ಮನುಷ್ಯತ್ವದ ಪರವಾಗಿ ಮಾತನಾಡಲು ಎಂದೂ ಭಯಪಡಬಾರದು
(ಪ್ರಸಿದ್ಧ ಕ್ರಾಂತಿಕಾರಿ ನೇಪಾಳಿ ಭಾಷೆಯ ಕವಿ ಮನೋಜ್ ಬೊಗಾಟಿಯವರೊಂದಿಗೆ ಒಂದು ಮಾತುಕತೆ)
1. ಹಲೋ ಮಿಸ್ಟರ್ ಬೊಗಾಟಿ, ನಿಮ್ಮ ವ್ಯಯಕ್ತಿಕ ಮತ್ತು ವೃತ್ತಿಪರ ಹಿನ್ನೆಲೆ ಬಗ್ಗೆ ಏನಾದರೂ ಹೇಳಬಲ್ಲಿರಾ?
ವೈಯಕ್ತಿಕ ಹಿನ್ನೆಲೆ:
ನಾನು ಪಶ್ಚಿಮ ಬಂಗಾಳ ರಾಜ್ಯದ ಡಾರ್ಜಿಲಿಂಗ್ ಜಿಲ್ಲೆಯ ನೇಪಾಳಿ ಮಾತನಾಡುವ ಗೂರ್ಖಾ. ನಾನು ಜುಲೈ 16, 1979 ರಂದು ಡಾರ್ಜಿಲಿಂಗ್ನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದೆ, ಅಲ್ಲಿ ಮಲೇರಿಯಾ ಔಷಧವನ್ನು ತಯಾರಿಸಲು ಬಳಸುವ ಔಷಧೀಯ ಸಸ್ಯವಾದ ಸಿಂಚೋನಾವನ್ನು ಬೆಳೆಸಲಾಗುತ್ತದೆ. ನಿರುದ್ಯೋಗಿ ಮತ್ತು ಕೆಳವರ್ಗದ ಕುಟುಂಬದಲ್ಲಿ ಜನಿಸಿದ ಕಾರಣ, ಆರ್ಥಿಕ ತೊಂದರೆಗಳಿದ್ದವು, ಹಾಗಾಗಿ ಹೆಚ್ಚಿನ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ನಾನು ಮಾಧ್ಯಮಿಕ ಶಾಲೆಯಲ್ಲಿ ಮಾತ್ರ ಉತ್ತೀರ್ಣನಾಗಿದ್ದೆ. ನನಗೆ ಮೂವರು ತಂಗಿಯರಿದ್ದಾರೆ. ನನ್ನ ತಂದೆಗೆ ಕ್ಷಯರೋಗ ಇತ್ತು. ಅವರು ತೀರಿಕೊಂಡರು. ಹಾಗಾಗಿ ಸಂಸಾರ ನಡೆಸುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಆದ್ದರಿಂದ, ನನ್ನ ಬಾಲ್ಯವು ತುಂಬಾ ಸವಾಲಿನದ್ದಾಗಿತ್ತು. ಜೀವನ ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳಲು ಸಮಯ ಕಲಿಸಿದೆ. ನನ್ನ ಮನೆ ಭಾರತ ಮತ್ತು ಭೂತಾನ್ ಗಡಿಯಲ್ಲಿದೆ. 1990 ರಲ್ಲಿ, ನೇಪಾಳಿ ಮಾತನಾಡುವವರನ್ನು ಭೂತಾನ್ನಿಂದ ಹೊರಹಾಕಲಾಯಿತು. ನಾನು 1996 ರಲ್ಲಿ ಈ ಬಗ್ಗೆ ನನ್ನ ಮೊದಲ ಕವನವನ್ನು ಬರೆದಿದ್ದೇನೆ ಮತ್ತು ಅಲ್ಲಿಂದ ನನ್ನ ಕವನದ ಬರವಣಿಗೆ ಪ್ರಾರಂಭವಾಯಿತು.
ವೃತ್ತಿಪರ ಹಿನ್ನೆಲೆ:
ನಾನು ಡಾರ್ಜಿಲಿಂಗ್ನಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ನೇಪಾಳಿ ಭಾಷೆಯ ಅನೇಕ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿದ್ದೇನೆ ಮತ್ತು ಈಗಲೂ ಮಾಡುತ್ತಿದ್ದೇನೆ. ಪ್ರಸ್ತುತ, ನಾನು ಸಾಮಾಜಿಕ ವೇದಿಕೆಗಳಲ್ಲಿ ನನ್ನ ಸ್ವಂತ ಡಿಜಿಟಲ್ ಪತ್ರಿಕೆಯೊಂದನ್ನು ನಡೆಸುತ್ತಿದ್ದೇನೆ. 2017 ರಿಂದ, ನಾನು ಖಬರ್ ಮ್ಯಾಗಜೀನ್ ಎಂಬ ಮಾಧ್ಯಮ ಸಂಸ್ಥೆಯನ್ನು ನಡೆಸುತ್ತಿದ್ದೇನೆ. ಜೊತೆಗೆ ನನ್ನ ಬರವಣಿಗೆ ಮುಂದುವರಿಸಿದ್ದೇನೆ. ನಾನು ಆರು ಕವನ ಸಂಕಲನಗಳನ್ನು, ಒಂದು ಸಣ್ಣ ಕಥಾ ಸಂಕಲನವನ್ನು, ಒಂದು ಪ್ರಬಂಧ ಸಂಕಲನವನ್ನು ಹೊರತಂದಿದ್ದೇನೆ ಮತ್ತು ಒಂದು ಕಾದಂಬರಿಯನ್ನು ಸಹ ಅನುವಾದಿಸಿದ್ದೇನೆ. 2012 ರಲ್ಲಿ, "ಗೌಕ ರಂಗರು' (ಗಾಯಗಳ ಬಣ್ಣಗಳು.) ಎಂಬ ದೀರ್ಘ ಕವನವನ್ನು ಬರೆದೆ. ಅದಕ್ಕೆ ನಾನು ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರವನ್ನು ಸಹ ಪಡೆದಿದ್ದೇನೆ. ಅಲ್ಲಿಂದಾಚೆ ನನ್ನ ಬರವಣಿಗೆ ಮತ್ತು ಪತ್ರಿಕೋದ್ಯಮವು ಒಟ್ಟೊಟ್ಟಿಗೆ ಸಾಗುತ್ತಿದೆ.
2. ಕವಿ/ಲೇಖಕರಾಗಲು ನಿಮ್ಮನ್ನು ಪ್ರಭಾವಿಸಿದ ಅಂಶಗಳು ಯಾವುವು?
ನಾನು ಸಾಹಿತ್ಯದ ಬಗ್ಗೆ ಜ್ಞಾನವನ್ನು ಪಡೆದ ನಂತರ, ನಾನು ಹಲವಾರು ಸಾಹಿತ್ಯಿಕ ನಿಯತಕಾಲಿಕೆಗಳನ್ನು ಹುಡುಕಿ ಓದಿದೆ ಮತ್ತು ಅನೇಕ ಕವಿಗಳು ಮತ್ತು ಬರಹಗಾರರ ಕೃತಿಗಳನ್ನು ಓದಿದೆ. ಅವುಗಳನ್ನು ಓದುವಾಗ, ಕವಿಗಳು ಅಥವಾ ಬರಹಗಾರರು ತಮ್ಮ ಆಲೋಚನೆಗಳನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸಬಹುದು ಎಂದು ನಾನು ಅರಿತುಕೊಂಡೆ. ಮೊದಲಿನಿಂದಲೂ ನನ್ನ ಬಗ್ಗೆ ಮತ್ತು ಸಮಾಜದ ಬಗ್ಗೆ ಬರೆಯುತ್ತಿದ್ದೇನೆ. ನನ್ನಂತಹ-ಕೆಳವರ್ಗದವರು ವಾಸಿಸುವ ಸಮಾಜಕ್ಕೆ ನನ್ನ ಅನುಭವಗಳನ್ನು ತಿಳಿಸುತ್ತಿದ್ದೆ. ಬಹುಶಃ ನಾನು ಬರೆದ ಕವಿತೆಗಳಲ್ಲಿ ನನ್ನ ಓದುಗರು ತಮ್ಮದೇ ಆದ ನೋವನ್ನು ಕಂಡುಕೊಂಡಿದ್ದಾರೆ. ಎಲ್ಲರೂ ಮಾತಿನ ಮೂಲಕ ಕಲಾತ್ಮಕವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಆದ್ದರಿಂದ ನಾನು ಅವರ ನೋವಿನ ಭಾಷೆಯಲ್ಲಿ ಬರೆದಿದ್ದೇನೆ. ನನ್ನ ಬರವಣಿಗೆ ನನ್ನ ಸಮಾಜವನ್ನು ಪ್ರತಿಬಿಂಬಿಸಿದ್ದು ಹೀಗೆ. ನಾನು ಅನುಭವಿಸಿದ ಕೆಳವರ್ಗದ ಸಮಾಜ ಮತ್ತು ಅದರ ನೋವು ನನ್ನನ್ನು ಬರಹಗಾರ ಮತ್ತು ಕವಿಯನ್ನಾಗಿ ಮಾಡಿದೆ.
3. ಮನೋಜ್ ಬೊಗಾಟಿಯವರೇ ನಿಮ್ಮ ಮೊದಲ ಸಾಹಿತ್ಯ ಓದುವಿಕೆ ಯಾವುದಾಗಿತ್ತು?
ಶಾಲಾ ಪಠ್ಯಕ್ರಮದ ಹೊರತಾಗಿ ಸಾಹಿತ್ಯದ ಪುಸ್ತಕಗಳು ಸಿಗದ ಜಾಗದಲ್ಲಿ ನಾನು ಹುಟ್ಟಿದ್ದೇನೆ. ಪಠ್ಯಪುಸ್ತಕಗಳಲ್ಲಿನ ಕವಿತೆಗಳನ್ನು ಓದಿ ಕವನ ಬರೆಯುವುದನ್ನು ಕಲಿತೆ. ಆ ಸಮಯದಲ್ಲಿ, ಎರಡು ನೇಪಾಳಿ ದಿನಪತ್ರಿಕೆಗಳಲ್ಲಿ ಪ್ರಕಟವಾದವು. ಆ ಪತ್ರಿಕೆಗಳಲ್ಲಿ ಮುದ್ರಿತವಾಗಿದ್ದ ಕವನಗಳು, ಕಥೆಗಳನ್ನು ಓದಿಯೇ ಕವನ ಬರೆಯುವ ಯೋಚನೆ ಬಂದಿತು. ಅಕ್ಟೋಬರ್ 10, 1996 ರಂದು "ಆಜ್ ಭೋಲಿ" ಎಂಬ ದಿನಪತ್ರಿಕೆಯಲ್ಲಿ "ಸಪನ (ಕನಸು)" ಎಂಬ ಶೀರ್ಷಿಕೆಯ ಕಥೆ ಪ್ರಕಟವಾಯಿತು, ಅದು ನನ್ನ ಮೊದಲ ಪ್ರಕಟಿತ ಕೃತಿ, ಅದರಲ್ಲಿ ನಾನು ನಿರುದ್ಯೋಗಿ ಮತ್ತು ಕೆಳವರ್ಗದ ನೋವಿನ ಬಗ್ಗೆ ಬರೆದಿದ್ದೇನೆ. ಅಕ್ಟೋಬರ್ 16, 1996 ರಂದು ನನ್ನ ಮೊದಲ ಕವನ 'ಘರ್ ಫರ್ಕನಲೈ' (ಮನೆಗೆ ಮರಳಲು) ಕವನ ಪ್ರಕಟವಾಯಿತು.
4. ಬರವಣಿಗೆಯು ನಿಮಗೆ ಶಕ್ತಿಯನ್ನು ನೀಡುತ್ತದೆಯೋ? ಅಥವಾ ದಣಿವನ್ನೋ?
ಕಾವ್ಯ ಮನುಷ್ಯರ ಕಲಾತ್ಮಕ ಭಾಷೆ. ಪ್ರಪಂಚದಾದ್ಯಂತ ಜನರು ಈ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಪ್ರಕೃತಿ ಕೂಡ ಕಾವ್ಯದ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ. ಕಾವ್ಯವು ಮನುಷ್ಯರು ಇನ್ನೂ ಸಂವೇದನಾಶೀಲರಾಗಿದ್ದಾರೆ ಹಾಗೂ ಜೀವಂತವಾಗಿದ್ದಾರೆಂಬುದಕ್ಕೆ ಪುರಾವೆಯನ್ನು ನೀಡುತ್ತದೆ, ಆದ್ದರಿಂದ ನಾನು ಕವನ ಬರೆಯಲು ಇಷ್ಟಪಡುತ್ತೇನೆ.
ನಾನು ಸಮಯ ಕಳೆಯಲು ಅಥವಾ ಸ್ವಯಂ ಖುಷಿಗಾಗಿ ಏನನ್ನೂ ಬರೆಯುವುದಿಲ್ಲ. ನಾನೊಬ್ಬ ಜವಾಬ್ದಾರಿಯುತ ಬರಹಗಾರ. ಕವಿತೆ, ಕಥೆ, ಪ್ರಬಂಧ ಅಥವಾ ಲೇಖನವೇ ಆಗಿರಲಿ, ನನ್ನ ಆಂತರಿಕ ಪ್ರಜ್ಞೆಯು ನನ್ನನ್ನು ಒತ್ತಾಯಿಸಿದಾಗ ಮಾತ್ರ ನಾನು ಬರೆಯುತ್ತೇನೆ. ನನ್ನ ಬರವಣಿಗೆಗೆ ಯಾವಾಗಲೂ ಒಂದು ಉದ್ದೇಶವಿದೆ. ನಾನು ಉದ್ದೇಶಪೂರ್ವಕವಾಗಿ ಬರೆಯುತ್ತೇನೆ. ಬರವಣಿಗೆ ನನಗೆ ಚೈತನ್ಯ ನೀಡುತ್ತದೆ, ಆ ಶಕ್ತಿಯನ್ನು ಓದುಗರೂ ಸ್ವೀಕರಿಸಬೇಕು ಎಂಬ ಅರಿವಿನಿಂದ ಬರೆಯುತ್ತೇನೆ. ಬರವಣಿಗೆಯು ನಿಜವಾದ ಬರಹಗಾರನನ್ನು ಎಂದಿಗೂ ಆಯಾಸಗೊಳಿಸುವುದಿಲ್ಲ.
5. ಬೊಗಾಟಿಯವರೇ ನಿಮ್ಮ ಪ್ರಕಾರ ಕಾವ್ಯ ಎಂದರೇನು? ನೀವು ಅದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?
ಕಾವ್ಯವು ಮಾನವನ ಅವ್ಯಕ್ತ ಪ್ರಜ್ಞೆಯ ಭಾಷೆಯಾಗಿದೆ. ಒಂದು ಒಳ್ಳೆಯ ಕವನವನ್ನು ಓದಿದಾಗ ಬದುಕು ಮತ್ತು ಸಮಾಜವನ್ನು ನೋಡುವ ಹಲವು ಆಯಾಮಗಳು ಸಿಗುತ್ತವೆ. ಕಾವ್ಯವು ಪ್ರಬುದ್ಧನಾಗಲು ಕಲಿಸುತ್ತದೆ. ಕಾವ್ಯ ಮನುಷ್ಯನಾಗುವುದನ್ನು ಕಲಿಸುತ್ತದೆ. ಕವಿತೆ ನಿಮ್ಮ ಮುಖ ಕಾಣುವ ಕನ್ನಡಿಯಿದ್ದಂತೆ. ಅಲ್ಲಿ ಬರೀ ನಿಮ್ಮ ಮುಖವನ್ನು ಮಾತ್ರ ನೋಡುವುದಿಲ್ಲ, ಆದರೊಂದಿಗೆ ನಿಮ್ಮ ಮುಖದ ಒಟ್ಟು ಸೌಂದರ್ಯವೂ ಕಾಣಿಸುತ್ತದೆ. ಕಾವ್ಯವಿಲ್ಲದಿದ್ದರೆ ಬದುಕಿಗೆ ಲಯವಿಲ್ಲ. ಪ್ರಪಂಚಕ್ಕೆ ಲಯವಿಲ್ಲ. ಕಾವ್ಯವಿಲ್ಲದಿದ್ದರೆ ಮನುಷ್ಯರ ಇರುವಿಕೆಯ ಅನುಭವವಾಗುವುದಿಲ್ಲ. ಕಾವ್ಯವು ಜೀವನದ ಶಿಸ್ತು ಇದ್ದಂತೆ. ಕೆಲವರು ಅದನ್ನು ವ್ಯಕ್ತಪಡಿಸುತ್ತಾರೆ ಮತ್ತು ಅನುಸರಿಸುತ್ತಾರೆ, ಇನ್ನು ಕೆಲವರು ಅದನ್ನು ವ್ಯಕ್ತಪಡಿಸದೇ ಅನುಸರಿಸುತ್ತಾರೆ. ಅದನ್ನು ವ್ಯಕ್ತಪಡಿಸಬಲ್ಲವರು ಕವಿಗಳು ಆಗಿರಬಹುದು, ಆಗದವರು ಓದುಗರು ಆಗಿರಬಹುದು.
6. ನಿಮ್ಮ ಕವಿತೆಗಳು ಯಾವಾಗಲೂ ಚಾವಟಿಯೇಟಿನಷ್ಟೇ ಪ್ರಭಾವಶಾಲಿಯಾಗಿರುತ್ತವೆ ಮತ್ತು ನೀವು ಯಾರಿಗೂ ಭಯಪಡುವುದಿಲ್ಲ ಹಾಗೂ ನಿಮ್ಮ ಕವಿತೆಗಳ ಮೂಲಕ ನೀವು ಯಾರನ್ನಾದರೂ ಎದುರುಹಾಕಿಕೊಳ್ಳಬಲ್ಲಿರಿ. ನೀವು ಇದನ್ನು ಹೇಗೆ ನಿರ್ವಹಿಸುತ್ತೀರಿ?
ಕಾವ್ಯ ಸದಾ ಮನುಷ್ಯರ ವಕ್ತಾರನಂತೆ ಕೆಲಸ ಮಾಡುತ್ತದೆ. ಒಂದು ವೇಳೆ ನೀವು ನಿಜವಾದ ಕವಿಯಾಗಿದ್ದರೆ ಸಮಾಜದ ಅನೇಕ ವೈರುಧ್ಯಗಳು ಮತ್ತು ಓರೆಕೋರೆಗಳ ಬಗ್ಗೆ ಮಾತನಾಡಲು ಹಿಂಜರಿಯುವದಿಲ್ಲ. ಆ ವೈರುಧ್ಯಗಳ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಬದುಕಿನ ಸುರಕ್ಷತೆಯ ಬಗ್ಗೆ ಯೋಚಿಸಲಾರಿರಿ. ಮನುಷ್ಯತ್ವದ ಪರವಾಗಿ ಮಾತನಾಡಲು ಎಂದೂ ಭಯಪಡಬಾರದು. ಭಯಭೀತ ಕವಿ ಸಮಾಜಕ್ಕೆ ಭಯಭೀತರಾಗಲು ಕಲಿಸುತ್ತಾನೆ ಹಾಗೂ ನಿಮ್ಮ ಜೀವನವನ್ನು ಸಮಾಜದೊಂದಿಗೆ ರಾಜಿ ಮಾಡಿಕೊಳ್ಳಲು ಕಲಿಸುತ್ತಾನೆ. ಮನುಷ್ಯರಾಗಿ ಎಲ್ಲರೂ ಸಮಾನರು, ಆದರೆ ಸಮಾಜದಲ್ಲಿ ಜನರನ್ನು ವರ್ಗಗಳಾಗಿ ವಿಂಗಡಿಸಲಾಗಿದೆ. ಸಣ್ಣ ವರ್ಗಗಳನ್ನು ದೊಡ್ಡ ವರ್ಗಗಳು ಆಳುತ್ತವೆ. ಅಧಿಕಾರವು ಜನರನ್ನು ವರ್ಗೀಕರಿಸುವ ಸಮಾಜವಾಗಿದೆ. ಆದರೆ ನಿಜವಾದ ಕಾವ್ಯವು ಈ ಸಂಪ್ರದಾಯವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಎಲ್ಲರೂ ಸಮಾನರು ಎಂದು ಕಾವ್ಯ ಹೇಳುತ್ತದೆ. ಆದ್ದರಿಂದ, ಕಾವ್ಯವು ಮೊದಲು ಜನರನ್ನು ವರ್ಗೀಕರಿಸುವ ಅಭ್ಯಾಸದ ವಿರುದ್ಧ ಹೋರಾಡುತ್ತದೆ. ನಾನೂ ಅದೇ ರೀತಿಯಲ್ಲಿ ಹೋರಾಡುತ್ತೇನೆ. ಯೋಧರ ಭಾಷೆಯು ಬರೀ ಪ್ರೇಮಿಗಳು ಪ್ರೀತಿಸುವ ಭಾಷೆಯಷ್ಟೇ ಆಗಿರದೆ ಅದು ಕ್ರಾಂತಿಕಾರಿ ಭಾಷೆಯೂ ಆಗಬೇಕು. ಅದಕ್ಕೇ ನನ್ನದು ಕ್ರಾಂತಿಕಾರಿ ಧ್ವನಿ ಮತ್ತು ಆ ಧ್ವನಿ ಯಾವಾಗಲೂ ಬದ್ಧವಾಗಿರುತ್ತದೆ. ಕಾವ್ಯವನ್ನು ಬದುಕಿನ ಶಿಸ್ತಾಗಿ ಮಾಡಿಕೊಂಡ ನಂತರ, ನಾನು ಯಾವುದೇ ಕೆಲಸ ಮಾಡಿದರೂ, ಅದು ಪತ್ರಿಕೋದ್ಯಮವಾಗಿರಲಿ ಅಥವಾ ಕವನ ಬರೆಯುವುದಾಗಿರಲಿ, ಆ ಶಿಸ್ತು ನನ್ನನ್ನು ನನ್ನ ಬೇರುಗಳಿಗೆ ಸಂಪರ್ಕಿಸುತ್ತದೆ. ಕಾವ್ಯವು ಈ ಎಲ್ಲ ವಿಷಯಗಳನ್ನು ನಿರ್ವಹಿಸುವದರಲ್ಲಿ ಸಂದೇಹವಿಲ್ಲ.
7. ಕವಿಯಾಗಿ ನೀವು ಸ್ವೀಕರಿಸಿದ ಅತ್ಯಂತ ವಿಮರ್ಶಾತ್ಮಕ ಟೀಕೆ ಯಾವುದು ಹಾಗೂ ಇದುವರೆಗೆ ನೀವು ಸ್ವೀಕರಿಸಿದ ಅತ್ಯುತ್ತಮ ಮೆಚ್ಚುಗೆ ಯಾವುದು?
ನನ್ನ ಟೀಕಾಕಾರರು ನಾನು ಎಲ್ಲದಕ್ಕೂ ರಾಜಕೀಯವನ್ನು ಚುಚ್ಚುತ್ತೇನೆ ಎಂದು ಹೇಳುತ್ತಾರೆ. ನಾನು ರಾಜಕೀಯದ ಹೊರತಾಗಿ ಇತರ ವಿಷಯಗಳ ಬಗ್ಗೆಯೂ ಬರೆಯಬಹುದು ಎಂದು ಅವರು ಹೇಳುತ್ತಾರೆ. ಸ್ವಲ್ಪ ಮಟ್ಟಿಗೆ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನನ್ನ ಅಭಿಮಾನಿಗಳು ಹೇಳುವಂತೆ ನಾನು ಸಾಮಾನ್ಯ ಜನರ ಭಾಷೆಗೆ ಕಲಾತ್ಮಕ ಧ್ವನಿಯನ್ನು ನೀಡುವಲ್ಲಿ ಪರಿಣತಿ ಹೊಂದಿದ್ದೇನೆ. ಆದರೆ ನಾನು ಹೊಗಳಿಕೆಗಿಂತ ಟೀಕೆಯನ್ನು ಹೆಚ್ಚು ಗೌರವಿಸುತ್ತೇನೆ.
8. ನಿಮ್ಮ ವಿರುದ್ಧ ಹದಿನೇಳು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಈ ಪ್ರಕರಣಗಳಲ್ಲಿ ನಿಮ್ಮ ಮೇಲೆ ಯಾವ ಆರೋಪವಿದೆ?
ಪಶ್ಚಿಮ ಬಂಗಾಳ ಸರ್ಕಾರ ಮತ್ತು ಡಾರ್ಜಿಲಿಂಗ್ ಪ್ರಾದೇಶಿಕ ಆಡಳಿತ ನನ್ನ ವಿರುದ್ಧ 17-ಪ್ರಕರಣಗಳನ್ನು ದಾಖಲಿಸಿದೆ. ತೀಸ್ತಾ ನದಿಗೆ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಆ ಆಣೆಕಟ್ಟು ನದಿಯನ್ನು ನದಿಯಾಗದಂತೆ ತಡೆದಿದೆ. ಪ್ರಕೃತಿಯನ್ನು ಶೋಷಣೆ ಮಾಡಲಾಗಿದೆ. ಈ ಮಧ್ಯೆ, ಅಣೆಕಟ್ಟು ಒಡೆದು, ತೀಸ್ತಾ ನದಿಯ ದಡದಲ್ಲಿ ವಾಸಿಸುವ ನಮ್ಮ ಜನರ ಮನೆಗಳನ್ನು ತನ್ನೊಂದಿಗೆ ಕೊಂಡೊಯ್ಯಿತು. ಆದರೆ ಸರ್ಕಾರಗಳು ಅವರಿಗೆ ಯಾವುದೇ ಪರಿಹಾರವನ್ನು ನೀಡಲಿಲ್ಲ. ಈ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಿದ್ದೇನೆ. ನಾನು ವರದಿ ಮಾಡಲು ಕ್ಷೇತ್ರಕ್ಕೆ ಹೋದಾಗ, ಸರ್ಕಾರದ ಅಸೂಕ್ಷ್ಮತೆ ಮತ್ತು ಷಡ್ಯಂತ್ರಗಳನ್ನು ಸತ್ಯಗಳ ಸಮೇತ ಬಹಿರಂಗಪಡಿಸಿದಾಗ, ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಯಿತು. ಅದರ ನಂತರ ನನ್ನ ಧ್ವನಿಯನ್ನು ಹತ್ತಿಕ್ಕಲು ನಿರಂತರವಾಗಿ ನನ್ನ ವಿರುದ್ಧ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಅಧಿಕಾರದ ಶೋಷಣೆ ಮತ್ತು ಷಡ್ಯಂತ್ರವನ್ನು ಜನರ ಮುಂದೆ ಬಹಿರಂಗಪಡಿಸಬಾರದು ಎಂದು ಅವರು ಹೇಳುತ್ತಾರೆ. ಆದರೆ ಸಮಾಜದ ಒಳಿತಿಗೋಸ್ಕರ ನಾನು ಆ ಕೆಲಸವನ್ನು ಕಾವ್ಯ ಅಥವಾ ಪತ್ರಿಕೋದ್ಯಮವದ ಮೂಲಕ ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ. ನಾನು ಯಾರೊಂದಿಗೂ ರಾಜಿ ಮಾಡಿಕೊಳ್ಳಲಾರೆ. ಹಾಗಾಗಿ ನನ್ನ ಧ್ವನಿಯನ್ನು ಹತ್ತಿಕ್ಕಲು ಪೊಲೀಸ್ ಕೇಸುಗಳನ್ನು ಹಾಕಲಾಗುತ್ತಿದೆ.
9. ಕಾವ್ಯವನ್ನು ಎಂದಿಗೂ ಮಾರಾಟ ಮಾಡಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ನಿಮ್ಮ ವಿಷಯದಲ್ಲಿ ಇದು ಎಷ್ಟು ಸತ್ಯ?
ಕಾವ್ಯದ ಮೂಲ ಧ್ವನಿ ಮಾರಾಟಕ್ಕಿಲ್ಲ. ಪುಸ್ತಕಗಳಿಗೆ ಸಂಬಂಧಿಸಿದಂತೆ, ನೀವು ಪುಸ್ತಕವನ್ನು ಪ್ರಕಟಿಸಲು ಹೂಡಿಕೆ ಮಾಡಬೇಕು ಮತ್ತು ಓದುಗರನ್ನು ತಲುಪಲು ನಿಮಗೆ ಮಾರುಕಟ್ಟೆ ಬೇಕು. ನಾನು ನನ್ನ ಕಾವ್ಯದ ಘನತೆಯನ್ನು ಮಾರುವುದಿಲ್ಲ. ಆದರೆ ನಾನು ಕವನ ಪುಸ್ತಕಗಳನ್ನು ಮಾರಾಟ ಮಾಡುತ್ತೇನೆ. ಒಬ್ಬ ಕವಿ ಕಾವ್ಯದ ಮೂಲಕ ಏನನ್ನಾದರೂ ನೀಡುತ್ತಿದ್ದರೆ ಅದರ ಬೆಲೆಯನ್ನು ಓದುಗನೂ ತೆರಬೇಕಾಗುತ್ತದೆ.
10. ನಿಮ್ಮ ಕವಿತೆಗಳು ಸಮಾಜವನ್ನು ಬದಲಾಯಿಸಬಹುದು ಎಂದು ನೀವು ಭಾವಿಸುತ್ತೀರಾ? ಹಾಗಿದ್ದಲ್ಲಿ, ಹೇಗೆ?
ಕಾವ್ಯವು ಸಮಾಜವನ್ನು ತಕ್ಷಣವೇ ಬದಲಾಯಿಸುವುದಿಲ್ಲ, ಆದರೆ ಅದು ವಿಷಯಗಳನ್ನು ನೋಡುವ ದೃಷ್ಟಿಕೋನವನ್ನು ನೀಡುತ್ತದೆ. ಈ ಸಮಾಜವು ಮನುಷ್ಯನಾಗಿ ಬದುಕಲು ಯೋಗ್ಯವಾಗಿದೆಯೇ ಎಂದು ಅರ್ಥಮಾಡಿಕೊಳ್ಳಲು ಕಲಿಸುತ್ತದೆ. ಕಾವ್ಯವು ಒಳ್ಳೆಯ ವ್ಯಕ್ತಿಗಳು ಮತ್ತು ಉತ್ತಮ ಸಮಾಜದ ಸೃಷ್ಟಿಗೆ ಪ್ರೇರಣೆ ನೀಡುತ್ತದೆ. ಇದು ಕ್ರಮೇಣ ಪ್ರಜ್ಞೆಯ ಮಟ್ಟವನ್ನು ಅಭಿವೃದ್ಧಿಪಡಿಸುತ್ತದೆ. ಸಮಾಜವನ್ನು ಬದಲಾಯಿಸಲು, ಸಮಾಜ ಎಂದರೇನು ಎಂದು ತಿಳಿದುಕೊಳ್ಳುವುದು ಅವಶ್ಯಕ ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳಲು ಕಾವ್ಯವು ಸಹಾಯ ಮಾಡುತ್ತದೆ. ಅದು ನಿಮ್ಮನ್ನು ಬೆಳಗಿಸುತ್ತದೆ. ನಂತರ, ಕ್ರಮೇಣ, ಕಾವ್ಯವು ಮಾನವರಿಗೆ ಸೂಕ್ತವಾದ ಸಮಾಜವನ್ನು ನಿರ್ಮಿಸಲು ಕಲಿಸುತ್ತದೆ.
11. ನಿಮ್ಮನ್ನು ವ್ಯಕ್ತಪಡಿಸಲು ನೀವು ಸಾಹಿತ್ಯದ ಇತರೆ ಯಾವ ಪ್ರಾಕಾರಗಳನ್ನು ಬಳಸುತ್ತೀರಿ? ಮತ್ತು ನೀವು ಇಲ್ಲಿಯವರೆಗೆ ಯಾವ ಯಾವ ಪುಸ್ತಕಗಳನ್ನು ಪ್ರಕಟಿಸಿದ್ದೀರಿ? ಅವುಗಳಲ್ಲಿ ಕೆಲವನ್ನು ನೀವು ಉಲ್ಲೇಖಿಸಬಹುದೇ?
ನಾನು ಪ್ರಧಾನವಾಗಿ ಕವಿ, ಆದರೆ ಎಲ್ಲವನ್ನೂ ಕಾವ್ಯದ ಮೂಲಕ ಹೇಳಬೇಕು ಎಂಬ ನಿಯಮವಿಲ್ಲ. ಅದಕ್ಕೇ ನಾನು ಪ್ರಬಂಧಗಳನ್ನೂ ಬರೆಯುತ್ತೇನೆ. ಇತ್ತೀಚೆಗೆ, ನನ್ನ ಪುಸ್ತಕಗಳಲ್ಲಿ ಒಂದಾದ "ಸಂಬೇಡಿ ಪ್ರಶ್ನೆ (ಸಂವೇದನಾಶೀಲ ಪ್ರಶ್ನೆಗಳು)” ಎಂಬ ಪ್ರಬಂಧ ಸಂಗ್ರಹವನ್ನು ಬಿಡುಗಡೆ ಮಾಡಲಾಗಿದೆ. ಈ ಪುಸ್ತಕದಲ್ಲಿ ನಾನು ಗೂರ್ಖಾ ಸಮಾಜ, ರಾಜಕೀಯ, ಶಿಕ್ಷಣ, ಕಲೆ ಮತ್ತು ಗೂರ್ಖಾ ಐಡೆಂಟಿಟಿ ಚಳುವಳಿಯನ್ನು ವಿಶ್ಲೇಷಿಸಿದ್ದೇನೆ. ನನ್ನ ಮೊದಲ ಕವನ ಸಂಕಲನ "ಬಿಂಬ ಗೋಷ್ಠಿ (ಪ್ರತಿಮೆಗಳ ಗೋಷ್ಠಿ)" ಯ ಮೂಲಕ ನಾನು ಸಮಯ ಮತ್ತು ಜೀವನದ ನಡುವಿನ ಸಂಬಂಧವನ್ನು ವಿಶ್ಲೇಷಿಸಿದ್ದೇನೆ. ನನ್ನ ಎರಡನೇ ಕವನ ಸಂಕಲನ "ಗೌಕ ರಂಗಾರು (ಗಾಯಗಳ ಬಣ್ಣಗಳು)" ಮೂಲಕ, ನಾನು ಯುವ ಜನರ ಕನಸುಗಳನ್ನು ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯದ ಚಳುವಳಿಯೊಂದಿಗೆ ಜೋಡಿಸಿದ್ದೇನೆ. ನನ್ನ ಮೂರನೆಯ ಪುಸ್ತಕ "ಪಾಸಿನ ಕೋ ಚಲ (ಬೆವರಿನ ಚರ್ಮ)" ದ ಮೂಲಕ ರೈತರ ಅಸ್ಮಿತೆ, ಮಣ್ಣು ಮತ್ತು ದೇಶದ ನಡುವಿನ ವೈರುಧ್ಯಗಳನ್ನು ಪ್ರತಿಬಿಂಬಿಸಿದ್ದೇನೆ. ಇನ್ನೊಂದು ಪುಸ್ತಕ "ಅಕ್ಂಖಾ ಬಹಿರಾ (ಕಣ್ಣಿನ ಹೊರಗೆ)". ಇದರಲ್ಲಿ ಜನರನ್ನು ಹೇಗೆ ಯಂತ್ರಗಳನ್ನಾಗಿ ಮಾಡಲಾಗುತ್ತಿದೆ ಎಂದು ನಾನು ತಿಳಿಸಿದ್ದೇನೆ. "ಕಾಫೆರೆ ಅಮೇರಿಕಾ (ಹೇಡಿ ಅಮೆರಿಕಾ)” ಎಂಬ ಕವನ ಸಂಕಲನದಲ್ಲಿ ಅಮೆರಿಕಾದ ಸಾಮ್ರಾಜ್ಯಶಾಹಿ ಧೋರಣೆಯನ್ನು ಖಂಡಿಸುತ್ತಾ ಅದು ಹೇಗೆ ಎಲ್ಲರನ್ನೂ ತುಳಿಯಲು ನೋಡುತ್ತಿದೆ ಎನ್ನುವದನ್ನು ಹೇಳಿದ್ದೇನೆ. ನಾನು ಗೂರ್ಖಾಗಳು ಮತ್ತು ಅವರ ದೇಶ, ಶಕ್ತಿ ಮತ್ತು ಜನರು, ಪ್ರಕೃತಿ ಮತ್ತು ನಿಗಮಗಳು, ಸಾಮಾನ್ಯ ಜನರು ಮತ್ತು ಕ್ರಮಾನುಗತತೆ ಬಗ್ಗೆ ಕವಿತೆಗಳನ್ನು ಬರೆದಿದ್ದೇನೆ. "ಲೈಫ್: ಎ ಬಟರ್ಫ್ಲೈ" ಎಂಬ ಸಣ್ಣ ಕಥಾ ಸಂಕಲನದಲ್ಲಿ, ಹಾರುವ ಜನರ ರೆಕ್ಕೆಗಳನ್ನು ಯಾರು ಕತ್ತರಿಸುತ್ತಾರೆ ಮತ್ತು ಹೇಗೆ ಎಂದು ನಾನು ವಿವರಿಸಿದ್ದೇನೆ.
12. ನಿಮ್ಮ ಕವನ ಸಂಗ್ರಹದಿಂದ ಆಯ್ದ ನಿಮಗೆ ಇಷ್ಟವಾದ ಒಂದಿಷ್ಟು ಸಾಲುಗಳನ್ನು ಇಲ್ಲಿ ಉದ್ದರಿಸಬಹುದೆ?
ಅನೇಕ ನೆಚ್ಚಿನ ಸಾಲುಗಳಿವೆ. ಉದಾಹರಣೆಗೆ:
• "ಹಲ್ಲುಗಳು ಹೊಡೆಯಲ್ಪಟ್ಟ ಮೊಳೆಗಳಂತೆ ಕಾಣುತ್ತವೆ, ಅವು ನಾಲಿಗೆಯನ್ನು ಕಾಪಾಡುತ್ತಿವೆಯೇ? ಅಥವಾ ಅದನ್ನು ಬಂಧಿಸಿಟ್ಟಿವೆಯೇ? ಗೊತ್ತಾಗುವದಿಲ್ಲ"
• "ನಿಮ್ಮ ಅನ್ನದಲ್ಲಿ ಕಲ್ಲು ಸಿಕ್ಕರೆ ಕೋಪಗೊಳ್ಳಬೇಡಿ, ಎಲ್ಲವನ್ನೂ ಅಗಿಯುವವರಿಗೆ ಮಾತ್ರ ಇಂತಹವುಗಳು ಸಿಗುತ್ತವೆ."
• "ಇಲ್ಲಿ, ಪುಸ್ತಕಗಳನ್ನು ಸುಟ್ಟ ನಂತರ ಆಹಾರವನ್ನು ಬೇಯಿಸಲಾಗುತ್ತದೆ, ಇಲ್ಲಿ, ಪೆನ್ಸಿಲ್ ಸುಟ್ಟ ನಂತರ ಸಾರನ್ನು ತಯಾರಿಸಲಾಗುತ್ತದೆ. ದಾರ್ಶನಿಕನ ಪ್ರಭಾವಶಾಲಿ ಮಾತು ಪುಸ್ತಕದ ಬದಲಿಗೆ ತಟ್ಟೆಯನ್ನು ಒದಗಿಸುತ್ತದೆ; ಕವಿಯ ಕಾಲಾತೀತ ಸಾಲೊಂದು ಪೆನ್ಸಿಲ್ ಬದಲಿಗೆ ಚಮಚವನ್ನು ತರುತ್ತದೆ. ಇದು ಶಾಲೆಯಲ್ಲ; ಇದು ಅಡುಗೆಮನೆ."
ನಾನೇ ಇಷ್ಟಪಡುವ ಇಂತಹ ಹಲವು ಸಾಲುಗಳಿವೆ.
13. ಭಾವನೆಗಳನ್ನು ಬಲವಾಗಿ ಅನುಭವಿಸದಿದ್ದರೆ ಯಾರಾದರೂ ಬರಹಗಾರರಾಗಬಹುದು ಎಂದು ನೀವು ಭಾವಿಸುತ್ತೀರಾ? ವಿವರಿಸಿ.
ಒಮ್ಮೆ ಅರ್ನೆಸ್ಟ್ ಹೆಮಿಂಗ್ವೇ ಅವರನ್ನು ಕೇಳಲಾಯಿತು, "ನಾನು ನಿಮ್ಮಂತೆ ಬರಹಗಾರನಾಗಲು ಬಯಸುತ್ತೇನೆ; ನನಗೆ ಕೆಲವು ಸಲಹೆಗಳನ್ನು ನೀಡಿ." ಹೆಮಿಂಗ್ವೇ ಉತ್ತರಿಸಿದರು, "ನಿಮಗೆ ನೋವುಗಳಿವೆಯೇ? ನೋವುಗಳಿಲ್ಲದವರು, ನೋವನ್ನು ಅನುಭವಿಸಲಾರದವರು ಬರೆಯಲಾರರು. ಹೆಮಿಂಗ್ವೇ ಭಾವನೆಗಳ ಬಗ್ಗೆ ಮಾತನಾಡುತ್ತಿದ್ದರು. ಆ ಭಾವನೆಗಳನ್ನು ತೀವ್ರವಾಗಿ ಅನುಭವಿಸಲು ಸಾಧ್ಯವಾಗದವರು ಬರಹಗಾರರಾಗಲು ಸಾಧ್ಯವಿಲ್ಲ. ಈಗ ಮಾರುಕಟ್ಟೆಯಲ್ಲಿ "ನಕಲಿ ಸಂವೇದನಾಶೀಲ ಬರಹಗಾರರು" ಸೇರಿದಂತೆ ಅನೇಕ ಬರಹಗಾರರಿದ್ದಾರೆ. ಬರವಣಿಗೆಯನ್ನು ಕಲಿಸುವ ಶಾಲೆಗಳೂ ಇವೆ. ಆದರೆ ಅವರು ಬರಹಗಾರರಾಗುವ ಉದ್ದೇಶವನ್ನು ಅರ್ಥಮಾಡಿಕೊಳ್ಳುವವರೆಗೂ ಯಾರೂ ಬರಹಗಾರರಾಗಲು ಸಾಧ್ಯವಿಲ್ಲ. ಬರಹಗಾರ ಒಂದು ಕಣ್ಣು ಇದ್ದಂತೆ. ಯಾರ ಕಣ್ಣುಗಳು ಕೆಟ್ಟವೋ ಅವರು ಏನನ್ನೂ ನೋಡುವುದಿಲ್ಲ. ಏನನ್ನೂ ನೋಡದ ಬರಹಗಾರರು ಹೇಗೆ ಬರೆಯುತ್ತಾರೆ? ಅಂಥವರು ಸಮಾಜವನ್ನು ದಾರಿ ತಪ್ಪಿಸುತ್ತಾರೆ.
14. ನಿಮ್ಮ ಕಿರಿಯ ಉದಯೋನ್ಮುಖ ಕವಿಗಳಿಗೆ ಕೆಲವು ಸಲಹೆಗಳನ್ನು ನೀಡುವದಾದರೆ ಏನನ್ನು ನೀಡುತ್ತೀರಿ?
ಕವನ ಬರೆಯುವುದು ಹವ್ಯಾಸವಲ್ಲ; ಇದು ಒಂದು ಜವಾಬ್ದಾರಿ. ಕಾವ್ಯವು ಒಂದು ಕಲೆ, ಕಲೆಯ ಉದ್ದೇಶವು ಜೀವನಕ್ಕಾಗಿ ಇರಬೇಕು. ಯಾರಾದರೂ ಕವಿತೆ ಬರೆಯುತ್ತಿದ್ದರೆ ಅವರು ಮೊದಲು ನೂರು ಕವಿತೆಗಳನ್ನು ಓದಿರಬೇಕು. ಮೊದಮೊದಲು ಯಾರ ಕವನವನ್ನೂ ಓದದೆ ನಾನು ಕವಿತೆಗಳನ್ನು ಬರೆಯುತ್ತಿದ್ದೆ. ಆದರೆ ನಾನು ಇತರರ ಕವಿತೆಗಳನ್ನು ಓದಲು ಪ್ರಾರಂಭಿಸಿದಾಗ, ನಾನು ಗಟ್ಟಿ ಕವಿತೆ ಎಂದರೆನು ಅದನ್ನು ತೀವ್ರವಾಗಿ ಅನುಭವಿಸಿ ಹೇಗೆ ಬರೆಯಬೇಕು ಎಂಬುದನ್ನು ಕಲಿತಿದ್ದೇನೆ. ನಿಮಗೆ ಏನನ್ನೂ ಕಲಿಸದ ಕವಿತೆ, ನಿನ್ನನ್ನು ಮುಟ್ಟದ ಕವಿತೆ ಯಶಸ್ವಿಯಾಗುವುದಿಲ್ಲ. ಆದ್ದರಿಂದಲೇ ಹೊಸ ಕವಿಗಳು ಜಗತ್ತಿನ ಗಟ್ಟಿ ಕವಿತೆಗಳನ್ನು ಓದಬೇಕು. ಹಿರಿಯ ಕವಿಗಳೊಂದಿಗೆ ಮಾತನಾಡಬೇಕು, ಕಾವ್ಯದ ಬಗ್ಗೆ ಪುಸ್ತಕಗಳನ್ನು ಓದಬೇಕು.
15. ನಿಮ್ಮ ಪುಸ್ತಕ ವಿಮರ್ಶೆಗಳನ್ನು ನೀವು ಓದುತ್ತೀರಾ? ಕೆಟ್ಟ ಅಥವಾ ಒಳ್ಳೆಯದನ್ನು ನೀವು ಹೇಗೆ ಎದುರಿಸುತ್ತೀರಿ?
ಹೌದು, ನನ್ನ ಪುಸ್ತಕ ವಿಮರ್ಶೆಗಳನ್ನು ಓದುತ್ತೇನೆ. ಉತ್ತಮ ವಿಮರ್ಶೆಗಳು ಬರಹಗಾರರಿಗೆ ಮಾರ್ಗದರ್ಶನ ನೀಡುತ್ತವೆ. ಕೆಟ್ಟ ವಿಮರ್ಶೆಗಳು ಬರಹಗಾರನನ್ನು ಕೊಲ್ಲಬಹುದು. ಕೆಲಸವು ಪ್ರಬಲವಾಗಿದ್ದು ಅದಕ್ಕೆ ವಿಮರ್ಶೆಯೇ ಇಲ್ಲದಿದ್ದರೆ, ಅದು ಕೆಲಸವನ್ನು ಕೊಲ್ಲಬಹುದು. ವಿಮರ್ಶೆಯು ಪ್ರಬಲವಾಗಿದ್ದು ಮತ್ತು ಅದಕ್ಕೆ ತಕ್ಕಂತೆ ಕೃತಿಯು ಇಲ್ಲದಿದ್ದರೆ ಬರುಬರುತ್ತಾ ಆ ಬರಹಗಾರ ಸತ್ವವಿಲ್ಲದೆ ಸತ್ತೇ ಹೋಗಬಹುದು. ವಿಮರ್ಶೆ ಬರಹಗಾರನಿಗೆ ಗಟ್ಟಿಯಾಗಿ ಬರೆಯಲು ಶಕ್ತಿಯನ್ನು ನೀಡುತ್ತದೆ. ನಾನು ಇತರರ ಪುಸ್ತಕಗಳನ್ನು ಪರಿಶೀಲಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಬರಹಗಾರರು ಕೇವಲ ಹೊಗಳಿಕೆಯನ್ನು ಬಯಸುತ್ತಾರೆ ಮತ್ತು ಟೀಕೆಗಳನ್ನು ಸಹಿಸುವುದಿಲ್ಲ. ಹೊಗಳಿಕೆ ಸಾಯಿಸುತ್ತದೆ, ಟೀಕೆ ನಿಮ್ಮನ್ನು ಬದುಕಿಸುತ್ತದೆ ಎಂಬುದು ನನ್ನ ನಂಬಿಕೆ. ಪ್ರಶಂಸೆ ತುಂಬಿದ ವಿಮರ್ಶೆಗಳು ನನಗೆ ಇಷ್ಟವಿಲ್ಲ.
16. ಸಾಹಿತ್ಯಿಕ ಯಶಸ್ಸು ನಿಮಗೆ ಹೇಗೆ ಕಾಣುತ್ತದೆ?
ಒಬ್ಬ ಬರಹಗಾರ ಓದುಗರಿಗೆ ತಿಳುವಳಿಕೆಯನ್ನು ನೀಡಿದಾಗ, ಅವರನ್ನು ಯೋಚಿಸುವಂತೆ ಮಾಡಿದಾಗ, ಅವರಿಗೆ ಏನನ್ನಾದರು ಕಲಿಸಿದಾಗ, ಅವರು ಪ್ರಬುದ್ಧರಾಗಲು ಸಹಾಯ ಮಾಡಿದಾಗ ಮಾತ್ರ ಅವನೊಬ್ಬ ಯಶಸ್ವಿ ಬರಹಗಾರನಾಗುತ್ತಾನೆ. ಆದರೆ ಯಶಸ್ವಿ ಬರಹಗಾರರು ಅಹಂಕಾರಿಯಾಗುವುದನ್ನು ನಾನು ಗಮನಿಸಿದ್ದೇನೆ. ಕಡಿಮೆ ಯಶಸ್ಸಿನ ಬರಹಗಾರರ ಕಡೆಗೆ ಅವರ ನಡವಳಿಕೆಯು ಉತ್ತಮವಾಗಿಲ್ಲ. ಶ್ರೇಣಿಗಳನ್ನು ಸೃಷ್ಟಿಸಿ ತಮ್ಮ ಸ್ಥಾನಮಾನವನ್ನು ಪ್ರದರ್ಶಿಸುವ ಯಶಸ್ವಿ ಬರಹಗಾರರನ್ನು ನಾನು ಇಷ್ಟಪಡುವುದಿಲ್ಲ. ಕೃತಿಗಳನ್ನು ಬಡವರು, ಶ್ರೀಮಂತರು, ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲದೆ ಎಲ್ಲರೂ ಸಮಾನವಾಗಿ ಓದುತ್ತಾರೆ. ಆ ಕೃತಿಗಳ ಬರಹಗಾರರು ಅವರ ನಡವಳಿಕೆಯಲ್ಲಿ ಜನರನ್ನು ವರ್ಗೀಕರಿಸಿದರೆ, ಅವರು ನನಗೆ ಯಶಸ್ವಿ ಬರಹಗಾರರು ಎನಿಸುವದಿಲ್ಲ. ನಾನು ಯಶಸ್ವಿ ಬರಹಗಾರನಾಗಲು ಬಯಸುವುದಿಲ್ಲ; ನಾನು ಬರೆಯಲು ಬಯಸುತ್ತೇನೆ, ಮತ್ತು ಬರೆಯುತ್ತಲೇ ಇರುತ್ತೇನೆ.
17. ನೀವು ನೇಪಾಳದ ಗೂರ್ಖಾ ಸಮುದಾಯಕ್ಕೆ ಸೇರಿದವರು, ಆದರೆ ಪ್ರಸ್ತುತ ಭಾರತದ ಡಾರ್ಜಿಲಿಂಗ್ನಲ್ಲಿ ವಾಸಿಸುತ್ತಿದ್ದೀರಿ. ನಿಮ್ಮ ಮೂಲದ ಸ್ಥಳದೊಂದಿಗೆ ನಿಮ್ಮ ಗುರುತನ್ನು ಸಮನ್ವಯಗೊಳಿಸುವ ಸವಾಲನ್ನು ನೀವು ಹೇಗೆ ಎದುರಿಸುತ್ತೀರಿ? ಈ ಹೋರಾಟವನ್ನು ನಿಮ್ಮ ಕಾವ್ಯದಲ್ಲಿ ಅನ್ವೇಷಿಸಿದ್ದೀರಾ?
ನಾನು ನೇಪಾಳಿ-ಮಾತನಾಡುವ ಕವಿ, ಭಾರತದ ಪಶ್ಚಿಮ ಬಂಗಾಳದ ಗುಡ್ಡಗಾಡು ಜಿಲ್ಲೆಯ ಡಾರ್ಜಿಲಿಂಗ್ನ ನಿವಾಸಿ. ನಾನು ನೇಪಾಳಿ-ಮಾತನಾಡುವ ಗೂರ್ಖಾ ಕವಿ ಎಂದು ಗುರುತಿಸಿದಾಗ, ನಾನು ನೇಪಾಳದ ಕವಿ ಎಂದು ಹಲವರು ಊಹಿಸುತ್ತಾರೆ. (ನಗುತ್ತಾ...) ನೀವೂ ಆ ಊಹೆ ಮಾಡಿದ್ದೀರಿ. ಇದು ನಿಮ್ಮ ತಪ್ಪು ಅಲ್ಲ.
ನಾನು ಗೂರ್ಖಾ; ನೇಪಾಳಿ ನನ್ನ ಮಾತೃಭಾಷೆ. ನಾನು ಭಾರತದ ಪ್ರಜೆ. ನೇಪಾಳ ಅಲ್ಲ. ಭಾರತ ಪ್ರತ್ಯೇಕ ದೇಶ, ನೇಪಾಳ ಪ್ರತ್ಯೇಕ ದೇಶ. ಭಾರತದಲ್ಲಿ ನೆಲೆಸಿರುವ ವಿವಿಧ ಭಾಷಿಕ ಸಮುದಾಯಗಳಲ್ಲಿ ನಾನೂ ಒಬ್ಬ, ನೇಪಾಳಿ ಮಾತನಾಡುವ ಗೂರ್ಖಾ. ನಾನು ಇಲ್ಲಿ ಗೂರ್ಖಾಗಳ ಬಗ್ಗೆ ಸ್ವಲ್ಪ ಹೇಳಲು ಬಯಸುತ್ತೇನೆ.
ಗೂರ್ಖಾಗಳನ್ನು ಪ್ರಾಥಮಿಕವಾಗಿ ಯೋಧರು ಎಂದು ಕರೆಯಲಾಗುತ್ತದೆ. ಈ ಗುರುತು ಬ್ರಿಟಿಷರು ಮತ್ತು ನಮ್ಮ ದೇಶದ ಮುಖ್ಯವಾಹಿನಿಯ ಚಿಂತನೆಯ ಉತ್ಪನ್ನವಾಗಿದೆ. ಅವರು ನಮಗೆ ''ಧೈರ್ಯಶಾಲಿ' ಎಂದು ಹಣೆಪಟ್ಟಿ ಕಟ್ಟಿದರು, ನಾವು 'ಬಂದೂಕುಗಳ ಬದಲಿಗೆ ಖುಕುರಿಗಳೊಂದಿಗೆ ಹೋರಾಡುತ್ತೇವೆ. ಹಾಗಾಗಿ ನಮ್ಮನ್ನು ಯುದ್ಧಗಳಿಗೆ ತಳ್ಳಿದರು. ನಮ್ಮ ಪೂರ್ವಜರು ಸೌಮ್ಯವಾಗಿದ್ದರು, ಆದ್ದರಿಂದ ಅವರು ಬಂದ ಆದೇಶಗಳನ್ನು ಅನುಸರಿಸಿದರು.
ಸ್ಯಾಮ್ ಬಹದ್ದೂರ್ ಎಂದೂ ಕರೆಯಲ್ಪಡುವ ಫೀಲ್ಡ್ ಮಾರ್ಷಲ್ ಮಾಣೆಕ್ಷಾ ಅವರು ಒಮ್ಮೆ ಹೇಳಿದ್ದರು: 'ಒಬ್ಬ ವ್ಯಕ್ತಿಗೆ ಸಾಯುವ ಭಯವಿಲ್ಲದಿದ್ದರೆ, ಅವನು ಸುಳ್ಳು ಹೇಳುತ್ತಾನೆ, ಅಥವಾ ಅವನು ಗೂರ್ಖಾ ಆಗಿರುತ್ತಾನೆ.
ಆದರೆ, ನಿಮ್ಮಂತೆಯೇ ಗೂರ್ಖಾಗಳಿಗೂ ಭಯವಿದೆ ಎಂದು ನಾನು ನಿಮಗೆ ಹೇಳುತ್ತೇನೆ. ಪ್ರಾಚೀನ ಕಾಲದಿಂದಲೂ ಗೂರ್ಖಾಗಳು ತಮ್ಮ ಶೌರ್ಯ, ಈ ದೇಶದ ಸ್ವಾತಂತ್ರ್ಯ ಮತ್ತು ಅದರ ಗಡಿಗಳ ರಕ್ಷಣೆಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.ಆದರೆ, ವಿಪರ್ಯಾಸವೆಂದರೆ ಆ ದೇಶದಲ್ಲಿಯೇ ಗೂರ್ಖಾಗಳಿಗೆ ಯಾವುದೇ ಗುರುತು ಇಲ್ಲ. ನಮ್ಮ ಮುಖ್ಯವಾಹಿನಿಯಲ್ಲಿ ಗೂರ್ಖಾಗಳಿಗೆ ಸ್ಥಾನವಿಲ್ಲ.
ಸುಮಾರು 15 ಮಿಲಿಯನ್ ಗೂರ್ಖಾಗಳು ಈ ದೇಶದಲ್ಲಿ ವಾಸಿಸುತ್ತಿದ್ದಾರೆ, ಆದರೆ ಅವರ ಗುರುತು ಏನು ಎಂದು ಯಾರಿಗೂ ತಿಳಿದಿಲ್ಲ. ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯು ಸಹ ಗೂರ್ಖಾಗಳನ್ನು ಉದ್ದೇಶಿಸಿಯೇ ಇಲ್ಲ.
ದಕ್ಷಿಣ ಭಾರತದಲ್ಲಿ ತಯಾರಾದ 'ಗೂರ್ಖಾ' ಎಂಬ ಚಲನಚಿತ್ರವೂ ಗೂರ್ಖಾಗಳನ್ನು ಧೈರ್ಯಶಾಲಿ ಮತ್ತು ರಕ್ಷಕರೆಂದು ಬಿಂಬಿಸುತ್ತದೆ. ಆದರೆ ಈ ದೇಶದಲ್ಲಿ ರಕ್ಷಕರೆಂದು ಹೆಸರಾದವರು ತಾವೇ ಅಭದ್ರವಾಗಿರುವುದು ಅಷ್ಟೇ ಸತ್ಯ.
ಪಶ್ಚಿಮ ಬಂಗಾಳದ ನಾಗರಿಕರು ಬಾಂಗ್ಲಾದೇಶವನ್ನು ವಿದೇಶಿ ಎಂದು ಪರಿಗಣಿಸುವಂತೆ ನಾವು ನಮ್ಮ ನೆರೆಯ ನೇಪಾಳವನ್ನು ವಿದೇಶಿ ಎಂದು ಪರಿಗಣಿಸುತ್ತೇವೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಎರಡೂ ಬಂಗಾಳಿ ಮಾತನಾಡುತ್ತವೆ. ಆದರೆ ಪಶ್ಚಿಮ ಬಂಗಾಳದ ನಾಗರಿಕರು ಬಾಂಗ್ಲಾದೇಶಿಗಳಲ್ಲ. ಹಾಗೆಯೇ, ನಾವು ಪಶ್ಚಿಮ ಬಂಗಾಳದಲ್ಲಿ ನೇಪಾಳಿ ಮಾತನಾಡುತ್ತೇವೆ ಮತ್ತು ನೇಪಾಳದಲ್ಲಿ ನೇಪಾಳಿ ಮಾತನಾಡುತ್ತಾರೆ. ಆದರೆ ನಾವು ನೇಪಾಳದ ಪ್ರಜೆಗಳಲ್ಲ.
ಆದ್ದರಿಂದ, ಈ ಒಕ್ಕೂಟ ದೇಶದಲ್ಲಿ, ನಾವು, ಗೂರ್ಖಾಗಳು ಸಹ ಪ್ರತ್ಯೇಕ ಗುರುತನ್ನು ಹೊಂದಿರಬೇಕು. ಈ ಬೇಡಿಕೆಯೊಂದಿಗೆ 1980 ರ ದಶಕದಿಂದಲೂ ನಾವು ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸುತ್ತಿದ್ದೇವೆ. ಆದರೆ ಇಂದಿಗೂ ನಮಗೆ ನ್ಯಾಯ ಸಿಕ್ಕಿಲ್ಲ.
ಹಾಗಾಗಿಯೇ ನೇಪಾಳಿ ಸಾಹಿತ್ಯದ ಮುಖ್ಯ ಧ್ವನಿಯು ಗುರುತಿನ ಪ್ರಶ್ನೆಯೊಂದಿಗೆ ತೀವ್ರ ಸಂಬಂಧವನ್ನು ಹೊಂದಿದೆ. ನನ್ನ ಕವಿತೆಗಳ ಮುಖ್ಯ ವಿಷಯವು ಗೂರ್ಖಾ ಗುರುತಿನ ಸಮಸ್ಯೆಗೆ ಸಂಬಂಧಿಸಿದೆ.
1815 ರ ಮೊದಲು, ನಾವು ನೇಪಾಳದ ಪ್ರಜೆಗಳಾಗಿದ್ದೇವೆ, ಆದರೆ ಬ್ರಿಟಿಷ್ ಭಾರತವು ನೇಪಾಳದಿಂದ ಹೆಚ್ಚಿನ ಭೂಪ್ರದೇಶವನ್ನು ತೆಗೆದುಕೊಂಡಿತು. ಇತಿಹಾಸದ ಪ್ರಕಾರ, ಶಿಮ್ಲಾ, ಮಸ್ಸೂರಿ, ನೈನಿತಾಲ್, ಅಲ್ಮೋರಾ, ರಾನಿಖೇತ್, ಡೆಹ್ರಾಡೂನ್, ಸಿಕ್ಕಿಂ, ಡಾರ್ಜಿಲಿಂಗ್, ಜಲ್ಪೈಗುರಿ ಮತ್ತು ಬಿಹಾರದ ಕೆಲವು ಭಾಗಗಳು, ಈ ಎಲ್ಲಾ ಪ್ರದೇಶಗಳನ್ನು ನಮ್ಮಿಂದ ತೆಗೆದುಕೊಳ್ಳಲಾಗಿದೆ. ಅಂದಿನಿಂದ ನಾವು ಭಾರತದಲ್ಲಿ ಇದ್ದೇವೆ.
ದೇಶವು ಸ್ವತಂತ್ರವಾದ ನಂತರ, ಎಲ್ಲಾ ಪ್ರದೇಶಗಳಿಗೆ ಸಂವಿಧಾನದಲ್ಲಿ ಸ್ಥಾನ ನೀಡಲಾಯಿತು, ಆದರೆ ನಮ್ಮನ್ನು ಪಶ್ಚಿಮ ಬಂಗಾಳದಲ್ಲಿ 'ಅಬ್ಸಾರ್ಬ್ಡ್ ಏರಿಯಾಸ್ ಆಕ್ಟ್-1954' ಅಡಿಯಲ್ಲಿ ಇರಿಸಲಾಯಿತು. ನಮ್ಮ ಭಾಷೆ, ಸಂಸ್ಕೃತಿ ಮತ್ತು ಸಮಾಜವು ಬಂಗಾಳಿ ಮೂಲದೊಂದಿಗೆ ಯಾವುದೇ ಹೊಂದಾಣಿಕೆಯನ್ನು ಹೊಂದಿಲ್ಲ. ಹಿಂದೆ ನಮ್ಮ ದೊರೆಗಳು ಬ್ರಿಟಿಷರು, ಈಗ ಅದು ಬಂಗಾಳ. ಆಡಳಿತಗಾರರು ಬದಲಾಗಿದ್ದಾರೆ, ಆದರೆ ನಾವು ಬದಲಾಗಿಲ್ಲ.
ನಮ್ಮ ಜನರಿಗೆ ಯಾವುದೇ ಆಡಳಿತ ಮಂಡಳಿಯಲ್ಲಿ ಸ್ಥಾನ ನೀಡಿಲ್ಲ. ಡಿಎಂ ಬಂಗಾಳದಿಂದ ಬರುತ್ತಾರೆ, ಎಸ್ಪಿ, ವೈದ್ಯರು, ಎಲ್ಲರೂ ಬಂಗಾಳದಿಂದ ಬಂದವರು. ನಾವು ಅವರ ಆಳ್ವಿಕೆಯಲ್ಲಿದ್ದೇವೆ. ನಾವು ನಮ್ಮವರೇ ಆಳಬೇಕು ಎಂದು ಬಯಸುತ್ತೇವೆ. ಆದರೆ ಸರ್ಕಾರಗಳು ನಮ್ಮ ಮಾತು ಕೇಳುವುದಿಲ್ಲ. ಆದ್ದರಿಂದಲೇ ನನ್ನ ಕವಿತೆಗಳು ಭಾಷಾ ಪ್ರಾಬಲ್ಯ, ಸಾಂಸ್ಕೃತಿಕ ಪ್ರಾಬಲ್ಯ, ರಾಜಕೀಯ ಪ್ರಾಬಲ್ಯ ಮತ್ತು ಆಡಳಿತದ ಪ್ರಾಬಲ್ಯದಿಂದ ಉದ್ಭವಿಸುವ ಮನೋವಿಜ್ಞಾನವನ್ನು ವ್ಯಕ್ತಪಡಿಸುತ್ತಿವೆ.
ನಿಮ್ಮ ಭಾಷೆ ಅಂಚಿನಲ್ಲಿರುವಾಗ, ಅದು ಸಭ್ಯವಾಗಿರುವುದಿಲ್ಲ, ಬದಲಿಗೆ ಆಕ್ರಮಣಕಾರಿಯಾಗಿರುತ್ತದೆ. ನಿಮ್ಮ ಸಮಾಜವು ಅಂಚಿನಲ್ಲಿರುವಾಗ, ಅದು ಸಭ್ಯವಾಗಿರುವುದಿಲ್ಲ, ಬದಲಿಗೆ ಉದ್ರೇಕಗೊಳ್ಳುತ್ತಿರುತ್ತದೆ. ಇದರಿಂದಾಗಿಯೇ ನನ್ನ ಕವಿತೆಗಳ ಸ್ವರೂಪ ಆಕ್ರಮಣಕಾರಿ ಮತ್ತು ಉದ್ರೇಕಕಾರಿಯಾಗಿರುತ್ತವೆ.
ಗೂರ್ಖಾಲ್ಯಾಂಡ್ಗಾಗಿ ಎರಡು ಪ್ರಮುಖ ಚಳುವಳಿಗಳು ನಡೆದವು. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಮ್ಮ ಅನೇಕ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಚಳವಳಿಯನ್ನು ಹತ್ತಿಕ್ಕಿದವು. ನಮ್ಮ ಕವಿತೆಗಳು ಈ ಅಧಿಕಾರದ ದಬ್ಬಾಳಿಕೆಯನ್ನು ವಿರೋಧಿಸುತ್ತವೆ. ದೇಶದಲ್ಲಿ ಗೂರ್ಖಾಗಳ ಗುರುತನ್ನು ಖಾತ್ರಿಪಡಿಸಬೇಕು ಎಂಬುದು ನಮ್ಮ ಬಯಕೆ.
18. ಕೊನೆಯದಾಗಿ ಒಂದು ಪ್ರಶ್ನೆ. ಈಗ ನೇಪಾಳದಲ್ಲಿ ನೇಪಾಳಿಗರ ಮತ್ತು ನಿಮ್ಮ ಗೂರ್ಖಾ ಸಮುದಾಯದವರ ಒಟ್ಟಾರೆ ಜೀವನ ಸ್ಥಿತಿ ಹೇಗಿದೆ?
ಬ್ರಿಟಿಷರು 18ನೇ ಶತಮಾನದಲ್ಲಿ ಡಾರ್ಜಿಲಿಂಗ್ಗೆ ಬಂದರು. ಅವರು ಬರುವ ಮೊದಲು ಸ್ಥಳೀಯರು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬ್ರಿಟಿಷರು ಬಂದ ನಂತರ ಅವರು ಚಹಾ ಕೃಷಿಯನ್ನು ಪ್ರಾರಂಭಿಸಿದರು. ನಂತರ ಸ್ಥಳೀಯರು ಕಾರ್ಮಿಕರಾಗಿ ಪರಿವರ್ತನೆಗೊಂಡರು. 200ಕ್ಕೂ ಹೆಚ್ಚು ವರ್ಷಗಳಿಂದ ಕೂಲಿ ಕಾರ್ಮಿಕರಾಗಿದ್ದರೂ ಸ್ಥಳೀಯರು ಇಂದಿಗೂ ಬಡವರೇ.
ಪ್ರಸ್ತುತ ಕೂಲಿ ಕಾರ್ಮಿಕರ ದಿನದ ಕೂಲಿ 250 ರೂ. ಕನಿಷ್ಠ ಕೂಲಿಯೂ ಜಾರಿಯಾಗಿಲ್ಲ. ಆದರೆ, ಒಂದು ಕಿಲೋಗ್ರಾಂ ಚಹಾದ ಬೆಲೆ 50,000 ರೂಪಾಯಿಗಳು. ಇದು ಕಾರ್ಮಿಕರ ಶೋಷಣೆಯ ಪ್ರಮಾಣವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಚಹಾವು ಪಶ್ಚಿಮ ಬಂಗಾಳದ ಮುಖ್ಯ ಆದಾಯದ 30-ಪ್ರತಿಶತವನ್ನು ನೀಡುತ್ತದೆ. ಡಾರ್ಜಿಲಿಂಗ್ನ ಆರ್ಥಿಕತೆಯು ಚಹಾ, ಮರ ಮತ್ತು ಪ್ರವಾಸೋದ್ಯಮದಿಂದ ಸುಸ್ಥಿರವಾಗಿದೆ. ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯ ರಚನೆಯಾದರೆ ಈ ರಾಜ್ಯ ಅತ್ಯಂತ ಶ್ರೀಮಂತ ರಾಜ್ಯವಾಗಲಿದೆ. ಆದರೆ ಡಾರ್ಜಿಲಿಂಗ್ ಗಡಿ ಪ್ರದೇಶವಾಗಿದ್ದು, ಚೀನಾ, ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳ ಸಮೀಪದಲ್ಲಿದೆ. ಹೀಗಾಗಿ ಗಡಿ ಭಾಗದಲ್ಲಿ ಅಶಾಂತಿ ಉಂಟಾಗುವುದು ಸರ್ಕಾರಕ್ಕೆ ಬೇಕಾಗಿಲ್ಲ, ಹಾಗಾಗಿ ನಮ್ಮ ಎಲ್ಲ ಚಲನವಲನಗಳನ್ನು ಹತ್ತಿಕ್ಕಲಾಗಿದೆ.
ಗೂರ್ಖಾಗಳನ್ನು ಆರ್ಥಿಕ ಬಿಕ್ಕಟ್ಟಿನಲ್ಲಿ ಇರಿಸಿದರೆ, ಅವರು ತಮ್ಮ ಅಸ್ಮಿತೆಗಾಗಿ ಹೋರಾಡಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ತಿಳಿದಿದೆ. ಆದ್ದರಿಂದ, ಆರ್ಥಿಕ ಶೋಷಣೆ ಹೇರಳವಾಗಿದೆ. ಇದರಿಂದ ವಿದ್ಯಾವಂತ ಯುವಕರು ವಲಸಿಗರಾಗುತ್ತಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರವು ಕೇವಲ ಆರ್ಥಿಕ ಶೋಷಣೆಯನ್ನು ನಡೆಸುತ್ತಿಲ್ಲ, ಆದರೆ ಭಾಷಾ, ಸಾಂಸ್ಕೃತಿಕ ಮತ್ತು ರಾಜಕೀಯ ಶೋಷಣೆಯನ್ನೂ ನಡೆಸುತ್ತಿದೆ. ಆದ್ದರಿಂದ ಗೂರ್ಖಾಗಳ ಜೀವನಮಟ್ಟ ಬಿಕ್ಕಟ್ಟಿನಲ್ಲಿದೆ.
ನನಗೆ ಈಗ ಗೊತ್ತಾಯಿತು. ನಿಮ್ಮ ಕವನಗಳು ಯಾಕೆ ಸದಾ ಆರ್ಭಟಿಸುತ್ತಿರುತ್ತವೆ ಹಾಗೂ ಬೆಂಕಿಕೆಂಡಗಳನ್ನೇ ಉಗುಳಿತ್ತಿರುತ್ತವೆ ಎಂದು. ಬೊಗಾಟಿಯವರೇ, ಇಷ್ಟೊತ್ತು ನಿಮ್ಮೊಂದಿಗೆ ಮಾತನಾಡಿದ್ದು ತುಂಬಾ ಖುಷಿ ಕೊಟ್ಟಿತು. ನಿಮ್ಮ ಕನಸುಗಳು ಆಶೋತ್ತರಗಳೆಲ್ಲವೂ ಈಡೇರಲಿ ಎಂದು ಹಾರೈಸುತ್ತೇನೆ. ನಮಸ್ಕಾರ.
***
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ಸಿನಿಮಾ ಮತ್ತು ಸಮಾಜ5 ದಿನಗಳ ಹಿಂದೆ
-
“ಕಾಂತಾರ ಚಾಪ್ಟರ್ ೧” ಸಿನಿಮಾ ಕುರಿತು…4 ವಾರಗಳ ಹಿಂದೆ
-
-
-
ತರಚೀ ಪುಷ್ಪೋಪಾಖ್ಯಾನ4 ತಿಂಗಳುಗಳ ಹಿಂದೆ
-
ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …9 ತಿಂಗಳುಗಳ ಹಿಂದೆ
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ1 ವರ್ಷದ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!2 ವರ್ಷಗಳ ಹಿಂದೆ
-
Pic by Hengki Lee4 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು5 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?5 ವರ್ಷಗಳ ಹಿಂದೆ
-
ದ್ವಿಪದಿಗಳು6 ವರ್ಷಗಳ ಹಿಂದೆ
-
ಹೊಸ ದಿನ6 ವರ್ಷಗಳ ಹಿಂದೆ
-
The story of telling a story!6 ವರ್ಷಗಳ ಹಿಂದೆ
-
-
-
ಆಸೆ....!!!6 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 26 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!7 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ7 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?7 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!7 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್7 ವರ್ಷಗಳ ಹಿಂದೆ
-
ಮಾಯೆ8 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ8 ವರ್ಷಗಳ ಹಿಂದೆ
-
ಅನುಸಂಧಾನ-೩8 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!8 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ8 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು8 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!9 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:9 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ10 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್10 ವರ್ಷಗಳ ಹಿಂದೆ
-
ಕತ್ತಲೆ.................10 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..10 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ10 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ10 ವರ್ಷಗಳ ಹಿಂದೆ
-
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು10 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!10 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...11 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ11 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ11 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ11 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?12 ವರ್ಷಗಳ ಹಿಂದೆ
-
ತೀರ....12 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ12 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?12 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ12 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು12 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ13 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)13 ವರ್ಷಗಳ ಹಿಂದೆ
-
(ಮಹಿಳಾ)ವಾದ:13 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ13 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…13 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ13 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ14 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್14 ವರ್ಷಗಳ ಹಿಂದೆ
-
ಕಫನ್14 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …14 ವರ್ಷಗಳ ಹಿಂದೆ
-
ನನ್ನ ಜಡೆ14 ವರ್ಷಗಳ ಹಿಂದೆ
-
ಕೇಳಿ-೫15 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು15 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು15 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧15 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ15 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ16 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು16 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು16 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?16 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !16 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...18 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.

0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ