Demo image Demo image Demo image Demo image Demo image Demo image Demo image Demo image

ಡಾ. ಮಂಗಳಾ ಪ್ರಿಯದರ್ಶಿನಿ ಕಣ್ಣಲ್ಲಿ ನನ್ನ "ಶೇಕ್ಸಪಿಯರನ ಶ್ರೀಮತಿ" ನಾಟಕದ ವಿಮರ್ಶೆ

  • ಬುಧವಾರ, ಫೆಬ್ರವರಿ 21, 2024
  • ಬಿಸಿಲ ಹನಿ
  • ನಾಲ್ಕು ದಿನಗಳ ಹಿಂದೆ ದಾವಣಗೆರೆಯಿಂದ ಉದಯ್ ಇಟಗಿಯವರು ತಮ್ಮ “ಶೇಕ್ಸ್ ಪಿಯರನ ಶ್ರೀಮತಿ” ನಾಟಕದ ಪ್ರಯೋಗವಾಗುತ್ತಿದ್ದು, ನಾನು ಬರಲೇಬೇಕೆಂಬ ಪ್ರೀತಿಯ ಒತ್ತಾಯವನ್ನು ಹೇರಿದ್ದೇ ಅಲ್ಲದೆ ಮನೆಗೇ ಬಂದು ಕರೆದುಕೊಂಡು ಹೋಗುವುದಾಗಿ ಹೇಳಿದರು. ಇದಕ್ಕೆ ಕಾರಣ, ಇಟಗಿಯವರ ಈ ಕೃತಿಯನ್ನು ಪ್ರಕಟಣೆಗೆ ಮೊದಲೇ ಪಿಡಿಎಫ್ನಲ್ಲಿಯೇ ಓದಿ ಮೆಚ್ಚಿದ್ದ ಮೊದಮೊದಲ ಓದುಗಳಾಗಿದ್ದೆ. ಈಗ ರಂಗ ಪ್ರದರ್ಶನವನ್ನು ನೋಡಬೇಕೆಂಬ ಆಸೆಯೂ ಇದ್ದು, ಅದಾಗಲೇ ರಂಗಶಂಕದಲ್ಲಿ ಪ್ರದರ್ಶನಗೊಂಡು ದಾವಣಗೆರೆಯನ್ನೂ ಒಳಗೊಂಡಂತೆ ಅನೇಕ ಕಡೆಗಳಲ್ಲಿ ಪ್ರದರ್ಶನಗಳನ್ನು ಕಂಡು ಪ್ರೇಕ್ಷಕರ ಮನ ಗೆದ್ದ ನಾಟಕವಾಗಿತ್ತು. ಇಟಗಿಯವರ ಈ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸುತ್ತ ಶನಿವಾರ ವರ್ಲ್ಡ್ ಕಲ್ಚರ್ಗೆ ಉತ್ಸಾಹದಿಂದಲೇ ಹೊರಟಿದ್ದೆ. ಈ ನಾಟಕ ಏಕ ವ್ಯಕ್ತಿ ಪ್ರದರ್ಶನವಾಗಿದ್ದು ನಾಯಕಿ, ಕನ್ನಡದ ಅಪ್ರತಿಮ ಅಭಿನೇತ್ರಿ ಶ್ರೀಮತಿ ಲಕ್ಷ್ಮಿ ಚಂದ್ರ ಶೇಖರ್ ಅವರು. ಯಾವ ಪಾತ್ರವನ್ನು ಕೊಟ್ಟರೂ ಪರಕಾಯ ಪ್ರವೇಶ ಮಾಡಿ ತಾವೇ ಆ ಪಾತ್ರವಾಗಿಬಿಡುವ ನಟಿ. ಗೃಹಭಂಗದ ಗಂಗಮ್ಮ, ಮಾಯಾಮೃಗದ ಶಾಸ್ತ್ರಿಗಳ ಮುಗ್ಧ ಹೆಂಡತಿ …. ಇಲ್ಲಿ ಅವರನ್ನು ಶೇಕ್ಸ್ಯರನ ಹೆಂಡತಿಯಾಗಿ ನೋಡುವ ಕೂತೂಹಲವಿತ್ತು . ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕಿಯೇ ಆಗಿದ್ದ ಲಕ್ಷ್ಮೀ ಅವರಿಗೆ ಶೇಕ್ಸ್ ಪಿಯರನ ಬಗೆಗೆ ಪ್ರವೇಶಿಕೆ ಇರುವುದರಿಂದ ಈ ಪಾತ್ರವನ್ನು ಅತ್ಯಂತ ನಿಖರವಾಗಿ ನಿರೂಪಿಸುವರೆಂಬ ನಿರೀಕ್ಷೆ ನನ್ನಂತೆ ತುಂಬಿದ ಗೃಹದಲ್ಲಿ ಕುಳಿತಿದ್ದ ಎಲ್ಲ ಪ್ರೇಕ್ಷಕರಿಗೂ ಇದ್ದದ್ದೆ. ಈ ನಾಟಕದಲ್ಲಿ ಇರುವುದು ಒಂದೇ ಪಾತ್ರ. ಅದು ಶೇಕ್ಸ ಪಿಯರನ ಹೆಂಡತಿ ಆನಾ ಹ್ಯಾಥ್ ವೇ ಳದು. ಒಂದೇ ಅಂಕದಲ್ಲಿ ಅಡೆ ತಡೆಯಿಲ್ಲದೆ, ಹೆಚ್ಚು ಪ್ರಸಾದನಗಳಿಲ್ಲದೆ, ಒಂದೇ ಓಘದಲ್ಲಿ ಓಡುವ ನಾಟಕದಲ್ಲಿ ಶೇ ಕ್ಸ್ ಪಿಯರನ ಹೆಂಡತಿಯ ಪಾತ್ರದಲ್ಲಿ ಅವನ ಬದುಕು, ಬರಹಗಳ ಬಗೆಗೆ ಬದುಕಿನ ಸಂಜೆಯಲ್ಲಿ ಬಹು ಹತ್ತಿರದಿಂದ ಕಂಡ ಆತನ ಹೆಂಡತಿಯ ಸ್ವಗತಗಳಲ್ಲಿಯೇ ನಾಟಕ ಪ್ರಾರಂಭವಾಗುತ್ತದೆ. ಇದು ಸ್ತ್ರೀ ವಾದೀ ನೆಲೆಯಿಂದ ಶೇಕ್ಸ್ ಪಿಯರ್ ನನ್ನು ವ್ಯಾಖ್ಯಾನಿಸುವ ನಾಟಕವೂ ಆಗಿದೆ. ಹದಿನೆಂಟು ವರ್ಷದ ಶೇಕ್ಸ್ ಪಿಯರ್ ಇಪ್ಪತ್ತಾರು ವರ್ಷದ ಆನೆ ಹ್ಯಾಥ್ ಳ ಪ್ರೇಮಕ್ಕೆ, ಅವಳೇ ಹೇಳಿಕೊಳ್ಳುವಂತೆ ಕಾಮಕ್ಕೆ ಬಿದ್ದು ಆಕೆ ಮದುವೆಗೆ ಮುಂಚೆ ಬಸಿರಾದದ್ದು, ಮನೆಯವರು ಪಂಚಾಯಿತಿ ಸೇರಿಸಿ ಮದುವೆ ಮಾಡಿದ್ದ್ದು, ಮೂರು ಮಕ್ಕಳು, ಈತ ಮನೆ ಬಿಟ್ಟು ಲಂಡನ್ನಿಗೆ ಬಂದದ್ದು, ಅಲ್ಲಿ ತೆರೆಯ ಹಿಂದೆ ಪಾತ್ರಗಳಿಗೆ ಮಾತು ಹೇಳಿಕೊಡುವ ಉದ್ಯೋಗ ಹಿಡಿದದ್ದು, ತಾನೇ ಕಷ್ಟ ಪಟ್ಟು ದುಡಿಯುತ್ತಾ ಮಕ್ಕಳಲ್ಲದೆ ಅತ್ತೆ, ಮಾವಂದಿರನ್ನೂ ಸಲಹಿದ್ದು, ಅವಳಿ ಮಕ್ಕಳಲ್ಲಿ ಒಬ್ಬ ಮಗ ಹನ್ನೊಂದು ವರ್ಷಕ್ಕೆ ತೀರಿಕೊಂಡದ್ದು, ಗಂಡನ ಸುಳಿವೇ ಇಲ್ಲದಂತೆ ಒಂಟಿಯಾಗಿ ಬದುಕಿದ್ದು, ಆಗೀಗ ಬರುವ ಪತ್ರಗಳೇ ಅವಳನ್ನು ಬದುಕಿಸಿದ್ದು, ಲಂಡನ್ನಿನಲ್ಲಿ ಅವನ ಇತರೆ ಹೆಣ್ಣುಗಳ ಸಹವಾಸ, ಅಲ್ಲೊಬ್ಬ ಗೆಳೆಯನ ಸಹವಾಸ, ಕೊನೆಗೆ ಖಾಯಿಲೆ ಅಂಟಿಸಿಕೊಂಡು ಮನೆಗೆ ಬಂದು ತನ್ನ ಐವ್ವತ್ತೆರಡನೆಯ ವಯಸ್ಸಿನಲ್ಲಿ ಸಾಯುವುದು …. ಈ ಎಲ್ಲ ವಿವರಗಳನ್ನು ಪ್ರೇಕ್ಷಕರ ಮುಂದೆ ಆತ್ಮೀಯವಾಗಿ ಹಂಚಿಕೊಳ್ಳುತ್ತಾಳೆ. ಶೇಕ್ಸ್ ಪಿಯರ್ ಜಗತ್ತಿನ ಅತ್ಯಂತ ಶ್ರೇಷ್ಠ, ಪ್ರಸಿದ್ಧ ನಾಟಕಕಾರ ಎಂದು ಬಗೆದ ಲೋಕಕ್ಕೆ, ಪರಿಚಯವಿಲ್ಲದ ಶೇಕ್ಸ್ ಪಿಯರನ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತಾ ಹೋಗುವ ಆನಾ, ಮುಗ್ಧವಾಗಿ ತನ್ನನ್ನು ಅವನ ವ್ಯಕ್ತಿತ್ವದ ಪಕ್ಕ ಪಕ್ಕದಲ್ಲಿಟ್ಟು ಅವನಿಗೆ ತಕ್ಕ ಹೆಂಡತಿ ನಾನಾಗಿದ್ದೆನೆ? ಎಂದು ಪ್ರಾಮಾಣಿಕವಾಗಿ ಪ್ರಶ್ನಿಸಿಕೊಳ್ಳುತ್ತಾಳೆ. ಗಂಡ ಪ್ರೇಮ ಕವನಗಳನ್ನು ಬರೆದಿದ್ದು ತನಗೆ ಎಂದು ಭಾವಿಸಿಕೊಂಡಿರುವಾಗಲೇ ಅದು ಬರೆದದ್ದು ಅವನ ಗೆಳೆಯನಿಗೆ ಎಂದು ಗೊತ್ತಾದಾಗ, ನನ್ನ ವೈರು ಕೂದಲನ್ನು ಯಾರು ಮೆಚ್ಚುತ್ತಾರೆ ಎಂದು ಸಮಾಧಾನವಾಗಿಯೇ ಕಟು ವಾಸ್ತವವನ್ನು ಸ್ವೀಕರಿಸುತ್ತಾಳೆ. ಅನಾಳಲ್ಲಿ ಗಂಡನ ಬಗೆಗೆ ಎಲ್ಲೂ ವಿಷಾದವಿಲ್ಲ, ಬೇಸರವಿಲ್ಲ. ಬದುಕನ್ನು ಬಂದ ಹಾಗೇ ಸ್ವೀಕರಿಸುವ ಮನೋಭಾವವಿದೆ. ಇದೆಲ್ಲದರ ನಡುವೆ ಪ್ರಖ್ಯಾತರ ಹೆಂಡಂದಿರ ಪಾಡೇ ಇಷ್ಟು, ಎಂಬ ತಾತ್ವಿಕ ನಿರ್ಲಿಪ್ತತೆ ಇದೆ. ಒಂದೂವರೆ ಗಂಟೆ ನಿರರ್ಗಳವಾಗಿ ಮಾತನಾಡುವ ನಟಿ ನಮಗೆ ಪರಿಚಯವಿಲ್ಲದ ಹಾಗೂ ಇರುವ ಶೇಕ್ಸ್ ಪಿಯರನನ್ನು ಅದ್ಭುತವಾಗಿ ವ್ಯಾಖ್ಯಾನಿಸುತ್ತಾರೆ. ವೇದಾಂತಿಯಂತೆ ಇಹದ ಬದುಕಿನ ಕಾಯಕದೊಳಗೆ ಒಬ್ಬಳೇ ದುಡಿಯುತ್ತ ಅದರೊಳಗೇ ತನ್ನ ದುಃಖಗಳನ್ನು ಮರೆಯುವ ಆನಾಳನ್ನು ಆಪ್ತವಾಗಿಸುತ್ತಾರೆ. ಎಲ್ಲೋ ಒಂದು ಕಡೆ ಅವಳ ಬಗ್ಗೆ ಕನಿಕರ ಉಂಟಾಗದೆ ಇರುವುದಿಲ್ಲ. ಲಕ್ಷ್ಮಿ ಅವರ ಅಭಿನಯ ನಾಟಕಕ್ಕೆ ಜೀವ ತುಂಬುವಂತಹದು. ಶೇಕ್ಸ್ ಪಿಯರನ ಹಸಿರು ಕೋಟಿನೊಂದಿಗೆ ಮಾತನಾಡುವುದು, ‘ಅವನ ತಲೆ ಮೇಲೆ ಮೊಟುಕಿದೆ’ ಎಂದು ಹೇಳುತ್ತಾ ಆತ ಎಷ್ಟಾದರೂ ತನಗಿಂತ ಚಿಕ್ಕವನು ಎಂದು ಹೆಮ್ಮೆ ಪಡುವ ಭಾವವನ್ನು ಹೇಳುವಲ್ಲಿ ಲಕ್ಷ್ಮಿ ಅವರ ಅಭಿನಯ ಪರಕಾಷ್ಠತೆಯನ್ನು ಮುಟ್ಟುತ್ತದೆ . ಶೇಕ್ಸ್ ಪಿಯರನ ಕಾಲದ ಹಿನ್ನೆಲೆ ಸಂಗೀತ , ವಸ್ತ್ರ ವಿನ್ಯಾಸ , ರಂಗ ಸಜ್ಜಿಕೆ , ಪ್ರಾಪ್ಸ್ - ಬಕೆಟ್ಟಿನಿಂದ ಹಿಡಿದು ಲಂಡನ್ ಬ್ರಿಡ್ಜ್ ವರೆಗೆ ತುಂಬ ಅಥೆಂಟಿಕ್ ಆಗಿದೆ. ಲಕ್ಷ್ಮೀ ಚಂದ್ರ ಶೇಖರ್ ಅಂತಹ ಅಮೋಘ ನಟಿ , ನಮ್ಮ ಕನ್ನಡದ ನಟಿ ಎಂದು ಗರ್ವದಿಂದ ಹೇಳುವಲ್ಲಿ ಹೆಮ್ಮೆಯ ಕೋಡು ಮೂಡುತ್ತದೆ. ಲಕ್ಷ್ಮಿಯವರ ಮತ್ತೊಂದು ಸಾಧನೆ ಎಂದರೆ ಇದೇ ನಾಟಕದ ಇಂಗ್ಲೀಷ್ ಅವತರಣಿಕೆಯಲ್ಲೂ ಅಷ್ಟೇ ನಿರ್ಗಳವಾಗಿ ಅಭಿನಯಿಸುವುದು, ಅದೂ ಕನ್ನಡ ನಾಟಕ ಪ್ರದರ್ಶನವಾದ ಅರ್ಧ ಗಂಟೆಯಲ್ಲೇ. ಅವರ ಅಸಾಧಾರಣ ನೆನಪಿನ ಶಕ್ತಿ, ರಂಗ ನಿರ್ವಹಣೆ ಅನನ್ಯವಾದುದು. ಇಂಥ ಆಕರ್ಷಕ ವಸ್ತುವನ್ನು ಕನ್ನಡಕ್ಕೆ ತಂದುಕೊಟ್ಟ ಉದಯ್ ಇಟಗಿಯವರಿಗೆ ಹಾರ್ದಿಕ ಅಭಿನಂದನೆಗಳು. ಈ ನಾಟಕವನ್ನು ಹೆಚ್ಚು ಹೆಚ್ಚು ಅಭಿಮಾನಿಗಳು ನೋಡಿ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. - ಡಾ ಮಂಗಳಾ ಪ್ರಿಯದರ್ಶಿನಿ