೇಗನೆ ಕಳಿಸಿ ಬಾಗಿಲನ್ನು ಮುಚ್ಚಿ ಒಳಗಿನಿಂದ ಬೋಲ್ಟ್ ಹಾಕಿಕೊಳ್ಳಲು ಹೇಳಿದರಾಯಿತು. ಆಮೇಲೆ ನಾನದನ್ನು ಹೊರಗಿನಿಂದ ಲಾಕು ಮಾಡುತ್ತೇನೆ. ಅಥವಾ ಅವಳನ್ನು ಒಳಗೆ ಕಳಿಸಿ ನಮ್ಮ ಪಾರ್ಟಿ ಮುಗಿಯುವವರೆಗೂ ನಿದ್ದೆ ಮಾಡಬೇಡ, ಎಚ್ಚರವಿರು ಎಂದು ಹೇಳಿದರಾಯಿತು. ಅಷ್ಟೇ........”

  “ಒಂದು ವೇಳೆ ಅವರಿಗೆ ತೂಕಡಿಕೆ ಬಂದರೆ? ಈ ಪಾರ್ಟಿ ಬೇರೆ ಎಷ್ಟೊತ್ತಿಗೆ ಮುಗಿಯುತ್ತೋ ದೇವರೇ ಬಲ್ಲ! ನೀವು ಬೇರೆ ಕುಡಿಯೋಕೆ ಶುರು ಮಾಡಿದರೆ ಬೇಗನೆ ಮುಗಿಸಲ್ಲ.”

  ಶಾಮನಾಥನಿಗೆ ರೇಗಿಹೋಯಿತು. ಕೋಪದಲ್ಲಿ ತನ್ನ ಕೈಗಳನ್ನು ಒದರುತ್ತಾ ಹೇಳಿದ “ಅವಳನ್ನು ಅವಾಗಲೇ ನನ್ನ ತಮ್ಮನ ಮನೆಗೆ ಕಳಿಸೋನಿದ್ದೆ. ಆದರೆ ನೀನೆ......ನೀನೆ ಎಲ್ಲ ಮಾಡಿದ್ದು! ಎಲ್ರ ಕಣ್ಣಲ್ಲಿ ಒಳ್ಳೇಳಾಗೋಕೆ ಹೋಗಿ ಮಧ್ಯ ಮೂಗು ತೂರಿಸಿ ನಿಲ್ಲಿಸಿದಿ!!”

  “ಈಗ ಅದೆಲ್ಲಾ ಯಾಕೆ? ಅವತ್ತು ಅಗಿದ್ದೇ ಬೇರೆ! ಆ ವಿಷ್ಯ ಬಿಡಿ ಈಗ...............” ಮಿಸೆಸ್ ಶಾಮನಾಥ ವಿಷಯವನ್ನು ಮರೆಸಿದಳು.

  ಮಿಸ್ಟರ್ ಶಾಮನಾಥ ಸುಮ್ಮನಾದ. ಇದು ವಾದ ಮಾಡುವ ಸಮಯಯಾಗಲಿ, ಸಂದರ್ಭವಾಗಲಿ ಅಲ್ಲವೆಂದುಕೊಂಡು ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಮುಂದಾದ. ಸ್ವಲ್ಪ ಹೊತ್ತು ಯೋಚಿಸಿ ಬಳಿಕ ತನ್ನ ತಾಯಿಯಿದ್ದ ಕೋಣೆಗೆ ಬಂದ. ಆ ಕೋಣೆ ವರಾಂಡಕ್ಕೆ ಸರಿಯಾಗಿ ಮುಖಮಾಡಿಕೊಂಡು ನಿಂತಿತ್ತು. ಅಲ್ಲಿ ಅವನ ತಾಯಿ ಗೋಡೆಗಾನಿಸಿಟ್ಟ ಹೊರಸಿನ ಮೇಲೆ ತಲೆ ತುಂಬಾ ಸೆರಗನ್ನು ಹೊದ್ದು ಕೈಯಲ್ಲಿ ಜಪಮಣಿಯನ್ನು ಹಿಡಿದು ಪ್ರಾರ್ಥಿಸುತ್ತಾ ಕುಳಿತಿದ್ದಳು. ಬೆಳಿಗ್ಗೆಯಿಂದ ಇವರಿಬ್ಬರ ಆತಂಕವನ್ನು ನೋಡಿ ಅವಳೆದೆ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಇವತ್ತು ಮಗನ ಆಫೀಸಿನಿಂದ ಬಿಳಿ ಸಾಹೇಬರು ಬರುವವರಿದ್ದಾರೆ. ಎಲ್ಲ ಸುಖಕರವಾಗಿ ಸಾಗಲಿ ಎಂದು ಪ್ರಾರ್ಥಿಸಿದಳು.  “ಅಮ್ಮ, ಇವತ್ತು ನೀನು ಬೇಗನೆ ಊಟ ಮಾಡಿಬಿಡು. ಅತಿಥಿಗಳು ಏಳೂವರೆಗೆಲ್ಲಾ ಬಂದು ಬಿಡುತ್ತಾರೆ.” ಶಾಮನಾಥ ಹೇಳಿದ.

  ಆಕೆ ತನ್ನ ತಲೆಯ ಮೇಲಿನ ಸೆರಗನ್ನು ಸರಿಸುತ್ತಾ ಮಗನೆಡೆಗೆ ನೋಡುತ್ತಾ ಹೇಳಿದಳು, “ನಾನಿವತ್ತು ಊಟ ಮಾಡೋದಿಲ್ಲ ಮಗಾ. ಮನೆಯಲ್ಲಿ ಮೀನು-ಮಾಂಸ ಮಾಡಿದ ದಿನ ನಾನು ಯಾವತ್ತು ಊಟ ಮಾಡಿದ್ದೇನೆ?”

  “ಆಯ್ತು. ಅದೇನು ಮಾಡಬೇಕು ಅಂತಿದ್ದೆಯೋ ಅದನ್ನೆಲ್ಲಾ ಬೇಗ ಮಾಡಿ ಮುಗಿಸು.”

  “ಸರಿ, ಮಗಾ”

  “ಹಾಂ, ಅಮ್ಮ, ಮರೆತಿದ್ದೆ. ನಾವು ಮೊದಲು ಸಿಟ್ಟಿಂಗ್ ರೂಮಿನಲ್ಲಿ ಕುಳಿತಿರುತ್ತೇವೆ. ಅಷ್ಟೊತ್ತು ನೀನು ವರಾಂಡದಲ್ಲಿರು. ಆಮೇಲೆ ನಾವು ಹೊರಗೆ ಬಂದಾಗ ಬಾತ್‍ರೂಮ್ ಮೂಲಕ ಹಾದು ಸಿಟ್ಟಿಂಗ್ ರೂಮಿಗೆ ಹೋಗು.”

  ಅವನ ತಾಯಿ ಏನೂ ಮಾತನಾಡಲಿಲ್ಲ. ಅವನನ್ನೊಮ್ಮೆ ನೋಡಿ ಮೆತ್ತಗೆ ಹೇಳಿದಳು, “ಸರಿ, ಮಗಾ.”

  “ಹಾಂ, ಇನ್ನೊಂದು ವಿಷ್ಯ! ಇವತ್ತು ಬೇಗನೆ ಮಲಗೋದಿಕ್ಕೆ ಹೋಗಬೇಡ. ನೀನು ಗೊರಕೆ ಹೊಡೆಯುವ ಸದ್ದು ಅಷ್ಟು ದೂರದವರೆಗೂ ಕೇಳಿಸುತ್ತೆ.”

  ತಕ್ಷಣ ಅವನ ತಾಯಿ ನಾಚಿಕೆ ಬಿಟ್ಟು ಹೇಳಿದಳು, “ನಾನೇನ್ ಮಾಡ್ಲಿ, ಮಗಾ? ಅದೆಲ್ಲಾ ನನ್ನ ಕೈಲಿಲ್ಲಾ. ನಾನು ಜಡ್ಡಿಗೆ ಬಿದ್ದು ಎದ್ದಾಗಿನಿಂದ ನಂಗೆ ಮೂಗಿನಿಂದ ಸರಿಯಾಗಿ ಉಸಿರಾಡೋದಿಕ್ಕೆ ಆಗ್ತಿಲ್ಲ.”

  ಮಿಸ್ಟರ್ ಶಾಮನಾಥ್ ಅತಿಥಿಗಳು ಬರುವದಕ್ಕೆ ಮುನ್ನ ಎಲ್ಲವನ್ನೂ ಅಚ್ಚುಕಟ್ಟಾಗಿ ಸಿದ್ಧಗೊಳಿಸಿದ. ಆದರೂ ಮನಸ್ಸಿಗೇಕೋ ಸಮಾಧಾನವಿರಲಿಲ್ಲ. ಒಂದುವೇಳೆ ಬಾಸ್ ಈ ಕಡೆಗೆ ಬಂದರೆ? ಸುಮಾರು ಎಂಟ್ಹತ್ತು ಜನ ಅತಿಥಿಗಳು! ಇಂಡಿಯನ್ ಆಫಿಸಿಯಲ್ಸ್ ಮತ್ತವರ ಹೆಂಡಿರು! ಯಾರಾದರೂ ಬಾತ್‍ರೂಮಿಗೆ ಹೋಗಬಹುದು. ಆಗ ಅವರು ಅಕಸ್ಮಾತ್ ಅಮ್ಮನನ್ನು ನೋಡಿಬಿಟ್ಟರೆ ಏನು ಮಾಡೋದು? ಶಾಮನಾಥ ಕೋಪದಲ್ಲಿ ತನ್ನ ಕೈಕೈ ಹಿಸುಕಿಕೊಂಡ. ಒಂದು ಖುರ್ಚಿಯನ್ನೆತ್ತಿಕೊಂಡು ಅದನ್ನು ವರಾಂಡದಲ್ಲಿರುವ ತನ್ನ ತಾಯಿಯ ಕೋಣೆಯ ಹೊರಬಾಗಿಲ ಬಳಿ ಇಡುತ್ತಾ “ಅಮ್ಮ, ಇಲ್ಲಿ ಬಾ. ಇದರ ಮೇಲೆ ಕುಳಿತ್ಕೋ” ಎಂದು ಹೇಳಿದ.

  ಅವನ ತಾಯಿ ತನ್ನ ಜಪಮಣಿಯನ್ನು ಒಂದು ಕೈಲಿ ಹಿಡಿದುಕೊಂಡು ಇನ್ನೊಂದು ಕೈಲಿ ತನ್ನ ಸೆರಗನ್ನು ಸರಿಮಾಡಿಕೊಳ್ಳುತ್ತಾ ನಿಧಾನವಾಗಿ ನಡೆದು ಬಂದು ಆ ಖುರ್ಚಿಯ ಮೇಲೆ ಕಾಲಿಟ್ಟುಕೊಂಡು ಕುಳಿತಳು.

  “ಅಯ್ಯೋ, ಹಾಗಲ್ಲಮ್ಮ! ಖುರ್ಚಿ ಮೇಲೆ ಕಾಲಿಟ್ಕೊಂಡು ಕೂರಬಾರದು. ಇದು ಹೊರಸು ಅಲ್ಲ.”

  ಅವನ ತಾಯಿ ಕಾಲು ಇಳಿಬಿಟ್ಟಳು.

  “ಎಲ್ರೂ ಇರುವಾಗ ಬರಿಗಾಲಲ್ಲಿ ಎಲ್ಲೂ ಓಡಾಡಬೇಡ. ಆ ನಿನ್ನ ದರಿದ್ರ ಕಟ್ಟಿಗೆ ಚಪ್ಪಲಿಗಳನ್ನು ಹಾಕಿಕೊಂಡು ಯಾರ ಮುಂದೆನೂ ಸುಳಿಬೇಡ.”

  ಅವನ ತಾಯಿ ತುಟಿ ಪಿಟ್ಟೆನ್ನಲಿಲ್ಲ.

  “ಯಾವ ಡ್ರೆಸ್ ಹಾಕ್ಕೊಂತಿಯಮ್ಮ?”

  “ನನ್ಹತ್ರ ಇರೋದು ಮಗಾ! ಅಥವಾ ನೀನು ಯಾವುದನ್ನು ಹೇಳ್ತಿಯಾ ಅದನ್ನು ಮಗಾ!”

  ಬಾಯಲ್ಲಿ ಸಿಗರೇಟ್‍ನ್ನಿಟ್ಟುಕೊಂಡೇ ಮಿಸ್ಟರ್ ಶಾಮನಾಥ ಅವಳನ್ನೊಮ್ಮೆ ಓರೆಗಣ್ಣಿನಿಂದ ನೋಡುತ್ತಾ ಆಕೆಯ ಉಡುಗೆಯನ್ನು ಪರಿಶೀಲಿಸಿದ. ಶಾಮನಾಥನಿಗೆ ಎಲ್ಲವೂ ಸರಿಯಾದ ರೀತಿಯಲ್ಲಿಯೇ ಆಗಬೇಕು. ಮನೆಯ ಆಗುಹೋಗುಗಳೆಲ್ಲಾ ಅವನ ಮೂಲಕವೇ ಆಗಬೇಕು: ಮನೆಯಲ್ಲಿ ಹುಕ್‍ಗಳೆಲ್ಲರಿಬೇಕು? ಮಂಚಗಳೆಲ್ಲರಿಬೇಕು? ಯಾವ ಸೈಜಿನ ಟೇಬಲ್ಲಿರಬೇಕು? ಯಾವ ಬಣ್ಣದ ಕರ್ಟನ್ನುಗಳಿರಬೇಕು? ಕೊನೆಗೆ ಅವನ ಹೆಂಡತಿ ಯಾವ ಸೀರೆ ಉಡಬೇಕು? ಎನ್ನುವದನ್ನು ಕೂಡ ನಿರ್ಧರಿಸವವನು ಅವನೇ! ಶಾಮನಾಥನಿಗೆ ಇಷ್ಟೆಲ್ಲಾ ತಯಾರಿ ಮಾಡಿದ್ದರೂ ಏನೋ ಒಂದು ಅಳುಕಿದ್ದೇ ಇತ್ತು. ಒಂದುವೇಳೆ ಬಾಸ್ ಅಮ್ಮನನ್ನು ನೋಡಿಬಿಟ್ಟರೆ? ಅವರಿಗೆ ಮುಜುಗರವಾಗಬಹುದು. ಆಕೆಯ ವೇಷಭೂಷಣಗಳನ್ನು ನೋಡಿ ಅಸಹ್ಯಪಟ್ಟುಕೊಳ್ಳಬಹುದು. ಏನು ಮಾಡುವದು? ಶಾಮನಾಥ ಪೇಚಿಗೆ ಸಿಲುಕಿದ. ಇದೇ ಯೋಚನೆಯಲ್ಲಿ ಆತ ಒಂದು ಸಾರಿ ತನ್ನ ಅಮ್ಮನನ್ನು ಕೆಳಗಿನಿಂದ ಮೇಲಿನವರೆಗೆ ನೋಡಿ ಹೇಳಿದ “ಅಮ್ಮ, ಈ ಸಂಜೆ ಬಿಳಿ ಸಲ್ವಾರ್ ಮತ್ತು ಬಿಳಿ ಕಮೀಜ್‍ನ್ನು ಹಾಕಿಕೋ....... ಹೋಗು ಈಗ್ಲೇ ಹಾಕಿಕೊಂಡು ಬಾ....... ನಾನು ನೋಡಬೇಕು.”

  ಆಕೆ ಬಟ್ಟೆ ಬದಲಾಯಿಸಲು ನಿಧಾನವಾಗಿ ಎದ್ದು ತನ್ನ ಕೋಣೆಯೊಳಗೆ ಹೋದಳು. ಶಾಮನಾಥ ಮತ್ತೊಮ್ಮೆ ತನ್ನ ಹೆಂಡತಿಗೆ ಇಂಗ್ಲೀಷಿನಲ್ಲಿ ಹೇಳಿದ. “ಈಕೆ ಸಮಸ್ಯೆಯಾಗಲಿದ್ದಾಳೆ......ಜನ ವಿವೇಕದಿಂದ ಮಾತನಾಡುವ ಹಾಗಿದ್ದರೆ ಮಾತ್ರ ಮಾತನಾಡಬೇಕು. ಇಲ್ಲದಿದ್ದರೆ ತೆಪ್ಪಗಿರಬೇಕು. ಅದು ಬಿಟ್ಟು ಈಕೆ ಏನೋ ಮಾತನಾಡಲು ಹೋಗಿ ಇನ್ನೇನೋ ಮಾತನಾಡಿ ನಗೆಪಾಟಲಿಗೀಡಾದರೆ? ಬಾಸ್‍ ತಪ್ಪಾಗಿ ತಿಳಿಯಬಹುದು. ಆಗ ಇಡೀ ಪಾರ್ಟಿಯ ಮೂಡು ಹಾಳಾಗಿಬಿಡುತ್ತದೆ.”

  ಅವನ ತಾಯಿ ಬಿಳಿ ಸಲ್ವಾರ್ ಮತ್ತು ಬಿಳಿ ಕಮೀಜ್‍ನ್ನು ತೊಟ್ಟು ಹೊರಬಂದಳು. ಆಕೆ ಆ ಉಡುಗೆಯಲ್ಲಿ ಮುಂಚೆಗಿಂತ ಸ್ವಲ್ಪ ಕುಳ್ಳಗಿರುವಂತೆ ಕಂಡಳು. ಇನ್ನು ಆಕೆಯ ಸುಕ್ಕುಗಟ್ಟಿದ ದೇಹ ಬಿಳಿ ಬಟ್ಟೆಯಲ್ಲಿ ಸುತ್ತಿದಂತೆ ಕಾಣುತ್ತಿತ್ತು. ಅವಳ ಅಳಿದುಳಿದ ಕೂದಲುಗಳು ದುಪ್ಪಟ್ಟಾದೊಳಗೆ ಅಡಗಿಕೊಂಡಿದ್ದವು. ಈಗ ಮೊದಲಿಗಿಂತ ಮತ್ತಷ್ಟು ಕುರೂಪಿಯಾಗಿ ಕಂಡಳು.

  “ಗುಡ್! ಚನ್ನಾಗಿದೆ. ಬಳೆ ಅಥವಾ ಒಡವೆಗಳೇನಾದರಿದ್ದರೆ ಅವನ್ನೂ ಹಾಕಿಕೋ. ಪರ್ವಾಗಿಲ್ಲ.”

  “ಒಡವೆ ಎಲ್ಲಿಂದ ತರ್ಲಿ ಮಗಾ? ನಾನು ಅವನ್ನೆಲ್ಲಾ ನಿನ್ನ ಓದಿಸೋಕೆ ಮಾರಿದ್ದು ನಿಂಗೆ ಗೊತ್ತೇ ಇದೆ.”

  ಈ ಮಾತು ಶಾಮನಾಥನನ್ನು ಬಾಣದಂತೆ ಬಂದು ನಾಟಿತು. ಸ್ವಲ್ಪ ಖಾರವಾಗಿ ಹೇಳಿದ “ಅದನ್ನೆಲ್ಲಾ ಹೇಳೋ ಅಗತ್ಯ ಏನಿದೆ ಈಗ? ಸುಮ್ನೆ ನಿನ್ಹತ್ರ ಯಾವ ಒಡವೆನೂ ಇಲ್ಲಾ ಅಂತಾ ಹೇಳು, ಸಾಕು. ನಂಗೆ ಅರ್ಥವಾಗುತ್ತೆ. ಆ ವಿಷ್ಯ ಯಾಕೆ ಕೆದಕತಿಯಾ ಈಗ? ನೀನು ಒಡವೆ ಮಾರಿದ್ದು ನಿಂಗೆ ಲಾಭವೇ ಆಗಿದೆ. ನಿನ್ನ ಮಗ ಓದಿ ಕೆಲಸಕ್ಕೆ ಸೇರಿದ. ಅದುಬಿಟ್ಟು ಫೇಲ್ ಆಗಿ ವಾಪಸ್ ಬಂದು ಮನೇಲಿ ಕೂರಲಿಲ್ವಲ್ಲ? ಅದಕ್ಕೆ ಖುಷಿಪಡು...... ನೀನು ಏನೇನು ಕೊಟ್ಟಿದ್ದೀಯೋ ಅದರ ಎರಡರಷ್ಟು ವಾಪಾಸ್ ಕೊಡತೇನಿ ತಗೋ......!

  “ಅಯ್ಯೋ, ದೇವರೆ! ಎಲ್ಲಾದ್ರು ಉಂಟೆ? ನಿನ್ನಿಂದ ನಾನು ಒಡವೆ ವಾಪಾಸ್ ತಗೊಳ್ಳೋದಂದ್ರೇನು? ಏನೋ ಬಾಯಿ ತಪ್ಪಿ ಹಾಗೆ ಹೇಳಿಬಿಟ್ಟೆ ಮಗಾ! ನನ್ನ ನಾಲ್ಗಿ ಸುಡ್ಲಿ!”

  ಆಗಲೇ ಘಂಟೆ ಐದೂವರೆಯಾಗಿತ್ತು. ಶಾಮನಾಥನು ಸ್ನಾನ ಮುಗಿಸಿ ಸಿದ್ಧವಾಗಬೇಕಿತ್ತು. ಮಿಸೆಸ್ ಶಾಮನಾಥ ಅದಾಗಲೇ ತನ್ನ ಕೋಣೆ ಸೇರಿ ಬಹಳ ಹೊತ್ತಾಗಿತ್ತು. ಶಾಮನಾಥನು ಅಲ್ಲಿಂದ ಹೋಗುವ ಮುನ್ನ ತನ್ನ ತಾಯಿಗೆ ಮತ್ತೊಂದು ಉಪದೇಶ ನೀಡಿದ. “ಅಮ್ಮ, ದಿನಾ ಮೂಗನ ತರ ಕೂತ್ಕೊಳ್ಳೋ ಹಾಗೆ ಕೂತ್ಕೋಬೇಡ. ಅಕಸ್ಮಾತ್ ಸಾಹೇಬ್ರೇನಾದರು ಈ ಕಡೆ ಬಂದು ನಿನ್ನ ಏನಾದ್ರು ಕೇಳಿದರೆ, ಸರಿಯಾಗಿ ಉತ್ತರ ಕೊಡು.”

  “ನಾನು ಯಾವತ್ತೂ ಈಸ್ಕೂಲಿಗೆ ಹೋಗಿ ಓದು ಬರಹ ಕಲಿತವಳಲ್ಲ. ಹಿಂಗಿದ್ದ ಮೇಲೆ ನಾನ್ಹೇಗೆ ಅವರಿಗೆ ಉತ್ತರ ಕೊಡಲಿ? ಅವರಿಗೆ ಮೊದ್ಲೇ ಹೇಳಿಬಿಡು ನಾನು ಓದು ಬರಹ ಬರದಾಕಿ ಎಂದು. ಆಗ ಅವರು ನನ್ನ ಏನೂ ಕೇಳೋದಿಲ್ಲ.”

  ಏಳು ಘಂಟೆಯಾಗುತ್ತಿದ್ದಂತೆ ಅವನ ತಾಯಿಯ ಎದೆ ಒಂದೇ ಸಮನೆ ಹೊಡೆದುಕೊಳ್ಳತೊಡಗಿತು. ಒಂದು ವೇಳೆ ಬಾಸ್ ಅವಳ ಬಳಿ ಬಂದು ಏನಾದರೂ ಕೇಳಿದರೆ ಏನು ಹೇಳುವದು? ಅವಳು ದೂರದಿಂದಲೇ ಇಂಗ್ಲೀಷರನ್ನು ನೋಡಿದರೆ ಸಾಕು ಹೆದರಿಬಿಡುತ್ತಿದ್ದಳು. ಈಗ ಬರುತ್ತಿರುವವರು ಅಮೆರಿಕಾದ ಸಾಹೇಬರು ಬೇರೆ. ಅವರೇನು ಕೇಳುತ್ತಾರೋ? ಈಕೆ ಏನು ಹೇಳುತ್ತಾಳೋ? ದೇವರಿಗೊಂದು ಗೊತ್ತು! ಆಕೆ ಸುಮ್ಮನೆ ಮನೆಯ ಹಿಂದೆ ಇರುವ ಆಕೆಯ ವಿಧವೆ ಗೆಳತಿಯ ಮನೆಗೆ ಹೋಗಿದ್ದರಾಗುತ್ತಿತ್ತು! ಆದರೆ ಅವಳು ತಾನೆ ಹೇಗೆ ಮಗನ ಮಾತನ್ನು ಮೀರುತ್ತಾಳೆ? ಈಗ ಸುಮ್ಮನೆ ಕಾಲು ಇಳಿಬಿಟ್ಟು ಆ ಖುರ್ಚಿಯ ಮೇಲೆ ಕುಳಿತುಕೊಂಡಳು.

  ಒಂದು ಯಶಸ್ವಿ ಪಾರ್ಟಿ ಅಂದ ಮೇಲೆ ಅಲ್ಲಿ ಮದ್ಯ ಯಥೇಚ್ಛವಾಗಿ ಹರಿಯಲೇಬೇಕು. ಶಾಮನಾಥನ ಪಾರ್ಟಿ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಅದು ಯಶಸ್ವಿನ ತುತ್ತತುದಿಯನ್ನು ಮುಟ್ಟುವದರಲ್ಲಿತ್ತು. ಅವರ ಸಂಭಾಷಣೆಯೂ ಸಹ ಮದ್ಯವನ್ನು ಗ್ಲಾಸಿಗೆ ಸುರಿದಷ್ಟೇ ವೇಗದಲ್ಲೇ ಸಾಗುತ್ತಿತ್ತು. ಅಲ್ಲಿ ಯಾವುದೇ ಅಡ್ಡಿ ಆತಂಕಗಳಿರಲಿಲ್ಲ. ಸಾಹೇಬರು ವಿಸ್ಕಿಯನ್ನು ತುಂಬಾ ಇಷ್ಟಪಟ್ಟರು. ಸಾಹೇಬರ ಹೆಂಡತಿ ಮನೆಯ ಕರ್ಟನ್ನುಗಳನ್ನು, ಸೋಫಾ ಕವರಿನ ವಿನ್ಯಾಸವನ್ನು, ಹಾಗೂ ದಿವಾನಖಾನೆಯ ಅಲಂಕಾರವನ್ನು ತುಂಬಾ ಇಷ್ಟಪಟ್ಟಳು. ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು?

  ಪಾನಗೋಷ್ಠಿಯ ಎರಡನೇ ಸುತ್ತಿನಿಂದ ಮಾತ್ರ ಸಾಹೇಬರು ಜೋಕುಗಳನ್ನು ಹೇಳುವದಿಕ್ಕೆ, ತಮಾಷೆ ಮಾಡುವದಕ್ಕೆ ಶುರು ಮಾಡಿದರು. ಆಫಿಸಿನಲ್ಲಿ ಎಷ್ಟು ಫ್ರೆಂಡ್ಲಿಯಾಗಿರುತ್ತಿದ್ದರೋ ಅಷ್ಟೆ ಫ್ರೆಂಡ್ಲಿಯಾಗಿ ಇಲ್ಲೂ ಇದ್ದರು. ಮತ್ತವರ ಹೆಂಡತಿ ಕಪ್ಪು ಗೌನನ್ನು ಧರಿಸಿ, ಕುತ್ತಿಗೆಗೆ ಬಿಳಿ ಮುತ್ತಿನ ಹಾರವನ್ನು ಹಾಕಿಕೊಂಡು, ಪೌಡರ್ ಮತ್ತು ಸುಗಂಧ ದ್ರವ್ಯಗಳಲ್ಲಿ ಘಮಗುಡುತ್ತಾ ಅಲ್ಲಿರುವ ಭಾರತೀಯ ಹೆಣ್ಣುಮಕ್ಕಳ ಮೆಚ್ಚುಗೆಗೆ ಪಾತ್ರಳಾದಳು. ಆಕೆ ಎಲ್ಲದಕ್ಕೂ ಒಯ್ಯಾರದಿಂದ ನಗುತ್ತಾ ತಲೆ ಅಲ್ಲಾಡಸುತ್ತಿದ್ದಳು. ಶಾಮನಾಥನ ಹೆಂಡತಿ ತನ್ನ ಹಳೆಯ ಸ್ನೇಹಿತೆಯೇನೋ ಎಂಬಷ್ಟು ಸಲಿಗೆಯಿಂದ ಆಕೆಯ ಹತ್ತಿರ ಮಾತನಾಡುತ್ತಿದ್ದಳು.

  ಪಾನಗೋಷ್ಠಿಯ ಪ್ರವಾಹದಲ್ಲಿ ಮುಳುಗಿದವರಿಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಅದಾಗಲೇ ಹತ್ತು ಘಂಟೆ ಮೂವತ್ತು ನಿಮಿಷವಾಗಿತ್ತು.

  ಕೊನೆಯದಾಗಿ ಎಲ್ಲರೂ ತಂತಮ್ಮ ಗ್ಲಾಸುಗಳಿಂದ ಕೊನೆಯ ಗುಟುಕನ್ನು ಹೀರಿ ಖಾಲಿ ಮಾಡಿದರು. ಈಗ ಎಲ್ಲರೂ ಎದ್ದು ಊಟಕ್ಕಾಗಿ ಕುಳಿತುಕೊಳ್ಳುವ ಕೊಠಡಿಯತ್ತ ಹೊರಟರು. ದಾರಿ ತೋರಿಸಲು ಶಾಮನಾಥ ಮುಂದೆ ನಡೆದರೆ ಅವನ ಹಿಂದೆ ಅವನ ಬಾಸ್ ಮತ್ತು ಇತರ ಅತಿಥಿಗಳು ನಡೆದರು.

  ವರಾಂಡಕ್ಕೆ ಬರುತ್ತಿದ್ದಂತೆ ಅಲ್ಲಿ ಅವನ ಅಮ್ಮ ಕುಳಿತಿದ್ದ ದೃಶ್ಯವನ್ನು ನೋಡಿ ಶಾಮನಾಥ ಇದ್ದಕ್ಕಿದ್ದಂತೆ ದಂಗು ಬಡಿದವನಂತೆ ನಿಂತುಬಿಟ್ಟ. ಅವನ ತಾಯಿ ವರಾಂಡದಲ್ಲಿದ್ದ ತನ್ನ ಕೋಣೆಯ ಮುಂದುಗಡೆ ಬಲಭಾಗದಲ್ಲಿ ಮಗನ ಆದೇಶದಂತೆ ಸರಿಯಾಗಿ ಖುರ್ಚಿಯ ಮೇಲೆ ಕುಳಿತಿದ್ದಳು. ಆದರೆ ಅವಳ ಪಾದಗಳು ಖುರ್ಚಿಯ ಮೇಲಿದ್ದವು. ಅವಳ ತಲೆ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಜೋಲಾಡುತ್ತಿತ್ತು ಹಾಗೂ ಅವಳ ಬಾಯಿಂದ ಭಯಂಕರ ಗೊರಕೆಯ ಸದ್ದು ಹೊರಡುತ್ತಿತ್ತು. ಅವಳ ದುಪ್ಪಟ್ಟಾ ತಲೆಯ ಮೇಲಿಂದ ಕೆಳಗೆ ಜಾರಿತ್ತು. ಇವರೆಲ್ಲರ ಸದ್ದಿನಿಂದಾಗಿ ಆಕೆ ಎಚ್ಚರಗೊಂಡಳು.

  ಆಕೆಯನ್ನು ನೋಡಿದ್ದೇ ತಡ ಶಾಮನಾಥನ ಪಿತ್ತ ನೆತ್ತಿಗೇರಿತು. ಶಾಮನಾಥನಿಗೆ ಅವಳ ಕಾಲನ್ನು ಹಿಡಿದು ದರದರನೆ ಎಳೆದು ಅವಳ ಕೋಣೆಯಲ್ಲಿ ಬೀಸಾಕಬೇಕೆನಿಸಿತು. ಆದರೆ ಅವನ ಬಾಸ್ ಮತ್ತು ಇತರ ಅತಿಥಿಗಳು ಹತ್ತಿರದಲ್ಲಿಯೇ ಇದ್ದುದರಿಂದ ಅದು ಸಾಧ್ಯವಾಗಲಿಲ್ಲ.

  ಪಕ್ಕದಲ್ಲಿಯೇ ಇದ್ದ ಶಾಮನಾಥನ ಇಂಡಿಯನ್ ಅಧಿಕಾರಿಗಳ ಹೆಂಡಿರು ಅವನ ಅಮ್ಮನನ್ನು ನೋಡಿ ಕಿಸಿಕಿಸಿಯೆಂದು ನಕ್ಕರು. ಆದರೆ ಬಾಸ್ ಮಾತ್ರ “ಪೂರ್ ಡಿಯರ್!” ಎಂದು ಸೌಮ್ಯವಾಗಿ ಹೇಳಿದರು.

  ಇವರೆಲ್ಲರನ್ನು ನೋಡಿ ಅಮ್ಮ ಆತುರಾತುರದಲ್ಲಿ ನೇರವಾಗಿ ಕುಳಿತಳು. ತನ್ನ ಮುಂದಿರುವ ಅಷ್ಟೂ ಜನರನ್ನು ನೋಡಿ ಗಾಬರಿಯಲ್ಲಿ ಅಮ್ಮನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ತಕ್ಷಣ ತನ್ನ ದುಪ್ಪಟ್ಟಾವನ್ನು ತಲೆಯ ಮೇಲೆಳೆದುಕೊಳ್ಳುತ್ತಾ ಎದ್ದು ನಿಂತು ನೆಲವನ್ನೇ ದಿಟ್ಟಿಸತೊಡಗಿದಳು. ಅವಳ ಕಾಲುಗಳು ಭಯದಿಂದ ತತ್ತರಿಸುತ್ತಿದ್ದವು.

  “ಅಮ್ಮ, ಹೋಗಿ ಮಲ್ಕೋ. ಇನ್ನೂ ಯಾಕ ಎದ್ದಿದ್ದೀಯಾ?” ಎಂದು ಹೇಳುತ್ತಾ ಶಾಮನಾಥನು ತನ್ನ ಬಾಸ್‍ನನ್ನು ನೋಡಿ ಪೆಚ್ಚು ನಗೆ ನಕ್ಕ.

  ಬಾಸ್ ನಗುತ್ತಾ ನಿಂತಲ್ಲಿಂದಲೇ “ನಮಸ್ತೆ” ಎಂದು ಹೇಳಿದರು.

  ಅವನ ತಾಯಿ ಹಿಂದುಮುಂದು ನೋಡುತ್ತಾ ಅತ್ಯಂತ ಸಂಕೋಚದಿಂದ ಒಂದು ಕೈಯನ್ನು ದುಪ್ಪಟ್ಟಾದೊಳಗಿಟ್ಟು ಅದರಲ್ಲಿ ಜಪಮಣಿಯನ್ನು ಹಿಡಿದು ಇನ್ನೊಂದು ಕೈಯನ್ನು ದುಪ್ಪಟ್ಟಾದ ಹೊರಗಿಟ್ಟು ಅವೆರಡನ್ನೂ ಜೋಡಿಸಿ ನಮಸ್ತೆ ಎಂದು ಹೇಳಿದಳು. ಆದರೆ ಅದು ಸರಿಯಾಗಿ ಬರಲಿಲ್ಲ. ಶಾಮನಾಥ ಹಲ್ಲುಕಚ್ಚಿದ. ಅಷ್ಟರಲ್ಲಿ ಬಾಸ್ ತನ್ನ ಬಲಗೈಯನ್ನು ಚಾಚಿ ಅವಳ ಕೈ ಕುಲುಕಲು ಮುಂದಾದ. ಆದರೆ ಆಕೆ ಮತ್ತಷ್ಟು ಗಾಬರಿಗೊಳಗಾದಳು.

  “ಅಮ್ಮ, ಕೈ ಶೇಕ್ ಮಾಡು”

  ಅವಳ ಬಲಗೈಯಲ್ಲಿ ಜಪಮಣಿಯಿದ್ದುದರಿಂದ ಅವಳು ತಾನೆ ಹೇಗೆ ಕೈ ಕುಲುಕಿಯಾಳು? ಗಾಬರಿಯಲ್ಲಿ ಅವಳು ತನ್ನ ಎಡಗೈಯನ್ನು ತೆಗೆದು ಸಾಹೇಬರ ಕೈಯಲ್ಲಿಟ್ಟಳು. ಶಾಮನಾಥ ಒಳಗೇ ಕುದಿಯತೊಡಗಿದ. ಅವನ ಇಂಡಿಯನ್ ಅಧಿಕಾರಿಗಳ ಹೆಂಡಿರು “ಹೇ ಹೇ.....” ಎಂದು ಹಲ್ಲು ಗಿಂಜಿದರು.

  “ಹಾಗಲ್ಲಮ್ಮಾ. ಬಲಗೈಯಿಂದ ಶೇಕ್ ಮಾಡಬೇಕು ಅಂತಾ ನಿಂಗೆ ಗೊತ್ತಿಲ್ವಾ? ಎಲ್ಲಿ ಬಲಗೈ ಕೊಡು.”

  ಅಷ್ಟೊತ್ತಿಗಾಗಲೇ ಬಾಸ್ ಅವಳ ಎಡಗೈಯನ್ನು ಹಲವಾರು ಬಾರಿ ಕುಲುಕಿ ಇಂಗ್ಲೀಷಿನಲ್ಲಿ ಕೇಳುತ್ತಿದ್ದರು “ಹೌ ಡು ಯೂ ಡು?”

  “ಅಮ್ಮ, ಸಾಹೇಬರಿಗೆ ಹೇಳು, ‘ಐ ಯಾಮ್ ಫೈನ್. ಐ ಯಾಮ್ ವೆಲ್.’ ಅಂತಾ”

  ಅವನ ತಾಯಿ ಏನೋ ಒಂದು ಗೊಣಗಿದಳು.

  “ಅಮ್ಮ ಹೇಳ್ತಿದ್ದಾಳೆ, ಅವಳು ಚನ್ನಾಗಿದ್ದಾಳಂತೆ. ಎಲ್ಲಿ ಅಮ್ಮ ನೀನೂ ಒಂದು ಸಾರಿ ಹೇಳು, ‘ಹೌ ಡು ಯೂ ಡು?’”

  ಅವಳು ನಿಧಾನವಾಗಿ ಅತ್ಯಂತ ಮುಜುಗರದಿಂದ ಹೇಳಿದಳು, “ಹೌ ಡು ಡು..........”

  ಅಲ್ಲಿ ನಗೆಯ ರಿಂಗಣ ಮೊಳಗಿತು.

  ಬಿಗುವಿನಿಂದ ಕೂಡಿದ್ದ ವಾತಾವರಣ ಈಗ ಸ್ವಲ್ಪ ತಿಳಿಯಾಯಿತು. ಸಾಹೇಬರು ಇಡೀ ಸನ್ನಿವೇಶವನ್ನು ಹತೋಟಿಗೆ ತೆಗೆದುಕೊಂಡಿದ್ದರು. ಜನರೆಲ್ಲಾ ಒಬ್ಬರೊನ್ನೊಬ್ಬರು ತಮಾಷೆ ಮಾಡಿಕೊಳ್ಳುತ್ತಾ ನಗತೊಡಗಿದರು. ಆದರೆ ಶಾಮನಾಥನು ಇನ್ನೂ ಕಳವಳಗೊಂಡೇ ಇದ್ದ.

  ಸಾಹೇಬರು ಇನ್ನೂ ಅಮ್ಮನ ಕೈ ಹಿಡಿದೇ ಇದ್ದರು. ಅಮ್ಮ ನಾಚಿ ನೀರಾಗುತ್ತಿದ್ದಳು. ಸಾಹೇಬರ ಬಾಯಿಂದ ಮದ್ಯದ ವಾಸನೆ ಅವಳ ಮೂಗಿಗೆ ಬಂದು ಬಡಿಯುತ್ತಿತ್ತು.

  ಶಾಮನಾಥ ಇಂಗ್ಲೀಷಿನಲ್ಲಿ ಹೇಳಿದ “ನನ್ನಮ್ಮ ಹಳ್ಳಿಯಿಂದ ಬಂದಾಕೆ. ತನ್ನ ಮುಕ್ಕಾಲು ಜೀವನವನ್ನು ಅಲ್ಲೇ ಕಳೆದಾಕೆ. ಅದಕ್ಕೇ ಅವಳಿಗೆ ನಿಮ್ಮನ್ನು ಕಂಡರೆ ಏನೋ ಒಂಥರಾ ಹಿಂಜರಿತ.”

  ಇದನ್ನು ಕೇಳಿ ಬಾಸ್ ತುಂಬಾ ಖುಷಿಪಟ್ಟ. “ರಿಯಲೀ? ನಂಗೆ ಜಾನಪದ ಹಾಡುಗಳೆಂದರೆ ತುಂಬಾ ಇಷ್ಟ. ಹಾಗಾದ್ರೆ ನಿಮ್ಮ ತಾಯಿಗೆ ಜಾನಪದ ಹಾಡು, ಕುಣಿತಗಳೆಲ್ಲ ಗೊತ್ತಿರಬೆಕಲ್ಲ?” ಎಂದು ಹೇಳುತ್ತಾ ಆಕೆಯನ್ನೇ ದಿಟ್ಟಿಸಿ ನೋಡತೊಡಗಿದ.

  “ಅಮ್ಮ, ಸಾಹೇಬರಿಗೆ ನೀನು ಒಂದು ಹಾಡು ಹಾಡಬೇಕಂತೆ. ಯಾವುದೋ ಒಂದು ಹಾಡು ಸಾಕು. ಹೇಗೂ ನಿಂಗೆ ಬಹಳಷ್ಟು ಹಾಡುಗಳು ಗೊತ್ತಿವೆಯಲ್ಲಾ?”

  ಅವನ ತಾಯಿ ವಿನಮ್ರಳಾಗಿ ಉತ್ತರಿಸಿದಳು, “ಹೇಗೆ ಹಾಡಲಿ ಮಗಾ? ಯಾವತ್ತಾದರೂ ನಾನು ಹಾಡಿದ್ದಿದೆಯೇ?”

  “ಅರೆ, ಅಮ್ಮಾ! ಅತಿಥಿಗಳು ಕೇಳಿದಾಗ ಇಲ್ಲ ಅನ್ನೋಕಾಗುತ್ಯೆ? ಸಾಹೇಬರು ತುಂಬಾ ಖುಷಿಯಲ್ಲಿದ್ದಾರೆ. ನೀನು ಹಾಡದೆ ಹೋದರೆ ಅವರು ಬೇಜಾರು ಮಾಡ್ಕೊತಾರೆ.”

  “ಯಾವ ಹಾಡು ಹಾಡಲಿ ಮಗಾ? ನಂಗ್ಯಾವದು ಗೊತ್ತಿದೆ?”

  “ಅರೆ! ಯಾವುದೋ ಒಂದು ಒಳ್ಳೆ ಜಾನಪದ ಗೀತೆ.”

  ಅಷ್ಟು ಹೇಳುತ್ತಿದ್ದಂತೆ ಇಂಡಿಯನ್ ಆಫೀಸಿಯಲ್ಸ್ ಮತ್ತವರ ಹೆಂಡಿರು ಚಪ್ಪಾಳೆ ತಟ್ಟತೊಡಗಿದರು. ಅಮ್ಮ ದೀನಳಾಗಿ ಮಗನನ್ನೊಮ್ಮೆ ಸೊಸೆಯನ್ನೊಮ್ಮೆ ನೋಡತೊಡಗಿದಳು.

  ಈ ಮಧ್ಯೆ ಅವಳ ಮಗ ಗಂಭೀರವಾಗಿ ಆಜ್ಞಾಪಿಸಿದ, “ಅಮ್ಮ!”

  ಮಗ ಅಪ್ಪಣೆ ಕೊಟ್ಟ ಮೇಲೆ ವಾದ ಮಾಡುವ ಪ್ರಶ್ನೆಯೇ ಇರಲಿಲ್ಲ. ಆಕೆ ಕೆಳಗೆ ಕೂತು ತನ್ನ ಬಡುಕಲು ದ್ವನಿಯಲ್ಲಿ ನಡುಗುತ್ತಾ ಯಾವುದೋ ಒಂದು ಮದುವೆ ಹಾಡನ್ನು ಹಾಡತೊಡಗಿದಳು.

  ಅದು ತುಂಬಾ ತಮಾಷೆಯಾಗಿದ್ದುದರಿಂದ ಇಂಡಿಯನ್ ಹೆಣ್ಣುಮಕ್ಕಳು ಬಿದ್ದುಬಿದ್ದು ನಗತೊಡಗಿದರು. ಮೂರು ಸಾಲು ಹಾಡಿರಲಿಕ್ಕಿಲ್ಲ ಅಮ್ಮ ಹಾಡುವದನ್ನು ನಿಲ್ಲಿಸಿಬಿಟ್ಟಳು. ವರಾಂಡ ಚಪ್ಪಾಳೆಯ ಸದ್ದಿನಿಂದ ಪ್ರತಿದ್ವನಿಸತೊಡಗಿತು. ಸಾಹೇಬರು ಚಪ್ಪಾಳೆಯ ಮೇಲೆ ಚಪ್ಪಾಳೆ ಹೊಡೆಯತೊಡಗಿದರು. ಶಾಮನಾಥನ ಕಸಿವಿಸಿ ಈಗ ಹೆಮ್ಮೆಯಾಗಿ ತಿರುಗಿತು. ಅವನ ತಾಯಿ ಪಾರ್ಟಿಗೆ ಒಂದು ಹೊಸ ಕಳೆಯನ್ನು ತಂದುಕೊಟ್ಟಿದ್ದಳು.

  ಚಪ್ಪಾಳೆಯ ಸದ್ದು ಕಡಿಮೆಯಾದ ಮೇಲೆ ಬಾಸ್ ಕೇಳಿದ “ನಿಮ್ಮ ಪಂಜಾಬಿನ ಹಳ್ಳಿಗಳಲ್ಲಿ ಯಾವ್ಯಾವ ಕರಕುಶಲಕಲೆಗಳಿವೆ?”

  ಶಾಮನಾಥ ಸಂತೋಷದಿಂದ ತೊನೆಯುತ್ತಾ “ಓ, ತುಂಬಾ ಇವೆ ಸಾಹೇಬರೇ! ಎಲ್ಲಾ ಒಂದೊಂದು ಸೆಟ್‍ನ್ನು ನಿಮಗೆ ಉಡುಗೊರೆಯಾಗಿ ಕೊಡುತ್ತೇನೆ. ಅವನ್ನು ನೋಡಿ ನೀವು ಖಂಡಿತ ಇಷ್ಟಪಡುತ್ತೀರಿ.”

  ಆದರೆ ಸಾಹೇಬರು ತಲೆ ಅಲ್ಲಾಡಿಸುತ್ತಾ ಹೇಳಿದರು, “ಬೇಡ, ಅಂಗಡಿಯಿಂದ ನಂಗೇನೂ ಬೇಡ. ಮನೆಯಲ್ಲಿ ಮಾಡಿದ ವಸ್ತುಗಳು ಬೇಕು. ಅಂದಹಾಗೆ ಪಂಜಾಬಿ ಮನೆಗಳಲ್ಲಿ ಯಾವ್ಯಾವ ಕರಕುಶಲಕಲೆಗಳನ್ನು ಮಾಡ್ತಾರೆ? ಇಲ್ಲಿ ಹೆಣ್ಮಕ್ಕಳು ಏನೇನು ಹೆಣಿತಾರೆ?”

  ಶಾಮನಾಥ ಸ್ವಲ್ಪ ಯೋಚಿಸಿ ಹೇಳಿದ “ಹುಡುಗೀರು ಗೊಂಬೆಗಳನ್ನು ಮಾಡ್ತಾರೆ. ಹೆಂಗಸರು ಪುಲ್ಕಾರಿಗಳನ್ನು ಮಾಡ್ತಾರೆ.”

  “ಪುಲ್ಕಾರಿ? ಹಾಗಂದರೇನು?”

  ಪುಲ್ಕಾರಿ ಎಂದರೇನೆಂದು ಸರಿಯಾಗಿ ವಿವರಿಸಲು ಬಾರದೆ ಶಾಮನಾಥನು ತನ್ನ ತಾಯಿಯನ್ನು ಕೇಳಿದ, “ಮನೇಲಿ ಯಾವುದಾದರೂ ಹಳೇ ಪುಲ್ಕಾರಿ ಇದೆಯಾ?”

  ಆಕೆ ಒಳಗೆ ಹೋಗಿ ಒಂದು ಹಳೆಯ ಪುಲ್ಕಾರಿ ತೆಗೆದುಕೊಂಡು ಬಂದಳು.

  ಸಾಹೇಬರು ತುಂಬಾ ಆಸಕ್ತಿಯಿಂದ ಬಣ್ಣಬಣ್ಣದ ಕಸೂತಿ ಹಾಕಿದ ಆ ಬಟ್ಟೆಯನ್ನು ಪರೀಕ್ಷಿಸಿದರು. ಅದು ಹಳೆಯ ಬಟ್ಟೆಯಾಗಿದ್ದು ಅಲ್ಲಲ್ಲಿ ದಾರ ಕಿತ್ತಿತ್ತು. ಇನ್ನು ಕೆಲವು ಕಡೆ ಪಿಸಿದಿತ್ತು. ಇದನ್ನು ಗಮನಿಸಿದ ಶಾಮನಾಥನು ಹೇಳಿದ “ಸಾಹೇಬರೇ, ಇದು ಹರಿದುಹೋಗಿದೆ. ನಿಮಗೆ ಹೊಸಾದು ಮಾಡಿಸಿಕೊಡ್ತೇನೆ. ನನ್ನ ತಾಯಿ ಮಾಡಿಕೊಡ್ತಾಳೆ. ಅಮ್ಮ, ಸಾಹೇಬರಿಗೆ ನಿನ್ನ ಪುಲ್ಕಾರಿ ತುಂಬಾ ಇಷ್ಟವಾಗಿದೆ. ನೀನು ಅವರಿಗೆ ಇಂಥದೊಂದು ಮಾಡಿಕೊಡ್ತಿಯಲ್ವಾ?”

  ಅವನ ತಾಯಿ ಮೌನವಾಗಿದ್ದಳು. ನಂತರ ಮೆಲ್ಲಗೆ ಅಳಕುತ್ತಾ ಹೇಳಿದಳು “ಈಗ ಎಷ್ಟೂ ಅಂತಾ ನೋಡೋಕಾಗುತ್ತೆ ಮಗಾ? ನಂಗೆ ಬೇರೆ ವಯಸ್ಸಾಗಿದೆ. ಮುದಿ ಕಂಗಳು ಹೇಗೆ ತಾನೆ ನೋಡಬಲ್ಲವು?”

  ಆದರೆ ಅವನ ತಾಯಿಯನ್ನು ಅರ್ಧದಲ್ಲಿ ತಡೆಯುತ್ತಾ ಶಾಮನಾಥ ಸಾಹೇಬರಿಗೆ ಹೇಳಿದ “ಆಕೆ ಖಂಡಿತ ನಿಮಗೊಂದು ಮಾಡಿಕೊಡ್ತಾಳೆ. ಯೋಚ್ನೆ ಮಾಡಬೇಡಿ. ನೀವದನ್ನು ನೋಡಿ ಖುಷಿಪಡೋದರಲ್ಲಿ ಎರಡು ಮಾತಿಲ್ಲ.”

  ಸಾಹೇಬರು ತಲೆದೂಗುತ್ತಾ ಅವನಿಗೊಂದು ಥ್ಯಾಂಕ್ಸ್ ಹೇಳಿ ಸಣ್ಣದಾಗಿ ಓಲಾಡುತ್ತ ಡೈನಿಂಗ್ ಟೇಬಲ್‍ನತ್ತ ನಡೆದರು. ಬೇರೆ ಅತಿಥಿಗಳೆಲ್ಲಾ ಅವರನ್ನು ಹಿಂಬಾಲಿಸಿದರು.

  ಎಲ್ಲರೂ ಅಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮುದುಕಿ ನಿಧಾನವಾಗಿ ಎದ್ದು ಅವರ ಕಣ್ಣಿಗೆ ಕಾಣಿಸದಂತೆ ತನ್ನ ಕೋಣೆಯೊಳಗೆ ಹೋದಳು.

  ಆಕೆ ಕೋಣೆಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅವಳ ಕಂಗಳು ತುಂಬಿ ಬಂದವು. ಅವನ್ನು ತನ್ನ ದುಪ್ಪಟ್ಟಾದಿಂದ ಪದೆಪದೆ ಒರೆಸಿಕೊಂಡಳಾದರೂ ಮತ್ತೆ ಮತ್ತೆ ತುಂಬಿ ಬಂದವು. ತನ್ನನ್ನು ಸಮಾಧಾನಪಡಿಸಿಕೊಳ್ಳುತ್ತಾ ತನ್ನ ಮಗನಿಗೆ ದೀರ್ಘಾಯಸ್ಸು ಸಿಗಲಿ ಎಂದು ಆ ದೇವರಲ್ಲಿ ಕಣ್ಣು ಮುಚ್ಚಿ ಪ್ರಾರ್ಥಿಸಿದಳು. ಆದರೆ ಅವಳ ಕಣ್ಣೀರು ಮಾನ್ಸೂನ್ ಮಳೆಯಂತೆ ಒಂದೇ ಸಮನೆ ತೊಟ್ಟಿಕ್ಕತ್ತಿದ್ದವು.

  ಅದು ಮಧ್ಯರಾತ್ರಿಯಾಗಿರಬಹುದು. ಅತಿಥಿಗಳೆಲ್ಲಾ ಊಟಮಾಡಿ ಒಬ್ಬೊಬ್ಬರಾಗಿ ಜಾಗ ಖಾಲಿಮಾಡಿದರು. ಅಮ್ಮ ಏನನ್ನೋ ನೋಡುತ್ತಾ ಗೋಡೆಗೊರಗಿಕೊಂಡು ಕುಳಿತಿದ್ದಳು. ಬೆಳಿಗ್ಗೆಯಿಂದ ಮನೆಯಲ್ಲಿದ್ದ ಉದ್ವಿಗ್ನತೆ ಈಗ ಮಾಯವಾಗಿತ್ತು. ಸುತ್ತಮುತ್ತಲಿನ ಮನೆಗಳಿಗೆ ಆವರಿಸಿದ್ದ ನೀರವತೆ ಈಗ ಶಾಮನಾಥನ ಮನೆಗೂ ಆವರಿಸಿತ್ತು. ಇದ್ದಕ್ಕಿದ್ದಂತೆ ಯಾರೋ ಅವಳ ಬಾಗಿಲನ್ನು ಜೋರಾಗಿ ತಟ್ಟಿದರು.

  “ಅಮ್ಮ, ಬಾಗಿಲು ತೆಗಿ!”

  ಅವಳ ಎದೆ ಧಸಕ್ಕೆಂದಿತು. ಅವಸರವಸರವಾಗಿ ಎದ್ದು ನಿಂತಳು. ಇನ್ನೊಂದು ತಪ್ಪೇನಾದರು ಮಾಡಿದ್ದೇನೆಯೇ? ಯಾಕಾದರೂ ನಿದ್ದೆ ಮಾಡಿದೆನೋ? ಯಾಕಾದರೂ ತೂಕಡಿಕೆ ಬಂತೋ? ಎಂದು ಇನ್ನಿಲ್ಲದಂತೆ ಅವಳು ತನ್ನನ್ನು ತಾನೇ ಶಪಿಸಿಕೊಂಡಳು.

  ಆಕೆಯ ಮಗ ಇನ್ನೂ ಅವಳನ್ನು ಕ್ಷಮಿಸಿಲ್ಲವೆ? ನಡುಗುವ ಕೈಗಳಿಂದ ಬಾಗಿಲನ್ನು ತೆಗೆದಳು.

  ಬಾಗಿಲನ್ನು ತೆಗೆಯುತ್ತಿದ್ದಂತೆ ಶಾಮನಾಥ ಮುಂದೆ ಬಂದು ಅವಳನ್ನು ತಬ್ಬಿಕೊಂಡ.

  “ಓ, ಅಮ್ಮ! ಈ ರಾತ್ರಿ ನೀನು ಅದ್ಭುತವಾದ ಪವಾಡವನ್ನೇ ಮಾಡಿಬಿಟ್ಟೆ. ಸಾಹೇಬರು ತುಂಬಾ ಸಂತೋಷಪಟ್ಟರು. ಐ ಯಾಮ್ ಹ್ಯಾಪಿ. ಐ ಕಾಂಟ್ ಟೆಲ್ ಯೂ. ಓ, ಅಮ್ಮಿ! ಅಮ್ಮಿ!”

  ಅವಳ ಸಣಕಲು ದೇಹ ಅವನ ಅಪ್ಪುಗೆಯಲ್ಲಿ ಮುದುಡಿ ಕೂತಿತ್ತು. ಅವಳ ಕಂಗಳಲ್ಲಿ ಮತ್ತೆ ನೀರು ಚಿಮ್ಮಿತು. ಅವನ್ನು ಒರೆಸಿಕೊಳ್ಳುತ್ತಾ “ಮಗಾ, ನನ್ನನ್ನು ಹರಿದ್ವಾರಕ್ಕೆ ಕಳಿಸಿಬಿಡು. ನಾನು ನಿಂಗೆ ತುಂಬಾ ದಿವಸದಿಂದ ಹೇಳ್ತಾನೇ ಇದ್ದೇನೆ.”

  ತಕ್ಷಣ ಶಾಮನಾಥನು ತನ್ನ ಅಪ್ಪುಗೆಯನ್ನು ಸಡಿಲಗೊಳಿಸಿ ಹುಬ್ಬುಗಂಟಿಕ್ಕುತ್ತಾ ಕೇಳಿದ “ಏನಮ್ಮಾ? ಏನು ಹೇಳಿದೆ ನೀನು? ಇದ್ಯಾವ ರಾಗ ಶುರು ಮಾಡಿದಿ ಈಗ?”

  ಶಾಮನಾಥನ ಕೋಪ ಹೆಚ್ಚುತ್ತಾ ಹೋಯಿತು. “ಏನಮ್ಮಾ ನನ್ನ ಮರ್ಯಾದೆ ಕಳಿಬೇಕಂತ ಮಾಡಿಯಾ? ಜನಾ ಎಲ್ಲಾ ಏನು ಅಂತಾರೆ? ಮಗ ಅವರಮ್ಮನ್ನ ತನ್ನ ಜೊತೆ ಇಟ್ಕೊಳ್ಳಲಾರದೆ ಹರಿದ್ವಾರಕ್ಕೆ ಕಳಿಸಿದ್ದಾನೆ ನೋಡು ಅಂತಾ ಆಡಿಕೊಳ್ಳೊಲ್ಲಾ?”

  “ಇಲ್ಲ ಮಗಾ! ನೀನೀಗ ನಿನ್ನ ಹೆಂಡತಿ ಜೊತೆ ಹ್ಯಾಗೆ ಬೇಕೋ ಹಾಗಿರು. ನಾನು ಚನ್ನಾಗಿ ಉಂಡಿದ್ದೇನೆ, ಉಟ್ಟಿದ್ದೇನೆ. ನಂದು ಎಲ್ಲಾ ಮುಗಿದಿದೆ. ಇಲ್ಲಿ ಇದ್ದು ಏನು ತಾನೆ ಮಾಡ್ಲಿ? ಏನೋ ಇರೋ ಇನ್ನು ಸ್ವಲ್ಪ ದಿನ ದೇವರ ಹೆಸರು ಹೇಳಿಕೋತ ಕಾಲ ಕಳಿತೇನಿ. ನನ್ನ ಹರಿದ್ವಾರಕ್ಕೆ ಕಳಿಸಿಬಿಡು!”

  “ನೀನು ಹೋದರೆ ಪುಲ್ಕಾರಿ ಹೆಣೆದುಕೊಡೋರು ಯಾರು? ನಿನ್ನ ಮುಂದೆನೇ ಸಾಹೇಬರಿಗೆ ಪುಲ್ಕಾರಿ ಹೆಣಿಸಿಕೊಡ್ತೇನಿ ಅಂತಾ ಹೇಳಿದ್ದೇನೆ.”

  “ಪುಲ್ಕಾರಿ ಹೆಣೆದು ಕೊಡುವಷ್ಟು ನನ್ನ ಕಣ್ಣು ಕಾಣಿಸೋದಿಲ್ಲ ಮಗಾ. ಬೇರೆ ಎಲ್ಲಾದ್ರೂ ಹೆಣಿಸಿಕೊಡು. ಅಥವಾ ಒಂದು ರೆಡಿಮೇಡೇ ತಂದುಕೊಡು.”

  “ಅಮ್ಮಾ, ನನ್ನ ಕೆಳಗಿಳಿಸಬೇಕಂತ ಮಾಡಿಯೇನು? ನನ್ನ ಭವಿಷ್ಯದ ಏಳಿಗೆಯನ್ನು ಹಾಳು ಮಾಡಬೇಕಂತ ಅನ್ಕೊಂಡಿದ್ದೀಯಾ? ನಿಂಗೊತ್ತಿಲ್ವಾ ಸಾಹೇಬರನ್ನು ಖುಶಿಗೊಳಿಸಿದರೆ ನಂಗೆ ಪ್ರಮೋಶನ್ ಸಿಗುತ್ತೆ ಅಂತಾ?”

  ಅವನ ತಾಯಿ ಸ್ವಲ್ಪ ಹೊತ್ತು ಸುಮ್ಮನಿದ್ದು ಬಳಿಕ ಮಗನನ್ನು ನೋಡುತ್ತಾ ಕೇಳಿದಳು “ನಿಂಗೆ ಪ್ರಮೋಶನ್ ಸಿಗುತ್ತಾ? ಸಾಹೇಬರು ನಿಂಗೆ ಪ್ರಮೋಶನ್ ಕೊಡ್ತಾರಾ? ಅವರು ಹಾಗಂತ ಹೆಳಿದ್ದಾರೆಯೇ?”

  “ಹಾಗಂತ ಏನೂ ಹೇಳಿಲ್ಲ. ಆದರೆ ಅವರು ಎಷ್ಟು ಖುಷಿಯಾಗಿದ್ದರು ಅಂತಾ ನೀನೇ ನೋಡಲಿಲ್ವಾ? ಅವರು ಹೇಳ್ತಾ ಇದ್ದರು ನೀನು ಪುಲ್ಕಾರಿ ಹೆಣೆಯೋಕೆ ಶುರು ಮಾಡಿದಾಗ ಅದನ್ನು ಹೇಗೆ ಮಾಡತಿಯಾ ಅಂತ ನೋಡೋಕೆ ಒಂದು ದಿವಸ ಬರ್ತಾರಂತೆ. ನಾವು ಸಾಹೇಬರನ್ನು ಸಂತೋಷಪಡಿಸಿದರೆ ನಂಗೆ ಇದಕ್ಕಿಂತ ಒಳ್ಳೆ ಕೆಲಸ ಸಿಗ್ತದಮ್ಮಾ. ನಾನು ಸೀನಿಯರ್ ಎಗ್ಜಿಕ್ಯುಟಿವ್ ಆಗಬಹುದು.”

  ನಿಧಾನವಾಗಿ ಸುಕ್ಕುಗಟ್ಟಿದ ಅವನ ತಾಯಿಯ ಮುಖ ಕಾಂತಿಯಿಂದ ಪ್ರಕಾಶಿಸತೊಡಗಿತು. ಕಂಗಳು ಮಿಂಚಿನಿಂದ ಹೊಳೆಯತೊಡಗಿದವು.

  “ಹಾಗಾದ್ರೆ ನಿಂಗೆ ಪ್ರಮೋಷನ್ ಸಿಗುತ್ತಾ ಮಗಾ?”

  “ಹಾಗೆ ಸಿಕ್ಕಬಿಡುತ್ತಾ ಅಮ್ಮಾ? ನಾನು ಸಾಹೇಬರನ್ನು ಖುಷಿಪಡಿಸಿದರೆ ಮಾತ್ರ ಅವರು ಏನಾದರೂ ಮಾಡ್ತಾರೆ. ಇಲ್ಲಾಂದ್ರೆ ಅವರನ್ನು ಖುಷಿಪಡಿಸಿ ಪ್ರಮೋಷನ್ ತಗೊಳ್ಳೋ ಜನರಿಗೇನೂ ಕೊರತೆಯಿಲ್ಲ.”

  “ಹಾಗಾದ್ರೆ ನಾನು ಮಾಡ್ತೀನಿ ಮಗಾ. ಹೇಗೋ ಬೇಕೋ ಹಾಗೆ ಮಾಡ್ತೀನಿ.”

  ಆಕೆ ಮನಸ್ಸಲ್ಲಿ ತನ್ನ ಮಗನ ಉಜ್ವಲ ಭವಿಷ್ಯಕ್ಕಾಗಿ ಉತ್ಕಟವಾಗಿ ಹಾರೈಸಿದಳು. ಶಾಮನಾಥನು ತನ್ನ ತಾಯಿಗೆ “ಈಗ ಮಲಗು” ಎಂದು ಹೇಳಿ ಕೊಂಚ ಮುಗ್ಗರಿಸುತ್ತಾ ತನ್ನ ಕೋಣೆಯತ್ತ ನಡೆದುಬಂದ.  ಮೂಲ: ಭೀಷ್ಮ ಸಹಾನಿ

  ಕನ್ನಡಕ್ಕೆ: ಉದಯ್ ಇಟಗಿ

  ಈ ಕಥೆ ಫೆಬ್ರುವರಿ 24, 2013ರ “ಉದಯವಾಣಿ” ಯಲ್ಲಿ ಪ್ರಕಟವಾಗಿದೆ.
  http://www.udayavani.com/news/255625L15-ಬ-ಳ--ಸ-ಹ-ಬನ-ಗ---ದ--ಭ-ಜನಕ-ಟ.html