“ಇಂಗ್ಲಿಷ್ ವಿಂಗ್ಲಿಷ್” ಗೃಹಿಣಿಯೊಬ್ಬಳು ಇಂಗ್ಲಿಷ್ ಬಾರದೇ ಪೇಚಾಡುವ, ಅವಮಾನಕ್ಕೊಳಗಾಗುವ ಮತ್ತದನ್ನು ಜಯಿಸಿ ಬರುವ ಕಥೆ ಮಾತ್ರವಲ್ಲ ಹೆಣ್ಣೊಬ್ಬಳ ಛಲ, ಆತ್ಮವಿಶ್ವಾಸ, ಮತ್ತವಳ ಜೀವನ ಪ್ರೀತಿಯ ಪ್ರತೀಕದ ಕಥೆಯೂ ಹೌದು ಹಾಗೂ ಎಲ್ಲಿಯೂ ತನ್ನ ಸಂಯದ ಎಲ್ಲೆಯನ್ನು ಮೀರದೆ ಎಲ್ಲವನ್ನೂ ಚಾಕಚಕ್ಯತೆಯಿಂದ ನಿಭಾಯಿಸಿ ಎಲ್ಲರನ್ನೂ, ಎಲ್ಲವನ್ನೂ ಗೆಲ್ಲುವ ಒಬ್ಬ ಪರಿಪೂರ್ಣ ಮಹಿಳೆಯೊಬ್ಬಳ ಕಥೆಯೂ ಹೌದು. ನಿರ್ದೇಶಕಿ ಗೌರಿ ಶಿಂಧೆ ತೀರಾ ಸಾಮಾನ್ಯವೆನಿಸುವಂಥ ಮತ್ತು ಇವತ್ತಿನ ಜಗತ್ತಿನಲ್ಲಿ ಇಂಗ್ಲೀಷಿನಲ್ಲಿ ಮಾತನಾಡಲೇಬೇಕಾದಂಥ ಅನಿವಾರ್ಯತೆಯ ಕಥಾವಸ್ತುವೊಂದನ್ನು ಆಯ್ದುಕೊಂಡು ಅದನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ಪ್ರೇಕ್ಷಕರ ಮನಸ್ಸನ್ನು ಗೆದ್ದು ಬಿಡುವಲ್ಲಿ ಯಶಸ್ವಿಯಾಗಿಬಿಡುತ್ತಾರೆ. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ ಅಲ್ಲವೇನೋ ಅನಿಸುವಷ್ಟರಮಟ್ಟಿಗೆ ಚಿತ್ರದುದ್ದಕ್ಕೂ ಗೌರಿ ಶಿಂಧೆ ಬಿಗುವಾದ ನಿರೂಪಣೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ಎಲ್ಲೂ ಅನವಶ್ಯಕ ದೃಶ್ಯಗಳನ್ನು ತುರುಕದೆ, ಅನವಶ್ಯಕ ಸಂಭಾಷಣೆಗಳನ್ನು ಹೆಣೆಯದೆ ಹೇಳಬೇಕಾದ್ದನ್ನು ಚಿಕ್ಕ ಚಿಕ್ಕ ದೃಶ್ಯಗಳ ಮೂಲಕ ಮನಮುಟ್ಟುವಂತೆ ಹೇಳುತ್ತಾರೆ. ಹ್ಯಾಟ್ಸಾಫ್ ಟು ಗೌರಿ ಶಿಂಧೆ!
ಇವತ್ತಿನ ಜಗತ್ತಿನಲ್ಲಿ ಇಂಗ್ಲೀಷ್ ಎಷ್ಟೊಂದು ಅವಶ್ಯಕ ಮತ್ತು ಅನಿವಾರ್ಯವಾಗಿದೆಯೆಂದರೆ ಇಂಗ್ಲೀಷ್ ಬಾರದವರನ್ನು ಅವಮಾನಿಸುವ, ಕೀಳಾಗಿ ಕಾಣುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ಯಾರೇ ಆಗಿರಲಿ (ಹೆಣ್ಣು ಅಥವಾ ಗಂಡು), ಎಷ್ಟೇ ಓದಿರಲಿ, ಎಷ್ಟೇ ಸ್ಮಾರ್ಟ್ ಆಗಿರಲಿ, ಅಥವಾ ಏನೆಲ್ಲ ಸ್ಕಿಲ್‍ಗಳನ್ನು ಹೊಂದಿರಲಿ ಆದರೆ ಇಂಗ್ಲೀಷ್ ಸ್ಪೀಕಿಂಗ್ ಸ್ಕಿಲ್ ಇಲ್ಲದೇ ಹೋದರೆ ಏನೆಲ್ಲ ಅನುಭವಿಸಬೇಕಾಗುತ್ತದೆ ಎನ್ನುವದನ್ನು ಎಷ್ಟು ಜಾಗೂರುಕತೆಯಿಂದ ನಿರ್ದೇಶಕಿ ನಿರೂಪಿಸುತ್ತಾರೋ ಅಷ್ಟೇ ಜಾಗೂರುಕತೆಯಿಂದ ಅದನ್ನು ಕಲಿತರೆ ಎಷ್ಟೆಲ್ಲ ಪಡೆಯಬಹುದೆನ್ನುವದನ್ನು ಸಹ ಹೇಳುತ್ತಾರೆ. ಇಲ್ಲಿ ನಿರ್ದೇಶಕಿ ಇಂಗ್ಲೀಷ್ ಭಾಷೆ ಅನ್ಯ ಭಾಷೆಗಳ ಮೇಲೆ ದಾಳಿ ಮಾಡುತ್ತಿದೆ ಎನ್ನುವ ಒಣ ಹಾರಾಟಕ್ಕೆ ಇಂಬು ಕೊಡದೆ, ಆ ಭಾಷೆ ಹೇಗೆ ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ ಮತ್ತದನ್ನು (ಎಷ್ಟು ಬೇಕೋ ಅಷ್ಟನ್ನು) ಅಪ್ಪಿಕೊಳ್ಳುವದು ಎಷ್ಟೊಂದು ಅನಿವಾರ್ಯವಾಗಿದೆ ಎನ್ನುವದನ್ನು ಯಾವೊಂದೂ ಹಿಜರಿತವಿಲ್ಲದೆ ಅತ್ಯಂತ ಸಲೀಸಾಗಿ ಹೇಳಿಬಿಡುತ್ತಾರೆ.
ಕಥಾನಾಯಕಿ ಶಶಿ ಒಬ್ಬ ಸಾಮಾನ್ಯ ಮಧ್ಯಮವರ್ಗದ ಮಹಿಳೆ. ಎಲ್ಲ “ಹೌಸ್ ವೈಪ್” ಮಹಿಳೆಯರಂತೆ ಶಶಿ ಕೂಡ ದಿನಾ ಬೆಳಿಗ್ಗೆ ಎದ್ದು ಅತ್ತೆ, ಗಂಡ, ಮತ್ತು ಮಕ್ಕಳ ಅವಶ್ಯಕತೆಗಳನ್ನು ಪೂರೈಸುತ್ತಾ ಮನೆಯನ್ನು ನಿಭಾಯಿಸುವ ಒಬ್ಬ ಸಾಮಾನ್ಯ ಗೃಹಿಣಿ ಮತ್ತು ಆಕೆ ತನ್ನ ಬಿಡುವಿನ ವೇಳೆಯಲ್ಲಿ ಲಡ್ಡುಗಳನ್ನು ಮಾಡುತ್ತಾ ಅವುಗಳನ್ನು ಮನೆಮನೆಗೆ ಹೋಗಿ ಮಾರುತ್ತಾ ಒಂದಷ್ಟು ಪುಡಿಗಾಸನ್ನು ಸಂಪಾದಿಸುವವಳು. ಸಿನಿಮಾ ಆರಂಭವಾಗುವದೇ ಅವಳ ದಿನಚರಿಯೊಂದಿಗೆ. ಬೆಳಿಗ್ಗೆ ಎದ್ದು ಕಾಫಿ ಮಾಡಿಕೊಂಡು ಕುಡಿಯುತ್ತಾ ಆಗಷ್ಟೇ ಬಂದ ದಿನಪತ್ರಿಕೆಯ ಪುಟವನ್ನು ತಿರುವಿ ಹಾಕಬೇಕು ಅನ್ನುವಷ್ಟರಲ್ಲಿ ಅವಳ ಅತ್ತೆ ಕಾಫಿ ಬೇಕು ಎಂದು ಕೇಳುತ್ತಾಳೆ. ಶಶಿ ಆಕೆಗೆ ಕಾಫಿ ಹಾಕಿಕೊಟ್ಟು ಮತ್ತೆ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದಂತೆ ಗಂಡ ಚಹಾ ಬೇಕೆಂದು ಕೇಳುತ್ತಾನೆ. ಅದಾದ ಮೇಲೆ ಮನೆಯವರೆಲ್ಲರಿಗೂ ತಿಂಡಿ ತಯಾರಿಸುವ ಕೆಲಸ. ಹೀಗೆ ಒಂದಾದ ಮೇಲೊಂದು ಬೆಳಗಿನ ಕೆಲಸ ಮಾಡುವದರಲ್ಲಿ ತೊಡಗುವದರಿಂದ ಆಕೆಗೆ ದಿನಪತ್ರಿಕೆಯನ್ನು ಓದಲಾಗುವದೇ ಇಲ್ಲ. ಆದರೆ ಆಕೆ ಈ ಬಗ್ಗೆ ಒಂಚೂರು ಬೇಸರವನ್ನು ವ್ಯಕ್ತಪಡಿಸದೆ ತನ್ನ ಕೆಲಸದಲ್ಲಿ ಮಗ್ನಳಾಗುತ್ತಾಳೆ.
ಮುಂದಿನ ದೃಶ್ಯದಲ್ಲಿ ನಿರ್ದೇಶಕಿ ಚಿತ್ರದ ಆಶಯದ ಬಗ್ಗೆ ಸುಳಿವು ಕೊಟ್ಟುಬಿಡುತ್ತಾರೆ. ತಿಂಡಿ ತಯಾರಿಸಿದ ಮೇಲೆ ಎಲ್ಲರಿಗೂ ಬಡಿಸಬೇಕಾದರೆ ಶಶಿಯ ಮಗಳು ಸಪ್ನಾ ಬ್ರೌನ್ ಬ್ರೆಡ್ಡೇ ಬೇಕೆಂದು ಗೋಗರೆಯುತ್ತಾಳೆ. ಮಗನೂ ಅದನ್ನೇ ಕೇಳುತ್ತಾನೆ. ಆದರೂ ಅವಳು ಒಂದಿಷ್ಟು ಬೇಸರ ಮಾಡಿಕೊಳ್ಳದೆ ಮಾಡಿಕೊಡುತ್ತಾಳೆ. “ಸಪ್ನಾ, ನೀನು ಈ ರೀತಿ ಬ್ರೌನ್ ಬ್ರೆಡ್, ವೈಟ್ ಎಗ್ಸ್ ಕೇಳೋದೆಲ್ಲಾ ನೀನು ಆ ಝಾಸ್ ಡ್ಯಾನ್ಸ್ ಕ್ಲಾಸು ಸೇರಿದಾಗಿನಿಂದ ಶುರುವಾಗಿದೆ.” ಎಂದು ಮಗಳ ಮೇಲೆ ಹುಸಿ ಮುನಿಸು ತೋರಿಸುತ್ತಾಳೆ. ತಕ್ಷಣ ಆಕೆಯ ಮಗಳು ಮತ್ತು ಗಂಡ ಅವಳ ತಪ್ಪು ಉಚ್ಛಾರಣೆಯನ್ನು ಪರಿಹಾಸ್ಯ ಮಾಡುತ್ತಾ ಬಿದ್ದು ಬಿದ್ದು ನಗುತ್ತಾರೆ. ಶಶಿಗೆ ಅವಮಾನವಾಗುತ್ತದೆ. ಪಕ್ಕದಲ್ಲಿಯೇ ಇರುವ ಮಗ “ಮಾ, ಅದು ಝಾಸ್ ಡ್ಯಾನ್ಸ್ ಅಲ್ಲ. ಝೇಸ್ ಡ್ಯಾನ್ಸ್.” ಎಂದು ಹೇಳಿದಾಗ ಅವಳು ಪೆಚ್ಚಾಗುತ್ತಾಳೆ. ಅಲ್ಲಿಂದಾಚೆ ಅವಳು ಆ ಪದವನ್ನೆ ಮತ್ತೆ ಮತ್ತೆ ಮನನ ಮಾಡುವದರ ಮೂಲಕ ಅವಳ ಇಂಗ್ಲೀಷ್ ಕಲಿಯುವ ತುಡಿತ ಸಣ್ಣದಾಗಿ ಶುರುವಾಗುತ್ತದೆ.
ಇಂಗ್ಲೀಷ್ ಬರದೆ ಇರುವ ಶಶಿ ತನ್ನ ಮಗಳಿಂದಲೇ ಕೀಳಾಗಿ ಕಾಣಲ್ಪಡುತ್ತಾಳೆ. ಒಂದು ಸಾರಿ ಶಶಿಯ ಮಗಳು ಸಪ್ನಾ ತನ್ನ ಗೆಳತಿ ರೂಪಲ್‍ಳ ಮನೆಯಲ್ಲಿ ಓದು ಮುಗಿಸಿ ವಾಪಾಸಾದಾಗ ಶಶಿ ಅವಳನ್ನು “ಎಲ್ಲಿಗೆ ಹೋಗಿದ್ದೆ? ಇಲ್ಲೇ ಮನೆಯಲ್ಲೇ ಓದ್ಕೋಬಹುದಿತ್ತಲ್ವ?” ಎಂದು ಕೇಳುತ್ತಾಳೆ. ಅದಕ್ಕೆ ಮಗಳು “ಇಂಗ್ಲೀಷ್ ಲಿಟರೇಚರ್ ನೀನು ಹೇಳಿಕೊಡುತಿದ್ಯಾ?” ಎಂದು ವ್ಯಂಗ್ಯವಾಗಿ ಹೇಳಿ ಅವಳನ್ನು ನೋಯಿಸುತ್ತಾಳೆ. ಇನ್ನೊಂದು ಸಾರಿ ಅವಳ ಸ್ಕೂಲಿನಲ್ಲಿ ಪೇರೆಂಟ್ಸ್ ಟೀಚರ್ ಮೀಟಿಂಗ್ ದಿನ ಶಶಿಯ ಗಂಡನಿಗೆ ಹೋಗಲಾಗದಿರುವದರಿಂದ ಅನಿವಾರ್ಯವಾಗಿ ಆಕೆ ಹೋಗಬೇಕಾಗುತ್ತದೆ. ಆದರೆ ಮಗಳಿಗೆ ಅವಳನ್ನು ತನ್ನ ಸ್ಕೂಲಿಗೆ ಕರೆದೊಯ್ಯಲು ಇಷ್ಟವಿಲ್ಲ. ಏಕೆಂದರೆ ಶಶಿಗೆ ಇಂಗ್ಲೀಷ್ ಮಾತನಾಡಲು ಬರುವದಿಲ್ಲ. ಆದರೆ ಶಶಿ ಹೋಗೇ ಹೋಗುತ್ತಾಳೆ. ಅಲ್ಲಿ ಮಗಳ ಗೆಳತಿಯ ಅಮ್ಮನೊಂದಿಗೆ ಶಶಿ ಮಾತನಾಡುವಾಗ ಅವಳ ಮಗಳೇ ಎಲ್ಲದಕ್ಕೂ ಇಂಗ್ಲೀಷಿನಲ್ಲಿ ಉತ್ತರ ಕೊಡುತ್ತಾಳೆ ಹಾಗೂ ಅಲ್ಲಿ ಬಹಳ ಹೊತ್ತು ನಿಂತರೆ ಎಲ್ಲಿ ತನ್ನ ಅಮ್ಮನಿಗೆ ಇಂಗ್ಲೀಷ್ ಬರುವದಿಲ್ಲ ಅನ್ನುವ ಸತ್ಯ ತನ್ನ ಗೆಳತಿಯ ಅಮ್ಮನಿಗೆ ಗೊತ್ತಾಗಿಬಿಡುತ್ತದೋ ಎಂದು ಅವಳನ್ನು ಆದಷ್ಟು ಬೇಗ ಅಲ್ಲಿಂದ ಜಾಗ ಖಾಲಿ ಮಾಡಿಸುತ್ತಾಳೆ. ಮುಂದೆ ಮಗಳ ಕ್ಲಾಸ್ ಟೀಚರ‍್ ನ್ನು ಭೇಟಿಯಾದಾಗ ಆತ ಅವಳ performance ಬಗ್ಗೆ ಇಂಗ್ಲೀಷ್‍ನಲ್ಲಿ ಹೇಳುವಾಗ ಶಶಿ ಅವರನ್ನು ತಡೆದು “Father, my English is not good. ನಿಮಗೆ ತೊಂದರೆ ಇಲ್ಲದಿದ್ದರೆ ಹಿಂದಿಯಲ್ಲೇ ಹೇಳುತ್ತೀರಾ?” ಎಂದು ಕೇಳುತ್ತಾಳೆ. ಹೀಗೆ ಆಕೆ ಹಿಂದಿಯಲ್ಲಿ ಮಾತನಾಡುವಾಗ ಮಗಳು ಸಪ್ನಾ ತನ್ನ ಟೀಚರ್ ಮುಂದೆ ಮುಜುಗರಕ್ಕೀಡಾಗುತ್ತಾಳೆ ಮತ್ತು ತನ್ನ ಅಮ್ಮ ಹಿಂದಿಯಲ್ಲಿ ಮಾತನಾಡಿದ್ದು ತನ್ನ ಪ್ರತಿಷ್ಟೆಗೆ ಕುಂದು ಎಂದು ಭಾವಿಸುತ್ತಾಳೆ. ಈ ಸನ್ನಿವೇಶದ ಮೂಲಕ ನಿರ್ದೇಶಕಿ ಇವತ್ತಿನ ‘ಇಂಗ್ಲೀಷ್ ಮೀಡಿಯಂ’ ಮಕ್ಕಳ ಈ ತೆರನಾದ ಮನೋಸ್ಥಿತಿಯು ಅತ್ಯಂತ ಸಹಜವೆಂಬಂತೆ ನಿರೂಪಿಸುತ್ತಾರೆ.
ಮುಂದೆ ತನ್ನ ಅಕ್ಕನ ಮಗಳ ಮದುವೆ ತಯಾರಿ ಸಲುವಾಗಿ ಒಬ್ಬಳೇ ಅಮೆರಿಕಾಕ್ಕೆ ಹೋಗಬೇಕಾಗಿ ಬಂದಾಗ ವಿಮಾನ ನಿಲ್ದಾಣದಲ್ಲಿ ಇಂಗ್ಲೀಷ್ ಬರದ ಶಶಿ ಅನುಭವಿಸುವ ಆತಂಕ, ಕಳವಳಗಳು ನಮ್ಮ ಮನಸ್ಸನ್ನು ಕಲಕಿಬಿಡುತ್ತವೆ. ಹೀಗೆ ಧುತ್ತೆಂದು ಬರೀ ಇಂಗ್ಲೀಷ್ ಮಾತನಾಡುವ ದೇಶಕ್ಕೆ ಬಂದಿಳಿದಾಗ ಅಲ್ಲಿ ಶಶಿ ಹೇಗೆ ನಿಭಾಯಿಸುತ್ತಾಳೆ ಎನ್ನುವದೇ ಚಿತ್ರದ ಕುತೂಹಲಕಾರಿ ಘಟ್ಟ. ಇಲ್ಲಿಂದ ಮುಂದೆ ಬರೀ ಇಂಗ್ಲೀಷ್ ಮಾತನಾಡುವ ಅಮೆರಿಕದಂಥ ಅಪರಿಚಿತ ಪರಿಸರದಲ್ಲಿ ಇಂಗ್ಲಿಷ್‍ನಲ್ಲಿ ವ್ಯವಹರಿಸಲಾಗದೆ ಶಶಿ ಕೀಳರಿಮೆಯಿಂದ ನರಳುತ್ತಾಳೆ, ಒಂದು ಸಾರಿ ಶಶಿಯ ಅಕ್ಕನ ಮಗಳ ಭಾವಿಪತಿ ಮನೆಗೆ ಭೇಟಿ ಕೊಟ್ಟಾಗ ಎಲ್ಲರೂ ಅವನೊಂದಿಗೆ ಇಂಗ್ಲೀಷ್‍ನಲ್ಲಿ ವ್ಯವಹರಿಸುವದನ್ನು ನೋಡಿ ಶಶಿಗೆ ತಾನು ಪರಕೀಯಳು ಎಂಬ ಭಾವ ಮೂಡುತ್ತದೆ. ಮುಂದೆ ಮನ್‍ಹತ್ತನ್ ಕಾಫಿ ಶಾಪೊಂದರಲ್ಲಿ ಸ್ಯಾಂಡ್‍ವಿಚ್ ಮತ್ತು ಕಾಫಿ ಆರ್ಡರ್ ಮಾಡಲು ಹೋಗಿ ಅಲ್ಲಿಯ ಜನರ ಗೇಲಿಗೊಳಗಾಗುತ್ತಾಳೆ. ಈ ಘಟನೆ ಅವಳ ಆತ್ಮಗೌರವಕ್ಕೆ ಧಕ್ಕೆ ತರುವದಲ್ಲದೆ ಅಲ್ಲಿ ಅವಳನ್ನು ನಾಲ್ಕು ವಾರಗಳ ಇಂಗ್ಲಿಷ್ ಕ್ರ್ಯಾಸ್ ಕೋರ್ಸಿಗೆ ಸೇರಿಕೊಳ್ಳುವಂತೆ ಪ್ರೇರಿಪಿಸುತ್ತದೆ.
ಇಂಗ್ಲೀಷ್ ಕ್ಲಾಸಿನಲ್ಲಿ ಮೆಕ್ಸಿಕನ್ ನ್ಯಾನಿ, ಪಾಕಿಸ್ತಾನಿ ಡ್ರೈವರ್, ಚೈನೀಸ್ ಹೇರ್ ಸ್ಟೈಲಿಸ್ಟ್, ಸೌಥ್ ಇಂಡಿಯನ್ ಸಾಫ್ಟ್ವೇರ್ ಇಂಜಿನೀಯರ್, ಮತ್ತು ಫ್ರೆಂಚ್ ಚೆಫ್ ನನ್ನು ಭೇಟಿಯಾಗುತ್ತಾಳೆ. ಅವರೆಲ್ಲರೂ ಪ್ರಪಂಚದ ಮೂಲೆ ಮೂಲೆಯಿಂದ ಕೆಲಸ ಹುಡುಕಿಕೊಂಡು ಅಮೆರಿಕಾಕ್ಕೆ ಬಂದವರು. ಆದರೆ ಇಂಗ್ಲೀಷ್ ಬರದೆ ಇರುವವರು. ಅವರನ್ನು ನೋಡಿ ಶಶಿಗೆ ತಾನೊಬ್ಬಳೇ ಈ ಕೀಳರಿಮೆಯಿಂದ ಬಳಲುತ್ತಿಲ್ಲ, ಇನ್ನೂ ಎಷ್ಟೋ ಜನ ಇದ್ದಾರೆ ಎಂದು ಕೊಂಚ ಸಮಾಧಾನವಾಗುತ್ತದೆ. ಅಲ್ಲಿ ಅವರೊಟ್ಟಿಗಿನ ಸ್ನೇಹ ಮತ್ತು ಅವಳ ಟೀಚರ್ ನೀಡುವ ಪ್ರೋತ್ಸಾಹ ಅವಳಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತದೆ. ಅಲ್ಲಿ ಇಂಗ್ಲೀಷ್ ಕಲಿಯಲು ಬಂದ ಅವರೆಲ್ಲರೂ ಎಷ್ಟೋ ಪ್ರಸಂಗಗಳಲ್ಲಿ ಹೇಳಬೇಕಾದ್ದನ್ನು ಇಂಗ್ಲೀಷಿನಲ್ಲಿ ಹೇಳಲಾಗದೆ, ಪದಗಳಿಗೆ ತಡಕಾಡುವಾಗ ಧೀಡಿರ್ ಅಂತ ಮಾತೃಭಾಷೆಗೆ ಹಿಂದಿರುಗುತ್ತಾರೆ. ಅವರೆಲ್ಲರೂ ಇಂಗ್ಲೀಷ್ ಕಲಿಯುವ ಪರಿ ಮತ್ತು ಅದರ ಹಿಂದಿನ ಅವಶ್ಯಕತೆಯನ್ನು ನಿರ್ದೇಶಕಿ ತುಂಬಾ ರಿಯಲಿಸ್ಟಿಕ್ ಆಗಿ ಕಟ್ಟಿಕೊಡುತ್ತಾರೆ.
ಹೀಗೆ ನಿಧಾನವಾಗಿ ಶಶಿ ಎಡುವತ್ತಾ, ತಡವರಿಸುತ್ತಾ ಕೊನೆಗೂ ಇಂಗ್ಲೀಷ್ ಕಲಿಯುತ್ತಾಳೆ. ಕೊನೆಯಲ್ಲಿ ಶಶಿ ಹೊಸದಾಗಿ ಮದುವೆಯಾದ ಹೆಣ್ಣು-ಗಂಡನ್ನು ಉದ್ದೇಶಿಸಿ ಒಂದೊಂದೇ ವಾಕ್ಯವನ್ನು ಪೋಣಿಸುತ್ತಾ ಇಂಗ್ಲೀಷಿನಲ್ಲಿ ಮಾತನಾಡುದು ನಮ್ಮ ಮೆಚ್ಚುಗೆಯನ್ನು ಗಳಿಸುವದಲ್ಲದೆ ನಮ್ಮ ಮನಸ್ಸನ್ನು ತಾಕಿಬಿಡುತ್ತದೆ. ಹೀಗೆ ಸ್ವಂತ ಆಸಕ್ತಿ ಹಾಗು ಪರಿಶ್ರಮದಿಂದ ಶಶಿ ಇಂಗ್ಲಿಷ್ ಕಲಿತು ಇಡಿ ಪ್ರಪಂಚವನ್ನೇ ಗೆದ್ದ ಭಾವದಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ಸ್ವದೇಶಕ್ಕೆ ಮರಳುತ್ತಾಳೆ. ಇಂಗ್ಲೀಷ್ ಕಲಿತ ಮೇಲೆ ಶಶಿ ಅದನ್ನು ಅವಶ್ಯಕತೆ ಬಿದ್ದಾಗ ಮಾತ್ರ ಬಳಸುತ್ತಾಳೆ. ಅಥವಾ ಅದರ ಮೇಲೆ ಅನವಶ್ಯಕ ವ್ಯಾಮೋಹವನ್ನು ಬೆಳೆಸಿಕೊಳ್ಳುವದಿಲ್ಲ. ಆಕೆ ಸ್ವದೇಶಕ್ಕೆ ಮರಳುವಾಗ ವಿಮಾನದಲ್ಲಿ ಗಗನಸಖಿ ಇಂಗ್ಲೀಷ್ ದಿನಪತ್ರಿಕೆಗಳನ್ನು ಪ್ರಯಾಣಿಕರಿಗೆ ವಿತರಿಸುತ್ತಾ ಬರುವಾಗ ಶಶಿಯ ಗಂಡ ಇಂಗ್ಲೀಷ್ ಪತ್ರಿಕೆ ತೆಗೆದುಕೊಳ್ಳುತ್ತಾನೆ. ಆದರೆ ಶಶಿ ಹಿಂದಿ ಪತ್ರಿಕೆ ಬೇಕೆಂದು ಕೇಳುತ್ತಾಳೆ. ಆ ಮೂಲಕ ಶಶಿ ಇಂಗ್ಲೀಷ್ ಕಲಿತರೂ ತನ್ನ ಮಾತೃಭಾಷೆಯ ಮೇಲಿನ ಪ್ರೀತಿಯನ್ನು, ಗೌರವವನ್ನು ಕಳೆದುಕೊಳ್ಳುವದಿಲ್ಲವೆಂದು ಗೊತ್ತಾಗುತ್ತದೆ.
ಶಶಿ ಒಬ್ಬ ಸಾಮಾನ್ಯ ಗೃಹಿಣಿಯಾದರೂ ಆಧುನಿಕ ಸಮಾಜದ ಬದಲಾವಣೆಗಳನ್ನು ಎಗ್ಗಿಲ್ಲದೆ ಒಪ್ಪಿಕೊಳ್ಳುವಂಥವಳು. ತಮ್ಮ ಟೀಚರ್ ಒಬ್ಬ ಗೇ ಅಂತಾ ಗೊತ್ತಾದಾಗ ಅವನ ವಿದ್ಯಾರ್ಥಿಗಳು ಅವನನ್ನು ಆಡಿಕೊಂಡು ನಗುತ್ತಾರೆ. ಆದರೆ ಶಶಿ ಅವರನ್ನು ಖಂಡಿಸುತ್ತಾ ‘ಅವರು ಮನುಷ್ಯರಲ್ಲವೇ?’ ಎಂದು ಅದೊಂದು ಸಾಮಾನ್ಯ ವಿಷಯವೆಂಬಂತೆ ಸ್ವೀಕರಿಸುತ್ತಾಳೆ. ಇನ್ನು ತನ್ನ ಟೀನೇಜ್ ಮಗಳು ತುಂಡುಲಂಗವನ್ನು ಹಾಕಿಕೊಂಡು ಕಾಫಿ ಡೇಗೆ ಹೋಗುವದನ್ನು ಮತ್ತು ತನ್ನ ಮುಂದೆಯೇ ತನ್ನ ಗಂಡ, ಪರ ನಾರಿಯನ್ನು ಹಗ್ ಮಾಡುವುದನ್ನು ನಿರಾಳವಾಗಿ ಒಪ್ಪಿಕೊಳ್ಳುತ್ತಾಳೆ.
ಸಿನಿಮಾದ ಮುಖ್ಯ ಆಕರ್ಷಣೆ ಶಶಿಯ ಫ್ರೆಂಚ್ ಸಹಪಾಠಿ ಮತ್ತು ಶಶಿಯ ಅಕ್ಕನ ಮಗಳು. ಅವರಿಬ್ಬರೂ ಶಶಿಗೆ ಇಂಗ್ಲೀಷ್ ಕಲಿಯುವದರಲ್ಲಿ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಅವಳ ಫ್ರೆಂಚ್ ಸಹಪಾಠಿ ಕೂಡ ಶಶಿಯಂತೆ ಅಡಿಗೆಯನ್ನೇ ಕೆಲಸವನ್ನಾಗಿ ಮಾಡಿಕೊಂಡವ. ಇದೇ ಕಾರಣಕ್ಕಾಗಿ ಅವರಿಬ್ಬರೂ ಹತ್ತಿರವಾಗುತ್ತಾರೆ. ಆತ ಶಶಿಯ ಲಡ್ಡು ಬಗ್ಗೆ, ಅವಳ ಅಡಿಗೆ ಕಲೆಯ ಬಗ್ಗೆ, ಮತ್ತು ಅವಳ ಸ್ಪೋಕನ್ ಇಂಗ್ಲೀಷ್ ಬಗ್ಗೆ ಇಂಗ್ಲೀಷಿನಲ್ಲಿ ಒಂದೊಂದೇ ಪದವನ್ನು ಪೋಣಿಸುತ್ತಾ ಅವಳನ್ನು ಹುರಿದುಂಬಿಸುತ್ತಾನೆ. ಹೀಗೆ ಶಶಿಯನ್ನು ಹುರಿದುಂಬಿಸುತ್ತಲೇ ನಿಧಾನವಾಗಿ ಅವಳೆಡೆಗೆ ಆಕರ್ಷಿತನಾಗುತ್ತಾನೆ. ಆದರೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಪಡೆದ ಶಶಿ ಅವನ ಪ್ರೀತಿಯನ್ನು ನಯವಾಗಿ ತಿರಸ್ಕರಿಸುತ್ತಾಳೆ. ಆದರೂ ಅವರಿಬ್ಬರ ನಡುವೆ ನಡೆಯುವ ಮಧುರ ಮಾತುಕತೆ ನಮಗೆ ಇಷ್ಟವಾಗುದೆ ಹೋದರೆ ಕೇಳಿ. ಆತ ಎಷ್ಟೋ ಸಾರಿ ಹೇಳಬೇಕಾದ್ದನ್ನು ತನ್ನ ಮುಗುಳುನಗೆಯೊಂದರಲ್ಲೇ ಎಲ್ಲವನ್ನು ಹೇಳುತ್ತಾನೆ. ಇನ್ನು ಇಡಿ ಚಿತ್ರದಲ್ಲಿ ಶಶಿಯ ಅತ್ತೆಯನ್ನು ಬಿಟ್ಟರೆ ಅವಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವವಳೆಂದರೆ ಶಶಿಯ ಅಕ್ಕನ ಮಗಳು. ಆಕೆ ಹೆಜ್ಜೆಹೆಜ್ಜೆಗೂ ಶಶಿಗೆ ಇಂಗ್ಲೀಷ್ ಕಲಿಯಲು ಪ್ರೋತ್ಸಾಹ ನೀಡುವದರ ಮೂಲಕ ಶಶಿಗೆ ಆಸರೆಯಾಗಿ ನಿಲ್ಲುತ್ತಾಳೆ.
ಇನ್ನು ಶಶಿಯ ಪಾತ್ರಕ್ಕೆ ಶ್ರೀದೇವಿ ಪ್ರತಿಯೊಂದು ದೃಶ್ಯದಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸುವದರ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಎಲ್ಲೂ ಆಕೆಯ ಅಭಿನಯ ನಾಟಕೀಯ ಅನಿಸುವದೇ ಇಲ್ಲ. ಆಕೆಯನ್ನು ಬಿಟ್ಟರೆ ಮತ್ಯಾರು ಸರಿಹೊಂದುತ್ತಿರಲಿಲ್ಲವೇನೋ ಅನ್ನುವಷ್ಟರಮಟ್ಟಿಗೆ ಶ್ರೀದೇವಿ ಪಾತ್ರದೊಳಕ್ಕೆ ಇಳಿದು ನಟಿಸಿದ್ದಾರೆ. ಬಹುಶಃ ಆಕೆಗೆ ಈ ಪಾತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಸಿಕ್ಕರೂ ಸಿಗಬಹುದು. ಶಶಿಯನ್ನು “ನೀನು ಲಡ್ಡು ಮಾಡುವದಕ್ಕಾಗಿಯೇ ಹುಟ್ಟಿರುವದು” ಎಂದು ಅವಳನ್ನು ಛೇಡಿಸಿದರೂ ಮನಃಪೂರ್ವಕವಾಗಿ ಪ್ರೀತಿಸುವ ಅವಳ ಗಂಡನಾಗಿ ಅಭಿನಯಿಸಿದ ಆದಿಲ್ ಹುಸೇನ್ ಗಮನ ಸೆಳೆಯುತ್ತಾರೆ. ಇನ್ನು ಶಶಿಯ ಅಕ್ಕನಾಗಿ ಸುಜಾತ ಕುಮಾರ್, ಅವಳ ಪ್ರೀತಿಯ ಅತ್ತೆಯಾಗಿ ಸುಲಭಾ ದೇಶಪಾಂಡೆ, ಅಮೆರಿಕನ್ನರಿಗೇ ನಿಮ್ಮ ಎಕಾನಮಿಯನ್ನು ಇಂಪ್ರೂವ್ ಮಾಡಲು ಬಂದಿದ್ದೇನೆ ಎಂದು ಹೇಳುವ ಅಮಿತಾಬಚ್ಚನ್, ಹಾಗೂ ಶಶಿಯ ಮಕ್ಕಳಾಗಿ ಅಭಿನಯಿಸಿದ ಮಕ್ಕಳಿಬ್ಬರೂ ಮನಸ್ಸಿನಲ್ಲಿ ಅಚ್ಚೊತ್ತಿಬಿಡುತ್ತಾರೆ.
-ಉದಯ್ ಇಟಗಿ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ