ಹೌದು, ನಾನೀಗ ಪಕ್ಕಾ ವ್ಯವಹಾರಸ್ಥನಾಗಿದ್ದೇನೆ! ಹಾಗಂತ ಹೇಳಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ. ಹೆಮ್ಮೆ ಯಾಕೆಂದರೆ ನನಗೆ ದುಡ್ಡಿನ ಬೆಲೆ ಚನ್ನಾಗಿ ಅರ್ಥವಾಗಿದೆಯೆಂದರ್ಥ. ಅದಕ್ಕೆ ಹೇಗೆ ಮರ್ಯಾದೆ, ಗೌರವಗಳನ್ನು ಕೊಡಬೇಕೆಂದು ಚನ್ನಾಗಿ ಮನನವಾಗಿದೆಯೆಂದರ್ಥ. ಮೊದಲು ನನಗೆ ದುಡ್ಡಿನ ಬೆಲೆ ಗೊತ್ತಿರಲಿಲ್ಲವೆಂದಲ್ಲ. ಆದರೆ ಅಷ್ಟಾಗಿ ಗೊತ್ತಿರಲಿಲ್ಲ. ಹೀಗಾಗಿ ಅವರಿವರಿಗೆ ಕೊಟ್ಟು ಕಳೆದುಕೊಂಡೆ. ಅನೇಕ ಕಡೆ ಕೈ ಸುಟ್ಟುಕೊಂಡೆ. ಮೊದಲು ದುಡ್ಡಿನ ವಿಷಯದಲ್ಲಿ ಭಾವುಕನಾಗಿ ಯೋಚನೆ ಮಾಡುತ್ತಿದ್ದೆ. ಆದರೆ ಈಗ ಪಕ್ಕಾ ವ್ಯವಹಾರಸ್ಥನಾಗಿ ಬದಲಾಗಿದ್ದೇನೆ. ಮೊದಲೆಲ್ಲಾ ಸ್ನೇಹಿತರಿಗೆ, ಬಂಧುಗಳಿಗೆ ಸುಲಭವಾಗಿ ಹಣ ಕೊಡುತ್ತಿದ್ದೆ. ಕೊಟ್ಟಮೇಲೆ ಅದನ್ನು ವಾಪಾಸು ಕೇಳಲು ಹಿಂದೆಮುಂದೆ ನೋಡುತ್ತಿದ್ದೆ. ಒಂದುವೇಳೆ ಕೊಡದಿದ್ದರೂ ಸುಮ್ಮನಾಗುತ್ತಿದ್ದೆ. ಆದರೆ ಈಗ ಹಾಗಲ್ಲ. ಇದಕ್ಕೆ ತದ್ವಿರುದ್ಧವಾಗಿ ಬದಲಾಗಿದ್ದೇನೆ. ಬಹಳಷ್ಟು ಬದಲಾಗಿದ್ದೇನೆ.
ಇದೀಗ ಯಾರಾದರೂ ಹಣ ಕೇಳಲು ಬಂದರೆ ಮೊದಲು “ಇಲ್ಲ” ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತೇನೆ. ನಾನು ಕೊಡದಿದ್ದರೆ ಅವನೇನೆಂದುಕೊಳ್ಳುತ್ತಾನೋ? ಎಲ್ಲಿ ದೂರವಾಗುತ್ತಾನೋ? ಎಂದು ಭಯಪಡುವದಿಲ್ಲ. ಸಂಬಂಧಗಳಲ್ಲಿ, ಹತ್ತಿರದವರಲ್ಲಂತೂ ಯಾವುದೇ ವ್ಯವಹಾರವನ್ನು ಇಟ್ಟುಕೊಳ್ಳುವದಿಲ್ಲ. ಏಕೆಂದರೆ ಒಂದುವೇಳೆ ಅವರು ವಾಪಾಸು ಕೊಡದೇಹೋದಾಗ ತೀರಾ ನಿಕೃಷ್ಟವಾಗಿ ಕೊಡಿ ಎಂದು ಕೇಳಲಾಗದು. ಹೋಗಲಿ ಅವರ ಸಂಬಂಧವನ್ನಾದರು ಹರಿದುಕೊಳ್ಳೋಣವೆಂದರೆ ಅದೂ ಸಾಧ್ಯವಾಗದು. ಮೇಲಾಗಿ ಆಗಾಗ ಅವರ ಮುಖವನ್ನು ನೋಡಬೇಕಾಗುವದು ಮತ್ತು ನೋಡಿದಾಗಲೆಲ್ಲಾ ಅವರು ಮಾಡಿದ ಮೋಸ ನೆನಪಾಗಿ ಮನಸ್ಸಿಗೆ ಒಂಥರಾ ಹಿಂಸೆ ಅನಿಸುತ್ತದೆ. ಅದೇ ದೂರದವರಾದರೆ ವಾಪಾಸು ಕೊಡದಿದ್ದರೂ ಪರ್ವಾಗಿಲ್ಲ ಪೀಡೆ ಹೋಯ್ತು ಎಂದು ಸುಮ್ಮನಿರಬಹುದು.
ಹಾಗೆ ಒಂದುವೇಳೆ ಕೊಡಲೇಬೇಕಿನಿಸಿದರೆ ಮೊದಲು ಹಣ ತೆಗೆದುಕೊಳ್ಳುವವನ ಹಿನ್ನೆಲೆ ವಿಚಾರಿಸುತ್ತೇನೆ. ಏನು ಕೆಲಸದಲ್ಲಿದ್ದಾನೆ? ಎಷ್ಟು ಸಂಬಳ ಇದೆ? ಆ ಸಂಬಳದಲ್ಲಿ ಅವನು ತನ್ನ ಮನೆಗೆ ಅಂತಾ ಖರ್ಚುಮಾಡಿ ಅದರಲ್ಲಿ ಎಷ್ಟು ಉಳಿಸುತ್ತಾನೆ? ಉಳಿಸುವ ಹಣದಿಂದ ಅವನಿಗೆ ಹಿಂತಿರುಗಿಸುವ ಸಾಮರ್ಥ್ಯ ಇದೆಯಾ? ಇಲ್ವಾ? ಎಂದೆಲ್ಲಾ ಮುಲಾಜಿಲ್ಲದೆ ಬ್ಯಾಂಕುಗಳಲ್ಲಿ ಸಾಲ ಕೊಡುವ ಮುನ್ನ ಹೇಗೆ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಾರೋ ಹಾಗೆ ನಾನು ಸಹ ಕೇಳಿ ತಿಳಿದುಕೊಳ್ಳುತ್ತೇನೆ. ಇಷ್ಟಕ್ಕೂ ಅವನ ಉತ್ತರಗಳಿಂದ ಸಂತೃಪ್ತನಾದರೆ ಮಾತ್ರ ಕೊಡುತ್ತೇನೆ. ಇಲ್ಲವಾದರೆ ಇಲ್ಲ ಎಂದು ಮುಖಕ್ಕೆ ಹೊಡೆದಹಾಗೆ ಹೇಳಿಬಿಡುತ್ತೇನೆ.
ಹಾಗೇನೆ, ನಾನು ಹಣವಿದೆ ಎಂದು ಸಿಕ್ಕ ಸಿಕ್ಕಹಾಗೆ ಖರ್ಚು ಮಾಡುವದಿಲ್ಲ. ತೀರಾ ಅನಿವಾರ್ಯ, ಅಗತ್ಯ ಮತ್ತು ಅವಶ್ಯಕತೆ ಎನಿಸಿದರೆ ಮಾತ್ರ ಖರ್ಚು ಮಾಡುತ್ತೇನೆ. ನಾನು ಏನಾದರು ಕೊಂಡುಕೊಳ್ಳಬೇಕಾದರೆ ಧಿಡೀರೆಂದು ಸುಮ್ಮನೆ ಹಾಗೆ ಹೋಗಿ ಕೊಳ್ಳುವದಿಲ್ಲ. ಮೊದಲು ಆ ವಸ್ತುಗಳ ಬೆಲೆಯನ್ನು ಇಂಟರ್ನೆಟ್‍ನಲ್ಲಿ ಹುಡುಕಿ ತಿಳಿದುಕೊಳ್ಳುತ್ತೇನೆ. ಆನಂತರ ನಾಲ್ಕೈದು ಕಡೆ ವಿಚಾರಿಸಿ ಎಲ್ಲಿ ಕಡಿಮೆಯಿರುತ್ತದೋ ಅಲ್ಲಿ ತೆಗೆದುಕೊಳ್ಳುತ್ತೇನೆ. ಹಾಗೇನೆ, ನಾನು ಐಷಾರಾಮಿ ಹೋಟೆಲ್‍ಗಳಿಗೆ ಹೋಗುವದಾಗಲಿ, ಅಲ್ಲಿ ತಂಗುವದಾಗಲಿ ಯಾವತ್ತೂ ಮಾಡಿಲ್ಲ. ಅಷ್ಟೊಂದು ಐಷಾರಾಮಿ ಮನಸಿಗೆ ಹಿಡಿಸದು ಹಾಗೂ ಒಗ್ಗದು. ಸಾಧ್ಯವಾದಷ್ಟು ಖರ್ಚನ್ನು ಕಡಿಮೆ ಮಾಡಲು ನೋಡುತ್ತೇನೆ. ಈ ವಿಷಯದಲ್ಲಿ ಬೇರೆಯವರು ನನ್ನನ್ನು “ಜುಗ್ಗ” ಎಂದರೂ ಪರ್ವಾಗಿಲ್ಲ. ನಾನದನ್ನು ತಲೆಗೆ ಹಚ್ಚಿಕೊಳ್ಳುವದಿಲ್ಲ.
ಅಂದಹಾಗೆ ನನ್ನ ಇಷ್ಟು ವರ್ಷದ ಜೀವಿತಾವಧಿಯಲ್ಲಿ ಹಣದ ವಿಷಯದಲ್ಲಿ ನನಗೆ ಎರಡು ಸತ್ಯಗಳು ಗೊತ್ತಾಗಿವೆ:
1. ನಾವು ಗಳಿಸಿದ ಹಣಕ್ಕಿಂತ ಉಳಿಸಿದ ಹಣ ಹೆಚ್ಚುಕಾಲ ಬರುತ್ತದೆ.
2. ನಮ್ಮಲ್ಲಿರುವ ಹಣದಿಂದ ನಾವು ಶ್ರೀಮಂತರಾಗುವದಿಲ್ಲ. ಆದರೆ ನಾವು ಅದಕ್ಕೆ ಕೊಡುವ ಮರ್ಯಾದೆ ಮತ್ತು ಗೌರವಗಳಿಂದ ಶ್ರೀಮಂತರಾಗುತ್ತೇವೆ.
ಯಕ್ಷಾಲಾಪ ಹಾಗೂ ಮಿನುಗುತಾರೆ
1 ದಿನದ ಹಿಂದೆ