೧೯೯೮ ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಲಂಕೇಶ್ ಅವರನ್ನು ಕಂಡು ಒಮ್ಮೆ ಕೈ ಕುಲುಕಿದ್ದು ಬಿಟ್ಟರೆ ಮತ್ತೆ ನಾನು ಅವರನ್ನು ಯಾವತ್ತೂ ಹತ್ತಿರದಿಂದ ನೋಡುವದಾಗಲಿ, ಅಥವಾ ಅವರ ಒಡನಾಟಕ್ಕೆ, ಸಂಪರ್ಕಕ್ಕೆ ಬರುವದಾಗಲಿ ಎಂದೂ ಮಾಡಿದವನಲ್ಲ. ಆದರೂ ಅವರ ಬರಹಗಳಿಂದಲೇ ಅವರು ಎಂಥ ವ್ಯಕ್ತಿಯಾಗಿದ್ದರು ಎಂಬುದನ್ನು ಒಂದು ಅಂದಾಜು ಹಾಕಿದವನು ನಾನು.
ನನಗೆ ‘ಲಂಕೇಶ್ ಪತ್ರಿಕೆ’ ಪರಿಚಯವಾಗಿದ್ದೇ ನಾನು ಪಿ.ಯು.ಸಿ ಯಲ್ಲಿರುವಾಗ. ಅಲ್ಲಿಯವರೆಗೆ ಹೀಗೊಂದು ಪತ್ರಿಕೆ ಇದೆ ಅಂತ ಕೂಡ ಗೊತ್ತಿರಲಿಲ್ಲ ನನಗೆ. ಒಮ್ಮೆ ನನ್ನ ಅಣ್ಣನೊಬ್ಬ ‘ಲಂಕೇಶ್ ಪತ್ರಿಕೆ’ ಓದುವದನ್ನು ನೋಡಿ ನಾನು ಸಹ ಪ್ರೇರಿತನಾಗಿ ಒಮ್ಮೆ ಸುಮ್ಮನೆ ತಿರುವಿ ಹಾಕಿದ್ದೆ. ಅದೇಕೋ ನನಗೆ ಅಷ್ಟಾಗಿ ಹಿಡಿಸಲಿಲ್ಲ. ಬಹುಶಃ ನನಗಾಗ ರಾಜಕೀಯ ಸುದ್ದಿಯೆಂದರೆ ಅಷ್ಟಕ್ಕಷ್ಟೆ ಇದ್ದುದರಿಂದ ಹಾಗೂ ಆ ಪತ್ರಿಕೆಯ ಬಹಳಷ್ಟು ಪುಟಗಳು ಬರಿ ರಾಜಕೀಯ ವಿಷಯವನ್ನು ಒಳಗೊಂಡಿದ್ದರಿಂದ ನನಗೆ ಅಷ್ಟಾಗಿ ರುಚಿಸಲಿಲ್ಲ.
ಒಂದು ಸಾರಿ ಬೇಸಿಗೆ ರಜೆಗೆಂದು ನನ್ನ ದೊಡ್ಡಪ್ಪನ ಊರು ಅಳವಂಡಿಗೆ ಹೋಗಿದ್ದೆ. ಅಲ್ಲಿ ನಮ್ಮ ದೊಡ್ಡಪ್ಪ ವಾರ ವಾರವೂ ನಾಲ್ಕಾರು ಪತ್ರಿಕೆಗಳ ಜೊತೆಗೆ ‘ಲಂಕೇಶ್ ಪತ್ರಿಕೆ’ ಯನ್ನು ಸಹ ತರಿಸುತ್ತಿದ್ದರು. ನಮ್ಮ ಮನೆಯಲ್ಲಿ ಎಲ್ಲರೂ ಲಂಕೇಶ್ ಪತ್ರಿಕೆ ಬರುವದನ್ನೇ ಕಾಯುತ್ತಿದ್ದರು. ಕೇವಲ ನಮ್ಮ ಮನೆಯಲ್ಲಿ ಮಾತ್ರವಲ್ಲ ಆ ಸಣ್ಣ ಹಳ್ಳಿಯಲ್ಲಿ ಎಲ್ಲರೂ ಹೆಚ್ಚು ಕಮ್ಮಿ ಲಂಕೇಶ್ ಪತ್ರಿಕೆಯನ್ನು ಓದುತ್ತಿದ್ದರು. ಅಂಥಾದ್ದೇನಿದೆ ಅದರಲ್ಲಿ ಎಂದು ನಾನೂ ಸಣ್ಣಗೆ ಲಂಕೇಶ್ರಮನ್ನು ಓದಲು ಆರಂಭಿಸಿದೆ. ಊಹೂಂ, ಆಗಲೂ ನನಗೆ ಲಂಕೇಶ್ ಅಷ್ಟಾಗಿ ತಟ್ಟಲೇ ಇಲ್ಲ. ಬಹುಶಃ ಅವರನ್ನು ಅರ್ಥಮಾಡಿಕೊಳ್ಳುವಷ್ಟು ನನ್ನ ಬೌದ್ಧಿಕಮಟ್ಟ ಇನ್ನೂ ಅಷ್ಟಾಗಿ ಬೆಳೆದಿರಲಿಲ್ಲವೆಂದು ಕಾಣುತ್ತದೆ. ಅಥವಾ ಕೇವಲ ಜಾಣ ಜಾಣೆಯರಿಗೆ ಮಾತ್ರ ಮೀಸಲಾಗಿದ್ದ ಆ ಪತ್ರಿಕೆಯನ್ನು ಓದಿ ಅರ್ಥಮಾಡಿಕೊಳ್ಳುವಷ್ಟು ನಾನಿನ್ನೂ ಜಾಣನಾಗಿರಲಿಲ್ಲ. ಇದೇ ವಿಷಯವನ್ನು ಲಂಕೇಶ್ ಪತ್ರಿಕೆಯನ್ನು ನನಗೆ ಪರಿಚಯಿಸಿದ ನಮ್ಮ ಅಣ್ಣನ ಹತ್ತಿರ ಹೇಳಿದಾಗ “ಯಾವುದೇ ಲೇಖಕನನ್ನು ಸರಿಯಾಗಿ ಓದದೆ, ಅರ್ಥಮಾಡಿಕೊಳ್ಳದೇ ಈ ನಿರ್ಧಾರಕ್ಕೆ ಬರುವದು ತಪ್ಪು” ಎಂದು ಹೇಳಿದ್ದ. ಏಕೆಂದರೆ ಅವನು ಅದಾಗಲೇ ತನ್ನ ಪಿ.ಯು ದಿನಗಳಿಂದಲೇ (ಬಹುಶಃ, ಆಗಷ್ಟೆ ಪತ್ರಿಕೆ ಆರಂಭವಾಗಿತ್ತೆಂದು ಕಾಣುತ್ತದೆ) ಲಂಕೇಶ್ ಅವರನ್ನು ಓದಲು ಆರಂಭಿಸಿ ಅವರ ಬರವಣಿಗೆಯ ಮೋಡಿಗೊಳಗಾಗಿ ಅವರ ಕಟ್ಟಾ ಅಭಿಮಾನಿಯಾಗಿದ್ದ. ಅವನು ಅದೆಂಥ ಅಭಿಮಾನಿಯಾಗಿದ್ದನೆಂದರೆ ಲಂಕೇಶ್ ಹೇಳಿದ್ದೇ ಸರಿ, ಅವರ ಪತ್ರಿಕೆಯಲ್ಲಿ ಬರೆಯುವವರೆಲ್ಲರೂ ಶ್ರೇಷ್ಟ ಲೇಖಕರು, ಲಂಕೇಶ್ ಹೇಳಿದ ಮೇಲೆ ಮುಗಿಯಿತು ಅದೇ ಸತ್ಯ ಎನ್ನುವ ಧೋರಣೆಯನ್ನು ತಳೆದುಬಿಟ್ಟಿದ್ದ. ಅವನೊಬ್ಬನೇ ಮಾತ್ರವಲ್ಲ ಆ ಕಾಲದಲ್ಲಿ ಬಹಳಷ್ಟು ಜನ ಲಂಕೇಶ್ರನ ಪ್ರಭಾವಕ್ಕೊಳಗಾಗಿ ಅವರ ಅಭಿಮಾನಿಯಾಗಿರುವದೇ ಒಂದು ಹೆಮ್ಮೆಯ ವಿಷಯವೆನ್ನುವಂತೆ ಪರಿಗಣಿಸುತ್ತಿದ್ದರು. ಈಗಲೂ ಅಷ್ಟೆ ‘ಲಂಕೇಶ್ ಪತ್ರಿಕೆ’ ಓದಿರೋರು ಉಳಿದವರಂತಲ್ಲ, ಉಳಿದವರಿಗಿಂತ ಸ್ವಲ್ಪ ಭಿನ್ನವಾದ ಜನ ಎನ್ನುವ ಅಭಿಪ್ರಾಯವಿದೆ. ಆ ಕಾರಣಕ್ಕೇನೇ ಈಗಲೂ ಅವರನ್ನು ಒಂದು ದೊಡ್ದ ಐಕಾನ್ ಎಂಬಂತೆ ಟ್ರೀಟ್ ಮಾಡುವವರಿದ್ದಾರೆ.
ನಾನು ಲಂಕೇಶ್ರೇನ್ನು ಓದಲೇಬೇಕೆಂದು ನಿರ್ಧರಿಸಿದ್ದು ನಮ್ಮ ದ್ವಿತಿಯ ಪಿ.ಯು.ಸಿ ಕನ್ನಡ ಪಠ್ಯಪುಸ್ತಕದಲ್ಲಿದ್ದ ಅವರ ಲೇಖನ ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ ಎನ್ನುವ ಲೇಖನ ಓದಿದ ಮೇಲೆಯೇ. ಆಹಾ, ಎಷ್ಟು ಚೆಂದದ ಗದ್ಯವದು! ಲಂಕೇಶ್ ಅವರು ಬುದ್ಧನನ್ನು ಒಬ್ಬ ದೇವಮಾನವನೆಂದು ವೈಭವಿಕರಿಸದೆ ಅವನೊಬ್ಬ ಸಾಮಾನ್ಯ ಮನುಷ್ಯನಾಗಿದ್ದುಕೊಂಡೇ ಸಾಮಾನ್ಯರೊಡನೆ ಬೆರೆತು ಆದರೆ ಅಸಾಮಾನ್ಯ ಕೆಲಸಗಳನ್ನು ಮಾಡುತ್ತಾ ಹೇಗೆ ಜನರ ಪ್ರಿತಿಯಲ್ಲಿ ಬಂಧಿತನಾಗುತ್ತಾನೆ ಎಂದು ಅತ್ಯಂತ ಶ್ರೇಷ್ಟವಾಗಿ ಆದರೆ ಸರಳವಾಗಿ ನೇರವಾಗಿ ಮನ ಮುಟ್ಟುವಂತೆ ವಿವರಿಸಿದ್ದರು. ಅದೇಕೋ ಆ ಲೇಖನ ನನ್ನನ್ನು ಗಾಢವಾಗಿ ತಟ್ಟಿತು. ಅಂದಿನಿಂದಲೇ ಲಂಕೇಶ್ ಅವರನ್ನು ಓದಲು ಆರಂಭಿಸಿದೆ, ಐ ಮೀನ್ ಲಂಕೇಶ್ ಪತ್ರಿಕೆ ಓದಲು ಆರಂಭಿಸಿದೆ.
ಮೊದಮೊದಲು ಬರಿ ಸಾಹಿತ್ಯಿಕ ಪುಟಗಳನ್ನು ಮಾತ್ರ ಓದುತ್ತಿದ್ದವನು ಬರು ಬರುತ್ತಾ ಅವರ ರಾಜಕೀಯ ವಿಶ್ಲೇಷಾತ್ಮಕ ಲೇಖನಗಳನ್ನು ಓದತೊಡಗಿದೆ. ಮೊದಮೊದಲಿಗೆ ಲಂಕೇಶರನ್ನು ಅರ್ಥಮಾಡಿಕೊಳ್ಳುವದು ಬಹಳ ಕಷ್ಟವಿತ್ತು. ತದನಂತರದಲ್ಲಿ ಲಂಕೇಶ್ ನಿಧಾನವಾಗಿ ನನ್ನೊಳಗೆ ಇಳಿಯತೊಡಗಿದರು. ನನ್ನ ಬುದ್ಧಿ ಭಾವಗಳನ್ನು ತಟ್ಟತೊಡಗಿದರು. ಲಂಕೇಶ್ ನನಗೆ ಎಷ್ಟು ಇಷ್ಟವಾದರೆಂದರೆ ಮುಂದೆ ನಾನು ಡಿಗ್ರಿಗೆ ಬರುವಷ್ಟರಲ್ಲಿಯೇ ನನಗೊಂದು ರೀತಿ ಲಂಕೇಶ್ ನಶೆ ಏರಿಬಿಟ್ಟಿತ್ತು. ಕಾಲೇಜಿನಲ್ಲಿ, ಮನೆಯಲ್ಲಿ ಸದಾ ಅವರ ಬಗ್ಗೆ ಚರ್ಚೆ ಮಾಡತೊಡಗಿದೆ. ಯಾರಾದರು ಲಂಕೇಶ್ ವಿರುದ್ಧ ಮಾತನಾಡಿದರೆ ಸಾಕು ಅವರ ಮೇಲೆ ಸರಕ್ಕೆಂದು ಹರಿಹಾಯ್ದುಬಿಡುತ್ತಿದ್ದೆ. ಅವರು ಬರೆದಿದ್ದೇ ಸತ್ಯ. ಅವರು ಆಡಿದ್ದೇ ನಿಜ ಎನ್ನುವಷ್ಟರಮಟ್ಟಿಗೆ ಅವರ ಕಟ್ಟಾ ಅಭಿಮಾನಿಯಾದೆ. ಆದರೆ ನಾನು ಡಿಗ್ರಿ ಕೊನೆ ವರ್ಷಕ್ಕೆ ಬರುವಷ್ಟರಲ್ಲಿಯೇ ಅವರ ನಶೆ ಸಣ್ಣಗೆ ಇಳಿಯತೊಡಗಿತ್ತು. ಅದಕ್ಕೆ ಕಾರಣ ಅವರ ಬರಹಗಳು ನೇರ ನಿಷ್ಟುರ ನೆಪದಲ್ಲಿ ತೇಜೋವಧೆಯಿಂದ ಕೂಡಿವೆ ಎನಿಸತೊಡಗಿತು ಹಾಗೂ ಯಾವುದೋ ವ್ಯಯಕ್ತಿಕ ದ್ವೇಷದ ನೆಲೆಗಟ್ಟಿನಲ್ಲಿ ಮೂಡುತ್ತಿವೆ ಎನಿಸಿತು.
ಲಂಕೇಶ್ ಪತ್ರಿಕೆ ಆ ಕಾಲದಲ್ಲಿ ಗುಣಾತ್ಮಕ ದೃಷ್ಟಿಯಿಂದ ಬಹಳ ಹೆಸರು ಮಾಡಿದ ಪತ್ರಿಕೆ. ಯಾವುದೇ ಜಾಹಿರಾತಿಲ್ಲದೆ ಓದುಗರನ್ನು ಬಹುಕಾಲದವರೆಗೆ ಹಿಡಿದಿಟ್ಟ ಪತ್ರಿಕೆಯದು. ಅವರ ಮೊನಚಾದ ಬರಹ, ಹರಿತವಾದ ಭಾಷೆ ಓದುಗರನ್ನು ನೇರವಾಗಿ ತಟ್ಟುತ್ತಿತ್ತು. ಅವರು ಬಳಸುವ ಭಾಷೆ ಜನಸಾಮಾನ್ಯರ ಭಾಷೆಯಾಗಿದ್ದು ಅದರಲ್ಲಿ ಸದಾ ಒಂದು ವ್ಯಂಗ್ಯ, ಲೇವಡಿ, ಟಿಕೆ, ಗೇಲಿಯಿರುತ್ತಿದ್ದವು. ‘ಅನಂತನಾಗ್ ಅವಾಂತರಗಳು’, ‘ದೇವೇಗೌಡರ ಧಮಕಿ’ ‘ಪಟೇಲ್ರಾ ಪಲ್ಲಂಗ ಪುರಾಣ’ ಹೀಗೆ ಆಕರ್ಷಕ ಹೆಡ್ಡಿಂಗ್ಗತಳಿಂದಲೂ ಹಾಗೂ ವ್ಯಕ್ತಿಗಳನ್ನು ತಮ್ಮದೇ ಭಾಷೆಯಿಂದ ಗೇಲಿ ಮಾಡುತ್ತಿದ್ದುದೂ ನನಗೆ ತುಂಬಾ ಹಿಡಿಸಿತು. ಉದಾಹರಣೆಗೆ ದೇವೇಗೌಡರನ್ನು Son of Soil ಎಂದೂ ಜಿ.ಎಚ್ ಪಟೆಲರನ್ನು Son of Oil ಎಂದೂ ವಾಟಾಳ್ ನಾಗಾರಾಜರನ್ನು ‘ಕನ್ನಡದ ಉಟ್ಟು ಓರಾಟಗಾರ’ ಎಂದೂ ವ್ಯಂಗ್ಯವಾಡುತ್ತಿದ್ದರು. ಹೀಗೆ ಬರೆಯುವದನ್ನೇ ಮುಂದೆ ಅವರು ಪತ್ರಿಕೋದ್ಯಮದ ಭಾಷೆಯನ್ನಾಗಿ ಬೆಳೆಸಿದರು.
ಲಂಕೇಶರು ಕಟಕುವದಕ್ಕೆ ಹೆಸರುವಾಸಿಯಾಗಿದ್ದರು. ನನಗಿನ್ನೂ ಚನ್ನಾಗಿ ನೆನಪಿದೆ-ಡಾ. ಎಂ. ಎಂ. ಕಲಬುರ್ಗಿಯವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಆಗಷ್ಟೆ ನೇಮಕವಾಗಿದ್ದರು. ಆಗ ಅವರನ್ನು ಪತ್ರಕರ್ತರು ಕನ್ನಡ ವಿಶ್ವವಿದ್ಯಾನಿಲಯದ ಕೆಲಸವನ್ನು ಹೇಗೆ ಮಾಡುವಿರಿ? ನಿಮ್ಮ ಯೋಜನೆಗಳೇನು? ಎಂದು ಕೇಳಿದ್ದರು. ಅದಕ್ಕವರು “ನಂದೇನಿದೆ? ಎಲ್ಲ ಆ ಹಂಪಿಯ ವಿರುಪಾಕ್ಷ ಏನೇನು ಮಾಡಿಸುತ್ತಾನೋ ಅದನ್ನೆಲ್ಲ ಮಾಡುವೆ” ಎಂದು ಧಾರ್ಮಿಕ ನೆಲೆಗಟ್ಟಿನಲ್ಲಿ ಉಡಾಫೆಯ ಉತ್ತರವನ್ನು ಕೊಟ್ಟಿದ್ದರು. ಅದಕ್ಕೆ ಲಂಕೇಶ್ “ಹಿಂದೆ ಹಂಪಿ ಹಾಳಾಗುವಾಗ ವಿರುಪಾಕ್ಷ ಸುಮ್ಮನೆ ನೋಡುತ್ತಾ ಕುಳಿತಿದ್ದ. ಈಗಲೂ ಕನ್ನಡ ಹಾಳಾಗುವಾಗ ವಿರುಪಾಕ್ಷ ನೋಡುತ್ತಲೇ ಕುಳಿತಿದ್ದಾನೆ. ಅವನ ಕೈಲಿ ಆಗುವದಿಲ್ಲ ಎಂಬ ಕಾರಣಕ್ಕೇನೇ ನಿಮ್ಮನ್ನು ಇಲ್ಲಿಗೆ ಕಳಿಸಿರುವದು. ನೋಡಿ ಕೆಲಸ ಮಾಡಿ.” ಎಂದು ಕಟುಕಿದ್ದರು. ಹೀಗೆ ಯಾರ ಮೇಲಾದರು ಅವರು ಬರೆಯಬಲ್ಲವರಾಗಿದ್ದರು ಹಾಗೂ ಬರೆದಿದ್ದನ್ನು ದಕ್ಕಿಸಿಕೊಳ್ಳುವ ಒಂದು ಸಾತ್ವಿಕ ಶಕ್ತಿ ಕೂಡ ಅವರಲ್ಲಿತ್ತು. ಹಾಗೆಯೇ ಡಿ. ಆರ್. ನಾಗರಾಜ್ ವಿಮರ್ಶೆಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು ಹಾಗೂ ಅವರು ಆಗಾಗ ಅತಿಥಿ ಉಪನ್ಯಾಸಕನಾಗಿ ವಿದೇಶಕ್ಕೆ ಹಾರುತ್ತಿದ್ದರು. ಇಂಥ ಸಂದರ್ಭದಲ್ಲಿ ಅವರ ಬಗ್ಗೆ ಬರೆಯುತ್ತಾ ಇವರ ತಲೆ ಭುಜದ ಮೇಲಿರಲಿ, ಕಾಲುಗಳು ಸ್ವಂತ ನೆಲದ ಮೇಲೆ ಗಟ್ಟಿಯೂರಿ ನಿಲ್ಲಲಿ ಎಂದು ವ್ಯಂಗ್ಯವಾಡಿದ್ದರು. ಆದರೆ ಮುಂದೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಹುದ್ದೆಗೆ ನಾಗರಾಜರವರ ಹೆಸರನ್ನು ಸೂಚಿಸಿದ್ದರು. ಇವರಿಂದ ವಾಟಾಳ್ ನಾಗರಾಜರಷ್ಟು ಟೀಕೆಗೊಳಗಾಗದ ಮತ್ತೊಬ್ಬ ರಾಜಕಾರಣಿ ಇಲ್ಲ ಅನಿಸುತ್ತೆ. ಆದರೂ ಒಮ್ಮೆ ಕರ್ನಾಟಕದ ಗಡಿನಾಡಿನ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಬೇಕು ಎಂದು ಸರಕಾರ ಯೋಚಿಸುತ್ತಿದ್ದಾಗ ಸರಕಾರಕ್ಕೆ ಲಂಕೇಶರೇ ಖುದ್ದಾಗಿ ವಾಟಾಳ್ ನಾಗರಾಜರ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಇದು ಲಂಕೇಶ್! ಅವರು ಬಾಹ್ಯವಾಗಿ ವ್ಯಕ್ತಿಗಳೊಂದಿಗೆ ಜಗಳವಾಡುತ್ತಲೇ ಆಂತರಿಕವಾಗಿ ಅವರ ಬಗ್ಗೆ ಒಂದು ಗೌರವ, ಪ್ರೀತಿಯನ್ನು ಇಟ್ಟುಕೊಂಡಿದ್ದರು.
ಲಂಕೇಶ್ ಪತ್ರಿಕೆ ಕೆಟ್ಟವರಿಗೆ, ಭ್ರಷ್ಟರಿಗೆ ಅಹಂಕಾರಿಗಳಿಗೆ ದುಃಸಪ್ನವಾಗಿತ್ತು. ಪ್ರತಿ ವಾರ ಪತ್ರಿಕೆ ಹೊರಬರುವ ಮುನ್ನ ಲಂಕೇಶ್ ಈ ವಾರ ನನ್ನ ಬಗ್ಗೆ ಏನಾದರು ಬರೆದಿದ್ದಾರೆಯೋ ಎಂದು ಭ್ರಷ್ಟರು, ರಾಜಕಾರಿಣಿಗಳು ಹೆದರಿ ತರ ತರ ನಡುಗುತ್ತಿದ್ದರು. ಪತ್ರಿಕೆ ನೋಡಿದ ಮೇಲೆ ಸಧ್ಯ ಈ ವಾರ ಬಂದಿಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಂತೆ ಮುಂದಿನ ವಾರ ಹೇಗೋ ಏನೋ ಎಂಬ ಆತಂಕದಲ್ಲಿ ಕಾಲ ಕಳೆಯುತ್ತಿದ್ದರು. ಬರಿ ದೊಡ್ಡ ದೊಡ್ಡ ರಾಜಕಾರಿಣಿಗಳ ಬಗ್ಗೆಯಷ್ಟೇ ಬರೆಯದೆ ರಾಜ್ಯದ ಮೂಲೆ ಮೂಲೆಯಲ್ಲಿರುವ ಸಣ್ಣ ಸಣ್ಣ ಅಧಿಕಾರಿಗಳ ಹಗರಣಗಳನ್ನೂ ಬಯಲಿಗೆಳೆಯುತ್ತಿದ್ದರು. ಆ ಮಟ್ಟದ ಒಂದು ಹೆದರಿಕೆಯನ್ನು ಲಂಕೇಶ್ ಎಲ್ಲರಿಗೂ ಇಟ್ಟಿದ್ದರು. ಇದು ಮುಂದೆ ಸಾಹಿತಿಗಳಿಗೂ ವಿಸ್ತಾರವಾಯಿತು. ಪ್ರತಿವಾರವೂ ಒಬ್ಬೊಬ್ಬ ಸಾಹಿತಿಯನ್ನು ಮೈಮೇಲೆ ಕೆಡವಿಕೊಂಡವರ ತರ ಅವರ ಮೇಲೆ ಬರೆದರು. ಭೈರಪ್ಪ, ಕಂಬಾರ, ತೇಜಸ್ವಿ, ಅನಂತಮೂರ್ತಿ, ಚಂಪಾ ಅವರ ಮೇಲೆ ಇನ್ನಿಲ್ಲದಂತೆ ಬರೆದು ಅವರ ವ್ಯಯಕ್ತಿಕ ದ್ವೇಷವನ್ನೂ ಕಟ್ಟಿಕೊಂಡರು. ಇದೇ ವಿಷಯಕ್ಕೆ ಪೂರ್ಣಚಂದ್ರ ತೇಜಸ್ವಿಯವರಿಗೆ ಲಂಕೇಶ್ ಮೇಲೆ ಎಷ್ಟು ಸಿಟ್ಟಿತ್ತೆಂದರೆ ಅವರು ಲಂಕೇಶ ಸತ್ತಾಗ ಅವರ ಅಂತ್ಯಕ್ರಿಯೆಗೂ ಹೋಗಲಿಲ್ಲ. ಈ ನಿಟ್ಟಿನಲ್ಲಿ ಲಂಕೇಶ್ ನನಗೆ ಸಂಬಂಧಗಳನ್ನು ಸರಿಯಾಗಿ ನಿಭಾಯಿಸದ ಒಬ್ಬ ವಿಕ್ಷಿಪ್ತ ಮನಸ್ಸಿನ ವ್ಯಕ್ತಿಯಾಗಿ ಕಾಣಿಸುತ್ತಾರೆ.
ಪತ್ರಿಕೆಯಲ್ಲಿನ ಟೀಕೆ ಟಿಪ್ಪಣಿ ಮತ್ತು ಮರೆಯುವ ಮುನ್ನ ಪ್ರತಿವಾರದ ಸೆಳೆತವಾಗಿತ್ತು. ಇದರಲ್ಲಿ ಸಾಹಿತ್ಯ, ಕ್ರೀಡೆ, ರಾಜಕೀಯ, ಸಾಮಾನ್ಯ ಜನ, ದೊಡ್ಡ ದೊಡ್ಡ ವ್ಯಕ್ತಿಗಳು, ಇಂಗ್ಲೀಷ ಲೇಖಕರ ಬಗ್ಗೆ ಬರೆದರು. ಆದರೆ ಆಮೇಲಾಮೇಲೆ ಪ್ರತಿವಾರವೂ ಬರೆಯಲೇಬೇಕೆಂಬ ಅವಸರದ ಒತ್ತಡದಲ್ಲಿ ಬರೆದು ಮುಗಿಸಿದ ಅವರ ಅಂಕಣಗಳು ನೀರಸ ಎನಿಸತೊಡಗಿದವು. ಬಹಳಷ್ಟು ಸಾರಿ ತಮ್ಮ ಬೆಳಗಿನ ವಾಕ್, ಡಯಾಬಿಟಿಸ್ ಕಾಯಿಲೆ, ಮತ್ತು ತಮ್ಮ ಮಾಜಿ ಪ್ರೇಯಸಿಯರ ಬಗ್ಗೆ ಬರೆದು ಅಂಕಣಗಳನ್ನು ತುಂಬಿಸಿದರು. ಇವುಗಳ ಜೊತೆ ನೀಲು ಪದ್ಯಗಳು ಪತ್ರಿಕೆಗೆ ಒಂದು ಹೊಸ ಬೆರಗನ್ನು ತಂದುಕೊಟ್ಟವು. ಅವು ಚಿಕ್ಕದಾಗಿದ್ದರೂ ಅಗಾಧವಾದುದನ್ನೇನೋ ಹೇಳುತ್ತಿದ್ದವು ಎನಿಸುತ್ತಿತ್ತು. ಅವುಗಳಲ್ಲಿ ಸದಾ ಒಂದು ಜಾಣತನ, ಪೋಲಿತನ, ಇಲ್ಲವೇ ವಿಲಕ್ಷಣತೆಯಿರುತ್ತಿತ್ತು. ಬಹಳಷ್ಟು ಸಾರಿ ಅವು ಪ್ರೇಮ ಕಾಮದ ಸುತ್ತ ಸುತ್ತಿದರೂ ಆಗೊಮ್ಮೆ ಈಗೊಮ್ಮೆ ಬದುಕಿನ ಬೇರೆ ಸ್ತರಗಳ ಬಗ್ಗೆಯೂ ಇರುತ್ತಿದ್ದವು. ಪೋಲಿ ಓದುಗರ ಗುಂಪೊಂದನ್ನು ಹಿಡಿದಿಟ್ಟುಕೊಳ್ಳಲೆಂದೇ ಸೃಷ್ಟಿಸಿದ ಅವರ ‘ತುಂಟಾಟ’ವಂತೂ ಹದಿಹರೆಯದವರ ಮೈಮನಗಳಲ್ಲಿ ಕಿಚ್ಚು ಎಬ್ಬಿಸುತ್ತಿತ್ತು.
ಕೆಲವು ಸಾರಿ ಲಂಕೇಶ್ ಯಾವ ಮಟ್ಟಕ್ಕೆ ಟಿಕಿಸುತ್ತಿದ್ದರೆಂದರೆ ನಿಸಾರ್ ಅಹಮ್ದವವರನ್ನು, ಲಕ್ಷ್ಮಿನಾರಾಯಣ ಭಟ್ಟರನ್ನು ಕ್ಯಾಸೆಟ್ ಕವಿಯೆಂದು ಕುಹಕವಾಡುತ್ತಿದ್ದರು. ಆದರೆ ಆ ಕ್ಯಾಸೆಟ್ ಸಂಸ್ಕೃತಿಯಿಂದಲೇ ಆಧುನಿಕ ಕನ್ನಡ ಕಾವ್ಯ ಮನೆಮಾತಾಗಿದ್ದು ಅವರ ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ. ನರಸಿಂಹಸ್ವಾಮಿಯವರನ್ನು ಅವರೊಬ್ಬ ಕವಿಯೇ ಅಲ್ಲ ಅವರ ಮೇಲೆ ಖ್ಯಾತ ಇಂಗ್ಲೀಷ ಪ್ರೇಮ ಕವಿ ರಾಬರ್ಟ್ ಬರ್ನ್ಸನ ದಟ್ಟ ಪ್ರಭಾವವಿದೆ ಎನ್ನುವಷ್ಟರಮಟ್ಟಿಗೆ ಟೀಕಿಸುತ್ತಿದ್ದರು. ಭೈರಪ್ಪ ಬರಿ ಬ್ರಾಹ್ಮಣ ಸಂವೇದನೆಗಳ ಬಗ್ಗೆ ಬರಿತಾರೆ ಎಂದು ಹೀಯಾಳಿಸುತ್ತಿದ್ದರು. ದೊಡ್ದರಂಗೇಗೌಡರನ್ನು ಕನ್ನಡಿಗರ ಕರುಳನ್ನೇ ಬಗೆದು ಬರೆಯುವ ಕವಿಯೆಂದು ಲೇವಡಿಮಾಡುತ್ತಿದ್ದರು. ಹೀಗೆ ಅವರು ಬೇರೆಯವರನ್ನು ಯಾವಾಗಲೂ ಒಂದು proccupied mindನಿಂದ ನೋಡುತ್ತಿದ್ದರು. ಇದು ನಿಜಕ್ಕೂ ಅವರ ಅನಿಸಿಕೆಯೋ ಅಥವಾ ಅವರ ವಿಧ್ವಂಸಕ ಮನಸ್ಸೋ ಅಥವಾ ಇಂಟೆಲೆಕ್ಚುಯಲ್ ಜೇಲಸಿಯೋ ಗೊತ್ತಾಗುತ್ತಿರಲಿಲ್ಲ.
ಹೊಸಬರಿಗೆ ಆದರೆ ಗಟ್ಟಿ ಬರಹಗಾರರಿಗೆ ತಮ್ಮ ಪತ್ರಿಕೆಯಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟು ರೇಖಾರಾಣಿ, ತೇಜಸ್ವಿನಿ, ಬಿ.ಟಿ ಜಾಹ್ನವಿ, ಗಂಗಾಧರ್ ಮೊದಲಿಯಾರ್, ಸಾರಾ ಅಬೂಬ್ಕರ್, ಡಿ.ಬಿ ಚಂದ್ರೇಗೌಡ ಇನ್ನೂ ಮುಂತಾದವರನ್ನು ಬೆಳೆಸಿದರು. ಅವರು ಆಯ್ಕೆ ಮಾಡುತ್ತಿದ್ದುದೇ ಅಂಥ ಬರಹಗಾರರನ್ನು. ಆ ಬರಹಗಾರರ ಮೇಲೆ ನಮಗೆಲ್ಲ ಚನ್ನಾಗಿ ಬರೆಯುತ್ತಾರೆ ಎಂಬ ನಂಬಿಕೆಯಿತ್ತು. ಆದರೆ ಆಮೇಲಾಮೇಲೆ ಬಂದ ಲೇಖಕರ ಕಥೆ, ಲೇಖನಗಳನ್ನು ಓದಿದ ಮೇಲೆ ಅವರ ಆಯ್ಕೆಯ ಬಗ್ಗೆ ಅನುಮಾನಗಳು ಶುರುವಾದವು. ಅದಕ್ಕೊಂದು ಉತ್ತಮ ಉದಾಹರಣೆ ನಿಮ್ಮಿ ಕಾಲಂ. ಅಸ್ತಿತ್ವದಲ್ಲಿಯೇ ಇರದ ಗಂಜುಗಣ್ಣಿನ ಹುಡುಗಿಯ ಫೋಟೊವೊಂದನ್ನು ಹಾಕಿ ಅದಕ್ಕೆ ‘ನಿಮ್ಮಿ ಕಾಲಂ’ ಎಂದು ಹೆಸರಿಟ್ಟು ಯಾರದೋ (ಬಹುಶಃ ಅನಿತಾ ನಟರಾಜ್) ಕೈಲಿ ಬರೆಸಿದ್ದರು. ಆ ಕಾಲಂನಿನಲ್ಲಿ ಬರಿ ನಿಮ್ಮಿ ಮತ್ತು ಅವಳ ಪ್ರಿಯಕರ ಅಮರನ ವಿಷಯಗಳೇ ತುಂಬಿರುತ್ತಿದ್ದವು. ಅವರಿಬ್ಬರು ಈ ವಾರ ಎಲ್ಲಿ ಹೋದರು, ಏನು ಮಾಡಿದರು, ಅವರನ್ನು ನೋಡಲು ಯಾರು ಬಂದರು ಬರಿ ಇಂಥವೇ ಶುಷ್ಕ ವಿಷಯಗಳಿರುತ್ತಿದ್ದವೇ ಹೊರತು ಬೌದ್ಧಿಕತೆಯ ಮಟ್ಟದಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದು ಅದು ಲಂಕೇಶ್ ಪತ್ರಿಕೆಯ ಗುಣಮಟ್ಟದಲ್ಲಿ ಒಂದು ಕಪ್ಪು ಚುಕ್ಕಿಯಾಗಿತ್ತೆಂದು ನನಗೆ ಆಗಾಗ ಅನಿಸುತ್ತಿತ್ತು. ಅಲ್ಲದೇ ಅವರು ಆಗಾಗ ಯುವ ಬರಹಗಾರರಿಗೆ ನೀನು ತೇಜಸ್ವಿ ತರ ಬರಿ, ಆಲನಹಳ್ಳಿ ತರ ಬರಿ, ಪ್ರತಿಭಾಳ ತರ ಬರಿ ಎಂದು ಉಪದೇಶಿಸುತ್ತಿದ್ದರು. ಆದರೆ ನನಗಿಲ್ಲಿ ಅಚ್ಚರಿಯಾಗೋದು ಯುವ ಬರಹಗಾರರು ಬೇರೆ ಬರಹಗಾರನ್ನು ಯಾಕೆ ಮಾದರಿಯಾಗಿಟ್ಟುಕೊಳ್ಳಬೇಕೆಂಬುದು? ಎಲ್ಲ ಬರಹಗಾರರಿಗೂ ಅವರದೇ ಆದಂಥ ಒಂದು ವಿಶಿಷ್ಟ ಶೈಲಿಯಿರುತ್ತದೆ ಮತ್ತು ಆ ಮೂಲಕ ಅವರು ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಹೀಗಿರುವಾಗ ಅವರು ಯಾಕೆ ಬೇರೆಯವರ ತರ ಬರೆಯಬೇಕು? ಬರೆದರೆ ಅವರಿಗೂ ಇವರಿಗೂ ಏನು ವ್ಯತ್ಯಾಸ? ಏಕತಾನತೆ ಸೃಷ್ಟಿಯಾಗುವದಿಲ್ಲವೆ? ಇಂಥ ಸಣ್ಣ ವಿಷಯ ದೈತ್ಯ ಪ್ರತಿಭೆಯ ಬರಹಗಾರ ಲಂಕೇಶರಿಗೆ ತಿಳಿಯುತ್ತಿರಲಿಲ್ಲವೆ? ಗೊತ್ತಿಲ್ಲ.
ಡಿ. ಆರ್. ನಾಗರಾಜ್ ಹೇಳುವಂತೆ ಲಂಕೇಶ್ ಭಾರತದ ಹತ್ತು ಶ್ರೇಷ್ಟ ಬರಹಗಾರರಲ್ಲಿ ಒಬ್ಬರು ಎನ್ನುವದರಲ್ಲಿ ಎರಡು ಮಾತಿಲ್ಲ. ಅವರು ‘ಅವ್ವ’ನಂಥ ಶ್ರೇಷ್ಟ ಕವನಗಳನ್ನು ಕೊಟ್ಟಂತೆಯೇ ‘ಮುಟ್ಟಿಸಿಕೊಂಡವನು’, ‘ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ’ಯಂಥ ಕಥೆಗಳನ್ನೂ, ‘ಅಕ್ಕ’, ‘ಮುಸ್ಸಂಜೆಯ ಕಥಾಪ್ರಸಂಗ’ದಂಥ ಕಾದಂಬರಿಗಳನ್ನೂ ‘ಸಂಕ್ರಾಂತಿ’ಯಂಥ ಅದ್ಭುತ ನಾಟಕಗಳನ್ನೂ ಕೊಟ್ಟವರು. ಆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ಭಿನ್ನವಾಗಿ ಗುರುತಿಸಿಕೊಂಡವರು. ಆದರೆ ಲಂಕೇಶ್ ತಾವೊಬ್ಬರೇ ಶ್ರೇಷ್ಟ ಬರಹಗಾರ ಎನ್ನುವ ಅಹಂನೊಂದಿಗೆ ಬದುಕುತ್ತಿದ್ದರು. ಅದು ಯಾವಾಗಲೂ ಅವರ ಬರಹದಲ್ಲಿ ವ್ಯಕ್ತವಾಗುತ್ತಿತ್ತು. ತಾನು ಬರೆದಿದ್ದೇ ಶ್ರೇಷ್ಟ ಬೇರೆಯವರು (ತನ್ನ ಸಮಕಾಲೀನರು) ಬರೆದಿದ್ದೆಲ್ಲ ಕನಿಷ್ಟ ಎನ್ನುವ ನಿಲುವನ್ನು ತಾಳಿದ್ದರು. ಆದರೂ ಅಪರೂಪಕ್ಕೊಮ್ಮೆ ಇತರರನ್ನು ಮೆಚ್ಚಿಕೊಂಡು ಒಂದೆರಡು ಮಾತುಗಳನ್ನು ಕೂಡ ಬರೆಯುತ್ತಿದ್ದರು.
ಅದ್ಭುತ ಪ್ರತಿಭೆಯ ಬರಹಗಾರ ಲಂಕೇಶ್ ನನಗೆ ಸದಾ ಸಿಟ್ಟಿನ, ಸೊಕ್ಕಿನ ಆದರೆ ಎಚ್ಚರದಿಂದ ಕೆಲಸ ಮಾಡುವ ಮನುಷ್ಯನಂತೆ ಕಾಣುತ್ತಿದ್ದರು. ಅದು ಅವರ ಬರಹದಲ್ಲಿ ಕಾಣುತ್ತಿತ್ತು. ಅವರಲ್ಲಿ ಒಂದು ಮುಗ್ಧತೆ, ಅಸೂಯೆ, ಹಟಮಾರಿತನ, ಥಟ್ ಅಂತ ಹೇಳುವ ಸ್ವಭಾವ ಎಲ್ಲವನ್ನು ಗ್ರಹಿಸುವ ಸೂಕ್ಷ್ಮ ಮನಸ್ಸು ಹಾಗೂ ಚಿಕಿತ್ಸಿಕ ಬುದ್ಧಿಯಿತ್ತು. ಒಟ್ಟಾರೆಯಾಗಿ ಲಂಕೇಶರು ಹೀಗ್ಹೀಗೆ ಇದ್ದರು ಎಂದು ಹೇಳುವದು ಕಷ್ಟ. ಒಂದೇ ಹಿಡಿತಕ್ಕೆ ಸಿಗದ ವ್ಯಕ್ತಿತ್ವ ಅವರದು. ಇವತ್ತು ಲಂಕೇಶ್ ನೆನಪು ಮಾತ್ರ. ಅವರು ಸತ್ತು ಇಂದಿಗೆ ಹತ್ತು ವರ್ಷಗಳಾದವು. ಲಂಕೇಶ್ ಇಲ್ಲದೆ ಹತ್ತು ವರ್ಷಗಳನ್ನು ಕಳೆದುಬಿಟ್ಟೆವಾ? ನೆನೆಸಿಕೊಂಡರೆ ಅಚ್ಚರಿಯೊಂದಿಗೆ ವಿಷಾದವೊಂದು ಮನಸ್ಸನ್ನು ತಟ್ಟುತ್ತದೆ. ಹಾಗೆಂದೇ ಅವರನ್ನು ಮತ್ತೆ ಮತ್ತೆ ಕೇಳುತ್ತೇನೆ ‘ನೆನಪಾಗಿ ಹಿಂಡದಿರು ಹುಳಿಮಾವಿನ ಮರವೇ......’ ಎಂದು.
-ಉದಯ್ ಇಟಗಿ