Demo image Demo image Demo image Demo image Demo image Demo image Demo image Demo image

ಗಡಾಫಿ ಮಾಡಿದ ಒಂದಷ್ಟು ತಪ್ಪುಗಳು ಭಾಗ-1

  • ಮಂಗಳವಾರ, ಫೆಬ್ರವರಿ 09, 2016
  • ಬಿಸಿಲ ಹನಿ
  • ಲಿಬಿಯಾದಲ್ಲಿ ಕ್ರಾಂತಿ ಎದ್ದಾಗಿನಿಂದ ನಾನು ಗಡಾಫಿಯ ಬಗ್ಗೆ ಬರೆಯುತ್ತಲೇ ಬಂದಿದ್ದೇನೆ. ಅವನಿದ್ದ ಲಿಬಿಯಾದ ಬಗ್ಗೆ ಹಾಗೂ ಅವನ ನಂತರದ ಲಿಬಿಯಾದ ಬಗ್ಗೆ ನಾ ಕಂಡಂತೆ ನೇರಾನೇರ ಬರಿದಿದ್ದೇನೆ. ಹಾಗೆ ನಾನು ಆತನ ಬಗ್ಗೆ ಬರೆದು ಆನಲೈನ್ ಪತ್ರಿಕೆಗಳೂ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಮತ್ತು ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದರೆ ಅವನ್ನು ಓದಿದ ಬಹಳಷ್ಟು ಜನ ಗಡಾಫಿಯ ಕುರಿತಂತೆ ನನ್ನನ್ನು ಹೀಗೆ ಕೇಳಿದ್ದಾರೆ. “ನೀವು ಗಡಾಫಿಯ ಬೆಂಬಲಿಗರೇ? ಅಂದರೆ ನೀವು ಸರ್ವಾಧಿಕಾರವನ್ನು ಬೆಂಬಲಿಸುತ್ತೀರಾ? ಅವನು ನಿಜಕ್ಕೂ ಅಷ್ಟು ಒಳ್ಳೆಯವನಾಗಿದ್ದನೆ? ಹಾಗಾದರೆ ನಿಮ್ಮ ಪ್ರಕಾರ ಗಡಾಫಿ ಯಾವ ತಪ್ಪುಗಳನ್ನೂ ಮಾಡಿಲ್ಲವೇ?” ಇನ್ನೂ ಮುಂತಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಆಗೆಲ್ಲಾ ನಾನವರಿಗೆಖಂಡಿತ ನಾನು ಸರ್ವಾಧಿಕಾರದ ಬೆಂಬಲಿಗನಲ್ಲ. ಆದರೆ ಸ್ವಂತ ಲಾಭಕ್ಕಾಗಿ ತಮಗೆ ತಲೆ ಬಾಗದ ಸರ್ವಾಧಿಕಾರಿಗಳ ಬಗ್ಗೆ ಏನೇನೋ ಕಥೆಗಳನ್ನು ಕಟ್ಟಿ, ಜನರ ದಿಕ್ಕು ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪಶ್ಚಿಮದವರ ಧೋರಣೆಯನ್ನು ಖಂಡಿಸುತ್ತೇನೆ. ಒಂದು ವೇಳೆ ಅವರು ಸರ್ವಾಧಿಕಾರವನ್ನು ಕಿತ್ತೊಗೆಯುವದಾದರೆ ಎಲ್ಲ ಕಡೆ ಕಿತ್ತೊಗೆಯಬೇಕು. ಅದು ಬಿಟ್ಟು ಜೋರ್ಡಾನ್, ಖತಾರ್, ಸೌದಿ, ಯೇಮನ್, ಬಹ್ರೇನ್, ದುಬೈ ಮುಂತಾದ ರಾಷ್ಟ್ರಗಳಲ್ಲಿನ ಸರ್ವಾಧಿಕಾರವನ್ನು ಯಾಕೆ ಬೆಂಬಲಿಸುತ್ತಾರೆ? ಯಾಕೆಂದರೆ ಅವರೆಲ್ಲಾ ಅವರಿಗೆ ತಲೆಬಾಗುತ್ತಾರೆ ಹಾಗೂ ಅವರಿಂದ ಅವರಿಗೆ ಸಾಕಷ್ಟು ಲಾಭವಿದೆ. ಹಾಗಾಗಿ ಸುಮ್ಮನಿದ್ದಾರೆ. ಮೇಲಾಗಿ ಆಫ್ರಿಕಾ ಖಂಡದ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಸ್ಥಾಪಿತವಾದರೆ ಅದರ ಹೆಸರಿನಲ್ಲಿ ಸುಲಭವಾಗಿ ಒಳಗೆ ನುಗ್ಗಿ ಅಲ್ಲಿಯ ಅಪಾರ ನೈಸರ್ಗಿಕ ಸಂಪತ್ತನ್ನು ದೋಚುಬಹುದು.” ಎಂದು ಹೇಳಿ ಸುಮ್ಮನಾಗಿದ್ದೆ. ತದನಂತರದಲ್ಲಿ ಅವರು ಕೇಳಿದ್ದು ಸರಿಯಾಗಿದೆ. ನಾನೇಕೆ ಒಮ್ಮೆ ಇದರ ಬಗ್ಗೆ ಬರೆಯಬಾರದು ಎಂದು ಯೋಚಿಸಿ ಸಾರಿ ನಾನು ಗಾಡಾಫಿ ಮಾಡಿದ ತಪ್ಪುಗಳ ಬಗ್ಗೆ ಬರೆಯುತ್ತಿದ್ದೇನೆ. ಹಾಗೆಂದೇ ನಾನು ನನಗೆ ಪರಿಚಯವಿರುವ ಅನೇಕ ಪ್ರಜ್ಞಾವಂತ ಲಿಬಿಯನ್ ಬೆನ್ಹತ್ತಿ ಅವರಿಂದ ಮಾಹಿತಿ ಸಂಗ್ರಹಿಸಿದೆ. ಅವರ ಪ್ರಕಾರ ಅವನು ಮಾಡಿದ ತಪ್ಪುಗಳೇನು? ಅವುಗಳಲ್ಲಿ ಅವನ ವ್ಯಯಕ್ತಿಕ ತಪ್ಪುಗಳೆಷ್ಟು? ಅವನ ರಾಜಕೀಯ ತಪ್ಪುಗಳೆಷ್ಟು? ಅವನ ಅವನತಿಗೆ ಕಾರಣವಾದ ತಪ್ಪುಗಳೆಷ್ಟು? ಅಂತರಾಷ್ಟ್ರಿಯ ಸಮುದಾಯ ಗುರುತಿಸಿದ ತಪ್ಪುಗಳೆಷ್ಟು? ಹಾಗೂ ಅವನ ಆಡಳಿತದಲ್ಲಿದ್ದ ಲೋಪದೋಷಗಳಾವವು? ಎಲ್ಲ ವಿಷಯಗಳ ಬಗ್ಗೆ ಸಾರಿ ಇಲ್ಲಿ ವಿಶ್ಲೇಷಿಸುತ್ತಿದ್ದೇನೆ.

    ಆಫ್ರಿಕಾ ಖಂಡವನ್ನು ಒಗ್ಗೂಡಿಸುವ ಅದಮ್ಯ ಬಯಕೆ: ಗಡಾಫಿಗೆ 1999 ರಿಂದಾಚೆ ಇಡಿ ಆಫ್ರಿಕಾ ಖಂಡವನ್ನು ಒಂದುಗೂಡಿಸಬೇಕು ಎನ್ನುವ ಅದಮ್ಯ ಬಯಕೆಯುಂಟಾಯಿತು. ಹಾಗೆ ನೋಡಿದರೆ ಇದಕ್ಕೂ ಮೊದಲು ಅರಬ್ ರಾಷ್ಟ್ರಗಳನ್ನು ಒಂದುಗೂಡಿಸಿ ಅರಬ್ ರಾಷ್ಟ್ರಗಳ ಒಕ್ಕೂಟವನ್ನು ಸ್ಥಾಪಿಸಬೇಕೆಂದುಕೊಂಡಿದ್ದನು. ಆದರೆ ಅದಕ್ಕೆ ಅವನು ನಿರೀಕ್ಷಿಸಿದಷ್ಟು ಅರಬ್ ರಾಷ್ಟ್ರಗಳ ನಾಯಕರಿಂದ ಬೆಂಬಲ ಸಿಗಲಿಲ್ಲ. ಆನಂತರ ಅವನು ಆಫ್ರಿಕಾದ ರಾಷ್ಟ್ರಗಳನ್ನು ಒಗ್ಗೂಡಿಸಿ ಅದಕ್ಕೆ ಅಧಿಪತಿಯಾಗಬೇಕೆಂದು ಬಯಸಿದನು. ಹಾಗೆ ನೋಡಿದರೆ ಈ ಬಯಕೆಯಿದ್ದುದು ಆಫ್ರೋ-ಅಮೆರಿಕನ್ನಾದ ಮಾರ್ಕಸ್ ಗ್ರೇವಿ ಎಂಬಾತನಿಗೆ. ಆತನೇ ಮೊಟ್ಟಮೊದಲಿಗೆ ”United States of Africa” ಎಂಬ ಪದವನ್ನು ಹುಟ್ಟುಹಾಕಿದ. ಆದರೆ ಗಡಾಫಿ ಅವನಿಗಿಂತ ಒಂದು ಹೆಜ್ಜೆ ಮುಂದೆ ಹೋದನು. ಆತ ಇಡಿ ಆಫ್ರಿಕಾ ಖಂಡವನ್ನು ಒಗ್ಗೂಡಿಸುವದಲ್ಲದೆ ಅಲ್ಲಿ ಒಂದೇ ತೆರದ ಬಂಗಾರದ ನಾಣ್ಯವನ್ನು ಚಲಾವಣೆಗೆ ತಂದು ಅದರ ಮೂಲಕವೇ ಇಡಿ ಆಫ್ರಿಕಾ ಖಂಡದ ವ್ಯಾಪಾರ ವಹಿವಾಟವನ್ನು ನಡೆಸಬೇಕೆಂದುಕೊಂಡಿದ್ದ. ಒಂದುವೇಳೆ ಅವನಂದುಕೊಂಡಂತೆ ಬಂಗಾರದ ದಿನಾರನ್ನು ಚಲಾವಣೆಗೆ ತಂದಿದ್ದರೆ ಆಫ್ರಿಕಾ ಖಂಡದ ಬಹುತೇಕ ರಾಷ್ಟ್ರಗಳು ತಮ್ಮ ಸಂಪನ್ಮೂಲಗಳಿಗೆ ತಕ್ಕ ಬೆಲೆಯನ್ನು ಕೇಳಿ ಬಹಳ ಬೇಗನೆ ಶ್ರೀಮಂತವಾಗಿ ಸಾಲದಿಂದ ಮತ್ತು ಬಡತನದಿಂದ ಹೊರಬರುವ ಸಾಧ್ಯತೆಗಳಿದ್ದವು. ಮಾತ್ರವಲ್ಲ ಬರೀ ಬಂಗಾರದ ದಿನಾರಿನಲ್ಲಿ ವ್ಯಾಪಾರ ವಹಿವಾಟು ನಡೆದುಹೋಗಿದ್ದರೆ ಅಷ್ಟಾಗಿ ಚಿನ್ನವನ್ನು ಹೊಂದಿರದ ಅಮೆರಿಕಾ, ಬ್ರಿಟನ್ ಮತ್ತು ಯೂರೋಪ್ ರಾಷ್ಟ್ರಗಳು ಚಿನ್ನದ ನಾಣ್ಯಕ್ಕೆ ತಕ್ಕ ಬೆಲೆಯನ್ನು ಕೊಡಲಾಗದೆ ದಿವಾಳಿಯೇಳುವ ಸಂಭವವಿತ್ತು.
    ಮೇಲಾಗಿ ಗಡಾಫಿಯ ಯೋಜನೆಗೆ ಆಫ್ರಿಕಾದ ಖಂಡದ ಬಹಳಷ್ಟು ನಾಯಕರುಗಳ ವಿರೋಧವಿತ್ತು. ಏಕೆಂದರೆ ಒಂದು ಸಾರಿಆಫ್ರಿಕನ್ ಯೂನಿಯನ್ಅಂತಾದ ಮೇಲೆ ಈಗಾಗಲೇರಾಜರುಗಳ ರಾಜಎನಿಸಿಕೊಂಡಿದ್ದ ಗಡಾಫಿಯೇ ಅದಕ್ಕೆ ನಾಯಕನಾಗುತ್ತಾನೆ ಹಾಗೂ ಆತನ ಪ್ರಭಾವಿ ವ್ಯಕ್ತಿತ್ವದ ಮುಂದೆ ತಮ್ಮ ವ್ಯಕ್ತಿತ್ವ ಕಳಾಹೀನಗೊಳ್ಳಬಹುದು, ತಮ್ಮ ಅಸ್ಥಿತ್ವಕ್ಕೆ ಧಕ್ಕೆ ಬರಬಹುದು, ಹಾಗೂ ತಾವು ತೆಗೆದುಕೊಂಡ ನಿರ್ಧಾರಗಳನ್ನು ಈತ ತಳ್ಳಿಹಾಕಬಹುದು ಎಂಬ ಭಯ ಅವರಿಗಿತ್ತು. ಹಾಗಾಗಿ ಅವರು ಆಫ್ರಿಕನ್ ಯೂನಿಯನ್ ಬದಲಿಗೆ ಎಕನಾಮಿಕ್ ಕಮ್ಯೂನಿಟಿ ಆಫ್ ಆಫ್ರಿಕಾವನ್ನು ಸ್ಥಾಪಿಸುವದರಲ್ಲಿ ವಿಶೇಷ ಒಲವು ತೋರಿಸಿದ್ದರು. ಆದರೆ ಗಡಾಫಿಆಫ್ರಿಕನ್ ಯೂನಿಯನ್ನ್ನು ಸ್ಥಾಪಿಸಲೇಬೇಕೆಂದು ಪಣ ತೊಟ್ಟು ನಿಂತಿದ್ದ.  ಆದರೆ ಅತ್ತ ಅವನ ಈ ನಿರ್ಧಾರದಿಂದ ಕಂಗೆಟ್ಟ ಪಶ್ಚಿಮದ ರಾಷ್ಟ್ರಗಳು ಆತನನ್ನು ಹೇಗಾದರು ಮಾಡಿ ಮುಗಿಸಲೇಬೇಕೆಂದು ಪಣತೊಟ್ಟು ನಿಂತವು.
    ಇನ್ನು ಅರಬ್ ರಾಷ್ಟ್ರಗಳ ಒಕ್ಕೂಟವನ್ನು ಸ್ಥಾಪಿಸುವ ಅವನ ಬಯಕೆಗೆ ಯಾಕೆ ಬೆಂಬಲ ಸಿಗಲಿಲ್ಲವೆಂದರೆ ಒಂದು ಸಾರಿ ಅರಬ್ ಒಕ್ಕೂಟ ಅಂತಾದ ಮೇಲೆ ಅವರೆಲ್ಲಾ ಒಗ್ಗಟ್ಟಾಗಿ ತಮ್ಮ ಹುಟ್ಟು ಶತೃಗಳಾದ ಇಸ್ರೇಲಿಯರ ವಿರುದ್ಧ ಯುದ್ಧ ಸಾರಬಹುದು ಮತ್ತು ಅವರಿಗೆ ತೊಂದರೆ ಕೊಡಬಹುದು ಎಂದು ಅಂತರಾಷ್ಟ್ರೀಯ ಸಮುದಾಯ ತಪ್ಪು ತಿಳಿಯುವ ಸಾಧ್ಯತೆಯಿತ್ತು ಮತ್ತು ಅದೇ ಕಾರಣಕ್ಕಾಗಿ ತಾವು ತೊಂದರೆಗೆ ಸಿಲುಕಬಹುದು ಎಂದು ಮನಗಂಡ ಅರಬ್ ರಾಷ್ಟ್ರಗಳು ಹಿಂದೆ ಸರಿದವು ಎಂದು ಇಲ್ಲಿನವರು ಹೇಳುತ್ತಾರೆ.         
    ಆತ ತೈಲ ಬೆಲೆಯನ್ನು ಏರಿಸಿದ್ದು: ಮೌಮರ್ ಗಡಾಫಿ ದೇಶದ ಆರ್ಥಿಕ ಅಭಿವೃದ್ಧಿಗಾಗಿ ಅತ್ಯಂತ ಚಾಣಾಕ್ಷ ಪಾತ್ರವನ್ನು ವಹಿಸಿದ. 1969 ತನಕ ಲಿಬಿಯಾ ಎಣ್ಣೆ ಬಾವಿಗಳಿಂದ ಎಣ್ಣೆತೆಗೆಯುವ ತಂತ್ರಜ್ಞಾನಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಅವಲಂಬಿತವಾಗಿತ್ತು. ಇದನ್ನು ದುರುಪಯೋಗ ಪಡೆದುಕೊಂಡ ಹೊರದೇಶಿಯ ಕಂಪನಿಗಳು ತಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಎಣ್ಣೆಯ ದರವನ್ನು ನಿಗದಿಗೊಳಿಸಿ ಎಣ್ಣೆ ವ್ಯಾಪಾರದಲ್ಲಿ ಅರ್ಧಲಾಭವನ್ನು ಹೊಡೆಯುತ್ತಿದ್ದವು. ತೈಲಸಂಪನ್ಮೂಲವನ್ನೂ ಮಾರಿಕೊಂಡು, ಲಾಭವನ್ನೂ ಪಡೆಯದೆ ಲಿಬಿಯಾ ಸಂಕಷ್ಟದಲ್ಲಿತ್ತು. ಆದರೆ ಈತ 1969ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಪರದೇಶಿ ಕಂಪನಿಗಳ ಗುತ್ತಿಗೆಯನ್ನು ಮರುಪರಿಶೀಲಿಸಿ ಹತೋಟಿಗೆ ತೆಗೆದುಕೊಂಡ. ತನ್ನ ನಿರ್ಧಾರವನ್ನು ಒಪ್ಪದ ಕಂಪನಿಗಳಿಗೆ ಎಣ್ಣೆ ಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದ.

    1969 ರವರೆಗೂ ಒಂದು ಬ್ಯಾರೆಲ್ ತೈಲದ ಬೆಲೆ ಬರೀ 40 ಅಮೆರಿಕನ್ ಸೆಂಟ್ಗಳಷ್ಟು ಮಾತ್ರವಿತ್ತು. ಆದರೆ 1969 ರಲ್ಲಿ ಅಧಿಕಾರಕ್ಕೆ ಬಂದ ಗಡಾಫಿ ತೈಲ ಬೆಲೆ ಏರಿಕೆಗೆ ಸಂಬಧಪಟ್ಟ ಹಾಗೆ ಒಂದು ಐತಿಹಾಸಿಕ ದಾಖಲೆಯನ್ನೇ ಬರೆದ. ತನ್ನ ನೇತ್ರತ್ವದಲ್ಲಿ ತೈಲ ಉತ್ಪಾದನೆಯ ಇತರೆ ಅರಬ್ ರಾಷ್ತ್ರಗಳನ್ನು ಒಗ್ಗೂಡಿಸಿಕೊಂಡು ತೈಲ ಬೆಲೆ ಏರಿಕೆಗಾಗಿ ಒಂದು ದೊಡ್ಡ ಹೋರಾಟವನ್ನೇ ಮಾಡಿದ. ತಾವು ಉತ್ಪಾದಿಸುವ ತೈಲಕ್ಕೆ ಪಶ್ಚಿಮದವರು ತಕ್ಕ ಬೆಲೆಯನ್ನು ಕೊಡಲೇಬೇಕೆಂದು ಪಟ್ಟು ಹಿಡಿದ. ಇಲ್ಲವಾದಲ್ಲಿ ಎಣ್ಣೆ ಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದ. ಪರಿಣಾಮವಾಗಿ ಕೂಡಲೇ ಒಂದು ಬ್ಯಾರೆಲ್ ತೈಲದ ಬೆಲೆಯನ್ನು 20 ಡಾಲರ್ಗಳಿಗೆ ಏರಿಸಲಾಯಿತು. ಮುಂದೆ 1973 ರಲ್ಲಿ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ನಡೆದ ಆರು ದಿನಗಳ ಯುದ್ಧದ ಅವಧಿಯಲ್ಲಿ ಒಂದು ಬ್ಯಾರಲ್ ಬೆಲೆ 40 ಡಾಲರ್ಗಳವರೆಗೂ ಏರಿತು. ಮೂಲಕ ತೈಲಸಂಪನ್ಮೂಲವನ್ನು ಮಾರಿಕೊಂಡರೂ ಸಂಕಕಷ್ಟದಲ್ಲಿದ್ದ ರಾಷ್ಟ್ರಗಳು ಬಹಳ ಬೇಗ ಶ್ರೀಮಂತವಾದವು. ಗಡಾಫಿಯ ತೈಲ ಬೆಲೆಯ ಮರುಪರಿಶಿಲನಾ ನೀತಿ ಪಶ್ಚಿಮದವರ ನಿದ್ದೆಗೆಡಿಸಿತು. ದುರಂತವೆಂದರೆ ತೈಲ ಬೆಲೆ ಏರಿಕೆಯಲ್ಲಿ ಗಡಾಫಿ ಕೈಗೊಂಡ ಮಹತ್ವದ ಕ್ರಮಗಳು ಹಾಗು ಅವನು ಅನುಸರಿಸಿದ ನೀತಿಯನ್ನು ಬಹುತೇಕ ಅರಬ್ ರಾಷ್ಟ್ರಗಳು ಬಹಳ ಬೇಗನೆ ಮರೆತುತದಲ್ಲದೆ ಕೊನೆಕೊನೆಗೆ ಪಶ್ಚಿಮದವರೊಂದಿಗೆ ಕೈ ಜೋಡಿಸಿ ಅವನ ವಿರುದ್ಧವೇ ಪಿತೂರಿ ಮಾಡತೊಡಗಿದವು.   

     

    1 ಕಾಮೆಂಟ್‌(ಗಳು):

    sunaath ಹೇಳಿದರು...

    ಗಡಾಫಿಯ ಬಗೆಗೆ ನೀವು ಮೊದಲು ಬರೆದ ಲೇಖನಗಳನ್ನೂ ಓದಿದ್ದೇನೆ. ವಾಸ್ತವ ಚಿತ್ರಣವನ್ನೇ ಕೊಟ್ಟಿದ್ದೀರಿ. ಒಂದು ವೇಳೆ ಆಫ್ರಿಕಾದ ದೇಶಗಳೆಲ್ಲ ಒಂದುಗೂಡಿದ್ದರೆ,... ಇಂದು ಅಮೆರಿಕಾ ಹಾಗು ಯುರೋಪಿಯನ್ ರಾಷ್ಟ್ರಗಳ ಪರಿಸ್ಥಿತಿ ಏನಾಗಿರುತ್ತಿತ್ತೊ?