Demo image Demo image Demo image Demo image Demo image Demo image Demo image Demo image

ಪ್ರತಿಭಾ ನಂದಕುಮಾರ್

 • ಭಾನುವಾರ, ಅಕ್ಟೋಬರ್ 25, 2009
 • ಬಿಸಿಲ ಹನಿ
 • (೧)
  ‘ಮತ್ತೆ ಅದೇ ಹಳೆಯ ಕಣಿ ಕೇಳಬೇಡ
  ಬಾಲಕರಿಲ್ಲದ ಬಾಲೆ ಆಯ್ಕೆ ಹೊರತು ಅನಿವಾರ್ಯವಲ್ಲ
  ಹಾಸುಂಡು ಬೀಸಿ ಒಗೆದ ಬಾಳು ನನ್ನದಲ್ಲ ನಿನ್ನದು
  ಗಾಣಕ್ಕೆ ಬಾಡಿಗೆ ಎತ್ತು ನಾನಂತೂ ಆಗುವುದಿಲ್ಲ’
  (೨)
  ‘ಎರಡು ವಿಷಯ ಹೇಳುತ್ತೇನೆ
  ಗಂಟು ಹಾಕಿ ನೆನಪಿಟ್ಟುಕೊಳ್ಳಿ
  ನನ್ನ ಶವ ಯಾತ್ರೆಯಲ್ಲಿ
  ಸೂಫಿ ಗಜಲ್ ಹಾಡಿ
  ತಿಥಿಗೆ ಆ ಸಾಬಿಯನ್ನು ಕರೆಯಿರಿ
  ಆಮೇಲೆ ನೀವೆಲ್ಲಾ ಬಡಿದಾಡಿಕೊಂಡು ಸಾಯಿರಿ!’
  (೩)
  ‘ನಡುರಾತ್ರಿಯಲ್ಲಿ ಹೊರಳಿ ಕೈಚಾಚಿ ಹುಡುಕಿ
  ಸ್ನಾನದ ನಂತರ ಸೀರೆ ಉಟ್ಟು
  ಮಣಿ ಸರಕ್ಕೆ ಕೈಚಾಚಿ
  ಅದಿನ್ನೂ ಅಲ್ಲೆ ಹಾಸಿಗೆಯಲ್ಲಿ
  ದಿಂಬಿನ ಕೆಳಗಿರಬೇಕೆಂದು ತಡಕಿ
  ಬಾಗಿಲ ಬೆಲ್‌ ಸದ್ದಿಗೆ ಮರೆತು ಹೊರಟು
  ಎರಡು ಲೀಟರ್ ಹಾಲು ಕೇಳಿ ತಲೆ ಚಚ್ಚಿಕೊಂಡು
  ಯಾರು ನೆನೆಸಿಟ್ಟರು ದೋಸೆಗೆ ರುಬ್ಬಲು
  ಒಂದು ಕೇಜಿ ಅಕ್ಕಿ?
  ಅಭ್ಯಾಸ ಬಲ, ಮರೆತೇ ಹೋಗುತ್ತದೆ
  ಎಷ್ಟು ವರ್ಷವಾದವು
  ಅವನು ಮನೆ ಬಿಟ್ಟು?
  (೪)
  ಅವಳು ಕುಡಿಯಬಹುದು, ಕುಣಿಯಬಹುದು, ಕೇಳಿಯಲ್ಲಿ ಮುಳುಗಿ ತೇಲಬಹುದು
  ಹಿಡಿಯಲಾರಿರಿ ನೀವು ಅವಳನ್ನು ಪಬ್ಬುಗಳಲ್ಲಿ
  ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
  ಮಬ್ಬು ಬೆಳಕಲ್ಲಿ ಕಾಣಲಾರಿರಿ ನಿಮ್ಮ ಮಂಜುಕಣ್ಣುಗಳಲ್ಲಿ
  ಎದ್ದು ಬರುತ್ತಾಳೆ ನೂರು ನಾಲಿಗೆ ಚಾಚಿ ರಕ್ತ ಹೀರುತ್ತ

  ಹೀಗೆ ಒಮ್ಮೊಮ್ಮೆ ಅಬ್ಬರಿಸುತ್ತಾ, ಒಮ್ಮೊಮ್ಮೆ ತಮಾಷೆ ಮಾಡುತ್ತಾ. ಒಮ್ಮೊಮ್ಮೆ ಕನವರಿಸುತ್ತಾ, ಒಮ್ಮೊಮ್ಮೆ ಲೇವಡಿ ಮಾಡುತ್ತಾ ಬರೆಯುತ್ತಲೇ ಬಂದಿರುವ ಪ್ರತಿಭಾ ನಂದಕುಮಾರವರದು ಕನ್ನಡದ ಲೇಖಕಿಯರಲ್ಲಿ ಎದ್ದು ಕಾಣುವ ಹೆಸರು. ಅವರನ್ನು ಲೇಖಕಿ ಎನ್ನುವದಕ್ಕಿಂತ ಕವಯಿತ್ರಿ ಎನ್ನುವದೇ ಸೂಕ್ತ! ಏಕೆಂದರೆ ಅವರು ಕತೆ, ಕಾದಂಬರಿ, ಲೇಖನಗಳಿಗಿಂತ ಹೆಚ್ಚಾಗಿ ಬರೆದಿದ್ದು ಕಾವ್ಯವನ್ನೇ! ಅಲ್ಲದೇ ಸ್ವತಃ ಪ್ರತಿಭಾ “ನಾನು ನನ್ನನ್ನು ಲೇಖಕಿ ಎಂದು ಗುರುತಿಸಿಕೊಳ್ಳುವದಕ್ಕಿಂತ ಕವಯಿತ್ರಿ ಎಂದು ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತೇನೆ” ಎಂದು ಹೇಳುತ್ತಾರೆ.

  ‘ನಾವು ಹುಡುಗೀಯರೇ ಹೀಗೆ’ (೧೯೮೩) ಎನ್ನುವ ತಮ್ಮ ಮೊದಲ ಕವನ ಸಂಕಲನದ ಮೂಲಕ ಕನ್ನಡ ಕಾವ್ಯ ಕ್ಷೇತ್ರಕ್ಕೆ ಕಾಲಿಟ್ಟ ಪ್ರತಿಭಾ ನಂದಕುಮಾರ್ ಕನ್ನಡ ಕಾವ್ಯ ಪ್ರಪಂಚಕ್ಕೆ ಒಂದು ಹೊಸ ಆಯಾಮವನ್ನೇ ತಂದುಕೊಟ್ಟರು. ಒಂದು ಕಡೆ ತಮ್ಮ ಕವನಗಳ ಮೂಲಕ ಕನ್ನಡಿಗರನ್ನು ಬೆಚ್ಚಿಬೀಳಿಸುತ್ತಲೇ ಇನ್ನೊಂದೆಡೆ ಅವರನ್ನು ಮೆಚ್ಚಿಸಿದವರೂ ಹೌದು! ಅವರ ಯಾವದಾದರೊಂದು ಕವನವನ್ನು ಯಾರಿಗಾದರು (ಕಾವ್ಯಾಸಕ್ತರಿಗೆ) ತೋರಿಸಿ ಇದನ್ನು ಯಾರು ಬರೆದಿದ್ದು ಹೇಳಿ? ಎಂದು ಕೇಳಿದರೆ ತಟ್ಟನೆ ಪ್ರತಿಭಾ ನಂದಕುಮಾರ ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ಪ್ರತಿಭಾ ತಮ್ಮ ವಿಶಿಷ್ಟ ಪ್ರಯೋಗ ಶೈಲಿಯೊಂದಿಗೆ ತಮ್ಮ ಕವನಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
  (೧)
  ಹೌದು ಕಣೆ ಉಷಾ
  ನಾವು ಹುಡುಗಿಯರೇ ಹೀಗೆ.........
  ಏನೇನೋ ವಟಗುಟ್ಟಿದರೂ
  ಹೇಳಲೇಬೇಕಾದ್ದನ್ನು ಹೇಳದೆ
  ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
  ಜುಮ್ಮೆನ್ನಿಸುವ ಆಲೋಚನೆಗಳನೆಲ್ಲಾ
  ಹಾಗೆ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
  ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.
  ಹೇಳಲೇಬೇಕು ಎನಿಸಿದ್ದನ್ನು
  ಹೇಳಹೋಗಿ ಹೆದರೆ ಏನೇನೋ ತೊದಲುತ್ತೇವೆ
  ‘ಐ ಲವ್ ಯೂ’ ಅಂತ ಹೇಳಲು ಕಷ್ಟಪಟ್ಟು
  ಬೇರೆ ಏನೇನೊ ದಾರಿ ಹುಡುಕಿ
  ಸಂದೇಶ ಮುಟ್ಟಿಸಲು ಹೆಣಗುತ್ತೇವೆ
  ಅದನ್ನು ಅರ್ಥ ಮಾಡಿಕೊಳ್ಳಲಾರದೆ
  ಹುಡುಗರು ಕೈ ತಪ್ಪಿದಾಗ ಮುಸು ಮುಸು ಅಳುತ್ತೇವೆ
  ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ
  ನಾವೇ ದುರಂತ ನಾಯಕಿಯರೆಂದು
  ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೆವೆ
  ಗಂಡನಲ್ಲಿ ‘ಅವನನ್ನು’ ಹುಡುಕುತ್ತೇವೆ
  ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ
  ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ
  ಅರಳುವದೇ ಇಲ್ಲ ಉಷಾ.......
  (೨)
  ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
  ಕೈಗೊಂದು ಕಾಲಿಗೊಂದು ಮಕ್ಕಳಾಗಿ
  ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ ‘ಅವನು’ ಸಿಗುತ್ತಾನೆ
  ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ ಅಂತ ರೋಷ ತಾಳುತ್ತೇವೆ
  ಆದರೆ ಮೇಲೆ ನಗು ನಗುತ್ತಾ ‘ಅವನ’ ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ
  ಯಾಕೆಂದರೆ ಅವಳದೂ ಅದೇ ಕಥೆಯಲ್ಲವೆ?
  ನಾವು ಹುಡುಗಿಯರೇ ಹೀಗೆ...........

  ಹೀಗೆ ಹುಡುಗಿಯರ ಬಗ್ಗೆ ಬರೆಯುವದರ ಮೂಲಕ ಪ್ರತಿಭಾ ಎಂಬತ್ತರ ದಶಕದ ಹುಡುಗಿಯರ (ಆದರೆ ಈ ದಶಕದ ಹುಡುಗಿಯರು ಹಾಗಿಲ್ಲ ಬಿಡಿ) ಆರಾಧ್ಯ ದೇವತೆಯಾದರು. ಈ ಕವನವನ್ನು ಆ ದಶಕದ ಎಷ್ಟೋ ಹುಡುಗಿಯರು ತಮ್ಮ ಅಂತರಂಗದ ಪಿಸುಮಾತೆಂಬಂತೆ ಡೈರಿಯಲ್ಲೋ ಅಥವಾ ನೋಟ್ ಪುಸ್ತಕದ ಕೊನೆಯಲ್ಲೆಲ್ಲೋ ಬರೆದಿಟ್ಟುಕೊಂಡು ಆಗಾಗ ತಮ್ಮಷ್ಟಕ್ಕೆ ತಾವೇ ಹಾಡಿಕೊಳ್ಳುತ್ತಾ ತಮ್ಮ ಅವಸ್ಥೆಗೆ ತಾವೇ ಮರುಕಪಟ್ಟರು. ಹಾಗೆಯೇ ತಮ್ಮ ಅಂತರಂಗದ ವಿಷಾದವನ್ನು ಹಾಡಾಗಿಸಿದ್ದಕ್ಕೆ ಪ್ರತಿಭಾರವರಿಗೆ ಒಂದು ಥ್ಯಾಂಕ್ಸ್ ಕೂಡ ಹೇಳಿದ್ದರು. ಯಾರೊಂದಿಗೂ ಹಂಚಿಕೊಳ್ಳಲಾಗದೆ ಒಳಗೊಳಗೆ ಉಳಿದು ಅಳಿಯುವ ಹುಡುಗಿಯರ ಒಳತೋಟಿಯನ್ನು ಬಿಚ್ಚಿಡುತ್ತಲೆ ‘ನಾವು ಹುಡುಗಿಯರೇ ಹೀಗೆ’ ಎಂಬ ಸತ್ಯವನ್ನು ಬಹಿರಂಗಪಡಿಸುವದರ ಮೂಲಕ ಮಡಿವಂತಿಕೆಯ ಸಮಾಜದಲ್ಲೂ ಅವರ ಮೇಲೆ ಅಗಾಧ ಮರುಕವೊಂದನ್ನು ಸೃಷ್ಟಿಸಿಬಿಟ್ಟರು ಪ್ರತಿಭಾ. ಇದು ಪ್ರತಿಭಾರವರಲ್ಲಿ ಅಡಕವಾಗಿರುವ ಕಾವ್ಯ ಪ್ರತಿಭೆಗೆ ಒಂದು ಉದಾಹರಣೆಯಷ್ಟೆ! ಕವನ ಕಟ್ಟಲು ಬೇಕಾಗುವ ಜಾಣ್ಮೆ, ತಾಳ್ಮೆ ಹಾಗೂ ಶ್ರದ್ಧೆಗಳೆಲ್ಲವೂ ಅವರಲ್ಲಿ ಮೊದಲಿನಿಂದಲೂ ಮನೆಮಾಡಿವೆ. ಹಾಗೆಂದೇ ಅವರ ಕವನಗಳು ಯಾವಾಗಲೂ ಪರಿಪಕ್ವಗೊಂಡ ಕವನಗಳಂತೆ ಕಾಣುತ್ತವೆ. ಆದರೆ ಇವರಿಗೆ ಕಾವ್ಯ ಸುಲಭವಾಗಿ ಒಲಿದಂತೆ ಅನುವಾದ ಅಷ್ಟಾಗಿ ಒಲಿದಿಲ್ಲವೆಂದು ಕಾಣುತ್ತದೆ. ಅದಕ್ಕೆ ಇತ್ತೀಚಿಗೆ ‘ಕೆಂಡ ಸಂಪಿಗೆ’ಯಲ್ಲಿ ಬಂದ ಅವರ ರಸಹೀನ ಅನುವಾದಗಳೇ ಸಾಕ್ಷಿ. ಬರಿ ಪದ್ಯದ ಸಾಲು ಸಾಲುಗಳನ್ನು ತರ್ಜುಮೆ ಮಾಡುವದನ್ನು ಬಿಟ್ಟು ಪದ್ಯವನ್ನು ಇಡಿಯಾಗಿ ಅನುಭವಿಸಿ ಕನ್ನಡಕ್ಕೆ ಹತ್ತಿರವಾಗುವಂತೆ ಕನ್ನಡಿಕರಿಸಿದರೆ ಕನ್ನಡದಲ್ಲಿ ಅವರೊಬ್ಬ ಉತ್ತಮ ಅನುವಾದಕಿಯಾಗುವದರಲ್ಲಿ ಎರಡು ಮಾತಿಲ್ಲ. ಆಶ್ಚರ್ಯವೆಂದರೆ ಅವರ ಇಂಗ್ಲೀಷ ಅನುವಾದಗಳು (ತಾವೇ ಅನುವಾದಿಸಿರುವ ತಮ್ಮ ಕನ್ನಡ ಕವನಗಳ ಇಂಗ್ಲೀಷ ಅನುವಾದಗಳು) ಕನ್ನಡ ಅನುವಾದಕ್ಕಿಂತ ಉತ್ತಮವಾಗಿವೆ. She seems to be a better translator in English than in Kannada.

  ಪ್ರತಿಭಾ ಕೇವಲ ತಮ್ಮ ವೈಯಕ್ತಿಕ ಕಷ್ಟನಷ್ಟದ ಬಗ್ಗೆಯೇ ಬರೆದುಕೊಂಡವರಲ್ಲ. ಕಾಲಕಾಲಕ್ಕೆ ಸಮಕಾಲೀನ ಸಾಮಾಜಿಕ ಘಟನೆಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ; ವಿಶೇಷವಾಗಿ ಹೆಣ್ಣು ಮತ್ತು ಅವಳ ಶೋಷಣೆಯ ಸುತ್ತಮುತ್ತಲ ವಿಷಯಗಳಿಗೆ. ಅದಕ್ಕೊಂದು ಉತ್ತಮ ಉದಾಹರಣೆ ಇತ್ತೀಚಿಗೆ ಮಂಗಳೂರಿನ ಪಬ್‍ವೊಂದರಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆದಾಗ ‘ದೇವಿ’ ಎನ್ನುವ ಕವನವನ್ನು ಬರೆಯುವದರ ಮೂಲಕ ತಾವು ಪೂಜಿಸುವ ದೇವತೆಗಳೇ ಕುಡಿದು ಕುಣಿದು ಕುಪ್ಪಳಿಸುವಾಗ ಮಂಗಳೂರಿನ ಹೆಣ್ಣುಮಕ್ಕಳು ಯಾವ ಲೆಕ್ಕ ಎಂದು ಸಂಪ್ರದಾಯವಾದಿಗಳನ್ನು ಕೇಳಿ ವಸ್ತು ಸ್ಥಿತಿಯ ಲೇವಡಿ ಮಾಡಿದರು.

  ‘ಅವಳು ಕುಡಿಯಬಹುದು, ಕುಣಿಯಬಹುದು, ಕೇಳಿಯಲ್ಲಿ ಮುಳುಗಿ ತೇಲಬಹುದು
  ಹಿಡಿಯಲಾರಿರಿ ನೀವು ಅವಳನ್ನು ಪಬ್ಬುಗಳಲ್ಲಿ
  ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
  ಮಬ್ಬು ಬೆಳಕಲ್ಲಿ ಕಾಣಲಾರಿರಿ ನಿಮ್ಮ ಮಂಜುಕಣ್ಣುಗಳಲ್ಲಿ
  ಎದ್ದುಬರುತ್ತಾಳೆ ನೂರು ನಾಲಿಗೆ ಚಾಚಿ ರಕ್ತ ಹೀರುತ್ತ’

  ಇವೆಲ್ಲವುಗಳ ಮಧ್ಯ ಬಹುಶಃ ಇವತ್ತಿನ ಬಹಳಷ್ಟು ಹೆಂಗಸರು ಮುಖ ಸಿಂಡರಿಸುತ್ತಾ ಅಡಿಗೆ ಮಾಡುವದೆಂದರೆ ಅಲರ್ಜಿ ಎನ್ನುವ ಹೊತ್ತಿನಲ್ಲಿಯೇ ಪ್ರತಿಭಾ “ನನಗೆ ಅಡಿಗೆ ಮಾಡುವದೆಂದರೆ ಬಲು ಇಷ್ಟ” ಎಂದು ಹೇಳುತ್ತಾರೆ. ಅದಕ್ಕೆ ಕಾರಣವನ್ನೂ ಅವರೇ ಕೊಡುತ್ತಾರೆ ನೋಡಿ:

  ‘ಅಡುಗೆ ಮಾಡುವುದೆಂದರೆಬಹಳ ಇಷ್ಟ ನನಗೆ
  ಹೊರದಾರಿ ಅದು ನನ್ನೆಲ್ಲ ಆಕ್ರೋಶಗಳಿಗೆ
  ತೊಳೆದು ಸಿಪ್ಪೆ ಸುಲಿದು ಕತ್ತರಿಸಿ ಜಜ್ಜಿ ಕುಟ್ಟಿ
  ಹುರಿದು ಅರೆದು ರುಬ್ಬಿ ನುರಿದು ಬಾಡಿಸಿ ಬೇಯಿಸಿ
  ಕೊಟ್ಟಿ ಕಲೆಸಿ ಹಿಚುಕಿ ಮಸೆದು ಗಸಗಸನೆ ಕಡೆದು
  ಎತ್ತಿ ಹಾಕಿದರೆ ತಟ್ಟೆಗೆ ರುಚಿ ರುಚಿ ಅಂತ ತಿನ್ನುತ್ತಾರೆ’

  ಎಂದು ಬರೆದು ಪರೋಕ್ಷವಾಗಿ ತಮ್ಮ ಮೇಲೆ ದಬ್ಬಾಳಿಕೆ ನಡೆಸಿದವರ ವಿರುದ್ಧ ವ್ಯವಸ್ಥಿತವಾದ ಸೇಡೊಂದನ್ನು ತೀರಿಸಿಕೊಳ್ಳುತ್ತಾರೆ. ಬಹುಶಃ ಇದೇ ಕಾರಣಕ್ಕೇ ಇರಬೇಕು ಸಾಮಾನ್ಯವಾಗಿ ಹೆಂಗಸರು ಅಡಿಗೆ ಮಾಡುವಾಗ ಯಾಕೆ ಯಾವ ಗಂಡಸೂ ಅಡಿಗೆ ಮನೆಗೆ ಹೋಗುವದಿಲ್ಲವೆಂದು.

  ಪ್ರತಿಭಾ ಕೇವಲ ಇಂಥ ವಿಷಯಗಳಿಗೆ ಮಾತ್ರ ಅಂಟಿಕೊಳ್ಳದೆ ಬದುಕಿನ ಬೇರೆ ಬೇರೆ ಸ್ತರಗಳ ಬಗ್ಗೆಯೂ ಬರೆಯುತ್ತಾರೆ. ಪ್ರೀತಿಯ ಬಗ್ಗೆ ಮಾತನ್ನಾಡುತ್ತಾ ‘ಪ್ರೀತಿಯೊಂದೇ ನಿಶ್ಚಲ ಅದೇ ಜೀವನ ಆದರೂ ಅವರು ಕೇಳುತ್ತಾರೆ ಪುರಾವೆಗಳನ್ನ’ ಎಂದು ಆಕ್ರೋಶಪಡುತ್ತಾರೆ. ಆಧುನಿಕ ಬದುಕಿನ ಬಿಕ್ಕಟ್ಟನ್ನು ಕೆಳಗಿನ ಸಾಲುಗಳಲ್ಲಿ ಬಿಡಿಸಿಡುತ್ತಾ ಹೇಗೆ ಕಳವಳಪಡುತ್ತಾರೆ ನೋಡಿ.

  ‘ದೊಡ್ಡ ದೊಡ್ಡ ಮನೆಗಳಲ್ಲಿ
  ಚಿಕ್ಕ ಚಿಕ್ಕ ಕುಟುಂಬಗಳು
  ದೂರ ದೂರದ ಮೊಬೈಲ್‌ಗಳಲ್ಲಿ
  ಹತ್ತಿರವಾಗದ ಸಂದೇಶಗಳು
  ಊರ ತುಂಬಾ ಫಾಸ್ಟ್ ಫುಡ್‌ಗಳು
  ಚಡಪಡಿಸುವ ಸ್ಲೋ ಜೀರ್ಣಾಂಗಗಳು’

  ಇಂಥ ವಿಷಯಗಳಿಂದಲೇ ಪ್ರತಿಭಾ ಕಾವ್ಯಾಸಕ್ತರ ಕುತೂಹಲವನ್ನು ಕೆರಳಿಸುತ್ತಾರೆ ಮತ್ತು ಅವರನ್ನು ಆಕರ್ಷಿಸುವದರಲ್ಲಿ ಯಶಸ್ವಿಯಾಗುತ್ತಾರೆ.

  “ಇಂದಿನ ಕನ್ನಡ ಕಾವ್ಯದಲ್ಲಿ ಹೊಸದೇನಾದರು ಆಗುತ್ತಿದೆಯೇ?” ಎಂದು ಅವರನ್ನು ಕೇಳಿದರೆ ತಟ್ಟನೆ “ಖಂಡಿತ ಆಗುತ್ತಿದೆ. ಹಾಗೇನಾದರು ಆಗುತ್ತಿದ್ದರೆ ಅದು ಮಹಿಳೆಯರಿಂದಲೇ” ಎಂದು ಹೆಮ್ಮೆಯಿಂದ ಉತ್ತರಿಸುತ್ತಾರೆ. ಅವರ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ ಕೂಡ.

  ಪ್ರತಿಭಾ ಒಬ್ಬ ಸ್ತ್ರೀವಾದಿ ಕವಯಿತ್ರಿ. ಅದಕ್ಕೆ ಅವರ ಕೃತಿಗಳೇ ಸಾಕ್ಷಿ. ಆದರೆ ಹಾಗಂತ ಹೇಳಿದರೆ ಅವರಿಗೆ ಕೋಪ ಬರುತ್ತದೆ. ಮಹಿಳೆಯರ ಕೃತಿಗಳನ್ನು feminine, female and femininity ಅಂತೆಲ್ಲಾ ವಿಂಗಡಿಸಬೇಡಿ. ಏಕೆಂದರೆ ನಿಮಗೆ ಗಂಡಸರಿಗೆ ಹೆಂಗಸರ ಕೃತಿಗಳನ್ನು ಹೇಗೆ ಓದಬೇಕೆಂಬುದು ಗೊತ್ತಿಲ್ಲ ಎಂದು ಅವರ ಮೇಲೆ ಹರಿಹಾಯುತ್ತಾರೆ. “ಏನ್ ಮೇಡಂ ನಿಮ್ಮ ಕವನ, ಲೇಖನಗಳೆಲ್ಲ ಸ್ತ್ರೀ ಸಂವೇದನೆಗಳಿಂದ ತುಂಬಿಹೋಗಿವೆ. ಸ್ತ್ರೀವಾದದ ಹಿನ್ನೆಲೆಯಲ್ಲಿ ರಚಿತವಾಗಿವೆ. ಹೀಗಿದ್ದೂ ನಿಮ್ಮನ್ನು ಸ್ತ್ರೀವಾದಿ ಎಂದು ಕರೆಯದಿರಲು ಹೇಗೆ ಸಾಧ್ಯ?” ಎಂದು ಕೇಳಿದರೆ “ನಿಮಗೆ ಬೇಕಾದರೆ ಕರೆದುಕೊಳ್ಳಿ, ನಂಗೇನೂ ಬೇಜಾರಿಲ್ಲ. ಆದರೆ ನಮಗೆಲ್ಲಾ ಯಾವಾಗಲೂ ಒಂದೇ ‘ಇಸಂ’ (ism) ನಡಿ ಬರೆಯುವದು ಕಷ್ಟವಾಗುತ್ತದೆ. ಏಕೆಂದರೆ ದಿನದ ಕೊನೆಯಲ್ಲಿ ನಾನೂ ಒಬ್ಬ ಮನುಷ್ಯಳು ಅದಕ್ಕಿಂತ ಹೆಚ್ಚಾಗಿ ಒಂದು ಹೆಣ್ಣು” ಎಂದು ಹೇಳಿ ಪ್ರತಿಭಾ ಕೇವಲ ಬರೆಯುವದರಲ್ಲಿ ಜಾಣೆಯಲ್ಲ ಮಾತನಾಡುವದರಲ್ಲೂ ಜಾಣೆ ಎಂದು ತೋರಿಸುತ್ತಾರೆ.

  ಅದೇನೇ ಇರಲಿ ಪ್ರತಿಭಾ ಕನ್ನಡದ ಒಬ್ಬ ಅಪರೂಪದ ಕವಿಯಿತ್ರಿ ಎನ್ನುವದರಲ್ಲಿ ಎರಡು ಮಾತಿಲ್ಲ. ಅವರ ಹಾಗೆ ಕವನ ಕಟ್ಟವ, ಇದ್ದದ್ದನ್ನು ಇದ್ದಕ್ಕಿದ್ದಂತೆ ಸೀದಾ ಸೀದಾ ಹೇಳುವ ಮತ್ತೊಬ್ಬ ಕವಯಿತ್ರಿ ಕನ್ನಡದಲ್ಲಿಲ್ಲ. ಪ್ರತಿಭಾ ಹೇಳುತ್ತಾರೆ ”ಬರೆಯಬೇಕು ಆ ಒಳಗಿನಿಂದ ಗುದ್ದಿಬರುವ ಒದ್ದೆ ಹಾಡಿನ ಬಗ್ಗೆ/ಒಂಟಿ ನಿಂತರೂ ಗುಂಪೆನ್ನಿಸುವ, ಗುಂಪಿನಲ್ಲಿ ಒಂಟಿ ಎನ್ನಿಸುವ ಬಗ್ಗೆ.” ಪ್ರತಿಭಾ ತಮ್ಮ ಬದುಕಿನುದ್ದಕ್ಕೂ ಹೀಗೆ ತಮ್ಮ ಒದ್ದೆ ಹಾಡುಗಳ ಬಗ್ಗೆ ಬರೆಯುತ್ತಾ ಸಾಗಲಿ. ನಾವು ಅವನ್ನು ಓದುತ್ತಾ ಓದುತ್ತಾ ತೊಯ್ದು ಹೋಗುವಂತಾಗಲಿ.

  -ಉದಯ ಇಟಗಿ.

  19 ಕಾಮೆಂಟ್‌(ಗಳು):

  Jayalaxmi ಹೇಳಿದರು...

  ಒಂದು ಮಾತು ಉದಯ್ ಸರ್, ಇತ್ತೀಚಿನ ದಿನಗಳಲ್ಲಿ 'ಸ್ತ್ರೀವಾದಿ' ಅನ್ನುವ ಪದ ಸ್ತ್ರೀ ಸಂವೇದನೆಗಳನ್ನು ಬಿಂಬಿಸುವ ಮಾತು,'ಕೃತಿ'ಗಳನ್ನು ಗುರುತಿಸುವ ಪದವಾಗದೆ ಒಂಥರಾ 'ಸ್ತ್ರೀವಾದಿ' ಅನ್ನುವುದು ಏಕಮುಖಿ ಆಲೋಚನೆ ಏನೊ ಅನ್ನುವಂತೆ ಲೇವಡಿಗೊಳಪಡುತ್ತಿದೆ. ಅದು ವಿಷಾದಕರ. ಸಹನೆ ಅನ್ನುವ ಹೆಸರಲ್ಲಿ ಹೆಣ್ಣು ತನ್ನೆಲ್ಲ ಆಸೆ,ಅನಿಸಿಕೆಗಳನ್ನು ವ್ಯಕ್ತ ಪಡಿಸದೆ ಹತ್ತಿಕ್ಕುತ್ತಾ ಬಂದೂ ಬಂದು, ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮುಕ್ತವಾಗಿ ಹೇಳಿಕೊಳ್ಳತೊಡಗಿದ್ದೆ ಪುರುಷಪ್ರಧಾನವಾದ ನಮ್ಮ ಸಮಾಜಕ್ಕೆ(ಇಲ್ಲಿ ಹೆಣ್ಣು-ಗಂಡು ಇಬ್ಬರೂ ಇದ್ದಾರೆ) ಆಘಾತಕರ ವಿಷಯವಾಗಿ ಗೋಚರಿಸತೊಡಗಿದೆ.ಹೀಗಾಗಿ ಮಹಿಳೆಯೊಬ್ಬಳು ಸ್ತ್ರೀ ಸಂವೇದನೆಗಳ ಕುರಿತು ಏನಾದರೂ ಬರೆದಲ್ಲಿ ಆಕೆ ಬಂಡಾಯ ಮನೋಭಾವದವಳು, ಏಕ ಮುಖ ಆಲೋಚನೆ ಅನ್ನುವ ಅರ್ಥದಲ್ಲಿ 'ಸ್ತ್ರೀವಾದಿ' ಅನ್ನುವ ಹಣೆಪಟ್ಟಿಯನ್ನು ಅಂಟಿಸಲಾಗುತ್ತದೆ. ಅದೇ ಪುರುಷನೊಬ್ಬ ಸ್ತ್ರೀ ಸಂವೇದನೆಗಳ ಕುರಿತಾಗಿ ಅವನ ಮನೋವೈಶಾಲ್ಯ ಮತ್ತು ಸೂಕ್ಷ್ಮಪ್ರಜ್ಞೆಯನ್ನು ಹಾಡಿ ಹೊಗಳಲಾಗುತ್ತದೆ. ವಿಪರ್ಯಾಸ...
  ಪ್ರತಿಭಾ ಅವರ ಬಹುಪಾಲು ಕವಿತೆಗಳು ಸ್ತ್ರೀಯ ನಿಜ ಮುಖವನ್ನು ಅಥವಾ ಆಶಯಗಳನ್ನು ಸಮರ್ಥವಾಗಿ ಬಿಂಬಿಸುತ್ತವೆ.ಸ್ತ್ರೀ ಮನೋಲೋಕದ ಪ್ರತಿನಿಧಿಯಾಗಿ ಪ್ರತಿಭಾ ಕಾಣಿಸುತ್ತಾರೆ. ಅವರು ಕವನ ಕಟ್ಟುವ ರೀತಿ ತುಂಬಾ ಆಪ್ತ. ನೀವು ಅವರ ಒಳ್ಳೊಳ್ಳೆ ಕವನದ ಸಾಲುಗಳನ್ನು ಆಯ್ದಿದ್ದೀರಿ.

  ರಜನಿ ಹೇಳಿದರು...

  ಹಲೋ ಸರ್‌‌, ನಾವು ವಿಜಯ ಕರ್ನಾಟಕದಿಂದ ಒಂದು ಲೇಖನಕ್ಕಾಗಿ ನಿಮಗೆ ಪ್ರಶ್ನೆಗಳನ್ನು ಕಳಿಸಿದ್ದೇವೆ. ನಿಮಗದು ತಲುಪಿದೆಯೋ ಇಲ್ಲವೋ ತಿಳಿಯಲಿಲ್ಲ. ‌ಇ-ಮೇಲ್‌‌ ವಿಳಾಸ ತಪ್ಪಾಗಿರಬಹುದು ಎಂಬ ಸಂಶಯದಿಂದ ಇಲ್ಲಿ ಕಾಮೆಂಟಿಸುತ್ತಿದ್ದೇನೆ. ದಯವಿಟ್ಟು ಉತ್ತರಿಸುವಿರಾ?

  ತೇಜಸ್ವಿನಿ ಹೆಗಡೆ ಹೇಳಿದರು...

  ಉದಯ್,

  ಉತ್ತಮ ಕವಯಿತ್ರಿಯೋರ್ವರನ್ನು ಪರಿಚಯಿಸಿದ್ದೀರಿ ಅದೂ ಅವರ ಕವನಗಳ ಮೂಲಕ. ಕೆಲವು ಕವನದ ತುಣುಕುಗಳು ಇಷ್ಟವಾದವು. ಆದರೆ ಅವರ ಭಾವ ತೀವ್ರತೆಗಳಲ್ಲಿ ಹಲವು ಪರಾಕಷ್ಠೆಯನ್ನು ಮೀರಿದ್ದವು ಎಂದೆನಿಸಿದವು. ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ.

  ಬದುಕಲ್ಲಿ ತೀರಾ ನೊಂದವರು. ಆ ನೋವಿಗೆ ಕಾರಣವಾದ ವಸ್ತು/ವ್ಯಕ್ತಿ ಎರಡನ್ನೂ generalize ಮಾಡಿಯೇ ಹೆಚ್ಚು ಬರೆಯುವುದನ್ನು ನೋಡಿದ್ದೇನೆ. ಅಂತಹ ಬರಹಗಳೇಕೋ ನನಗೆ ಹೆಚ್ಚು ಆಪ್ತವೆನಿಸುವುದಿಲ್ಲ. ಆದರೆ ಪ್ರತಿಭಾ ಅವರ ಕೆಲವು ಕವನಗಳು ಚೆನ್ನಾಗಿವೆ. ಮಾನವತೆಗೆ, ಹೆಣ್ಣಿನೆ ಭಾವ ಸೂಕ್ಷ್ಮತೆಗೆ ಹತ್ತಿರವೆನಿಸುತ್ತವೆ.

  ಉತ್ತಮ ವಿಮರ್ಶೆ. ಧನ್ಯವಾದಗಳು.

  ಬಿಸಿಲ ಹನಿ ಹೇಳಿದರು...

  ರಜನಿ ಮೇಡಂ,
  ಈಗಷ್ಟೆ ನಿಮ್ಮ ಕಾಮೆಂಟ್ ಓದಿದ ಮೇಲೆ ನನ್ನ ಈ ಮೇಲ್ ಓಪನ್ ಮಾಡಿ ನೋಡಿದೆ. ನೀವು ಕಳಿಸಿದ ವಿನಂತಿ ಹಾಗೂ ಪ್ರಶ್ನೆಗಳು ಅಲ್ಲಿವೆ. ಆದರೆ ನೀವು ಕೇಳಿರುವ ಸಮಯ ತುಂಬಾ ಕಡಿಮೆ. ಆದರೂ ಈ (ಸೋಮವಾರ)ರಾತ್ರಿಯೊಳಗೆ ಅದೇ ಈ ಮೇಲ್‍ಗೆ ಕಳಿಸಿಕೊಡುವೆ. ನಿಮ್ಮ ಪ್ರೀತಿಗೆ ಚಿರಋಣಿ.

  ರಜನಿ ಹೇಳಿದರು...

  ತುಂಬಾ ಧನ್ಯವಾದಗಳು. ಸಮಯದ ಮಿತಿ ಕಡಿಮೆ ಇರುವುದು ನಿಜ. ಆದರೆ ನೀವು ಎಲ್ಲಾ ಪ್ರಶ್ನೆಗಳಿಗೆ ಸೇರಿಸಿ ೧೦೦ರಿಂದ ೧೫೦ ಪದಗಳಲ್ಲಿ ಉತ್ತರ ಕೊಟ್ಟರೆ ಸಾಕು. ಆದ್ದರಿಂದ ಅದು ನಿಮ್ಮ ಹೆಚ್ಚಿನ ಸಮಯ ತಿನ್ನುವುದಿಲ್ಲ ಎಂಬ ಭರವಸೆ ನಮ್ಮದು.

  ಸಾಗರದಾಚೆಯ ಇಂಚರ ಹೇಳಿದರು...

  ಪ್ರತಿಭಾ ಅವರ ಕವನಗಳು ಇಷ್ಟವಾದವು,
  ಪರಿಚಯಿಸಿದ್ದಕ್ಕೆ ಧನ್ಯವಾದಗಳು

  Keshav.Kulkarni ಹೇಳಿದರು...

  ಇಟಗಿಯವರ,
  ಪ್ರತಿಭಾರ ಬಗ್ಗೆ ಭಾಳ ಛೊಲೊ ಬರದೀರಿ. ಓದಿ ಮತ್ತೊಮ್ಮೆ ಅವರ ಕವನಗಳನ್ನ ಓದಿದ ನೆನಪಾತು. ಬರೇ ಹುಡುಗ್ಯಾರಷ್ಟೇ ಅಲ್ಲ, ನಾ ಸಹ ಅವರ ಕವನಗಳನ್ನ ನನ್ನ ಪುಸ್ತಕದಾಗ ಬರಕೊಂಡ ಸಾಲ್ಯಾಗ ಮಾಸ್ತರು ಪಾಠಾ ಮಾಡೂಮುಂದ ಓದಕೋತ ಕೂತಿರತಿದ್ದೆ.
  - ಕೇಶವ (www.kannada-nudi.blogspot.com)

  ಬಿಸಿಲ ಹನಿ ಹೇಳಿದರು...

  ಜಯಲಕ್ಷ್ಮಿ ಮೇಡಂ,
  ನೀವು ಹೇಳಿದ್ದನ್ನು ಒಪ್ಪಿಕೊಳ್ಲುತ್ತೇನೆ. ಆದರೆ ನನ್ನದೂ ಒಂದು ಮಾತಿದೆ, ಕೇಳಿ. ಸ್ತ್ರೀಯರ ಪರವಾಗಿ ಮತ್ತು ಸ್ತ್ರೀ ಸಂವೇದನೆಗಳ ಬಗ್ಗೆ ಬರೆದಾದ ಮೇಲೂ ಅವರನ್ನು ಸ್ತ್ರೀವಾದಿ ಎಂದು ಕರೆದರೆ ಏನು ತಪ್ಪು ಮತ್ತು ಅದನ್ನು ಒಪ್ಪಿಕೊಳ್ಳಲು ಅವರಿಗೇನು ಕಷ್ಟ? ಎನ್ನುವದು ನನ್ನ ಪ್ರಶ್ನೆ. ಬಹಳಷ್ಟು ಲೇಖಕಿಯರ ಕತೆ, ಕಾದಂಬರಿಗಳೆಲ್ಲ ಸ್ತ್ರೀ ಸಂವೇದನೆಗಳಿಂದ ತುಂಬಿಹೋಗಿವೆ. ಆದ್ದರಿಂದಲೇ ಅವರು ಅದನ್ನು ಧೈರ್ಯವಾಗಿ ಒಪ್ಪಿಕೊಳ್ಳುತ್ತಾರೆ ಹಾಗೂ ಅವರಲ್ಲಿ ಕೆಲವು ಮಾತ್ರ ತಮ್ಮ ಸ್ತ್ರೀವಾದದ ಸಿದ್ದಾಂತಗಳಿಗೆ ಬದ್ಧರಾಗಿದ್ದಾರೆ. ಹೆಣ್ಣು ಮುಕ್ತವಾಗಿ ಬರೆಯಲು ಏನೂ ಅಡ್ಡಿಯಿಲ್ಲ. ಆದರೆ ಹಾಗೆ ಬರೆದಾದ ಮೇಲೆ ಸಮಾಜವನ್ನು ಎದುರಿಸಿ ನಿಲ್ಲುವ ಎದೆಗಾರಿಕೆ ಬೇಕಾಗುತ್ತದೆ. ಆದರೆ ನಮ್ಮ ಬಹಳಷ್ಟು ಲೇಖಕಿಯರಿಗೆ ಅದಿನ್ನೂ ಸಾಧ್ಯವಾಗಿಲ್ಲ. ಉದಾಹರಣೆಗೆ ಇಂಗ್ಲೀಷ್ ಲೇಖಕಿ ಕಮಲಾ ದಾಸ್ ಸ್ತ್ರೀವಾದಿ ಲೇಖಕಿಯಾಗಿದ್ದುಕೊಂಡೇ ತಮ್ಮ ವೈವಾಹಿಕ ಜೀವನ ಅಲ್ಲೋಲ ಕಲ್ಲೋಲವಾಗಿದ್ದರೂ ಅವರಿಂದ ಆ ಬಂಧನದಿಂದ ಹೊರಬರಲಾಗಲೇ ಇಲ್ಲ. ಇದು ಬೆರೆಯವರನ್ನು ದಾರಿ ತಪ್ಪಿಸುವ ಹುನ್ನಾರು. ಅದಲ್ಲದೇ ತಮ್ಮ ಗಂಡ ಸತ್ತ ಮೇಲೆ ಒಬ್ಬಂಟಿಯಾಗಿ ಈ ಸಮಾಜದಲ್ಲಿ ಬದುಕುವದು ಎಷ್ಟು ಕಷ್ಟವಿದೆವೆಂಬುದನ್ನು ಅವರೇ ಸ್ವತಃ ತಮ್ಮ ಇಳಿವಯಸ್ಸಿನಲ್ಲಿ ಒಪ್ಪಿಕೊಂಡಿದ್ದರು. ಇಂಥ ಸಂದರ್ಭಗಳಲ್ಲಿ ಅಂಥವರ ಸ್ತ್ರೀವಾದ ಲೇವಡಿಗೊಳಗಾಗುತ್ತಿರುತ್ತದೆ. ಈ ಮಾತು ಪ್ರತಿಭಾರವರಿಗೆ ಅನ್ವಯಿಸುವದಿಲ್ಲ. ಏಕೆಂದರೆ ಪ್ರತಿಭಾರವರ ಸ್ತ್ರೀವಾದವನ್ನು ನಾನಿಲ್ಲಿ ಲೇವಡಿ ಮಾಡಿಲ್ಲ. ನಿಮ್ಮ ಕೃತಿಗಳಲ್ಲಿ ಸ್ತ್ರೀವಾದ ಎದ್ದು ಕಾಣುತ್ತದೆ ಅದನ್ನು ಒಪ್ಪಿಕೊಳ್ಳಿ ಎಂದಷ್ಟೆ ಹೇಳಿದ್ದೇನೆ.

  ಬಿಸಿಲ ಹನಿ ಹೇಳಿದರು...

  ತೇಜಸ್ವಿನಿಯವರೆ,
  ಸರಿಯಾಗಿ ಹೇಳಿದಿರಿ. ಪ್ರತಿಭಾ ಯಾವಾಗಲೂ ಹೆಂಗಸರಿಗೆ ಮಾತ್ರ ಕಷ್ಟ, ಗಂಡಸರಿಂದ ಹೆಂಗಸರ ಶೋಷಣೆಯಾಗುತ್ತದೆ ಎನ್ನುವ ರೀತಿಯಲ್ಲಿ ಮಾತನಾಡುತ್ತ ಗಂಡಸಿನ ಕಷ್ಟಗಳೇನು ಎಂದು ಅವರು ಯಾವತ್ತೂ ಕೇಳುವದಿಲ್ಲ. ಇವತ್ತು ಎಷ್ಟೋ ಮನೆಗಳಲ್ಲಿ ಹೆಂಗಸರಿಂದ ಗಂಡಸಿನ ಮೇಲೆ ದಬ್ಬಾಳಿಕೆ ನಡೆಯುತ್ತದೆ. ಆದರೆ ಪ್ರತಿಭಾ ಯಾವತ್ತೂ ಆ ಬಗ್ಗೆ ಮಾತನಾಡುವದಿಲ್ಲ. ಹೆಂಗಸರಿರುವದೇ ಶೋಷಣೆಗೆ ಎನ್ನುವ ರೀತಿಯಲ್ಲಿ ಎಲ್ಲವನ್ನೂ ಎಲ್ಲರನ್ನೂ generalize ಮಾಡಿಯೇ ಮಾತನಾಡುವದು ನನಗೂ ಇಷ್ಟವಿಲ್ಲ. ಇನ್ನುಳಿದಂತೆ ಪ್ರತಿಭಾ ಒಳ್ಳೆ ಕವಯಿತ್ರಿ ಎನ್ನುವದರಲ್ಲಿ ಎರಡು ಮಾತಿಲ್ಲ. ನಿಮ್ಮ ಉತ್ತಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್.

  ಬಿಸಿಲ ಹನಿ ಹೇಳಿದರು...

  ಗುರುಮೂರ್ತಿಯವರೆ,
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  ಬಿಸಿಲ ಹನಿ ಹೇಳಿದರು...

  ಕುಲಕರ್ಣಿಯವರ,
  ನನ್ನ ಬ್ಲಾಗಿಗೆ ಮೊದ್ಲ ಸರ್ತಿ ಭೇಟಿ ಕೊಟ್ಟೀರಿ. ಭಾಳ ಖುಶಿಯಾಯಿತು ನೋಡ್ರಿ. ನೀವು ಹೇಳಿದಂಗ ಪ್ರತಿಭಾರ ಕವನಗಳನ್ನ ಹುಡುಗುರು ಸೈತ ಓದ್ತಾರ್ರಿ. ಓದಿ ಹುಡುಗ್ಯಾರ ಲೋಕ ನಾವು ಅನ್ಕೊಂಡಂಗಿಲ್ಲ ಬಿಡ್ರಿ ಬ್ಯಾರೆ ಏನ ಅಯತಿ ಅಂತ ಕಣ್ಣ ಕಣ್ಣ ಬಿಡ್ತಾರ ನೋಡ್ರಿ.
  ಮತ್ತ ಬರ್ರೆಲ್ಲಾ ನನ್ನ ಬ್ಲಾಗಿಗೆ. ನಮಸ್ಕಾರ.

  ದಿನಕರ ಮೊಗೇರ ಹೇಳಿದರು...

  ಉದಯ್ ಸರ್,
  ಪ್ರತಿಭಾ ನಂದಕುಮಾರ್ ಕೆಲವೊಂದು ಕವನ ನಾನು ಹಾಯ್ ಬೆಂಗಳೂರ್ ನಲ್ಲಿ ಓದಿದ್ದೇನೆ, ರವಿ ಬೆಳಗೆರೆ ಅವರ ಬಗ್ಗೆ ತುಂಬಾ ಸಾರಿ ಬರೆದಿದ್ದಾರೆ..... ಏನನ್ನೇ ಹೇಳಿದರೂ ಸಿದಾ ಸಿದಾ ಹೇಳುತ್ತಾರೆ.... ಇದೆ ಅವರ ವಿಶೇಷತೆ....

  ರಜನಿ ಹೇಳಿದರು...

  ಸರ್‌, ದಯವಿಟ್ಟು ನಿಮ್ಮದೊಂದು ಫೋಟೊವನ್ನು ತಕ್ಷಣ ಕಳಿಸಲು ಸಾಧ್ಯವೇ? ಅದೇ ಮೇಲ್‌ ವಿಳಾಸಕ್ಕೆ ಕಳಿಸಿಕೊಡಿ. ತೊಂದರೆಗಾಗಿ ಕ್ಷಮಿಸಿ

  ಬಿಸಿಲ ಹನಿ ಹೇಳಿದರು...

  ರಜನಿ ಮೇದಂ,
  ಕಳಿಸಿಕೊಟ್ಟಿದ್ದೇನೆ.

  ಬಿಸಿಲ ಹನಿ ಹೇಳಿದರು...

  ದಿನಕರ್,
  ಪ್ರತಿಭಾ ಮತ್ತು ರವಿ ಬೆಳಗೆರೆ ಇಬ್ಬರೂ ಓಳ್ಳೆಯ ಸ್ನೇಹಿತರಾಗಿದ್ದರು. ಆಮೇಲೆ ಅವರಿಬ್ಬರು ಕಿತ್ತಾಡಿಕೊಂಡು ತಮ್ಮ ಸ್ನೇಹವನ್ನು ಹಾಳು ಮಾಡಿಕೊಂಡರು. ಅದನ್ನೆ ಬೆಳೆಗೆರೆ ಅವರ ಬಗ್ಗೆ ತುಂಬಾ ಸಾರಿ ಬರೆದಿದ್ದಾರೆ. ನೀವು ಹೇಳಿದಂತೆ ಪ್ರತಿಭಾ ಏನನ್ನೇ ಹೇಳಿದರೂ ಸೀದಾ ಸೀದಾ ಹೇಳುತ್ತಾರೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  Jayalaxmi ಹೇಳಿದರು...

  ಉದಯ್ ಸರ್, ನಾನು ಸ್ತ್ರೀವಾದಿ ಎಂದು ಕರೆಯುತ್ತಿರುವುದನ್ನು ಖಂಡಿತ ವಿರೋಧಿಸುತ್ತಿಲ್ಲ. ಆದರೆ ಕೆಲವು ಜನ(ಪ್ರತಿಭಾರನ್ನೂ ಸೇರಿಸಿಯೇ) ಏಕಮುಖವಾಗಿ ಬರೆಯುವುದರಿಂದ, ಸ್ತ್ರೀ ಸಂವೇದನೆಗಳ ಕುರಿತು ಬರೆವ ಎಲ್ಲ ಲೇಖಕಿಯರನ್ನೂ ಸೇರಿಸಿಯೇ ಲೇವಡಿ ಮಾಡುವ ಪದವಾಗಿ 'ಸ್ರ್ತೀವಾದಿ'ಎನ್ನುವುದನ್ನು ಬಳಸುತ್ತಿರುವುದು ಬೇಸರ ತರಿಸುತ್ತದೆ ಎಂದು ಹೇಳುತ್ತಿದ್ದೇನೆ.ಇನ್ನು ಕಮಲಾದಾಸ್ ಅವರ ಬಗ್ಗೆ ನೀವು ಹೇಳಿರುವುದು ಸ್ವಲ್ಪ ಗೊಂದಲಮಯವಾಗಿದೆ. ಸ್ತ್ರೀವಾದಿ ತನ್ನ 'ತನ್ನ ಸಂಸಾರಿಕ ಬಂಧನ'ದಿಂದ ಯಾಕೆ ಆಚೆ ಬರಬೇಕು? ಹಾಂ ಹೌದು, ಕೆಲವರು ಮಾತಾಡುತ್ತಾರೆ, ಇನ್ನೂ ಕೆಲವರು ಮಾಡಿತೋರಿಸುತ್ತಾರೆ, ಅಥವಾ ನುಡಿದಂತೆ ನಡೆಯುತ್ತಾರೆ. ಎಲ್ಲರಿಗೂ ಅವರವರದೇ ಅನಿವಾರ್ಯತೆಗಳಿರುತ್ತವೆ. ಚೌಕಟ್ಟುಗಳಿರುತ್ತವೆ. ಎಷ್ಟೇ ಲಿಬರಲ್ ಆಗಿದೀವಿ ಅಂದುಕೊಂಡು ಬದುಕುವ ಜನ ಕೂಡ ಅವರದೇ ಆದ ಒಂದು ಚೌಕಟ್ಟಿನಲ್ಲೇ ಬದುಕುತ್ತಾರೆ ಎಂದು ನಿಮಗನಿಸುವುದಿಲ್ಲವೆ? ಅದಕ್ಕೆ ಕಾರಣ ಮನುಜ ಸಂಘ ಜೀವಿ, ಸಮಾಜಜೀವಿ ಎಂಬುದು. ಇಲ್ಲಿ ಸದಾ ನಮ್ಮೊಬ್ಬರ ಅಭಿಪ್ರಾಯದಂತೆ ಬದುಕಲಾಗುವುದಿಲ್ಲ.ಹೀಗಾಗಿ ಕಮಲಾದಾಸ್ ಅವರಿಗೂ ಈ ಮಾತು ಅನ್ವಯಿಸುತ್ತದೆ ಎಂದು ನಿಮಗನಿಸುವುದಿಲ್ಲವೆ? ಆಕೆ ಬದುಕಿದ ಕಾಲಘಟ್ಟದಲ್ಲಿ ಆಕೆ ಅಷ್ಟು ಮುಕ್ತವಾಗಿ ತನ್ನ ಅನಿಸಿಕೆಯನ್ನು ಹೇಳಿಕೊಳ್ಳುವುದೇ ಒಂದು ಸಾಹಸವಾಗಿತ್ತು ಅಲ್ಲವೆ?

  ಬಿಸಿಲ ಹನಿ ಹೇಳಿದರು...

  ಜಯಲಕ್ಷ್ಮಿ ಮೇಡಂ,
  ಸ್ತ್ರೀ ಸಂವೇದನೆಗಳ ಕುರಿತು ಬರೆವ ಲೇಖಕಿಯರನ್ನು ಯಾರೂ ಲೇವಡಿ ಮಾಡುವದಿಲ್ಲವೆಂದುಕೊಂಡಿದ್ದೇನೆ. ಆದರೆ ಅದು ಅತಿರೇಕವಾಗಿ ಪ್ರಚೋದನಕಾರಿಯಾದಾಗ ಬೇಸರವೆನಿಸುತ್ತದೆ. ಬದುಕು ಎಂದರೆ ಬರಿ ಪ್ರತಿಭಟನೆ, ಹೋರಾಟವನ್ನಾಗಿ ಮಾಡಿಕೊಂಡು ನರಕವನ್ನು ಮಾಡಿಕೊಳ್ಳುವದಕ್ಕಿಂತ ರಾಜಿ (atleast ಕೆಲವು ವಿಷಯಗಳಲ್ಲಿ) ಮಾಡಿಕೊಂಡು ಬದಕಿದರೆ ನಿಜವಾದ ಗಮ್ಯತೆ ಗೊತ್ತಾಗುವದು. ಈ ರಾಜಿ ಮನೋಭಾವನೆ ಬರಿ ಸ್ತ್ರೀಯರಿಂದಲೇ ಅಲ್ಲದೆ ಗಂಡಸರಿಂದಲೂ ಬರಬೇಕಿದೆ, ಬಂದಿದೆ ಕೂಡ. “ಎಲ್ಲಿ ಪ್ರತಿಭಟನೆಯಿರುತ್ತದೋ ಅಲ್ಲಿ ಸಂಘರ್ಷವಿದ್ದೇ ಇರುತ್ತದೆ, ಎಲ್ಲಿ ರಾಜಿಯಿರುತ್ತದೋ ಅಲ್ಲಿ ಬದುಕಿರುತ್ತದೆ” ಎನ್ನುವದನ್ನು ಪುರುಷ ಹಾಗೂ ಸ್ತ್ರೀಯರಿಬ್ಬರೂ ಅರಿಯಬೇಕಾಗಿದೆ. ಅಂದಾಗಲೆ ನಮ್ಮಲ್ಲಿ ಹೆಚ್ಚುತ್ತಿರುವ ಡೈವೋರ್ಷಗಳನ್ನು ತಡೆಗಟ್ಟಬಹುದು.
  ಇನ್ನು ಸ್ತ್ರೀವಾದ ಲೇವಡಿಗೊಳಗಾಗುವ ವಿಷಯ: ಯಾವಾಗ ಲೇಖಕಿಯರು ತಮ್ಮ ಸಂವೇದನೆಗಳಿಗೆ ತಾವೇ ಬದ್ಧರಾಗಿರದೇ ಇರುತ್ತಾರೋ ಅಂಥ ಸಂದರ್ಭದಲ್ಲಿ ಸ್ತ್ರೀವಾದ ಲೇವಡಿಗೊಳಗಾಗುತ್ತಿರುತ್ತದೆಂದುಕೊಂಡಿದ್ದೇನೆ.
  ಕ್ಷಮಿಸಿ ಮೇಡಂ, ಸ್ತ್ರೀವಾದಿಗಳು ತನ್ನ ಸಂಸಾರಿಕ ಬಂಧನದಿಂದ ಆಚೆ ಬರಲೇಬೇಕು ಎಂಬುದನ್ನು ನಾನು ಹೇಳಿಲ್ಲ. ಆದರೆ ಕಮಲಾ ದಾಸ್ ಬೇರೆಯವರಿಗೆ ಹೆಣ್ಣು ಸ್ವತಂತ್ರಳು, ಗಂಡನ ಹಂಗಿಲ್ಲದೇ ಬದುಕಬಹುದು ಎಂದು ಹೇಳುತ್ತಲೇ ತಾವೇ ಆ ಹಂಗಿಗೊಳಗಾದರು. ಮತ್ತು ಹಾಗೆ ಬದುಕಲಿಲ್ಲ. ಅದಕ್ಕಾಗಿಯೇ ಅದು ಬೇರೆಯವರನ್ನು ದಿಕ್ಕು ತಪ್ಪಿಸುವ ಹುನ್ನಾರು ಎಂದಿದ್ದೆ.
  "ಕೆಲವರು ಮಾತಾಡುತ್ತಾರೆ, ಇನ್ನೂ ಕೆಲವರು ಮಾಡಿತೋರಿಸುತ್ತಾರೆ, ಅಥವಾ ನುಡಿದಂತೆ ನಡೆಯುತ್ತಾರೆ. ಎಲ್ಲರಿಗೂ ಅವರವರದೇ ಅನಿವಾರ್ಯತೆಗಳಿರುತ್ತವೆ. ಚೌಕಟ್ಟುಗಳಿರುತ್ತವೆ" ಎನ್ನುವ ನಿಮ್ಮ ಮಾತನ್ನು ಒಪ್ಪುತ್ತೇನೆ. ಅದರೆ ನುಡಿದಂತೆ ನಡೆಯುವದಾಗಲಿ, ಬರೆದಂತೆ ಬದುಕುವದಾಗಲಿ ಮಾಡದೆ ಹೋದಾಗ ಅಂಥ ವ್ಯಕ್ತಿಗಳು ಸಹಜವಾಗಿ ತಮ್ಮ ತೂಕವನ್ನು ಕಳೆದುಕೊಳ್ಳುತ್ತಾರೆ ಮತ್ತು ಅಂಥವರ ಬರಹಗಳು ಗೌರವವನ್ನು ಕಳೆದುಕೊಳ್ಳುತ್ತವೆ. ಇನ್ನು ಕಮಲಾ ದಾಸ್ ಬಿಡಿ ಅವರು ನಿಮಿಷಕ್ಕೊಂದು ಹೇಳಿಕೆ ನೀಡುವವರಾಗಿದ್ದರು. ಈಗಷ್ಟೇ ಹೇಳಿದ ಹೇಳಿಕೆಗೆ ಒಂದು ನಿಮಿಷದ ನಂತರ ಅದಕ್ಕೆ ತದ್ವಿರುದ್ಧವಾಗಿ ಹೇಳಿಕೆಯೊಂದನ್ನು ನೀಡುವ ವಿಲಕ್ಷಣ ವ್ಯಕ್ತಿತ್ವದವರಾಗಿದ್ದರು. ಹಾಗಾಗಿ ಅವರು ಬರುಬರುತ್ತಾ ನಿರ್ಲಕ್ಷಕ್ಕೊಳಗಾದರು.

  Jayalaxmi ಹೇಳಿದರು...

  ಸ್ವಲ್ಪ ಸಹನೆಯಿಂದ ಪೂರ್ವಾಪರ ಯೋಚಿಸಿ ಮಾತಾಡುವ ಜನ ಹಾಗೆ ಲೇವಡಿ ಮಾಡೊಲ್ಲ ಉದಯ್ ಸರ್,ಆದ್ರೆ ಹೀಗೆ ಯೋಚಿಸೋರ ಸಂಖ್ಯೆ ಬಹಳಿಲ್ಲ. "ಬದುಕು ಎಂದರೆ ಬರಿ ಪ್ರತಿಭಟನೆ, ಹೋರಾಟವನ್ನಾಗಿ ಮಾಡಿಕೊಂಡು ನರಕವನ್ನು ಮಾಡಿಕೊಳ್ಳುವುದಕ್ಕಿಂತ ರಾಜಿ(atleast ಕೆಲವು ವಿಷಯಗಳಲ್ಲಿ)ಮಾಡಿಕೊಂಡು ಬದುಕಿದರೆ ನಿಜವಾದ ಗಮ್ಯತೆ ಗೊತ್ತಾಗುವದು. ಈ ರಾಜಿ ಮನೋಭಾವನೆ ಬರಿ ಸ್ತ್ರೀಯರಿಂದಲೆ ಅಲ್ಲದೆ ಗಂಡಸರಿಂದಲೂ ಬರಬೇಕಿದೆ". ಎನ್ನುವ ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ಆದರೆ ಗಂಡಸರಲ್ಲಿ ಆ ಮನೋಭಾವನೆ ಬಂದಿದೆ ಅನ್ನುವುದಕ್ಕಿಂತ ಬರುತ್ತಿದೆ ಎನ್ನುವುದು ಸರಿಯೇನೊ.. ಜೊತೆಗೆ ಅದು ನಿಜಕ್ಕೂ ಸಂತಸದ ವಿಷಯ.

  ಬಿಸಿಲ ಹನಿ ಹೇಳಿದರು...

  ಜಯಲಕ್ಷ್ಮಿ ಮೇಡಂ,
  ನಿಮ್ಮ ಸಹಮತಕ್ಕೆ ಅಭಿನಂದನೆಗಳು. ನನಗೆ ತಿಳಿದಂತೆ ಇವತ್ತು ಬಹಳಷ್ಟು ಗಂಡಸರು ಬದಲಾಗಿದ್ದಾರೆ. ಅವರು ಹೆಂಡತಿಗೆ ಎಲ್ಲ ವಿಷಯಗಳಲ್ಲೂ ಸಹಕಾರ ನೀಡುತ್ತಿದ್ದಾರೆ. ಹಾಗೆ ನೋಡಿದರೆ ಹೆಂಗಸರೆ ಅದರ ದುರುಪಯೋಗ ತೆಗೆದುಕೊಳ್ಳುವದು ಹೆಚ್ಚಾಗುತ್ತಿದೆ. ಉದಾಹರಣೆಗೆ ಗಂಡ ಮೆನೆ ಕೆಲಸ ಮಾಡಿಕೊಟ್ಟಾಗಲೂ ಅದರಲ್ಲಿ ಏನಾದರೊಂದು ತಪ್ಪು ಹುಡುಕಿ ಜಗಳ ತೆಗೆಯುವ, ಅಥವಾ ಅವನ ಸಹಕಾರವನ್ನೇ ದುರುಪಯೋಗಪಡಿಸಿಕೊಳ್ಳುವ ಹೆಂಡತಿಯರು ಹೆಚ್ಚಾಗುತ್ತಿದ್ದಾರೆ. ಇವತ್ತು ಡೈವೋರ್ಷ ಸಂಖ್ಯೆ ಹೆಚ್ಚಾಗಲು ಹೆಂಗಸರು ಹೆಚ್ಚು ಕಾರಣವಾಗುತ್ತಿದ್ದಾರೆ ಎನ್ನುವದು ನನ್ನ ಅಭಿಪ್ರಾಯ. ಎಲ್ಲ ಸರಿಯಿದ್ದಾಗಲೂ ಗಂಡಸರನ್ನು ಹೀಗಳೆಯುವ, ಹಂಗಿಸುವ ಮನೋವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ಕುಟುಂಬಗಳು ಒಡೆದು ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ ಎಂಬುದು ನನ್ನ ಅನಿಸಿಕೆ.