Demo image Demo image Demo image Demo image Demo image Demo image Demo image Demo image

ಇಲ್ಲಿ ಎಲ್ಲವೂ "ಒಬಾಮ"ಮಯವಾಗುತ್ತಿದೆ

 • ಮಂಗಳವಾರ, ಜನವರಿ 27, 2009
 • ಬಿಸಿಲ ಹನಿ
 • ಅಮೆರಿಕದ ಅಧ್ಯಕ್ಷ ಬರಾಕ್ ಹುಸೇನ್ ಒಬಾಮನ ಬಗ್ಗೆ ಕಳೆದೆರಡು ತಿಂಗಳಿಂದ ಬರೆಯದ ಪತ್ರಿಕೆಗಳಿಲ್ಲ, ಸುದ್ದಿ ಬಿತ್ತರಿಸದ ಟೀವೀ ಚಾನಲ್‍ಗಳಿಲ್ಲ. ಅವನೊಬ್ಬ ಕರಿಯನಾಗಿದ್ದುಕೊಂಡು ಏನೆಲ್ಲ ಸಾಧನೆಯನ್ನು ಮಾಡಿದ! ಹಿಂದೊಮ್ಮೆ ಕರಿಯರನ್ನು ಅಸ್ಪೃಶ್ಯರಂತೆ ನಡೆಸಿಕೊಡ ದೇಶಕ್ಕೆ ಈಗ ಅವನೇ ಅಧಿಪತಿ! ಹಿಂದೆ ಅಮೆರಿಕದ ಹೋಟೆಲ್‍ಗಳಲ್ಲಿ ಪ್ರವೇಶವೇ ನಿಷಿದ್ಧವಾಗಿದ್ದ ಕರಿಯರಿಗೆ ಈಗ ನೇರವಾಗಿ ವೈಟ್ ಹೌಸ್ ಒಳಗಡೆ ಪ್ರವೇಶವೆಂದರೆ ಸುಮ್ಮನೇನಾ? ಎಂದೆಲ್ಲಾ ಒಬಾಮ ಹೀಗೆ, ಒಬಾಮ ಹಾಗೆ ಎಂದು ಕೊಡಾಡಿದ್ದೇ ಕೊಂಡಾಡಿದ್ದು! ಸಾಲದೆಂಬಂತೆ ಒಬಾಮ ನಮ್ಮ ಮನೆಯ ಹುಡುಗನಾದಂತೆ ಅವನ ಬಗ್ಗೆ ಕನ್ನಡದ ಪತ್ರಿಕೆಗಳು ಸಹ ಪುಟಗಟ್ಟಲೆ ಬರೆದು ಹೆಮ್ಮೆಯಿಂದ ಬೀಗಿದವು. ಕನ್ನಡದ ಲೇಖಕರು ಈತನ ಬಗ್ಗೆ ಬರೆಯದೆ ಹೋದರೆ ತಾವೆಲ್ಲಿ ಲೇಖಕರ ಪಟ್ಟಿಯಿಂದ ಕೈ ಬಿಟ್ಟು ಹೋಗುತ್ತೇವೆ ಎಂಬ ಅನುಮಾನದಿಂದ ನಾ ಮುಂದು ತಾ ಮುಂದೆಂದು ಪಟ್ಟು ಹಿಡಿದು ದಿನಕ್ಕೊಬ್ಬೊಬ್ಬರಂತೆ ಪತ್ರಿಕೆಗಳಲ್ಲಿ, ಮ್ಯಾಗಜೀನಗಳಲ್ಲಿ ಬರೆದು ಧನ್ಯರಾದರು. ಈಗಲೂ ಬರೆಯುತ್ತಿದ್ದಾರೆ. ಅದ್ಯಾವ ಮಟ್ಟ ತಲುಪಿದ್ದಾರೆಂದರೆ ಅದೇನನ್ನೋ ಬರೆದು ಅದ್ಹೇಗೊ ಈ ಒಬಾಮನಿಗೆ ಲಿಂಕ್ ಮಾಡಿಡುತ್ತಿದ್ದಾರೆ. ಹೀಗಾಗಿ ಎಲ್ಲರ ಬಾಯಲ್ಲೂ ಒಬಾಮ! ಒಬಾಮ!! ಒಬಾಮ!!! ಇಲ್ಲಿ ಎಲ್ಲವೂ ಒಬಾಮಮಯವಾಗಿದೆ.

  ನಾನು ಎಲ್ಲವನ್ನೂ ನಿರ್ಲಿಪ್ತವಾಗಿ ಗಮನಿಸುತ್ತಾ, ಒಳೊಗೊಳಗೆ ನಗುತ್ತಾ ಈ ಜನಕ್ಕೆ ಒಬಾಮನ ಬಗ್ಗೆ ಹುಚ್ಚು ಹಿಡಿದಿದೆ ಎಂದುಕೊಂಡೆ. ಒಬಾಮ ಪ್ರಮಾಣ ವಚನ ಸ್ವೀಕರಿಸಿದ ಮಾರನೆ ದಿನ ನನ್ನ ಇಂಡಿಯನ್ ಅಧ್ಯಾಪಕ ಮಿತ್ರರೊಬ್ಬರು ಲಿಬಿಯಾದಿಂದ ದೂರದ ಹೈದ್ರಾಬಾದಿನಲ್ಲಿ ಮೂರನೆ ಕಾಸಿನಲ್ಲಿ ಓದುತ್ತಿರುವ ತಮ್ಮ ಮಗನೊಂದಿಗೆ ಫೋನಿನಲ್ಲಿ ಮಾತನಾಡುತ್ತಾ "ನಿನ್ನೆ ಟೀವೀಯಲ್ಲಿ ಒಬಾಮನ ಓಥ್ ಸೆರ್‍ಮನಿ‍ ನೋಡಿದ್ಯಾ? ಎಷ್ಟು ಚನ್ನಾಗಿತ್ತು ಅಲ್ವಾ? ಅವನ ಹಾಗೆ ನೀನು ದೊಡ್ದ ಸಾಧನೆ ಮಾಡಬೇಕು. ಗೊತ್ತಾಯ್ತಾ?" ಎಂದೆಲ್ಲಾ ಹಿತೋಪದೇಶ ನೀಡಿದರು. ಅವರು ಮಾತನಾಡಿ ಮುಗಿಸಿದ ಮೇಲೆ ಪಕ್ಕದಲ್ಲಿಯೆ ಇದ್ದ ನಾನು "ನೀವು ನಿಮ್ಮ ಮಗನಿಗೆ ಅಮೆರಿಕದ ಒಬಾಮನನ್ನೇ ಏಕೆ ಉದಾಹರಣೆಯಾಗಿ ಕೊಟ್ಟಿರಿ? ನಮ್ಮದೆ ದೇಶದ ಗಾಂಧಿಯನ್ನೊ, ವಿವೆಕಾನಂದರನ್ನೊ, ಅಂಬೇಡ್ಕರನ್ನೊ ಏಕೆ ಪ್ರಸ್ತುತ ಪಡಿಸಲಿಲ್ಲ? ಅವರೆಲ್ಲಾ ಹೋಗಲಿ, ಕೊನೆಪಕ್ಷ ನೀವು ಸದಾ ಬಡತನದ ನೆರಳಲ್ಲಿ ಬೆಳೆದು, ಏನೇನೆಲ್ಲಾ ಅನುಭವಿಸಿ, ಕಷ್ಟಪಟ್ಟು ಓದಿ ಸಂದರ್ಶನವೊಂದರಲ್ಲಿ ಪಾಸಾಗಿ ಇದೀಗ ಲಿಬಿಯಾದಲ್ಲಿ ದೊಡ್ದಮೊತ್ತದ ಸಂಬಳಕ್ಕೆ ಕೆಲಸ ಮಾಡುತ್ತಿರುವಿರೆಲ್ಲ, ನಿಮ್ಮದೂ ಒಂದು ಸಾಧನೆಯಲ್ಲವೆ? ನೀವೇಕೆ ನಿಮ್ಮ ಸಾಧನೆಯ ಬಗ್ಗೆ ನಿಮ್ಮ ಮಗನಿಗೆ ತಿಳಿಯಪಡಿಸುವದಿಲ್ಲ? ದೂರದವರೇ ಏಕೆ ಆಗಬೇಕು?" ಎಂದು ಕೇಳಿದೆ. ಅದಕ್ಕವರು ಕಕ್ಕಾಬಿಕ್ಕಿಯಾದಂತೆ ಕಂಡರು. ಆನಂತರ ಸುಧಾರಿಸಿಕೊಂಡು ನಕ್ಕು "ಹಿತ್ತಿಲ ಗಿಡ ಮದ್ದಲ್ಲ" ಎಂದೇನೋ ಹೇಳಿ ನನ್ನ ವಾದದ ಹಿಡಿತಕ್ಕೆ ಸಿಗುವ ಮುನ್ನವೇ ನಯವಾಗಿ ಜಾರಿಕೊಂಡರು.
  ನಾನು ಮತ್ತೊಮ್ಮೆ ನಕ್ಕು ಸುಮ್ಮನಾದೆ. ನಮ್ಮ ಜನವೇ ಇಷ್ಟು. ದೂರದ ಜನಗಳ, ವಸ್ತುಗಳ ಬಗ್ಗೆ ಹುಚ್ಚು ಹಿಡಿಸಿಕೊಳ್ಳುತ್ತಾರೆ. ಅವರ ಬಗ್ಗೆ ಮಾತನಾಡುತ್ತಲೆ ಪಕ್ಕದವರ ಸಾಧನೆಗಳನ್ನು ಮರೆತು ಬಿಡುತ್ತಾರೆ. ಅವರನ್ನು ಗುರುತಿಸುವ, ಅವರ ಬಗ್ಗೆ ಒಳ್ಳೆಯ ಮಾತನಾಡುವ ಕಿಂಚಿತ್ತು ಕಾಳಜಿಯನ್ನು ತೋರಿಸುವದಿಲ್ಲ ಅಂತ ಅಂದುಕೊಂಡೆ. ನಾನು ಬಹಳಷ್ಟು ಸಾರಿ ನನ್ನನ್ನು ನಾನೇ ಕೇಳಿಕೊಂಡಿದ್ದೇನೆ. ನಾವೇಕೆ ಹೀಗೆ? ದೂರದವರಿಂದಲೆ ಏಕೆ ಬದುಕಿನ ಪಾಠಗಳನ್ನು ಕಲಿಯುತ್ತೇವೆ? ಹತ್ತಿರದವರಿಂದ ಏಕೆ ಕಲಿಯುವದಿಲ್ಲ? ಅವರನ್ನೇ ರೋಲ್ ಮಾಡೆಲ್‍ಗಳಾಗಿ ಏಕೆ ಇಟ್ಟುಕೊಳ್ಳುವದಿಲ್ಲ? ಉತ್ತರ ಹುಡುಕುವ ಮುನ್ನ ಮತ್ತೆ ನಾವು ಯೋಚಿಸುವ ರೀತಿ ನೆನಪಾಗುತ್ತದೆ.

  ನಮಗೆ ಅಮೆರಿಕದ ಅಧ್ಯಕ್ಷ ಗೊತ್ತಿರುವಷ್ಟು ನಮ್ಮದೇ ದೇಶದ ರಾಷ್ಟ್ರಪತಿಗಳಾಗಲಿ,ಪ್ರಧಾನಮಂತ್ರಿಯಾಗಲಿ ಗೊತ್ತಿರುವದಿಲ್ಲ. ಅಥವಾ ಅಮೆರಿಕಾ ದೇಶದ ಬಗ್ಗೆ ತಿಳಿದಿರುವಷ್ಟು ನಮ್ಮದೇ ದೇಶದ ಬಗ್ಗೆ ತಿಳಿದಿರುವದಿಲ್ಲ. ದೇಶವನ್ನು ಬಿಡಿ, ನಮ್ಮ ನಾಡಿನ ಬಗ್ಗೆ ನಮಗೆ ಬಹಳಷ್ಟು ಸಂಗತಿಗಳು ತಿಳಿದೇ ಇರುವದಿಲ್ಲ. ಅರವಿಂದ ಅಡಿಗರ "ಬಿಳಿ ಹುಲಿ" ಕೃತಿಗೆ ಬೂಕರ್ ಪ್ರಶಸ್ತಿ ಬಂತು ಎಂದು ಸುಲಭವಾಗಿ ಹೇಳುವ ನಾವು ಶ್ರೀನಿವಾಸ ವೈದ್ಯರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸಿಕ್ಕಿತು ಎಂದು ಕೇಳಿದರೆ ಬೆಬ್ಬೆಬ್ಬೆ ಎಂದು ಬಾಯಿಬಿಡುತ್ತೇವೆ. ಶಶಿ ದೇಶಪಾಂಡೆ, ಅನಿತಾ ದೇಸಾಯಿಯವರ ಬಗ್ಗೆ ತಿಳಿದಿರುವಷ್ಟು ನಮ್ಮ ಲೇಖಕಿಯರ ಬಗ್ಗೆ ಏನೇನೂ ತಿಳಿದಿರುವದಿಲ್ಲ. ಫಲ್ಗುಣಿ ಪಾಟಕ್, ಸೊನು ನಿಗಮ್‍ರ ಪ್ರತಿಭೆಯನ್ನು ಗುರಿತಿಸಿದಂತೆ ನಮ್ಮವರೇ ಆದ ಅವರಿಗಿಂತ ಚನ್ನಾಗಿ ಹಾಡಿರುವ ರಾಜೇಶ್, ನಂದಿತಾ, ಪಲ್ಲವಿಯವರ ಬಗ್ಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡುವದಿಲ್ಲ. ಯಾವದೋ ಅಂತರಾಷ್ಟ್ರಿಯ ಮಟ್ಟದಲ್ಲಿ ಪ್ರಶಸ್ತಿ ಪಡೆದ "ಸ್ಲಂ ಡಾಗ್" ಚಿತ್ರದ ಬಗ್ಗೆ ಬರೆದು ಪ್ರಚಾರ ಪಡೆಸಿದಷ್ಟು ಕನ್ನಡದಲ್ಲಿ ಬಂದ ಒಳ್ಳೆಯ ಚಿತ್ರಗಳಾದ ಗುಲಾಬಿ, ಮಾತಾಡ್ ಮಾತಾಡ್ ಮಲ್ಲಿಗೆ, ಮೊಗ್ಗಿನ ಮನಸ್ಸು ಚಿತ್ರಗಳ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಬರೆದು ಪ್ರಚಾರಪಡಿಸುವ ಉಸಾಬರಿಗೆ ಹೋಗುವದಿಲ್ಲ. ಹಿಂದೊಮ್ಮೆ ಅಮಿತಾಬಚ್ಚನ್ "ಬ್ಲ್ಯಾಕ್" ಚಿತ್ರದಲ್ಲಿನ ಅಬಿನಯಕ್ಕಾಗಿ ಶ್ರೇಷ್ಟ ನಟನೆಂದು ರಾಷ್ಟ್ರ ಪ್ರಶಸ್ತಿ ಪಡೆದಾಗ ಹೆಮ್ಮೆಯಿಂದ ಬೀಗಿದ್ದ ನನ್ನ ಸ್ನೇಹಿತನೊಬ್ಬ ಅದೇ ರಾಷ್ಟ್ರ ಪ್ರಶಸ್ತಿ ದತ್ತಣ್ಣನಿಗೆ (ಮುನ್ನುಡಿ ಚಿತ್ರಕ್ಕಾಗಿ) ಹಾಗೂ ಅವಿನಾಶಗೆ (ಮತದಾನ ಚಿತ್ರಕ್ಕಾಗಿ) ಬಂದಾಗ ಅವನು ಏನೂ ಹೇಳದಿದ್ದನ್ನು ಕೇಳಿ ನನಗೆ ಅಚ್ಚರಿಯಾಗಿತ್ತು. ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡುವಾಗ ದೂರದ ನರ್ಮದಾ ಬಚಾವ್ ಅಂದೋಲನದ ನಾಯಕಿ ಮೇಧಾ ಪಾಟ್ಕರ್ ನೆನಪಾದಂತೆ ಸಾಲು ಮರಗಳನ್ನು ನೆಟ್ಟು ನಮಗೆಲ್ಲಾ ನೆರಳನ್ನು ನೀಡಿದ ಸಾಲು ಮರದ ತಿಮ್ಮಕ್ಕ ನೆನಪಾಗುವದಿಲ್ಲ. ನಮಗೆ ಅಂಬೇಡ್ಕರ್‍ವರ ಹೋರಾಟದ ಕತೆ ಇಷ್ಟವಾದಂತೆ ನಮ್ಮೂರಿನ ಮುಖಂಡರೊಬ್ಬರು ದಲಿತರಿಗೆ ದೇವಸ್ಥಾನಗಳಲ್ಲಿ ಪ್ರವೇಶ ಕಲ್ಪಿಸಲು ನಡೆಸಿದ ಹೋರಾಟದ ಕತೆ ಇಷ್ಟವಾಗುವದಿಲ್ಲ. ಶಿಕ್ಷಕರ ದಿನಾಚಾರಣೆಯಂದು ಅಷ್ಟಾಗಿ ಗೊತ್ತಿರದ, ನೋಡಿರದ ರಾಧಾಕೃಷ್ಣರನ್ನು ನೆನೆಯುತ್ತಾ ಅವರನ್ನು ನಮ್ಮ ಶಿಕ್ಷಕರಲ್ಲಿ ಕಾಣುವ ಹುನ್ನಾರು ನಡೆಸುತ್ತೇವೆ. ಆದರೆ ಮೊದಲ ಅಕ್ಷರಗಳನ್ನು ಹೇಳಿಕೊಟ್ಟ, ತೊದಲ ನುಡಿಗಳನ್ನು ಕಲಿಸಿದ ಅಮ್ಮನನ್ನಾಗಲಿ, ನೀತಿಪಾಠಗಳನ್ನು ಹೇಳಿಕೊಟ್ಟ ಅಜ್ಜಿಯರನ್ನಾಗಲಿ ನಾವು ಗುರುಗಳೆಂದು ಭಾವಿಸಿ ಅಭಿನಂದಿಸುವದಿಲ್ಲ. ಎಲ್ಲೋ ದೂರದಲ್ಲಿ ಯಾವುದೋ ಹೆಣ್ಣುಮಗಳೊಬ್ಬಳು ನಿಷ್ಪ್ರಯೋಜಕ ಗಂಡನನ್ನು ಕಟ್ಟಿಕೊಂಡು ಏನೆನೆಲ್ಲಾ ಹಿಂಸೆ ಅನುಭವಿಸಿ ಅವನೊಂದಿಗೆ ಬಾಳಲಾರದೆ ಡೈವೋರ್ಸ್ ಕೊಟ್ಟು ಹೊರಬಂದು ಕಷ್ಟಪಟ್ಟು ಓದಿ ಕೆಲಸ ಹಿಡಿದು ಮಕ್ಕಳಿಗೊಂದು ನೆಲೆ ಕಾಣಿಸಿದವಳ ನೋವಿನ ಕತೆ ನಮ್ಮನ್ನು ತಾಕುವಂತೆ, ಅಂಥದೇ ನಿಷ್ಪ್ರಯೋಜಕ ಗಂಡನನ್ನು ಕಟ್ಟಿಕೊಂಡು ಅವನೊಂದಿಗೆ ಏಗಿ ಏನೆನೆಲ್ಲಾ ಅನುಭವಿಸುತ್ತಾ ನಮಗೊಂದು ಸುಭದ್ರ ನೆಲೆ ಕಲ್ಪಿಸಿದ ನಮ್ಮಮ್ಮನ ನೋವಿನ ಕತೆ ನಮ್ಮನ್ನು ಅಷ್ಟಾಗಿ ತಾಕುವದಿಲ್ಲ. ಒಂದೇ, ಎರಡೇ ಇಂಥ ನೂರಾರು ಸಂಗತಿಗಳು ನಮ್ಮ ಪಕ್ಕದಲ್ಲಿಯೇ ನಡೆದಿರುತ್ತವೆ. ನಾವು ಕಣ್ಣುಮುಚ್ಚಿಕೊಂಡು ಕುಳಿತಿರುತ್ತೇವೆ. ಕಣ್ಣು ಬಿಟ್ಟಾಗ ಪಕ್ಕದವರು ಎದ್ದು ಹೋಗಿರುತ್ತಾರೆ. ನಾವು ಮತ್ತೆ ರೋಲ್ ಮಾಡೆಲ್‍ಗಳಿಗಾಗಿ ಅರಸಿಕೊಂಡು ಹೋಗುವದು ದೂರದವರನ್ನೇ!
  ಹಾಗೆ ನೋಡಿದರೆ ನಮ್ಮ ನಾಡಿನವರೆ ಏನೆಲ್ಲ ಅಚ್ಚರಿಗಳನ್ನು ಬಿಟ್ಟು ಹೋಗಿಲ್ಲ? ಎಷ್ಟೆಲ್ಲ ಕೊಡುಗೆಗಳನ್ನು ಕೊಟ್ಟಿಲ್ಲ? ಸರಿಯಾಗಿ ನೋಡುವ ಕಣ್ಣುಗಳಿದ್ದರೆ, ಸ್ಪಂದಿಸುವ ಕುತೂಹಲದ ಮನಸ್ಸಿದ್ದರೆ, ತಿಳಿಯುವ ತಾಳ್ಮೆಯಿದ್ದರೆ ನಮ್ಮ ನಾಡಿನವರ ಅಗಾಧ ಕೊಡುಗೆಗಳ ಬಗ್ಗೆ ಹೆಮ್ಮೆಯೆನಿಸುತ್ತದೆ. ಶೇಕ್ಷಪೀಯರನ "ಕಾಮಿಡಿ ಆಫ್ ಎರರರ್ಸ್" ಒಂದು ಅದ್ಭುತ ಕಾಮಿಡಿಯೆಂದು ಹೊಗುಳುವ ಮುನ್ನ ಶೇಕ್ಷಪೀಯರನಿಗಿಂತ ಎಷ್ಟೋ ವರ್ಷಗಳ ಹಿಂದೆಯೇ ವಿಜಯನಗರ ಅರಸರ ಆಸ್ಥಾನದಲ್ಲಿದ್ದ ಸೂರಣ್ಣ ರಾಮರಾಯನ "ಕಲಾ ಪೂರ್ಣೋದಯಂ" ಎನ್ನುವ ಕನ್ನಡದ ಕೃತಿಯೊಂದು ಶೇಕ್ಷಪೀಯರನ ನಾಟಕಕ್ಕೆ ಮೂಲಾಧಾರವಾಗಿತ್ತೆಂದು ಹಾಗೂ ಅದು ಅವನಿಗೆ ಸ್ಪೂರ್ತಿಯನ್ನು ನೀಡಿತ್ತೆಂದು ತಿಳಿದು ಪ್ರಚಾರಪಡಿಸಬೇಕಿದೆ. ದೂರವಾಣಿಯನ್ನು ಗ್ರಹಾಂಬೆಲ್ ಕಂಡು ಹಿಡಿದನೆಂದು ನಮಗೆಲ್ಲಾ ತಿಳಿದಿದೆಯಷ್ಟೆ? ಆದರೆ ದೂರವಾಣಿಯನ್ನು ಪರೋಕ್ಷವಾಗಿ ಬಳಸುವ ಕಲೆ ಗ್ರಹಾಂಬೆಲ್‍ಗಿಂತ ಮೊದಲೆ ಕರ್ನಾಟಕದ ಬಿಜಾಪೂರ ಸುಲ್ತಾನರ ಆಸ್ಥಾನದಲ್ಲಿದ್ದ ವಾಸ್ತುಶಿಲ್ಪಿಗಳಿಗೆ ತಿಳಿದಿತ್ತೆಂದು ಕೆಲವು ಆಧಾರಗಳು ಹೇಳುತ್ತವೆ. ಇಲ್ಲವಾದರೆ ಗೋಳಗುಮ್ಮಟದಲ್ಲಿ ಒಂದು ಗೋಡೆಯಲ್ಲಿ ಪಿಸುಗುಟ್ಟಿದರೆ ಅದ್ಹೇಗೆ ಇನ್ನೊಂದು ಗೋಡೆಯಲ್ಲಿ ಕೇಳಿಸುತ್ತದೆ? ಗೆಲಿಲಿಯೋಗಿಂತ ಮೊದಲೇ ದೂರದರ್ಶಕ(ಟೆಲಿಸ್ಕೋಪ್)ದ ಬಳಕೆ ಹೊಯ್ಸಳರ ಕಾಲದ ಕನ್ನಡಿಗರಿಗೆ ತಿಳಿದಿತ್ತೆಂದು ಬಲವಾಗಿ ಹೇಳಲು ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಹಳೆಬೀಡಿನ ಸುಪ್ರಸಿದ್ಧ ಹೊಯ್ಸಳೇಶ್ವರ ದೇವಸ್ಥಾನದ ಹೊರಗೋಡೆಯ ಮೇಲೆ ಕೆತ್ತಿರುವ ವ್ಯಕ್ತಿಯೊಬ್ಬ ಕೊಳವೆಯಾಕಾರದ ವಸ್ತುವೊಂದನ್ನು ಕೈಯಲ್ಲಿ ಹಿಡಿದು ಆಕಾಶದತ್ತ ನೋಡುತ್ತಿರುವ ಚಿತ್ರವೊಂದು ಸಾಕ್ಷಿಯಾಗಿದೆ. ನಾನೊಬ್ಬ ಇಂಗ್ಲೀಷ ಅಧ್ಯಾಪಕನಾಗಿ ಡಿ.ಹೆಚ್.ಲಾರೆನ್ಸನ "ಸ್ನೇಕ್" ಪದ್ಯವನ್ನು ಪಾಠ ಮಾಡುವಾಗಲೆಲ್ಲಾ ಇಂಗ್ಲೀಷ ಸಾಹಿತ್ಯದಲ್ಲಿ ಹಾವನ್ನು ಕಾಮದ ಸಂಕೇತವಾಗಿ ಧಾರಾಳವಾಗಿ ಬಳಸುತ್ತಾರೆಂದು ಹಾಗೂ "ಹಾವು-ಕಾಮದ" ಪರಿಕಲ್ಪನೆಯನ್ನು ಮೊಟ್ಟಮೊದಲಿಗೆ ಪ್ರತಿಪಾದಿಸಿದವನು ಸಿಗ್ಮಂಡ್ ಫ್ರಾಯ್ಡನೆಂದು ಹೇಳುತ್ತಿದ್ದೆ. ಆದರೆ ಮೊನ್ನೆಯಷ್ಟೆ ಸುನಾಥವರ ಬ್ಲಾಗಲ್ಲಿ ಬಸವಣ್ಣನವರ ವಚನಗಳ ಮೇಲೆ ಪ್ರಕಟವಾದ ಲೇಖನವೊಂದರಲ್ಲಿ ಸಿಗ್ಮಂಡ್ ಫ್ರಾಯ್ಡನಿಗಿಂತ ಮುಂಚೆ ಹನ್ನೆರಡನೆ ಶತಮಾನದ ಬಸವಣ್ಣನವರು ತಮ್ಮ "ಹುತ್ತವ ಬಡಿದರೆ ಹಾವು ಸಾಯಬಲ್ಲದೆ?" ವಚನವೊಂದರಲ್ಲಿ ಹಾವನ್ನು ಕಾಮದ ಸಂಕೇತವಾಗಿ ಅದಾಗಲೆ ಬಳಸಿದ್ದರೆಂದು ಗೊತ್ತಾಯಿತು. ಅರೆರೆ ಈ ವಚನವನ್ನು ನಾನು ಎಷ್ಟು ಸಾರಿ ಕೇಳಿರಲಿಲ್ಲ, ಓದಿರಲಿಲ್ಲ? ಆದರೂ ಈ ವಿಚಾರ ನನಗೇಕೆ ಹೊಳೆಯಲಿಲ್ಲ? ನಾನೇಕೆ ಸಿಗ್ಮಂಡ್ ಫ್ರಾಯ್ಡ್ ಬಗ್ಗೆ ಪೂರ್ವಗ್ರಹನಾದೆ? ಎಂದು ನನ್ನ ಅಜ್ಞಾನಕ್ಕೆ ನಾನೇ ಮರಗಿದ್ದಿದೆ. ಇದೀಗ ಪಾಠ ಮಾಡುವಾಗಲೆಲ್ಲಾ "ಹಾವು-ಕಾಮ" ಪರಿಕಲ್ಪನೆಯನ್ನು ಕೊಟ್ಟವರು ಸಿಗ್ಮಂಡ್ ಫ್ರಾಯ್ಡನಲ್ಲ, ಬಸವಣ್ಣನೆಂದು ಹೆಮ್ಮೆಯಿಂದ ಹೇಳುತ್ತೇನೆ.
  ಹಿಂದೆಲ್ಲ ನಾವು ಹಿರಿಯರಿಂದ, ಜೊತೆಯವರಿಂದ, ತಿಳಿದವರ ಸಂಪರ್ಕದಿಂದ, ಬದುಕಿನ ಅನುಭವಗಳಿಂದ ಪಾಠ ಕಲಿಯುತ್ತಿದ್ದೆವು. ವಿಚಿತ್ರವೆಂದರೆ ಇಂದು ಹೀಗೆ ತಿಳಿಹೇಳಲೆಂದೇ ಕೌನ್ಸಿಲಿಂಗ್ ಸೆಂಟರ್‍ಗಳು ಹುಟ್ಟಿಕೊಂಡು ಭಾರಿ ದುಡ್ಡನ್ನು ಗಳಿಸುತ್ತಿವೆ. ಇಂದಿನವರು ಮನೆಯವರ ಮಾತುಗಳಿಗೆ ಕಿವಿಗೊಡದೆ ಹೊರಗಿರುವ ಕೌನ್ಸಿಲಿಂಗ್ ಸೆಂಟರ್‍‍ಗಳಿಗೆ ಹೊಗಿ ದುಡ್ಡನ್ನು ಕೊಟ್ಟು ಮನೆಯವರು ಕೊಡುವ ಅದೇ ಉಪದೇಶವನ್ನು ಕೊಂಡುಕೊಂದು ಬರುತ್ತಿದ್ದಾರೆ. ಸದಾ ಗಡಿಬಿಡಿಯಲ್ಲಿಯೆ ಹೋಗಿ ಕಾಲೇಜು ಸೇರುವ ನನ್ನಾಕೆ "ಟೈಮೇ ಸಾಕಾಗೊಲ್ಲ. ಟೈಮ್ ಹೇಗೆ ಮ್ಯಾನೇಜ್ ಮಾಡೋದಂತ ಟೈಮ್ ಮ್ಯಾನೇಜ್‍ಮೆಂಟ್ ಕ್ಲಾಸಿಗೆ ಹೋಗಿ ಕಲಿತುಕೊಂಡು ಬರುತ್ತೇನೆ" ಎಂದು ಹೇಳುತ್ತಿದ್ದ ಅವಳ ಮಾತು ಕೇಳಿ ರೋಷಿ ಹೋಗಿ "ಅಲ್ಲಿ ಹೋಗಿ ಕಲಿಯೋದೇನಿದೆ? ಮೊದಲು ನಮ್ಮ ಮನೆಯ ಕೆಲಸದ ಹುಡುಗಿಯನ್ನು ನೋಡಿ ಕಲಿ. ಅವಳು ಬೆಳಿಗ್ಗೆ ಎದ್ದು ಆರು ಗಂಟೆಗೆ ಬಂದು ನಮ್ಮ ಮನೆಯ ಕೆಲಸ ಮುಗಿಸಿ, ತಮ್ಮ ಮನೆಯವರಿಗೂ ಕೆಲಸದಲ್ಲಿ ಸಹಾಯ ಮಾಡಿ ಆರು ಕಿಲೋಮೀಟರ ನಡೆದುಕೊಂಡುಹೋಗಿ ಫ್ಯಾಕ್ಟರಿಗೆ ಸರಿಯಾದ ಸಮಯಕ್ಕೆ ಸೇರುತ್ತಾಳಲ್ಲ ಅದ್ಹೇಗೆ ಎಂದು ಅವಳನ್ನು ಕೇಳಿ ತಿಳಿ" ಎಂದು ದಬಾಯಿಸಿದ್ದೆ. ಹೀಗೆ ಎಲ್ಲೆಲ್ಲೋ ಹೋಗಿ ಯಾರ್ಯಾರಿಂದಲೋ ಕಲಿಯುವ ಬದಲು ಹತ್ತಿರದವರಿಂದಲೆ ಕಲಿತರೆ ಆಗುವದಿಲ್ಲವೆ? ಅವರನ್ನೇ ರೋಲ್ ಮಾಡೆಲ್‍ಗಳಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲವೆ? ಸದಾ ಹಿತ್ತಿಲ ಗಿಡ ಮದ್ದಲ್ಲ ಎಂದು ಗೊಣಗುವ ಮೊದಲು ಅದರ ಮಹತ್ವವೇನೆಂದು ತಿಳಿದು ಅದರ ಬಗ್ಗೆ ಪ್ರಚಾರಪಡಿಸಬೇಕು. ನಮ್ಮ ವಸ್ತುಗಳ ಬಗ್ಗೆ ನಮ್ಮ ನೆಲದವರ ಬಗ್ಗೆ ಹೆಮ್ಮಿಯಿಂದ ಹೇಳಿಕೊಳ್ಳಬೇಕು. ನಮ್ಮ ಸಾಧನೆಗಳ ಬಗ್ಗೆ ಅಭಿಮಾನದಿಂದ ಬೀಗಬೇಕು. ಹೆಚ್ಚಾಗಿ ಕೇಳಿರದ ಕಂಡಿರದ ದೂರದ ವ್ಯಕ್ತಿಗಳ ಬಗ್ಗೆ ಪೂರ್ವಾಗ್ರಹಪೀಡಿತರಾಗಿ ಮಾತನಾಡುವದಕ್ಕಿಂತ ನಮ್ಮ ಹತ್ತಿರದವರ ಪ್ರತಿಭೆ, ಸಾಧನೆಗಳನ್ನು ಗುರುತಿಸಿ ಅವರಿಂದ ಕಲಿಯಬೇಕು. ಈ ಒಬಾಮ, ಗಾಂಧಿ, ಅಬೇಡ್ಕರ್‍ವರಿಂದ ಕಲಿಯುವದಕ್ಕಿಂತ ಮುನ್ನ ನಮ್ಮಿಂದ ನಾವೇ ಕಲಿಯುತ್ತಾ ನಮಗೆ ನಾವೇ ಮಾದರಿಯಾಬೇಕು.ಸೂರ್ಯ ಅಷ್ಟು ಉರಿಯುತ್ತಾನೆಂದು ನಕ್ಷತ್ರಗಳಿಗೆ ಬಹಿಷ್ಕಾರ ಹಾಕಲಾದೀತೆ?

  -ಉದಯ ಇಟಗಿ

  ನಾ ಕಂಡಂತೆ ಬೇಂದ್ರೆಯವರ "ಹುಬ್ಬಳ್ಳಿಯಾಂವಾ"

 • ಮಂಗಳವಾರ, ಜನವರಿ 20, 2009
 • ಬಿಸಿಲ ಹನಿ
 • ನಾನು ಮೊನ್ನೆ ನನ್ನ ಅಚ್ಚು ಮಿಚ್ಚಿನ ಕವಿ ಬೇಂದ್ರೆಯವರ ಹಾಡುಗಳನ್ನು ಸೀಡಿ ಪ್ಲೇಯರ್‍ನಲ್ಲಿ ಕೇಳುತ್ತಿದ್ದಾಗ ಅದರಲ್ಲಿನ ಒಂದು ಹಾಡು "ಹುಬ್ಬಳ್ಳಿಯಾಂವಾ" ನನ್ನನ್ನು ತಟ್ಟನೆ ಹಿಡಿದು ನಿಲ್ಲಿಸಿಬಿಟ್ಟಿತು. ಮತ್ತೆ ಮತ್ತೆ ರಿವೈಂಡ್ ಮಾಡಿ ಮತ್ತೆ ಮತ್ತೆ ಕೇಳಿದೆ. ಕೇಳಿದಷ್ಟು ನನ್ನ ಬುದ್ಧಿ ಭಾವಗಳೆರಡೂ ಹೊಸ ಹೊಳಹುಗಳನ್ನು ಹುಡುಕಿ ಹೊರಟವು. ನಾನದನ್ನು ಈ ಮೊದಲು ಸಾಕಷ್ಟು ಸಾರಿ ಕೇಳಿದ್ದೇನಾದರೂ ಈ ಬಾರಿ ಕೇಳುವಾಗ ಅದೇಕೋ ಗೊತ್ತಿಲ್ಲ ಅಲ್ಲಿ ಬಳಸಿದ ವಸ್ತು, ಭಾಷೆ, ಶಬ್ಧಭಂಡಾರ ಮತ್ತು ಹದವಾದ ಲಯಗಾರಿಕೆಗಳು ನನ್ನನ್ನು ತೀವ್ರವಾಗಿ ಆಕರ್ಷಿಸಿ ಈ ಲೇಖನ ಬರೆಯುವಂತೆ ಪ್ರೇರೇಪಿಸಿತು. ಈ ಹಾಡನ್ನು ಅಷ್ಟೇ ಭಾವಪೂರ್ಣವಾಗಿ ಸ್ನೇಹಾ ಹಂಪಿಹೊಳಿಯವರು ಧಾರವಾಡದ ಕನ್ನಡವನ್ನಾಡಿ ರೂಡಿಯಿದ್ದುದರಿಂದ, ಬೇರೆ ಗಾಯಕರಂತೆ ಅದರ accentನ್ನು ಕೆಡಿಸಿ ಹಾಡದೆ ಬೇಂದ್ರೆ ಹಾಡನ್ನು ಹೇಗೆ ಹಾಡಬೇಕೋ ಹಾಗೆ ಹಾಡಿದ್ದಾರೆ. ನನ್ನ ಪ್ರಕಾರ ಬೇಂದ್ರೆಯವರ ಆಡು ಭಾಷೆಯಲ್ಲಿರುವ ಹಾಡುಗಳನ್ನು ಆ ಭಾಷೆಯನ್ನು ಆಡುವವರೇ ಹಾಡಿದರೆ ಚೆಂದ. ಆಗಲೇ ಅದಕ್ಕೊಂದು ಲಯ, ಗತ್ತು, ನಾದ, ಸೊಗಡು ಹಾಗೂ ಸ್ಪಷ್ಟತೆಯಿರುವದು.
  ನಾನು ಬೇಂದ್ರೆಯವರ ಕವನವನ್ನು ವಿಮರ್ಶೆ ಮಾಡುವಷ್ಟು ಪ್ರಖಾಂಡ ಪಂಡಿತನೂ ಅಲ್ಲ ವಿಮರ್ಶೆಯ ಒಳಹರಿವುಗಳನ್ನರಿತ ವಿಮರ್ಶಕನೂ ಅಲ್ಲ. ಒಬ್ಬ ಸಾಮಾನ್ಯ ಓದುಗನಾಗಿ ಬೇಂದ್ರೆಯವರ ಈ ಕವನ ನನ್ನ ಗ್ರಹಿಕೆಗೆ ನಿಲುಕಿದ್ದೆಷ್ಟು ಎಂಬುದನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
  ಇದೊಂದು ವಿರಹಗೀತೆ. ಪ್ರೇಯಸಿ ತನ್ನ ಪ್ರಿಯಕರನಿಗಾಗಿ ಹಂಬಲಿಸುವ ವಿರಹಗೀತೆಯಾಗಲಿ, ಹೆಂಡತಿ ತನ್ನ ಗಂಡನ ಬರುವಿಕೆಗಾಗಿ ಕಾಯುವ ವಿರಹಗೀತೆಯಾಗಲಿ ಅಲ್ಲ ಇದು. ಸೂಳೆಯೊಬ್ಬಳು (ಯಲ್ಲಮ್ಮ ಜೋಗತಿ) ಈಗಾಗಲೇ ತನ್ನೊಂದಿಗೆ ಉಡ್ಕಿ ಮಾಡಿಕೊಂಡು ವಾರಕ್ಕೆ ಮೂರು ಸಾರಿ ಲೆಕ್ಕದಲ್ಲಿ ಬಂದು ಅವಳೊಂದಿಗೆ ಸೇರಿ ಹೋದವನಿಗಾಗಿ (ಗಿರಾಕಿಗಾಗಿ) ಹಪಹಪಿಸುವ ಹಾಡಿದು. ಅವನು ಹುಬ್ಬಳ್ಳಿಯಾಂವಾ. ಹಾಗಾದರೆ ಆ ಜೋಗತಿ ಎಲ್ಲಿಯವಳು? ಧಾರವಾಡದವಳಾ? ಕಲಘಟಗಿಯವಳಾ? ಬೆಳಗಾವಿಯವಳಾ? ಸೌದತ್ತಿಯವಳಾ? ಗೊತ್ತಿಲ್ಲ. ಕವನದುದ್ದಕ್ಕೂ ಈ ಪ್ರಶ್ನೆ ನಿಗೂಢವಾಗಿ ಉಳಿಯುತ್ತದೆ. ಅವಳು ಎಲ್ಲಿಯವಳಾದರೇನು? ಕವನದಲ್ಲಿ ಇದು ಮುಖ್ಯವಾಗದೆ ಅವಳ ಹಂಬಲಿಕೆಯಷ್ಟೆ ನಮಗೆ ಮುಖ್ಯವಾಗುತ್ತದೆ. ಮೇಲಾಗಿ ಜೋಗತಿಯರಿಗೆ ಇಂಥದೇ ಅಂತ ಒಂದು ನಿರ್ಧಿಷ್ಟ ಊರು ಇರುವದಿಲ್ಲ.

  ಈ ಹುಬ್ಬಳ್ಳಿಯಾಂವಾ ಮತ್ತು ಜೋಗತಿಯ ನಡುವೆ ಈಗಾಗಲೇ ಏನೋ ಮನಸ್ತಾಪ ಬಂದು ಅದು ಪ್ರಕೋಪಕ್ಕೆ ತಿರುಗಿ ಇಬ್ಬರಲ್ಲೂ ವಿರಸ ಉಂಟಾಗಿದೆ. ಹಾಗಾಗಿ ವಾರಕ್ಕೆ ಮೂರುಸಾರಿಯಾದರೂ ಬಂದು ಹೋಗುವವ ಇನ್ನೂ ಬಂದಿಲ್ಲ. ಜೋಗತಿಯಲ್ಲಿ ಆತಂಕವೆದ್ದಿದೆ. ಒಬ್ಬ ಸೂಳೆಗೆ ಎಷ್ಟೊಂದು ಗಿರಾಕಿಗಳು! ಆದರೆ ಈ ಸೂಳೆಗೆ ಈ ಗಿರಾಕಿಯೇ ಯಾಕೆ ಬೇಕು? ಅವನು ಬರದೆ ಹೋದರೆ ಯಾಕಿಷ್ಟೊಂದು ಆತಂಕ? ಯಾವ ಗಿರಾಕಿಯಾದರಾದೀತು! ಎಂದು ನೀವು ಕೇಳಬಹುದು. ಆದರೆ ಕವನ ಬೆಳೆದಂತೆ ನಮಗೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಅವರದು ಬರಿ ಸೂಳೆ-ಗಿರಾಕಿ ಸಂಬಂಧವಲ್ಲ. ಗಂಡ ಹೆಂಡತಿಯರಷ್ಟೇ ಪವಿತ್ರವಾದ ಸಂಬಂಧವಲ್ಲದ ಸಂಬಂಧವದು. ಕವನ ಆರಂಭವಾಗುವದೇ ಅವಳ ಈ ಆತಂಕದೊಂದಿಗೆ-
  "ಇನ್ನೂ ಯಾಕ ಬರಲಿಲ್ಲಂವ ಹುಬ್ಬಳ್ಳಿಯಾಂವಾ
  ವಾರದಾಗ ಮೂರು ಸರತಿ ಬಂದು ಹೋದಂವಾ"
  ಅವಳ ಈ ಆತಂಕವನ್ನು ಶಮನಗೊಳಿಸಿಕೊಳ್ಳುವುದು ಹೇಗೇ? ಅವನ ವೇಶಭೂಷಣ, ಹಾವಭಾವ, ತೋರ್ಕೆಗಳನ್ನು ನೆನಪಿಸಿಕೊಳ್ಳುವದರ ಮೂಲಕ ಕ್ಷಣ ಕಾಲ ತನ್ನ ಆತಂಕವನ್ನು ಮರೆಯಲು ಪ್ರಯತ್ನಿಸುತ್ತಾಳೆ.
  "ಭಾರಿ ಜರದ ವಾರಿ ರುಮಾಲು ಸುತ್ತಿಕೊಂಡಾಂವಾ
  ತುಂಬು-ಮೀಸಿ ತೀಡಿಕೊಂತ ಹುಬ್ಬು ಹಾರಿಸಂವಾ"
  ಅವನು ರಸಿಕ. ಅವನೊಳಗೆ ಕವಿಯಿದ್ದಾನೆ. ಹಾಡುಗಾರನಿದ್ದಾನೆ. ಇದೆಲ್ಲದಕ್ಕೂ ಅವಳು ಮನಸೋತಿದ್ದಾಳೆ. ಇದನ್ನು ಮುಂದಿನ ಸಾಲುಗಳಲ್ಲಿ ತೆರೆದಿಡುತ್ತಾಳೆ.
  "ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
  ಏನ ಅಂದರ ಏನೋ ಕಟ್ಟಿ ಹಾಡ ಹಾಡಂವಾ"

  ಇಂಥ ರಸಿಕನನ್ನು ಯಾವ ಹೆಣ್ಣು ತಾನೆ ಇಷ್ಟಪಡುವದಿಲ್ಲ? ಈ ಕವನದ ಸೂಳೆ ಸಾಮಾನ್ಯ ಸೂಳೆಯಲ್ಲ. ಯಲ್ಲಮ್ಮ ದೇವರ ಹೆಸರಲ್ಲಿ ಜೋಗತಿ ಆದವಳು. ಇವಳು ಗರತಿಯಾಗುವ ಸಾಮಾಜಿಕ ಹಕ್ಕನ್ನು ಕಳೆದುಕೊಂಡಿದ್ದಾಳೆ. ಇಂಥವಳಿಗೆ ಈ ರಸಿಕ ಕಟ್ಟಿ ಕೊಡುವ ಕನಸನ್ನು ಎರಡನೆಯ ನುಡಿಯಲ್ಲಿ ಹಾಡುತ್ತಾಳೆ.
  "ತಾಳಿ ಮಣಿಗೆ ಬ್ಯಾಳಿ ಮಣಿ ನಿನಗ ಬೇಕೇನಂದಾಂವಾ
  ಬಂಗಾರ-ಹುಡಿಲೇ ಭಂಡಾರವ ಬೆಳಿಸೇನೆಂದಾಂವಾ"
  ಜೋಗತಿಯರು ಎಲ್ಲಮ್ಮನ ಹೆಸರಿನಲ್ಲಿ ತಾಳಿಯನ್ನು ಕಟ್ಟಿಕೊಳ್ಳುತ್ತಾರೆ. ತಾಳಿಯ ಮದ್ಯದಲ್ಲಿರುವ ಎರಡು ಬೇಳೆಗಳು ಕೇವಲ ಮದುವೆಯಾದ ಗರತಿಯ ಸೊತ್ತು. ದೇವರ ಹೆಸರಲ್ಲಿ ಸೂಳೆಯಾದವಳಿಗೆ ಈ ಬೇಳೆಗಳನ್ನು ಹಾಕಿಕೊಳ್ಳುವ ಹಕ್ಕಿಲ್ಲ. ಹೀಗಾಗಿ ಅವಳಿಗೆ ಗರತಿಯಾಗುವ ಅಸಾಧ್ಯ ಕನಸನ್ನು ಕಲ್ಪನೆಯಲ್ಲಿ ಕಟ್ಟಿಕೊಡುವದರ ಮೂಲಕ ಅವಳನ್ನು ಮರಳು ಮಾಡುತ್ತಾನೆ. ಗರತಿಯಾಗುವ ಈ ಭಾವವೇ ಅವಳನ್ನು ಪ್ರಸನ್ನಗೊಳಿಸುತ್ತದೆ. ಈ ಜೋಗತಿಯರ ಸಂಪತ್ತೆಂದರೆ ಯಲ್ಲಮ್ಮನ ಗುಡಿಯಿಂದ ತಂದ ಭಂಡಾರ. ಆ ಭಂಡಾರವನ್ನು ಬಂಗಾರದ ಹುಡಿಯಿಂದ ತುಂಬುತ್ತೇನೆನ್ನುವ ಔದಾರ್ಯವನ್ನು ತೋರುತ್ತಾನೆ. ಅಂದರೆ ನಮಗಿಲ್ಲಿ ಗೊತ್ತಾಗುವದು ಇವನೊಬ್ಬ ಶ್ರೀಮಂತನೆಂದು. ಈ ಸಿರಿವಂತ ತನ್ನ ಮೊದಲ ಹೆಜ್ಜೆಗಳನ್ನು ಕಸುಬಿನವರ (professional prostitutes) ಮನೆಗಳಲ್ಲಿ ಹಾಕಿದ್ದಾನೆ; ಅವರಾದ ಮೇಲೆ ಅದಕ್ಕೂ ಹೆಚ್ಚಿನ ಸ್ತರದ ಬಸವಿಯರ (temple prostitutes) ತಾಣಗಳನ್ನು ದಾಟಿ ಬಂದಿದ್ದಾನೆ. ಇದೀಗ ಬಸವಿಯರಿಗಿಂತ ಹೆಚ್ಚಿನ ಸ್ತರದಲ್ಲಿರುವ ಜೋಗತಿಯ ಜೊತೆಗೆ ಇವನ ಸಂಬಂಧ.
  "ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
  ಜೋಗತೇರಗೆ ಮೂಗತಿ ಅಂತ ನನಗ ಅಂದಾಂವಾ"
  ಆ ಜೋಗತಿಯನ್ನು ಜೋಗತಿಯರಲ್ಲಿಯೇ ಶ್ರೇಷ್ಠ ಎಂದು ಕರೆಯುತ್ತಾನೆ. ಇಂಥ ಗಂಡಸನ್ನು ಯಾವ ಹೆಣ್ಣು ತಾನೆ ಇಷ್ಟಪಡುವದಿಲ್ಲ? ಅವನು ಕೊಡುವ ದೈಹಿಕ ಸುಖಕ್ಕಿಂತ ಮಾನಸಿಕ ಸುಖವು ಅವಳಿಗೆ ಹೆಚ್ಚು ಪ್ರಿಯವಾಗುತ್ತದೆ. ಅವನ ಸಾಮಿಪ್ಯ ಆಪ್ತವೆನಿಸುತ್ತದೆ. ಹೀಗಾಗಿ ಅವನೊಬ್ಬ ಗಿರಾಕಿಯಿದ್ದರೂ ಸಹ ಕೆಲಸ ಮುಗಿದ ಮೇಲೆ ಅವನನ್ನು ಹೋಗಲು ಬಿಡುವದಿಲ್ಲ. ಇರು ಎಂದು ಬೇಡುತ್ತಾಳೆ. ಅವನು ಅದನ್ನು ಲೆಕ್ಕಿಸದೇ ಹೊರಟಾಗ ಮಾರಿ ತೆಳಗ ಹಾಕುತ್ತಾಳೆ. ಅವಳ ಸಪ್ಪೆ ಮುಖ ನೋಡಿ ತನ್ನ ನಿರ್ಧಾರವನ್ನು ಬದಲಿಸಿ ಅವಳನ್ನು ಸಂತುಷ್ಟಗೊಳಿಸುತ್ತಾನೆ.
  "ಇರು ಅಂದ್ರ ಬರ್ತೀನಂತ ಎದ್ದು ಹೊರಡಾಂವಾ
  ಮಾರಿ ತೆಳಗ ಹಾಕಿತಂದ್ರ ಇದ್ದು ಬಿಡಂವಾ"
  ಮುಂದುವರೆದು ಅವನ ರಸಿಕತೆಯನ್ನು, ಆಟಗಳನ್ನು ಮುಂದಿನ ಸಾಲುಗಳಲ್ಲಿ ಮತ್ತೊಮ್ಮೆ ಅನಾವರಣಗೊಳಿಸುತ್ತಾಳೆ.
  "ಹಿಡಿ ಹಿಡಿಲೇ ರೊಕ್ಕಾ ತೆಗೆದು ಹಿಡಿ ಹಿಡಿ ಅನ್ನಾಂವಾ
  ಖರೇ ಅಂತ ಕೈ ಮಾಡಿದರ ಹಿಡಿದ ಬಿಡಂವಾ"
  ಇಲ್ಲಿ ಕವಿ ಬೇಂದ್ರೆ ’ಹಿಡಿ’ ಎನ್ನುವ ಪದದೊಂದಿಗೆ ಎಷ್ಟು ಚನ್ನಾಗಿ ಆಟವಾಡಿದ್ದಾರೆ ನೋಡಿ. ಹೀಗೆ ಪದಗಳನ್ನು ಹಿಗ್ಗಿಸಿ ಬಗ್ಗಿಸಿ ಅವುಗಳೊಂದಿಗೆ ಆಟವಾಡುವ ಕಲೆ ಬೇಂದ್ರೆಗೆ ಮಾತ್ರ ಗೊತ್ತಿತ್ತು. ಅದಕ್ಕೆ ಅಲ್ಲವೇ ಅವರನ್ನು ಶಬ್ದಗಾರುಡಿಗ ಎಂದು ಕರೆಯುತ್ತಿದ್ದುದು.

  ಏನೇ ಮಾಡಿದರೂ ಅವಳೇನಿದ್ದರೂ ಸೂಳೆ. ಮಡದಿಯಾಗಲಾರಳು. ಅವನು ಅವಳಿಗೆ ಸಂಪೂರ್ಣವಾಗಿ commit ಆಗಲಾರ. ಅವನು practical. ಅವನಿಗೆ ತನ್ನ ಇತಿಮಿತಿಗಳ ಅರಿವಿದೆ. ಬಹುಶಃ ಅವನಿಗೆ ಈಗಾಗಲೆ ಮದುವೆಯಾಗಿದೆ. ಅಥವಾ ಸೂಳೆ ಎಂಬ ಕಾರಣಕ್ಕೆ ಅವಳನ್ನು ಮದುವೆಯಾಗಿ ಸಮಾಜದ ತಿರಸ್ಕಾರಕ್ಕೆ ಗುರಿಯಾಗಲಾರ. ಅವಳಿಗೇನಿದ್ದರೂ ಎರಡನೆ ಸ್ಥಾನ. ಈ ಕಟು ವಾಸ್ತವವನ್ನು ಬಹಳ ಸೂಚ್ಯವಾಗಿ "ಚಹಾದ ಜೋಡಿ ಚೂಡಾದ್ಹಾಂಗ ನೀ ನನಗ" ಎಂದು ಹೇಳುತ್ತಾನೆ. ಆದರದು ಅವಳಿಗೆ ಕೋಪ ತರಿಸುತ್ತದೆ. ಅವಳು impractical. Sillyಯಾಗಿ ಯೋಚಿಸುತ್ತಾಳೆ. ಒಂದು ಕ್ಷಣ ತಾನು ಸೂಳೆ ಎಂಬುದನ್ನು ಮರೆತು ಅವನಿಗೆ ಮಡದಿಯಾಗುವ ಕನಸನ್ನು ಕಾಣುತ್ತಾಳೆ. ವಾಸ್ತವ ಸತ್ಯವನ್ನು ಭರಿಸಲಾರದೆ, ಅಲ್ಲಿದ್ದು ಅನುಭವಿಸಲಾರದೆ ಅಸಾಧ್ಯವಾದುದನ್ನು ಕನಸು ಕಾಣುವ ತನ್ನ ಸ್ಥಿತಿಗೆ ಒಂದು ರೀತಿಯ ಸ್ವಯಂ ಮರುಕವನ್ನು ಅನುಭವಿಸುತ್ತಾಳೆ. ಅವಳಿಗೇನಿದ್ದರೂ ಕಲ್ಪನಾ ಲೋಕವೇ ಇಷ್ಟ. ಇದನ್ನರಿತ ಆ ಹುಡುಗ ತಕ್ಷಣ ತನ್ನ ಮಾತಿನ ಧಾಟಿಯನ್ನು ಬದಲಿಸಿ "ಚೌಡಿಯಲ್ಲ ನೀ ಚೂಡಾಮಣಿ" ಅಂತ ರಮಿಸುತ್ತಾನೆ. ಅವಳು ಘಾಟಿ ಹೆಂಗಸು. ಅಷ್ಟಕ್ಕೆ ಸುಮ್ಮನಾಗುವವಳಲ್ಲ. ಅವನೂ ಅಷ್ಟೆ ಬಲು ಚಾಲಾಕಿನ ಹುಡುಗ. ಸಮಾಜಕ್ಕೆ ಸಡ್ಡು ಹೊಡೆದು ಬಹಿರಂಗವಾಗಿ ಅವಳನ್ನು ಮದುವೆಯಾಗಿ ’ಪತ್ನಿ’ ಎಂದು ಘೋಷಿಸಲಾರ. ಹಾಗೆ ಅವಳನ್ನು ಬಿಟ್ಟಿರಲಾರ. ಹಾಗಾಗಿ ಅವನು "ಬೆರಳಿಗುಂಗುರ ಮೂಗಿನ್ಯಾಗ ಮೂಗುಬಟ್ಟು" ಇಡುವದರ ಮೂಲಕ ಪತ್ನಿ ಸ್ಥಾನವನ್ನು ಕಲ್ಪಿಸುತ್ತಾನೆ. ವಾಸ್ತವದಲ್ಲಿ ಅವಾಸ್ತವವನ್ನು, ಸತ್ಯದಲ್ಲಿ ಮಿಥ್ಯವನ್ನು ತರುತ್ತಾನೆ. ಆಗ ಅವಳು ಒಂದು ರೀತಿಯ ಮಾನಸಿಕ ರಕ್ಷಣೆಯನ್ನು ಪಡೆಯುತ್ತಾಳೆ. ಇದು ಅವನ ಸಂದಿಗ್ಧತೆಯ ಫಲವೋ ಅಥವಾ ಹೆಂಗಸರಿಗೆ ಸದಾ ಕಲ್ಪನೆಗಳೇ ಇಷ್ಟವಾಗುವದರಿಂದ ಅವರನ್ನು ಅವುಗಳ ಮಿತಿಯಲ್ಲಿಯೇ ನಡೆಸಿಕೊಳ್ಳುವ ಕಲೆಯೋ ಗೊತ್ತಾಗುವದಿಲ್ಲ.

  ಮುಂದಿನ ನುಡಿಯಲ್ಲಿ ಅವಳು ತುಸು practical ಆದಂತೆ ಕಾಣುತ್ತಾಳೆ. ಅವನ ಮಡದಿಯಾಗುವ ಕನಸು ಕಾಣುತ್ತಾ ಧೇನಸ್ಥ ಸ್ಥಿತಿಯನ್ನು ಅನುಭವಿಸುವದನ್ನು ನಿಲ್ಲಿಸಿ ವಾಸ್ತವಕ್ಕೆ ಹಿಂತಿರುಗುತ್ತಾಳೆ. ಅವನು ನಗು ಮುಖದವನು. ಹೆಣ್ಣುಗಳನ್ನು ಒಲಿಸಿಕೊಳ್ಳುವ ಕಲೆ ಅವನಿಗೆ ಸಿದ್ಧಿಸಿದೆ. ಇಂಥವನ ಪ್ರೀತಿ ಸಿಕ್ಕಿದ್ದೇ ಹೆಚ್ಚು ಎಂದು ಭಾವಿಸುತ್ತಾಳೆ. ಇವನ ಹೆಂಡತಿ ಆಗುವದಕ್ಕೆ ತನಗೂ ಸಾಧ್ಯವಿಲ್ಲ, ತನ್ನ ಗಂಡನಾಗುವದಕ್ಕೆ ಅವನಿಗೂ ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಅರಿಯುತ್ತಾಳೆ. ಇವನೇ ನನಗೆ ಜನ್ಮ ಜನ್ಮಕೆ ಗೆಳೆಯನಾಗಿ ಸಿಕ್ಕರೆ ಸಾಕು ಎಂದು ತೃಪ್ತಿಪಟ್ಟುಕೊಳ್ಳುತ್ತಾಳೆ.
  "ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
  ಎದಿ ಮ್ಯಾಗಿನ ಗೆಣತಿನ ಮಾಡಿ ಇಟ್ಟುಕೊಂಡಂವಾ"
  ಇಲ್ಲಿ ಬೇಂದ್ರೆ ಹೆಣ್ಣಿನ ಮನಸ್ಸನ್ನು ಬಹಳ ಸೂಕ್ಸ್ಮವಾಗಿ ವಿಶ್ಲೇಷಿಸುತ್ತಾರೆ. ಹೆಣ್ಣಿಗೆ ಅಸಾಧ್ಯವಾದುದನ್ನು ಕಲ್ಪಿಸಿಕೊಳ್ಳುವ ಶಕ್ತಿಯೂ ಇದೆ, ಅದು ಈಡೇರದೆಹೋದಾಗ ತನ್ನೆಲ್ಲ ಇಲ್ಲದಿರುವಿಕೆಗಳ ಹಪಹಪಿಕೆಯೊಂದಿಗೆ ವಸ್ತು ಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ಬದುಕುವ ಮನಸ್ಸೂ ಇದೆ ಎಂದು ಹೇಳುತ್ತಾರೆ.

  ಇಂಥ ನೆಚ್ಚಿನ ಗೆಳೆಯನೊಡನೆ ಯಾವ ಕಾರಣಕ್ಕಾಗಿ ಮನಸ್ತಾಪ ಬಂತೋ ಆತ ಇವಳೊಂದಿಗೆ ಮುನಿಸಿಕೊಂಡಿದ್ದಾನೆ. ಅವಳೆಡೆಗೆ ಹೋಗುವದನ್ನು ನಿಲ್ಲಿಸಿದ್ದಾನೆ. ಅವಳ ಆತಂಕ ಇಮ್ಮುಡಿಯಾಗಿದೆ. ತನ್ನೆಲ್ಲಾ ಹ್ಯಾಂವ್ ಬಿಟ್ಟು ಹುಚ್ಚಿಯಂತೆ ಅವರಿವರನ್ನು ಕೇಳುತ್ತಾ ಬೀದಿ ಬೀದಿಯಲ್ಲಿ ಅವನಿಗಾಗಿ ಹುಡುಕುತ್ತಾಳೆ.
  "ಯಲ್ಲಿ ಮಲ್ಲಿ ಪಾರಿ ತಾರಿ ನೋಡಿರೇನ್ರಂವಾ
  ನಿಂಗಿ ಸಂಗಿ ಸಾವಂತರಿ ಎಲ್ಹಾನ ನನ್ನಾಂವ
  ಸೆಟ್ಟರ ಹುಡುಗ ಸೆಟಗೊಂಡು ಹೋದಾ ಅಂತಾ ನನ್ನ ಜೀಂವಾ
  ಹಾದಿ ಬೀದಿ ಹುಡುಕತೈತ್ರೆ ಬಿಟ್ಟ ಎಲ್ಲಾ ಹ್ಯಾಂವಾ"
  ಇಲ್ಲಿ ಮತ್ತೊಂದು ವ್ಯಂಗ ಇದೆ. ಈತ ಸೆಟ್ಟರ ಹುಡುಗ. ದುಡ್ಡಿದ್ದವ. ಈತ ಸೆಡವು ಮಾಡಿಕೊಂಡು ಹೋದರೆ ಅವಳ ಬದುಕು ನಡೆಯುವದಾದರೂ ಹೇಗೆ? ಅದು ಕಟು ವಾಸ್ತವ. ಹೀಗಾಗಿ ಅವನಿಗಾಗಿ ಹುಡುಕಾಟ ಮುಂದುವರಿಸುತ್ತಾಳೆ. ಅವಳ ಈ ಹುಡುಕಾಟದೊಂದಿಗೆ ಕವನ ಅಂತ್ಯಗೊಳ್ಳುತ್ತದೆ.

  ಜಗತ್ತಿನ ಯಾವ ಕವಿ ತಾನೆ ಇಷ್ಟೊಂದು ಚನ್ನಾಗಿ ಸೂಳೆ-ಗಿರಾಕಿ ಸಂಬಂಧವನ್ನು ವರ್ಣಿಸಿದ್ದಾನೆ? ಮುಂದೆ ಹುಬ್ಬಳ್ಳಿಯಾಂವಾ ಬರುತ್ತಾನಾ? ಬಂದು ಅವಳನ್ನು ಸೇರುತ್ತಾನಾ? ಮತ್ತೆ ಎಂದಿನಂತೆ ಅವರಿಬ್ಬರೂ ಒಂದಾಗುತ್ತಾರಾ? ಕವನದಲ್ಲಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಅವರಿಬ್ಬರ ಮಧುರ ಬಾಂಧವ್ಯವನ್ನು ಕಟ್ಟಿಕೊಡುವದಷ್ಟೆ ಕವನದ ಕೆಲಸ. ಕವನ ಇವರಿಬ್ಬರ ಸರಿ-ತಪ್ಪು, ಸತ್ಯ-ಮಿಥ್ಯ, ವಾಸ್ತವ-ಕಲ್ಪನೆ, ತರ್ಕ-ಅತರ್ಕಗಳ ನಡುವೆ ನಡೆಯುವ ಗೊಂದಲದ ಬದುಕನ್ನು ಚಿತ್ರಿಸುತ್ತದೆ. ಇಂಥ ದ್ವಂದ್ವ, ಸಂದಿಗ್ಧತೆಗಳ ನಡುವೆಯಲ್ಲವೇ ನಾವು ಬದುಕುವದು?!

  -ಉದಯ ಇಟಗಿ

  [ನೆರವು- ಸುನಾಥವರ "ಸಲ್ಲಾಪ" ಬ್ಲಾಗ್]

  ಗೌರಜ್ಜಿಯನ್ನು ನೆನೆಯುತ್ತಾ

 • ಭಾನುವಾರ, ಜನವರಿ 11, 2009
 • ಬಿಸಿಲ ಹನಿ
 • ಅಪ್ಪನ ಬೇಜವಾಬ್ದಾರಿತನ ಮತ್ತು ಸತತ ಬರಗಾಲದ ಪರಿಣಾಮವಾಗಿ ಹೊಲದಿಂದ ಬರುವ ಆದಾಯ ಏನೂ ಸಾಕಾಗದೆ ನಾವು ಮೂರೂ ಜನ ಮಕ್ಕಳು ಬೇರೆ ಬೇರೆಯವರ ಹತ್ತಿರ ಇದ್ದು ಬೆಳೆದವರು. ನನ್ನ ಅಣ್ಣನನ್ನು ನನ್ನ ದೊಡ್ಡಪ್ಪ ಅಂದರೆ ಅಪ್ಪನ ಅಣ್ಣ ತಮ್ಮೂರು ಅಳವಂಡಿಗೆ, ತಂಗಿಯನ್ನು ತಾಯಿ ತವರು ಮನೆಯವರು ಸುಲ್ತಾನಪೂರಕ್ಕೆ, ಹಾಗೂ ನನ್ನನ್ನು ದೊಡ್ಡಪ್ಪ ಅಂದರೆ ಅವ್ವನ ಅಕ್ಕನ ಗಂಡ ತಮ್ಮ ಊರು ಕಲಕೋಟಿಗೆ ಕರೆದುಕೊಂಡು ಬಂದರು.

  ಹೀಗೆ ದೊಡ್ಡಪ್ಪ ದೊಡ್ಡಮ್ಮನವರ ತುಂಬು ಆರೈಕೆಯಲ್ಲಿ ಶುರುವಾದ ನನ್ನ ಬಾಲ್ಯದ ಮೇಲೆ ಗಾಢವಾದ ಪರಿಣಾಮ ಬೀರಿದ ವ್ಯಕ್ತಿಯೆಂದರೆ ಗೌರಜ್ಜಿ. ಗೌರಜ್ಜಿಯ ನಿಷ್ಠೆ, ಕಾಳಜಿ, ಬದುಕಿನ ಮೇಲಿದ್ದ ಅಪಾರ ಪ್ರೀತಿ, ಛಲ, ನಿಸ್ವಾರ್ಥ ಸೇವೆ ಇವತ್ತಿಗೂ ನನ್ನ ಆಶ್ಚರ್ಯಚಕಿತಗೊಳಿಸುವದಲ್ಲದೆ ನನ್ನ ಸುಪ್ತ ಪ್ರಜ್ಞೆಯ ಹಿಂದೆ ಈಗಲೂ ಕೆಲಸ ಮಾಡುತ್ತವೆ. ಗೌರಜ್ಜಿಯ ನೆನಪಾದಾಗಲೆಲ್ಲಾ ನಾನು ಇಂಥ ಅಜ್ಜಿಯರು ಮನೆಗೊಬ್ಬರು ಇರಬೇಕು ಅಂದುಕೊಳ್ಳುವದುಂಟು.

  ಹಾಗೆ ನೋಡಿದರೆ ಈ ಗೌರಜ್ಜಿ ನಮ್ಮ ಸಂಬಧಳಿಕಳೇನಲ್ಲ ಆದರೆ ಸಂಬಧಿಕಳಿಗಿಂತ ಹೆಚ್ಚಾಗಿ ಆ ಮನೆಯಲ್ಲಿ ಒಬ್ಬಳಾದದ್ದು. ಉತ್ತರ ಕರ್ನಾಟಕದ ಕಡೆ ಅಜ್ಜಿ ಎನ್ನುವ ಪದ ಅಷ್ಟಾಗಿ ಬಳಕೆಯಲ್ಲಿಲ್ಲ. ಸಾಮಾನ್ಯವಾಗಿ ಮುದುಕಿಯರಿಗೆ ಅಮ್ಮ ಎಂದು ಕರೆಯುವ ವಾಡಿಕೆ. ಆದರೆ ಈಕೆಯನ್ನು ಮಾತ್ರ ಅದ್ಹೇಗೆ ಅಜ್ಜಿ ಎಂದು ಕರೆದರೋ ನನಗೆ ಗೊತ್ತಿಲ್ಲ. ಇಡಿ ಊರಲ್ಲಿ ಅವಳು ಗೌರಜ್ಜಿಯೆಂದೇ ಹೆಸರು ವಾಸಿ. ನನ್ನ ಬಾಲ್ಯಕ್ಕೆ ಏನು ಸಿಗಬೇಕಿತ್ತೋ ಅದನ್ನೆಲ್ಲ ಒದಗಿಸಿಕೊಡುವದರಲ್ಲಿ ಗೌರಜ್ಜಿಯ ಪಾತ್ರ ಹಿರಿದಾದು. ತನ್ನದೆಲ್ಲವನ್ನೂ ಧಾರೆಯೆರೆದ ನನಗೆ ಗೌರಜ್ಜಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಟ್ಟಿದ್ದಾಳೆ. ಅದಕ್ಕೋಸ್ಕರ ಅವಳಿಗೆ ಕೃತಜ್ಞತೆ ಸಲ್ಲಿಸಲೆಂದೇ ಈ ಲೇಖನ ಬರೆಯುತ್ತಿದ್ದೇನೆ.

  ಈಕೆ ಒಬ್ಬ ಬಾಲ ವಿಧವೆ. ಚಿಕ್ಕಂದಿನಲ್ಲಿ ತೊಟ್ಟಿಲಲ್ಲಿರಬೇಕಾದರೆ ಮದುವೆ ಮಾಡಿದ್ದರಂತೆ. ಮುಂದೆ ಪ್ಲೇಗ್ ಬಂದು ಅವಳು ಮೈ ನೆರಯುವ ಮುನ್ನವೇ ಅವಳ ಗಂಡ ತೀರಿ ಹೋಗಿದ್ದರಿಂದ ಜೀವನ ಪರ್ಯಂತ ಬಾಲವಿಧವೆಯಾಗಿ ಉಳಿಯಬೇಕಾಯಿತು. ಕಾಲಾನುಕ್ರಮವಾಗಿ ತನ್ನ ಬೆರಳೆಣಿಕೆಯಷ್ಟೆ ಇರುವ ಬಂಧುಗಳನ್ನು ಕಳೆದುಕೊಂಡು ಒಂಟಿಯಾಗಿ ಕಲಕೋಟಿಯಲ್ಲಿ ವಾಸ್ತವ್ಯ ಹೂಡಿದಳು. ಅವಳಿಗೆ ಹೇಳಿಕೊಳ್ಳುವಂಥ ಬಂಧುಗಳು ಯಾರೂ ಇರಲಿಲ್ಲವಾದರೂ ಸಿದ್ಧಪೂರದಲ್ಲಿ ಅದ್ಯಾರೋ ಒಬ್ಬ ಸಂಬಂಧಿಯಿರುವರೆಂದು ವರ್ಷಕ್ಕೋ ಎರಡುವರ್ಷಕ್ಕೋ ಒಂದು ಸಾರಿ ಆ ಊರಿಗೆ ಹೋಗಿ ಎರಡು ದಿನ ಇದ್ದು ಮತ್ತೆ ವಾಪಾಸಾಗುತ್ತಿದ್ದಳು.

  ಅದ್ಹೇಗೆ ಗೌಡರ (ನಮ್ಮ ದೊಡ್ಡಪ್ಪ ಊರಿಗೆ ಗೌಡರಾದ್ದರಿಂದ ಅವರ ಮನೆಯನ್ನು ಗೌಡರ ಮನೆಯೆಂದು ಕರೆಯುತ್ತಿದ್ದರು) ಮನೆಗೆ ಬಂದು ಸೇರಿದೆ ಎಂದು ಒಮ್ಮೆ ಅವಳನ್ನೇ ನಾನು ಖುದ್ದಾಗಿ ಕೇಳಿದ್ದಾಗ ಹೇಳಿದ್ದೇನೆಂದರೆ ಹಿಂದೆ ನನ್ನ ದೊಡ್ಡಪ್ಪನ ಹಿರಿಯರು ಇವಳ ಮಾವ ಜಾತಿಯಲ್ಲಿ ನಮಗಿಂತ ಉಚ್ಛವಾಗಿದ್ದರಿಂದ ಹಾಗೂ ಊರಲ್ಲಿ ಮಠವನ್ನು ನದೆಸುತ್ತಿದ್ದದರಿಂದ ನಾಲ್ಕೆಕರೆ ಹೊಲವನ್ನು ದಾನವಾಗಿ ಕೊಟ್ಟಿದ್ದಲ್ಲದೆ ಆಗಾಗ್ಗೆ ಆರ್ಥಿಕ ಸಹಾಯ ನೀಡಿದ್ದರಂತೆ. ಹೀಗಾಗಿ ಸಾಯುವ ಕಾಲಕ್ಕೆ ಗೌರಜ್ಜಿಯ ಮಾವ ಅವಳನ್ನು ಕರೆದು ಗೌಡರ ಮನೆಗೆ ನಿಷ್ಠೆಯಾಗಿದ್ದು ಅವರ ಮನೆ ಋಣ ತೀರಿಸೆಂದು ವಚನ ತೆಗೆದುಕೊಂಡಿದ್ದನಂತೆ. ಆ ಪ್ರಕಾರ ಗೌರಜ್ಜಿ ನಡೆದುಕೊಂಡಳು. ಹೀಗಾಗಿ ಗೌಡರ ಮನೆಗೂ ಗೌರಜ್ಜಿಗೂ ಬಿಡಿಸಿಲಾರದ ನಂಟು! ಹಾಗಂತ ಗೌರಜ್ಜಿ ಸಂಪೂರ್ಣವಾಗಿ ಇವರ ಮನೆಯ ಮೇಲೆ ಅವಲಂಬಿತಳಾಗಿರಲಿಲ್ಲ. ಅವಳಿಗೆ ಬೇರೆ ಆಸ್ತಿ ಪಾಸ್ತಿಯಿರಲಿಲ್ಲವಾದರೂ ಇದ್ದ ಮಠವನ್ನು ತಾನು ಹೆಂಗಸು ಎಂಬ ಕಾರಣಕ್ಕೆ ನಡೆಸಲಾಗುವದಿಲ್ಲವೆಂದು ಅದನ್ನು ತನ್ನದೇ ದೂರದ ಸಂಬಂಧಿಯೊಬ್ಬರಿಗೆ ವರ್ಗಾಯಿಸಿಬಿಟ್ಟಳು. ಮಠವನ್ನು ಕೊಟ್ಟ ಮೇಲೆ ಮಠಕ್ಕೆ ಸೇರಿದ್ದ ನಾಲ್ಕೆಕರೆ ಹೊಲವನ್ನು ಕೊಡದೇ ಇರಲಿಕ್ಕಾಗುತ್ತದೆಯೇ? ಅದನ್ನೂ ಕೊಟ್ಟಬಿಟ್ಟಳು. ಇದಲ್ಲದೆ ಅವಳಿಗೆ ತಿಂಗಳಿಗೆ ಸರಕಾರದಿಂದ ೫೦ ರೂಪಾಯಿಯಷ್ಟು ಬಾಲವಿಧವಾ ವೇತನ ಬರುತ್ತಿತ್ತು. ಅಷ್ಟರಲ್ಲಿಯೇ ಜೀವನ ನಡೆಸುತ್ತಿದ್ದಳು. ನಮ್ಮ ಮನೆಯಲ್ಲಿ ಹೈನು ಚೆನ್ನಾಗಿದ್ದರಿಂದ ಹಾಲು, ಮೊಸರು, ಮಜ್ಜಿಗೆಯನ್ನು ದಿನಾಲೂ ಇಲ್ಲಿಂದಾನೆ ತೆಗೆದುಕೊಂಡು ಹೋಗುತ್ತಿದ್ದಳು.

  ನಮ್ಮ ದೊಡ್ಡಪ್ಪ "ನೀನೊಬ್ಬಾಕಿ ನನಗೇನೂ ಭಾರ ಆಗೋದಿಲ್ಲ, ಇಲ್ಲೆ ನಮ್ಮ ಮನ್ಯಾಗ ಬಂದು ಇದ್ದುಬಿಡು" ಅಂತ ಹೇಳಿದರು ಕೇಳದೇ ಮಠದಲ್ಲಿಯೇ ಇರಲಿಕ್ಕೆ ಅಂತ ಒಂದು ಸಣ್ಣ ಗೂಡು ಮಾಡಿಕೊಂಡಿದ್ದಳು. ಅವಳ ಮನೆಯ ಬಾಗಿಲು ಬಹಳ ಚಿಕ್ಕದಾಗಿದ್ದರಿಂದ ಯಾವಾಗಲೂ ಬಗ್ಗಿಕೊಂಡೇ ಒಳಗೆ ಹೋಗಬೇಕಾಗುತ್ತಿತ್ತು. ಹೀಗಾಗಿ ನಾವೆಲ್ಲಾ ಅದನ್ನು ಗುಬ್ಬಿ ಮನೆಯೆಂದು ಕರೆಯುತ್ತಿದ್ದೆವು. ಇದು ಅವಳ ಅಡಿಗೆ ಮನೆ. ಅಡಿಗೆ ಮನೆಗೆ ಹೊಂದಿಕೊಂಡಂತೆ ಹೊರಗಡೆ ಒಂದು ಕಟ್ಟೆಯಿತ್ತು. ಬೇಸಿಗೆಯಲ್ಲಿ ಈ ಕಟ್ಟೆಯ ಮೇಲೆ, ಚಳಿಗಾಲದಲ್ಲಿ ತನ್ನ ಮನೆಯ ಒಳಗೆ ಮಲಗುತ್ತಿದ್ದಳು. ಈ ಮನೆಗೆ ಬಚ್ಚಲು ಇರಲಿಲ್ಲವಾದ್ದರಿಂದ ದಿನಾಲೂ ಸ್ನಾನಕ್ಕಾಗಿ ಊರಲ್ಲಿ ಸದಾಕಾಲ ಹರಿಯುವ ವರದಾ ನದಿಗೆ ಹೋಗುತ್ತಿದ್ದಳು. ಅಲ್ಲಿಂದ ಬಂದ ಮೇಲೆ ಪೂಜೆಯೆಲ್ಲಾ ಮುಗಿಸಿ ಅಡಿಗೆ ಮಾಡುತ್ತಿದ್ದಳು. ನಾನು ಕಂಡಂತೆ ಗೌರಜ್ಜಿ ಎರಡು ದಪ್ಪ ದಪ್ಪನಾದ ರೊಟ್ಟಿ ಮಾಡಿ ಅದನ್ನು ಯಾವದೋ ಒಂದು ಪಲ್ಯದ ಜೊತೆಗೆ ತಿನ್ನುತ್ತಿದ್ದಳು. ಒಂದೊಂದು ಸಾರಿ ಜೋಳದ ಅಂಬಲಿ ಮಾಡಿಕೊಂಡು ಮಜ್ಜಿಗೆಯೊಂದಿಗೆ ಕುಡಿಯುತ್ತಿದ್ದಳು. ಒಮ್ಮೊಮ್ಮೆ ಅವಳು ಊಟ ಮಾಡುವಾಗ ತಟ್ಟೆಯಲ್ಲಿ ನೊಣ ಬಿದ್ದರೆ ಅದನ್ನು ಎಸೆದು ಅದರ ಜೊತೆ ಗುಡಿಯಿಂದ ತಂದ ಅಂಗಾರವನ್ನು ಬೆರಸಿ ತಿನ್ನುವಾಗ ನಾವೆಲ್ಲ "ಇಸ್ಸಿಸ್ಸಿ" ಎನ್ನುತ್ತಿದ್ದೆವು. ಆಗ ಗೌರಜ್ಜಿ "ಹಂಗೆಲ್ಲಾ ಅನಬಾರದು. ತಿನ್ನೋ ಕೂಳಿನ ಮೇಲೆ ಯಾವತ್ತೂ ಸೊಕ್ಕು ಮಾಡಬಾರದು" ಎಂದು ನಮಗೆಲ್ಲಾ ಬುದ್ದಿವಾದ ಹೇಳುತ್ತಿದ್ದಳು. ಸ್ನಾನ, ಪೂಜೆ, ಬೆಳಗಿನ ಊಟ ಮುಗಿಸುವಷ್ಟೊತ್ತಿಗೆ ೯ ಗಂಟೆಯಾಗುತ್ತಿತ್ತು. ಆನಂತರ ಗೌಡರ ಮನೆ ಕಡೆ ಸವಾರಿ ಹೊರಡುತ್ತಿದ್ದಳು.


  ಬೆಳಿಗ್ಗೆ ಒಂಬತ್ತು ಗಂಟೆಗೆ ಬಂದರೆ ದೊಡ್ದಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡೋದು, ಹಸನು ಮಾಡೋದು, ದನಕರುಗಳನ್ನು ಆಳುಮಕ್ಕಳ ಕೈಯಿಂದ ಹೊಳೆಗೆ ಅಟ್ಟಿಸಿ ಮೈ ತೊಳೆಸೋದು, ಅವುಗಳನ್ನು ಹಿಂಡಿಸೋದು ಮುಂತಾದ ಕೆಲಸಗಲನ್ನು ಮಾಡುತ್ತಿದ್ದಳು.ಸುಗ್ಗಿಕಾಲದಲ್ಲಿ ಕಣದಲ್ಲಿ ಒಕ್ಕಲಿ ನಡೆಯುತ್ತಿದ್ದರೆ ಅಲ್ಲಿಗೆ ಸ್ವತಃ ತಾನೆ ಹೋಗಿ ಆಳುಗಳು ಸೋಂಬೇರಿಯಾಗಿ ಕೂತು ಕಾಲ ಕಳೆಯದಂತೆ ನಿಗಾವಹಿಸುತ್ತಿದ್ದಳು.ಆಳುಗಳ ಮೇಲೆ ಗೌರಜ್ಜಿಗೆ ಯಾವತ್ತೂ ನಂಬಿಕೆಯಿರಲಿಲ್ಲ. ಏಕೆಂದರೆ ಆಳುಗಳು ಎಷ್ಟೊಸಾರಿ ಕಾಳು ಕಡಿಗಳನ್ನು ಕದ್ದು ಅವಳ ಕಲಿ ಸಿಕ್ಕು ಬಿದ್ದು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದು ಇದೆ.ಹೀಗಾಗಿ ಆಳುಗಳು "ಮನೆಯವರಿಗಿಂತ ಈ ಮುದುಕಿದು ಅತಿಯಾಯಿತು" ಎಂದು ಹಿಡಿಶಾಪ ಹಾಕಿದ್ದು ಉಂಟು.ಮನೆಯ ಚಕ್ಕಡಿ ಯಾವ ಹೊಲದಲ್ಲಿದೆ. ಯಾವ್ಯಾವ ಆಳು ಯಾವ್ಯಾವ ಹೊಲದಲಿದ್ದಾರೆ ಎಂಬುದನ್ನು ಅವರಿವರಿಂದ ಕೇಳಿ ಲೆಕ್ಕ ಇಡುತ್ತಿದ್ದಳು. ನಾವೆಲ್ಲಾ ಹೊರಗೆ ಕಟ್ಟೆಯ ಮೇಲೆ ಕುಳಿತುಕೊಂಡಾಗ ಅಕಸ್ಮಾತ್ ಆಳು ಒಳಗೆ ಹೋದರೆ "ಅಯ್ಯ, ಒಳಗ ಹೋಗು! ಅವಾ ಬಸ್ಯಾ ದೋತರದ ಕಚ್ಯಾಗ ಬೆಲ್ಲಾ ಇಟಗೊಂಡು ಹೊಕ್ಕಾನಸ" ಎಂದು ನಮ್ಮನ್ನೆಲ್ಲಾ ಒಳಗೆ ಕಳಿಸುವವರಿಗೂ ಅವಳಿಗೆ ಸಮಾಧಾನ ಇರುತ್ತಿರಲಿಲ್ಲ. ಆಳುಗಳ ಮೇಲೆ ಸದಾ ಸಂಶಯ ವ್ಯಕ್ತಪಡಿಸುವದಂತಲ್ಲ ಆಕೆಗೆ ಆ ಮನೆಯ ಬಗ್ಗೆ ಅಷ್ಟೊಂದು ಕಾಳಜಿಯಿತ್ತು. ಅವಳ ಸರ್ಪಗಾವಲಿನಲ್ಲಿ ಗೌಡರ ಮನೆಯ ಸಾಮಾನುಗಳು ಆಚೆ ಈಚೆ ಸರಿದಿದ್ದಿಲ್ಲ.


  ಪ್ರತಿ ಬೇಸಿಗಿಗೆ ದೊಡ್ಡಮ್ಮ ಶಾವಿಗೆ ಮಾಡೋದು, ಹಪ್ಪಳ ಮಾಡೋದು, ಉಪ್ಪಿನಕಾಯಿ ಹಾಕೋದು ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಳು. ಆಗ ಗೌರಜ್ಜಿ ದೊಡ್ಡಮ್ಮನಿಗೆ ಶಾವಿಗೆ, ಹಪ್ಪಳ ಒಣಗಿಸಿಕೊಡೋದು, ಮಾವಿನಕಾಯಿ ಹೋಳುಗಳನ್ನು ಹೆಚ್ಚಿಕೊಡೋದು ಮಾಡುತ್ತಿದ್ದಳು.ಶಾವಿಗೆ ಮಾಡುವಾಗಲೆಲ್ಲಾ ನನಗೆ ಬಹಳ ಖುಶಿ. ಏಕೆಂದರೆ ಪ್ರತಿದಿನ ನನಗೊಂದು ಯಾರಾದರು ಶಾವಿಗೆ ಹಿಟ್ಟಿನಿಂದ ಗುಬ್ಬಿ ಮಾಡಿಕೊಡಬೇಕು. ಆ ಜವಾಬ್ದಾರಿಯನ್ನು ಗೌರಜ್ಜಿ ತೆಗೆದುಕೊಳ್ಳುತ್ತಿದ್ದಳು. ನಾನು ಪ್ರತಿದಿನ ಶಾಲೆಯಿಂದ ಬರುವಷ್ಟರಲ್ಲಿ ಗುಬ್ಬಿ ಮಾಡಿ ಅದನ್ನು ಬಿಸಿಲಲ್ಲಿ ಒಣಗಿಸಿ ಬೆಂಕಿ ಕೆಂಡದಲ್ಲಿ ಸುಟ್ಟು ಅದಕ್ಕೆ ಬೆಲ್ಲ ಹಾಕಿ ಕೊಡುತ್ತಿದ್ದಳು.ಹೀಗೆ ದಿನಾಲು ಸಂಜೆ ೬-೭ ಗಂಟೆಯವರೆಗೆ ಇದ್ದು ಚಹಾ ಕುಡಿದು ತನ್ನ ಮನೆಗೆ ಹೋಗಿ ದೀಪ ಹಚ್ಚಿ ಮತ್ತೆ ಬಂದು ರಾತ್ರಿ ಇಲ್ಲಿಯೇ ಊಟ ಮಾಡಿ ಮತ್ತೆ ತನ್ನ ಮನೆಗೆ ವಾಪಾಸಾಗುತ್ತಿದ್ದಳು. ಒಂದೊಂದು ಸಾರಿ ಇಲ್ಲಿಯೇ ವಸ್ತಿ ಉಳಿಯುತ್ತಿದ್ದಳು.

  ನಾನು ಕಲಕೋಟಿಗೆ ಬಂದಾಗಿನಿಂದಲೂ ಗೌರಜ್ಜಿಯೆಡೆಗೆ ನನಗೆ ಅದೇನೋ ಅಕರ್ಷಣೆ. ಗೌರಜ್ಜಿಗೂ ಅಷ್ಟೆ ನನ್ನ ಕಂಡರೆ ಬಲು ಪ್ರೀತಿ. ನಾನು ಶಾಲೆಯಿಂದ ಬಂದ ತಕ್ಷಣ ನನಗೊಂದು ಮುತ್ತು ಕೊಟ್ಟು ನನಗೇನಾದರು ತಿನ್ನಲು ಕೊಟ್ಟು ಆಟಕ್ಕೆ ಕಳಿಸುತ್ತಿದ್ದಳು. ನಾನು ಆಟದಿಂದ ಮರಳಿ ಬರುವಷ್ಟರಲ್ಲಿ ಅವಳು ತನ್ನ ಮನೆಗೆ ಹೋಗಿ ಬಂದಿರುತ್ತಿದ್ದಳು. ಆಮೇಲೆ ನನ್ನ ಸಂಬಂಧಿಕರೊಬ್ಬರ ಹತ್ತಿರ ಮನೆಪಾಠಕ್ಕೆ ಕಳಿಸಿ ಬಂದಮೇಲೆ ನನಗೊಂದು ಕತೆ ಹೇಳಿ ಹೋಗುತ್ತಿದ್ದಳು. ಗೌರಜ್ಜಿ ಒಬ್ಬ ಅನಕ್ಷರಸ್ಥೆಯಾದರೂ ಅದ್ಹೇಗೆ ಪುರಾಣದ ಕತೆಗಳ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಕಲೆ ಹಾಕಿದ್ದಳೋ ನನಗೆ ಗೊತ್ತಿಲ್ಲ. ಯಾರಿಗೂ ಬೇಸರವಾಗದಂತೆ ಎಲ್ಲರನ್ನೂ ಹಿಡಿದಿಡುತ್ತಾ ಅವಳು ಕತೆ ಹೇಳುವ ಕಲೆಗೆ ನಿಬ್ಬೆರಗಾಗಿದ್ದೇನೆ. ರಾಮಾಯಣದ ಮಹಾಭಾರತದ ಕತೆಗಳನ್ನು ತನ್ನ ಭಂಡಾರದಿಂದ ಒಂದೊಂದೇ ತೆಗೆದು ಹೇಳುತ್ತಿದ್ದಳಾಕೆ. ದಿನವೂ ಒಂದೊಂದು ಹೊಸ ಕತೆ ನಡೆಯುತ್ತಿತ್ತು. ಅವಳ ಕತೆಗಳ ಕಣಜ ಬರಿದಾಗಿದ್ದೇ ಇಲ್ಲ. ಇದಲ್ಲದೆ ಹಟ್ಟಿ(ದೀಪಾವಳಿ)ಹಬ್ಬದಂದು ಲಕ್ಷ್ಮಿ ಪೂಜೆಯ ದಿನ ಮತ್ತು ಕಣದ ರಾಶಿಯ ಪೂಜೆಯ ದಿನ ಗೌರಜ್ಜಿ ತನ್ನ ಬೊಚ್ಚುಬಾಯಿಯಲ್ಲಿ ಹಾಡುಗಳನ್ನು ಸ್ವಚ್ಚವಾಗಿ ಹಾಡುತ್ತಿದ್ದಳು. ಮುಂದೆ ನನಗೆ ಸಾಹಿತ್ಯದಲ್ಲಿ ಹೆಚ್ಚು ಒಲವು ಮೂಡುವದಕ್ಕೆ ಮತ್ತು ನನ್ನೊಳಗಿನ ಬರಹಗಾರ ಮೊಳಕೆಯೊಡೆಯುವದಕ್ಕೆ ಬಹುಶಃ ಗೌರಜ್ಜಿಯ ಕತೆ ಮತ್ತು ಹಾಡು ಹೇಳುವಿಕೆ ಎಲ್ಲೋ ಒಂದು ಕಡೆ ಬಾಲ್ಯದಿಂದಲೇ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿವೆ ಎನಿಸುತ್ತದೆ. ಅದಕ್ಕೆ ನಾನು ಗೌರಜ್ಜಿಗೆ ಸದಾ ಚಿರಋಣಿ! ಒಂದೊಂದು ಸಾರಿ ಬಿಡುವಿದ್ದಾಗ ನನ್ನೊಂದಿಗೆ ಚಕ್ಕಾ (ಚೌಕಾ ಬಾರಾ) ಆಡುತ್ತಿದ್ದಳು. ಅಕಸ್ಮಾತ್ ನನಗ ಕಡತಾ ಸಿಗದ ಹೋದರ ನಾನು ಮಾರಿ ಸಣ್ಣಗ ಮಾಡತಿದ್ದೆ. ಆಗ ಬೇಕಂತಲೆ ಕಡತಾ ಕೊಟ್ಟು ನನ್ನ ಪ್ರಸನ್ನಗೊಳಿಸುತ್ತಿದ್ದಳು.
  ಮುಂಗಾರು ಮಳೆ ಸಕಾಲಕ್ಕೆ ಬರದೆ ಹೋದರೆ ಗೌರಜ್ಜಿ ಮಳೆ ಕೇಳಿಸುತ್ತಿದ್ದಳು. ನಾನು ಶಾಲೆಗೆ ಹೋಗುವ ಮುನ್ನ "ನಾನು ಸಂಜಿ ಮುಂದ ಮಳಿ ಕೇಳಸತೇನಿ. ನಾಲ್ಕು ಜನ ಸಾಲಿ ಹುಡುಗರನ್ನ ಕರ್ಕೊಂಡು ಬಾ" ಅಂತ ಹೇಳಿ ನಾವು ಶಾಲೆಯಿಂದ ಹಿಂತಿರಿಗುವಷ್ಟರಲ್ಲಿ ನಾಲ್ಕು ಬೇರೆ ಬೇರೆ ಸಗಣಿ ಕುಡಿಕೆಯಲ್ಲಿ ಬೂದಿ, ಕಾಳು, ನೀರು, ತುಂಬಿಟ್ಟು ಒಂದನ್ನು ಖಾಲಿ ಬಿಟ್ಟಿರುತ್ತಿದ್ದಳು. ನಾವೆಲ್ಲ ಶಾಲೆಯಿಂದ ಬಂದ ಮೇಲೆ ಮುಖತೊಳೆದುಕೊಂಡು ಬರಲು ಹೇಳುತ್ತಿದ್ದಳು.ಅಷ್ಟರಲ್ಲಿ ಮನೆಯ ಮುಂಚಿಬಾಗಿಲದ ಹೊಸ್ತಿಲ ಮೇಲೆ ಅವನ್ನು ಜೋಡಿಸಿಟ್ಟಿರುತ್ತಿದ್ದಳು. ನಂತರ ನಾವು ನಾಲ್ಕು ಜನ ಒಂದೊಂದಾಗಿ ತೆಗೆಯುತ್ತಾ ಹೋಗುತ್ತಿದ್ದೆವು. ಮೊದಲು ನೀರಿನ ಕುಡಿಕೆ ಬಂದರೆ ಮಳೆ ಬರುತ್ತದೆ ಅಂತ. ಬೂದಿ ಬಂದರೆ ಬರಗಾಲ ಅಂತ. ಕಾಳು ಬಂದರೆ ಜೀವನ ನಡೆಸಲು ಏನೂ ತೊಂದರೆಯಿಲ್ಲ ಹಾಗೂ ಖಾಲಿ ಕುಡಿಕೆ ಬಂದರೆ ಏನೂ ಹೇಳಲಾಗುವದಿಲ್ಲ ಅಂತ ತನ್ನದೇ ಲೆಕ್ಕಾಚಾರದಲ್ಲಿ ಅರ್ಥೈಸುತ್ತಿದ್ದಳು. ಇಲ್ಲಿ ಇದು ನಮಗೆ ಮೂಡನಂಬಿಕೆಯಾಗಿ ಕಂಡುಬಂದರೂ ಎಲ್ಲರಿಗೂ ಒಳಿತಾಗಲೆನ್ನುವ, ಇನ್ನೊಭ್ಭರ ಕುರಿತು ಯೋಚಿಸುವ ಮನಸ್ಸು ನನಗೆ ಪ್ರಿಯವಾಗುತ್ತದೆ.

  ನಾನು ನಾಲ್ಕನೇ ಕ್ಲಾಸಿನಲ್ಲಿರುವಾಗ ನನ್ನ ದೊಡ್ಡಪ್ಪ ಹೃದಯಾಘಾತದಿಂದ ಬಹಳ ಬೇಗನೆ ತೀರಿಕೊಂಡಿದ್ದರಿಂದ ಮನೆಯಲ್ಲಿ ಅಗಾಧ ಬದಲಾವಣೆಗಳಾದವು. ಪ್ರೀತಿ ವಾತ್ಸಲ್ಯದ ಜಾಗದಲ್ಲಿ ನಿಧಾನವಾಗಿ ವ್ಯವಹಾರಿಕತೆ ತಲೆ ಎತ್ತತೊಡಗಿತ್ತು. ಮೊದಲಿನ ಧಾರಾಳತೆ ಎಲ್ಲರಲ್ಲೂ ಕಣ್ಮರೆಯಾಗತೊಡಗಿತ್ತು. ಅತ್ತ ನನ್ನ ದೊಡ್ಡಪ್ಪನ ಮಗಳು ಗದುಗಿನಲ್ಲಿ ಗಂಡನ ಮನೆಯವರ ಕಾಟಕ್ಕೆ ಬೇಸತ್ತು ಬೇರೆ ಹೋಗಬೇಕಾಗಿ ಬಂದಾಗ ನನ್ನ ಜೊತೆಯಲ್ಲಿರಲಿ ಎಂದು ನನ್ನನ್ನು ಗದುಗಿಗೆ ಕರೆದುಕೊಂಡುಹೋದಳು. ಆಗೆಲ್ಲಾ ನಾನು ಗೌರಜ್ಜಿಯನ್ನು ತುಂಬಾ miss ಮಾಡಿಕೊಂಡಿದ್ದೇನೆ. ಆದರೂ ನಾನು ರಜೆಗೆ ಕಲಕೋಟಿಗೆಂದು ಬಂದಾಗ ಗೌರಜ್ಜಿಯ ಮತ್ತದೇ ತುಂಬು ಪ್ರೀತಿಯಲ್ಲಿ ಮುಳುಗುತ್ತಿದ್ದೆ. ಗೌರಜ್ಜಿ ದೊಡ್ಡಪ್ಪ ಸತ್ತ ನಂತರವೂ ಐದಾರು ವರುಷ ಕಲಕೋಟಿಯಲ್ಲಿ ಇದ್ದಳು. ನಂತರ ಅದೇಕೋ ಗೊತ್ತಿಲ್ಲ ಸಿದ್ಧಾಪೂರದಲ್ಲಿರುವ ತನ್ನ ಒಬ್ಬನೇ ಒಬ್ಬ ದೂರದ ಸಂಬಂಧಿಯ ಮೇಲೆ ಸೆಳೆತ ಹೆಚ್ಚಾಗಿ ಸಾಯುವ ಕಾಲಕ್ಕೆ ಅವನೇ ನನ್ನ ನೋಡಿಕೊಳ್ಳುತ್ತಾನೆಂದು ಶಾಶ್ವತವಾಗಿ ಸಿದ್ಧಾಪೂರಕ್ಕೆ ಹೋಗಿಬಿಟ್ಟಳು. ಆಗೆಲ್ಲಾ ನಾನು ಕಲಕೋಟಿಗೆ ರಜೆಗೆಂದು ಬಂದಾಗ ಅವಳಿಲ್ಲದ ಮನೆ ಬಿಕೋ ಎನಿಸುತ್ತಿತ್ತು. ಮನಸ್ಸು ಮಾಡಿದ್ದರೆ ದೊಡ್ಡಮ್ಮ ಅವಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳಬಹುದಿತ್ತು ಆದರೆ ಅದೇಕೋ ಅವರು ಮನಸ್ಸು ಮಾಡಲಿಲ್ಲ. ಹೋದವಳು ಹಿಂತಿರುಗಿ ಬರಲೇ ಇಲ್ಲ. ಮುಂದೆ ಎರಡು ವರುಷಕ್ಕೆ ಅಂದರೆ ನಾನು P.U.C. ಇರಬೇಕಾದರನಿಸುತ್ತೆ ಗೌರಜ್ಜಿ ಸತ್ತ ಸುದ್ದಿ ಬಂತು. ಅವಳ ಋಣವನ್ನು ಹೇಗಾದರು ಮಾಡಿ ತೀರಿಸಬೇಕೆಂದುಕೊಂಡಿದ್ದೆ. ತೀರಿಸಲಾರದ ನನ್ನ ಅಸಹಾಯಕತೆಗೆ ಒಬ್ಬನೆ ಕುಳಿತುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದೇನೆ.

  ಹೋದವರು ಹಿಂತಿರುಗಿ ಬರಲಾರರು. ಉಳಿಸಿಕೊಳ್ಳಬಹುದೆ ಉಳಿದವರನ್ನು? ಇವತ್ತಿನ ಬದಲಾದ ಜೀವನ ಪದ್ದತಿಯಲ್ಲಿ, ಬದಲಾದ ಮೌಲ್ಯಗಳಲ್ಲಿ ಇಂಥ ಅಜ್ಜಿಯರನ್ನು ನಮ್ಮ ಬಳಿ ಇಟ್ಟುಕೊಂಡು ನಮ್ಮ ಮಕ್ಕಳಿಗೆ ಅತ್ಯಮೂಲ್ಯ ಉಡುಗೊರೆಯನ್ನು ಕೊಡಲಾದೀತೆ? ಕೊನೆಪಕ್ಷ ಗೌರಜ್ಜಿಯಂಥವರಲ್ಲದಿದ್ದರೂ ನಮ್ಮ ತಾಯಂದಿರನ್ನು ನಮ್ಮ ಬಳಿ ಇಟ್ಟುಕೊಂಡು ಅಜ್ಜಿ ಮೊಮ್ಮಕ್ಕಳ ಅವಿನಾಭಾವ ಸಂಬಧವನ್ನು ಕಲ್ಪಿಸಿಕೊಡುವಷ್ಟು ವ್ಯವಧಾನ, ತಾಳ್ಮೆ, ಪ್ರೀತಿ, ಚೈತನ್ಯ ಇನ್ನೂ ನಮ್ಮಲ್ಲಿ ಉಳಿದಿದೆಯೆ?
  -ಉದಯ ಇಟಗಿ
  ಎರಡು ಪೀಳಿಗೆಗಳು....

 • ಬಿಸಿಲ ಹನಿ
 • ನನ್ನ ಅಜ್ಜಿಯರು ಸದೃಡವಾಗಿದ್ದರು................
  ಹೊಲದಲ್ಲಿ ಉಳುತ್ತಾ ಗೇಯುತ್ತಾ ಮೈ ಬಗ್ಗಿಸಿ ದುಡಿದರು
  ಉತ್ತುತ್ತಾ ಬಿತ್ತುತ್ತಾ ಹೊಲದ ತುಂಬೆಲ್ಲಾ ಓಡಾಡಿದರು
  ಮಣ್ಣ ಮೀಟಿ ಹೊನ್ನ ಬೆಳೆಯನ್ನು ಬೆಳೆದರು
  ಗಟ್ಟಿಮುಟ್ಟಾಗಿದ್ದರು ಖುಶಿಯಾಗಿದ್ದರು ಹಾಡ ಹಾಡಿದರು.

  ನನ್ನ ಅಜ್ಜಿಯರು ಮತ್ತೆ ಮತ್ತೆ ನೆನಪಾಗುತ್ತಾರೆ
  ತಮ್ಮ ಸಾಬೂನು, ಈರುಳ್ಳಿ, ಹಸಿಮಣ್ಣಿನ ಮೈ ವಾಸನೆಯೊಂದಿಗೆ
  ಆಗಾಗ ಕಾಡುತ್ತಾರೆ ಬೆರಗುಗೊಳಿಸುತ್ತಾರೆ
  ತಮ್ಮ ಕೈಗಳನ್ನು ಚಕಚಕನೆ ತಿರುಗಿಸುತ್ತಾ
  ಎಲ್ಲವನ್ನೂ ಹೊಡೆದುಹಾಕುವ ಪರಿಗೆ

  ನನ್ನ ಅಜ್ಜಿಯರು ಪ್ರೀತಿಯನ್ನು ಉಂಡರು ಉಣಿಸಿದರು
  ನಕ್ಕರು ನಗಿಸಿದರು ಗೆದ್ದರು ಗೆಲ್ಲಿಸಿದರು
  ಹಿತವಾಗಿ ಮಾತನಾಡುತ್ತಾ ತೋಳುಗಳಲ್ಲಿ ತುಂಬಿಕೊಂಡರು
  ನನ್ನ ಅಜ್ಜಿಯರು ಸದೃಡವಾಗಿದ್ದರು ಗಟ್ಟಿಮುಟ್ಟಾಗಿದ್ದರು.............
  ಆದರೆ..... ನಾನೇಕೆ ಅವರಂತಿಲ್ಲ?

  ಇಂಗ್ಲೀಷ ಮೂಲ: ಮಾರ್ಗರೇಟ್ ವಾಕರ್
  ಕನ್ನಡಕ್ಕೆ: ಉದಯ್ ಇಟಗಿ

  ಓ, ಪ್ರಿಯೆ

 • ಶನಿವಾರ, ಜನವರಿ 10, 2009
 • ಬಿಸಿಲ ಹನಿ
 • ಓ, ಪ್ರಿಯೆ
  ನನ್ನ ಬದುಕಿನ ಕತ್ತಲಲ್ಲಿ ಮಿನುಗುವ ನಕ್ಷತ್ರ ನೀನು
  ನನ್ನ ಬೆಳಗಿನ ಬಾಗಿಲು ಸರಿಸಿ ನಗುವ ಬೆಳ್ಳಿಚುಕ್ಕಿ ನೀನು
  ನನ್ನ ಸಾಗರದಲ್ಲಿನ ಭೋರ್ಗರೆವ ಅಲೆಗಳು ನೀನು
  ನನ್ನ ದಾರಿಗೆ ಬೆಳಕ ತೋರುವ ದಾರಿ ದೀಪ ನೀನು
  ನನ್ನ ಕಂಗಳಲ್ಲಿನ ಹೊಳೆಯುವ ಕಾಂತಿ ನೀನು
  ನನ್ನ ಮುಂಗುರುಳಲ್ಲಿ ಸರಿದಾಡುವ ತಂಗಾಳಿ ನೀನು
  ನನ್ನ ಹೃದಯದ ಏರಿಳಿತಗಳ ಬಡಿತ ನೀನು
  ನನ್ನ ಜೀವದ ಜೀವವಾಗಿ ಇರುವ ಜೀವ ನೀನು.

  ಇಂಗ್ಲೀಷ ಮೂಲ: ಆಂಡಿ ಹ್ಯೂಸ್
  ಕನ್ನಡ ರೂಪಾಂತರ: ಉದಯ ಇಟಗಿ

  ಬತ್ತದ ತೊರೆ

 • ಬುಧವಾರ, ಜನವರಿ 07, 2009
 • ಬಿಸಿಲ ಹನಿ


 • ನಿನ್ನೆ ಬೆಳಿಗ್ಗೆ ಪಾರ್ವತಜ್ಜಿ ಸತ್ತ ಸುದ್ದಿ ಬಂತು. ಮೊನ್ನೆ ರಾತ್ರಿ ೯ ರ ನಂತರ ತೀರಿಕೊಂಡಳಂತೆ. ನನಗೆ ನಮ್ಮ ಮನೆಯ ಒಂದು ತಲೆಮಾರು ಮುಕ್ತಾಯವಾದೆಂತೆನಿಸಿತು. ದೂರದ ಲಿಬಿಯಾದಿಂದ ಅವಳ ಮಣ್ಣಿಗೆ ಹೋಗಲಾಗದ ಅಸಹಾಯಕತೆ ಮತ್ತು ಚಡಪಡಿಕೆಯೊಂದಿಗೆ ಈ ಲೇಖನ ಬರೆಯುತ್ತಿದ್ದೇನೆ. ಇದು ನಾನು ಆಕೆಗೆ ಸಲ್ಲಿಸುವ ಶ್ರದ್ದಾಂಜಲಿಯೂ ಹೌದು.

  ಪಾರ್ವತಜ್ಜಿ ಬಗ್ಗೆ ಬರೆಯುವದಾದರೂ ಏನನ್ನು? ಅಕ್ಷರದಲ್ಲಿ ಅವಳನ್ನು ಹಿಡಿದಿಡಲು ಸಾಧ್ಯವೇ? ಹಾಗೆ ಒಂದು ವೇಳೆ ಹಿಡಿದಿಟ್ಟರೂ ಅವಳ ಪರಿಪಕ್ವತೆ ಪೂರ್ಣವಾಗಿ ಸಿಗಲು ಸಾಧ್ಯವೇ? ಸಿಕ್ಕರೂ ನಾನು ಎಲ್ಲವನ್ನೂ ತುಂಬಲು ಯಶಸ್ವಿಯಾಗಬಲ್ಲೆನೆ? ನನಗೆ ಗೊತ್ತಿಲ್ಲ.

  ಈ ಎಲ್ಲ ಪ್ರಶ್ನೆಗಳೊಂದಿಗೆ ನಾನು ಅಜ್ಜಿಯೊಂದಿಗೆ ನನ್ನ ನೆನಪಿನಾಳಕ್ಕೆ ಇಳಿಯುತ್ತಾ ಹೋಗುತ್ತೇನೆ. ಅಜ್ಜಿ ನಿಧಾನಕ್ಕೆ ನನ್ನ ಕೈಗೆ ಸಿಗುತ್ತಾ ಹೋಗುತ್ತಾಳೆ. ಸಿಕ್ಕಷ್ಟನ್ನೂ ಹೆಕ್ಕಿ ಹೆಕ್ಕಿ ಹೊರತೆಗೆಯುತ್ತಿದ್ದಂತೆ ಅಜ್ಜಿಯೊಂದಿಗೆ ಮೂವತ್ತು ವರ್ಷಗಳಷ್ಟು ಹಳೆಯದಾದ ನನ್ನ ಬಾಲ್ಯಕ್ಕೆ ಹಿಂತಿರುಗುತ್ತೇನೆ. ಅಲ್ಲಿಂದ ಇಲ್ಲಿಯವರೆಗೆ ಅಜ್ಜಿ ನನಗೆ ಕಂಡಿದ್ದು ಹೇಗೆ ಎಂಬುದನ್ನು ದಾಖಲಿಸುತ್ತಾ ಹೋಗುತ್ತೇನೆ.

  ಈಕೆ ನನ್ನ ತಾಯಿಯ ತಾಯಿ. ನಮ್ಮ ಬಂಧು ಬಳಗದಲ್ಲೆಲ್ಲಾ ಹಿರಿಯ ತಲೆ. ಬದುಕಿನಲ್ಲಿ ನಲಿವಿಗಿಂತ ನೋವುಗಳನ್ನೇ ಉಂಡರೂ ಅದೇ ಬದುಕನ್ನು ಅಗಾಧವಾಗಿ ಪ್ರೀತಿಸುತ್ತಾ, ಪ್ರೀತಿಸುವದನ್ನು ಕಲಿಸುತ್ತಾ, ಎಲ್ಲವನ್ನೂ ಗೆಲ್ಲುತ್ತಾ, ಎಲ್ಲರನ್ನೂ ಗೆಲ್ಲಿಸುತ್ತಾ ನಮ್ಮೆಲ್ಲರ ಪ್ರೀತಿ ಪಾತ್ರಳಾಗಿ ೯೦ ವರ್ಷಗಳ ಸಾರ್ಥಕ ಜೀವನ ನಡೆಸಿ ಬತ್ತಲಾರದ ತುಂಬು ತೊರೆಯ ಪ್ರೀತಿಯಲ್ಲಿ ನಮ್ಮನ್ನೆಲ್ಲಾ ಅದ್ದಿ ತೆಗೆದವಳು.

  ಅಜ್ಜಿಯ ನೆನಪಾದಾಗಲೆಲ್ಲ ಮೊಟ್ಟಮೊದಲಿಗೆ ನನ್ನನ್ನು ಆವರಿಸಿಕೊಳ್ಳುವದು ಅವಳ ಶಾಂತ, ಸೌಮ್ಯ, ನಗುಮುಖ ಹಾಗೂ ನಗು ನಗುತ್ತಲೇ ತನ್ನ ನಿಟ್ಟುಸಿರುಗಳನ್ನು ಗೆದ್ದ ರೀತಿ. ಇಂಥ ಅಜ್ಜಿಯೊಂದಿಗೆ ನನ್ನ ನೆನಪಿನ ಸುರಳಿ ಬಿಚ್ಚಿಕೊಳ್ಳುವದೇ ನಾನು ಬಹುಶಃ ೩-೪ ವರ್ಷದವನಾಗಿದ್ದಾಗಿನಿಂದ.

  ನಮ್ಮದು ದೊಡ್ದ ಅವಿಭಕ್ತ ಕುಟುಂಬವಾಗಿದ್ದರಿಂದ ನನ್ನ ಬಾಲ್ಯವೆಲ್ಲ ದೊಡ್ಡಮ್ಮ ದೊಡ್ಡಪ್ಪರ ಆರೈಕೆಯಲ್ಲಿ ಕಲಕೋಟಿಯಲ್ಲಿ ಕಳೆಯಿತು. ಆಗೆಲ್ಲಾ ನನ್ನ ದೊಡ್ಡಪ್ಪ ಇನ್ನೊಬ್ಬ ದೊಡ್ಡಪ್ಪನ ಮಕ್ಕಳನ್ನು ಅಳವಂಡಿಯಿಂದ ದಸರಾ ಮತ್ತು ಬೇಸಿಗೆ ರಜೆಗೆ ಕಲಕೋಟಿಗೆ ಕರೆದುಕೊಂಡು ಬರುತ್ತಿದ್ದರು. ನಾವೆಲ್ಲಾ ಒಟ್ಟಿಗೆ ಇಲ್ಲಿ ಸ್ವಲ್ಪ ಕಾಲ ಕಳೆದು ನಂತರ ಅಜ್ಜಿ ಊರಾದ ಸುಲ್ತಾನಪೂರಕ್ಕೆ ಹೋಗುತ್ತಿದ್ದೆವು.

  ನಾವು ಒಟ್ಟು ಮೊಮ್ಮಕ್ಕಳು ೪-೫ ಜನ ಇರುತ್ತಿದ್ದೆವು. ಈ ಎಲ್ಲ ಮೊಮ್ಮಕ್ಕಳನ್ನು ತನ್ನ ಒಂಬತ್ತು ಜನ ಮಕ್ಕಳೊಂದಿಗೆ ಸಂಭಾಳಿಸುತ್ತಿದ್ದ ರೀತಿಯೇ ನನಗೆ ಆಶ್ಚರ್ಯ ತರಿಸುತ್ತಿತ್ತು. ಆಗಿನ ಕಾಲದವರಿಗೆ ಇದನ್ನೆಲ್ಲ ಮಾಡಲು ಅಷ್ಟೊಂದು ಕಷ್ಟವೇನೂ ಇರಲಿಲ್ಲ ಎಂದು ನಾವು ಆಶ್ಚರ್ಯಪಡದೇ ಇರಬಹುದು. ಆದರೆ ಅಷ್ಟೂ ಜನ ಮಕ್ಕಳಿಗೆ ಅಡಿಗೆ ಮಾಡುತ್ತಾ, ಹೊಲಕ್ಕೆ ಹೋಗುವವರಿಗೆ ಬುತ್ತಿ ಕಟ್ಟುತ್ತಾ, ಮನೆಗೆ ಬರುವ ಹೋಗುವವರನ್ನು ನೋಡಿಕೊಳ್ಳುತ್ತಾ, ಮೊಮ್ಮಕ್ಕಳಿಗೆ ಏನೂ ಕೊರತೆಯಾಗದಂತೆ ಅವರು ಬೇಡಿ ಬೇಡಿದ್ದನ್ನು ಮಾಡಿಕೊಡುತ್ತಾ ನಗುನಗುತ್ತಾ ಎಲ್ಲವನ್ನು ನಿಭಾಯಿಸುತ್ತಿದ್ದ ರೀತಿಗೆ ನಿಬ್ಬೆರಗಾಗಿದ್ದೇನೆ. ಲಕ್ಷ್ಮೇಶ್ವರದಿಂದ ಪ್ರತಿ ಶುಕ್ರವಾರ ಸಂತೆಯಿಂದ ಏನಾದರು ತಿನ್ನಲು ತಂದಾಗ ನಮಗೆಲ್ಲಾ ಹಬ್ಬವೋ ಹಬ್ಬ. ಆಗ ಅಜ್ಜಿ ಮೊದಲೇ ಇದು ಇಂತಿಂಥವರ ಪಾಲೆಂದು ಸಮನಾದ ಪಾಲು ಮಾಡಿ ಎಲ್ಲರಿಗೂ ಸೇರುವಂತೆ ಮಾಡುತ್ತಿದ್ದಳು. ಮನೆಯ ಹಿತ್ತಲಿನ ಹುಣಸೆ ಮರದಿಂದ ನಾವು ಹುಣಸೆಕಾಯಿಗಳನ್ನು ಕಿತ್ತುಕೊಟ್ಟರೆ ಅದನ್ನು ಕುಟ್ಟಿ ರುಚಿರುಚಿಯಾಗಿ ಚಿಗಳಿ ಮಾಡಿಕೊಡುತ್ತಿದ್ದಳು. ಅಜ್ಜಿಯದು ರುಚಿ ರುಚಿಯಾದ ಅಡಿಗೆ ಮಾಡುವದರಲ್ಲೂ ಎತ್ತಿದ ಕೈ. ಹಾಗಾಗಿ ನನ್ನ ದೊಡ್ಡಪ್ಪ ಅಳವಂಡಿಯಿಂದ ಬರುವಾಗಲೆಲ್ಲ ಲಕ್ಷ್ಮೇಶ್ವರದಿಂದ ಸಾಕಷ್ಟು ತರಕಾರಿಗಳನ್ನು ತಂದು ಅಜ್ಜಿ ಕೈಯಿಂದ ಅಡಿಗೆ ಮಾಡಿಸಿಕೊಂಡು ಊಟ ಮಾಡುತ್ತಿದ್ದರು.

  ಇದೆಲ್ಲದರ ನಡುವೆ ದನಕರುಗಳನ್ನು ಹಿಂಡುತ್ತಾ, ಹಿಂಡಿಯಾದ ಮೇಲೆ ಹಾಲು ಮಜ್ಜಿಗೆಯನ್ನು ಬೇರೆಯವರಿಗೆ ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ಧಾರಾಳವಾಗಿ ಕೊಡುತ್ತಿದ್ದಳು. ಅಜ್ಜಿಯದು ತುಂಬಾ ದೊಡ್ಡ ಗುಣ ಮತ್ತು ಬೇರೆಯವರದಕೆ ಯಾವತ್ತೂ ಆಸೆ ಪಟ್ಟವಳಲ್ಲ. ಅಜ್ಜಿಯ ತವರು ಮನೆಯಲ್ಲಿ ಆಸ್ತಿ ಪಾಲಾಗುವಾಗ ಅವಳ ದೊಡ್ಡ ತಮ್ಮ "ನಿನಗೇನು ಬೇಕೋ ಕೇಳು, ಕೊಡುತ್ತೇನೆ" ಎಂದು ಕೇಳಿದಾಗ "ನನಗೇನೂ ಬೇಡ.ನನ್ನ ಸಣ್ಣ ಮಗಳ್ನ ದಾರಿಗೆ ಹಚ್ಚೋದ ಅಯತಿ.ಅದೊಂದು ಹಚ್ಚಿಕೊಟ್ಟ ಬಿಡು ಸಾಕು" ಎಂದು ಹೇಳಿ ಸುಮ್ಮನಾದಳು. ಅದರಂತೆ ಮುಂದೆ ಅವಳ ದೊಡ್ಡ ತಮ್ಮ ನಡೆದುಕೊಂಡಿದ್ದಿದೆ. ಅವಳ ದೊಡ್ಡ ತಮ್ಮ ಜಿಲ್ಲಾ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದರೂ ಅವರಿಂದ ಏನನ್ನೂ ಅಪೇಕ್ಷೆ ಪಟ್ಟವಳಲ್ಲ. ಮುಂದೆ ಅವಳ ಮಕ್ಕಳು ಮನೆಕಟ್ಟಿಸುವಾಗ ಮತ್ತು ಬರಗಾಲದ ಸಂದರ್ಭದಲ್ಲಿ ಅವರಿಂದ ಸಹಾಯ ತೆಗೆದುಕೊಂಡಿದ್ದು ಇದೆ. ಇಂಥ ಅಜ್ಜಿ ಸ್ವಂತ ತಮ್ಮ ದಾಯಾದಿ ತಮ್ಮ ಎಂದು ಲೆಕ್ಕಿಸದೆ ನನ್ನ ದೊಡ್ದಪ್ಪ(ಅಪ್ಪನ ಅಣ್ಣ)ನನ್ನು ಅವನ ಮದುವೆಯಾಗುವವರಿಗೂ ತನ್ನ ಹತ್ತಿರ ಇಟ್ಟುಕೊಂಡು ಸಾಕಿದ್ದೂ ಇದೆ. ಆಗ ನನ್ನ ದೊಡ್ಡಪ್ಪ ಹೊಲದ ಕೆಲಸದ ಜೊತೆಗೆ ಮನೆಯ ಕೆಲಸದಲ್ಲೂ ಸಹಾಯ ಮಾಡುತ್ತಿದ್ದರಂತೆ.ಈ ದೊಡ್ಡಪ್ಪ ಅವಳಿಗೆ ಒಂಥರಾ ಮಾರಲ್ ಸಪೋರ್ಟ್ ಇದ್ದ ಹಾಗೆ. ಯಾವಾಗಲೂ ಅವನನ್ನು ಕೇಳದೆ ಅಜ್ಜಿಯ ಮನೆಯವರು ಏನನ್ನೂ ಮಾಡುತ್ತಿರಲಿಲ್ಲ.

  ಮನೆಯ ಹಿರಿಯರಿಂದ ನಾನು ಕೇಳಿ ತಿಳಿದಂತೆ ಅಜ್ಜಿಗೆ ಪ್ರಾಯ ತುಂಬಿದ ತಕ್ಷಣ ಅವಳ ಸೋದರ ಮಾವನೊಂದಿಗೆ ಮದುವೆ ಮಾಡಿಕೊಟ್ಟರು. ಆತ ಕನ್ನಡ ಸಾಲಿ ಮಾಸ್ತರಾಗಿದ್ದವರು. ಅಜ್ಜನ ಸಂಬಳ ಮತ್ತು ಆಗೆಲ್ಲ ಕಾಲಕಾಲಕ್ಕೆ ಮಳೆಯಾಗಿ ಹೊಲದಿಂದ ಒಳ್ಳೆ ಆದಾಯವೂ ಬರುತ್ತಿದ್ದುದರಿಂದ ಏನೂ ಸಮಸ್ಯೆಯಿರಲಿಲ್ಲ. ಒಮ್ಮೆ ಅಜ್ಜ ಹತ್ತಿ ಗಿರಣಿಯಲ್ಲಿ ಹತ್ತಿ ತುಂಬಲು ಹೋಗಿ ಅವನ ಬಲಗೈ ಗಿರಣಿಯಲ್ಲಿ ಸಿಕ್ಕು ಅದನ್ನು ಸಂಪೂರ್ಣವಾಗಿ ಕಳೆದು ಕೊಳ್ಳಬೇಕಾಯಿತು. ಬಲಗೈ ಹೋಗಿದ್ದರಿಂದ ಇನ್ನು ಮಕ್ಕಳಿಗೆ ಬರೆದು ಪಾಠ ಮಾಡುವದಾದರು ಹೇಗೆ? ಹೀಗಾಗಿ ಅಜ್ಜ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಹೋದಾಗ ಅವನ ಸಹೋದ್ಯೋಗಿಗಳು ನೀವು ಸುಮ್ಮನೆ ಬಂದು ಕುಳಿತುಕೊಂಡು ಹೋಗಿ ಸಾಕು ನಾವು ಉಳಿದಿದ್ದನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದರೂ ಕೇಳದೆ ವೃತ್ತಿ ಧರ್ಮಕ್ಕೆ ಅಪಚಾರ ಮಾಡಲಾರೆ ಎಂದು ರಾಜಿನಾಮೆಯನ್ನು ನೀಡಿ ಒಕ್ಕಲುತನದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ. ಬರುವ ಪಿಂಚಣಿಯನ್ನೂ ಬೇಡೆಂದು ನಿಲ್ಲಿಸಿಬಿಟ್ಟ. ಮುಂದೆ ಸ್ವಲ್ಪ ದಿನಕ್ಕೆ ಅಜ್ಜ ತೀರಿಕೊಂಡ ಮೇಲೆ ಇಡಿ ಸಂಸಾರದ ಭಾರವೆಲ್ಲ ಅಜ್ಜಿ ತಲೆ ಮೇಲೆ ಬಿತ್ತು. ಅಜ್ಜ ಮೊದಲೇ ಪಿಂಚಣಿ ಬೇಡವೆಂದು ಬರೆದುಕೊಟ್ಟಿದ್ದರಿಂದ ಹೊಲದಿಂದ ಬರುವ ಆದಾಯದಲ್ಲಿಯೇ ಅಷ್ಟೂ ಮಕ್ಕಳನ್ನು ಕಟ್ಟಿಕೊಂಡು ಜೊತೆಗೆ ನಾದಿನಿ,ನಾದಿನಿಯರ ಮಕ್ಕಳನ್ನೂ ನೋಡಿಕೊಳ್ಳುತ್ತಾ ಎಲ್ಲವನ್ನೂ ಸರಿದೂಗಿಸಿದಳು.

  ಅಜ್ಜಿ ವಯಸ್ಸಿದ್ದ ಕಾಲದಲ್ಲಿ ಬಾವಿಯಿಂದ ಸೇದಿ ಎರಡೆರಡು ಬಿಂದಿಗೆ ನೀರನ್ನು ಒಟ್ಟಿಗೆ ತರುತ್ತಿದ್ದಳು. ಅವಳ ಹಿರಿಯ ಮಗ ಹುಬ್ಬಳ್ಳಿಯಲ್ಲಿ ಓದುತ್ತಿದ್ದ ಕಾಲದಲ್ಲಿ ರಾತ್ರಿ ಮೂರು ಗಂಟೆಗೆ ಎದ್ದು ಅಡಿಗೆ ಮಾಡಿ ನಸುಕಿನಲ್ಲಿ ಹುಬ್ಬಳ್ಳಿಗೆ ಹೋಗುತ್ತಿದ್ದ ರೈಲಲ್ಲಿ ಬುತ್ತಿ ಇಟ್ಟು ಕಳಿಸಿತ್ತಿದ್ದಳು. ಮುಂದೆ ಮಕ್ಕಳ ಮದುವೆಯಾಗಿ ಸೊಸೆಯಂದಿರು ಬಂದ ಮೇಲೂ ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಏನಾದರೊಂದು ಮಾಡುತ್ತಿದ್ದಳು. ಅಜ್ಜಿಯದು ಸುಮ್ಮನೆ ಕುಳಿತು ತಿನ್ನಬಾರದು ಎನ್ನುವ ಛಲ. ಇಂಥ ಅಜ್ಜಿಗೆ ಬರು ಬರುತ್ತಾ ಸೊಂಟ ಬಗ್ಗಿ ಈಗ್ಗೆ ಹತ್ತು ವರ್ಷಗಳಿಂದ ಸಂಪೂರ್ಣವಾಗಿ ಬಗ್ಗಿಕೊಂಡು ನಡೆಯುತ್ತಿದ್ದಳು. ಆದರೂ ಒಬ್ಬರ ಕೈಯಿಂದ ಚಾಕರಿ ಮಾಡಿಸಿಕೊಂಡವಳಲ್ಲ. ಇಂಥದರಲ್ಲೂ ಮನೆಗೆಲಸದಲ್ಲಿ ಸಹಾಯ ಮಾಡುತ್ತಿದ್ದಳು. ತೀರ ಸಾಯುವ ಮುನ್ನ ಒಂದು ತಿಂಗಳ ಕಾಲ ನೆಲಕಟ್ಟಿದಳು. ನಾನು ಅದನ್ನೆಲ್ಲ ನೋಡಲು ಅಲ್ಲಿರಲಿಲ್ಲ. ಬಹುಶಃ ಅಜ್ಜಿ ತುಂಬಾ ಮುಜುಗರ ಪಟ್ಟಿಕೊಂಡಿರಬೇಕು. ಅದಕೆಂದೇ ಸಾವಿನ ಹಾಸಿಗೆಯಿಂದ ಬೇಗನೆ ಎದ್ದು ಹೋಗಿಬಿಟ್ಟಳು.

  ನಮ್ಮ ಮನೆಯ ಒಂದು ದೊಡ್ಡ ಕೊಂಡಿ ಕಳಚಿ ಬಿದ್ದಿದೆ. ನಾನು ಸುಮ್ಮನೆ ಕುಳಿತು ಯೋಚಿಸುತ್ತೇನೆ. ಅಜ್ಜಿ ಹಿಂದಿನ ತಲೆಮಾರಿನವಳು. ಅವಳ ಜೀವನ ಪ್ರೀತಿ, ಉತ್ಸಾಹ, ಸಂಬಂಧಗಳ ಬದ್ಧತೆಯನ್ನು ನನ್ನ ಮುಂದಿನ ತಲೆಮಾರಾದ ಮಗಳು ಭೂಮಿಗೆ ವರ್ಗಾಯಿಸಬಲ್ಲೆನೆ? ವರ್ಗಾಯಿಸುವಷ್ಟು ಸಶಕ್ತನಾಗಿದ್ದೇನೆಯೆ? ಆ ಚೈತನ್ಯವಿದೆಯೆ? ಯಶಸ್ವಿಯಾಗಬಲ್ಲೆನೆ? ಈ ಎಲ್ಲ ಪ್ರಶ್ನೆಗಳನ್ನು ನನ್ನಷ್ಟಕ್ಕೆ ನಾನೇ ಕೇಳಿಕೊಳ್ಳುತ್ತೇನೆ. ಹೃದಯ ನಿಡುಸುಯ್ಯುತ್ತದೆ. ಮತ್ತೆ ಅಜ್ಜಿ ತನ್ನ ನಗು ಮುಖವನ್ನು ಹೊತ್ತು ನನ್ನ ಕಣ್ಮುಂದೆ ಸುಳಿಯುತ್ತಾಳೆ. ನಗು ನಗುತ್ತಲೇ ಎಲ್ಲವನ್ನೂ, ಎಲ್ಲರನ್ನೂ ಗೆದ್ದು ಅವಳು ಬದುಕಿದ ರೀತಿ ನೆನಪಾಗುತ್ತದೆ. ಮನಸ್ಸು ಮತ್ತೆ ಅಜ್ಜಿಯ ಹಾಗೆ ಬತ್ತದ ತೊರೆಯಂತೆ ಕೆಲಸ ಮಾಡಲು ಸಜ್ಜಾಗುತ್ತದೆ.

  -ಉದಯ ಇಟಗಿ

  ನಾನು ಆ ಹೆಂಗಸಲ್ಲ.......

 • ಸೋಮವಾರ, ಜನವರಿ 05, 2009
 • ಬಿಸಿಲ ಹನಿ
 • ನಾನು ಆ ಹೆಂಗಸಲ್ಲ-
  ಕಾಲು ಚೀಲ ಮತ್ತು ಬೂಟುಗಳನ್ನು ಮಾರುವವಳು
  ನೆನಪಿರಲಿ ನಾನು ಕಲ್ಲು ಕೋಣೆಯೊಳಗೆ
  ನಿನ್ನಿಂದ ಬಂಧಿಸಿಟ್ಟವಳು.
  ನೀನು ಮಾತ್ರ ಸುಳಿದಾಡಿದೆ ಗಾಳಿಯಂತೆ ಸ್ವತಂತ್ರವಾಗಿ
  ಆದರೆ ನಿನಗೆ ಗೊತ್ತಿಲ್ಲ
  ನನ್ನನ್ನು ಬಂಧಿಸಿಟ್ಟರೂ
  ನನ್ನ ಸ್ವರವನ್ನು ಒತ್ತಿಡಲು
  ಆ ನಿನ್ನ ಕಲ್ಲು ಕೋಣೆಗೆ ಸಾಧ್ಯವಿಲ್ಲವೆಂದು.

  ನಾನು ನಿನ್ನಿಂದ ತುಳಿಯಲ್ಪಟ್ಟವಳು
  ಸಂಪ್ರದಾಯದ ಭಾರದಡಿಯಲ್ಲಿ
  ಆದರೂ ನುಸುಳಿ ಹೊರಬಂದೆ ಬೆಳಕಿನಂತೆ.
  ನಿನಗೆ ಗೊತ್ತಿಲ್ಲ ಬೆಳಕನ್ನು
  ಕತ್ತಲಡಿ ಬಚ್ಚಿಡಲಾಗುವದಿಲ್ಲವೆಂದು.

  ನನ್ನ ಮಡಿಲಲ್ಲಿನ ಹೂಗಳನ್ನು ತೆಗೆದು
  ಮುಳ್ಳುಗಳನ್ನು ಸುರಿದೆ
  ಆದರೆ ನಿನಗೆ ಗೊತ್ತಿಲ್ಲ
  ಮುಳ್ಳು ಸರಪಳಿಗೆ ಸುಗಂಧವನ್ನು ಹತ್ತಿಕ್ಕಲು ಸಾಧ್ಯವಿಲ್ಲವೆಂದು.

  ನಾನು ಆ ಹೆಂಗಸು
  ಪಾವಿತ್ರತೆಯ ಹೆಸರಿನಲ್ಲಿ
  ನಿನ್ನಿಂದ ಮಾರಾಟಕ್ಕಿಟ್ಟವಳು
  ಆದರೆ ನಿನಗೆ ಗೊತ್ತಿಲ್ಲ ಮುಳಗದಂತೆಯೂ
  ನಾನು ನೀರಿನ ಮೇಲೆ ನಡೆಯಬಲ್ಲವಳೆಂದು.

  ನಾನು ಆ ಹೆಂಗಸು
  ನಿನ್ನ ಹೊರೆಯನ್ನು ಇಳಿಸಿಕೊಳ್ಳಲು
  ನನ್ನನ್ನು ಮದುವೆ ಮಾಡಿಕೊಟ್ಟೆ
  ಆದರೆ ನಿನಗೆ ಗೊತ್ತಿಲ್ಲ
  ಖೈದಿ ಮನಸ್ಸಿನವರೇ ಇರುವ ದೇಶ
  ಸ್ವತಂತ್ರವಾಗಿರಲು ಸಾಧ್ಯವಿಲ್ಲವೆಂದು.

  ನಾನೊಂದು ಸರಕು
  ನಿನ್ನಿಂದ ವ್ಯಾಪಾರಕ್ಕಿಟ್ಟವಳು
  ನನ್ನ ಪಾತಿವೃತ್ಯ, ತಾಯ್ತನ, ನಿಷ್ಟೆ
  ಎಲ್ಲವನ್ನೂ ನೀನು ಮಾರಿದೆ
  ಆದರೆ ನಿನಗೆ ಗೊತ್ತಿಲ್ಲ
  ಇದೀಗ ಹೂವಿನಂತೆ ಅರಳುವ ಸಮಯ ನನ್ನದೆಂದು.

  ನೆನಪಿರಲಿ
  ನಾನೀಗ ಆ ಹೆಂಗಸಲ್ಲವೇ ಅಲ್ಲ
  ಭಿತ್ತಿ ಪತ್ರದಲ್ಲಿ ಅರೆ ಬೆತ್ತಲೆಯಾಗಿ
  ಕಾಲುಚೀಲ ಮತ್ತು ಬೂಟುಗಳನ್ನು ಮಾರುತ್ತಿರುವವಳು
  ಊಹೂಂ, ನಾನು ಅವಳಲ್ಲವೇ ಅಲ್ಲ!

  ಉರ್ದು ಮೂಲ: ಕಿಶ್ವರ್ ನಾಹಿದ್
  ಕನ್ನಡಕ್ಕೆ: ಉದಯ ಇಟಗಿ  ಕರುಣೆ

 • ಬಿಸಿಲ ಹನಿ
 • ಕಾಲ ಕೆಳಗೆ ತಣ್ಣನೆಯ ಭೂಮಿ
  ಮೇಲೆ ಉರಿವ ಚಪ್ಪರ
  ನಾಲ್ಕು ಗೋಡೆಗಳು
  ನಾಲ್ಕೂ ಕಡೆಯಿಂದ ನನ್ನನ್ನಾವರಿಸಿವೆ.
  ಈ ಜೀವನ ಪರ್ಯಂತ ಶಿಕ್ಷೆಗೆ
  ಕೊನೆ ಎಂದು?
  ಗೊತ್ತಿಲ್ಲ.
  ನನ್ನ ದಣಿದ ಮನಸ್ಸಿಗೆ
  ಭಾರವಾದ ಕಣ್ಣುಗಳಿಗೆ
  ಹಗಲ್ಯಾವುದು ರಾತ್ರಿ ಯಾವುದು
  ಎಂದು ಗೊತ್ತಾಗುವುದಿಲ್ಲ.
  ೧೨x೧೨ ಕೋಣೆಯೊಳಗೆ ಕುಳಿತುಕೊಂಡೇ
  ದೂರ ದೂರ ಸಾಗುವ
  ಸಾವಿರ ಮೈಲಿಗಳನ್ನು ಎಣಿಸುತ್ತೇನೆ.
  ಎರಡಡಿ ಅಂಗುಲದ ಕಿಟಕಿಗೆ
  ಇಡಿ ಆಕಾಶ ತೋರಿಸೆಂದು ಬೇಡುತ್ತೇನೆ
  ಚಪ್ಪರದ ಕಿಂಡಿಯೊಳಗಿಂದ
  ನೆಳಲು-ಬೆಳಕಿನಾಟವನ್ನು ನೋಡುತ್ತೇನೆ.
  ಅಯ್ಯೋ! ಇದೆಂಥಾ ನಿರ್ದೆಯೆಯುಳ್ಳ ಮನೆ
  ಹೃದಯ ಭಾರವಾಗುತ್ತದೆ
  ನಾನು ಸುಮ್ಮನೆ ಬಿಕ್ಕತೊಡಗುತ್ತೇನೆ
  ನಿಶ್ಯಬ್ದದಲ್ಲಿ.

  ಮೂಲ ಮರಾಠಿ: ಇಂದಿರಾ ಸಂತ
  ಇಂಗ್ಲೀಷಗೆ: ವಿಲಾಸ ಸಾರಂಗ
  ಕನ್ನಡಕ್ಕೆ: ಉದಯ ಇಟಗಿ

  ಹೋಗು, ಬಾಗಿಲನ್ನು ತೆರೆ

 • ಭಾನುವಾರ, ಜನವರಿ 04, 2009
 • ಬಿಸಿಲ ಹನಿ
 • ಹೋಗು, ಬಾಗಿಲನ್ನು ತೆರೆ

  ಹೊರಗೆ ಕಾಣಬಹುದು

  ಮರ ಅಥವಾ ಕಾಡನ್ನು,

  ಹೂದೋಟ ಅಥವಾ ಮಾಯಾನಗರಿಯನ್ನು.


  ಹೋಗು, ಬಾಗಿಲನ್ನು ತೆರೆ

  ಅಲ್ಲಿ ನೋಡಬಹುದು

  ನಾಯಿ ಏನನ್ನೋ ಹುಡುಕುತ್ತಿರುವದನ್ನು,

  ಯಾರದೋ ಒಂದು ಸುಂದರ ಮುಖವನ್ನು,

  ಅಥವಾ ಒಂದು ಕುಡಿ ನೋಟವನ್ನು.


  ಹೋಗು, ಬಾಗಿಲನ್ನು ತೆರೆ

  ಅಲ್ಲಿ ಕಾಣಬಹುದು

  ಹೊಳೆಯುವ ನಕ್ಷತ್ರಗಳನ್ನು,

  ಮಂಜು ಕರಗಿ ನೀರಾಗುವದನ್ನು,

  ಅಥವಾ ಕೇಳಬಹುದು ಗಾಳಿ ಸುಂಯ್ಯಗುಡುವದನ್ನು.


  ಏನೂ ಇರದಿದ್ದರೂ ಪರವಾಗಿಲ್ಲ

  ಒಮ್ಮೆ ಸುಮ್ಮನೆ ಹೋಗಿ

  ಬಾಗಿಲನ್ನು ತೆರೆ

  ಕೊನೆಗೆ ಆಸ್ವಾದಿಸಬಹುದು

  ತಣ್ಣಗೆ ಬೀಸುವ ತಂಗಾಳಿಯನ್ನಾದರೂ!


  ಇಂಗ್ಲೀಷ ಮೂಲ: ಮಿರೊಸ್ಲಾವ ಹೋಲಬ್

  ಕನ್ನಡ ರೂಪಾಂತರ: ಉದಯ ಇಟಗಿ

  ಏನ ಹೇಳಲಿ ನಾನು?

 • ಬಿಸಿಲ ಹನಿ
 • ಏನ ಹೇಳಲಿ ನಾನು
  ಪಕ್ಕದ ಮನೆಯವರು
  ನಮ್ಮನ್ನು ಚಹಾಕ್ಕೆ ಕರೆಯಲು ಬಂದರೆ?
  ಅವರಿಗೆ ಗೊತ್ತಿಲ್ಲ ನನ್ನೊಂದಿಗೆ ನಿನಿಲ್ಲವೆಂದು.
  ಏನ ಹೇಳಲಿ ನಾನು?

  ಏನ ಹೇಳಲಿ ನಾನು
  ಫೋನು ರಿಂಗಣಿಸಿ ಯಾರಾದರು
  ನಿನ್ನ ಕೇಳಿದರೆ?
  ಅವರಿಗೆ ಗೊತ್ತಿಲ್ಲ ನಾನೂ ಸಹ ನಿನ್ನ ಕೇಳುತ್ತಿದ್ದೇನೆಂದು.
  ಏನ ಹೇಳಲಿ ನಾನು?

  ಏನ ಹೇಳಲಿ ನಾನು
  ಯಾರಾದರು ನನ್ನ
  ಸುರಿಯುವ ಕಣ್ಣೀರನ್ನು ನೋಡಿದರೆ?
  ಹೇಗೆ ಹೇಳಲಿ ಅವರಿಗೆ ನೀನಿಲ್ಲದೆ
  ನನ್ನ ಹೃದಯ ನಿಡುಸುಯ್ಯುತ್ತಿದೆ ಎಂದು?

  ಏನ ಹೇಳಲಿ ನಾನು
  ಯಾರಾದರು ನಿನ್ನ ಕೇಳಿದರೆ?
  ಹೇಳಬಲ್ಲೆ ವಾರದ ಮಟ್ಟಿಗೆ ಹೊರಗೆ ಹೋಗಿದ್ದೀಯ ಎಂದು.
  ಆದರೆ ವಾರ ಕಳೆದ ಮೇಲೆ
  ಏನ ಹೇಳಲಿ ನಾನು?

  ಇಂಗ್ಲೀಷ ಮೂಲ: ಪೀಟರ್ ಟಿಂಟುರಿನ್
  ಕನ್ನಡ ರೂಪಾಂತರ: ಉದಯ ಇಟಗಿ


  ಕಾಡು ಮತ್ತು ನದಿ

 • ಶನಿವಾರ, ಜನವರಿ 03, 2009
 • ಬಿಸಿಲ ಹನಿ
 • "ನಾನು ನೀನಾಗಬೇಕಿತ್ತು"
  ಕಾಡು ಹೇಳಿತು ಭೊರ್ಗರೆದು ಹರಿವ ನದಿಗೆ
  "ಸದಾ ಪಯಣಿಸುತ್ತಾ
  ಅತ್ತಿತ್ತ ನೋಡುತ್ತಾ
  ಸುಂದರ ತಾಣಗಳ ವೀಕ್ಷಿಸುತ್ತಾ
  ನುಗ್ಗುತ್ತಿ ಕಡಲಿನ ಪರಿಶುದ್ಧವಲಯಕ್ಕೆ
  ಜಲರಾಶಿಯ ಸಾಮ್ರಾಜ್ಞಕ್ಕೆ
  ನೀರದುವೆ ಭಾವ ತೀವ್ರತೆಯ
  ಉತ್ಸಾಹ ಚಿಮ್ಮಿಸುವ ಜೀವ ಚೈತನ್ಯ!"
  ಆದರೆ ನಾನು?
  ನಾನು ಈ ಭೂಮಿಗೆ ಸರಪಳಿಯಿಂದ
  ಬಂಧಿಸಲ್ಪಟ್ಟ ಒಬ್ಬ ಖೈದಿ
  ಮೌನದಲಿ ಬೆಳೆಯುತ್ತೇನೆ
  ಮೌನದಲಿ ವರುಷಗಳುರುಳಿ ಸಾಯುತ್ತೇನೆ.
  ಕೊನೆಗೊಂದು ದಿನ ಏನನ್ನೂ ಬಿಡದೆ
  ಹಿಡಿ ಬೂದಿಯಾಗಿ ಹೋಗುತ್ತೇನೆ.
  "ಅರೆ-ನಿದ್ರೆ, ಅರೆ-ಎಚ್ಚರದೊಳಿರುವ
  ಓ ಕಾಡೇ"
  ಕೂಗಿ ಕರೆದಿತ್ತು ನದಿ,
  "ನಾನು ನೀನಾಗಬೇಕಿತ್ತು
  ಪಚ್ಚೆಕಲ್ಲಿನ ಏಕಾಂತತೆಯ ಆನಂದದಲಿ
  ಹುಣ್ಣಿಮೆಯ ರಾತ್ರಿಗಳಲ್ಲಿ ಮೀಯುತ್ತಾ
  ವಸಂತದ ಚೆಲುವನ್ನು ಪ್ರತಿಬಿಂಬಿಸುವ
  ಪ್ರಣಯಿಗಳು ಸಂಧಿಸುವ ತಾಣವಾಗಿ
  ಹೊಸ ಜೀವನವೆ ನಿನ್ನ ಗಮ್ಯ ಪ್ರತಿ ವರುಷ".
  ನಾನಾದರೋ ಸದಾ ಓಡುತಿಹೆ
  ನನ್ನಿಂದಲೇ ದೂರಾಗಿ
  ಓಡುತ್ತ ಓಡುತ್ತಲಿರುವೆ ದಿಕ್ಕೆಟ್ಟು
  ಪಡೆಯುವದಾದರೂ ಏನನ್ನು
  ಅರ್ಥಹೀನ ಪಯಣದಿಂದ
  ಚಣಕಾಲವೂ ವಿರಮಿಸದೆ ಶಾಂತಿಯಿಂದ!
  ಯಾರಿಗೂ ಆಗುವದಿಲ್ಲ ಪರರ
  ಭಾವನೆಗಳನರಿಯಲು
  ದಾರಿಹೋಕನನು ಕೇಳುವರಾರು
  ಅವನ ಅಸ್ಥಿತ್ವವದು ನೈಜವೋ
  ಬರಿ ನೆರಳೋ ಎಂದು
  ಗೊತ್ತುಗುರಿಯಿಲ್ಲದೆ ನೆರಳಲ್ಲಿ
  ನಡೆಯುತಿಹ ದಾರಿಹೋಕ
  ಕೇಳಿಕೊಳ್ಳುವನು ತನ್ನನ್ನು ತಾನೇ
  ನಾನಾರು ಎಂದು
  ನಾನಾರು? ನದಿಯೇ? ಕಾಡೇ?
  ಅಥವಾ ಅವೆರೆಡು ಆಗಿಹನೆ ನಾನು?
  ನಾನು ಕಾಡೂ ಹೌದು! ನದಿಯೂ ಹೌದು!

  ಪರ್ಶಿಯನ್ ಮೂಲ: ಜಲಾಲುದ್ದೀನ್ ರೂಬಿ
  ಕನ್ನಡಕ್ಕೆ: ಉದಯ ಇಟಗಿ  ಮೇಣದ ಅರಮನೆ

 • ಬಿಸಿಲ ಹನಿ
 • ನನ್ನ ಮದುವೆಗೆ ಮುನ್ನ
  ಅಮ್ಮ ಕನಸಿನಲ್ಲಿ ಬೆಚ್ಚಿಬಿದ್ದು ಕೂಗುತ್ತಿದ್ದಳು
  ಅವಳ ಭಯಾನಕ ಕೂಗು ನನ್ನ ಎಬ್ಬಿಸುತ್ತಿತ್ತು
  ಅವಳೆನ್ನೆಬ್ಬಿಸಿ ಕೇಳುತ್ತಿದ್ದೆ ಯಾಕೆಂದು
  ತನ್ನ ಖಾಲಿ ಕಣ್ಣುಗಳಿಂದ ಸುಮ್ಮನೆ ದಿಟ್ಟಿಸುತ್ತಾ ಹೇಳುತ್ತಿದ್ದಳು
  ತನ್ನ ಕನಸಿನ ಬಗ್ಗೆ ಏನೊಂದೂ ನೆನಪಿಲ್ಲವೆಂದು.
  ಹೀಗೊಂದು ದಿನ ಅಮ್ಮ ಕನಸಲ್ಲಿ ಹೆದರಿದಳು
  ಆದರೆ ಈ ಸಾರಿ ಕೂಗಲಿಲ್ಲ.
  ಸುಮ್ಮನೆ ಗಟ್ಟಿಯಾಗಿ ತಬ್ಬಿಕೊಂಡಳು ನನ್ನ
  ನಾನು ಮತ್ತೆ ಕೇಳಿದೆ ಯಾಕೆಂದು
  ಒಂದು ಕ್ಷಣ ಪ್ರಾರ್ಥಿಸಿ ಕಣ್ಣು ಬಿಟ್ಟು ಹೇಳಿದಳು
  "ನನ್ನ ಕನಸಲ್ಲಿ ನೀ ಮುಳುಗುತ್ತಿರುವದನ್ನು
  ಹಾಗೂ ನಿನ್ನ ರಕ್ಷಿಸಲು ನಾ ನದಿಯಲ್ಲಿ ಜಿಗಿದಿದ್ದನ್ನು ಕಂಡೆ".
  ಅದೇ ರಾತ್ರಿ ಸಿಡಿಲು ಬಡಿದು
  ಬೆಂಕಿಬಿತ್ತು ನನ್ನ ಪ್ರಿಯಕರನಿಗೆ ಹಾಗೂ ನಮ್ಮ ಎಮ್ಮೆಗೆ.
  ಹೀಗೊಂದು ರಾತ್ರಿ ಅಮ್ಮ ಮಲಗಿರಲು
  ನಾನಿನ್ನೂ ಎಚ್ಚರವಿದ್ದೆ
  ಕನಸಲ್ಲಿ ಏನನ್ನೋ ಕನವರಿಸುತ್ತಾ
  ಅಮ್ಮ ತನ್ನ ಮುಷ್ಠಿಯನ್ನು ಬಿಗಿಯಾಗಿ ಹಿಡಿಯುತ್ತಾ ಬಿಚ್ಚುತ್ತಾ
  ಹಿಡಿಯುತ್ತಾ ಬಿಚ್ಚುತ್ತಾ
  ಏನನ್ನೋ ಹಿಡಿದಿಡುವ ಪ್ರಯತ್ನದಲ್ಲಿ ದಣಿದಂತೆ ಕಾಣುತ್ತಿದ್ದಳು.
  ಆದರೂ ಮತ್ತೆ ಮತ್ತೆ ಮುಷ್ಠಿ ಹಿಡಿಯುತ್ತಿದ್ದಳು
  ತನ್ನೆಲ್ಲ ಧೈರ್ಯವನ್ನು ಒಟ್ಟುಗೂಡಿಸಲು
  ನಾನು ಅಮ್ಮನನ್ನು ಎಬ್ಬಿಸಿ ಕೇಳಿದೆ
  ಆದರೆ ಅಮ್ಮ ತನ್ನ ಕನಸಿನ ಬಗ್ಗೆ ಹೇಳಲು ನಿರಾಕರಿಸಿದಳು.
  ಆ ರಾತ್ರಿ ನನ್ನ ನಿದ್ರೆ ಹಾರಿ ಹೋಗಿದ್ದರಿಂದ
  ಜಾಗ ಬದಲಿಸಿ ಮಲಗತೊಡಗಿದೆ
  ಇದೀಗ ನಾವಿಬ್ಬರೂ ಕನಸು ಕಾಣುತ್ತೇವೆ
  ಕನಸಲ್ಲಿ ಇಬ್ಬರೂ ಜೋರಾಗಿ ಕೂಗುತ್ತೇವೆ
  ಯಾರಾದರು ಯಾಕೆಂದು ಕೇಳಿದರೆ
  ನಮ್ಮ ಕನಸು ನೆನಪಲ್ಲಿಲ್ಲ ಎಂದು ಹೇಳುತ್ತೆವೆ.
  ಉರ್ದು ಮೂಲ: ಕಿಶ್ವರ್ ನಾಹೀದ್

  ಇಂಗ್ಲೀಷಗೆ: ರುಕ್ಷಾನಾ

  ಕನ್ನಡಕ್ಕೆ: ಉದಯ ಇಟಗಿ

  ಮಂಜಿನ ಹಾಗೆ

 • ಶುಕ್ರವಾರ, ಜನವರಿ 02, 2009
 • ಬಿಸಿಲ ಹನಿ
 • ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ
  ಮಂಜಿನೊಳಗೆ ಮಂಜಿನ ಹಾಗೆ
  ನಡೆದು ಬಂದ.
  ಅವನ ಕೈ ವಾಸನೆ ನನ್ನ ಮುಟ್ಟುವ ಮೊದಲೇ
  ಅವನಾಗಲೇ ನನ್ನ ತಲೆಯೊಳಗಿದ್ದ.
  ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ
  "ಯಾರೀತ? ಎಂಥ ಹೂಗಳು?"
  ನನ್ನ ಪಕ್ಕದಲ್ಲಿ ಕುಳಿತು ಒಂದೊಂದೇ
  ಹೂಗಳಿಂದ ನನ್ನ ಮುಚ್ಚುತ್ತಾ ಹೇಳುತ್ತಾನೆ
  "ಇವೆಲ್ಲ ನಿನಗೆ, ನಿನಗೊಬ್ಬಳಿಗೆ ಮಾತ್ರ
  ಏಕೆಂದರೆ ನೀನು ಹೋಗುತ್ತಿದ್ದೀಯ"
  ಆ ಹೂಗಳ ತಣ್ಣನೆಯ ಸ್ಪರ್ಶ
  ಹನಿ ಹನಿಯಾಗಿ ಜಿನುಗತೊಡಗಿತ್ತು.
  ಎಷ್ಟೊಂದು ಹೊಸದು?
  ಈ ಮೊದಲು ಅನುಭವಿಸಿಯೇ ಇರಲಿಲ್ಲ.
  ನೀನು ಸಹ ಅಪರಿಚತನೆ!
  ಹರಿದು ಹೋಗುವ ಕಣ್ಣೀರನ್ನು ತಡೆಗಟ್ಟುತ್ತಾ
  ಅವ ಹೂ ಹಿಡಿದು ಹೇಳುತ್ತಾನೆ.
  "ಅಪರಿಚತನೆ?
  ಅಲ್ಲ ನಾನಲ್ಲ, ಹುಟ್ಟಿನಿಂದ ನಿನ್ನವನೇ,
  ಬಹಳ ದಿನಗಳಿಂದ ಬೆಸೆದ ಬಾಂಧವ್ಯ ನಮ್ಮಿಬ್ಬರದು"
  ನಾನು ಅವನೆಡೆಗೆ ನೋಡಿದೆ
  ಮಂಜಲ್ಲಿ, ಮಂಜಾಗಿ ಕರಗಿ ಎಷ್ಟೊಂದು ಹೊತ್ತಾಗಿತ್ತು
  ಆದರೆ ನಾನು ಮಾತ್ರ ಒಂಟಿಯಾಗಿರಲಿಲ್ಲ!

  ಮೂಲ ಮರಾಠಿ:ಇಂದಿರಾ ಸಂತ
  ಇಂಗ್ಲೀಷಗೆ:ಶಾಂತಾ ಗೋಖಲೆ
  ಕನ್ನಡಕ್ಕೆ:ಉದಯ ಇಟಗಿ
  (c) Copyright 2010 ಬಿಸಿಲ ಹನಿ. Blogger template by Bloggermint
  Sponsored by Texas Phone Book, Texas Accountants, Optician Jobs.