ನಾನು ಗುರುವಲ್ಲ
ಹೇಗೆ ಪ್ರೀತಿಸಬೇಕೆಂದು ಹೇಳಿಕೊಡಲು.
ಮೀನಿಗೆ ಈಜು ಕಲಿಸಿದವರ್ಯಾರು?
ಹಕ್ಕಿಗೆ ಯಾವ ಗುರು ತಾನೆ ಹಾರುವದನ್ನು
ಹೇಳಿಕೊಟ್ಟ?
ಅಂತೆಯೇ
ನಿನ್ನಷ್ಟಕ್ಕೇ ನೀನೇ
ಈಜುವದನ್ನು ಕಲಿ
ಹಾರುವದನ್ನು ಕಲಿ
ಪ್ರೀತಿಸುವದನ್ನೂ ಸಹ
ನೆನಪಿರಲಿ
ಪ್ರೀತಿಗೆ ಪಠ್ಯಗಳಿಲ್ಲ
ಚರಿತ್ರೆಯ ಅಗಾಧ ಪ್ರೇಮಿಗಳೆಲ್ಲ ಅವಿದ್ಯಾವಂತರೇ!
(೨)
ಹೆಣ್ಣು
ಶ್ರೀಮಂತನನ್ನಾಗಲಿ
ಚೆಲುವನನ್ನಾಗಲಿ
ಅಥವಾ ಕವಿಯನ್ನಾಗಲಿ
ಬಯಸುವದಿಲ್ಲ.
ಅವಳು ಬಯಸುವದು
ಅವಳು ಅತ್ತಾಗ
ಅವಳನ್ನು ಎದೆಗೆ ಅಪ್ಪಿಕೊಂಡು
“ಇದೇ ನಿನ್ನ ತವರೂರು”
ಎಂದು ಸಂತೈಸುವವನು.
(೩)
ನಮ್ಮ ಕೆಲಸಕ್ಕಿಂತ
ನಮ್ಮ ಮಾತು ದೊಡ್ಡದು
ನಮಗಿಂತ ನಮ್ಮ
ಕತ್ತಿಗಳು ದೊಡ್ಡವು
ಇದು ನಮ್ಮ ದುರಂತ
ನಾವು ನಾಗರೀಕತೆಯ
ಮುಖವಾಡ ಹಾಕಿದ್ದೇವೆ
ಆದರೆ ನಮ್ಮ ಮನಸ್ಸುಗಳಿನ್ನೂ ಶಿಲಾಯುಗದಲ್ಲೇ ಇವೆ!
(೪)
ದಿನಗಳು ಉರುಳುತ್ತವೆ
ಒಂದೊಮ್ಮೆ ನೀನೆ
ಅಂಟಿಸಿಕೊಂಡ
ಚಟಗಳನ್ನು ಕೈ ಬಿಡುತ್ತೀ,
ಮತ್ಯಾರನ್ನೋ ಮರೆಯುತ್ತೀ,
ಕನಸುಗಳ ಕನವರಿಸುವದನ್ನು ನಿಲ್ಲಿಸುತ್ತೀ,
ಕಡೆಗೆ ವಾಸ್ತವವನ್ನು ಅಪ್ಪಿಕೊಂಡು
ಬದುಕತೊಡಗುತ್ತೀ.
(೫)
ನಾವು ಟೊಳ್ಳು ಮನಸ್ಸಿನ
ದಪ್ಪ ಚರ್ಮದವರು
ನಾವು ಪಗಡೆ ಆಡುತ್ತಲೋ,
ಚೆಸ್ ಆಡುತ್ತಲೋ,
ಅಥವಾ ನಿದ್ರೆ ಮಾಡುತ್ತಲೋ
ನಮ್ಮ ದಿನಗಳನ್ನು ಕಳೆದುಬಿಡುತ್ತೇವೆ
ಆದರೂ ನಾವು
“ಈ ಮಾನವ ಜಗತ್ತಿಗೆ ಅದ್ಭುತ ಕೊಡುಗೆಗಳು”
ಎಂದು ಹೇಳಿಕೊಂಡು ತಿರುಗಾಡುತ್ತೇವೆ.
(೬)
ಕೆಲವರು ಚಂದಿರನಂತೆ
ನೋಡಲು ಸುಂದರ
ಆದರೆ ಅವರು ನಮ್ಮಿಂದ
ದೂರವಿದ್ದಷ್ಟು ಹೊತ್ತು ಮಾತ್ರ!
(೭)
ನಾವು ಯಾರನ್ನಾದರು
ಕಳೆದುಕೊಂಡಾಗ
ಬದುಕು ಅಲ್ಲಿಗೇ ನಿಲ್ಲುವದಿಲ್ಲ.
ಬದಲಿಗೆ ಅವರಿಲ್ಲದೆಯೂ
ಪ್ರವಹಿಸತೊಡಗುತ್ತದೆ,
ಆದರೆ ಬೇರೆ ರೀತಿಯಲ್ಲಷ್ಟೇ.
ಅರೇಬಿ ಮೂಲ:
ನಿಜಾರ್ ಖಬ್ಬಾನಿ
ಕನ್ನಡಕ್ಕೆ:
ಉದಯ್ ಇಟಗಿ