Demo image Demo image Demo image Demo image Demo image Demo image Demo image Demo image

ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-3)

  • ಮಂಗಳವಾರ, ಅಕ್ಟೋಬರ್ 26, 2010
  • ಬಿಸಿಲ ಹನಿ
  • ಶೇಕ್ಷಪೀಯರ್ ತಿಕ್ಕಲಷ್ಟೇ ಅಲ್ಲ ಮಹಾನ್ ಸುಳ್ಳುಗಾರ ಕೂಡ ಆಗಿದ್ದ. ಬಾಯಿ ಬಿಟ್ಟರೆ ಸಾಕು: ಬರೀ ಸುಳ್ಳು, ಕಲ್ಪನೆ, ಭ್ರಮೆ. ನನ್ನ ಗಂಡ ಒಬ್ಬನೆ ಅಲ್ಲ: ಪ್ರಪಂಚದ ಎಲ್ಲ ಕವಿಗಳು, ಲೇಖಕರೆಲ್ಲಾ ಮಹಾನ್ ಸುಳ್ಳುಗಾರರೇ! ಹಾಗೆಂದೇ ಅವರಿಗೆ ದೊಡ್ಡ ದೊಡ್ಡ ಕೃತಿಗಳನ್ನು ರಚಿಸಲು ಸಾಧ್ಯವಾಗೋದು. ಅವೆಲ್ಲಾ ಬರೀ ಕಲ್ಪನೆ, ಭ್ರಮೆ, ಸುಳ್ಳಿನ ಕಂತೆಗಳು ಅಷ್ಟೇ. ಇನ್ನು ಈ ಜನಾನೋ ಮೊದಲೇ ಅರೆಹುಚ್ಚರು. ಕೇಳಬೇಕಲ್ಲ? ಅವನ್ನೆಲ್ಲಾ ಸತ್ಯ ಅನ್ಕೊಂಡು ಮುಗಿಬಿದ್ದು ಓದುತ್ತಾರೆ. ಓದಿ ಓದಿ ಪೂರ್ಣ ಹುಚ್ಚರಾಗುತ್ತಾರೆ. ಅವರು ಏನೋ ಬರೀತಾರೆ. ಇವರೇನೋ ಓದ್ತಾರೆ. ಓದಿದ ಮೇಲೆ ಸುಮ್ಮನಿರದೆ ಇದು ಚನ್ನಾಗಿದೆ, ಇದನ್ನೋದು ಅಂತಾ ಮತ್ತೊಬ್ಬರಿಗೆ ಹೇಳೋದು. ಅವರೂ ಹುಚ್ಚರಾಗೋದಲ್ಲದೆ ಬೇರೆದವರನ್ನೂ ಹುಚ್ಚರನ್ನಾಗಿ ಮಾಡ್ತಾರೆ! ಅದಕ್ಕೆ ನಾನ್ಯಾವತ್ತೂ ಯಾವ ಪುಸ್ತಕಾನೂ ಓದೋಕೆ ಹೋಗಲಿಲ್ಲ ಬೈಬಲ್ ಒಂದನ್ನು ಬಿಟ್ಟು! ಎಲ್ಲೀವರೆಗೂ ಓದೋರು ಇರ್ತಾರೋ ಅಲ್ಲೀವರೆಗೂ ಇವರು ಬರೀತಾನೆ ಇರ್ತಾರೆ. ಬರೆದು ಬರೆದು ಗುಡ್ಡೆ ಹಾಕ್ತಾರೆ. ಕೊನೆಗೆ ಒಂದಿಷ್ಟು ದುಡ್ಡು, ಬಹುಮಾನ ಅಂತಾ ತಗೊಳ್ತಾರೆ. ಅದು ಬಿಟ್ರೆ ಮತ್ಯಾವ ಮೂರು ಕಾಸಿನ ಪ್ರಯೋಜನಾನೂ ಇಲ್ಲ ಅವರಿಂದ! ಸುಳ್ಳುಗಾರರಿಗೆ ತಾನೆ ಈ ಜಗತ್ತಿನಲ್ಲಿ ಗೌರವ, ಮನ್ನಣೆ, ಬಹುಮಾನ ಎಲ್ಲಾ! ಇರಲಿ. ಮಿಸ್ಟರ್ ಶೇಕ್ಷಪೀಯರ್ ನನ್ನೊಂದಿಗೆ ಮಾತನಾಡುವಾಗಲೂ ಕೂಡ ಬರೀ ಸುಳ್ಳುಗಳನ್ನೇ ಹೇಳುತ್ತಿದ್ದ. ಒಮ್ಮೆ “ಭಾಳಾ ದೊಡ್ದ ಛಾನ್ಸ್ ಕಣೇ, ಸರ್ ಫ್ರಾನ್ಸಿಸ್ ಜೊತೆ ಸಮುದ್ರಯಾನ ಹೋಗಿದ್ದೆ” ಅಂದ. ಪಾಪ ಅಂಥ ಧೈರ್ಯ ಎಲ್ಲಿಂದ ಬರಬೇಕು ಅಂದುಕೊಂಡೆ. ಹನಿ ರಕ್ತ ಕಂಡರೂ ಗಡ ಗಡ ನಡುಗುವವನು ಅವನು. ಒಂದು ಸಲವಂತೂ ನಾನು ಈರುಳ್ಳಿ ಹೆಚ್ಚುವಾಗ ಕೈ ಕುಯ್ದುಕೊಂಡದ್ದು ಕಂಡು ಕುಸಿದು ಬಿದ್ದಿದ್ದ. ಇಂಥವನು ಸಮುದ್ರಯಾನ ಹೋದಾನೆ? “ಬೋಹಿಮಿಯಾದಿಂದ ನನ್ನ ಕಡಲಯಾನ ಶುರು” ಅಂದಿದ್ದ. ಬೋಹಿಮಿಯಾದಲ್ಲಿ ಕಡಲತೀರವೇ ಇರಲಿಲ್ಲ! ಅಲ್ಲಿಂದ ಟರ್ಕಿಯ ಅಲಿಪ್ಟೋ ಸೇರುತ್ತೇನೆಂದ. ಅಲ್ಲಿ ಬಂದರೇ ಇರಲಿಲ್ಲ! ಬರೀ ಸುಳ್ಳು! ವಿಲ್ಮ್ ಕೋಟ್ ಅನ್ನೋ ಊರಿಗೆ ಹೋಗಿದ್ದರೆ ಬಿಡ್ ಫೋರ್ಡ್ ಗೆ ಹೋಗಿದ್ದೆ ಅನ್ನುತ್ತಿದ್ದ. ಬಿಡ್ ಫೋರ್ಡ್ ಗೆ ಹೋಗಿದ್ದರೆ ಮತ್ತೆಲ್ಲಿಗೊ ಹೋಗಿದ್ದೆ ಅನ್ನುತ್ತಿದ್ದ. ಅವನು ಮಾತನಾಡುತ್ತಿದ್ದುದೇ ಹಾಗೆ. ಅವನು ಹೇಳುವದನ್ನೆಲ್ಲಾ ನೀವು ನಂಬಿದರೆ ಸಾಕು, ಅದೇ ಅವನಿಗೆ ಖುಷಿ!




    ಮಿಸೆಸ್ ಶೇಕ್ಷಪೀಯರ್


    ಈಗ ಮತ್ತೆ ಮೂಲಕಥೆಗೆ ಮರಳೋಣ. ಅದು ಮಿಸ್ಟರ್ ಶೇಕ್ಷಪೀಯರ್ ಬರೆಯುತ್ತಿದ್ದ ರೀತಿ. ಅವನು ಬರೆಯುತ್ತಿದ್ದುದು ಬಾತುಕೋಳಿಯ ಗರಿಯಿಂದ. ಅವನ ಪಕ್ಕದಲ್ಲಿ ಸದಾ ಒಂದು ಮಸಿ ಬಾಟಲಿ ಮತ್ತು ಒಂದಿಷ್ಟು ಖಾಲಿ ಹಾಳೆಗಳು ಇರುತ್ತಿದ್ದವು. ಇವೇ ಅವನ ಸಂಗಾತಿಗಳು. ಅವನಿಗೆ ಯಾವಾಗ ಬರೆಯುವ ಮೂಡು ಬರುತ್ತಿತ್ತೋ ಹೇಳಲಿಕ್ಕೆ ಬರುತ್ತಿರಲಿಲ್ಲ. ಮೂಡು ಬಂದ ಕೂಡಲೇ ಗರಿಯನ್ನು ಮಸಿ ಬಾಟಲಿಯಲ್ಲಿ ಅದ್ದಿ ಹಾಳೆಯ ಮೇಲಿಡುತ್ತಿದ್ದಂತೆ ಪದಗಳು ತಾವೇ ತಾವಾಗಿ ಕುಣಿಯುತ್ತಾ ಸಾಗುತ್ತಿದ್ದವು. ಅವ ಹಾಳೆಯ ಎರಡೂ ಮಗ್ಗಲಿನಲ್ಲಿ ಬರೆಯುತ್ತಿದ್ದ: ಒಂದು ಮಗ್ಗಲಿನಲ್ಲಿ ಐವತ್ತು ಸಾಲುಗಳು, ಇನ್ನೊಂದು ಮಗ್ಗಲಿನಲ್ಲಿ ಐವತ್ತು ಸಾಲುಗಳು. ಹಾಂ, ಅದು ಅವ ಹಾಗೆ ಬರೆಯುತ್ತಿದ್ದುದು ಎಷ್ಟು ಬರೆದೆನೆಂದು ಲೆಕ್ಕ ಇಡಲಿಕ್ಕೆ. ಪ್ರತಿ ಹಾಳೆಯನ್ನು ನಾಲ್ಕು ಕಾಲಂಗಳಾಗಿ ವಿಂಗಡಿಸುತ್ತಿದ್ದ. ಎಡಗಡೆ ಪಾತ್ರದ ಹೆಸರು. ಬಲಗಡೆ ರಂಗದ ಮೇಲೆ ಬರೋದನ್ನು ಹಾಗೂ ಹೋಗೋದನ್ನು ನಮೂದಿಸುತ್ತಿದ್ದ. ಸಂಭಾಷಣೆಯನ್ನು ಮಧ್ಯದಲ್ಲಿ ಬರೆಯುತ್ತಿದ್ದ. ಬರೆಯಲು ಅವನಿಗೆ ಒಂದು ನಿರ್ಧಿಷ್ಟ ಸಮಯ ಅಂತಾ ಇರಲಿಲ್ಲ. ಒಂದೊಂದು ಸಾರಿ ಮಧ್ಯರಾತ್ರಿಯವರೆಗೂ ಬರೆಯುತ್ತಿದ್ದ. ಬರೆದು ಬರೆದು ಸುಸ್ತಾಗಿ ಹಾಳೆಗಳನ್ನು ಅಲ್ಲೇ ಬಿಟ್ಟು ಹಾಗೆ ಮಲಗಿಬಿಡುತ್ತಿದ್ದ. ಇಲ್ಲವೇ ಒಂದೊಂದು ಸಾರಿ ಮಧ್ಯರಾತ್ರಿಯಲ್ಲಿ ಎದ್ದು ಬರೆಯುತ್ತಿದ್ದ. ಒಮ್ಮೊಮ್ಮೆ ನನ್ನೊಂದಿಗೆ ಮಾತಾಡುತ್ತಿದ್ದಂತೆ ಒಮ್ಮೆಲೆ ಏನೋ ಜ್ಞಾಪಿಸಿಕೊಂಡವನಂತೆ ಎದ್ದುಹೋಗಿ ಬರೆದಿಟ್ಟು ಬರುತ್ತಿದ್ದ. ಆಗೆಲ್ಲಾ ನಾನು ಸಿಡಿಮಿಡಿಗೊಂಡರೆ “ಶ್! ಬರಹ ಸೆಕ್ಸ್ ಇದ್ದಂತೆ. ಸೆಕ್ಸ್ ನ್ನು ಹೇಗೆ ಮೂಡು ಬಂದಾಗ ತೆಗೆದುಕೊಳ್ಳುತ್ತೇವೆಯೋ ಹಾಗೆ ಮೂಡು ಬಂದಾಗ ಬರೆಯುವದನ್ನು ಬರೆದುಬಿಡಬೇಕು. ಹಾಗೆಲ್ಲಾ ಅದನ್ನು ತಡೆಯಬಾರದು” ಎನ್ನುತ್ತಿದ್ದ. “ಅದಕ್ಕೆ ಅಲ್ವಾ ಮಾರಾಯ? ನಿನಗೆ ಮೂಡು ಬಂದಿತೆಂದು ತಡೆಯದೆ ನನ್ನನ್ನು ಮದುವೆಗೆ ಮೊದಲೇ ಬಸಿರು ಮಾಡಿದ್ದು” ಎಂದು ಛೇಡಿಸುತ್ತಾ ಅವನ ತಲೆಯ ಮೇಲೊಂದು ಮೊಟಕಿದ್ದೆ. ಅವನು ನಗುತ್ತಾ “ಹೇ...ಯೂ ನಾಟಿ” ಎಂದು ನನ್ನ ಕೆನ್ನೆ ಹಿಂಡಿದ್ದ. ಬರೆಯುವಾಗ ಒಮ್ಮೊಮ್ಮೆ ಅತಿ ಗಂಭೀರವಾಗಿ ಯೋಚಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಏನನ್ನೋ ಗುನುಗುನಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಬಿಟ್ಟ ಕಣ್ಣನ್ನು ಹಾಗೆ ಬಿಟ್ಟು ಎಲ್ಲೋ ನೋಡುತ್ತಾ ಕುಳಿತುಬಿಡುತ್ತಿದ್ದ. ನಾನು “ಅಯ್ಯೋ, ದೇವರೆ! ಏನಾಯಿತು ಇವನಿಗೆ?” ಎಂದು ಹತ್ತಿರ ಹೋಗಿ ಅವನ ಭುಜ ಅಲ್ಲಾಡಿಸಿದರೆ “ಶ್! ಸುಮ್ಮನಿರು. ನಾನು ನನ್ನ ಪಾತ್ರದೊಂದಿಗೆ ಸಂವಾದಕ್ಕಿಳಿದಿದ್ದೇನೆ. ಅದರ ಆಳಕ್ಕೆ ಇಳಿದು ನೋಡುತ್ತಿದ್ದೇನೆ. ಇನ್ನೇನು ಹೊಳೆದುಬಿಡುತ್ತೆ.......ಬರೆದುಬಿಡುತ್ತೇನೆ......ಸುಮ್ಮನಿರು” ಎಂದು ಬರೆದಾದ ಮೇಲೆ “ನಾನೊಬ್ಬನೇ ಅಲ್ಲ. ಬರಹಗಾರರೆಲ್ಲಾ ಹೀಗೆ ಬರೆಯೋದು.......” ಎಂದು ತನ್ನನ್ನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದ. ನಾನದಕ್ಕೆ “ಈ ಬರಹಗಾರರು ತಮ್ಮ ಪಾತ್ರಗಳೊಂದಿಗೆ ಸಂವಾದಕ್ಕಿಳಿಯೋ ಬದಲು, ಅವುಗಳಲ್ಲಿ ಇಣುಕಿ ನೋಡೋ ಬದಲು, ಒಮ್ಮೆ ತಮ್ಮೊಂದಿಗೆ ತಾವು ಸಂವಾದಕ್ಕಿಳಿಯಬಾರದೇಕೆ? ತಮ್ಮೊಳಗೆ ತಾವು ಇಣುಕಿ ನೋಡಿಕೊಳ್ಳಬಾರದೇಕೆ?” ಎಂದು ಕೇಳಿದ್ದೆ. ಅದಕ್ಕವನು ಏನೂ ಉತ್ತರಿಸಲಿಲ್ಲ!



    ಮೊದಲೇ ಹೇಳಿದಂಗೆ ನಾನ್ಯಾವತ್ತೂ ಏನನ್ನೂ ಓದಿದವಳಲ್ಲ ಬೈಬಲ್ ವೊಂದನ್ನು ಬಿಟ್ಟು. ಇನ್ನು ಇವನು ಬರೆದ ನಾಟಕಗಳನ್ನು ಹೇಗೆ ಓದಲಿ? ಒಮ್ಮೊಮ್ಮೆ ಅವನೇ “ಓದೆಂದು” ತಾನು ಬರೆದದ್ದನ್ನು ನನ್ನ ಮುಂದಿಡುತ್ತಿದ್ದ. ಇಲ್ಲವೇ ಬಲವಂತವಾಗಿ ಅವನೇ ಓದಿ ಹೇಳುತ್ತಿದ್ದ. ನಾನು “ಸಾಕು ಮಾರಾಯ, ತಲೆನೋವು” ಅಂತಿದ್ದೆ. ಹಾಗೆ ನೋಡಿದರೆ ನನಗೇನೂ ತಲೆನೋವಿರಲಿಲ್ಲ. ಆದರೆ ಇದ್ಯಾವುದು ನನ್ನ ಕಿವಿಗೆ ಬೇಡವಾಗಿರುತ್ತಿತ್ತು ಅಷ್ಟೆ. ಒಂದೊಂದು ಸಾರಿ ಅನಿಸೋದು; ನಾನು ಶೇಕ್ಷಪೀಯರನಿಗೆ ಸರಿಯಾದ ಜೋಡಿ ಅಲ್ವೇನೋ, ಸಮಾನ ಅಭಿರುಚಿಯ ಹೆಂಡತಿ ಆಗಲಿಲ್ವೇನೋ ಅಂತ. ಪಾಪ, ಶೇಕ್ಷಪೀಯರ್! I pity on him!



    ನನಗಿನ್ನೂ ಚನ್ನಾಗಿ ನೆನಪಿದೆ. ಆವತ್ತು ರಾತ್ರಿ ಊಟವಾದ ಮೇಲೆ ನಾನು ಅಡಿಗೆ ಮನೆಯಲ್ಲಿ ಸಾಮಾನುಗಳನ್ನೆಲ್ಲ ಎತ್ತಿಡುತ್ತಿದ್ದೆ. ಅವ ಪಡಸಾಲೆಯಲ್ಲಿ ತಾನು ಬರೆದ ಪ್ರಸಿದ್ಧ ಸಾನೆಟ್ ಅದೇ....“ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ? ಛೇ, ಅದು ಸಲ್ಲ. ಅದಕ್ಕಿಂತ ಸುಂದರ ನೀನು!” ಎಂದು ಗುನುಗುನಿಸುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ. ನನಗೆ ಥಟ್ಟನೆ ಇದನ್ನೆಲ್ಲೋ ಕೇಳಿದಂತಿದೆಯಲ್ಲ ಅಂತಾ ಅನಿಸಿತು. ಹಾಂ, ನೆನಪಾಯಿತು ಆವತ್ತು ಲಂಡನ್ ಸೇತುವೆಯ ಮೇಲೆ ಇದನ್ನೆ ತಾನೆ ಅವ ನನಗೆ ಹೇಳಿದ್ದು? ಅಂದರೆ....ಅಂದರೆ ಇದು ನನ್ನ ಕುರಿತು ಬರೆದಿದ್ದು. ಪರ್ವಾಗಿಲ್ವೆ! ನನ್ನ ಗಂಡ ಮಿಸ್ಟರ್ ಸ್ಮೈಲ್ ನನ್ನ ಮೇಲೂ ಒಂದು ಸಾನೆಟ್ ಬರೆದಿದ್ದಾನೆ. ಶಹಭಾಷ್! ನೋಡಿಯೇ ಬಿಡೋಣ ಹೇಗಿದೆ? ಅಂತಾ ಕುತೂಹಲಕ್ಕೆಂದು ಸುಮ್ಮನೆ ಆಲಿಸುತ್ತಾ ಹೋದೆ. ಅದರಲ್ಲಿ ಅವ ಏನೇನೋ ಹೇಳಿದ್ದ. ಆದರೆ ನಾನು ಅರ್ಥ ಮಾಡಿಕೊಂಡಿದ್ದು ಇಷ್ಟು...... ತಪ್ಪಾಗಿದ್ದರೆ ಕ್ಷಮಿಸಿ........ಏಕೆಂದರೆ ನನಗೆ ಕಾವ್ಯದ ಬಗ್ಗೆ ಏನೂ ತಿಳಿಯದು. ಹೂಂ...... ಅವ ಹೇಳಿದ್ದ: ಬೇಸಿಗೆಯ ಹಗಲಿನ ಸೌಂದರ್ಯ ಕೂಡ ಕ್ಷಣಿಕವಾದುದು..... ಏಕೆಂದರೆ ಬೇಸಿಗೆಯ ಸೂರ್ಯ ಕಣ್ಣುಮುಚ್ಚಾಲೆಯಾಡುತ್ತ ಒಮ್ಮೊಮ್ಮೆ ಹೆಚ್ಚು ಬಿಸಿಯಾಗುತ್ತಾನೆ...... ಒಮ್ಮೊಮ್ಮೆ ತಣ್ಣಗಾಗುತ್ತಾನೆ....... ಒಮ್ಮೊಮ್ಮೆ ತನ್ನ ಹೊಂಬಣ್ಣ ಕಳೆದುಕೊಂಡು ಕಳೆಗುಂದುತ್ತಾನೆ..... ಅವನಲ್ಲಿ ಏರುಪೇರು ಇರುತ್ತೆ. ಆದರೆ ನಿನ್ನ ಸೌದರ್ಯ ಹಾಗಲ್ಲ....... ಅದಕ್ಕಿಂತ ಹೆಚ್ಚಿನದು...........ಸದಾ ಒಂದೇ ತೆರನಾಗಿರುವಂಥದ್ದು.........ಶಾಶ್ವತವಾಗಿರುವಂಥದ್ದು......... ನಶ್ವರದ ವಸ್ತುಗಳಿಗೆ ನಿನ್ನ ಹೋಲಿಸುವದು ಬೇಡ.......ಹಾಗೆಂದೇ ನಿನ್ನನ್ನು ಹಾಗೂ ನಿನ್ನ ಸೌಂದರ್ಯವನ್ನು ಈ ಕವನದಲ್ಲಿ ಹಿಡಿದಿಡುತ್ತಿದ್ದೇನೆ......ಅದು ನಿನ್ನ ಸೌಂದರ್ಯದಂತೆ ಈ ಕವನವೂ ಕೂಡ ಈ ಜಗತ್ತು ಇರುವವರೆಗೂ ಶಾಶ್ವತವಾಗಿರುತ್ತದೆ......ಅಬ್ಬಾ ಏನು ವರ್ಣನೆ? ಏನು ಆ ಪದಗಳ ಜೋಡಣೆ? ಅಬ್ಬಬ್ಬಾ ಹೇಳಲಿಕ್ಕಾಗದು. ಯಾವತ್ತೂ ಯಾವ ಕವನಗಳನ್ನೂ ಓದದ ನನ್ನಂಥವಳಿಗೂ ಕೂಡ ಆ ಸಾನೆಟ್ ಇಷ್ಟವಾಯಿತೆನ್ನಿ. ಅದೇನೋ ಹೇಳ್ತಾರಲ್ಲ......ಕಚಗುಳಿ.....ಕಚಗುಳಿ......ಹಾಂ, ಅದೇ.....ಕಚಗುಳಿ ಇಟ್ಟ ಅನುಭವವಾಯಿತು ನನಗೆ ಅದನ್ನು ಓದಿದ ಮೇಲೆ. ಒಂದು ಕ್ಷಣ ನನ್ನ ಗಂಡನ ಬಗ್ಗೆ ಅಭಿಮಾನ ಮೂಡಿತು. ಆದರೆ ಮರುಕ್ಷಣ ಅನುಮಾನ ಕಾಡಿತು. ಇದು.....ಇದು ನಿಜಕ್ಕೂ ನನ್ನ ಕುರಿತು ಬರೆದಿದ್ದೆ? ಇಲ್ಲ.......ಇಲ್ಲ ಇರಲಿಕ್ಕಿಲ್ಲ......ಏಕೆಂದರೆ ನಾನು ಅವ ಹೇಳುವಷ್ಟು ಸುಂದರವಾಗಿಲ್ಲ.....ಮೇಲಾಗಿ ನಾನು ವಯಸ್ಸಿನಲ್ಲಿ ಅವನಿಗಿಂತ ಎಂಟು ವರ್ಷ ದೊಡ್ಡವಳು...... ಅವನ ಕಣ್ಣಿಗೆ ಹೇಗೆ ತಾನೆ ರೂಪವಂತೆಯಾಗಿ ಕಂಡೇನು? ಹಾಗಾದರೆ ಇನ್ಯಾರು? ಅಂದರೆ..... ಅಂದರೆ ಅವನ ಜೀವನದಲ್ಲಿ ಮತ್ತೊಂದು ಹೆಣ್ಣಿನ ಪ್ರವೇಶವಾಗಿದಿಯೆ? ಅವನದನ್ನು ನನಗೆ ಗೊತ್ತಿಲ್ಲದಂತೆ ನಿಭಾಯಿಸುತ್ತಿದ್ದಾನೆಯೇ? ಏನಾದರಾಗಲಿ ಒಮ್ಮೆ ಕೇಳಿಯೇ ಬಿಡೋಣ ಎಂದುಕೊಂಡು ಕೆಲಸ ಮುಗಿಸಿ ಅವನಿರುವಲ್ಲಿಗೆ ಬಂದೆ. ಕವಿ ಇನ್ನೂ ಅದೇ ಸಾನೆಟ್ ನ್ನು ಗುನುಗುನಿಸುತ್ತಲೇ ಇದ್ದ. ಅರೆ ಕ್ಷಣ ತಡೆದು “ಹೇಳು.... ಆವತ್ತು ಲಂಡನ್ ಸೇತುವೆಯ ಮೇಲೆ ‘ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ?’ ಎಂದು ನನ್ನ ಕೇಳಿದೆಯೆಲ್ಲ ಅದೆ ತಾನೆ ಈ ಸಾನೆಟ್? ಆದರೆ ಇದರಲ್ಲಿರುವ ಆ ‘ಬೇಸಿಗೆಯ ಹಗಲು’ ನಾನಲ್ಲ ಅಂತಾ ನನಗೆ ಚನ್ನಾಗಿ ಗೊತ್ತು. ಅದು ಇನ್ಯಾವಳನ್ನೋ ಕುರಿತು ಬರೆದಿದ್ದು. ಹೇಳು ಯಾರವಳು?” ಎಂದು ನೇರವಾಗಿ ಕೇಳಿದೆ. ಕವಿ ಕೆಮ್ಮತೊಡಗಿದ. ಗಾಳಿಯಲ್ಲಿ ತನ್ನೆರೆಡೂ ಕೈ ಬೀಸುತ್ತಾ ಏನೋ ಹೇಳಲು ಹೊರಟ. ಉಸಿರೇ ಹೊರಡುತ್ತಿಲ್ಲ. ಮುಖವೆಲ್ಲ ಕೆಂಪಾಯಿತು. ಕೊನೆಗೂ ಸಾವರಿಸಿಕೊಂಡು ನಾಚುತ್ತಾ ಉಸುರಿದ “ಅದು.......ಅದು.....‘ಅವಳ’ಲ್ಲ. ‘ಅವನು’ ”


    -ಉದಯ್ ಇಟಗಿ

    ಆಧಾರ: ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಹಾಗೂ ಇದರ ಮೇಲೆ ನಟರಾಜ್ ಹುಳಿಯಾರವರು ಬರೆದ ಒಂದು ಲೇಖನ ಮತ್ತು ಶೇಕ್ಷಪೀಯರನ ಜೀವನದಲ್ಲಿ ಹೀಗೆ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ ಲಭ್ಯವಿರುವ ಅವನ ಒಂದಿಷ್ಟು ಜೀವನ ಘಟನೆಗಳು.

    ಚಿತ್ರ ಕೃಪೆ: ಅಂತರ್ಜಾಲ

    ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-2)

  • ಗುರುವಾರ, ಅಕ್ಟೋಬರ್ 21, 2010
  • ಬಿಸಿಲ ಹನಿ

  • ಆವತ್ತು ಮಿಸ್ಟರ್ ಶೇಕ್ಷಪೀಯರ್ ಲಂಡನ್ನಿಗೆ ಹೊರಟ ದಿನ. ಅವ ಕೆಲಸ ಹುಡುಕಿ ಹೊರಟಿದ್ದ. ಇದ್ದಬಿದ್ದ ದನದ ವ್ಯಾಪಾರದಲ್ಲಿ ಇವನಪ್ಪ ಕೈ ಸುಟ್ಟುಕೊಂಡು ಬರಿಗೈ ದಾಸನಾಗಿದ್ದ. ಎರಡು ಹೊತ್ತಿನ ಊಟಕ್ಕೂ ಕಷ್ಟವಾಗಿತ್ತು. ಸಹಜವಾಗಿ ಮನೆಯ ಜವಾಬ್ದಾರಿ ನನ್ನ ಗಂಡನ ಮೇಲೂ ಬಿತ್ತು. ಸರಿ, ಲಂಡನ್ನಿಗೆ ಹೊರಟು ನಿಂತ. ಹೊರಡುವಾಗ ಕಣ್ಣ ತುಂಬ ಭರವಸೆ, ಕನಸು. ಹೋಗುವಾಗ ಹಲ್ಲು ಕಚ್ಚಿ ಹೇಳಿದ: “ಬರೆಯುತ್ತೇನೆ.” ನಾನು ಪತ್ರ ಬರೆಯುತ್ತಾನೇನೋ ಅಂದುಕೊಂಡೆ! ಆದರೆ ಅವ ಬರೆದಿದ್ದು ಮೂವತ್ತೆಂಟು ನಾಟಕಗಳನ್ನು, ನೂರಾ ಐವತ್ನಾಲ್ಕು ಸುನಿತಗಳನ್ನು ಹಾಗೂ ಎರಡು ಉದ್ದದ ಅಶ್ಲೀಲ ಪದ್ಯಗಳನ್ನು.

    ಅವನು ಹೋಗಿ ಮೂರ್ನಾಲ್ಕು ತಿಂಗಳಾದ ಮೇಲೆ ಲಂಡನ್ನಿನಲ್ಲಿ ಇವನೇನು ಕಡಿಯುತ್ತಾನೆ ನೋಡಿಕೊಂಡು ಬನ್ನಿ ಅಂತಾ ತಮ್ಮಂದಿರನ್ನು ಅಟ್ಟಿದೆ. ಅವರು ಹೋಗಿ ಬಂದು “ಕೆಲಸವಂತೂ ಇದೆ” ಅಂದರು. ಸದಾ ರಂಗಶಾಲೆಯ ಬಾಗಿಲಲ್ಲಿ ನಿಂತಿರುತ್ತಾನೆ; ಕುದರೆಗಳನ್ನು ಕಾಯುತ್ತಾನೆ ಅಂದರು. ಅದರಲ್ಲೇನು ದುಡ್ಡು ಸಿಗುತ್ತೆ ಅಂದುಕೊಂಡೆ. ಇಲ್ಲ, ದಿನೆ ದಿನೆ ಶೇಕ್ಷಪೀಯರನ ವ್ಯಾಪಾರ ಕುದುರುತ್ತಾ ಹೋಯಿತು. ಮುಂದೆ ಸ್ವಲ್ಪೇ ದಿನದಲ್ಲಿ ಅವನ ಕೈ ಕೆಳಗೆ ಹತ್ತಾರು ಜನ ಹುಡುಗರು ಕೆಲಸ ಮಾಡಲು ಶುರು ಮಾಡಿದರು!

    ಮತ್ತೆ ಊರಿಗೆ ಬರುವ ಹೊತ್ತಿಗೆ ಮಿಸ್ಟರ್ ಶೇಕ್ಷಪೀಯರ್ ಗೆ ರಂಗಶಾಲೆಯ ಒಳಕ್ಕೆ ಬಡ್ತಿ ಸಿಕ್ಕಿತ್ತು. “ನಾನೀಗ prompter’s assistant” ಅಂದ. ಅಥವಾ assistant prompter ಅಂದನೋ? ಸಧ್ಯ, ಕುದರೆ ಕಾಯುವ ಕೆಲಸಕ್ಕಿಂತ ಇದು ವಾಸಿ. “ಏನು ಕೆಲಸ ಅದು?” ಎಂದು ಕೇಳಿದೆ. “ಅದೇ.... ಸ್ಟೇಜಿನ ಹಿಂದೆ ನಿಂತು ನಟರಿಗೆ ಅವರ ಮಾತುಗಳನ್ನು ಹೇಳಿಕೊಡುವದು” ಅಂದ!

    ಇದಾಗಿ ಒಂದು ವರ್ಷಕ್ಕೆ ಅವನಿಂದ ಪತ್ರವೊಂದು ಬಂತು. ಅದರಲ್ಲಿ ಬರೀತಿದೇನಿ ಅಂದ. ಕಾಮಿಡಿ ಅಂದ. ಟ್ರ್ಯಾಜಿಡಿ ಅಂದ. ಹಿಸ್ಟರಿ ಅಂದ. ಟ್ರ್ಯಾಜಿಕ್-ಕಾಮಿಡಿ ಅಂದ. ಕಾಮಿಕ್-ಟ್ರ್ಯಾಜಿಡಿ ಅಂದ. ಇನ್ನೂ ಏನೇನೋ ಅಂದ. ಏನಾದ್ರು ಬರ್ಕೋಂಡು ಸಾಯ್ಲಿ! ಇದರಲ್ಲಾದರು ದುಡ್ಡುಗಿಡ್ಡು ಬರುತ್ತಾ? ಅಂದುಕೊಂಡೆ. ಆದರೆ ಪತ್ರದಲ್ಲಿ ಅದರ ಬಗ್ಗೆ ಪ್ರಸ್ತಾಪವೇ ಇರಲಿಲ್ಲ! ಕೊನೆಯಲ್ಲಿ ಲಂಡನ್ನಿಗೆ ಬಾ ಎಂದು ಬರೆದಿದ್ದ.

    ಒಂದು ಬೇಸಿಗೆಯ ದಿನ ನಾನು ಲಂಡನ್ನಿಗೆ ಹೋದೆ. ನನಗೇಕೋ ಮೊದಲ ನೋಟದಲ್ಲಿಯೇ ಲಂಡನ್ ಬೇಸರ ತರಿಸಿತು. ಅದರ ಥಳಕು ಬಳುಕಿನೊಳಗೆ ನೈಜತೆ ಕಳೆದುಹೋಗಿದೆ ಎನಿಸಿತು. ಸತ್ತ ನಗರದಂತೆ ಭಾಸವಾಯಿತು. ಅಲ್ಲಿ ಬೀಳುತ್ತಿದ್ದ ಹಿಮ ಹಿಮವಾಗಿರಲಿಲ್ಲ. ಬೀಸುತ್ತಿದ್ದ ತಂಗಾಳಿ ತಂಗಾಳಿಯಾಗಿರಲಿಲ್ಲ. ಅಲ್ಲಿ ಮನುಷ್ಯರಿಗಿಂತ ಅವರ ನೆರಳುಗಳೇ ಹೆಚ್ಚು ಸುಳಿದಾಡುತ್ತಿದ್ದವು. ಅವರಿಗೆ ತಲೆಯಿತ್ತೆ ಹೊರತು ಹೃದಯವಿರಲಿಲ್ಲ. ಒಟ್ಟಿನಲ್ಲಿ ಲಂಡನ್, ಲಂಡನ್ ಆಗಿ ಉಳಿದಿರಲಿಲ್ಲ. ಅದೊಂದು ಜೀವಂತ ಸ್ಮಶಾನವಾಗಿತ್ತು. ಅಲ್ಲಿ ಸತ್ತವರು ಮಾತ್ರ ಬದುಕುತ್ತಿದ್ದರು. It was all unreality London! ನನಗೆ ಲಂಡನ್ನಿಗಿಂತ ನಮ್ಮೂರೇ ಚೆಂದ ಎನಿಸಿತು!

    ಹೀಗೆ.. ಒಂದು ಸಂಜೆ ಮಿ. ಶೆಕ್ಷಪೀಯರ್ ನನ್ನ ಜಗತ್ಪ್ರಸಿದ್ಧ ಲಂಡನ್ ಸೇತುವೆಗೆ ಕರೆದೊಯ್ದ. ಕೆಳಗೆ ಥೇಮ್ಸ್ ನದಿ ಪ್ರಶಾಂತವಾಗಿ ಹರಿಯುತ್ತಿತ್ತು. ಆ ಸೇತುವೆಯ ಮೇಲೆ ನಿಂತು “ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ? (Shall I compare thee to a summer’s day?)” ಎಂದ. “ನೋ, ಥ್ಯಾಂಕ್ಸ್” ಎಂದೆ. ಆಗ ಅವನ ಮುಖ ನೋಡಬೇಕಿತ್ತು. ಒಮ್ಮೆ ಸುಮ್ಮನೆ ಮುಗುಳ್ನಕ್ಕ. ಮುಗುಳ್ನಗೆಯ ಸರದಾರ; ಮಿಸ್ಟರ್ ಶೇಕ್ಷಪೀಯರ್, ನನ್ನ ಗಂಡ. ನಾನವನನ್ನು “ಸರ್ ಸ್ಮೈಲ್” ಎಂದೇ ಕರೆಯುತ್ತಿದ್ದೆ. ಅವನು ಇನ್ಯಾವುದರಲ್ಲೂ ಹೇಳಿಕೊಳ್ಳುವಂತಿರಲಿಲ್ಲ, ಮುಗುಳ್ನಗುವುದೊಂದನ್ನು ಬಿಟ್ಟು. ಅವನು ಯಾವತ್ತೂ ದೊಡ್ಡದಾಗಿ ನಗುತ್ತಿರಲಿಲ್ಲ. ಬಾಯಿಬಿಟ್ಟರೆ ಎರಡು ಮುರುಕಲು ಕರಿಹಲ್ಲು ಯಾರಿಗಾದರೂ ಕಂಡಾವೆಂಬ ಭಯ! ಆದರೆ ಅವನ ತರಾನೇ ಯಾರಿಗಾದರೂ ಕರಿಹಲ್ಲಗಳಿದ್ದವರೊಂದಿಗೆ ನಗಲು ಯಾವ ಭಯವೂ ಇರಲಿಲ್ಲ. “ಈ ಮುರುಕಲು ಕರಿಹಲ್ಲುಗಳು ನಿನಗ್ಹೇಗೆ ಬಂದವು?” ಎಂದು ಒಮ್ಮೆ ಕೇಳಿದ್ದೆ. “ನಾನು ಚಿಕ್ಕವನಿದ್ದಾಗ ಸಕ್ಕರೆ ಮಿಠಾಯಿ ತುಂಬಾ ತಿಂತಿದ್ದೆ. ಅದಕ್ಕೆ ಹೀಗಾದವು” ಅಂದ. ಪಾಪ, ಸಿಹಿತಿನಿಸುಗಳೆಂದರೆ ಪಂಚಪ್ರಾಣ ಅವನಿಗೆ! ಬಾಯಿ ಚಪಲ, ಯಾವಾಗಲೂ ಬರಿ ಬಾದಾಮಿ ಕಜ್ಜಾಯ, ಶುಂಠಿ ಬ್ರೆಡ್ಡು, ಇಲ್ಲವೆ ಬಿಸ್ಕಿಟ್ ಗಳನ್ನೇ ತಿಂತಿದ್ದ. ಆದರೆ ಸಕ್ಕರೆ ಮೊದಲಿನಿಂದಲೂ ಅವನ ದೇಹಕ್ಕೆ ಒಗ್ಗಿಬರಲಿಲ್ಲ. ಏಕೆಂದರೆ ಅವನ ರಕ್ತದಲ್ಲಿದ್ದದ್ದು ಬರಿ ಉಪ್ಪು! ಉಪ್ಪು ಮತ್ತು ಸಕ್ಕರೆ ಹೇಗೆ ಒಂದಾದಾವು? Am I right? Yes, I am. Let me die if I lie.

    ಈ ಮೊದಲೇ ಹೇಳಿದಂಗೆ ಶೇಕ್ಷಪೀಯರ್ ಯಾವತ್ತೂ ಸೀದಾ ಸಾದಾ ಮಾತಾಡುತ್ತಿರಲಿಲ್ಲ. ಏನಾದರು ಹೇಳಬೇಕೆಂದರೆ ಸುತ್ತಿ ಬಳಸಿ ಹೇಳುತ್ತಿದ್ದ. ಅದೇನೋ ಮೆಟಫರ್-ಗಿಟಫರ್ ಅಂತಾರಲ್ಲ ಅದರಲ್ಲಿ ಹೇಳುತ್ತಿದ್ದ. ಮನೆಯಲ್ಲೂ ಅಷ್ಟೆ ಅವನು ಮಾತಾಡುತ್ತಿದ್ದೆಲ್ಲ ರೂಪಕಗಳಲ್ಲೇ! ಹುಚ್ಚುಕವಿ, ಅವನು ಬದುಕಿದ್ದೇ ರೂಪಕಗಳ ಜೊತೆ. ನನಗೋ ಒಂದೊಂದು ಸಾರಿ ಅವನೇನು ಹೇಳುತ್ತಿದ್ದಾನೆಂದು ಅರ್ಥವಾಗದೆ ರೋಸಿಹೋಗುತ್ತಿತ್ತು. ಅದೇನದು ಬಿಡಿಸಿ ಹೇಳಬಾರದೆ? ಎಂದು ರೇಗಿದರೆ ಅದು “ಮೆಟಫರ್; ಹಾಗೆಲ್ಲಾ ಬಿಡಿಸಿ ಹೇಳಬಾರದು” ಎನ್ನುತ್ತಲೇ “ಮೆಟಫರ್ ಅಂದ್ರೆ ಏನು ಗೊತ್ತಾ? ಒಂದು ವಸ್ತುವಿನ ಬಗ್ಗೆ ಹೇಳೋದು-ಇದು ಅದಲ್ಲ, ಬೇರೇನೋ ಅನ್ನೋದು! ಬಿಡಿಸಿ ಹೇಳಬೇಕೆಂದರೆ ಅವೆಲ್ಲಾ ದೊಡ್ಡ ದೊಡ್ಡ ಹೊಗಳಿಕೆಯ ಮಾತುಗಳು, ಇಲ್ಲಾ ಬೈಗುಳಗಳು ಅಷ್ಟೆ!” ಎಂದು ಎಲ್ಲವನ್ನೂ ಬಿಡಿಸಿ ಹೇಳಿದ್ದ.

    ಈ ಮೆಟಫರುಗಳ ಜೊತೆಗಿದ್ದ ತಿಕ್ಕಲು ಶೇಕ್ಷಪೀಯರ್ ಜೊತೆ ಬದುಕಿದ್ದ ನನ್ನ ಪಾಡು ಯಾರಿಗೂ ಬೇಡ. ಅವನ ಅಪ್ಪ ಜಾನ್ ಶೇಕ್ಷಪೀಯರ್ ಇನ್ನೂ ತಿಕ್ಕಲು. ಅವನು ಬದುಕಿದ್ದೇ ವೈನ್ ಬಾಟಲಿನಲ್ಲಿ. ಒಂದು ಕ್ರಿಸ್ಮಸ್ ದಿನ ಕುಡಿದು ಕಣ್ಣಿರಿಡುತ್ತಾ ನಮ್ಮನ್ನೆಲ್ಲಾ ಕೇಳಿದ: “ಈ ಕ್ರಿಸ್ಮಸ್ ಗೆ ನನಗೊಂದು ಬಿಳಿಮೋಡದ ತುಂಡು ತಂದು ಕೊಡಿ.” ಇಂಥ ಕ್ರಿಸ್ಮಸ್ ಉಡುಗೊರೆಯನ್ನು ಎಲ್ಲಿಂದ ತರುವದು ಎಂದು ನಾನು ಪಿಳಿಪಿಳಿ ಕಣ್ಣುಬಿಟ್ಟೆ. ಆದರೆ ನನ್ನ ಮಾವನ ಹೆಂಡತಿ ಮೇರಿ ಥಟ್ಟನೆದ್ದು ಹೂದೋಟಕ್ಕೆ ಹೋದಳು. ಅದೇ ಆಗ ಬಿದ್ದ ಮಂಜನ್ನು ಬೊಗಸೆ ತುಂಬ ತಂದಳು. ಮುದುಕ ಜಾನ್ ಶೇಕ್ಷಪೀಯರ್ ಅಳು ನಿಲ್ಲಿಸಿದ. ಆ ‘ಮೋಡದ ತುಂಡಿ’ಗೆ ಮುತ್ತಿಕ್ಕಿ ಮಂಜು ಕರಗುವ ಮುನ್ನ ಮಗುವಿನ ಥರ ನಿದ್ದೆ ಹೋದ. ಇಂಥ ಹುಚ್ಚನ ಮಗ ಈ ಶೇಕ್ಷಪೀಯರ್.

    ಚಿತ್ರ ಕೃಪೆ: ಅಂತರ್ಜಾಲ

    ಆಧಾರ: ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಹಾಗೂ ಇದರ ಮೇಲೆ ನಟರಾಜ್ ಹುಳಿಯಾರವರು ಬರೆದ ಒಂದು ಲೇಖನ ಮತ್ತು ಶೇಕ್ಷಪೀಯರನ ಜೀವನದಲ್ಲಿ ಹೀಗೆ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ ಲಭ್ಯವಿರುವ ಅವನ ಒಂದಿಷ್ಟು ಜೀವನ ಘಟನೆಗಳು.


    -ಉದಯ್ ಇಟಗಿ

    ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-1)

  • ಮಂಗಳವಾರ, ಅಕ್ಟೋಬರ್ 19, 2010
  • ಬಿಸಿಲ ಹನಿ
  • ನಾನು ಮಿಸೆಸ್ ಶೇಕ್ಷಪೀಯರ್! ಅದೇ..... ಈ ಜಗತ್ತು ಕಂಡ ಅತ್ಯದ್ಭುತ ನಾಟಕಕಾರ ಹಾಗೂ ಶ್ರೇಷ್ಠ ಸುನಿತ ಕವಿ ದಿ ಲೇಟ್ ಮಿಸ್ಟರ್ ವಿಲಿಯಂ ಶೇಕ್ಷಪೀಯರನ ಹೆಂಡತಿ ಮಿಸೆಸ್ ಯ್ಯಾನಿ ಹ್ಯಾಥ್ವೇ ಶೇಕ್ಷಪೀಯರ್! ನಾನಿಲ್ಲಿ ಹೇಳ ಹೊರಟಿರುವದು ನನ್ನ ಗಂಡನ ಬಗ್ಗೆ...... ಅಂದರೆ ಶೆಕ್ಷಪೀಯರನ ಬಗ್ಗೆ..... ಜೊತೆಗೆ ಒಂದಿಷ್ಟು ನನ್ನ ಬಗ್ಗೆ.....ನಮ್ಮ ಮದುವೆ ಬಗ್ಗೆ...ಸಂಸಾರದ ಬಗ್ಗೆ.....ಹಾಗೂ ನಾವಿಬ್ಬರು ಜೊತೆಗಿದ್ದಾಗ ಮತ್ತು ಜೊತೆಗಿಲ್ಲದಾಗಿನ ಕಳೆದ ವರ್ಷಗಳ ಬಗ್ಗೆ.....


    My husband.
    Sweet Mr. Shakespeare,
    The dirty devil.


    ಶೇಕ್ಷಪೀಯರನನ್ನು ಬೇರೆಯವರು ನೋಡುವದಕ್ಕೂ ಒಬ್ಬ ಹೆಂಡತಿಯಾಗಿ ನಾನು ನೋಡುವದಕ್ಕೂ ತುಂಬಾ ವ್ಯತ್ಯಾಸವಿದೆಯಲ್ಲವೆ? ಹಾಗೆಂದೇ ನಾ ಕಂಡಂತೆ ಶೇಕ್ಷಪೀಯರ್ ಹೇಗೆ ಎಂಬುದನ್ನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ. ಒಪ್ಪಿಸಿಕೊಳ್ಳಿ.......

    ನಾನು ಶೇಕ್ಷಪೀಯರನ ಊರಾದ ಸ್ಟ್ರ್ಯಾಟ್ ಫೋರ್ಡಿನಿಂದ ಕೇವಲ ಒಂದು ಮೈಲಿ ದೂರದಲ್ಲಿರುವ ಪಕ್ಕದ ಊರಿನವಳು.




    ಸ್ಯಾರ ಕೃಟ್ ಫೋರ್ಡಿ (Stratford) ನಲ್ಲಿರುವ ಶೇಕ್ಷಪೀಯರ್ ನ ಮನೆ

    ಅವನು ಮೊಲಗಳನ್ನು ಹಿಡಿಯಲೋ, ಬೇಟೆಯಾಡಲೋ, ಅಥವಾ ಹುಡುಗಿಯರನ್ನು ನೋಡಲೋ ದಿನಾಲೂ ನಮ್ಮೂರಿಗೆ ಬರುತ್ತಿದ್ದ. ಹಾಗೆ ಬಂದವನು ಒಂದು ದಿನ ನನ್ನ ನೋಡಿದ.... ನೋಡುತ್ತಲೇ ಹೋದ......ನಾನೇನೂ ಪ್ರತಿಕ್ರಿಯೆಸಲು ಹೋಗಲಿಲ್ಲ..... ಆಮೇಲೇನಾಯಿತೋ, ನೋಡಿ ಹಾಗೆ ಹೊರಟೇ ಹೋದ. ಮಾರನೆ ದಿನ ಮತ್ತೆ ಬಂದ.... ನನ್ನ ನೋಡಿ ಒಂದು ತುಂಟ ನಗೆ ಬೀರಿದ.....ಮೆಲ್ಲಗೆ ಹತ್ತಿರ ಬಂದ...... ಪರಿಚಯ ಮಾಡಿಕೊಂಡ.....ನಾಳೆ ಬರುತ್ತೇನೆ ಎಂದು ಹೇಳಿ ಹೋದ. ಹೇಳಿದಂತೆ ಮಾರನೆ ದಿವಸ ಮತ್ತೆ ಬಂದ. “ಬರುತ್ತೀಯಾ?” ಎಂದು ಕೇಳಿದ. ನಾನು “ಎಲ್ಲಿಗೆ?” ಎಂದೆ. “ಹೀಗೆ ಕಾಡಿಗೆ....” ಎಂದ. “ಅಯ್ಯಯ್ಯಪ್ಪ! ನಮ್ಮ ಅಪ್ಪ ಅಮ್ಮನಿಗೆ ಗೊತ್ತಾದ್ರೆ ಅಷ್ಟೆ. ಸುಮ್ಮನೆ ಬಿಡಲ್ಲ.” ಎಂದೆ. “ನಿಮ್ಮ ಅಪ್ಪ ಅಮ್ಮನಿಗೆ ಗೊತ್ತಾಗದಂತೆ ಕರೆದುಕೊಂಡು ಹೋಗುತ್ತೇನೆ. ಬರುತ್ತೀಯಾ?” ಅವನ ಧ್ವನಿಯಲ್ಲಿ ಕೀಟಲೆಯಿತ್ತು. ಆ ಕೀಟಲೆಗೆ ಕರಗಿದೆ. ಬೆನ್ನ ಹಿಂದೆ ಹೋದೆ. ಆವತ್ತು ಕಾಡಿನಲ್ಲಿ ಅತ್ತಿತ್ತ ಸುಮ್ಮನೆ ಅಲೆದೆವು. ಅವನು ನನಗೆ ಗೊತ್ತಿರದ ಎಷ್ಟೋ ಹಕ್ಕಿಗಳನ್ನು, ಗಿಡ, ಮರಗಳನ್ನು ಪರಿಚಯಿಸಿದ. ಮರುದಿವಸ ಮತ್ತೆ ಬಂದ...... ಬಂದಾಗ ಮುಸ್ಸಂಜೆಯಾಗಿತ್ತು. ಮತ್ತೆ ಅದೇ ಕಾಡಿಗೆ ಕರೆದುಕೊಂಡು ಹೋದ. ನನ್ನ ಒಂದು ಹುಲ್ಲು ಹಾಸಿನ ಮೇಲೆ ಕುಳಿಸಿದ..... ಹತ್ತಿರ ಬಂದ.....ಕೈ ಹಿಡಿದ......ಮೆಲ್ಲಗೆ ಮುಖಕ್ಕೆ ಮುತ್ತನಿತ್ತ.....ಉಸಿರು ಬಿಸಿಯಾಗಿತ್ತು......ಕಣ್ಣಲ್ಲಿ ಆಸೆಯಿತ್ತು.....ಹಾಗೆ ಮೆಲ್ಲಗೆ ನನ್ನ ಕೆಳಗೆ ಉರುಳಿಸಿದ......ಮೈ ಮೇಲೇರಿ ಬರತೊಡಗಿದ....ನಾನು ಸರಕ್ಕನೆ ಸರಿದುಕೊಂಡೆ......ಬೇಡ ಬೇಡವೆಂದು ಪ್ರತಿಭಟಿಸಿದೆ. ಆದರೆ ಅವ ಕೇಳಲಿಲ್ಲ.....ಅವನ ಹಿಡಿತ ಬಿಗಿಯಾಗಿತ್ತು.... ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದ....ಅವನನ್ನು ನಂಬಿದೆ....ಹಾಗೆ ಮುಂದಿನ ಹತ್ತು ನಿಮಿಷ ಅವನ ತುಟಿಗಳು ನನ್ನ ಮೈ ಮೇಲೆಲ್ಲಾ ಹರಿದಾಡಿದವು...... ನಾ ಅವನ ತೋಳುಗಳಲ್ಲಿ ಕರಗಿಹೋದೆ. ಸರಿ, ಮುಂದಿನ ತಿಂಗಳು ನಾನು ಮುಟ್ಟಾಗಲಿಲ್ಲ. ನಮ್ಮಿಬ್ಬರ ಮೊದಲ ಮಿಲನದಲ್ಲಿಯೇ ನಾನು ಗರ್ಭ ಧರಿಸಿದ್ದೆ. ವಿಷಯವನ್ನು ಅವನಿಗೆ ತಿಳಿಸಿದೆ. ಮದುವೆಗೆ ಏರ್ಪಾಡು ಮಾಡೆಂದೆ. ಮಹಾನ್ ಖಿಲಾಡಿ ಅವನು! ಮೊದಲು ಖುಶಿಪಟ್ಟ. ಕುಣಿದು ಕುಪ್ಪಳಿಸಿದ. ನಾಳೆ ಬರುತ್ತೇನೆ ಎಂದು ಹೇಳಿಹೋದ. ಆದರೆ ಆಸಾಮಿ ನಾಲ್ಕು ದಿವಸವಾದರೂ ಪತ್ತೆನೇ ಇಲ್ಲ. ಐದನೆಯ ದಿನ ಪ್ರತ್ಯಕ್ಷನಾದ. ನಾನು ‘ಮನೆಯಲ್ಲಿ ಕೇಳಿದಿಯಾ?’ ಎಂದು ಕೇಳಿದೆ. ಊಂ, ಊಹೂಂ ಎಂದೇನೂ ಬಡಬಡಿಸಿದ. ನಾನು ಹಟಬಿಡದೆ ಮತ್ತೆ ಕೇಳಿದೆ. ಮದುವೆ ಈಗಲೇ ಸಾಧ್ಯವಿಲ್ಲ ಎಂದ. ಏನೇನೋ ಸಬೂಬಗಳನ್ನು ಹೇಳಿದ. ತಪ್ಪಿಸಿಕೊಳ್ಳಲು ನೋಡಿದ. ನಾನು ಬಿಡಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮನಿಗೆ ವಿಷಯ ತಿಳಿಸಿದೆ. ಅವರು ಪಂಚಾಯಿತಿ ಕೂಡಿಸಿದರು. ಪಂಚಾಯಿತಿಯಲ್ಲಿ ಅವನು ನನ್ನ ಮದುವೆಯಾಗಲೇಬೇಕೆಂದು ತೀರ್ಮಾನ ಕೊಟ್ಟರು. ಹತ್ತಿರದ ಚರ್ಚ್ ವೊಂದರಲ್ಲಿ ಪಂಚಾಯಿತಿಯ ಸಮ್ಮುಖದಲ್ಲಿಯೇ ನಮಗಿಬ್ಬರಿಗೂ ಮದುವೆಯಾಯಿತು. ಅದಾಗಲೇ ನನಗೆ ಐದು ತಿಂಗಳು ತುಂಬಿತ್ತು. ಮದುವೆಯಾದಾಗ ನನಗೆ 26. ಅವನಿಗೆ 18. ಅಂದರೆ ವಯಸ್ಸಲ್ಲಿ ನಾನು ಅವನಿಗಿಂತ 8 ವರ್ಷ ದೊಡ್ಡವಳಾಗಿದ್ದೆ. ಅವನಿಗದು ಕಸಿವಿಸಿಯೆನಿಸಿತು. ಮುಜುಗರವೆನಿಸಿತು. ಕೀಳರೆಮೆಯಾಗಿ ಕಾಡತೊಡಗಿತು. ಹಾಗೂ ಅವನದನ್ನು ಯಾವತ್ತೂ ಮರೆಯಲಿಲ್ಲ! ನನಗೂ ಮರೆಯಲು ಬಿಡಲಿಲ್ಲ!

    ನಾನೊಮ್ಮೆ ಕೇಳಿದ್ದೆ ಅವನನ್ನು ನೇರವಾಗಿ “ನಿನಗೆ ನನ್ನ ಬಸಿರು ಮಾಡುವಾಗ ಕಾಣದ ವಯಸ್ಸು ಈಗ ಸಂಸಾರ ನಡೆಸುವಾಗ ಯಾಕೆ ಕಾಣುತ್ತಿದೆ?” ಎಂದು. ಪ್ರಶ್ನೆ ಮುಖಕ್ಕೆ ಹೊಡೆದ ಹಾಗಿತ್ತು. ಆದರವನಿಗೆ ನಾನು ಕೇಳಿದ ರೀತಿ ಇಷ್ಟವಾಗಲಿಲ್ಲ. ನಾನೇನು ಮಾಡಲಿ? ನಾನು ಹೇಳುವ ಕೇಳುವ ರೀತಿಯೇ ಹಾಗಿತ್ತು. ಕಡ್ಡಿ ಮುರಿದ ಹಾಗೆ! ನನಗೋ ನಯನಾಜೂಕಾಗಿ ಹೇಳಲು ಬರುತ್ತಲೇ ಇರಲಿಲ್ಲ. ನಾನದನ್ನು ಕಲಿಯಲೂ ಇಲ್ಲ. ಅವನಿಗದೇಕೋ ನಾನು ಹಾಗೆ ಮಾತನಾಡುವ ರೀತಿ ಇಷ್ಟವಾಗತ್ತಿರಲಿಲ್ಲ. ಅವನೋ ಏನಾದರು ಹೇಳಬೇಕೆಂದರೆ ಸುತ್ತಿ ಬಳಸಿ ಹೇಳುತ್ತಿದ್ದ. ಅದೇ ಮೆಟಫರ್-ಗಿಟಫರ್ ಅಂತಾರಲ್ಲ ಅದರಲ್ಲಿ ಹೇಳುತ್ತಿದ್ದ. ನನಗೋ ತಲೆಬುಡ ಒಂದೂ ಅರ್ಥವಾಗುತ್ತಿರಲಿಲ್ಲ. ಇರಲಿ. ಇದರ ಬಗ್ಗೆ ಆಮೇಲೆ ಹೇಳುತ್ತೇನೆ. ಬಹುಶಃ, ಇದೇ ವಿಷಯ ನಮ್ಮಿಬ್ಬರ ನಡುವೆ ಬಿರುಕು ಮೂಡಲು ಕಾರಣವಾಯಿತು ಅನಿಸುತ್ತೆ. ಅದು ಮುಂದೆ ಹಿಗ್ಗುತ್ತಲೇ ಹೋಯಿತು. ಹೀಗಾಗಿ ಅವನು ಮಾನಸಿಕವಾಗಿ ನನಗೆ ಯಾವತ್ತೂ ಹತ್ತಿರವಾಗಲೇ ಇಲ್ಲ!

    ನಾನು ಉಳ್ಳವರ ಮನೆಯಿಂದ ಬಂದವಳು. ಇವನ ಮನೆನೂ ಹಾಗೆ ಅನ್ಕೊಂಡು ಬಂದೆ. ಆದರೆ ಅದಾಗಲೇ ಇವನಪ್ಪನಿಗೆ ವ್ಯಾಪಾರದಲ್ಲಿ ನಷ್ಟವುಂಟಾಗಿ ದಿವಾಳಿ ಎದ್ದಿದ್ದ. ಜೀವನಕ್ಕೆ ಇರಲಿ ಅಂತಾ ದನದ ವ್ಯಾಪಾರವನ್ನು ಮಾತ್ರ ಇನ್ನೂ ಕೈಯಲ್ಲಿ ಹಾಗೆ ಇಟ್ಕೊಂಡಿದ್ದ. ಹೀಗಾಗಿ ಮನೆ ಮುಂದೆ ಯಾವಗಲೂ ದನಗಳ ಹಿಂಡು ಹಿಂಡು ಸಾಲು. ಅವು ಅಲ್ಲೇ ಸಗಣಿ ಹಾಕುತ್ತಿದ್ದವು. ಆ ಸಗಣಿಯೇ ಮನೆ ಮುಂದೆ ಒಂದು ಗುಡ್ದೆಯಾಗಿ ಸದಾ ಗೊಮ್ಮೆನ್ನುವ ದುರ್ನಾತ ಹರಡುತ್ತಿತ್ತು. ನನಗೋ ಇಸ್ಸಿಸ್ಸಿ....ಎಂದು ಅಸಹ್ಯವಾಗುತ್ತಿತ್ತು. ಏನು ಮಾಡೋದು? ಕಟ್ಕೊಂಡ ಮೇಲೆ ಅನುಭವಿಸಲೇ ಬೇಕಲ್ಲ? ನಾನು ಬಂದ ಹೊಸತರಲ್ಲಿ ಅಂತಾ ಕಾಣುತ್ತೆ- ಹೀಗೆ ಗುಡ್ದೆ ಹಾಕಿ ಗಬ್ಬುನಾತ ಹೊರಡಿಸಿದ್ದಕ್ಕೆ ಮುನಿಸಿಪಾಲ್ಟಿಯವರು ನನ್ನ ಮಾವನಿಗೆ ಒಂದು ಶಿಲ್ಲಾಂಗಿನಷ್ಟು ದಂಡ ಹಾಕಿದ್ದರು. ಅವತ್ತು ಎಲ್ಲರೂ ಬೇಜಾರಿನಲ್ಲಿದ್ದರು. ನಾನು ಮಾತ್ರ ಒಳಗೊಳಗೆ ಖುಶಿಪಟ್ಟಿದ್ದೆ!


    (ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಆಧಾರಿತ.)

    -ಉದಯ್ ಇಟಗಿ

    ಟಿ. ಎನ್. ಸೀತಾರಾಮ್ ಕಥೆ ಕದ್ದಿದ್ದಾರೆಯೆ?

  • ಶನಿವಾರ, ಅಕ್ಟೋಬರ್ 09, 2010
  • ಬಿಸಿಲ ಹನಿ

  • ಕನ್ನಡದ ಮಟ್ಟಿಗೆ ಕಥೆ ಕದಿಯುವದು ಹೊಸದೇನಲ್ಲ. ಕೆಲವು ಲೇಖಕರು ಇಂಗ್ಲೀಷ್ ಸಾಹಿತ್ಯದಿಂದ ನೇರವಾಗಿ ಕಾಪಿ ಹೊಡೆದು ಅದು ತಮ್ಮದೇ ಎಂಬಂತೆ ಘೋಷಿಸಿಕೊಂಡು ಬಿಡುತ್ತಾರೆ. ಇನ್ನು ಕೆಲವರು ಕಥೆಯ ಮುಖ್ಯ ತಿರುಳನ್ನು ಹಾಗೆ ಇಟ್ಟುಕೊಂಡು ಅಲ್ಪ ಸ್ವಲ್ಪ ಪಾತ್ರ ಬದಲಾವಣೆ ಹಾಗೂ ಚಿತ್ರಣದೊಂದಿಗೆ ತಮ್ಮದೇ ಸ್ವಂತದ್ದೆಂಬಂತೆ ತಮ್ಮ ಹೆಸರು ಹಾಕಿಕೊಳ್ಳುತ್ತಾರೆ. ಇದು ಹಿಂದಿನಿಂದಲೂ ನಡೆದು ಬಂದ ಸಂಗತಿ. ಕನ್ನಡದ ಕೆಲವು ಕಾಂಜಿ ಪಿಂಜಿ ಲೇಖಕರು ಇಂಗ್ಲೀಷ್ ಸಾಹಿತ್ಯವಿರಲಿ ಕನ್ನಡದ ಇತರೆ ಬರಹಗಾರರ ಕಥೆಯನ್ನೋ ಕಾದಂಬರಿಯನ್ನೋ ಕದ್ದು ಸಿಕ್ಕಿ ಬಿದ್ದಿದ್ದುಂಟು. ಅವರೆಲ್ಲ ಹೋಗಲಿ. ಕಳೆದ ವರ್ಷ ನಮ್ಮ ಹೆಸರಾಂತ ಲೇಖಕ ಜೋಗಿಯವರು ಕೂಡ ಇಂಗ್ಲೀಷ್ ಸಾಹಿತ್ಯದ ಮೊಪಾಸನ ‘ದಿ ಆರ್ಟಿಸ್ಟ್’ ಕಥೆಯನ್ನು ಕದ್ದು ಸಿಕ್ಕಿ ಬಿದ್ದಿದ್ದರು. ಅದಲ್ಲದೆ ಅವರ ‘ರಾಯಭಾಗದ ರಹಸ್ಯ ರಾತ್ರಿ’ ಕಥಾಸಂಕಲನದಲ್ಲಿನ ‘ಯಡಕುಮೇರಿಯ ಸುರಂಗದಲ್ಲಿ’ ಎಂಬ ಒಂದು ಕತೆ ಆಂಗ್ಲ ಕತೆಗಾರ ಚಾರ್ಲ್ಸ್ ಡಿಕನ್ಸ್ನ ‘ದಿ ಸಿಗ್ನಲ್ ಮ್ಯಾನ್’ ಕಥೆಯನ್ನು ಹೋಲುತ್ತದೆ.ಹಾಗೆಯೇ ಎ.ಆರ್.ಮಣಿಕಾಂತ್ ಕೆಲವು ಲೇಖನಗಳನ್ನು/ಕಥೆಗಳನ್ನು ಬಹಳಷ್ಟು ಈಮೇಲ್ ಕಥೆಗಳಿಂದ ಭಟ್ಟಿ ಇಳಿಸಿದ್ದಾರೆ. ಆದರೆ ಇವರ್ಯಾರು ಸೌಜನ್ಯಕ್ಕಾದರೂ ಮೂಲವನ್ನು ಪ್ರಸ್ತಾಪಿಸುವ ಇರಾದೆಗೆ ಹೋಗಿಲ್ಲ. ಆದರೆ ಜೋಗಿಯವರು ಮಾತ್ರ ಸಿಕ್ಕಿ ಬಿದ್ದಾಗ “ಮೊಪಾಸಾ ಕತೆಗಳನ್ನು ನಾನೂ ಓದಿದ್ದೇನೆ. ನನ್ನ ಸಂಗ್ರಹದಲ್ಲಿರುವ 189 ಕಥೆಗಳಲ್ಲಿ ಆ ಕತೆ ಇರಲಿಲ್ಲ. ಹೀಗಾಗಿ ನನಗೆ ಯಾರದ್ದೆಂದು ತಿಳಿಯಲಿಲ್ಲ. ಯಡಕುಮೇರಿಯ ಸುರಂಗದಲ್ಲಿ ಕತೆಗೂ ಸಿಗ್ನಲ್ ಮ್ಯಾನ್ ಕತೆಗೂ ಸಾಮ್ಯ ಇದೆಯೇನೋ. ನಾನು ಆ ಕತೆಯನ್ನು ಓದಿರಲಿಲ್ಲ. ನನ್ನ ಕತೆ ಅದಕ್ಕಿಂತ ಚೆನ್ನಾಗಿದೆ.” ಎಂಬ ಉತ್ತರವನ್ನು ಕೊಟ್ಟು ನಮ್ಮನ್ನು ನಂಬಿಸಲು ಪ್ರಯತ್ನಿಸಿದರು. ಅದು ನಿಜವಿರಬಹುದೇನೋ! ಏಕೆಂದರೆ ಈ ವಿಶಾಲ ಜಗತ್ತಿನಲ್ಲಿ ಇಬ್ಬರ ಕಲ್ಪನೆಗಳು ಒಂದೇ ಆಗಿರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳುವದಾದರು ಹೇಗೆ? ಹಾಗೆ ಕಲ್ಪನೆಗಳು ಒಂದಾಗಿ ಕ್ರುತಿಯೊಂದು ಹೊರಬಂದಾಗ ಹೆಚ್ಚು ತೂಕ ಬರುವದು ಮೂಲ ಲೇಖಕನಿಗೆ, ಹಾಗೂ ಎರಡನೆಯವನದು ಏನಿದ್ದರೂ ‘ಕೃತಿಚೌರ್ಯ’ ಎಂದು ಬ್ರ್ಯಾಂಡ್ ಆಗುವದು ಸಹಜ. ಆ ನಿಟ್ಟಿನಲ್ಲಿ ನಮ್ಮ ಕನ್ನಡದ ನಿರ್ದೇಶಕರು ಕಥೆ ಕದಿಯುವದರಲ್ಲಿ ಹೊಸಬರೇನಲ್ಲ. ಬೇರೆ ನಿರ್ದೇಶಕರಿರಲಿ “ಮಾಯಾಮೃಗ”, “ಮನ್ವಂತರ”, “ಮುಕ್ತ” ದಂತಹ ಧಾರಾವಾಹಿಗಳನ್ನು ಕೊಟ್ಟ ಸೂಕ್ಷ್ಮ ಮನಸ್ಸಿನ ನಿರ್ದೇಶಕ ಸೀತಾರಾಮ್ ಕೂಡ ಕಥೆ ಕದಿಯುತ್ತಾರೆಂದರೆ ನಂಬಲಿಕ್ಕೆ ಆಗುತ್ತೆ? ಹೌದೆಂದು ಹೇಳಬೇಕಾಗುತ್ತ! ಏಕೆಂದರೆ ಅವರ ಎರಡನೆ ಚಿತ್ರ “ಮೀರಾ, ಮಾಧವ, ರಾಘವ” ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಇಂಗ್ಲೀಷ್ ಸಾಹಿತ್ಯದ ಹೆನ್ರಿಕ್ ಇಬ್ಸನ್ನನ “ಎ ಡಾಲ್ಸ್ ಹೌಸ್” ಎನ್ನುವ ಜನಪ್ರಿಯ ನಾಟಕದ ಮೂಲಕಥೆಯನ್ನು ಆಧರಿಸಿದೆ. ಇದು ಅಂತಿಂಥ ನಾಟಕವಲ್ಲ! ಇಬ್ಸನ್ನನ ಮಾಸ್ಟರ್ ಪೀಸ್! ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ತ್ರೀ ವಿಮೋಚನೆ ಬಗ್ಗೆ ಮಾತನಾಡಿದ ಹಾಗೂ ಮಹಿಳೆಯರಿಗೆ ವೋಟಿಂಗ್ ಪವರ್ ತಂದುಕೊಡುವದರ ಮೂಲಕ ಭಾರಿ ಸುದ್ದಿಯನ್ನು ಮಾಡಿದ ನಾಟಕ! ಆ ಮೂಲಕಥೆಯನ್ನು ಹಾಗೇ ಇಟ್ಟುಕೊಂಡು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಸಿತಾರಾಮ್ ಅವರು ಹೇಗೆ ಅತ್ಯಂತ ಜಾಣತನದಿಂದ ಈ ಕಥೆಯನ್ನು ಹೆಣೆದಿದ್ದಾರೆ ನೋಡಿ. ಮೊದಲಿಗೆ ಇಬ್ಸನ್ನನ ನಾಟಕವನ್ನು ಗಮನಿಸೋಣ.


    ಇಬ್ಸನ್ನನ ನಾಟಕ “ಎ ಡಾಲ್ಸ್ ಹೌಸ್” ನಲ್ಲಿ ಬರುವ ಕಥಾನಾಯಕಿಯ ಹೆಸರು ನೋರಾ ಹೆಲ್ಮರ್. ಅವಳ ಗಂಡ ಟ್ರೊವಾಲ್ಡ್ ಹೆಲ್ಮರ್. ಅವರಿಗೆ ಮೂರು ಜನ ಮಕ್ಕಳು. ಅವನು ಈಗಷ್ಟೆ ಬ್ಯಾಂಕಿನಲ್ಲಿ ಮ್ಯಾನೆಜರ್ ಹುದ್ದೆಗೆ ಬಡ್ತಿ ಪಡೆದಿದ್ದಾನೆ. ಹೀಗಾಗಿ ಅವನಿಗೆ ಯಾವುದೇ ಹಣಕಾಸಿನ ತೊಂದರೆಯಿಲ್ಲ. ಆದರೆ ನೋರಾಳಿಗೆ ಒಂದಿಷ್ಟು ಸಾಲವಿದೆ. ಆ ಸಾಲವನ್ನು ಅವಳು ಗುಟ್ಟಾಗಿ ಕೆಲಸ ಮಾಡುತ್ತಾ ತೀರಿಸುತ್ತಿದ್ದಾಳೆ. ಇದರ ಬಗ್ಗೆ ಅವಳ ಗಂಡನಿಗೆ ಏನೇನೂ ಗೊತ್ತಿಲ್ಲ. ಈ ಸಾಲವನ್ನು ಗಂಡನಿಗೆ ಗೊತ್ತಿಲ್ಲದಂತೆ ಅವನಿಗೋಸ್ಕರ ಮಾಡಿದ್ದಳು. ಮದುವೆಯಾದ ಹೊಸತರಲ್ಲಿ ಅವನು ಯಾವುದೋ ಖಾಯಿಲೆಯಿಂದ ಹಾಸಿಗೆ ಹಿಡಿಯುತ್ತಾನೆ. ಆಗ ವೈದ್ಯರು ನೋರಾಳಿಗೆ ಅವನಿಗೆ ತುರ್ತಾಗಿ ಇಟಲಿಯಲ್ಲಿ ಚಿಕಿತ್ಸೆ ಕೊಡಿಸದೆ ಹೋದರೆ ಅವನು ಬದುಕುವದಿಲ್ಲ ಎಂದು ಹೇಳುತ್ತಾರೆ. ಇಟಲಿಯಲ್ಲಿ ಟ್ರೀಟ್ಮೆಂಟ್ ಕೊಡಿಸಬೇಕೆಂದರೆ ಸಾಕಷ್ಟು ಹಣ ಬೇಕಾಗುತ್ತದೆ. ಆದರೆ ಅಷ್ಟೊಂದು ಹಣವನ್ನು ಎಲ್ಲಿಂದ ತರುವದು? ಮೇಲಾಗಿ ಹಣದ ಬಗ್ಗೆ ಯೋಚನೆ ಮಾಡುತ್ತಾ ಕೂಡುವ ಕಾಲವಲ್ಲ ಇದು. ಸರಿಯೆಂದು ಅವಳಪ್ಪನಲ್ಲಿಗೆ ಹೋಗುತ್ತಾಳೆ. ಆದರೆ ಅವಳಪ್ಪನು ಕೂಡ ಖಾಯಿಲೆಯಿಂದ ಹಾಸಿಗೆ ಹಿಡಿದಿರುತ್ತಾನೆ. ಇಂಥ ಸಂದರ್ಭದಲ್ಲಿ ಅವನನ್ನು ದುಡ್ಡು ಕೇಳುವದು ಸರಿಯಲ್ಲ ಎಂದುಕೊಳ್ಳುತ್ತಾಳೆ. ಆದರೆ ಗಂಡನಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಲೇಬೇಕು. ಆಗ ಅನಿವಾರ್ಯವಾಗಿ ಸಾಲ ಕೊಡುವವನಾದ ಕ್ರೊಗ್ಸ್ಟ್ಯಾಡ್ ಎಂಬವನಲ್ಲಿಗೆ ಹೋಗುತ್ತಾಳೆ. ಅವನು ಅವಳ ಗಂಡನ ಬ್ಯಾಂಕಿನಲ್ಲಿಯೇ ಗುಮಾಸ್ತನಾಗಿ ಕೆಲಸ ಮಾಡುತ್ತಿರುತ್ತಾನೆ. ಅವನೊಬ್ಬ ಕ್ರಿಮಿನಲ್. ಅಂಥವನನ್ನು ಸಾಲ ಕೊಡೆಂದು ಕೇಳುತ್ತಾಳೆ ಹಾಗೂ ಸಾಲ ತೆಗೆದುಕೊಳ್ಳುವ ವಿಷಯ ಗಂಡನಿಗೆ ಗೊತ್ತಾಗಬಾರದೆಂದು ತಾಕೀತು ಮಾಡುತ್ತಾಳೆ. ಆದರೆ ಚಾಣಾಕ್ಷನಾದ ಕ್ರೊಗ್ಸ್ಟ್ಯಾಡ್ ಈ ದುಡ್ಡಿಗೆ ನಿನ್ನ ಹತ್ತಿರ ಏನು ಸೆಕ್ಯೂರಿಟಿಯಿದೆ ಎಂದು ಕೇಳುತ್ತಾನೆ. ಅವಳು ಅದನ್ನು ಒದಗಿಸಲು ಅಸಹಾಯಕಳಾದಾಗ ಬಾಂಡ್ ಪೇಪರ್ ಮೇಲೆ ಅವಳಪ್ಪನ ಸಹಿ ಹಾಕೆಂದು ಹೇಳುತ್ತಾನೆ. ಅವಳು ಹಿಂದೆ ಮುಂದೆ ನೋಡದೆ ದುಡ್ಡಿನ ತುರ್ತಿಗೆ ಅವಳಪ್ಪನ ಸಹಿಯನ್ನು ಫೋರ್ಜರಿ ಮಾಡುತ್ತಾಳೆ ಹಾಗೂ ಗಂಡನ ಹತ್ತಿರ ಅವಳಪ್ಪ ಕೊಟ್ಟನೆಂದು ಸುಳ್ಳು ಹೇಳುತ್ತಾಳೆ. ಆದರೆ ಮುಂದೆ ಇದೆ ಕ್ರೊಗ್ಸ್ಟ್ಯಾಡ್ ನ ಕೆಲಸ ಹೋಗುವ ಸಂಭವ ಬರುತ್ತದೆ. ಆಗ ಅವನು ನೋರಾಳ ಹತ್ತಿರ ಬಂದು ಅವಳ ಗಂಡನಿಗೆ ಏನಾದರು ಹೇಳಿ ತನ್ನ ಕೆಲಸ ಹೋಗದಂತೆ ನೋಡಿಕೊಳ್ಳಲು ಹೇಳುತ್ತಾನೆ. ನೋರಾ ತನ್ನ ಪ್ರಯತವನ್ನು ಮಾಡುತ್ತಾಳೆ. ಆದರೆ ತುಂಬಾ ಪ್ರಾಮಾಣಿಕನಾದ ಹೆಲ್ಮರ್ ಅವಳ ಮಾತನ್ನು ಕೇಳುವದಿಲ್ಲ. ಆಗ ಕ್ರೊಗ್ಸ್ಟ್ಯಾಡ್ ನೋರಾಳಿಗೆ “ಈ ವಿಷಯದಲ್ಲಿ ನಿನ್ನ ಗಂಡನಿಗೆ ಹೇಳಿ ಮನವೊಲಿಸದೆ ಹೋದರೆ ನಾನು ನಿನ್ನ ಫೋರ್ಜರಿ ವಿಷಯವನ್ನು ನಿನ್ನ ಗಂಡನಿಗೆ ಹೇಳಬೇಕಾಗುತ್ತದೆ” ಎಂದು ಬ್ಲ್ಯಾಕ್ ಮೇಲ್ ಮಾಡ ತೊಡಗುತ್ತಾನೆ. ಇಲ್ಲಿಂದ ನೋರಾ ಸಂಕಷ್ಟಕ್ಕೆ ಸಿಲುಕುತ್ತಾಳೆ. ಮುಂದೆ ಹೆಲ್ಮರ್, ಕ್ರೊಗ್ಸ್ಟ್ಯಾಡ್ ಒಬ್ಬ ಕ್ರಿಮಿನಲ್ ಎನ್ನುವ ಕಾರಣಕ್ಕೆ ಅವನನ್ನು ಕೆಲಸದಿಂದ ತೆಗೆದುಹಾಕುತ್ತಾನೆ. ಆದರೆ ಸುಮ್ಮನಿರದ ಕ್ರೊಗ್ಸ್ಟ್ಯಾಡ್ ವಿಷಯವನ್ನು ನೇರವಾಗಿ ಹೆಲ್ಮರ್ ನಿಗೆ ಹೇಳಿ ಬ್ಲ್ಯಾಕ್ ಮೇಲ್ ತಂತ್ರದ ಮೂಲಕ ತನ್ನ ಕೆಲಸವನ್ನು ಉಳಿಸಿಕೊಳ್ಳಬಹುದೆಂದು ಲೆಕ್ಕಾಚಾರ ಹಾಕಿ “ನನ್ನನ್ನು ಕೆಲಸದಿಂದ ತೆಗೆದು ಹಾಕಿದರೆ ನಿನ್ನ ಹೆಂಡತಿ ಫೋರ್ಜರಿ ಮಾಡಿದ ಪತ್ರ ನನ್ನ ಹತ್ತಿರ ಇದೆ. ಅದನ್ನು ಪೋಲಿಸರಿಗೆ ಕೊಟ್ಟರೆ ಆಗ ಪರಿಣಾಮ ಏನಾಗಬಹುದೆಂದು ಯೋಚಿಸು” ಎಂದು ವಿವರಿಸುವ ಒಂದು ಪತ್ರವನ್ನು ಹೆಲ್ಮರ್ ನ ಲೆಟರ್ ಬಾಕ್ಸ್ ನಲ್ಲಿ ಹಾಕುತ್ತಾನೆ. ಇದನ್ನು ಓದಿದ ಹೆಲ್ಮರ್ ಹೆಂಡತಿ ನೋರಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. “ನೀನು ಒಬ್ಬ ಕ್ರಿಮಿನಲ್. ನಿನ್ನಿಂದಾಗಿ ನನ್ನ ಮಾನ, ಮರ್ಯಾದೆ ಎಲ್ಲಾ ಹಾಳಾಯಿತು. ಇನ್ನು ನಾವಿಬ್ಬರು ಒಟ್ಟಿಗಿರಲು ಹೇಗೆ ಸಾಧ್ಯ?” ಎಂದು ಆಪಾದಿಸುತ್ತಾನೆ. ಇದು ನೋರಾಳ ಮನಸ್ಸಿನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಆದರೆ ಮಾರನೆ ದಿವಸ ಕ್ರೊಗ್ಸ್ಟ್ಯಾಡ್ ನಿಂದ “ನನ್ನ ತಪ್ಪಿನ ಅರಿವಾಗಿದೆ. ನಾನೀಗ ಬದಲಾಗಿದ್ದೇನೆ. ನಾನು ಯಾವುದೇ ಪೋಲಿಸ್ ಕಂಪ್ಲೇಟ್ ಕೊಡುವದಿಲ್ಲ ಹಾಗೂ ನೋರಾ ಫೋರ್ಜರಿ ಮಾಡಿದ ಬಾಂಡ್ ಪೇಪರ್ ನ್ನು ವಾಪಾಸು ಕಳಿಸಿದ್ದೇನೆ.” ಎನ್ನುವ ಪತ್ರ ಬರುತ್ತದೆ. ಇದನ್ನು ಓದಿದ ಹೆಲ್ಮರ್ ಕುಣಿದು ಕುಪ್ಪಳಿಸುತ್ತಾನೆ. “ನೋರಾ, ಆದದ್ದನ್ನೆಲ್ಲಾ ಮರೆತುಬಿಡು. ನಾನು ನಿನ್ನನ್ನು ಕ್ಷಮಿಸಿದ್ದೇನೆ” ಎಂದು ಹೆಲ್ಮರ್ ಹೆಂಡತಿಗೆ ಹೇಳುತ್ತಾನೆ. ಆದರೆ ಈಗಾಗಲೆ ಅವನ ಮಾತಿನಿಂದ ಬಹಳಷ್ಟು ನೊಂದಿರುವ ನೋರಾ ಅವನನ್ನು ತೊರೆದು ಹೋಗಲು ನಿರ್ಧರಿಸುತ್ತಾಳೆ. ಆದರೆ ಹೋಗುವ ಮುನ್ನ ಗಂಡನಿಗೆ “ನಾನು ಎಷ್ಟೆಲ್ಲ ಕಷ್ಟಪಟ್ಟೆ. ನಿನಗೋಸ್ಕರ ತಾನೆ ನಾನು ಸಾಲ ಮಾಡಿದ್ದು. ನಿನ್ನನ್ನು ಉಳಿಸಿಕೊಳ್ಳೊದಕ್ಕೆ ತಾನೆ ನಾನು ಸಾಲ ಮಾಡಿದ್ದು? ಆದ್ರೆ ನಾನು ಅಪರಾಧಿ ಅಂತ ಗೊತ್ತಾದ ತಕ್ಷಣ ನಾವಿಬ್ರೂ ಬೇರೆ ಬೇರೆ ಅನ್ನೋ ತರ ಮಾತಾಡಿದಿ. ಈಗ ಕಷ್ಟ ಕಳೀತು ಅಂತಾ ಬಾ ಅಂತಾ ಕರೀತಾ ಇದಿಯಾ. ಇದು ಹೇಗೆ ಸಾಧ್ಯ? ನಿನ್ನಂತ ದ್ರೋಹಿಯೊಂದಿಗೆ ಒಟ್ಟಿಗೆ ಇರೋದಕ್ಕಿಂತ ದೂರ ಹೋಗೋದೆ ಮೇಲು. ಗುಡ್ ಬೈ.” ಎಂದು ಹೇಳಿ ಗಂಡನನ್ನು ಹಾಗೂ ಮಕ್ಕಳನ್ನು ಬಿಟ್ಟು ಹೋಗುತ್ತಾಳೆ. ಪ್ರೇಕ್ಷಕರಿಗೆ ಬಾಗಿಲು ಮುಚ್ಚಿದ ಸದ್ದು ಕೇಳುತ್ತದೆ.


    ಈ ನಾಟಕ ಮಹಿಳಾ ಪ್ರಧಾನ ನಾಟಕ. ಇಡಿ ಯೋರೋಪಿನಲ್ಲಿ ಸಂಚಲನವನ್ನು ಮೂಡಿಸಿತ್ತು. ಈ ನಾಟಕದ ಆಗಮನದೊಂದಿಗೆ ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಡತೊಡಗಿದರು. ಪರಿಣಾಮವಾಗಿ ಮಹಿಳಾ ಸಂಘಟನೆಗಳು, ಸ್ತ್ರೀ ಶಕ್ತಿಗಳು ಹುಟ್ಟಿಕೊಂಡವು. ಈ ನಾಟಕದ ಮೂಲಕಥೆಯನ್ನು ಆಧಾರವಾಗಿಟ್ಟುಕೊಂಡು ಸೀತಾರಾಮರು ಆ ಕಡೆ ಈ ಕಡೆ ಹಿಗ್ಗಿಸಿ ತಮ್ಮದೇ ಕಥೆಯೆಂಬಂತೆ “ಮೀರಾ, ಮಾಧವ, ರಾಘವ” ದಲ್ಲಿ ಬಿಂಬಿಸಿದ್ದಾರೆ.


    “ಮೀರಾ, ಮಾಧವ, ರಾಘವ” ದಲ್ಲಿ ರೌಡಿ ರಾಘವ ಕಥಾನಾಯಕಿ ಮೀರಾಳನ್ನು ಮದುವೆ ಆಗೆಂದು ಪೀಡಿಸುತ್ತಿರುತ್ತಾನೆ. ಆದರೆ ಅವಳು ಅವನನ್ನು ನಿರಾಕರಿಸಿ ಲೆಕ್ಚರರ್ ಆಗಿರುವ ಮಾಧವನನ್ನು ಮದುವೆ ಆಗುತ್ತಾಳೆ. ಮಾಧವನಿಗೆ ಮೊದಲಿನಿಂದಲೂ ಐ.ಎ.ಎಸ್ ಮಾಡಬೇಕೆಂಬ ಮಹಾದಾಸೆ ಇರುತ್ತದೆ. ಆದರೆ ದುಡ್ಡಿನ ಅಡಚಣೆಯಿಂದಾಗಿ ಅವನ ಕನಸು ತಟಸ್ಥವಾಗಿರುತ್ತದೆ. ಆದರೆ ಮೀರಾ ತನ್ನ ತೌರು ಮನೆಯ ಆಸ್ತಿಯಲ್ಲಿ ಭಾಗ ಕೇಳಿ ಅದರಿಂದ ಬಂದ ದುಡ್ಡಿನಿಂದ ನಿನ್ನನ್ನು ಐ.ಎ.ಎಸ್ ಮಾಡಿಸುತ್ತೇನೆ ನೀನು ಹೋಗಿ ಬಾ ಎಂದು ಗಂಡನನ್ನು ದೆಹಲಿಗೆ ಕಳಿಸುತ್ತಾಳೆ. ತೌರು ಮನೆಯ ಆಸ್ತಿಯಲ್ಲಿ ಸದ್ಯಕ್ಕೆ ಆಸ್ತಿಯಲ್ಲಿ ಭಾಗ ಸಿಗುವದಿಲ್ಲ ಎಂದು ಗೊತ್ತಾದ ಮೇಲೆ ಇದರಿಂದ ತನ್ನ ಗಂಡನ ಐ.ಎ.ಎಸ್ ಮಾಡುವ ಕನಸು ನುಚ್ಚು ನೂರಾಗುತ್ತದೆ ಅವನನ್ನು ಹೇಗಾದರು ಮಾಡಿ ಐ.ಎ.ಎಸ್ ಮಾಡಿಸಲೇಬೇಕೆಂದು ನಿರ್ಧರಿಸಿ ಸಹಾಯಕ್ಕಾಗಿ ತನ್ನ ಗೆಳತಿ ಕಲ್ಯಾಣಿಯ ತಂದೆ ಬಳಿ ಹೋಗುತ್ತಾಳೆ. ಅವರು ಒಂದು ಫೈನಾನ್ಸ್ ಕಂಪನಿಯಲ್ಲಿ ಮಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಹತ್ತು ಲಕ್ಷದಷ್ಟು ಹಣವನ್ನು ಅವರಿಗೆ ಕೊಡಲು ಪವರ್ ಇಲ್ಲವೆಂದು ಹೇಳಿ ಮೀರಾಳನ್ನು ತನ್ನ ಬಾಸ್ ಬಳಿ ಕರೆದುಕೊಂಡು ಹೋಗುತ್ತಾರೆ. ಮೀರಾಳ ದುರಾದೃಷ್ಟಕ್ಕೆ ಆ ಬಾಸ್ ಬೇರೆ ಯಾರೂ ಅಲ್ಲದೆ ಈ ಹಿಂದೆ ಅವಳನ್ನು ಮದುವೆಯಾಗೆಂದು ಪೀಡಿಸುತ್ತಿದ್ದ ರಾಘವನಾಗಿರುತ್ತಾನೆ. ಅವನು ಹತ್ತು ಲಕ್ಷದಷ್ಟು ಹಣವನ್ನು ಕೊಡಲು ಮುಂದಾಗುತ್ತಾನೆ. ಆದರೆ ಅದಕ್ಕೆ ಮೀರಾಳ ಹತ್ತಿರ ಸೆಕ್ಯುರಿಟಿ ಕೇಳುತ್ತಾನೆ. ಅವಳು ಅದನ್ನು ಒದಗಿಸಲು ಅಸಹಾಯಕಳಾದಾಗ ಅವನು ಒಂದು ಬಾಂಡ್ ಪೇಪರ್ ಮೇಲೆ ಅವಳ ಗಂಡನೇ ಅವನಿಂದ ಸಾಲ ತೆಗೆದುಕೊಂಡಿರುವಂತೆ ಅವಳ ಕೈಲಿ ಬರೆಸಿ ಅವಳ ಗಂಡನ ಸಹಿಯನ್ನು ಫೋರ್ಜರಿ ಮಾಡಲು ಹೇಳುತ್ತಾನೆ. ಮತ್ತು ಪಕ್ಕದಲ್ಲಿ ಸಾಕ್ಷಿಯಾಗಿ ಅವಳಿಗೆ ಸಹಿ ಹಾಕಲು ಹೇಳುತ್ತಾನೆ. ಏಕೆಂದರೆ ಅವಳ ಗಂಡ ಹೇಗೂ ಐ.ಎ.ಎಸ್ ಆಫಿಸರ್ ಆಗುವವ. ಮುಂದೆ ಅವನಿಂದಾದರೂ ವಸೂಲಿ ಮಾಡಬಹುದೆಂಬುದು ಅವನ ಮುಂದಾಲೋಚನೆ. ಮೀರಾ ಇಷ್ಟೆಲ್ಲ ಮಾಡಲು ಹಿಂದೆ ಮುಂದೆ ನೋಡುತ್ತಳಾದರೂ ಗಂಡನ ಐ.ಎ.ಎಸ್ ಗೆ ತೊಂದರೆಯಾಗಬಾರದೆಂದು ಗಂಡನ ಸಹಿ ಮಾಡಿ ದುಡ್ಡು ತೆಗೆದುಕೊಂಡು ಬರುತ್ತಾಳೆ. ಆದರೆ ಗಂಡನ ಹತ್ತಿರ ತೌರು ಮನೆಯವರು ದುಡ್ಡು ಕೊಟ್ಟರೆಂದು ಸುಳ್ಳು ಹೇಳುತ್ತಾಳೆ. ನಂತರ ರಾಘವ ದುಡ್ಡಿಗೆ ಬಡ್ಡಿ ಕೊಡೆಂದು ಪೀಡಿಸುತ್ತಾನೆ. ಇಲ್ಲವಾದರೆ ತನ್ನ ಕ್ಲಬ್ಬಿನಲ್ಲಿ ಹಾಡೆಂದು ಕೇಳುತ್ತಾನೆ. ಮೀರಾ ಯಾರಿಗೂ ಗೊತ್ತಿಲ್ಲದಂತೆ ಕ್ಲಬ್ಬಿಗೆ ಹೋಗಿ ಹಾಡಿ ಬರುತ್ತಾಳೆ. ಇತ್ತ ಗಂಡ ಐ.ಎ.ಎಸ್ ಪಾಸ್ ಮಾಡಿ ಹೇಮಗಿರಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬರುತ್ತಾನೆ. ಮುಂದೆ ಅದೇ ಊರಿನವನಾದ ರಾಘವ ಎಲೆಕ್ಷನ್ ಗೆ ನಾಮಿನೇಶನ್ ಫೈಲ್ ಮಾಡಲು ಹೋಗುತ್ತಾನೆ. ಆದರೆ ಅಷ್ಟರಲ್ಲಿ ಅವನೊಬ್ಬ ದೊಡ್ಡ ಕ್ರಿಮಿನಲ್ ಆಗಿದ್ದರಿಂದ ಅವನ ಮೇಲೆ ಗಡಿಪಾರು ಆಜ್ಞೆಯನ್ನು ಜಿಲ್ಲಾಧಿಕಾರಿ ಮಾಧವ ಹೊರಡಿಸಿರುತ್ತಾನೆ. ಹೀಗಾಗಿ ಅವನಿಗೆ ನಾಮಿನೇಶನ್ ಫೈಲ್ ಮಾಡಲಾಗುವದಿಲ್ಲ. ಆದರೆ ನಾಮಿನೇಶನ್ ಫೈಲ್ ಮಾಡಲು ಇನ್ನೂ ಸಮಯವಿರುವದರಿಂದ ಆ ಆರ್ಡರ್ ನ್ನು ಕ್ಯಾನ್ಸಲ್ ಮಾಡಿಸಲು ಮಾಧವನ ಹೆಂಡತಿ ಮೀರಾಳನ್ನು ಕೇಳುತ್ತಾನೆ. ಆದರೆ ಅವಳು ತನ್ನ ಗಂಡ ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿದ್ದರಿಂದ ಇಂಥದನ್ನು ಮಾಡುವದಿಲ್ಲವೆಂದು ಹೇಳಿದಾಗ ಅವಳು ಫೋರ್ಜರಿ ಮಾಡಿರುವ ವಿಷಯವನ್ನು ಅವಳ ಗಂಡನಿಗೆ ಹೇಳುತ್ತೇನೆಂದು ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಅವಳು ಕೂಡ ಈ ಸಂಕಷ್ಟದಿಂದ ಹೇಗಾದರು ಪಾರಾದರೆ ಸಾಕೆಂದು ಗಂಡನಿಗೆ ಆರ್ಡರ್ ಕ್ಯಾನ್ಸಲ್ ಮಾಡಲು ಹೇಳುತ್ತಾಳೆ. ಆದರೆ ಪ್ರಾಮಾಣಿಕ ಅಧಿಕಾರಿಯಾದ ಅವನು ಕ್ಯಾನ್ಸಲ್ ಮಾಡಲು ನಿರಾಕರಿಸುತ್ತಾನೆ. ಆರ್ಡರ್ ಕ್ಯಾನ್ಸಲ್ ಆಗದೆ ಹೋದಾಗ ಕ್ರೋಧಗೊಂಡ ರಾಘವ ಒಂದು ದಿನ ನೇರವಾಗಿ ಮಾಧವನ ಹತ್ತಿರ ಬಂದು ಅವನ ಹೆಂಡತಿ ಫೋರ್ಜರಿ ಮಾಡಿರುವ ವಿಷಯವನ್ನು ಹೇಳುತ್ತಾನೆ. ಅಲ್ಲಿಂದ ಮುಂದೆ ಮೀರಾ ಸಂಕಷ್ಟಕ್ಕೆ ಸಿಲುಕುತ್ತಾಳೆ. ಗಂಡ ಹೆಂಡತಿಯರ ಮಧ್ಯ ಇದೆ ವಿಷಯಕ್ಕೆ ಜಗಳ ಶುರುವಾಗುತ್ತದೆ. ಸಾಲ ಮಾಡಿದ ಕಾರಣವನ್ನು ಅವಳು ಹೇಳಲೇ ಬೇಕಾಗುತ್ತದೆ. ಆದರೆ ಮಾಧವ ಈ ಫೋರ್ಜರಿ ಪತ್ರ ಪೋಲಿಸ್ ನವರ ಕೈಗೆ ಸಿಕ್ಕರೆ ಇಬ್ಬರೂ ಜೈಲಿಗೆ ಹೋಗಬೇಕಾಗುತ್ತದೆ ಇದರಿಂದ ತನ್ನ ಮಾನ ಮರ್ಯಾದೆಯೆಲ್ಲ ಹರಾಜಾಗುತ್ತದೆ ಎಂದು ಹೇಳುತ್ತಾನೆ. ಕೊನೆಗೆ ಹೆಂಡತಿಗೆ ಅವನ ಹತ್ತಿರ ಪ್ರೀತಿಯ ನಾಟಕವಾಡಿ ಆ ಓರಿಜಿನಲ್ ಕಾಪಿಯನ್ನು ತೆಗೆದುಕಂಡು ಬಾ ಎಂದು ಹೇಳುತ್ತಾನೆ. ಅವಳು ಅದೇ ಪ್ರಕಾರ ಮುಚ್ಚಿದ ಖಾಲಿ ಲಕೋಟಿಯನ್ನು ರಾಘವನ ಹತ್ತಿರ ತೆಗೆದುಕೊಂಡು ಇದರಲ್ಲಿ “ನಿನ್ನ ಆರ್ಡರ್ ಕ್ಯಾನ್ಸಲ್ ಮಾಡಿರುವ ಕಾಪಿಯಿದೆ. ನನಗೆ ನನ್ನ ಓರಿಜಿನಲ್ ಕಾಪಿ ಕೊಡು” ಎಂದು ಕೇಳುತ್ತಾಳೆ. ಆದರೆ ಚಾಣಾಕ್ಷನಾದ ರಾಘವ ಓರಿಜಿನಲ್ ಕಾಪಿ ತೋರಿಸುವ ನಾಟಕವಾಡಿ ಅವಳ ಕೈಯಿಂದ ಲಕೋಟಿಯನ್ನು ಕಿತ್ತುಕೊಳ್ಳುತ್ತಾನೆ. ಅದು ಖಾಲಿಯಿರುವದನ್ನು ನೋಡಿ ಓರಿಜಿನಲ್ ಕಾಪಿ ಕೊಡುವದಿಲ್ಲ ಎಂದು ಹೇಳುತ್ತಾನೆ. ಮುಂದೇನು ಮಾಡಬೇಕೆಂದು ಗೊತ್ತಾಗದೆ ಮೀರಾ ಪಕ್ಕದಲ್ಲಿಯೇ ಇದ್ದ ಅವನ ಪಿಸ್ತೂಲಿನಿಂದ ಶೂಟ್ ಮಾಡುತ್ತಾಳೆ. ಆಮೇಲೆ ಗಂಡನ ಹತ್ತಿರ ಬಂದು ತಪ್ಪೊಪ್ಪಿಕೊಳ್ಳುತ್ತಾಳೆ. ಆದರೆ ಗಂಡ ಅವಳನ್ನು ಆ ಕೊಲೆ ಕೇಸಿನಿಂದ ಪಾರು ಮಾಡಬಹುದಾಗಿತ್ತಾದರೂ ಹಾಗೆ ಮಾಡದೆ “ಒಳ್ಳೆ ಲಾಯರ್ ನ್ನ ನೇಮಿಸಿ ಕೇಸ್ ಫೈಟ್ ಮಾಡೋಣ ಶಿಕ್ಷೆಯಾಗುತ್ತೆ. ಅದಾದ ಮೇಲೆ ಬಿಡುಗಡೆನೂ ಆಗುತ್ತೆ. ಆದ್ರೆ ಒಂದು ಮಾತು ಮೀರಾ, ಬಿಡುಗಡೆಯಾದ ಮೇಲೆ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ. ಯಾಕೆಂದ್ರೆ ಒಬ್ಬ ಕೊಲೆಗಾರ್ತಿ ಡೀಸಿ ಹೆಂಡತಿಯಾಗಿ ಉಳಿಯೋದಕ್ಕೆ ಸಾಧ್ಯನಾ?” ಎಂದು ಖಡಾ ಖಂಡಿತವಾಗಿ ಹೇಳುತ್ತಾನೆ. ಆದರೆ ಸಿನಿಮಾದ ಕೊನೆಯಲ್ಲಿ ರಾಘವ ಬದುಕುಳಿಯುತ್ತಾನೆ. ಆಶ್ಚರ್ಯ ಎಂಬಂತೆ ಅವನು ಬದಲಾಗುತ್ತಾನೆ ಹಾಗೂ ಮೀರಾಳ ಮೇಲೆ ಯಾವುದೇ ಕಂಪ್ಲೇಟ್ ಕೊಡದೆ ಅವಳ ಫೋರ್ಜರಿ ಡಾಕುಮೆಂಟ್ಸ್ ನ್ನು ವಾಪಾಸು ಕೊಡುತ್ತಾನೆ. ಆಗ ಅವಳ ಗಂಡ ಮಾಧವ “ಬಾ, ಇನ್ನೇನು ಕಷ್ಟ ಕಳಿತಲ್ಲ, ಹ್ಯಾಪಿಯಾಗಿ ಸಿಲೆಬ್ರೇಟ್ ಮಾಡೋಣ” ಎಂದು ಹೇಳುತ್ತಾನೆ. ಆದರೆ ಮೀರಾ ಅವನ ವರ್ತನೆಗೆ ಬೇಸರಪಟ್ಟುಕೊಂಡು ಅತ್ಯಂತ ತಿರಸ್ಕಾರದಿಂದ ಅವನನ್ನು ಬಿಟ್ಟು ಹೋಗುತ್ತಾಳೆ. ಹೋಗುವ ಮುನ್ನ ಅವನು ಪರಿ ಪರಿಯಾಗಿ ಕೇಳಿಕೊಂಡರೂ ಅವಳು ಇರದೆ ಹೊರಟು ಹೋಗುತ್ತಾಳೆ. ಆದರೆ ಹೋಗುವ ಮುನ್ನ “ನಾನು ನಿನಗೋಸ್ಕರ ಎಷ್ಟೆಲ್ಲ ಕಷ್ಟಪಟ್ಟೆ. ನಿಮ್ಮ ಐ.ಎ.ಎಸ್ ಕನಸು ನನಸು ಮಾಡಕ್ಕೋಸ್ಕರ ಸಾಲ ಮಾಡಿದೆ. ಆದ್ರೆ ನಾನು ಅಪರಾಧಿ ಅಂತ ಗೊತ್ತಾದ ತಕ್ಷಣ ನನ್ನನ್ನು ಬಚಾವ್ ಮಾಡಲು ಸಾಧ್ಯವಿದ್ದರೂ ನೀನು ಹಾಗೆ ಮಾಡಲಿಲ್ಲ. ನಿನಗೆ ನಿನ್ನ ಪ್ರೆಸ್ಟಿಜ್ ಮುಖ್ಯ ಆಯ್ತು. ಅಧಿಕಾರ ದೊಡ್ಡದು ಆಯ್ತು. ಪ್ರೀತಿಸೊ ಹೆಂಡತಿ ಜೈಲಿಗೆ ಹೋದ್ರು ಚಿಂತೆ ಇಲ್ಲ, ನಿನಗೆ ನಿನ್ನ ಕೆಲಸಾನೆ ದೊಡ್ಡದು ಅಯ್ತು. ಇದಕ್ಕಿಂತ ದ್ರೋಹ ಬೇಕಾ? ಈಗ ಕಷ್ಟ ಕಳೀತು ಅಂತಾ ಬಾ ಮೀರಾ ಒಟ್ಟಿಗಿರೋಣ ಅಂತಾ ಕರೀತಾ ಇದಿಯಾ. ಇದು ಹೇಗೆ ಸಾಧ್ಯ ಮಾಧವ? ಗುಡ್ ಬೈ.” ಎಂದು ಹೇಳಿ ಹೊರಟು ಹೋಗುತ್ತಾಳೆ. ಅಲ್ಲಿಗೆ ಸೀತಾರಾಮ್ “ಇದು ಕೊನೆಯಲ್ಲ, ಹೊಸ ಬದುಕಿನ ಹೆಜ್ಜೆ” ಎಂದು ತೋರಿಸುವದರ ಮೂಲಕ ಸಿನಿಮಾ ಮುಗಿಸುತ್ತಾರೆ.


    ಈಗ ಹೇಳಿ ಇವೆರೆಡರ ಕಥೆ ಒಂದೇ ಆಗಿಲ್ಲವೆ? ಇಲ್ಲಿ ಮೀರಾ ನೋರಾಳನ್ನು, ರಾಘವ ಕ್ರೊಗ್ಸ್ಟ್ಯಾಡ್ ನನ್ನು, ಮಾಧವ ಹೆಲ್ಮರ್ ನನ್ನು ಪ್ರತಿನಿಧಿಸುವದಿಲ್ಲವೆ? ಹಾಗೂ ಘಟನೆಗಳು ಕೂಡ ಹೆಚ್ಚು ಕಮ್ಮಿ ಒಂದೇ ಆಗಿಲ್ಲವೆ? ಈ ಸಣ್ಣ ನಾಟಕವನ್ನು ಸೀತಾರಾಮರು ಒಂದು ಸಿನಿಮಾಕ್ಕೆ ಆಗುವಷ್ಟು ಸರಕನ್ನಾಗಿ ಹಿಗ್ಗಿಸಿಕೊಂಡು ಈ ಚಿತ್ರ ತೆಗೆದಿಲ್ಲವೆ? ಸೀತಾರಾಮರು ನಿರ್ದೇಶಕರಲ್ಲದೆ ಮೂಲತಃ ಲೇಖಕರು ಹೌದು. ಕನ್ನಡಕ್ಕೆ “ಕ್ರೌರ್ಯ” ದಂಥ ಶ್ರೇಷ್ಠ ಕಥೆಯನ್ನು ಹಾಗೂ “ನಮ್ಮೊಳಗೊಬ್ಬ ನಾಜೂಕಯ್ಯ” ದಂಥ ಉತ್ತಮ ನಾಟಕವನ್ನು ಸೀತಾರಾಮರು ಕೊಟ್ಟಿದ್ದಾರೆ. ಅಂಥವರು ಈ ರೀತಿ ಕಥೆ ಕದಿಯುವದು ಸರಿಯೇ?


    ಈ ಸಿನಿಮಾ ಬಂದಿದ್ದು 2007ರಲ್ಲಿ. ಆದರೆ ಆಗ ಈ ನಕಲಿನ ವಿಷಯ ಕುರಿತಂತೆ ಸುದ್ದಿಯಾಗಿತ್ತೋ ನನಗೆ ಗೊತ್ತಿಲ್ಲ. ಈಗ್ಗೆ ಆರು ತಿಂಗಳಿನ ಹಿಂದೆ ನಾನು ದೂರದ ಲಿಬಿಯಾದಲ್ಲಿ ಕುಳಿತು ಕಸ್ತೂರಿ ಚಾನೆಲ್ಲಿನಲ್ಲಿ ಈ ಸಿನಿಮಾವನ್ನು ನೋಡಿದೆ. ಅರ್ಧ ಸಿನಿಮಾ ನೋಡುತ್ತಿದ್ದಂತೆ ಅರೆ ಇದು ಇಬ್ಸನ್ನನ “ಎ ಡಾಲ್ಸ್ ಹೌಸ್” ನಾಟಕದ ತರಾನೆ ಇದೆಯೆಲ್ಲಾ? ಕ್ಲೈಮ್ಯಾಕ್ಸ್ ನೋಡಿಯೇ ಬಿಡೋಣ ಎಂದು ನೋಡಿದರೆ ಅದು ಕೂಡ ಹಾಗೆಯೇ ಇತ್ತು. ಆಮೇಲೆ ಬಹುಶಃ ಟೈಟಲ್ ಕಾರ್ಡಿನಲ್ಲಿ ಮೂಲ ಕಥೆಯನ್ನು ಪ್ರಸ್ತಾಪಿಸರಬೇಕು, ನಾನು ಗಮನಿಸಿರಿಲಿಕ್ಕಿಲ್ಲ ಎಂದುಕೊಂಡು ಸುಮ್ಮನಾದೆ. ಆದರೆ ಈ ಸಾರಿ ಬೆಂಗಳೂರಿಗೆ ಹೋದಾಗ “ಮೀರಾ, ಮಾಧವ, ರಾಘವ” ಸಿ.ಡಿ.ಯನ್ನು ತೆಗೆದುಕೊಂಡು ಬಂದು ಇಲ್ಲಿ ಮತ್ತೊಮ್ಮೆ ನೋಡಿದೆ. ಎಲ್ಲಿಯೂ ಮೂಲಕಥೆಯ ಪ್ರಸ್ತಾಪವಿಲ್ಲ. ಈಗ ಹೇಳಿ ಸೀತಾರಾಮರು ಕಥೆ ಕದ್ದಿದ್ದಾರೆ ಅನಿಸುವದಿಲ್ಲವೆ? ಅಥವಾ 21ನೇ ಶತಮಾನದ ಇವರದು ಹಾಗೂ 19ನೇ ಶತಮಾನದ ಇಬ್ಸನ್ನನ ಕಲ್ಪನೆಗಳು ಒಂದೇ ಆಗಿದ್ದವಾ? ಈ ಪ್ರಶ್ನೆಗಳಿಗೆ ಸೀತಾರಾಮರೇ ಉತ್ತರಿಸಬೇಕು.


    -ಉದಯ್ ಇಟಗಿ

    ನಿಮ್ಮಿ ಮತ್ತು ರಟ್ಟಿನ ಬಾಕ್ಸು

  • ಶುಕ್ರವಾರ, ಅಕ್ಟೋಬರ್ 01, 2010
  • ಬಿಸಿಲ ಹನಿ

  • ನಾನು ಲಂಕೇಶ್ ಪತ್ರಿಕೆಯನ್ನು ಓದಲು ಆರಂಭಿಸಿದ್ದೇ ತೊಂಬತ್ತರ ದಶಕದ ಮಧ್ಯಭಾಗದಿಂದ. ಅವು ನನ್ನ ಕಾಲೇಜು ದಿನಗಳು. ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತಾ ಹದಿ ಹರೆಯದ ಹಳವಂಡಗಳಿಗೆ ಜೋತುಬಿದ್ದ ಕಾಲವದು. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಂಕಣಗಳಲ್ಲಿ ವಯೋಸಹಜನುಗುಣವಾಗಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು “ತುಂಟಾಟ”. ಜೊತೆಗೆ ನೀಲು ಪದ್ಯಗಳು ಮತ್ತು ನಿಮ್ಮಿ ಕಾಲಂ. ಅಸ್ತಿತ್ವದಲ್ಲಿಯೇ ಇರದ ಗಂಜುಗಣ್ಣಿನ ಹುಡುಗಿಯ ಫೋಟೊವೊಂದನ್ನು ಹಾಕಿ ಅದಕ್ಕೆ ‘ನಿಮ್ಮಿ ಕಾಲಂ’ ಎಂದು ಹೆಸರಿಟ್ಟು ಲಂಕೇಶರೇ ಮೊದಲಿಗೆ ಅದನ್ನು ಪರಕಾಯ ಪ್ರವೇಶ ಮಾಡಿ ಬರೆದರು. ಆನಂತರ ಪ್ರತಿಭಾ ನಂದಕುಮಾರ್ ಒಂದಷ್ಟು ದಿವಸ ಬರೆದರು. ಮುಂದೆ ಅದನ್ನು ಅನಿತಾ ನಟರಾಜ್ ಹುಳಿಯಾರ್ ಮುಂದುವರೆಸಿಕೊಂಡು ಹೋದರು. ನಿಮ್ಮಿ ಕಾಲಂ ಆ ಕಾಲದ ಹದಿ ಹರೆಯದವರ ಹೃದಯಕ್ಕೆ ಲಗ್ಗೆ ಹಾಕುವದರ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಏಕೆಂದರೆ ಅದು ನಿಮ್ಮಿ ಮತ್ತು ಅವಳ ಪ್ರಿಯಕರ ಅಮರನ ಪ್ರೀತಿ, ಪ್ರೇಮ, ಪ್ರಣಯದ ಜೊತೆಗೆ ಒಂದಿಷ್ಟು ಅವರ ಜಗಳ, ಮುನಿಸು ಮತ್ತು ಸಲ್ಲಾಪಗಳಿಂದ ರಾರಾಜಿಸುವದರ ಮೂಲಕ ನನ್ನಂತ ಹದಿ ಹರೆಯದವರನ್ನು ಹಿಡಿದಿಟ್ಟಿತ್ತು. ಹೆಚ್ಚು ಕಮ್ಮಿ ನಿಮ್ಮಿ ನನ್ನಂತ ಎಷ್ಟೊ ಹುಡುಗರಿಗೆ ಪ್ರೇಯಸಿಯಾಗಿ ಬಿಟ್ಟಿದ್ದಳು. ಅವಳ ಕಚುಗುಳಿಯಂತ ಬರಹ ನನ್ನನ್ನು ಬಹುವಾಗಿ ತಾಕಿತ್ತು. ಬಹಳಷ್ಟು ಸಾರಿ ನಿಮ್ಮಿ ಅವಳು ಮತ್ತು ಅವಳ ಪ್ರಿಯಕರ ಅಮರ ಈ ವಾರ ಎಲ್ಲಿ ಹೋದರು, ಏನು ಮಾಡಿದರು, ಅವರನ್ನು ನೋಡಲು ಯಾರು ಬಂದಿದ್ದರು, ಏನು ಗಿಫ್ಟು ತಂದಿದ್ದರು ಬರಿ ಇಂಥವೇ ವಿಷಯಗಳೊಂದಿಗೆ ಬೋರ್ ಹೊಡೆಸುತ್ತಿದ್ದಳು. ಆದರೆ ಇವೆಲ್ಲವುಗಳ ಮಧ್ಯ ಆಗೊಮ್ಮೆ ಈಗೊಮ್ಮೆ ಮನಸ್ಸನ್ನು ತಾಕುವಂಥ ತುಂಬಾ ಇಂಟರೆಸ್ಟಿಂಗ್ ವಿಷಯಗಳನ್ನು ಸಹ ಬರೆಯುತ್ತಿದ್ದಳು. ಅಂಥವುಗಳಲ್ಲಿ ರಟ್ಟಿನ ಬಾಕ್ಸಿನ ಕತೆಯೊಂದು. ನಿಮ್ಮಿ ಬರೆದ ಆ ಅನುಭವಕಥನವನ್ನು ನಾನು ಓದಿದಂತೆ ಜ್ಞಾಪಿಸಿಕೊಂಡು ಅವಳ ಧಾಟಿಯಲ್ಲಿಯೇ ನಿಮ್ಮ ಮುಂದೆ ಇಡುತ್ತಿದ್ದೇನೆ.

    ಒಂದು ಇಳಿಸಂಜೆ ನಾನು ನನ್ನ ಸ್ಕೂಟಿಯನ್ನು ತೆಗೆದುಕೊಂಡು ಮೈಸೂರಿನ ಚಾಮುಂಡಿ ಬೆಟ್ಟದಿಂದ ವಾಪಾಸಾಗುತ್ತಿದ್ದೆ. ಅವತ್ತು ಸಣ್ಣಗೆ ತುಂತುರು ಮಳೆ ಹುಯ್ಯುತ್ತಿತ್ತು. ಹಾಗೆ ಹೋಗುವಾಗ ಆ ರಸ್ತೆಯ ಪಕ್ಕದಲ್ಲಿ ಗಾರೆ ಕೆಲಸ ಮಾಡುವ ಹೆಂಗಸೊಬ್ಬಳು ತನ್ನ ಪುಟ್ಟ ಗುಡಿಸಿಲಿನಲ್ಲಿ ಕುಳಿತುಕೊಂಡು ಒಲೆ ಹೊತ್ತಿಸಲು ಹರ ಸಾಹಸ ಮಾಡುತ್ತಿದ್ದಳು ಮತ್ತು ಏನೇನೆಲ್ಲಾ ಕಸರತ್ತುಗಳನ್ನು ಮಾಡುತ್ತಿದ್ದಳು. ಅವಳು ಉಟ್ಟಿದ್ದ ಸೀರೆ ಮಾಸಿ ಹೋಗಿ ರವಿಕೆಯ ತೋಳು ಎಡಗೈ ಹತ್ತಿರ ಸ್ವಲ್ಪ ಹರಿದು ಹೋಗಿತ್ತು. ಬಹುಶಃ ಅವಳು ಆಗಷ್ಟೆ ಹೊರಗಿನ ಕೆಲಸ ಮುಗಿಸಿ ಬಂದಿದ್ದರಿಂದ ಅವಳ ಮುಖದಲ್ಲಿ ಆಯಾಸ ಎದ್ದು ಕಾಣುತ್ತಿತ್ತು. ಬಡತನ ಅವಳನ್ನು ಹಿಂಡಿ ಹಿಪ್ಪಿ ಮಾಡಿದಂತಿತ್ತು. ಅದೇಕೊ ಅವಳ ಮುಖದಲ್ಲಿನ ಮುಗ್ಧತೆ ಹಾಗು ಕಣ್ಣುಗಳಲ್ಲಿ ಸ್ಪಷ್ಟವಾಗಿ ಕಾಣುವ ಬಡತನದ ಛಾಯೆ ನನ್ನಲ್ಲಿ ತಟ್ಟನೆ ಒಂದು ಕರುಣಾ ಭಾವವನ್ನು ಮೂಡಿಸಿತು. ಎಂದೂ ಇಂಥ ಬಡತನದ ಬಿಸಿ ಅನುಭವಕ್ಕೆ ತೆರೆದುಕೊಳ್ಳದ ಶ್ರೀಮಂತ ಹುಡುಗಿಯಾದ ನನಗೆ ಏಕೋ ಆ ಹೆಂಗಸಿನ ಹೋರಾಟದ ಬದುಕು ನನ್ನನ್ನು ತಟ್ಟನೆ ಹಿಡಿದು ನಿಲ್ಲಿಸಿತು. ನಾನು ತಕ್ಷಣ ನನ್ನ ಸ್ಕೂಟಿಯನ್ನು ನಿಲ್ಲಿಸಿ ಆ ಹೆಂಗಸು ಹೇಗೆ ಒಲೆ ಹೊತ್ತಿಸಬಹುದು ಎಂದು ದೂರದಿಂದಲೇ ನೋಡುತ್ತಾ ನಿಂತೆ. ಮೊದಲು ಅವಳು ಸೌದೆಯನ್ನು ಇಟ್ಟು, ಸ್ವಲ್ಪ ಸೀಮೆ ಎಣ್ಣೆ ಸುರಿದು, ಕಡ್ಡಿ ಗೀರಿ ಬೆಂಕಿ ಹೊತ್ತಿಸಲು ನೋಡಿದಳು. ಊಹೂಂ, ಒಲೆ ಹೊತ್ತಿಕೊಳ್ಳಲಿಲ್ಲ. ಬರಿ ಹೊಗೆ ಮಾತ್ರ ಏಳುತ್ತಲೇ ಇತ್ತು. ಪಕ್ಕದಲ್ಲಿಯೇ ಇದ್ದ ರಟ್ಟಿನ ಊದುಗೊಳವೆಯನ್ನು ತೆಗೆದುಕೊಂಡು ಊದೇ ಊದಿದಳು. ಒಲೆ ಹೊತ್ತಲಿಲ್ಲ. ನಂತರ ಎಂದೋ ಆಯ್ದಿಟ್ಟಿದ್ದ ಹಾಳೆಯ ಚೂರುಗಳನ್ನು ಒಲೆಯಲ್ಲಿ ಹಾಕಿ ಹೊತ್ತಿಸಲು ನೋಡಿದಳು. ಈಗ ಬರಿ ಹೊಗೆ ಎದ್ದಿತು. ಆದರೆ ಬೆಂಕಿ ಹೊತ್ತಿಕೊಳ್ಳಲಿಲ್ಲ. ಆ ಹೊಗೆಗೆ ಅವಳು ಏದುಸಿರು ಬಿಡುತ್ತಾ ಹತ್ತಾರು ಬಾರಿ ಕೆಮ್ಮಿದಳು. ಜೊತೆಗೆ ಅವಳ ಕಣ್ಣು, ಮೂಗಿಂದ ನೀರು ಸುರಿಯಿತು. ಆಮೇಲೆ ಒಣ ಹುಲ್ಲುಕಡಿಗಳನ್ನು ತೆಗೆದುಕೊಂಡು ಒಂದಿಷ್ಟು ಪುರಳೆ ಮಾಡಿ ಬೆಂಕಿ ಹೊತ್ತಿಸಲು ನೋಡಿದಳು. ಬರಿ ಪುರಳೆ ಮಾತ್ರ ಉರಿದು ಮುಖ್ಯವಾದ ಸೌದೆ ಹೊತ್ತಿಕೊಳ್ಳಲಿಲ್ಲ. ಬಹುಶಃ ಮಳೆಯಿಂದಾಗಿ ಸೌದೆಗಳು ಒದ್ದೆಯಾಗಿ ಹಸಿ ಹಸಿಯಾಗಿದ್ದವೆಂದು ಕಾಣುತ್ತದೆ. ಅಷ್ಟರಲ್ಲಿ ಅವಳ ಐದು ವರ್ಷದ ಕಂದಮ್ಮ “ಅಮ್ಮಾ, ಹಸಿವಾಗ್ತಿದೆ. ಬೇಗ ಮುದ್ದೆ ಬೇಯಿಸಮ್ಮ” ಎಂದು ಅವಳ ಸೆರಗನ್ನು ಹಿಡಿದು ಎಳೆದಾಗ ಅವಳ ಕರುಳು ಚುರ್ರು ಎಂದಿರಬೇಕು. ಇನ್ನು ತಡ ಮಾಡದೆ ಗುಡಿಸಿಲಿನಿಂದ ಹೊರ ಬಂದು ಹತ್ತಿರದಲ್ಲಿಯೇ ಇದ್ದ ಕಿರಾಣಿ ಅಂಗಡಿಯೆಡೆಗೆ ನಡೆದಳು. ನಾನು ಇವಳೇನು ಮಾಡಬಹುದೆಂದು ಕುತೂಹಲದಿಂದ ಅವಳನ್ನೇ ಹಿಂಬಾಲಿಸಿದೆ. ಆ ಕಿರಾಣಿ ಅಂಗಡಿಯವನ ಹತ್ತಿರ ಹೋಗಿ “ಬುದ್ಧಿ, ಇವತ್ತು ಸೌದೆಯೆಲ್ಲಾ ನೆಂದು ಹೋಗಿ ಯಾಕೋ ಒಲೆನೇ ಹತ್ಕೊಳ್ತಾ ಇಲ್ಲ. ಅದ್ಕೆ ನಿಮ್ತಾವ ಸಾಮಾನು ತುಂಬೋ ಖಾಲಿ ರಟ್ಟಿನ ಬಾಕ್ಸು ಇದ್ರೆ ಕೊಡ್ತೀರಾ ಬುದ್ಧಿ. ಅದನ್ನೇ ಒಲೆಯೊಳಗಿಟ್ಟು ಹೆಂಗೋ ಉರಿ ಹೊತ್ತಿಸಿ ನನ್ನ ಮಗೀಗೆ ಒಂದಿಷ್ಟು ಮುದ್ದೆ ಬೇಸಿ ಹಾಕ್ತಿನಿ. ಬೋ ಹಸ್ಗೊಂಡಿದೆ” ಎಂದು ಬೇಡಿದಳು. ಅವಳು ಅಷ್ಟು ಕೇಳಿದ್ದೆ ತಡ ಆ ಕಿರಾಣಿ ಅಂಗಡಿಯವ ”ರಟ್ಟಿನ ಬಾಕ್ಸಂತೆ ರಟ್ಟಿನ ಬಾಕ್ಸು. ಎಲ್ಲಿಂದ ತರೋಣಮ್ಮಾ? ಯಾವ ರಟ್ಟಿನ ಬಾಕ್ಸು ಇಲ್ಲ, ಏನೂ ಇಲ್ಲ. ಹೋಗಮ್ಮಾ ಹೋಗು. ಬಂದಬಿಟ್ಲು ದೊಡ್ಡದಾಗಿ ರಟ್ಟಿನ ಬಾಕ್ಸು ಕೇಳ್ಕೊಂಡು” ಎಂದು ಅವಳ ಮೇಲೆ ಹರಿಹಾಯ್ದ. ಪಾಪ, ಅವಳು ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡು ಸಪ್ಪೆ ಮುಖ ಹಾಕಿಕೊಂಡು ಗುಡಿಸಿಲಿನತ್ತ ಹೆಜ್ಜೆ ಹಾಕಿದಳು. ನನಗೆ ಅವಳ ಅವಸ್ಥೆಯನ್ನು ನೋಡಿ ಮರುಕ ಉಂಟಾಯಿತು. ಹಾಗೆಯೇ ಕಿರಾಣಿ ಅಂಗಡಿಯವನ ಮೇಲೆ ಕೋಪ ಬಂತು. ನಾನೇ ನೋಡುತ್ತಿದ್ದಂತೆ ಅವನ ಬಳಿ ಅಷ್ಟೊಂದು ರಟ್ಟಿನ ಬಾಕ್ಸುಗಳಿದ್ದವು. ಅದರಲ್ಲಿ ಒಂದನ್ನು ಕೊಟ್ಟಿದ್ದರೆ ಅವನ ಗಂಟೇನು ಹೋಗುತ್ತಿತ್ತು? ಎಂದು ಬೇಸರಗೊಳ್ಳುತ್ತಾ ತಡಮಾಡದೆ ಅವನ ಬಳಿ ಹೋಗಿ “ನನಗೆ ಒಂದು ಖಾಲಿ ರಟ್ಟಿನ ಬಾಕ್ಸು ಬೇಕು. ಅತ್ಯವಶ್ಯವಾಗಿ ಬೇಕು. ನಾನದಕ್ಕೆ ದುಡ್ಡು ಕೊಡ್ತೇನೆ” ಎಂದು ಕೇಳಿದೆ. “ಅಯ್ಯೋ, ಒಂದೇನು ಮೇಡಂ, ಅಂಥಾವು ಹತ್ತು ಬೇಕಾದ್ರೆ ತಗೊಂಡು ಹೋಗಿ, ನಾವವನ್ನ ಇಟ್ಕೊಂಡು ಏನ್ ಮಾಡೋದಿದೆ? ಮತ್ತೆ ಖಾಲಿ ಬಾಕ್ಸುಗಳಿಗೆಲ್ಲ ದುಡ್ಡು ಯಾಕೆ ಮೇಡಂ? ಹಂಗೇ ಸುಮ್ನೆ ತಗೊಂಡು ಹೋಗಿ ಮೇಡಂ” ಎಂದು ನನ್ನ ನೋಡಿ ನಗುತ್ತಾ “ಏಯ್, ಮೇಡಮ್ಮೋರಿಗೆ ಒಂದಿಷ್ಟು ರಟ್ಟಿನ ಬಾಕ್ಸು ಅಂತೆ ಕೊಟ್ಟು ಕಳಿಸೋ” ಎಂದು ತನ್ನ ಕೆಲಸದ ಆಳಿಗೆ ತಾಕೀತು ಮಾಡಿದ. ಅವನು ಆ ಖಾಲಿ ರಟ್ಟಿನ ಬಾಕ್ಸುಗಳನ್ನೆಲ್ಲಾ ಸರಿಯಾಗಿ ಮಡಿಚಿ ಒಂದರ ಮೇಲೆ ಒಂದಿಟ್ಟು ದಾರವನ್ನು ಕಟ್ಟಿ ನನ್ನ ಕೈಗಿತ್ತ. ನಾನು ಆ ಅಂಗಡಿಯವನಿಗೆ ಥ್ಯಾಂಕ್ಸ್ ಹೇಳಿ ಅವಳ ಗುಡಿಸಿಲಿನತ್ತ ನಡೆದೆ.

    ನಾನು ಅವಳ ಗುಡಿಸಿಲಿನೊಳಕ್ಕೆ ನಡೆದು ಆ ಬಾಕ್ಷುಗಳನ್ನೆಲ್ಲಾ ಅವಳ ಮುಂದೆ ಇಟ್ಟು “ತಗೋ ಇವನ್ನ, ಇನ್ನೂ ಎಂಟು ದಿನಕ್ಕಾಗುವಷ್ಟು ತಂದಿದೇನೆ” ಎಂದು ಹೇಳಿದೆ. ಅವಳು ಕೃತಜ್ಞತಾ ಭಾವದಿಂದ ನನ್ನ ಕೈಯನ್ನು ಹಿಡಿದು “ಮುಂದಿನ ಜನ್ಮಾ ಅಂತಾ ಇದ್ರೆ ನಾನ್ ನಿನ್ ಹೊಟ್ಯಾಗ ಮಗಳಾಗಿ ಉಟ್ಟಿ ನಿನ್ ಉಪಕಾರ ತಿರಿಸ್ತೇನವ್ವಾ” ಎಂದು ಕಣ್ಣೀರಿಟ್ಟಳು. ನಾನು “ಅಳಬೇಡ. ಮಗೂಗೆ ಬೇಗ ಮುದ್ದೆ ಬೇಸಿ ಹಾಕಮ್ಮ” ಎಂದೆ. ಅವಳು ಮುದ್ದೆ ಬೇಯಿಸಿ ಮಗೂಗೆ ಉಣ್ಣಿಸೋವರೆಗೆ ಅವಳ ಹತ್ತಿರ ಇದ್ದು ಆ ದೃಶ್ಯಗಳನ್ನು ಕಣ್ತುಂಬಾ ತುಂಬಿಕೊಂಡು ಮನೆಯತ್ತ ಹೊರಟೆ. ರಾತ್ರಿ ಎಷ್ಟು ಹೊತ್ತಾದರು ನಿದ್ರೆ ಬರಲಿಲ್ಲ. ಏಕೋ ಈ ಘಟನೆ ನನ್ನನ್ನು ಕೊರೆಯುತ್ತಲೇ ಇತ್ತು. ಹಾಗೆ ನೋಡಿದರೆ ರಟ್ಟಿನ ಬಾಕ್ಸುಗಳು ನನಗೆ ಅವಶ್ಯವಾಗಿರಲಿಲ್ಲ. ಅವಶ್ಯವಿದ್ದದ್ದು ಆ ಹೆಂಗಸಿಗೆ. ಆದರೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಅಂಗಡಿಯವ ಅವನ್ನು ಅವಳಿಗೆ ಕೊಡದೆ ನನಗೇಕೆ ಕೊಟ್ಟ? ಅಂದರೆ ನನ್ನ ಯೌವನ, ರೂಪ ನೋಡಿ ಕೊಟ್ಟನೆ? ಅಥವಾ ನಾನು ವಿದ್ಯಾವಂತೆಯೆಂದು ಕೊಟ್ಟನೆ? ಅಥವಾ ನಾನು ಕೇಳಿದ ರೀತಿ ಆಧುನಿಕ ಬದುಕಿನ ನಯ ನಾಜೂಕತೆಯಿಂದ ಕೂಡಿತ್ತೆಂದು ಕೊಟ್ಟನೆ? ಅಥವಾ ಜನರಿಗೆ ಬಡತನ, ಬಡವರ ಗೋಳನ್ನು ಅರ್ಥ ಮಾಡಿಕೊಳ್ಳದಷ್ಟು ವ್ಯವಧಾನ, ತಾಳ್ಮೆ ಹೊರಟು ಹೋಗಿದೆಯೆ? ಅಥವಾ ಇವರೆಲ್ಲಾ ಇದ್ದವರಿಗೆ ಮಾತ್ರ ಸಹಾಯ ಮಾಡುತ್ತಾರಾ? ಉತ್ತರ ಹುಡುಕುತ್ತಿದ್ದೇನೆ. ಇನ್ನೂ ಸಿಕ್ಕಿಲ್ಲ.

    -ಉದಯ್ ಇಟಗಿ