Demo image Demo image Demo image Demo image Demo image Demo image Demo image Demo image

ವಿನೂತನ ಶೈಲಿಯ ಉದಯ ಇಟಗಿ ಅವರ ನಾಟಕ- ಶೇಕ್ಸ್ ಪಿಯರನ ಶ್ರೀಮತಿ

 • ಬುಧವಾರ, ಡಿಸೆಂಬರ್ 01, 2021
 • ಬಿಸಿಲ ಹನಿ
 •  ಸೃಜನಶೀಲರು ಎಂದರೆ ಯಾರು? ಅವರ ಅಸಾಧಾರಣ ಪ್ರತಿಭೆಯಿಂದಾಗಿ ಸೃಜನಶೀಲ ವ್ಯಕ್ತಿಗಳು ವಿಭಿನ್ನ ಎನಿಸಿಕೊಳ್ಳುತ್ತಾರೆ.

  ಸಾಹಿತಿ, ಚಿತ್ರಕಲಾವಿದ, ನಟ, ಗಾಯಕ, ಕ್ರೀಡಾಪಟು ಹೀಗೆ ಸೃಜನಶೀಲ ಸ್ಟಾರ್‌ಗಳ ಪಟ್ಟಿ ಇದ್ದೇ ಇರುತ್ತದೆ. ಇವರೆಲ್ಲ ತಮ್ಮ ವಿಶಿಷ್ಟ ಪ್ರತಿಭೆಯಿಂದಾಗಿ ಲಕ್ಷಾಂತರ ಜನರಿಂದ ಆರಾಧಿಸಲ್ಪಡುತ್ತಾರೆ ಮತ್ತು ತಮ್ಮ ಕಲೆಯ ಮೂಲಕ ಅಜರಾಮರರಾಗುತ್ತಾರೆ‌. ಇವರ ಕಲಾಕೃತಿಗಳ ಮೂಲಕ ಸದಾಕಾಲ ಜೀವಂತವಾಗಿರುತ್ತಾರೆ. ಇವರಿಗೆ ಹುಟ್ಟಿದೆ ಆದರೆ ಸಾವೆಂಬುದಿಲ್ಲ. ಸತ್ತ ಮೇಲೆ ಕೂಡ ಹೊಸ ಸ್ವರೂಪ ಪಡೆದುಕೊಂಡು ಮರು ಹುಟ್ಟು ಪಡೆಯುತ್ತಲೇ ಇರುತ್ತಾರೆ.

  ಇತಿಹಾಸ ನಿರ್ಮಿಸಿದ ಕಲಾಕಾರರ ವೈಯಕ್ತಿಕ ಬದುಕಿನ ಬಗ್ಗೆ ಸಾಮಾನ್ಯರಿಗೆ ತೀವ್ರ ಕುತೂಹಲ ಉಂಟಾಗಿ, ಅದಕ್ಕೆ ತಕ್ಕಂತೆ ಅನೇಕ ಅಭಿಮಾನಿಗಳು ಸೃಷ್ಟಿಯಾಗುತ್ತಾರೆ. 

  ಸಾರ್ವಜನಿಕ ಬದುಕಿನಲ್ಲಿ ಆರಾಧಿಸಲ್ಪಡುವ ಇವರ ವೈಯಕ್ತಿಕ ಬದುಕು ಹೇಗಿರಬಹುದು? ಆದರ್ಶ ಕನಸುಗಳ ಮಾರುವ ಇವರು, ವೈಯಕ್ತಿಕ ಬದುಕಿನಲ್ಲಿ ಅವೇ ಆದರ್ಶಗಳನ್ನು ಉಳಿಸಿಕೊಂಡಿರುತ್ತಾರಾ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ವಿಚಿತ್ರ ಸತ್ಯಗಳು ಹೊರ ಬಿದ್ದಾಗ ಸಹಜವಾಗಿ ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. 

  ಆದ್ದರಿಂದ ಪ್ರತಿಯೊಬ್ಬ ಸೆಲೆಬ್ರಿಟಿಗಳ ವೈಯಕ್ತಿಕ ಬದುಕನ್ನು ಕೆದಕಲು ಹೋಗಬಾರದು. 'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. 

  ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಬದುಕು, ಅವನ ಸಾರ್ವಜನಿಕ ಬದುಕಿಗಿಂತ ಮುಕ್ತವಾಗಿ ಇರುತ್ತದೆ, ಮುಕ್ತವೆಂದರೆ ಆದರ್ಶ, ಸುಂದರ ಎಂಬರ್ಥವಲ್ಲ. ಅದು ವಿಕಾರ ಮತ್ತು ವಿಚಿತ್ರವಾಗಿ ಇರಬಹುದು ಕೂಡ! 

  ಈ ಹಿನ್ನೆಲೆಯಲ್ಲಿ ಅನೇಕ ಸೆಲೆಬ್ರಿಟಿಗಳ ಜೊತೆಗೆ ನೂರಾರು ದಂತಕಥೆಗಳು ಹುಟ್ಟಿಕೊಳ್ಳುತ್ತವೆ. ಸೃಜನಶೀಲ ವ್ಯಕ್ತಿ ಒಂದರ್ಥದಲ್ಲಿ ತಿಕ್ಕಲಾಗಿ ಕಾಣಿಸುವುದು ಸಹಜ. 


  ಏಕೆಂದರೆ ಅವನು ಕೇವಲ ಒಳ್ಳೆಯವನಾಗಿದ್ದರೆ,  ಅಥವಾ ಒಳ್ಳೆಯದನ್ನೇ ಆಲೋಚಿಸಿದರೆ ದೊಡ್ಡ ದೊಡ್ಡ ಪಾತ್ರಗಳನ್ನು ಸೃಷ್ಟಿ ಮಾಡಲಾರ. ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸಲಾರ. ಮಹಾಕಾವ್ಯಗಳಲ್ಲಿ ಒಳ್ಳೆಯವರ ಜೊತೆಗೆ ಕೆಟ್ಟ ಪಾತ್ರಗಳನ್ನು ಸೃಷ್ಟಿ ಮಾಡುವಾಗ ಸೃಜನಶೀಲ ಕವಿ ಕೆಟ್ಟದಾಗಿ ಕಲ್ಪಿಸಿಕೊಳ್ಳಬೇಕು. ಆದ್ದರಿಂದ ಕೆಲವೊಮ್ಮೆ ಈ ಸೃಜನಶೀಲರು ಕೆಟ್ಟವರಾಗಿ ಕಾಣಿಸುತ್ತಾರೆ.

  ಕಲ್ಪನಾ ಲೋಕದಲ್ಲಿ ವಿಹರಿಸದೇ, ವಿಭಿನ್ನ ಪಾತ್ರಗಳನ್ನು ಕಟ್ಟಿಕೊಡುವುದು ಅಸಾಧ್ಯ. ಪ್ರೀತಿ, ಪ್ರೇಮ, ಕಾಮ, ರಾಗ, ದ್ವೇಷ ಹಾಗೂ ವೈರಾಗ್ಯವನ್ನು ಗ್ರಹಿಸಿಕೊಂಡು, ನವರಸಗಳನ್ನು ಹೊರ ಹಾಕಬೇಕಾಗುತ್ತದೆ. ಹಾಗಿರುವಾಗ ಮನಸಿನಲ್ಲಿ ಅನೇಕ ವಿಕಾರ ಭಾವನೆಗಳು ಉತ್ಪತ್ತಿಯಾಗಿ, ವಿಸರ್ಜನೆಯಾಗುತ್ತವೆ.

  ಅವನ ಎಲ್ಲ ದೌರ್ಬಲ್ಯಗಳನ್ನು ಹತ್ತಿರದಿಂದ ನೋಡುವ ಹೆಚ್ಚು ಅವಕಾಶ ಅವನ ಕೈ ಹಿಡಿದ ಹೆಂಡತಿ ಮತ್ತು ಹತ್ತಿರದ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಇರುತ್ತದೆ. ಒಬ್ಬ ಸೆಲೆಬ್ರಿಟಿ ಸಾರ್ವಜನಿಕವಾಗಿ ಹೊರ ಬಂದಾಗ ಮುಖವಾಡ ಧರಿಸಿ ಬರಬೇಕಾಗುತ್ತದೆ. ವೈಯಕ್ತಿಕ ದೌರ್ಬಲ್ಯಗಳನ್ನು ಮರೆ ಮಾಚುವ ಪ್ರಯತ್ನ ಮಾಡುವುದು ಅವನ ಪ್ರತಿಷ್ಟೆಯನ್ನು ಕಾಪಾಡುವ ಕಾರಣಕ್ಕಾಗಿ. ಅದೇ ಖಾಸಗಿಯಾಗಿ ಇರುವಾಗ ಮುಖವಾಡ ಕಳಚಿ, ಸಹಜ ಮುಖದಲ್ಲಿ ಇರಬೇಕು. ಪಾತ್ರ ಮುಗಿದ ಮೇಲೆ ಬಣ್ಣ ಮತ್ತು ವಿಗ್ ಕಳಚಿದಂತೆ! 

  ಜಗದ್ವಿಖ್ಯಾತ ಕವಿ, ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ವೈಯಕ್ತಿಕ ಬದುಕಿನ ಕುರಿತು ಅಂತಹ ನೂರಾರು ಕತೆಗಳು ಇವೆ. ಜಗದ್ವಿಖ್ಯಾತರು ಅವರ ಹೆಂಡತಿಯರ ದೃಷ್ಟಿಯಿಂದ ಹೇಗಿರಬಹುದು? ಎಂದು ನೋಡುವ ಪ್ರಯತ್ನದ ಪ್ರತಿಫಲವೇ ಲೇಖಕ ಉದಯ ಇಟಗಿ ಬರೆದ ಏಕಾಭಿನಯ ನಾಟಕ 'ಶೇಕ್ಸ್‌ಪಿಯರ್‌‌ನ ಶ್ರೀಮತಿ.' ಜಗತ್ತಿನಲ್ಲಿ ಅತೀ ಹೆಚ್ಚು ಮನ್ನಣೆ, ಖ್ಯಾತಿ ಗಳಿಸಿದ ಇಂಗ್ಲಿಷ್ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್‌ ಕುರಿತು ಇಲ್ಲಿ ಹೇಳುವುದು ಅಪ್ರಸ್ತುತ ಅಂದುಕೊಳ್ಳುತ್ತೇನೆ. ಶೇಕ್ಸ್‌ಪಿಯರ್‌ ಎಲ್ಲರಿಗೂ ಚಿರಪರಿಚಿತ, ಅವನನ್ನು ಓದದವರಿಗೂ ಕೂಡ! 

  ಆ ಹೆಸರಿನಲ್ಲಿ ಅಂತಹ ಮಾಂತ್ರಿಕತೆ ಇದೆ. ಹೊಗಳಿಕೆ, ವ್ಯಂಗ್ಯ, ಟೀಕೆ, ಟಿಪ್ಪಣೆಗಳಿಗೆ ಅವನ ಹೆಸರನ್ನು ಬಳಸುತ್ತಾರೆ. ಉದಾಹರಣೆಗೆ ಯಾರನ್ನಾದರೂ, ನೀ ಬರಹಗಾರ ಅಲ್ಲ ಎಂದು ಬೈಯ್ಯಬೇಕಾದರೆ ' ಮಗಾ ನೀ ಏನ ದೊಡ್ಡ ಶೇಕ್ಸ್‌ಪಿಯರ್‌ ಆಗಿ ಏನ? ಎಂಬ ಮೂದಲಿಕೆ ಹೊರ ಬೀಳುತ್ತದೆ. 

  ಇನ್ನು ಅವನನ್ನು ಓದಿ, ಅವನ ನಾಟಕಗಳನ್ನು ನೋಡಿದವರ ಪಾಲಿಗೆ ಆರಾಧ್ಯದೈವ. ಅವನ ಕಾಲಾಂತರದಲ್ಲಿ ಅವನ ವೈಯಕ್ತಿಕ ಬದುಕಿನ ಕುರಿತು ನಿರಂತರ ಸಂಶೋಧನೆ ನಡೆಯಿತು. ಅನಕ್ಷರಸ್ಥನಾದ ಶೇಕ್ಸ್‌ಪಿಯರ್‌ ಇಷ್ಟೆಲ್ಲಾ ಬರೆಯಲು ಸಾಧ್ಯವಾಗಿರಬಹುದಾ? 'ಅವನು ನಾಟಕಗಳನ್ನು ಬರೆದೇ ಇಲ್ಲ, ಅವನ ತಂಗಿ ಅಥವಾ ಬೇರೆ ಯಾರೋ ಬರೆದಿರಬಹುದು' ಎಂಬ ತಳ ಬುಡವಿಲ್ಲದ ವಾದ ವಿವಾದಗಳ ಮಧ್ಯೆ ಅವನೊಬ್ಬ ಅದ್ಭುತ ಕವಿ, ನಾಟಕಕಾರ ಎಂಬುವುದರಲ್ಲಿ ಸಂಶಯವೇ ಇಲ್ಲ. 

  ಮಿಸೆಸ್ ಆನ್ ಹ್ಯಾತ್ವೇ ಶೇಕ್ಸ್‌ಪಿಯರ್‌ ದೃಷ್ಟಿಯಲ್ಲಿ ವಿಲಿಯಂ ಹೇಗೆ ಇದ್ದ ಎಂಬುದನ್ನು ಸದರಿ ನಾಟಕದಲ್ಲಿ ಅವಳ ಮೂಲಕ ಹೇಳಿಸಲಾಗಿದೆ. ಅವನ ಸಾವಿನ ನಂತರ ಪ್ರಕಟಗೊಂಡ ಅನೇಕ ಆಕರಗಳನ್ನು ಆಧರಿಸಿ ಬರೆಯಲಾಗಿದೆ. ಏಕ ಪಾತ್ರದ ಸ್ವಗತದ ರೂಪದ ನಾಟಕದಲ್ಲಿ ಶೇಕ್ಸ್‌ಪಿಯರ್‌ ಪತ್ನಿ ತನ್ನ ಮತ್ತು ಅವನ ಸಂಬಂಧವನ್ನು ಹೇಳುವುದರ ಜೊತೆಗೆ, ಅವನೆಷ್ಟು ಕೊಳಕ ಎಂಬುದನ್ನು ಹೇಳುತ್ತಾಳೆ. ಅವನು ಕೊಳಕನಾಗಿದ್ದನೋ, ಅವಳಿಗೆ ಕೊಳಕಾಗಿ ಕಂಡನೋ ಎಂಬುದು ಮುಖ್ಯವಾಗುವುದಿಲ್ಲ. ತನಗಿಂತ ಎಂಟು ವರ್ಷ ಚಿಕ್ಕವನಾಗಿದ್ದ ವಿಲಿಯಂ ಇವಳೊಂದಿಗೆ ಮದುವೆಯಾಗಿ ಮಕ್ಕಳಾದ ಮೇಲೆ ದುಡಿಮೆಗಾಗಿ ಲಂಡನ್ ಸೇರಿಕೊಳ್ಳುತ್ತಾನೆ. ಅಲ್ಲಿ ಹೆಸರು, ಕೀರ್ತಿ ಗಳಿಸಿಕೊಂಡು ಜಗತ್ತಿನ ರಸಿಕರ ಮನಸೂರೆಗೊಂಡರೂ, ಹೆಂಡತಿಗೆ ಕೆಟ್ಟವನಾಗಿ ಕಾಣಿಸುತ್ತಾನೆ. ಅವನು ಕಾಮುಕ, ಸಲಿಂಗಕಾಮಿ ಎಂದು ಆನ್ ನಾಟಕದುದ್ದಕ್ಕೂ ದೂರುವ ಸಂಭಾಷಣೆಗಳಿವೆ. ಇರಲಿ, ನೀವು ಆ ಮಾತುಗಳನ್ನು ನಾಟಕ ಓದಿ, ಕೇಳಿ, ನೋಡಿ ತಿಳಿಯಿರಿ.

  ಒಂದೇ ಓದಿಗೆ ಮುಗಿಯುವ ನಾಟಕ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ವ್ಯಕ್ತಿಯ ಮನೋದೌರ್ಬಲ್ಯಗಳು ಮತ್ತು ಅವುಗಳಿಂದ ಹೊರ ಬರುವ ವಿಧಾನವನ್ನು ತನ್ನ ಪಾತ್ರಗಳ ಮೂಲಕ ಹೇಳುವ ಶೇಕ್ಸ್‌ಪಿಯರ್‌ ತನ್ನ ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಲು ವಿಫಲನಾಗಿದ್ದನಾ? ಅಥವಾ ಅವನ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ದಡ್ಡ  ಹೆಂಡತಿ ವಿಫಲಳಾದಳೋ? ಎಂಬ ಅಭಿಪ್ರಾಯ ಮೂಡುವುದು ಸಹಜ. 

  ನಾನು ಮೊದಲೇ ಹೇಳಿದಂತೆ ಪ್ರತಿಯೊಬ್ಬ ಸೃಜನಶೀಲ ವ್ಯಕ್ತಿ ಹತ್ತಿರದವರಿಗೆ ಖಂಡಿತವಾಗಿ ತಿಕ್ಕಲಾಗಿ ಕಾಣಿಸುತ್ತಾನೆ. ಅದಕ್ಕೆ ಶ್ರೀಮತಿ ಆನ್ ಹೊರತಲ್ಲ. ಇಂತಹ ಒಂದು ಪ್ರಯತ್ನ ಕನ್ನಡದ ಸಂದರ್ಭದಲ್ಲಿ ಹೊಸದು, ಈ ಪ್ರಯತ್ನದಲ್ಲಿ ಮಿತ್ರ, ಇಂಗ್ಲಿಷ್ ಪ್ರಾಧ್ಯಾಪಕ ಉದಯ ಇಟಗಿ ಯಶಸ್ವಿಯಾಗಿದ್ದಾರೆ. ಹಲವಾರು ವರ್ಷ ಹೊರ ದೇಶ ಲಿಬಿಯಾದಲ್ಲಿ ಸೇವೆ ಮಾಡಿ, ರಾಜ್ಯಕ್ಕೆ ಮರಳಿದ ಮೇಲೆ ವಿಶೇಷ ಬರಹದಲ್ಲಿ ನಿರತರಾಗಿದ್ದಾರೆ. 

  ಜಗತ್ತಿನ ಅನೇಕ ಸೃಜನಶೀಲ ವ್ಯಕ್ತಿಗಳ ಕತೆ ಇದಕ್ಕಿಂತ ಭಿನ್ನವಾಗಿ ಇರಲು ಸಾಧ್ಯವಿಲ್ಲ. ದೊಡ್ಡವರ ಸಣ್ಣತನ ಮತ್ತು ತಿಕ್ಕಲುತನವನ್ನು ನಾನು ಕೂಡ ಹತ್ತಿರದಿಂದ ನೋಡಿ ಬೆರಗಾಗಿದ್ದೇನೆ. ಆದರೆ ನಮ್ಮ ವಾತಾವರಣ ಯುರೋಪಿಯನ್ ಹಾಗೂ ಹೊರ ರಾಷ್ಟ್ರಗಳಷ್ಟು ಮುಕ್ತವಾಗಿಲ್ಲ ಎಂಬ ಕಾರಣದಿಂದ ಅದನ್ನು ಬರೆಯಲಾಗುವುದಿಲ್ಲ ಅಷ್ಟೇ!

  ಸುಮಾರು ಅರವತ್ತು ಪುಟಗಳ ಸುದೀರ್ಘ ಚುರುಕಾದ ಸಂಭಾಷಣೆ ಈ ನಾಟಕದ ಹೆಗ್ಗಳಿಕೆ. ನಾಟಕ ರಸವತ್ತಾಗಿ ಇರಲಿ ಎಂಬ ಕಾರಣದಿಂದ ತುಂಬ ಅರ್ಥಪೂರ್ಣ ಸಾನೆಟ್ಟುಗಳನ್ನು ಲೇಖಕರು ಆಯ್ಕೆ ಮಾಡಿಕೊಂಡಿದ್ದಾರೆ. ಏಕವ್ಯಕ್ತಿ ನಾಟಕವನ್ನು ಅಭಿನಯಿಸಲು, ಇಂಗ್ಲಿಷ್ ಪ್ರಾಧ್ಯಾಪಕರು, ಹಿರಿಯ ಕಲಾವಿದರಾದ ಶ್ರಿಮತಿ ಲಕ್ಷ್ಮಿ ಚಂದ್ರಶೇಖರ ಅವರು ಒಪ್ಪಿಕೊಂಡಿರುವುದು ಅಷ್ಟೇ ಮಹತ್ವದ ಸಂಗತಿ. 

  ಇಂತಹ ಕುತೂಹಲಕಾರಿ ನಾಟಕ ರಚಿಸಿದ ಉದಯ ಇಟಗಿ ಅವರನ್ನು ಅಭಿನಂದಿಸುತ್ತೇನೆ. ಆದಷ್ಟು ಬೇಗ ನಾಟಕ ಸಾಹಿತ್ಯ ಆಸಕ್ತರಿಗೆ ತಲುಪಲಿ ಎಂದು ಆಶಿಸುತ್ತೇನೆ. 
  ಸಿದ್ದು ಯಾಪಲಪರವಿ ಕಾರಟಗಿ.

  ಇಂಗ್ಲಿಷ್ ಉಪನ್ಯಾಸಕ.

  #123, ಶರಣಾರ್ಥಿ, ವಿಶ್ವೇಶ್ವರಯ್ಯನಗರ

  ಕಳಸಾಪುರ ರಸ್ತೆ, ಗದಗ- ೫೮೨೧೦೩.

  9448358040