Demo image Demo image Demo image Demo image Demo image Demo image Demo image Demo image

ಇದು ಉಮಾಶ್ರೀ!!

  • ಭಾನುವಾರ, ಸೆಪ್ಟೆಂಬರ್ 27, 2009
  • ಬಿಸಿಲ ಹನಿ
  • ನಾನು ಆಗ ತಾನೆ M.A ಮಾಡಿ ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ್ದೆ. ಅದೇನು ನನ್ನ ಅದೃಷ್ಟವೋ ಏನೋ ನಾನು ಸೇರಿಕೊಂಡ ವರ್ಷವೇ ನಮ್ಮ ಕಾಲೇಜಿನ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ನನ್ನ ಅಚ್ಚುಮೆಚ್ಚಿನ ನಟಿ ಉಮಾಶ್ರೀಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ನನಗೆ ಖುಶಿಯೋ ಖುಶಿ! ಏಕೆಂದರೆ ನಾನು ಆ ವೇಳೆಗಾಗಲೆ ‘ಸಂಗ್ಯಾ ಬಾಳ್ಯಾ’ ಚಿತ್ರದಲ್ಲಿನ ಅವರ ವಿಶೇಷ ಅಭಿನಯವನ್ನು ನೋಡಿ ಅವರ ಕಟ್ಟಾ ಅಭಿಮಾನಿಯಾಗಿದ್ದೆ. ಆ ಚಿತ್ರಕ್ಕೆ ಅವರು ರಾಜ್ಯಮಟ್ಟದ ಶ್ರೇಷ್ಟ ಪೋಷಕ ನಟಿ ಪ್ರಶಸ್ತಿಯನ್ನೂ ಗಿಟ್ಟಿಸಿದ್ದರು. ಇದೀಗ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕಾರ್ಯಕ್ರಮದ ದಿನ ನಮಗೆಲ್ಲರಿಗೂ ಉಮಾಶ್ರೀ ಬರುತ್ತಾರೋ ಇಲ್ಲವೋ ಎನ್ನುವ ಆತಂಕ ಇತ್ತು. ಏಕೆಂದರೆ ಬಹಳಷ್ಟು ಸಿನಿಮಾ ನಟರು ಮೊದಲು ಒಪ್ಪಿಕೊಂಡು ಕೊನೆ ಘಳಿಗೆಯಲ್ಲಿ ಕೈಕೊಟ್ಟು ಬಿಡುತ್ತಾರೆ. ಆದರೆ ಇಲ್ಲಿ ಹಾಗಾಗಲಿಲ್ಲ. ಉಮಾಶ್ರೀ ಬಂದರು. ಪ್ರಾಂಶುಪಾಲರು ನಮ್ಮನ್ನು ಪರಿಚಯಿಸಿದಾಗ ನಮ್ಮತ್ತ ಒಂದು ಮಂದಸ್ಮಿತವನ್ನು ಬೀರಿದರು. ನಂತರ ಕಾರ್ಯಕ್ರಮಕ್ಕೆ ಹೊರಟೇಬಿಟ್ಟರು. ಅಷ್ಟುಬಿಟ್ಟರೆ ಆವತ್ತು ಸಮಾರಂಭದ ಗಡಿಬಿಡಿಯಲ್ಲಿ ಅವರೊಂದಿಗೆ ಮಾತನಾಡಲಾಗಲೇ ಇಲ್ಲ!

    ಉಮಾಶ್ರೀ ಏನು ಮಾತನಾಡಬಹುದೆಂದು ನಮಗೆಲ್ಲ ಕುತೂಹಲವೋ ಕುತೂಹಲ! ಉಮಾಶ್ರೀ ಮಾತನಾಡಲು ಎದ್ದು ನಿಂತರು. ಒಮ್ಮೆ ಪ್ರೇಕ್ಷಕರತ್ತ ಮುಗುಳುನಗೆಯನ್ನು ಬೀರಿ ಆರಂಭಿಸಿಯೇ ಬಿಟ್ಟರು: ನಾವು ಗೆದ್ದಾಗ ಎಲ್ಲೊ ಒಂದು ಕಡೆ ಸೋತಿರುತ್ತೇವೆ, ಸೋತಾಗ ಇನ್ನೆಲ್ಲೋ ಒಂದು ಕಡೆ ಗೆದ್ದಿರುತ್ತೇವೆ! ಈ ಸೋಲು ಗೆಲವುಗಳನ್ನು ಸಮನಾಗಿ ಸ್ವೀಕರಿಸುವದೇ ಬದುಕು! ಹಾಗೆ ಸ್ವೀಕರಿಸುವದನ್ನು ಕಲಿಸುವದೇ ಕಲೆ! ಆ ಕಲೆ ಅಡಗಿರುವದೇ ಸಂಸ್ಕೃತಿಯಲ್ಲಿ! ಅಂಥ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಲೆಂದೇ ಇಂಥ ಸಾಂಸ್ಕೃತಿಕ ಸಮಾರಂಭಗಳನ್ನು ನಡೆಸೋದು! ಎಂದು ಫಿಲಾಸಫಿಕ್ ಆಗಿ ಮಾತನಾಡಿ ನಮ್ಮೆಲ್ಲರ ಚಪ್ಪಾಳೆಯನ್ನು ಗಿಟ್ಟಿಸಿದರು. ಅಷ್ಟೇ ಅಲ್ಲದೆ ಸಮಾರಂಭದ ಆಶಯಕ್ಕೆ ತಕ್ಕಂತೆ ಸಂಸ್ಕೃತಿ ಎಂದರೇನು? ಕಲೆ ಎಂದರೇನು? ಅದನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು? ಎಂಬುದನ್ನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಹಳಷ್ಟು ಅತಿಥಿಗಳು ಸಮಾರಂಭದ ಆಶಯವನ್ನೇ ಮರೆತು ಏನೇನೋ ಮಾತಾಡಿ ಬೋರ್ ಹೊಡೆಸಿಬಿಡುತ್ತಾರೆ. ಆದರೆ ಉಮಾಶ್ರೀ ಹಾಗೆ ನಿರಾಶೆಗೊಳಿಸಲಿಲ್ಲ. ಮಾತು ಮುಗಿದಾದ ಮೇಲೆ ಕಾರ್ಯಕ್ರಮದ ನಿರೂಪಕರು ಉಮಾಶ್ರೀಯವರನ್ನು “ಒಡಲಾಳ” ನಾಟಕದ ಒಂದೆರಡು ಡೈಲಾಗ್‍ಗಳನ್ನು ಹೇಳಲು ಕೇಳಿಕೊಂಡಾಗ “ಅಯ್ಯೋ, ಆ ಡೈಲಾಗ್ಸೆಲ್ಲಾ ಮರೆತಿದಿರೆ! ಬಹಳ ದಿವಸ ಆಯ್ತು ನೋಡಿ” ಎಂದು ಹೇಳಿ ನಕ್ಕು ಬೇರೆ ಇನ್ಯಾವುದೋ ಸಿನಿಮಾದ ಡೈಲಾಗ್‍ಗಳನ್ನು ಹೇಳುವದರ ಮೂಲಕ ಪ್ರೇಕ್ಷಕರ ಮನವನ್ನು ತಣಿಸಿದರು.

    ಎಲ್ಲರೂ ಮಾತನಾಡಿದ ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳಿದ್ದವು. ಉಮಾಶ್ರೀ ವಿದ್ಯಾರ್ಥಿಗಳ ಮನರಂಜನಾ ಕಾರ್ಯಕ್ರಮವನ್ನು ನೋಡಲು ಉಳಿದರು. ಕಾರ್ಯಕ್ರಮಗಳು ಶುರುವಾದವು. ವಿದ್ಯಾರ್ಥಿನಿಯರ ತಂಡವೊಂದು ಯಾವುದೋ ಒಂದು ಹಾಡಿಗೆ ನರ್ತಿಸುತ್ತಿದ್ದರು. ಮಧ್ಯದಲ್ಲಿ ಹುಡುಗಿಯೊಬ್ಬಳ ಸೆರಗು ಆಕಸ್ಮಿಕವಾಗಿ ಜಾರಿ ಕೆಳಗೆ ಬಿತ್ತು. ತಕ್ಷಣ ಆ ಹುಡುಗಿ ಅದನ್ನು ಸರಿಪಡಿಸಿಕೊಂಡಳಾದರೂ ಅಷ್ಟರಲ್ಲಿ ಸೇರಿದ್ದ ಹುಡುಗರೆಲ್ಲಾ ಅಸಹ್ಯ ರೀತಿಯಲ್ಲಿ ಸಿಳ್ಳೆ, ಚಪ್ಪಾಳೆಗಳನ್ನು ಹಾಕಿ ಆ ಹುಡುಗಿಗೆ ಅವಮಾನ ಮಾಡಿದರು. ಈ ಘಟನೆಯಿಂದ ಆ ಹುಡುಗಿಗಿಂತ ಉಮಾಶ್ರೀಯವರೆಗೇ ತುಂಬಾ ನೋವಾಯಿತು. ಆ ನೃತ್ಯ ಮುಗಿಯುತ್ತಿದ್ದುದನ್ನೇ ಕಾಯುತ್ತಿದ್ದ ಉಮಾಶ್ರೀಯವರು ವೇದಿಕೆಗೆ ಬಂದು ಮೈಕ್ ತೆಗೆದುಕೊಂಡು “ನಾನು ಹಿಂದೆ ‘ಒಡಲಾಳ’ದಲ್ಲಿ ಸಾಕವ್ವನ ಪಾತ್ರ ಮಾಡುತ್ತಿದ್ದೆ. ಆ ಪಾತ್ರಕ್ಕೆ ರವಿಕೆ (ಬ್ಲೌಸ್) ಹಾಕದೆ ಬರಿ ಸೆರಗಿನಿಂದ ನನ್ನ ಎದೆಯನ್ನು ಮುಚ್ಚಿಕೊಂಡು ನಾಟಕದುದ್ದಕ್ಕೂ ಅಭಿನಯಿಸಬೇಕೆಂದು ನಿರ್ದೇಶಕರು ಹೇಳಿದ್ದರು. ನಾನು ಆಯ್ತು ಅಂದೆ. ಒಂದು ಶೋನಲ್ಲಿ ನಾನು ಹೀಗೆ ಅಭಿನಯಿಸುತ್ತಿದ್ದೆ. ಬಹಳ ಆವೇಶದ ಸನ್ನಿವೇಶವದು. ನಾನು ತಲ್ಲೀನಳಾಗಿ ಅಭಿನಯಸುತ್ತಿರಬೇಕಾದರೆ ಆಕಸ್ಮಿಕವಾಗಿ ನನ್ನ ಸೀರೆ ಸೆರಗೂ ಜಾರಿಬಿತ್ತು. ಆದರೆ ಅಲ್ಲಿರುವ ಪ್ರೇಕ್ಷಕರು ಯಾರೂ ನಗಲಿಲ್ಲ. ಏಕೆಂದರೆ ಅವರ ಗಮನವೆಲ್ಲಾ ನನ್ನ ಅಭಿನಯದ ಮೇಲಿತ್ತೇ ಹೊರತು ನನ್ನ ದೇಹದ ಮೇಲಲ್ಲ. ಅದು ಕಲೆಗೆ ಕೊಟ್ಟ ಗೌರವವಾಗಿತ್ತು. ಒಬ್ಬ ಕಲಾವಿದೆಯನ್ನು ನಡೆಸಿಕೊಂಡ ರೀತಿ ಅಂಥದ್ದಿತ್ತು! ಅಲ್ಲಿದ್ದವರೆಲ್ಲಾ ಸಭ್ಯ ಕಲೋಪಾಸಕರು, ಇಲ್ಲಿರೋರು ಅಸಭ್ಯ ಕಲೋಪಾಸಕರು! ಇಂಥವರಿಗೆ ಸಂಸ್ಕೃತಿ ಮಹತ್ವವನ್ನು ಸಾರುವ ಸಾಂಸ್ಕೃತಿಕ ಸಂಘಗಳು ಬೇರೆ” ಎಂದು ವ್ಯಂಗವಾಗಿ ತಣ್ಣನೆಯ ಮಾತುಗಳಲ್ಲಿ ಆದರೆ ಮುಟ್ಟಿನೋಡಿಕೊಳ್ಳುವ ಹಾಗೆ ವಿದ್ಯಾರ್ಥಿಗಳಿಗೆ ಮಾತಿನ ಛಡಿಯೇಟನ್ನು ನೀಡಿದರು. ಅಷ್ಟು ಹೇಳಿದ್ದೇ ತಡ ಅವಮಾನ ಮಾಡಿದ ವಿದ್ಯಾರ್ಥಿಗಳೆಲ್ಲಾ ಒಬ್ಬೊಬ್ಬರಾಗಿ ಖಾಲಿಯಾದರು. ಇದು ಉಮಾಶ್ರೀ!! ಹಾಗೆಂದೇ ಅಂಥವರನ್ನು ತಡವಾದರೂ ಕಲಾಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ!

    -ಉದಯ ಇಟಗಿ

    ನಿನ್ನ ಪ್ರೀತಿಸುವದೇ ಒಂದು ಹಿಂಸೆ!

  • ಶುಕ್ರವಾರ, ಸೆಪ್ಟೆಂಬರ್ 25, 2009
  • ಬಿಸಿಲ ಹನಿ
  • ನಿನ್ನ ಒಲಿಸಿಕೊಳ್ಳುವದು ಹೇಗೆಂದು ಯೋಚಿಸಿ ಯೋಚಿಸಿ
    ನನ್ನ ರಾತ್ರಿಗಳು ಹಿಗ್ಗಿಹೋಗಿವೆ ನಿದ್ರೆಯಿಲ್ಲದೆ
    ಈಗ ಅನಿಸುತ್ತಿದೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು!
    ನೀನು ನನ್ನವಳು ಎಂಬ ಒಂದೇ ಒಂದು ಕಾರಣಕ್ಕೆ
    ಎಷ್ಟೊಂದನ್ನು ಸಹಿಸಿಕೊಂಡೆ ನಾನು
    ನಿನ್ನ ಈಟಿಯಂಥ ಇರಿತದ ಮಾತುಗಳನ್ನು,
    ಅಹಂಕಾರವನ್ನು, ಕೋಪ ತಾಪಗಳನ್ನು, ಸಿಟ್ಟು ಸೆಡುವುಗಳನ್ನು!
    ನೀನಿತ್ತ ನೋವುಗಳಿಗೆ ಲೆಕ್ಕವುಂಟೇ?
    ಒಮ್ಮೊಮ್ಮೆ ಅದ್ಭುತವಾಗಿ ಪ್ರೀತಿಸುತ್ತೀಯಾ
    ಒಮ್ಮೊಮ್ಮೆ ಸುಕಾಸುಮ್ಮನೆ ಶರಂಪರ ಜಗಳ ಕಾಯುತ್ತೀಯ
    ಒಮ್ಮೊಮ್ಮೆ ನಕ್ಕು ನಗುಸುತ್ತೀಯಾ
    ಒಮ್ಮೊಮ್ಮೆ ಕಾರಣವಿಲ್ಲದೆ ಕೆರಳಿ ಕೆಂಡವಾಗುತ್ತೀಯಾ
    ಒಮ್ಮೊಮ್ಮೆ ಸುಸುಮ್ಮನೆ ಮುಲುಮುಲು ಅತ್ತು
    ಮನೆ ಮನಗಳನ್ನು ಮಸಣವಾಗಿಸುತ್ತೀಯಾ
    ನೀನೊಬ್ಬಳೇ ಹೀಗೇನಾ? ಅಥವಾ ಹುಡುಗಿಯರೆಲ್ಲಾ ಹೀಗೇನಾ?
    ಉತ್ತರ ಹುಡುಕುತ್ತಿದ್ದೇನೆ; ಹೇಳುವರ್ಯಾರು?
    ಎಷ್ಟೆಲ್ಲಾ ಮಾಡಿದೆ ನಾ ನಿನಗೋಸ್ಕರ
    ನನ್ನತನವನ್ನು ಬಿಟ್ಟೆ ನನ್ನವರನ್ನು ಬಿಟ್ಟೆ
    ನನ್ನನ್ನು ನಾನು ಬದಲಾಯಿಸಿಕೊಂಡೆ
    ಕೊನೆಗೆ ನೀ ನಡೆದ ಹಾದಿಯಲ್ಲಿ ನಾನೂ ನಡೆದೆ
    ಆದರೂ ನಿನಗೆ ಕರುಣೆ ಬರಲಿಲ್ಲ!
    ಪ್ರತಿಸಲ ನಾನು ಸೋಲುತ್ತಲೇ ಹೋದೆ
    ನೀನು ಗೆಲ್ಲುತ್ತಲೇ ಬಂದೆ
    ನಿನಗೆ ನಿನ್ನ ಗೆಲುವಿನ ಹಟವೇ ಹೆಚ್ಚಾಯಿತು
    ಈಗೀಗ ನನ್ನ ಗಮನಿಸುವದಿರಲಿ
    ನನ್ನ ಬಗ್ಗೆ ಯೋಚಿಸುವದಿಲ್ಲ ಕೂಡ
    ಯಾಕೆ ಇಷ್ಟೊಂದು ಕೄರಿಯಾದೆ? ಏನು ಕಾರಣ?
    ಹೇಳು ನನ್ನರಗಿಣಿ ಏನಾದರು ಹೇಳು
    ಈಗಲಾದರೂ ಅಂದುಕೊಳ್ಳುತ್ತೇನೆ
    ನನಗೆ ನಿನ್ನ ಪ್ರೀತಿಯಲ್ಲಿ ಮರುಭರವಸೆಯಿದೆಯೆಂದು
    ಇಲ್ಲವಾದರೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು ಬಿಟ್ಟುಹಾಕುತ್ತೇನೆ!

    (ಅರೇಬಿ ಕವನವೊಂದರ ಶೀರ್ಷಿಕೆಯಾಧಾರದ ಮೇಲೆ ಕಲ್ಪನೆಯ ರೆಕ್ಕೆ ಪುಕ್ಕ ಕಟ್ಟಿ ನಾನೇ ಹೊಸೆದಿರುವ ಕವನವಿದು)
    - ಉದಯ ಇಟಗಿ

    ಎರಡು ಅನುವಾದಿತ ಕವನಗಳು

  • ಮಂಗಳವಾರ, ಸೆಪ್ಟೆಂಬರ್ 22, 2009
  • ಬಿಸಿಲ ಹನಿ
  • ಚಿನ್ನವಾಗಿರುವದೆಲ್ಲಾ ಹೊಳೆಯುವದಿಲ್ಲ

    ಚಿನ್ನವಾಗಿರುವದೆಲ್ಲಾ ಹೊಳೆಯುವದಿಲ್ಲ
    ಅತ್ತಿತ್ತ ಅಲೆದಾಡುವರೆಲ್ಲಾ ಕಳೆದುಹೋಗುವದಿಲ್ಲ
    ಮುದುಕರೆಲ್ಲಾ ದುರ್ಬಲವಾಗಿರುವದಿಲ್ಲ
    ಹಿಮವು ನೆಲದಾಳದ ಬೇರುಗಳನ್ನು ಮುಟ್ಟುವದಿಲ್ಲ
    ಕಿಡಿಯೊಂದರಿಂದಲೇ ಬೆಂಕಿ ಹೊತ್ತುತ್ತದೆ
    ಕತ್ತಲೆಯೊಳಗಿಂದಲೇ ಬೆಳಕೊಂದು ಸೀಳಿಕೊಂಡು ಬರುತ್ತದೆ
    ಮುರಿದ ಹೋದ ಹೂ ದಳವೊಂದು ಮತ್ತೆ ಸೇರುತ್ತದೆ
    ಕಿರೀಟ ಕಳೆದುಕೊಂಡುವರು ಮತ್ತೆ ರಾಜರಾಗಿ ಮೆರೆಯುತ್ತಾರೆ

    ಮೂಲ ಇಂಗ್ಲೀಷ: ಜಾನ್ ರೊನಾಲ್ಡ್ ರಿಯುಲ್ ಟೋಲ್ಕಿನ್
    ಕನ್ನಡಕ್ಕೆ: ಉದಯ ಇಟಗಿ

    ನಾನು ನಿನ್ನವಳಲ್ಲ

    ನಾನು ನಿನ್ನವಳಾಗಬೇಕೆಂದು ಬಯಸಿದರೂ
    ನಿನ್ನವಳಾಗಲಿಲ್ಲ
    ನಿನ್ನೊಳಗೆ ಕಳೆದುಹೋಗಬೇಕೆಂದಕೊಂಡರೂ
    ಕಳೆದುಹೋಗಲಾಗಲಿಲ್ಲ.
    ಬದಲಾಗಿ ಕಳೆದುಹೋದೆ ನಾ
    ಮಟ ಮಟ ಮಧ್ಯಾಹ್ನದಲ್ಲಿ ಮೇಣದ ಬೆಳಕಾಗಿ
    ಕರಗಿಹೋದೆ ನಾ ಸಾಗರದೊಳಗೆ ಮಂಜಿನ ಹನಿಯಾಗಿ!

    ನನಗೆ ಗೊತ್ತು
    ನೀನು ಈಗಲೂ ನನ್ನ
    ಚೆಂದವಾಗಿ ಪ್ರೀತಿಸುತ್ತೀಯಾ
    ನಿನ್ನ ಉಸಿರಾಗಿ ಪ್ರಜ್ವಲಿಸುವ ಜ್ವಾಲೆಯಾಗಿ
    ಆದರೂ ನಾನು ನಾನೇ
    ಬೆಳಕಲ್ಲಿ ಬೆಳಕಾಗಿರಬಯಸುವವಳು!

    ಓ, ಹುಡುಗ!
    ಭೋರ್ಗರೆದುಬಿಡು ಮತ್ತೊಮ್ಮೆ
    ಕೊಚ್ಚಿಹೋಗಲಿ ನಾ ನಿನ್ನ ಪ್ರೀತಿಯ ಹುಚ್ಚು ಹೊಳೆಯಲ್ಲಿ
    ಉಳಿದುಬಿಡುವೆ ನಾ ಆರದೆ ಉರಿವ ದೀಪವಾಗಿ
    ಬೀಸುವ ಬಿರುಗಾಳಿಯ ನಡುವೆಯೂ!

    ಇಂಗ್ಲೀಷ ಮೂಲ: ಸಾರಾ ಟಿಸ್ಡೇಲ್
    ಕನ್ನಡಕ್ಕೆ: ಉದಯ ಇಟಗಿ

    ಕಳೆದ ರಾತ್ರಿಯ ಮಳೆಯಲ್ಲಿ

  • ಶುಕ್ರವಾರ, ಸೆಪ್ಟೆಂಬರ್ 18, 2009
  • ಬಿಸಿಲ ಹನಿ
  • ‘ಕಳೆದ ರಾತ್ರಿಯ ಮಳೆಯಲ್ಲಿ’ ಎನ್ನುವ ಕವನವನ್ನು ಪ್ರಸಿದ್ಧ ತೆಲುಗು ಕವಿ ದೇವರಕೊಂಡ ಬಾಲಗಂಗಾಧರ ತಿಲಕರವರ “ನಿನ್ನ ರಾತ್ರಿ ವರ್ಷಾಮ್ಲೊ” (ಕಳೆದ ರಾತ್ರಿಯ ಮಳೆಯಲ್ಲಿ) ಎನ್ನುವ ತೆಲುಗು ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಇದು ೧೯೭೧ ರಲ್ಲಿ ಕೇಂದ್ರ ಸಾಹಿತ್ಯ ಅಕ್ಯಾಡೆಮೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅದರ ಕನ್ನಡ ಅನುವಾದ ಇಲ್ಲಿದೆ.

    ನಿನ್ನೆ ರಾತ್ರಿಯ ತುಂತುರು ಮಳೆಯಲ್ಲಿ ನೆನೆದುಕೊಂಡೇ ಬಂದು ನಿನ್ನ ಮನೆಯ ಬಾಗಿಲು ಬಡಿದೆ
    ನಿದ್ದೆಗಣ್ಣಲ್ಲೊಮ್ಮೆ ನನ್ನ ನೋಡಿ ಕರುಣಾಜನಕವಾಗಿ ನಕ್ಕು ಒಳಗೆ ಬರ ಹೇಳಿದೆ
    ಮಬ್ಬುಗತ್ತಲೆಯ ಚಂದಿರ ಕತ್ತಲನ್ನು ಸೀಳಿಕೊಂಡುಬಂದು ನನ್ನ ಕಣ್ಣೊಳಗೆ ಮಿನುಗಿದ
    ಹೂ ಮೇಲಿನ ಪರಾಗವೊಂದು ಹಾರಿಬಂದು ನನ್ನೆದೆಗೆ ಬಡಿದು ಕೆಳಗೆಬಿತ್ತು
    ನಾಚಿಕೆಯಿಂದ ತಲೆತಗ್ಗಿಸಿದೆ ನಿನ್ನತ್ತ ನೋಡಲಿಲ್ಲ
    ಅವಸರವಸರವಾಗಿ ಕೋಣೆಯೊಳಗೆ ಓಡಿಹೋಗಿ ಬಾಗಿಲು ಮುಚ್ಚಿಕೊಂಡೆ
    ಆ ಕತ್ತಲ ರಾತ್ರಿಯ ಏಕಾಂತದಲ್ಲಿ ಎತ್ತೆಂದೆರತ್ತ ಒಬ್ಬಂಟಿಯಾಗಿ ಓಡಾಡಿದೆ
    ಎಷ್ಟೊಂದು ನೋವುಗಳು! ಎಷ್ಟೊಂದು ನಿಟ್ಟುಸಿರುಗಳು!
    ಥಟ್ಟನೆ ನನ್ನೊಳಗಿನ ನಿನಾದ ನಿಂತುಹೋಯಿತು
    ಆ ರಾತ್ರಿ ನನ್ನ ಅಖಂಡ ಪ್ರೀತಿಯನ್ನು ಸಾದರಪಡಿಸಲೆಂದೇ
    ಸುಮಧುರ ಗೀತೆಗಳ ಗುಚ್ಚವೊಂದನ್ನು ಉಡುಗೊರೆಯಾಗಿ ಕೊಡಲು ತಂದಿದ್ದೆ
    ಊಹೂಂ, ಕೊಡಲಾಗಲಿಲ್ಲ ಹಾಗೆ ಹೊರಟುಹೋದೆ
    ಊರೂರು ಅಲೆಯುತ್ತಾ ಕಾಡು-ಮೆಡುಗಳನ್ನು ದಾಟುತ್ತಾ
    ನಭದ ನಕ್ಷತ್ರಗಳಿಗೆ ರಾಗ ಹಾಕುತ್ತಾ ಅನಂತಾನಂತ ಜಗದ ಗಡಿಗಳನ್ನು ಹುಡುಕುತ್ತಾ
    ಅತ್ತ ಇತ್ತ ಒಬ್ಬಂಟಿಯಾಗಿ ಅಲೆದಾಡಿದೆ ಆ ಕತ್ತಲ ರಾತ್ರಿಯ ಏಕಾಂತದಲ್ಲಿ
    ಎಲ್ಲಿ ನೋಡಿದರಲ್ಲಿ ಶೋಚನೀಯ ಕಣ್ಣುಗಳ ಪ್ರಶ್ನೆಗಳು
    ಮೂಕ ವೇದನೆಗಳ ಕರೆಗಳು ಗೋಳಿಡುವ ಪ್ರಲಾಪನೆಗಳು
    ನೋವಿನ ಬೇಗೆಯಲ್ಲಿ ಬೆಂದುಹೋದ ಜೀವಗಳು
    ಬರಿ ಇಂಥವೇ ದೃಶ್ಯಗಳು ಕಾಣಿಸಿದವು!

    ಮೂಲ ತೆಲಗು: ದೇವರಕೊಂಡ ಬಾಲಗಂಗಾಧರ ತಿಲಕ
    ಇಂಗ್ಲೀಷಗೆ: ಜೆ. ಸತ್ಯಾನಂದ ಕುಮಾರ
    ಕನ್ನಡಕ್ಕೆ: ಉದಯ ಇಟಗಿ

    ಕನಸುಗಳು

  • ಗುರುವಾರ, ಸೆಪ್ಟೆಂಬರ್ 17, 2009
  • ಬಿಸಿಲ ಹನಿ
  • ಕನಸುಗಳು ಕೈ ಜಾರಿ ಹೋಗದಂತೆ
    ಗಟ್ಟಿಯಾಗಿ ಹಿಡಿದಿಕೋ ಅವನ್ನು
    ಏಕೆಂದರೆ ಕನಸುಗಳಿಲ್ಲದ ಜೀವನ
    ರೆಕ್ಕೆ ಮುರಿದ ಹಕ್ಕಿಯಂತೆ
    ಮೇಲೆ ಹಾರಲಾರದದು!

    ಕನಸುಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮುದ್ದಾಡು
    ಏಕೆಂದರೆ ಕನಸುಗಳೇ ಹೋದ ಮೇಲೆ
    ಜೀವನವೊಂದು ಬಂಜರು ಭೂಮಿ
    ಹೆಪ್ಪುಗಟ್ಟಿದ ಹಿಮದ ನೆಲದಂತೆ!

    ಇಂಗ್ಲೀಷ ಮೂಲ: ಲ್ಯಾಂಗ್‍ಸ್ಟನ್ ಹ್ಯೂಸ್
    ಕನ್ನಡಕ್ಕೆ: ಉದಯ ಇಟಗಿ
    ಚಿತ್ರ: http://www.flickr.com/ by Alison Lyons

    ಏಕೋ ಏನೋ ಅಲ್ಲಿ ಒಂದಷ್ಟು ಒಳದನಿಗಳು ಮಾರ್ದನಿಸಲೇ ಇಲ್ಲ!

  • ಭಾನುವಾರ, ಸೆಪ್ಟೆಂಬರ್ 13, 2009
  • ಬಿಸಿಲ ಹನಿ
  • ಇರುವದೆಲ್ಲವನ್ನು ಬಿಟ್ಟು ಸಾವಿರ ಸಾವಿರ ಮೈಲಿಗಳನ್ನು ದಾಟಿ ಸಾಗರದಾಚೆಯ ನನ್ನ ಕೆಲಸದ ಜಾಗಕ್ಕೆ ಮತ್ತೆ ಬಂದು ಕುಳಿತಿದ್ದೇನೆ. ಮನಸ್ಸು ಭಾರವಾಗಿದೆ. ಹೃದಯ ನಿಡುಸೊಯ್ಯುತ್ತದೆ. ನೆನಪುಗಳು ಮತ್ತೆ ಮತ್ತೆ ಭಾರತವನ್ನು ಮೆಲಕು ಹಾಕುವಂತೆ ಮಾಡುತ್ತವೆ. ಮನಸಿನೊಳಗೆ ಹುಟ್ಟುವ ಕಸಿವಿಸಿಗಳು ಕಣ್ಣಂಚಿನ ಹನಿಗಳಾಗಿ ಕೊನೆಗುಳ್ಳುತ್ತವೆ. ಏಕೋ ಏನೋ ಖಾಲಿ ಖಾಲಿಯಾದ ಹಾಗೆ ಅನಿಸುತ್ತದೆ. ನನ್ನ ಕೆಲಸ ಮತ್ತು ಅದರ ಹಿಂದಿರುವ ದೊಡ್ಡ ಮೊತ್ತದ ಸಂಬಳ ಮತ್ತೆ ನನ್ನ ಈ ಜಾಗಕ್ಕೆ ಎಳೆದು ತಂದು ನಿಲ್ಲಿಸಿವೆ. ಬದುಕು ಎಷ್ಟೊಂದು ವಿಚಿತ್ರ? ಎಲ್ಲಿಂದ ಎಲ್ಲಿಗೆ ಎಳೆದು ತಂದು ಬಿಡುತ್ತದೆಯಲ್ಲವೆ? ಎಳೆದ ಜಾಗಕ್ಕೆ ನೊಗ ಕಟ್ಟಿಕೊಂಡು ಹೋಗಲೇಬೇಕಾದ ತುರ್ತು ಮತ್ತು ಅನಿವಾರ್ಯತೆಗಳನ್ನು ಹರಡಿ ಮುಂದೇನು ಮಾಡುವೆ? ಎಂದು ಕೇಳಿ ಉತ್ತರಕ್ಕೂ ಕಾಯದೆ ಅಲ್ಲಿಗೆ ಹೋಗುವಂತೆ ದೂಡಿಬಿಡುತ್ತದೆ. ಈ ಕಾರಣಕ್ಕಾಗಿಯೇ ನಾನು ಸಹ ಇರುವದೆಲ್ಲವನ್ನು ಬಿಟ್ಟು ಇಲ್ಲದ್ದನ್ನು ಹುಡುಕಿಕೊಂಡು ಮತ್ತೆ ಇಷ್ಟು ದೂರ ಬಂದುಬಿಟ್ಟೆ. ನಿಜಕ್ಕೂ ಆ ಅನಿವಾರ್ಯತೆಯಿತ್ತೆ? ಎಂದು ಕೇಳಿಕೊಳ್ಳುವಾಗೆಲ್ಲಾ ದೊಡ್ಡ ಮೊತ್ತದ ಸಂಬಳದ ಮುಂದೆ ಬದುಕಿನ ಬೇರೆಲ್ಲ ವಿಷಯಗಳು ಗೌಣ ಎನಿಸಿಬಿಡುತ್ತವೆ. ಹಾಗೆ ಅನಿಸಬಾರದು ಆದರೆ ಅನಿಸಿಬಿಡುತ್ತದೆ. ಅದೇ ಬದುಕಿನ ಕಟುವಾಸ್ತವ ವಿಪರ್ಯಾಸ!

    ಮೊನ್ನೆಯಷ್ಟೆ ಇಲ್ಲಿಗೆ ಬಂದಿಳಿದಿದ್ದೇನೆ. ಆದರೂ ಮನಸ್ಸು ಮತ್ತೆ ಮತ್ತೆ ಭಾರತದ ಸುತ್ತ ಗಿರಕಿ ಹೊಡೆಯುತ್ತಲಿದೆ. ಆತ್ಮೀಯರನ್ನು, ಬಂಧು ಬಳಗದವರನ್ನು, ಜೀವದ ಗೆಳೆಯರನ್ನು, ಮಡದಿ, ಮಗಳನ್ನು ಬಿಟ್ಟು ಬಂದಿರುವಾಗ ಮತ್ತೆ ಮತ್ತೆ ಅವರದೇ ನೆನಪು ಕಾಡುತ್ತದೆ. ಅವರೊಟ್ಟಿಗೆ ಕಳೆದ ಕ್ಷಣಗಳನ್ನು ನೆನೆದು ಮನಸ್ಸು ಉಲ್ಲಾಸಿತವಾದಂತೆ ಬೇಡ ಬೇಡವೆಂದರೂ ಕೆಲವು ವಿಷಣ್ಣ ಸಂಗತಿಗಳು ಧಾಳಿಯಿಟ್ಟು ಮನಸ್ಸು ಮುದುಡುವಂತೆ ಮಾಡುತ್ತವೆ. ಆಗೆಲ್ಲಾ ಎಲ್ಲೋ ಓದಿದ ಒಂದು ಸಾಲು “ಬದುಕು ಸುಖವೂ ಅಲ್ಲ ದುಃಖವೂ ಅಲ್ಲ, ಅದು ಇವೆರಡರ ಮೊತ್ತ” ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೇನೆ.

    ಬೆಂಗಳೂರಿಗೆ ಬಂದು ಇಳಿದ ಮೇಲೆ ವಿಮಾನ ನಿಲ್ದಾಣಕ್ಕೆ ಕಾರು ತೆಗೆದುಕೊಂಡು ಕರೆಯಲು ಬರುತ್ತೇನೆ ಎಂದು ಹೇಳಿದ ಜೀವದ ಗೆಳೆಯ ಮಂಜು ಬರದೇ ಹೋಗಿದ್ದು ಒಂದು ಕ್ಷಣ ಮನಸ್ಸಿಗೆ ಬೇಜಾರು ನೀಡಿತು. ಬಂದೇ ಬರುತ್ತಾನೆ ಎಂದು ನಿರೀಕ್ಷಿಸಿದ್ದೆ. ಆದರೆ ಬರಲಿಲ್ಲ. ನನ್ನ ನಿರೀಕ್ಷೆ ನೋವಾಗಿತ್ತು. ಅವನಿಗೆ ಬೆಂಗಳೂರಿನ ಬಿಜಿ ಬದುಕಲ್ಲಿ ಬಿಡುವು ಮಾಡಿಕೊಂಡು ಬರಲು ಪುರುಸೊತ್ತು ಸಿಕ್ಕಿರಲಿಕ್ಕಿಲ್ಲವೆಂದುಕೊಂಡು ನಾನೇ ಅಲ್ಲಿಂದ ಟ್ಯಾಕ್ಸಿಯೊಂದನ್ನು ಹಿಡಿದು ನೇರವಾಗಿ ನಮ್ಮ ಮನೆಗೆ ಬಂದೆವು. ಅಲ್ಲಿ ಸ್ವಾಗತಿಸುವವರು ಯಾರೂ ಇರದೆ ಇದ್ದುದರಿಂದ ಮುಚ್ಚಿದ ಬಾಗಿಲು ನಮ್ಮನ್ನು ನೋಡಿ ಅಣಕಿಸಿದಂತಾಯಿತು. ಬೀಗ ತೆಗೆದು ಸುಧಾರಿಸಿಕೊಳ್ಳುವಷ್ಟರಲ್ಲಿ ನನ್ನ ಬ್ಲಾಗ್ ಮಿತ್ರ ಶಿವು ಅವರ “Wel Come back to Bangalore” ಎನ್ನುವ ಸಂದೇಶವೊಂದು ನನ್ನ ಮೊಬೈಲಿಗೆ ಬಂದು ಬಿತ್ತು. ಅದನ್ನು ನೋಡಿ ಮುದಡಿದ್ದ ಮನಸ್ಸು ಮತ್ತೆ ಅರಳಿತು. ಅಲ್ಲಿಂದಾಚೆ ಬಂಧುಗಳು, ಸ್ನೇಹಿತರು, ಹಾಗೂ ಬ್ಲಾಗ್ ಮಿತ್ರರ ಕರೆಗಳು ಒಂದಾದ ಮೇಲೊಂದರಂತೆ ಬಂದ ನಂತರ ಪರ್ವಾಗಿಲ್ಲ ಆತ್ಮೀಯತೆ ಇನ್ನೂ ಹಾಗೆ ಉಳಿದುಕೊಂಡಿದೆ ಎನಿಸಿತು. ಅಂದೇ ಸಂಜೆ ಗೆಳೆಯ ಮಂಜು ಮನೆಗೆ ಬಂದು ಎಂದಿನಂತೆ ತನ್ನ ಬಿಗ್ ಸ್ಮೈಲ್‍ನೊಂದಿಗೆ ಒಂದು ವಾರ್ಮ್ ಹಗ್ ಕೊಟ್ಟಾಗ ಅವನ ಮೇಲಿನ ಕೋಪವೆಲ್ಲಾ ನೀರಾಗಿ ಕರಗಿತು.

    ಬಂದ ತಕ್ಷಣ ಬಹುಶಃ ಅದೇ ಸಂಜೆ ನನಗಿಷ್ಟವಾದ ಯಡಿಯೂರಿನ ಹೆರಿಗೆ ಆಸ್ಪತ್ರೆ ಮುಂದಿರುವ ಪಾನಿಪೂರಿ ತಿನ್ನಲು ಓಡಿದೆ. ಅಲ್ಲಿ ಸಾಲುಸಾಲಾಗಿದ್ದ ಬಜ್ಜಿ, ಇಡ್ಲಿ, ಪಾನಿಪೂರಿ ಅಂಗಡಿಗಳೆಲ್ಲ ಬೇರೆ ಬೇರೆ ಕಡೆ ಸ್ಥಳಾಂತರಗೊಡಿದ್ದವು. ಕೊನೆಗೂ ಹುಡುಕಿ ಪಾನಿಪೂರಿ, ಬಜ್ಜಿಗಳನ್ನು ತಿನ್ನುವಾಗ ಏಕೋ ಅವು ಅಷ್ಟಾಗಿ ರುಚಿಸಲಿಲ್ಲ. ಬಂದ ಮೂರು ದಿವಸಕ್ಕೆ ಊರಲ್ಲಿ ತಂಗಿಯ ಸೀಮಂತ ಕಾರಣವಿತ್ತು. ಅಲ್ಲಿಗೆ ಹೋದೆ. ಅಲ್ಲಿ ಅದ್ದೂರಿ ಸ್ವಾಗತವಿತ್ತು, ಆತಿಥ್ಯವಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಆತ್ಮೀಯತೆಯಿತ್ತು. ಆ ಆತಿಥ್ಯ, ಆ ಆತ್ಮೀಯತೆ, ಆ ಕಾಳಜಿ ಬೆಂಗಳೂರಿನಲ್ಲಿ ಇಲ್ಲದ್ದು ನೋಡಿ ಬೇಸರವಾಗಿದ್ದಂತು ಸತ್ಯ. ಆದರೆ ಸಮಾರಂಭದ ಗಡಿಬಿಡಿಯಲ್ಲಿ ಎಲ್ಲರೊಂದಿಗೆ ಕುಳಿತು ಮಾತನಾಡಲು ಆಗಲಿಲ್ಲ. ನನಗೆ ಬದುಕಲು ಹೇಳಿಕೊಟ್ಟ ಹಾಗೂ ಆ ಬದುಕು ಒಂದು ಹಂತಕ್ಕೆ ಬಂದು ತಲುಪಲು ಹೆಣಗಾಡಿದ ಅಕ್ಕನೊಂದಿಗೆ ಕುಳಿತು ಮಾತನಾಡಲು ಆಗಲೇ ಇಲ್ಲ. ಆ ಗಿಲ್ಟ್ ಹೊತ್ತುಕೊಂಡೇ ಬೆಂಗಳೂರಿಗೆ ವಾಪಾಸಾದೆ. ನನ್ನ ಎತ್ತಿ ಆಡಿಸಿದ ಸೋದರ ಮಾವಂದಿರು, ಮನೆಯ ಆಳುಮಕ್ಕಳು ನನ್ನ ನೋಡಿ ಹುಬ್ಬೇರಿಸಿ ನನಗೆ ಒಂದು ತರದ ಮುಜುಗುರವನ್ನುಂಟು ಮಾಡಿದರು. ಇನ್ನು ಕೆಲವರು ಹಿಂದೆ ತೀರ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದವರು ಈಗ ನನ್ನೊಂದಿಗೆ ಮಾತನಾಡುವದಕ್ಕೆ ಸಹ ಸಂಕೋಚಪಟ್ಟುಕೊಂಡರು. ನಾನು ತುಂಬಾ ಬೆಳೆದು ಬಿಟ್ಟಿದ್ದೇನೆಂಬ ಕಾರಣಕ್ಕೆ ಕೆಲವರು ನನ್ನ ಮಾತನಾಡಿಸಲು ಹೆದರಿಕೊಂಡರು. ಇನ್ನು ಕೆಲವರಿಗೆ ಹಮ್ಮು ಬಿಮ್ಮುಗಳು! ನನ್ನ ಬದುಕು ಮೂರಾಬಟ್ಟೆಯಾಗಿ ಕೂತಿದ್ದಾಗ ಮಂಡ್ಯದಲ್ಲಿ ತಮ್ಮ ಮನೆಯಲ್ಲಿರಿಸಿಕೊಂಡು ಓದಿಸಿದ್ದ ಅತ್ತಿಗೆ, ಅಷ್ಟೊಂದು ಆತ್ಮೀಯವಾಗಿದ್ದ ಅತ್ತಿಗೆ ಸಮಾರಂಭಕ್ಕೆ ಬಂದಾಗ ಬರಿ ಒಂದೆರಡು ಮಾತುಗಳಲ್ಲಿ ಮಾತು ಮುಗಿಸಿದ್ದರು. ನಾನೇನು ಕಮ್ಮಿ? ಎನ್ನುವ ನನ್ನ ಅಹಂ ಕೂಡ ಅವರೊಂದಿಗೆ ಮಾತನಾಡದಂತೆ ತಡೆಹಿಡಿದುಬಿಟ್ಟಿತ್ತು. ನನಗೆ ಒಂದು ಸಂದಿಗ್ಧತೆ ಕಾಡುತ್ತದೆ. ನಾವು ಬೆಳೆಯುತ್ತಾ ಬೆಳೆಯುತ್ತಾ ಬದಲಾಗಿ ಬಿಡುತ್ತೇವೆಯಾ? ಅಥವಾ ನಮ್ಮ ಸುತ್ತಲಿನವರು ನಮ್ಮ ಬೆಳವಣಿಗೆಯನ್ನು ಕಂಡು ಅವರೇ ಬದಲಾಗಿ ಬಿಡುತ್ತಾರಾ? ಗೊತ್ತಿಲ್ಲ!

    ನಾನು ಈ ಸಾರಿ ಬರುವಾಗ ಬೆಂಗಳೂರಿನಲ್ಲಿ ಒಂದು ಸೈಟ್ ತೆಗೆಯಲೇಬೇಕು ಎಂದು ನಿರ್ಧರಿಸಿಕೊಂಡು ಬಂದಿದ್ದೆ. ಏಕೆಂದರೆ ನನಗೊಂದು ಸೈಟ್ ಇಲ್ಲ ಎನ್ನುವ ಕಾರಣಕ್ಕೇನೆ ಹತ್ತಿರದವರಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅವಮಾನಕ್ಕೊಳಗಾಗಿದ್ದೇನೆ, ಕೀಳಾಗಿ ಕಾಣಲ್ಪಟ್ಟಿದ್ದೇನೆ. ನಮಗೆ ಬರುವ ಸಂಬಳ ಅಲ್ಲಿಗಲ್ಲಿಗೆ ಸಾಕಾಗುತ್ತಿರುವ ವಿಷಯ ಗೊತ್ತಿದ್ದರೂ ಮದುವೆಯಾಗಿ ಆರು ತಿಂಗಳಿಗೇ ಕೆಲವರು ‘ಅಲ್ಲೊಂದು ಸೈಟ್ ಇದೆ ತಗೊಳ್ತಿರಾ?’ ಎಂದು ಕೇಳಿ ನನ್ನ ಆರ್ಥಿಕ ಪರಿಸ್ಥಿತಿಯನ್ನು ಅಣಕಿಸಿದ್ದಿದೆ. ನಾನು ಸಾಮಾನ್ಯವಾಗಿ ಹೊರಗಿನವರು ಯಾರಾದರು ಏನಾದರು ಅಂದರೆ ತಲೆಕೆಡಿಸಿಕೊಳ್ಳುವದಿಲ್ಲ. ಆದರೆ ತೀರ ಹತ್ತಿರದವರು ನಮ್ಮ ಮುಂದೆ ಚನ್ನಾಗಿ ಮಾತಾಡಿ (ಶೇಕ್ಷಪೀಯರನ ಖಳನಾಯಕ ‘ಇಯಾಗೋ’ ತರ) ಹಿಂದೆ ನಮ್ಮ ಬಗ್ಗೆಯೇ ಪಿತೂರಿ ನಡೆಸುವವರನ್ನು ಕಂಡರೆ ನನ್ನ ಪಿತ್ತ ನೆತ್ತಿಗೇರುತ್ತದೆ. ಅಂಥ ಕಿಡಿಗೇಡಿಗಳಿಗೆ ನಾನು ಏನು ಎಂದು ನಿರೂಪಿಸಬೇಕಿತ್ತು. ಹೀಗಾಗಿ ಬಂದ ಮಾರನೇ ದಿನದಿಂದಲೇ ಸೈಟಿನ ಬೇಟೆ ಆರಂಭಿಸಿದೆ. ಅಬ್ಬಾ! ಆಸ್ತಿ, ಅಂತಸ್ತುಗಳ ಮುಂದೆ ಒಬ್ಬ ವ್ಯಕ್ತಿಯ ಒಳ್ಳೆಯತನ, ಪ್ರತಿಭೆ, ಕೌಶಲ್ಯಗಳೆಲ್ಲವೂ ಗೌಣ ಎನಿಸಿಬಿಡುತ್ತವಲ್ಲವೇ? ಎಂದು ನನಗೆ ಮನದಟ್ಟಾಗಿದ್ದು ಆಗಲೇ! ಆ ನಿಟ್ಟಿನಲ್ಲಿ ಸೈಟೊಂದನ್ನು ತೆಗೆಯಲೇಬೇಕು ಎಂಬ ಹಟದೊಂದಿಗೆ ಎಲ್ಲ ಕಡೆ ಹುಡುಕಿ ಹೊರಟೆ. ದಿನಾ ಬೆಳಿಗ್ಗೆ ಒಂಬತ್ತು ಗಂಟೆಗೆ ಮನೆ ಬಿಟ್ಟರೆ ಮತ್ತೆ ವಾಪಾಸಾಗುತ್ತಿದ್ದುದು ರಾತ್ರಿ ಏಳಕ್ಕೋ, ಎಂಟಕ್ಕೋ! ಅಂತೂ ಕೊನೆಗೆ ಗೆಳೆಯ ಮಂಜುವಿನ ಸಹಾಯದಿಂದ ರಾಜ ರಾಜೇಶ್ವರಿ ನಗರದಲ್ಲಿ ಒಂದನ್ನು ತೆಗೆದುಬಿಟ್ಟೆ.

    ನಾನು ವೀಸಾವನ್ನು extend ಮಾಡಲು ಪ್ರಯತ್ನಿಸಿದೆ. ಸಾಧ್ಯವಾಗಲೇ ಇಲ್ಲ. ಆಗಿದ್ದರೆ ಇನ್ನೊಂದಿಷ್ಟು ದಿನ ಬೆಂಗಳೂರಿನಲ್ಲಿ ಸುಂದರ ಕ್ಷಣಗಳನ್ನು ಕಳೆಯಬಹುದಿತ್ತು. ಈ ನಡುವೆ ನನ್ನ ಕಾಲೇಜು ಗೆಳೆಯ ಶರತ್‍ನನ್ನು ಭೇಟಿ ಮಾಡಿ ಅವನ ಆರೋಗ್ಯದ ಬಗ್ಗೆ ವಿಚಾರಿಸಿದೆ. (ಅವನಿಗೆ ನಾಲ್ಕು ವರ್ಷಗಳ ಹಿಂದೆ kidney transplent ಆಗಿದೆ) ಈಗ ಪರ್ವಾಗಿಲ್ಲ ಮೊದಲಿಗಿಂತ ಲವಲವಿಕೆಯಿಂದ ಇದ್ದಾನೆ ಅನ್ನಿಸಿತು. ಇನ್ನೊಬ್ಬ ಕಾಲೇಜು ಗೆಳೆಯ ಮಂಡ್ಯದ ರಾಜೀವನನ್ನು ಭೇಟಿಯಾಗಲಾಗಲಿಲ್ಲ. ಕಾರಣ ಇಬ್ಬರಿಗೂ ಪುರುಸೊತ್ತು ಮಾಡಿಕೊಳ್ಳಲಾಗಲಿಲ್ಲ. ದೂರದ ಉಡುಪಿಯಿಂದ ಇನ್ನೊಬ್ಬ ಜೀವದ ಗೆಳೆಯ ರಾಘು ಬಂದಿದ್ದ. ನಾನು, ಮಂಜು ಮತ್ತು ಅವನು ಸೇರಿ ಹಳೆಯ ನೆನಪುಗಳ ಮೆರವಣಿಗೆಯಲ್ಲಿ ಮುಳುಗಿಹೋದೆವು. ಇಬ್ಬರೂ ಸೇರಿ ಮದುವೆಯನ್ನು ನಿರಾಕರಿಸುತ್ತಿರುವದರ ಬಗ್ಗೆ ಗೆಳೆಯ ಮಂಜುವಿನ ಮನಸ್ಸನ್ನು ಬದಲಾಯಿಸಲು ನೋಡಿದೆವು. ಆದರೆ ಬಹಳಷ್ಟು ಗಂಡ ಹೆಂಡತಿ ಸಂಬಂಧಗಳು ಹೊಂದಣಿಕೆಯಾಗದೆ ಬರಿ ಮುಸುಕಿನ ಗುದ್ದಾಟದಲ್ಲಿಯೇ ಮುಗಿದು ಹೋಗುವದರಿಂದ ಅವನು ಅದೇಕೋ ಮದುವೆಯಾಗಲು ಮನಸ್ಸೇ ಮಾಡಲಿಲ್ಲ! ನಾವೂ ಬಲವಂತ ಮಾಡಲುಹೋಗಲಿಲ್ಲ! ಈ ಮಧ್ಯ ಒಂದಿಷ್ಟು ಪುಸ್ತಕಗಳನ್ನು ಹಾಗು ನಾನು ನೋಡಿದ್ದ, ನೋಡಿರದ ಕೆಲವು ಪ್ರಶಸ್ತಿ ವಿಜೇತ ಚಿತ್ರಗಳ ಸೀಡಿಗಳನ್ನು ಕೊಂಡುಕೊಂಡು ಬಂದೆ.

    ಈ ಮಧ್ಯ ರಾಘು ನಾನು ದೂರದಿಂದ ಅಪರೂಪಕ್ಕೆ ಹೋಗಿದ್ದರಿಂದ ನನಗೆ ಬೇಜಾರಾಗದಿರಲೆಂದು ತನ್ನ ಒಂದಿಷ್ಟು ಕೆಲವು ಕಷ್ಟಗಳನ್ನು ನನ್ನೊಂದಿಗೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದ. ಎಂಥ ಸಂದರ್ಭದಲ್ಲೂ ಏನೆಲ್ಲವನ್ನು ಹಂಚಿಕೊಳ್ಳುತ್ತಿದ್ದ ರಾಘು ಇವನೇನಾ? ಎನಿಸಿಬಿಟ್ಟಿತು. “ಈ ಫಾರ್ಮಾಲಿಟಿಸ್ ಎಲ್ಲ ಬೇಡಪ್ಪಾ ಅದೇನು ಹೇಳು” ಎಂದು ನಾನೇ ಬಲವಂತ ಮಾಡಿ ಕೇಳಿದಾಗ ಎಲ್ಲವನ್ನು ಹೇಳಿಕೊಂಡ. ಮನಸ್ಸು ಒದ್ದೆಯಾಯಿತು. ರಿಸೆಶನ್ ನಿಂದ ಕೆಲಸ ಕಳೆದುಕೊಂಡ ಅವನ ಭಾವಂದಿರಿಗೆ ಈ ದೇಶದಲ್ಲಿ ಕೆಲಸ ಕೊಡಿಸಲು ಸಾಧ್ಯವಾ ನೋಡುತ್ತಿದ್ದೇನೆ. ನನ್ನ ಇನ್ನೋರ್ವ ಗೆಳೆಯ ಮಂಜು ಎಲ್ಲ ದಿನಗಳನ್ನೂ ನನ್ನೊಂದಿಗೆ ಕಳೆದು ನನಗೆ ಬೇಜಾರಾಗದಂತೆ ನೋಡಿಕೊಂಡ. ಬಹುಶಃ ಅವನ ಸಹಾಯವಿರದಿದ್ದರೆ ನಾನು ಸೈಟ್ ತೆಗೆಯುವದಕ್ಕೆ ಸಾಧ್ಯವಾಗುತ್ತಲೇ ಇರಲಿಲ್ಲ. ಇತ್ತೀಚಿಗೆ ಕೆಲಸದ ಒತ್ತಡದಿಂದ ಅವನ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆಯಾದರೂ ಅವನ ಕಣ್ಣುಗಳಲ್ಲಿ ಹೊಸ ಹೊಸ ಕನಸುಗಳು ಪುಟಿಯುತ್ತಲೇ ಇದ್ದವು. ಅದೆಲ್ಲಿಂದ ಹುಡುಕುತ್ತಾನೋ ಮಾರಾಯಾ ಹೊಸ ಹೊಸ ಪ್ರಾಜೆಕ್ಟ್ ಗಳನ್ನು! ನನಗೂ ಒಂದೆರಡು ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ ಇನ್ನೊಂದೆರಡು ವರ್ಷ ಇದ್ದು ಬಂದುಬಿಡು ಮಾರಾಯ. ಇಲ್ಲೇ ಏನಾದರು ಮಾಡೋಣ ಎಂದು ಹೇಳಿದಾಗ ನನ್ನ ಕಣ್ಣುಗಳು ತುಂಬಿ ಬಂದವು. ಅವನೇ ನನಗೆ ಹೊಸ ಹೊಸ ಕನಸುಗಳನ್ನು ಕಟ್ಟಿಕೊಟ್ಟು ಹೀಗ್ಹೀಗೆ ಮಾಡೋಣ ಎಂದು ಹೇಳಿದ. ನಾನು ಸರಿ ಎಂದು ಬಂದೆ. ಈ ಸಾರಿ ಮಾತ್ರ ನಾವಿಬ್ಬರೂ ನಾಟಕ, ಸಿನಿಮಾ ಎಂದು ಎಲ್ಲೂ ಸುತ್ತಾಡಲಾಗಲಿಲ್ಲ.

    ಇರುವ ಒಂದು ತಿಂಗಳ ರಜೆ ಬರಿ ಸೈಟ್ ಹುಡುಕುವದರಲ್ಲಿಯೇ ಮುಗಿದುಹೋಯಿತು. ಈ ಮಧ್ಯ ನನ್ನ ಬ್ಲಾಗ್ ಮಿತ್ರರನ್ನು ಒಂದೆಡೆ ಕಲೆಹಾಕಬೇಕು, ಅವರೊಂದಿಗೆ ಮನದಣಿಯೇ ಮಾತಾಡಬೇಕು ಎನ್ನುವ ಆಸೆ ಕೊನೆ ಘಳಿಗೆಯಲ್ಲಿ ಕೂಡಿಬಂತು. ನನಗೆ ಇರುವ ಅಲ್ಪ ಸಮಯದಲ್ಲಿ ಎಲ್ಲ ಮಿತ್ರರನ್ನು ಕರೆಯಲಾಗಲಿಲ್ಲ. ಕರೆದವರಲ್ಲಿ ಕೆಲವರು ಬಂದೂ ಇರಲಿಲ್ಲ. ಅಲ್ಲಿ ಸಾಹಿತ್ಯಿಕ ವಿಷಯದ ಬಗ್ಗೆ ಮಾತನಾಡಲಾಗಲೇ ಇಲ್ಲ. “ಸಂಪದ” ಸಂಪಾದಕ ಹರಿಪ್ರಸಾದ್ ಅವರು ಮುಂದೆ ಎಂದಾದರು ಊಟ, ತಿಂಡಿ ಅಂತೆಲ್ಲ ಇಟ್ಟುಕೊಳ್ಳದೆ ಬರಿ ಮಾತನಾಡಲೆಂದೇ ಸೇರೋಣವೆಂದರು. ನಾನು ಆಗಲಿ ಎಂದೆ. ಪ್ರಕಾಶ್ ಹೆಗಡೆಯವರು ಸದಾ ನಗು ನಗುತ್ತಾ ಎಲ್ಲರನ್ನು ನಗಿಸುತ್ತಾ ಬಾಳುವ ಇಂಟರೆಸ್ಟಿಂಗ್ ವ್ಯಕ್ತಿ ಅನಿಸಿತು. ಆ ದಿನ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಶಿವು ಮತ್ತು ಮಲ್ಲಿಕಾರ್ಜುನವರಿಂದ ಫೋಟೊ ತೆಗೆಸಿಕೊಂಡಿದ್ದು ಹೆಮ್ಮೆಯ ಮತ್ತು ಖುಶಿಯ ಸಂಗತಿಯಾಗಿತ್ತು. ಅವನ್ನೇ ಜಿ. ಮೋಹನ್ ಅವರು ಕನ್ನಡ ಬ್ಲಾಗರ್ಸ್ನಲ್ಲಿ ಹಾಕಿದ್ದರು. ಅದಕ್ಕೆ ಅವರಿಗೆ ನಾನು ಆಭಾರಿಯಾಗಿದ್ದೇನೆ. ಅವರನ್ನು ಭೇಟಿಯಾಗಲು ಸಾಧ್ಯವಾಗಲೇ ಇಲ್ಲ. ಎಲ್ಲ ಮುಗಿಸಿ ಹೊರಡುವಾಗ ನನ್ನೊಂದಿಗಿದ್ದಿದ್ದು ಅವರೊಂದಿಗೆ ಕಳೆದ ಅದ್ಬುತ ಕ್ಷಣಗಳ ನೆನಪುಗಳು ಮಾತ್ರ!

    ನಾನು ಹೊರಡುವ ದಿನ ಹತ್ತಿರ ಬಂದಂತೆ ರೇಖಾಳಿಗೂ, ಮಂಜುವಿಗೂ ಕಸಿವಿಸಿ ಶುರುವಾಯಿತು. ಮಗಳು ಭೂಮಿ ಮಾತ್ರ ಇದ್ಯಾವುದರ ಪರಿವೆಯಿಲ್ಲದೆ ಎಂದಿನಂತೆ ನಗುಮುಖ ಹೊತ್ತು ಓಡಾಡುತ್ತಿದ್ದಳು. ರೇಖಾಳಿಗೆ ಆಗಷ್ಟೆ ಸರಕಾರಿ ಕೆಲಸ ಸಿಕ್ಕಿದ್ದರಿಂದ ಅವಳು ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಬಿಟ್ಟು ಬರಲು ಸಿದ್ಧಳಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಹೆಂಡತಿ ಹಾಗು ಮಗಳನ್ನು ಬಿಟ್ಟು ಹೊರಡಬೇಕಾಯಿತು. ನನಗೆ ಹೇಗೂ ಸರಕಾರಿ ಕೆಲಸ ಇರುತ್ತೆ ಇದೊಂದು ವರ್ಷ ಇದ್ದು ಬಿಟ್ಟು ಬಾ ಎಂದು ಹೇಳಿದಳು. ಇದೇ ಮಾತನ್ನು ಅವಳ ಅಮ್ಮನ ಮನೆಕಡೆಯವರು ಯಾರಾದರು ಹೇಳುತ್ತಾರೇನೋ ಎಂದು ಕೊನೆ ಘಳಿಗೆಯವರೆಗೆ ಕಾಯ್ದೆ. ಊಹೂಂ, ಅವರು ಈ ವಿಷಯದ ಬಗ್ಗೆ ಚಕಾರವೆತ್ತಲಿಲ್ಲ. ಏಕೋ ಬೇಸರವಾಯಿತು. ನಾನು ಹೊರಡುವದಿನ ನನ್ನ ಅಕ್ಕನ ಮಗ ರಾಜು ಬೆಂಗಳೂರಿನಲ್ಲಿದ್ದುದರಿಂದ ಅವನು ನನ್ನ ನೋಡಲು ಬಂದ. ರಾಘು ಮತ್ತು ಮಂಜು ಬೆಳಿಗ್ಗೆಯಿಂದ ಜೊತೆಯಲ್ಲಿಯೇ ಇದ್ದರು. ಮಂಜುವಿಗೆ ಎರಡು ದಿನದಿಂದಲೇ ಜ್ವರವಿತ್ತು. ಆದರೆ ಅಂದು ಜಾಸ್ತಿಯಾಯಿತು. ಹಂದಿಜ್ವರದ ಭೀತಿ ಬೆಂಗಳೂರಿನಲ್ಲಿ ಹೆಚ್ಚಾಗಿದ್ದರಿಂದ ಅವನನ್ನು ಮೊದಲು ಆಸ್ಪತ್ರೆಗೆ ಹೋಗು ಎಂದು ಹೇಳಿದೆವು. ಅವರಣ್ಣ ಬಂದು ಕಾರಿನಲ್ಲಿ ಕರೆದುಕೊಂಡು ಹೋದರು. ಹೋಗುವಾಗ ಮುಖ ಬಾಡಿತ್ತು. ಅದು ಜ್ವರಕ್ಕಿಂತ ಹೆಚ್ಚಾಗಿ ನಾನು ಹೋಗುತ್ತಿದ್ದೇನೆ ಎಂಬ ಕಾರಣಕ್ಕೇ ಹೆಚ್ಚು ಬಾಡಿತ್ತು. ಸ್ವಲ್ಪ ಹೊತ್ತಿನ ನಂತರ ಮಂಜುವಿಗೆ ಫೋನ್ ಮಾಡಿ ವಿಚಾರಿಸಿದಾಗ ಬರಿ ವೈರಲ್ ಫಿವರ್ ಎಂದು ತಿಳಿದು ಮನಸ್ಸಿಗೆ ಎಷ್ಟೋ ಸಮಾಧಾನವಾಗಿತ್ತು. ನಂತರ ರಾಘು ಅಂದೇ ಬೆಂಗಳೂರಿನ ಇನ್ನೊಂದು ಮೂಲೆಯಲ್ಲಿರುವ ಅವರಕ್ಕನನ್ನು ಭೇಟಿ ಮಾಡಿ ತಾನು ಕೆಲಸ ಮಾಡುವ ಜಾಗ ಉಡುಪಿಗೆ ಹೋಗಬೇಕಾಗಿದ್ದರಿಂದ ಅತ್ಯಂತ ಬೇಜಾರಿನಿಂದಲೇ ಹೊರಟ. ಅವನ ನಂತರ ನಮ್ಮ ರಾಜಾನೂ ಹೊರಟ ಮೇಲೆ ಮನೆ ಮನಗಳೆಲ್ಲ ಖಾಲಿ ಖಾಲಿ ಎನಿಸಿ ಬರುವ ದುಃಖವನ್ನು ಹತ್ತಿಕ್ಕಿ ಹಿಡಿದೆ. ಆ ಬಳಿಕ ಮನೆ ತುಂಬಾ ಬರಿ ಮೌನವೇ ಆವರಿಸಿತ್ತು. ಹೀಗೆ ಕುಳಿತಿರುವಾಗ ರಾತ್ರಿ ಎಂಟು ಘಂಟೆಗೆ ಗೆಳೆಯ ಮಂಜು ಫೋನ್ ಮಾಡಿ ‘ಉದಯ ನೀನು ಹೋಗುತ್ತಿದ್ದೀಯ ಇನ್ನು ಬರುವದು ಒಂದು ವರ್ಷದ ನಂತರವೇ. ನಾನು ಒಂಟಿ ಎನಿಸುತ್ತಿದೆ. ನೀನು ಹೋರುಡುವ ದಿನವೇ ಪೇಶೆಂಟಾಗಿ ಮಲಗಿದ್ದೇನೆ. ಇಲ್ಲವಾದರೆ ನಾನೇ ನಿಮ್ಮನ್ನು ಏರ್ ಪೋರ್ಟಿಗೆ ಡ್ರಾಪ್ ಮಾಡುತ್ತಿದ್ದೆ’ ಎಂದು ಇದ್ದಕ್ಕಿದ್ದಂತೆ ಜೋರಾಗಿ ಅಳತೊಡಗಿದರು. ಅಲ್ಲಿಯವರೆಗೆ ತಡೆಹಿಡಿದಿದ್ದ ನನ್ನ ದುಃಖದ ಕಟ್ಟೆಯೊಡೆಯಿತು. ಎಂದೂ ಯಾವತ್ತೂ ಅಳದ ಮಂಜು ಅಂದು ಅತ್ತದ್ದು ಮಾತ್ರ ನನ್ನ ಮನಸ್ಸನ್ನು ಹಿಂಡಿಬಿಟ್ಟಿತು. ಮನಸ್ಸು ತಡೆಯಲಿಲ್ಲ. ರೇಖಾಳೂ “ನೀವು ಹೊರಡುವ ಸಮಯದಲ್ಲಿ ಅವರು ಜೊತೆಯಲ್ಲಿದ್ದರೆ ಇಬ್ಬರಿಗೂ ಸಮಾಧಾನ ಹೋಗಿ ಕರೆದುಕೊಂಡು ಬಿಡಿ” ಎಂದು ಹೇಳಿದಳು. ನಾನು ರಾತ್ರಿ ಒಂದು ಗಂಟೆಗೆ ಏರ್ ಪೋರ್ಟಿನಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು. ಮನೆಯಿಂದ ಹೊರಡಲು ಇನ್ನೂ ಮೂರು ಗಂಟೆ ಬಾಕಿಯಿತ್ತು. ತಕ್ಷಣ ದೂರದ ರಾಜ ರಾಜೇಶ್ವರಿ ನಗರದಲ್ಲಿರುವ ಅವರ ಮನೆಗೆ ಹೋಗಿ ನೋಡಿಕೊಂಡು ಬರಬಹುದೆಂದು ಗಾಡಿ ತೆಗೆದುಕೊಂಡು ಹೊರಟೆ. ತುಂಬಾ ಮ್ಲಾನವದನರಾಗಿದ್ದರು. ನನ್ನ ನೋಡಿದವರೇ ಅಂಥ ಸ್ಥಿತಿಯಲ್ಲೂ ಮನೆಗೆ ಬರಲು ಒಪ್ಪಿದರು. ಕೊನೆಗೆ ಅವರ ಅಮ್ಮನ ಒಪ್ಪಿಗೆ ಪಡೆದು ಅವರಿಗೆ ಜರ್ಕಿನ್ ಹಾಗು ಮಫ್ಲರ್ ಹಾಕಿಸಿಕೊಂಡು ನನ್ನ ಎಲಿಚೇನಹಳ್ಳಿ ಮನೆಗೆ ಕರೆದುಕೊಂಡು ಬಂದೆ. ಬಂದ ನಂತರ ಇಬ್ಬರೂ ಮನಸ್ಪೂರ್ತಿ ಮಾತಾಡಿ ಮಲಗಿದೆವು. ಇಬ್ಬರಿಗೂ ಅದೆಂಥದೋ ಸಮಾಧಾನ. ರಾತ್ರಿ ಹನ್ನೆರಡು ಗಂಟೆಗೆ ಎದ್ದು ರೆಡಿಯಾಗಿ ಮಲಗಿರುವ ಮಗಳ ಚಿತ್ರವನ್ನು ಮನದ ತುಂಬಾ ಹೊತ್ತುಕೊಂಡು ರೇಖಾ ಮತ್ತು ಮಂಜುವಿಗೆ ವಿದಾಯ ಹೇಳಿ ಮಂಜುವಿನ ಅಣ್ಣನ ಕಾರಿನಲ್ಲಿ ಏರ್ ಪೋರ್ಟಿಗೆ ಹೊರಟೆ. ಹೋಗುವಾಗ ದಾರಿಯುದ್ದಕ್ಕೂ ಬೆಂಗಳೂರಿನ ತಂಗಾಳಿಯನ್ನು ಕೊನೆಯದೆಂಬಂತೆ ಒಮ್ಮೆ ಆಸ್ವಾದಿಸಿದೆ. ಇಮಿಗ್ರೇಶನ್ ಚೆಕ್ ಮುಗಿಸಿ ವೇಟಿಂಗ್ ಲಾಂಜಿನಲ್ಲಿ ಕುಳಿತಂತೆ ನೆನಪುಗಳು ಮತ್ತೆ ಮೆರವಣಿಗೆ ಹೊರಟವು. ಈ ನೆನಪುಗಳನ್ನೇ ಹೊತ್ತು ವಿಮಾನ ಹತ್ತಿದೆ. ವಿಮಾನ ಹಾರಾಟ ಆರಂಭಿಸಿ ಸ್ವಲ್ಪ ಹೊತ್ತಿಗೆ ಕನಸಿನ ನಿದ್ರೆ ಆವರಿಸಿಕೊಂಡಿತು. ಈ ನೆನಪುಗಳೆಲ್ಲಾ ಆ ಕನಸುಗಳಲ್ಲಿ ಕಳೆದುಹೋದವು.
    -ಉದಯ ಇಟಗಿ

    ಪ್ರೀತಿ Vs ಮದುವೆ

  • ಶನಿವಾರ, ಸೆಪ್ಟೆಂಬರ್ 05, 2009
  • ಬಿಸಿಲ ಹನಿ

  • ಆತ್ಮೀಯರೆ,
    “Love Vs Marriage” ಎನ್ನುವ ಇಂಗ್ಲೀಷ ಕವನವೊಂದು ಈಗ್ಗೆ ಸುಮಾರು ಏಳು ವರ್ಷಗಳ ಹಿಂದೆ “Deccan Herald” ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಕತ್ತರಿಸಿ ನನ್ನ ಸಂಗ್ರಹದಲ್ಲಿಟ್ಟುಕೊಂಡಿದ್ದೆ. ಆದರೆ ಅದರಲ್ಲಿ ಬರೆದವರ ಹೆಸರು ನಮೂದಿತವಾಗಿರಲಿಲ್ಲ. ಮೊನ್ನೆ ಹೀಗೆ ಏನನ್ನೋ ಹುಡುಕುವಾಗ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ಅದರ ಕನ್ನಡ ಅನುವಾದವನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನವೊಂದು ಇಲ್ಲಿದೆ. ಒಪ್ಪಿಸಿಕೊಳ್ಳಿ.

    ಪ್ರೀತಿ Vs ಮದುವೆ

    ಪ್ರೀತಿ ಎಂದರೆ ರಸ್ತೆಗಳೆಲ್ಲಿ ಒಬ್ಬರಿಗೊಬ್ಬರು ಲಲ್ಲೆಗೆರೆಯುತ್ತಾ ಕೈ ಕೈ ಹಿಡಿದು ನಡೆದಾಡುವದು
    ಮದುವೆ ಎಂದರೆ ಅದೇ ರಸ್ತೆಗಳಲ್ಲಿ ನಿಂತು ಒಬ್ಬರಿಗೊಬ್ಬರು ಕಿತ್ತಾಡುವದು

    ಪ್ರೀತಿ ಎಂದರೆ ಇಬ್ಬರೂ ಕೂಡಿ ತಮಗಿಷ್ಟವಾದ ಹೋಟೆಲ್ನರಲ್ಲಿ ತಮಗಿಷ್ಟ ಬಂದುದನ್ನು ಊಟ ಮಾಡುವದು
    ಮದುವೆ ಎಂದರೆ ಇಬ್ಬರೂ ತಮಗಿಷ್ಟವಾದುದನ್ನು ತಮಗಿಷ್ಟ ಬಂದ ಕಡೆ ತಿನ್ನುವದು

    ಪ್ರೀತಿ ಎಂದರೆ ಸೋಫಾದ ಮೇಲೆ ಒಬ್ಬರೊನ್ನೊಬ್ಬರು ಬೆಚ್ಚಗೆ ತಬ್ಬಿಕೊಂಡು ಲಲ್ಲೆಗರೆಯುವದು
    ಮದುವೆ ಎಂದರೆ ಅದೇ ಸೋಫಾದ ಮೇಲೆ ಕುಳಿತು ವ್ಯಾಜ್ಯಗಳನ್ನು ಇತ್ಯರ್ಥ ಮಾಡುವದು

    ಪ್ರೀತಿ ಎಂದರೆ ನಮ್ಮ ಮಕ್ಕಳು ಹೇಗಿರಬೇಕೆಂದು ಕನಸು ಕಾಣುವದು
    ಮದುವೆ ಎಂದರೆ ಅವರಿಂದ ದೂರ ಓಡಿಹೋಗುವದು ಹೇಗೆಂದು ಯೋಚಿಸುವದು

    ಪ್ರೀತಿ ಎಂದರೆ ಬೇಗ ಬೇಗನೆ ಶೃಂಗಾರ ಶಯ್ಯೆಗೆ ತೆರಳುವದು
    ಮದುವೆ ಎಂದರೆ ಮಲಗುವ ಕೋಣೆಗೆ ಓಡುವದು

    ಪ್ರೀತಿ ಎಂದರೆ ಪ್ರಣಯದ ಸುತ್ತಾಟ
    ಮದುವೆ ಎಂದರೆ ಜಲ್ಲಿ ಕಲ್ಲುಗಳ ಮೇಲಿನ ನಡೆದಾಟ

    ಪ್ರೀತಿ ಎಂದರೆ ಎಲ್ಲವೂ ಇಂಪು ತಂಪು ನಾದ ನಿನಾದ ಮಧುರ
    ಮದುವೆ ಎಂದರೆ ಬ್ಯಾಂಕುಗಳಲ್ಲಿನ ಝಣ ಝಣ ಕಾಂಚಾಣವೇ ಸುಮಧುರ

    ಪ್ರೀತಿ ಎಂದರೆ ಒಂದೇ ಪೇಯ ಎರಡು ನಳಿಕೆಗಳು
    ಮದುವೆ ಎಂದರೆ ಪೇಯ ಹೀರಿದ್ದು ಸಾಕಲ್ಲವೇ ಎಂಬ ಭಾವ

    ಪ್ರೀತಿ ಎಂದರೆ ಕುರುಡು
    ಮದುವೆ ಎಂದರೆ ಕಣ್ಣು ತೆರೆಸುವಾಟ


    ಮೂಲ ಇಂಗ್ಲೀಷ: ಅನಾಮೇಧಯ
    ಕನ್ನಡಕ್ಕೆ ಉದಯ ಇಟಗಿ
    ಚಿತ್ರ ಕೃಪೆ: www.flickr.com by Graceish