Demo image Demo image Demo image Demo image Demo image Demo image Demo image Demo image

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು (ಕೊನೆಯ ಭಾಗ)

  • ಶುಕ್ರವಾರ, ಏಪ್ರಿಲ್ 24, 2009
  • ಬಿಸಿಲ ಹನಿ
  • ನಾನು ತೆಗೆದುಕೊಂಡ ಇಂಗ್ಲೀಷ ಸಾಹಿತ್ಯದ ಓದು ಒಂದು ಹೊಸ ಪ್ರಪಂಚವನ್ನೇ ತೆರೆದಿಟ್ಟಿತು. ಇಂಗ್ಲೀಷ ಕವನಗಳು, ಕಾದಂಬರಿಗಳು ನಾನು ಕೇಳಿರದ ಕಂಡಿರದ ಲೋಕವನ್ನು ಪರಿಚಯಿಸಿದವು. ಅಲ್ಲದೆ ಆಧುನಿಕ ಕನ್ನಡ ಸಾಹಿತ್ಯದ ಕೆಲವು ಮಹತ್ವದ ಕೃತಿಗಳು ಇಂಗ್ಲೀಷ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿವೆ ಎನ್ನುವ ಸತ್ಯ ಗೊತ್ತಾಯಿತು. ನಾನೂ ಸಹ ಜಾನ್ ಕೀಟ್ಸನ “Ode to a Nightingale” ಕವನದ ಪ್ರಭಾವಕ್ಕೆ ಒಳಗಾಗಿ “ಓ ಕನಸುಗಳೆ ಬನ್ನಿ” ಎನ್ನುವ ಕವನವೊಂದನ್ನು ಬರೆದೆ. ಅದಲ್ಲದೆ ಗೇಬ್ರಿಯಲ್ ಓಕಾರನ “Once Upon a Time.....” ಕವನದಿಂದ ಸ್ಪೂರ್ತಿಗೊಂಡು “To My Son” ಎನ್ನುವ ಇಂಗ್ಲೀಷ ಕವಿತೆಯನ್ನೂ ಬರೆದೆ. ಅದನ್ನು ನಮ್ಮ ಇಂಗ್ಲೀಷ ವಿಭಾಗದ ಮುಖ್ಯಸ್ಥರು ತುಂಬಾ ಮೆಚ್ಚಿಕೊಂಡು ಕಾಲೇಜಿನ ಪ್ರಾಂಶುಪಾಲರ ಸಹಿಯೊಂದಿಗೆ ನೋಟೀಸ್ ಬೋರ್ಡ್ ಮೇಲೆ ನೇತುಹಾಕಿದ್ದರು. ನಾನು ಬಿ.ಎ. ಕಡೆಯ ವರ್ಷದಲ್ಲಿರಬೇಕಾದರೆ ನನ್ನ ಕೆಲವು ಕವನಗಳು ನಮ್ಮ ಕಾಲೇಜು ಮ್ಯಾಗಜೀನ್ “ತೆನೆ”ಯಲ್ಲಿ ಪ್ರಕಟವಾದವು. ಆನಂತರ ನಾನು ಆಗೊಮ್ಮೆ ಈಗೊಮ್ಮೆ ಸ್ಥಳೀಯ ಪತ್ರಿಕೆಗಳಿಗೆ ಕಳಿಸದೆನೆಂದು ಕಾಣುತ್ತದೆ. ಆದರೆ ಅವು ಯಾವುತ್ತೂ ಪ್ರಕಟವಾಗಲೇ ಇಲ್ಲ.

    ಬಿ.ಎ. ಮುಗಿಸಿದ ಮೇಲೆ ಆರ್ಥಿಕ ಮುಗ್ಗಟ್ಟಿನಿಂದ ಓದು ಮುಂದುವರಿಸಲಾಗದೆ ದೂರಶಿಕ್ಷಣದಲ್ಲಿ ಎಮ್.ಎ ಇಂಗ್ಲೀಷ ಓದುತ್ತಾ ಬೆಂಗಳೂರಿನಲ್ಲಿ ಇಂಗ್ಲೀಷ ಟೀಚರ್ ಆಗಿ ಕೆಲಸ ಮಾಡತೊಡಗಿದೆ. ಎಮ್.ಎ ಓದುವ ಭರಾಟೆಯಲ್ಲಿ ಹಾಗೂ ಕೆಲಸದ ಒತ್ತಡದ ನಡುವೆ ಆಗೊಮ್ಮೆ ಈಗೊಮ್ಮೆ ಬರೆಯುವ ಪ್ರವೃತ್ತಿಯೂ ನಿಂತುಹೋಯಿತು. ಆಶ್ಚರ್ಯವೆಂದರೆ ನಾನು ಸ್ಕೂಲಿನಲ್ಲಿ ಕೆಲಸ ಮಾಡುತ್ತಿರಬೇಕಾದರೆ ಒಂದು ಸಾರಿ ಜಿ. ಎಸ್. ಶಿವರುದ್ರಪ್ಪನವರ “ಯಾವುದೀ ಪ್ರವಾಹವು” ಎನ್ನುವ ಕವನವನ್ನು ಬಿಡುವಿನ ವೇಳೆಯಲ್ಲಿ ಓದುತ್ತಿದ್ದೆ. ತಕ್ಷಣ ಅದೇನನ್ನಿಸಿತೊ ಗೊತ್ತಿಲ್ಲ ಇದನ್ನು ಇಂಗ್ಲೀಷಗೆ ಯಾಕೆ ಅನುವಾದ ಮಾಡಬಾರದು ಎಂದು ಅನುವಾದಿಸಿಯೂ ಬಿಟ್ಟೆ. ಅನುವಾದಿಸಿದ ನಂತರ ಅದನ್ನು ನಮ್ಮ ಪ್ರಾಂಶುಪಾಲರಾದ ಪ್ರೊ. ಸ್ವಾಮಿನಾಥನ್ ಅವರಿಗೆ ತೋರಿಸಿದ್ದೆ. ಅವರು ಅದನ್ನು ಮೆಚ್ಚಿಕೊಂಡು ಚನ್ನಾಗಿದೆ ಎಂದು ಹೇಳಿ ಸ್ವಲ್ಪ ತಿದ್ದಿಕೊಟ್ಟಿದ್ದರು. ಹಾಗೆ ಹುಟ್ಟಿಕೊಂಡ ನನ್ನೊಳಗಿನ ಅನುವಾದಕ ಮತ್ತೆ ನಾನು ಲೆಕ್ಚರರ್ ಆಗಿ ಕೆಲಸಕ್ಕೆ ಸೇರುವವರೆಗೂ ಅದೇಕೋ ಹೊರಬರುವ ಮನಸ್ಸು ಮಾಡಲೇ ಇಲ್ಲ.

    ಒಂದು ಸಾರಿ ಲಂಕೇಶ್ ಪತ್ರಿಕೆಯಲ್ಲಿ ದೀಪಾವಳಿ ವಿಶೇಷಾಂಕಕ್ಕಾಗಿ “ಮದುವೆ” ಬಗ್ಗೆ ಓದುಗರಿಂದ ಅಭಿಪ್ರಾಯ ಕೇಳಿದ್ದರು. ನಾನೂ ಏಕೆ ಬರೆಯಬಾರದೆಂದು “ಮದುವೆ” ಬಗ್ಗೆ ನನ್ನ ಅನಿಸಿಕೆಯನ್ನು ಬರೆದು ಕಳಿಸಿದೆ. ಆದರೆ ಅದೇಕೋ ಪ್ರಕಟವಾಗಲೇ ಇಲ್ಲ. ಆದರೆ ನಾನು ಬರೆದ ಲೇಖನ ತೃಪ್ತಿ ತಂದುಕೊಟ್ಟಿದ್ದರಿಂದ ಲೇಖನ ಬರೆಯಲು ಅಡ್ಡಿಯಿಲ್ಲವೆಂದುಕೊಂಡು ಅಂದಿನಿಂದ ಯಾವಗಲೋ ಸಮಯವಿದ್ದಾಗ ಚಿಕ್ಕ ಚಿಕ್ಕ ಲೇಖನಗಳನ್ನು ಬರೆದಿಡತೊಡಗಿದೆ. ಅದುವರೆಗೂ ನಾನು ಲೇಖನಗಳನ್ನು ಯಾವತ್ತೂ ಬರೆಯಲು ಪ್ರಯತ್ನಿಸಿರಲಿಲ್ಲ. ಈ ಮಧ್ಯ ಗೆಳೆಯರಿಗೆ ಬರೆಯುತ್ತಿದ್ದ ನನ್ನ ಪತ್ರಗಳು ಬರಿ ಪತ್ರಗಳಾಗಿರಲಿಲ್ಲ. ಅದರಲ್ಲೊಂದಿಷ್ಟು ಕವಿತೆಯ ಸಾಲುಗಳು, ಯಾರದೋ ಕತೆಯ ಚರ್ಚೆಗಳು, ಪ್ರಶಸ್ತಿ ಪಡೆದ ಚಿತ್ರಗಳ ವಿಮರ್ಶೆ ಏನೆಲ್ಲ ಇರುತ್ತಿದ್ದವು. ನಾನು ಇತ್ತೀಚಿಗೆ ಬರೆದ “ನಾ ಕಂಡಂತೆ ಬೇಂದ್ರೆಯವರ ಹುಬ್ಬಳ್ಳಿಯಾಂವಾ” ಎನ್ನುವ ಲೇಖನವು ಹಿಂದೊಮ್ಮೆ ಜೀವದ ಗೆಳೆಯ ಮಂಜುವಿಗೆ ಬರೆದ ಪತ್ರವಾಗಿತ್ತು. ನನ್ನ ಪತ್ರಗಳನ್ನು ಮೆಚ್ಚಿಕೊಂಡ ಸ್ನೇಹಿತರು “ನಿನ್ನ ಪತ್ರಗಳು ಅದ್ಭುತವಾಗಿರುತ್ತವೆ. ನೀನೇಕೆ ಏನಾದರು ಬರೆದು ಪ್ರಕಟಿಸಬಾರದು?” ಎಂದು ಸಲಹೆ ನೀಡುತ್ತಿದ್ದರು. ನಾನು ನಕ್ಕು ಸುಮ್ಮನಾಗುತ್ತಿದ್ದನೆ ಹೊರತು ಯಾವತ್ತೂ ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಲೇ ಇಲ್ಲ. ಗೆಳೆಯ ಮಂಜುವಿನ ಮೂಲಕ ಪರಿಚಯವಾದ ಚಿತ್ರ ನಿರ್ಮಾಪಕ ದಿವಂಗತ ಅಬ್ಬಯ್ಯನಾಯ್ಡುವರ ಮಗ ರಮೇಶ ಅಬ್ಬಯ್ಯನಾಯ್ದುವರು ನನ್ನ ಪತ್ರಗಳನ್ನು ಓದಿ “ನಿಮ್ಮ ಬರವಣಿಗೆ ಚನ್ನಾಗಿದೆ. ನೀವೊಂದು ಕತೆ ಬರೆದುಕೊಡಿ. ನಾನದನ್ನು ಸಿನೆಮಾ ಮಾಡುತ್ತೇನೆ” ಎಂದು ದುಂಬಾಲು ಬಿದ್ದಿದ್ದರು. ನಾನು ಆಗಷ್ಟೆ ಕಾಲೇಜು ಲೆಕ್ಚರರಾಗಿ ಸೇರಿಕೊಂಡಿದ್ದರಿಂದ ಹಾಗೂ ತರಗತಿಗಳಿಗೆ ಸಾಕಷ್ಟು ತಯಾರಾಗಿ ಹೋಗಬೇಕಾಗಿದ್ದರಿಂದ ನನಗೆ ಕತೆಯ ಬಗ್ಗೆ ಯೋಚಿಸಲೂ ಪುರುಸೊತ್ತಿರಲಿಲ್ಲ. ಹೀಗಾಗಿ ಬರೆಯಲು ಹೋಗಲಿಲ್ಲ. ಅವರು ಆಗಾಗ್ಗೆ ಫೋನ್ ಮಾಡಿ “ಆಯ್ತಾ, ಆಯ್ತಾ” ಎಂದು ಕೇಳುತ್ತಲೇ ಇದ್ದರು. ನಾನು ಮುಂದೂಡುತ್ತಲೇ ಇದ್ದೆ. ಕೊನೆಗೆ ನನ್ನ ನಿರಾಸಾಕ್ತಿಯನ್ನು ನೋಡಿ ಅವರು ಕೇಳುವದನ್ನೇ ಬಿಟ್ಟರು. ಹೀಗೆ ಸಿನಿಮಾ ಮಾಧ್ಯಮದಲ್ಲಿ ಕೆಲಸ ಮಾಡುವ ಅವಕಾಶವೊಂದನ್ನು ಕಳೆದುಕೊಂಡೆ.

    ನಾನು ಎಮ್.ಎ. ಮುಗಿಸಿ ಕಾಲೇಜೊಂದರಲ್ಲಿ ಕೆಲಸಕ್ಕೆ ಸೇರಿದಾಗ ಅಲ್ಲಿ ನನ್ನ ಕನ್ನಡ ಉಪನ್ಯಾಸಕ ಮಿತ್ರರಾದ ನಟರಾಜ್ ಅವರು ನನ್ನ ಕವನಗಳನ್ನು ನೋಡಿ ಬರೆಯಿರಿ ಚನ್ನಾಗಿವೆ ಎಂದು ಹೇಳಿದರು. ನಮ್ಮಿಬ್ಬರಿಗೂ ಸಮಾನ ಆಸಕ್ತಿಗಳಿದ್ದುದರಿಂದ ನಾವು ಸಾಹಿತ್ಯದ ಬಗ್ಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು. ಹೀಗೆ ಚರ್ಚಿಸುವದರಲ್ಲಿಯೇ ಕಾಲ ಕಳೆಯುತ್ತಿದ್ದನೇ ಹೊರತು ಬರೆಯಲು ಪ್ರಯತ್ನ ಪಡಲೇ ಇಲ್ಲ. ಅಲ್ಲದೇ ಪಿ. ಯು. ಕಾಲೇಜಿನ ಕನ್ನಡ ವಿಭಾಗದಲ್ಲಿ ಕನ್ನಡದ ಖ್ಯಾತ ವಿಮರ್ಶಕ ಪ್ರೊ. ಕಿ.ರಂ. ನಾಗರಾಜವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿಯವರು ನನ್ನೊಟ್ಟಿಗೆ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಬಿಡುವಿನ ವೇಳೆಯಲ್ಲಿ ಸ್ಟಾಫ್ ರೂಮಿನಲ್ಲಿ ಕುಳಿತುಕೊಂಡು ಏನನ್ನಾದರೂ ಅನುವಾದಿಸುತ್ತಲೇ ಇರುತ್ತಿದ್ದರು. ಅದಾಗಲೆ ಅವರು ಲೋರ್ಕಾನ ನಾಟಕಗಳನ್ನು, ಸಿಲ್ವಿಯಾ ಪ್ಲಾಥಳ ಕವನಗಳನ್ನು ಕನ್ನಡಕ್ಕೆ ಅನುವಾದಿಸಿ ಒಳ್ಳೆಯ ಅನುವಾದಕಿಯೆಂದು ಹೆಸರುವಾಸಿಯಾಗಿದ್ದರು. “ನೀವು ಹೇಗೆ ಅನುವಾದಿಸುತ್ತೀರಿ?” ಎಂದು ನಾನೊಮ್ಮೆ ಅವರನ್ನು ಕೇಳಿದ್ದಾಗ “ಅದನ್ನು ತಿಳಿಯಲು ನನ್ನ ಪುಸ್ತಕಗಳನ್ನು ಓದಿ” ಎಂದು ತಾವು ಪ್ರಕಟಿಸಿದ ಒಂದೆರಡು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದರು. ನಾನು ಓದಿ ಅವರ ಅನುವಾದದ ಕೌಶಲ್ಯಕ್ಕೆ ಬೆರಗಾಗಿದ್ದೆನೆ ಹೊರತು ಮುಂದೊಮ್ಮೆ ನಾನು ಸಹ ಅನುವಾದದೆಡೆಗೆ ವಾಲಿಕೊಂಡು ನನ್ನ ಬರಹದ ಬಹುಪಾಲು ಅನುವಾದಕ್ಕೇ ಮೀಸಲಾಗಿರುತ್ತದೆಂದು ಊಹೆ ಕೂಡ ಮಾಡಿರಲಿಲ್ಲ! ಪರೋಕ್ಷವಾಗಿ ವಿಜಯಲಕ್ಷ್ಮಿ ಮೇಡಂವರ ಅನುವಾದದ ಕಲೆ ನನ್ನ ಮೇಲೆ ಪರಿಣಾಮ ಬೀರಿತೆ? ಅಥವಾ ನನ್ನೊಳಗೆ ಆಗಲೇ ಹುಟ್ಟಿ ಮಲಗಿದ್ದ ಅನುವಾದಕನನ್ನು ಎಚ್ಚರಗೊಳಿಸಿತೆ? ಗೊತ್ತಿಲ್ಲ. ಆದರೆ ಅವರೊಟ್ಟಿಗೆ ಕೆಲಸ ಮಾಡುವ ಅದೃಷ್ಟ ನನಗಿರಲಿಲ್ಲವೆಂದು ಕಾಣುತ್ತದೆ. ಅವರು ನಾನು ಕಾಲೇಜನ್ನು ಸೇರಿದ ಒಂದು ವರ್ಷಕ್ಕೇ ಕ್ಯಾನ್ಸರ್ ರೋಗಕ್ಕೆ ತುತ್ತಾದರು. ಮುಂದೆ ಕೆಲವು ವ್ಯಯಕ್ತಿಕ ಕಾರಣಗಳಿಗಾಗಿ ನಾನು ಆ ಕಾಲೇಜನ್ನು ಬಿಟ್ಟು ಬೇರೆ ಕಾಲೇಜನ್ನು ಸೇರಿದೆ.

    ನಾನು ಜೀವನದಲ್ಲಿ ಲೆಕ್ಚರರ್ ಆಗುವ ಗುರಿಯೊಂದನ್ನು ಬಿಟ್ಟರೆ ಬೇರೆ ಯಾವುದನ್ನೂ ಸಾಕಷ್ಟು ಅಳೆದು ತೂಗಿ ಯೋಜನೆ ಹಾಕಿಕೊಂಡು ಕೆಲಸ ಮಾಡಿಲ್ಲ. ಬಂದದ್ದನ್ನು ಬಂದಹಾಗೆ ಸ್ವೀಕರಿಸುತ್ತಾ, ಅನುಭವಿಸುತ್ತಾ, ನಿಭಾಯಿಸುತ್ತಾ ಬಂದಿದ್ದೇನೆ. ಬರವಣಿಗೆಯ ವಿಷಯದಲ್ಲಿ ಕೂಡ ಈ ಮಾತು ನಿಜವಾಗಿದೆ. ಎಲ್ಲವನ್ನೂ ಆಕಸ್ಮಿಕವಾಗಿ ಆರಂಭಿಸಿದೆ: ಅನುವಾದವನ್ನೂ ಕೂಡ! ಆದರೆ ದಿನ ಕಳೆದಂತೆ ಅನುವಾದತ್ತ ನನ್ನ ಒಲವು ಜಾಸ್ತಿಯಾಯಿತು. ಹೀಗೇಕೆ ಆಯಿತೆಂದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಇದು ಕೂಡ ನಾನು ಬರವಣಿಗೆಯನ್ನು ಆರಂಭಿಸಿದಷ್ಟೆ ಆಕಸ್ಮಿಕವಾಗಿತ್ತು. ಬಹುಶಃ ಏನನ್ನೂ ಹೊಸದಾಗಿ ಯೋಚಿಸುವ ತಾಪತ್ರಯವಿಲ್ಲದೆ ಇದ್ದುದನ್ನು ಇದ್ದಕ್ಕಿದ್ದಂತೆ ಕನ್ನಡಕ್ಕೆ ಹತ್ತಿರವಾಗುವಂತೆ ತರುವದಷ್ಟೆ ಆಗಿದ್ದರಿಂದಲೋ ಅಥವಾ ನನ್ನ ಆಸಕ್ತಿ ಮತ್ತೆ ಮತ್ತೆ ಅನುವಾದತ್ತ ತಿರುಗುತ್ತಿದ್ದರಿಂದಲೋ ಏನೋ ನಾನು ಪಾಠ ಮಾಡುತ್ತಿದ್ದ ಕವನಗಳನ್ನೆ ಅನುವಾದಿಸುತ್ತಾ ಬಂದೆ. ಹೀಗೆ ನಾನು ಅನುವಾದಿಸಿದ ಮೊಟ್ಟ ಮೊದಲ ಕವನ ದ್ವಿತಿಯ ಪಿ.ಯು.ಸಿ.ಯ ಇಂಗ್ಲೀಷ ಪಠ್ಯಪುಸ್ತಕದಲ್ಲಿನ “I am not that woman” ಎನ್ನುವ ಕವನ. ಅದನ್ನು “ಆ ಹೆಂಗಸು ನಾನಲ್ಲ...” ಎನ್ನುವ ಹೆಸರಿನಲ್ಲಿ ಅನುವಾದಿಸಿದೆ. ನನ್ನ ಅನುವಾದ ಹೇಗಿರಬಹುದೆಂದು ತಿಳಿಯಲು ಇದನ್ನು ಬೆಂಗಳೂರಿನ “ಭಾರತೀಯ ಭಾಷಾಂತಾರ ಅಧ್ಯಯನ ಸಂಸ್ಥೆ”ಗೆ ಕಳಿಸಿಕೊಟ್ಟೆ. ಹದಿನೈದು ದಿವಸಗಳ ನಂತರ ನಿಮ್ಮ ಅನುವಾದ ಎಲ್ಲ ರೀತಿಯಿಂದಲೂ ಚನ್ನಾಗಿದೆ ಎಂದು ಮೆಚ್ಚುಗೆಯ ಪತ್ರವೊಂದು ನನ್ನ ವಿಳಾಸಕ್ಕೆ ಬಂತು. ಉತ್ಸಾಹಗೊಂಡು ಬೇರೆ ಬೇರೆ ಕವನಗಳನ್ನು ಕನ್ನಡಕ್ಕೆ ಅನುವಾದಿಸುತ್ತಾ ಬಂದೆ. ನನ್ನ ಅನುವಾದ ದಿನದಿಂದ ದಿನಕ್ಕೆ ಪ್ರೌಢತೆಯನ್ನು ಪಡೆದುಕೊಳ್ಳುತ್ತಿದೆ ಎಂದು ನನಗೇ ಅನಿಸುತ್ತಿತ್ತು. ಈ ಮಧ್ಯ ಹಿಂದೆ ಒಂದು ಸಾರಿ ಇಂಗ್ಲೀಷಗೆ ಅನುವಾದಿಸಿದ್ದೆನಲ್ಲ? ಮತ್ತೆ ಏಕೆ ಅದನ್ನೂ ಸಹ ಮುಂದುವರಿಸಬಾರದು ಎನಿಸಿ ಕೆಲವು ಕವನಗಳನ್ನು ಇಂಗ್ಲೀಷಗೆ ಅನುವಾದಿಸಿದೆ. ಹೀಗೆ ಅನುವಾದಿಸುವದರಲ್ಲಿ ಹೆಚ್ಚು ತೃಪ್ತಿ ತಂದು ಕೊಟ್ಟ ಕವನಗಳೆಂದರೆ “ಕಾಡು ಮತ್ತು ನದಿ”, “Time” , “ಮೇಣದ ಅರಮನೆ”, “ಶಾಕುಂತಳೆಯ ಸ್ವಗತಗಳು”, “ಒಗಟು”, “ಒಗಟಿಗೆ ಉತ್ತರ” ಮುಂತಾದವು. ಅದರಲ್ಲೂ ನಾನು ಮತ್ತೆ ಮತ್ತೆ ಮೆಲುಕುಹಾಕುವ ನನಗಿಷ್ಟವಾದ ಅನುವಾದದ ಕವನವೆಂದರೆ “ನಾನು ನಿನ್ನ ಬೇರೆ ಪ್ರಿಯಕರನಂತಲ್ಲ, ಪ್ರಿಯೆ” ಎನ್ನುವ ಕವನ. ಇವೆಲ್ಲವನ್ನು ಇತ್ತೀಚಿಗಷ್ಟೆ ಅನುವಾದಿಸಿದ್ದು.

    ನಾನು ಏನನ್ನೇ ಅನುವಾದಿಸಲಿ ಅದು ಕನ್ನಡದ್ದು ಎನ್ನುವಷ್ಟರಮಟ್ಟಿಗೆ ಅನುವಾದಿಸಬೇಕೆಂಬುದು ನನ್ನಾಸೆ. ಮೊದಲಿಗೆ ನಾನು ಅನುವಾದಿಸಬೇಕಾದ್ದನ್ನು ಐದಾರು ಬಾರಿಯಾದರೂ ಓದುತ್ತೇನೆ. ಹಾಗೆ ಓದುವಾಗ ಹೊಳೆಯುವ ಪದಗಳನ್ನು, ಸಾಲುಗಳನ್ನು ಒಂದೆಡೆ ನೋಟ್ ಮಾಡಿಕೊಳ್ಳುತ್ತೇನೆ. ಆನಂತರ ಮೊದಲು ಇಂಗ್ಲೀಷನಿಂದ ಕನ್ನಡಕ್ಕೆ ಅನುವಾದಿಸುತ್ತೇನೆ. ತದನಂತರ ಕನ್ನಡದಿಂದ ಕನ್ನಡಕ್ಕೆ ಅನುವಾದಿಸುತ್ತಾ ಬರುತ್ತೇನೆ. ನಾನು ಅನುವಾದಿಸುವಾಗ ಇದು ಕನ್ನಡದ್ದೇ ಅನಿಸುವಷ್ಟರಮಟ್ಟಿಗೆ ಅನುವಾದಿಸಲು ಪದಗಳಿಗಾಗಿ, ಸಾಲುಗಳಿಗಾಗಿ ತಡಕಾಡುತ್ತೇನೆ. ಮತ್ತೆ ಮತ್ತೆ ಪ್ರಯತ್ನಿಸುತ್ತೇನೆ. ತೀರ ಆಗದೇ ಹೋದಾಗ ಭಾವಾನುವಾದ ಮಾಡಲು ಪ್ರಯತ್ನಿಸುತ್ತೇನೆ. ಅದೂ ಆಗದಿದ್ದರೆ ಮೂಲ ಅರ್ಥಕ್ಕೆ ಧಕ್ಕೆಯಾಗದಂತೆ ರೂಪಾಂತರಿಸಲು ನೋಡುತ್ತೇನೆ. ಇದ್ಯಾವುದು ಫಲಿಸದೇ ಹೋದಾಗ ಕೈ ಬಿಡುತ್ತೇನೆ. ಕೆಲವು ಸಾರಿ ಇದನ್ನು ಅನುವಾದಿಸಲಾಗುವದಿಲ್ಲವೆಂದುಕೊಂಡು ಅರ್ಧಂಬರ್ಧ ಅನುವಾದಿಸಿ ನಿಲ್ಲಿಸಿಬಿಟ್ಟಿರುತ್ತೇನೆ. ನಂತರ ಅದನ್ನೇ ಅದ್ಭುತ ಎನಿಸುವಷ್ಟರಮಟ್ಟಿಗೆ ಅನುವಾದಿಸಿರುತ್ತೇನೆ. ಅನುವಾದ ಎನ್ನುವದು ಕೂದಲನ್ನು ಸೀಳಿದಷ್ಟೆ ಕಠಿಣವಾದ ಕೆಲಸ ಎಂದು ಬಹಳಷ್ಟು ಜನ ಹೇಳುವದನ್ನು ನಾನು ಕೇಳಿದ್ದೇನೆ. ಆದರೆ ಇದುವರೆಗೂ ನನಗೆ ಈ ರೀತಿ ಅನಿಸಿಯೇ ಇಲ್ಲ. ಬಹುಶಃ ನಾನಿನ್ನೂ ದೊಡ್ಡ ದೊಡ್ದ ಗ್ರಂಥಗಳನ್ನು ಅನುವಾದಿಸಲು ಕೈ ಹಾಕದೆ ಇರುವದರಿಂದ ಈ ರೀತಿ ಅನಿಸಿಲ್ಲವೋ ಏನೋ ಗೊತ್ತಿಲ್ಲ! ಮುಂದೆ ಅನಿಸಿದರೂ ಅನಿಸಬಹುದು.

    ಹೀಗೆ ದಿನದಿಂದ ದಿನಕ್ಕೆ ನನ್ನ ಬರವಣಿಗೆ ಪ್ರಬುದ್ಧತೆಯನ್ನು ಪಡೆದುಕೊಳ್ಳುತ್ತಿತ್ತು. ಆದರೂ ಯಾವ ಪತ್ರಿಕೆಗೂ ಕಳಿಸಲಿಲ್ಲ. ಏಕೋ ನಾನು ಕಳಿಸಿದ್ದು ಪ್ರಕಟವಾಗುತ್ತನೇ ಇರಲಿಲ್ಲ. ಒಂದು ಸಾರಿ ನಮ್ಮ ಕಾಲೇಜಿನ ಮ್ಯಾಗಜೀನಲ್ಲಿ ನನ್ನ ಎರಡು ಅನುವಾದಿತ ಕವನಗಳು ಪ್ರಕಟವಾದವು. ಇದನ್ನು ನೋಡಿ ನಮ್ಮ ಕನ್ನಡ ಅಧ್ಯಾಪಕಿ ಶ್ರೀಮತಿ ಚಂದ್ರಕಾಂತವರು (“ಬತ್ತದ ತೊರೆ” ಬ್ಲಾಗ್ ಒಡತಿ) “ಚನ್ನಾಗಿ ಬರೆದಿದ್ದೀರಿ, ಬರೆಯುತ್ತಿರಿ” ಎಂದು ಹೇಳಿದರು. ಆಕೆ ಅದಾಗಲೇ ಪತ್ರಿಕೆಗಳಲ್ಲಿ ಕತೆ, ಹಾಸ್ಯ ಲೇಖನಗಳನ್ನು ಬರೆದು ಹೆಸರಾಗಿದ್ದರು. ನಾನು ಅವರ ಮಾತಿಗೆ ಹೂಂಗುಟ್ಟಿ ಸುಮ್ಮನಾಗಿದ್ದೆ. ಇವರಲ್ಲದೆ ನನ್ನ ಹೆಂಡತಿ “ಬರಿ ಅನುವಾದಿಸುವದನ್ನು ಬಿಟ್ಟು ಏನಾದರು ಬರೆಯಿರಿ” ಎಂದು ಸಲಹೆ ಕೊಟ್ಟಾಗ ಹಗುರವಾಗಿ ತೆಗೆದುಕೊಂಡಿದ್ದೆ.

    ನಾನು ಲಿಬಿಯಾಗೆ ಬಂದ ಮೇಲೆ ಇಲ್ಲಿ ಸಾಕಷ್ಟು ಸಮಯವಿರುತ್ತಿತ್ತು. ಭಾರತದಲ್ಲಿರುವಂತೆ ಇಲ್ಲಿ ತರಗತಿಗಳು ಮುಗಿದ ಮೇಲೂ ಕಾಲೇಜಿನಲ್ಲಿಯೇ ಉಳಿಯುವ ಅವಶ್ಯಕತೆಯಿರಲಿಲ್ಲ. ಹೀಗಾಗಿ ಸಾಕಷ್ಟು ಸಮಯ ಸಿಗುತ್ತಿತ್ತು. ಈ ಬಿಡುವಿನ ಸಮಯವನ್ನು ಹೇಗೆ ಕಳೆಯುವದು ಎಂದು ಯೋಚಿಸುತ್ತಿದ್ದಾಗಲೇ ನಾನು ಮತ್ತೆ ಅನುವಾದದಲ್ಲಿ ತೊಡಗಿಕೊಂಡೆ. ಈ ಸಂದರ್ಭದಲ್ಲಿಯೇ ನಾನು ಸಾಕಷ್ಟು ಕವನಗಳನ್ನು ಅನುವಾದಿಸಿಟ್ಟೆ. ಆದರೆ ಲೇಖನಗಳನ್ನು ಬರೆಯುವದನ್ನಾಗಲಿ, ಅಥವಾ ಗದ್ಯವನ್ನು ಬರೆಯುವದನ್ನಾಗಲಿ ಮಾಡಿರಲಿಲ್ಲ. ಈ ಸಾರಿ ರಜೆಯ ಮೇಲೆ ಬೆಂಗಳೂರಿಗೆ ಬಂದಾಗ ಸ್ನೇಹಿತ ರಾಘುನನ್ನು ಭೇಟಿ ಮಾಡಲು ಉಡುಪಿಗೆ ಹೋಗಿದ್ದೆ. ಅಲ್ಲಿ ಈಗಾಗಲೆ ನಾನು ಸ್ನೇಹಿತನಿಗೆ ಬರೆದ ಪತ್ರಗಳನ್ನು ಓದಿ ಮೆಚ್ಚಿಕೊಂಡಿದ್ದ ಅವನ ಹೆಂಡತಿ “ನಿಮಗೆ ಹೇಗೂ ಸಾಕಷ್ಟು ಫ್ರಿ ಟೈಂ ಇರುತ್ತಲ್ಲ. ಏನಾದರು ಯಾಕೆ ಬರೆಯಬಾರದು?” ಎಂದು ಹೇಳಿದರು. ಅದೇಕೋ ಈ ವಿಷಯ ಈ ಸಾರಿ ನನ್ನ ತಲೆಹೊಕ್ಕು ಕೊರೆಯತೊಡಗಿತು. ಅಲ್ಲಿಂದ ಬರುವಾಗ ಇನ್ನುಮುಂದೆ ನನ್ನ ಬಿಡುವಿನ ವೇಳೆಯಲ್ಲಿ ಸಾಕಷ್ಟು ಬರೆಯಬೇಕು ಎಂದು ತೀರ್ಮಾನಿಸಿಕೊಂಡೇ ಬಂದೆ. ಬರುವಾಗ ನನ್ನ ಭಾವ ಮೈದುನ ಮತ್ತು ನನ್ನ ಅಣ್ಣ ಇವರಿಬ್ಬರೂ ಒಂದಿಷ್ಟು ಆನ್ ಲೈನ್ ಪತ್ರಿಕೆಗಳ ವಿಳಾಸವನ್ನು ಕೊಟ್ಟರು. ಬಂದ ಮೇಲೆ ತಕ್ಷಣ ಕಾರ್ಯೋನ್ಮುಖನಾಗಿ ಬರೆಯುತ್ತಾ ಬಂದೆ.

    ನಾನು ಬರೆದ ಪದ್ಯಗಳನ್ನು ಕೆಂಡ ಸಂಪಿಗೆಗೆ ಕಳಿಸಿದೆ. ಅದೇಕೋ ಪ್ರಕಟವಾಗಲಿಲ್ಲ. ಆನಂತರ ಸಂಪದದ ಮೊರೆಹೊಕ್ಕೆ. ಅಲ್ಲಿ ನಾವು ನಾವೇ ಬರೆದು ಪ್ರಕಟಿಸಬಹುದಾಗಿದ್ದರಿಂದ ಸಂಪಾದಕರ ಮರ್ಜಿಗೆ ಕಾಯುವಂತಿರಲಿಲ್ಲ. ಪರಿಣಾಮವಾಗಿ ಅಲ್ಲೊಂದಿಷ್ಟು ನನ್ನ ಲೇಖನಗಳು, ಪದ್ಯಗಳು ವಿಜೃಂಭಿಸಿದವು. ನಾನು ಈ ಮೊದಲು ಬ್ಲಾಗ್ ಬಗ್ಗೆ ಕೇಳಿದ್ದೆನಾದರು ಅದನ್ನು ಹೇಗೆ ಓಪನ್ ಮಾಡುವದೆಂದು ಗೊತ್ತಿರಲಿಲ್ಲ. ನಿಧಾನವಾಗಿ ಬ್ರೌಸ್ ಮಾಡುತ್ತಾ ಮಾಡುತ್ತಾ ಎಲ್ಲವನ್ನೂ ಕಲಿತುಕೊಂಡು ಡಿಸೆಂಬರ್ ೨೪, ೨೦೦೮ ರಂದು ನನ್ನದೇ ಒಂದು ಬ್ಲಾಗ್ ಓಪನ್ ಮಾಡಿದೆ. ಅಂದೇ ಗೆಳೆಯ ಮಂಜುವಿನ ಹುಟ್ಟು ಹಬ್ಬವಾಗಿದ್ದರಿಂದ ಈ ಹಿಂದೆ ಅವನ ಹುಟ್ಟು ಹಬ್ಬಕ್ಕೆಂದು ಉಡುಗೊರೆಯಾಗಿ ಕೊಟ್ಟ ಕವನವನ್ನೇ ಪ್ರಕಟಿಸುವದರ ಮೂಲಕ ಬ್ಲಾಗ್ ಲೋಕಕ್ಕೆ ಕಾಲಿಟ್ಟೆ. ಅದರಿಂದಾಚೆ ಬಹಳಷ್ಟು ಪದ್ಯಗಳನ್ನು ಬರೆಯುತ್ತಾ ಬಂದೆ. ಒಬ್ಬೊಬ್ಬರಾಗಿ ಬ್ಲಾಗ್ ಗೆಳೆಯರು ಪರಿಚಯವಾಯಿತು. ಅವರ ಬ್ಲಾಗಿಗೆ ಭೇಟಿ ಕೊಟ್ಟು ಅವರ ಲೇಖನಗಳನ್ನು ಓದಿದೆ. ಸ್ಪೂರ್ತಿಗೊಂಡು ನಾನು ಯಾಕೆ ಲೇಖನಗಳನ್ನು ಬರೆದು ನೋಡಬಾರದು ಎನಿಸಿ ಆರಂಭಿಸಿಯೇ ಬಿಟ್ಟೆ. ಅಲ್ಲಿಯವರೆಗೆ ಬರಿ ಕವನಕ್ಕಷ್ಟೆ ಸೀಮಿತವಾಗಿದ್ದ ನನ್ನ ಬರವಣಿಗೆ ನಿಧಾನವಾಗಿ ಲೇಖನಗಳಿಗೂ ವಿಸ್ತಾರಗೊಂಡಿತು. ಮೊದಲು ಬೇಂದ್ರೆಯವರ “ಹುಬ್ಬಳ್ಳಿಯಾಂವಾ” ಕವನದ ಮೇಲೆ ಬರೆದೆ. ಆನಂತರ “ಇಲ್ಲಿ ಎಲ್ಲವೂ ಒಬಾಮಯವಾಗುತ್ತಿದೆ” ಹಾಗೂ “ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?” ಎನ್ನುವ ಲೇಖನಗಳನ್ನು ಬರೆದೆ. “ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?” ಎನ್ನುವ ಲೇಖನವನ್ನು ”ದ್ಯಾಟ್ಸ್ ಕನ್ನಡ” ಕ್ಕೆ ಕಳಿಸಿಕೊಟ್ಟೆ. ಎರಡೇ ದಿನದಲ್ಲಿ ಸಂಪಾದಕರಿಂದ “Good stuff! Glad to publish.” ಎನ್ನುವ ಈಮೇಲ್ ಬಂತು. ಕುಣಿದು ಕುಪ್ಪಳಿಸಬಿಟ್ಟೆ. ಏಕೆಂದರೆ ಸಂಪಾದಕರೊಬ್ಬರು ಮೊಟ್ಟ ಮೊದಲ ಬಾರಿಗೆ ನನ್ನ ಲೇಖನವನ್ನು ಮೆಚ್ಚಿಕೊಂಡು ಪಕಟಿಸುತ್ತಿರುವದು ಇದೇ ಮೊದಲ ಬಾರಿಯಾಗಿತ್ತು. ಅಲ್ಲಿಂದ ಆತ್ಮವಿಶ್ವಾಸ ಮೂಡಿ ಒಂದೊಂದಾಗಿ ಬರೆಯುತ್ತಾ ಬಂದೆ. ನೋಡ ನೋಡುತ್ತಿದ್ದಂತೆ ನನ್ನೊಳಗಿನ ಬರಹಗಾರ ಬೆಳೆದೇ ಬಿಟ್ಟ! ಮೆಲ್ಲಗೆ ಬೇರೆ ಬರಹಗಾರರ ಒಡನಾಟಕ್ಕೆ ಬಂದು ಅವರ ಬಳಗಕ್ಕೂ ಸೇರಿಕೊಂಡುಬಿಟ್ಟೆ!

    ನಾನು ಮೊದಲೇ ಹೇಳಿದಂತೆ ಬರಹ ಎನ್ನುವದು ಒಂದು ಸಹಜ ಪ್ರಕ್ರಿಯೆ. ಅದು ಜಿನುಗುತ್ತಾ ಜಿನುಗುತ್ತಾ ಹೊಳೆಯಾಗಿ ಹರಿಯುತ್ತದೆ! ಬರೆಯುತ್ತಾ ಬರೆಯುತ್ತಾ ಬಲಗೊಳ್ಳುತ್ತದೆ! ಹಾಗೆ ಹೊಳೆಯಾಗಿ ಹರಿಸುವದು, ಬಲಗೊಳ್ಳಿಸುವದು ಎಲ್ಲ ನಮ್ಮ ಕೈಯಲ್ಲಿದೆ. ಸ್ವಲ್ಪ ಅಭಿರುಚಿ, ಪ್ರಯತ್ನ, ಶ್ರದ್ಧೆ, ಜೊತೆಗೆ ಬರೆಯುವ ಮನಸ್ಸಿದ್ದರೆ ಏನು ಬೇಕಾದರು ಬರೆಯಬಹುದು. ಅದಕ್ಕೆ ನಾನೇ ಸಾಕ್ಷಿ!

    ನಾನೇಕೆ ಬರೆಯುತ್ತೇನೆ? ಈ ಪ್ರಶ್ನೆಗೆ ವನ್ಸ್ ಅಗೇನ್ ಇಂತಿಂಥದೇ ಅಂತ ಸ್ಪಷ್ಟವಾದ ಕಾರಣ ನನಗೆ ಗೊತ್ತಿಲ್ಲ! ನನಗನಿಸಿದ್ದನ್ನು, ಅನುಭವಿಸಿದ್ದನ್ನು, ಕಂಡಿದ್ದನ್ನು, ಕೇಳಿದ್ದನ್ನು, ಇಷ್ಟವಾಗಿದ್ದನ್ನು ಬರೆಯುತ್ತಾ ಹೋಗುತ್ತೆನೆ. ಆ ಮೂಲಕ ಒಮ್ಮೆ ಬರೆದು ಹಗುರಾಗುತ್ತೇನೆ. ಬರೆಯುವಾಗ ಪ್ರೀ ರೈಟಿಂಗ್, ರೀ ರೈಟಿಂಗ್, ಎಡಿಟಿಂಗ್ ಎಂದೆಲ್ಲಾ ಏನೇನೋ ಸರ್ಕಸ್ ಮಾಡಿ ಲೇಖನವೊಂದನ್ನು ಸಿದ್ಧಪಡಿಸುವಷ್ಟೊತ್ತಿಗೆ ಸಾಕು ಸಾಕಾಗಿರುತ್ತದೆ. ಆದರೂ ಬರಹವನ್ನು ಬಿಡಲಾರೆ. ಅದನ್ನು ಪ್ರೀತಿಸುವದನ್ನು ನಿಲ್ಲಿಸಲಾರೆ. ಇದೀಗ ಬರಹಕ್ಕೂ ನನಗೂ ಎಂಥ ಗಾಢ ಸಂಬಂಧ ಬೆಳೆದಿದೆಯೆಂದರೆ ಬರೆಯದೆ ಹೋದರೆ ನಾನಿಲ್ಲ, ನಾನಿಲ್ಲದೆ ಹೋದರೆ ಬರಹವಿಲ್ಲ ಎಂದೆನಿಸಿಬಿಟ್ಟಿದೆ. ಬರೆಯದೆ ಹೋದರೆ ಏನನ್ನೋ ಕಳೆದುಕೊಂಡಿರುವೆನೇನೋ ಅನಿಸುತ್ತದೆ. ಆ ನಿಟ್ಟಿನಲ್ಲಿ ನಾನಿನ್ನೂ ಬರೆಯುವದು ಬಹಳಷ್ಟಿದೆ. ಅನುವಾದಿಸುವದು ಸಾಕಷ್ಟಿದೆ. ಬರೆಯಬೇಕು ನನ್ನೆದೆ ಕದವ ತೆರೆದು. ಬರೆಯಲೇಬೇಕು ನನಗನಿಸಿದ್ದನ್ನು, ಕೇಳಿದ್ದನ್ನು, ಕಂಡಿದ್ದನ್ನು ಹಾಗೂ ನಾನಭವಿಸಿದ್ದನ್ನು. ಆ ಮೂಲಕ ನನ್ನೊಳಗನ್ನು ಉಚ್ಛಾಟಿಸಬೇಕು, ತೆರೆದುಕೊಳ್ಳಬೇಕು. ಬರಹದಲ್ಲಿ ಒಮ್ಮೆ ಎಲ್ಲವನ್ನೂ ಬಿಚ್ಚಿ ಬೆತ್ತಲಾಗಬೇಕು, ಬೆತ್ತಲಾಗಿಸಬೇಕು, ಮುಖವಾಡಗಳನ್ನು ಕಳಚಿಟ್ಟು ಒಮ್ಮೆ ಎಲ್ಲವನ್ನೂ ಬರೆದು ಹಗುರಾಗಬೇಕು. ನಾ ಅಂದುಕೊಂಡಂತೆ, ನಾನಿರುವಂತೆ, ನಾ ಬದುಕಿದಂತೆ ಎಲ್ಲವನ್ನೂ ಬರೆಯಬಲ್ಲೆನೆ? ಹಾಗೆ ಬರೆದು ದಕ್ಕಿಸಿಕೊಳ್ಳುವ ತಾಕತ್ತು ನನಗಿದೆಯೇ? ಅದು ಸಾಧ್ಯವೆ? ಸುಲಭವೆ? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.
    -ಉದಯ ಇಟಗಿ

    -ಉದಯ ಇಟಗಿ
    ಚಿತ್ರ ಕೃಪೆ : www.flickr.com

    3 ಕಾಮೆಂಟ್‌(ಗಳು):

    ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

    ಉದಯ್ ಸರ್,
    ನಾನು ಮೊದಲೇ ಹೇಳಿದಂತೆ ಇದು ಸಿಂಹಾವಲೋಕನ. ಇದರಿಂದ ನಿಮ್ಮೊಬ್ಬರಿಗೆ ಮಾತ್ರ ಪ್ರಯೋಜನವಾಗುವುದಿಲ್ಲ. ಓದುವವರಿಗೆಲ್ಲ ಉಪಯೊಗವಾಗುತ್ತದೆ, confidence ಮೂಡುತ್ತದೆ. ಎಷೊಂದು ಸರಳವಾಗಿ ಬರೆದಿರುವಿರಿ. ಧನ್ಯವಾದಗಳು.

    shivu.k ಹೇಳಿದರು...

    ಉದಯ್ ಸರ್,

    ನಿಜಕ್ಕೂ ನಿಮ್ಮ ಈ ಬರವಣಿಗೆ ನನ್ನಲ್ಲಿ ಹೊಸ ಸ್ಪೂರ್ತಿ ನೀಡಿದಂತಿದೆ..ನನ್ನ ಮೊದಲ ಬರಹ ಬರೆದಿದ್ದೆಲ್ಲಾ ನೆನಪಾಗುತ್ತಿದೆ....ಅಲ್ಲಿಂದ ಇಲ್ಲಿಯವರೆಗೆ ಪ್ರತಿಹೆಜ್ಜೆಗಳ ಚಿತ್ರಗಳೂ ಮೂಡುತ್ತಿವೆ....ನಾನು ಬರೆಯಲು ಹೊರಟೇ..

    ಒಬ್ಬ ಲೇಖನನಿಂದ ಮತ್ತೊಬ್ಬ ಪ್ರೇರಿತನಾಗುವುದು ಅಂದರೆ ಹೀಗೇನೇ....ನಿಮ್ಮ ಬರವಣಿಗೆಗೆ ಹ್ಯಾಟ್ಸಪ್...

    ಧನ್ಯವಾದಗಳು...

    ಜಲನಯನ ಹೇಳಿದರು...

    ಉದಯ್,
    ಸಲಿಗೆತೆಗೆದುಕೊಂಡುದಕ್ಕೆ ಕ್ಷಮೆಯಿರಲಿ, ಚನ್ನಾಗಿದೆ ಬರೆದದ್ದು, ಬರೆಯುತ್ತಿರುವುದು ಮತ್ತು ಬರೆಯುವುದೂ...ಎಲಾ..ಇವನ..??!! ನಾನ್ಮುಂದೆ ಬರ್ಯೋದನ್ನ್ ಇವ್ನು ಹ್ಯಾಂಗಪ್ಪಾ ಕಾಮೆಂಟ್ ಮಾಡ್ತಿದಾನೆ..?? ಅಂತ..ಹುಬ್ಬೇರಿಸೋದು ಬೇಡ...ಪ್ರೊಫ಼ೈಲ್ ನಲ್ಲೇ ಇದ್ಯಲ್ಲ..ಅನುವಾದದ ಇಂಗಿತ..!!
    ನಮ್ಮ ಮನೆಗೂ ಬನ್ನಿ..ಸ್ವಾಮಿ...ನಿಮ್ಮ ಹಾಗೇ ನಾವೂ ವಿದೇಶದಲ್ಲೇ..ನಿಮಗೆ ಕೃಷಿ ಐಚ್ಛಿಕ ಆದರೆ ನನಗೆ ಅದು ಸ್ವಾಭಾವಿಕ ಯಾಕಪ್ಪಾ ಅಂತಂತಂದ್ರೆ...
    ನಾನು ಕೃ. ವಿ.ವಿ. ಯಲ್ಲಿ ಓದಿದ್ದು, ಮೀನುಗಾರಿಕಾ speciality ಯಲ್ಲಿ ಪಳಗಿದ್ದು...
    ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಶುಭಕೋರುತ್ತಾ...
    ಒಂದು ಗುಟ್ಟು ಬಿಡ್ಕೊಡಾಕಾಗುತ್ತಾ...?? how is that your blog covers the whole screen??
    ಜಲನಯನ