Demo image Demo image Demo image Demo image Demo image Demo image Demo image Demo image

ನಮಗೆ ಗೊತ್ತಿಲ್ಲದ ಶೇಕ್ಷಪೀಯರ್

  • ಶುಕ್ರವಾರ, ಮೇ 29, 2009
  • ಬಿಸಿಲ ಹನಿ
  • ಶೇಕ್ಷಪೀಯರನ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ? ಆತ ಈ ಜಗತ್ತು ಕಂಡ ಅತ್ಯದ್ಭುತ ನಾಟಕಕಾರ, ಕವಿ, ಹಾಗೂ ಮನಃಶಾಸ್ತ್ರಜ್ಞ! ನಾನಿಲ್ಲಿ ಉದ್ದೇಶಪೂರ್ವಕವಾಗಿ ಅವನನ್ನು ಮನಃಶಾಸ್ತ್ರಜ್ಞ ಎಂದು ಕರೆದಿದ್ದೇನೆ. ಏಕೆಂದರೆ ಆತ ಯಾವುದೇ ಮನಃಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡದೇಹೋದರೂ ತನ್ನ ಪಾತ್ರಗಳ ಮೂಲಕ ಅವನಷ್ಟು ಸೊಗಸಾಗಿ ಮನುಷ್ಯರ ಮನಸ್ಸಿನ ಚಿತ್ರಣವನ್ನು ಕಟ್ಟಿಕೊಟ್ಟಷ್ಟು ಬಹುಶಃ ಜಗತ್ತಿನ ಬೇರಾವ ಲೇಖಕನಾಗಲಿ, ಮನಃಶಾಸ್ತ್ರಜ್ಞನಾಗಲಿ ಇದುವರೆಗೂ ಕಟ್ಟಿಕೊಟ್ಟಿಲ್ಲ. ಪಾತ್ರಗಳ ಮನಸ್ಸಿನಾಳಕ್ಕೆ ಇಳಿದು ಅಲ್ಲಿ ನಡೆಯುವ ತುಮುಲವನ್ನು, ವೈಚಿತ್ರ್ಯವನ್ನು ಬಗೆಯುತ್ತಾ, ಶೋಧಿಸುತ್ತಾ ಮನುಷ್ಯ ಸ್ವಭಾವವನ್ನು ಇದ್ದಕ್ಕಿದ್ದಂತೆ ಅನಾವರಣಗೊಳಿಸುವ ಅವನ ಪರಿ ಅತ್ಯದ್ಭುತವಾದದ್ದು! ಹಾಗೆಂದೇ ಆತ ಪಾತ್ರಗಳ ಸೃಷ್ಟಿಗೆ, ಬಳಸುವ ಭಾಷೆಗೆ, ಪದಗಳ ಲಾಲಿತ್ಯಕ್ಕೆ, ಹಾಗೂ ಅವನ ಕಂಡಿಕೆಗಳಿ(Quotations)ಗೆ ಹೆಸರುವಾಸಿಯಾಗಿದ್ದಾನೆ. ಇದುವರೆಗೂ ಅವನನ್ನು ಸರಿಗಟ್ಟುವ ಮತ್ತೊಬ್ಬ ಲೇಖಕ ಬಂದಿಲ್ಲವೆಂಬುದೇ ವಿಮರ್ಶಕರ ಅಭಿಪ್ರಾಯವಾಗಿದೆ. ಆದರೆ ದೀಪದ ಬುಡದಲ್ಲಿಯೇ ಕತ್ತಲು ಎನ್ನುವಂತೆ ಬೇರೆಲ್ಲ ಲೇಖಕರ ಬಗ್ಗೆ, ಗಣ್ಯವ್ಯಕ್ತಿಗಳ ಬಗ್ಗೆ ಅನೇಕ ಊಹಾಪೋಹಗಳಿರುವಂತೆ ಆತನ ಬಗ್ಗೆಯೂ ಸಹ ಕೆಲವು ಊಹಾಪೋಹಗಳಿದ್ದವು. ಅವುಗಳಲ್ಲಿ ಕೆಲವು ನಿಜವೂ ಕೆಲವು ಸುಳ್ಳುಗಳಾಗಿದ್ದವು. ಅಂಥ ಒಂದಿಷ್ಟು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೆಂದೇ ಈ ಲೇಖನ ಬರೆಯುತ್ತಿದ್ದೇನೆ.
    1) ಶೇಕ್ಷಪೀಯರನ ಹುಟ್ಟಿನ ದಿನದ ಬಗ್ಗೆ ಇದುವರೆಗೂ ಯಾವುದೇ ನಿಖರವಾದ ಮಾಹಿತಿ ದೊರೆತಿಲ್ಲವಾದ್ದರಿಂದ ಆತ ಎಂದು ಹುಟ್ಟಿದ ಎಂದು ಸರಿಯಾಗಿ ಹೇಳುವದು ಸಾಧ್ಯವಾಗಿಲ್ಲ. ಆದರೆ ಸಿಕ್ಕ ಕೆಲವೇ ಕೆಲವು ಆಧಾರಗಳ ಮೇಲೆ ಆತ ಏಪ್ರಿಲ್ ೨೩, ೧೫೬೪ ರಲ್ಲಿ ಸ್ಟ್ರ್ಯಾಟ್ ಪೋರ್ಡ್ ಎವಾನ್ ಎಂಬಲ್ಲಿ ಹುಟ್ಟಿದನೆಂದು ನಂಬಲಾಗಿದೆ. ಹುಟ್ಟಿ ಸರಿಯಾಗಿ ೫೨ ವರ್ಷಗಳ ನಂತರ ಅಂದರೆ ಏಪ್ರಿಲ್ ೨೩, ೧೬೧೬ ರಂದು ಸತ್ತನೆಂದು ಊಹಿಸಲಾಗಿದೆ. ಅವನ ಹುಟ್ಟು ಹಬ್ಬದ ದಿನವೇ ಅವನ ಮರಣದ ದಿನವೂ ಸಹ ಆಗಿತ್ತು ಎಂಬುದು ವಿಶೇಷ ಮತ್ತು ದುರಂತ.
    2) ಶೇಕ್ಷಪೀಯರನ ಅಪ್ಪ ಪ್ರಸಿದ್ಧ ಉಣ್ಣೆ ವ್ಯಾಪಾರಿಯಾಗಿದ್ದು ಬಡ್ಡಿ ವ್ಯಾಪಾರವನ್ನು ಸಹ ಮಾಡುತ್ತಿದ್ದನೆಂದು ನಂಬಲಾಗಿದೆ. ಆದರೆ ಶೇಕ್ಷಪೀಯರ್ ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸುತ್ತಿದ್ದಂತೆ ಅವರಪ್ಪನಿಗೆ ವ್ಯಾಪಾರದಲ್ಲಿ ಭಾರಿ ನಷ್ಟವುಂಟಾಗಿ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅದನ್ನು ಸುಧಾರಿಸಲು ಆತ ಉದ್ಯೋಗವನ್ನರಸಿ ಹುಟ್ಟೂರನ್ನು ಬಿಟ್ಟು ಲಂಡನ್‍ಗೆ ವಲಸೆಹೋದನೆಂದು ಹೇಳಲಾಗಿದೆ. ಆದರೆ ಇನ್ನು ಕೆಲವು ಮೂಲಗಳು ಆತ ತನ್ನ ಹುಟ್ಟೂರಿನಲ್ಲಿ ಚಮರಿಮೃಗವನ್ನು ಬೇಟೆಯಾಡಿದ್ದರ ಆಪಾದನೆಯ ಮೇಲೆ ಅವನನ್ನು ಗಡಿಪಾರು ಮಾಡಲಾಯಿತೆಂದು ಹೇಳುತ್ತವೆ.
    3) ಹೀಗೆ ಲಂಡನ್‍ಗೆ ಕೆಲಸ ಹುಡುಕಿಕೊಂಡು ಬಂದ ಅವನು ನಾಟಕ ಕಂಪನಿಯೊಂದರಲ್ಲಿ ಮೊಟ್ಟ ಮೊದಲಿಗೆ ಮಾಡಿದ ಕೆಲಸ ‘ಕುದರೆ ಚಾಕರಿ’ ಕೆಲಸ. ಆಗಿನ ಕಾಲದಲ್ಲಿ ಶ್ರೀಮಂತರು ನಾಟಕ ನೋಡಲು ಕುದರೆಯ ಮೇಲೆ ಬರುತ್ತಿದ್ದುದರಿಂದ ಅವರು ನಾಟಕ ನೋಡವಷ್ಟು ಹೊತ್ತು ಅವರ ಕುದರೆಗಳನ್ನು ನೋಡಿಕೊಳ್ಳುತ್ತಿದ್ದ. ಕ್ರಮೇಣ ಆತ ನಟನಾಗಿ, ನಾಟಕಕಾರನಾಗಿ ಭಡ್ತಿ ಪಡೆದು ಜಗತ್ತಿನ ತುಂಬ ಹೆಸರುವಾಸಿಯಾದ.
    4) ಶೇಕ್ಷಪೀಯರ್ ಮಹಾನ್ ಸಾಹಸಿ, ತುಂಟ ಹಾಗು ರಸಿಕನಾಗಿದ್ದ. ಪ್ರಾಯಕ್ಕೆ ಕಾಲಿಡುತ್ತಿದ್ದಂತೆಯೇ ತನ್ನ ಪಕ್ಕದೂರಿನ ಹುಡುಗಿಯನ್ನು ಮದುವೆಗೆ ಮೊದಲೇ ಬಸಿರು ಮಾಡಿದ್ದರಿಂದ ವಿಧಿಯಲ್ಲದೆ ಅವಳನ್ನೇ ಮದುವೆಯಾಗಬೇಕಾಗಿಬಂತು. ಅವಳ ಹೆಸರು ‌ಯ್ಯಾನ್ ಹ್ಯಾಥ್ ವೇ. ಅವಳು ವಯಸ್ಸಿನಲ್ಲಿ ಅವನಿಗಿಂತ ಎಂಟು ವರ್ಷ ದೊಡ್ದವಳಾಗಿದ್ದು ಮದುವೆಯಾದಾಗ ಅವಳು ಮೂರು ತಿಂಗಳು ಗರ್ಬಿಣಿಯಾಗಿದ್ದಳು. ಇದಲ್ಲದೆ ಶೇಕ್ಷಪೀಯರನಿಗೆ ಅವನ ಹಾದರಕ್ಕೆ ಹುಟ್ಟಿದ ಮಗನೊಬ್ಬನಿದ್ದ ಎಂದು ನಂಬಲಾಗಿದೆ. ಅವನ ಹೆಸರು ವಿಲಿಯಂ ಡೆವಿನಾಂಟ್.
    5) ಬಹಳಷ್ಟು ಲೇಖಕರು ಹಾಗೂ ರಾಜಕೀಯ ಧುರಿಣರು ಶೇಕ್ಷಪೀಯರ್ ಯಾವತ್ತೂ ಯಾವುದೇ ನಾಟಕವಾಗಲಿ, ಕವನವಾಗಲಿ ಬರೆಯಲೇ ಇಲ್ಲ, ಅವನಿಗೇನಿದ್ದರೂ ಸಾಹಸಿ ಕೆಲಸಗಳಲ್ಲಿ ಮಾತ್ರ ಆಸಕ್ತಿಯಿತ್ತೇ ಹೊರತು ಬರೆಯುವದರಲ್ಲಿರಲಿಲ್ಲವೆಂದು ಹೇಳುತ್ತಾರೆ. ಯಾರೋ ಬರೆದಿದ್ದನ್ನು ಕದ್ದು ತನ್ನ ಹೆಸರನ್ನು ಹಾಕಿಕೊಂಡು ತಾನೇ ಬರಿದಿದ್ದು ಎಂದು ಹೇಳಿಕೊಂಡು ಹಣ ಮತ್ತು ಹೆಸರುಗಳೆರಡನ್ನು ಗಳಿಸಿದನೆಂದು ಹೇಳಲಾಗುತ್ತದೆ.
    6) ಶೇಕ್ಷಪೀಯರ್ ತಾನು ಬರೆದ ೩೭ ನಾಟಕಗಳನ್ನು ಯಾವತ್ತೂ ಪ್ರಕಟಪಡಿಸುವ ಸಾಹಸಕ್ಕೆ ಕೈಹಾಕಲೇ ಇಲ್ಲ. ಅವೇನಿದ್ದರೂ ಅವನು ಸತ್ತು ಏಳು ವರ್ಷಗಳ ನಂತರ ಪ್ರಕಟಗೊಂಡವು. ಆದರೆ ಅವನ ‘Venus’ ಹಾಗು ‘Adonis’ ಎಂಬೆರಡು ನೀಳ್ಗವನಗಳು ಬಹಳ ಜನಪ್ರಿಯಗೊಂಡು ಅವನ ಶ್ರೀಮಂತ ಸ್ನೇಹಿತ ಎರ್ಲ್ ಅಪ್ ಸೌಥ್ ಯ್ಯಾಂಪ್ಟ್ ನಿಂದ ಸಾಕಷ್ಟು ಹಣವು ಉಡುಗೊರೆಯ ರೂಪದಲ್ಲಿ ಹರಿದು ಬಂದು ಕೊನೆಗಾಲದಲ್ಲಿ ಅವನು ನೆಮ್ಮದಿಯ ಮೇಲ್ದರ್ಜೆಯ ಬದಕನ್ನು ನಡೆಸಲು ಸಹಾಯ ಮಾಡಿದವು.
    7) ಶೇಕ್ಷಪೀಯರನಿಗೆ ಜುಡಿತ್ ಎಂಬ ತಂಗಿಯೊಬ್ಬಳಿದ್ದಳು. ಅವಳು ಅವನಷ್ಟೇ ಸಮರ್ಥವಾಗಿ ಬರೆಯುಬಲ್ಲವಳಾಗಿದ್ದು ಒಮ್ಮೊಮ್ಮೆ ಅವನನ್ನೂ ಮೀರಿಸುತ್ತಿದ್ದಳು. ಅವಳಿಗಿರುವ ಪದಗಳ ಚಾಕಚಕ್ಯತೆ, ಲಾಲಿತ್ಯ, ಅವುಗಳ ಜೋಡಣೆ ಶೇಕ್ಷಪೀಯರಿನಿಗೂ ಸಹ ಇರಲಿಲ್ಲ. ಆದರೆ ಅವಳು ‘ಹೆಣ್ಣು’ ಎಂಬ ಕಾರಣಕ್ಕೆ ಪುರುಷ ಪ್ರಧಾನ ಸಮಾಜದಲ್ಲಿ ಅವಳಿಗೆ ಸರಿಯಾದ ಪ್ರೋತ್ಸಾಹ ಸಿಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವದರ ಮೂಲಕ ಸ್ತ್ರೀ ಪ್ರತಿಭೆಯೊಂದು ಕಮುರಿಹೋಯಿತು. ಇವಳ ಬಗ್ಗೆ ಹೆಚ್ಚಿಗೆ ತಿಳಿಯಲು ನಾನೇ ಬರೆದಿರುವ ಈ ಲೇಖನದ ಕೊಂಡಿಯ ಮೇಲೆ ಕ್ಲಿಕ್ಕಿಸಿ. http://bisilahani.blogspot.com/2008/12/blog-post_5795.html
    8) ಶೇಕ್ಷಪೀಯರನ ಕೃತಿಗಳಲ್ಲಿ ಸುಮಾರು ಆರನೂರು ವಿವಿಧ ಜಾತಿಯ ಪಕ್ಷಿಗಳ ಉಲ್ಲೇಖವಿದೆ. ಅವುಗಳಲ್ಲಿ ತುಂಬಾ ಜನಪ್ರಿಯವಾಗಿರುವ, ನಮಗೆ ಈಗಾಗಲೇ ಗೊತ್ತಿರುವ ಪಕ್ಷಿಗಳಾದ ಬಾತುಕೋಳಿ. ಹುಂಜ, ಪಾರಿವಾಳ, ಗುಬ್ಬಿ ಮೊದಲಾದವುಗಳನ್ನು ಹೆಸರಿಸಬಹುದಾಗಿದೆ.
    9) ಶೇಕ್ಷಪೀಯರ್ `dog’ ಅಥವಾ `dogs’ ಎನ್ನುವ ಪದವನ್ನು ಸುಮಾರು ೨೦೦ ಬಾರಿ ಬಳಸಿದ್ದಾನೆ. ಇದಲ್ಲದೆ ‘watchdog’ ಎನ್ನುವ ಸಂಕೀರ್ಣ ಪದವೊಂದನ್ನು ಮೊಟ್ಟಮೊದಲಿಗೆ ಬಳಸಿದವನೇ ಇವನು.
    10) ಶೇಕ್ಷಪೀಯರನಿಗೆ ಎರ್ಲ್ ಅಪ್ ಸೌಥ್ ಯ್ಯಾಂಪ್ಟ್ ನೆಂಬ ಅತ್ಯಂತ ಸ್ಪುರದ್ರೂಪಿ ಸಲಿಂಗಕಾಮಿ ಗೆಳೆಯನಿದ್ದ. ಅವನು ಆಗರ್ಭ ಶ್ರೀಮಂತನಾಗಿದ್ದು ಶೇಕ್ಷಪೀಯರನ ಜೀವದ ಗೆಳೆಯನು ಸಹ ಆಗಿದ್ದ. ಅವರಿಬ್ಬರ ಸ್ನೇಹದ ಗಾಢತೆ ಎಷ್ಟಿತ್ತೆಂದರೆ ಎರ್ಲ್ ಅಪ್ ಸೌಥ್ ಯ್ಯಾಂಪ್ಟನ್ನನು ಶೇಕ್ಷಪೀಯರನನ್ನು ಬಿಟ್ಟಿರಲಾರದೆ ಅವನನ್ನು ತನ್ನ ಅರಮನೆಯಲ್ಲಿಯೇ ಇರಿಸಿಕೊಂಡಿದ್ದನು. ಆದರೆ ಮುಂದೆ ಹುಡುಗಿಯೊಬ್ಬಳ ವಿಷಯಕ್ಕೆ ಅವರಿಬ್ಬರ ಸ್ನೇಹ ಮುರಿದುಬಿತ್ತು (ಈ ಬಗ್ಗೆ ಮುಂದೆ ಯಾವತ್ತಾದರು ಬರೆಯುವೆ). ಆದರೂ ಶೇಕ್ಷಪೀಯರ ಅವನನ್ನು ಅತ್ಯಂತ ಗಾಢವಾಗಿ ಪ್ರೀತಿಸುತ್ತಿದ್ದ. ಅದಕ್ಕೆ ಅವನು ಬರೆದ ೧೫೪ ಸುನಿತ(sonnet)ಗಳಲ್ಲಿ ೧೨೬ ಸುನಿತಗಳು ಗೆಳೆತನಕ್ಕೂ ೨೮ ಸುನಿತಗಳು ಪ್ರೀತಿಗೂ ಮೀಸಲಾಗಿರುವದೇ ಸಾಕ್ಷಿ. ಆ ೧೨೬ ಸುನಿತಗಳ ಕೆಲವು ಸುನಿತಗಳಲ್ಲಿ ಅಲ್ಲಲ್ಲಿ ಅವನ ಸ್ನೇಹಿತನ ಅಪೂರ್ವ ಸೌಂದರ್ಯದ ಚಿತ್ರಣ ಸಿಗುತ್ತದೆ. ಈ ಎಲ್ಲ ಆಧಾರಗಳ ಮೇಲೆ ಕೆಲವು ವಿಮರ್ಶಕರು ಅವರಿಬ್ಬರು ಸಲಿಂಗಕಾಮಿಗಳಾಗಿದ್ದರೆಂದು ಊಹಿಸಿದರೂ ಅದನ್ನು ಬಹಿರಂಗಪಡಿಸುವ ಧೈರ್ಯವನ್ನು ಮಾಡಿರಲಿಲ್ಲ. ಆದರೆ ತಿರ ಇತ್ತಿಚಿಗಷ್ಟೆ ಅಂದರೆ ೧೯೯೮ರಲ್ಲಿ ಅಮೆರಿಕದ ಸಂಶೋಧನಾ ವಿದ್ಯಾರ್ಥಿನಿಯೊಬ್ಬಳು (ಹೆಸರು ನೆನಪಿಲ್ಲ) ಸಾಕಷ್ಟು ಪುರಾವೆಗಳ ಮೂಲಕ ಈ ವಿಷಯವನ್ನು ಹೊರಗೆಡವಿ ಭಾರಿ ವಿವಾದಕ್ಕೊಳಗಾಗಿದ್ದಳು.
    ಶೇಕ್ಷಪೀಯರ್ ಹೇಗೆ ಇರಲಿ ಅವನನ್ನು ಅವನೆಲ್ಲ ಬಲಹೀನತೆಗಳ ಸಮೇತ ಒಪ್ಪಿಕೊಂಡಾಗಲೇ ಆತ ನಮಗೆ ಇಷ್ಟವಾಗುವದು, ಆತನ ಬಗ್ಗೆ ಒಂದು ಸಹಜ ಗೌರವ ಮೂಡುವದು. ಈ ಮಾತು ಶೇಕ್ಷಪೀಯರನ ವಿಷಯದಲ್ಲಿ ಮಾತ್ರವಲ್ಲ ನಮ್ಮಗಳ ವಿಷಯದಲ್ಲೂ ಅಷ್ಟೇ ಸತ್ಯ ಅಲ್ಲವೆ?
    -ಉದಯ ಇಟಗಿ
    ಕೃಪೆ:
    1) http://www.nosweatshakespeare.com/
    2) http://shakespeare.about.com/

    ಮಂಜು ಮುಸುಕಿದ ಒಂದು ಶಾಮಲ ಸಂಜೆ

  • ಸೋಮವಾರ, ಮೇ 18, 2009
  • ಬಿಸಿಲ ಹನಿ
  • ಆತ್ಮೀಯರೆ,
    ಅಮೆರಿಕದ ಸುಪ್ರಸಿದ್ಧ ಕವಿ ರಾಬರ್ಟ್ ಫ್ರಾಸ್ಟನ “Stopping by Woods on a Snowy Evening” ಎನ್ನುವ ಕವನ ಅವನ ಬಹು ಚರ್ಚಿತ ಕವನಗಳಲ್ಲೊಂದು. ಈ ಕವನವನ್ನು ಬರೆದು ಬೆಳಕು ಹರಿಯುವಷ್ಟರಲ್ಲಿಯೇ ಆತ ಜಗತ್ತಿನ ತುಂಬಾ ಮನೆಮಾತಾಗಿಬಿಟ್ಟ. ಈತ ನಾಲ್ಕು ಸಾರಿ ಕವನ ರಚನೆಗಾಗಿ ಪ್ರತಿಷ್ಟಿತ ಪುಲ್ಟಿಜರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ. ಅದರಲ್ಲಿ ಮೊಟ್ಟ ಮೊದಲಬಾರಿಗೆ ಈ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡ “New Hampshire” ಎನ್ನುವ ಕವನ ಸಂಕಲನದಿಂದ ಈ ಕವನವನ್ನು ಆಯ್ದು ಕೊಳ್ಳಲಾಗಿದೆ. ವಿಮರ್ಶಕರು ಇದನ್ನು ಇಂಗ್ಲೀಷ ಸಾಹಿತ್ಯದ “masterpiece” ಎಂದು ಗುರುತಿಸುತ್ತಾರಲ್ಲದೆ ಸ್ವತಃ ಕವಿಯು ಸಹ ತಾನು ಬರೆದ ಕವನಗಳಲ್ಲಿ ಅತ್ಯಂತ ಹೆಚ್ಚು ತೃಪ್ತಿ ತಂದುಕೊಟ್ಟ ಕವನವಿದಾಗಿದೆಯೆಂದು ಭಾವಿಸಿದ್ದಾನೆ.

    ಈ ಕವನ ಸೌಂದರ್ಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆ ಇವೆರಡರ ನಡುವೆ ನಡೆವ ತುಮುಲಕ್ಕೆ ಹೆಸರಾಗಿದೆ. ಸೌಂದರ್ಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಗಳ ನಡುವಿನ ಹೋರಾಟದಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬ ಗೊಂದಲದಲ್ಲಿ ಮುಳುಗಿದಾಗ ಕೊನೆಗೆ ಸೌಂದರ್ಯ ಪ್ರಜ್ಞೆಗಿಂತ ಕರ್ತವ್ಯ ಪ್ರಜ್ಞೆಯೇ ಜೀವನದಲ್ಲಿ ಮುಖ್ಯವಾಗುತ್ತದೆ ಎನ್ನುವದನ್ನು ಕವನ ಒತ್ತಿ ಹೇಳುತ್ತದೆ. ಅದು ಕವನದ ಕೊನೆಯ ಸಾಲುಗಳಲ್ಲಿ ವ್ಯಕ್ತವಾಗಿದೆ. ಸಾಂಕೇತಿಕವಾಗಿ ಬರುವ ಕವನದ ಕೊನೆಯ ಸಾಲುಗಳೇ ಅದರ ಜೀವಾಳ. ಇಲ್ಲಿ “sleep” ಎನ್ನುವದು ಸಾವನ್ನು ಸಂಕೇತಿಸುತ್ತದೆ. ಅಂದರೆ ನಾವು ಸಾಯುವದಕ್ಕಿಂತ ಮುಂಚೆ ಮುಗಿಸಬೇಕಾದ ಕರ್ತ್ಯವ್ಯಗಳು ಬಹಳಷ್ಟಿರುತ್ತವೆ; ಅವುಗಳನ್ನು ಮಾಡಿ ಮುಗಿಸಲೇಬೇಕು ಎನ್ನುವದನ್ನು ಹೇಳುತ್ತದೆ. ಜೀವನದಲ್ಲಿ ಕವಿಗೆ ಸುಂದರ ಕಾಡಿನ ಆಕರ್ಷಣೆಯಿದ್ದಂತೆ ನಮ್ಮೆಲ್ಲರಿಗೂ ಬೇರೆ ಬೇರೆ ಆಕರ್ಷಣೆಗಳಿರುತ್ತವೆ ಅವುಗಳನ್ನು ಮೀರಿ ಕರ್ತ್ಯವ್ಯ ಪ್ರಜ್ಞೆಯೆಡೆಗೆ ಗಮನ ಕೊಡಬೇಕೆಂದು ಕವಿ ಹೇಳುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಕ್ಲಿಕ್ಕಿಸಿ http://www.enotes.com/poetry-criticism/stopping-by-woods-snowy-evening-robert-frost

    ವಿಮರ್ಶಕರಷ್ಟೇ ಅಲ್ಲದೆ ಜಗತ್ತಿನ ಬೇರೆ ಬೇರೆ ಗಣ್ಯ ವ್ಯಕ್ತಿಗಳು ಇದನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಅಂಥವರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರಲ್ಲೊಬ್ಬರಾದ ಜಾನ್. ಎಫ್. ಕೆನಡಿ ಹಾಗೂ ಭಾರತದ ಮೊಟ್ಟ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರೂವರು ಸೇರಿದ್ದಾರೆ. ಸದಾ ಕರ್ತವ್ಯ ಪ್ರಜ್ಞೆಯನ್ನೇ ಜ್ಞಾಪಿಸುವ ಕೊನೆಯ ಸಾಲುಗಳನ್ನು ಈ ಇಬ್ಬರು ಗಣ್ಯರು ತಮ್ಮ ಟೇಬಲ್ ಮೇಲೆ ಬರಿಸಿಟ್ಟಿಕೊಂಡಿದ್ದರು.
    “The woods are lovely, dark, and deep,
    But I have promises to keep,
    And miles to go before I sleep,
    And miles to go before I sleep.”

    ನಾನೊಬ್ಬ ಇಂಗ್ಲೀಷ ಅಧ್ಯಾಪಕನಾಗಿ ಇದನ್ನು ಬೇರೆ ಬೇರೆ ತರಗತಿಗಳಿಗೆ ಬೇರೆ ಬೇರೆ ಸ್ತರಗಳಲ್ಲಿ ಪಾಠ ಮಾಡಿದ್ದೇನೆ. ನಿಮ್ಮಲ್ಲೂ ಯಾರಾದರೊಬ್ಬರು ಇದನ್ನು ಈಗಾಗಲೇ ಯಾವುದೇ ತರಗತಿಯಲ್ಲಾದರು ಓದಿರಬಹುದು. ಇದು ನನ್ನ ಮೆಚ್ಚಿನ ಕವನಗಳಲ್ಲಿ ಒಂದು. ಅದರ ಭಾವಾನುವಾದ ಇಲ್ಲಿದೆ. ಓದಿ ಅಭಿಪ್ರಾಯ ತಿಳಿಸಿ. Happy Reading!

    ಯಾರ ವನವಿದು ಯಾರ ಕಾಡಿದೆಂದು ನಾನೆಣಿಸಿ ಹೇಳಬಲ್ಲೆ
    ಅವನ ಮನೆ ಇಲ್ಲೋ ಎಲ್ಲೋ ಹತ್ತಿರದ ಹಳ್ಳಿಯಲ್ಲಿದೆ
    ಕಾಣಲಾರದವನಿಗೆ ನಾನಿಲ್ಲಿ ಕ್ಷಣಹೊತ್ತು ತಂಗಿ
    ಮಂಜು ಮುಸುಕಿದವನ ಕಾಡನ್ನು ಮನದಣಿಯುವದು

    ನನ್ನ ಕಿರುಗುದರೆಗದೋ ಅನಿಸಿರಬಹುದು ಕೆಲಸ ಕೆಟ್ಟಿತೆಂದು
    ಹತ್ತಿರದೆಲ್ಲೆಲ್ಲೂ ತೋಟದ ಮನೆಯಿರದುದೆಡೆ ತಂಗಿರುವದು ಕಂಡು
    ಅತ್ತ ಅಂದದ ಕಾಡು ಇತ್ತ ಚೆಂದದ ಹಿಮಗೆರೆ
    ನಡುವೆ ನಿಂತಿರುವೆ ನಾ ಮೈಮರೆತು ಇಳಿಸಂಜೆ ಹೊತ್ತು

    ಬಾರಿಸುವನವನು ಕಟ್ಟಿನ ಗಂಟೆಯನು ಕತ್ತು ಕುಣಿಸಿ
    ಹೊತ್ತಲ್ಲದ ಹೊತ್ತಿನಲ್ಲಿ ತೊಂದರೆಯೇನಾದರಾಗಿದೆಯೆಂದರಿಯಲು
    ಇತ್ತ ಎಚ್ಚರಿಕೆಯ ಗಂಟೆ ಅತ್ತ ಹಿತವಾದ ತಂಗಾಳಿ
    ನಡುವೆ ನಿಂತಿರುವೆ ನಾ ಹಿಮದ ರಾಶಿಯ ಮೇಲೆ

    ಹಸಿರ ಕಾಡು ಬಸಿರ ಕತ್ತಲು ಗೂಢ ನಿಗೂಢವಾಗಿದೆ
    ಆದರೆ ನಾನಿತ್ತ ವಚನಗಳನು ಪೂರೈಸಲೇಬೇಕಿದೆ
    ದೂರ ಬಹುದೂರ ಸಾಗಿ ಮನೆ ಸೇರಿ ಮಲಗುವ ಮುನ್ನ
    ದೂರ ಬಹುದೂರ ಸಾಗಿ ಮನೆ ಸೇರಿ ಮಲಗುವ ಮುನ್ನ

    ಇಂಗ್ಲೀಷ ಮೂಲ: ರಾಬರ್ಟ್ ಫ್ರಾಸ್ಟ್
    ಭಾವಾನುವಾದ: ಉದಯ ಇಟಗಿ
    ಚಿತ್ರಕೃಪೆ: www.flickr.com/Sunset by Romeo Koitmae

    ಆ ಫೋಟೋಗ್ರಾಫರ್ ನೊಂದಿಗೆ.........

  • ಶುಕ್ರವಾರ, ಮೇ 15, 2009
  • ಬಿಸಿಲ ಹನಿ

  • “ನಾನೊಂದು ಫೋಟೋ ತೆಗಿಸಬೇಕಾಗಿದೆ.......” ಹೇಳಿದೆ. ಆ ಫೋಟೋಗ್ರಾಫರ್ ಯಾವೊಂದೂ ಆಸಕ್ತಿಯಿಲ್ಲದೆ ಸುಮ್ಮನೆ ಒಮ್ಮೆ ನನ್ನ ನೋಡಿದ. ಅವನು ನೋಡಲು ಸಣಕಲಾಗಿದ್ದು ಅವನಿಗೆ ವಿಜ್ಞಾನಿಗಳಿಗಿರುವಂತೆ ಗುಳಿಬಿದ್ದ ಕಣ್ಣುಗಳಿದ್ದವು. ಆ ಗುಳಿಬಿದ್ದ ಕಂಗಳಿಂದಲೋ ಏನೋ ಅವನು ತೊಟ್ಟ ಆ ಬೂದು ಬಣ್ಣದ ಸೂಟಿನಲ್ಲಿ ಮತ್ತಷ್ಟು ಇಳಿಬಿದ್ದಂತೆ ಕಾಣುತ್ತಿದ್ದ. ಇಷ್ಟು ಬಿಟ್ಟರೆ ಅವನ ಬಗ್ಗೆ ಹೆಚ್ಚಿಗೆ ಹೇಳುವಂಥದ್ದು ಬೇರೇನೂ ಇರಲಿಲ್ಲ. ಏಕೆಂದರೆ ಒಬ್ಬ ಫೋಟೊಗ್ರಾಫರ್ ಹೇಗೆ ಇರುತ್ತಾನೆ ಎನ್ನುವದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂಥದ್ದೇ!
    "ಸ್ವಲ್ಪ ಹೊತ್ತು ಕಾಯಿರಿ” ಎಂದು ಹೇಳುತ್ತಾ ಕುರ್ಚಿಯೊಂದನ್ನು ತೋರಿಸಿದ. ನಾನಲ್ಲಿ ಕುಳಿತುಕೊಂಡು ಸುಮಾರು ಒಂದು ಗಂಟೆಯಷ್ಟು ಕಾಯ್ದೆ. ಅಷ್ಟರಲ್ಲಿ ಅಲ್ಲೇ ಟೇಬಲ್ ಮೇಲಿದ್ದ ಮೂರು ಬೇರೆ ಬೇರೆ ಮ್ಯಾಗಜೀನ್ಗಂಳನ್ನು ತಿರುವಿ ಹಾಕಿದ್ದೆ.
    ಒಂದು ಗಂಟೆಯ ನಂತರ ಆ ಫೋಟೋಗ್ರಾಫರ್ ತನ್ನ ಒಳಕೋಣೆಯ ಬಾಗಿಲನ್ನು ತೆರೆದು “ಬನ್ನಿ” ಎಂದು ಹೇಳಿದ. ಧ್ವನಿ ಒರಟಾಗಿತ್ತು.
    ನಾನು ಎದ್ದುಹೋಗಿ ಆ ಕೋಣೆಯಲ್ಲಿ ಕುಳಿತುಕೊಂಡೆ. ನನ್ನ ಪಕ್ಕದಲ್ಲಿಯೇ ಕೋಣೆಯ ಕಿಟಕಿಯಿತ್ತು. ಅದು ಹಿಮದಿಂದ ಆವರಿಸಿದ್ದು ಅದ್ಹೇಗೋ ಅದರಿಂದ ಬಿಸಿಲು ಕೋಲೊಂದು ಒಳಗೆ ನುಸಳಿ ನನ್ನ ಬಳಿ ಬಂದು ಬಿದ್ದಿತ್ತು.
    ಆ ಫೋಟೋಗ್ರಾಫರ್ ಕ್ಯಾಮರಾ ಯಂತ್ರವೊಂದನ್ನು ಕೋಣೆಯ ಮಧ್ಯಭಾಗಕ್ಕೆ ತಳ್ಳಿ ತಾನು ಅದರ ಹಿಂದೆ ಹೋಗಿ ನಿಂತುಕೊಂಡ. ಆತ ಅದರಲ್ಲಿ ಮುಖ ತೂರಿ ನನ್ನತ್ತ ಒಮ್ಮೆ ನೋಡಿದ. ಒಂದೇ ಒಂದು ಕ್ಷಣ......... ಆಮೇಲೆ ಏನನ್ನಿಸಿತೋ ಪುನಃ ಮುಖವನ್ನು ಹೊರತೆಗೆದವನೆ ಉದ್ದನೆಯ ಕೊಕ್ಕೆಯಿಂದ ಕಿಟಕಿಯ ಬಾಗಿಲನ್ನು ಹಾಗೂ ಇಳಿಬಿಟ್ಟ ಬಿಳಿ ಪರದೆಯನ್ನು ಸ್ವಲ್ಪ ಹಿಂದೆ ಸರಿಸಿ ಒಳಗೆ ಸಾಕಷ್ಟು ಗಾಳಿ, ಬೆಳಕನ್ನು ಬರಮಾಡಿಕೊಂಡ.
    ಪುನಃ ಯಂತ್ರದ ಹಿಂದುಗಡೆ ಹೋಗಿ ಅಲ್ಲಿ ತೂಗಿಬಿಟ್ಟ ಕಪ್ಪನೆಯ ಬಟ್ಟೆಯೊಂದನ್ನು ತನ್ನ ಹತ್ತಿರಕ್ಕೆ ಎಳೆದುಕೊಂಡು ಏನನ್ನೋ ಯೋಚಿಸುತ್ತಾ ನಿಂತುಕೊಂಡ. ನಾನು ಅವನು ನಿಂತಿರುವ ಭಂಗಿಯನ್ನು ನೋಡಿ ಪ್ರಾರ್ಥಿಸುತ್ತಿರಬಹುದೆಂದುಕೊಂಡು ಸುಮ್ಮನೆ ನೋಡುತ್ತಾ ಕುಳಿತೆ.
    ಮತ್ತೆ ತನ್ನ ಮುಖವನ್ನು ಹೊರತೆಗೆದು ತುಂಬಾ ನಿರಾಶೆಗೊಂಡವನ ತರ ತನ್ನ ತಲೆಯನ್ನೊಮ್ಮೆ ಅಲ್ಲಾಡಿಸಿ “ಈ ಮುಖ ತುಂಬಾ ಕೆಟ್ಟದಾಗಿದೆ” ಎಂದು ನೇರವಾಗಿ ಹೇಳಿದ.
    ನಾನು ಹೌದೆಂದು ತಲೆಯಲ್ಲಾಡಿಸುತ್ತಾ “ಆ ವಿಷಯ ನನಗೆ ಮುಂಚಿನಿಂದಲೂ ಗೊತ್ತು!” ಎಂದು ಪ್ರಶಾಂತವಾಗಿ ಹೇಳಿದೆ.
    ಅವನು ಮತ್ತೊಮ್ಮೆ ನನ್ನ ನೋಡಿ ನಿಟ್ಟುಸಿರೊಂದನ್ನು ಬಿಡುತ್ತಾ “ನನಗನಿಸುತ್ತೆ ನಿಮ್ಮ ಮುಖ ಇನ್ನೂ ಸ್ವಲ್ಪ ದೊಡ್ಡದಾಗಿದ್ದರೆ ಚನ್ನಾಗಿತ್ತು.” ಎಂದು ಹೇಳಿದ. ನಾನು “ಹೌದಾ? ಅಂದರೆ ನಿಮ್ಮಷ್ಟು ದೊಡ್ಡದಾಗಿರಬೇಕಿತ್ತೆ?” ಎಂದು ಕೇಳಿದೆ.
    ಅವನು ನನ್ನ ಮಾತುಗಳನ್ನು ಕೇಳಿಸಿಕೊಂಡಂತೆ ಕಾಣಲಿಲ್ಲ.
    ಈಗ ಹತ್ತಿರ ಬಂದು ನನ್ನ ತಲೆಯನ್ನು ಅವನ ಕೈಗಳಲ್ಲಿ ತೆಗೆದುಕೊಳ್ಳುತ್ತಾ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ತಿರುತಿರುಗಿಸಿ ನೋಡತೊಡಗಿದ. ಅವ ಹಾಗೆ ಮಾಡುತ್ತಿರುವದನ್ನು ನೋಡಿ ಬಹುಶಃ ಅವನು ನನಗೆ ಮುತ್ತಿಕ್ಕಬಹುದೆಂದು ನಾನು ಉನ್ಮತ್ತನಾಗಿ ಕಣ್ಣು ಮುಚ್ಚಿದೆ.
    ಆದರೆ ನನ್ನ ಊಹೆ ತಪ್ಪಾಗಿತ್ತು!
    ಮತ್ತೊಮ್ಮೆ ನನ್ನ ಮುಖವನ್ನು ಎಷ್ಟು ಸಾಧ್ಯವೋ ಅಷ್ಟು ಕಡೆ ತಿರುತಿರುಗಿಸಿ ಅದನ್ನೇ ನೋಡುತ್ತಾ ನಿಂತುಕೊಂಡ.
    ಪುನಃ ನಿಟ್ಟುಸಿರೊಂದನ್ನು ಬಿಡುತ್ತಾ “ನನಗೆ ಈ ತಲೆ ಇಷ್ಟವಾಗಲಿಲ್ಲ!” ಎಂದು ಟೀಕಿಸಿದ.
    ನಾನು ತುಟಿಪಿಟ್ಟೆನ್ನಲಿಲ್ಲ.
    ಪುನಃ ಯಂತ್ರದ ಹಿಂದೆ ಹೋಗಿ ನಿಂತುಕೊಳ್ಳುತ್ತಾ ಮತ್ತೊಮ್ಮೆ ನನ್ನ ನೋಡಿ “ಎಲ್ಲಿ, ಸ್ವಲ್ಪ ಸಣ್ಣದಾಗಿ ಮುಗುಳು ನಗಿ” ಎಂದು ಹೇಳಿದ.
    ನಾನು ನಗತೊಡಗಿದೆ.
    “ನಿಲ್ಲಿಸಿ.....” ತಕ್ಷಣ ಕಿರುಚಿದ.
    ಪುನಃ ನನ್ನೊಮ್ಮೆ ನೋಡುತ್ತಾ “ಈ ಕಿವಿಗಳು ನಿಮ್ಮ ಮುಖಕ್ಕೆ ಸ್ವಲ್ಪವೂ ಹೊಂದಿಕೆಯಾಗುತ್ತಿಲ್ಲ” ಎಂದು ಮತ್ತೆ ಹೀಗಳೆದ.
    ನಾನು ಸುಮ್ಮನೆ ಕುಳಿತಿದ್ದೆ.
    ಸ್ವಲ್ಪ ತಡೆದು “ಅವುಗಳನ್ನು ಸ್ವಲ್ಪ ಕೆಳಗಿಳಿಸಿದರೆ ಚನ್ನಾಗಿರುತ್ತೆ! ಎಲ್ಲಿ, ಇಳಿಸಿ ನೋಡೋಣ? ಹಾಂ...ಹಾಗೆ! ಕಣ್ಣುಗಳು......ಆ ಗುಡ್ಡೆಗಳನ್ನು ಮಧ್ಯಭಾಗಕ್ಕೆ ತಂದು ನಿಲ್ಲಿಸಿದರೆ ಒಳ್ಳೆಯದು.......ವೇರಿ ಗುಡ್! ಎಲ್ಲಿ ಈಗ ಶ್ವಾಸಕೋಶಗಳನ್ನು ಸ್ವಲ್ಪ ಅಗಲಿಸಿ ನೋಡೋಣ? ಹಾಂ....ಹಾಗೆ! ನಿಮ್ಮ ಕೊರಳನ್ನು ಸ್ವಲ್ಪ ಉಬ್ಬಿಸಿ.....ಗುಡ್! ಈಗ ಉಸಿರು ಬಿಗಿಹಿಡಿದುಕೊಂಡು ನಿಮ್ಮ ಸೊಂಟವನ್ನು ಕಿರಿದುಗೊಳಿಸಿ.........ಹಾಂ.....ಹಾಗೆ! ಈಗ ಮೊಳಕೈಗೆ ಹತ್ತಿರವಾಗುವಂತೆ ನಿಮ್ಮ ಕುಂಡಿಯನ್ನು ಸ್ವಲ್ಪ ಮೇಲೆತ್ತಿ......ಗುಡ್, ವೇರಿ ಗುಡ್, ವೇರಿ ವೇರಿ ಗುಡ್! ಈಗ ಎಲ್ಲವೂ ಸರಿಯಾಗಿದೆ!” ಎಂದು ಹೇಳಿ ಮತ್ತೊಮ್ಮೆ ನನ್ನ ಮುಖವನ್ನು ನೋಡಿದ.
    ನಾನು ಅವನು ಅಷ್ಟೆಲ್ಲಾ ತಯಾರಿ ಮಾಡಿದ್ದನ್ನು ನೋಡಿ ಇನ್ನೇನು ಫೋಟೊ ತೆಗಿಯಬಹುದೆಂದುಕೊಂಡೆ. ಆದರೆ ನನ್ನ ಮುಖವನ್ನೇ ದಿಟ್ಟಿಸುತ್ತಾ ಮತ್ತೆ ಗೊಣಗಿದ “ನಿಮ್ಮ ಮುಖ ಫೋಟೋಕ್ಕೆ ತಕ್ಕನಾಗಿಲ್ಲ!”
    ನಾನು ಆ ಸ್ಟೂಲಿನ ಮೇಲೆ ಅತ್ತ ಇತ್ತ ಓಲಾಡತೊಡಗಿದ್ದೆ.
    “ನಿಲ್ಲಿಸಿ.....” ಭಾವುಕನಾದರೂ ಕೊಂಚ ಗಂಭೀರವಾಗಿ ಹೇಳಿದೆ. ನನ್ನ ಸಹನೆಯ ಕಟ್ಟೆಯೊಡೆದಿತ್ತು.
    “ಇದು ನನ್ನ ಮುಖ! ನಿನ್ನದಲ್ಲ! ನಲವತ್ತು ವರ್ಷಗಳ ಕಾಲ ಈ ಮುಖದೊಟ್ಟಿಗೆ ಜೀವನ ಮಾಡಿದ್ದೇನೆ! ಅದರ ಹುಳುಕುಗಳೇನೆಂಬುದು ನಿನಗಿಂತ ಚನ್ನಾಗಿ ನಂಗೆ ಗೊತ್ತು! ಅದು ಫೋಟೋಯೋಗ್ಯವಲ್ಲ ಎಂದೂ ಗೊತ್ತು. ನನಗೆ ಹೇಳಿ ಮಾಡಿಸಿದುದಲ್ಲ ಎಂಬುದು ಸಹ ಗೊತ್ತು! ಆದರೂ ಇದು ನನ್ನ ಮುಖ! ನನಗಿರುವ ಒಂದೇ ಒಂದು ಮುಖ! ಈ ಮುಖ ಬಿಟ್ಟರೆ ಬೇರೆ ಗತಿಯಿಲ್ಲ!” ನನ್ನ ಗಂಟಲು ಕಟ್ಟಿ ಬರುತ್ತಿತ್ತು. ಆದರೂ ಬಿಡದೆ ಮತ್ತೆ ಹೇಳಿದೆ “ಈ ಮುಖವನ್ನು ಅದರೆಲ್ಲಾ ಹುಳುಕುಗಳ ಸಮೇತ ಒಪ್ಪಿಕೊಂಡಿದ್ದೇನೆ! ಅದರೊಟ್ಟಿಗೇ ಬದುಕಿತ್ತಿದ್ದೇನೆ! ಅದಿರುವಂತೆ ಪ್ರೀತಿಸುವದನ್ನು ಕಲಿತಿದ್ದೇನೆ! ನೀನದನ್ನು ಎತ್ತಿ ಆಡಬೇಕಾಗಿಲ್ಲ! ಈ ಬಾಯಿ, ಕಣ್ಣು, ಕಿವಿ ಎಲ್ಲವೂ ನನ್ನವೇ! ನಿನ್ನದಲ್ಲ! ದೋಷವಿರುವದು ನಿನ್ನ ಕ್ಯಾಮರಾದಲ್ಲಿ! ನನ್ನ ಮುಖದಲ್ಲಲ್ಲ!” ಎಂದು ಖಾರವಾಗಿ ಹೇಳುತ್ತಾ ನಾನು ಕುಳಿತಲ್ಲಿಂದ ಮೇಲೇಳಲು ಪ್ರಯತ್ನಿಸಿದೆ.
    ಟಕ್!!
    ಅವನು ಅದಾಗಲೆ ಕ್ಯಾಮರಾದ ಗುಂಡಿಯನ್ನು ಒತ್ತಿಬಿಟ್ಟಿದ್ದ! ನನ್ನ ಫೋಟೋ ತೆಗೆದಾಗಿತ್ತು! ವಿದ್ಯುತ್ತಿನ ರಭಸಕ್ಕೆ ಆ ಯಂತ್ರ ಇನ್ನೂ ಗಡಗಡನೆ ನಡುಗತ್ತಲೇ ಇತ್ತು.
    ಆ ಫೋಟೊಗ್ರಾಫರ್ ಮುಗುಳುನಗುತ್ತಾ “ನಿಮ್ಮೆಲ್ಲ ಭಾವನೆಗಳಿಗೆ ಜೀವ ತುಂಬಿ ಸೆರೆ ಹಿಡಿದಿದ್ದೇನೆ” ಎಂದು ಹೇಳಿದ.
    ನಾನು “ಜೀವ ತುಂಬಿ!? ಎಲ್ಲಿ ನೊಡೋಣ......?” ಎಂದು ಕೇಳಿದೆ.
    “ಓ! ಈಗಲೇ ನೋಡಲಾಗದು. ಮೊದಲು ನೆಗಟಿವ್ನ್ನು ಡೆವಲಪ್ ಮಾಡಬೇಕು. ಆಮೇಲೆ ಪ್ರಿಂಟ್ ಹಾಕಬೇಕು. ಸ್ವಲ್ಪ ಸಮಯ ಹಿಡಿಯುತ್ತೆ. ಒಂದು ಕೆಲ್ಸ ಮಾಡಿ, ಈ ಶನಿವಾರ ಬಂದುಬಿಡಿ. ನೋಡುವಿರಂತೆ”
    ನಾನು ಆ ಶನಿವಾರ ಮತ್ತೆ ಅವನಲ್ಲಿಗೆ ಹೋದೆ.
    ಈ ಸಾರಿ ಆತ ಮುಂಚಿಗಿಂತಲೂ ನಿರಾಸಕ್ತಿಯಿಂದ ಕಾಣುತ್ತಿದ್ದ. ಆದರೂ ಮುಖದಲ್ಲಿ ಯಾವುದೋ ಒಂದು ಗಂಭೀರ ಕಳೆ ಸೂಸುತ್ತಿತ್ತು.
    ಅವನು ನೆಗಟಿವ್ನ್ನು ಹೊರತೆಗೆದು ತೋರಿಸಿದ. ನಾವಿಬ್ಬರೂ ಸ್ವಲ್ಪಹೊತ್ತು ಸುಮ್ಮನೆ ಆ ನೆಗಟಿವ್ನ್ನು ನೋಡುತ್ತಾ ಹೋದೆವು.
    “ಇದು ನಾನಾ?” ಸ್ವಲ್ಪ ಗಲಿಬಿಲಿಗೊಂಡವನ ತರ ಕೇಳಿದೆ.
    “ಹೌದು, ನೀವೇನೇ!” ಅವನು ಸಮಾಧಾನವಾಗಿ ಉತ್ತರಿಸಿದ.
    ಮತ್ತೆ ಇಬ್ಬರೂ ನೆಗಟಿವ್ನ್ನು ನೋಡುತ್ತಾ ಹೋದೆವು.

    ನಾನು ಸ್ವಲ್ಪ ಹಿಂದೆ ಮುಂದೆ ನೋಡುತ್ತಾ “ಈ ಕಣ್ಣುಗಳು ನನ್ನ ಕಣ್ಣುಗಳ ತರ ಇಲ್ಲ” ಎಂದು ಹೇಳಿದೆ.
    “ಓ! ಅವಾ? ಅವುಗಳಿಗೆ ಹೊಸ ರೂಪ ಕೊಡಲಾಗಿದೆ. ಇನ್ನೊಮ್ಮೆ ಸರಿಯಾಗಿ ನೋಡಿ. ಅದ್ಭುತವಾಗಿ ಬಂದಿವೆಯಲ್ಲವೆ?” ತನ್ನ ಕೆಲಸದ ಬಗ್ಗೆ ತಾನೆ ಹೆಮ್ಮೆಯಿಂದ ಹೇಳಿಕೊಂಡ.
    “ಗುಡ್, ಆದರೆ ಈ ಹುಬ್ಬುಗಳು ಖಂಡಿತ ನನ್ನವಲ್ಲ”
    “ಹೌದು” ಒಂದು ಕ್ಷಣ ನನ್ನ ದಿಟ್ಟಿಸಿ “ಅವನ್ನು ತೆಗೆದು ಹೊಸದನ್ನು ಜೋಡಿಸಲಾಗಿದೆ...... ಇದು ಈಗ ಚಾಲ್ತಿಯಲ್ಲಿರುವ ಹೊಸವಿಧಾನ.... ನೀವಿಲ್ಲಿ ನೋಡಿದರೆ ನಾವೆಲ್ಲಿ ಬದಲಾಯಿಸಿದ್ದೇವೆಂದು ಬಹುಶಃ ನಿಮಗೆ ಗೊತ್ತಾಗಬಹುದು....... ನನಗೆ ಸಣ್ಣ ಹುಬ್ಬುಗಳನ್ನು ಕಂಡರೆ ಆಗುವದಿಲ್ಲ” ಎಂದು ಹೇಳಿದ.
    “ಓ! ನಿಮಗೆ ಆಗುವದಿಲ್ಲವೆ?”
    “ಊಹೂಂ, ಇಲ್ಲ” ಅವನು ಹೇಳುತ್ತಾ ಹೋದ “ಹುಬ್ಬಿನ ಮೇಲೆ ದಪ್ಪನೆಯ ಕೂದಲಿದ್ದರನೇ ಚೆಂದ. ಅದಕೆಂದೇ ಕಪ್ಪು ಕಡ್ಡಿಯನ್ನು ಬಳಸಿ ಅವನ್ನು ದಪ್ಪನಾಗಿ ತೀಡಿದ್ದೇನೆ”
    “ಸರಿ, ಬಾಯಿ...?”
    “ಅದನ್ನು ಸ್ವಲ್ಪ ಅಡ್ಜೆಸ್ಟ್ ಮಾಡಲಾಗಿದೆ...... ನಿಮ್ಮದು ತುಂಬಾ ಕೆಳಗಡೆ ಇದೆ....... ಆದರೆ ಫೋಟೋದಲ್ಲಿ ಅದನ್ನು ಸ್ವಲ್ಪ ಮೇಲೆತ್ತಲಾಗಿದೆ”
    “ಕಿವಿಗಳು ಮಾತ್ರ ನನ್ನ ತರಾನೆ ಇವೆ”
    “ಹೌದು, ಅದೊಂದು ಇದ್ದ ಹಾಗೆ ಬಂದಿದೆ. ಪ್ರಿಂಟ್ ಹಾಕುವಾಗ ಅದನ್ನು ಬದಲಾಯಿಸಲು ನೋಡುತ್ತೇನೆ..... ಈ ಸಲ್ಫೈಡ್ ವಿಧಾನ ಬಳಸಿ ಕಿವಿಗಳನ್ನು ತೆಗೆಯಬಹುದು..... ನೀವು ಹೇಳಿದರೆ..........”
    “ನೋಡಿ....!” ನಾನು ನನ್ನೆಲ್ಲ ಮುಖಭಾವಗಳನ್ನು ಸೂಸುತ್ತಾ ಅತ್ಯಂತ ನಿಷ್ಠುರವಾಗಿ ಹೇಳಿದೆ “ನನಗೆ ನನ್ನದೇ ಆದ ಒಂದು ಪೋಟೊ ಬೇಕಾಗಿತ್ತು! ಸೊಟ್ಟಗೆಯೋ, ನೆಟ್ಟಗೆಯೋ ಹೇಗಾದರು ಸರಿ ನನ್ನ ಹಾಗೆ ಇರುವ, ನನ್ನ ತರಾನೆ ಕಾಣುವ ಒಂದೇ ಒಂದು ಫೋಟೊ! ಕಡೆಗೆ ಹುಚ್ಚನ ತರ ಕಂಡಿದ್ದರೂ ಪರ್ವಾಗಿರಲಿಲ್ಲ! ಆದರೆ ನನ್ನನ್ನೇ ಹೋಲುವ, ಆ ದೇವರು ಕೊಟ್ಟ ಮುಖದಂತೆ ಕಾಣುವ ಹಾಗೆ ಒಂದೇ ಒಂದು ಫೋಟೋ ಬೇಕಾಗಿತ್ತು! ನಾನು ಸತ್ತ ಮೇಲೆ ನನ್ನ ನೆನಪಿಗಾಗಿ ಗೆಳೆಯರೆಲ್ಲ ಇಟ್ಟುಕೊಳ್ಳುವಂಥ ಫೋಟೋ ಬೇಕಿತ್ತು! ಆದರೆ ಇದು ನಾನಂದುಕೊಂಡ ಹಾಗೆ ಬಂದಿಲ್ಲ..... ನನ್ನ ಕಲ್ಪನೆ ತಪ್ಪಾಗಿದೆ...... ನನಗಿದು ಬೇಕಾಗಿಲ್ಲ....ನಿನ್ನ ನೆಗಟಿವ್ನ್ನು ನೀನೇ ಇಟ್ಕೊ...... ಸಲ್ಫೈಡ್, ಬ್ರೋಮೈಡ್, ಆಕ್ಷೈಡ್ ಕೊನೆಗೆ ಸಗಣಿಯಲ್ಲಾದರು ಅದ್ದಿ ತೆಗಿ...... ಕಣ್ಣುಗಳನ್ನಾದರು ತೆಗಿ, ಕಿವಿಗಳನ್ನಾದರು ಕತ್ತರಿಸು, ಹುಬ್ಬನ್ನಾದರು ತೀಡು, ಬಾಯಿಯನ್ನಾದರು ಸೀಳು....ತುಟಿಗಳು ಥಳ ಥಳ ಹೊಳೆಯುವಂತೆ ಬಣ್ಣವನ್ನಾದರು ಹಚ್ಚು, ಇಲ್ಲವೇ ಅವನ್ನು ಉಬ್ಬಿಸು, ತಗ್ಗಿಸು ಕೊನೆಗೆ ಮುಖವನ್ನಾದರು ಬದಲಾಯಿಸು......ನೀನು ಏನೇನು ಮಾಡಬೇಕೆಂದಿರುವೆಯೋ ಅದನ್ನೆಲ್ಲ ಮಾಡು..... ಮಾಡಿಯಾದ ಮೇಲೆ ನೀನಾದರೂ ಇಟ್ಕೊ.... ನಿನ್ನ ಸ್ನೇಹಿತರಿಗಾದರೂ ಕೊಡು..........ಅವರು ಅದನ್ನು ನೋಡಿ ಖುಶಿಪಡಬಹುದು. ಆದರೆ....ಆದರೆ... ನನಗೆ ಇದೊಂದು ಶುದ್ಧ ಅಧಿಕ ಪ್ರಸಂಗತನ..... ಕೆಲಸಕ್ಕೆ ಬಾರದ ಫೋಟೋ......!”
    ಹೇಳುತ್ತಾ ಹೋದಂತೆ ನನ್ನ ಗಂಟಲು ಕಟ್ಟಿ ಬಂತು. ಕಂಗಳು ತುಂಬಿ ಬಂದವು. ಅತ್ಯಂತ ನಿರಾಶನಾಗಿ ಅಲ್ಲಿಂದ ಹೊರಟೆ.
    ಇಂಗ್ಲೀಷ್ ಮೂಲ: ಸ್ಟೀಫನ್ ಲೀಕಾಕ್
    ಕನ್ನಡಕ್ಕೆ: ಉದಯ ಇಟಗಿ





    ಚಿತ್ರ ಕೃಪೆ:www.flickr.com kansasexplorer 3128

    ಸಹವಾಸ ದೋಷ

  • ಮಂಗಳವಾರ, ಮೇ 12, 2009
  • ಬಿಸಿಲ ಹನಿ
  • ನನಗೆ ಆ ಕೊಳಕು ಜನರೆಂದರೆ ಇಷ್ಟವೇ ಇಲ್ಲ
    ಬೆರೆಯಲಾರೆ ನಾ ಆ ನೀಚರೊಂದಿಗೆ ಅವರಂತೆ
    ಮಾತು ಮಾತಿಗೂ ಆಣೆಯಿಡುತ್ತಾ ಶಪಿಸುತ್ತಾ
    ಹೊಲಸು ಮಾತಾಡುತ್ತಾ ಕಾದಾಡುವವರ ಜೊತೆ

    ನನ್ನ ಸಿಟ್ಟು ನೆತ್ತಿಗೇರಿ ನೆಮ್ಮದಿ ಕೆಡುವದರಿಂದ
    ಕೇಳಲಾರೆ ನಾ ಅವರಾಡುವ ಹೊಲಸು ಮಾತುಗಳನ್ನು
    ಹೊಲಸು ಮಾಡಿಕೊಳ್ಳಲಾರೆ ನನ್ನ ನಾಲಗೆಯನ್ನು
    ಅವರಂತೆ ಹೊಲಸು ಹೊಲಸು ಮಾತಾಡಿ

    ಮೂರ್ಖರ ಸಹವಾಸ ಮೂರ್ಖನನ್ನಾಗಿಸುವದರಿಂದ
    ಮಾಡಲಾರೆ ಅಂಥವರ ಸಹವಾಸವನ್ನು
    ಜಾಣರ ಸಹವಾಸ ಜಾಣನನ್ನಾಗಿ ಮಾಡುವದರಿಂದ
    ಹುಡುಕಿ ಹೊರಡುವೆನು ಅಂಥವರ ಗುಂಪೊಂದನ್ನು

    ಕಲಿಯುವರು ಒಬ್ಬನ ಗೇಲಿ ಮಾತುಗಳಿಂದ
    ಹತ್ತು ಜನ ಹತ್ತು ಗೇಲಿ ಮಾತುಗಳನ್ನು
    ಜಡ್ಡಾದ ಕುರಿಯೊಂದು ಇಡಿ ಮಂದೆಯನ್ನು ಕೆಡಿಸಿದಂತೆ
    ಒಬ್ಬ ಸಾಕು ಉಳಿದೆಲ್ಲವನ್ನು ಹೊಲಸುಗೆಡಿಸಿ ಗಬ್ಬೆಬ್ಬಿಸಲು

    ಇಂಗ್ಲೀಷ ಮೂಲ: ಐಸಾಕ್ ವ್ಯಾಟ್ಸ್
    ಕನ್ನಡಕ್ಕೆ: ಉದಯ ಇಟಗಿ

    ಪುಸ್ತಕ ಪ್ರಕಟಣೆಯ ಕನಸು ನನಸಾದೀತೆ?

  • ಸೋಮವಾರ, ಮೇ 04, 2009
  • ಬಿಸಿಲ ಹನಿ
  • ಆತ್ಮೀಯರೆ,
    ಹಿಂದೆ ಜೀವದ ಗೆಳೆಯ ಮಂಜು “ನಿನ್ನ ಓರಗೆಯವರೆಲ್ಲಾ ಪುಸ್ತಕ ಹೊರತರುತ್ತಿದ್ದಾರೆ. ನೀನ್ಯಾವಾಗ ತರೋದು”? ಎಂದು ಕೇಳಿದ್ದಾಗ ನಾನು ನಕ್ಕು “ಮುಂದೆ ನೋಡಿದರಾಯಿತು” ಎಂದು ಸುಮ್ಮನಾಗಿದ್ದೆ. ಇದೀಗ ನನ್ನ ಬಹಳಷ್ಟು ಆತ್ಮೀಯ ಸ್ನೇಹಿತರು, ಬ್ಲಾಗ್ ಮಿತ್ರರು ಹಾಗು ನನ್ನನ್ನು ಹತ್ತಿರದಿಂದ ಬಲ್ಲವರೆಲ್ಲರ ಒತ್ತಾಸೆಯ ಮೇರೆಗೆ ನಾನು ಇದುವರೆಗೆ ಅನುವಾದಿಸಿದ ಕವನಗಳನೆಲ್ಲ ಸೇರಿಸಿ ಒಂದು ಪುಸ್ತಕವನ್ನು ಹೊರತರಬೇಕೆಂದೆರುವೆ. ಇದು ನನ್ನ ಬಹುದಿನದ ಕನಸು ಕೂಡ ಆಗಿದೆ! ಇದು ನನ್ನ ಚೊಚ್ಚಲ ಪುಸ್ತಕವಾದ್ದರಿಂದ ಅದನ್ನು ಹೊರತರುವ ರೂಪರೇಷೆಗಳಾಗಲಿ ಅಥವಾ ಅದರ ಹಿಂದೆ ಇರುವ ಶ್ರಮದ ತಿಳುವಳಿಕೆಯಾಗಲಿ ನನ್ನಲ್ಲಿಲ್ಲ. ಅಂದರೆ ಪುಸ್ತಕ ತರಲು ಯಾವ ಪ್ರಕಾಶಕರನ್ನು ಭೇಟಿ ಮಾಡಬೇಕು? ಅವರು ಪ್ರಕಟಿಸಲು ಮುಂದಾಗುತ್ತಾರೆಯೆ? ಪ್ರಕಟಿಸಲು ಎಷ್ಟು ದಿನ ತೆಗೆದುಕೊಳ್ಳಬಹುದು? ಇತ್ಯಾದಿಗಳ ಬಗ್ಗೆ ನನ್ನಲ್ಲಿ ಆಳವಾದ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಪುಸ್ತಕ ಹೊರತಂದಿರುವ ಬ್ಲಾಗ್ ಮಿತ್ರರು ನನಗೆ ಪ್ರಕಾಶಕರ ವಿಳಾಸ, ಫೋನ್ ನಂಬರ್ ಹಾಗೂ ಈಮೇಲ್ ವಿಳಾಸಗಳನ್ನು ಕೊಡುವದರೊಂದಿಗೆ ಅದರ ಒಟ್ಟಾರೆ ಕಾರ್ಯವೈಖರಿಯನ್ನು ದಯವಿಟ್ಟು ವಿವರಿಸಿ ಹೇಳಿದರೆ ಅನುಕೂಲ. ಬ್ಲಾಗ್ ಮಿತ್ರರಾದ ಸತ್ಯನಾರಾಯಣವರು, ಚಂದಿನವರು, ತೇಜಸ್ವಿನಿ ಹೆಗಡೆಯವರು, ಕಲಿಗಣನಾಥ್ ಗುಡುದೂರವರು ಈಗಾಗಲೆ ಪುಸ್ತಕ ಹೊರತಂದವರ ಪೈಕಿಯಲ್ಲಿದ್ದಾರೆ. ಬೇರೆಯವರು ಸಹ ತಂದಿರಬಹುದು. ಆದರೆ ನನಗೆ ಅವರ ಬಗ್ಗೆ ಗೊತ್ತಿಲ್ಲ. ತಂದಿದ್ದರೆ ನನ್ನ ಅಲ್ಪಜ್ಞಾನಕ್ಕಾಗಿ ದಯವಿಟ್ಟು ಕ್ಷಮಿಸಿ.

    ದೂರದ ಲಿಬಿಯಾದಿಂದ ನಾನು ಈ ಜುಲೈ ಕೊನೆವಾರದಲ್ಲಿ ಒಂದು ತಿಂಗಳ ವಾರ್ಷಿಕ ರಜೆಯ ಮೇರೆಗೆ ಬೆಂಗಳೂರಿಗೆ ಬರುವವನಿದ್ದೇನೆ. ಈ ಒಂದು ತಿಂಗಳ ಅವಧಿಯಲ್ಲಿ ಪುಸ್ತಕ ಪ್ರಕಟಣೆಯ ಜೊತೆಗೆ ಅದರ ಬಿಡುಗಡೆಯ ಕಾರ್ಯಕ್ರಮವೂ ಸಹ ನಡೆದುಹೋಗಬೇಕೆಂದುಕೊಂಡಿದ್ದೇನೆ. ಇದು ಸಾಧ್ಯವಾ? ಸಾಧ್ಯವಾದರೆ ಮೊದಲು ಪ್ರಕಟಣೆಯ ಹಂತಗಳನ್ನು ನಂತರ ಬಿಡುಗಡೆಯ ಹಂತಗಳನ್ನು ವಿವರಿಸಿ ಹೇಳಿ. ಪ್ರಕಟಣೆ ಸಾಧ್ಯವಾದರೆ ನಾನು ಇಲ್ಲಿಂದಾನೆ ಉಳಿದಿರುವ ಎರಡು ತಿಂಗಳ ಅವಧಿಯಲ್ಲಿ ಹೆಂಡತಿ ಹಾಗೂ ಸ್ನೇಹಿತನ ಮೂಲಕ ಪೂರ್ವಸಿದ್ಧತೆ ಮಾಡಿಕೊಳ್ಳುತ್ತೇನೆ. ಅಲ್ಲಿಗೆ ಬಂದಾಗ ಬರಿ ಪ್ರಕಟಿಸಿ ಬಿಡುಗಡೆಗೊಳಿಸುವದಷ್ಟೆ ಕೆಲಸವಾಗಲಿ. ನನಗೆ ಗೊತ್ತು ಸಮಯಾವಕಾಶ ತುಂಬಾ ಕಡಿಮೆಯಿದೆಯೆಂದು. ಆದರೆ ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆ ಅಲ್ಲವೆ? ಈ ಮಾರ್ಗದಲ್ಲಿ ನೀವೂ ನನ್ನ ಕೈ ಹಿಡಿದು ನಡೆಸುತ್ತೀರಲ್ಲವೆ? ನನ್ನ ಪುಸ್ತಕ ತರುವ ಕನಸನ್ನು ನನಸು ಮಾಡುತ್ತೀರಲ್ಲವೆ? ದಯವಿಟ್ಟು ಮಾಹಿತಿ ನೀಡಿ.
    ನಿಮ್ಮವ
    ಉದಯ ಇಟಗಿ