ನಾನು ಮಂಡ್ಯದ P.E.S ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ದಿನಗಳವು. ಆ ದಿನಗಳಲ್ಲಿ ನಾನು ’ಲಂಕೇಶ್ ಪತ್ರಿಕೆ’ಯನ್ನು ಚಾಚೂ ತಪ್ಪದೇ ಓದುತ್ತಿದ್ದೆ. ಅದರಲ್ಲಿ ಆಗಾಗ್ಗೆ ಲಂಕೇಶರು ಪುಟ್ಟಣ್ಣಯ್ಯನವರನ್ನು ಮೆಚ್ಚಿಕೊಂಡು ಅನೇಕ ಲೇಖನಗಳನ್ನು ಬರೆಯುತ್ತಿದ್ದರು. ಹಾಗೆ ನನಗೆ ಪರಿಚಯವಾದರು ಪುಟ್ಟಣ್ನಯ್ಯನವರು. ದಿನಕಳೆದಂತೆ ಅವರ ಚಿಂತನೆಗಳಿಂದ ಪ್ರಭಾವಿತನಾಗಿ ನಾನು ನನಗರಿವಿಲ್ಲದಂತೆ ಅವರೆಡೆಗೆ ಆಕರ್ಷಿತನಾಗಿದ್ದೆ. ಅವರು ಸದನದಲ್ಲಿ ಅಂಕಿ ಅಂಶಗಳ ಸಮೇತ ವಿಷಯಗಳನ್ನು ಮಂಡಿಸುತ್ತಿದ್ದ ವೈಖರಿ ನನ್ನನ್ನು ನಿಜಕ್ಕೂ ಅಚ್ಚರಿಗೊಳಿಸುತ್ತಿತ್ತು. ಎಷ್ಟೊಂದು ಜ್ಞಾನಶಕ್ತಿ ಈ ಮನುಷ್ಯನಿಗೆ! ಎಂದು ನಾನು ತಲೆದೂಗಿದ್ದೆ. ಯಾವುದೇ ವಿಷಯವನ್ನು ಕುರಿತು ನಿರರ್ಗಳವಾಗಿ ಮಾತನಾಡುವ ಕಲೆ ಅವರಿಗೆ ಒಲಿದಿತ್ತು ಎನ್ನುವದಕ್ಕಿಂತ ಒಲಿಸಿಕೊಂಡಿದ್ದರು ಎಂದು ಹೇಳುವದು ಸೂಕ್ತ. ಹೀಗಿದ್ದರೂ ಇಂಥ ಪುಟ್ಟಣ್ನಯ್ಯನವರನ್ನು ಹತ್ತಿರದಿಂದ ನೋಡಬೇಕೆಂದು ಒಮ್ಮೆಯೂ ನನಗನಿಸಿರಲಿಲ್ಲ. ಇದಕ್ಕೆ ಕಾರಣ ನನ್ನ ಸ್ವಭಾವ. ನಾನು ದೊಡ್ದ ದೊಡ್ದ ವ್ಯಕ್ತಿಗಳನ್ನು ಹತ್ತಿರಕ್ಕೆ ಹೋಗಿ ಮಾತನಾಡಿಸಿದ್ದು ತುಂಬಾ ತುಂಬಾ ಕಮ್ಮಿ..
ಹೀಗಿರುವಾಗ ಒಂದು ಸಾರಿ ಅವರನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಅಚಾನಕಾಗಿ ಒದಗಿ ಬಂತು. ಅದು ಭಾರತ ದೇಶ ಸುವರ್ಣ
ಸ್ವಾತಂತ್ರ್ಯಂತ್ಸೋವನ್ನು ಆಚರಿಸುತ್ತಿದ್ದ ಕಾಲ. ಆ ಸಂಭ್ರಮೋತ್ಸವದ ನೆನಪಿಗಾಗಿ ನಮ್ಮದೇ ಕಾಲೇಜಿನ B.Ed ವಿದ್ಯಾರ್ಥಿಗಳು ನಮ್ಮ ಕಾಲಿಜಿನ ಆಡಿಟೋರಿಯಂನಲ್ಲಿ ’ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳ ನಂತರ ಶಿಕ್ಷಣ, ಮಹಿಳೆ, ಕಾನೂನು, ಮಾಧ್ಯಮ, ಕೃಷಿ, ರಾಜಕೀಯ ಇನ್ನೂ ಮುಂತಾದ ಕ್ಷೇತ್ರಗಳ ಸ್ಥಿತಿ-ಗತಿಗಳು ಹೇಗಿವೆ?’ ಎನ್ನುವ ರಾಜ್ಯಮಟ್ಟದ ವಿಚಾರ ಸಂಕಿರಣವೊಂದನ್ನು ಹಮ್ಮಿಕೊಂಡಿದ್ದರು. ಆ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ B.Ed ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲಿ ಡಾ. ವಿಜಯಾ ಪತ್ರಿಕಾ ಸ್ವಾತಂತ್ರ್ಯ, ಡಾ. ಕಮಲಾ ಹಂಪನಾ ಮಹಿಳಾ ಸ್ವಾತಂತ್ರ್ಯ ಕುರಿತು ಮಾತನಾಡಿದರೆ ಪುಟ್ಟಣ್ಣಯ್ಯನವರು ಈಗಿನ ರಾಜಕೀಯ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಕುರಿತು ಮಾತನಾಡಿದರು. ಮಾತನಾಡುತ್ತಾ
ಅವರು “ಇವತ್ತು ಇಷ್ಟು ಜನ ಇಲ್ಲಿದ್ದೀರಿ. ನಿಮ್ಮಲ್ಲಿ ಮುತ್ನೆತ್ತಿ ಸೊಪ್ಪು ಅಂದರೆ ಎಷ್ಟು ಜನರಿಗೆ ಗೊತ್ತಿದೆ? ಅದರ ಮಹತ್ವ ಏನು?” ಅಂತಾ ಕೇಳಿದರು. ಯಾರೊಬ್ಬರು ತುಟಿ ಪಿಟಕ್ ಅನ್ನಲಿಲ್ಲ. “ನೋಡಿದ್ರಾ? ನಮ್ಮದು ಕೃಷಿ ಪ್ರಧಾನವಾದ ದೇಶ. ಆದರೂ ನಮಗೆ ನಮ್ಮ ಸಸ್ಯ ಸಂಪತ್ತಿನ ಬಗ್ಗೆ ಗೊತ್ತಿಲ್ಲ ಅಂದರೆ ನಾಚಿಗ್ಗೇಡು. ಅದಿರಲಿ. ನಾವು ತಿನ್ನುವ ಆಹಾರ ಎಲ್ಲಿಂದ ಬರುತ್ತದೆ ಎಂಬ ಪ್ರಾಥಮಿಕ ತಿಳುವಳಿಕೆ ಕೂಡಾ ಇಲ್ಲದ ಎಷ್ಟೋ ಮಕ್ಕಳು ನಮ್ಮಲ್ಲಿದ್ದಾರೆ. ಇವತ್ತು ಬೆಂಗಳೂರಿನ ಎಷ್ಟೋ ಮಕ್ಕಳಿಗೆ ನಾವು ಕುಡಿಯುವ ನೀರು ಎಲ್ಲಿಂದ ಬರುತ್ತದೆ ಅಂತಾ ಕೂಡಾ ಗೊತ್ತಿಲ್ಲ ಎನ್ನುವದು ತುಂಬಾ ನೋವಿನ ಸಂಗತಿ . ಹೀಗಿದ್ರೆ ನಮ್ಮ ಕೃಷಿ ಹಾಗೂ ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸುವದು ಹೇಗೆ ಎಂಬ ಕಳವಳ ವ್ಯಕ್ತಪಡಿಸಿದರು. ಈ ನಿಟ್ಟನಲ್ಲಿ ಇವೆಲ್ಲದರ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಶಿಕ್ಷಣವನ್ನು ನಾವು ಪ್ರಾಥಮಿಕ ಹಂತದಿಂದಲೇ ತುರ್ತಾಗಿ ಆರಂಭಿಸುವ ಅಗತ್ಯವಿದೆ” ಎಂದು ಒತ್ತಿ ಹೇಳಿದರು.
ಆನಂತರ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪುಟ್ಟಣ್ಣಯ್ಯನವರನ್ನು “ಎಲ್ಲ ಕ್ಷೇತ್ರದಲ್ಲೂ ಒಂದು ನಿವೃತ್ತಿ ವಯಸ್ಸು ಇರುವಂತೆ ರಾಜಕೀಯ ಕ್ಷೇತ್ರದಲ್ಲೂ ಯಾಕಿಲ್ಲ?” ಎಂದು ಕೇಳಿದರು. ಅದಕ್ಕೆ ಪುಟ್ಟಣ್ಣಯ್ಯನವರು “ಹೌದು, ಅದು ಇರಬೇಕು. ಆದರೆ ಇಲ್ಲ. ಇದ್ದರೆ ಹೊಸಬರಿಗೆ ಅವಕಾಶವಾಗುತ್ತೆ” ಎಂದು ಹೇಳಿದರು. ಅಷ್ಟಕ್ಕೆ ಸುಮ್ಮನಿರದ ವಿದ್ಯಾರ್ಥಿಗಳು “ನೀವು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ. ಇದರ ಬಗ್ಗೆ ಆಡಳಿತ ಸರಕಾರದ ಗಮನ ಸೆಳೆದು ಒಂದು ವಿಧೇಯಕವನ್ನು ಮಂಡಿಸಲು ಒತ್ತಾಯಿಸಿ” ಎಂದು ವಿದ್ಯಾರ್ಥಿಗಳು ಅವರ ಮೇಲೆ ಒತ್ತಡವನ್ನು ಹೇರಲು ಪ್ರಯತ್ನಿಸಿದರು. ಆಗ ಪುಟ್ಟಣ್ನಯ್ಯನವರು “ಆಯ್ತು. ಪ್ರಯತ್ನಿಸುತ್ತೇನೆ.” ಎಂದು ಹೇಳಿದರು. ಆದರೆ ಕಾವೇರಿ ಹೋರಾಟ ಮತ್ತು ರೈತರ ಸಮಸ್ಯೆಗಳ ಎದುರು ಪುಟ್ಟಣ್ನಯ್ಯನವರಿಗೆ ಈ ವಿಷಯ ಕ್ಷುಲ್ಲಕವೆನಿಸಿತೇನೋ ವಿಧಾನಸಭೆಯಲ್ಲಿ ಈ ವಿಷಯವನ್ನು ಅವರು ಪ್ರಸ್ತಾಪಿಸಿದಂತೆ ಕಾಣಲಿಲ್ಲ. ಅಥವಾ ಪ್ರಸ್ತಾಪಿಸಿದರೂ ಅದು ಸುದ್ದಿಯಾಗಲೇ ಇಲ್ಲ.
ಇನ್ನೊಬ್ಬ ವಿದ್ಯಾರ್ಥಿ “ಒಬ್ಬ ರಾಜಕಾರಿಣಿಯಾಗಿ ಕೆಳಮಟ್ಟದಿಂದ ಮೇಲ್ಮಟ್ಟಿನವರೆಗೆ ಈಗಿರುವ ಭೃಷ್ಟಾಛರವನ್ನು ನಿರ್ಮೂಲ ಮಾಡಲು ತಾವು ಯಾವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಯಸುತ್ತೀರಿ?” ಎಂಬ ಕಟುವಾದ ಪ್ರಶ್ನೆಯನ್ನು ಕೇಳಿದ. ಅದಕ್ಕೆ ಪುಟ್ಟಣ್ಣಯ್ಯನವರು ತಕ್ಷಣ ಅಷ್ಟೇ ಕಟುವಾಗಿ “ನಾವು ಯಾರ್ಯಾರು ಭೃಷ್ಟಾಚಾರ
ಮಾಡಿದ್ದೇವೋ ಅವರೆಲ್ಲಾ ಸ್ವಇಚ್ಛೆಯಿಂದ ವಿಷ ತಗೊಂಡು ಸತ್ತುಹೋಗಿಬಿಡೋಣ. ಅದೊಂದೇ
ದಾರಿ ಈಗ ಉಳಿದಿರೋದು. ಅದು ಬಿಟ್ಟರೆ ಬೇರೆ ದಾರಿ ಕಾಣುತ್ತಿಲ್ಲ.”
ಎಂದು ನೇರಾನೇರವಾಗಿ ಹೇಳಿದರು.
ಆವತ್ತು ಅವರ ಮಾತಿನಲ್ಲಿ ಅಸಹಾಯಕತೆ ಮತ್ತು ಹತಾಶೆಗಳೆರೆಡೂ ಎದ್ದು ಕಾಣುತ್ತಿದ್ದವು.
ಯಾಕೆಂದರೆ ಭೃಷ್ಟಾಚಾರ ದಿನದಿಂದ ದಿನಕ್ಕೆ ಎಲ್ಲೆಡೆ ತನ್ನ ಬೇರುಗಳನ್ನು ಚಾಚುತ್ತಾ
ಹೆಮ್ಮರವಾಗಿ ಬೆಳೆದು ನಿಂತಿದೆಯೇ ಹೊರತು ಕಡಿಮೆಯೇನೂ ಆಗಿಲ್ಲ.
ಡಿ.ಎಮ್. ನಂಜುಂಡಸ್ವಾಮಿಯವರ ಗರಡಿಯಲ್ಲಿ ಪಳಗಿದ್ದ ಪುಟ್ಟಣ್ಣಯ್ಯನವರು ಅವರಿಬ್ಬರ ಮಧ್ಯ ವೈಚಾರಿಕ
ಭಿನ್ನಾಭಿಪ್ರಾಯಗಳೇನಿದ್ದರೂ ಮಿಕ್ಕೆಲ್ಲ ವಿಷಯಗಳಲ್ಲಿ ಹೆಚ್ಚುಕಮ್ಮಿ ಅವರನ್ನೇ ಹೋಲುತ್ತಿದ್ದರು ಎಂದರೆ
ತಪ್ಪಾಗಲಾರದು. ಅದೇ ವ್ಯಂಗ್ಯ, ಅದೇ ಮೊನಚು,
ಅದೇ ನಿಖರತೆ, ಅದೇ ಪ್ರಶ್ನಿಸುವ ಮನೋಭಾವನೆಯೊಂದಿಗೆ ಮಾತಿನ
ಛಡಿಯೇಟು ಬೀಸುತ್ತಿದ್ದರು. ನಂಜುಂಡಸ್ವಾಮಿಯವರ ನಂತರ ರೈತ ಸಂಘದ ಶಕ್ತಿಯಾಗಿ,
ಸ್ಪೂರ್ತಿಯಾಗಿ ಪುಟ್ಟಣ್ಣಯ್ಯನವರು ಆ ಸ್ಥಾನವನ್ನು ತುಂಬಿದ್ದರು. ಆದರೆ ಪುಟ್ಟಣ್ನಯ್ಯನವರು ಈಗ ಇಲ್ಲ. ಈಗ ಆ ಸ್ಥಾನವನ್ನು ಯಾರು
ತುಂಬುತ್ತಾರೆ ಎನ್ನುವದೇ ನಮ್ಮ ಮುಂದಿರುವ ದೊಡ್ದ ಪ್ರಶ್ನೆ..
-ಉದಯ್ ಇಟಗಿ