Demo image Demo image Demo image Demo image Demo image Demo image Demo image Demo image

ಕವಿತೆಯೆಂದರೆ ಕಣ್ಣೀರು........

 • ಗುರುವಾರ, ಜನವರಿ 23, 2014
 • ಬಿಸಿಲ ಹನಿ

 • ನನ್ನ ಮಗ ನನ್ನ ಮುಂದೆ ಕ್ರೇಯಾನ್ ಬಣ್ಣಗಳನ್ನು ಹರಡಿ  
  ಪಕ್ಷಿಯ ಚಿತ್ರವೊಂದನ್ನು ಬಿಡಿಸಲು ಹೇಳುತ್ತಾನೆ.
  ನಾನು ಸುಮ್ಮನೆ ಕಂದುಬಣ್ಣದಲ್ಲಿ ಕುಂಚವನ್ನದ್ದಿ
  ಬೀಗ ಜಡಿದಿರುವ ಸರಳುಗಳ ಚೌಕಟ್ಟೊಂದನ್ನು ಬಿಡಿಸುತ್ತೇನೆ.
  ನನ್ನ ಮಗ ಕಂಗಳ ತುಂಬಾ ಅಚ್ಚರಿಯನ್ನು ತುಂಬಿಕೊಂಡು
  ಕೇಳುತ್ತಾನೆ; ‘.....ಅಪ್ಪಾ, ಇದು ಬಂಧಿಖಾನೆ, ನಿನಗೆ
  ಗೊತ್ತಿಲ್ಲವೇ ಪಕ್ಷಿಯ ಚಿತ್ರವನ್ನು ಹೇಗೆ ಬಿಡಿಸಬೇಕೆಂದು?’
  ನಾನವನಿಗೆ ಹೇಳುತ್ತೆನೆ; ‘ಮಗನೇ, ಕ್ಷಮಿಸು ನನಗೆ
  ಪಕ್ಷಿಗಳ ಆಕಾರವೇ ಮರೆತುಹೋಗಿದೆ.’  

  ನನ್ನ ಮಗ ನನ್ನ ಮುಂದೆ ಡ್ರಾಯಿಂಗ್ ಪುಸ್ತಕವನ್ನಿಡುತ್ತಾ
  ನನಗೆ ಗೋಧಿ ಹುಲ್ಲುಕಡ್ಡಿಯೊಂದನ್ನು ಬರೆಯುವಂತೆ ಕೇಳುತ್ತಾನೆ. 
  ನಾನು ಲೇಖನಿಯನ್ನೆತ್ತಿಕೊಂಡು
  ಬಂದೂಕಿನ ಚಿತ್ರವೊಂದನ್ನು ಬಿಡಿಸುತ್ತೇನೆ.
  ನನ್ನ ಮಗ ನನ್ನ ಅಜ್ಞಾನವನ್ನು ಅಣಕಿಸುತ್ತಾ ಕೇಳುತ್ತಾನೆ;
  ‘ಅಪ್ಪಾ, ನಿನಗೆ ಹುಲ್ಲುಕಡ್ದಿ ಮತ್ತು ಬಂದೂಕಿನ ನಡುವಿನ ವ್ಯತ್ಯಾಸ ಗೊತ್ತಿಲ್ಲವೇ?’
  ನಾನವನಿಗೆ ಹೇಳುತ್ತೇನೆ; ‘ಮಗನೇ. ಒಂದೊಮ್ಮೆ
  ನನಗೆ ಹುಲ್ಲುಕಡ್ಡಿಯ ಆಕಾರ,
  ಬ್ರೆಡ್ಡಿನ ಆಕಾರ, ಗುಲಾಬಿ ಹೂವಿನ ಆಕಾರ,
  ಎಲ್ಲವೂ ಗೊತ್ತಿದ್ದವು.
  ಆದರೆ ಕಾಲ ಸರಿದಂತೆ ಎಲ್ಲವೂ ಮರೆತುಹೊಗಿವೆ.
  ಕೆಟ್ಟ ಈ ಕಾಲದಲ್ಲಿ
  ಕಾಡಿನ ಮರಗಳೆಲ್ಲಾ ಪಡೆ ಸೇರಿವೆ
  ಗುಲಾಬಿಗಳೆಲ್ಲಾ ಬಸವಳಿದು ನಿಂತಿವೆ,
  ಇಂದಿನ ಸಶಸ್ತ್ರ ಯುಗದಲ್ಲಿ
  ಗೋಧಿಹುಲ್ಲು, ಹಕ್ಕಿಪಕ್ಕಿ, ತಿನ್ನುವ ಬ್ರೆಡ್,
  ಅಷ್ಟೇ ಏಕೆ? ನಮ್ಮ ಭಾಷೆ, ಧರ್ಮ, ಸಂಸ್ಕೃತಿ
  ಎಲ್ಲದರಲ್ಲೂ ಶಸ್ತ್ರಗಳು ಬಂದು ಕುಳಿತಿವೆ.
  ಮಗನೇ, ಇಲ್ಲಿ ತನ್ನೊಳಗೆ ಬಂದೂಕಗಳನ್ನು
  ಬಚ್ಚಿಟ್ಟುಕೊಂಡಿರದ ಬ್ರೆಡ್ದನ್ನು ನೀನು ಕೊಳ್ಳಲಾರೆ,
  ಮುಖಕ್ಕೆ ಮುಳ್ಳನ್ನು ಚುಚ್ಚಿಸಿಕೊಳ್ಳಲಾರದೆ
  ಗುಲಾಬಿಯನ್ನು ಕೀಳಲಾರೆ,
  ನಿನ್ನ ಕೈಗಳ ನಡುವೆ ಆಸ್ಫೋಟಿಸದೆ ಇರುವ
  ಪುಸ್ತಕವನ್ನು ನೀನೆಂದಿಗೂ ಓದಲಾರೆ.
  ಹೀಗಿರುವಾಗ ನಾನು ಹುಲ್ಲುಕಡ್ಡಿಯ ಚಿತ್ರವನ್ನು ಹೆಗೆ ಬಿಡಿಸಲಿ ಹೇಳು?’

  ನನ್ನ ಮಗ ನನ್ನ ಹಾಸಿಗೆಯ ಬಳಿ ಕುಳಿತುಕೊಳ್ಳುತ್ತಾ
  ಕವನವೊಂದನ್ನು ಓದಲು ಹೇಳುತ್ತಾನೆ,
  ತಕ್ಷಣ ನನ್ನ ಕಂಗಳಿಂದ ಕಂಬನಿಯೊಂದು ದಿಂಬಿನ ಮೇಲೆ ಜಾರಿಬೀಳುತ್ತದೆ.
  ನನ್ನ ಮಗ ಅದನ್ನು ನೆಕ್ಕುತ್ತಾ ಆಶ್ಚರ್ಯದಿಂದ ಹೇಳುತ್ತಾನೆ;
  ‘ಅಪ್ಪಾ, ಇದು ಕಣ್ಣೀರು. ಕವಿತೆಯಲ್ಲ!’
  ನಾನವನಿಗೆ ಹೇಳುತ್ತೆನೆ: ‘ಮಗನೇ, ನೀನು
  ಬೆಳೆದು ದೊಡ್ಡವನಾದ ಮೇಲೆ ನಿನಗೇ ಗೊತ್ತಾಗುತ್ತದೆ
  ಕವಿತೆಯೆಂದರೆ ಕಣ್ಣೀರು,
  ಕಣ್ಣೀರೆಂದರೆ ಅರೇಬಿ ಕವಿತೆ ಎಂದು.’

  ನನ್ನ ಮಗ ತನ್ನ ಲೇಖನಿ ಹಾಗೂ ಕ್ರೇಯಾನ್ ಬಣ್ಣಗಳನ್ನು
  ನನ್ನ ಮುಂದಿಡುತ್ತಾ ತನಗೊಂದು ಸುರಕ್ಷಿತವಾಗಿರುವ
  ಜಾಗದ ಚಿತ್ರವೊಂದನ್ನು ಬಿಡಿಸಲು ಕೇಳುತ್ತಾನೆ,
  ಕುಂಚ ಹಿಡಿದ ನನ್ನ ಬೆರಳುಗಳು ಗಡಗಡ ನಡುಗುತ್ತವೆ
  ನಾನು ಬಿಕ್ಕುತ್ತಾ ನನ್ನ ಅಳುವಿನಲ್ಲಿ ಮುಳುಗಿಹೋಗುತ್ತೇನೆ.

  ಅರೇಬಿ ಮೂಲ: ನಿಜಾರ್ ಖಬ್ಬಾನಿ
  ಕನ್ನಡಕ್ಕೆ: ಉದಯ್ ಇಟಗಿ
   
  ಈ ಕವನ ಕುರಿತು ‘ಅವಧಿ’ಯ ಮೆಚ್ಚುಗೆ
  ಪ್ರೀತಿಯ ಉದಯ್,
  ಮನಸ್ಸಲ್ಲೇ ನಿಂತು ಕಾಡುವಂತಹ ಕವನಕ್ಕಾಗಿ ಧನ್ಯವಾದಗಳು. ಮಕ್ಕಳ ಮುಗ್ಧತೆ ನಮ್ಮ ವಾಸ್ತವ ಪ್ರಜ್ಞೆ ಎರಡೂ ಏಟು ತಿನ್ನುವ ಕಾಲಘಟ್ಟ ಇದು
  ಕವಿತೆ ಇಂದಿನಅವಧಿಯಲ್ಲಿ ಪ್ರಕಟವಾಗಿದೆ. ಅದರ ಕೊಂಡಿ ಇಲ್ಲಿದೆ :

  ವಂದನೆಗಳು.
  ಅವಧಿಬಳಗ