Demo image Demo image Demo image Demo image Demo image Demo image Demo image Demo image

ಪ್ರೀತಿ ಈ ದಿನಗಳಲ್ಲಿ ಹೇಗೆ ಸಾಯುತ್ತದೆ?

  • ಗುರುವಾರ, ಡಿಸೆಂಬರ್ 04, 2014
  • ಬಿಸಿಲ ಹನಿ


  • ಪ್ರೀತಿ ಕೂಡಾ ಈ ದಿನಗಳಲ್ಲಿ
    ಕಾಗೆಗಳು ಸತ್ತಷ್ಟೇ ಸುಲಭವಾಗಿ ಸಾಯುತ್ತದೆ.
    ನಾವು ಒಬ್ಬರೊನ್ನೊಬ್ಬರು ನೋಡುವದನ್ನು ಯಾವಾಗ
    ನಿಲ್ಲಿಸುತ್ತೇವೆ ಎಂಬುದು ನಮಗೇ ಗೊತ್ತಿರುವದಿಲ್ಲ.
    ಒಂದು ಕಾಲಕ್ಕೆ ನಿಮ್ಮ ಮೈ-ಮನಸ್ಸುಗಳನ್ನು ಮುದಗೊಳಿಸುತ್ತಿದ್ದ ಆ ಹೆಸರು
    ಈಗ ಕಿರಿಕಿರಿಯೆನಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವದಿಲ್ಲ.
    ಅವಳಿಗಿಟ್ಟ ಮುದ್ದುಮುದ್ದಾದ ಹೆಸರುಗಳೆಲ್ಲಾ
    ಶಬ್ಧಕೋಶದಿಂದಲೇ ಅಳಿಸಿಹೋಗುತ್ತವೆ.   
    ನಾವು ಒಂದೊಮ್ಮೆ ಅವಳಿಗಾಗಿ ಬರೆಯುವದಕ್ಕಸ್ಕೋರ ಸೃಷ್ಟಿಸಿದ
    ಸುಳ್ಳುಸುಳ್ಳು ಯೂಸರ್‍ನೇಮ್ ಮತ್ತು ಪಾಸ್‍ವರ್ಡ್‍ಗಳನ್ನು ಕಂಪ್ಯೂಟರ್ ಸಹ ಮರೆತುಬಿಡುತ್ತದೆ.
    ಟೈಪಿಸಿಟ್ಟ ಮೆಸ್ಸೇಜ್‍ಗಳು ವಿದ್ಯುತ್ ಸಂಪರ್ಕ ಕಡಿತಗೊಂಡು
    ಕಣ್ಮರೆಯಾಗುತ್ತವೆ.
    ದಿನಕ್ಕೆ ಮೂರು ಬಾರಿ ನೋಡುತ್ತಿದ್ದ
    ಅವಳ ಫೇಸ್‍ಬುಕ್ ಪೇಜ್
    ಈಗ ಎಲ್ಲೋ ಮೂಲೆಯಲ್ಲಿ ಮಿನುಗುವ ನಕ್ಷತ್ರ.
    ಒಂದೊಮ್ಮೆ ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸಿದ ಅವಳ ದನಿ
    ಈಗ ಗಾಳಿಯಲ್ಲಿ ಎಲ್ಲಿಂದಲೋ ತೇಲಿಬರುವ ಹಾಡು.
    ಅವಳ ವಾಸನೆ ನೀವು ಬಾಲ್ಯದಲ್ಲಿ
    ಬೆಟ್ಟಗುಡ್ದಗಳ ಸಾಲಿನಲ್ಲಿ ಓಡಾಡುವಾಗ
    ತಟ್ಟನೆ ಪ್ರತಿಫಲಿಸಿದ ಒಂದು ಹೆಸರಿರದ ಹೂವು.
    ಅವಳ ಸ್ಪರ್ಶ ದಾರಿ ಪಕ್ಕದ ಗಿಡವೊಂದು
    ನಿಮ್ಮ ಅಂಗಿಗೆ ತಗುಲಿದ ಹಾಗೆ.
    ಈಗ ಅವಳ ಹೆಸರು ಮಳೆನೀರಲ್ಲಿ ಕೊಚ್ಚಿ
    ಸಾಗರದಲ್ಲಿ ಲೀನವಾಗಿ,
    ನಿಶ್ಚಿತ ಉನ್ಮತ್ತ ಮಧ್ಯಾಹ್ನಗಳ ಬಿಸಿಲಿನಲ್ಲಿ,
    ಅಲೆಗಳ ಅಂಚಿನಲ್ಲಿ,
    ಕತ್ತಿಯ ಅಲಗಿನಂತೆ ಹೊಳೆಯುತ್ತಿದೆ.

    ಮೂಲ ಮಲಯಾಳಂ: ಕೆ. ಸಚ್ಚಿದಾನಂದ
    ಇಂಗ್ಲೀಷಿಗೆ: ಕೆ. ಸಚ್ಚಿದಾನಂದ
    ಕನ್ನಡಕ್ಕೆ: ಉದಯ್ ಇಟಗಿ



    ಕೃತಕ ಗುಲಾಬಿಗಳು

  • ಬುಧವಾರ, ಡಿಸೆಂಬರ್ 03, 2014
  • ಬಿಸಿಲ ಹನಿ

  • ನಸುಕಿನ ನಸುಬೆಳಕಿನಲ್ಲಿ ತನ್ನ ದಾರಿಯನ್ನು ತಡಕಾಡುತ್ತಾ, ಮಿನಾ ನಿನ್ನೆ ರಾತ್ರಿ ತನ್ನ ಮಂಚದ ಪಕ್ಕದಲ್ಲಿ ನೇತುಹಾಕಿದ್ದ ತೋಳುಗಳಿಲ್ಲದ ತನ್ನ ಗೌನನ್ನು ತೆಗೆದು ಹಾಕಿಕೊಳ್ಳುತ್ತಾ ತನ್ನ ಟ್ರಂಕಿನಲ್ಲಿ ಅದರ ಕೃತಕ ತೋಳುಗಳಿಗಾಗಿ ಹುಡುಕಾಡಿದಳು.
    ಅಲ್ಲಿ ಅವು ಸಿಗದೇ ಹೋದಾಗ ಗೋಡೆಯ ಮೇಲಿನ ಮೊಳೆಗಳಲ್ಲಿ ಮತ್ತು ಕದದ ಸಂಧಿಯಲ್ಲಿ ಒಂಚೂರು ಸದ್ದಾಗದಂತೆ, ಸದ್ದಾದರೆ ಅದೇ ಕೋಣೆಯಲ್ಲಿ ಮಲಗಿದ್ದ ತನ್ನ ಕುರುಡಜ್ಜಿ ಎಚ್ಚರಗೊಳ್ಳಬಹುದೆಂದುಕೊಂಡು ಸಾವಕಾಶವಾಗಿ ಹುಡುಕತೊಡಗಿದಳು. ಕತ್ತಲಿಗೆ ಅವಳ ಕಣ್ಣುಗಳು ಹೊಂದಿಕೊಳ್ಳುತ್ತಿದ್ದಂತೆ, ಅವಳ ಅಜ್ಜಿ ಅದಾಗಲೇ ಎದ್ದಿದ್ದಾಳೆ ಎಂಬುದನ್ನು ಗಮನಿಸಿದಳು. ಹಾಗಾಗಿ ಅವಳು ತನ್ನ ಅಜ್ಜಿಯ ಬಳಿ ತೋಳುಗಳ ಬಗ್ಗೆ ವಿಚಾರಿಸಲು ನೇರವಾಗಿ ಅಡುಗೆ ಮನೆಗೆ ಹೋದಳು. 
    “ಅವು ಬಚ್ಚಲು ಮನೆಯಲ್ಲಿವೆ.” ಕುರುಡಜ್ಜಿ ಹೇಳಿದಳು. “ನಿನ್ನೆ ಮಧ್ಯಾಹ್ನ ನಾನು ಅವನ್ನು ಒಗೆದು ಹಾಕಿದೆ.”
    ಅವು ಅಲ್ಲಿದ್ದವು. ಗೋಡೆಯ ಎರಡೂ ಬದಿಯ ಮೊಳೆಗಳಿಗೆ ಹೊಡೆದಿದ್ದ ತಂತಿಯ ಮೇಲೆ ಅವನ್ನು ನೇತುಹಾಕಲಾಗಿತ್ತು. ಅವಿನ್ನೂ ಹಸಿಯಾಗಿದ್ದವು. ಮಿನಾ ಮತ್ತೆ ಅಡುಗೆ ಮನೆಗೆ ಮರಳಿ ಅವನ್ನು ಒಣಗಿಸಲು ಕಲ್ಲಿನ ಒಲೆಯ ಮೇಲಿಟ್ಟಳು. ಅವಳ ಮುಂದೆ ಕುರುಡಜ್ಜಿ ಕಾಫಿಯನ್ನು ಕದಡುತ್ತಾ ತನ್ನ ನಿಷ್ಪ್ರಯೋಜಕ ಕಣ್ಣು ಗುಡ್ಡೆಗಳನ್ನು ಹೊರಾಂಗಣದಲ್ಲಿ ಇಟ್ಟಿಗೆಗಳ ಬಡುವಿನ ಮೇಲಿಟ್ಟಿದ್ದ ಔಷಧೀಯ ಗಿಡಮೂಲಿಕೆಗಳತ್ತ ನೆಟ್ಟಳು.  
    “ನನ್ನ ಬಟ್ಟೆಗಳನ್ನು ಮತ್ತೆ ಒಗೆಯೋಕೆ ಹೋಗಬೇಡ.” ಮಿನಾ ಹೇಳಿದಳು. “ಈ ದಿನಗಳಲ್ಲಿ ಬಿಸಿಲನ್ನು ನೆಚ್ಚಿಕೊಳ್ಳೊದಿಕ್ಕೆ ಆಗೋದಿಲ್ಲ.”  
    ಕುರುಡಜ್ಜಿ ಧ್ವನಿ ಬಂದತ್ತ ತನ್ನ ಮುಖವನ್ನು ತಿರುಗಿಸಿದಳು.
    “ನನಗೆ ಇದು ತಿಂಗಳದ ಮೊದಲ ಶುಕ್ರುವಾರ ಎನ್ನುವದು ಮರೆತುಹೋಗಿತ್ತು.” ಅವಳು ಹೇಳಿದಳು.   
    ಕಾಫಿ ಆಗಿದೆಯೋ ಇಲ್ವೋ ಎಂಬುದನ್ನು ತಿಳಿದುಕೊಳ್ಳಲು ಆಕೆ ಒಮ್ಮೆ ಆಳವಾಗಿ ಉಸಿರೆಳೆದುಕೊಂಡು ಕೆಟಲ್‍ನ್ನು ಒಲೆಯ ಮೇಲಿಂದ ಇಳಿಸಿದಳು.
    “ಇವುಗಳ ಕೆಳಗಡೆ ಒಂದು ಕಾಗದದ ತುಂಡಿಡು, ಯಾಕಂದ್ರೆ ಈ ಕಲ್ಲುಗಳು ಮಸಿ ಹಿಡಿದಿವೆ.”  ಕುರುಡಜ್ಜಿ ಹೇಳಿದಳು.
    ಮಿನಾ ಆ ಕಲ್ಲಿನ ಒಲೆಯ ಮೇಲೆ ತನ್ನ ತೋರುಬೆರಳಿನಿಂದ ಒಮ್ಮೆ ಉಜ್ಜಿ ನೋಡಿದಳು. ಅಲ್ಲಿ ಮಸಿ ಹೆಕ್ಕಳಗಟ್ಟಿತ್ತು. ಅದಕ್ಕೆ ತೋಳುಗಳು ತಾಕದಂತೆ ನೋಡಿಕೊಂಡರೆ ಅವು ಕೊಳೆಯಾಗುವ ಸಂಭವವಿರಲಿಲ್ಲ. 
    ಕುರುಡಜ್ಜಿ ತನಗೊಂದು ಕಪ್ ಕಾಫಿ ಮಾಡಿಕೊಂಡಳು.
    “ನಿನಗೆ ಕೋಪ ಬಂದಿದೆ.” ಅವಳು ಖುರ್ಚಿಯನ್ನು ಹೊರಾಂಗಣಕ್ಕೆ ತಳ್ಳುತ್ತಾ ಹೇಳಿದಳು. “ನೀನು ಕೋಪಗೊಂಡಾಗ ಪ್ರಾರ್ಥಿಸುವದು ಅಪಚಾರವಾಗುತ್ತದೆ.” ಅವಳು ತನ್ನ ಕಾಫಿ ಕುಡಿಯಲು ತೆರೆದ ಒಳಾಂಗಣದಲ್ಲಿದ್ದ ಗುಲಾಬಿಗಳ ಮುಂದೆ ಕುಳಿತಳು. ಪ್ರಾರ್ಥನೆಗಾಗಿ ಮೂರನೇ ಗಂಟೆ ಬಾರಿಸಿದಾಗ, ಮಿನಾ ಒಲೆಯ ಮೇಲಿಂದ ತನ್ನ ತೋಳುಗಳನ್ನು ಎಳೆದುಕೊಂಡಳು. ಅವಿನ್ನೂ ಹಸಿಯಾಗಿದ್ದವು. ಆದರೂ ಅವನ್ನೇ ಹಾಕಿಕೊಂಡಳು. ಫಾದರ್ ಏಂಜಿಲ್, ಅವಳು ಬರೀ ತೋಳುಗಳಲ್ಲಿ ಹೋದರೆ ಅವಳಿಗೆ ಪ್ರಾರ್ಥಿಸಲು ಬಿಡಲಾರ. ಅವಳು ಮುಖವನ್ನು ತೊಳೆಯದೆ ಬರೀ ಒಂದು ವಸ್ತ್ರದಿಂದ ಅದನ್ನು ಒರೆಸಿಕೊಂಡು ತನ್ನ ಪ್ರಾರ್ಥನೆಯ ಪುಸ್ತಕ ಮತ್ತು ರೇಶ್ಮೆಯ ಸ್ಕಾರ್ಫನ್ನು ಎತ್ತಿಕೊಂಡು ಹೊರನಡೆದಳು. ಕಾಲು ಗಂಟೆಯ ಬಳಿಕ ಮತ್ತೆ ವಾಪಾಸಾದಳು.
    “ನೀನಲ್ಲಿಗೆ ಒಂದಿಷ್ಟು ಪ್ರಾರ್ಥನೆಗಳು ಮುಗಿದ ಮೇಲೆ ಹೋಗುತ್ತೀಯ ಅಂತಾ ಕಾಣುತ್ತೆ.” ಕುರುಡಜ್ಜಿ ಗುಲಾಬಿಗಳ ಮುಂದೆ ಕುಳಿತುಕೊಳ್ಳುತ್ತಾ ಅನುಮಾನ ವ್ಯಕ್ತಪಡಿಸಿದಳು.
    ಮಿನಾ ನೇರವಾಗಿ ಔಟ್ಹೌಸ್ ಕಡೆಗೆ ಹೋದಳು.         
     
    ನಾನು ಪ್ರಾರ್ಥನೆಗೆ ಹೋಗಲಾರೆ.” ಅವಳು ಹೇಳಿದಳು “ನನ್ನ ತೊಳುಗಳು ಹಸಿಯಾಗಿವೆ ಮತ್ತು ನನ್ನ ಬೇರೆ ಯಾವ ಬಟ್ಟೆಗಳೂ ಇಸ್ತ್ರಿಯಾಗಿಲ್ಲ.”
    ಅವಳಿಗೆ ಕುರುಡಜ್ಜಿ ತನ್ನನ್ನು ಹಿಂಬಾಲಿಸುತ್ತಿದ್ದಾಳೆ ಎಂದನಿಸಿತು.
    “ಇವತ್ತು ಮೊದಲ ಶುಕ್ರವಾರ. ಈ ದಿನ ತುಂಬಾ ಪವಿತ್ರವಾದದ್ದು. ನೀನು ಈ ಪ್ರಾರ್ಥನಗೆ ಹೋಗುವದಿಲ್ಲವೇ?” ಕುರುಡಜ್ಜಿ ಕೇಳಿದಳು.
    ಔಟ್ಹೌಸಿನಿಂದ ಮರಳುವಾಗ ಮಿನಾ ಒಂದು ಕಪ್ ಕಾಫಿಯನ್ನು ತೆಗೆದುಕೊಂಡು ಬಾಗಿಲ ಬಳಿ ಕುರುಡಜ್ಜಿಯ ಪಕ್ಕ ಕುಳಿತಳು. ಆದರೆ ಅವಳಿಗೆ ಕಾಫಿ ರುಚಿಸಲಿಲ್ಲ.
    “ಇದು ನಿನ್ನ ತಪ್ಪು.” ಅವಳು ಅಸಹನೆಯಿಂದ ಗೊಣಗಿದಳು. ಕಂಗಳಲ್ಲಿ ನೀರಿತ್ತು.
    “ನೀನು ಅಳುತ್ತಿರುವಿ.” ಕುರುಡಜ್ಜಿ ಉದ್ಗರಿಸಿದಳು.
    ಅವಳು ನೀರುಣಿಸುವ ಬಿಂದಿಗೆಯನ್ನು ಕೆಳಗಿಟ್ಟು “ನೀನು ಅಳುತ್ತಿರುವೆ.” ಎಂದು ಮತ್ತೆ ಹೇಳುತ್ತಾ ಒಳಾಂಗಣವನ್ನು ಬಿಟ್ಟು ಬಂದಳು.
    “ನೀನು ನಿನ್ನ ತಪ್ಪನ್ನು ಒಪ್ಪಿಕೋ. ನಿನ್ನಿಂದಾಗಿ ನನಗೆ ಮೊದಲ ಶುಕ್ರವಾರದ ಪ್ರಾರ್ಥನೆ ತಪ್ಪಿಹೋಯಿತು.”
    ಮಿನಾ ಬೆಡ್ ರೂಮಿನ ಬಾಗಿಲು ಮುಚ್ಚಬಹುದೆಂದು ಕುರುಡಜ್ಜಿ ಅಲ್ಲೇ ನಿಂತಳು. ನಂತರ  ಹೊರಾಂಗಣದ ತುದಿಯವರೆಗೆ ತಡಕಾಡುತ್ತಾ ನಡೆದುಕೊಂಡು ಹೋದಳು. ಅಲ್ಲಿ ನೆಲದ ಮೇಲೆ ಕಾಫಿ ಕಪ್ ಹಾಗೇ ಇತ್ತು. ಅವಳು ಅದರಲ್ಲಿನ ಕಾಫಿಯನ್ನು ಕಿತ್ತಲಿಗೆ ಮರಳಿ ಸುರಿಯುತ್ತಾ ಹೇಳಿದಳು. 
    “ನಾನು ಬೇಕಂತಲೇ ಮಾಡಿದ್ದಲ್ಲ. ಆ ದೇವರಿಗೂ ಗೊತ್ತಿದೆ ನನ್ನ ಮನಸ್ಸು ಎಷ್ಟು ಪರಿಶುದ್ಧವಾಗಿದೆಯೆಂದು.”
    ಅಷ್ಟರಲ್ಲಿ ಮಿನಾಳ ತಾಯಿ ಬೆಡ್‍ರೂಂನಿಂದ ಹೊರಗೆ ಬಂದಳು.
    “ಯಾರ ಜೊತೆ ಮಾತನಾಡುತ್ತಿದ್ದಿಯಾ?” ಆಕೆ ಕೇಳಿದಳು.
    “ಯಾರ ಜೊತೆನೂ ಇಲ್ಲ.” ಕುರುಡಜ್ಜಿ ತಣ್ಣನೆಯ ದನಿಯಲ್ಲಿ ಹೇಳಿದಳು. “ನನಗೆ ಹುಚ್ಚು ಹಿಡಿತಾ ಇದೆ.”
    ತನ್ನ ರೂಮಿನೊಳಗೆ ಹೋಗಿ ಮಿನಾ ಬಾಗಿಲನ್ನು ಮುಚ್ಚಿ ತನ್ನ ಕುಪ್ಪಸದೊಳಗಿಂದ ಮೂರು ಸಣ್ಣ ಬೀಗದ ಕೈಗಳನ್ನು ಹೊರತೆಗೆದಳು. ಅದರ ಒಂದು ಬೀಗದ ಕೈಯಿಂದ ತನ್ನ ಡ್ರೆಸ್ಸಿಂಗ್ ಟೇಬಲ್ಲಿನ ಕೆಳಗಿನ ಡ್ರಾಯರನ್ನು ತೆರೆದು ಅದರೊಳಗಿಂದ ಒಂದು ಚಿಕ್ಕ ಮರದ ಪೆಟ್ಟಿಗೆಯನ್ನು ಹೊರತೆಗೆದಳು. ಇನ್ನೊಂದು ಕೀಯನ್ನು ಉಪಯೋಗಿಸಿ ಅದರ ಮುಚ್ಚಳವನ್ನು ತೆರೆದಳು. ಅದರಲ್ಲಿ ಪತ್ರಗಳ ಪ್ಯಾಕೆಟೊಂದನ್ನು ಬಣ್ಣದ ಕಾಗದದಲ್ಲಿ ಎಲಾಸ್ಟಿಕ್ ಬ್ಯಾಂಡ್ ಹಾಕಿಟ್ಟಿದ್ದರು. ಅವನ್ನು ತನ್ನ ಕುಪ್ಪಸದೊಳಗೆ ತುರುಕಿಕೊಂಡಳು. ಟ್ರಂಕ್‍ನ್ನು ಮತ್ತೆ ಅದರ ಜಾಗದಲ್ಲಿಟ್ಟು ಡ್ರ‍ಾಯರಿನ ಬೀಗ ಹಾಕಿದಳು. ನಂತರ ಔಟ್ಹೌಸ್‍ಗೆ ಹೋಗಿ ಪತ್ರಗಳನ್ನು ಗುಂಡಿಯ ಕೆಳಗೆ ಬಚ್ಚಿಟ್ಟಳು.
    “ನಾನು, ನೀನು ಪ್ರಾರ್ಥನೆಗೆ ಹೋಗಿದ್ದೀಯಾ ಅಂದುಕೊಂಡಿದ್ದೆ.” ಅವಳ ತಾಯಿ ಹೇಳಿದಳು.
    “ಅವಳಿಗೆ ಹೋಗಲಿಕ್ಕಾಗಲಿಲ್ಲ.” ಕುರುಡಜ್ಜಿ ನಡುವೆ ಬಾಯಿ ಹಾಕಿದಳು. “ಇವತ್ತು ಮೊದಲ ಶುಕ್ರವಾರ ಅನ್ನೋದು ಮರೆತುಹೋಗಿ ನಾನು ಅವಳ ತೋಳುಗಳನ್ನು ನಿನ್ನೆ ಮಧ್ಯಾಹ್ನ ಒಗೆದುಹಾಕಿದೆ.”
    “ಅವಿನ್ನೂ ಒದ್ದೆಯಾಗಿವೆ.” ಮಿನಾ ಗೊಣಗಿದಳು.
    “ಈಗ ನಿನಗೆ ತುಂಬಾ ಕೆಲಸವಿದೆ ಅಂತಾ ಕಾಣುತ್ತದೆ, ಅಲ್ವಾ?” ಕುರುಡಜ್ಜಿ ಕೇಳಿದಳು.
    “ಹೌದು, ಈಸ್ಟರ್ ಹಬ್ಬದ ದಿನ ನಾನು ನೂರೈವತ್ತು ಡಜನ್ ಗುಲಾಬಿಗಳನ್ನು ತಲುಪಿಸಬೇಕಿದೆ.” ಮಿನಾ ಉತ್ತರಿಸದಳು.
    ಆವತ್ತು ಸೂರ್ಯ ಬಹಳ ಬೇಗನೆ ಉದಯಿಸಿದ. ಏಳು ಗಂಟೆಯಷ್ಟೊತ್ತಿಗೆ ಮಿನಾ ತನ್ನ ಕೋಣೆಯಲ್ಲಿಯೇ ಕೃತಕ ಗುಲಾಬಿಗಳ ವರ್ಕ್ ಶಾಪ್ ಆರಂಭಿಸಿದಳು. ಅವಳು ಒಂದು ಬುಟ್ಟಿ ತುಂಬಾ ಪಕಳೆಗಳು. ವಯರ್, ಎಲಾಸ್ಟಿಕ್, ಎರಡು ಕತ್ತರಿಗಳು, ದಾರದುಂಡೆ, ಹಾಗೂ ಅಂಟಿನ ಬಾಟಲನ್ನಿಟ್ಟುಕೊಂಡು ತನ್ನ ಕೆಲಸ ಆರಂಭಿಸಿದಳು. ಸ್ವಲ್ಪ ಹೊತ್ತಿನ ನಂತರ ಟ್ರಿನಿದಾದ್ ತನ್ನ ಕಂಕುಳಲ್ಲಿ ಒಂದು ಕಾರ್ಡ್ಬೋರ್ಡ್ ಪೆಟ್ಟಿಗೆಯನ್ನಿಟ್ಟುಕೊಂಡು ಬಂದಳು.
    “ನೀನಿನ್ನೂ ಯಾಕೆ ಪ್ರಾರ್ಥನೆಗೆ ಹೋಗಿಲ್ಲ?”
    “ನನ್ನ ಹತ್ತಿರ ತೋಳುಗಳಿರಲಿಲ್ಲ.” ಮಿನಾ ಹೇಳಿದಳು.
    “ಯಾರನ್ನಾದರು ಕೇಳಿದ್ದರೆ ಕಡ ಕೊಡುತ್ತಿದ್ದರೇನೋ?” ಎಂದು ಹೇಳುತ್ತಾ ಟ್ರಿನಿದಾದ್ ಪಕಳೆಗಳಿದ್ದ ಬುಟ್ಟಿಯ ಬಳಿ ಖುರ್ಚಿಯೊಂದನ್ನೆಳೆದುಕೊಂಡು ಕುಳಿತಳು.
    “ನಂಗೆ ಆಗಲೇ ತಡವಾಗಿತ್ತು.” ಮಿನಾ ಹೇಳಿದಳು.
    ಅವಳು ಒಂದು ಗುಲಾಬಿಯನ್ನು ಮಾಡಿ ಮುಗಿಸಿದಳು. ನಂತರ ಬುಟ್ಟಿಯನ್ನು ತನ್ನೆಡೆಗೆ ಎಳೆದುಕೊಂಡು ಅದರಲ್ಲಿದ್ದ ಪಕಳೆಗಳನ್ನು ಕತ್ತರಿಯಿಂದ ಸುರುಳಿ ಸುರುಳಿಯಾಗಿ ಸುತ್ತಿದಳು. ಟ್ರಿನಿದಾದ್ ತನ್ನ ಕೈಯಲ್ಲಿದ್ದ ಕಾರ್ಡ್ಬೋರ್ಡ್ ಪೆಟ್ಟಿಗೆಯನ್ನು ಕೆಳಗಿಟ್ಟು ಅವಳ ಕೆಲಸಕ್ಕೆ ಕೈಜೋಡಿಸಿದಳು.
    ಮಿನಾ ಆ ಪೆಟ್ಟಿಗೆಯನ್ನು ಗಮನಿಸಿ “ನೀನು ಶೂಗಳನ್ನು ಕೊಂಡೆಯಾ?” ಎಂದು ಕೇಳಿದಳು.
    “ಇಲ್ಲ. ಅವು ಸತ್ತ ಇಲಿಗಳು.” ಟ್ರಿನಿದಾದ್ ಹೇಳಿದಳು.
    ಟ್ರಿನಿದಾದ್ ಪಕಳೆಗಳನ್ನು ಸುತ್ತುವದರಲ್ಲಿ ಪರಿಣಿತಳಾಗಿದ್ದರಿಂದ ಮಿನಾ ಹಸಿರು ಕಾಗದದಲ್ಲಿ ಸುತ್ತಿದ ಕಾಂಡಗಳನ್ನು ತಯಾರಿಸುವದರಲ್ಲಿ ಮಗ್ನಳಾದಳು. ಅವರಿಬ್ಬರೂ ಸೂರ್ಯ ಕೋಣೆಯೊಳಕ್ಕೆ ಬಂದಿದ್ದನ್ನು ಕೂಡಾ ಗಮನಿಸದೇ ಮೌನದಲ್ಲೇ ಕೆಲಸ ಮಾಡುತ್ತಿದ್ದರು. ಕಾಂಡ ಮಾಡುವದನ್ನು ಮುಗಿಸಿದ ಮೇಲೆ ಮಿನಾ ಟ್ರಿನಿದಾದಾನ ಕಡೆ ತಿರುಗಿದಳು. ಆದರೆ ಅವಳ ಮನಸ್ಸು ಇನ್ನೆಲ್ಲೋ ಇತ್ತು. ಟ್ರಿನಿದಾದಾ ಕಾಲು ಚಾಚಿಕೊಂಡು ಕುಳಿತು ಅತ್ಯಂತ ಶ್ರದ್ಧೆಯಿಂದ ತನ್ನ ಬೆರಳತುದಿಗಳಿಂದ ಪಕಳೆಗಳನ್ನು ಸುತ್ತುತ್ತಿದ್ದಳು. ಮಿನಾ, ಅವಳು ಗಂಡಸರ ಶೂಗಳನ್ನು ಹಾಕಿಕೊಂಡಿರುವದನ್ನು ಗಮನಿಸಿದಳು. ಟ್ರಿನಿದಾದಾ ಅವಳ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ತಲೆಯನ್ನು ಎತ್ತದೆ, ನಿಧಾನಕ್ಕೆ ತನ್ನ ಕಾಲುಗಳನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾ ಕೇಳಿದಳು.
    “ಏನಾಯ್ತು?”
    ಮಿನಾ ಅವಳೆಡೆಗೆ ತಿರುಗುತ್ತಾ ಹೇಳಿದಳು.
    “ಅವನು ಹೊರಟು ಹೋದ.”   
    ಟ್ರಿನಿದಾದಾ ಕತ್ತರಿಯನ್ನು ಕೈ ಬಿಟ್ಟಳು.
    “ಇಲ್ಲ....”
    “ನಿಜವಾಗ್ಲೂ. ಅವನು ಹೊರಟು ಹೋದ.” ಮಿನಾ ಮತ್ತೆ ಹೇಳಿದಳು.
    ಟ್ರಿನಿದಾದಾ ಅವಳನ್ನು ಕಣ್ಣು ಮಿಟುಕಿಸದೆಯೇ ನೋಡಿದಳು. ಅವಳ ಹುಬ್ಬು ಗಂಟಿಕ್ಕಿದವು.
    “ಈಗೇನು ಮಾಡೋದು?”
    ಮಿನಾ ತನ್ನ ಧ್ವನಿಯಲ್ಲಿ ಯಾವೊಂದು ಕಂಪನವಿಲ್ಲದೇ ಹೇಳಿದಳು.
    “ಏನೂ ಇಲ್ಲ.”
    ಟ್ರಿನಿದಾದಾ ಹತ್ತು ಘಂಟೆಗೆ ಮುಂಚೆಯೇ ಹೋದಳು.
    ಬಚ್ಚಿಟ್ಟ ರಹಸ್ಯವನ್ನು ಬಿಚ್ಚಿಟ್ಟು ಹಗುರಾದ ಮಿನಾ ಸತ್ತ ಇಲಿಗಳನ್ನು ಎಸೆಯಲು ಔಟ್ಹೌಸ್ ಕಡೆಗೆ ಹೋದಳು. ಕುರುಡಜ್ಜಿ ಗುಲಾಬಿ ಗಿಡಗಳನ್ನು ಕತ್ತರಿಸುತ್ತಿದ್ದಳು.
    “ನಾನು ಬೇಕಾದ್ರೆ ಬಾಜಿ ಕಟ್ತಿನಿ ಈ ಪೆಟ್ಟೆಗೆಯಲ್ಲೇನಿದೆ ಎಂದು ಹೇಳ್ತಿಯಾ?” ತನ್ನ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಕುರುಡಜ್ಜಿಯನ್ನು ಸ್ವಲ್ಪ ಛೇಡಿಸೋಣವೆಂದು ಮಿನಾ ಅವಳನ್ನು ತಡೆದು ಕೇಳಿದಳು.
    ಮಿನಾ ಒಮ್ಮೆ ಪೆಟ್ಟಿಗೆಯನ್ನು ಅಲ್ಲಾಡಿಸಿದಳು. ಕುರುಡಜ್ಜಿ ಹತ್ತಿರದಿಂದ ಆ ಸದ್ದನ್ನು ಕೇಳಿದಳು.
    “ಇನ್ನೊಂದು ಸಾರಿ ಅಲ್ಲಾಡಿಸು.” ಆಕೆ ಕೇಳಿದಳು.
    ಮಿನಾ ಮತ್ತೊಮ್ಮೆ ಅಲ್ಲಾಡಿಸಿದಳು. ಕುರುಡಜ್ಜಿ ತೋರುಬೆರಳಿನಿಂದ ತನ್ನ ಕಿವಿಯ ಕೆಳತುದಿಯನ್ನೆಳೆದು ಲಕ್ಷ್ಯಗೊಟ್ಟು ಕೇಳಿದಳು. ಊಹೂಂ, ಆಗಲೂ ಗೊತ್ತಾಗಲಿಲ್ಲ. ಹೀಗೇ ಮೂರು ಬಾರಿ ಕೇಳಿದಳು. ಆಗಲೂ ಪೆಟ್ಟಿಗೆಯಲ್ಲಿದ್ದ ವಸ್ತುಗಳೇನೆಂದು ಅವಳಿಗೆ ಕಂಡುಹಿಡಯಲಾಗಲಿಲ್ಲ.
    “ಅವು ನಿನ್ನೆ ರಾತ್ರಿ ಚರ್ಚಿನ ಬಲೆಯಲ್ಲಿ ಬಿದ್ದ ಇಲಿಗಳು.” ಮಿನಾ ಹೇಳಿದಳು.
    ಮರಳಿ ಬರುವಾಗ ಅವಳು ಏನನ್ನೂ ಮಾತನಾಡದೆ ಕುರುಡಜ್ಜಿಯ ಪಕ್ಕದಲ್ಲಿಯೇ ಹಾದುಹೋದಳು. ಆದರೆ ಕುರುಡಜ್ಜಿ ಅವಳನ್ನು ಹಿಂಬಾಲಿಸಿದಳು. ಅವಳು ರೂಮಿಗೆ ಹೋದ ಮೇಲೆ ಮುಚ್ಚಿದ ಕಿಟಕಿಯ ಪಕ್ಕದಲ್ಲಿ ಮಿನಾ ಒಬ್ಬಂಟಿಯಾಗಿ ಕುಳಿತು ಕೃತಕ ಗುಲಾಬಿಗಳಿಗೆ ಕೊನೆಯ ರೂಪವನ್ನು ಕೊಡತೊಡಗಿದಳು.
    “ಮಿನಾ,” ಕುರಡಜ್ಜಿ ಹೇಳಿದಳು, “ಜೀವನದಲ್ಲಿ ನೀನು ಖುಶಿಖುಶಿಯಾಗಿರಬೇಕಾದರೆ ಅಪರಿಚಿತರನ್ನು ಗಣನೆಗೆ ತೆಗೆದುಕೊಳ್ಳಬೇಡ.”
    ಮಿನಾ ಏನೊಂದನ್ನು ಮಾತನಾಡದೆ ಸುಮ್ಮನೆ ಅವಳತ್ತ ನೋಡಿದಳು. ಕುರುಡಜ್ಜಿ ಅವಳ ಮುಂದೆ ಕುಳಿತುಕೊಳ್ಳತ್ತಾ ಅವಳಿಗೆ ಸಹಾಯ ಮಾಡಲು ಬಂದಳು. ಆದರೆ ಮಿನಾ ಬೇಡವೆಂದಳು.
    “ನೀನು ಪ್ರಾರ್ಥನೆಗೆ ಯಾಕೆ ಹೋಗಲಿಲ್ಲ?” ಕುರುಡಜ್ಜಿ ಕೇಳಿದಳು.
    “ಬೇರೆಯವರಿಗಿಂತ ನಿನಗೇ ಚನ್ನಾಗಿ ಗೊತ್ತಿದೆ.” ಮಿನಾ ಕಟುಕಿದಳು.
    “ಅದು ತೋಳುಗಳಿಗೋಸ್ಕರಾನೇ ಆಗಿದ್ದರೆ ನೀನು ಮನೆಯಿಂದ ಆಚೆ ಕೂಡಾ ಹೋಗುತ್ತಿರಲಿಲ್ಲ,” ಕುರುಡಜ್ಜಿ ಹೇಳಿದಳು, “ನೀನು ಹೋಗುವ ದಾರಿಯಲ್ಲಿ ನಿನಗೆ ಯಾರೋ ಸಿಕ್ಕರು, ಮತ್ತವರು  ನಿನಗೆ ಇಷ್ಟವಾಗದ್ದನ್ನು ಹೇಳಿದರು, ಅಲ್ಲವೇ?”
    “ನಿನಗೆ ತಲೆ ಕೆಟ್ಟಿದೆ.” ಮಿನಾ ಹೇಳಿದಳು.
    “ನೀನು ಇವತ್ತು ಬೆಳಿಗ್ಗಿನಿಂದ ಔಟ್ಹೌಸ್ ಕಡೆಗೆ ಎರಡು ಸಾರಿ ಹೋಗಿಬಂದಿ.” ಕುರುಡಜ್ಜಿ ಹೇಳಿದಳು, “ನೀನು ಯಾವತ್ತೂ ಒಂದು ಸಾರಿಗಿಂತ ಹೆಚ್ಚು ಸಾರಿ ಔಟ್ಹೌಸಿಗೆ ಹೋಗುವದಿಲ್ಲ.”
    ಮಿನಾ ಗುಲಾಬಿಗಳನ್ನು ತಯಾರು ಮಾಡುವದರಲ್ಲಿ ಮುಂದುವರಿದಳು.
    “ನೀನು ಡ್ರಾಯರಿನಲ್ಲಿ ಏನು ಇಟ್ಟಿದ್ದೀಯಾ? ಅದನ್ನು ನಂಗೆ ತೋರಿಸ್ತಿಯಾ?” ಕುರುಡಜ್ಜಿ ಕೇಳಿದಳು.
    ಮಿನಾ ಗುಲಾಬಿಯೊಂದನ್ನು ಕಿಟಕಿಯ ಕಟ್ಟಿಗೆ ಸಿಕ್ಕಿಸಿ ತನ್ನ ಕುಪ್ಪಸದೊಳಗಿಂದ ಮೂರು ಬೀಗದ ಕೈಗಳನ್ನು ತೆಗೆದು ಅವನ್ನು ಕುರುಡಜ್ಜಿಯ ಕೈಯಲ್ಲಿಟ್ಟು ಮತ್ತೆ ಅವನ್ನು ಅವಳ ಬೆರಳುಗಳಿಂದ ಮುಚ್ಚಿದಳು.
    “ಸ್ವತಃ ನೀನೇ ಹೋಗಿ ನಿನ್ನ ಕಂಗಳಿಂದಲೇ ನೋಡು.” ಅವಳು ಹೇಳಿದಳು.
    ಅವಳ ಅಜ್ಜಿ ಅವನ್ನು ತನ್ನ ಬೆರಳ ತುದಿಯಿಂದ ಮುಟ್ಟಿನೋಡಿ ಪರೀಕ್ಷಿಸುತ್ತಾ ಹೇಳಿದಳು.
    “ಔಟ್ಹೌಸಿನಲ್ಲಿ ಗುಂಡಿ ಎಲ್ಲಿದೆ ಎಂದು ನನಗೇನು ಗೊತ್ತು? ಅದನ್ನು ನಾನು ಹೇಗೆ ತಾನೇ ನೋಡಬಲ್ಲೆ?”
    ಮಿನಾ ತಲೆಯೆತ್ತಿ ನೋಡಿದಳು. ಕುರುಡಜ್ಜಿ ತಾನು ಗುಂಡಿಯಲ್ಲಿ ಪತ್ರಗಳನ್ನಿಡುವದನ್ನು ಗಮನಿಸಿದ್ದಾಳೆ ಎಂದವಳಿಗನಿಸಿತು.
    “ನನ್ನ ವಸ್ತುಗಳ ಬಗ್ಗೆ ನಿನಗೆ ಅಷ್ಟೊಂದು ಆಸಕ್ತಿಯಿದ್ದರೆ ನೀನೇ ಔಟ್ಹೌಸಿಗೆ ಹೋಗಿ ನೋಡು.” ಅವಳು ಟೀಕಿಸಿದಳು.
    ಕುರುಡಜ್ಜಿ ಅವಳ ಟೀಕೆಯನ್ನು ಉಪೇಕ್ಷಿಸಿದಳು.
    “ನೀನು ಹಾಸಿಗೆಯಲ್ಲಿ ಕುಳಿತು ನಸುಕಿನವರೆಗೂ ಏನನ್ನೋ ಬರೆಯುವದನ್ನು ನಾನು ಗಮನಿಸಿದ್ದೇನೆ.” ಕುರುಡಜ್ಜಿ ಹೇಳಿದಳು, “ಸಣ್ಣ ದೀಪವೊಂದನ್ನು ಹೊತ್ತಿಸಿ ನೀನು ಬರೆಯಲು ಆರಂಭಿಸಿದೊಡನೆ ಬರೀ ನಿನ್ನ ಉಸಿರಾಟವೊಂದರಿಂದಲೇ ನೀನು ಏನನ್ನು ಬರೆಯುತ್ತಿರುವಿ ಎಂದು ನಾನು ಹೇಳಬಲ್ಲೆ.”   
    ಮಿನಾ ವಿಚಲಿತಳಾಗಲಿಲ್ಲ.
    “ಸರಿ,” ಅವಳು ತಲೆಯನ್ನೆತ್ತದೆ ಹೇಳಿದಳು “ಅದಕ್ಕೆ ಏನಿವಾಗ?”
    “ಏನೂ ಇಲ್ಲ,” ಕುರುಡಜ್ಜಿ ಪ್ರತಿಕ್ರಿಯೆಸಿದಳು, “ಅದೇ ನಿನ್ನನ್ನು ಶುಕ್ರವಾರದ ಪ್ರಾರ್ಥನೆಯನ್ನು ತಪ್ಪಿಸಿಕೊಳ್ಳುವಂತೆ ಮಾಡಿದ್ದು.”
    ಮಿನ ದಾರದುಂಡೆ, ಕತ್ತರಿ, ಕಾಂಡಗಳು ಹಾಗೂ ಮುಗಿಸದಿರುವ ಗುಲಾಬಿಗಳನ್ನು ತನ್ನ ಎರಡೂ ಕೈಗಳಲ್ಲಿ ಎತ್ತಿಕೊಂಡು ಬುಟ್ಟಿಯಲ್ಲಿಟ್ಟಳು. ನಂತರ ಕುರುಡಜ್ಜಿಗೆ ಎದುರಾಗಿ ನಿಂತು “ಹಾಗಾದ್ರೆ, ನಾನು ಔಟ್ಹೌಸಿಗೆ ಏನು ಮಾಡಲು ಹೋದೆನೆಂದು ನಿನಗೆ ಹೇಳಲೇಬೇಕಾ?”  ಎಂದು ಕೇಳಿದಳು. ಮಿನಾ ತನ್ನ ಪ್ರಶ್ನೆಗೆ ತಾನೇ ಉತ್ತರಿಸುವವರೆಗೂ ಇಬ್ಬರೂ ಮೌನದಲ್ಲಿ ಉಳಿದರು.
    “ನಾನು ಶೌಚಕ್ಕೆ ಹೋಗಿದ್ದೆ.”
    ಅವಳ ಅಜ್ಜಿ ಮೂರೂ ಬೀಗದ ಕೈಗಳನ್ನು ಬುಟ್ಟಿಯಲ್ಲೆಸೆದು “ಚನ್ನಾಗಿ ಸುಳ್ಳು ಹೇಳುತ್ತೀ. ಬಹುಶಃ, ನೀನು ಬೇರೆ ಏನಾದರು ಕಾರಣ ಹೇಳಿದ್ದರೆ ನಾನು ನಂಬುತ್ತಿದ್ದೆನೇನೋ!” ಎಂದು ಅವಳು ಗೊಣಗುತ್ತಾ ತನ್ನ ದಾರಿಯನ್ನು ಅಡುಗೆ ಮನೆ ಕಡೆಗೆ ಬೆಳಸಿದಳು.
    ಮಿನಾಳ ತಾಯಿ ಆ ಕಡೆಯಿಂದ ಮುಳ್ಳಿನ ಕಾಂಡಗಳನ್ನು ಹಿಡಿದು ಕಾರಿಡಾರಿನ ಮೂಲಕ ಬಂದಳು.
    “ಏನ್ ನಡಿತಿದೆ ಇಲ್ಲಿ?” ಅವಳು ಕೇಳಿದಳು.
    “ನಂಗೆ ತಲೆ ಕೆಟ್ಟಿದೆ,” ಕುರುಡಜ್ಜಿ ಹೇಳಿದಳು, “ಆದರೆ ನಾನು ಎಲ್ಲಿಯವರೆಗೂ ಯಾರಿಗೂ ಕಲ್ಲು ಹೊಡೆಯುವದಿಲ್ಲವೋ ಅಲ್ಲಿವರೆಗೂ ಯಾರೂ ನನ್ನನ್ನು ಹುಚ್ಚಾಸ್ಪತ್ರೆಗೆ ಸೇರಿಸೋದಿಲ್ಲ.”
    ಮೂಲ ಸ್ಪ್ಯಾನಿಷ್: ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಜ್
    ಕನ್ನಡಕ್ಕೆ: ಉದಯ್ ಇಟಗಿ

        

    ಲಿಬಿಯಾ ತಪ್ಪಿದ್ದೆಲ್ಲಿ? ತಪ್ಪಿದ್ದಕ್ಕೆ ಪರಿಹಾರವಿದೆಯೇ?

  • ಬಿಸಿಲ ಹನಿ

  • ಗಡಾಫಿಯ ಹತ್ಯೆಯಾದ ನಂತರ ಇಡಿ ಜಗತ್ತು ಲಿಬಿಯಾದತ್ತ ಕುತೂಹಲದ ಕಂಗಳನ್ನು ನೆಟ್ಟು ಕುಳಿತಿತ್ತು. ಒಬ್ಬ ಬಲಿಷ್ಟ ಸರ್ವಾಧಿಕಾರಿಯ ಹಿಡಿತದಿಂದ ಲಿಬಿಯಾ ಪಾರಾಯಿತು. ಅವನ ಶೋಷಣೆಯಿಂದ ಲಿಬಿಯನ್ರು ಮುಕ್ತಿ ಹೊಂದಿದರು. ಅಲ್ಲಿ ಪ್ರಜಾರಾಜ್ಯ ಸ್ಥಾಪನೆಯಾಗಿ  ಇನ್ನು ಮುಂದೆ ಲಿಬಿಯನ್ರಿಗೆ ಒಳ್ಳೆಯ ದಿನಗಳು ಬರಲಿವೆ. ಲಿಬಿಯಾ ಬಹಳ ಬೇಗನೆ ಅಭಿವೃದ್ಧಿಯ ಪತಾಕೆಯನ್ನು ಹಾರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡುತ್ತದೆ ಎಂಬೆಲ್ಲಾ ನಿರೀಕ್ಷೆಗಳನ್ನಿಟ್ಟುಕೊಂಡು ಇಡಿ ಜಗತ್ತು ಕಾಯುತ್ತಾ ಕೂತಿತ್ತು. ಆದರೆ ದುರಾದೃಷ್ಟವಶಾತ್ ಗಡಾಫಿ ಸತ್ತ ದಿನದಿಂದಲೇ ಲಿಬಿಯಾದಲ್ಲಿ ಅರಾಜಕತೆ, ಅಶಾಂತಿ ನೆಲೆಯೂರುತ್ತಾ ಹೋಯಿತು. ಹಾಗೆ ನೋಡಿದರೆ ಗಡಾಫಿ ಸತ್ತ ಮೇಲೆ ಲಿಬಿಯಾ ತನ್ನ ಸಂಕ್ರಮಣದ ಕಾಲಘಟ್ಟವನ್ನು ಒಂದು ಸುಸಂಬದ್ಧ, ಸುಶಾಂತ ಕಾಲವನ್ನಾಗಿ ಮಾರ್ಪಡಿಸಿ ಅಭಿವೃದ್ಧಿಯ ಪಥದತ್ತ ಹೆಜ್ಜೆ ಹಾಕಬಹುದಿತ್ತು. ಲಿಬಿಯಾದಲ್ಲಿ ಅಪಾರ ತೈಲ ಸಂಪತ್ತಿತ್ತು. ಯೂರೋಪ್ ದೇಶಗಳಿಗೆ ಹತ್ತಿರವಾಗಿತ್ತು. ಮೇಲಾಗಿ ಅದೇ ಹಾದಿಯಲ್ಲಿ ಸಾಗಿದ ಅಕ್ಕಪಕ್ಕದ ರಾಷ್ಟ್ರಗಳ ಉದಾಹರಣೆಗಳಿದ್ದವು. ಹಾಗಿದ್ದೂ ಲಿಬಿಯಾ ಅಧೋಗತಿಗೆ ಇಳಿಯಿತ್ತಾ ಹೋಯಿತು. ಯಾಕೆ? ಇದಕ್ಕೆಲ್ಲಾ  ಏನು ಕಾರಣ? ಯಾರು ಹೊಣೆ? ಲಿಬಿಯಾ ತಪ್ಪಿದ್ದೆಲ್ಲಿ? ಎಂಬೆಲ್ಲಾ ಪ್ರಶ್ನೆಗಳು ನಮ್ಮಲ್ಲಿ ಏಳುವದು ಸಹಜ. ಎಲ್ಲ ಪ್ರಶ್ನೆಗಳನ್ನು ಕೇಳುವದಕ್ಕಿಂತ ಮುಂಚೆ ನಾವು ಇವತ್ತಿನ ಸ್ಥಿತಿ-ಗತಿಯನ್ನು ದೊರೆ ಇದ್ರಿಸ್ ಮತ್ತು ಗಡಾಫಿ ಕಾಲದಲ್ಲಿನ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿಟ್ಟು ಪರಿಶೀಲಿಸಬೇಕಾಗುತ್ತದೆ.

    ನಮಗೆಲ್ಲಾ ಗೊತ್ತಿರುವಂತೆ 1943 ರವರೆಗೆ ಲಿಬಿಯಾ ಇಟ್ಯಾಲಿಯನ್‍ರ ಅಧೀನಕ್ಕೆ ಒಳಪಟ್ಟಿತು. ಆದರೆ ಎರಡನೆ ಮಹಾಯುದ್ಧದಲ್ಲಿ ಇಟಲಿ ಸೋ ನಂತರ ಲಿಬಿಯಾ ಒಕ್ಕೂಟ ರಾಷ್ಟ್ರಗಳ ಅಧೀನಕ್ಕೆ ಒಳಪಟ್ಟಿತು. ಮುಂದೆ ಅಂದರೆ ಡಿಸೆಂಬರ್ 24, 1951 ರಂದು ಲಿಬಿಯಾ ಈ ಎಲ್ಲ ದಾಸ್ಯದಿಂದ ಬಿಡುಗಡೆಹೊಂದಿ ತನ್ನನ್ನು ಒಂದು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿತು. ಅಲ್ಲಿಂದಾಚೆ 1969ರ ತನಕ ಅಲ್ಲಿಯ ರಾಜ ಇದ್ರಿಸ್ ಎಂಬವ ಅಧೀನಕ್ಕೆ ಒಳಪಟ್ಟಿತು. ಲಿಬಿಯಾದ ಮೊಟ್ಟಮೊದಲ ಅರಸನಾಗಿ ಅಧಿಕಾರ ಸ್ವೀಕರಿಸಿದ ಇದ್ರಿಸ್ ಅಷ್ಟೊಂದು ಸಮರ್ಥನಾಗಿರಲಿಲ್ಲ.  ಅನೇಕ ಬುಡಕಟ್ಟು ಜನಾಂಗಗಳನ್ನು ಹೊಂದಿದ್ದ ಲಿಬಿಯಾದ ಎಲ್ಲ ಜನತೆಯನ್ನು ತೃಪ್ತಿಪಡಿಸುವಲ್ಲಿ ಆತ ಯಶಸ್ವಿಯಾಗಲಿಲ. ಮೇಲಾಗಿ ಆತ ಎಣ್ಣೆ ಬಾವಿಗಳಿಂದ ಎಣ್ಣೆ ತೆಗೆಯುವ ತಂತ್ರಜ್ಞಾನಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಸಂಪೂರ್ಣವಾಗಿ ಅವಲಂಬಿತನಾದ. ದನ್ನು ದುರುಪಯೋಗ ಪಡೆದುಕೊಂಡ ಹೊರದೇಶಿಯ ಕಂಪನಿಗಳು ತಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಎಣ್ಣೆಯ ದರವನ್ನು ನಿಗದಿಗೊಳಿಸಿ ಎಣ್ಣೆ ವ್ಯಾಪಾರದಲ್ಲಿ ಅರ್ಧ ಲಾಭವನ್ನು ಹೊಡೆಯುತ್ತಿದ್ದವು. ತೈಲಸಂಪನ್ಮೂಲವನ್ನೂ ಮಾರಿಕೊಂಡು, ಲಾಭವನ್ನೂ ಪಡೆಯದೆ ಲಿಬಿಯಾ ಸಂಕಷ್ಟಕ್ಕೀಡಾಯಿತು
    ಆಗ ಇಲ್ಲಿನ ಪ್ರಜೆಗಳು ಹೀಗಾದರೆ ದೇಶ ಉದ್ಧಾರವಾಗುವದು ಯಾವಾಗ? ಅದರ ಬದಲು ದೇಶವನ್ನು ಒಡೆದು ಮೂರು ಭಾಗಗಳನ್ನಾಗಿ ಮಾಡಿ ಕೊಟ್ಟುಬಿಡಿ. ನಮಗೆ ಯಾರು ಬೇಕೋ ಅವರನ್ನು ಅರಸರನ್ನಾಗಿ ಮಾಡಿ ದೇಶ ನಡೆಸುತ್ತೇವೆ ಎಂದು ಹೇಳುವದರ ಮೂಲಕ ಮೊಟ್ಟಮೊದಲಿಗೆ ವಿಭಜನೆಯ ಕೂಗನ್ನು ಹಾಕಿದ್ದರು. ಕೂಗು 1969 ರವರೆಗೆ ಕೇಳಿಸುತ್ತಲೇ ಇತ್ತು. ಆದರೆ 1969ರಲ್ಲಿ ಅಧಿಕಾರಕ್ಕೆ ಬಂದ ಗಡಾಫಿ ತಕ್ಷಣ ಪರದೇಶಿ ಕಂಪನಿಗಳ ಗುತ್ತಿಗೆಯನ್ನು ಮರುಪರಿಶೀಲಿಸಿ ಹತೋಟಿಗೆ ತೆಗೆದುಕೊಂಡ. ತನ್ನ ನಿರ್ಧಾರವನ್ನು ಒಪ್ಪದ ಕಂಪನಿಗಳಿಗೆ ಎಣ್ಣೆ ಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದಬೇರೆ ದಾರಿಯಿಲ್ಲದೆ ಹೊರದೇಶಿ ಕಂಪನಿಗಳು ಬಗ್ಗಬೇಕಾಯಿತು. ಪರಿಣಾಮವಾಗಿ ಲಿಬಿಯಾ ಹೇರಳ ಲಾಭವನ್ನು ಗಳಿಸತೊಡಗಿತು. ಲಿಬಿಯಾದಲ್ಲಿ ಹೇರಳ ತೈಲಸಂಪನ್ಮೂಲವಿತ್ತುಆದರೆ ಜನಸಂಖ್ಯೆ ಕಡಿಮೆಯಿತ್ತುಇದನ್ನರಿತ ಗಡಾಫಿ ತೈಲಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್‍ರ ಉದ್ದಾರಕ್ಕಾಗಿ ಚೆಲ್ಲಿ. ಆ ಮೂಲಕ ಗಡಾಫಿ ಸಹಜವಾಗಿ ಲಿಬಿಯನ್‍ರಿಗೆ ಒಬ್ಬ ಭರವಸೆಯ ನಾಯಕನಾಗಿ ಕಂಡನಲ್ಲದೇ ಈ ದೇಶವನ್ನು ನಡೆಸಲು ಇವನೇ ಸಮರ್ಥ ನಾಯಕನೆಂದು ತೀರ್ಮಾನಿಸಿ ಜನ ತಮ್ಮ ಸಂಪೂರ್ಣ ಬೆಂಬಲವನ್ನು ಆತನಿಗೆ ಸೂಚಿಸಿಯೂ ಬಿಟ್ಟರು. ಆ ಮೂಲಕ ಲಿಬಿಯಾದಲ್ಲಿ ಎದ್ದಿದ್ದ ವಿಭಜನೆಯ ಕೂಗು ತಾನೇತಾನಾಗಿ ಹಿಂದೆ ಸರಿಯಿತು.  ಎಲ್ಲ ನಾಯಕರಿಗೆ ಪರ ಮತ್ತು ವಿರೋಧಿ ಬಣಗಳಿರುವಂತೆ ಗಡಾಫಿಗೂ ಒಂದಷ್ಟು ಜನ ವಿರೋಧಿಗಳಿದ್ದರು. ಆದರೆ ಅವರ ಸಂಖ್ಯೆ ಕೇವಲ ಶೇಕಡಾ ಒಂಬತ್ತರಷ್ಟಿತ್ತು. ಮೇಲಾಗಿ ಗಡಾಫಿ ಒಬ್ಬ ಜಾತ್ಯಾತೀತ ಅರಸನಾಗಿದ್ದು ಆತ ಎಲ್ಲರನ್ನೂ ಸಮವಾಗಿ ಕಾಣುತ್ತಿದ್ದ. ಜೊತೆಗೆ ಲಿಬಿಯನ್ ಹೆಣ್ಣುಮಕ್ಕಳ ವಿಷಯದಲ್ಲಿ ಉದಾರತೆಯನ್ನು ಅನುಸರಿಸುತ್ತಿದ್ದುದು ಮತ್ತು ಅವರಿಗೆ ಸಮಾಜದ ಎಲ್ಲ ರಂಗಗಳಲ್ಲೂ ಅವಕಾಶ ಕಲ್ಪಿಸಿದ್ದು ಇಲ್ಲಿನ ಕೆಲವು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇಂಥ ಒಂದಿಷ್ಟು ಜನರನ್ನು ಮುಂದಿಟ್ಟುಕೊಂಡು ಲಿಬಿಯಾದಲ್ಲಿ ಕ್ರಾಂತಿಯೆಬ್ಬಿಸಿ ಕುತಂತ್ರದಿಂದ ಆತನನ್ನು ಹೇಗೆ ಮತ್ತು ಯಾವ ಕಾರಣಕ್ಕೆ ಮುಗಿಸಿದರು ಎಂಬುದನ್ನು ನಾನು ನಿಮಗೆ ಈ ಹಿಂದೆ ಹೇಳಿದ್ದೇನೆ.
    ಇನ್ನು ಇಲ್ಲಿಯ ಸಾಮಾಜಿಕ ವ್ಯಸ್ಥೆಯ ಬಗ್ಗೆ ಹೇಳುವದಾದರೆ ನಾನು ಲಿಬಿಯಾಕ್ಕೆ ಬಂದ ಹೊಸತರಲ್ಲಿ ನನ್ನ ಲಿಬಿಯನ್ ಸಹೋದ್ಯೋಗಿಯೊಬ್ಬ ಒಮ್ಮೆ ಹೀಗೇ ನನ್ನ ಜೊತೆ ಮಾತನಾಡುತ್ತಾ ಹೇಳಿದ್ದ; ಗಡಾಫಿ ಸತ್ತ ಮೇಲೆ ಇಲ್ಲಿಯ ಜನ ಅವರವರೇ ಹೊಡೆದಾಡಿಕೊಂಡು ಸಾಯದಿದ್ದರೆ ಕೇಳಿ ಎಂದು. ನಾನು ಕುತೂಹಲ ತಡೆಯಲಾರದೆಯಾಕೆ?” ಎಂದು ಕೇಳಿದ್ದೆಅದಕ್ಕವನುಲಿಬಿಯಾ ಅನೇಕ ಬುಡಕಟ್ಟುಗಳಿರುವ ರಾಷ್ಟ್ರ. ಎಲ್ಲ ಬುಡಕಟ್ಟುಗಳನ್ನು ಗಡಾಫಿ ಅದ್ಹೇಗೊ ಸರಿದೂಗಿಸಿಕೊಂಡು ಹೋಗುತ್ತಿದ್ದಾನೆ. ಆದರೆ ಅವನ ನಂತರ ಬರುವವರು  ಹೀಗೆ ಇರುತ್ತಾರೆ ಎಂದು ಹೇಳಲು ಬರುವದಿಲ್ಲ.” ಎಂದು ಹೇಳಿದ್ದಅವನ ಮಾತು ಇವತ್ತು ಅಕ್ಷರಶಃ ನಿಜವಾಗಿದೆ. ಗಡಾಫಿಯ ನಂತರ ಇಲ್ಲೀಗ ಎಲ್ಲ ಬುಡಕಟ್ಟುಗಳು ಎದ್ದು ಕುಳಿತಿವೆ. ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಒಬ್ಬರ ಮೇಲೊಬ್ಬರು ದ್ವೇಷ ಕಾರುತ್ತಾ ಜನರು ಅವರವರೇ ಬಡಿದಾಡಿಕೊಂಡು ಸಾಯುತ್ತಿದ್ದಾರೆ. ಪ್ರಕ್ರಿಯೆ ಗಡಾಫಿ ಸತ್ತ ಮಾರನೆಯ ದಿನದಿಂದಲೇ ಆರಂಭವಾಯಿತು. ಅದೂ ಮೊಟ್ಟಮೊದಲಿಗೆ ಗಡಾಫಿ ವಿರುದ್ಧ ಬಂಡೆದ್ದ ನೆಲವಾದ ಬೆಂಗಾಜಿಯಲ್ಲಿ. ಹಾಗೆ ಶುರುವಾದ ಬಡಿದಾಟ ನಿಧಾನವಾಗಿ ಪ್ರಮುಖ ನಗರಗಳಾದ ಟ್ರಿಪೋಲಿ, ಜಾವಿಯಾ, ಮಿಸ್ರತಾ, ಸೆಭಾ ಇನ್ನೂ ಮುಂತಾದ ನಗರಗಳಿಗೆ ಹಬ್ಬಿತು. ಆಗ ನ್ಯಾಟೋ ಇನ್ನೂ ಲಿಬಿಯಾದಲ್ಲಿಯೇ ಇತ್ತು. ಮನಸ್ಸು ಮಾಡಿದ್ದರೆ ನ್ಯಾಟೋ ಇದಕ್ಕೊಂದು ಮಂಗಳವನ್ನು ಆಗಲೇ ಹಾಡಬಹುದಿತ್ತು. ಆದರೆ ಹಾಗೆ ಮಾಡದೆ ನಗರಗಳ ಮೇಲೆ ಬಾಂಬ್ ದಾಳಿ ನಡೆಸಿ ತಾತ್ಕಾಲಿಕವಾಗಿ ಅವರನ್ನು ಹತ್ತಿಕ್ಕಿ ತಮ್ಮ ಒಪ್ಪಂದಗಳಿಗೆ ಸಹಿ ಹಾಕಿದ NTC (National Transitional Council) ಹಂಗಾಮಿ ಸರಕಾರವನ್ನು ರಾಜಧಾನಿಯಲ್ಲಿ  ಕೂರಿಸಿ  ಹೊರಟೇಬಿಟ್ಟಿತುಹಾಗೆ ಸರಕಾರವನ್ನು ರಚಿಸುವಾಗ ಒಂದು ದೊಡ್ಡ ತಪ್ಪಾಯಿತು. ಅದೇನೆಂದರೆ ಕ್ರಾಂತಿಯ ಸಮಯದಲ್ಲಿ ಯುದ್ಧಭೂಮಿಯಲ್ಲಿ ಭಾಗವಹಿಸಿದ ಬಹಳಷ್ಟು ಜನಕ್ಕೆ ಮುಖ್ಯ ಸ್ಥಾನಗಳು ಸಿಗದೇ ಹೋದವು. ಬದಲಿಗೆ ಹೊರದೇಶಗಳಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀಮಂತ ಲಿಬಿಯನ್‍ರನ್ನು ಕರೆತಂದು ದೊಡ್ಡದೊಡ್ಡ ಹುದ್ದೆಗಳಲ್ಲಿ ಕೂರಿಸಲಾಯಿತು. ಇದರಿಂದ ಸಹಜವಾಗಿ ಯುದ್ಧದಲ್ಲಿ ಭಾಗವಹಿಸಿದ ಅನೇಕರು ಅತೃಪ್ತಗೊಂಡರು. ಜೊತೆಗೆ ಅಲ್ಲಿ ಬಹಳಷ್ಟು ಜನ ಗಡಾಫಿ ಬೆಂಬಲಿಗರಿದ್ದರು. ಅವರನ್ನು ಸಹ ಸಂಪೂರ್ಣವಾಗಿ ಕಡೆಗಣಿಸುವದರ ಮೂಲಕ ಅವರಲ್ಲೂ ಅಸಮಧಾನದ ಹೊಗೆಯನ್ನೆಬ್ಬಿಸಿದರು.

    ಈ  ಎಲ್ಲದರ ಜೊತೆಗೆ ನ್ಯಾಟೋವನ್ನು ಕರೆಸಿಕೊಂಡುದರ ಬಗ್ಗೆ ಅವರವರಲ್ಲಿ ಕಿತ್ತಾಟ ಶುರುವಾಯಿತು. ಹಾಗೆ ನೋಡಿದರೆ ನ್ಯಾಟೋ ಲಿಬಿಯಾಕ್ಕೆ ಬಂದಿದ್ದು ಕೊನೆ ಘಳಿಗೆಯಲ್ಲಿ. ಅಂದರೆ ಹೆಚ್ಚುಕಮ್ಮಿ ಮುಕ್ಕಾಲು ಪಾಲು ಲಿಬಿಯಾ ಗಡಾಫಿಯ ಕೈ ತಪ್ಪಿಹೋದ ಮೇಲೆ. ಆಗ ಅಮೆರಿಕಾ ಕೆಲವು ಮುಖ್ಯ ನಾಯಕರನ್ನು ಕರೆದು ನೀವು ನ್ಯಾಟೊದ ಸಹಾಯ ತೆಗೆದುಕೊಳ್ಳಿ. ಇದಕ್ಕೊಂದು ಅಂತ್ಯ ಹಾಡಿಬಿಡೋಣ ಎಂದು ಹೇಳಿತು. ಅದಕ್ಕವರು ಹಿಂದುಮುಂದು ನೋಡದೆ ಒಪ್ಪಿಗೆಯನ್ನು ಸೂಚಿಸಿದರು. ಇದು ಕೆಲವರನ್ನು ಕೆರಳಿಸಿತು. ನಾವು ಗೆಲ್ಲುವದು ಬಹುತೇಕ ಖಚಿತವಾದ ಸಮಯದಲ್ಲಿ ನ್ಯಾಟೋವನ್ನು ಕರೆಸಿಕೊಂಡಿದ್ದೇಕೆ? ನಾವು ನಾವೇ ಸೇರಿಕೊಂಡು ಗಡಾಫಿಯನ್ನು ಹೊಡೆದುರುಳಿಸಬಹುದಿತ್ತಲ್ಲ? ಈಗ ನೋಡಿ ನಾವು ನ್ಯಾಟೋದ ಒಪ್ಪಂದಗಳಿಗೆ ಅನವಶ್ಯಕವಾಗಿ ತಲೆಬಾಗಬೇಕಿದೆ ಹಾಗೂ ಬಿಟ್ಟಿಯಾಗಿ ಅವರಿಗೆ ತೈಲವನ್ನು ಕೊಡಬೇಕಿದೆ ಎಂದು  ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ಅಸಹನೆ ಅವರನ್ನು ಬಾಧಿಸುತ್ತಲೇ ಇತ್ತು. ಒಂದು ದಿನ ಅದೇ ರೊಚ್ಚಿನಲ್ಲಿ ಹೋಗಿ ಅಮೆರಿಕಾದ ರಾಯಭಾರಿಯನ್ನೇ ಕೊಂದುಹಾಕಿ ಬಿಟ್ಟರು.
    ಕ್ರಾಂತಿಯ ನಂತರ ಅಧಿಕಾರ ವಹಿಸಿಕೊಂಡ NTC ಹಂಗಾಮಿ ಸರಕಾರ ಇತ್ತ ಯುದ್ಧ ಮುಗಿದ ಮೇಲಿನ ತತ್‍ಕ್ಷಣದ ಅವಶ್ಯಕತೆಗಳನ್ನು ಪೂರೈಸುವದರಲ್ಲಿ ಮಗ್ನವಾದರೆ ಅತ್ತ ಅಧಿಕಾರ ಹಾಗೂ ಹಣದ ದಾಹದಿಂದ ತಹತಹಿಸುತ್ತಿದ್ದ ಕೆಲವು ಪ್ರಜಾಸೇನೆ ಸಂಘಟನೆಗಳು ಹುಟ್ಟಿಕೊಂಡು ಅಲ್ಲಿ ಸ್ಥಾಪನೆಯಾಗಿದ್ದ ಹಂಗಾಮಿ ಸರಕಾರಕ್ಕೆ ತೊಂದರೆ ಕೊಡಲಾರಂಭಿಸಿದವು. ಅದರಲ್ಲಿ ಲಿಬಿಯಾ ಡಾನ್, ಸನ್ ರೈಸ್, ಜಿಂತಾನ್, ಆಲ್ ಅನ್ಸಾ ಶೆರಿಯಾ ಎಂಬ ಸಂಘಟನೆಗಳು ಮುಖ್ಯವಾದವು. ಹಣದ ಅವಶ್ಯಕತೆ ಬಿದ್ದಾಗ ಹಾಗೂ ತಾವು ಹೇಳಿದಂತೆ ಕೇಳದೆ ಹೋದಾಗ ಶಸ್ತ್ರಗಳ (ಬಂದೂಕು ಮತ್ತು ಗನ್ನುಗಳು) ಸಮೇತ ಬೆದರಿಕೆಯನ್ನೊಡ್ಡಿ ಸರಕಾರದಿಂದ ಹಣ ಕೀಳುವದು ಮಾಮೂಲು ದಂಧೆಯಾಯಿತು. ಆಶ್ಚರ್ಯವೆಂದರೆ ಸರಕಾರ ಇಂಥವರನ್ನು ಬಗ್ಗು ಬಡಿಯುವ ಬದಲು ದೇಶದಲ್ಲಿ ಶಾಂತಿಯನ್ನು ಕಾಪಾಡುವದಕ್ಕೋಸ್ಕರ ಇವರಿಗೆ ಹಣ ನೀಡುತ್ತಾ ಬಂತು. ಹಣ ಮಾಡುವದು ಇಷ್ಟೊಂದು ಸುಲಭವಾದ ಮೇಲೆ ದಿನ ಕಳೆದಂತೆ ಇತರೆ ಜನ ಒಬ್ಬರಾದ ಮೇಲೊಬ್ಬರು ತಮ್ಮದೇ ಒಂದಷ್ಟು ಸಂಘಟನೆಗಳನ್ನು ಹುಟ್ಟು ಹಾಕಿ ಇವರಿಗೆ ಪೈಪೋಟಿ ಎಂಬಂತೆ ಅವರೂ ಸಹ ಸರಕಾರಕ್ಕೆ ತೊಂದರೆ ಕೊಡಲಾರಂಭಿಸಿದರು. ದುರಂತವೆಂದರೆ ಸರಕಾರ ಅವರಿಗೂ ಹಣ ನೀಡಿ ಅವರ ಬಾಯಿಯನ್ನು ಮುಚ್ಚಿಸುತ್ತಾ ಬಂತೇ ವಿನಃ ಅವರನ್ನು ಹತ್ತಿಕ್ಕುವ ಪ್ರಯತ್ನವನ್ನೇ ಮಾಡಲಿಲ್ಲ.
    ಈ ಪ್ರಜಾಸೇನೆ ಸಂಘಟನೆಗಳು ಬರೀ ಪ್ರತಿಭಟನೆಕಾರರಾಗಿದ್ದರೆ ಅವರನ್ನು ಅದ್ಹೇಗೋ ಹತ್ತಿಕ್ಕಬಹುದಿತ್ತು. ಆದರೆ ಅವರ ಕೈಗೆ ಅಸ್ತ್ರಗಳು ಬಂದಿದ್ದವು. ಅವು ಹೇಗೆ ಬಂದವೆಂದರೆ ಫೆಬ್ರುವರಿ 17, 2011 ರ ಕ್ರಾಂತಿಯ ಸಮಯದಲ್ಲಿ ಈ ದೇಶದಲ್ಲಿ ಒಂದು ದೊಡ್ಡ ಅವಘಡವೇ ನಡೆದುಹೋಯಿತು. ಕ್ರಾಂತಿಯ ಸಮಯದಲ್ಲಿ ಸಹಜವಾಗಿ ಎಲ್ಲೆಡೆ ಅರಾಜಕತೆಯುಂಟಾಗಿ ಯಾರೂ ಹೇಳುವವರು ಕೇಳುವವರು ಇಲ್ಲದಂತಾಯಿತು. ಅದೇ ಸಮಯದಲ್ಲಿ ಇನ್ನೇನು ಗಡಾಫಿ ಸೋತುಹೋಗುತ್ತಾನೆ ಎನ್ನುವ ಸುಳಿವು ಸಿಗುತ್ತಿದ್ದಂತೆ ಜನರು ಟ್ರಿಪೋಲಿಯ ಪೋಲಿಷ್ ಠಾಣೆಗಳಲ್ಲಿನ ಕಾವಲಿಲ್ಲದ ಶಸ್ತ್ರಾಗಾರದ ಮೇಲೆ ದಾಳಿ ಮಾಡಿ ಗನ್ನು ಮತ್ತು ಬಂದೂಕುಗಳನ್ನು ವಶಪಡಿಸಿಕೊಂಡರು. ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಜನ ದೇಶದೆಲ್ಲೆಡೆ ತಮ್ಮನ್ನು ರಕ್ಷಿಸಿಕೊಳ್ಳಲು ಆಯಾಯ ಪ್ರದೇಶಗಳ ಶಸ್ತ್ರಾಗಾರಗಳ ಮೇಲೆ ದಾಳಿ ಮಾಡಿ ಆಯುಧಗಳನ್ನು ವಶಪಡಿಸಿಕೊಂಡರೆಂದು ಇಲ್ಲಿನವರು ಹೇಳುತ್ತಾರೆ. ಇನ್ನು ಕೆಲವರು ಸ್ವತಃ ಗಡಾಫಿಯೇ ತಾನು ಸೋಲುತ್ತೇನೆಂಬುದು ಖಚಿತವಾಗುತ್ತಿದ್ದಂತೆಯೇ ಇನ್ನು ನಿಮ್ಮನ್ನು ಶತೃಗಳಿಂದ ರಕ್ಷಿಸಿಕೊಳ್ಳಿ ಎಂದು ಎಲ್ಲ ಲಿಬಿಯನ್‍ರ ಮನೆಮನೆಗೂ ಬಂದೂಕು ಮತ್ತು ಗನ್ನುಗಳನ್ನು ಹಂಚಿದನೆಂದು ಹೇಳುತ್ತಾರೆ. ಪರಿಣಾಮವಾಗಿ ಇವತ್ತು ಲಿಬಿಯಾದ ಪ್ರತಿಯೊಂದು ಮನೆಯಲ್ಲಿ ಕನಿಷ್ಟಪಕ್ಷ ಐದರಿಂದ ಆರು ಗನ್ನು ಮತ್ತು ಬಂದೂಕುಗಳಿವೆ ಹಾಗೂ ಅವರು ಸದಾ ಅವನ್ನು ತಮ್ಮ ರಕ್ಷಣೆಗೋಸ್ಕರ ಜೊತೆಯಲ್ಲಿಟ್ಟುಕೊಂಡೇ ಓಡಾಡುತ್ತಾರೆ. ಕ್ರಾಂತಿ ಮುಗಿದ ಮೇಲೆ ಆಗಿನ ಹಂಗಾಮಿ ಸರಕಾರ ಇವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಯಿತು. ಸಾಲದ್ದಕ್ಕೆ ಆವತ್ತಿನಿಂದ ಜನರು ಗನ್ನುಗಳನ್ನು ಟ್ರಿಪೋಲಿಯ ಬೀದಿಗಳಲ್ಲಿ ಆಟಿಕೆಗಳಂತೆ ಮಾರಾಟ ಮಾಡಲು ಶುರುವಾದರು. ಆಗಲೂ ಸರಕಾರ ಏನನ್ನೂ ಮಾಡಲಿಲ್ಲ.
    ಈ ಎಲ್ಲದರ ಮಧ್ಯ ಚುನಾವಣೆಗಳನ್ನು ನಡೆಸಿ ಆದಷ್ಟು ಬೇಗ ಒಂದು ಪ್ರಜಾಸತ್ತಾತ್ಮಕ ಸ್ಥಿರ ಸರಕಾರವನ್ನು ರಚಿಸಿಬಿಡೋಣ ಎಂಬ ತೀರ್ಮಾನವನ್ನು ತೆಗೆದುಕೊಂಡರು. ಆದರೆ ಅಷ್ಟೊತ್ತಿಗಾಗಲೇ ತುಂಬಾ ತಡವಾಗಿತ್ತು. ಆಗಷ್ಟೇ ಹುಟ್ಟಿಕೊಂಡಿದ್ದ  ಸಂಘಟನೆಗಳು ಬಲಿತುಬಿಟ್ಟಿದ್ದವು. ಆಗ ಮತ್ತೆ ಟ್ರಿಪೋಲಿ ಮತ್ತು ಬೆಂಗಾಜಿಗಳಲ್ಲಿ ಗಲಾಟೆ, ಗದ್ದಲಗಳು ಶುರುವಾದವು. ಕೆಲವರು ಮೊದಲು ಸಂವಿಧಾನ ರಚನೆಯಾಗಲಿ ನಂತರ ಸರಕಾರ ರಚನೆಯಾಗಲಿ ಎಂದರು. ಇನ್ನು ಕೆಲವರು ಸರಕಾರ ರಚನೆಯಾದ ಮೇಲೆ ಸಂವಿಧಾನ ರಚಿಸೋಣ ಎಂದರು. ಕೊನೆಗೂ ಅಳೆದು ತೂಗಿ ಮೊದಲು ಸರಕಾರ ರಚನೆಯಾಗಲಿ ಎಂಬ ತೀರ್ಮಾನಕ್ಕೆ ಬಂದು ಅದರ ರಚನೆಗಾಗಿ ಜುಲೈ 7, 2012 ರಂದು ಲಿಬಿಯಾದಲ್ಲಿ ಏಕಕಾಲಕ್ಕೆ ಎಲ್ಲ ಭಾಗದಲ್ಲಿ ಸಾಕಷ್ಟು ಗಲಾಟೆ, ಗದ್ದಲ, ಪ್ರತಿಭಟನೆ, ವಿರೋಧಗಳ ನಡುವೆಯೇ ಚುನಾವಣೆಗಳನ್ನು ನಡೆಸಿದರು. ಆಗಲೂ ಅಷ್ಟೇ ಕೆಲವರು ಈ ಚುನಾವಣೆಯಲ್ಲಿ ಕೆಲವು ಬುಡಕಟ್ಟುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಊಳಿಟ್ಟರು. ಇನ್ನು ಕೆಲವರು ಟಿಕೇಟು ಹಂಚುವಲ್ಲಿ ಪ್ರಾದೇಶಿಕ ಅನ್ಯಾಯವಾಗಿದೆ ಎಂದು ಆಕ್ಷೇಪಿಸಿದರು. ಈ ಗದ್ದಲದ ನಡುವೆಯೇ ಚುನಾವಣಾ ಫಲಿತಾಂಶಗಳು ಹೊರಬಂದು GNC (General National Congress) ನೇತ್ರತ್ವದ ಸರಕಾರ ರಚನೆಯಾಯಿತು. ಇದರ ಒಟ್ಟೊಟ್ಟಿಗೆ ಸಂವಿಧಾನ ರಚನೆಯ ಕೆಲಸವೂ ನಡೆಯಿತು. ಆದರೆ ಅದನ್ನು ಜಾರಿಗೊಳಿಸುವಲ್ಲಿ ಇನ್ನೂ ವಿಳಂಬವಾಗುತ್ತಿದೆ. ಹೀಗೆ ಸಂವಿಧಾನ ರಚನೆಯಾಗದೆ ನಿರ್ಮಾಣಗೊಂಡ ಸರಕಾರ ನಾಮಕಾವಸ್ಥೆ ಸರಕಾರವಾಯಿತು. ಆದರೆ ಅದಾಗಲೇ ಹುಟ್ಟಿಕೊಂಡಿದ್ದ ಪ್ರಜಾ ಸಂಘಟನೆಗಳು ಬಲಿಷ್ಟಗೊಂಡಿದ್ದವು ಮತ್ತು ಅವು GNC ಸರಕಾರಕ್ಕೆ ಸಹ ತೊಂದರೆಕೊಡಲಾರಂಭಿಸಿದವು. ಇವರನ್ನು ಹತ್ತಿಕ್ಕುವದರಲ್ಲಿ ಹಾಗೂ ತತ್‍ಕ್ಷಣದ ಸಮಸ್ಯೆಗಳನ್ನು ಬಗೆಹರಿಸುವದರಲ್ಲಿಯೇ ಆಗಿನ GNC ಸರಕಾರ ಮೂರುವರ್ಷಗಳನ್ನು ಪೂರೈಸಿತು.
    ಮೂರು ವರ್ಷಗಳ ನಂತರ ಹೊಸ ಸರಕಾರದ ಸ್ಥಾಪನೆಗಾಗಿ ಮತ್ತೊಮ್ಮೆ 2014 ರ ಜೂನ್ ತಿಂಗಳ ಕೊನೆವಾರದಲ್ಲಿ ದೇಶದ ಎಲ್ಲೆಡೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಿದರು. ಆದರೆ ಈ ಬಾರಿಯ ಫಲಿತಾಂಶದಲ್ಲಿ ಬೇರೆಯ ಪಕ್ಷಕ್ಕೆ ಬಹುಮತ ಸಿಕ್ಕಿತು. ಅತ್ತ ಅವರೆಲ್ಲಾ ಸರಕಾರ ನಿರ್ಮಿಸುವದರಲ್ಲಿ ನಿರತರಾದರೆ ಇತ್ತ ಕೆಲವು ಮೂಲಭೂತವಾದಿಗಳಿಗೆ ಇಲ್ಲಿ ಪ್ರಜಾರಾಜ್ಯ ಸ್ಥಾಪನೆಯಾಗುವದು ಬೇಕಾಗಿರಲಿಲ್ಲ. ಅವರಿಗೆ ಗಡಾಫಿಯಂತವರೇ ಯಾರಾದರೊಬ್ಬರು ದೇಶವನ್ನು ಮುನ್ನೆಡೆಸುವವರು ಬೇಕಾಗಿತ್ತು. ಅಂತೆಯೇ Libya Dawn (ಮಿಸ್ರತಾ ಎಂಬ ಊರಿನವರು) ಎಂಬ ಸಂಘಟನೆಯವರಿಗೆ ತಾವೇ ಇಡಿ ದೇಶವನ್ನು ನಡಿಸಿಬಿಡೋಣ ಎನ್ನುವಷ್ಟರಮಟ್ಟಿಗೆ ಅವರಲ್ಲಿ ಅಧಿಕಾರದ ದಾಹ ತೀವ್ರಗೊಂಡಿತ್ತು.  ಹಾಗಾಗಿ ಇವರು ನಾಮಕಾವಸ್ಥೆಗೆ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಅಸಮಾಧಾನವನ್ನು ಹತ್ತಿಕ್ಕಿ ಬೂದಿ ಮುಚ್ಚಿದ ಕೆಂಡದಂತೆ ಕುಳಿತುಬಿಟ್ಟರು. ಜೊತೆಗೆ ಈ ಹಿಂದೆ ಅಧಿಕಾರದ ರುಚಿಯನ್ನು ಕಂಡಿದ್ದ GNC ಗೆ ಇದೀಗ ಈ ಚುನಾವಣೆಯಲ್ಲಿ ಮುಖಭಂಗವಾಗಿತ್ತು ಮತ್ತು ಅವರಿನ್ನೂ ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದರು. ಈ ದುರಾಸೆಯಿಂದಾಗಿ ಅವರು ಮಿಸ್ರತಾದವರೊಂದಿಗೆ ಕೈ ಜೋಡಿಸಿದರು.
    ಅತ್ತ ಆಯ್ಕೆಗೊಂಡ ಸಂಸದರು ಪ್ರಮಾಣ ವಚನ ಸ್ವೀಕಾರಕ್ಕಾಗಿ ಸಿದ್ಧರಾಗುತ್ತಿದ್ದರೆ ಇತ್ತ ಲಿಬಿಯಾ ಡಾನ್ ಮತ್ತು GNC ಗಳು ಸರಕಾರವನ್ನು ನಿರ್ನಾಮ ಮಾಡಿ ತಮ್ಮ ಹತೋಟಿಯನ್ನು ಸಾಧಿಸಲು ಸರಿಯಾದ ಸಮಯಕ್ಕಾಗಿ ಕಾದುಕೂತವು.  ಪ್ರಮಾಣ ವಚನ ಸ್ವೀಕಾರ ಸಮಾರಂಭ ಮೊಟ್ಟಮೊದಲಿಗೆ ಗಡಾಫಿ ವಿರುದ್ಧ ಬಂಡೆದ್ದ ನೆಲವಾದ ಬೆಂಗಾಜಿಯಲ್ಲಿ ನಡೆಯಬೇಕೆಂದು ನಿರ್ಧಾರವಾಗಿತ್ತು.  ಆ ಸಮಾರಂಭಕ್ಕೆ ಇನ್ನೇನು ಎಂಟು ದಿನಗಳು ಬಾಕಿ ಇವೆ ಅನ್ನುವಷ್ಟರಲ್ಲಿ  ಮಿಸ್ರತಾದವರು ಜುಲೈ 13, 2014 ರಂದು ಟ್ರಿಪೋಲಿ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿಬಿಟ್ಟರು. ನೋಡನೋಡುತ್ತಿದ್ದಂತೆ ಇದು ಭುಗಿಲೇಳುತ್ತಾ ಹೋಯಿತು. ಇದೇ ಸಮಯಕ್ಕೆ ಸರಿಯಾಗಿ ಅತ್ತ ಬೆಂಗಾಜಿಯಲ್ಲೂ ವಿವಿಧ ಸಂಘಟನೆಗಳ ನಡುವೆ ಬಡಿದಾಟ ಆರಂಭವಾಯಿತು. ಅಲ್ಲಿ ಕೂಡಾ ಕಾದಾಟ ತೀವ್ರಗೊಂಡು ರಾಕೇಟ್, ಕ್ಷಿಪಣಿ ಪ್ರಯೋಗಗಳೆಲ್ಲಾ ಆದವು. ಜನ ಭಯಭೀತರಾಗಿ ಪಕ್ಕದ ರಾಷ್ಟ್ರಗಳಾದ ಟುನಿಶಿಯಾ, ಈಜಿಪ್ಟ್‍ಗಳಿಗೆ ವಲಸೆಹೋದರು. ಹೆಚ್ಚುಕಮ್ಮಿ ಲಿಬಿಯಾ ಮತ್ತೊಂದು ಯುದ್ಧಕ್ಕೆ ಸಾಕ್ಷಿಯಾಯಿತು. ಇನ್ನೂ ಸ್ಥಾಪನೆಯೇ ಆಗಿರದ ಸರಕಾರ ಅಕ್ಷರಶಃ ಕೈ ಚೆಲ್ಲಿ ಕುಳಿತುಬಿಟ್ಟಿತು. ಇತ್ತ ಮಿಸ್ರತಾದವರು ಟ್ರಿಪೋಲಿ ವಿಮಾನ ನಿಲ್ದಾಣ ಮತ್ತು ಅಲ್ಲಿಯ ಸರಕಾರಿ ಕಛೇರಿಗಳನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಅತ್ತ ಬೆಂಗಾಜಿಯಲ್ಲಿ ಆಲ್-ಆನ್ ಶೆರಿಯಾ ಉಗ್ರ ಸಂಘಟನೆಯು ಸರಕಾರಿ ಸ್ವಾಮ್ಯದ ಕಛೇರಿಗಳನ್ನು ವಶಪಡಿಸಿಕೊಳ್ಳಲಾರಂಭಿಸಿತು. ಇದೇ ಸಮಯದಲ್ಲಿ ಅದಾಗಲೇ ಇರಾಕ್ ಮತ್ತು ಸಿರಿಯಾದಲ್ಲಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಬಿರುಸುಗೊಳಿಸಿದ್ದ ISIS ಉಗ್ರ ಸಂಘಟನೆಕಾರರು ಲಿಬಿಯಾಕ್ಕೂ ವಿಸ್ತರಿಸಲು ಹೊಂಚುಹಾಕಿ ಈ ದೇಶದೊಳಕ್ಕೆ ನುಸುಳಿಬಿಟ್ಟರು.
    ಇನ್ನೂ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿರದ ಸರಕಾರಕ್ಕೆ ಇದೊಂದು ದೊಡ್ದ ತಲೆನೋವಾಗಿ ಪರಿಣಮಿಸಿತು. ಹೀಗಾದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಆಯ್ಕೆಗೊಂಡ ಸಂಸದರು ಬೇಗಬೇಗನೆ ಪ್ರಮಾಣ ವಚನವನ್ನು ಸ್ವೀಕರಿಸಿ ಸರಕಾರವನ್ನು ರಚಿಸಿಬಿಡೋಣ ಎಂಬ ತೀರ್ಮಾನವನ್ನು ತೆಗೆದುಕೊಂಡರು. ಆದರೆ ಬೆಂಗಾಜಿಯಲ್ಲಿ ಗಲಾಟೆ ತೀವ್ರಗೊಂಡಿದ್ದರಿಂದ ಪ್ರಮಾಣ ವಚನ ಸ್ವೀಕಾರವನ್ನು ತೂಬ್ರೂಕ್ ಎನ್ನುವ ಊರಿಗೆ ಸ್ಥಳಾಂತರಿಸಿದರು. ಇದು ಬೆಂಗಾಜಿಯವರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತು. ಇತ್ತ ಪ್ರಮಾಣ ವಚನ ಸ್ವೀಕರಿಸಿ ಸರಕಾರ ರಚನೆಯಾಗುವಷ್ಟರಲ್ಲಿ ಅತ್ತ ಗಲಾಟೆಗಳು ಜಾವಿಯಾ, ಜ್ವೋರಾ, ಮುಂತಾದ ಪ್ರಮುಖ ನಗರಗಳಿಗೆ ಹರಡಿ ದೆಶದೆಲ್ಲೆಡೆ ಅಭದ್ರತೆ ಹೆಚ್ಚಾಯಿತು. ಅಪಹರಣ, ಅತ್ಯಾಚಾರ, ದರೋಡೆ, ಕಳ್ಳತನ, ಸುಲಿಗೆಗಳಂತ ಪ್ರಕರಣಗಳು ಟ್ರಿಪೋಲಿ ಮತ್ತು ಬೆಂಗಾಜಿಗಳಲ್ಲಿ ಸಾಮಾನ್ಯವಾದವು. ಆಗ ಅಮೆರಿಕಾ, ಈಜಿಪ್ಟ್, ಇಂಗ್ಲೆಂಡ್, ಜರ್ಮನಿ, ಇಟಲಿ, ಫ್ರಾನ್ಸ್, ಕೆನಡಾ, ಇನ್ನೂ ಮುಂತಾದ ದೇಶಗಳು ಒಂದೊಂದಾಗಿ ತಮ್ಮ ರಾಯಭಾರ ಕಛೇರಿಗಳನ್ನು ಮುಚ್ಚಿ ರಾಜಧಾನಿಯಿಂದ ಕಾಲು ಕೀಳತೊಡಗಿದವು. ಇದನ್ನು ನೋಡಿ ಪ್ರಧಾನಿ ಥಿನ್ನಿ ನಮ್ಮನ್ನು ಒಂಟಿಯಾಗಿ ಬಿಟ್ಟುಹೋಗಬೇಡಿ. ಗಡಾಫಿಯನ್ನು ಕಿತ್ತೊಗೆಯಲು ಸಹಾಯ ಮಾಡಿದ ನೀವು ಈಗ ಇಲ್ಲೊಂದು ಸ್ಥಿರ ಸರಕಾರವನ್ನು ಸ್ಥಾಪಿಸಲು ಸಹಾಯ ಮಾಡದೆ ನಮ್ಮನ್ನು ನಡುನೀರಲ್ಲಿ ಕೈ ಬಿಟ್ಟುಹೋಗುವದು ಸರಿಯಲ್ಲ. ದಯವಿಟ್ಟು ಸಹಾಯ ಮಾಡಿ ಎಂದು ಈ ಎಲ್ಲ ರಾಷ್ಟ್ರಗಳನ್ನು ಗೋಗರೆಯತೊಡಗಿದ. ಆದರೆ ಅಮೆರಿಕಾದ ಅಧ್ಯಕ್ಷ ಒಬಾಮಾ, ಲಿಬಿಯಾ ಅನೇಕ ಬುಡಕಟ್ಟುಗಳಿರುವ ರಾಷ್ಟ್ರ. ಅಲ್ಲಿ ನಾವು ಕೈ ಹಾಕುವದು ತಪ್ಪಾಗುತ್ತದೆ ಎಂದು ಹಾರಿಕೆಯ ಉತ್ತರವನ್ನು ಕೊಟ್ಟು ತಮ್ಮವರನ್ನು ಲಿಬಿಯಾದಿಂದ ಸುರಕ್ಷಿತವಾಗಿ ಕರೆಸಿಕೊಂಡನು. ಆದರೆ ಒಬಾಮನಿಗೆ ತಮ್ಮ ರಾಯಭಾರಿಯನ್ನು ಕೊಂದುಹಾಕಿದ್ದರ ಬಗ್ಗೆ ಸಿಟ್ಟಿತ್ತು. ಹೀಗಾಗಿ ಅಮೆರಿಕಾ ತಟಸ್ಥವಾಗಿ ಉಳಿಯಿತು. ಅಮೆರಿಕಾನೇ ತಟಸ್ಥವಾದ ಮೇಲೆ ಉಳಿದ ರಾಷ್ಟ್ರಗಳು ತಾನೆ ಏನು ಮಾಡಬಲ್ಲವು? ಅವು ಕೂಡಾ ಅದನ್ನೇ ಹಿಂಬಾಲಿಸಿದವು.    
    ಇತ್ತ ಟ್ರಿಪೋಲಿ ಮತ್ತು ಬೆಂಗಾಜಿಗಳು ಬಂಡುಕೋರರ ಕೈಗೆ ಸಿಕ್ಕು ನಲುಗುತ್ತಿದ್ದರೆ ಅತ್ತ ಸರಕಾರ ಇವರನ್ನು ಬಗ್ಗು ಬಡಿಯಲು ಹರಸಾಹಸ ಪಡುತ್ತಿತ್ತು. ಏಕೆಂದರೆ ಸರಕಾರದ ಮಿಲ್ಟ್ರಿಪಡೆಯ ಸಂಖ್ಯೆಗಿಂತ ಬಂಡುಕೋರರ ಸಂಖ್ಯೆಯು ಎರಡರಷ್ಟಿತ್ತು. ಹಾಗೆ ಮಿಲ್ತ್ರಿಪಡೆಯ ಸಂಖ್ಯೆ ಕಡಿಮೆಯಾಗಲು ಇನ್ನೊಂದು ಕಾರಣವೂ ಇತ್ತು. ಅದೇನೆಂದರೆ ಆಗಿನ ಹಂಗಾಮಿ ಸರಕಾರ ಗಡಾಫಿ ಆಡಳಿತದಲ್ಲಿ ನೇಮಕಗೊಂಡ ಅರ್ಧದಷ್ಟು ಸೈನಿಕರು ಮತ್ತು ಪೋಲಿಸ್‍ರ ಮೇಲೆ ಅನುಮಾನಪಟ್ಟು ನಮಗೆ ನಿಮ್ಮ ಮೇಲೆ ವಿಶ್ವಾಸವಿಲ್ಲ, ನೀವಿನ್ನೂ ಕೆಲಸಕ್ಕೆ ಬರುವದು ಬೇಕಾಗಿಲ್ಲ ಎಂದು ಹೇಳಿ ಅವರಿಗೆ ತಿಂಗಳು ತಿಂಗಳು ಸಂಬಳ ಕೊಟ್ಟು ಮನೆಯಲ್ಲಿ ಕೂರಿಸಿದರು. ಇವರು ಕೂಡಾ ಖುಷಿಯಿಂದಲೇ ಹೊರಬಂದು ಈ ಸಂಬಳದೊಂದಿಗೆ ಬೇರೆ ಕೆಲಸ ಮಾಡುತ್ತಾ ಇನ್ನೊಂದಿಷ್ಟು ಸಂಪಾದಿಸತೊಡಗಿದರು. ಆದರೆ ಸರಕಾರ ಇವರನ್ನು ಕೆಲಸದಿಂದ ತೆಗೆದ ಮೇಲೆ ತಕ್ಷಣ ಹೊಸಬರನ್ನು ನೇಮಕ ಮಾಡಿಕೊಳ್ಳದೆ ದೊಡ್ದ ತಪ್ಪು ಮಾಡಿತು. ಜೊತೆಗೆ ಬಂಡುಕೋರರ ಕೈಗೆ ಒಳಗೊಳಗೆ ಅತ್ಯಾಧುನಿಕ ಶಸ್ತ್ರಗಳು ಮಿಸ್ರತಾ ಬಂದರಿನ ಮೂಲಕ ಟುರ್ಕಿ, ಖತಾರ್, ಸುಡಾನ್, ದುಬೈಗಳಿಂದ ಬರುತ್ತಿರುವದು ಇವರ ಗಮನಕ್ಕೆ ಬಾರದೆ ಹೊಯಿತು.
    ಇದೀಗ ರಾಜಧಾನಿ ಟ್ರಿಪೋಲಿಯು ಸೇರಿದಂತೆ ಬಹಳಷ್ಟು ಪ್ರದೇಶಗಳನ್ನು ಮಿಸ್ರತಾದವರು ಆಕ್ರಮಿಸಿಕೊಂಡು ತಮ್ಮದೇ ಸರಕಾರವನ್ನು ಸ್ಥಾಪಿಸಿಕೊಂಡಿದ್ದಾರೆ. ಹಾಗಾಗಿ ಇಲ್ಲೀಗ ಎರಡು ಸರಕಾರಗಳಿವೆ. ಮೊದಲನೆಯದು ಜನರಿಂದ ಚುನಾಯಿತವಾದ ಸರಕಾರ. ಎರಡನೆಯದು ಮಿಸ್ರತಾ (ಇಸ್ಲಾಂ ಮೂಲಭೂತವಾದಿಗಳ) ಮತ್ತು GNC ಯವರ ಸಮ್ಮಿಶ್ರ ಸರಕಾರ. ಈ ಎರಡು ಸರಕಾರಗಳ ನಡುವಿನ ತಿಕ್ಕಾಟ ಮುಂದುವರಿದಿದೆ. ಇದನ್ನೆಲ್ಲಾ ನೋಡುತ್ತಿರುವ ಇಲ್ಲಿಯ ಜನ ಈ ದೇಶ ಒಡೆದು ಎರಡು (ಪೂರ್ವ ಲಿಬಿಯಾ ಮತ್ತು ಪಶ್ಚಿಮ ಲಿಬಿಯಾ) ಹೋಳಾಗಬಹುದು ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿಯ ಬಹಳಷ್ಟು ಜನರ ಬೆಂಬಲ ಚುನಾಯಿತ ಸರಕಾರಕ್ಕೇ ಇದೆ. ಅಂತೆಯೇ ಅಮೆರಿಕಾ, ಯೂರೋಪ್, ಯುನೈಟೆಡ್ ಕಿಂಗಡಮ್, ಈಜಿಪ್ಟ್ ಇನ್ನೂ ಮುಂತಾದ ದೇಶಗಳು ಸಹ ಚುನಾಯಿತ ಸರಕಾರದ ಜೊತೆಯಲ್ಲಿವೆ. ಈ ನಡುವೆ ಲಿಬಿಯಾದ ಉಚ್ಛ ನ್ಯಾಯಾಲಯವು ಈ ಎರಡು ಸರಕಾರಗಳಲ್ಲಿ ಮಿಸ್ರತಾ ಸರಕಾರವೇ ದೇಶವನ್ನು ಚನ್ನಾಗಿ ಮುನ್ನಡೆಸಬಲ್ಲದು ಎಂಬ ತೀರ್ಪನ್ನಿತ್ತಿದೆ. ಆದರೆ ಈ ತೀರ್ಪು ಸಮ್ಮತವಾದ ತೀರ್ಪಲ್ಲ ಎಂದು ಚುನಾಯಿತ ಸರಕಾರ ಅಲ್ಲಗಳೆದಿದೆ. ಇಲ್ಲಿಯ ಜನರು ಕೂಡಾ ಮಿಸ್ರತಾದವರು ನ್ಯಾಯಾಧೀಶರಿಗೆ ಹಣ ಮತ್ತು ಬೆದರಿಕೆಯನ್ನೊಡ್ಡಿ ತೀರ್ಪು ತಮ್ಮ ಕಡೆ ಆಗುವಂತೆ ನೋಡಿಕೊಂಡಿದ್ದಾರೆ ಎಂದು ಹೇಳುತ್ತಾರೆ.
    ಇವತ್ತಿನ ಲಿಬಿಯಾದ ರಾಜಕೀಯ ಬಿಕ್ಕಟ್ಟನ್ನು ನೋಡುತ್ತಿದ್ದರೆ ಈ ಸಮಸ್ಯೆಗೆ ಶೀಘ್ರದಲ್ಲಿಯೇ ಪರಿಹಾರ ಸಿಗುವಂತೆ ಕಾಣುತ್ತಿಲ್ಲ. ಒಂದೋ ಯಾರಾದರೊಬ್ಬರು ಗಡಾಫಿಯಂಥವರು ತುರ್ತಾಗಿ ಈ ದೇಶಕ್ಕೆ ಬೇಕಿದೆ. ಇಲ್ಲವೇ ಪ್ರಜಾಪ್ರಭುತ್ವದ ಬೆಲೆಯನ್ನು ಅರಿತುಕೊಂಡು ಪ್ರಜಾರಾಜ್ಯ ಸ್ಥಾಪನೆಯಾಗಲು ಎಲ್ಲ ಜನರು ಒಮ್ಮತದ ಸಹಕಾರ ನೀಡಬೇಕಿದೆ. ಸಧ್ಯದ ಪರಿಸ್ಥಿತಿಯಲ್ಲಿ ಇವೆರೆಡೂ ಆಗುವದು ಕಷ್ಟದ ಕೆಲಸವೇ ಸರಿ. ಏಕೆಂದರೆ ಇದೀಗ ಮಿಸ್ರತಾದವರು ನ್ಯಾಯಾಲಯದ ತೀರ್ಪನ್ನೇ ಮುಂದಿಟ್ಟುಕೊಂಡು ರಾಜ್ಯ ವಿಸ್ತರಣೆಗೆ ಮುಂದಾಗುತ್ತಿದ್ದರೆ ಚುನಾಯಿತ ಸರಕಾರ ಅವರನ್ನು ಬಗ್ಗುಬಡಿಯಲು ಹರಸಾಹಸಪಡುತ್ತಿದೆ. ಇಲ್ಲವಾದಲ್ಲಿ ಗಡಾಫಿಯನ್ನು ಕಿತ್ತೊಗೆಯಲು ಸಹಾಯ ಮಾಡಿದ ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳು ಮಧ್ಯ ಪ್ರವೇಶಿಸಿ ಇಲ್ಲೊಂದು ಸ್ಥಿರ ಸರಕಾರವನ್ನು ಸ್ಥಾಪಿಸುವ ಹೊಣೆಯನ್ನು ಹೊರಬೇಕಿದೆ.
    ಹಾಗಾದರೆ ಲಿಬಿಯಾದಲ್ಲಿ ಮುಂದೇನಾಗುತ್ತದೆ? ಇಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದಾ? ಅಥವಾ ಮತ್ತೆ ಏಕಚಕ್ರಾಧಿಪತ್ಯ ಸ್ಥಾಪನೆಯಾಗುತ್ತದಾ? ಸಧ್ಯದ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಈಗಲೇ ಏನನ್ನೂ ಹೇಳಲು ಬರುವದಿಲ್ಲ. ಅಸಲಿಗೆ ಲಿಬಿಯನ್‍ರಿಗೇ ಒಳಗೆ ಏನಾಗುತ್ತಿದೆ ಎಂದು ಸರಿಯಾಗಿ ಗೊತ್ತಾಗುತ್ತಿಲ್ಲ. ನನ್ನ ಪ್ರಕಾರ ಏಕ ಚಕ್ರಾಧಿಪತ್ಯ ಮತ್ತೆ ಸ್ಥಾಪನೆಯಾಗಲು ಸಾಧ್ಯವಿಲ್ಲ. ಏಕೆಂದರೆ ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳು ಇದಕ್ಕೆ ಅವಕಾಶ ಮಾಡಿಕೊಡುವದಿಲ್ಲ. ಏಕೆಂದರೆ ಅವರು ಈಗಾಗಲೇ ಮಾಡಿಕೊಂಡ ಕೆಲವು ಒಪ್ಪಂದಗಳನ್ನು ಬರುವ ಚಕ್ರಾಧಿಪತಿ ಮುರಿಯಬಹುದು. ಅಥವಾ ಇವರಿಗೆ ಪುಕ್ಕಟೆಯಾಗಿ ಹರಿದುಹೋಗುವ ತೈಲವನ್ನು ನಿಲ್ಲಿಸಬಹುದು. ಈ ಭಯಕ್ಕಾದರೂ ಅವು ಕಾದು ಕಾದು ಕೊನೆ ಘಳಿಗೆಯಲ್ಲಿ ಹೋಗಿ ಸಹಾಯ ಮಾಡಿದರೂ ಮಾಡಬಹುದು. ಚುನಾಯಿತ ಸರಕಾರವು ಕೂಡಾ ಇವರ ಸಹಾಯದ ನಿರೀಕ್ಷೆಯಲ್ಲಿಯೇ ಇದೆ. ಇವರು ಸಹಾಯ ನೀಡಿದರೆ ಈ ಬಂಡುಕೋರರನ್ನೆಲ್ಲಾ ಹತ್ತಿಕ್ಕಿ ಲಿಬಿಯಾದಲ್ಲಿ ಖಂಡಿತ ಮತ್ತೆ ಶಾಂತಿ ನೆಲೆಯೂರುವಂತೆ ಮಾಡಬಹುದು.  ಆದಷ್ಟು ಬೇಗ ಆ ಕೆಲಸವಾಗಲಿ ಎಂದು ಆಶಿಸೋಣ.
    ಅಂದಹಾಗೆ ಸಧ್ಯದ ಲಿಬಿಯಾದಲ್ಲೀಗ ಏನಾಗುತ್ತಿದೆ ಎಂಬುದನ್ನು ನಿಮಗೆಲ್ಲಾ ತುರ್ತಾಗಿ ತಿಳಿಸಲು ನಾನು ಈ ಸಾರಿ ಈ ಲೇಖನವನ್ನು ಬರೆಯಬೇಕಾಯಿತು. ಮುಂದಿನ ಸಾರಿಯಿಂದ ಯಥಾಪ್ರಕಾರ ಮತ್ತೆ ಇಲ್ಲಿನ ನನ್ನ ಅನುಭವಗಳ ಸರಣಿ ಮುಂದುವರಿಯಲಿದೆ.

    -ಉದಯ್ ಇಟಗಿ