ನಿನ್ನೆ ಸಂಜೆ ಜೆ.ಪಿ.ನಗರದ ವ್ಯೋಮ ಸ್ಟುಡಿಯೋಕ್ಕೆ ನಾನು ಮತ್ತು ಬಸವನಗುಡಿಯ ಕಾಲೇಜಿನಲ್ಲಿ ನನ್ನ ಸಹದ್ಯೋಗಿಯಾಗಿದ್ದ ಅಕ್ಕ Sandhya Ganaganur ಇಬ್ಬರೂ 'ಷೇಕ್ಸ್ಪಿಯರನ ಶ್ರೀಮತಿ' ನಾಟಕ ನೋಡಲು ಹೋಗಿದ್ದೆವು. ವ್ಯೋಮ ಈ ಮೊದಲು ನೋಡಿರದ ಜಾಗವಾದ್ದರಿಂದ ಬೆಳಿಗ್ಗೆಯೇ ಲಕ್ಷ್ಮೀಚಂದ್ರಶೇಖರ್ ಮೇಡಂಗೆ ಕರೆ ಮಾಡಿ ಲೊಕೇಷನ್ ಕೇಳಿದ್ದೆ. ಅವರು ಸಂತೋಷದಿಂದ ವಿಳಾಸ ತಿಳಿಸಿದರು. ನಾಟಕ ರಚಿಸಿದ ಗೆಳೆಯ Uday Itagi ಕೂಡ ಟಿಕೆಟ್ಗಾಗಿ ಸಂಪರ್ಕಿಸಲು ನಾಟಕದ ನಿರ್ದೇಶಕರಾದ ವಿಶ್ವರಾಜ್ ಪಾಟೀಲ್ ಅವರ ನಂಬರ್ ಕೊಟ್ಟರು. ನಟಿ, ನಿರ್ದೇಶಕ ಮತ್ತು ನಾಟಕಕಾರರೊಂದಿಗೆ ಮಾತಾಡಿ ಆಮೇಲೆ ನಾಟಕ ನೋಡಲು ಹೋಗುತ್ತಿರುವ ಕುರಿತು ನಾನು ಮತ್ತು ಸಂಧ್ಯಾ ಮೇಡಂ ತರಲೆ ಮಾಡಿಕೊಂಡು ನಗುತ್ತಾ ಓಲಾ ಆಟೋದಲ್ಲಿ ವ್ಯೋಮ ತಲುಪಿದೆವು.
ಆಟೋ ಇಳಿದು ನೋಡಿದರೆ ನನ್ನ ಪ್ಯಾಂಟಿನ ಹಿಬ್ಬಂದಿ ಪೂರಾ ಒದ್ದೆ! ಆಟೋ ಹತ್ತುವಾಗ ಸೀಟಿನಲ್ಲಿ ನೀರಿರಲಿಲ್ಲ. ಹರಿದ ಸೀಟಿನ ಕುಷನ್ ಒದ್ದೆಯಾಗಿದ್ದರ ಪರಿಣಾಮ. ಐದು ಮುಕ್ಕಾಲಾಗಿದ್ದರಿಂದ ಮನೆಗೆ ಹೋಗಿ ಬಟ್ಟೆ ಬದಲಾಯಿಸಿ ಬರಲು ಸಮಯವಿಲ್ಲ, ನಾಟಕದ ಸಮಯ ಆರಕ್ಕೆ. ಏನಾಗಲ್ಲ ಬಿಡು ಅಂತ ಸಮಾಧಾನ ಮಾಡಿಕೊಂಡು ವ್ಯೋಮದ ಮಹಡಿಯೇರಿದರೆ ಅಲ್ಲಿ ಯಾರೂ ಇರಲಿಲ್ಲ. ಥಿಯೇಟರಿನ ಬಾಗಿಲು ತಳ್ಳಿಕೊಂಡು ಒಳಹೋದಾಗ ನಿರ್ದೇಶಕರು ಬಂದು ಹತ್ತು ನಿಮಿಷವಿರಿ, ಟಿಕೇಟ್ ಕೊಡುತ್ತೇವೆಂದರು. ಹೊರಗಡೆ ಕಾದಿದ್ದಾಯ್ತು. ಆರುಗಂಟೆಗೆ ಟಿಕೇಟು ಕೊಟ್ಟರಾದರೂ ನಮ್ಮಿಬ್ಬರನ್ನು ಬಿಟ್ಟರೆ ಯಾರೂ ಬಂದೇ ಇಲ್ಲ! ನಾಟಕ ಕ್ಯಾನ್ಸಲ್ ಆಗಬಹುದು, ಇಬ್ಬರಿಗೇ ನಾಟಕ ಮಾಡುತ್ತಾರಾ, ಮಾಡಿದರೆ ಹೇಗೂ ಎಂಟಕ್ಕೆ ಮತ್ತೊಂದು ಪ್ರದರ್ಶನವಿದೆಯಲ್ಲಾ ಕಾದು ನೋಡಿದರಾಯ್ತೆಂದು ನಾವಿಬ್ಬರೂ ಮಾತಾಡುತ್ತ ನಿಂತಿರುವಾಗ 'ಒಳಗೆ ಬನ್ನಿ' ಎಂದು ಕರೆದರು. ನಾನು ಸಂಕೋಚದಿಂದ 'ಸರ್ ಇನ್ನೊಂದು ಪ್ರದರ್ಶನಕ್ಕೆ ಕಾಯ್ತೇವೆ, ಜನ ಇಲ್ಲವಲ್ಲ' ಎಂದೆ. ಪರವಾಗಿಲ್ಲ ಕೂತುಕ್ಕೊಳ್ಳಿ ಅಂದವರೆ ನಾಟಕ ಶುರು ಮಾಡೇ ಬಿಟ್ಡರು.
ಏಕವ್ಯಕ್ತಿ ಪ್ರದರ್ಶನ. ಲಕ್ಷ್ಮೀಚಂದ್ರಶೇಖರ್ ಅವರು ವೇದಿಕೆ ಪ್ರವೇಶಿಸಿದಾಗ ನಮ್ಮಿಬ್ಪಾತ್ರವೊಂದನ್ನು ವ ವರ್ತಮಾನದಯಾರೂ ಇಲ್ಲವಲ್ಲ, ಕಲಾವಿದೆಗೆ ಹೇಗನ್ನಿಸಬಹುದು?" ಎಂದು ತೀರಾ ಕಸಿವಿಸಿ ಕಾಡಿತು. ಆದರೆ ಲಕ್ಷ್ಮೀ ಮೇಡಂ ಅದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೆ ಎದುರಿಗೆ ಸಾವಿರ ಜನ ಪ್ರೇಕ್ಷಕರಿದ್ದರೆ ಎಂಬ ಭಾವದಲ್ಲೇ ಅದ್ಭುತವಾಗಿ ಷೇಕ್ಸ್ಪಿಯರನ ಶ್ರೀಮತಿಯನ್ನು ನಮ್ಮ ಎದೆಗಿಳಿಸಿದರು. ಕಲಾವಿದರಿಗೆ ಸಂಖ್ಯೆ ಮುಖ್ಯವಲ್ಲ, ನಾಟಕ ಮಾಡಿ ಮುಗಿಸುವುದಷ್ಟೇ ಮುಖ್ಯವೆಂಬುದನ್ನು ಸಾಬೀತುಪಡಿಸಿದರು. ಅವರ ಅಭಿನಯ ಅದೆಷ್ಟು ಸೊಗಸಿನದೆಂದರೆ ನಾಟಕ ಮುಗಿಯುವವರೆಗೂ ಅಲ್ಲಿರುವುದು ನಾವಿಬ್ಬರೇ ಎಂಬ ಭಾವ ಕಿಂಚಿತ್ತಾದರೂ ನೆನಪಾಗದಂತೆ ಷೇಕ್ಸ್ಪಿಯರ್ ಕಾಲಕ್ಕೆ ಹೋಗಿಬಿಟ್ಟಿದ್ದೆವು.
ಐದಾರು ಶತಮಾನಗಳ ಹಿಂದಿನ ಕಾಲದ ಪಾತ್ರವೊಂದನ್ನು ವರ್ತಮಾನದಲ್ಲಿ ಕಾಣಿಸುವುದು ಸುಲಭದ ಮಾತಲ್ಲ. ಉದಯ್ ಇಟಗಿಯವರ ಸೃಷ್ಟಿಯಲ್ಲಿ ಅದು ಲೀಲಾಜಾಲವಾಗಿ ಮೂಡಿದೆ. ಈ ಹಿರಿಯ ಕಲಾವಿದೆಗೆ ವಯೋಸಹಜವಾದ ಚಿಕ್ಕಪುಟ್ಟ ತೊಂದರೆಗಳಿರದೆ? ಕಾಲುನೋವು, ಮಂಡಿನೋವು, ಬೆನ್ನುನೋವು? ಯಾವುದೂ ಲಕ್ಷ್ಮೀಚಂದ್ರಶೇಖರ್ ಅವರ ನಟನೆಯಲ್ಲಿ ಕಾಣಿಸದು. ಅವರ ನೆನಪಿನ ಶಕ್ತಿಕೂಡ ಬೆರಗು ಮೂಡಿಸುವಂಥದ್ದು. ಇಡೀ ನಾಟಕವನ್ನು ಒಬ್ಬರೇ ಅಭಿನಯಿಸಿ ತೋರಲು ಎಂಥ ಎನರ್ಜಿ ಬೇಕು! ಜೊತೆಗೆ ವಿಭಿನ್ನ ಸನ್ನಿವೇಶಗಳಿಗೆ ತಕ್ಕ ರಂಗಪರಿಕರಗಳನ್ನು ಬಳಸಿಕೊಳ್ಳುತ್ತಾ, ಸಂದರ್ಭಕ್ಕೆ ತಕ್ಕ ಉಡುಪು ಧರಿಸುತ್ತಾ ಅವರು ಅಭಿನಯಿಸುವುದನ್ನು ನೋಡುವುದೇ ಚಂದ. ಲಕ್ಷ್ಮೀಯವರ ಡೈಲಾಗ್ ಡೆಲಿವರಿ, ಪಂಚಿಂಗ್ ಡೈಲಾಗ್ ಅವರಿಗೇ ಮಾತ್ರ ಸಾಧ್ಯವಾಗುವಂತದ್ದು.
ನಾಟಕದ ವಸ್ತು ಅಪರೂಪದ್ದು. ಜಗತ್ತಿನ ಶ್ರೇಷ್ಠ ನಾಟಕಕಾರನೊಬ್ಬನ ಪತ್ನಿಯ ಅಂತರಂಗವನ್ನು ತೆರೆದು ತೋರಲೆಂದೇ ರಚಿಸಿದ ನಾಟಕವಿದು. ಷೇಕ್ಸ್ಪಿಯರನನ್ನು ಕೆಳಗಿಳಿಸದೆ, ಅವನ ಹೆಂಡತಿಯನ್ನು ಮೇಲಕ್ಕೆತ್ತುವ ಆ ಮೂಲಕ ಷೇಕ್ಸ್ಪಿಯರನ ಶ್ರೀಮತಿಯ ಬಗ್ಗೆ ಇರುವ ಅಪವಾದಗಳಿಂದ ಆಕೆಯನ್ನು ಪಾರುಮಾಡುವ ಪ್ರಯತ್ನದಲ್ಲಿ ಉದಯ್ ಇಟಗಿ ಗೆದ್ದಿದ್ದಾರೆ.
ನಾಟಕದುದ್ದಕ್ಕೂ ನಾವು ಓದಿದ ನಾಟಕಗಳಲ್ಲಿದ್ದ ಷೇಕ್ಸ್ಪಿಯರನ ಬೊಕ್ಕತಲೆಯ ನಗುಮುಖ ನಮ್ಮನ್ನು ಆವರಿಸಿಕೊಳ್ಳುತ್ತಲೇ ಹೋಗುತ್ತದೆ. ಲೋಕದ ಕಣ್ಣಿಗೆ ದೊಡ್ಡವರೆನಿಸಿಕೊಂಡವರ ಸಣ್ಣತನಗಳೆಲ್ಲ ಚೆನ್ನಾಗಿ ಅರ್ಥವಾಗುವುದು ಅವರವರ ಹೆಂಡಂತಿಯರಿಗೆ ತಾನೆ? ಷೇಕ್ಸ್ಪಿಯರನ ಶ್ರೀಮತಿ ಕೂಡ ಎಂಟು ವರ್ಷಕ್ಕೆ ತನ್ನಿಂದ ಚಿಕ್ಕವನಾದ ಗಂಡನ ಜೊತೆ ಬಾಳಿದ ನೆನಪುಗಳ ಜೊತೆ, ಲೋಕಕ್ಕೆ ಕಾಣದ ಆತನ ಮುಖವನ್ನು ಪರಿಚಯಿಸುತ್ತಾ ಹೋಗುತ್ತಾಳೆ. ಸಾಹಿತ್ಯದ ಗಂಧಗಾಳಿಯಿಲ್ಲದ ಈ ಹೆಣ್ಣಿಗೆ ಷೇಕ್ಸ್ಪಿಯರನ ರೂಪಕ, ಪ್ರತಿಮೆ, ಸಾನೆಟ್, ನೂರಾರು ಪಾತ್ರಗಳಿಗಿಂತ ಮನೆವಾರ್ತೆಯ ಬವಣೆಯನ್ನು ನಿಭಾಯಿಸುವ ಸವಾಲುಗಳು ಮುಖ್ಯ. ಗಂಡನಿಂದ ನಯಾಪೈಸೆ ಹುಟ್ಟದಿರುವಾಗ ಮೂರು ಮಕ್ಕಳ, ಅತ್ತೆ-ಮಾವರ ಆರೈಕೆಗಾಗಿ ಬ್ರೆಡ್, ಚೀಸ್, ವೈನ್ ತಯಾರಿಸಿ, ಮಾರಾಟ ಮಾಡಿ ಬಂದ ಹಣದಲ್ಲಿ ಕುಟುಂಬವನ್ನು ಜತನದಿಂದ ಕಾಯ್ದುಕೊಳ್ಳುವ, ಗಂಡನ ಸಲಿಂಗಕಾಮ,ಕಟ್ಟಿಕೊಬದ್ಧತೆಗಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ಬದುಕಿನ ರಥವನ್ನೆಳದ ಆಕೆಯ ವ್ಯಕ್ತಿತ್ವವನ್ನು ಲಕ್ಷ್ಮೀಚಂದ್ರಶೇಖರ್ ಅದ್ಭುತವಾಗಿ ಕಟ್ಟಿಕೊಟ್ಟರು. ನಮ್ಮ ಎಷ್ಟೋ ಜನ ಲೇಖಕರ, ಕಲಾವಿದರ ಹೆಂಡತಿಯರ ಬವಣೆ ಕೂಡ ಇದೇ ಬಗೆಯದು. ನನಗಂತೂ ಸೀರೆ ವ್ಯಾಪಾರ ಮಾಡಿ, ಸಂಸಾರವನ್ನು ದಡ ಮುಟ್ಟಿಸಿದ ಇಂದಿರಾ ಲಂಕೇಶ್ ತುಂಬಾ ನೆನಪಿಗೆ ಬಂದರು. ಅವರ 'ಹುಳಿಮಾವಿನಮರ ಮತ್ತು ನಾನು' ಎಂಬ ಆತ್ಮಕಥನದಲ್ಲಿ ಇದೇ ಬಗೆಯ ವಿವರಗಳಿವೆ.
ನಾಟಕದ ರಂಗಸಜ್ಜಿಕೆ, ವಸ್ತ್ರ ವಿನ್ಯಾಸ, ಬೆಳಕು, ನಿರ್ದೇಶನಗಳು ನಮ್ಮನ್ನು ಐದಾರು ಶತಮಾನಗಳ ಹಿಂದಕ್ಕೆ ಕರೆದೊಯ್ಯುವಲ್ಲಿ ಪೂರಕವಾಗಿದ್ದವು. ಷೇಕ್ಸ್ಪಿಯರನ ಪಕ್ಕದ ಮನೆಯವರು ನಾವು, ನಮ್ಮೊಡನೆ ಷೇಕ್ಸ್ಪಿಯರನ ಪತ್ನಿ ತನ್ನ ಕುಟುಂಬದ ಕತೆಯನ್ನು ಬಿಚ್ಚಿಡುತ್ತಿದ್ದಾಳೇನೋ ಎಂಬ ಭಾವ ಮನಸ್ಸನ್ನು ಆವರಿಸಿಬಿಟ್ಟಿತ್ತು.
ನಾಟಕ ಮುಗಿದಾಕ್ಷಣ ಮೇಡಂ ಜೊತೆ ಮಾತನಾಡಿದೆವು. ಮೆಚ್ಚುಗೆಯ, ಸಂಕೋಚದ ನುಡಿಗಳನ್ನು ಅಡಿದೆವು. "ಅಯ್ಯೋ ಏನ್ಮಾಡಕ್ಕಾಗುತ್ತೆ, ನಾಟ್ಕಕ್ಕೆ ಜನ ಬರೋದನ್ನೆ ಬಿಟ್ಟಿದ್ದಾರೆ, ಹೋಗ್ಲಿಬಿಡಿ, ನೀವಿಬ್ರಾದ್ರೂ ಬಂದ್ರಲ್ಲ" ಎಂದು ವಿಷಾದದ ನಗೆ ನಕ್ಕರು. ಮನೆಗೆ ಬಂದಮೇಲೂ ಕೇವಲ ಇಬ್ಬರ ಮುಂದೆ ನಾಟಕ ಪ್ರದರ್ಶಿಸಿದ ಈ ಹಿರಿಯ ಕಲಾವಿದೆಯ ಬದ್ಧತೆಯನ್ನು ಕಂಡು ಅಪಾರ ಗೌರವ ಮೂಡಿತು. ಅವರಿಗೊಂದು ದೊಡ್ಡ ನಮಸ್ಕಾರ. ಉದಯ್ ಇಟಗಿ, ವಿಶ್ವರಾಜ್ ಪಾಟೀಲ್ ಅವರಿಗೆ ಅಭಿನಂದನೆಗಳು.
-ಡಾ.ಎಚ್.ಎಸ್. ಸತ್ಯನಾರಾಯಣ