ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಅಪ್ಪ ಎಂದರೆ ಒಂದು ಸಣ್ಣ ಗದರಿಕೆಯೊಂದಿಗೆ ಪ್ರೀತಿಯ ಮಳೆಯಲ್ಲಿ ತೋಯಿಸುವವ. ಅಪ್ಪ ಎಂದರೆ ಇನ್ನೂ ಏನೇನೋ.................! ಆದರೆ ನನ್ನ ಅಪ್ಪ ಇದ್ಯಾವುದನ್ನು ನನಗೆ ಕೊಡಲಿಲ್ಲ. ದುಡಿಯದ, ಬೇಜವಬ್ದಾರಿ ನನ್ನ ಅಪ್ಪ ಹಚ್ಚನೆಯ ಬದುಕನ್ನು ಕಟ್ಟಿ ಕೊಡುವದನ್ನಾಗಲಿ ಅಥವಾ ಬೆಚ್ಚನೆಯ ಪ್ರೀತಿಯನ್ನು ಹೊದಿಸುವ ಪ್ರಯತ್ನವನ್ನಾಗಲಿ ಮಾಡಲೇ ಇಲ್ಲ. ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರ ಜಗತ್ತಿನಾದ್ಯಾಂತ ಎಲ್ಲ ಮಕ್ಕಳಿಗೆ ಅಪ್ಪ ಪ್ರೀತಿಯ ನೆನಪಾಗಿ ಉಕ್ಕಿದರೆ ನನಗೆ ಬಿಕ್ಕಾಗಿ ಕಾಡುತ್ತಾನೆ. ಆದರೂ ಅವನನ್ನು ಅಪ್ಪ ಅಲ್ಲ ಎಂದು ಹೇಳಲಾದೀತೆ? ಅಥವಾ ಅಪ್ಪ ಇದ್ಯಾವುದನ್ನೂ ನನಗೆ ಕೊಡದೇ ಇದ್ದ ಕಾರಣಕ್ಕೆನೇ ನಾನು ಇಷ್ಟೊಂದು ಗಟ್ಟಿಯಾಗಿ ಬೆಳೆದೆನೇ? ನನಗೆ ಗೊತ್ತಿಲ್ಲ!
ಅಪ್ಪ ಕೆಟ್ಟವನೋ, ಕೄರನೋ, ಬೇಜವಾಬ್ದಾರಿಯುತನೋ ಯಾವತ್ತಿದ್ದರೂ ಅಪ್ಪ ಅಪ್ಪನೇ! ಅವನನ್ನು ಬಿಟ್ಟುಕೊಡಲಾಗದು. ಏಕೆಂದರೆ ಈ ಸಮಾಜದಲ್ಲಿ ಅವನಿಂದಲೇ ನಮಗೊಂದು ಐಡಿಂಟಿಟಿ ಸಿಕ್ಕಿದ್ದು! ಅವನಿಂದಲೇ ನಮ್ಮ ಹುಟ್ಟಿಗೊಂದು ಮರ್ಯಾದೆ ದೊರಕಿದ್ದು! ಅವನೇ ಗೊತ್ತಿಲ್ಲದೆ ಹುಟ್ಟಿದ್ದರೆ ನಮಗೆ ಕಾಸು ಕಿಮ್ಮತ್ತು ಬೆಲೆಯೂ ಇರುತ್ತಿರಲಿಲ್ಲ ಅಲ್ಲವೆ?
ಹಾಗಾಗಿ ಅಪ್ಪನೆಡೆಗೆ ಪ್ರೀತಿಯೋ, ಗೌರವವೋ, ಅನಾದರವೋ, ದ್ವೇಷವೋ, ತಿರಸ್ಕಾರವೋ, ಸಂಘರ್ಷವೋ ಏನೇ ಇದ್ದರೂ ಅವನನ್ನು ಅಪ್ಪ ಎಂದು ಒಪ್ಪಿ ನಡೆಯುವ ಅನಿವಾರ್ಯತೆ ಮತ್ತು ಸಾಮಾಜಿಕ ಬದ್ಧತೆ ಇದ್ದೇ ಇದೆ. ಆ ಕಾರಣಕ್ಕೆನೇ ಅವನು ನಮಗೆ ನಮ್ಮೆಲ್ಲ ದ್ವೇಷಗಳ ನಡುವೆಯೂ ಆಪ್ತವಾಗುತ್ತಾನೆ. ಅವನನ್ನೇ ಮತ್ತೆ ಮತ್ತೆ ಅಪ್ಪ ಎಂದು ಹೇಳುತ್ತಾ ಒಪ್ಪಿ ನಡೆಯುತ್ತೇವೆ. ಏಕೆಂದರೆ ಅಪ್ಪನನ್ನು ಆಯ್ಕೆ ಮಾಡಿಕೊಳ್ಳಲಾಗದು.
ನಾಳಿದ್ದು ಭಾನುವಾರ ಅಪ್ಪಂದಿರ ದಿನ. ಆ ವಿಶೇಷ ದಿನಕ್ಕಾಗಿ ನನ್ನ ಅಪ್ಪನನ್ನು ನಾ ಕಂಡಂತೆ, ಅವನಿರುವಂತೆ ಅತ್ಯಂತ ನಿರ್ಭಿಡೆಯಿಂದ ಕವನದಲ್ಲಿ ಹಿಡಿದಿಟ್ಟಿದ್ದೇನೆ. ಈ ಹಿಂದೆ ಇದನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲಾಗಿತ್ತು. ಆದರೆ ಅಪ್ಪಂದಿರ ವಿಶೇಷ ದಿನಕ್ಕಾಗಿ ಇದನ್ನು ಪುನರ್ ಪ್ರಕಟಿಸಲಾಗುತ್ತಿದೆ. ಸಹೃದಯವರಾದ ನೀವು ಹೇಗೆ ಸ್ಪಂದಿಸುವಿರೆಂದು ಕಾಯ್ದು ನೋಡುವೆ.
ಅಜ್ಜ ನೆಗೆದು ಬೀಳುವ ಮೊದಲೇ
ಅವ್ವನ್ನು ಮದುವೆಯಾಗಿ
ಇದ್ದ ಹೊಲ ಗದ್ದೆಗಳಲ್ಲಿ
ಮೈ ಕೈ ಕೆಸರು ಮಾಡಿಕೊಳ್ಲದೆ
ಅವ್ವ ಮಾಡಿಕೊಟ್ಟ ಬಿಸಿ ಬಿಸಿ ರೊಟ್ಟಿಯನ್ನು
ಗಡದ್ದಾಗಿ ತಿಂದು ತೇಗಿ
ಎಲ್ಲ ಭಾರವನ್ನು ಅವಳ ತಲೆ ಮೇಲೆ ಹಾಕಿ
ತಾನು ಮಾತ್ರ ಇಸ್ಪೀಟಾಡುತ್ತ
ಹೆಸರಿಗೆ ಮಾತ್ರ ಮನೆ ಯಜಮಾನನಾದ.
ದುಡಿಯಲು ಗೊತ್ತಿರದ ಷಂಡ
ಮೂರು ಮಕ್ಕಳನ್ನು ಹೆತ್ತು ಗಂಡಸೆನಿಸಿಕೊಂಡ.
ಹುಟ್ಟಿಸಿದ ಮಕ್ಕಳನ್ನೂ ಸಾಕಲಾಗದೆ
ಅವರಿವರ(ಬಂಧುಗಳ) ಮನೆಯಲ್ಲಿ ಬಿಟ್ಟು
ತಾನು ಮಾತ್ರ ತನ್ನದೇ ಗೂಡಿನಲ್ಲಿ
ಹಚ್ಚಗೆ ತಿಂದು ಬೆಚ್ಚಗೆ ಮಲಗಿ
ಅವ್ವನ ಪ್ರೀತಿಯನ್ನೂ ನಮ್ಮಿಂದ ಕಸಿದುಕೊಂಡು
ಅವಳನ್ನೂ ತನ್ನ ಜೊತೆಯಲ್ಲಿ ನಮ್ಮ ತಿರಸ್ಕಾರಕ್ಕೆ ಗುರಿಮಾಡಿದ.
ಅಪ್ಪ ಏನೂ ಕಿಸಿಯದಿದ್ದರೂ
ಅವ್ವನ ಮೇಲೆ ಸದಾ ಇವನ ರುದ್ರನರ್ತನ
ಅವ್ವ ಇವನ ಆರ್ಭಟಕ್ಕೆ ಹೆದರಿ ಹಿಕ್ಕೆ ಹಾಕುತ್ತಾ
ಒಳಗೊಳಗೆ ಎಲ್ಲವನ್ನು ನುಂಗುತ್ತಾ ಬೇಯುತ್ತಾ
ಹೊಲದಲ್ಲೂ ದುಡಿದು ಮನೆಯಲ್ಲೂ ಮಾಡಿ
ಸದಾ ಇವನ ಸೇವೆಗೆ ನಿಂತಳು.
ಹೊತ್ಹೊತ್ತಿಗೆ ಚಾ ಕುಡಿದು
ಬುಸ್ಸ್ ಬುಸ್ಸ್ ಎಂದು ಚುಟ್ಟ ಸೇದಿ
ಗೊರ ಗೊರ ಕೆಮ್ಮಿ
ಮೈಯೆಲ್ಲ ಗೂರಿ ಬಂದವರ ತರ
ಪರಾ ಪರಾ ಕೆರೆದು
ಆಗೊಮ್ಮೆ ಈಗೊಮ್ಮೆ ಜಡ್ಡಿಗೆ ಬಿದ್ದು
ಸತ್ಹಾಂಗ ಮಾಡಿ
ಒಮ್ಮಿಂದೊಮ್ಮೆಲೆ ಮೇಲೆದ್ದು ಗುಟುರು
ಹಾಕುವ ಮುದಿ ಗೂಳಿ ಇವನು.
ಅವರಿವರ ಹಂಗಿನ ಮಾತುಗಳನ್ನು ಕೇಳುತ್ತಾ
ಮಕ್ಕಳೆಲ್ಲ ಕಷ್ಟಬಿದ್ದು ಓದಿ ಕೈಗೆ ಬಂದ ಮೇಲೆ
ಅರವತ್ತರ ಅರಳು ಮರಳೆಂಬಂತೆ
ಅಥವಾ ಕೆಟ್ಟ ಮೇಲೆ ಬುದ್ಧಿ ಬಂತೆಂಬಂತೆ
ಹೊಲಕ್ಕೆ ದುಡಿಯಲು ಹೋಗಿ "ಹೀರೋ" ಆಗಲೆತ್ನಿಸಿದ್ದೂ ಇದೆ.
ಅಲ್ಲಿ ದುಡಿದಿದ್ದೆಷ್ಟೋ
ಆ ಖರ್ಚು ಈ ಖರ್ಚೆಂದು
ಮಕ್ಕಳ ಹತ್ತಿರ ಕಾಸು ಪೀಕುತ್ತ
ಅsssಬ್ಬ ಎಂದು ಡೇಗು ಹೊಡೆದು
ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುವದು ಮುಂದುವರಿದೇ ಇದೆ!
ಇದೀಗ ಯಾರಾದರು
"ಎಲ್ಲಿ ನಿನ್ನ ಮಕ್ಕಳು?"ಎಂದು ಕೇಳಿದರೆ
ಮೈ ಕುಣಿಸಿ ಎದೆಯುಬ್ಬಿಸಿ
"ಇವರೇ" ಎಂದು ನಮ್ಮೆಡೆಗೆ ತೋರಿಸುತ್ತಾನೆ.
ನಾವೂ ಅಷ್ಟೇ ಯಾರಾದರು ನಮ್ಮನ್ನು
"ಯಾರು ನೀವು?" ಎಂದು ಕೇಳಿದರೆ
"ಮಲ್ಲೇಶಪ್ಪನ ಮಕ್ಕಳು" ಎಂದು ಹೇಳುತ್ತೇವೆ!
-ಉದಯ ಇಟಗಿ
ಇಂದು ಸಂಜೆ ಅಷ್ಟಾವಧಾನ
2 ದಿನಗಳ ಹಿಂದೆ