ಮೊಟ್ಟ ಮೊದಲಿಗೆ ನಾನು ಬಿ. ಸುರೇಶ್ ಅವರಿಗೆ ಒಂದು ಹ್ಯಾಟ್ಸಾಫ್ ಹೇಳುತ್ತೇನೆ-ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಪುಟ್ಟಕ್ಕನ ಮೆಡಿಕಲ್ ಕಾಲೇಜು’ ಎನ್ನುವ ಸಣ್ಣಕತೆಯೊಂದನ್ನು ‘ಪುಟ್ಟಕ್ಕನ ಹೈವೇ’ ಎಂಬ ಸುಮಾರು ಎರಡು ಗಂಟೆಗಳಷ್ಟು ಅದ್ಭುತ ಸಿನಿಮಾವೊಂದನ್ನಾಗಿ ಮಾರ್ಪಡಿಸಿದ್ದಕ್ಕೆ. ಬಿ.ಸುರೇಶ್ ಅವರ ಬಹಳಷ್ಟು ಟೀವಿ ಧಾರಾವಾಹಿಗಳು ಹತ್ತರಲ್ಲಿ ಹನ್ನೊಂದಾಗಿ ಹೊರಬರುತ್ತವೆಯಾದರೂ ಅವರು ಆಗೊಮ್ಮೆ ಈಗೊಮ್ಮೆ ತಯಾರಿಸುವ ಸಿನಿಮಾಗಳು ಅತ್ಯದ್ಭುತವಾಗಿರುತ್ತವೆ. ಈ ಹಿಂದೆ ಅವರು ತಯಾರಿಸಿದ ‘ಅರ್ಥ’ ಸಿನಿಮಾ ಕೂಡ ಒಳ್ಳೆಯ ಸಿನಿಮಾವಾಗಿದ್ದು, ಅದು ಮೊದಲ ಅತುತ್ತಮ ಚಲನಚಿತ್ರವೆಂದು ರಾಜ್ಯ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತ್ತು. ಈ ಸಿನಿಮಾದ ನಾಯಕ ಎಲ್ಲವನ್ನೂ ಎಲ್ಲರನ್ನೂ ಅರ್ಥಮಾಡಿಕೊಳ್ಳಲು ಹೋಗಿ ಕೊನೆಗೆ ಏನೂ ಅರ್ಥವಾಗದೆ ಕಂಗಾಲಾಗುತ್ತಾನೆ. ಆ ಮೂಲಕ ಸುರೇಶ್ ಅವರು ಇಲ್ಲಿ ಮನುಷ್ಯರು ಹಾಗೂ ಅವರ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲುಹೋದಷ್ಟೂ ಅವರು ಸಂಕೀರ್ಣವಾಗುತ್ತಾ ಹೋಗುತ್ತಾರೆ ಎನ್ನುವ ಸಂದೇಶವನ್ನು ಕೊಡುತ್ತಾರೆ. ಆದರೆ ಈ ಸಾರಿ ಸಣ್ಣಕತೆಯೊಂದನ್ನು ತೆಗೆದುಕೊಂಡು ಅದನ್ನು ಸಮಕಾಲೀನ ಸಮಸ್ಯೆಗಳಿಗೆ ಸರಿಹೊಂದುವಂತೆ ಮಾರ್ಪಡಿಸಿ ಅದನ್ನೊಂದು ಒಳ್ಳೆ ಸಿನಿಮಾವನ್ನಾಗಿ ತಯಾರಿಸಿದ್ದಾರೆ. ಇದೀಗ ಅದು ಬಿಡುಗಡೆಯಾಗಿದ್ದು ಹಾಗೂ ಈಗಷ್ಟೆ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದು ನಮಗೆಲ್ಲಾ ಗೊತ್ತೇ ಇದೆ. ಬಿ.ಸುರೇಶ್ ಅವರೇ ಹೇಳುವಂತೆ ಅವರ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿದ್ದು ಹಾಗೂ ರಾಷ್ಟ್ರಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದು ಕೇವಲ ಕಾಕತಾಳಿಯ ಮಾತ್ರ.
‘ಪುಟ್ಟಕ್ಕನ ಹೈವೇ’ ಹೆಸರೇ ಹೇಳುವಂತೆ ಹೈವೇ ಬರುವದಕ್ಕಿಂತ ಮುಂಚೆ ಪುಟ್ಟಕ್ಕನ ಬದುಕಿನ ಆಸು ಪಾಸುಗಳು ಹೇಗಿದ್ದವು ಮತ್ತು ಅವು ಹೈವೇ ಬಂದಮೇಲೆ ಹೇಗಾದವು ಎನ್ನುವದನ್ನು ತುಂಬಾ ಕಲಾತ್ಮಾಕವಾಗಿ ಕಟ್ಟಿಕೊಡುತ್ತದೆ. ಅದನ್ನು ಸುಂದರ ನಿರೂಪಣೆ ಮತ್ತು ಅರ್ಥಗರ್ಭಿತ ದೃಶ್ಯ ರೂಪಕಗಳೊಂದಿಗೆ ಸುರೇಶ್ ಮತ್ತಷ್ಟು ಮೆರಗುಗೊಳಿಸುತ್ತಾರೆ. ಆಧುನಿಕ ಅಭಿವೃದ್ಧಿಯ ನೆಪದಲ್ಲಿ ಏನೊಂದು ಅರಿಯದ ಪುಟ್ಟಕ್ಕ ಮತ್ತು ಅವಳಂಥವರ (ಮುಖ್ಯವಾಗಿ ರೈತರ) ಶೋಷಣೆ ಹೇಗೆ ಆಗುತ್ತದೆ ಎನ್ನುವದನ್ನು ಹೇಳುತ್ತಲೇ ಎಲ್ಲರೂ ಸಮಾನರೇ ಎಂದು ಸಾರುವ ಈ ದೇಶದಲ್ಲಿ ಬಡವರ ಪಾಲಿಗೆ ನ್ಯಾಯ ಎನ್ನುವದು ಯಾವಾಗಲೂ ಹೇಗೆ ಮರಿಚಿಕೆಯಾಗಿ ಉಳಿಯುತ್ತದೆ ಎನ್ನುವದನ್ನು ನೋಡಿದರೆ ನಮ್ಮ ಕರುಳು ಚುರ್ರೆನ್ನುತ್ತದೆ. ಬಡವರ ಶೋಷಣೆ, ಹತಾಶೆ, ನೋವುಗಳು ನಮ್ಮನ್ನು ತಟ್ಟುತ್ತಿದ್ದಂತೆಯೇ ನಮಗೆ ಅವರ ಮೇಲೆ ಅನುಕಂಪ ಬರುವದು ಸಹಜ. ಆದರೆ ಅದರ ಬೆನ್ನ ಹಿಂದೆಯೇ ದಿನಾ ಕಾರು, ಬೈಕಲ್ಲಿ ಓಡಾಡುವವ ನಮ್ಮಂತವರಿಗೆ ಇಂಥದೊಂದು ಹೈವೇ ಬೇಕೆನಿಸುವದು ಅಷ್ಟೇ ಸಹಜ. ಆ ಸಹಜ ಹಂಬಲದ ಹಿಂದೆ ಪುಟ್ಟಕ್ಕನಂತವರ ತ್ಯಾಗ, ಶೋಷಣೆ ಹಾಗೂ ನೋವು ಇರುತ್ತದೆ ಎಂದು ನಮಗೆ ಒಂಚೂರು ಅನಿಸುವದೇ ಇಲ್ಲ. ಅದನ್ನು ನಮಗೆ ಮನದಟ್ಟು ಮಾಡಲೆಂದೇ ನಿರ್ದೇಶಕ ಪುಟ್ಟಕ್ಕನ ಕಥೆಯನ್ನು ಅದ್ಭುತವಾಗಿ ಹೇಳುತ್ತಾ ಹೋಗುತ್ತಾರೆ. ಚಿತ್ರದಲ್ಲಿ ಪುಟ್ಟಕ್ಕ ಹೇಳುತ್ತಾಳೆ- ‘ಈ ಬದುಕಿನ್ಯಾಗೆ ಸೋಲಿನ ಮೇಲೆ ಸೋಲು ಬರ್ತವೆ. ಆದರೆ ಹೋರಾಡೋ ಹುಮ್ಮಸ್ಸು ಮಾತ್ರ ಹೋಗೋದೇ ಇಲ್ಲ ನೋಡು.’ ಆದರೆ ಕೊನೆಯಲ್ಲಿ ಅವಳ ಬದುಕಿಗಿಂತ ಅವಳಿರುವ ವ್ಯವಸ್ಥೆ ಅವಳ ಹುಮ್ಮಸ್ಸನ್ನು ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ. ಅವಳು ಮಾತ್ರವಲ್ಲ ಅವಳಂತೆ ಹೋರಾಡುವ ಎಲ್ಲರೂ ಹುಮ್ಮಸ್ಸು ಕಳೆದುಕೊಂಡು ಪರಿಸ್ಥಿತಿಯೊಂದಿಗೆ ರಾಜಿಮಾಡಿಕೊಂಡು ಹೊಸ ಬದುಕು ಕಟ್ಟಿಕೊಳ್ಳುತ್ತಾರೆ. ಆದರೆ ಪುಟ್ಟಕ್ಕ ಮಾತ್ರ ಇತ್ತ ತನ್ನ ಮೊದಲಿನ ಬದುಕು ಸಿಗದೆ ಅತ್ತ ರಾಜಿಮಾಡಿಕೊಳ್ಳದೆ ದಿಕ್ಕು ತೋಚದವಳಾಗುತ್ತಾಳೆ.
‘ಪುಟ್ಟಕ್ಕನ ಹೈವೇ’ ಆರಂಭವಾಗುವದೇ ಅವಳು ಹೈವೇಗುಂಟ ನಡೆದುಕೊಂಡು ಹೋಗುವ ದೃಶ್ಯದೊಂದಿಗೆ. ಹಾಗೆ ನಡೆದುಕೊಂಡು ಹೋಗುತ್ತಲೇ ಅವಳು ಫ್ಲ್ಯಾಶ್ ಬ್ಯಾಕ್ ಗೆ ಜಾರುತ್ತಾಳೆ. ಆ ಹೈವೇ ಬರುವದಕ್ಕಿಂತ ಮುಂಚೆ ಅಲ್ಲಿ ಒಂದಷ್ಟು ಹೊಲ ಮಾಡಿಕೊಂಡು ಅವಳು ತನ್ನ ಗಂಡನೊಟ್ಟಿಗೆ ನೆಮ್ಮದಿಯಿಂದ ಇರುತ್ತಾಳೆ. ಆದರೆ ವಿಧಿಯಾಟವೇನೋ ಗಂಡ ಹೃದಯಾಘಾತದಿಂದ ಸತ್ತುಹೋಗುತ್ತಾನೆ. ಆದರೂ ಅವಳು ಛಲ ಬಿಡದೆ ಅದೇ ಹೊಲದಲ್ಲಿ ಗೇಯ್ಮೆ ಮಾಡಿಕೊಂಡು ತನ್ನ ಮಗಳೊಟ್ಟಿಗೆ ನೆಮ್ಮದಿಯ ಜೀವನ ನಡೆಸುತ್ತಾಳೆ. ಆಮೇಲಿಂದ ಅಲ್ಲೊಂದು ಹೈವೇ ಮಾಡಬೇಕೆಂದು ಸರಕಾರ ತೀರ್ಮಾನಿಸಿದಾಗ ಅವಳು ಮತ್ತು ಇನ್ನಿತರರು ಹೊಲ ಕಳೆದುಕೊಳ್ಳುವ ಪ್ರಸಂಗ ಬರುತ್ತದೆ. ಆಗ ಪ್ರತಿಭಟನೆಗಳು, ಹೋರಾಟಗಳು ಶುರುವಾಗುತ್ತವೆ. ಅದರಲ್ಲಿ ಪುಟ್ಟಕ್ಕನೂ ಭಾಗಿಯಾಗುತ್ತಾಳೆ. ಆದರೆ ದಿನಕಳೆದಂತೆ ಅವಳಿಗೆ ತನಗೆ ಬೆಂಬಲ ಸೂಚಿಸುವವರು ಹಾಗೂ ಸರಕಾರಿ ಅಧಿಕಾರಿಗಳ ಸೋಗಲಾಡಿತನ ಗೊತ್ತಾಗಿ ಮತ್ತಷ್ಟು ಹತಾಶಳಾಗುತ್ತಾಳೆ. ಕೊನೆಯಲ್ಲಿ ತನ್ನ ಮುಂದಿನ ಗತಿಯೇನಾಗುತ್ತದೆ ಎಂದು ಜಿಲ್ಲಾಧಿಕಾರಿಯಿಂದ ತಿಳಿದುಕೊಳ್ಳಲು ಹೋದಾಗ ಅವಳಿಗೆ ಒಂದು ಸತ್ಯ ಗೊತ್ತಾಗುತ್ತದೆ. ಅದೇನೆಂದರೆ ಅವಳು ಮತ್ತು ಅವಳೂರಿನ ಒಂದಷ್ಟು ಜನ ಈ ಹಿಂದೆ ಸರಕಾರ ಅವರಿದ್ದ ಜಾಗದಲ್ಲಿ ಒಂದು ಆಣೆಕಟ್ಟು ಕಟ್ಟಬೇಕೆಂದು ಅವರ ಜಮೀನನ್ನು ಕಿತ್ತುಕೊಂಡು ಬೇರೆ ಕಡೆ ಒಂದಷ್ಟು ಜಮೀನನ್ನು ಪರಿಹಾರ ರೂಪವಾಗಿ ನೀಡಿ ಕೈ ತೊಳೆದುಕೊಂದು ಬಿಡುತ್ತದೆ. ಅವರು ಪಾಲಿಗೆ ಬಂದಿದ್ದು ಪಂಚಾಮೃತ ಎಂದುಕೊಂಡು ಅಲ್ಲಿ ಹೇಗೋ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಪುಟ್ಟಕ್ಕ ಮತ್ತು ಅವಳ ಗಂಡ ಅದನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕು ಎನ್ನುವ ತಿಳುವಳಿಕೆ ಇರದಷ್ಟು ಅಮಾಯಕರು. ಈಗ ಸರಕಾರ ಅಲ್ಲಿ ಹೈವೇ ಮಾಡಬೆಕೆಂದು ಏನೋ ಒಂದಿಷ್ಟು ಪರಿಹಾರ ನೀಡಿ ಮತ್ತೆ ಅವರ ಜಮೀನನ್ನು ಕಿತ್ತುಕೊಳ್ಳಲು ನೋಡುತ್ತದೆ. ಆದರೆ ಪುಟ್ಟಕ್ಕನಿಗೆ ಅವಳ ಹೊಲ ಅವಳ ಹೆಸರಲ್ಲಿಲ್ಲ ಎಂಬ ಕಾರಣಕ್ಕಾಗಿ ಅವಳಿಗೆ ಆ ಪರಿಹಾರ ಸಿಗದೆ ಹೋಗುತ್ತದೆ. ಪುಟ್ಟಕ್ಕ ದಿಗ್ಭ್ರಾಂತಳಾಗಿ ಮುಂದೇನು ಮಾಡಬಹುದೆಂದು ಜಿಲ್ಲಾಧಿಕಾರಿಯನ್ನು ಕೇಳುತ್ತಾಳೆ. ಆಕೆ ಪುಟ್ಟಕ್ಕನಿಗೆ “ಈಗ ನಿನ್ನನ್ನು ಉಳಿಸೋದಕ್ಕೆ ಆ ಮುಖ್ಯಮಂತ್ರಿಯಿಂದ ಮಾತ್ರ ಸಾಧ್ಯ. ನೀನು ಅವರನ್ನೇ ಹೋಗಿ ಕಾಣು” ಎಂದು ಹೇಳುತ್ತಾಳೆ. ಆ ಪ್ರಕಾರ ಪುಟ್ಟಕ್ಕ ಬೆಂಗಳೂರಿಗೆ ಹೊರಡಲು ಅನುವಾಗುತ್ತಾಳೆ. ಹೋಗುವ ಮುನ್ನ ತನಗಿದ್ದ ಒಬ್ಬಳೇ ಒಬ್ಬಳು ಮಗಳನ್ನು ತನ್ನ ಆಪ್ತ ಗೆಳತಿ ಅಂಬಕ್ಕನ ಸುಪರ್ದಿಗೆ ಒಪ್ಪಿಸಿ “ನಾ ಬರೋಗಂಟ ನನ್ನ ಮಗಳು ನಿನ್ನ ಹತ್ರಾನೆ ಇರ್ಲಿ. ನೀನು ಅವಳನ್ನ ಚನ್ನಾಗಿ ನೋಡಿಕೊಳ್ಳತೀಯಾ ಅನ್ನೋ ನಂಬಿಕೆ ನನಗಿದೆ” ಎಂದು ಹೇಳಿ ಆ ಭರವಸೆಯಲ್ಲಿ ಬೆಂಗಳೂರಿಗೆ ಹೊರಡುತ್ತಾಳೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಯ ಮನೆಗೆ ಬರುತ್ತಿದ್ದಂತೆ ಸರಕಾರ ಬಿದ್ದುಹೋಗಿ ಎಲ್ಲರೂ ತಂತಮ್ಮ ಖುರ್ಚಿಯನ್ನು ಉಳಿಸಿಕೊಳ್ಳುವದರಲ್ಲಿ ನಿರತರಾಗಿದ್ದಾರೆ ಇನ್ನು ಅವಳ ಸಮಸ್ಯೆಗೆ ಪರಿಹಾರ ಸೂಚಿಸುವವರು ಅಲ್ಲಿ ಯಾರೂ ಇಲ್ಲ ಎನ್ನುವದು ಗೊತ್ತಾಗುತ್ತದೆ. ಮುಖ್ಯಮಂತ್ರಿಯ ಮನೆಯ ಮುಂದೆ ಒಬ್ಬ ಟೀವಿ ಮಾಧ್ಯಮದ ಪ್ರತಿನಿಧಿಯಿದ್ದಾನೆ. ಅವನು ಈಗಾಗಲೇ ಬಿದ್ದ ಸರಕಾರದ ಬಗ್ಗೆ ವರದಿಯನ್ನು ನೀಡಲು ಬಂದಿದ್ದಾನೆ. ಈ ಹಿಂದೆ ಅವನು ಹೈವೇ ಬರುವದಕ್ಕಿಂತ ಮುಂಚೆ ರೈತರ ಹೋರಾಟದ ಸಂದರ್ಭದಲ್ಲಿ ಪುಟ್ಟಕ್ಕನನ್ನು ಸಂದರ್ಶಿಸಿದ್ದರಿಂದ ಆಕೆ ಅವನಿಗೆ ಗೊತ್ತು. ಅವನನ್ನು ನೋಡಿದವಳೆ ಅವನಿಂದೇನಾದರೂ ತನಗೆ ನ್ಯಾಯ ಸಿಗುತ್ತದಾ ಎಂದು ಪುಟ್ಟಕ್ಕ ಅವನ ಹತ್ತಿರ ತನ್ನ ದುಃಖ ತೋಡಿಕೊಳ್ಳುತ್ತಾಳೆ. ಅವನೋ ಯವುದಕ್ಕೂ ಇರಲಿ ತನ್ನ ಟೀವಿಗೆ ಒಂದು ಒಳ್ಳೆ ಶೋ ಆಗುತ್ತದೆಂದು ಹೀಗ್ಙೀಗೆ ಹೇಳು, ಹೀಗ್ಙೀಗೆ ಅಧಿಕಾರಿಗಳ ವಿರುದ್ಧ ಬಯ್ಯಿ ಎಂದು ಹೇಳಿ ಅವಳು ಹೇಳುವದನ್ನೆಲ್ಲಾ ಶೂಟ್ ಮಾಡಿಕೊಂಡು ನೆಟ್ಟಗೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಪುಟ್ಟಕ್ಕ ಕುಸಿದುಬೀಳುತ್ತಾಳೆ. ಆಮೇಲಿಂದ ಪುಟ್ಟಕ್ಕ ತನ್ನೂರು ಬಿಸಲಳ್ಳಿಗೆ ಬರುವಷ್ಟರಲ್ಲಿ ಊರಲ್ಲಿ ಅದಾಗಲೇ ಹೈವೇ ಬಂದು ಬಹಳಷ್ಟು ಬದಲಾಗಿರುತ್ತದೆ. ತನ್ನ ಹೊಲ ಎಲ್ಲಿ ಎಂದು ಕೇಳುತ್ತಾ ಬರುತ್ತಾಳೆ. ಯಾರೋ ಅವಳ ಗೆಳತಿ ಅಂಬಕ್ಕನ ಮನೆಯನ್ನು ತೋರಿಸುತ್ತಾರೆ. ಪುಟ್ಟಕ್ಕ ಅಂಬಕ್ಕನ ಮನೆಗೆ ಬರುತ್ತಿದ್ದಂತೆಯೇ ಅವಳು ಮತ್ತು ಅವಳ ಗಂಡ ಇಬ್ಬರೂ ಸೇರಿ ಹೈವೇ ಪಕ್ಕದಲ್ಲಿಯೇ ಒಂದು ಡಾಬಾ ತೆರೆದಿದ್ದು ಗೊತ್ತಾಗುತ್ತದೆ. ಪುಟ್ಟಕ್ಕ ವಾಪಾಸು ಬರುವದೇ ಇಲ್ಲ ಎಂದುಕೊಂಡಿದ್ದ ಅಂಬಕ್ಕ ಗೆಳತಿಯನ್ನು ಸಡಗರದಿಂದ ಬರಮಾಡಿಕೊಳ್ಳುತ್ತಾಳೆ. ಪುಟ್ಟಕ್ಕ ಮೊದಲು ತನ್ನ ಮಗಳ ಬಗ್ಗೆ ಕೇಳದೆ ತನ್ನ ಹೊಲ ಎಲ್ಲಿದೆ ಎಂದು ಕೇಳುತ್ತಾಳೆ. ಅದಕ್ಕೆ ಅಂಬಕ್ಕ ಅವಳು ನಿಂತಿರುವ ಜಾಗವೇ ಅವಳ ಹೊಲ ಎಂದು ಹೇಳುತ್ತಾಳೆ. ಆಗ ಅಂಬಕ್ಕನ ಗಂಡ ನಡೆದಿದ್ದಲ್ಲೆವನ್ನು ಹೇಳುತ್ತಾನೆ. ಅವಳು ಬೆಂಗಳೂರಿಗೆ ಹೋದ ಮೇಲೆ ಅವಳ ಹೊಲವನ್ನು ಸರಕಾರದವರು ಆಕ್ರಮಿಸಿಕೊಂಡಿದ್ದು, ಅಲ್ಲಿಂದ ಸರಕಾರ ಬೇಗನೆ ಕಾಮಗಾರಿಯನ್ನು ಆರಂಭಿಸಿದ್ದು, ಹೈವೇ ಅವಳ ಗಂಡನ ಗೋರಿಯ ಮೇಲೆ ಹಾದು ಹೊದದ್ದು ಹಾಗೂ ಈಗ ಅವನು ಅವಳ ಹೊಲದಲ್ಲಿ ಉಳಿದ ನಾಲ್ಕು ಗುಂಟೆ ಜಾಗವನ್ನು ಸರಕಾರದಿಂದ ಕೊಂಡುಕೊಂಡು ಅಲ್ಲೊಂದ ಡಾಬಾ ಅರಂಭಿಸಿದ್ದು ಎಲ್ಲವನ್ನೂ ಹೇಳುತ್ತಾನೆ. ಪುಟ್ಟಕ್ಕ ಇದೆಲ್ಲವನ್ನು ಕೇಳಿ ಜರ್ಝರಿತಳಾಗುತ್ತಿದ್ದಂತೆ ಅವಳಿಗೆ ಹೈವೇ ಕೆಳಗಿನಿಂದ ತನ್ನ ಮಗಳು ಸೆರಗು ಮತ್ತು ಕೂದಲನ್ನು ಸರಿಪಡಿಸಿಕೊಳ್ಳುತ್ತಾ ಬರುವದು ಕಾಣಿಸುತ್ತದೆ. ಅವಳಿಗೆ ತಕ್ಷಣ ತನ್ನ ಮಗಳು ಸೂಳೆಗಾರಿಕೆಗೆ ಇಳಿದಿದ್ದಾಳೆ ಎಂದು ಗೊತ್ತಾಗಿಹೋಗುತ್ತದೆ. ಅಂಬಕ್ಕ ಅಪರಾಧಿ ಪ್ರಜ್ಞೆಯಿಂದ ನಲುಗಿಹೋಗುತ್ತಾ “ನಿನ್ನ ಮಗಳನ್ನು ನಾನು ನಿಂಗೆ ಕೊಟ್ಟ ಮಾತಿನಂತೆ ನೋಡಿಕೊಳ್ಳಲಾಗಲಿಲ್ಲ ಕ್ಷಮಿಸಿಬಿಡೆ ಪುಟ್ಟಕ್ಕ” ಎಂದು ಅಳುತ್ತಾಳೆ. ಪುಟ್ಟಕ್ಕ ಮಾತ್ರ ಉದಾರತಯಿಂದ ಗೆಳತಿಯನ್ನು ಕ್ಷಮಿಸಿ ತನ್ನ ಮಗಳು ಹಾಗೂ ಗೆಳತಿಯನ್ನು ಕರೆದುಕೊಂಡು ಮಣ್ಣುಹಾದಿಯಲ್ಲಿ ನಡೆಯುತ್ತಾ ಹೋಗುತ್ತಾಳೆ. ಇತ್ತಕಡೆ ಹೈವೇ ಮೇಲೆ ಮುಂದಿನ ಎಲೆಕ್ಷನ್ ಗಾಗಿ ಪ್ರಚಾರ ಭರದಿಂದ ಸಾಗುವದನ್ನು ಕಾಣುತ್ತೇವೆ. ಆ ಪ್ರಚಾರದಲ್ಲಿ ಅಂಬಕ್ಕನ ಗಂಡನೂ ಇರುತ್ತಾನೆ.
‘ಪುಟ್ಟಕ್ಕನ ಹೈವೇ’ಯಲ್ಲಿ ಸೃಜನಶೀಲ ಮನಸ್ಸೊಂದು ಘಟನೆಯೊಂದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ಆ ಕಥೆಯ ಮೂಲಕ ಒಬ್ಬ ನಿರ್ದೇಶಕನಾದವನು ಹೇಗೆ ತನ್ನ ಆತಂಕಗಳನ್ನು ಬಿಚ್ಚಿಬಿಡಬಲ್ಲ ಎನ್ನುವದನ್ನು ಬಿ. ಸುರೇಶ್ ಸಮರ್ಥವಾಗಿ ತೋರಿಸಿಕೊಟ್ಟಿದ್ದಾರೆ. ಇಲ್ಲಿ ಸುರೇಶ್ ಅಭಿವೃದ್ಧಿ ಬೇಡ ಎಂದು ಹೇಳುತ್ತಿಲ್ಲ. ಆದರೆ ಅಭಿವೃದ್ಧಿಯ ನೆಪದಲ್ಲಿ ನಡೆಯುವ ಡೊಂಬರಾಟಗಳನ್ನು ಹೇಳುತ್ತಲೇ, ಪುಟ್ಟಕ್ಕನಂತ ಮುಗ್ಧ ಜನರ ಬದುಕು ಹೇಗೆ ಮೂರಾಬಟ್ಟಿಯಾಗುತ್ತದೆ ಎನುವದನ್ನು ಮನದಟ್ಟು ಮಾಡುತ್ತಾರೆ. ಇನ್ನು ಚಿತ್ರದಲ್ಲಿ ಬರುವ ರೂಪಕಗಳು ಅದ್ಭುತವಾಗಿವೆ. ಸಾಲಾಗಿ ಹರಿಯುವ ಇರುವೆಗಳು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಗುಳೆ ಹೊರಡುತ್ತಲೇ ಇರಬೇಕಾದ ಮುಗ್ಧ ಜನರನ್ನು, ಬಲೆ ನೇಯುವ ಜೇಡ ಮೇಲಾಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು, ಕಣ್ಣಾಮುಚ್ಚಾಲೆ ಆಡುವ ಮಿಡತೆ ನಮ್ಮ ಅಕ್ಕ ಪಕ್ಕದಲ್ಲೇ ಇರುವ ಮೋಸಗಾರರನ್ನು, ಹಾಗೂ ರಸ್ತೆಯ ಮೇಲೆ ತೆವಳುತ್ತಾ ಸಾಗುವ ಬಸವನಹುಳು ಅಭಿವೃದ್ಧಿಯನ್ನು ಒಪ್ಪಿಕೊಂದು ನಡೆಯುವ ಜನವನ್ನು ಅತ್ಯಂತ ಮಾರ್ಮಿಕವಾಗಿ ಸೂಚಿಸುತ್ತವೆ. ಇನ್ನು ಪಾತ್ರಗಳ ವಿಷಯದ ಬಗ್ಗೆ ಹೆಳುವದಾದರೆ ಶೃತಿ ಪುಟ್ಟಕ್ಕನ ನೋವು ಸಂಕಟ, ತೊಳಲಾಟವೆಲ್ಲವನ್ನು ಚನ್ನಾಗಿ ಅರ್ಥಮಾಡಿಕೊಂಡೇ ಅಭಿನಯಿಸಿದ್ದಾರೆ. ಪ್ರಕಾಶ್ ರೈ ಶನಿಕೃಷ್ಣನಾಗಿ ನಗು ನಗುತ್ತಲೇ ಪುಟ್ಟಕ್ಕನಂತವರ ನಡ ಮುರಿಯುತ್ತಾನೆ. ಇತ್ತ ಅಭಿವೃದ್ಧಿಯ ಪರವೂ ನಿಲ್ಲದೆ ಅತ್ತ ಸಂಪೂರ್ಣವಾಗಿ ವಿರೋಧಿಸದೇ ನಡುವೆ ತನ್ನ ಬೇಳೆ ಬೇಯಿಸಿಕೊಳ್ಳಲು ನೋಡುತ್ತಾನೆ. ಕೊನೆಗೆ ತನ್ನ ಮೂಲ ಐಡೆಂಟಿಯನ್ನೇ ಕಳೆದುಕೊಂಡು ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಳ್ಳುವದರ ಮೂಲಕ ಹೊಸದೊಂದು ಐಡೆಂಟಿಟಿಯನ್ನು ಕಂಡುಕೊಳ್ಳುತ್ತಾನೆ. ಪುಟ್ಟಕ್ಕನ ಗೆಳತಿಯ ಪಾತ್ರದಲ್ಲಿ ಅಂಬಕ್ಕನಾಗಿ ವೀಣಾ ಸುಂದರ್ ಬಹುಕಾಲ ನೆನಪಿನಲ್ಲಿ ಉಳಿಯುತ್ತಾರೆ. ಇನ್ನುಳಿದಂತೆ ಶ್ರೀನಿವಾಸ ಪ್ರಭು, ಅಚ್ಯುತಕುಮಾರ್ ತಮ್ಮ ಎಂದಿನ ನಟನೆಯಿಂದ ಗಮನ ಸೆಳೆಯುತ್ತಾರೆ.
ಚಿತ್ರಕ್ಕೆ ರಾಮಚಂದ್ರರ ಛಾಯಾಗ್ರಹಣ ಹಾಗೂ ಹಂಸಲೆಖ ಅವರ ಸಂಗೀತ ಸಮರ್ಥವಾಗಿ ಒದಗಿಬಂದಿವೆ. ಆದರೆ ಚಿತ್ರದ ಕೊನೆಯಲ್ಲಿ ಪುಟ್ಟಕ್ಕ ಬೆಂಗಳೂರಿಗೆ ಹೋಗಿ ವಾಪಾಸಾಗುವಾಗ ಅವಳು ತನ್ನ ಗಂಟನ್ನು ಕಳೆದುಕೊಳ್ಳುವದು ಹಾಗೂ ಅದರಿಂದಲೇ ಏನೋ ಅವಳು ತನ್ನೂರು ಬಿಸಲಳ್ಳಿಗೆ ವಾಪಾಸಾಗುವಷ್ಟರಲ್ಲಿ ಎರಡು ತಿಂಗಳಾಗಿರುವದು, ಮತ್ತು ಆ ಎರಡು ತಿಂಗಳಲ್ಲೇ ಆ ಊರಿಗೆ ಹೈವೇ ಬಂದು ಸಾಕಷ್ಟು ಬದಲಾವಣೆಯಾಗಿದ್ದು ತೀರ ನಾಟಕೀಯವೆನಿಸುತ್ತದೆ. ಏನೇ ಆಗಲಿ ನಿರ್ದೇಶಕನಾಗಿ ಸುರೇಶ್ ಹೊಸ ಸಾಧ್ಯತೆಗಳಿಗೆ ಹಂಬಲಿಸಿರುವ ಚಿತ್ರವಿದು. ತುಂಬಾ ದಿನದ ಮೇಲೆ ಒಂದು ಒಳ್ಳೆಯ ಸಿನಿಮಾ ನೊಡಿದ ಅನುಭವವಾಗುತ್ತದೆ. ಸುರೇಶ್ ಅವರಿಂದ ಇಂಥ ಚಿತ್ರಗಳು ಮತ್ತಷ್ಟು ಬರಲಿ.
-ಉದಯ್ ಇಟಗಿ