Demo image Demo image Demo image Demo image Demo image Demo image Demo image Demo image

ಪ್ರಜಾವಾಣಿಯಲ್ಲಿ ನನ್ನ ಬ್ಲಾಗ್ ಬಗ್ಗೆ “ಹನಿ ಹನಿ ‘ಬಿಸಿಲ ಹನಿ’”

  • ಮಂಗಳವಾರ, ಆಗಸ್ಟ್ 04, 2015
  • ಬಿಸಿಲ ಹನಿ
  • ಮಳೆಹನಿಗಳನ್ನು ಬಲ್ಲಿರಿ. ಬಿಸಿಲ ಹನಿಗಳನ್ನು ಬಲ್ಲಿರಾ? ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿ ಬಿಸಿಲ ಹನಿಗಳ ಸೃಷ್ಟಿಕರ್ತರು. ಅಂದಹಾಗೆ, ಅವರು ಹೊಲದಲ್ಲಿ ಬೆವರು ಸುರಿಸುತ್ತಿಲ್ಲ. ಬ್ಲಾಗ್ನಲ್ಲಿ ಅಕ್ಷರ ಮಳೆಗರೆಯುತ್ತಿದ್ದಾರೆ. ‘ಬಿಸಿಲ ಹನಿ’ (bisilahani.blogspot.in) ಅವರ ಬ್ಲಾಗ್ಹೆಸರು.
    ಉದಯ್ ಪ್ರಸ್ತುತ ನೆಲೆಸಿರುವುದು ಲಿಬಿಯಾದಲ್ಲಿ. ಅಲ್ಲಿನಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಅವರು ಇಂಗ್ಲೀಷ್ ಅಧ್ಯಾಪಕರು. ಇಂಗ್ಲಿಷ್ನಲ್ಲಿ ಪಾಠ ಹೇಳುತ್ತಿದ್ದರೂ, ಅವರ ಮನಸ್ಸು ಕನ್ನಡಕರ್ನಾಟಕವನ್ನೇ ನೆನೆಯುತ್ತಿದೆ.
    ಓದುಬರವಣಿಗೆಯಲ್ಲಿ ಆಸಕ್ತರಾದ ಅವರು, ತಮ್ಮ ಸಾಹಿತ್ಯದ ಅಭಿವ್ಯಕ್ತಿಗೆ ಬ್ಲಾಗ್ಬರವಣಿಗೆಯನ್ನು ಮಾಧ್ಯಮ ಆಗಿಸಿಕೊಂಡಿದ್ದಾರೆ. ಅಂದಹಾಗೆ, ಉದಯ್ಬೇರೆ ಬೇರೆ ಭಾಷೆಗಳ ಕಥೆಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೆಲವು ಅನುವಾದಿತ ಬರಹಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆಸಾಹಿತ್ಯದ ಜೊತೆಗೆಪ್ರವಾಸ, ಛಾಯಾಗ್ರಹಣ ಹಾಗೂ ತೋಟಗಾರಿಕೆ ಅವರ ಆಸಕ್ತಿಯ ಕ್ಷೇತ್ರಗಳು.
    ಬಿಸಿಲ ಹನಿಗಳ ವ್ಯವಸಾಯ ಭರವಸೆ ಹುಟ್ಟಿಸುವಂತಿದೆ. ‘ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ಪ್ರೇಮ-ಕಾಮ ವಾಂಛೆಗಳುಎನ್ನುವ ಅವರ ಪ್ರಬಂಧವನ್ನು ಓದಿಯೇ ಸವಿಯಬೇಕು. ವೈದೇಹಿ ಅವರನೋಡಬಾರದು ಚೀಲದೊಳಗನುಕವಿತೆಯ ನೆಪದಲ್ಲಿ ಹುಟ್ಟಿದ ಬರಹ, ಭೀಷ್ಮ ಸಹಾನಿ ಅವರ ಅನುವಾದಿತ ಕಥೆ, ಪ್ಯಾಲೆಸ್ತೇನಿಯನ್ ಕವಿಯ ಶಾಂತಿಗೀತೆ, ಹುಳಿ ಮಾವಿನ ಮರದ ನೆನಪುಹೀಗೆ, ಉದಯ್ಬರಹಗಳ ವೈವಿಧ್ಯ ಸೊಗಸಾಗಿದೆ. ‘ಬಿಸಿಲ ಹನಿಗಳಿಗೆ ಮೈಯೊಡ್ಡುವುದು ಹಿತವಾದ ಅನುಭವ
    ಲಿಂಕ್ ಇಲ್ಲಿದೆ:
    http://www.prajavani.net/article/%E0%B2%B9%E0%B2%A8%E0%B2%BF-%E0%B2%B9%E0%B2%A8%E0%B2%BF-%E2%80%98%E0%B2%AC%E0%B2%BF%E0%B2%B8%E0%B2%BF%E0%B2%B2-%E0%B2%B9%E0%B2%A8%E0%B2%BF%E2%80%99


    ನಸುಗತ್ತಲು

  • ಶನಿವಾರ, ಏಪ್ರಿಲ್ 18, 2015
  • ಬಿಸಿಲ ಹನಿ
  • 1 
    ನೋರ್ಮನ್ ಗೋರ್ಟ್ಸ್‍ಬೈ ಹೈಡ್ ಪಾರ್ಕಿನಲ್ಲಿ ಗಿಡ ಗಂಟೆಗಳಿಗೆ ಬೆನ್ನು ಮಾಡಿ ಅಲ್ಲಿಯ ಬೆಂಚೊಂದರ ಮೇಲೆ ಕುಳಿತಿದ್ದನು. ಆ ಪಾರ್ಕಿಗೆ ಸುತ್ತಲೂ ಕಂಬಿಬೇಲಿಯನ್ನು ಬಿಗಿಯಲಾಗಿತ್ತು. ಅದರ ಮುಂದುಗಡೆ ರಸ್ತೆಯೊಂದು ಹಾಯ್ದಿತ್ತು. ಅದು ಒಂದು ಕುದರೆ ಗಾಡಿ ಹೋಗುವಷ್ಟು ಮಾತ್ರ ಅಗಲವಾಗಿತ್ತು. ಅವನ ಬಲಭಾಗದಲ್ಲಿ ಸಂಚಾರ ದಟ್ಟಣೆಯ ಮತ್ತೊಂದು ರಸ್ತೆಯಿತ್ತು. ಅದು ಕುದರೆ ಗಾಡಿಯ ಲಟಲಟ ಶಬ್ಧ ಹಾಗೂ ಮೋಟಾರು ವಾಹನಗಳ ಕರ್ಕಶ ಶಬ್ಧಗಳಿಂದ ತುಂಬಿಹೋಗಿತ್ತು. ಅದು ಮಾರ್ಚ್ ತಿಂಗಳ ಆರಂಭದ ಸಂಜೆ. ಘಂಟೆ ಸುಮಾರು ಆರೂವರೆಯಾಗಿದ್ದಿರಬಹುದು. ಮುಸ್ಸಂಜೆಯಾಗಿದ್ದರಿಂದ ಅದಾಗಲೇ ಸಾಕಷ್ಟು ನಸುಗತ್ತಲು ಆವರಿಸಿಕೊಂಡಿತ್ತು. ಆದರೆ ಆ ನಸುಗತ್ತಲನ್ನು ಚಂದ್ರನ ಮಂದ ಬೆಳಕು ಮತ್ತು ಬೀದಿ ದೀಪಗಳು ಶಮನಮಾಡಿದ್ದವು. ರಸ್ತೆ ಮತ್ತದರ ಮಗ್ಗುಲ ಹಾದಿಗಳು ಖಾಲಿ ಹೊಡೆಯುತ್ತಿದ್ದವು. ಆದರೂ ಅಲ್ಲೊಂದು ಇಲ್ಲೊಂದು ಅಸ್ಪಷ್ಟ ಆಕೃತಿಗಳು ಆ ಮಂದ ಬೆಳಕಲ್ಲಿ ನಡೆದುಹೋಗುವದು ಕಾಣಿಸುತ್ತಿತ್ತು. ಜೊತೆಗೆ ಪಾರ್ಕಿನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಕಂಡೂ ಕಾಣದಂತೆ ಬೆಂಚುಗಳ ಮೇಲೆ ಕುಳಿತಿದ್ದರು. 

    ಒಂದು ಕ್ಷಣ ಆ ದೃಶ್ಯವು ಗೋರ್ಟ್ಸ್‍ಬೈಗೆ ಹಿತವಾಗಿ ಕಂಡಿತಾದರೂ ಮರು ಕ್ಷಣ ಏನನ್ನೋ ನೆನೆದು ಅವನ ಮನಸ್ಸು ಮುದುಡಿತು. ಅವನ ಪ್ರಕಾರ ಮುಸ್ಸಂಜೆಯು ಜೀವನದ ಹೋರಾಟದಲ್ಲಿ ಗುದ್ದಾಡಿ ಸೋತವರ ಸಮಯ. ಸೋತವರು ಜಗತ್ತಿಗೆ ಮುಖ ತೋರಿಸಲಾಗದೆ ಒಳಗೇ ಕೂತಿದ್ದು ನಸುಗತ್ತಲಾವರಿಸುತ್ತಿದ್ದಂತೆ ಮೆಲ್ಲನೆ ಹೊರಬರುವ ಸಮಯ. ಹೈಡ್ ಪಾರ್ಕಿನಲ್ಲಿ ಗಂಡಸರು ಹೆಂಗಸರು ಎಂಬ ಬೇಧ-ಭಾವವಿಲ್ಲದೆ ಎಲ್ಲ ತೆರದ ಜನರು ನೆರದಿದ್ದರು. ಕೆಲವರು ತಮ್ಮ ಜೀವನದ ಹೋರಾಟದಲ್ಲಿ ಗುದ್ದಾಡಿ ಸೋತವರಿದ್ದರು. ಇನ್ನು ಕೆಲವರು ತಮ್ಮ ಸತ್ತ ಆಸೆ-ಆಕಾಂಕ್ಷೆಗಳನ್ನು ಹೂತಿಟ್ಟು ಒಣಗಿದ ಮುಖವನ್ನು ಹೊತ್ತು ಕೂತಿದ್ದರು. ಮತ್ತೆ ಕೆಲವರು ತಾವು ಕಳೆದುಕೊಂಡ ಅದೃಷ್ಟಗಳನ್ನು ಬೇರೆಯವರಿಗೆ ಕಾಣದಂತೆ ಬಚ್ಚಿಟ್ಟಿದ್ದರು. ಇನ್ನುಳಿದಂತೆ ಕೆಲವರು ಬಾಗಿದ ಭುಜಗಳನ್ನಿಟ್ಟುಕೊಂಡು, ಮಾಸಲು ಬಟ್ಟೆಗಳನ್ನು ಹಾಕಿಕೊಂಡು, ಕಂಗಳಲ್ಲಿ ವಿಷಾದವನ್ನು ತುಂಬಿಕೊಂಡು ಕಂಡೂ ಕಾಣದಂತೆ ಕುಳಿತಿದ್ದರು. ಅವರೆಲ್ಲಾ ಅಲ್ಲಿಗೆ ಆ ಮುಸ್ಸಂಜೆ ಹೊತ್ತಲ್ಲಿ ಬಹುಶಃ ಎಲ್ಲರೂ ಹೋದ ಮೇಲೆ ನಿರ್ಭಿಡೆಯಿಂದ ಬಂದು ಕುಳಿತಿರುವಂತೆ ತೋರುತ್ತಿತ್ತು. 

    ನೋರ್ಮನ್ ಗೋರ್ಟ್ಸ್‍ಬೈ ಬೆಂಚಿನ ಮೇಲೆ ಕುಳಿತಂತೆ ಅವನಿಗೆ ಪಾರ್ಕಿಗೆ ಅತಿ ಹತ್ತಿರದಲ್ಲಿದ್ದ ಮನೆಗಳು ಹಾಗೂ ಅಪಾರ್ಟ್ಮೆಂಟ್‍ಗಳ ಕಿಟಕಿಗಳಿಂದ ತೂರಿಬರುತ್ತಿದ್ದ ಝಗಮಗಿಸುವ ವಿದ್ಯುದ್ದೀಪಗಳ ಬೆಳಕು ಕಂಡಿತು. ಆತ ಬಹುಶಃ ಅವು ಜೀವನದ ಹೋರಾಟದಲ್ಲಿ ಯಶಸ್ಸನ್ನು ಕಂಡವರ ಅಥವಾ ಜೀವನದಲ್ಲಿ ಒಮ್ಮೆಯೂ ಸೋಲನ್ನು ಕಂಡಿರದವರ ಮನೆಗಳಿರಬೇಕೆಂದು ಭಾವಿಸಿದ. ಜೊತೆಗೆ ಅಲ್ಲಿ ಕುಳಿತಿರುವವರ ಬಗ್ಗೆ ತನ್ನಷ್ಟಕ್ಕೆ ತಾನೇ ಏನೇನೋ ಕಲ್ಪಿಸಿಳ್ಳುತ್ತಾ ತನ್ನನ್ನು ತಾನು ಅವರೊಟ್ಟಿಗೆ ಹೋಲಿಸಿಕೊಂಡನು. ಅಲ್ಲಿದ್ದವರೆಲ್ಲಾ ಒಂದಲ್ಲಾ ಒಂದು ದುಖಃದಲ್ಲಿ ಅಥವಾ ಹತಾಶೆಯಲ್ಲಿ ಮುಳುಗಿದ್ದರು. ನೋರ್ಮನ್ ಗೋರ್ಟ್ಸ್‍ಬೈ ಕೂಡಾ ಆ ಗುಂಪಿನಿಂದ ಹೊರತಾಗಿರಲಿಲ್ಲ. ಆತ ಹಣದ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡವನಲ್ಲ. ಮನಸ್ಸು ಮಾಡಿದ್ದರೆ ಆತ ಸಾಕಷ್ಟು ಹಣವನ್ನು ಗಳಿಸಿ ಇಂದು ಅತ್ಯಂತ ಶ್ರೀಮಂತ ವರ್ಗದವರ ಸಾಲಿಗೆ ಸೇರಿರುತ್ತಿದ್ದ. ಆದರೆ ಹಾಗೆ ಮಾಡದೆ ಅವನು ತನ್ನ ಯಾವುದೋ ಒಂದು ವಿರಳ ಗುರಿಯನ್ನು ಬೆನ್ನಟ್ಟಿ ಹೋಗಿ ಜೀವನದಲ್ಲಿ ಸೋತು ಬಹಳಷ್ಟು ಹತಾಶೆ ಹಾಗೂ ಭ್ರಮೆನಿರಸನಗೊಳಗಾಗಿದ್ದ. ಹಾಗಾಗಿ ಆ ನಸುಗತ್ತಲಲ್ಲಿ ಬಾಡಿದ ಮುಖವನ್ನು ಹೊತ್ತುಕೊಂಡು ಸರಿಯುತ್ತಿರುವವರನ್ನು ನೋಡಿ ಅವನಿಗೆ ವಿಲಕ್ಷಣ ಖುಷಿಯಾಗಲಿಲ್ಲ.     
      2  
    ಅದೇ ಬೆಂಚಿನ ಮೇಲೆ ಅವನ ಪಕ್ಕ ಹಿರಿಯ ನಾಗರಿಕರೊಬ್ಬರು ಕುಳಿತಿದ್ದರು. ಅವರು ಜೀವನದಲ್ಲಿ ಬಹಳಷ್ಟು ನೊಂದವರಂತೆ, ಹತಾಶೆಗೊಳಗಾದವರಂತೆ ಕಾಣುತ್ತಿದ್ದರು. ಅವರ ಬಟ್ಟೆಗಳು ಅಲ್ಲಲ್ಲಿ ಕೊಳೆಯಾಗಿದ್ದವು. ಅವು ಅವರ ಹತಾಶೆಯನ್ನು ಮತ್ತಷ್ಟು ಎದ್ದು ಕಾಣುವಂತೆ ಮಾಡಿದ್ದವು. ಅವರು ಮನೆಯಲ್ಲಿ ಅನಾದರಕ್ಕೊಳಗಾಗಿರುವಂತೆ ಹಾಗೂ ಅದೇ ಕಾರಣಕ್ಕಾಗಿ ಒಂಟಿಯಾಗಿರುವಂತೆ ಕಂಡು ಬಂದರು. ಅವರು ಅಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದು ನಂತರ ಹೊರಟರು. ಅವರು ಹೊರಡುವಾಗ ಗೋರ್ಟ್ಸ್‍ಬೈ ಬಹುಶಃ ಅವರು ತಮಗೆ ಪ್ರೀತಿ ಮತ್ತು ಆದರಗಳೇ ಸಿಗದ ಮ್ಮ ಮನೆಯ ಕಡೆ ಹೊರಟರೇನೋ ಎಂದು ಭಾವಿಸಿದ.

    ಆ ಹಿರಿಯರು ಅತ್ತ ಹೋದ ತಕ್ಷಣ ಇತ್ತ ಯುವಕನೊಬ್ಬ ಅದೇ ಜಾಗದಲ್ಲಿ ಬಂದು ಕುಳಿತನು. ಆತ ಹಾಕಿಕೊಂಡಿದ್ದ ಬಟ್ಟೆಗಳು ಅವನೊಬ್ಬ ಸಭ್ಯ ಯುವಕನೆಂದು ಹೇಳಿದರೂ ಅವನೇಕೋ ಸಂತೋಷವಾಗಿರುವಂತೆ ಕಾಣಲಿಲ್ಲ. ಇಡಿ ಜಗತ್ತೇ ಅವನಿಗೆ ಕೇಡು ಬಗೆದಿದೆ ಎನ್ನುವ ತರ ಆತ ಕೋಪದಲ್ಲಿ ಏನನ್ನೋ ಗೊಣಗುತ್ತಾ ಅಲ್ಲಿ ಕುಳಿತುಕೊಂಡನು.    

     “ನೀವು ಒಳ್ಳೆ ಮೂಡಲ್ಲಿ ಇದ್ದಂತೆ ಕಾಣುತ್ತಿಲ್ಲ.”  ಅವನ ಮುಖದ ಭಾವವನ್ನು ಗುರುತಿಸುತ್ತಾ ಗೋರ್ಟ್ಸ್‍ಬೈ ಕೇಳಿದ.
    ಆ ಯುವಕ ಅವನೆಡೆಗೆ ತಿರುಗುತ್ತಾ ಅತ್ಯಂತ ದೃಢವಾಗಿ ಯಾವುದೇ ಮುಚ್ಚು ಮರೆಯಿಲ್ಲದೆ ಹೇಳಿದ.

    “ನಾನು ಸಿಕ್ಕಿಹಾಕಿಕೊಂಡಿರುವ ಸಮಸ್ಯೆಯಲ್ಲಿ ಬಹುಶಃ, ನೀವೇನಾದರು ಸಿಕ್ಕಿಹಾಕಿಕೊಂಡಿದ್ದರೆ ಖಂಡಿತ ನೀವು ಕೂಡಾ ಒಳ್ಳೆ ಮೂಡಲ್ಲಿರಲು ಸಾಧ್ಯವಾಗುತ್ತಿರಲಿಲ್ಲ ಬಿಡಿ,” ಅವನು ಹೇಳಿದ. “ನಾನು ಎಂದೂ ಮಾಡಬಾರದ ಮೂರ್ಖತನದ ಕೆಲಸವೊಂದನ್ನು ಮಾಡಿಬಿಟ್ಟಿದ್ದೇನೆ.”

    “ಹೌದಾ?” ಯಾವುದೇ ಭಾವೋದ್ರೇಕವಿಲ್ಲದೆ ಗೋರ್ಟ್ಸ್‍ಬೈ ಅವನನ್ನು ಕೇಳಿದ.

    “ನಾನು ಈ ಮಧ್ಯಾಹ್ನ ಬರ್ಕ್‍ಸ್ಕ್ವೇರ್‍ನಲ್ಲಿರುವ ಪೆಟಗೋನಿಯನ್ ಹೋಟೆಲ್‍ನಲ್ಲಿ ಉಳಿದುಕೊಳ್ಳೋಣವೆಂದು ಇಲ್ಲಿಗೆ ಬಂದೆ. ಆದರೆ ನಾನಿಲ್ಲಿಗೆ ಬಂದ ಮೇಲೆ ನಂಗೆ ಗೊತ್ತಾಯಿತು ಕೆಲವು ವಾರಗಳ ಹಿಂದೆಯಷ್ಟೇ ಆ ಹೋಟೆಲ್‍ನ್ನು ಕೆಡವಿ ಅದರ ಜಾಗದಲ್ಲಿ ಸಿನಿಮಾ ಥೇಟರೊಂದನ್ನು ಕಟ್ಟಿದ್ದಾರೆಂದು. ನನ್ನ ಟ್ಯಾಕ್ಷಿ ಡ್ರೈವರ್ ನನ್ನನ್ನು ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಇನ್ನೊಂದು ಹೋಟೆಲ್‍ಗೆ ಕರೆದುಕೊಂಡು ಹೋದ. ನಾನು ಆ ಹೋಟೆಲ್‍ಗೆ ಹೋದ ತಕ್ಷಣ ನನ್ನವರಿಗೆಲ್ಲಾ ನಾನಿಲ್ಲಿಗೆ ಸುರಕ್ಷಿತವಾಗಿ ಬಂದು ಮುಟ್ಟಿದ್ದೇನೆಂಬ ಸಂದೇಶದೊಂದಿಗೆ ಆ ಹೋಟೆಲ್‍ನ ವಿಳಾಸವನ್ನು ಸಹ ನಮೂದಿಸಿ ಪತ್ರವೊಂದನ್ನು ಬರೆದು ಪೋಸ್ಟ್ ಮಾಡಿದೆ. ನಂತರ ನಾನು ಸೋಪ್‍ನ್ನು ಕೊಂಡುಕೊಳ್ಳಲು ಹೊರಗೆ ಬಂದೆ. ಏಕೆಂದರೆ ನನಗೆ ಹೋಟೆಲ್ ಸೋಪುಗಳನ್ನು ಬಳಸಿ ಅಭ್ಯಾಸವಿರಲಿಲ್ಲ. ಮೇಲಾಗಿ ನಾನು ನನ್ನದೇ ಸೋಪನ್ನು ಪ್ಯಾಕ್  ಮಾಡಲು ಮರೆತಿದ್ದೆ. ಹೊರಗೆ ಬಂದ ಮೇಲೆ ಅಲ್ಲಿ ಇಲ್ಲಿ ಸ್ವಲ್ಪ ಸುತ್ತಾಡಿದೆ. ನಂತರ ಬಾರ್‍ ವೊಂದರಲ್ಲಿ ಸ್ವಲ್ಪ ಡ್ರಿಂಕ್ಸ್ ತಗೊಂಡೆ. ತದನಂತರ ಅಂಗಡಿಯೊಂದಕ್ಕೆ ಹೋಗಿ ಸೋಪನ್ನು ಕೊಂಡುಕೊಂಡೆ. ಆಮೇಲೆ ಹೋಟೆಲ್‍ನತ್ತ ಹೆಜ್ಜೆ ಹಾಕುತ್ತಿದ್ದಂತೆ ನನಗೆ ತಕ್ಷಣ ಹೊಳೆಯಿತು-ನಾನು ಹೋಟೆಲ್ ಹೆಸರನ್ನೂ ಹಾಗೂ ಅದು ಇದ್ದ ಬೀದಿಯ ಹೆಸರನ್ನೂ ಮರೆತಿರುವೆನೆಂದು. ಲಂಡನ್‍ನಲ್ಲಿ ನನಗೆ ಸ್ನೇಹಿತರಾಗಲಿ, ಸಂಬಂಧಿಕರಾಗಲಿ ಯಾರೂ ಇಲ್ಲವಾದ್ದರಿಂದ ಇದೀಗ ನಾನು ಪೇಚಿಗೆ ಸಿಲುಕಿದ್ದೇನೆ. ಆಫ್ಕೋರ್ಸ್, ನಾನು ನನ್ನವರಿಗೆ ಈ ಹೋಟೆಲ್‍ನ ವಿಳಾಸವನ್ನು ಕಳಿಸಿಕೊಡಿ ಎಂದು ತಂತಿಯೊಂದನ್ನು ಅವರಿಗೆ ಕಳಿಸಿಕೊಡಬಹುದು. ಆದರೆ ನನ್ನ ಪತ್ರ ಅವರನ್ನು ತಲುಪವದೇ ನಾಳೆಯಾದ್ದರಿಂದ ನಾನು ತಂತಿಯನ್ನು ಕಳಿಸಿ ಏನು ಪ್ರಯೋಜನ? ಮೇಲಾಗಿ ಈಗ ನನ್ನ ಬಳಿ ಅಷ್ಟೊಂದು ದುಡ್ಡಿಲ್ಲ. ಹೋಟೆಲ್‍ನಿಂದ ಹೊರಡುವಾಗ ಒಂದು ಶಿಲ್ಲಿಂಗ್ ತೆಗೆದುಕೊಂಡು ಬಂದೆ. ಅದನ್ನೇ ಡ್ರಿಂಕ್ಸ್ ತೆಗೆದುಕೊಳ್ಳುವದಕ್ಕೆ ಹಾಗೂ ಸೋಪು ಕೊಂಡುಕೊಳ್ಳುವದಕ್ಕೆ ಖರ್ಚು ಮಾಡಿದೆ. ಇದೀಗ ನನ್ನ ಜೇಬಿನಲ್ಲಿ ಬರೀ ಎರಡು ಪೆನ್ಸ್‍ಗಳನ್ನಿಟ್ಟುಕೊಂಡು ಈ ರಾತ್ರಿಯನ್ನು ಎಲ್ಲಿ ಕಳೆಯಬೇಕೆಂದು ತಿಳಿಯದೆ ಓಡಾಡುತ್ತಿದ್ದೇನೆ. 
     3  

    ಆತ ನಿರರ್ಗಳವಾಗಿ ತನ್ನ ಕಥೆಯನ್ನು ಹೇಳಿ ಒಂದು ಕ್ಷಣ ನಿಲ್ಲಿಸಿದ. “ನಿಮಗೆ ಅನಿಸ್ತಿರಬಹುದು ನಾನೊಂದು ನಂಬಲಸಾಧ್ಯವಾದ ಕಥೆಯನ್ನು ಹೆಣೆದು ಹೇಳಿರಬಹುದೆಂದು.” ಆತನ ದನಿ ಕಹಿಯಾಗಿತ್ತು.   

    “ಇಲ್ಲ, ಹಾಗೇನಿಲ್ಲ,” ಗೋರ್ಟ್ಸ್‍ಬೈ ದೃಢವಾಗಿ ಹೇಳಿದ. “ನಾನೂ ಒಮ್ಮೆ ವಿದೇಶಕ್ಕೆ ಹೋದಾಗ ನನಗೂ ಇಂಥದೇ ಒಂದು ಅನುಭವವಾಗಿತ್ತು. ಆದರೆ ಆ ಸಂದರ್ಭದಲ್ಲಿ ನಾವು ಇಬ್ಬರಿದ್ದೆವು. ಅದು ಒಂದು ರೀತಿಯಲ್ಲಿ ಒಳಿತೇ ಆಯಿತು. ಅದೃಷ್ಟವಶಾತ್, ಆ ಹೋಟೆಲ್ ಯಾವುದೋ ಒಂದು ಕಾಲುವೆ ದಂಡೆಯ ಮೇಲಿರುವದು ನಮಗೆ ನೆನಪಾಯಿತು. ಆ ಸುಳಿವನ್ನು ಹಿಡಿದು ನಾವಲ್ಲಿಗೆ ಹೋದಾಗ ನಮಗೆ ನಮ್ಮ ಹೋಟೆಲ್ ದಾರಿ ಸಿಕ್ಕಿತು.”

    ಅವನ ಜ್ಞಾಪಕ ಶಕ್ತಿಯನ್ನು ನೋಡಿ ಆ ಯುವಕನಿಗೆ ಆಶ್ಚರ್ಯವಾಯಿತು. “ನಾನು ಬೇಕಾದರೆ ನನ್ನ ರಾಯಭಾರ ಕಛೇರಿಗೆ ಹೋಗಿ ಅವರ ಸಹಾಯವನ್ನು ಪಡೆಯಬಹುದು,” ಅವನು ಹೇಳಿದ. “ಆದರೆ ನನ್ನ ತರಾನೆ ಸಮಸ್ಯೆಯೊಂದರಲ್ಲಿ ಸಿಕ್ಕಿಹಾಕಿಕೊಂಡು ಕಷ್ಟವನ್ನು ಅನುಭವಿಸಿದ ವ್ಯಕ್ತಿಯೊಬ್ಬ ನನ್ನ ಬಳಿ ಇರುವಾಗ ಅಲ್ಲಿಗೆ ಹೋಗುವ ಅವಶ್ಯಕತೆಯಾದರೂ ಏನಿದೆ? ಇದೀಗ ಯಾರಾದರು ನನ್ನ ಕಷ್ಟವನ್ನು ಅರ್ಥಮಾಡಿಕೊಂಡು ನನಗೆ ಹಣದ ಸಹಾಯ ಮಾಡದೇ ಹೋದರೆ ನಾನು ಬಹುಶಃ ಈ ರಾತ್ರಿಯನ್ನು ಇಲ್ಲಿಯ ಬೀದಿಗಳಲ್ಲಿ ಕಳೆಯಬೇಕಾಗುತ್ತದೆ. ನನಗೆ ಖುಷಿಯ ಸಂಗತಿ ಏನೆಂದರೆ ನಾನು ಹೇಳಿದ್ದನ್ನು ನೀವು ಕಟ್ಟು ಕಥೆಯೆಂದು ನಂಬಲಿಲ್ಲವಲ್ಲ, ಅಷ್ಟು ಸಾಕು ನನಗೆ.”

    ಅವನ ಕೊನೆಯ ಸಾಲು ತುಂಬಾ ಪರಿಣಾಮಕಾರಿಯಾಗಿತ್ತು. ಅದನ್ನು ಕೇಳಿ ಗೋರ್ಟ್ಸ್‍ಬೈ ಕರಗಿದಂತೆ ಕಂಡನು.
    “ಆಫ್ಕೋರ್ಸ್,” ಗೋರ್ಟ್ಸ್‍ಬೈ ತಡವರಿಸುತ್ತಾ ಹೇಳಿದ, “ನಿನ್ನ ಕಥೆಯ ದೌರ್ಬಲ್ಯವೇನೆಂದರೆ ನೀನು ನನಗೆ ಸೋಪನ್ನು ತೋರಿಸಲು ಅಸಮರ್ಥನಾಗಿದ್ದೀಯ.”

    ಆ ಯುವಕ ಒಮ್ಮೆ ಕೂತಲ್ಲೇ ಕದಲಿದ. ನಂತರ ಅವಸರವಸರವಾಗಿ ತನ್ನ ಓವರ್‍ಕೋಟಿನ ಪಾಕೇಟ್‍ಗಳನ್ನು  ತಡಕಾಡಿ ಒಮ್ಮೆಲೆ ಜಿಗಿದು ನಿಂತನು.

    “ನಾನದನ್ನು ಕಳೆದುಕೊಂಡಿರಬೇಕು,” ಅವನು ಕೋಪದಲ್ಲಿ ವಟಗುಟ್ಟಿದ. 

    “ಒಂದೇ ದಿನದಲ್ಲಿ ಹೋಟೆಲ್ ಅಡ್ರೆಸ್‍ನ್ನೂ ಹಾಗೂ ಸೋಪನ್ನೂ ಕಳೆದುಕೊಳ್ಳುವವನು ನಿಜಕ್ಕೂ ಮೂರ್ಖನೇ ಸರಿ.” ಗೋರ್ಟ್ಸ್‍ಬೈ ಹೇಳಿದ. ಇದನ್ನು ಕೇಳಿ ಆ ಯುವಕ ಮರು ಮಾತನಾಡದೆ ಅಲ್ಲಿಂದ ಬಳಲಿದವನಂತೆ ನಿಧಾನವಾಗಿ ಕಾಲೆಳೆಯುತ್ತಾ ರಸ್ತೆಯೆಡೆಗೆ ನಡೆದುಬಂದನು.  

    “ವಾಟ್ ಎ ಪಿಟಿ,” ಗೋರ್ಟ್ಸ್‍ಬೈ ಆಲೋಚಿಸುತ್ತಾ ತನ್ನಷ್ಟಕ್ಕೆ ತಾನೇ ಹೇಳಿಕೊಂಡ. “ಅವನ ಇಡಿ ಕಥೆಯ ಜೀವಾಳವೇ ಆ ಸೋಪು. ಅದನ್ನು ಆತ ತೋರಿಸಲು ಅಸಮರ್ಥನಾಗಿದ್ದರಿಂದ ಅವನು ಇಕ್ಕಟ್ಟಿಗೆ ಸಿಲುಕಿದ. ಅವನು ನಿಜಕ್ಕೂ ಕಷ್ಟದಲ್ಲಿದ್ದನಾ ಅಥವಾ ಇಲ್ಲವಾ? ಒಂದು ವೇಳೆ ಆತ ನಿಜವಾಗಿಯೂ ಸುಳ್ಳು ಹೇಳಿ ದುಡ್ಡು ಕೀಳುವದನ್ನೇ ಕಸುಬನ್ನಾಗಿ ಮಾಡಿಕೊಂಡಿದ್ದರೆ ಈ ಮೊದಲೇ ಆತ ಅಂಗಡಿಯೊಂದರಲ್ಲಿ ಸೋಪನ್ನು ಕೊಂಡುಕೊಂಡು ಬಂದಿದ್ದು ನಾನು ಕೇಳಿದಾಗ ಅದನ್ನು ತನ್ನ ಜೇಬಿನಿಂದ ತೆಗೆದು ತೋರಿಸಬಹುದಿತ್ತಲ್ಲ? ಪಾಪ, ಅವನು ಅಂಥ ವ್ಯಕ್ತಿಯಿರಲಿಕ್ಕಿಲ್ಲ! ನಾನವನಿಗೆ ಸಹಾಯ ಮಾಡಬಹುದಿತ್ತೇನೋ! ಛೇ, ಎಂಥ ಕೆಲಸವಾಯಿತು!”    
     4  

    ಹೀಗೆ ಯೋಚಿಸುತ್ತಾ ಗೋರ್ಟ್ಸ್‍ಬೈ ಮನೆಗೆ ಹೋಗಲು ಎದ್ದು ನಿಂತಂತೆ ಅಲ್ಲಿ ಅವನಿಗೊಂದು ಅಚ್ಚರಿ ಕಾದಿತ್ತು. ಅವನು ಕುಳಿತಿದ್ದ ಬೆಂಚಿನ ಪಕ್ಕದಲ್ಲಿಯೇ ಸೋಪ್ ಪ್ಯಾಕೇಟ್ ಬಿದ್ದಿರುವದು ಕಾಣಿಸಿತು. ಅದರ ಮೇಲೆ ಫಾರ್ಮಸಿ ಅಂಗಡಿಯ ಸೀಲು ಸಹ ಇತ್ತು. ಅದು ನಿಜಕ್ಕೂ ಸೋಪೇ ಆಗಿತ್ತು! ಬಹುಶಃ, ಆ ಯುವಕ ಇಲ್ಲಿ ಕುಳಿತುಕೊಳ್ಳುವಾಗ ಅವನ ಕೋಟಿನಿಂದ ಜಾರಿ ಬಿದ್ದಿರಬೇಕು. ಅರೆರೆ, ಎಂಥ ಕೆಲಸವಾಯಿತು ಎಂದುಕೊಂಡು ಅವನು ಆ ಕೂಡಲೇ ಅದನ್ನೆತ್ತಿಕೊಂಡು ಆ ಯುವಕನನ್ನು ಹುಡುಕಿಕೊಂಡು ಕತ್ತಲು ಕವಿದ ಹಾದಿಯಲ್ಲಿ ಅವನು ಹೊದತ್ತ ಸರಸರನೆ ಹೆಜ್ಜೆಹಾಕತೊಡಗಿದ. ಆತ ಓವರ್ ಕೋಟು ತೊಟ್ಟ ಆ ಯುವಕನಿಗಾಗಿ ಎಲ್ಲ ಕಡೆ ಹುಡುಕಿದ. ಊಹೂಂ, ಆತ ಎಲ್ಲೂ ಕಾಣಿಸಲಿಲ್ಲ. ಅವನಿಗೆ ಹುಡುಕಿ ಹುಡುಕಿ ಸಾಕಾಯಿತು. ಇನ್ನು ಅವನಿಗಾಗಿ ಹುಡುಕುವದು ವ್ಯರ್ಥ ಪ್ರಯತ್ನವೇ ಸರಿ ಎಂದು ಭಾವಿಸಿ ತಾನು ಕುಳಿತಿದ್ದ ಜಾಗಕ್ಕೆ ವಾಪಾಸಾಗಬೇಕು ಎಂದುಕೊಳ್ಳುತ್ತಿದ್ದಂತೆ ಮುಖ್ಯರಸ್ತೆಯ ಪಕ್ಕದಲ್ಲಿ ಓವರ್ ಕೋಟು ತೊಟ್ಟ ಯುವಕನೊಬ್ಬ ನಿಂತಿರುವದು ಕಾಣಿಸಿತು. ಆತ ಸಂಚಾರ ದಟ್ಟಣೆಯ ಆ ರಸ್ತೆಯನ್ನು ದಾಟಲು ಹರಸಾಹಸಪಡುತ್ತಿದ್ದ. ಗೋರ್ಟ್ಸ್‍ಬೈ ಅವನತ್ತ ರಭಸದಿಂದ ನಡೆದನು. ಗೋರ್ಟ್ಸ್‍ಬೈ ತನ್ನತ್ತ ರಭಸದಿಂದ ನಡೆದುಬರುವದನ್ನು ನೋಡಿ ಆ ಯುವಕನಿಗೆ ಅನುಮಾನವಾಯಿತು. ಅವನು ಭಯ ಮಿಶ್ರಿತ ನಾಚಿಕೆಯಿಂದ ಅವನಿಗೆ ಮುಖ ತೋರಿಸಲಾಗದೆ ತಕ್ಷಣ ಆ ಕಡೆ ಮುಖ ಮಾಡಿ ನಿಂತನು.

    “ನಿಮ್ಮ ಕಥೆ ನಿಜವೆಂದು ನಂಬಲು ನನಗೆ ಸಾಕ್ಷಿಯೊಂದು ಸಿಕ್ಕಿದೆ,” ಗೋರ್ಟ್ಸ್‍ಬೈ ತನ್ನ ಕೈಯಲ್ಲಿದ್ದ ಸೋಪನ್ನು ತೋರಿಸುತ್ತಾ ಹೇಳಿದ, “ನೀವು ಅಲ್ಲಿ ಕುಳಿತುಕೊಳ್ಳಬೇಕಾದರೆ ಬಹುಶಃ ಇದು ನಿಮ್ಮ ಓವರ್‍ ಕೋಟಿನ ಜೇಬಿನಿಂದ ಕೆಳಕ್ಕೆ ಬಿದ್ದಿರಬಹುದನಿಸುತ್ತೆ. ನೀವು ಹೋದ ಮೇಲೆ ನನಗಿದು ಸಿಕ್ಕಿತು. ನಾನು ನಿಮ್ಮನ್ನು ನಂಬದಿದ್ದಕ್ಕೆ ಕ್ಷಮೆಯಿರಲಿ. ನೀವು ಹೇಳಿದ ಕಥೆಗೂ ಹಾಗೂ ನೀವಿದ್ದ ಸ್ಥಿತಿಗೂ ಒಂಚೂರು ತಾಳೆಯಾಗುತ್ತಿರಲಿಲ್ಲವಾದ್ದರಿಂದ ನಾನು ನಿಮ್ಮನ್ನು ನಂಬಲಿಲ್ಲ. ಈಗ ನನಗೆ ಸಾಕ್ಷಿ ಸಿಕ್ಕಿದ್ದರಿಂದ ನಾನದಕ್ಕೆ ನ್ಯಾಯ ಒದಗಿಸಲೇಬೇಕು. ತಗೊಳ್ಳಿ ಈ ಹಣವನ್ನು. ನಾನು ಇದನ್ನು ನಿಮಗೆ ಸಾಲವಾಗಿ ಕೊಡುತ್ತಿರುವೆ.”
     
    ಆ ಯುವಕ ತನ್ನೆಲ್ಲಾ ಅನುಮಾನಗಳನ್ನು ತೆಗೆದುಹಾಕುತ್ತಾ ಆ ಹಣವನ್ನು ಇಸಿದುಕೊಂಡು ಕಿಸೆಯಲ್ಲಿಟ್ಟುಕೊಂಡನು.

    “ಇದು ನನ್ನ ಅಡ್ರೆಸ್ ಕಾರ್ಡ್,” ಗೋರ್ಟ್ಸ್‍ಬೈಹೇಳಿದ. “ಒಂದು ವಾರದೊಳಗೆ ಈ ವಿಳಾಸಕ್ಕೆ ನನ್ನ ಹಣವನ್ನು ಹಿಂತಿರುಗಿಸಿ. ಇದೋ, ನಿಮ್ಮ ಸೋಪು ಇಲ್ಲಿದೆ. ಇದನ್ನೂ ಇಟ್ಕೊಳ್ಳಿ. ಇದು ನಿಮ್ಮ ಒಳ್ಳೆ ಫ್ರೆಂಡ್. ಮತ್ತೆ ಇದನ್ನು ಕಳೆದುಕೊಳ್ಳಬೇಡಿ.”
    “ಇದು ನಿಮಗೆ ಸಿಕ್ಕಿದ್ದು ನನ್ನ ಅದೃಷ್ಟ,” ಅದನ್ನು ತೆಗೆದುಕೊಳ್ಳುತ್ತಾ ಆ ಯುವಕ ಹೇಳಿದ. ಮರುಕ್ಷಣ ಅವನಿಗೆ ಧನ್ಯವಾದ ಅರ್ಪಿಸಿ ಅಲ್ಲಿಂದ ಸಣ್ಣದಾಗಿ ಸಿಳ್ಳೆ ಹಾಕುತ್ತಾ ನೈಟ್ಸ್‍ಬ್ರಿಡ್ಜ್ ಕಡೆಗೆ ನಡೆದನು.

    “ಪೂರ್ ಬಾಯ್, ತುಂಬಾ ತೊಂದರೆಯನ್ನು ಅನುಭವಿಸಿದ!” ಗೋರ್ಟ್ಸ್‍ಬೈ ತನ್ನಷ್ಟಕ್ಕೆ ತಾನೇ ಹೇಳಿಕೊಂಡನು. “ಇಕ್ಕಟ್ಟಿನಲ್ಲಿ ಸಿಲುಕಿದ್ದ ಅವನಿಗೆ ನನ್ನ ಸಹಾಯದಿಂದ ಖಂಡಿತ ನಿರಾಳವಾಗಿರುತ್ತೆ. ಈ ಘಟನೆಯಿಂದ ನಾನೊಂದು ಪಾಠವನ್ನು ಕಲಿತೆ. ಇನ್ನು ಮುಂದೆ ನಾನು ಯಾವತ್ತೂ ಪರಿಸ್ಥಿತಿಯ ಆಧಾರದ ಮೇಲೆ ವ್ಯಕ್ತಿಗಳನ್ನು ಅಳೆಯಲು ಹೋಗಬಾರದು.”

     5  


    ಗೋರ್ಟ್ಸ್‍ಬೈಗೆ ಏನನ್ನಿಸಿತೋ ಆತ ಮತ್ತೆ ಇಷ್ಟೊತ್ತು ನಡೆದ ನಾಟಕದ ಜಾಗಕ್ಕೆ ಮರಳಿ ನಡೆದುಕೊಂಡು ಬಂದನು. ಅಲ್ಲಿ ಹಿರಿಯ ನಾಗರಿಕರೊಬ್ಬರು ಬೆಂಚಿನ ಕೆಳಗೆ ಹಾಗೂ ಅದರ ಸುತ್ತಮುತ್ತ ಏನನ್ನೋ ಹುಡುಕುತ್ತಿರುವದು ಅವನಿಗೆ ಕಾಣಿಸಿತು. ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ಅದೇ ಬೆಂಚಿನ ಮೇಲೆ ತನ್ನ ಪಕ್ಕದಲ್ಲಿ ಕುಳಿತಿದ್ದ ಹಿರಿಯರೇ ಅವರು ಎಂದು ಗೋರ್ಟ್ಸ್‍ಬೈ ಕೂಡಲೇ ಗುರುತಿಸಿದ.

    “ನೀವು ಏನನ್ನಾದರು ಕಳೆದುಕೊಂಡಿರುವಿರಾ?”  ಗೋರ್ಟ್ಸ್‍ಬೈ ಅವರನ್ನು ಕೇಳಿದ.

    “ಹೌದು ಸರ್, ನನ್ನ ಸೋಪು ಕಳೆದುಹೋಗಿದೆ.” 

    ಮೂಲ ಇಂಗ್ಲೀಷ್: ಎಚ್.ಎಚ್.ಮನ್ರೋ (ಸಾಕಿ)
    ಕನ್ನಡಕ್ಕೆ: ಉದಯ್ ಇಟಗಿ
        
    http://avadhimag.com/2015/04/18/%E0%B2%89%E0%B2%A6%E0%B2%AF%E0%B3%8D-%E0%B2%87%E0%B2%9F%E0%B2%97%E0%B2%BF-%E0%B2%85%E0%B2%A8%E0%B3%81%E0%B2%B5%E0%B2%BE%E0%B2%A6%E0%B2%BF%E0%B2%B8%E0%B2%BF%E0%B2%A6-%E0%B2%95%E0%B2%A5%E0%B3%86/
      

        
        


    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ

  • ಶುಕ್ರವಾರ, ಏಪ್ರಿಲ್ 10, 2015
  • ಬಿಸಿಲ ಹನಿ
  • (ಈ ಕವಿತೆ ಇಸ್ರೇಲಿಗರು ಪ್ಯಾಲೈಸ್ತೇನಿಯನ್‍ರ ಮೇಲೆ ನಡೆಸುವ ರಾಜಕೀಯ ಮತ್ತು ಸಾಂಸ್ಕೃತಿಕ ದಬ್ಬಾಳಿಕೆಯನ್ನು ವಿರೋಧಿಸುವದರ ಜೊತೆಗೆ ಅವರ ಅಸಹಾಯಕತೆಯನ್ನು ಸಹ ಸೂಚಿಸುತ್ತದೆ. ದುರಂತವೆಂದರೆ ಈ ಪ್ರಕ್ರಿಯೆ ಈಗಲೂ ಮುಂದುವರಿಯುತ್ತಿದೆ ಮತ್ತು ಆ ಕಾರಣಕ್ಕಾಗಿಯೇ ಪ್ಯಾಲೈಸ್ತೇನಿಯನ್‍ರು ನಮ್ಮನ್ನು ಇಸ್ರೇಲಿಗರ ಹಿಡಿತದಿಂದ ಬಿಡುಗಡೆಗೊಳಿಸಿ ನಮಗೆ ಪ್ರತ್ಯೇಕ ರಾಜ್ಯವನ್ನು ಕೊಡಿ ಎಂದು ಕೇಳುತ್ತಲೇ ಇದ್ದಾರೆ. ಹಾಗಾಗಿ ಅಲ್ಲಿ ಮೇಲಿಂದ ಮೇಲೆ ರಕ್ತಪಾತವಾಗುತ್ತಿದೆ. ಅಂದ್ಹಾಗೆ ಸಮಿಹ ಆಲ್-ಕಾಶೀಮ್ ಒಬ್ಬ ಪ್ಯಾಲೆಸ್ತೇನಿಯನ್ ಕವಿ. ಈ ಕವಿತೆಯಲ್ಲಿ ಕವಿಯು ಇಸ್ರೇಲಿಗರ ವಿರುದ್ಧ ಸಿಟ್ಟು, ಆಕ್ರೋಶ, ವ್ಯಂಗ್ಯ ಮತ್ತು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾನೆ.) 

    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ
    ಇಲ್ಲವೇ ಗೆಳೆತನ, ಭ್ರಾತೃತ್ವ ಅಥವಾ ಸಾಂಗತ್ಯದ ಬಗ್ಗೆ ಹಾಡಲಿ.
    ಯಾರಾದರು ಕಾಗೆಗಳ ಬಗ್ಗೆ ಹಾಡಲಿ
    ಇಲ್ಲವೇ ಮುರಿದು ಬಿದ್ದ ಪಾರಿವಾಳಗಳ ಗೋಪುರಗಳ
    ಮೇಲೆ ಬಾವಲಿಗಳು ಕಟ್ಟಿರುವ ಗೂಡುಗಳ ಬಗ್ಗೆ ಹಾಡಲಿ.
    ಅಥವಾ ನನ್ನ ಕಾವ್ಯದ ಸಾಲುಗಳಲ್ಲಿ
    ಸಿಲಕಿರುವ ಅವಶೇಷಗಳ ಬಗ್ಗೆಯಾದರೂ ಹಾಡಲಿ.
    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ
    ಹೊಲಗದ್ದೆಗಳಲ್ಲಿ ಬಾಗಿ ಬಳುಕುತ್ತಿದ್ದ ತೆನೆಗಳ ಬಗ್ಗೆ ಹಾಡಲಿ
    ಅಥವಾ ಅಲ್ಲಿ ಪ್ರತಿಧ್ವನಿಸುವ ಕೊಯ್ಲುಗಾರರ ಹಾಡುಗಳ ಬಗ್ಗೆಯಾದರೂ ಹಾಡಲಿ.
    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ
    ಮುಳ್ಳುತಂತಿ ಬೇಲಿಯ ಹಿಂದೆ  ಕತ್ತಲ ಕೂಪದಲ್ಲಿ ಮುಳುಗಿರುವ ನನ್ನ ಜನರ ಬಗ್ಗೆ ಹಾಡಲಿ
    ಇಲ್ಲವೇ ಬಾಗಿ ನಿಂತ ಟೆಂಟ್ ನಗರಗಳ ಬಗ್ಗೆ
    ಅಥವಾ ಅಲ್ಲಿ ಬದುಕುವ ಜನರ ಬಗ್ಗೆ ಹಾಡಲಿ
    ಇಲ್ಲ ಅವರ ಕೋಪ-ತಾಪಗಳ ಬಗ್ಗೆಯಾದರೂ ಹಾಡಲಿ.
    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ
    ಇಲ್ಲವೇ ಬದುಕು ಸುಟ್ಟು ಕರಕುಲಾಗಿರುವ ನನ್ನ ಜನರ ಬಗ್ಗೆ ಹಾಡಲಿ
    ಅಥವಾ ಯಾರಿಗೂ ತೊಂದರೆ ಕೊಡದ ಇಲ್ಲಿಯ ಮುಗ್ಧ ಜನರ ಬಗ್ಗೆ ಹಾಡಲಿ.
    ಇಲ್ಲಿ ಸುರಿದಿದೆ
    ಎಲ್ಲವೂ ಹೆಚ್ಚಾಗಿಯೇ ಸುರಿದಿದೆ
    ಅವರ ಪೂರ್ವಿಕರು ಅವರಿಗೆ ಹೇರಳವಾಗಿ ಬಿಟ್ಟುಹೋಗಿದ್ದಾರೆ
    ಅಯ್ಯೋ, ಅವರಿಗಷ್ಟೇ ಅಲ್ಲ ಹೊರಗಿನವರಿಗೂ ಸಹ.
    ನಮ್ಮ ಪೂರ್ವಿಕರು ಬೆವರು ಸುರಿಸಿ ದುಡಿದುದರಲ್ಲಿ ಪಾಲು ಅವರಿಗೀಗ
    ಹೊಟ್ಟೆ ಬಿರಿಯುವಷ್ಟು ತಿನ್ನಲಿ.
    ಅವರು ಔತಣಕೂಟದಲ್ಲಿ ತಿಂದು ಬಿಟ್ಟಿದ್ದನ್ನು ನಮ್ಮ ಮಕ್ಕಳು ತಿನ್ನಲಿ 
    ಯಾರಾದರು ಶಾಂತಿಗೀತೆಯೊಂದನ್ನು ಹಾಡಲಿ
    ನನ್ನ ದೇಶದಲ್ಲಿ, ಅದರ ಬೆಟ್ಟ-ಗುಡ್ಡಗಳಲ್ಲಿ ಹಾಗೂ ಅದರ ಕಣಿವೆ-ಕಂದರಗಳಲ್ಲಿ.
    ಯಾಕೆಂದರೆ ಇಲ್ಲಿ ಶಾಂತಿ ಕೊಲೆಯಾಗಿ ಹೋಗಿದೆ.
    ಅರೇಬಿ ಮೂಲ: ಸಮಿಹ ಆಲ್-ಕಾಶೀಮ್
    ಕನ್ನಡಕ್ಕೆ: ಉದಯ್ ಇಟಗಿ
    http://avadhimag.com/2015/04/10/%E0%B2%AF%E0%B2%BE%E0%B2%B0%E0%B2%BE%E0%B2%A6%E0%B2%B0%E0%B3%81-%E0%B2%B6%E0%B2%BE%E0%B2%82%E0%B2%A4%E0%B2%BF%E0%B2%97%E0%B3%80%E0%B2%A4%E0%B3%86%E0%B2%AF%E0%B3%8A%E0%B2%82%E0%B2%A6%E0%B2%A8/