Demo image Demo image Demo image Demo image Demo image Demo image Demo image Demo image

ಕನಸು ನನಸುಗಳ ನಡುವಿನ ನೆನಪು (ಭಾಗ-1)

 • ಶುಕ್ರವಾರ, ಡಿಸೆಂಬರ್ 31, 2010
 • ಬಿಸಿಲ ಹನಿ

 • ಈಗ್ಗೆ ಹನ್ನೆರಡು ವರ್ಷಗಳ ಹಿಂದೆ ಒಂದು ಚಳಿಗಾಲದ ಬೆಳ್ಳಂಬೆಳಿಗ್ಗೆ ಬೆಂಗಳೂರಿಗೆ ಬದುಕು ಹುಡುಕಿಕೊಂಡು ಬಂದಿಳಿದಾಗ ಬಗಲಲ್ಲೊಂದು ಮಾಸಿದ ಸೂಟ್ಕೇಸ್, ಕೈಯಲ್ಲೊಂದು ಬಿ.ಎ. ಡಿಗ್ರಿ ಸರ್ಟಿಫಿಕೇಟ್, ಕಿಸೆಯಲ್ಲಿ ಅಕ್ಕನಿಂದ ಸಾಲವಾಗಿ ತಂದ ಒಂದು ಸಾವಿರ ರೂಪಾಯಿ, ತಲೆಯಲ್ಲಿ ಅಷ್ಟೂ ವರ್ಷ ಕಲಿತ ಅರೆಬರೆ ಜ್ಞಾನ, ಕಣ್ಣಲ್ಲಿ ಅಸ್ಪಷ್ಟ ಕನಸುಗಳು, ಮನಸ್ಸಲ್ಲಿ ದೃಢ ಸಂಕಲ್ಪ ಹಾಗೂ ಇರಲು ಜೀವದ ಗೆಳೆಯ ಮಂಜುವಿನ ರೂಮಿತ್ತು. ಚಳಿಗೆ ಮೈ, ಮನಸ್ಸುಗಳೆರಡೂ ಒಮ್ಮೆ ಸಣ್ಣಗೆ ನಡುಗಿದವು. ಮುಂದೆ ಹೇಗೋ ಏನೋ ಎಂಬ ಆತಂಕ ಬೆಂಗಳೂರಿಗೆ ಬದುಕು ಹುಡುಕಿಕೊಂಡು ಬಂದಿಳಿಯುವ ಬಹಳಷ್ಟು ಜನರನ್ನು ಕಾಡುವಂತೆ ನನನ್ನೂ ಆ ಕ್ಷಣಕ್ಕೆ ಕಾಡಿತ್ತು. ಜೀವನದಲ್ಲಿ ಹಂಗು, ಅವಲಂಬನೆ, ಆಸರೆ, ಆರ್ಥಿಕಮುಗ್ಗಟ್ಟುಗಳಿಂದ ಬೇಸತ್ತು ಮೊಟ್ಟ ಮೊದಲಬಾರಿಗೆ ನನ್ನದೇ ನಿರ್ಧಾರದ ಮೇಲೆ ಬೆಂಗಳೂರಿಗೆ ಬದುಕು ಹುಡುಕಿಕೊಂಡು ಬಂದಿದ್ದೆ. ನಾನು ಇಲ್ಲಿ ಯಾವುದಾದರೊಂದು ಕೆಲಸ ಹುಡುಕಿಕೊಂಡು ನನ್ನ ಓದನ್ನು ಮುಂದುವರಿಸುತ್ತಾ ಮುಂದಿನ ಬದುಕನ್ನು ಕಟ್ಟಿಕೊಳ್ಳಬೇಕಿತ್ತು. ಬಂದದ್ದು ಬರಲಿ ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ ಎನ್ನುವ ದೃಢ ನಿರ್ಧಾರದೊಂದಿಗೆಯೇ ಬೆಂಗಳೂರಿಗೆ ಕಾಲಿಟ್ಟಿದ್ದೆ. ಆದರೂ ಸಣ್ಣದೊಂದು ಹೆದರಿಕೆ ಮನದ ಮೂಲೆಯಲ್ಲೆಲ್ಲೋ ಆವರಿಸಿತ್ತು. ಏಕೆಂದರೆ ಬೆಂಗಳೂರು ಕೆಲವರಿಗೆ ಬದುಕು ನೀಡಿ ಪೊರೆದಂತೆಯೇ ಕೆಲವರನ್ನು `ನೀನಿಲ್ಲಿ ಬದುಕಲು ಯೋಗ್ಯನಲ್ಲ ಹೋಗು’ ಎಂದು ಹೇಳಿ ಒದ್ದು ಹೊರಹಾಕಿದ್ದಿದೆ; ಅಂತೆಯೇ ನನ್ನನ್ನೂ ಒದ್ದು ಹೊರಗೆ ಹಾಕಿದರೆ? ಎಂಬ ಅಳಕು ನನ್ನಲ್ಲೂ ಇತ್ತು. ನನ್ನಲ್ಲಿ ಗುರಿಯಿತ್ತು ಆದರೆ ನಾನು ಆ ಗುರಿಯನ್ನು ಮುಟ್ಟೇಮುಟ್ಟುತ್ತೇನೆಂದು ಯಾರೂ ಗ್ಯಾರಂಟಿ ಕೊಟ್ಟಿರಲಿಲ್ಲ. ಏಕೆಂದರೆ ನಾ ನಡೆಯುವ ಹಾದಿ ಅದಾಗಲೇ ಯಾರೋ ರೂಪಿಸಿಟ್ಟ ಸಿದ್ಧಹಾದಿಯಾಗಿರಲಿಲ್ಲ. ಅದನ್ನು ಕಷ್ಟಪಟ್ಟು ನಾನೇ ನಿರ್ಮಿಸಿಕೊಳ್ಳಬೇಕಿತ್ತು. ಬದುಕಲ್ಲಿ ಮುನ್ನುಗ್ಗಬೇಕಿತ್ತು, ಒಂದಿಷ್ಟು ನಜ್ಜುಗಜ್ಜಾಗಿ ಜಜ್ಜಿ ಹೋದರೂ ಸರಿಯೇ! ಛಲಬಿಡದ ತ್ರಿವಿಕ್ರಮನಂತೆ ನಾನಂದುಕೊಂಡ ಗುರಿಯನ್ನು ಮುಟ್ಟಿ ಮೇಲೆ ಬರಬೇಕಿತ್ತು. ಆದರದು ನಾನಂದುಕೊಂಡಷ್ಟು ಸುಲಭವಿತ್ತೆ? ಬರೀ B.A. ಮಾಡಿದ ನನ್ನಂಥವನಿಗೆ ಬೆಂಗಳೂರಿನಂಥ ಊರಿನಲ್ಲಿ ಯಾರು ತಾನೆ ಕೆಲಸ ಕೊಟ್ಟಾರು? ನನಗೆ ಇಂತಿಂಥದೇ ಕೆಲಸ ಮಾಡಬೇಕೆಂಬ ಯಾವುದೇ ಇರಾದೆ ಇರಲಿಲ್ಲವಾದರೂ ಎರಡು ಹೊತ್ತಿನ ಹೊಟ್ಟೆ ಹೊರೆದು ಓದಲು ಒಂದಷ್ಟು ಸಮಯ ಸಿಗುವಷ್ಟು ಯಾವುದಾದರೊಂದು ನಿಯತ್ತಿನ ಕೆಲಸ ಇದ್ದರೆ ಸಾಕಿತ್ತು. ಎಲ್ಲದಕ್ಕೂ ನಾನು ತಯಾರಿಗಿಯೇ ಬಂದಿದ್ದೆ! ಬದುಕು ಎಲ್ಲವನ್ನೂ ಕಲಿಸುತ್ತದೆ; ಬದುಕುವದನ್ನು ಕೂಡ!

  ಎತ್ತಣ ಮುಧೋಳ? ಎತ್ತಣ ಕಲಕೋಟಿ? ಎತ್ತಣ ಗದಗ? ಎತ್ತಣ ಧಾರವಾಡ? ಎತ್ತಣ ಮಂಡ್ಯ? ಎತ್ತಣ ಬೆಂಗಳೂರು? ಎತ್ತಣ ಲಿಬಿಯಾ? ನನ್ನ ಬದುಕು ಎಷ್ಟೊಂದು ಊರುಗಳಲ್ಲಿ ಹಾದುಹೋಯಿತು? ನಾನು ಎಷ್ಟೊಂದು ದೂರ ನಡೆದು ಬಂದು ಬಿಟ್ಟೆ? ಹಾಗೆ ನಡೆಯುತ್ತಲೇ ಎಷ್ಟೊಂದು ಬೆಳೆದುಬಿಟ್ಟೆ? ಬದುಕು ನನ್ನನ್ನು ಮೇಲಿಂದ ಮೇಲೆ ಕಳ್ಳೆಮಳ್ಳೆ ಆಡಿಸುತ್ತಲೇ ಎಲ್ಲಿಂದ ಎಲ್ಲಿಯವರೆಗೆ ಎಳೆದುತಂದು ಕೈ ಬಿಟ್ಟಿತು! ಈಗ ಅದನ್ನೆಲ್ಲ ನೆನೆಸಿಕೊಂಡರೆ ಎಂಥದೋ ಪುಳಕ, ಎಂಥದೋ ರೋಮಾಂಚನ, ಎಂಥದೋ ಹೆಮ್ಮೆ ಒಮ್ಮೆಲೆ ಉಂಟಾಗುತ್ತವೆ. ಕಣ್ಣಲ್ಲಿ ಆನಂದಭಾಷ್ಪಗಳು ತಾನೆ ತಾನಾಗಿ ಉಕ್ಕುತ್ತವೆ. ಜೊತೆಗೆ ಮನಸ್ಸಲ್ಲಿ ಸಣ್ಣದೊಂದು ಅಹಂಕಾರ ಸದ್ದಿಲ್ಲದೆ ಸರಿದುಹೋಗುತ್ತದೆ. ಆ ಹಾದಿಯಲ್ಲಿ ಏನೆಲ್ಲ ಇತ್ತು!? ಎಷ್ಟೆಲ್ಲ ಎಡರುತೊಡರುಗಳಿದ್ದವು, ಏಳುಬೀಳುಗಳಿದ್ದವು, ನೋವುಗಳಿದ್ದವು, ಅವಮಾನಗಳಿದ್ದವು, ಹೋರಾಟಗಳಿದ್ದವು. ಇವನ್ನೆಲ್ಲ ಹೇಗೆ ಎದುರಿಸಿಬಂದೆ? ಎಂದು ಕೇಳಿಕೊಳ್ಳುವಾಗಲೆಲ್ಲಾ ನಾನು ಹಾದುಬಂದ ನನ್ನ ಸಾಹಸಗಾಥೆ ನೆನಪಾಗುತ್ತದೆ. ಆ ಕಥೆಯ ಹಿಂದಿನ ನೆನಪುಗಳು ಒಂದೊಂದಾಗಿ ಕಣ್ಣಮುಂದೆ ಬಿಚ್ಚಿಕೊಳ್ಳತೊಡಗುತ್ತವೆ. ನಿಧಾನವಾಗಿ ನಾ ನಡೆದು ಬಂದ ಹಾದಿಯ ಹೆಜ್ಜೆಗುರುತುಗಳು ನನ್ನತ್ತ ಒಮ್ಮೆ ನೋಡಿ ಮುಗುಳುನಗೆ ಬೀರುತ್ತವೆ. ‘ಶಹಭಾಷ್ ಮಗನೆ!’ ಎಂದು ಬೆನ್ನುತಟ್ಟುತ್ತಾ ನನ್ನ ಮುಂದಿನ ಕೆಲಸಗಳಿಗೆ, ಸಾಹಸಗಳಿಗೆ ಒಂದಿಷ್ಟು ಸ್ಪೂರ್ತಿಯನ್ನು ತುಂಬುತ್ತವೆ, ಪ್ರೊತ್ಸಾಹವನ್ನು ಕೊಡುತ್ತವೆ. ಹಾಗೆಂದೇ ಅವುಗಳನ್ನು ಆಗಾಗ್ಗೆ ಮೆಲಕುಹಾಕುತ್ತೇನೆ. ಮೆಲಕುಹಾಕುತ್ತಲೇ ಅವುಗಳನ್ನು ಮತ್ತೆ ಮತ್ತೆ ಕಣ್ಣಮುಂದೆ ಆಡಲುಬಿಟ್ಟು ಮುದಗೊಳ್ಳುತ್ತೇನೆ. ಮುದಗೊಳ್ಳುತ್ತಲೇ “ಓ ಬದುಕೆ, ನೀನಿಷ್ಟೇನಾ?” ಎಂದು ಒಮ್ಮೆ ಬದುಕಿನತ್ತ ನೋಡಿ ಗಹಗಹಿಸಿ ನಗುತ್ತೇನೆ. ತಟ್ಟನೆ “ನಗು ಮಗನೆ ನಗು, ನನಗೆ ಗೊತ್ತು! ನಿನ್ನದು ಅಹಂಕಾರದ ನಗುವಲ್ಲ, ಅದು ಅಭಿಮಾನದ ನಗು!” ಎಂದು ಯಾರೋ ಕಿವಿಯಲ್ಲಿ ಪಿಸುಗುಟ್ಟಿದಂತಾಗುತ್ತದೆ. ತಿರುಗಿ ನೋಡುತ್ತೇನೆ. ನನ್ನನ್ನು ಹಿಂಡಿಹಿಪ್ಪೆ ಮಾಡಲು ನೋಡಿದ ಮತ್ತದೇ ನನ್ನ ಬದುಕು ನನ್ನ ಪಕ್ಕದಲ್ಲಿ ನಗುತ್ತಾ ನಿಂತಿರುತ್ತದೆ! ಹೆಮ್ಮೆಯಿಂದ ಬೀಗುತ್ತಾ ಅದಕ್ಕೊಂದು ಥ್ಯಾಂಕ್ಸ್ ಹೇಳುತ್ತಿದ್ದಂತೆಯೇ ನಾನು ನಡೆದ ಬಂದ ಹಾದಿ ಒಮ್ಮೆ ನನ್ನ ಕಣ್ಣೆದುರಿಗೆ ಸುಮ್ಮನೆ ಹಾದುಹೋಗುತ್ತದೆ.

  ಬೇಜವಾಬ್ದಾರಿ ಅಪ್ಪನ ಮಗನಾಗಿ ಹುಟ್ಟಿದ ನನ್ನ ಬದಕು ಮೊದಲಿನಿಂದಲೂ ಹರಿದು ಹಂಚಿಹೋದ ಬದುಕು. ನಾನು ಹುಟ್ಟಿದ್ದು ತಾಯಿಯ ತವರು ಮನೆಯಲ್ಲಾದರೂ ನನ್ನ ಮೊದಲ ಮೂರು ವರ್ಷದ ಬಾಲ್ಯ ಕಳೆದಿದ್ದು ನನ್ನೂರು ಮುಧೋಳದಲ್ಲಿ, ಅಪ್ಪ ಅಮ್ಮನ ಗರಡಿಯಲ್ಲಿ. ಅಪ್ಪ ಬೇಜವಾಬ್ದಾರಿಯಾಗಿದ್ದಕ್ಕೆ ಬೇಸತ್ತು ನನ್ನ ಸಂಬಂಧಿಕರು ಇಲ್ಲಿದ್ದರೆ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗಲಾರದು ಎಂಬ ಕಾರಣಕ್ಕೆ ಮೂರೂ ಜನ ಮಕ್ಕಳನ್ನು (ನಾನು, ಅಣ್ಣ, ತಂಗಿ) ತಂತಮ್ಮ ಊರಿಗೆ ಕರೆದುಕೊಂಡು ಹೋದರು. ಆ ಪ್ರಕಾರ ನನ್ನ ಅಣ್ಣನನ್ನು ನನ್ನ ದೊಡ್ಡಪ್ಪ (ತಂದೆಯ ಅಣ್ಣ- ಹೇಮಣ್ಣ ಕವಲೂರು) ತಮ್ಮೂರು ಅಳವಂಡಿಗೆ ಕರೆದುಕೊಂಡು ಹೋದರೆ, ನನ್ನನ್ನು ನನ್ನ ದೊಡ್ಡಮ್ಮ (ತಾಯಿಯ ಅಕ್ಕ-ಸರೋಜಿನಿ ಪಾಟೀಲ್) ತಮ್ಮೂರು ಕಲಕೋಟಿಗೆ ಕರೆದುಕೊಂಡು ಬಂದರು. ನನ್ನ ತಂಗಿಯನ್ನು ತಾಯಿಯ ತವರು ಮನೆ ಸುಲ್ತಾನಪೂರದವರು ಕರೆದುಕೊಂಡು ಹೋದರು. ಹೀಗಾಗಿ ನಾವು ಮೂರೂ ಜನ ಮಕ್ಕಳು ಬಾಲ್ಯದಿಂದಲೇ ತಂದೆ ತಾಯಿಯರ ಪ್ರೀತಿ, ವಾತ್ಸಲ್ಯದಿಂದ ವಂಚಿತರಾದೆವು. ಮೊದಲಿನಿಂದಲೂ ಅಷ್ಟಾಗಿ ತಂದೆ ತಾಯಿಯರ ಸಂಪರ್ಕವಿಲ್ಲದೆ ಬೆಳೆದಿದ್ದರಿಂದ ನಮ್ಮ ಮತ್ತು ಅವರ ನಡುವೆ ಅಂಥ ಹೇಳಿಕೊಳ್ಳುವಂಥ ಸಂಪರ್ಕ ಯಾವತ್ತಿಗೂ ಏರ್ಪಡಲಿಲ್ಲ. ಹೀಗಾಗಿ ಅವರು ಅಪರೂಪಕ್ಕೊಮ್ಮೆ ನಮ್ಮನ್ನು ನೋಡಲು ಬಂದಾಗ ನಾವು ಅವರನ್ನು ಅಪರಿಚಿತರಂತೆ ನೋಡುತ್ತಿದ್ದೆವು. ಅವರೊಂದಿಗೆ ಮಾತನಾಡಲೂ ಎಂಥದೋ ಮುಜುಗರವಾಗುತ್ತಿತ್ತು. ಹೀಗಿರುವಾಗ ನಮ್ಮನ್ನು ಒಪ್ಪಿ, ಅಪ್ಪಿ ಸಂತೈಸಿದ ಎಷ್ಟೋ ಬಂಧುಗಳು ನಮಗೆ ದಾರಿ ದೀಪವಾದರು ಹಾಗೂ ಅವರೇ ತಂದೆ ತಾಯಿಗಳಾದರು.

  ನಾನು ನನ್ನ ಮೂರನೇ ವರ್ಷದಿಂದಲೇ ಕಲಕೋಟಿಯಲ್ಲಿ ದೊಡ್ಡಮ್ಮ ದೊಡ್ಡಪ್ಪರ ತುಂಬು ಆರೈಕೆಯಲ್ಲಿ ಬೆಳೆಯತೊಡಗಿದೆ. ಅವರು ಒಂದು ಮಗುವಿಗೆ ಏನೆಲ್ಲಾ ಬೇಕೋ ಅದನ್ನೆಲ್ಲ ಧಾರೆಯೆರೆದು ಬೆಳೆಸಿದರು. ದೊಡ್ಡಮ್ಮ ದೊಡ್ಡಪ್ಪನಿಗೆ ಗಂಡುಮಕ್ಕಳಿಲ್ಲದಿದ್ದ ಕಾರಣಕ್ಕೇನೋ ನನ್ನನ್ನು ಅತಿ ಮುದ್ದಿನಿಂದ, ಪ್ರೀತಿಯಿಂದ ಬೆಳೆಸಿದರು. ನಾನು ಓದಿನಲ್ಲಿ ಸದಾ ಮುಂದಿದ್ದ ಕಾರಣಕ್ಕೆ ದೊಡ್ದಪ್ಪ (ಸೋಮನಗೌಡ ಪಾಟಿಲ್) ನಿಗೆ ನಾನು ಬಲು ಇಷ್ಟವಾಗುತ್ತಿದ್ದೆ. ಅವರು ಆಗಾಗ್ಗೆ ನನಗೆ ಕಾಮಿಕ್ಸ್ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಹೀಗಾಗಿ ನನಗೆ ಓದುವ ಹುಚ್ಚು ಚಿಕ್ಕಂದಿನಿಂದಲೇ ಶುರುವಾಯಿತು. ಅವರು ನನ್ನನ್ನು ಎಷ್ಟು ಇಷ್ಟಪಡುತ್ತಿದ್ದರೆಂದರೆ ನಾನು ಎರಡನೇ ಕ್ಲಾಸಿನಲ್ಲಿರಬೇಕಾದರೆ ಒಮ್ಮೆ ದೊಡ್ಡಪ್ಪ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಅದು ಅವರ ಅಣ್ಣನ ಮಗಳು ಅಮೇರಿಕಕ್ಕೆ ಹೋಗುವ ಸಂದರ್ಭ. ಆಗಲೇ ನಾನು ಬೆಂಗಳೂರಿನ ಏರ್ಪೋರ್ಟಿನಲ್ಲಿ ವಿಮಾನ ಹೇಗಿರುತ್ತದೆ ಎಂದು ಮೊಟ್ಟಮೊದಲಬಾರಿಗೆ ನೋಡಿ ಥ್ರಿಲ್ ಆಗಿದ್ದೆ. ಅದನ್ನು ನನ್ನ ಸಹಪಾಠಿಗಳ ಹತ್ತಿರ ಆಗಾಗ್ಗೆ “ನಾನು ಬೆಂಗಳೂರಿಗೆ ಹೋಗಿ ವಿಮಾನ ನೋಡಿಬಂದಿದ್ದೇನೆ ಗೊತ್ತಾ?” ಎಂದು ಏನೋ ಮಹತ್ವದನ್ನು ಸಾಧಿಸಿದ ಹಾಗೆ ಹೇಳಿಕೊಂಡು ಓಡಾಡುತ್ತಿದ್ದೆ. ನಾನು ವಿಮಾನ ನೋಡಿ ಬಂದಿದ್ದೇನೆ ಎಂಬ ಕಾರಣಕ್ಕಾಗಿ ನನ್ನ ಇತರೆ ಸಹಪಾಠಿಗಳು ಆ ಹಳ್ಳಿಯ ಶಾಲೆಯಲ್ಲಿ ನನ್ನನ್ನು ವಿಶೇಷ ಗೌರವದಿಂದ ಕಾಣುತ್ತಿದ್ದರು. ದೊಡ್ಡಪ್ಪ ಬೆಂಗಳೂರಿನ ಲಾಲ್ ಬಾಗ್, ಕಬ್ಬನ್ ಪಾರ್ಕ್, ವಿಧಾನಸೌಧ ಎಂದೆಲ್ಲಾ ಒಂದು ಸುತ್ತು ಹೊಡಿಸಿದ್ದರು. ಆಗಲೇ ನಾನು ಬೆಂಗಳೂರಿನ ಅಂದ ಚೆಂದಕ್ಕೆ ಮಾರು ಹೋಗಿ ದೊಡ್ಡವನಾದ ಮೇಲೆ ಇಲ್ಲೇ ಇರಬೇಕು ಎಂದು ಬಯಸಿದ್ದೆ. ಆದರೆ ಮುಂದೆ ಬದುಕು ನನ್ನನ್ನು ಮೇಲಿಂದ ಮೇಲೆ ಕಳ್ಳೆಮಳ್ಳೆ ಆಡಿಸಿ ಕೈಬಿಡುತ್ತಿದ್ದುದರಿಂದ ಬೆಂಗಳೂರಿನಲ್ಲಿ ಇರುವ ಆಸೆಯಿರಲಿ ಅದರತ್ತ ತಲೆ ಹಾಕಿ ಮಲಗುವದನ್ನು ಕೂಡ ಬಿಟ್ಟೆ. ಆದರೆ ಮುಂದೆ ನನ್ನ ಬದುಕಿನ ಆಕಸ್ಮಿಕ ಮತ್ತು ಅನಿವಾರ್ಯತೆಗಳೆರಡೂ ನನ್ನನ್ನು ಇಲ್ಲಿಯವರೆಗೂ ಎಳೆದುತರುತ್ತವೆ ಎಂದು ನಾನೆಣಿಸಿರಲಿಲ್ಲ.

  ಈ ಕಲಕೋಟಿಯಲ್ಲಿರುವಾಗಲೇ ನನಗೆ ಗೌರಜ್ಜಿಯ ಪರಿಚಯವಾದದ್ದು. ಈಕೆ ನಮ್ಮ ಬಂಧು ಬಳಗದವಳಲ್ಲದಿದ್ದರೂ ನಮ್ಮ ದೊಡ್ಡಪ್ಪನ ಹಿರಿಯರು ಆಕೆಯ ಗಂಡನಿಗೆ ಹಿಂದೆ ಯಾವುದೋ ಸಹಾಯ ಮಾಡಿದ್ದರಿಂದ ಅದರ ಋಣ ತೀರಿಸಲೆಂದು ಆ ಮನೆಯನ್ನು ಹದ್ದುಗಣ್ಣಿನಿಂದ ಕಾಯುವದರ ಮೂಲಕ ಸಹಾಯ ಮಾಡುತ್ತಿದ್ದಳು. ಆಕೆ ಹೆಚ್ಚು ಕಡಿಮೆ ಮನೆಯವಳಂತೆ ಆಗಿದ್ದಳು. ಈಕೆಗೆ ರಾಮಾಯಣ ಮಹಾಭಾರತದ ಕಥೆಗಳೆಲ್ಲವೂ ಗೊತ್ತಿದ್ದರಿಂದ ಅವನ್ನು ನಾನು ಪ್ರಾಥಮಿಕ ಶಾಲೆಯನ್ನು ಸೇರುವ ಮೊದಲೇ ಅವಳ ಬೊಚ್ಚ ಬಾಯಿಂದ ಕೇಳಿ ಬೆಕ್ಕಸ ಬೆರಗಾಗುತ್ತಿದ್ದೆ. ಅದಲ್ಲದೆ ದೀಪಾವಳಿ ಮತ್ತು ಗೌರಿ ಹುಣ್ಣಿಮೆಯಂದು ಅವಳು ಹಾಡುತ್ತಿದ್ದ ಸೋಬಾನೆ ಪದಗಳು ನನ್ನ ಸುಪ್ತ ಮನಸ್ಸಿನ ಮೇಲೆಲ್ಲೋ ಪರಿಣಾಮ ಬೀರಿದ್ದರಿಂದ ನಾನು ಮುಂದೆ ಬರಹಗಾರನಾಗಲು ಸಾಕಷ್ಟು ಸಹಾಯವಾದವೆಂದು ಕಾಣುತ್ತದೆ.

  ನಾನು ಕಲಕೋಟಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ನನಗೆ ಅದೇ ಊರಿನಲ್ಲಿರುವ ನಮ್ಮ ದೂರದ ಸಂಬಂಧಿಕ ಮಲ್ಲೇಶಪ್ಪ ಸಣ್ಣಕಳ್ಳಿ ಎಂಬವರಿಂದ ಇಂಗ್ಲೀಷ ಪಾಠಾಭ್ಯಾಸ ಶುರುವಾಯಿತು. ಅವರು ವೃತ್ತಿಯಲ್ಲಿ ‘ಗ್ರಾಮ ಸೇವಕ’ ರಾಗಿ ಕೆಲಸ ಮಾಡುತ್ತಿದ್ದರೂ ಅವರಿಗೆ ಇಂಗ್ಲೀಷ ಭಾಷೆಯ ಬಗ್ಗೆ ಅಪಾರ ಜ್ಞಾನವಿತ್ತು. ದಿನಾ ಬೆಳಿಗ್ಗೆ ಹಾಗೂ ಸಾಯಂಕಾಲ ಅವರಲ್ಲಿಗೆ ಹೋಗಿ ಇಂಗ್ಲೀಷ ಪಾಠ ಹೇಳಿಸಿಕೊಳ್ಳಲು ಹೋಗುತ್ತಿದ್ದೆ. ನನಗೆ ಅದೇನೋ ಗೊತ್ತಿಲ್ಲ ನಾನು ಇಂಗ್ಲೀಷ ಭಾಷೆಯನ್ನು ಬಹಳ ಬೇಗ ಬೇಗನೆ ಕಲಿಯತೊಡಗಿದೆ. ನಿಮಗೆ ಅಚ್ಚರಿಯಾಗಬಹುದು ನಾನು ಎರಡನೇ ಕ್ಲಾಸಿನಲ್ಲಿರುವಾಗಲೇ ಮೊದಲನೇ ಭಾಷಾಂತರ ಪಾಠಮಾಲೆಯಲ್ಲಿನ ಶಬ್ಧಗಳನ್ನು ಹಾಗೂ ವಾಕ್ಯ ರಚನೆಗಳನ್ನು ಚನ್ನಾಗಿ ಕಲಿತುಕೊಂಡಿದ್ದೆ. ನಮ್ಮ ಶಾಲೆಯಲ್ಲಿ ಮೂರು ಜನ ಶಿಕ್ಷಕರಿದ್ದದರಿಂದ ಆ ಮೂವರೇ ಏಳು ಕ್ಲಾಸುಗಳನ್ನು ಹಂಚಿಕೊಂಡಿದ್ದರು. ಏಳನೆ ತರಗತಿಗೆ ಪಾಠ ಮಾಡುವ ಶಿಕ್ಷಕರು ವಿದ್ಯಾರ್ಥಿಗಳಿಗೇನಾದರು ಇಂಗ್ಲೀಷ ಪಾಠಗಳನ್ನು ಓದಲು ಬಾರದಿದ್ದರೆ ನನ್ನನ್ನು ತಮ್ಮ ತರಗತಿಗೆ ಕರೆಸಿಕೊಂಡು ನನ್ನ ಕಡೆಯಿಂದ ಆ ಪಾಠ ಓದಿಸಿ ಆ ವಿದ್ಯಾರ್ಥಿಗಳಿಗೆ ಅವಮಾನ ಮಾಡುತ್ತಿದ್ದರು. ನಾನೋ ಹೆಮ್ಮೆಯಿಂದ ಬೀಗುತ್ತಿದ್ದೆ. ನಾನು ಅಷ್ಟರಮಟ್ಟಿಗೆ ಇಂಗ್ಲೀಷನ್ನು ಸರಾಗವಾಗಿ ಓದುವದು ಬರೆಯುವದನ್ನು ಮಾಡುತ್ತಿದ್ದೆ.

  ನಾನು ನಾಲ್ಕನೇ ತರಗತಿಯಲ್ಲಿರುವಾಗಲೆ ನನ್ನ ದೊಡ್ಡಪ್ಪ ಹೃದಯಾಘಾತದಿಂದ ನಿಧನ ಹೊಂದಿ ಮನೆಯಲ್ಲಿ ಅಗಾಧ ಬದಲಾವಣೆಗಳಾದವು. ಆಗ ಇದೇ ದೊಡ್ಡಪ್ಪನ ಮಗಳು ಅಂದರೆ ನನ್ನ ಅಕ್ಕ (ಜಯಶ್ರಿ ಗೌರಿಪೂರ್) ಗದುಗಿನಲ್ಲಿ ಗಂಡನ ಮನೆಯವರ ಕಾಟಕ್ಕೆ ಬೇಸತ್ತು ಬೇರೆ ಹೋಗಬೇಕಾಗಿ ಬಂದಾಗ ಜೊತೆಯಲ್ಲಿರಲಿ ಎಂದು ನನ್ನನ್ನು ತನ್ನ ಜೊತೆ ಕರೆದುಕೊಂಡು ಹೋದಳು. ಮನೆಯ ಹತ್ತಿರದಲ್ಲಿಯೇ ಇರುವ ಶಾಲೆಗೆ ನನ್ನನ್ನು ಸೇರಿಸಲಾಯಿತು. ಅಕ್ಕ ಎಷ್ಟೊಂದು ಕಟ್ಟುನಿಟ್ಟಾಗಿದ್ದಳೆಂದರೆ ನಾನು ಶಾಲೆಯಲ್ಲಿ ಸದಾ ಮೊದಲನೇ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡದಂತೆ ನೋಡಿಕೊಂಡಳು. ನಾನು ಶಾಲೆಯಿಂದ ಬಂದ ತಕ್ಷಣ ಆ ದಿನ ಶಾಲೆಯಲ್ಲಿ ಯಾವ್ಯಾವ ಪಾಠ ನಡೆಯಿತು ಎಂಬ ವರದಿಯನ್ನು ಒಪ್ಪಿಸಬೇಕಾಗಿತ್ತು. ಬಹುಶಃ, ಅವಳು ಇಷ್ಟೊಂದು ಕಾಳಜಿ ತೆಗೆದುಕೊಂಡಿದ್ದಕ್ಕೇನೋ ನಾನು ಏಳನೇ ತರಗತಿಯಲ್ಲಿ ಇಡಿ ಶಾಲೆಗೆ ಮೊದಲನೆಯವನಾಗಿ ತೇರ್ಗಡೆ ಹೊಂದಿದೆ. ಅದಕ್ಕೆ 25 ರೂಗಳಷ್ಟು ಬಹುಮಾನವೂ ಬಂತು. ನಂತರ ನಾನು ಎಂಟನೆ ತರಗತಿಯಿಂದ ಮಾಡೆಲ್ ಹೈಸ್ಕೂಲಿಗೆ (ಈಗಿನ ಸಿ.ಎಸ್.ಪಾಟೀಲ್ ಹೈಸ್ಕೂಲ್) ಸೇರಿದೆ. ಅಲ್ಲಿಯೂ ಸಹ ಅಕ್ಕ ಹತ್ತನೆ ತರಗತಿಯವರೆಗೂ ವರ್ಷ ವರ್ಷವೂ ಇಡಿ ಕ್ಲಾಸಿಗೆ ಫಸ್ಟ್ ಬರುವಂತೆ ನೋಡಿಕೊಂಡಳು.

  -ಉದಯ್ ಇಟಗಿ

  ಚಿತ್ರಕೃಪೆ: ಕೆಂಡ ಸಂಪಿಗೆ
  (ತಮಗೆಲ್ಲರಿಗೂ ಮತ್ತೊಮ್ಮೆ ಹೊಸವರ್ಷದ ಶುಭಾಶಯಗಳು)

  ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯುವದಿಲ್ಲ?

 • ಶುಕ್ರವಾರ, ಡಿಸೆಂಬರ್ 24, 2010
 • ಬಿಸಿಲ ಹನಿ
 • “ನೀವು ಇಂಗ್ಲೀಷ್ ಅಧ್ಯಾಪಕರು ಇಂಗ್ಲೀಷಿನಲ್ಲೇಕೆ ಬರೆಯುವದಿಲ್ಲ?” ಹೀಗೊಂದು ಪ್ರಶ್ನೆಯನ್ನು ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ನನ್ನ ಕೇಳಿದರು. ಆಕೆ ಈ ಪ್ರಶ್ನೆಯನ್ನು ನನ್ನನ್ನೂ ಸೇರಿಸಿ ಕನ್ನಡದಲ್ಲಿ ಬರೆಯುತ್ತಿರುವ/ಬರೆದ ಇಂಗ್ಲೀಷ್ ಅಧ್ಯಾಪಕರನ್ನು ಉದ್ದೇಶಿಸಿ ಕೇಳಿದ್ದರು. ಆಕೆ ಮೂಲತಃ ಆಂಧ್ರದವರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಇಂಗ್ಲೀಷ್ ವಿಭಾಗದಲ್ಲಿ ಹತ್ತು ವರ್ಷ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿ ಈಗ ನನ್ನೊಟ್ಟಿಗೆ ಲಿಬಿಯಾದ ಸೆಭಾ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲೀಷ್ ಸಾಹಿತ್ಯದ ಬಗ್ಗೆ ತುಂಬಾ ಓದಿಕೊಂಡಾಕೆ ಹಾಗೂ ಕೆಲಸದ ನಿಮಿತ್ತ ಹತ್ತು ವರ್ಷಗಳನ್ನು ಮೈಸೂರಿನಲ್ಲೇ ಕಳೆದಿದ್ದರಿಂದ ಕನ್ನಡವನ್ನು ಚನ್ನಾಗಿ ಮಾತನಾಡುತ್ತಿದ್ದರು. ಜೊತೆಗೆ ಕನ್ನಡಿಗರೊಂದಿಗಿನ ತಮ್ಮ ಒಡನಾಟ ಮತ್ತು ಆಸಕ್ತಿಯಿಂದಾಗಿ ಕನ್ನಡಸಾಹಿತ್ಯದ ಬಗ್ಗೆ ತುಸು ಹೆಚ್ಚೇ ತಿಳಿದುಕೊಂಡಿದ್ದರು. ಹಾಗೆ ತಿಳಿದುಕೊಳ್ಳಲು ಒಂದು ಕಾರಣವೂ ಇತ್ತು. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ. ಎ. ಮೊದಲ ವರ್ಷಕ್ಕೆ ಪಠ್ಯವಾಗಿರುವ “Indian Writing in English” ಎಂಬ ಪತ್ರಿಕೆಗೆ ಕನ್ನಡದ ಖ್ಯಾತ ಲೇಖಕ ಯು.ಆರ್.ಅನ್ಂತಮೂರ್ತಿಯವರ ಇಂಗ್ಲೀಷಿಗೆ ಅನುವಾದಗೊಂಡಿರುವ ಪ್ರಸಿದ್ಧ ಕಾದಂಬರಿ ‘ಸಂಸ್ಕಾರ’ವನ್ನು ಬೋಧಿಸುತ್ತಿದ್ದರು. ಆ ನೆಪದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಅನೇಕ ಲೇಖಕರ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದರು ಹಾಗೂ ಕನ್ನಡದ ಬಹುತೇಕ ಲೇಖಕರು ಇಂಗ್ಲೀಷ್ ಅಧ್ಯಾಪಕರಾಗಿದ್ದಾರೆಂಬುದು ಆಕೆಗೆ ಚನ್ನಾಗಿ ಗೊತ್ತಿತ್ತು. ಅದೇ ಪ್ರಶ್ನೆಯನ್ನು ‘ಕನ್ನಡದ ಬಹುತೇಕ ಲೇಖಕರು ಇಂಗ್ಲೀಷ್ ಅಧ್ಯಾಪಕರಾಗಿದ್ದಾರಲ್ಲವೆ?’ ಎಂದು ಕೇಳಿದರು. ನಾನು ಹೌದೆಂದು ತಲೆಯಾಡಿಸಿ ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡದಲ್ಲಿ ಬರೆದವರು ಹಾಗೂ ಬರೆಯುತ್ತಿರುವವರ ದೊಡ್ಡ ಪಟ್ಟಿಯನ್ನೇ ಕೊಟ್ಟೆ. ಅದು ಬಿ. ಎಮ್. ಶ್ರೀ. ಯವರಿಂದ ಶುರುವಾಗಿ ವಿ. ಕೃ. ಗೋಕಾಕ್, ಪೋಲಂಕಿ ರಾಮಮೂರ್ತಿ, ಶಂಕರ್ ಮೊಕಾಶಿ ಪುಣೇಕರ್, ಕೀರ್ತಿನಾಥ ಕುರ್ತಕೋಟಿ, ಅನಂತಮೂರ್ತಿ, ಅಡಿಗ, ಚಂಪಾ, ಶಾಂತಿನಾಥ ದೇಸಾಯಿ, ಸುಮತೀಂದ್ರ ನಾಡಿಗ್, ಲಂಕೇಶ್, ಜಿ.ಎಸ್. ಆಮೂರು, ವೀಣಾ ಶಾಂತೇಶ್ವರ, ಸರೋಜಿನಿ ಶಿಂತ್ರಿ, ರಾಮಚಂದ್ರ ಶರ್ಮ, ಜಿ.ಕೆ. ಗೋವಿದರಾವ್, ಕೆ. ವಿ. ತಿರುಮಲೇಶ್, ಓ.ಎಲ್. ನಾಗಭೂಷಣ ಸ್ವಾಮಿ, ವೇಣುಗೋಪಾಲ ಸೊರಬ, ಚಿ. ನ. ಮಂಗಳ, ಜಿ. ರಾಮಕೃಷ್ಣ, ಡಾ. ಪ್ರಭುಶಂಕರ್, ಸಿ. ನಾಗಣ್ಣ, ಕೆ. ಎಸ್. ಭಗವಾನ್, ರಾಜೇಂದ್ರ ಚೆನ್ನಿ, ಮಾಲತಿ ಪಟ್ಟಣಶೆಟ್ಟಿ, ನಟರಾಜ್ ಹುಳಿಯಾರ್, ವನಮಾಲ ವಿಶ್ವನಾಥ್, ಕೆ.ಟಿ. ಗಟ್ಟಿ, ಕೃಷ್ಣಮೂರ್ತಿ ಚಂದರ್ ವರೆಗೂ ಮುಂದುವರೆದು, ಇತ್ತೀಚಿಗೆ ಬರೆಯುವ ಕನಕರಾಜು. ಬಿ. ಆರನಕಟ್ಟೆ, ಕಲಿಗಣನಾಥ ಗುಡದೂರು, ಎಚ್. ಆರ್. ರಮೇಶ್, ಸುಕನ್ಯಾ ಕನಾರಳ್ಳಿ ಯವರಲ್ಲಿ ಕೊನೆಗೊಳ್ಳುತ್ತದೆ; ಇನ್ನೂ ಸಾಕಷ್ಟು ಜನರಿದ್ದಾರೆ, ಆದರೆ ಇವರೆಲ್ಲ ಹೆಸರು ಮಾಡಿರುವದರಿಂದ ಅವರನ್ನಷ್ಟೇ ಹೆಸರಿಸಲಾಗಿದೆ ಎಂದು ಹೇಳಿದೆ. ಒಟ್ಟಾರೆಯಾಗಿ ಕನ್ನಡ ಸಾಹಿತ್ಯ ಶ್ರೀಮಂತಗೊಡಿದ್ದು ಹಾಗೂ ಹೊಸ ಆಯಾಮಗಳನ್ನು ಪಡೆದುಕೊಂಡಿದ್ದು ಈ ಎಲ್ಲ ಲೇಖಕರಿಂದ ಎಂದು ಹೇಳಿದರೆ ತಪ್ಪಾಗುವದಿಲ್ಲ ಎಂದೂ ಸೇರಿಸಿದೆ. ಆಕೆ ಮತ್ತೆ ಮುಂದುವರೆದು ಅವರೇಕೆ ‘ಇಂಗ್ಲೀಷಿನಲ್ಲಿ ಬರೆಯಲಿಲ್ಲ ಅಥವಾ ಬರೆಯುತ್ತಿಲ್ಲ?’ ಎಂದು ಕೇಳಿದರು. ನನಗೆ ಅವರ ಪ್ರಶ್ನೆ ತುಸು ವಿಚಿತ್ರವಾಗಿ ಕಂಡಿತು. ನಾನು ಅದು ಅವರವರ ಇಷ್ಟ ಎಂದೆ. “ಅಲ್ಲ, ಅವರು ನೇರವಾಗಿ ಇಂಗ್ಲೀಷಿನಲ್ಲಿಯೇ ಬರೆಯಬಹುದಿತ್ತಲ್ಲ?” ಎಂದು ಮತ್ತೆ ಕೇಳಿದರು. “ಏಕೆ? ಕನ್ನಡದಲ್ಲಿ ಬರೆಯುವದು ಅವಮಾನವೇನು?” ಎಂದು ನಾನು ಮರು ಪ್ರಶ್ನೆ ಹಾಕಿದೆ. “ಹಾಗಲ್ಲ, ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ನೇರವಾಗಿ ಇಂಗ್ಲೀಷಿನಲ್ಲಿ ಬರೆದಿದ್ದರೆ ಚೆನ್ನಿತ್ತು. ಆಗವರು ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆಯುತ್ತಿದ್ದರು.” ಎಂದರು. ನಾನು “ಅದು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಇಂಗ್ಲೀಷ್ ಅವರ ಮಾತೃಭಾಷೆಯಲ್ಲ. ಮಾತೃಭಾಷೆಯಲ್ಲಿ ಬರೆದಿದ್ದು ಮಾತ್ರ ಯಶಸ್ವಿಯಾಗಬಲ್ಲದು” ಎಂದೆ. ಆಕೆ ಮತ್ತೊಂದು ಪ್ರಶ್ನೆಯನ್ನು ಮುಂದಿಟ್ಟರು. “ಹಾಗೆ ನೋಡಿದರೆ ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಲೇಖಕರ್ಯಾರದು ಇಂಗ್ಲೀಷ್ ಯಾವತ್ತೂ ಮಾತೃಭಾಷೆಯಾಗಿರಲಿಲ್ಲ. ಆದರೂ ಅವರು ಇಂಗ್ಲೀಷಿನಲ್ಲಿಯೇ ಬರೆದು ಯಶಸ್ವಿಯಾಗಲಿಲ್ಲವೇನು? ಖ್ಯಾತಿಯನ್ನು ಪಡೆಯಲಿಲ್ಲವೇನು?” ಎಂದರು. ನಾನು ಒಂದು ಕ್ಷಣ ಸುಮ್ಮನಾದೆ. ಮತ್ತೆ ಅವರೇ ಮುಂದುವರಿದು “ಅವರು ಕೂಡ ನಿಮ್ಮಂತೆಯೇ ಮಾತೃಭಾಷೆಯ ಬಗ್ಗೆ ಯೋಚಿಸಿದ್ದರೆ ಇವತ್ತು ಭಾರತದಲ್ಲಿ ಇಂಗ್ಲೀಷಿನಲ್ಲಿ ಬರೆಯುವ ಲೇಖಕರು ಒಬ್ಬರೂ ಇರುತ್ತಿರಲಿಲ್ಲ. ಆದರೂ ಅವರು ಅದ್ಹೇಗೆ ಇಂಗ್ಲೀಷಿನಲ್ಲಿ ಬರೆದರು? ಬರೆದು ಯಶಸ್ವಿಯಾದರು? ಅಂದರೆ ನೀವು ಇಂಗ್ಲೀಷಿನಲ್ಲಿ ಬರೆಯಲಾರದ್ದಕ್ಕೆ ಮಾತೃಭಾಷೆಯ ಗೋಡೆಯನ್ನು ಅಡ್ಡ ತರುತ್ತಿರುವಿರಿ. ಅದರಲ್ಲಿ ಬರೆದರೆ ಮಾತ್ರ ಪರಿಣಾಮಕಾರಿಯಾಗಿರುತ್ತದೆ, ಯಶಸ್ವಿಯಾಗಿರುತ್ತದೆ ಎಂದೆಲ್ಲ ಕುಂಟುನೆಪ ಹೇಳುತ್ತಾ ಜಾರಿಕೊಳ್ಳುತ್ತಿರುವಿರಿ. ಹಾಗೆ ಕುಂಟುನೆಪವೊಡ್ಡುವ ಬದಲು ನಾನು ಇಂಗ್ಲೀಷಿನಲ್ಲಿ ಬರೆಯಲು ಅಸಮರ್ಥನಿದ್ದೇನೆ ಎಂದು ನೇರವಾಗಿ ಒಪ್ಪಿಕೊಳ್ಳಿ. ಇಲ್ಲವೇ ಇಂಗ್ಲೀಷಿನಲ್ಲಿ ಬರೆದು ತೋರಿಸಿ. ಪ್ರಯತ್ನಿಸದೆಯೇ ನೀವು ಅದ್ಹೇಗೆ ಇಂಗ್ಲೀಷಿನಲ್ಲಿ ಬರೆದರೆ ಯಶಸ್ವಿಯಾಗುವದಿಲ್ಲವೆಂದು ಹೇಳುತ್ತೀರಿ?” ಎಂದು ಕೇಳಿದರು. ನನಗೆ ಒಂದು ಕ್ಷಣ ಪೆಚ್ಚೆನಿಸಿದರೂ “ಹೌದಲ್ಲವೆ? ಅವರು ಹೇಳುವದರಲ್ಲಿ ಸತ್ಯವಿದೆಯಲ್ಲವೆ?” ಎನಿಸಿತು. ಭಾರತೀಯ ಇಂಗ್ಲೀಷ್ ಬರಹಗಾರರಾದ ಆರ್. ಕೆ. ನಾರಾಯಣ್, ಮುಲ್ಕ್ರಾಜಾನಂದ, ರಾಜಾರಾವ್, ಸರೋಜಿನಿ ನಾಯ್ದು, ಟ್ಯಾಗೋರ್, ವಿಕ್ರಂ ಶೇಠ್, ತೋರು ದತ್, ನೀರಧ್ ಚೌಧರಿ, ಕಮಲಾ ದಾಸ್, ಎ.ಕೆ ರಾಮಾನುಜನ್, ಸಲ್ಮಾನ್ ರಶ್ದಿ, ಅನೀತಾ ದೇಸಾಯಿ, ಕಿರಣ್ ದೇಸಾಯಿ, ಅರುಂಧತಿ ರಾಯ್, ಶಶಿ ದೇಶಪಾಂಡೆ ಇನ್ನೂ ಮುಂತಾದವರದ್ಯಾರದು ಮಾತೃಭಾಷೆ ಇಂಗ್ಲೀಷ್ ಆಗಿರಲಿಲ್ಲ. ಅದು ಬೇರೆಯದೇ ಆಗಿತ್ತು. ಆದರೂ ಅವರೆಲ್ಲ ಇಂಗ್ಲೀಷಿನಲ್ಲಿ ಬರೆದು ಯಶಸ್ವಿಯಾದರಲ್ಲವೆ? ಹಾಗಾದಾರೆ ಕನ್ನಡದಲ್ಲಿ ಬರೆಯುವ ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯುತ್ತಿಲ್ಲ? ಎನಿಸಿತು. ಇದುವರೆಗೂ ಅವರಲ್ಲಿ ಕೆಲವರು ಇಂಗ್ಲೀಷಿನಲ್ಲಿ ಒಂದಿಷ್ಟು ಅನುವಾದಗಳನ್ನು ಮಾಡಿದ್ದು ಬಿಟ್ಟರೆ, ಅಥವಾ ತಮ್ಮ ಪಿಎಚ್.ಡಿ ಪ್ರಬಂಧವನ್ನು ಇಂಗ್ಲೀಷಿನಲ್ಲಿ ಬರೆದಿದ್ದು ಬಿಟ್ಟರೆ ಅಥವಾ ಯಾವುದಾದರು ಸೆಮೆನಾರಿಗೆ ಇಂಗ್ಲೀಷಿನಲ್ಲಿ ಒಂದಿಷ್ಟು ಪೇಪರ್ ಪ್ರಸೆಂಟ್ ಮಾಡಿದ್ದು ಬಿಟ್ಟರೆ ಯಾರೊಬ್ಬರು ಹೆಚ್ಚಿಗೆ ಏನನ್ನೂ ಬರೆದಂತೆ ಕಾಣುವದಿಲ್ಲ. ಏಕೆ ಬರೆಯಲಿಲ್ಲ? ವನ್ಸ ಅಗೇನ್ ಅದೇ ಮಾತೃಭಾಷೆಯ ಪ್ರಶ್ನೆ ಏಳುತ್ತದೆ.

  ನನಗೆ ಮೊದಲಿಗೆ ಅವರ ವಾದದಲ್ಲಿ ತಿರುಳಿದೆ ಎನಿಸಿದರೂ ಯೋಚಿಸುತ್ತಾ ಹೋದಂತೆ ನನ್ನ ಗ್ರಹಿಕೆಗೆ ಸಿಕ್ಕಿದ್ದನ್ನು ನಿಧಾನಕ್ಕೆ ಅವರಿಗೆ ಹೇಳುತ್ತಾ ಹೋದೆ; ಕನ್ನಡದಲ್ಲಿ ಬರೆಯುವ ಇಂಗ್ಲೀಷ್ ಅಧ್ಯಾಪಕರು ಇಂಗ್ಲೀಷ್ ಬರಹಗಾರರಾರೇ ಆಗಿರಬೇಕೆಂದು ನೀವೇಕೆ ಬಯಸುತ್ತೀರಿ? ಅವರು ಇಂಗ್ಲೀಷಿನಲ್ಲಿಯೇ ಬರೆಯಬೇಕೆಂಬ ಅಲಿಖಿತ ನಿಯಮವೇನಾದರು ಇದೆಯೇನು? ನೀವು ಹೇಳುವದು ಹೇಗಿದೆಯೆಂದರೆ ಎಲ್ಲ ಕಂಪ್ಯೂಟರ್ ಇಂಜಿನೀಯರುಗಳು ಬಿಲ್ ಗೇಟ್ಸೇ ಆಗಬೇಕು, ಎಲ್ಲ ಸಿವಿಲ್ ಇಂಜಿನೀಯರುಗಳು ವಿಶ್ವೇಶರಯ್ಯನೇ ಆಗಬೇಕು, ಎಲ್ಲ ವಿಜ್ಞಾನದ ವಿದ್ಯಾರ್ಥಿಗಳು ವಿಜ್ಞಾನಿಗಳೇ ಆಗಬೇಕು, ಎಲ್ಲ ಉದ್ಯಮಿಗಳು ಅಂಬಾನಿ ತರಾನೆ ಆಗಬೇಕು ಎನ್ನುವಂತಿದೆ. ಹಾಗೆ ಎಲ್ಲರೂ ಆಗಲು ಸಾಧ್ಯವೆ? ಒಂದು ವೇಳೆ ಪ್ರಯತ್ನಿಸಿದರೂ ಅವರಂತೆ ಎಲ್ಲರೂ ಆಗಬಲ್ಲರೆ? ಸಾಧ್ಯವಿಲ್ಲ. ಏಕೆಂದರೆ ಈ ಜಗತ್ತಿನಲ್ಲಿ ಒಬ್ಬರೋ ಇಬ್ಬರೋ ಮಾತ್ರ ಉದಾಹರಣೆಯಾಗಬಲ್ಲರು. ಎಲ್ಲರೂ ಅಲ್ಲ. ಒಬ್ಬ ವ್ಯಕ್ತಿಯ ಯಶಸ್ಸು ಅವನ ಪರಿಶ್ರಮದ ಮೇಲೆ ನಿರ್ಧಾರವಾಗುತ್ತಾದರೂ ಪರಿಶ್ರಮಪಟ್ಟವರೆಲ್ಲ ಯಶಸ್ವಿಯಾಗುತ್ತಾರೆಂದು ಹೇಳಲು ಬರುವದಿಲ್ಲ.

  ಇನ್ನು ಇಂಗ್ಲೀಷ್ ಅಧ್ಯಾಪಕರಾಗಿರುವ ಕನ್ನಡದ ಲೇಖಕರು ಕನ್ನಡವನ್ನೇ ತಮ್ಮ ಅಭಿವ್ಯಕ್ತಿಗೆ ಏಕೆ ಆಯ್ಕೆಮಾಡಿಕೊಂಡರೆಂದು ಕೇಳಿದರೆ ಇಂಗ್ಲೀಷಿಗಿಂತ ಅದರಲ್ಲಿ ಬರೆಯುವದು ಅವರಿಗೆ ಹೆಚ್ಚು ನಿರಾಳವೆನಿಸಬಹುದು. ಅಥವಾ ನೀವು ಹೇಳುವಂತೆ ನೇರವಾಗಿ ಇಂಗ್ಲೀಷಿನಲ್ಲಿ ಬರೆಯಲು ಅವರ ಹ್ಯಾಡಿಕ್ಯಾಪ್ಟ್ ಆಟಿಟ್ಯುಡ್ ಕಾರಣವಾಗಿರಬಹುದು. ಅಂದರೆ ಇಂಗ್ಲೀಷಿನಲ್ಲಿ ತಿಣುಕಾಡಿ ಬರೆಯುವದಕ್ಕಿಂತ ಕನ್ನಡದಲ್ಲೇ ಸಲೀಸಾಗಿ ಬರೆಯಬಹುದಲ್ಲ ಎಂಬ ಧೋರಣೆಯಿರಬಹುದು. ಹಾಗಂತ ಅವರೆಲ್ಲ ಇಂಗ್ಲೀಷಿನಲ್ಲಿ ಅಸಮರ್ಥರಾಗಿದ್ದಾರೆ ಎಂದರ್ಥವಲ್ಲ. ಒಂದು ಭಾಷೆಯನ್ನು ಕಲಿಸುವದಕ್ಕೂ ಹಾಗೂ ಬರಹದ ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಳ್ಳುವದಕ್ಕೂ ತುಂಬಾ ವ್ಯತ್ಯಾಸವಿದೆ. ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ. ಇಂಗ್ಲೀಷ ಅಧ್ಯಾಪಕನಾಗಿದ್ದುಕೊಂಡು ಕನ್ನಡದಲ್ಲಿ ಬರೆಯುವವನು ನಾನೂ ಒಬ್ಬ. ನಾನು ಕನ್ನಡದಲ್ಲಿ ಏಕೆ ಬರೆಯುತ್ತೇನೆಂದರೆ ಅದನ್ನು ನನ್ನ ಮನೆಯ ಭಾಷೆಯಾಗಿ ಬಾಲ್ಯದಿಂದಲೇ ಕಲಿತುಕೊಂಡು ಬಂದಿದ್ದೇನೆ. ಅದು ನನ್ನ ಮೈ ಮನಗಳಲ್ಲಿ ಹಾಸುಹೊಕ್ಕಾಗಿದೆ. ಕನ್ನಡದಲ್ಲಿ ಬರೆದಾಗ ಮಾತ್ರ ನಾನು ಸಂಪೂರ್ಣವಾಗಿ ನ್ಯಾಯ ಒದಗಿಸಿದ್ದೇನೆ ಎಂದನಿಸುತ್ತದೆ. ನನ್ನ ಬೇರುಗಳು ಕನ್ನಡದಲ್ಲಿರುವದರಿಂದ ನಾನು ಅದರಲ್ಲಿ ಬರೆಯುವಾಗ ನನ್ನೆಲ್ಲ ಭಾವನೆಗಳನ್ನು ಸಂಪೂರ್ಣವಾಗಿ ಹೊರಹಾಕಬಲ್ಲೆ. ನನ್ನ ಸಂವೇದನೆಗಳೆಲ್ಲ ಅದರಲ್ಲಿಯೇ ಮುಳುಗಿ ತೇಲಾಡಿದ್ದರಿಂದ ನನ್ನ ಬರಹಗಳೆಲ್ಲ ನನ್ನ ಅಂತರಂಗವನ್ನು ಮೀಟಿಕೊಂಡು ಬರಬಲ್ಲವು. ಬಾಲ್ಯದಲ್ಲಿ ಯಾವ ಭಾಷೆ ನಮ್ಮ ಸಂವೇದನೆಯಲ್ಲಿ ಬೆರೆತಿರುತ್ತದೋ ಅದೇ ಭಾಷೆ ಕೊನೆ ತನಕ ಬರುತ್ತದೆ ಮತ್ತು ಅದೊಂದೇ ಭಾಷೆ ನಮ್ಮ ಸಂವೇದನೆಯ, ಅಭಿವ್ಯಕ್ತಿಯ, ಸೃಜನಶೀಲತೆಯ ತಾಯಿ ಬೇರಾಗಿರುತ್ತದೆ. ಈ ಹಿಂದೆ ನನ್ನ ಬ್ಲಾಗ್ ಮಿತ್ರರೊಬ್ಬರು “ಕರ್ನಾಟಕದಲ್ಲಿ ಇಂಗ್ಲೀಷಿನಲ್ಲಿ ಬರೆಯುವವರು ತುಂಬಾ ಕಮ್ಮಿ. ನೀವೇಕೆ ಕನ್ನಡದಲ್ಲಿ ಬರೆಯುವ ಬದಲು ಇಂಗ್ಲೀಷಿನಲ್ಲಿ ಬರೆದು ಆ ಕೊರತೆಯನ್ನು ನೀಗಿಸಬಾರದು?” ಎಂದು ಸಲಹೆಕೊಟ್ಟಿದ್ದರು. ಸರಿ, ಒಮ್ಮೆ ನೋಡಿಯೇಬಿಡೋಣವೆಂದು ನೇರವಾಗಿ ಇಂಗ್ಲೀಷನಲ್ಲಿ ಬರೆಯತೊಡಗಿದರೆ ಅದರಲ್ಲಿ ಜೀವ ಮಾತ್ರವಿದ್ದು ಭಾವದ ಕೊರತೆ ಎದ್ದು ಕಾಣುತ್ತಿತ್ತು. ಹಾಗೂ ಅದರಲ್ಲಿ ಬರೀ ನನ್ನ ಅಕ್ಷರಗಳಿದ್ದವೇ ವಿನಃ ನಾನಿರಲಿಲ್ಲ. ಹೀಗಾಗಿ ಕನ್ನಡದಲ್ಲಿ ಬರೆಯಲು ಗಟ್ಟಿಯಾದ ನಿರ್ಧಾರ ಮಾಡಿದೆ. ಇನ್ನು ಭಾರತೀಯ ಇಂಗ್ಲೀಷ್ ಲೇಖಕರ ಬಗ್ಗೆ ಹೇಳುವದಾದರೆ ಬಹುಶಃ ಇಂಗ್ಲೀಷ ವಾತಾವರಣ ಅಥವಾ ಇಂಗ್ಲೀಷಿನಲ್ಲಿ ಬರೆಯಲು ಪೂರಕವಾಗುವ ಅಂಶಗಳು ಅವರಿಗೆ ಬಾಲ್ಯದಿಂದಲೇ ಸಿಕ್ಕಿರಬಹುದು. ಅಥವಾ ಇಂಗ್ಲೀಷಿನಲ್ಲಿ ಬರೆದರೆ ಮಾತ್ರ ಅದನ್ನು ಎಲ್ಲರಿಗೂ ಮುಟ್ಟಿಸಿ ಖ್ಯಾತಿಯನ್ನು ಪಡೆಯಬಹುದೆಂಬ ಒಳ ಆಸೆಯಿಂದ ಅವರು ಅನಿವಾರ್ಯವಾಗಿ ಇಂಗ್ಲೀಷಿನಲ್ಲಿ ಬರೆದಿರಬಹುದು.

  ಸಾಮಾನ್ಯವಾಗಿ ನಾವೆಲ್ಲರೂ ಇಂಗ್ಲೀಷ್ ಭಾಷೆಯನ್ನು ಬರೆಯುವಾಗ/ಮಾತನಾಡುವಾಗ ಮೊದಲು ನಾವು ನಮ್ಮ ಮಾತೃಭಾಷೆಯಲ್ಲಿ ಯೋಚಿಸಿ ಆನಂತರ ಅದನ್ನು ಇಂಗ್ಲೀಷಿಗೆ ಭಾಷಾಂತರಗೊಳಿಸುತ್ತೇವೆ. ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಒಮ್ಮೆ “ನಾನು ಏನಾದರೂ ಬರೆಯುವದಿದ್ದರೆ ಮೊದಲು ಕನ್ನಡದಲ್ಲಿ ಬರೆಯುತ್ತೇನೆ. ಆನಂತರ ಅದನ್ನು ಇಂಗ್ಲೀಷಿಗೆ ಭಾಷಾಂತರಿಸುತ್ತೇನೆ. ಆಗಲೇ ನನ್ನೆಲ್ಲ ಭಾವನೆಗಳು ಸ್ಪಷ್ಟವಾಗಿ ಮೂಡಲು ಸಾಧ್ಯ.” ಎಂದು ಹೇಳಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಕನ್ನಡದ ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯಲಿಲ್ಲ/ಬರೆಯುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಹೇಳಿದೆ.

  ನನ್ನ ಉತ್ತರದಿಂದ ಅವರು ಕನ್ವಿನ್ಸ್ ಆದಂತೆ ಕಾಣಲಿಲ್ಲ. ನಾನೂ ಕೂಡ ಅವರನ್ನು ಹೆಚ್ಚು ಬಲವಂತದಿಂದ ಕನ್ವಿನ್ಸ್ ಮಾಡಲು ಹೋಗಲಿಲ್ಲ.

  -ಉದಯ್ ಇಟಗಿ
  (ಇಂದಿಗೆ ನನ್ನ ಬ್ಲಾಗಿಗೆ ಎರಡು ವರ್ಷ. ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಮುಂದುವರಿಯಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು)

  ಈ ಲೇಖನವನ್ನು ‘ಅವಧಿ’ ಬಳಗವು ಪ್ರಕಟಿಸಿದೆ. ಅವರಿಗೆ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅದರ ಲಿಂಕ್ ಇಲ್ಲಿದೆ. http://avadhi.wordpress.com/2010/12/30/%E0%B2%87%E0%B2%82%E0%B2%97%E0%B3%8D%E0%B2%B2%E0%B3%80%E0%B2%B7%E0%B3%8D-%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AA%E0%B2%95%E0%B2%B0%E0%B3%87%E0%B2%95%E0%B3%86-%E0%B2%87%E0%B2%82%E0%B2%97/#comments

  ಅಂದ ಹಾಗೆ http://ashok567.blogspot.com/ ಬ್ಲಾಗಿನ ಅಶೋಕ ಕುಮಾರ್ ರವರು ಈ ವಾರ “ಉದಯವಾಣಿ” ಯಲ್ಲಿ ನನ್ನ ಬ್ಲಾಗನ್ನು ಪರಿಚಯಿಸಿದ್ದಾರೆ. ಅವರಿಗೆ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
  ಅದರ ಲಿಂಕ್ ಗಳು ಇಲ್ಲಿವೆ;
  1) http://www.udayavani.com/news/38929L15-%E0%B2%A8-%E0%B2%B8-%E0%B2%A4-%E0%B2%A4--%E0%B2%B8-%E0%B2%B8-%E0%B2%B0.html
  2) http://74.127.61.106/epaper/PDF/2010-12-27/Man27121006M.pdf

  ಎಲ್ಲ ಬಿಟ್ಟು ಅವಳು ಅವನ ಹಿಂದೆ ಹೋದದ್ದಾದರೂ ಏಕೆ?

 • ಶನಿವಾರ, ಡಿಸೆಂಬರ್ 11, 2010
 • ಬಿಸಿಲ ಹನಿ
 • ನಮ್ಮಲ್ಲಿ ಗಂಡ ಹೆಂಡತಿಯನ್ನು ಬಿಟ್ಟು ಹೋದರೆ ಜನ ಮಾತಾಡಿಕೊಳ್ಳುವದಿಲ್ಲ. ತಲೆಕೆಡಿಸಿಕೊಳ್ಳುವದಿಲ್ಲ. ಅಸಲಿಗೆ ಅದೊಂದು ಸುದ್ದಿಯಾಗುವದಿಲ್ಲ. ಹೋದರೆ ಹೋದ. ಇಲ್ಲೇ ಎಲ್ಲೋ ಹೋಗಿರಬೇಕು. ಇವತ್ತಲ್ಲ ನಾಳೆ ಮತ್ತೆ ಬರುತ್ತಾನೆ ಎಂದು ತುಂಬಾ ಉದಾಸೀನವಾಗಿ ಮಾತಾಡಿ ಜನ ಮತ್ತೆ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಹೆಚ್ಚೆಂದರೆ ಅವನೆಲ್ಲಿದ್ದಾನೆಂದು ಹುಡುಕಿ, ಅವನಿಗೊಂದಿಷ್ಟು ಬೈದು, ಇನ್ಮೇಲೆ ಹಂಗೆಲ್ಲಾ ಬಿಟ್ಟುಹೋಗಬೇಡ ಅಂತಾ ನಾಲ್ಕು ಬುದ್ದಿ ಮಾತು ಹೇಳಿ ವಾಪಾಸು ಕರೆತರುತ್ತಾರೆ. ಹಾಗೆ ವಾಪಾಸು ಬಂದವನಿಗೆ ಅದ್ದೂರಿ ಸ್ವಾಗತವೂ ಇರುತ್ತೆ. ಆತ ಕ್ಷಮೆಗೆ ಅರ್ಹನು ಹೌದೋ ಅಲ್ವೋ ಆದರೂ ಅವನನ್ನು ಕ್ಷಮಿಸಿ ಸಮಾಜದಲ್ಲಿ ಆತನಿಗೊಂದು ಮೊದಲಿನ ಸ್ಥಾನವನ್ನು ಕಲ್ಪಿಸಿಕೊಡುತ್ತಾರೆ. ಅಂದರೆ ಜನ ಆತನ ವಿಷಯದಲ್ಲಿ ಭಾರಿ ರಿಯಾಯಿತಿ ತೋರಿಸುತ್ತಾರೆ. ಆದರೆ ಹೆಂಡತಿ ಗಂಡನನ್ನು ಬಿಟ್ಟು ಹೋದರೆ? ಶಿವ ಶಿವ ಎಲ್ಲಾದರೂ ಉಂಟೆ? ಜನ ಊಹಿಸಲು ಕೂಡ ಹೆದರಿಕೊಳ್ಳುತ್ತಾರೆ. ಅಕಸ್ಮಾತಾಗಿ ಹೆಂಡತಿಯೊಬ್ಬಳು ಗಂಡನನ್ನು ಬಿಟ್ಟುಹೋದರೆ ಇನ್ನಿಲ್ಲದಂತೆ ಮಾತಾಡಿಕೊಳ್ಳುತ್ತಾರೆ. ಅದನ್ನೊಂದು ಭಾರಿ ಸುದ್ದಿಯನ್ನಾಗಿ ಮಾಡುತ್ತಾರೆ. ಅವಳನ್ನು ಓಡಿಹೋದವಳು, ಹಾದರಗಿತ್ತಿ ಅಂತೆಲ್ಲಾ ಕರೆಯುತ್ತಾರೆ. ತಿಂಗಳುಗಟ್ಟಲೆ ಅವಳ ಬಗ್ಗೆಯೇ ಮಾತಾಡಿ ಮಾತಾಡಿ ಬಾಯಿ ಚಪಲ ತೀರಿಸಿಕೊಳ್ಳುತ್ತಾರೆ. ಅವಳನ್ನು ಹುಡುಕಿ ವಾಪಾಸು ಕರೆತರುವದಿರಲಿ, ಅವಳ ಬಗ್ಗೆ ಯೋಚಿಸುವದು ಕೂಡ ಅಸಹ್ಯವೆಂದುಕೊಳ್ಳುತ್ತಾರೆ. ಇನ್ನು ಅವಳಾಗಿಯೇ ವಾಪಾಸು ಬಂದರೂ ಮನೆ ಬಾಗಿಲು ತೆರೆಯುವ ಮಾತಂತೂ ದೂರವೇ ಉಳಿಯಿತು. ಏಕೆಂದರೆ ನಮ್ಮಲ್ಲಿ ಅವಳ ವಿಷಯದಲ್ಲಿ ಯಾವುದೇ ಕ್ಷಮೆಯಾಗಲಿ ರಿಯಾಯಿತಿಗಳಾಗಲಿ ಇಲ್ಲ! ಅದು ಸರಿಯೋ? ತಪ್ಪೋ? ಮೊದಲಿನಿಂದಲೂ ನಮ್ಮ ಸಮಾಜ ಅವಳನ್ನು ಬೆಳೆಸಿಕೊಂಡಬಂದ ರೀತಿ ಹಾಗಿದೆ ಮತ್ತು ಈಗಲೂ ಅದೇ ನಿರ್ಬಂಧಗಳಲ್ಲಿ ಅವಳನ್ನು ನೋಡಲು ಬಯಸುತ್ತದೆ. ಹೀಗಿದ್ದೂ ಅವಳು ಗಂಡ, ಮನೆ, ಮಕ್ಕಳನ್ನೆಲ್ಲಾ ಬಿಟ್ಟು ಅವನ ಹಿಂದೆ ಹೋದದ್ದಾದರೂ ಏಕೆ? ಅಸಲಿಗೆ ಗಂಡನನ್ನು ಬಿಟ್ಟುಹೋಗಲು ಕಾರಣಾಂತ ಒಂದು ಇರಬೇಕಲ್ಲವೆ? ಹಾಗಾದರೆ ಆ ಕಾರಣವಾದರೂ ಯಾವುದು? ಎಲ್ಲ ಬಿಟ್ಟು ಅವನ ಹಿಂದೆ ಹೋಗುವದೆಂದರೆ? ಅದೂ ಏನೂ ಇಲ್ಲದ ಲೋಲು ಕಿನ್ನುರಿ ನುಡಿಸುವವನ ಹಿಂದೆ! ಈ ನಿಟ್ಟಿನಲ್ಲಿ ಇದನ್ನೊಂದು ತ್ರಿಕೋನ ಪ್ರೇಮ ಕಥೆಯೆನ್ನಬೇಕೆ? ಹಾದರದ ಕಥೆಯೆನ್ನಬೇಕೆ? ಅಥವಾ ವಿಚಿತ್ರ ಮನೋಲೋಕದ ಹೆಣ್ಣಿನ ಕಥೆಯೆನ್ನಬೇಕೆ? ನಿರ್ಧರಿಸಲು ಸಾಧ್ಯವಾಗುವದಿಲ್ಲ.

  ಅದೆಲ್ಲ ಇರಲಿ. ಒಬ್ಬ ಹೆಂಗಸು ತನ್ನ ಗಂಡನನ್ನು ಏಕೆ ಬಿಟ್ಟುಹೋಗುತ್ತಾಳೆ? ಅಷ್ಟಕ್ಕೂ ಬಿಡಲು ಅಂತಹ ಕಾರಣಗಳೇನಿರುತ್ತವೆ? ಅವನೊಬ್ಬ ಬಡವನಾಗಿರಬೇಕು, ಕುಡುಕನಾಗಿರಬೇಕು, ಬೇಜವಾಬ್ದಾರಿಯವನಾಗಿರಬೇಕು, ಬೇರೆ ಹೆಂಗಸಿನ ಸಹವಾಸ ಮಾಡಿರಬೇಕು, ದುಷ್ಟನಾಗಿರಬೇಕು. ಅಥವಾ ಕೊನೆಗೆ ಇದ್ಯಾವುದು ಅಲ್ಲದಿದ್ದರೆ ಅವನೊಬ್ಬ ಷಂಡನಾಗಿರಬೇಕು. ಇದಕ್ಕಿಂತ ಬೇರೆ ಕಾರಣವಾದರು ಏನಿರುತ್ತೆ? ಅಷ್ಟಕ್ಕೂ ಬಿಟ್ಟು ಹೋಗಲೇಬೇಕೆಂದರೆ ಅದು ಸಾಧ್ಯವಾಗೋದು ವಿದ್ಯಾವಂತ ಅಥವಾ ಉದ್ಯೋಗಸ್ಥ ಮಹಿಳೆಯರಿಗೆ ಮಾತ್ರ! ಆದರೆ ವಿದ್ಯಾವಂತೆಯೂ ಅಲ್ಲದ ಉದ್ಯೋಗಸ್ಥೆಯೂ ಅಲ್ಲದ ಹಳ್ಳಿಯ ಹೆಣ್ಣುಮಗಳೊಬ್ಬಳು ಗಂಡನನ್ನು ಬಿಡುವ ಯೋಚನೆಯನ್ನಾದರೂ ಮಾಡುತ್ತಾಳೆಯೆ? ಅವಳಿಗೆ ಏನೇ ಕಷ್ಟವಿದ್ದರೂ ಅವನ್ನೆಲ್ಲಾ ನುಂಗಿಕೊಳ್ಳುತ್ತಾಳೆ. ಇಲ್ಲವೇ ಆ ಸಮಸ್ಯೆಗಳಿಗೆ ಬೇರೆ ಪರಿಹಾರ ಕಂಡುಕೊಳ್ಳುತ್ತಾಳೆ. ಹೀಗೆ ಏಕಾಏಕಿ ಬಿಟ್ಟುಹೋಗುತ್ತಾಳೆಯೆ? ಸಾಧ್ಯಾನೇ ಇಲ್ಲ! ಹಾಗಿದ್ದರೆ ಈ ಹೆಂಗಸು ಎಲ್ಲ ಇದ್ದ ತನ್ನ ಗಂಡನನ್ನು ಬಿಟ್ಟುಹೋಗುವ ನಿರ್ಧಾರ ಮಾಡುವದೇಕೆ? ಅದೂ ಯಕಶ್ಚಿತ್ ಒಬ್ಬ ಜೋಗಿಯ ಹಿಂದೆ! ಹಾಗೆ ಹೋಗುವಾಗ ಅವಳಿಗೆ ಒಂಚೂರು ಅಪರಾಧಿ ಪ್ರಜ್ಞೆ ಕಾಡಲಿಲ್ಲವೆ? ಸಮಾಜದ ಇಷ್ಟೆಲ್ಲ ನಿರ್ಬಂಧಗಳ ನಡುವೆಯೂ ಅವಳ ಮನಸ್ಸು ಒಂಚೂರು ಅಳುಕಲಿಲ್ಲವೆ? ಅಂಥ ಧೈರ್ಯ ಆಕೆಗೆ ಬಂದದ್ದಾದರೂ ಎಲ್ಲಿಂದ? ಆ ಸಂದರ್ಭದಲ್ಲಿ ಅವಳ ಮನಸ್ಥಿತಿಯಾದರೂ ಹೇಗಿತ್ತು? ಬೇರೆಲ್ಲ ಹೋಗಲಿ ಕಡೆಪಕ್ಷ ಅವಳ ಮಗನ ಮೇಲಿನ ಪ್ರೀತಿಯಾದರೂ ಅವಳನ್ನು ಹೋಗದಂತೆ ತಡೆಹಿಡಿದು ನಿಲ್ಲಿಸಲಿಲ್ಲವೆ? ಎಲ್ಲವನ್ನೂ ಧಿಕ್ಕರಿಸಿ ಯಕಶ್ಚಿತ್ ಒಬ್ಬ ಜೋಗಿಯ ಹಿಂದೆ ಹೋಗಬೇಕಾದರೆ ಅದರ ಹಿಂದೆಯಿದ್ದ ಶಕ್ತಿಯಾದರೂ ಎಂಥದು? ಅದು ಪ್ರೇಮವೋ? ಕಾಮವೋ? ಮೋಹವೋ? ಅಥವಾ ಬರೀ ಆಕರ್ಷಣೆಯೋ? ಎಲ್ಲ ಬಿಟ್ಟು ಯಾತಕ್ಕಾಗಿ ಅವನ ಹಿಂದೆ ಹೋಗುತ್ತಾಳೆ? ಮತ್ತೆ ಮತ್ತೆ ಕಾಡುವ ಪ್ರಶ್ನೆಗಳು! ಉತ್ತರ ಹುಡುಕಿ ಹೋದಷ್ಟು ಅವಳು ನಿಗೂಢವಾಗಿ ಉಳಿಯುತ್ತಾಳೆ ಮತ್ತು ಹೆಣ್ಣಿನ ಭಾವನಾತ್ಮಕ ಪ್ರಪಂಚಕ್ಕೆ ಒಂದು ಸವಾಲಾಗಿ ನಿಲ್ಲುತ್ತಾಳೆ.

  ಈ ಜಾನಪದ ಗೀತೆ ಮೇಲ್ನೋಟಕ್ಕೆ ಜೋಗಿ ಮತ್ತು ಅವನ ಹಿಂದೆ ಹೋಗುವ ಹೆಣ್ಣಿನ ನಡುವಿನ ಸರಸ ಸಲ್ಲಾಪದಂತೆ ಕಂಡರೂ ಅವಳ ವಿಚಿತ್ರ ಮನೋಲೋಕವನ್ನು ಅನಾವರನಗೊಳಿಸುತ್ತದೆ. ಅವಳು ಅವನ ಹಿಂದೆ ಪ್ರೇಮಕ್ಕಾಗಿ ಹೋಗುತ್ತಾಳೋ? ಕಾಮಕ್ಕಾಗಿ ಹೋಗುತ್ತಾಳೋ? ಅಥವಾ ಅವನ ಮೇಲಿನ ಆಕರ್ಷಣೆಗೋಸ್ಕರ ಹೋಗುತ್ತಾಳೋ? ಯಾತಕ್ಕಾಗಿ ಎಂದು ಕವನ ಸ್ಪಷ್ಟವಾಗಿ ಹೇಳುವದಿಲ್ಲ. ಬರಿ ಅವರಿಬ್ಬರ ನಡುವಿನ ಸರಸ ಸಲ್ಲಾಪವನ್ನಷ್ಟೇ ಕಟ್ಟಿಕೊಡುತ್ತದೆ. ಈ ಹಾಡು ಜೋಗಪ್ಪ ಮತ್ತು ಅವನ ಹಿಂದೆ ಹೋಗುವ ಹೆಣ್ಣಿನ ಸಂಭಾಷಣೆಯ ರೂಪದಲ್ಲಿದೆಯಾದರೂ ಇಡಿ ಹಾಡಿನುದ್ದಕ್ಕೂ ಅವನೇನೋ ಕೇಳುತ್ತಾನೆ. ಅವಳೇನೋ ಹೇಳುತ್ತಾಳೆ. ಅಥವಾ ಅವಳೇನೋ ಕೇಳುತ್ತಾಳೆ. ಅವನೇನೋ ಹೇಳುತ್ತಾನೆ. ಅಂದರೆ ಪರಸ್ಪರರ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುವದಿಲ್ಲ. ಇಬ್ಬರರ ಉತ್ತರಗಳಲ್ಲಿ ಪಲಾಯನವಿದೆ ಅಥವಾ ಹಾರ್ಷ್ ಉತ್ತರ ಕೊಡುವದು ಬೇಡವೆಂದು ಮೊದಲೇ ಯೋಚಿಸಿ ಇಬ್ಬರೂ ಒಬ್ಬರಿಗೊಬ್ಬರು ನೋವಾಗದಂತೆ ಹಿತವಾದ ಉತ್ತರ ಕೊಡುತ್ತಾರೆ. ಆ ಮೂಲಕ ಪರಸ್ಪರ ಆ ಕ್ಷಣದ ಸುಖವನ್ನು ಮಾತ್ರ ಅನುಭವಿಸಲು ನೋಡುತ್ತಾರೆ. ಭವಿಷ್ಯದ ಆಗುಹೋಗುಗಳ ಬಗ್ಗೆ ಯೋಚಿಸುವದೇ ಇಲ್ಲ. ಹಾಗೆ ನೋಡಿದರೆ ಕವನದ ಮೊದಲಿನೆರಡು ಸಾಲುಗಳಲ್ಲಿ ಮಾತ್ರ ಅವಳ ಪ್ರಶ್ನೆಗೆ ಸರಿಯಾದ ಉತ್ತರ ಸಿಗುತ್ತದೆ. ಅವಳು ಅವನ ಹಿಂದೆ ಹೋಗುವಾಗ “ಎಲ್ಲೋ ಜೋಗಪ್ಪ ನಿನ್ನರಮನೆ? ಎಲ್ಲೋ ಜೋಗಪ್ಪ ನಿನ್ನ ತಳಮನೆ?” ಎಂದು ಕೇಳುತ್ತಾಳೆ. ಅದಕ್ಕವನು “ಬೆಟ್ಟ ಹತ್ತಿಹೋಗಬೇಕು ಬೆಟ್ಟ ಇಳಿದುಹೋಗಬೇಕು. ಅಲ್ಲಾದೆ ಕಣೆ ನನ್ನರಮನೆ ಅಲ್ಲಾದೆ ಕಣೆ ನನ್ನ ತಳಮನೆ” ಎಂದು ಉತ್ತರ ಕೊಡುತ್ತಾನೆ. ಬಲು ಖಿಲಾಡಿ ಜೋಗಿ ಅವನು! ಅಸಲಿಗೆ ಊರೂರು ತಿರುಗುತ್ತಾ ತನ್ನ ಹೊಟ್ಟೆ ಹೊರೆದುಕೊಳ್ಳುವ ಜೋಗಿಗೆ ಒಂದು ಮನೆಯಾದರೂ ಇರಲು ಸಾಧ್ಯವೆ? ಅವನಿಗೆ ಇವತ್ತು ಈ ಊರು, ನಾಳೆ ಇನ್ನೊಂದು ಊರು. ಅದನ್ನವನು ಬಹಳ ಜಾಣತನದಿಂದ “ಬೆಟ್ಟ ಹತ್ತಿಹೋಗಬೇಕು ಬೆಟ್ಟ ಇಳಿದುಹೋಗಬೇಕು. ಅಲ್ಲಾದೆ ಕಣೆ ನನ್ನರಮನೆ. ಅಲ್ಲಾದೆ ಕಣೆ ನನ್ನ ತಳಮನೆ” ಎಂದು ಹೇಳುತ್ತಾನೆ. ಅಥವಾ ತನಗೆ ಮನೆಯೇ ಇಲ್ಲ, ಮನೆಯಿದ್ದರೂ ಅಲ್ಲಿಗೆ ಹೋಗುವ ದಾರಿ ಬಲು ಕಠಿಣವಾದುದು ಎನ್ನುವದನ್ನು ಸೂಚ್ಯವಾಗಿ ಹೇಳುತ್ತಾನೆ. ಅಂದರೆ “ನೀನು ಎಲ್ಲ ಬಿಟ್ಟು ನನ್ನ ಹಿಂದೆ ಬರುತ್ತಿದ್ದೀಯಾ. ನನ್ನ ಬದುಕು ದುಸ್ತರವಾದುದು. ಮುಂದೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ” ಎನ್ನುವ ಎಚ್ಚರಿಕೆಯನ್ನೂ ಕೊಡುತ್ತಿದ್ದಾನೆ. ಒಂದು ರೀತಿಯಲ್ಲಿ ಅವಳನ್ನು ಮುಂದಿನ ಬದುಕಿಗಾಗಿ ಮಾನಸಿಕವಾಗಿ ತಯಾರಿ ಮಾಡಿಸುತ್ತಾನೆ. ಮುಂದೆ ಅವಳೊಟ್ಟಿಗೆ ಬಾಳ್ವೆ ಮಾಡುತ್ತಾನೋ? ಇಲ್ವೋ? ಆ ಮಾತು ಬೇರೆ. ಅಂತೂ ಅವಳಿಗೆ ಸಮಾಧನಕರ ಉತ್ತರವನ್ನು ಆ ಕ್ಷಣಕ್ಕೆ ಕೊಡುತ್ತಾನೆ. ಅವಳೋ ಅದಾಗಲೇ ಎಲ್ಲ ಬಿಟ್ಟು ಅವನ ಬೆನ್ಹತ್ತಿ ಬಂದಾಗಿದೆ. ಆದರೂ ಅವನ ಮನದಲ್ಲಿನ್ನೂ ಕೆಲವು ಸಂಶಯಗಳಿವೆ. ಅವನ್ನು ಸ್ಪಷ್ಟಪಡಿಸಿಕೊಳ್ಳುವದಕ್ಕೋಸ್ಕರ “ಎಳ್ಳಿನ ಹೊಲವ ಬಿಟ್ಟೆ ಒಳ್ಳೆಯ ಗಂಡನ ಬಿಟ್ಟೆ/ಉದ್ದಿನ ಹೊಲವ ಬಿಟ್ಟೆ ಮುದ್ದಿನ ಮಗನ ಬಿಟ್ಟೆ/ ಕಳ್ಳಾಟ ಜೋಗಿ ಕೂಡ ಬರಬಹುದೆ?” ಎಂದು ಕೇಳುತ್ತಾನೆ. ಅಂದರೆ ಒಳ್ಳೆಯ ಗಂಡ, ಅನುಕೂಲಸ್ಥ ಮನೆ, ಮುದ್ದಿನ ಮಗನನ್ನು ಬಿಟ್ಟು ನನ್ನಂತ ಕಳ್ಳಾಟ ಜೋಗಿ ಕೂಡ ಬರುತ್ತಿದ್ದೀಯಲ್ಲ? ಇಂಥವರನ್ನೇ ಬಿಟ್ಟ ಮೇಲೆ ನಾಳೆ ನನ್ನನ್ನು ಬಿಡುವದಿಲ್ಲ ಎನ್ನುವದಕ್ಕೆ ಏನು ಗ್ಯಾರಂಟಿ? ಎಂದು ಕೇಳುತ್ತಾನೆ. ಅದಕ್ಕವಳು ಸಮಂಜಸವಾದ ಉತ್ತರ ಕೊಡುವದಿಲ್ಲವಾದರೂ “ನಿನ್ನಲ್ಲಿ ನನಗೆ ಮನಸಾದೆ ಜೋಗಿ” ಎಂದಷ್ಟೇ ಹೇಳುತ್ತಾಳೆ. ಅದಕ್ಕೇ ನಾನು ಆರಂಭದಲ್ಲೇ ಹೇಳಿದ್ದು; ಅವನೇನೋ ಕೇಳುತ್ತಾನೆ, ಅವಳೇನೋ ಹೇಳುತ್ತಾಳೆ ಎಂದು. ಈ ಪ್ರಕ್ರಿಯೆ ಕವನದುದ್ದಕ್ಕೂ ಅಲ್ಲಲ್ಲಿ ಕಾಣಿಸುತ್ತದೆ. ಕೊನೆಯಲ್ಲಿ ಅವನು “ಎಲ್ಲಾನೂ ಬಿಟ್ಟ ಮೇಲೆ ನನ್ನನ್ಯಾಕೆ ಬಿಡಲೊಲ್ಲೆ?” ಎಂದು ಕೇಳುತ್ತಾನೆ. ಆದರೆ ಅವಳಿಂದ ಬರುವ ಉತ್ತರ ಎಂಥದಾಗಿರುತ್ತದೋ? ಅದೊಂದು ವೇಳೆ ಆತಂಕಕಾರಿ ಉತ್ತರವಾಗಿದ್ದರೆ? ಅದನ್ನವನು ಊಹಿಸಲು ಕೂಡ ತಯಾರಿಲ್ಲ. ಹಾಗಾಗಿ ಅವಳ ಉತ್ತರಕ್ಕೂ ಕಾಯದೆ ತಾನೇ “ನಿನ್ನಲ್ಲಿ ನನಗೆ ಮನಸಾದೆ ನಾರಿ” ಎಂದು ಹೇಳುವದರ ಮೂಲಕ ಆ ಕ್ಷಣದ ಆತಂಕಕ್ಕೆ ತೆರೆಯೆಳೆಯುತ್ತಾನೆ ಮತ್ತು ಅವಳ ಬಾಯಿ ಮುಚ್ಚಿಸುತ್ತಾನೆ. ಹಾಡಿನ ಕೊನೆಯಲ್ಲಿ “ನನ್ನ ತೋಳಲ್ಲಿ ನಿನ್ನ ಕಿನ್ನುರಿ ಮಾಡಿಕೊಂಡು ಚೆಂದಾದ ಪದವ ನುಡಿಸೇನು ನಾರಿ, ಚೆಂದಾದ ಪದವ ನುಡಿಸೇನು” ಎಂದು ಹಾಡುತ್ತಾ ಹೊರಟು ಹೋಗುತ್ತಾನೆ. ಮುಂದೆ ಅವರಿಬ್ಬರು ಹೇಗೆ ಇರುತ್ತಾರೆ? ಈ ಪ್ರಶ್ನೆಗೆ ಉತ್ತರ ಹುಡುಕಬೇಕೆಂದರೆ ಕವನ ಮುಂದುವರಿಯುವದೇ ಇಲ್ಲ.

  ಇಲ್ಲಿ ಅವನ ಹಿಂದೆ ಹೋಗುವ ಅವಳು ಅವನ ಯಾವುದಕ್ಕೆ ಮನಸೋತಿದ್ದಾಳೆ? ಅಸಲಿಗೆ ಜೋಗಿಗೇ ಆ ವಿಷಯ ಸ್ಪಷ್ಟವಾಗಿಲ್ಲ. ಎಲ್ಲಬಿಟ್ಟು ಏನೂ ಇಲ್ಲದ ನನ್ನ ಹಿಂದೆ ಬರಬೇಕಾದರೆ ಅವಳು ಮನಸೋತಿದ್ದು ಯಾವುದಕ್ಕೆ ಎನ್ನುವ ಗೊಂದಲ ಅವನಲ್ಲಿದೆ. ಹಾಗೆಂದೇ “ಚಿಕ್ಕಿನುಂಗರಕ್ಕೆ ಮನಸೋತಳೋ? ನಾರಿ ಬೆಳ್ಳಿನುಂಗರಕ್ಕೆ ಮನಸೋತಳೋ?” ಎಂದು ತನ್ನನ್ನೇ ತಾನು ಕೇಳಿಕೊಳ್ಳುವದರ ಮೂಲಕ ಇರಬಹುದೇನೋ ಎಂದು ಭಾವಿಸುತ್ತಾನೆ. ಆದರೆ ಅವಳು ಉಂಗುರಗಳಿಗೆ ಮನಸೋಲಲು ಸಾಧ್ಯವಿಲ್ಲ. ಏಕೆಂದರೆ ಅವಳ ಗಂಡ ಎಳ್ಳು, ಉದ್ದಿನ ಹೊಲವಿದ್ದವನಾಗಿದ್ದಾನೆ. ಶ್ರೀಮಂತನಲ್ಲದಿದ್ದರೂ ಅಂಥ ಉಂಗುರಗಳನ್ನು ತೆಗೆದುಕೊಡುವಷ್ಟು ಅನುಕೂಲಸ್ಥನಾಗಿದ್ದಾನೆ. ಮೇಲಾಗಿ ಹಾಗೆಲ್ಲ ಚಿನ್ನ, ಬೆಳ್ಳಿಗೆ ಆಸೆಪಟ್ಟು ಒಂದು ಹೆಣ್ಣು ಅದೂ ಒಬ್ಬ ಗೃಹಿಣಿ ಇನ್ನೊಬ್ಬನ ಹಿಂದೆ ಹೋಗಲು ಸಾಧ್ಯವೆ? ಹಾಗಿದ್ದರೆ ಅವಳು ಸೋತಿದ್ದು ಇದಕ್ಕಲ್ಲ. ಮತ್ತಿನ್ಯಾವುದಕ್ಕೆ? ಅವನ ಧ್ವನಿಗೆ? ಅವನ ಧ್ವನಿ ಅವಳನ್ನು ಆಕರ್ಷಿಸುವಷ್ಟು ಮಾದಕವಾಗಿತ್ತೆ? ಒಂದುವೇಳೆ ಹಾಗೇ ಇರಬಹುದೆಂದು ಇಟ್ಟುಕೊಂಡರೆ ಒಬ್ಬ ಹಳ್ಳಿಯ ಹೆಣ್ಣು ಇಷ್ಟೆಲ್ಲ ನಿರ್ಬಂಧಗಳ ನಡುವೆ ಗಂಡ, ಮನೆ, ಮಗ ಎಲ್ಲ ಬಿಟ್ಟು ಕೇವಲ ಪರಪುರುಷನ ಧ್ವನಿಗೆ ಸೋತು ಹೋಗುವದುಂಟೆ? ಸಾಧ್ಯವಿಲ್ಲ. ಹಾಗಿದ್ದರೆ ಇನ್ಯಾವುದಕ್ಕೆ ಹೋಗುತ್ತಾಳೆ? ಅವಳು ಕಿನ್ನುರಿ ನುಡಿಸುವ ಅವನ ಬೆರಳಿನಂದಕ್ಕೆ ಸೋತುಹೋದಳೆ? ಅಂದರೆ ಅವನಿಗೆ ಆಕರ್ಷಕ ಮೈಕಟ್ಟಿತ್ತೆ? ಅದನ್ನು ಮೆಚ್ಚಿಕೊಂಡು ಹೋದಳೆ? ಅವಳಿಗೆ ತನ್ನ ಗಂಡನಿಂದ ಪಡೆದ ಮಗುವೇನೋ ಇತ್ತು. ಆದರೆ ನಿತ್ಯವೂ ಬೇಕಾಗಿರುವ ದೈಹಿಕ ಸುಖವನ್ನು ಅವಳಿಗೆ ಕೊಡುವದರಲ್ಲಿ ಅವನು ವಿಫಲನಾಗಿದ್ದನೆ? ಆ ಕೊರತೆಯನ್ನು ನೀಗಿಸಿಕೊಳ್ಳಲು ಅವನ ಹಿಂದೆ ಹೋಗುತ್ತಾಳಾ? ಹಾಗೆಂದು ಕೂಡ ಹೇಳಲು ಬರುವದಿಲ್ಲ. ಏಕೆಂದರೆ ಒಂದುವೇಳೆ ಅವಳು ಇದೇ ಕಾರಣಕ್ಕೆ ಅವನ ಹಿಂದೆ ಹೋಗುವದಾದರೆ ಅವಳು ಈಗಾಗಲೆ ಅವನೊಂದಿಗೆ ಸಂಪರ್ಕ ಬೆಳೆಸಿ ಇವನೇ ನನ್ನ ದೈಹಿಕ ವಾಂಚೆಗಳನ್ನು ತೀರಿಸಲು ಯೋಗ್ಯನಾದ ಗಂಡು ಎಂದು ನಿರ್ಧರಿಸಬೇಕಾಗಿರುತ್ತದೆ. ಆದರೆ ಒಂದು ಸಾರಿಯೂ ಅವರಿಬ್ಬರ ಮಧ್ಯ ಅದು ಸಂಭವಿಸಯೇ ಇಲ್ಲ ಎಂದು ಅವರಿಬ್ಬರ ನಡುವಿನ ಸಂಭಾಷಣೆಯಿಂದ ಗೊತ್ತಾಗುತ್ತದೆ. ಹಾಗಾದರೆ ಅವಳು ತನ್ನ ಕಾಮತೃಷೆಯನ್ನು ತೀರಿಸಲು ಇವನೇ ಯೋಗ್ಯನಾದ ಗಂಡು ಎಂದು ಹೇಗೆ ನಿರ್ಧರಿಸುತ್ತಾಳೆ? ಇನ್ನು ಇವರಿಬ್ಬರ ನಡುವೆ ಈಗಷ್ಟೆ ಹುಟ್ಟಿದ ಪ್ರೀತಿಯಿದೆ. ಅದು ಎಳಸು ಪ್ರೀತಿ. ಅದು ಪರಸ್ಪರ ಒಬ್ಬರಿಗೊಬ್ಬರು ಮಾತಾಡಿಕೊಳ್ಳುವಾಗ “ನನ್ನಲ್ಲಿ ನಿನಗ ಮನಸಾದೆ” ಎನ್ನುವ ಮಾತಲ್ಲಿ ವ್ಯಕ್ತವಾಗುತ್ತದೆ. ಆ ಎಳಸು ಪ್ರೀತಿಗೆ ಗಂಡ, ಮನೆ, ಮಗನನ್ನು ಬಿಟ್ಟು ಹೋಗಬಹುದೆ? ಅವಳ ದಾಂಪತ್ಯ ಜೀವನದಲ್ಲೇನಾದರೂ ಬಿರುಕುಗಳಿದ್ದವೆ? ಆ ಬಿರುಕುಗಳೇ ಜೋಗಿಯ ಹಿಂದೆ ಹೋಗುವಂತೆ ಮಾಡಿತೆ? ಅಥವಾ ಅವಳಿಗೆ ಅವನ ಮೇಲೆ ಹುಟ್ಟಿದ ಒಂದು ಆಕರ್ಷಣೆಯೇ? ಆ ಆಕರ್ಷಣೆಗೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಪ್ರೀತಿಯ ಲೇಪನವನ್ನು ಹಚ್ಚುತ್ತಿದ್ದಾಳೆಯೇ? ಅಥವಾ ಗಂಡನಲ್ಲಿ ಸಿಗದ ಪ್ರೀತಿಯನ್ನು ಅವನಲ್ಲಿ ಹುಡುಕಿ ಹೋದಳೆ? ಕವನ ಇದರ ಬಗ್ಗೆ ಸರಿಯಾಗಿ ಏನನ್ನೂ ಹೇಳುವದಿಲ್ಲ.

  ಹೋದವಳು ಹೋದಳು ತನ್ನ ಗಂಡನಿಗಿಂತ ಎಲ್ಲದರಲ್ಲೂ ಉತ್ತಮವಾಗಿರುವ ಗಂಡಸಿನೊಂದಿಗೆ ಹೋದಳೆ? ಇಲ್ಲ. ಏನೂ ಇಲ್ಲದ ಯಕಶ್ಚಿತ್ ಒಬ್ಬ ಜೋಗಿಯ ಹಿಂದೆ ಹೋಗುತ್ತಾಳಲ್ಲ? ಅದು ನಮ್ಮನ್ನೆಲ್ಲ ತುಸು ಯೋಚಿಸುವಂತೆ ಮಾಡುವದು! ಯಾವ ಕಾರಣಕ್ಕೆ ಹೋಗುತ್ತಾಳೆ ಎನ್ನುವದು ಕೊನೆವರೆಗೂ ಗೊತ್ತಾಗುವದೇ ಇಲ್ಲ. ಅವಳೇನೋ ಬಿಟ್ಟುಹೋದಳು. ಹಾಗೆ ಬಿಟ್ಟು ಹೋದವಳು ಕಡೆತನಕ ಆ ಜೋಗಿಯೊಂದಿಗೆ ಇರುತ್ತಾಳಾ? ಅವನೊಟ್ಟಿಗೆ ಬಾಳ್ವೆ ಮಾಡುತ್ತಾಳಾ? ಆ ಸಂಬಂಧವನ್ನು ಉಳಿಸಿಕೊಳ್ಳಲು ಯಶಸ್ವಿಯಾಗುತ್ತಾಳಾ? ಅಥವಾ ತದನಂತರದಲ್ಲಿ ಅವನ ಬಗ್ಗೆಯೂ ಭ್ರಮೆ ನಿರಸನಕ್ಕೊಳಗಾಗಿ ಮತ್ತೆ ತನ್ನ ಗಂಡನಲ್ಲಿಗೆ ವಾಪಾಸಾಗುತ್ತಾಳೋ? ಇದ್ಯಾವುದು ನಮಗೆ ಗೊತ್ತಾಗುವದಿಲ್ಲ. ಆದರೆ ಹಾಗೆ ಬಿಟ್ಟುಹೋಗುವಾಗ ಅವಳ ಗಂಡನ ಮನಸ್ಥಿತಿ ಹೇಗಿರಬೇಡ? ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಕಂಡವರೆಲ್ಲಾ ಅವನನ್ನು ನೋಡಿ ಕಿಸಕ್ಕೆಂದು ನಗುವಾಗ ಅವನ ಪರಿಸ್ಥಿತಿ ಹೇಗಿರಬೇಡ? ಅಕಸ್ಮಾತ್ ಗಂಡ ಹೆಂಡತಿಯನ್ನು ಬಿಟ್ಟು ಹೋದರೆ ಅವಳು ತನ್ನ ಮುಂದಿನ ಬದುಕನ್ನು ಅದ್ಹೇಗೋ ಕಟ್ಟಿಕೊಂಡುಬಿಡುತ್ತಾಳೆ. ಆ ತಾಕತ್ತು ಅವಳಲ್ಲಿದೆ. ಆದರೆ ಹೆಂಡತಿಯಾದವಳು ಸುಕಾಸುಮ್ಮನೆ ಕಾರಣ ಹೇಳದೆ ಗಂಡನನ್ನು ಬಿಟ್ಟು ಇನ್ನೊಬ್ಬನ ಹಿಂದೆ ಹೋದರೆ? ಅವನು ಮಾನಸಿಕವಾಗಿ ನೊಂದುಹೋಗುತ್ತಾನೆ. ಬೆಂದುಹೋಗುತ್ತಾನೆ. ಹೊರಗೆ ಅವನು ಎಷ್ಟೇ ಧೀರನಾಗಿ ಶೂರನಾಗಿ ಕಂಡರೂ ಒಳಗೊಳಗೆ ಅವನು ತುಂಬಾ ಜರ್ಝರಿತನಾಗುತ್ತಾನೆ. ಅಧೀರನಾಗಿಹೋಗುತ್ತಾನೆ. ಅಷ್ಟು ದಿವಸ ಕಾಪಡಿಕೊಂಡುಬಂದ ಅವನ ಮರ್ಯಾದೆ, ಪ್ರತಿಷ್ಟೆ, ಎಲ್ಲವೂ ಮಣ್ಣುಪಾಲಾಗಿ ಅವನು ಇದ್ದೂ ಸತ್ತಂತೆ ಬದುಕತ್ತಾನೆ.

  -ಉದಯ್ ಇಟಗಿ

  ಪ್ರಥಮ ಪುರುಷ ನಿರೂಪಣೆಗಳು ಅನುಮಾನಕ್ಕೆ ಎಡೆಮಾಡಿಕೊಡುತ್ತವೆಯೇ?

 • ಶನಿವಾರ, ಡಿಸೆಂಬರ್ 04, 2010
 • ಬಿಸಿಲ ಹನಿ
 • ಚಿನ್ನು, ನಾನು ಮೊನ್ನೆ ಒಂದು ಪತ್ರ ಬರೆದಿದ್ದೆನಲ್ಲ? ಅದೇ ಡೈವೋರ್ಸ್ ಕುರಿತಂತೆ! ‘ಅಗಲುವಿಕೆಯೇ ಹಾಗೆ, ಅದು ಅಗಲುವದೇ ಇಲ್ಲ’ ಅನ್ನೋ ನನ್ನ ಕಳೆದ ಸಾರಿಯ ಬ್ಲಾಗ್ ಪೋಸ್ಟ್. ಅದನ್ನೋದಿದ ನನ್ನ ಬ್ಲಾಗ್ ಫ್ರೆಂಡ್ಸ್, ಒಂದಷ್ಟು ಖಾಸಗಿ ಮಿತ್ರರು, ಹಾಗು ಹೈಸ್ಕೂಲ್ ಗೆಳೆಯರು “It’s very touchy. ತುಂಬಾ ಚನ್ನಾಗಿ ಬರಿದಿದ್ದೀಯ. ನಿರೂಪಣೆ ಕೂಡ ಚನ್ನಾಗಿದೆ. ಹೀಗೆ ಬರೆಯುತ್ತಿರು” ಎಂದು ಮೆಚ್ಚಿಕೊಂಡು ನನಗೆ ಪ್ರತ್ಯೇಕ ಈಮೇಲ್ ಗಳನ್ನು ಕಳಿಸಿದ್ದಾರೆ. ಇವರಂತೆಯೇ ಅದನ್ನು ಓದಿದ ದೂರದ ಮಂಡ್ಯದ ನನ್ನ ಕಾಲೇಜು ಗೆಳತಿಯೊಬ್ಬಳು ಕೂಡ ಒಂದು ಈಮೇಲ್ ಕಳಿಸಿದ್ದಾಳೆ. ಅದು ತುಂಬಾ ತಮಾಷೆಯಾಗಿದೆ. ತಮಾಷೆ ಯಾಕೆ ಅಂದರೆ ಅವಳು ನಮ್ಮಿಬ್ಬರಿಗೂ ಡೈವೋರ್ಸ್ ಆಗಿ ಹೋಗಿದೆಯೆಂದು ಭಾವಿಸಿಬಿಟ್ಟಿದ್ದಾಳೆ. “ಇದೇನು ಮಾರಾಯ? ನಿನ್ನ ಡೈವೋರ್ಸ್ ಯಾವಾಗಾಯ್ತು? ಯಾಕಾಯ್ತು? ಹೆಂಗಾಯ್ತು? ಛೇ, ಹೀಗಾಗಬಾರದಿತ್ತು!” ಎನ್ನುವದು ಅವಳ ಈಮೇಲ್ ನ ಒಟ್ಟು ಸಾರಾಂಶ. ಇದು ನಿನಗೆ ನಗು ತರಿಸುವದಿಲ್ಲವೆ? ತರಿಸದೆ ಏನು? ಎಂಥವರೂ ಬಿದ್ದು ಬಿದ್ದು ನಗುತ್ತಾರೆ. ಮೊದಲಿಗೆ ಇದನ್ನು ಓದಿದಾಗ ನಾನು ಕೂಡ ಬಿದ್ದು ಬಿದ್ದು ನಕ್ಕಿದ್ದೆ. ಆದರೆ ನಿಧಾನಕ್ಕೆ ಕುಳಿತು “ಅವಳಿಗೆ ಈ ತರದ ಆಲೋಚನೆ ಬಂದದ್ದಾದರೂ ಹೇಗೆ?” ಎಂದು ನನ್ನನ್ನು ನಾನೇ ಕೇಳಿಕೊಂಡಾಗ ಉತ್ತರ ಸ್ಪಷ್ಟವಿತ್ತು. ಇಡಿ ಲೇಖನ ಅಥವಾ ಪತ್ರ ಪ್ರಥಮ ಪುರುಷದ ನಿರೂಪಣೆಯಲ್ಲಿತ್ತು. ಅಂದರೆ ನನ್ನದೇ ಕಥೆಯೆಂಬಂತೆ ಇತ್ತು. ಅಂದರೆ ಆತ್ಮಕಥೆಯ ಧಾಟಿಯಲ್ಲಿತ್ತು. ಬಹಳಷ್ಟು ಬರಹಗಾರರು ಈ ತರದ ನಿರೂಪಣೆಯನ್ನು ಬೇಕೆಂತಲೇ ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಇದು ತುಂಬಾ ಪರಿಣಾಮಕಾರಿಯಾಗಿರುತ್ತದೆ ಹಾಗೂ ಹೇಳಬೇಕಾಗಿದ್ದನ್ನು ಮನ ಮುಟ್ಟುವಂತೆ, ತಟ್ಟುವಂತೆ ಹೇಳಬಹುದಾಗಿರುತ್ತದೆ ಎನ್ನುವದು ಅವರ ವಾದ. ಮೇಲಾಗಿ ಓದುಗರಿಗೂ ಕೂಡ ಇದು ತಮ್ಮದೇ ಕಥೆಯಂತೆ ಭಾಸವಾಗುತ್ತದೆ. ಅದೆಲ್ಲ ಸರಿ. ಆದರೆ ಹಾಗೆ ಬರೆದ ಮಾತ್ರಕ್ಕೆ ಅದು ಅವನ ಖಾಸಗಿ ಜೀವನದ ಸಂಗತಿಯೇ ಎಂದು ತೀರ್ಮಾನಿಸುವದು ಎಷ್ಟರಮಟ್ಟಿಗೆ ಸರಿ? ಹೀಗೆಂದು ಕೇಳುತ್ತಲೆ ಅವಳಿಗೆ ಉತ್ತರವನ್ನು ಈ ಕೆಳಗೆ ನೀಡಿದ್ದೇನೆ. ಅದನ್ನೊಮ್ಮೆ ಓದು. ಓದಿ ನಕ್ಕು ಬಿಡು.

  “ಯಾವುದೇ ಬರಹಗಾರನ ಬರಹಗಳು ಅವನ ಖಾಸಗಿ ಜೀವನದ ಮೇಲೆ ಒಂದಿಷ್ಟು ಬೆಳಕು ಚೆಲ್ಲಿವೆ ಎಂದು ಊಹಿಸಬಹುದು. ಆದರೆ ಚೆಲ್ಲೇಚೆಲ್ಲಿವೆ ಎಂದು ಖಡಾಖಂಡಿತವಾಗಿ ಹೇಳಲು ಬರುವದಿಲ್ಲ. ಒಬ್ಬ ಲೇಖಕನ ಕೃತಿಗಳಲ್ಲಿ ಆತನ ಖಾಸಗಿ ಜೀವನದ ಘಟನೆಗಳು ಅಲ್ಲಲ್ಲಿ ಇಣುಕುವದು ಸಾಮಾನ್ಯ. ಅವನು ಅವುಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲಾರ. ಹೀಗಾಗಿ ಅವೆಲ್ಲವನ್ನು ಅವನು ಸಂದರ್ಭಕ್ಕೆ ತಕ್ಕಂತೆ ಅಲ್ಲಲ್ಲಿ ವ್ಯಕ್ತಪಡಿಸುವದು ಸಹಜ. ಹಾಗಂತ ಇಡಿಯಾಗಿ ಅದು ಅವನದೇ ಜೀವನದಲ್ಲಿ ನಡೆದ ಘಟನೆಯೆಂದು ತೀರ್ಮಾನಿಸಲು ಬರುವದಿಲ್ಲ. ಒಂದುವೇಳೆ ಹಾಗೆ ಕಾಣಿಸಿಕೊಂಡಿದ್ದರೂ ಅದು ಹೌದೋ? ಅಲ್ವೋ? ಎಂಬ ಸತ್ಯ ಬರೆದವನಿಗೆ ಹಾಗೂ ಅವನನ್ನು ಅತ್ಯಂತ ಹತ್ತಿರದಿಂದ ಬಲ್ಲ ಒಂದಿಷ್ಟು ಮಂದಿಗೆ ಬಿಟ್ಟರೆ ಮತ್ಯಾರಿಗೂ ಗೊತ್ತಿರುವದಿಲ್ಲ. ಹಾಗಿದ್ದೂ ನೀವು ಯಾವುದಾದರೂ ಒಂದು ಕಥೆಯನ್ನು ಓದಿದರೆ ಅದು ಬರೆದವನ ಕಥೆಯಿರಬೇಕು ಎಂದು ಅನುಮಾನ ಪಡುವದೇಕೆ? ಅನುಮಾನಪಟ್ಟು ಸುಮ್ಮನಿದ್ದರೆ ಬೇಜಾರಿಲ್ಲ. ಆದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬರೆದವನನ್ನು ನೇರವಾಗಿ ಇದು ನಿಮ್ಮದೇ ಕಥೆಯೇ? ನಿಮ್ಮದೇ ಜೀವನದ ಘಟನೆಯೇ? ಎಂದು ಕೇಳಿ ಅವನನ್ನೇಕೆ ಮುಜುಗರಪಡಿಸುತ್ತೀರಿ? ಅದರಲ್ಲೂ ನಮ್ಮ ಬರಹಗಳು ಪ್ರಥಮ ಪುರುಷದ ನಿರೂಪಣೆಯಲ್ಲಿದ್ದರಂತೂ ಮುಗಿದೇಹೋಯಿತು. ತಕ್ಷಣ ‘ಓ! ಇದು ಇವನದೇ ಕಥೆ’ ಎಂದು ತೀರ್ಮಾನಿಸುವದೇಕೆ? ಈ ಎಲ್ಲ ಹಿನ್ನೆಲೆಯಲ್ಲಿ ಅದು ನನ್ನ ಕಥೆಯಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ! ನಾನದನ್ನು ಪ್ರಥಮ ಪುರುಷದಲ್ಲಿ ಬರೆದಾಕ್ಷಣ ಅದು ನನ್ನದೇ ಕಥೆಯೆಂದು ನೀನ್ಹೇಗೆ ಭಾವಿಸಿದೆ? ಪ್ರಥಮ ಪುರುಷದ ನಿರೂಪಣೆಯಲ್ಲಿ ಬರುವ ಕಥೆಗಳೆಲ್ಲಾ ಆಯಾಯ ಲೇಖಕನ ಖಾಸಗಿ ಜೀವನದ ಕಥೆಗಳೇ? ಹಾಗಾದರೆ ಲಾರೆನ್ಸ್, ಆಸ್ಕರ್ ವೈಲ್ಡ್, ಇನ್ನೂ ಮುಂತಾದ ಲೇಖಕರು ಇದೇ ಧಾಟಿಯಲ್ಲಿ ಬರೆದಿದ್ದಾರಲ್ಲ? ಅವೆಲ್ಲಾ ಅವರ ಖಾಸಗಿ ಜೀವನದ ಕಥೆಗಳೆಂದು ತಿಳಿಯುತ್ತೀಯಾ? ಪ್ರಥಮ ಪುರುಷದ ನಿರೂಪಣೆಯಲ್ಲಿ ಬರೆದ ಒಂದು ಲೇಖನವನ್ನು ಒಬ್ಬ ಸಾಹಿತ್ಯದ ಅಧ್ಯಾಪಕಿಯಾಗಿ ನೀನೇ ಹೀಗೆ ತಪ್ಪಾಗಿ ಅರ್ಥಮಾಡಿಕೊಂಡರೆ ಬೇರೆಯವರ ಪಾಡೇನು? ಒಬ್ಬ ಲೇಖಕನ ಬರಹಗಳಲ್ಲಿ ಅಲ್ಲಲ್ಲಿ ಅವನ ಖಾಸಗಿ ಜೀವನದ ಒಂದಿಷ್ಟು ತುಣುಕುಗಳು ಸಿಗಬಹುದೇನೋ! ಹಾಗಂದ ಮಾತ್ರಕ್ಕೆ ಅದು ಇಡಿಯಾಗಿ ಅವನ ಖಾಸಗಿ ಜೀವನವನ್ನು ಬಿಂಬಿಸುತ್ತದೆ ಎಂದು ಹೇಳಲಾಗುತ್ತದೆಯೇ? ಈ ಜಗತ್ತಿನ ಲೇಖಕರು ಬರೆದಿದ್ದೆಲ್ಲಾ ಅವರ ಸ್ವಂತ ಅನುಭದಿಂದ ಬರೆದಿದ್ದೆ? ಅದೆಲ್ಲಾ ಅವರ ಖಾಸಗಿ ಜೀವನದಲ್ಲಿ ನಡೆದಿದ್ದೆ? ಇನ್ನು ಮೇಲಾದರೂ ಈ ರೀತಿಯ ಪ್ರಶ್ನೆಗಳನ್ನು ಕೇಳಿ ಮುಜುಗರವುನ್ನುಂಟು ಮಾಡುವದನ್ನು ನಿಲ್ಲಿಸು. ನಿಮ್ಮಂತ ಓದುಗರು ಇರುವದರಿಂದಲೇ ಈಗೀಗ ಪ್ರಥಮ ಪುರುಷದ ನಿರೂಪಣೆಯಲ್ಲಿ ಬರೆಯುವ ಅನೇಕರು “ಇದು ನನ್ನ ಕಥೆಯಲ್ಲ” ಎಂದು ಕಥೆಯ ಅಥವಾ ಲೇಖನದ ಕೊನೆಯಲ್ಲಿ ಸೂಚಿಸುತ್ತಾರೆ. ಇನ್ನು ಮುಂದೆಯಾದರೂ ದಯವಿಟ್ಟು ಇಂಥದಕ್ಕೆ ಅವಕಾಶ ಮಾಡಿಕೊಡಬೇಡ.”

  -ಉದಯ್ ಇಟಗಿ