Demo image Demo image Demo image Demo image Demo image Demo image Demo image Demo image

ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ

  • ಶನಿವಾರ, ಮಾರ್ಚ್ 12, 2011
  • ಬಿಸಿಲ ಹನಿ
  • ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವದಕ್ಕೆ ಎಂಟು ದಿನ ಮುನ್ನವೇ ನಾನು ಹದಿನೈದು ದಿನದ ಮಟ್ಟಿಗೆ ನನ್ನ ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿದ್ದೆ. ಅಸಲಿಗೆ ನಾನು ಲಿಬಿಯಾ ಬಿಡುವ ಮುನ್ನ ಅಲ್ಲಿ ಹೀಗೊಂದು ಕ್ರಾಂತಿಯಾಗಬಹುದೆಂದು ನಾನು ಕನಸಿನಲ್ಲೂ ಸಹ ಯೋಚಿಸಿರಲಿಲ್ಲ. ನಾನಿರಲಿ, ಬಹುಶಃ ಲಿಬಿಯನ್ನರು ಕೂಡ ಅಂದುಕೊಂಡಿದ್ದರೋ ಇಲ್ವೋ ನಾ ಕಾಣೆ. ಏಕೆಂದರೆ ಅಲ್ಲಿನ ಅಧ್ಯಕ್ಷ ಮೌಮೂರ್ ಗಡಾಫಿ ಅಷ್ಟರ ಮಟ್ಟಿಗೆ ಅವರನ್ನು ನೆಮ್ಮದಿಯಿಂದ ಇಟ್ಟಿದ್ದ ಎಂದು ನನ್ನೊಟ್ಟಿಗೆ ಕೆಲಸ ಮಾಡುವ ಎಷ್ಟೋ ಲಿಬಿಯನ್ನರು ಹೇಳಿದ್ದರು. ಆದರೆ ನಾನು ಇಲ್ಲಿಗೆ ಬಂದು ಎಂಟು ದಿನಗಳ ನಂತರ ಲಿಬಿಯಾದಲ್ಲೂ ದಂಗೆ ಶುರುವಾಗಿದೆ ಎಂದು ಪತ್ರಿಕೆಗಳಲ್ಲಿ ಓದಿದಾಗ ಬಹುಶಃ, ಇದು ಪಕ್ಕದ ರಾಷ್ಟ್ರ ಈಜಿಪ್ಟಿನಲ್ಲಿ ಆಗಷ್ಟೇ ಉಂಟಾದ ಬದಲಾವಣೆಯ ಪರಿಣಾಮ ವಿರಬೇಕು, ಎರಡು ದಿನ ಕಳೆದ ಮೇಲೆ ಎಲ್ಲ ತಣ್ಣಗಾಗುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಇಂಥವರನ್ನು ಹೇಗೆ ಬಗ್ಗು ಬಡಿಯುಬೇಕೆಂದು ಗಡಾಫೆಗೆ ಚನ್ನಾಗಿ ಗೊತ್ತು, ಎಲ್ಲವೂ ಸರಿಹೋಗುತ್ತದೆ ಎಂದುಕೊಂಡಿದ್ದೆ. ಆದರೆ ನೋಡನೋಡುತ್ತಿದ್ದಂತೆಯೇ ಲಿಬಿಯಾದ ಉತ್ತರ ಭಾಗ ಹೊತ್ತಿ ಉರಿಯತೊಡಗಿ ಇಡಿ ಲಿಬಿಯಾದಲ್ಲಿ ಅಂತರ್ಜಾಲ ಮತ್ತು ದೂರಸಂಪರ್ಕ ಕಡಿದು ಹೋಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಭಾರತೀಯರ ಕುಟುಂಬಗಳು ತಮ್ಮವರು ಹೇಗಿದ್ದಾರೋ ಎಂದು ಇಲ್ಲಿ ಪರಿತಪಿಸುತ್ತಿರಬೇಕಾದರೆ ನನ್ನ ಮನೆಯವರು “ಸಧ್ಯ, ನೀನು ಇಲ್ಲೇ ಇದ್ದೀಯಲ್ಲ” ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ದಿನಕಳೆದಂತೆ ಆಶ್ಚರ್ಯಕರ ರೀತಿಯಲ್ಲಿ ಅಲ್ಲಿನ ಬೆಳವಣಿಗೆಗಳು ತೀವ್ರತೆಯ ಸ್ವರೂಪ ಪಡೆದುಕೊಂಡು ಲಿಬಿಯಾಕ್ಕೆ ವಿಮಾನಗಳ ಹಾರಾಟವೂ ಸ್ಥಗಿತಗೊಂಡಿದ್ದರಿಂದ ನಾನು ಇಲ್ಲೇ ಉಳಿಯಬೇಕಾಯಿತು.


    ಈಗ್ಗೆ ನಾಲ್ಕು ವರ್ಷಗಳ ಹಿಂದೆ ನಾನು ಲಿಬಿಯಾಕ್ಕೆ ಬರುವ ಮುನ್ನ ‘ಅದು ನಿರಂಕುಶವಾದಿ ಮೌಮೂರ್ ಗಡಾಫಿಯ ಹಿಡಿತದಲ್ಲಿರುವ ದೇಶ, ಅಲ್ಲಿನ ಸ್ಥಿತಿಗತಿಗಳು ಅಷ್ಟೇನೂ ಚನ್ನಾಗಿರಲಿಕ್ಕಿಲ್ಲ. ಅಲ್ಲಿಗ್ಯಾಕ್ರೀ ಹೋಗ್ತೀರಿ?’ ಎಂದು ಬಹಳಷ್ಟು ಜನ ಉಪದೇಶ ನೀಡಿದ್ದರು. ಮೇಲಾಗಿ ಅವನೊಬ್ಬ ವಿಕ್ಷಿಪ್ತ ಮನಸ್ಸಿನವ, ಮಹಾನ್ ತಂಟೆಕೋರ, ತರ್ಲೆ, ಹೆಣ್ಣು ಬಾಕ ಎಂದೆಲ್ಲಾ ಕೇಳಿ ತಿಳಿದುಪಟ್ಟಿದ್ದೆ. ಅಷ್ಟೇ ಅಲ್ಲ ಅವನು ವಿಶ್ವದ ಬಲಾಡ್ಯ ರಾಷ್ಟ್ರವಾದ ಅಮೆರಿಕನ್ನರಿಗೇ ಸೆಡ್ಡು ಹೊಡೆದು ನಿಲ್ಲುವಂಥವನು ಎಂದು ಕೂಡ ತಿಳಿದುಕೊಂಡಿದ್ದೆ. ಆದರೆ ಲಿಬಿಯಾಗೆ ಬಂದ ಮೇಲೆ ತಿಳಿಯಿತು; ಈ ಮೇಲಿನ ಸಂಗತಿಗಳಲ್ಲಿ ಬಹಳಷ್ಟು ಉತ್ಪ್ರೇಕ್ಷಿಯಿಂದ ಕೂಡಿದ್ದವೆಂದು. ಅವನು ಅಮೆರಿಕಾದ ವಿಮಾನವೊಂದಕ್ಕೆ ಬಾಂಬ್ ಇಡಿಸಿದ್ದನೆಂಬ ಆರೋಪದ ಮೇಲೆ ಆತ ಅಮೇರಿಕನ್ನರ ವಿರೋಧ ಕಟ್ಟಿಕೊಂಡಿದ್ದು ನಿಜ ಹಾಗೂ ಹಾಗೆ ವಿರೋಧ ಕಟ್ಟಿಕೊಂಡು ಎಷ್ಟೆಲ್ಲ ಪಾಡು ಪಡಬೇಕಾಯಿತು ಎನ್ನುವದೂ ಅಷ್ಟೇ ನಿಜ. ಅವನು ಅದೆಂಥ ಅಮೆರಿಕನ್ನರ ವಿರೋಧಿಯಾಗಿದ್ದನೆಂದರೆ ಅವರನ್ನು ಮಾತ್ರವಲ್ಲದೆ ಅವರ ಮಾತೃಭಾಷೆಯಾದ ಇಂಗ್ಲೀಷ್ ಭಾಷೆಯನ್ನು ಕೂಡ ದ್ವೇಷಿಸುತ್ತಿದ್ದನಂತೆ. ಹೀಗಾಗಿ ಹಠಾತ್ತಾಗಿ ಇಂಗ್ಲೀಷ್ ಭಾಷೆಯನ್ನೇ ತನ್ನ ದೇಶದ ಜನ ಕಲಿಯಕೂಡದೆಂದು ತಾಕೀತು ಮಾಡಿ ಅದರ ಮೇಲೆ ಹತ್ತು ವರ್ಷಗಳ ಕಾಲ ನಿಷೇಧ ಹೇರುವದರ ಮೂಲಕ ಒಂದು ತಲೆಮಾರಿನ ಜನಾಂಗವನ್ನು ಇಂಗ್ಲೀಷ್ ಭಾಷೆಯ ಕಲಿಕೆಯಿಂದ ವಂಚಿತಗೊಳಿಸಿದನಂತೆ. ಆದರೆ ಮುಂದೆ ಲಿಬಿಯಾ ಮತ್ತು ಅಮೇರಿಕಾದ ನಡುವಿನ ಸಂಬಂಧ ಸರಿಹೋದ ಮೇಲೆ ಇಂಗ್ಲೀಷ್ ಭಾಷೆಯ ಮಹತ್ವವನ್ನು ಅರಿತುಕೊಂಡು ಮತ್ತೆ ಅದನ್ನು ಶಾಲಾ, ಕಾಲೇಜುಗಳಲ್ಲಿ ಆರಂಭಿಸಿದನಂತೆ. ಆದರೂ ಅವನು ಈಗಲೂ ಅಮೆರಿಕನ್ನರ ದ್ವೇಷಿ! ಅವನು ಮಾತ್ರವಲ್ಲ ಅಲ್ಲಿಯ ಬಹಳಷ್ಟು ಜನ ಅಮೆರಿಕನ್ನರ ದ್ವೇಷಿಗಳೇ! ಅವನ ಪ್ರಕಾರ ಅಮೆರಿಕಾದವರೆಂದರೆ ಸಂಚು ಹೂಡುವವರು, ಕುತಂತ್ರಿಗಳೆಂದೇ ಲೆಕ್ಕಾಚಾರ. ಈಗಲೂ ಸಹ ಈ ದಂಗೆಯ ಹಿಂದೆ ತನ್ನ ದೇಶದ ತೈಲ ಸಂಪನ್ಮೂಲಗಳನ್ನು ದೋಚಲು ಅಮೆರಿಕನ್ನರು ನಡೆಸಿದ ಸಂಚು ಇರಬಹುದೆ ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಿದ್ದಾನೆ.




    ನನಗೆ ಅಷ್ಟೆಲ್ಲ ಜನ ಲಿಬಿಯಾಕ್ಕೆ ಹೋಗಬೇಡವೆಂದು ಕೇಳಿಕೊಂಡರೂ ನಾನು ಲೆಕ್ಕಿಸದೇ ‘ಏನಾದರಾಗಲಿ, ಒಂದು ಸಾರಿ ಈ ನಿರಂಕುಶ ಪ್ರಭುತ್ವದ ಒಡೆತನದಲ್ಲಿರುವ ದೇಶದಲ್ಲಿ ಜೀವನ ಹೇಗಿರುತ್ತದೆ ನೋಡಿಯೇ ಬಿಡೋಣ’ ಎಂದುಕೊಂಡು ಒಂದು ತರದ ಭಂಡ ಧೈರ್ಯದ ಮೇಲೆ ಲಿಬಿಯಾಕ್ಕೆ ಹೊರಟು ಬಂದಿದ್ದೆ. ಆದರೆ ನಾನಂದುಕೊಂಡಿದ್ದಕ್ಕಿಂತ ಅಲ್ಲಿಯ ಜೀವನ ವಿಭಿನ್ನವಾಗಿತ್ತು. ನಾನು ಮೊಟ್ಟಮೊದಲಬಾರಿಗೆ ಲಿಬಿಯಾದ ರಾಜಧಾನಿ ಟ್ರೀಪೋಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಥಟ್ಟನೆ ನನ್ನ ಗಮನ ಸೆಳೆದಿದ್ದು ಅಲ್ಲಿಯೇ ನೇತುಹಾಕಿದ್ದ ಬೋರ್ಡೊಂದರ ಮೇಲೆ ಬರೆದ ಸಾಲು. ಅದು ಅಲ್ಲಿನ ಕೆಳದರ್ಜೆಯ ಕೆಲಸಗಾರರ ಕುರಿತಾಗಿ ಬರೆದಿತ್ತು. ಅದು ಹೀಗಿತ್ತು: “Do not call them porters , they are your fellow workers” ಈ ಸಾಲನ್ನು ಓದಿ ಒಬ್ಬ ಸರ್ವಾಧಿಕಾರಿಯ ನಾಡಿನಲ್ಲಿ ಇಂಥದೊಂದು ಸಮಾನತೆಯ ಸಿದ್ಧಾಂತ ಜಾರಿಯಲ್ಲಿರಲು ಸಾಧ್ಯವೆ? ಎಂದು ನನ್ನಷ್ಟಕ್ಕೆ ನನಗೇ ಆಶ್ಚರ್ಯ ಮತ್ತು ಅನುಮಾನಗಳೆರೆಡೂ ಒಟ್ಟಿಗೆ ಮೂಡಿದ್ದವು. ಆದರೆ ನಾನು ಯಾವಾಗ ಲಿಬಿಯನ್ನರೊಟ್ಟಿಗೆ ಕೆಲಸ ಮಾಡತೊಡಗಿದನೋ ಆಗ ಅಲ್ಲಿ ಎಲ್ಲರೂ ಸಮಾನರೇ ಎಂಬ ಸತ್ಯದ ಅರಿವಾಗಿತ್ತು. ಒಬ್ಬ ಅಟೆಂಡರ್ ನಿಂದ ಹಿಡಿದು ಕಾಲೇಜಿನ ಡೀನ್ ವರೆಗೂ ಎಲ್ಲರೂ ಸರಿ ಸಮಾನರೇ. ಅಟೆಂಡರ್ ನಾದವನು ಡೀನ್ ಕುರ್ಚಿಯ ಮೇಲೆ ಕುಳಿತುಕೊಳ್ಳಬಹುದು. ಆತನ ಅಪ್ಪಣೆಯಿಲ್ಲದೆ ಆತನ ಕಂಪ್ಯೂಟರ್ ನ್ನು ಬಳಸಬಹುದು. ಹಾಗೆಯೆ ಡೀನ್ ಆದವನು ಕುಳಿತಲ್ಲಿಂದಲೇ ಎಲ್ಲ ಕೆಲಸ ತೆಗೆಯಬೇಕು ಎಂದೇನೂ ನಿಯಮವಿಲ್ಲ. ಅಗತ್ಯ ಬಿದ್ದರೆ ಅವನು ಒಬ್ಬ ಗುಮಾಸ್ತನವರೆಗೂ ನಡೆದುಕೊಂಡುಬಂದು ಕೆಲಸ ಮಾಡಿಸಿಕೊಳ್ಳಬೇಕಾಗುತ್ತದೆ. ಅಸಲಿಗೆ ಇಂಥದೊಂದು ವ್ಯವಸ್ಥೆ ಸೋ ಕಾಲ್ಡ್ ಪ್ರಜಾರಾಜ್ಯ ಎನಿಸಿಕೊಂಡ ನಮ್ಮ ದೇಶದಲ್ಲಿ ಇರಬೇಕು (ಇಲ್ಲ ಎನ್ನುವದು ಬೇರೆ ಮಾತು). ಆದರೆ ಸರ್ವಾಧಿಕಾರಿಯ ನಾಡಿನಲ್ಲಿದ್ದಿದ್ದುನ್ನು ಕಂಡು ಆಶ್ಚರ್ಯಪಟ್ಟಿದ್ದೆ. ಅಷ್ಟೇ ಏಕೆ? ನಾನು ಕೆಲಸ ಮಾಡುವ ಜಾಗ ‘ಘಾತ್’ ಪ್ರಾಂತ್ಯದ ಕಾರ್ಮಿಕ ಮಂತ್ರಿಯೊಬ್ಬರು ನನ್ನ ಸಹೋದ್ಯೋಗಿ. ಅವರು ತಮ್ಮದೇ ಸ್ವಂತ ಕಾರಿನಲ್ಲಿ ಯಾವುದೇ ಸೆಕ್ಯೂರಿಟಿ, ಎಸ್ಕಾರ್ಟ್ ಇಲ್ಲದೆ ನಮ್ಮ ಕಾಲೇಜಿಗೆ ಬಂದು ಪಾಠ ಮಾಡಿಹೋಗುತ್ತಿದ್ದರು. ಅವರು ಬ್ಯಾಂಕಿಗೆ ಬಂದರೆ ಅವರಿಗೆ ವಿಶೇಷ ರಿಯಾಯಿತಿ ತೋರಿಸುತ್ತಿರಲಿಲ್ಲ. ಎಲ್ಲರಂತೆ ಅವರು ಕೂಡ ಸರದಿಯಲ್ಲಿ ಕಾಯಬೇಕಿತ್ತು. ಬಹುಶಃ, ಈ ಹಿನ್ನೆಲೆಯಲ್ಲಿಯೇ ಗಡಾಫಿ ಮೊನ್ನೆ “ನಾನು ಯಾವತ್ತೂ ನಿರಂಕುಶವಾದಿಯಂತೆ ನಡೆದುಕೊಂಡಿಲ್ಲ. ಇಲ್ಲಿ ಎಲ್ಲರೂ ಸರಿ ಸಮಾನರು. ಇದೊಂದು ಸೋಶಿಯಲಿಸ್ಟ್ ಕಂಟ್ರಿ. ನಾನು ಇಲ್ಲಿ ಇರುವದು ಕೇವಲ ನೆಪ ಮಾತ್ರ. ಪ್ರಜೆಗಳೇ ಅಧಿಕಾರ ನಡೆಸುವವರು. ಅವರ ಕೈಯಲ್ಲಿಯೇ ದೇಶವನ್ನು ಇಟ್ಟಿದ್ದೇನೆ.” ಎಂದು ಒತ್ತಿ ಒತ್ತಿ ಹೇಳಿದ್ದು ನಿಜವೆನಿಸುತ್ತದೆ. ಆದರೆ ಅದರ ಮರುಕ್ಷಣವೇ ಇಷ್ಟೆಲ್ಲ ಹೇಳುವವ ತನ್ನ ಅಧಿಕಾರ ಗದ್ದುಗೆಯನ್ನು ಏಕೆ ಅಷ್ಟು ಸುಲಭವಾಗಿ ಬೇರೆಯವರಿಗೆ ಬಿಟ್ಟುಕೊಡಲಾರ ಎಂಬ ಅನುಮಾನವೂ ಮೂಡುತ್ತದೆ. ಅಂದರೆ ಈತ ಇತ್ತ ಸಂಪೂರ್ಣ ಸಮಾಜವಾದಿಯೂ ಅಲ್ಲದ ಅತ್ತ ನಿರಂಕುಶವಾದಿಯೂ ಅಲ್ಲದ ಎಡೆಬಿಡಂಗಿಯಾಗಿ ಕಾಣುತ್ತಾನೆ.


    ನೆರೆ ರಾಷ್ಟ್ರಗಳಾದ ಈಜಿಪ್ಟ್ ಮತ್ತು ತುನಿಶಿಯಾಗಳಲ್ಲಿ ಜನ ದಂಗೆ ಎದ್ದಂತೆ ಇಲ್ಲಿಯೂ ಜನ ದಂಗೆ ಎದ್ದಿದ್ದಾರೆ ಎಂದು ನಾವೆಲ್ಲಾ ದೂರದಲ್ಲಿ ಕುಳಿತುಕೊಂಡು ಯೋಚಿಸುತ್ತೇವೆ. ಆದರೆ ನಾನು ಅಲ್ಲಿ ಮೂರುವರೆ ವರ್ಷಗಳಿಂದ ಇದ್ದು ಗಮನಿಸಿದ್ದೇನೆಂದರೆ ದಂಗೆಯೇಳುವಷ್ಟು ಕೆಟ್ಟದಾಗಿ ಲಿಬಿಯಾ ಯಾವತ್ತೂ ಈ ಎರಡು ರಾಷ್ಟ್ರಗಳಂತಿರಲಿಲ್ಲ. ಅದು ಸದಾ ಪ್ರಗತಿಯ ಮುಂಚೂಣಿಯಲ್ಲಿರಲು ಕೆಲಸ ಮಾಡುತ್ತಿತ್ತು. ಏಕೆಂದರೆ ಅಭಿವೃದ್ಧಿಯ ವಿಚಾರದಲ್ಲಿ ಅವನದು ಎತ್ತಿದ ಕೈ. ಪ್ರತಿಯೊಂದು ಹಳ್ಳಿ ಹಳ್ಳಿಗೂ ಆಸ್ಪತ್ರೆ, ಶಾಲೆ, ಕಾಲೇಜು, ಬ್ಯಾಂಕು, ಪೋಸ್ಟ್ ಅಫೀಸು, ಒಳ್ಳೆಯ ರಸ್ತೆ ಇನ್ನೂ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅಲ್ಲಿನ ಜನಕ್ಕೆ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡಿದ್ದಾನೆ. ಮಾತ್ರವಲ್ಲ ಅಲ್ಲಿನ ಬಹುತೇಕ ಪ್ರಜೆಗಳು ಸರಕಾರಿ ಕೆಲಸದಲ್ಲಿದ್ದಾರೆ. ದುಬೈ ವಿಮಾನ ನಿಲ್ದಾಣಕ್ಕೆ ಸರಿಗಟ್ಟುವಂತಹ ಅಂತರಾಷ್ಟ್ರೀಯ ವಿಮಾನನಿಲ್ದಾಣವೊಂದನ್ನು ಟ್ರೀಪೋಲಿಯಲ್ಲಿ ಕಟ್ಟಿಸುತ್ತಿದ್ದಾನೆ. ಅಲ್ಲಿನ ವಿದ್ಯಾವಂತ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್ ಮುಂತಾದ ದೇಶಗಳಿಗೆ ಸ್ಕಾಲರ್ ಶಿಪ್ ಕೊಟ್ಟು ಕಳಿಸುತ್ತಿದ್ದಾನೆ. ಅವರಿಗೆ ಮಾತ್ರವಲ್ಲ ಹಾಗೆ ಹೋಗುವವರ ಹೆಂಡತಿ ಮತ್ತು ಮಕ್ಕಳಿಗೆ ತಿಂಗಳಿಗೆ ಅಲ್ಲಿನ ಖರ್ಚು ವೆಚ್ಚಕ್ಕಾಗಿ ತಲಾ 3೦೦೦ ಡಾಲರ್ ಕೊಡುತ್ತಾನೆ. ನಮಗೆ ಲಂಡನ್ ಮತ್ತು ಅಮೆರಿಕಾದಲ್ಲಿ ಓದುವದು ಕನಸಿನ ಮಾತಾದರೆ ಅವರಿಗೆ ಅತಿ ಸುಲಭದಲ್ಲಿ ಎಟಕುತ್ತದೆ. ಇತ್ತೀಚಿಗೆ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸುವದರ ಮೂಲಕ ಹಂಚಿದ್ದ. ಶೀಘ್ರದಲ್ಲಿಯೇ ಒಂದು ದಿನಾರಿಗೆ (ಅಂದರೆ ಭಾರತದ 36 ರೂ.ಗೆ) 6 ಲೀಟರ್ ನಷ್ಟು ದೊರೆಯುತ್ತಿದ್ದ ಪೆಟ್ರೋಲನ್ನು 10 ಲೀಟರಿಗೆ ಹೆಚ್ಚಿಸುವವನಿದ್ದ. ಅಲ್ಲಿನ ಜನಕ್ಕೆ ಲೋನ್ ಮೇಲೆ ವಾಸಿಸಲು ಮನೆಗಳನ್ನು ಕಟ್ಟಿಸಿಕೊಡುತ್ತಿದ್ದಾನೆ. ಹಾಗೆ ನೋಡಿದರೆ ಲಿಬಿಯನ್ನರು ಆ ಸಾಲದ ಐದೋ, ಆರೋ ಕಂತುಗಳನ್ನು ಕಟ್ಟಿಬಿಟ್ಟು ಕೈ ತೊಳೆದುಕೊಂಡುಬಿಡುತ್ತಾರೆ. ಮುಂದಿನದನ್ನು ಏಕೆ ಕಟ್ಟಲಿಲ್ಲ ಎಂದು ಕೂಡ ಆತ ಕೇಳುವದಕ್ಕೆ ಹೋಗುವದಿಲ್ಲ. ಇನ್ನು ಇತರೆ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳು ಹೊರಗೆ ಹೋಗುವಾಗ ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ನಿಯಮಗಳಿರುವಂತೆ ಅಂಥ ಕಟ್ಟಳೆಗಳ್ಯಾವದನ್ನು ಅವನು ವಿಧಿಸಿಲ್ಲ. ಅವರಿಗೆ ಎಲ್ಲದರಲ್ಲೂ ಸರಿ ಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾನೆ. ಹಾಗೆ ನೋಡಿದರೆ ಲಿಬಿಯನ್ನರೇ ಶುದ್ಧ ಸೋಂಬೇರಿಗಳು. ಐದು ಜನರಲ್ಲಿ ಒಬ್ಬ ಮಾತ್ರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೆ. ಇನ್ನುಳಿದವರು ಸದಾ ಕೆಲಸ ಕದಿಯುವವರೇ. ತಕ್ಕ ಮಟ್ಟಿಗೆ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರವಿದೆ.




    ದೇಶದ ಭದ್ರತಾ ವ್ಯವಸ್ಥೆಯಲ್ಲೂ ಕೂಡ ಗಡಾಫಿ ಅಷ್ಟೇ ಕಟ್ಟುನಿಟ್ಟು. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕಾದರೆ ಚೆಕ್ ಪಾಯಿಂಟಿನಲ್ಲಿ ಪೋಲಿಸರು ಟ್ಯಾಕ್ಸಿಯಲ್ಲಿರುವವರ ಗುರುತು ಪತ್ರ ಮುಂತಾದ ವಿವರಗಳನ್ನು ಕೇಳುತ್ತಾರೆ. ಒಂದೊಂದು ಸಾರಿ ಈ ರೀತಿಯ ವಿಪರೀತ ತಪಾಸಣೆಗೊಳಗಾಗುವದು ನಮಗೆ ಕಿರಿಕಿರಿ ಎನಿಸುತ್ತದೆ. ಮೊನ್ನೆ ಅಂದರೆ ನವೆಂಬರ್ ತಿಂಗಳ ಕೊನೆವಾರದಲ್ಲಿ ನಾನಿರುವ ಸ್ಥಳ ಘಾತ್ ನಲ್ಲಿ ಅಲ್ಜೀರಿಯಾದ ಇಬ್ಬರು ಉಗ್ರರನ್ನು ಕೊಲ್ಲಲಾಯಿತು. ಅವರು ಸಹರಾ ಮರಭೂಮಿಯಲ್ಲಿ ಅಲ್ಜೀರಿಯಾದಿಂದ ನಡೆದುಕೊಂಡು ಬಂದು ಘಾತ್ ಮೂಲಕ ನುಸುಳಿ ದೊಡ್ಡ ಪಟ್ಟಣಗಳಾದ ಟ್ರ‍ೀಪೋಲಿ, ಬೆಂಗಾಜಿಯನ್ನು ಸ್ಪೋಟಿಸಲು ಸಂಚು ಹೂಡಿದ್ದರು. ಆದರೆ ಆದೃಷ್ಟವಶಾತ್ ಪೋಲಿಸರ ಕೈಗೆ ಸಿಕ್ಕಿಬಿದ್ದು ಅಲ್ಲಿಯೇ ಕೊಲ್ಲಲ್ಪಟ್ಟರು. ಈ ತರದ ಘಟನೆ ಲಿಬಿಯಾದಲ್ಲಿ ನಡೆದಿದ್ದು ಮೂವತ್ತು ವರ್ಷಗಳ ನಂತರವೇ ಎಂದು ಅಲ್ಲಿಯ ಜನ ಮಾತಾಡಿಕೊಂಡಿದ್ದನ್ನು ಕೇಳಿದರೆ ಅವನ ಭದ್ರತಾ ಸುವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಮನದಟ್ಟಾಗುತ್ತದೆ. ಇದಾದ ನಂತರ ಗಡಾಫಿ ಅಲ್ಲಿಯ ಪೋಲಿಸರನ್ನು ಚನ್ನಾಗಿ ತರಾಟೆಗೆ ತೆಗೆದುಕೊಂಡು ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದ. ಹಾಗಂತ ಅಲ್ಲಿ ಯಾವುದೇ ಕ್ರೈಮ್ ನಡೆಯುತ್ತಿರಲಿಲ್ಲ ಎಂದು ಹೇಳಲಾರೆ. ಸಣ್ಣ ಪುಟ್ಟ ಕಳ್ಳತನ, ದರೋಡೆ, ಸುಲಿಗೆಗಳು ಹೆಚ್ಚಾಗಿ ರಾಜಧಾನಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿದ್ದವು.


    ಹೀಗಾಗಿ ನಾ ಕಂಡಂತೆ ಅಲ್ಲಿನವರು ಗಡಾಫಿಯ ಬಗ್ಗೆ ಅತೃಪ್ತಿಯನ್ನಾಗಲಿ, ಅಸಮಾಧಾನವನ್ನಾಗಲಿ ವ್ಯಕ್ತಪಡಿಸಿದ್ದನ್ನು ನಾನು ಯಾವತ್ತೂ ಕೆಳಿದ್ದಿಲ್ಲ. ಬದಲಾಗಿ ಬಹಳಷ್ಟು ಜನ ಅವನನ್ನು ಹಾಡಿ ಹೊಗಳಿದವರೇ ಹೆಚ್ಚು. ಅಥವಾ ಹಾಗೆ ಹಾಡಿ ಹೊಗಳಲೇಬೇಕೆಂಬ ಅಲಿಖಿತ ನಿಯಮವೇನಾದರೂ ಜಾರಿಯಲ್ಲಿತ್ತೇ ನನಗೆ ಗೊತ್ತಿಲ್ಲ. ನಾನಿರುವದು ಲಿಬಿಯಾದ ದಕ್ಷಿಣ ಭಾಗದಲ್ಲಿ. ಆ ಕಡೆಯೆಲ್ಲಾ ಅವನ ಬೆಂಬಲಿಗರೇ ಹೆಚ್ಚು. ಅಲ್ಲಿ ಯಾವುದೇ ಗಲಾಟೆಗಳು ನಡೆಯುತ್ತಿಲ್ಲ ಎಂದು ನನ್ನ ಭಾರತೀಯ ಸಹೋದ್ಯೋಗಿಗಳು ಹೇಳಿದ್ದಾರೆ. ನಾವಂದುಕೊಂಡಂತೆ ಲಿಬಿಯಾದಿಡಿ ಗಲಭೆಗಳು ಸಂಭವಿಸುತ್ತಿಲ್ಲ. ಟ್ಯಾಕ್ಸಿಗಳು, ಕಾಲೇಜು, ಆಸ್ಪತ್ರೆ, ಬ್ಯಾಂಕ್ ಎಲ್ಲವೂ ಎಂದಿನಂತೆ ಓಡುತ್ತಿವೆ. ಬೆಂಗಾಜಿ, ಟ್ರಿಪೊಲಿ ಕಡೆ ಮಾತ್ರ ಗಲಾಟೆ ಆಗುತ್ತಿರುವದನ್ನು ನಾವು ಟೀವಿಯಲ್ಲಿ ನೋಡಬಹುದು. ಆದರೆ ಅಲ್ಲಿಯ ಜನರ ಆತಂಕವೇನೆಂದರೆ, ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕೆಲಸಗಳು ಈಗ ಸ್ಥಗಿತಗೊಂಡಿವೆ ಎನ್ನುವದು. ಪೆಟ್ರೋಲ್ ಶೇಖರಣೆ ಸದ್ಯಕ್ಕೆ ನಿಂತಿದೆ. ಅಂತರಾಷ್ಟ್ರೀಯ ತೈಲ ಕಂಪನಿಗಳು ಬಾಗಿಲು ಮುಚ್ಚಿವೆ. ಇನ್ನು ನನ್ನ ಲಿಬಿಯನ್ ಸಹೋದ್ಯೋಗಿಗಳೊಂದಿಗೆ ಚಾಟ್ ಮಾಡುತ್ತಾ “ನೀವು ದಕ್ಷಿಣದ ಕಡೆಯವರು ಏಕೆ ದಂಗೆ ಎದ್ದಿಲ್ಲ?” ಎಂದು ಕೇಳಿದೆ. ಅದಕ್ಕವರು “ಸಕಲ ಸೌಲತ್ತುಗಳನ್ನು ಕೊಟ್ಟವನ ವಿರುದ್ಧ ನಾವೇಕೆ ದಂಗೆ ಏಳಬೇಕು? ಹಾಗೆ ಒಂದು ವೇಳೆ ನಾವು ದಂಗೆಯೆದ್ದರೆ ಅದು ನಮ್ಮ ಮೂರ್ಖತನವಾಗುತ್ತದೆ. ಹರಾಮಿಕೋರತನವಾಗುತ್ತದೆ” ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಇಡಿ ಈಜಿಪ್ಟಿನ ಜನ ಹೊಸ್ನಿ ಮುಬಾರಕ್ ನ ವಿರುದ್ಧ ಎದ್ದು ನಿಂತಂತೆ ಇಡಿ ಲಿಬಿಯಾದ ಜನ ಮೌಮೂರ್ ಗಡಾಫಿಯ ವಿರುದ್ಧ ಎದ್ದು ನಿಂತಿಲ್ಲ ಎನ್ನುವದು. ಅಂದರೆ ಲಿಬಿಯಾದಲ್ಲಿ ಮುಂದೇನಾಗಬಹುದು ಎಂದು ಈಗಲೇ ಊಹಿಸುವದು ಕಷ್ಟಸಾಧ್ಯ. ಏಕೆಂದರೆ ಮೌಮೂರ್ ಗಡಾಫಿ ಅಷ್ಟು ಸುಲಭವಾಗಿ ತನ್ನ ಅಧಿಕಾರ ಗದ್ದುಗೆಯನ್ನು ಬಿಟ್ಟುಕೊಡುವಂತೆ ಕಾಣುತ್ತಿಲ್ಲ. ಅವನು ಮೊನ್ನೆ ಲಿಬಿಯನ್ನರನ್ನು ಉದ್ದೇಶಿಸಿ “ನಿಮಗೆ ಇಷ್ಟೆಲ್ಲಾ ಕೊಟ್ಟರೂ ನಿಷ್ಟೆ ಎನ್ನುವದು ಇಲ್ಲ. ನಾಯಿಗಳೇ ನಿಮಗಿಂತ ಎಷ್ಟೋ ವಾಸಿ” ಎಂದು ಬಯ್ದಿದ್ದನ್ನು ಸ್ಥಳೀಯ ಟೀವಿ ಚಾನಲ್ ವೊಂದು ಪ್ರಸಾರ ಮಾಡಿದೆಯೆಂದು ಅಲ್ಲಿಯ ನನ್ನ ಇಂಡಿಯನ್ ಮಿತ್ರರು ಹೇಳಿದ್ದಾರೆ. ಈ ಮಾತು ಲಿಬಿಯನ್ನರನ್ನ ಮತ್ತಷ್ಟು ಕೆರಳಿಸಿದೆಯಂತೆ. ಗಡಾಫಿ ಕೆಳಗಿಳಿಯುತ್ತಾನೋ? ಅಥವಾ ತನ್ನ ವಿರೋಧಿಗಳನ್ನು ಬಗ್ಗು ಬಡಿದು ಅವನೇ ಮುಂದುವರಿಯುತ್ತಾನೋ? ಕಾದು ನೋಡಬೇಕಾಗಿದೆ. ಆದರೆ ಅಕಸ್ಮಾತ್ ಗಡಾಫಿಯ ಮೇಲೆ ಒತ್ತಡ ಹೆಚ್ಚಾಗಿ ಅವನೇನಾದರು ಕೆಳಗಿಳಿದರೆ ಅದರ ಬಿಸಿ ನಿರಂಕುಶ ಪ್ರಭುತ್ವದ ಒಡೆತನದಲ್ಲಿರುವ ಮಧ್ಯಪ್ರಾಚ್ಯದ ರಾಷ್ಟ್ರಗಳಿಗೂ ತಟ್ಟುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಹೇಳಲು ಈಗಾಗಲೇ ಆಯಾಯ ದೇಶಗಳಲ್ಲಿ ಸಣ್ಣಗೆ ಆರಂಭವಾಗುತ್ತಿರುವ ಪ್ರತಿಭಟನೆಗಳೇ ಸಾಕ್ಷಿ.


    ಹಾಗಾದರೆ ಎಲ್ಲವೂ ಸರಿಯಿರುವಾಗ ಲಿಬಿಯಾದಲ್ಲಿ ಹೀಗೆ ಇದ್ದಕ್ಕಿದ್ದಂತೆ ಧಿಗ್ಗೆಂದು ಹೊತ್ತಿಕೊಂಡ ಕ್ರಾಂತಿಗೆ ಕಾರಣವಾದರು ಏನು? ಲಿಬಿಯನ್ನರು ಇಷ್ಟೆಲ್ಲಾ ಸಿಕ್ಕ ಮೇಲು ಇನ್ನೂ ಹೆಚ್ಚಿನದನ್ನು ಅವನಿಂದ ನಿರೀಕ್ಷಿಸಿದ್ದರೆ? ಅಥವಾ ನಮ್ಮ ಕಣ್ಣಿಗೆ ಕಾಣದ ಆಂತರಿಕ ರಾಜಕೀಯ ಕಲಹಗಳೇನಾದರೂ ಇದ್ದವೆ? ಅಥವಾ ಗಡಾಫಿ ಆಳ್ವಿಕೆ ಸಾಕು ಬೆರೆ ಯಾರಾದರು ಆಳಲಿ ಎಂದು ಜನ ಹೊಸತನಕ್ಕೆ ಬಯಸಿದರೆ? ಅಥವಾ ಇಲ್ಲಿನ ಜನರು ಅಧಿಕಾರ, ಸಂಪತ್ತಿನ ಆಸೆಯಿಂದಾಗಿ ಪ್ರತಿಭಟನೆಯೆದ್ದರೆ? ಅಥವಾ ಅಲ್ಲಿಯ ಜನಕ್ಕೆ ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆಯೊಂದು ಬೇಕಾಗಿದೆಯೇ? ಅಥವಾ ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ಹತೋಟಿ ಸಾಧಿಸಲು ಲಿಬಿಯಾದ ವಿರುದ್ಧ ಅಮೆರಿಕಾ ಮತ್ತು ಇಟಲಿ ದೇಶಗಳು ಜಂಟಿಯಾಗಿ ಸಂಚು ನಡೆಸುತ್ತಿವೆಯೇ? ಅಥವಾ ಇದು ಧಾರ್ಮಿಕ ಮೂಲಭಾತವಾದ ಮತ್ತು ನವವಸಾಹತುಶಾಹಿಗಳು ರಚಿಸಿದ ವ್ಯೂಹವೆ? ಅಥವಾ ಅದರ ಹಿಂದೆ ಮತ್ಯಾವುದೋ ಕಾಣದ ಕೈಗಳ ಕೈವಾಡಯಿದೆಯೇ? ಈ ಎಲ್ಲಾ ಪ್ರಶ್ನೆ, ಊಹೆಗಳಿಗೆ ಕಾಲವೇ ಉತ್ತರ ನೀಡುತ್ತದೆ. ಅಲ್ಲಿಯವರೆಗೆ ನಾವು ತಾಳ್ಮೆಯಿಂದ ಕಾಯಬೇಕಷ್ಟೇ.

    -ಉದಯ್ ಇಟಗಿ

    12-3-2011 ರ ಉದಯವಾಣಿಯಲ್ಲಿ ಪ್ರಕಟಿತ. ಅದರ ಲಿಂಕ್ ಇಲ್ಲಿದೆ. http://74.127.61.106/epaper/PDFList.aspx?Pg=H&Edn=MN&DispDate=3/12/2011