Demo image Demo image Demo image Demo image Demo image Demo image Demo image Demo image

ಗಡಾಫಿ ಮಾಡಿದ ಒಂದಿಷ್ಟು ತಪ್ಪುಗಳು-ಕೊನೆಯ ಭಾಗ

 • ಭಾನುವಾರ, ಮಾರ್ಚ್ 13, 2016
 • ಬಿಸಿಲ ಹನಿ
 • ಅಮೆರಿಕನ್ರೆಡೆಗೆ ತೀವ್ರ ದ್ವೇಷ ಹಾಗೂ ಕಮ್ಯೂನಿಷ್ಟ ರಾಷ್ಟ್ರಗಳತ್ತ ಅತೀವ ಒಲವು: ಗಡಾಫಿ ಮುಂಚಿನಿಂದಲೂ ಅಮೆರಿಕನ್ನರ ಬದ್ಧ ವೈರಿಯಾಗಿದ್ದ ಆತ ಅವಕಾಶ ಸಿಕ್ಕಾಗಲೆಲ್ಲಾ ಅವರನ್ನು ಯಾವುದೇ ಮುಲಾಜಿಲ್ಲದೆ, ಹಿಂಜರಿಕೆಯಿಲ್ಲದೆ ಬಹಿರಂಗವಾಗಿ ಟೀಕಿಸಿ ಅವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ. ಈ ವಿಷಯದಲ್ಲಿ ಇತರೆ ಮುಸ್ಲಿಂ ರಾಷ್ಟ್ರಗಳ ನಾಯಕರು ಗಡಾಫಿಯನ್ನು ಹಾಗೆಲ್ಲಾ ಅಮೆರಿಕನ್ನರನ್ನು ಬಹಿರಂಗವಾಗಿ ಟೀಕಿಸಬೇಡಎಂದು ಎಚ್ಚರಿಸಿದ್ದರೂ ಅವ ಅದನ್ನು ಲೆಕ್ಕಿಸದೆ ಪುಂಖಾನುಪುಂಖವಾಗಿ ಸಂದರ್ಭ ಸಿಕ್ಕಾಗಲೆಲ್ಲಾ ಅವರನ್ನು ತರಾಟೆಗೆ ತೆಗೆದುಕೊಂಡು ಅವರ ವಿರೋಧ ಕಟ್ಟಿಕೊಳ್ಳುತ್ತಿದ್ದನಲ್ಲದೇ ಇದೇ ಕಾರಣಕ್ಕಾಗಿ ಇನ್ನಿಲ್ಲದಂತೆ ನಾಶವಾಗಿ ಹೋದ. ಜಗತ್ತಿನ ಬಹುತೇಕ ರಾಷ್ಟ್ರಗಳು ಅಮೆರಿಕಾವನ್ನು ಒಲಿಸಿಕೊಳ್ಳಲು ನೋಡಿದರೆ ಇವನು ಮಾತ್ರ ಮೇಲಿಂದ ಮೇಲೆ ಅವರ ವಿರೋಧ ಕಟ್ಟಿಕೊಳ್ಳುತ್ತಲೇ ಇದ್ದ.  ಅಷ್ಟಕ್ಕೂ ಗಡಾಫಿಗೆ ಅಮೆರಿಕನ್ರನ್ನು ಕಂಡರೆ ಯಾಕೆ ಅಷ್ಟೊಂದು ದ್ವೇಷವಿತ್ತು ಎಂದು ಇಲ್ಲಿನವರು ಕೇಳಿದರೆ ಅವರು ಹೀಗೆ ಹೇಳುತ್ತಾರೆ.  ಗಡಾಫಿಯು ಅಮೇರಿಕನ್ ಸಾಮ್ರಾಜ್ಯ ಶಾಹಿ ಧೋರಣೆಯನ್ನು ಹಾಗೂ ವಿಶ್ವದಲ್ಲಿ ಸದಾಕಾಲ ತಾವೇ ಅಗ್ರಸ್ಥಾನದಲ್ಲಿರಬೇಕೆಂದು ಬಯಸುವ ಅವರ ದುರಾಸೆಯನ್ನು ಮತ್ತು ಲಿಬಿಯಾ ಸೇರಿದಂತೆ ಆಫ್ರಿಕಾ ಖಂಡ ಮತ್ತು ಮಧ್ಯಪ್ರಾಚ್ಯ ರಾಷ್ತ್ರಗಳ ವಿಷಯದಲ್ಲಿ ವಿನಾಕಾರಣ ಅವರು ಆಗಾಗ ಮೂಗು ತೂರಿಸುತ್ತಿದ್ದುದನ್ನು ಆತ ತೀವ್ರವಾಗಿ ಖಂಡಿಸುತ್ತಿದ್ದ.  ಒಂದು ಸಾರಿ ಗಡಾಫಿ ತನ್ನ ಭಾಷಣದಲ್ಲಿ ಅಮೆರಿಕನ್ನರನ್ನು ಕುರಿತಂತೆ ಹೀಗೆ ಆಪಾದಿಸಿದ್ದ, “ಜಮ್ಹಾರಿಯಾ (ಲಿಬಿಯಾದ ಸಮಾಜವಾದ) ಸ್ವಾಂತ್ರ್ಯಕ್ಕೆ ಧಕ್ಕೆ ತರುವ ಸಾಮ್ರಾಜ್ಯಶಾಹಿ ರಾಷ್ಟ್ರವಾದ ಅಮೆರಿಕಾವನ್ನು ಮತ್ತದರ ಧೋರಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೆವೆ. ಆ ನಿಟ್ಟಿನಲ್ಲಿ ನಾವೆಲ್ಲಾ ಅಮೆರಿಕನ್ನರ ಹುಟ್ಟು ದ್ವೇಷಿಗಳು. ಅಮೆರಿಕನ್ನರೆಡಗಿನ ನಮ್ಮ ಈ ದ್ವೇಷ ಇತಿಹಾಸದಲ್ಲಿ ದಾಖಲಾಗಲಿ.” ಅಮೆರಿಕನ್ನರೆಡಗಿನ ಈತನ ಈ ಭಯಂಕರ ದ್ವೇಷ ಲಿಬಿಯಾದ ಜನರ ಮೇಲೆಯೂ ಗಾಢವಾದ ಪರಿಣಾಮ ಬೀರಿತು. ಅವನಂತೆ ಅವರು ಕೂಡಾ ಅಮೆರಿಕನ್ನರ ಹುಟ್ಟು ದ್ವೇಷಿಗಳಾದರು.  ಗಡಾಫಿಗೆ ಅಮೆರಿಕಾವು ಇರಾಕಿನ ವಿಷಯದಲ್ಲಿ ಮೂಗು ತೂರಿಸಿ ತನ್ನ ಪರಮಾಪ್ತ ಸ್ನೇಹಿತ ಸದ್ದಾಂ ಹುಸೇನ್ನನ್ನು ಮುಗಿಸಿದ್ದಿದುರ ಬಗ್ಗೆ ತೀವ್ರ ಅಸಮಾಧನವಿತ್ತು ಮತ್ತು ಅವರ ಕೃತ್ಯವನ್ನು ಆತ ಅಮೆರಿಕಾದ ಕೇಡಿನ ಪರಮಾವಧಿ ಎಂದು ಕರೆದಿದ್ದ. ಸದ್ದಾಂ ಹುಸೇನ್ನನ್ನು ಗಲ್ಲಿಗೇರಿಸಿದ್ದುದರ ಹಿಂದಿನ ರಹಸ್ಯವನ್ನು ಬೇಧಿಸಬೇಕೆಂದು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನ ಮೇಲೆ ಆತ ಮೇಲಿಂದ ಮೆಲೆ ಒತ್ತಡ ಹೇರುತ್ತಲಿದ್ದ. ಜೊತೆಗೆ ಆತ ಕಮ್ಯೂನಿಸ್ಟ್ ರಾಷ್ಟ್ರಗಳಾದ ಕ್ಯೂಬಾ, ಚೀನಾ, ರಷಿಯಾದೊಂದಿಗೆ ತನ್ನ ಸಂಬಂಧವನ್ನು ಚನ್ನಾಗಿ ಇರಿಸಿಕೊಂಡಿದ್ದ. ಲಿಬಿಯಾದ ಮಾರುಕಟ್ಟೆ ಚೀನಾದ ಉತ್ಪನ್ನಗಳಿಂದ ತುಂಬಿ ಹೋಗಿತ್ತು. ದೇಶದ ಬೇಹುಗಾರಿಕೆ ಮತ್ತು ಗೂಢಚಾರಿಕೆಯ ವಿಭಾಗವನ್ನು ರಷಿಯನ್ರ್ ಸುಪರ್ದಿಗೆ ಬಿಟ್ಟಿದ್ದ. ಒಂದು ಸಾರಿ ಪಾನ್ ಆಮ್ ವಿಮಾನಕ್ಕೆ ಬಾಂಬಿಟ್ಟ ಆರೋಪದ ಮೇಲೆ ಅವನನ್ನು ಮುಗಿಸಲೇಬೇಕೆಂದು ಪಣತೊಟ್ಟ ಅಮೆರಿಕಾ ಅವನ ಟ್ರಿಪೋಲಿ ಮನೆಯ ಮೇಲೆ ಬಾಂಬ್ ದಾಳಿ ಮಾಡುತ್ತದೆ. ಆದರೆ ಅದಕ್ಕೂ ಮೊದಲೇ ರಷಿಯನ್ಬೇಹುಗಾರಿಕೆ ವಿಭಾಗದಿಂದ ಅವನಿಗೆ ಮಾಹಿತಿ ಸಿಕ್ಕಿದ್ದರಿಂದ ಅವನು ಅಲ್ಲಿಂದ ಪಾರಾಗಿದ್ದನು.
  ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಪ್ರಜಾಪ್ರಭುತ್ವವನ್ನು ಹೊಂದಿದ್ದ ಯೂರೋಪ್, ಬ್ರಿಟನ್, ಮತ್ತು ಅಮೆರಿಕಾ ರಾಷ್ಟ್ರಗಳು ಸಹಜವಾಗಿ ಕಮ್ಯೂನಿಸ್ಟ್ ರಾಷ್ಟ್ರಗಳಾದ ರಷಿಯಾ, ಚೀನಾ, ಕ್ಯೂಬಾಗಳೆಡೆಗೆ ಸಹಜವಾಗಿ ಒಂದು ತಿರಸ್ಕಾರವನ್ನು ಬೆಳೆಸಿಕೊಂಡಿದ್ದವು. ಹೇಗಾದರು ಮಾಡಿ ಭದ್ರ ಕೋಟೆಗಳನ್ನು ಒಡೆದು ಹಾಕಿದರೆ ಇಡಿ ಜಗತ್ತಿಗೆ ತಾವೇ ವರಿಷ್ಠರಾಗಬಹುದೆಂಬುದು ಅವರ ಹುನ್ನಾರವಾಗಿತ್ತು. ಹಾಗೆಂದೇ ಹೆಚ್ಚು ಕಮ್ಮಿ ಕಮ್ಯೂನಿಸ್ಟ್ ರಾಷ್ಟ್ರಗಳಂತಿದ್ದ ಕೆಲವು ಮುಸ್ಲಿಂ (ತಮಗೆ ಬಾಗದ) ರಾಷ್ಟ್ರಗಳನ್ನು ಅವರು ಯಾವತ್ತೂ ಒಂದಾಗಲು ಬಿಡುತ್ತಿರಲಿಲ್ಲ. ಕಾಲ ಸರಿದಂತೆ ಅಮೆರಿಕಾ USSR ನ್ನು ಒಡೆದು ಹಾಕಿತು ಮತ್ತು ಚೆಗುವಾರನ ನಂತರ ಕ್ಯೂಬಾವನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದನ್ನೇ ಗಡಾಫಿ ವಿಶ್ವಸಂಸ್ಥೆಯಲ್ಲಿ ತಾನು ಮಾಡಿದ ಮೊಟ್ಟ ಮೊದಲನೆಯ ಭಾಷಣದಲ್ಲಿ ಹಿಂದೆ ಚೀನಿಯರೊಂದಿಗೆ ಮತ್ತು ರಶಿಯನ್ರೊಂದಿಗೆ ಚನ್ನಾಗಿದ್ದ ಅನೇಕ ಅನೇಕ ಅರಬ್ ರಾಷ್ಟ್ರಗಳ ನಾಯಕರನ್ನು ನೀವು ಗಲ್ಲಿಗೇರಿಸಿದ್ದೀರಿ. ನಾಳೆ ಇದೇ ಪರಿಸ್ಥಿತಿ ನನಗೂ ಬಂದರೆ ಆಶ್ಚರ್ಯವಿಲ್ಲ.” ಎಂದು ನೇರವಾಗಿ ಹೇಳಿದ್ದ. ದುರಂತವೆಂದರೆ ಅದೇ ಅವನ ಕೊನೆಯ ಭಾಷಣವಾಯಿತು ಕೂಡಾ.

  ಚಾದ್ ಜೊತೆಗಿನ ಸಂಘರ್ಷ:  ಲಿಬಿಯಾ ಮತ್ತದರ ನೆರೆ ರಾಷ್ಟ್ರವಾದ ಚಾದ್ ಜೊತೆಗಿನ ಸಂಘರ್ಷ 1965 ರಲ್ಲಿ ಶುರುವಾಗುತ್ತದೆ. 1965 ರಲ್ಲಿ ಚಾದ್‍ನಲ್ಲಿ ಅಲ್ಲಿಯ ಚಕ್ರವರ್ತಿಯ ವಿರುದ್ಧ ಅಲ್ಲಿನ ಜನ ದಂಗೆ ಎದ್ದಾಗ ಲಿಬಿಯಾದ ಮೊದಲ ಅರಸ ಇದ್ರಿಸ್ ಬಂಡುಕೊರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವದರ ಮೂಲಕ ಅವರ ಸಹಾಯಕ್ಕೆ ನಿಲ್ಲುತ್ತಾನೆ. ಆದರೆ ಚಕ್ರವರ್ತಿಯ ಸಹಾಯಕ್ಕೆ ಫ್ರಾನ್ಸ್ ನಿಲ್ಲುತ್ತದೆ. ಈ ತಿಕ್ಕಾಟ ನಾಲ್ಕು ವರ್ಷಗಳವೆರೆಗೆ ನಡೆಯುತ್ತಲೇ ಇರುತ್ತದೆ. ಇತ್ತ ಲಿಬಿಯಾದಲ್ಲಿ 1969 ರಲ್ಲಿ ಇದ್ರಿಸ್‍ನನ್ನು ಕಿತ್ತೆಸೆದು ಮೌಮರ್ ಗಡಾಫಿ ಅಧಿಕಾರಕ್ಕೆ ಬರುತ್ತಾನೆ. ಬಂದವನೇ ಚಾದ್‍ನ ಉತ್ತರ ಭಾಗವನ್ನು ರಷಿಯಾದ ಸಹಾಯದಿಂದ ಆಕ್ರಮಿಸಿಕೊಂಡು ಅಲ್ಲಿ ಲಿಬಿಯಾದ ಮಿಲ್ಟ್ರಿ ಬೇಸ್‍ನ್ನು ಸ್ಥಾಪಿಸುತ್ತಾನೆ. ಇದಲ್ಲದೆ ಅಲ್ಲಿನ ಬಂಡುಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾ ಹೋಗುತ್ತಾನೆ. ಇದೇ ಸಂದರ್ಭದಲ್ಲಿ ಅಲ್ಲಿ ಫ್ರಾನ್ಸ್‍ನ ಸಹಾಯದಿಂದ ಹೊಸ ಚಕ್ರವರ್ತಿ ಅಧಿಕಾರಕ್ಕೆ ಬರುತ್ತಾನೆ. ಆಗ ಸಿಟ್ಟಿಗೆದ್ದ ಗಡಾಫಿ 1979 ರಲ್ಲಿ ಚಾದ್‍ನ ಉತ್ತರ ಭಾಗದ ಒಂದು ಪಟ್ಟಣವನ್ನು ಸೆರೆಹಿಡಿಯುತ್ತಾನೆ. ಇದನ್ನು ಸಹಿಸಿಕೊಳ್ಳದ ಫ್ರಾನ್ಸ್ ಲಿಬಿಯಾವನ್ನು 1983 ರಲ್ಲಿ ಹೀನಾಯವಾಗಿ ಸೋಲಿಸುತ್ತದೆ. ಇಲ್ಲಿಂದಾಚೆ ಗಡಾಫಿಗೆ ಫ್ರಾನ್ಸ್, ಚಾದ್ ಮೂಲಕ ಲಿಬಿಯಾದ ಒಳಗೆ ನುಗ್ಗಬಹುದು ಎಂಬ ಭಯ ಕಾಡತೊಡಗುತ್ತದೆ. ಹಾಗಾಗಿ ಆತ ರಶಿಯಾದ ಜೊತೆ ತನ್ನ ಸಂಬಂಧವನ್ನು ಭದ್ರಗೊಳಿಸಿಕೊಂಡು ಚಾದ್‍ನಲ್ಲಿದ್ದ ಲಿಬಿಯಾದ ಮಿಲ್ಟ್ರಿ ಬೇಸ್‍ಗೆ ಫ್ರೆಂಚರನ್ನು ಎಚ್ಚರದಿಂದ ಕಾಯಲು ಹೇಳುತ್ತಾನೆ ಮತ್ತು ಅವರು ಲಿಬಿಯಾದ ಒಳಗೆ ನುಗ್ಗದಂತೆ ಫ್ರೆಂಚರಿಗೆ ಆಗಾಗ ಬಿಸಿ ಮುಟ್ಟಿಸುತ್ತಲೇ ಇರುತ್ತಾನೆ. ಈ ಸಂಘರ್ಷ ಅವನಿರುವವರೆಗೂ ನಡೆಯುತ್ತಲೇ ಇತ್ತು. ಏನೇ ಆಗಲಿ ಈ ಸಂಘರ್ಷವನ್ನು ದೊರೆ ಇದ್ರೀಸ್ ಶುರುಮಾಡಿದ್ದರೂ ಇವನು ಅದನ್ನು ಮುಂದುವರಿಸಬಾರದಿತ್ತು. ಇದು ಅನವಶ್ಯಕವಾಗಿತ್ತು ಮತ್ತು ಇದಕ್ಕಾಗಿ ಸಾಕಷ್ಟು ಹಣ ಮತ್ತು ಸಮಯವನ್ನು ಹಾಳು ಮಾಡಿದನೆಂದು ಇಲ್ಲಿನವರು ಹೇಳುತ್ತಾರೆ.   
  ಈ ತಪ್ಪುಗಳಲ್ಲಿ ಕೆಲವು ತಪ್ಪುಗಳು ಜಗತ್ತಿನ ಕಣ್ಣಿನಲ್ಲಿ ತಪ್ಪಾಗಿ ಕಂಡರೆ ಇನ್ನು ಕೆಲವು ಲಿಬಿಯನ್‍ರ ದೃಷ್ಟಿಯಲ್ಲಿ ತಪ್ಪುಗಳಾಗಿ ಕಾಣಿಸಿದವು. ಈ ಹಿನ್ನೆಲೆಯಲ್ಲಿ ಗಡಾಫಿ ನನಗೆ ಶೇಕ್ಷಪೀಯರ್‍ನ ಒಬ್ಬ ದುರಂತನಾಯಕನಂತೆ ಕಾಣಿಸಿದರೆ ಅಚ್ಚರಿಯೆನಿಸುವದಿಲ್ಲ.


   -ಉದಯ್ ಇಟಗಿ