Demo image Demo image Demo image Demo image Demo image Demo image Demo image Demo image

ನಾನು ಪ್ರೀತಿಸಿದರೆ..........

 • ಶನಿವಾರ, ಮಾರ್ಚ್ 28, 2009
 • ಬಿಸಿಲ ಹನಿ
 • ನಾನು ಪ್ರೀತಿಸಿದರೆ...........
  ನಾನೇ ಕಾಲದ ಚಕ್ರಾಧಿಪತಿಯಾಗುವೆ
  ಇಡೀ ಭೂಮಂಡಲವೆಲ್ಲ ನನ್ನ ವಶವಾಗುತ್ತದೆ
  ಆಗ ಹೆಮ್ಮೆಯಿಂದ ಬೀಗುತ್ತಾ ಕುದರೆಯ ಮೇಲೆ
  ಸೂರ್ಯನೆಡೆಗೆ ಸವಾರಿ ಹೊರುಡುತ್ತೇನೆ.

  ನಾನು ಪ್ರೀತಿಸಿದರೆ...........
  ಉದಯಗಳ ಊರೇ ನಾನಾಗಿ
  ಜಗಕೆಲ್ಲ ಬೆಳಕನ್ನಿಡುವೆ
  ನನ್ನ ಕಿರು ಹೊತ್ತಿಗೆಯಲ್ಲಿ
  ಕವನಗಳಾಗಿ ಹಾಡುತ್ತಾ
  ಉನ್ಮಾದದ ಹೂದೋಟವಾಗುತ್ತೇನೆ.

  ನಾನು ಪ್ರೀತಿಸಿದರೆ........
  ಮಳೆ ಧೋ ಧೋ ಎಂದು ಸುರಿದು
  ನೀರು ಭೋರ್ಗರೆದು ಹರಿಯುತ್ತದೆ
  ಹುಲ್ಲು ಹುಲುಸಾಗಿ ಬೆಳೆಯುತ್ತದೆ.

  ನಾನು ಪ್ರೀತಿಸಿದರೆ..........
  ಗಿಡ ಮರಗಳೆದ್ದು ನನ್ನೆಡೆಗೆ ಬರುತ್ತವೆ
  ನಾನು ಕಾಲದಾಚೆಯ
  ಕಾಲವಾಗಿ ಕುಣಿಯುತ್ತೇನೆ.

  ಅರೇಬಿ ಮೂಲ: ನಿಜಾರ್ ಖಬ್ಬಾನಿ
  ಕನ್ನಡಕ್ಕೆ: ಉದಯ ಇಟಗಿ

  9 ಕಾಮೆಂಟ್‌(ಗಳು):

  ಅಂತರ್ವಾಣಿ ಹೇಳಿದರು...

  ಉದಯ ಅವರೆ,
  ಇಂತಹ ಒಳ್ಳೆ ಕವನಗಳನ್ನು ಎಲ್ಲಿ ಹುಡುಕುತ್ತೀರಾ?

  ಉದಯಗಳ ಊರೇ ನಾನಾಗಿ ಬೆಳಕಿನಿಡುವೆ ಜಗಕೆಲ್ಲ
  ನನ್ನ ಕಿರು ಹೊತ್ತಿಗೆಯಲ್ಲಿ
  ಕವನಗಳಾಗಿ ಹಾಡುತ್ತಾ
  ಉನ್ಮಾದದ ಹೂದೋಟವಾಗುತ್ತೇನೆ


  ತುಂಬಾ ಇಷ್ಟವಾಯಿತು.

  sunaath ಹೇಳಿದರು...

  ಇದೊಂದು ತುಂಬ ಹುರುಪು ಹಾಗೂ ಆಶಾವಾದದಿಂದ ಕೂಡಿದ ಸುಂದರ ಕವನ. ಇಂತಹ positive ಕವನದ ಉತ್ತಮ ಅನುವಾದ ನೀಡಿದ್ದಕ್ಕಾಗಿ ನಿಮಗೆ ಅನೇಕ ಧನ್ಯವಾದಗಳು.

  ತೇಜಸ್ವಿನಿ ಹೆಗಡೆ ಹೇಳಿದರು...

  ಉದಯ್ ಅವರೆ,

  ಪ್ರೀತಿಯೆಂಬುದು ರಚನಾತ್ಮಕವಾಗಿರುತ್ತದೆ, ಹೊಸ ಉದಯಕ್ಕೆ ಕಾರಣವಾಗಿರುತ್ತದೆ, ಆಶಾವಾದಿಯಾಗಿರುತ್ತದೆ. ಒಟ್ಟಿನಲ್ಲಿ ಪ್ರೀತಿ ಪುನರ್ಜನ್ಮವನ್ನು ನೀಡುವಂತಹ ಸಂಜೀವಿನಿಯಾಗಿದೆ ಎಂಬುದನ್ನು ನಿಜಾರ್ ಅವರು ತುಂಬಾ ಸುಂದರವಾಗಿ ವರ್ಣಿಸಿದ್ದಾರೆ. ಇಷ್ಟೋಳ್ಳೆ ಆಶಯವನ್ನು ತೋರುವ ಕವನದ ಅನುವಾದವನ್ನು ನಮಗಿತ್ತ ನಿಮಗೆ ಧನ್ಯವಾದಗಳು.

  PARAANJAPE K.N. ಹೇಳಿದರು...

  ಉದಯ್ ಅವರೇ
  ಕವನ ತು೦ಬ ಚೆನ್ನಾಗಿದೆ. ವ೦ದನೆಗಳು

  shivu.k ಹೇಳಿದರು...

  ಉದಯ್ ಸರ್,

  ಪ್ರೀತಿಯ ಬಗ್ಗೆ ಒಂದು ಹೊಸ ಹುರುಪು ತುಂಬಿಕೊಂಡ ಕವನ...ಒಂದು ಆಶಾವಾದದ ಹಿನ್ನೆಲೆಯಲ್ಲಿ ಕವನ ಮೆಚ್ಚುಗೆಯಾಗುತ್ತದೆ...

  ಧನ್ಯವಾದಗಳು...

  ಬಿಸಿಲ ಹನಿ ಹೇಳಿದರು...

  ಜಯ ಶಂಕರ್ ಅವರೆ,
  "ಇಂತಹ ಒಳ್ಳೆ ಕವನಗಳನ್ನು ಎಲ್ಲಿ ಹುಡುಕುತ್ತೀರಾ?" ಒಳ್ಳೆಯ ಪ್ರಶ್ನೆ. ನಾನು ಯಾವುದೇ ಕವನವನ್ನು ಅನುವಾದಿಸುವ ಮೊದಲು ಅದನ್ನು ಕನಿಷ್ಟ ನಾಲ್ಕೈದು ಬಾರಿಯಾದರು ಓದುತ್ತೇನೆ. ಆಗ ಅದನ್ನು ನಾನು ತೀರ ಕನ್ನಡಕ್ಕೆ ಹತ್ತಿರವಾಗುವಂತೆ ಅನುವಾದಿಸಬಹುದು ಎಂದು ಖಾತ್ರಿಯಾದ ಮೇಲೆಯೇ ಅನುವಾದಿಸಲು ಮುಂದಾಗುವದು.
  ನಿಜ ಹೇಳಬೇಕೆಂದರೆ ಈ ಕವನವನ್ನು ನಾನು ಒಂದು ತಿಂಗಳ ಹಿಂದೆಯೇ ಅನುವಾದಿಸಿಟ್ಟಿದ್ದೆ. ಆದರೆ ಪ್ರಕಟಿಸಿರಲಿಲ್ಲ. ಕಾಕತಾಳೀಯವೆಂಬಂತೆ ನೀವು ಇಷ್ಟಪಟ್ಟ ಮೇಲಿನ ಸಾಲುಗಳನ್ನು ಬೇರೆ ತೆರನಾಗಿ ಅನುವಾದಿಸಿದ್ದೆನಾದ್ದರಿಂದ ಏಕೋ ಮನಸ್ಸಿಗೆ ತೃಪ್ತಿಯಿರಲಿಲ್ಲ. ಮೊನ್ನೆಯಷ್ಟೇ ಆ ಸಾಲುಗಳು ಹೊಳೆದಿದ್ದರಿಂದ ಮೇಲಿನಂತೆ ತಕ್ಷಣ ಬದಲಾಯಿಸಿ ಪ್ರಕಟಿಸಿದೆ. ಬಹುಶಃ ಇದು ಪ್ರತಿಯೊಬ್ಬ ಅನುವಾದಕನ ಸಮಸ್ಯೆ! ಅನುವಾದಿಸಿ ಮತ್ತೆರೆಡು ತಿಂಗಳ ನಂತರ ಅದನ್ನೇ ಓದುವಾಗ ಇನ್ನಷ್ಟು ಚನ್ನಾಗಿ ಅನುವಾದಿಸಬಹುದಿತ್ತು ಎಂದುಕೊಳ್ಳುತ್ತೇವೆ. ಈ ಮಾತು ಬರಹಗಾರನಿಗೂ ಅನ್ವಯಿಸುತ್ತದೆ. ಬರಹಗಾರನ ತಳಮಳಗಳು ಅಂದರೆ ಇವೆ ಅಲ್ಲವೆ?

  ಬಿಸಿಲ ಹನಿ ಹೇಳಿದರು...

  ಸುನಾಥ್ ಸರ್, ತೇಜಸ್ವಿನಿ, ಶಿವು, ಹಾಗೂ ಪರಾಂಜಪೆಯವರೆ,
  ನಿಮ್ಮ ಹುರುಪಿನ ಮಾತುಗಳು ನನ್ನನ್ನು ಮತ್ತಷ್ಟು ಅನುವಾದಿಸಲು ಪ್ರೇರೇಪಿಸಿವೆ.ನಿಮಗೆಲ್ಲ ವಂದನೆಗಳು.

  Unknown ಹೇಳಿದರು...

  ಉದಯ ಸರ್
  ಒಂದು ಒಳ್ಳೆಯ ಕವಿತೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ಇನ್ನೂ ಹೆಚ್ಚು ಹೆಚ್ಚು ಕವಿತೆಗಳನ್ನು ಅನುವಾದಿಸಿ. ಅಂದ ಹಾಗೆ ನಿಮಗೆ ಎಷ್ಟು ಭಾಷೆಗಳು ಬರುತ್ತವೆ?! ನನಗೆ ಹೆಚ್ಚು ಹೆಚ್ಚು ಭಾಷೆ ಗೊತ್ತಿರುವವರನ್ನು ಕಂಡರೆ "ಹೊಟ್ಟೆಯುರಿ"!

  ಬಿಸಿಲ ಹನಿ ಹೇಳಿದರು...

  ಸತ್ಯನಾರಾಯಣ ಅವರೆ,
  ನಿಮ್ಮ ಪ್ರೊತ್ಸಾಹಕ್ಕೆ ಥ್ಯಾಂಕ್ಸ್. ನನಗೆ ಸರಿಯಾಗಿ ಬರುವದು ಎರಡೇ ಎರಡು ಭಾಷೆ. ಒಂದು ಕನ್ನಡ ಇನ್ನೊಂದು ಇಂಗ್ಲೀಷ! ಬೇರೆ ಭಾಷೆಯಿಂದ ಇಂಗ್ಲೀಷ್‍ಗೆ ಅನುವಾದವಾಗಿರುವದನ್ನು ಕನ್ನಡಿಕರಿಸುವದಷ್ಟೆ ನನ್ನ ಕೆಲಸ. ಹಾಗಾಗಿ ತಾವು ಹೊಟ್ಟೆ ಉರಿ ಪಡಬೇಕಿಲ್ಲ.