Demo image Demo image Demo image Demo image Demo image Demo image Demo image Demo image

ಹೊರನಾಡ ಕನ್ನಡಿಗನ ಸಧ್ಯದ ಮನಸ್ಸು

  • ಶನಿವಾರ, ಅಕ್ಟೋಬರ್ 31, 2009
  • ಬಿಸಿಲ ಹನಿ
  • ಆತ್ಮೀಯರೆ,
    ಮೊನ್ನೆ ‘ವಿಜಯ ಕರ್ನಾಟಕ’ ದಿನಪತ್ರಿಕೆಯು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ‘ಸಾಪ್ತಾಹಿಕ ವಿಜಯ’ಕ್ಕಾಗಿ ‘ಹೊರನಾಡ ಕನ್ನಡಿಗರ ಸದ್ಯದ ಮನಸ್ಸನ್ನು’ ದಾಖಲಿಸಲು ಹೊರನಾಡ ಕನ್ನಡಿಗನಾದ ನನಗೆ ಕೆಲವು ಪ್ರಶ್ನೆಗಳನ್ನು ಕಳಿಸಿ ಅದಕ್ಕೆ ನನ್ನ ಉತ್ತರವನ್ನು ಕೇಳಿತ್ತು. ಇಲ್ಲಿರುವ ಪ್ರಶ್ನೆಗಳಿಗೆ ಸುಮಾರು ೧೦೦-೧೫೦ ಪದಗಳಿಗೆ ಮೀರದಂತೆ ಉತ್ತರಿಸಿದರೂ ಆಯಿತು ಅಥವಾ ಈ ಪ್ರಶ್ನೆಗಳ ಹೊರತಾಗಿ ನಿಮಗೆ ಹೇಳಬೇಕಾದ್ದನ್ನು ಚುರುಕಾಗಿ ಚುಟುಕಾಗಿ ಬರೆದರೂ ಆದೀತು ಎನ್ನುವ ಶರತ್‍ನ್ನು ವಿಧಿಸಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ನನ್ನ ಜ್ಞಾನದ ಮಿತಿಯಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ನಾ ಕಂಡಂತೆ, ಕೇಳಿದಂತೆ, ಅನುಭವಿಸಿದಂತೆ ನನಗನಿಸಿದ್ದನ್ನು ಪ್ರಾಮಾಣಿಕವಾಗಿ ಉತ್ತರಿಸಿದ್ದೇನೆ. ಅದನ್ನೇ ಇಲ್ಲಿ ಮತ್ತೊಮ್ಮೆ ದಾಖಲಿಸಿ ಕೊಡುತ್ತಿದ್ದೇನೆ. ಅದು ಪ್ರಕಟವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಏನೇ ಇರಲಿ ಹೊರನಾಡ ಕನ್ನಡಿಗನಾದ ನನ್ನನ್ನು ಗುರುತಿಸಿ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ‘ವಿಜಯ ಕರ್ನಾಟಕ’ದ ಸಂಪಾದಕರಿಗೆ ಹಾಗೂ ಅದರ ಸಮಸ್ತ ಸಿಬ್ಬಂದಿ ವರ್ಗಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರ ಪ್ರೀತಿಗೆ ನಾನು ಯಾವತ್ತೂ ಆಭಾರಿಯಾಗಿದ್ದೇನೆ. ಆ ಪ್ರಶ್ನೋತ್ತರ ಮಾಲಿಕೆಯನ್ನು ನಿಮ್ಮೊಂದಿಗೂ ಯಾಕೆ ಹಂಚಿಕೊಳ್ಳಬಾರದೆಂದೆನಿಸಿ ನಿಮ್ಮ ಮುಂದೆ ಸಾದರಪಡಿಸುತ್ತೇದ್ದೇನೆ. ಈ ನಿಟ್ಟಿನಲ್ಲಿ ನಿಮ್ಮನ್ನೂ ಆರೋಗ್ಯ ಪೂರ್ಣ ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ಒಪ್ಪಿಸಿಕೊಳ್ಳಿ. ನಿಮಗೂ ಹಾಗು ಉಳಿದ ಬ್ಲಾಗಿಗರಿಗೂ ರಾಜ್ಯೋತ್ಸವದ ಶುಭಾಶಯಗಳು.
    * ಕನ್ನಡ-ಕರ್ನಾಟಕಕ್ಕಾಗಿ ನೀವು ಮಾಡಿದ ಅಥವಾ ಮಾಡುತ್ತಿರುವ ಒಂದು ಅತ್ಯುತ್ತಮ ಕೆಲಸ ಯಾವುದು?
    ನಾನು ಯಾವತ್ತೂ ನನ್ನ ಕೆಲಸವನ್ನು ಅತ್ಯುತ್ತಮ ಎಂದು ಭಾವಿಸುವದಿಲ್ಲ. ಅದಕ್ಕೆ ಎರಡು ಕಾರಣಗಳಿವೆ.
    ೧) ಒಂದು ಸಾರಿ ನಾವು ಮಾಡುವ/ಮಾಡಿದ ಕೆಲಸ ಅತ್ಯುತ್ತಮವಾಗಿದೆ ಎಂದು ನಮ್ಮ ಮನಸ್ಸಿಗೆ ಬಂದುಬಿಟ್ಟರೆ ಇನ್ನೂ ಮಾಡಬೇಕಾದ ಅತ್ಯುತ್ತಮಕ್ಕಿಂತ ಅತ್ಯುತ್ತಮವಾದ ಎಷ್ಟೋ ಕೆಲಸಗಳು ಹಾಗೆ ಉಳಿದು ಬಿಡುತ್ತವೆ. ಇದರ ಜೊತೆಗೆ ಅತ್ಯುತ್ತಮವಾದ ಕೆಲಸ ಮಾಡಲು ಬೇಕಾಗುವ ಕ್ರಿಯಾಶೀಲಮನಸ್ಸು ಮತ್ತು ಸೃಜನಶೀಲತೆಗಳೆರೆಡೂ ಸತ್ತುಹೋಗುತ್ತವೆ. ನಮ್ಮೊಳಗಿನ ಈ ಕ್ರಿಯಾಶೀಲಮನಸ್ಸು ಮತ್ತು ಸೃಜನಶೀಲತೆಗಳು ಉಳಿದು ಬೆಳೆಯಬೇಕೆಂದರೆ ನಾವು ಮಾಡುವ ಕೆಲಸವನ್ನು ಯಾವತ್ತೂ ಅತ್ಯುತ್ತಮ ಎಂದು ಭಾವಿಸಿಕೊಳ್ಳಬಾರದು. ಇಲ್ಲವಾದರೆ ನಾವು ನಿಂತ ನೀರಾಗಿ ಬಿಡುತ್ತೇವೆ. ಕೆಲಸ ಮಾಡುವವರು ಯಾವಾಗಲೂ ಹರಿಯುವ ನದಿಯಂತಿರಬೇಕೇ ಹೊರತು ನಿಂತ ನೀರಂತಲ್ಲ.
    ೨) ನಾವು ಮಾಡುವ/ಮಾಡಿದ ಕೆಲಸ ಅತ್ಯುತ್ತಮವಾಗಿದೆ ಎಂದು ಅನ್ನುಕೊಳ್ಳುತ್ತಿರುವಾಗಲೇ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಎಲ್ಲೋ ಒಂದು ಕಡೆ ಅಧಮವಾಗಿಬಿಟ್ಟಿರುತ್ತದೆ. ನಿಧಾನಕ್ಕೆ ಕುಳಿತು ಅದನ್ನು ಮತ್ತೊಮ್ಮೆ ಪರಿಶೀಲಿಸಿದಾಗಲೆ ನಮಗೆ ಅದರೊಳಗಿನ ತಪ್ಪುಗಳು ಎದ್ದು ಕಾಣುವವು. ತಪ್ಪುಗಳು ಕಂಡ ಮೇಲೆ ಇನ್ನು ‘ಅತ್ಯುತ್ತಮ’ ಕೆಲಸದ ಪ್ರಶ್ನೆ ಎಲ್ಲಿಂದ ಬಂತು?
    ಆ ನಿಟ್ಟಿನಲ್ಲಿ ಕನ್ನಡ-ಕರ್ನಾಟಕಕ್ಕಾಗಿ ಬರೆಯುವದೊಂದನ್ನು ಬಿಟ್ಟು ನಾನು ಇನ್ನೂ ಏನೇನೂ ಮಾಡಿಲ್ಲವೆಂದೇ ಹೇಳಬಹುದು. ಮುಂದೆ ನನ್ನದೇ ಆದ ಕೆಲವು ಯೋಜನೆಗಳಿವೆ. ನೋಡೋಣ.
    * ಕನ್ನಡ-ಕರ್ನಾಟಕದಲ್ಲಿ ನಿಮಗೆ ಅತ್ಯಂತ ಪ್ರಿಯ ಮತ್ತು ಅಪ್ರಿಯ ಸಂಗತಿ ಯಾವುದು?
    ಕರ್ನಾಟಕದ ಪ್ರಾಂತೀಯ ಭಾಷೆಗಳು ಜಾಗತಿಕರಣದ ಹೊಡೆತಕ್ಕೆ ಸಿಕ್ಕು ನಲುಗದೆ ಇನ್ನೂ ಹಾಗೆ ತಮ್ಮ ಸೊಗಡನ್ನು ಉಳಿಸಿಕೊಂಡಿರುವದು ಹಾಗೂ ಅವು ಅದೇ ಸೊಗಡಿನೊಂದಿಗೆ T. V ಮತ್ತು ಸಿನಿಮಾ ಮಾಧ್ಯಮಗಳನ್ನು ಪ್ರವೇಶಿಸಿ ಜನಪ್ರಿಯವಾಗುತ್ತಿರುವದು ಅತ್ಯಂತ ಖುಶಿಯ ವಿಚಾರ. ಇವತ್ತು ಬಹಳಷ್ಟು ನಿರ್ದೇಶಕರು ಪ್ರಾಂತೀಯ ಭಾಷೆಗಳನ್ನು ತಿದ್ದದೆ ತೀಡದೆ ವಿಶೇಷ ಒತ್ತು ಕೊಟ್ಟು ಹಾಗ್ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ ಈ ಹಿಂದೆ ಈ ಟೀವಿ ಕನ್ನಡದಲ್ಲಿ ಬರುತ್ತಿದ್ದ “ಮೂಡಲ ಮನೆ” ಧಾರಾವಾಹಿ ಭಾಷಾ ದೃಷ್ಟಿಯಿಂದ ಇಡಿ ಉತ್ತರ ಕರ್ನಾಟಕದ ಪ್ರಾದೇಶಿಕತೆಯನ್ನು ಕಟ್ಟಿಕೊಡುವದರ ಮೂಲಕ ಜನಮನ ಸೂರೆಗೊಂಡಿತ್ತು. ಈಗ ಬರುತ್ತಿರುವ “ಪಾರ್ವತಿ-ಪರಮೇಶ್ವರ” ಹಾಸ್ಯ ಧಾರಾವಾಹಿಯಲ್ಲಿ ಪಾತ್ರವೊಂದು (ಯಾವ ಪಾತ್ರವೆಂದು ಸರಿಯಾಗಿ ನೆನಪಿಲ್ಲ) ಮಾತನಾಡುವದು ಉತ್ತರ ಕರ್ನಾಟಕದ ಭಾಷೆಯಲ್ಲೇ. ಇತ್ತೀಚಿಗೆ ತಯಾರಾಗಿರುವ “ಮನಸಾರೆ” ಚಿತ್ರದಲ್ಲಿಯೂ ಸಹ ಉತ್ತರ ಕರ್ನಾಟಕದ ರಾಜು ತಾಳಿಕೋಟಿಯವರು ತಮ್ಮ ಟಿಪಿಕಲ್ ಶೈಲಿಯಲ್ಲಿ ಆ ಭಾಷೆಯನ್ನು ಮಾತನಾಡುವದರ ಮೂಲಕ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ. ಅಲ್ಲದೆ ಗಿರೀಶ್ ಕಾಸರವಳ್ಳಿಯವರು ಸಹ ತಮ್ಮ ಇತ್ತೀಚಿನ ಸಿನಿಮಾ “ಗುಲಾಬಿ ಟಾಕೀಸ್”ನಲ್ಲಿ ಮಂಗಳೂರಿನ ಬ್ಯಾರೆ ಭಾಷೆಯನ್ನು ಅದಿರುವಂತೆಯೇ ಅಳವಡಿಸಿಕೊಂಡಿರುವದು ಶ್ಲಾಘನೀಯ.
    ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುವಂಥ ಪರಿಸ್ಥಿತಿ ನಿರ್ಮಾಣವಾಗಿರೋದು ಹಾಗೂ ಬಹಳಷ್ಟು ಬೆಂಗಳೂರಿನ ಕನ್ನಡಿಗರು ತಮ್ಮದೇ ನಾಡಿನ ಬೇರೆ ಪ್ರಾಂತ್ಯದವರನ್ನು ಮತ್ತು ಅವರಾಡುವ ಭಾಷೆಯನ್ನು ಕೀಳಾಗಿ ಕಂಡು ನೆರೆರಾಜ್ಯದವರೊಂದಿಗೆ ಅವರ ಭಾಷೆಯಲ್ಲೇ ಮಾತನಾಡುತ್ತಾ ಅವರೊಂದಿಗೆ ಅನ್ಯೋನ್ಯವಾಗಿರುವದು ಹೀನಾಯ ಹಾಗೂ ದುರ್ದೈವಕರ ಸಂಗತಿ. ಈ ತಾರತಮ್ಯ ಮೊದಲು ಹೋಗಬೇಕು. ಇಲ್ಲವಾದರೆ ಕರ್ನಾಟಕ ಏಕೀಕರಣಕ್ಕೆ ಏನರ್ಥ?
    * ಕನ್ನಡ-ಕರ್ನಾಟಕದ ಬಗೆಗಿನ ನಿಮ್ಮ ಒಂದು ಕನಸು?
    ಕನ್ನಡ ನಾಡಿನ ಮಕ್ಕಳೆಲ್ಲಾ ಕನ್ನಡ ಕಲಿಯುವದರ ಜೊತೆಗೆ ಇಂಗ್ಲೀಷ ಭಾಷೆಯನ್ನೂ ಕಲಿತು ಅದರ ಮೇಲೆ ಪ್ರಭುತ್ವವನ್ನು ಸಾಧಿಸಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಹೊರನಾಡಿನಲ್ಲೂ ಹಾರಿಸುವಂತಾಗಬೇಕು. ಇಂಗ್ಲೀಷ ಭಾಷೆ ಅಷ್ಟಾಗಿ ಗೊತ್ತಿರದ ಅರಬ್ ರಾಷ್ಟ್ರಗಳು ಸಹ ಇದೀಗ ಆ ಭಾಷೆಯ ಪ್ರಾಮುಖ್ಯತೆಯನ್ನು ಅರಿತು ಇಂಗ್ಲೀಷನ್ನು ಕಲಿಯಲು ವಿದ್ಯಾರ್ಥಿಗಳಿಗೆ ವಿಪುಲವಾದ ಅವಕಾಶಗಳನ್ನು ಮಾಡಿಕೊಡುತ್ತಿವೆ. ಉದಾಹರಣೆಗೆ ಈಗ್ಗೆ ಹತ್ತು ವರ್ಷಗಳಿಂದಷ್ಟೆ ಇಂಗ್ಲೀಷ ಭಾಷೆಯನ್ನು ಐಚ್ಚಿಕ ವಿಷಯವನ್ನಾಗಿ ಕಲಿಸಲು ತಿರ್ಮಾನಿಸಿದ ಲಿಬಿಯಾ ದೇಶ ಜಾಗತಿಕರಣ, ಹೊಸ ಹೊಸ ತಂತಜ್ಞಾನಗಳ ಪ್ರಭಾವದ ಹಿನ್ನೆಲೆಯಲ್ಲಿ ಇಂಗ್ಲೀಷನಲ್ಲಿ ಬಂದಿರುವ ಹೊಸ ಹೊಸ ವಿಷಯಗಳನ್ನು ಎತ್ತಿಕೊಂಡು “Internet English” ಎಂಬ ವಿಷಯವನ್ನು ಸಹ ಕಲಿಸಲು ಮುಂದಾಗಿದೆ. ಅಂದರೆ ಬೇರೆ ರಾಷ್ಟ್ರಗಳು ಇಂಗ್ಲೀಷ್ ಭಾಷಾ ಕಲಿಕೆಯಲ್ಲಿ ಹೊಸತನ್ನು ಅಳವಡಿಸಿಕೊಳ್ಳುತ್ತಿರುವಾಗ ನಾವಿನ್ನೂ “Internet English” ಇರಲಿ, ಇಂಗ್ಲೀಷ್ ಭಾಷೆಯನ್ನು ಕಲಿಸಬೇಕೇ? ಬೇಡವೆ? ಎನ್ನುವ ಚರ್ಚೆ ಜಿಜ್ಞಾಸೆಗಳಲ್ಲಿಯೇ ಕಾಲ ಕಳೆಯುತ್ತಿದ್ದೇವೆ. ಈ ಮನೋಭಾವನೆ ಹೋಗಿ ಎಲ್ಲರೂ ಇಂಗ್ಲೀಷ್ ಕಲಿಯುವಂತಾಗಬೇಕು. ಅದು ಇಂದಿನ ತಂತ್ರಜ್ಞಾನ ಮತ್ತು ಜಾಗತಿಕರಣ ಪ್ರಭಾವದ ಹಿನ್ನೆಲೆಯಲ್ಲಿ ಅವಶ್ಯ ಮತ್ತು ಅನಿವಾರ್ಯ.
    * ಈಗಿನ ಕನ್ನಡ ಸಾಹಿತ್ಯ-ಸಾಹಿತಿಗಳ ಬಗ್ಗೆ?
    ಈಗಿನ ಕನ್ನಡ ಸಾಹಿತ್ಯ ವಲಯದ ದೊಡ್ದ ದೊಡ್ಡ ಸಾಹಿತಿಗಳೆಲ್ಲ ಬರೆಯಲು ಸರಕಿರದೆಯೋ ಅಥವಾ ಅವರು ಮತ್ತದೇ ಹಳೆಯ ಜಾಡನ್ನು ಹಿಡಿದು ಬರೆದಿದ್ದನ್ನು ಓದುಗರು ಒಪ್ಪಿಕೊಳ್ಳಲಾರದ್ದಕ್ಕೋ ಏನೋ ಮೂಲೆಗುಂಪಾಗಿದ್ದಾರೆ. ಈಗೇನಿದ್ದರೂ ಉದಯೋನ್ಮುಖ ಬರಹಗಾರ ಬರಹಗಾರ್ತಿಯರ ಭರಾಟೆ. ಇವರೆಲ್ಲ ಬೇರೆ ಬೇರೆ ರಂಗಗಳ ಹಿನ್ನೆಲೆಯಿಂದ ಬಂದಿದ್ದರಿಂದ ಸಹಜವಾಗಿ ಇವರ ಕೃತಿಗಳಲ್ಲಿ ಹೊಸತನ ಎದ್ದು ಕಾಣುತ್ತಿದೆ. ಏಕತಾನತೆಯನ್ನು ಹೊಡೆದೋಡಿಸಿ ವೈವಿಧ್ಯತೆಯನ್ನು ಮೆರಿದಿದ್ದಾರೆ ಎಂದು ಹೇಳಬಹುದು. ಈ ನಡುವೆ ಬ್ಲಾಗ್ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಿದೆ. ಅದರಲ್ಲಿ ಯಾರಿಗೂ ಕಡಿಮೆಯಿಲ್ಲದಂತೆ ಬರೆಯುವ ಒಂದಿಷ್ಟು ಒಳ್ಳೆಯ ಬರಹಗಾರರಿದ್ದಾರೆ. ಅಂಥವರನ್ನು ಹುಡುಕಿ ತೆಗೆದು ಪ್ರೋತ್ಸಾಹಿಸುವ, ಗೌರವಿಸುವ ಕೆಲಸ ಆಗಬೇಕಿದೆ. ಅದಲ್ಲದೇ ಪ್ರತ್ಯೇಕ ಬ್ಲಾಗ್ ಸಮ್ಮೇಳನ, ಬ್ಲಾಗ್ ಅಕ್ಯಾಡೆಮಿಗಳು ಬಂದರೆ ಬ್ಲಾಗಿಗರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಮೆರೆಯಲು ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ.
    ನಮ್ಮ ಬಹಳಷ್ಟು ಸಾಹಿತಿಗಳು ಗೋಸುಂಬೆ ಜಾತಿಗೆ ಸೇರಿದವರು. ನಿಮಿಷಕ್ಕೊಂದು ಬಣ್ಣ ಬದಲಾಯಿಸುತ್ತಾ ಬರೆಯುವದೇ ಒಂದು ರೀತಿ ಬದುಕುವದೇ ಇನ್ನೊಂದು ರೀತಿಯಾಗಿ ತಮ್ಮ ನೈತಿಕ ಬಲವನ್ನು ಎಂದೋ ಕಳೆದುಕೊಂಡು ಬದುಕಿತ್ತಿದ್ದಾರೆ. ಬೇರೆಯವರಿಗೆ ಕನ್ನಡ ಕನ್ನಡ ಎಂದು ಹೇಳುತ್ತಲೇ ತಮ್ಮ ಮಕ್ಕಳು, ಮೊಮ್ಮೊಕ್ಕಳನ್ನು ಇಂಗ್ಲೀಷ ಶಾಲೆಗಳಿಗೆ ದಬ್ಬುತ್ತಿದ್ದಾರೆ. ಪ್ರಶಸ್ತಿ ಪುರಸ್ಕಾರಗಳಿಗೆ ಜಾತಿವಾದ, ಹೊಲಸು ರಾಜಕೀಯ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇಂಥವರಿಂದ ಆರೋಗ್ಯಪೂರ್ಣ ಸಮಾಜವೊಂದನ್ನು ನಿರೀಕ್ಷಿಸಲು ಸಾಧ್ಯವೇ?
    * ನೀವೀಗ ಕರ್ನಾಟಕದಲ್ಲೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?!
    ಬಹುಶಃ, ಏನೂ ಇಲ್ಲ! ನಾನಾಯಿತು ನನ್ನ ಅಧ್ಯಾಪನ ವೃತ್ತಿಯಾಯಿತೆಂದು ಸುಮ್ಮನಿರುತ್ತಿದ್ದೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ನಾನು ಕೇವಲ ನನ್ನ ಆರ್ಥಿಕ ಮಟ್ಟವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕೆಂಬುದರ ಬಗ್ಗೆ ಯೋಚಿಸಿ ಯೋಚಿಸಿ ಕಾಲ ಹರಣ ಮಾಡಿ ಆಗಾಗ ಬರೆಯುತ್ತಿರುವದನ್ನು ಸಹ ಬರೆಯುತ್ತಿರಲಿಲ್ಲವೇನೋ!
    -ಉದಯ ಇಟಗಿ

    ಪ್ರತಿಭಾ ನಂದಕುಮಾರ್

  • ಭಾನುವಾರ, ಅಕ್ಟೋಬರ್ 25, 2009
  • ಬಿಸಿಲ ಹನಿ
  • (೧)
    ‘ಮತ್ತೆ ಅದೇ ಹಳೆಯ ಕಣಿ ಕೇಳಬೇಡ
    ಬಾಲಕರಿಲ್ಲದ ಬಾಲೆ ಆಯ್ಕೆ ಹೊರತು ಅನಿವಾರ್ಯವಲ್ಲ
    ಹಾಸುಂಡು ಬೀಸಿ ಒಗೆದ ಬಾಳು ನನ್ನದಲ್ಲ ನಿನ್ನದು
    ಗಾಣಕ್ಕೆ ಬಾಡಿಗೆ ಎತ್ತು ನಾನಂತೂ ಆಗುವುದಿಲ್ಲ’
    (೨)
    ‘ಎರಡು ವಿಷಯ ಹೇಳುತ್ತೇನೆ
    ಗಂಟು ಹಾಕಿ ನೆನಪಿಟ್ಟುಕೊಳ್ಳಿ
    ನನ್ನ ಶವ ಯಾತ್ರೆಯಲ್ಲಿ
    ಸೂಫಿ ಗಜಲ್ ಹಾಡಿ
    ತಿಥಿಗೆ ಆ ಸಾಬಿಯನ್ನು ಕರೆಯಿರಿ
    ಆಮೇಲೆ ನೀವೆಲ್ಲಾ ಬಡಿದಾಡಿಕೊಂಡು ಸಾಯಿರಿ!’
    (೩)
    ‘ನಡುರಾತ್ರಿಯಲ್ಲಿ ಹೊರಳಿ ಕೈಚಾಚಿ ಹುಡುಕಿ
    ಸ್ನಾನದ ನಂತರ ಸೀರೆ ಉಟ್ಟು
    ಮಣಿ ಸರಕ್ಕೆ ಕೈಚಾಚಿ
    ಅದಿನ್ನೂ ಅಲ್ಲೆ ಹಾಸಿಗೆಯಲ್ಲಿ
    ದಿಂಬಿನ ಕೆಳಗಿರಬೇಕೆಂದು ತಡಕಿ
    ಬಾಗಿಲ ಬೆಲ್‌ ಸದ್ದಿಗೆ ಮರೆತು ಹೊರಟು
    ಎರಡು ಲೀಟರ್ ಹಾಲು ಕೇಳಿ ತಲೆ ಚಚ್ಚಿಕೊಂಡು
    ಯಾರು ನೆನೆಸಿಟ್ಟರು ದೋಸೆಗೆ ರುಬ್ಬಲು
    ಒಂದು ಕೇಜಿ ಅಕ್ಕಿ?
    ಅಭ್ಯಾಸ ಬಲ, ಮರೆತೇ ಹೋಗುತ್ತದೆ
    ಎಷ್ಟು ವರ್ಷವಾದವು
    ಅವನು ಮನೆ ಬಿಟ್ಟು?
    (೪)
    ಅವಳು ಕುಡಿಯಬಹುದು, ಕುಣಿಯಬಹುದು, ಕೇಳಿಯಲ್ಲಿ ಮುಳುಗಿ ತೇಲಬಹುದು
    ಹಿಡಿಯಲಾರಿರಿ ನೀವು ಅವಳನ್ನು ಪಬ್ಬುಗಳಲ್ಲಿ
    ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
    ಮಬ್ಬು ಬೆಳಕಲ್ಲಿ ಕಾಣಲಾರಿರಿ ನಿಮ್ಮ ಮಂಜುಕಣ್ಣುಗಳಲ್ಲಿ
    ಎದ್ದು ಬರುತ್ತಾಳೆ ನೂರು ನಾಲಿಗೆ ಚಾಚಿ ರಕ್ತ ಹೀರುತ್ತ

    ಹೀಗೆ ಒಮ್ಮೊಮ್ಮೆ ಅಬ್ಬರಿಸುತ್ತಾ, ಒಮ್ಮೊಮ್ಮೆ ತಮಾಷೆ ಮಾಡುತ್ತಾ. ಒಮ್ಮೊಮ್ಮೆ ಕನವರಿಸುತ್ತಾ, ಒಮ್ಮೊಮ್ಮೆ ಲೇವಡಿ ಮಾಡುತ್ತಾ ಬರೆಯುತ್ತಲೇ ಬಂದಿರುವ ಪ್ರತಿಭಾ ನಂದಕುಮಾರವರದು ಕನ್ನಡದ ಲೇಖಕಿಯರಲ್ಲಿ ಎದ್ದು ಕಾಣುವ ಹೆಸರು. ಅವರನ್ನು ಲೇಖಕಿ ಎನ್ನುವದಕ್ಕಿಂತ ಕವಯಿತ್ರಿ ಎನ್ನುವದೇ ಸೂಕ್ತ! ಏಕೆಂದರೆ ಅವರು ಕತೆ, ಕಾದಂಬರಿ, ಲೇಖನಗಳಿಗಿಂತ ಹೆಚ್ಚಾಗಿ ಬರೆದಿದ್ದು ಕಾವ್ಯವನ್ನೇ! ಅಲ್ಲದೇ ಸ್ವತಃ ಪ್ರತಿಭಾ “ನಾನು ನನ್ನನ್ನು ಲೇಖಕಿ ಎಂದು ಗುರುತಿಸಿಕೊಳ್ಳುವದಕ್ಕಿಂತ ಕವಯಿತ್ರಿ ಎಂದು ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತೇನೆ” ಎಂದು ಹೇಳುತ್ತಾರೆ.

    ‘ನಾವು ಹುಡುಗೀಯರೇ ಹೀಗೆ’ (೧೯೮೩) ಎನ್ನುವ ತಮ್ಮ ಮೊದಲ ಕವನ ಸಂಕಲನದ ಮೂಲಕ ಕನ್ನಡ ಕಾವ್ಯ ಕ್ಷೇತ್ರಕ್ಕೆ ಕಾಲಿಟ್ಟ ಪ್ರತಿಭಾ ನಂದಕುಮಾರ್ ಕನ್ನಡ ಕಾವ್ಯ ಪ್ರಪಂಚಕ್ಕೆ ಒಂದು ಹೊಸ ಆಯಾಮವನ್ನೇ ತಂದುಕೊಟ್ಟರು. ಒಂದು ಕಡೆ ತಮ್ಮ ಕವನಗಳ ಮೂಲಕ ಕನ್ನಡಿಗರನ್ನು ಬೆಚ್ಚಿಬೀಳಿಸುತ್ತಲೇ ಇನ್ನೊಂದೆಡೆ ಅವರನ್ನು ಮೆಚ್ಚಿಸಿದವರೂ ಹೌದು! ಅವರ ಯಾವದಾದರೊಂದು ಕವನವನ್ನು ಯಾರಿಗಾದರು (ಕಾವ್ಯಾಸಕ್ತರಿಗೆ) ತೋರಿಸಿ ಇದನ್ನು ಯಾರು ಬರೆದಿದ್ದು ಹೇಳಿ? ಎಂದು ಕೇಳಿದರೆ ತಟ್ಟನೆ ಪ್ರತಿಭಾ ನಂದಕುಮಾರ ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ಪ್ರತಿಭಾ ತಮ್ಮ ವಿಶಿಷ್ಟ ಪ್ರಯೋಗ ಶೈಲಿಯೊಂದಿಗೆ ತಮ್ಮ ಕವನಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
    (೧)
    ಹೌದು ಕಣೆ ಉಷಾ
    ನಾವು ಹುಡುಗಿಯರೇ ಹೀಗೆ.........
    ಏನೇನೋ ವಟಗುಟ್ಟಿದರೂ
    ಹೇಳಲೇಬೇಕಾದ್ದನ್ನು ಹೇಳದೆ
    ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
    ಜುಮ್ಮೆನ್ನಿಸುವ ಆಲೋಚನೆಗಳನೆಲ್ಲಾ
    ಹಾಗೆ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
    ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.
    ಹೇಳಲೇಬೇಕು ಎನಿಸಿದ್ದನ್ನು
    ಹೇಳಹೋಗಿ ಹೆದರೆ ಏನೇನೋ ತೊದಲುತ್ತೇವೆ
    ‘ಐ ಲವ್ ಯೂ’ ಅಂತ ಹೇಳಲು ಕಷ್ಟಪಟ್ಟು
    ಬೇರೆ ಏನೇನೊ ದಾರಿ ಹುಡುಕಿ
    ಸಂದೇಶ ಮುಟ್ಟಿಸಲು ಹೆಣಗುತ್ತೇವೆ
    ಅದನ್ನು ಅರ್ಥ ಮಾಡಿಕೊಳ್ಳಲಾರದೆ
    ಹುಡುಗರು ಕೈ ತಪ್ಪಿದಾಗ ಮುಸು ಮುಸು ಅಳುತ್ತೇವೆ
    ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ
    ನಾವೇ ದುರಂತ ನಾಯಕಿಯರೆಂದು
    ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೆವೆ
    ಗಂಡನಲ್ಲಿ ‘ಅವನನ್ನು’ ಹುಡುಕುತ್ತೇವೆ
    ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ
    ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ
    ಅರಳುವದೇ ಇಲ್ಲ ಉಷಾ.......
    (೨)
    ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
    ಕೈಗೊಂದು ಕಾಲಿಗೊಂದು ಮಕ್ಕಳಾಗಿ
    ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ ‘ಅವನು’ ಸಿಗುತ್ತಾನೆ
    ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ ಅಂತ ರೋಷ ತಾಳುತ್ತೇವೆ
    ಆದರೆ ಮೇಲೆ ನಗು ನಗುತ್ತಾ ‘ಅವನ’ ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ
    ಯಾಕೆಂದರೆ ಅವಳದೂ ಅದೇ ಕಥೆಯಲ್ಲವೆ?
    ನಾವು ಹುಡುಗಿಯರೇ ಹೀಗೆ...........

    ಹೀಗೆ ಹುಡುಗಿಯರ ಬಗ್ಗೆ ಬರೆಯುವದರ ಮೂಲಕ ಪ್ರತಿಭಾ ಎಂಬತ್ತರ ದಶಕದ ಹುಡುಗಿಯರ (ಆದರೆ ಈ ದಶಕದ ಹುಡುಗಿಯರು ಹಾಗಿಲ್ಲ ಬಿಡಿ) ಆರಾಧ್ಯ ದೇವತೆಯಾದರು. ಈ ಕವನವನ್ನು ಆ ದಶಕದ ಎಷ್ಟೋ ಹುಡುಗಿಯರು ತಮ್ಮ ಅಂತರಂಗದ ಪಿಸುಮಾತೆಂಬಂತೆ ಡೈರಿಯಲ್ಲೋ ಅಥವಾ ನೋಟ್ ಪುಸ್ತಕದ ಕೊನೆಯಲ್ಲೆಲ್ಲೋ ಬರೆದಿಟ್ಟುಕೊಂಡು ಆಗಾಗ ತಮ್ಮಷ್ಟಕ್ಕೆ ತಾವೇ ಹಾಡಿಕೊಳ್ಳುತ್ತಾ ತಮ್ಮ ಅವಸ್ಥೆಗೆ ತಾವೇ ಮರುಕಪಟ್ಟರು. ಹಾಗೆಯೇ ತಮ್ಮ ಅಂತರಂಗದ ವಿಷಾದವನ್ನು ಹಾಡಾಗಿಸಿದ್ದಕ್ಕೆ ಪ್ರತಿಭಾರವರಿಗೆ ಒಂದು ಥ್ಯಾಂಕ್ಸ್ ಕೂಡ ಹೇಳಿದ್ದರು. ಯಾರೊಂದಿಗೂ ಹಂಚಿಕೊಳ್ಳಲಾಗದೆ ಒಳಗೊಳಗೆ ಉಳಿದು ಅಳಿಯುವ ಹುಡುಗಿಯರ ಒಳತೋಟಿಯನ್ನು ಬಿಚ್ಚಿಡುತ್ತಲೆ ‘ನಾವು ಹುಡುಗಿಯರೇ ಹೀಗೆ’ ಎಂಬ ಸತ್ಯವನ್ನು ಬಹಿರಂಗಪಡಿಸುವದರ ಮೂಲಕ ಮಡಿವಂತಿಕೆಯ ಸಮಾಜದಲ್ಲೂ ಅವರ ಮೇಲೆ ಅಗಾಧ ಮರುಕವೊಂದನ್ನು ಸೃಷ್ಟಿಸಿಬಿಟ್ಟರು ಪ್ರತಿಭಾ. ಇದು ಪ್ರತಿಭಾರವರಲ್ಲಿ ಅಡಕವಾಗಿರುವ ಕಾವ್ಯ ಪ್ರತಿಭೆಗೆ ಒಂದು ಉದಾಹರಣೆಯಷ್ಟೆ! ಕವನ ಕಟ್ಟಲು ಬೇಕಾಗುವ ಜಾಣ್ಮೆ, ತಾಳ್ಮೆ ಹಾಗೂ ಶ್ರದ್ಧೆಗಳೆಲ್ಲವೂ ಅವರಲ್ಲಿ ಮೊದಲಿನಿಂದಲೂ ಮನೆಮಾಡಿವೆ. ಹಾಗೆಂದೇ ಅವರ ಕವನಗಳು ಯಾವಾಗಲೂ ಪರಿಪಕ್ವಗೊಂಡ ಕವನಗಳಂತೆ ಕಾಣುತ್ತವೆ. ಆದರೆ ಇವರಿಗೆ ಕಾವ್ಯ ಸುಲಭವಾಗಿ ಒಲಿದಂತೆ ಅನುವಾದ ಅಷ್ಟಾಗಿ ಒಲಿದಿಲ್ಲವೆಂದು ಕಾಣುತ್ತದೆ. ಅದಕ್ಕೆ ಇತ್ತೀಚಿಗೆ ‘ಕೆಂಡ ಸಂಪಿಗೆ’ಯಲ್ಲಿ ಬಂದ ಅವರ ರಸಹೀನ ಅನುವಾದಗಳೇ ಸಾಕ್ಷಿ. ಬರಿ ಪದ್ಯದ ಸಾಲು ಸಾಲುಗಳನ್ನು ತರ್ಜುಮೆ ಮಾಡುವದನ್ನು ಬಿಟ್ಟು ಪದ್ಯವನ್ನು ಇಡಿಯಾಗಿ ಅನುಭವಿಸಿ ಕನ್ನಡಕ್ಕೆ ಹತ್ತಿರವಾಗುವಂತೆ ಕನ್ನಡಿಕರಿಸಿದರೆ ಕನ್ನಡದಲ್ಲಿ ಅವರೊಬ್ಬ ಉತ್ತಮ ಅನುವಾದಕಿಯಾಗುವದರಲ್ಲಿ ಎರಡು ಮಾತಿಲ್ಲ. ಆಶ್ಚರ್ಯವೆಂದರೆ ಅವರ ಇಂಗ್ಲೀಷ ಅನುವಾದಗಳು (ತಾವೇ ಅನುವಾದಿಸಿರುವ ತಮ್ಮ ಕನ್ನಡ ಕವನಗಳ ಇಂಗ್ಲೀಷ ಅನುವಾದಗಳು) ಕನ್ನಡ ಅನುವಾದಕ್ಕಿಂತ ಉತ್ತಮವಾಗಿವೆ. She seems to be a better translator in English than in Kannada.

    ಪ್ರತಿಭಾ ಕೇವಲ ತಮ್ಮ ವೈಯಕ್ತಿಕ ಕಷ್ಟನಷ್ಟದ ಬಗ್ಗೆಯೇ ಬರೆದುಕೊಂಡವರಲ್ಲ. ಕಾಲಕಾಲಕ್ಕೆ ಸಮಕಾಲೀನ ಸಾಮಾಜಿಕ ಘಟನೆಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ; ವಿಶೇಷವಾಗಿ ಹೆಣ್ಣು ಮತ್ತು ಅವಳ ಶೋಷಣೆಯ ಸುತ್ತಮುತ್ತಲ ವಿಷಯಗಳಿಗೆ. ಅದಕ್ಕೊಂದು ಉತ್ತಮ ಉದಾಹರಣೆ ಇತ್ತೀಚಿಗೆ ಮಂಗಳೂರಿನ ಪಬ್‍ವೊಂದರಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆದಾಗ ‘ದೇವಿ’ ಎನ್ನುವ ಕವನವನ್ನು ಬರೆಯುವದರ ಮೂಲಕ ತಾವು ಪೂಜಿಸುವ ದೇವತೆಗಳೇ ಕುಡಿದು ಕುಣಿದು ಕುಪ್ಪಳಿಸುವಾಗ ಮಂಗಳೂರಿನ ಹೆಣ್ಣುಮಕ್ಕಳು ಯಾವ ಲೆಕ್ಕ ಎಂದು ಸಂಪ್ರದಾಯವಾದಿಗಳನ್ನು ಕೇಳಿ ವಸ್ತು ಸ್ಥಿತಿಯ ಲೇವಡಿ ಮಾಡಿದರು.

    ‘ಅವಳು ಕುಡಿಯಬಹುದು, ಕುಣಿಯಬಹುದು, ಕೇಳಿಯಲ್ಲಿ ಮುಳುಗಿ ತೇಲಬಹುದು
    ಹಿಡಿಯಲಾರಿರಿ ನೀವು ಅವಳನ್ನು ಪಬ್ಬುಗಳಲ್ಲಿ
    ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
    ಮಬ್ಬು ಬೆಳಕಲ್ಲಿ ಕಾಣಲಾರಿರಿ ನಿಮ್ಮ ಮಂಜುಕಣ್ಣುಗಳಲ್ಲಿ
    ಎದ್ದುಬರುತ್ತಾಳೆ ನೂರು ನಾಲಿಗೆ ಚಾಚಿ ರಕ್ತ ಹೀರುತ್ತ’

    ಇವೆಲ್ಲವುಗಳ ಮಧ್ಯ ಬಹುಶಃ ಇವತ್ತಿನ ಬಹಳಷ್ಟು ಹೆಂಗಸರು ಮುಖ ಸಿಂಡರಿಸುತ್ತಾ ಅಡಿಗೆ ಮಾಡುವದೆಂದರೆ ಅಲರ್ಜಿ ಎನ್ನುವ ಹೊತ್ತಿನಲ್ಲಿಯೇ ಪ್ರತಿಭಾ “ನನಗೆ ಅಡಿಗೆ ಮಾಡುವದೆಂದರೆ ಬಲು ಇಷ್ಟ” ಎಂದು ಹೇಳುತ್ತಾರೆ. ಅದಕ್ಕೆ ಕಾರಣವನ್ನೂ ಅವರೇ ಕೊಡುತ್ತಾರೆ ನೋಡಿ:

    ‘ಅಡುಗೆ ಮಾಡುವುದೆಂದರೆಬಹಳ ಇಷ್ಟ ನನಗೆ
    ಹೊರದಾರಿ ಅದು ನನ್ನೆಲ್ಲ ಆಕ್ರೋಶಗಳಿಗೆ
    ತೊಳೆದು ಸಿಪ್ಪೆ ಸುಲಿದು ಕತ್ತರಿಸಿ ಜಜ್ಜಿ ಕುಟ್ಟಿ
    ಹುರಿದು ಅರೆದು ರುಬ್ಬಿ ನುರಿದು ಬಾಡಿಸಿ ಬೇಯಿಸಿ
    ಕೊಟ್ಟಿ ಕಲೆಸಿ ಹಿಚುಕಿ ಮಸೆದು ಗಸಗಸನೆ ಕಡೆದು
    ಎತ್ತಿ ಹಾಕಿದರೆ ತಟ್ಟೆಗೆ ರುಚಿ ರುಚಿ ಅಂತ ತಿನ್ನುತ್ತಾರೆ’

    ಎಂದು ಬರೆದು ಪರೋಕ್ಷವಾಗಿ ತಮ್ಮ ಮೇಲೆ ದಬ್ಬಾಳಿಕೆ ನಡೆಸಿದವರ ವಿರುದ್ಧ ವ್ಯವಸ್ಥಿತವಾದ ಸೇಡೊಂದನ್ನು ತೀರಿಸಿಕೊಳ್ಳುತ್ತಾರೆ. ಬಹುಶಃ ಇದೇ ಕಾರಣಕ್ಕೇ ಇರಬೇಕು ಸಾಮಾನ್ಯವಾಗಿ ಹೆಂಗಸರು ಅಡಿಗೆ ಮಾಡುವಾಗ ಯಾಕೆ ಯಾವ ಗಂಡಸೂ ಅಡಿಗೆ ಮನೆಗೆ ಹೋಗುವದಿಲ್ಲವೆಂದು.

    ಪ್ರತಿಭಾ ಕೇವಲ ಇಂಥ ವಿಷಯಗಳಿಗೆ ಮಾತ್ರ ಅಂಟಿಕೊಳ್ಳದೆ ಬದುಕಿನ ಬೇರೆ ಬೇರೆ ಸ್ತರಗಳ ಬಗ್ಗೆಯೂ ಬರೆಯುತ್ತಾರೆ. ಪ್ರೀತಿಯ ಬಗ್ಗೆ ಮಾತನ್ನಾಡುತ್ತಾ ‘ಪ್ರೀತಿಯೊಂದೇ ನಿಶ್ಚಲ ಅದೇ ಜೀವನ ಆದರೂ ಅವರು ಕೇಳುತ್ತಾರೆ ಪುರಾವೆಗಳನ್ನ’ ಎಂದು ಆಕ್ರೋಶಪಡುತ್ತಾರೆ. ಆಧುನಿಕ ಬದುಕಿನ ಬಿಕ್ಕಟ್ಟನ್ನು ಕೆಳಗಿನ ಸಾಲುಗಳಲ್ಲಿ ಬಿಡಿಸಿಡುತ್ತಾ ಹೇಗೆ ಕಳವಳಪಡುತ್ತಾರೆ ನೋಡಿ.

    ‘ದೊಡ್ಡ ದೊಡ್ಡ ಮನೆಗಳಲ್ಲಿ
    ಚಿಕ್ಕ ಚಿಕ್ಕ ಕುಟುಂಬಗಳು
    ದೂರ ದೂರದ ಮೊಬೈಲ್‌ಗಳಲ್ಲಿ
    ಹತ್ತಿರವಾಗದ ಸಂದೇಶಗಳು
    ಊರ ತುಂಬಾ ಫಾಸ್ಟ್ ಫುಡ್‌ಗಳು
    ಚಡಪಡಿಸುವ ಸ್ಲೋ ಜೀರ್ಣಾಂಗಗಳು’

    ಇಂಥ ವಿಷಯಗಳಿಂದಲೇ ಪ್ರತಿಭಾ ಕಾವ್ಯಾಸಕ್ತರ ಕುತೂಹಲವನ್ನು ಕೆರಳಿಸುತ್ತಾರೆ ಮತ್ತು ಅವರನ್ನು ಆಕರ್ಷಿಸುವದರಲ್ಲಿ ಯಶಸ್ವಿಯಾಗುತ್ತಾರೆ.

    “ಇಂದಿನ ಕನ್ನಡ ಕಾವ್ಯದಲ್ಲಿ ಹೊಸದೇನಾದರು ಆಗುತ್ತಿದೆಯೇ?” ಎಂದು ಅವರನ್ನು ಕೇಳಿದರೆ ತಟ್ಟನೆ “ಖಂಡಿತ ಆಗುತ್ತಿದೆ. ಹಾಗೇನಾದರು ಆಗುತ್ತಿದ್ದರೆ ಅದು ಮಹಿಳೆಯರಿಂದಲೇ” ಎಂದು ಹೆಮ್ಮೆಯಿಂದ ಉತ್ತರಿಸುತ್ತಾರೆ. ಅವರ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ ಕೂಡ.

    ಪ್ರತಿಭಾ ಒಬ್ಬ ಸ್ತ್ರೀವಾದಿ ಕವಯಿತ್ರಿ. ಅದಕ್ಕೆ ಅವರ ಕೃತಿಗಳೇ ಸಾಕ್ಷಿ. ಆದರೆ ಹಾಗಂತ ಹೇಳಿದರೆ ಅವರಿಗೆ ಕೋಪ ಬರುತ್ತದೆ. ಮಹಿಳೆಯರ ಕೃತಿಗಳನ್ನು feminine, female and femininity ಅಂತೆಲ್ಲಾ ವಿಂಗಡಿಸಬೇಡಿ. ಏಕೆಂದರೆ ನಿಮಗೆ ಗಂಡಸರಿಗೆ ಹೆಂಗಸರ ಕೃತಿಗಳನ್ನು ಹೇಗೆ ಓದಬೇಕೆಂಬುದು ಗೊತ್ತಿಲ್ಲ ಎಂದು ಅವರ ಮೇಲೆ ಹರಿಹಾಯುತ್ತಾರೆ. “ಏನ್ ಮೇಡಂ ನಿಮ್ಮ ಕವನ, ಲೇಖನಗಳೆಲ್ಲ ಸ್ತ್ರೀ ಸಂವೇದನೆಗಳಿಂದ ತುಂಬಿಹೋಗಿವೆ. ಸ್ತ್ರೀವಾದದ ಹಿನ್ನೆಲೆಯಲ್ಲಿ ರಚಿತವಾಗಿವೆ. ಹೀಗಿದ್ದೂ ನಿಮ್ಮನ್ನು ಸ್ತ್ರೀವಾದಿ ಎಂದು ಕರೆಯದಿರಲು ಹೇಗೆ ಸಾಧ್ಯ?” ಎಂದು ಕೇಳಿದರೆ “ನಿಮಗೆ ಬೇಕಾದರೆ ಕರೆದುಕೊಳ್ಳಿ, ನಂಗೇನೂ ಬೇಜಾರಿಲ್ಲ. ಆದರೆ ನಮಗೆಲ್ಲಾ ಯಾವಾಗಲೂ ಒಂದೇ ‘ಇಸಂ’ (ism) ನಡಿ ಬರೆಯುವದು ಕಷ್ಟವಾಗುತ್ತದೆ. ಏಕೆಂದರೆ ದಿನದ ಕೊನೆಯಲ್ಲಿ ನಾನೂ ಒಬ್ಬ ಮನುಷ್ಯಳು ಅದಕ್ಕಿಂತ ಹೆಚ್ಚಾಗಿ ಒಂದು ಹೆಣ್ಣು” ಎಂದು ಹೇಳಿ ಪ್ರತಿಭಾ ಕೇವಲ ಬರೆಯುವದರಲ್ಲಿ ಜಾಣೆಯಲ್ಲ ಮಾತನಾಡುವದರಲ್ಲೂ ಜಾಣೆ ಎಂದು ತೋರಿಸುತ್ತಾರೆ.

    ಅದೇನೇ ಇರಲಿ ಪ್ರತಿಭಾ ಕನ್ನಡದ ಒಬ್ಬ ಅಪರೂಪದ ಕವಿಯಿತ್ರಿ ಎನ್ನುವದರಲ್ಲಿ ಎರಡು ಮಾತಿಲ್ಲ. ಅವರ ಹಾಗೆ ಕವನ ಕಟ್ಟವ, ಇದ್ದದ್ದನ್ನು ಇದ್ದಕ್ಕಿದ್ದಂತೆ ಸೀದಾ ಸೀದಾ ಹೇಳುವ ಮತ್ತೊಬ್ಬ ಕವಯಿತ್ರಿ ಕನ್ನಡದಲ್ಲಿಲ್ಲ. ಪ್ರತಿಭಾ ಹೇಳುತ್ತಾರೆ ”ಬರೆಯಬೇಕು ಆ ಒಳಗಿನಿಂದ ಗುದ್ದಿಬರುವ ಒದ್ದೆ ಹಾಡಿನ ಬಗ್ಗೆ/ಒಂಟಿ ನಿಂತರೂ ಗುಂಪೆನ್ನಿಸುವ, ಗುಂಪಿನಲ್ಲಿ ಒಂಟಿ ಎನ್ನಿಸುವ ಬಗ್ಗೆ.” ಪ್ರತಿಭಾ ತಮ್ಮ ಬದುಕಿನುದ್ದಕ್ಕೂ ಹೀಗೆ ತಮ್ಮ ಒದ್ದೆ ಹಾಡುಗಳ ಬಗ್ಗೆ ಬರೆಯುತ್ತಾ ಸಾಗಲಿ. ನಾವು ಅವನ್ನು ಓದುತ್ತಾ ಓದುತ್ತಾ ತೊಯ್ದು ಹೋಗುವಂತಾಗಲಿ.

    -ಉದಯ ಇಟಗಿ.

    ಹಚ್ಚಿಡೋಣ ಹೃದಯದಂಗಳದಲ್ಲೊಂದು ಹಣತೆಯನ್ನು

  • ಶುಕ್ರವಾರ, ಅಕ್ಟೋಬರ್ 16, 2009
  • ಬಿಸಿಲ ಹನಿ
  • ಇಂದು ದೀಪಾವಳಿ
    ಎಲ್ಲರ ಮನೆಯಂಗಳದಲ್ಲೂ
    ಬರಿ ದೀಪಗಳದೇ ಸಾಲು
    ಎಲ್ಲೆಡೆ ಝಗಮಗಿಸುವ ಬೆಳಕು!
    ಆದರೂ ಅಲ್ಲೆಲ್ಲೋ ಒಂದು ಕಡೆ ಕತ್ತಲು ಹಾಗೆ ಉಳಿದುಕೊಂಡುಬಿಟ್ಟಿದೆ
    ಎಲ್ಲಿ ಎಂದು ಎಲ್ಲ ಕಡೆ ಮತ್ತೆ ಮತ್ತೆ ಕಣ್ಣು ಹಾಯಿಸಿದೆ
    ಗೊತ್ತಾಗಲೇ ಇಲ್ಲ!
    ಸುಮ್ಮನೆ ಹುಡುಕುತ್ತಾ ಹೊರಟೆ ಬುದ್ಧನಂತೆ
    ಯಾರೋ ನಕ್ಕು ಹೇಳಿದಂತಾಯಿತು
    ಹುಚ್ಚಪ್ಪ! ಕತ್ತಲಿರುವದು ಹೊರಗಲ್ಲ ನಿನ್ನೊಳಗೆ ಎಂದು
    ಅರೆರೆ, ಹೌದಲ್ಲವೆ?
    ಒಳಗೆ ಎಷ್ಟೊಂದು ಕತ್ತಲು ಗೂಡು ಕಟ್ಟಿದೆ
    ನಾವು ಒಳಗಿನ ಕತ್ತಲನ್ನು ಒಳಗೇ ಬಚ್ಚಿಟ್ಟು
    ಹೊರಗೆ ಮಾತ್ರ ಹಣತೆಗಳನ್ನು ಹಚ್ಚಿಡುತ್ತೇವೆಲ್ಲ?
    ಇದೆಂಥ ಮೂರ್ಖತನ?
    ಬದಲಾಗಿ ಹಚ್ಚಿಡೋಣ ಹೃದಯದಂಗಳದಲ್ಲೊಂದು ಹಣತೆಯನ್ನು
    ಮಾಯವಾದೀತಾಗ ಒಳ ಹೊರಗಿನ ಕತ್ತಲಗಳೆರಡೂ!
    ಆಗ ನಿತ್ಯ ದೀಪಾವಳಿ!
    ನಿತ್ಯ ಹರುಷಾವಳಿ!

    ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

    - ಉದಯ ಇಟಗಿ

    ನಾನು ನೀನಲ್ಲ

  • ಭಾನುವಾರ, ಅಕ್ಟೋಬರ್ 11, 2009
  • ಬಿಸಿಲ ಹನಿ
  • ನಾನು ನೀನಲ್ಲ
    ಆದರೆ ನೀನು
    ನಾನು ನಾನಾಗಿರಲು
    ಸಮಯವನ್ನಾಗಲಿ ಅವಕಾಶವನ್ನಾಗಲಿ
    ಕೊಡುವದೇ ಇಲ್ಲ !

    “ನಾನು ನೀನಾಗಿದ್ದಿದ್ದರೆ”
    ನಿನಗೆ ಗೊತ್ತು
    ಅದು ಸಾಧ್ಯವಿಲ್ಲವೆಂದು!
    ಆದರೂ ನೀನು ಬಿಡುವದಿಲ್ಲ
    ನನ್ನ ನಾನು ನಾನಾಗಿರಲು

    ನೀನು ನಾನೇನೋ ಎಂಬಂತೆ
    ಆಗಾಗ ನನ್ನ ವಿಷಯಗಳಲ್ಲಿ ಅನವಶ್ಯಕವಾಗಿ
    ತಲೆಹಾಕುತ್ತಿ ಮೂಗುತೂರಿಸುತ್ತಿ
    ಅವು ನಿನ್ನವೇನೋ ಎಂಬಂತೆ!

    ನೀನೊಬ್ಬ ಮೂರ್ಖ
    ಪದೆ ಪದೆ ನಾನು
    ನೀನಾಗಿರುವಂತೆ ನಿರೀಕ್ಷಿಸುತ್ತಿ
    ನಿನ್ನ ಹಾಗೆಯೇ ನಡೆಯಬೇಕೆಂದು
    ನುಡಿಯಬೇಕೆಂದು ಬಯಸುತ್ತಿ
    ನಿನಗೆ ಹೇಗೆ ತಿಳಿಹೇಳುವದು
    ನಾನು ನೀನಲ್ಲವೆಂದು?

    ಆ ದೇವರು ನನ್ನನ್ನು ನನ್ನನ್ನಾಗಿ ಮಾಡಿದ
    ನಿನ್ನನ್ನು ನಿನ್ನನ್ನಾಗಿ ಮಾಡಿದ
    ಆ ದೇವರಿಗೋಸ್ಕರಲಾದರೂ
    ನನ್ನ ನಾನಾಗಿರಲು ಬಿಡು
    ನೀನು ನೀನಾಗಿರು!

    ಆಫ್ರಿಕನ್ ಕವಿ: ರೋಲ್ಯಾಂಡ್ ಟೊಂಬೆಕೈ ಡೆಂಪೆಸ್ಟರ್
    ಕನ್ನಡಕ್ಕೆ: ಉದಯ ಇಟಗಿ

    ಮತ್ತೆ ಮತ್ತೆ ಚುಚ್ಚಿಸಿಕೊಳ್ಳದಿರಿ ಬರಹಗಾರರೆ.......

  • ಶುಕ್ರವಾರ, ಅಕ್ಟೋಬರ್ 09, 2009
  • ಬಿಸಿಲ ಹನಿ
  • ಮೊನ್ನೆ ಉತ್ತರ ಕರ್ನಾಟಕದಲ್ಲಿ ನೆರೆ ಸಂಭವಿಸಿ ಒಂದು ವಾರವಾಗುತ್ತಾ ಬಂದರೂ ಯಾವ ಬ್ಲಾಗರೂ ನೆರೆ ಸಂತ್ರಸ್ತರಿಗೆ ನಮ್ಮ ಬ್ಲಾಗರ್ಸ್ ಸಂಘದಿಂದ ಪರಿಹಾರ ನಿಧಿಯೊಂದನ್ನು ನೀಡಿದರೆ ಹೇಗೆ ಎಂದು ಯೋಚಿಸದೇ ಇದ್ದುದಕ್ಕೆ ಬೇಸತ್ತು ಬರಹಗಾರರೇ ಹೀಗಾದರೆ ಹೇಗೆಂದು ಅವರಿಗೆ ಅದೇ ಬ್ಲಾಗರ್ಸ್ ಜಾಲತಾಣದ ಮೂಲಕ ಇದರ ಬಗ್ಗೆ ಯೋಚಿಸಿ ಎಂದು ನನ್ನ ಲೇಖನವೊಂದರ ಮೂಲಕ ಸ್ವಲ್ಪ ಖಾರವಾಗಿ ಆಗ್ರಹಿಸಿದ್ದೆ. ಇದನ್ನು ಓದಿದ ಗಂಭೀರ ಬರಹಗಾರರೊಬ್ಬರು ನನ್ನ ಇಂಥ ಮಾತುಗಳಿಂದ ಅವರಿಗೆ (ಬರಹಗಾರರಿಗೆಲ್ಲರಿಗೂ) ಇರುಸುಮುರುಸಾಗಿದೆಯೆಂದು ಹಾಗೂ ಈ ಮೂಲಕ ಬರಹಗಾರರನ್ನು ಚುಚ್ಚಿದ್ದೇನೆಂದು ನೊಂದುಕೊಂಡು ಬರಹಗಾರರದು ಬರಿ ಬರೆಯುವದಷ್ಟೆ ಕೆಲಸ ಮಿಕ್ಕೆಲ್ಲವೂ ಬೇರೆಯವರದು ಎನ್ನುವಂತೆ ಬರಹಗಾರರನ್ನು ವಹಿಸಿಕೊಂಡು ಬರೆದ ತಮ್ಮ ಲೇಖನವೊಂದರ ಮೂಲಕ ಗಂಭೀರವಾಗಿ ಆರೋಪಿಸಿದ್ದಾರೆ. ಮೊದಲಿಗೆ ನನ್ನ ಮಾತಿನಿಂದ ಅವರಿಗೆ ಇರುಸುಮುರುಸಾಗಿದ್ದರೆ ಮುಜುಗರವಾಗಿದ್ದರೆ ಅದಕ್ಕೆ ನನ್ನ ವಿಷಾದವಿದೆ ಎಂದು ಹೇಳುತ್ತಾ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಮೊದಲಿಗೆ ಇಡಿ ಉತ್ತರ ಕರ್ನಾಟಕ ನೆರೆಯಲ್ಲಿ ಕೊಚ್ಚಿಹೋಗಿರುವ ಇಂಥ ಸಂದರ್ಭದಲ್ಲೂ ಸಂತ್ರಸ್ತರಿಗೆ ಈಗಾಗಲೆ ತಮ ತಮ್ಮ ವ್ಯಯಕ್ತಿಕ ನೆಲೆಯಲ್ಲಿ ಸಹಾಯ ಮಾಡಿದ ಮೇಲೂ ಮತ್ತೆ ಬ್ಲಾಗರ್ಸ್ ಸಂಘದಿಂದ ಮಾಡಬೇಕೋ ಬೇಡವೋ? ಮಾಡಿದರೆ ಅದು ಸಂತ್ರಸ್ತರನ್ನು ತಲುಪುತ್ತದೋ ಇಲ್ಲವೋ ಎಂಬ ಚರ್ಚೆ, ಜಿಜ್ಞಾಸೆ ಮಾಡುತ್ತಾ ಕೂಡುವಂಥ ಸಮಯವೇ ಇದು? ಇಂಥ ಮೂರ್ಖತನಕ್ಕೆ ಏನು ಹೇಳಬೇಕು? ಇಂಥ ಕ್ಷುಲ್ಲಕ ವಿಷಯಗಳಿಗೇ ನಾನು ಬರಹಗಾರರನ್ನು hate ಮಾಡುವದು. ಒಂದು ವೇಳೆ ಎಲ್ಲರೂ ನಮ್ಮ ತರಾನೆ ಯೋಚಿಸಿದ್ದರೆ ಮೊನ್ನೆ ಮುಖ್ಯಮಂತ್ರಿಗಳು ಪಾದಯಾತ್ರೆ ಮೂಲಕ ದೇಣಿಗೆ ಸಂಗ್ರಹಿಸಲು ಹೊರಟಾಗ ಸಾರ್ವಜನಿಕರಿಂದ ಬರಿ ಬೆಂಗಳೂರೊಂದರಲ್ಲಿಯೇ ೩ ಕೋಟಿಯಷ್ಟು ಹಣ ಹೇಗೆ ಸಂಗ್ರಹವಾಗುತ್ತಿತ್ತು? ಸಂತ್ರಸ್ತರಿಗೆ ಸಹಾಯವಾದರೆ ಸಾಕೆಂದು ಎರೆಡೆರಡು ಬಾರಿ ಸಹಾಯ ಮಾಡಿದ ಎಷ್ಟೊ ಜನರಿದ್ದಾರೆ. ನಮ್ಮ ಬ್ಲಾಗರ್ ಶಿವು ಅವರ ಕೆಳಗೆ ಕೆಲಸ ಮಾಡುವ ಪೇಪರ್ ಬೀಟ್ ಹುಡುಗರು ಸಹ ಐದೋ ಹತ್ತೋ ರೂಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಅಂಥದುರಲ್ಲಿ ನಾವು ಬರಹಗಾರರು ಈಗಾಗಲೆ ಸಹಾಯ ಮಾಡಿದಮೇಲೂ ಐವತ್ತೋ ಅರವತ್ತೋ ನೀಡದಿರುವಷ್ಟು ಕಡುಬಡವರೆ? ಸದರಿ ಲೇಖಕರು ಒಂದೇ ಉದ್ದೇಶಕ್ಕೆ ಎರಡೆರೆಡು ಬಾರಿ ಸಹಾಯ ಮಾಡದಿರುವಷ್ಟು ಬರಹಗಾರರು ಬಡವರಿದ್ದಾರೆ ಎಂದು ಹೇಳಿದ್ದಾರೆ. ಏನ್ ಸ್ವಾಮಿ? ಇವತ್ತಿನ ಕಾಲದಲ್ಲಿ ಯಾವ ಬರಹಗಾರ ಬರಿ ಬರವಣಿಗೆಯೊಂದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾನೆ? ಎಲ್ಲ ಬರಹಗಾರರಿಗೆ ಒಂದಲ್ಲ ಒಂದು ಉದ್ಯೋಗವಿದೆ. ಅದೂ ನಮ್ಮ ಬಹಳಷ್ಟು ಬ್ಲಾಗರ್ಸ್ ಒಳ್ಳೆ ಉದ್ಯೋಗದಲ್ಲಿದ್ದುಕೊಂಡೇ ಬರವಣಿಗೆಯನ್ನು ಮುಂದುವರಿಸುತ್ತಿದ್ದಾರೆ. ಅಂಥವರಿಂದ ಇನ್ನೊಂದು ಅತಿ ಸಣ್ಣ ಸಹಾಯವನ್ನು ನಿರೀಕ್ಷಿಸುವದು ತಪ್ಪೆ? ಏಕೆಂದರೆ ಸಹಾಯ ಮಾಡುವಾಗ ಇಂತಿಷ್ಟೆ ಮಾಡಬೇಕೆಂಬ ನಿಯಮವೇನೂ ಇಲ್ಲವಲ್ಲ? ಎಲ್ಲರೂ ಅವರವರ ಶಕ್ತಾನುಸಾರ ಮಾಡುತ್ತಾರೆ. ಆದರೆ ಕಡಿಮೆಕೊಟ್ಟರೆ ಎಲ್ಲಿ ತಮ್ಮ ಘನತೆಗೆ ಕುಂದು ಬರುತ್ತದೋ ಎಂದು ಹಿಂದೆ ಮುಂದೆ ನೋಡುವವರನ್ನು ಹಿಂದೆ ತಳ್ಳಿ. ಇಂಥ ಸಮಯದಲ್ಲೂ ಚರ್ಚೆ, ಜಿಜ್ಞಾಸೆ ಮಾಡುತ್ತಾ ಕಾಲ ಕಳೆಯುವದು ಬಿಟ್ಟು ತಕ್ಷಣ ನಾವು ಅಂದರೆ so called ಬರಹಗಾರರು ಕಾರ್ಯೋನ್ಮುಖರಾಗಬೇಕಿದೆ.

    ನಾನು ನನ್ನ ಲೇಖನದಲ್ಲಿ ನಾವು ಬರಹಗಾರರು ನಮ್ಮ ಮೇಲೆ ಗುರುತರವಾದ ಜವಾಬ್ದಾರಿಯಿದೆ, ಮೇಲಾಗಿ ನಮ್ಮದೇ ಆದಂತ ಸಂಘಟನೆಯಿರುವದರಿಂದ ಆ ಮೂಲಕ ಸದಸ್ಯರೆಲ್ಲಾ ಒಟ್ಟಾಗಿ ಒಂದು ಸಣ್ಣ ಪರಿಹಾರ ನಿಧಿಯೊಂದನ್ನು ನೀಡಿದ್ದರೆ ಒಳಿತಿತ್ತು ಎಂದು ನೇರವಾಗಿ ಅಲ್ಲದಿದ್ದರೂ ಸೂಕ್ಷ್ಮವಾಗಿ ಹಾಗೂ ಪರೋಕ್ಷವಾಗಿ ಹೇಳಿದ್ದೆ. ಹಾಗಂತ ನನಗೆ ಸಂಘಟನೆಗಳ ಮೂಲಕವೇ ಸಹಾಯ ಮಾಡಬೇಕೆನ್ನುವ ಖಯಾಲಿಯಿದೆಂದಲ್ಲ. ಏಕೆಂದರೆ ಈಗಾಗಲೆ ನಾನೂ ಸಹ ವ್ಯಯಕ್ತಿಕ ನೆಲೆಯಲ್ಲಿ ಸಹಾಯ ಮಾಡಿದ್ದೇನೆ. ಅದು ಇಲ್ಲಿ ಅಪ್ರಸ್ತುತ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಎಲ್ಲರೂ ಬರಹಗಾರರು ಹೇಗೆ ಸ್ಪಂದಿಸಬಹುದು? ಎಂದು ಕಾಯುತ್ತಿರುತ್ತಾರೆ ಹಾಗೂ ನಮ್ಮದೇ ಆದಂಥ ಒಂದು ಸಂಘಟನೆಯಿರುವದರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಹೇಗೆ ನೀವು ವ್ಯಯಕ್ತಿಕ ನೆಲೆಯಿಂದ ನಿಮ್ಮ ಕಛೇರಿಗಳಿಂದ, ಸಂಸ್ಥೆಗಳಿಂದ ದಾನ ಮಾಡುತ್ತೀರೋ ಹಾಗೆಯೇ ನಮ್ಮ ಬ್ಲಾಗರ್ಸ್ ಸಂಸ್ಥೆಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿದ್ದರೆ ಒಳಿತಿತ್ತೆಂದೂ ಮೇಲಾಗಿ ಒಂದು ಸಂಘಟನೆಯಿಂದ ಅದೂ ಬರಹಗಾರರಂಥ ಸಂಘಟನೆಯಿಂದ ಮಾಡಿದ್ದರೆ ಅದಕ್ಕೆ ಒಂದು ಸಾತ್ವಿಕತೆಯಿರುವದರಿಂದ ಅದನ್ನು ಸಾಮಾನ್ಯವಾಗಿ ಯಾರೂ ದುರುಪಯೋಗ ಮಾಡಿಕೊಳ್ಳಲಾರರು ಒಂದು ವೇಳೆ ದುರುಪಯೋಗವಾದರು ಬರಹಗಾರರು ಕತ್ತಿನ ಪಟ್ಟಿ ಹಿಡಿದು ಕೇಳುತ್ತಾರೆ ಎಂಬ ಹೆದರಿಕೆಯಿಂದಾದರೂ ಅದನ್ನು ತಲುಪಿಸಬೇಕಾದ ಜಾಗಕ್ಕೆ ತಲುಪಿಸುತ್ತಾರೆ ಎಂಬ ಕಳಕಳಿಯಿಂದ ಹೇಳಿದ್ದೆ. ಆದರೆ ನನ್ನ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇಂಥ ಒಂದು ಆಗ್ರಹದ ಮೂಲಕ ನಾನು ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತೇದ್ದೇನೆಂದೂ ಅಥವಾ ನಾನೊಬ್ಬ ದೊಡ್ದ ಸಮಾಜ ಸುಧಾರಕ ಎಂಬಂತೆ ಪೋಸ್ ಕೊಡುತ್ತಿದ್ದೇನೆಂದೂ ಕೆಲವು ಜನ ತಿಳಿದುಕೊಂಡಿದ್ದಾರೆ. ಅಂಥವರಿಗೆ ನಾನೇನೂ ಮಾಡಲಾಗುವದಿಲ್ಲ.

    ಅಸಲಿಗೆ ನಾನು ನನ್ನ ಲೇಖನದಲ್ಲಿ ಬ್ಲಾಗರ್ಸ್ ಸಂಘದ ಎಲ್ಲ ಸದಸ್ಯರಿಂದ ಒಂದಿಷ್ಟು ಪರಿಹಾರ ನಿಧಿ ನೀಡಿದರೆ ಸಾಕಿತ್ತು ಎಂದಷ್ಟೆ ಹೇಳಿದ್ದೆನೆ ಹೊರತು ಅವರು ಫೀಲ್ಡಿಗಿಳಿದು ಕಾರ್ಯೋನ್ಮುಖರಾಗಬೇಕೆಂದಲ್ಲ. ಆದರೆ ಸದರಿ ಆ ಬರಹಗಾರರು ತಪ್ಪಾಗಿ ಅರ್ಥ ಮಾಡಿಕೊಂಡು ಒಬ್ಬ ಲೇಖಕನದು ಬರಿ ಬರೆಯುವದಷ್ಟೆ ಕೆಲಸ ಆತ ಎಲ್ಲ ಕೆಲಸವನ್ನು ಮಾಡಲಾರ ಹಾಗೆ ಹೀಗೆ ಎಂದೆಲ್ಲಾ ಹೇಳಿದ್ದಾರೆ. ನಾನೂ ಅವರ ಈ ಮಾತನ್ನು ಒಂದು ಹಂತದವರೆಗೆ ಒಪ್ಪುತ್ತೇನೆ. ಆದರೆ ನಾವು ಬರೆಯುವದಕ್ಕೂ ಹಾಗೂ ನಾವು ನಡೆಸುವ ಬದುಕಿಗೂ ಗಾಢ ಸಂಬಂಧವಿರುವದರಿಂದ ಬರೆದಂತೆ ಬದುಕುವದು ಗೌರವಯುತವಾಗಿರುತ್ತದೆ. ಏಕೆಂದರೆ ಎಷ್ಟೋ ಬರಹಗಾರರಲ್ಲಿ ಕೊಳಕುತನ ಮನೆ ಮಾಡಿರುವದನ್ನು ನಾನು ತುಂಬಾ ಹತ್ತಿರದಿಂದ ನೋಡಿ ಬೇಸತ್ತಿದ್ದೇನೆ ಹಾಗೂ ಅವರ ಮೇಲಿನ ಗೌರವ ಕ್ಷಣಾರ್ಧದಲ್ಲಿ ಕರಗಿಹೋಗಿದೆ. ಬರಿ ಪುಸ್ತಕ ಬರೆಯುತ್ತಾ ಹೊಲಸು ರಾಜಕಾರಣ ಮಾಡುತ್ತಾ ಒಂದು ತರಗತಿಯನ್ನೂ ಸಹ ತೆಗೆದುಕೊಳ್ಳದೆ ಸದಾ ಕಾಲೇಜಿನಿಂದ ಹೊರಗುಳಿಯುವ ಬರಹಗಾರ ಅಧ್ಯಾಪಕ ಮಿತ್ರರನ್ನು ನಾನು ನೋಡಿದ್ದೇನೆ. ಎಲ್ಲೋ ಯಾರಿಗೋ ಪ್ರಶಸ್ತಿ ಬಂದರೆ ಅವರನ್ನು ಹೀಯಾಳಿಸಿ ಮಾತನಾಡುವ ಲೇಖಕಿಯರೊಬ್ಬರೊಟ್ಟಿಗೆ ಕೆಲಸ ಮಾಡಿದ್ದೇನೆ. ಕನ್ನಡ ಕನ್ನಡ ಎಂದು ಸಾರುವ ಕನ್ನಡದ ಖ್ಯಾತ ಕವಿಯೊಬ್ಬರ ಮಗಳು ನನ್ನ ವಿದ್ಯಾರ್ಥಿನಿಯಾಗಿದ್ದು ದ್ವಿತಿಯ ಪಿ.ಯು.ಸಿ ಯಲ್ಲಿ ನಾಲ್ಕೈದು ಬಾರಿ ಕನ್ನಡ ವಿಷಯದಲ್ಲಿಯೇ ಫೇಲ್ ಆಗಿದ್ದಳಲ್ಲದೆ ಕನ್ನಡ ಅಧ್ಯಾಪಕರ ಜೊತೆಯೂ ಸಹ ಆಕೆ ಇಂಗ್ಲೀಷನಲ್ಲಿಯೇ ಮಾತನಾಡುತ್ತಿದ್ದಳು. ಹೀಗಿರುವಾಗ ಲೇಖಕರಿಗೆ, ಬರಹಗಾರರಿಗೆ ನೈತಿಕ ಬಲವಾಗಲಿ, ಹೊಣೆಯಾಗಲಿ ಇರುವದಿಲ್ಲ. ಈ ಕಾರಣಕ್ಕಾಗಿಯೇ ನಾನು ನನ್ನ ಲೇಖನದಲ್ಲಿ ಇದೇ ವಿಷಯವನ್ನು ಒತ್ತಿ ಹೇಳಿದ್ದು.

    ಯಾರು ಏನೇ ಹೇಳಲಿ ತಡವಾಗಿದೆಯಾದರೂ ಈ ಕೂಡಲೆ ಬ್ಲಾಗರ್ಸ್ ಸಂಘದಿಂದ ಸಂತ್ರಸ್ತರಿಗೆ ಒಂದಿಷ್ಟು ಸಹಾಯವಾಗಲೇಬೇಕಿದೆ ಎಂದು ನಮ್ಮ ಬ್ಲಾಗರ್ಸ್ ತಾಣದ ಸದಸ್ಯರಾದ ಮನಸ್ಸು, ಜಯಲಕ್ಷ್ಮಿ ಪಾಟೀಲ್, ದಿನಕರ, ಮುಂತಾದವರು ನನ್ನ ಬ್ಲಾಗಲ್ಲಿ ಪ್ರತಿಕ್ರಿಯಿಸುವದರ ಮೂಲಕ ನಮ್ಮ ಸಂಘದ ಅಧ್ಯಕ್ಷರಾದ ಜಿ. ಮೋಹನ್ ಅವರನ್ನು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಯೋಚಿಸುತ್ತಾರೆಂದು ಆಶಿಸುತ್ತಾ ಈ ಚರ್ಚೆಗೆ ತೆರೆ ಎಳೆಯುತ್ತಿದ್ದೇನೆ.
    -ಉದಯ್ ಇಟಗಿ

    ಏಳಿ, ಎದ್ದೇಳಿ ಬ್ಲಾಗಿಗರೇ, ನೆರೆಗೆ ಸಿಲುಕಿದವರಿಗೆ ನಿಮ್ಮ ಸಹಾಯ ಹಸ್ತವನ್ನು ಚಾಚಿರಿ!

  • ಸೋಮವಾರ, ಅಕ್ಟೋಬರ್ 05, 2009
  • ಬಿಸಿಲ ಹನಿ
  • ಥೂ, ನಮ್ಮ ಜನ್ಮಕ್ಕೊಂದಿಷ್ಟು ಬೆಂಕಿ ಹಾಕ! ನಾವು ಬರಹಗಾರರೇ ಹೀಗೆ! ಬರಿ ಬರಹದಲ್ಲಿ ಮಾತ್ರ ಮಾನವೀಯತೆ, ಪ್ರೀತಿ, ಅಂತಃಕರಣ, ಕನಿಕರದ ಬಗ್ಗೆ ಅಗಾಧವಾದದನ್ನು ಬರೆದು ಶಹಭಾಸ್ಗಿರಿ ಪಡೆಯುವ ನಾವು ನಿಜಜೀವನದಲ್ಲಿ ಇದ್ಯಾವುದಕ್ಕೂ ಸ್ಪಂದಿಸದೆ ತೆಪ್ಪಗೆ ಕುಳಿತು ಬಿಡುತ್ತೇವೆ. ಇದಕ್ಕೆ ಜ್ವಲಂತ ಸಾಕ್ಷಿ ಈಗಷ್ಟೆ ನಮ್ಮ ನಾಡಿನ ಉತ್ತರ ಕರ್ನಾಟಕದ ಭಾಗದಲ್ಲಿ ನಡೆದ ಪ್ರವಾಹದ ದುರಂತ! ಈ ದುರಂತ ಸಂಭವಿಸಿ ಒಂದು ವಾರವಾಗುತ್ತ ಬಂದರೂ ನಾವು ಬ್ಲಾಗಿಗರು ಬರಿ ನಮ್ಮ ನಮ್ಮ ಬ್ಲಾಗಗಳಲ್ಲಿ ಹೊಸ ಹೊಸ ಪೋಸ್ಟಿಂಗ್‍ಗಳನ್ನು ಪ್ರಕಟಿಸುವದರಲ್ಲಿ, ಅದನ್ನು ಸಿಂಗರಿಸುವದರಲ್ಲಿ ಮಾತ್ರ ಬಿಜಿಯಾಗಿದ್ದೇವೆ ಹೊರತು ನಮ್ಮಲ್ಲಿ ಯಾರೊಬ್ಬರೂ ನಮ್ಮದೇ ಬ್ಲಾಗರ್ಸ್ ಟೀಮ್‍ನಿಂದ ನೆರೆಯಲ್ಲಿ ಸಿಲುಕಿದ ಸಂತ್ರಸ್ತರ ನೋವಿಗೆ ಮಿಡಿಯುವದಾಗಲಿ, ಅಥವಾ ಅವರಿಗೆ ಹೇಗೆ ಸಹಾಯ ಮಾಡಬಹುದೆಂಬುದರ ಬಗ್ಗೆಯಾಗಲಿ ನಾವು ಯಾರೂ ಯೋಚಿಸುತ್ತಿಲ್ಲ. ಇಡಿ ಉತ್ತರ ಕರ್ನಾಟಕ ಜಲಪ್ರಳಯದಲ್ಲಿ ಅಕ್ಷರಶಃ ಕೊಚ್ಚಿಹೋಗಿದೆ. ಆದರೆ ನಾವು ಮಾತ್ರ ಯಾವ ರೀತಿಯೂ ಸ್ಪಂದಿಸುತ್ತಿಲ್ಲ. (ಈಗಾಗಲೇ ನೀವು ಸ್ಪಂದಿಸಿದ್ದರೆ ಸಹಾಯವನ್ನು ನೀಡಿದ್ದರೆ ನನ್ನ ಖಾರದ ಮಾತುಗಳಿಗೆ ಕ್ಷಮೆಯಿರಲಿ) ದುರಂತ ಸಂಭವಿಸಿದ ಮೇಲೆ ನಾವು ಅದರ ಮೇಲೆ ಬರಿ ಕಥೆ, ಕವನ, ಲೇಖನಗಳನ್ನು ಬರೆದುಬಿಟ್ಟರೆ ನಮ್ಮ ಜವಾಬ್ದಾರಿ ಮುಗಿಯಿತೆ? ನಾವು ಅವರಿಗೆ ಸಹಾಯ ಮಾಡಬಾರದೆ?

    ನಾನು ಕಾಯುತ್ತಲೇ ಇದ್ದೆ ಈ ಬಗ್ಗೆ ಒಬ್ಬರಾದರೂ ಮಾತನಾಡುತ್ತಾರಾ? ಎಂದು. ಕೊನೆಗೆ ಬೇಸತ್ತು ನಾನಿಲ್ಲಿ ಬರೆಯಬೇಕಾಗಿಬಂದಿದ್ದು ಅನಿವಾರ್ಯವಾಯಿತು. ಈ ಸಮಾಜದಲ್ಲಿ ಅತ್ಯಂತ ಜವಾಬ್ದಾರಿಯಿಂದಿರುವ ವ್ಯಕ್ತಿಗಳೆಂದರೆ ಲೇಖಕರು ಹಾಗೂ ಬರಹಗಾರರು. ಇದೀಗ ನಾವೇ ಹೀಗೆ ಸುಮ್ಮನೆ ಕುಳಿತುಬಿಟ್ಟರೆ ಹೇಗೆ? ಇಲ್ಲಿ ದೊಡ್ದ ದೊಡ್ದ ಬರಹಗಾರರಿದ್ದಾರೆ, ಲೇಖಕರಿದ್ದಾರೆ, ಬುದ್ಧಿಜೀವಿಗಳಿದ್ದಾರೆ ಇವರೆಲ್ಲ ಇತ್ತ ಗಮನಹರಿಸಲಾರರೆ? ಎಲ್ಲಕ್ಕಿಂತ ಹೆಚ್ಚಾಗಿ ಈಗಾಗಲೇ ನಮ್ಮದೇ ಆದಂಥ ಬ್ಲಾಗರ್ಸ್ ಟೀಮಿದೆ. ಎಲ್ಲ ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಕೊಟ್ಟರಾಯಿತು. ನಮ್ಮ ಟೀಮಿನಲ್ಲಿಯೇ ಯಾರಾದರೊಬ್ಬರು ಈ ಜವಾಬ್ದಾರಿಯನ್ನು ತೆಗೆದುಕೊಂಡು ನಮ್ಮ ಟೀಮಿನ ಅಧ್ಯಕ್ಷರಾದ ಜಿ.ಎನ್.ಮೋಹನ್ ಅವರ ಮುಂದಾಳತ್ವದಲ್ಲಿ ಎಲ್ಲ ಸದಸ್ಯರಿಂದ ಯಾಕೆ ದುಡ್ಡು ಸಂಗ್ರಹಿಸಿ ಕೊಡಬಾರದು? ನಮ್ಮ ಟೀಮಿನಲ್ಲಿ ಒಟ್ಟು ೧೭೦೦ ಸದಸ್ಯರಿದ್ದಾರೆ. ಒಬ್ಬೊಬ್ಬರೂ ೧೦೦ ರೂಪಾಯಿ ನೀಡಿದರೂ ಒಟ್ಟು ರೂ ೧,೭೦,೦೦೦ ಸಂಗ್ರಹಿಸಬಹುದು. ಅನಿವಾಸಿ ಕನ್ನಡಿಗರು, ದೊಡ್ದ ದೊಡ್ದ ಹುದ್ದೆಯಲ್ಲಿರುವವರು ಇನ್ನೂ ಹೆಚ್ಚಿಗೆ ನೀಡಬಹುದು. ಇದನ್ನು ಅವರಿವರ ಮೂಲಕ ಕೊಡುವ ಬದಲು ನಾವೇ ಒಟ್ಟಾಗಿ ಸಂಗ್ರಹಿಸಿ ನಮ್ಮ ಬ್ಲಾಗರ್ಸ್ ಟೀಮಿನಿಂದಲೇ ಕೊಟ್ಟರೆ ಒಳ್ಳೆಯದಲ್ಲವೆ? ಈಗಲೂ ತಡವಾಗಿಲ್ಲ. ಮನಸ್ಸು ಮಾಡಿದರೆ ಏನು ಬೇಕಾದರು ಮಾಡಬಲ್ಲೆವು. ಈ ಕೂಡಲೇ ಬೆಂಗಳೂರಿನಲ್ಲಿರುವ ಬ್ಲಾಗಿಗರಲ್ಲಿ ಯಾರಾದರೊಬ್ಬರು ಕಾರ್ಯಪ್ರವರ್ತರಾಗಿ ಈ ಕೆಲಸಕ್ಕೆ ಚಾಲನೆ ನೀಡಬಾರದೆ? ಅಥವಾ ಮೋಹನ್ ಅವರೇ ಎಲ್ಲರಲ್ಲಿ ಒಂದು ಮನವಿಯನ್ನು ಮಾಡಿ ದುಡ್ದು ಸಂಗ್ರಹಿಸಿ ಕೊಟ್ಟರೆ ಹೇಗೆ? ನಾವೆಲ್ಲ ಸಹೃದಯರು. ಬನ್ನಿ ನಮ್ಮ ಸಹಾಯ ಹಸ್ತವನ್ನು ನೀಡೋಣ, ಕುಸಿದ ಬದುಕನ್ನು ಮತ್ತೆ ಕಟ್ಟೋಣ. ಅವರ ಕಳೆದು ಕನಸುಗಳನ್ನು ಅವರಿಗೆ ಮತ್ತೆ ಹುಡುಕಿಕೊಡೋಣ. ಇದಕ್ಕೆ ನೀವೇನಂತೀರಿ?
    -ಉದಯ ಇಟಗಿ