ಬದುಕೇ, ನಿನ್ನಲ್ಲೆಂಥಾ ಮುನಿಸು ನನಗೆ?
ಡಿಸೆಂಬರ್ 31, 2009 ಇಡಿ ಜಗತ್ತೇ ಹೊಸವರ್ಷವನ್ನು ಎದುರುಗೊಳ್ಳುವ ಸಂಭ್ರಮ, ಖುಶಿಗಳಲ್ಲಿರಬೇಕಾದರೆ ನಾನು ಮಾತ್ರ ಖಿನ್ನತೆಗೊಳಗಾಗಿದ್ದೆ. ಇಡಿ ಆಕಾಶವೇ ಕಳಚಿ ತಲೆ ಮೇಲೆ ಬಿದ್ದವರ ತರ ಕುಳಿತಿದ್ದೆ. ಇನ್ನು ನನ್ನ ಬದುಕು ಮುಗಿದೇ ಹೋಯಿತು ಎನ್ನುವ ಆತಂಕ ಕಾಡುತ್ತಿತ್ತು. ಜೊತೆಗೆ ಅಂದು ನನ್ನನ್ನು ಇನ್ನಿಲ್ಲದ ಒಂದು ರೀತಿಯ ಶೂನ್ಯ, ದಿಗ್ಭ್ರಮೆಗಳು ಆವರಿಸಿಬಿಟ್ಟಿದ್ದವು. ಅದಕ್ಕೆ ಕಾರಣ ನನಗೆ ಅಂದೇ ಸಕ್ಕರೆ ಕಾಯಿಲೆಯಿದೆ ಎಂದು ಖಚಿತವಾಗಿತ್ತು.
ವರ್ಷದ ಕೊನೆಯಲ್ಲಿ ಪ್ರತಿವರ್ಷದಂತೆ ಈ ಸಲವೂ ರೆಸಿಡೆನ್ಸ್ ವೀಸಾ ತೆಗೆಸುವದಕ್ಕೋಸ್ಕರ ಮೆಡಿಕಲ್ ಟೆಸ್ಟ್ ಮಾಡಿಸಬೇಕಾಗಿತ್ತು. ಅದರಲ್ಲಿ ಮುಖ್ಯವಾಗಿ ಏಡ್ಸ್ ಮತ್ತು ಹೆಪಟೈಟೆಸ್ ಪರೀಕ್ಷೆ ಮಾಡಿಸಬೇಕು. ಅದರಲ್ಲಿ ಉತ್ತೀರ್ಣನಾದರೆ ಮಾತ್ರ ರೆಸಿಡೆನ್ಸ್ ವೀಸಾ. ಇಲ್ಲವಾದರೆ ನಮ್ಮನ್ನು ನಮ್ಮ ದೇಶಕ್ಕೆ ವಾಪಾಸ್ ಕಳಿಸಲು ಅಂದಿನಿಂದಲೇ ತಯಾರಿ ನಡೆಸುತ್ತಾರೆ. ಈ ವ್ಯವಸ್ಥೆ ನಮಗೆಲ್ಲಾ ಕೄರವಾಗಿ ಕಂಡರೂ ಈ ದೇಶದವರು ಪರಿಪಾಲಿಸುತ್ತ ಬಂದ ರೀತಿಯೇ ಹಾಗಿದೆ. ಇರಲಿ. ನಾನು ಈಗ್ಗೆ ಒಂದೆರೆಡು ತಿಂಗಳಿನಿಂದ ರಾತ್ರಿ ಅವಶ್ಯಕತೆಗಿಂತ ಜಾಸ್ತಿ ಎರೆಡೆರಡು ಸಾರಿ ಮೂತ್ರವಿಸರ್ಜನೆಗೆ ಹೋಗುತ್ತಿದ್ದೆ. ಮತ್ತು ಮೈ ಕೊರೆಯುವ ಚಳಿಯಲ್ಲೂ ಬಾಯಿ ಆಗಾಗ ಒಣಗುತ್ತಿತ್ತು. ಇದಕ್ಕೆ ಕಾರಣವೇನು ಎಂದು ನಮ್ಮೊಟ್ಟಿಗೆ ಇರುವ ಇಂಡಿಯನ್ ಡಾಕ್ಟರ್ ಡಾ. ಸಾಹು ಅವರನ್ನು ಕೇಳಿದಾಗ ಅವರು “ಏನೂ ಇಲ್ಲ ನೀನು ಮೊದಲಿನಿಂದಲೂ ನೀರನ್ನು ಜಾಸ್ತಿ ಕುಡಿಯುತ್ತೀಯ ಅದಕ್ಕೆ ಹಾಗಾಗುತ್ತೆ. ಅದರ ಬಗ್ಗೆ ಜಾಸ್ತಿ ಯೋಚಿಸುವ ಅಗತ್ಯವಿಲ್ಲ. ಒಂದು ವೇಳೆ ನಿನಗೆ ಅನುಮಾನವಿದ್ದರೆ ಹೇಗೂ ರೆಸಿಡೆನ್ಸ್ ವೀಸಾಗೋಸ್ಕರ ಮೆಡಿಕಲ್ ಟೆಸ್ಟ್ ಮಾಡಿಸಿತ್ತೀಯಲ್ಲ ಆಗ ಒಂದು ಸಾರಿ ಶುಗರ್ ಟೆಸ್ಟ್ ಮಾಡಿಸಬಿಡು ನೋಡೋಣ” ಎಂದು ಹೇಳಿದ್ದರು.
ನಾನು ಈ ಟೆಸ್ಟನ್ನು ಮಾಡಿಸುವದೋ ಬೇಡವೋ ಎಂಬ ಅರೆಮನಸ್ಸಿನಿಂದಲೇ ಯಾವುದಕ್ಕೂ ಇರಲಿ ಎಂದು ಡಿಸೆಂಬರ್ 30 ರಂದು ಶುಗರ್ ಟೆಸ್ಟ್ ಮಾಡಿಸಿದ್ದೆ. ಅದು 322mg/dL ಬಂದಿತ್ತು. ಅಂದೇ ತೂಕವನ್ನು ಚೆಕ್ ಮಾಡಿದಾಗ ಗಣನೀಯವಾದ ಇಳಿಕೆ ಕಂಡುಬಂದಿತ್ತು. ನಮ್ಮ ಡಾಕ್ಟರು ಒಳಗೊಳಗೆ ಸಕ್ಕರೆ ಕಾಯಿಲೆ ಇರಬಹುದೆಂದು ಖಾತ್ರಿಯಾದರೂ ಅದನ್ನು ಹೊರಗೆಡವದೇ “ಇದು ತಪ್ಪಿರಬಹುದು. ನಾಳೆಯೇ ಇನ್ನೊಂದು ಸಾರಿ ಮಾಡಿಸು. ಆದರೆ ಈ ಸಾರಿ ಬೇರೆ ಬೇರೆ ಕಡೆ ಮಾಡಿಸು, ಯಾವದಕ್ಕೂ ಒಂದು ಸೆಕೆಂಡ್ ಒಪಿನಿಯನ್ ಇರಲಿ” ಎಂದು ಹೇಳಿದ್ದರು. ಏಕೆಂದರೆ ಪದೆ ಪದೆ ಮೂತ್ರವಿಸರ್ಜನೆಗೆ ಹೋಗುವದು, ಬಾಯಿ ಒಣಗುವದು ಹಾಗೂ ತೂಕದಲ್ಲಿ ಇಳಿಕೆಯಾಗುವದು ಸಕ್ಕರೆ ಕಾಯಿಲೆಯ ಮುಖ್ಯ ಲಕ್ಷಣಗಳು.
ಮಾರನೆ ದಿವಸ ಅಂದರೆ ಡಿಸೆಂಬರ್ 31, 2009 ರಂದು ಬೆಳಿಗ್ಗೆ ಸ್ನಾನ ಮಾಡಿ ಬರಿ ಹೊಟ್ಟೆಯಲ್ಲಿ ಡಾ. ಸಾಹು ಕೆಲಸ ಮಾಡುತ್ತಿರುವ ಆಸ್ಪತ್ರೆಗೆ ಹೋಗಿ ರಕ್ತ ಮತ್ತು ಮೂತ್ರಗಳನ್ನು ಪರೀಕ್ಷೆಗೆ ಕೊಟ್ಟು ಬಂದೆ. ಹಾಗೆಯೇ ಹೊರಗೆ ಪ್ರೈವೇಟ್ ಲ್ಯಾಬರೋಟರಿಯೊಂದಲ್ಲಿ ರಕ್ತ ಮತ್ತು ಮೂತ್ರಗಳನ್ನು ಪರೀಕ್ಷೆಗೆ ಕೊಟ್ಟು ಬಂದೆ. ‘ಹನ್ನೆರಡು ಗಂಟೆಗೆ ಬಂದು ರಿಸಲ್ಟ್ ಶೀಟನ್ನು ತೆಗೆದುಕೊಂಡು ಹೋಗಿ’ ಎಂದು ಹೇಳಿದರು. ಸರಿ ಎಂದು ಮನೆಗೆ ಬಂದೆ. ಅಂದು ಕಾಲೇಜಿನಲ್ಲಿ ಖುಶಿ ಖುಶಿಯಾಗಿ ಓಡಾಡಿದೆ. ನನಗೇನಾಗಿದೆ? ಗುಂಡುಕಲ್ಲು ಇದ್ದ ಹಾಗೆ ಇದ್ದೇನೆ. ಯಾತರ ಕಾಯಿಲೆ? ಕಾಯಿಲೆಗಳು ನನ್ನನ್ನು ಕಂಡರೆ ಹೆದರಿ ಓಡಿಹೋಗುತ್ತವೆ. ನಾನು ಇನ್ನೂ ಕಡಿಮೆ ಕಡಿಮೆ ಎಂದರೂ ಐವತ್ತು ವರ್ಷ ಬದುಕಬಲ್ಲೆ ಎಂಬ ಆತ್ಮವಿಶ್ವಾಸದಲ್ಲಿದ್ದೆ. ಮೇಲಾಗಿ ನನ್ನ ಹೆಂಡತಿ ನನಗೆ ಆಗಾಗ “ನೀವು ಉತ್ತರ ಕರ್ನಾಟಕದವರು ರೊಟ್ಟಿ ತಿಂದ ಜಟ್ಟಿಗಳು, ನಿಮಗೆ ಯಾತರ ಕಾಯಿಲೆಯೂ ಬರುವದಿಲ್ಲ. ನೀವೆಲ್ಲ ದೀರ್ಘಾಯುಷಿಗಳು. ಕಾಯಿಲೆಗಳು ಬರುವದೇನಿದ್ದರೂ ನಮ್ಮಂಥ ಬೆಂಗಳೂರಿಗರಿಗೆ ಮಾತ್ರ ಬರುತ್ತವೆ.” ಎಂದು ತಮಾಷೆ ಮಾಡುತ್ತಿದ್ದಳು. ಹೌದಲ್ಲವೆ? ನನಗೇನಾಗಿದೆ? ನಾನು ನೆಲಕ್ಕೆ ಜಾಡಿಸಿ ಒದ್ದರೆ (ನೆಲದಿಂದ) ನೀರು ಬರುವ ಹಾಗೆ ಇದ್ದೇನೆ. ಹೀಗಿದ್ದ ಮೇಲೆ ಯಾವ ಸಕ್ಕರೆ ಕಾಯಿಲೆಯೂ ಇಲ್ಲ ಮತ್ಯಾವ ಕಾಯಿಲೆಯೂ ಇಲ್ಲ. ಎಲ್ಲವೂ ಸರಿಯಾಗಿದೆ. ಸರಿಯಾಗಿರುತ್ತದೆ ಕೂಡ. ಏನೂ ಆಗಿರುವದಿಲ್ಲ ಎಂಬ ಭಾವನೆಯಲ್ಲಿಯೇ ಇದ್ದೆ. ಆದರೆ ಹನ್ನೆರಡು ಗಂಟೆಗೆ ಬಂದ ಫಲಿತಾಂಶ ನನ್ನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತ್ತು. ಎರಡೂ ಕಡೆಯಿಂದ ಬಂದ ಫಲಿತಾಂಶಗಳು ನನಗೆ ಸಕ್ಕರೆ ಕಾಯಿಲೆ ಇದೆ ಎಂದು ಖಚಿತಪಡಿಸಿದ್ದವು. ಬದುಕಿನ ಲೆಕ್ಕಾಚಾರಗಳೇ ಹಾಗೆ! ಎಲ್ಲ ಸರಿಯಾಗಿದೆ ಎಂದುಕೊಳ್ಳುವಾಗಲೇ ಎಲ್ಲೋ ಒಂದು ಕಡೆ ತಪ್ಪಿಹೋಗಿರುತ್ತದೆ.
ಡಾಕ್ಟರ್ ಸಾಹು ಅವರು ನಗು ನಗುತ್ತಾ “ಇವತ್ತಿನಿಂದ ನಮ್ಮ ಕಂಪನಿ ಸೇರಿದೆ. (ಏಕೆಂದರೆ ಅವರು ಸಹ ಒಬ್ಬ ಡಯಾಬಿಟಿಕ್) ಈ ಟ್ಯಾಬ್ಲೆಟ್ಸ್ ದಿನಾಲು ಬೆಳಿಗ್ಗೆ ತಗೊ. ಮತ್ತು ಪ್ರತಿನಿತ್ಯ ಒಂದು ತಾಸಿನಷ್ಟು ವಾಕ್ ಮಾಡು. ದಿನಕ್ಕೆ ಮೂರು ಸಾರಿ ತಿನ್ನುವ ಬದಲು ಐದು ಸಾರಿ ತಿನ್ನು. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಶುಗರ್ ಲೆವೆಲ್ ನಾರ್ಮಲ್ ಲೆವೆಲ್ಗಿಂಾತ ಕಡಿಮೆ ಹೋಗದಂತೆ ನೋಡಿಕೊ. ಏಕೆಂದರೆ ಸ್ವಲ್ಪ ಹೆಚ್ಚಿದ್ದರೆ ಏನೂ ಆಗುವದಿಲ್ಲ. ಆದರೆ ನಾರ್ಮಲ್ ಲೆವೆಲ್ಗಿಂಿತ ಕಡಿಮೆ ಇರುವದು ಬಹಳ ಅಪಾಯಕಾರಿ.” ಎಂದು ಸಲಹೆ ನೀಡಿದರು.
ಅಯ್ಯೋ..., ಇದ್ದಕ್ಕಿದ್ದಂತೆ ಇದೇನಾಯ್ತು? ನಮ್ಮ ವಂಶದಲ್ಲಿಯೇ ಯಾರಿಗೂ ಇರದ ಈ ಕಾಯಿಲೆ ನನಗೇಕೇ ಬಂತು? ಎಲ್ಲಿ ಲೆಕ್ಕ ತಪ್ಪಿತು? ಹೀಗೇಕಾಯ್ತು? ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಾಗಲೇ ಮನಸ್ಸಿಗೆ ಒಂದು ರೀತಿಯ ಮಂಕು ಕವಿಯಿತು. ಇಲ್ಲಿ ದಿನಕ್ಕೆ ಬರಿ ಒಂದು ಗಂಟೆ ಪಾಠ ಮಾಡಿ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುವದರಿಂದ ದೈಹಿಕ ಶ್ರಮದ ಕೊರತೆಯಿಂದ ಹೀಗಾಯ್ತೆ? ಅಂದರೆ ಸುಖ ಹೆಚ್ಚಾಗಿ ಈ ಕಾಯಿಲೆ ಬಂತೇ? ಅಥವಾ ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳದಿದ್ದಕ್ಕೆ ಹೀಗಾಯ್ತೆ? ಗೊತ್ತಿಲ್ಲ. ಬರಬಾರದಾಗಿತ್ತು. ಬಂದಾಗಿದೆ. ಬದುಕಲ್ಲಿ ಬಂದಿದ್ದನ್ನು ಅಪ್ಪಿ ಒಪ್ಪಿಕೊಂಡು ನಡೆಯಬೇಕು ಎನ್ನುವ ಮನೋಭಾವನೆಯನ್ನು ನಾನು ಮೊದಲಿನಿಂದಲೂ ಹೊಂದಿದ್ದರೂ ಮನದ ಮೂಲೆಯಲ್ಲೆಲ್ಲೋ ಇಂದಿನಿಂದ ನನ್ನ ಆಯುಷ್ಯ ಬೇಗ ಬೇಗ ಕ್ಷೀಣಿಸುತ್ತಾ ಹೋಗುತ್ತದಲ್ಲವೇ? ಸಾವಿನ ಸೆರಗನ್ನು ಸದಾ ಕೈಯಲ್ಲಿ ಹಿಡಿದುಕೊಂಡೇ ಬದುಕಬೇಕು ಎನ್ನುವ ಅತಂಕ. ಓ ಬದುಕೇ, ನೀನೆಷ್ಟೊಂದು ಕೄರಿ? ಇಷ್ಟು ದಿವಸ ಕಷ್ಟ ಪಟ್ಟು ಬದುಕಲ್ಲಿ ಮುಂದೆ ಬಂದೆ. ಇನ್ನು ಮುಂದೆ ಎಂಜಾಯ್ ಮಾಡೋಣ ಎನ್ನುವಷ್ಟರಲ್ಲಿ ಈ ಸ್ಥಿತಿಯನ್ನು ತಂದಿಟ್ಟೆಯಾ? ಎಷ್ಟೊಂದು ಕನಸುಗಳನ್ನು ಕಂಡಿದ್ದೇನಲ್ಲ? ಬೆಂಗಳೂರಿನಲ್ಲೊಂದು ಮನೆಯನ್ನು ಕಟ್ಟಬೇಕು, ನನ್ನದೇ ಆದಂಥ ಸಣ್ಣ ಫಾರ್ಮ್ ಹೌಸ್ನ್ನು ಆರಂಭಿಸಿ ಅಲ್ಲಿ ಸಾವಯವ ಬೇಸಾಯ ಪದ್ಧತಿಯ ಮೂಲಕ ಹೆಚ್ಚಿನ ಇಳುವರಿಯನ್ನು ತೆಗೆಯುವದು ಹೇಗೆ ಎಂದು ತೋರಿಸಬೇಕು, ಪತ್ರಿಕೆಯೊಂದನ್ನು ಆರಂಭಿಸಬೇಕು, ನಾಟಕದಲ್ಲಿ ಅಭಿನಯಿಸಬೇಕು, ಟೀವಿ ಮಾಧ್ಯಮದಲ್ಲಿ ಕೆಲಸ ಮಾಡಬೇಕು, ಸಾಧ್ಯವಾದರೆ ನಿರ್ದೇಶನವನ್ನು ಕಲಿತು ಚಲನ ಚಿತ್ರವೊಂದನ್ನು ನಿರ್ದೇಶಿಸಬೇಕು, ದೇಶ ವಿದೇಶಗಳನ್ನು ಸುತ್ತಬೇಕು, ಮಗಳನ್ನು ದೊಡ್ದಮಟ್ಟದ ಪತ್ರಕರ್ತೆಯನ್ನಾಗಿ ಮಾಡಬೇಕು, ಅಬ್ಬಬ್ಬ...... ಒಂದೇ.... ಎರಡೇ....? ನೂರಾರು ಕನಸುಗಳು! ಅವೆಲ್ಲ ಈಡೇರುತ್ತವೆಯೇ? ನಾನಿರುವದರೊಳಗಾಗಿ ಇವನ್ನೆಲ್ಲ ಮಾಡಿ ಮುಗಿಸಬಲ್ಲೆನೆ? ಸಾವಿನ ಸಮೀಪಕ್ಕೆ ಬಂದ ವ್ಯಕ್ತಿ ವರಾಗ್ಯ ಭಾವವನ್ನು ತಳೆಯುವದರ ಜೊತೆಗೆ ಹೆಚ್ಚು ಕರ್ತವ್ಯ ಪ್ರಜ್ಞೆಯುಳ್ಳವನಾಗುತ್ತಾನೆ. ತಾನು ಮಾಡಬೇಕಾದ ಕೆಲಸಗಳನ್ನು ಬೇಗ ಬೇಗನೆ ಮಾಡಿ ಮುಗಿಸುತ್ತಾನೆ. ಬಹುಶಃ ಈ ಕಾರಣಕ್ಕೇನೇ ಈ ಕಾಯಿಲೆ ನನಗೆ ವರವಾಗಿ ಬಂದಿರಬಹುದೆ? ಗೊತ್ತಿಲ್ಲ.
ಸಕ್ಕರೆ ಕಾಯಿಲೆ ದೊಡ್ಡ ಕಾಯಿಲೆಯೇನಲ್ಲ. ಭಾರತದಲ್ಲಿ ಶೇಕಡಾ 50 ರಷ್ಟು ಜನಕ್ಕೆ ಇದೆ. ಪ್ರಶ್ನೆ ಅದಲ್ಲ. ಬಹಳಷ್ಟು ಜನಕ್ಕೆ ಈ ಕಾಯಿಲೆ ಬರುವದು ಐವತ್ತೋ ಅರವತ್ತರ ನಂತರ. ಆದರೆ ನನಗಿನ್ನೂ 35. ಆಗಲೇ ಇದು ನನ್ನನ್ನು ಮುತ್ತಿಬಿಟ್ಟಿದ್ದರಿಂದ ಆಕಾಶವೇ ತಲೆ ಮೇಲೆ ಬಿದ್ದವರ ತರ ಕುಳಿತುಬಿಟ್ಟೆ. ಇಡೀ ಜೀವನೋತ್ಸಾಹವೇ ಬತ್ತಿ ಹೋದಂತ ಅನುಭವ. ಹಿಂದೆ ಗೆಳೆಯ ಮಂಜುವಿಗೆ ಇದೇ ಕಾಯಿಲೆ ಬಂದಾಗ “ಅಷ್ಟೆ ತಾನೆ? ಅದಕ್ಯಾಕೆ ಯೋಚನೆ ಮಾಡ್ತಿ ಮಾರಾಯ? ಅದೇನೂ ದೊಡ್ದ ಕಾಯಿಲೆಯಲ್ಲ. ಅರಾಮಾಗಿರು” ಎಂದು ಹೇಳಿದ್ದೆ. ಹೌದು, ಅದೇನೂ ದೊಡ್ಡ ಕಾಯಿಲೆಯಲ್ಲ. ಆದರೆ ಇಂದು ನನಗೆ ಅದೇ ಕಾಯಿಲೆ ದೊಡ್ಡದಾಗಿ ಕಾಣಿಸುತ್ತಿದೆ. ಬೇರೆಯವರು ತೊಂದರೆಯಲ್ಲಿರುವಾಗ ಅವರಿಗೆ ಏನೋ ಒಂದು ಸಮಾಧಾನ ಹೇಳಿ ಸುಮ್ಮನಾಗುತ್ತೇವೆ. ಆದರೆ ಅದೇ ತೊಂದರೆ, ಅನುಭವಗಳು ನಮಗೆ ಆದಾಗ ನಾವು ಪ್ರತಿಕ್ರಿಯಿಸುವ ರೀತಿಯೇ ಬೇರೆ. ಮೇಲಾಗಿ ಕೇವಲ ಒಂದೆರೆಡು ದಿವಸಗಳಲ್ಲಿ ನನ್ನ ಕಣ್ಣುಗಳು ಮಂಜಾಗತೊಡಗಿದವು. ತೀರ ಸಮೀಪವಿರುವ ಸಣ್ಣ ಸಣ್ಣ ವಸ್ತುಗಳು ಸಹ ಕಾಣದಾದವು. ಕಂಪ್ಯೂಟರ್ ಮುಂದೆ ಕುಳಿತರೆ ಅಕ್ಷರಗಳು ಕಾಣಿಸುತ್ತಿರಲಿಲ್ಲ. ಇದೇ ಕಾರಣಕ್ಕೆ ನಾನು ಬ್ಲಾಗ್ ಬರೆಯುವದನ್ನು ಹಾಗೂ ಕಾಮೆಂಟಿಸುವದನ್ನು ನಿಲ್ಲಿಸಿದೆ. ಒಮ್ಮಿಂದೊಮ್ಮೆಲೆ ಇದೇಕೆ ಹೀಗಾಯಿತು ಎಂದು ದಿಗಿಲಾಗಿ ಡಾಕ್ಟರ್ ಸಾಹು ಅವರನ್ನು ಕೇಳಿದಾಗ “ನಿನ್ನ ಶುಗರ್ ಲೆವೆಲ್ ಜಾಸ್ತಿ ಇರುವದರಿಂದ ಹೀಗಾಗುತ್ತದೆ. ಇದು ಹೀಗೆ ಇನ್ನೂ ಹದಿನೈದು ಇಪ್ಪತ್ತು ದಿವಸ ಇರುತ್ತದೆ. ಶುಗರ್ ಕಂಟ್ರೋಲ್ಗೆಕ ಬಂದ ತಕ್ಷಣ ಸರಿ ಹೋಗುತ್ತದೆ. ಅಲ್ಲಿಯವರೆಗೆ don’t strain yourself by blogging” ಎಂದು ಹೇಳಿದರು.
ನನಗೆ ಸಕ್ಕರೆ ಕಾಯಿಲೆ ಇದೆ ಎಂದು ಗೊತ್ತಾದಾಗಿನಿಂದ ಮಂಕಾಗಿ ನನ್ನೊಳಗೆ ನಾನು ಹೂತು ಹೋಗಿಬಿಟ್ಟೆ. ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಬೇಸರಗಳು ಒಮ್ಮೆಲೆ ಮೂಡಿ ಏನೂ ಮಾಡಲಾರದಂಥ ಸ್ಥಿತಿಗೆ ತಲುಪಿದೆ. ಥೂ! ಇದ್ಯಾತರ ಬದುಕು? ಇನ್ನು ಮುಂದೆ ಬದುಕಿ ಏನು ಪ್ರಯೋಜನ? ಈ ಕಾಯಿಲೆ ನನಗೆ ಬರಬೇಕಿತ್ತಾ? ಓ ಬದುಕೇ, ನೀನೆಷ್ಟೊಂದು ನಿಷ್ಕರುಣಿ? ಎಂದು ಸಿಟ್ಟು, ಅಸಹನೆಗಳಿಂದ ಕೂಗಿದೆ. ಈ ವಿಷಯವನ್ನು ದೂರದ ಇಂಡಿಯಾದಲ್ಲಿರುವ ಹೆಂಡತಿ ರೇಖಾಳಿಗೆ ನೋವಾಗದಂತೆ ಹೇಳುವದು ಹೇಗೆ? ಕೊನೆಗೂ ಗೆಳೆಯ ಮಂಜುವಿನ ಮೂಲಕ ಹೇಳಿದಾಗ ಒಂದಷ್ಟು ಅತ್ತಳು. ಸಾಕಿನ್ನು ಇಂಡಿಯಾಕ್ಕೆ ವಾಪಾಸು ಬಂದು ಬಿಡು ಎಂದು ಗೋಗರೆದಳು. ನಮಗೇ ಏಕೆ ಬರಬೇಕು? ಎಂದು ಕೇಳಿದಳು. ಉತ್ತರವಿರದ ಪ್ರಶ್ನೆ. ನಾವೆಲ್ಲ ಹಾಗೇನೇ.... ನಮಗೆ ಏನಾದರೊಂದು ಧುತ್ತನೆ ಎರಗಿ ಬಂದಾಗ ನಾವೆಲ್ಲಾ ಕೇಳಿಕೊಳ್ಳುವ ಪ್ರಶ್ನೆ ಒಂದೇ ‘ನಮಗೇ...... ಏಕೆ ಬರಬೇಕು? ನಮಗೇ..... ಏಕೆ ಬರಬೇಕು?’ ಇದು ತರ್ಕಕ್ಕೆ ಸಿಗದ್ದು.
ಎಷ್ಟು ದಿವಸಾಂತ ಇದೇ ಗುಂಗಿನಲ್ಲಿ ಕೂರುವದು? ದಿನನಿತ್ಯದ ಬದುಕಿನೊಂದಿಗೆ ಏಗಲೇಬೇಕಿತ್ತಲ್ಲ? ನಿಧಾನವಾಗಿ ನನ್ನ ಕವಚದೊಳಗಿಂದ ಹೊರಗೆ ಬಂದೆ. ಬಂದಿರುವ ಕಾಯಿಲೆಯನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಂಡೆ. ಮೆಲ್ಲಗೆ ನನಗೆ ಬಂದಿರುವ ಕಾಯಿಲೆಯ ವಿಷಯವನ್ನು ಬೇರೆಯವರೊಂದಿಗೆ ಹಂಚಿ ಹೊರಟೆ. ನನ್ನ ಇಂಡಿಯನ್ ಸಹದ್ಯೋಗಿಗಳೆಲ್ಲಾ “Don’t worry. Diabetes is a richmen’s disease. Feel proud that you have become a rich man” ಎಂದು ತಮಾಷೆ ಮಾಡುವದರ ಜೊತೆಗೆ “ಇಂಥ ಸಣ್ಣ ಕಾಯಿಲೆಗೆಲ್ಲಾ ಯಾಕಿಷ್ಟೊಂದು ಯೋಚನೆ ಮಾಡುತ್ತೀಯ” ಎಂದು ಒಂದಷ್ಟು ಸಾಂತ್ವನ ಹೇಳಿದರು. ನನ್ನ ಜೊತೆ ಕೆಲಸ ಮಾಡುತ್ತಿರುವ ಈಜಿಪ್ಸಿಯನ್ ಪ್ರೊಫೆಸರೊಬ್ಬರೊಂದಿಗೆ ಈ ವಿಷಯವನ್ನು ಹಂಚಿಕೊಂಡಾಗ “ನಿನಗೆ ಮೂವತೈದರಲ್ಲಿ ಬಂದಿದೆ. ನನಗೆ ಇಪ್ಪತೈದಕ್ಕೆ ಬಂತು. ನೀನು ಬರಿ ಟ್ಯಾಬ್ಲೆಟ್ಸ್ ತಗೊಳ್ಳತೀಯಾ. ಆದರೆ ನಾನು ಪ್ರತಿ ದಿವಸ ಇನ್ಸುಲಿನ್ ಇಂಜೆಕ್ಸನ್ ತೆಗೆದುಕೊಳ್ಳುತ್ತೇನೆ. Just start living with your disease without worrying much. So that it will live with you without causing much problems. Treat your disease as your close friend.” ಎಂದು ಹೇಳಿದಾಗ ಮನಸ್ಸಿಗೆ ಎಷ್ಟೋ ಸಮಾಧಾನವಾಗಿತ್ತು. ಇದೇ ವಿಷಯವನ್ನು ದೂರದ ಉಡುಪಿಯಲ್ಲಿರುವ ಗೆಳೆಯ ರಾಘುವಿನೊಂದಿಗೆ ಚಾಟ್ ಮಾಡುವಾಗ ಹಂಚಿಕೊಂಡಾಗ ಅವನು ಹಿಂದೆ ಕೆಲಸ ಮಾಡುತ್ತಿದ್ದ ಅಗ್ರಿಕಲ್ಚರ್ ಕಾಲೇಜಿನಲ್ಲಿ ಅವನ ಸ್ನೇಹಿತನೊಬ್ಬ ಇಪ್ಪತ್ತೊಂದಕ್ಕೆ ಡಯಾಬಿಟಿಸ್ ಪಡೆದು ಪ್ರತಿ ದಿವಸ ಇಂಜೆಕ್ಸನ್ ತೆಗೆದುಕೊಳ್ಳುತ್ತಿದ್ದರೂ ಅವನು ಈಗಷ್ಟೆ ಮದುವೆಯಾಗಿ ಒಂದು ಮಗುವಿನೊಂದಿಗೆ ಹಾಯಾಗಿರುವದು ತಿಳಿಯಿತು. ಇತ್ತೀಚಿಗೆ ಪತ್ರಿಕೆಯೊಂದನ್ನು ಓದುವಾಗ ಲಂಡನ್ನಿನ ವೈದ್ಯರೊಬ್ಬರು ತಮ್ಮ ಇಪ್ಪತ್ತೊಂದನೇ ವಯಸ್ಸಿಗೆ ಮಧುಮೇಹಕ್ಕೆ ತುತ್ತಾಗಿ ಶಿಸ್ತುಬದ್ಧ ಜೀವನದ ಮೂಲಕ ತೊಂಬತ್ತೆರೆಡು ವರ್ಷದವರೆಗೆ ಬದುಕಿದ್ದು ಗೊತ್ತಾಯಿತು. ಅರೆರೆ.. ನನಗಿಂತ ಬೇರೆಯವರು ಅದೇ ಕಾಯಿಲೆಯೊಂದಿಗೆ ದೊಡ್ದ ಸಮಸ್ಯೆಯೊಂದಿಗೆ ಏಗುತ್ತಾ ಇರುವವರು ಹಾಯಾಗಿದ್ದಾರೆ. ನಾನೇಕೆ ಹೀಗಿದ್ದೇನೆ? ನಾವು ನಮ್ಮ ಸಮಸ್ಯೆಗಳನ್ನೇ ದೊಡ್ದವೆಂದು ಪರಿಗಣಿಸಿ ಇಲ್ಲಿಗೆ ಬದುಕು ಮುಗಿದೇ ಹೋಯಿತು ಎಂದು ಕುಳಿತು ಬಿಟ್ಟಿರುತ್ತೇವೆ. ಆದರೆ ನಮ್ಮ ಸಮಸ್ಯೆಯನ್ನು ನಮ್ಮೊಳಗೆ ಬಚ್ಚಿಟ್ಟುಕೊಳ್ಳಲಾರದೆ ಬೇರೆಯವರೊಂದಿಗೆ ಹಂಚಿ ಹೊರಟಾಗ ಅವರ ಸಮಸ್ಯೆಗಳ ಮುಂದೆ ಅವರ ಅನುಭವಗಳ ಮುಂದೆ ನಮ್ಮದೇನೂ ಅಲ್ಲವೇ ಅಲ್ಲ ಎನಿಸುತ್ತದೆ.
ಇಂಥ ಸಂದರ್ಭದಲ್ಲಿಯೇ ದೇಹದ ಎಲ್ಲ ಅಂಗಗಳು ಸ್ವಾಸ್ಥ್ಯ ಕಳೆದುಕೊಂಡಿದ್ದರೂ ಬರಿ ಮೆದುಳೊಂದನ್ನು ಮುಂದಿಟ್ಟುಕೊಂಡು ಏನೆಲ್ಲ ಸಾಧಿಸಿದ ಸ್ಟಿಫನ್ ಹಾಕಿಂಗ್ ನೆನಪಾಗುತ್ತಾರೆ. ಒಳಗೆ ಬರಲೆ? ಎಂದ ಸಾವನ್ನು ತೊಲಗಾಚೆ ಎಂದು ಹೊಸ್ತಿಲಿನಿಂದ ಹೊರಹಾಕಿದ ನಿರಂಜನ ದಂಪತಿಗಳು ಕ್ಯಾನ್ಸರ್ ಹಾಗೂ ಪಾರ್ಶ್ವವಾಯುವನ್ನು ಬಗಲಲ್ಲಿಟ್ಟುಕೊಂಡೇ ಸಾಹಿತ್ಯ ಕ್ಷೇತ್ರದಲ್ಲಿ ಬಲು ದೊಡ್ದ ಹೆಸರು ಮಾಡಿದ್ದು ಕಣ್ಣಮುಂದೆ ಬರುತ್ತದೆ. ತನ್ನ ಮಧ್ಯ ವಯಸ್ಸಿನಲ್ಲಿ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡು “On His Blindness” ಎನ್ನುವ ಅದ್ಬುತ ಕವನವನ್ನು ಬರೆದ ಖ್ಯಾತ ಇಂಗ್ಲೀಷ್ ಕವಿ ಜಾನ್ ಮಿಲ್ಟನ್ನH ಸೃಜನಶೀಲತೆ ನೆನಪಾಗುತ್ತದೆ. ಇಂಥವರ ಸಾಧನೆಯ ಮುಂದೆ, ಕಾಯಿಲೆಯ ಮುಂದೆ ನಮ್ಮದೇನೂ ಅಲ್ಲ ಎನಿಸುತ್ತದೆ. ಇಂಥವರೇ ನಮಗೆ ಸ್ಪೂರ್ತಿಯಾಗುತ್ತರೆ, ಮಾದರಿಯಾಗುತ್ತಾರೆ. ಅಂಥವರ ಬದುಕು ನಮಗೊಂದಿಷ್ಟು ಪಾಠ ಕಲಿಸುವದರ ಮೂಲಕ ಚೇತೋಹಾರಿಯಾಗುತ್ತದೆ.
ಇತ್ತೀಚಿಗೆ ವಿಷ್ಣುವರ್ಧನ್ ಸಾವಿನ ನಂತರ ಅವರ ಸಕ್ಕರೆ ಕಾಯಿಲೆ ಬಗ್ಗೆ ಅವರ ಆಪ್ತ ಸ್ನೇಹಿತ ಅಂಬರೀಷ್ ಟೀವಿ ಚಾನೆಲ್ವೊಂನದರಲ್ಲಿ ಮಾತನಾಡುತ್ತ “ಡಯಾಬಿಟಿಸ್ ಒಳ್ಳೆ ಕಾಯಿಲೆ. ಏಕೆಂದರೆ ಅದು ನಮ್ಮ ಲೈಫ್ ಸ್ಟೈಲ್ನ್ನೇಅ ಬದಲಾಯಿಸುತ್ತದೆ. ಪ್ರತಿದಿವಸ ವಾಕಿಂಗ್, ಹಿತಮಿತವಾದ ಊಟ, ಸದಾ ಎಚ್ಚರಿಕೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವದರಿಂದ ನಾವು ಇನ್ನೂ ಹೆಚ್ಚಿನ ದಿವಸ ಬದುಕಬಲ್ಲೆವು” ಎಂದು ಹೇಳಿದ್ದನ್ನು ಕೇಳಿದ್ದೆ. ನಾನು ಕೂಡ ನನ್ನ ಲೈಫ್ ಸ್ಟೈಲ್ನ್ನುೆ ಬದಲಾಯಿಸಿಕೊಂಡಿದ್ದೇನೆ. ಪ್ರತಿನಿತ್ಯ ಹಿತಮಿತವಾದ ಊಟ, ಒಂದಷ್ಟು ವಾಕಿಂಗ್, ಯೋಗ ಎಲ್ಲವನ್ನೂ ಚಾಚೂ ತಪ್ಪದೇ ಮಾಡುತ್ತೇನೆ. ಇದೀಗ ನನ್ನ ಕಾಯಿಲೆ ನನ್ನ ಆತ್ಮೀಯ ಗೆಳೆಯನಾಗಿದೆ. ಬದುಕು ಯಥಾಸ್ಥಿತಿಗೆ ಮರಳಿದೆ, ಸಹ್ಯವಾಗಿದೆ, ಆಪ್ತವಾಗಿದೆ. ಒಂದಷ್ಟು ವಿಶ್ವಾಸ, ಗೆಲವು ಮೂಡಿದೆ. ಹೊಸ ಹೊಸ ಕನಸುಗಳು ರಂಗೇರುತ್ತಿವೆ. ಇದೀಗ ಮತ್ತೆ ಮತ್ತೆ ಕೇಳುತ್ತೇನೆ “ಬದುಕೇ, ನಿನ್ನಲ್ಲೆಂಥಾ ಮುನಿಸು ನನಗೆ? ನಿನ್ನಲ್ಲೆಂಥಾ ಮುನಿಸು ನನಗೆ?” ಎಂದು.
ವಿ.ಸೂ: ನನ್ನ ಕಣ್ಣುಗಳು ಇನ್ನೂ ಸ್ವಲ್ಪ ಮಂಜು ಮಂಜಾಗಿರುವದರಿಂದ ನಿಮ್ಮ ಬ್ಲಾಗುಗಳಿಗೆ ಬಣ್ದು ಕಾಮೆಂಟಿಸುವದು ಸಾಧ್ಯವಾಗುತ್ತಿಲ್ಲ. ಈ ಪೋಸ್ಟಿಂಗನ್ನು ಫಾಂಟ್ ಸೈಜ್ ದೊಡ್ಡದು ಮಾಡಿ ಬ್ಲಾಗಿಸಿರುವೆ. ಎಲ್ಲ ಸರಿ ಹೋದ ಮೇಲೆ ನಿಮ್ಮ ಬ್ಲಾಗುಗಳಿಗೆ ಭೇಟಿ ನೀಡುತ್ತೆನೆ. ಅಲ್ಲಿಯವರೆಗೆ ಕ್ಷಮೆಯಿರಲಿ.
-ಉದಯ್ ಇಟಗಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ಕಥನ ಮಥನ1 ವಾರದ ಹಿಂದೆ
-
-
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ5 ತಿಂಗಳುಗಳ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!1 ವರ್ಷದ ಹಿಂದೆ
-
Pic by Hengki Lee3 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು4 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?5 ವರ್ಷಗಳ ಹಿಂದೆ
-
ದ್ವಿಪದಿಗಳು5 ವರ್ಷಗಳ ಹಿಂದೆ
-
ಹೊಸ ದಿನ5 ವರ್ಷಗಳ ಹಿಂದೆ
-
The story of telling a story!5 ವರ್ಷಗಳ ಹಿಂದೆ
-
ಕೆಲವು ಹಾಯ್ಕುಗಳು...ಒಂದು ಕವನ5 ವರ್ಷಗಳ ಹಿಂದೆ
-
ಅಳಿವು ಉಳಿವಿನ ನಡುವೆ...5 ವರ್ಷಗಳ ಹಿಂದೆ
-
-
-
ಆಸೆ....!!!6 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 26 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!6 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ6 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?6 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!6 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್6 ವರ್ಷಗಳ ಹಿಂದೆ
-
ಹೊಸದೊಂದು ಜಾವಳಿ7 ವರ್ಷಗಳ ಹಿಂದೆ
-
ಮಾಯೆ7 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ7 ವರ್ಷಗಳ ಹಿಂದೆ
-
ಅನುಸಂಧಾನ-೩7 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!7 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ8 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು8 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!8 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:9 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ9 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್9 ವರ್ಷಗಳ ಹಿಂದೆ
-
ಕತ್ತಲೆ.................9 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..9 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ9 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ9 ವರ್ಷಗಳ ಹಿಂದೆ
-
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!10 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...10 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ10 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ10 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ11 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?11 ವರ್ಷಗಳ ಹಿಂದೆ
-
ತೀರ....11 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ11 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?11 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ12 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು12 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ12 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)12 ವರ್ಷಗಳ ಹಿಂದೆ
-
(ಮಹಿಳಾ)ವಾದ:12 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ12 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…12 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ12 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್13 ವರ್ಷಗಳ ಹಿಂದೆ
-
ಕಫನ್13 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …13 ವರ್ಷಗಳ ಹಿಂದೆ
-
ನನ್ನ ಜಡೆ14 ವರ್ಷಗಳ ಹಿಂದೆ
-
ಕೇಳಿ-೫14 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು14 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು14 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧14 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ14 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ15 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು15 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು15 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?15 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !16 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...17 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.
10 ಕಾಮೆಂಟ್(ಗಳು):
ಉದಯ್ ಬಹಳ ದಿನವಾಯಿತು. ನಿಮಗೆ ಹೊಸ ವರ್ಷದ ಹಾಗೂ ಸಂಕ್ರಾಂತಿಯ (ತಡ) ಶುಭಾಶಯಗಳು. ನಿಮಗೆ ಸಕ್ಕರೆ ಖಾಯಿಲೆ ಇದೆ ಎಂದು ತಿಳಿದು ಬೇಸರವಾಯಿತು. ನಿಮ್ಮ ಮನೆಯವರು ಹೇಳಿದ ಹಾಗೆ, ಅಕ್ಕಿ ತಿಂದವನು ಹಕ್ಕಿ, ಜೋಳ ತಿಂದವನು ತೋಳ! ಜೋಳ, ರಾಗಿ ತಿನ್ನುವವರಿಗೂ ಈ ಸಕ್ಕರೆ ಖಾಯಿಲೆ ತಪ್ಪಿದ್ದಲ್ಲ. ಹೆಚ್ಚು ಯೋಚನೆ ಮಾಡಬೇಡಿ. ಸ್ಟ್ರೆಸ್ ಹೆಚ್ಚಾದರೂ ಈ ಖಾಯಿಲೆ ಬರುತ್ತದೆ ಎಂದು ನನ್ನು 33 ವರ್ಷದ ಸ್ನೇಹಿತರೊಬ್ಬರಿಗೆ ಸಕ್ಕರೆ ಖಾಯಿಲೆ ಬಂದಾಗಲೇ ಅರಿವಾಗಿದ್ದು. ಆಹಾರ ಮತ್ತು ವಾಕಿಂಗಿನಿಂದ ಅದರ ಸಮಸ್ಯೆಯನ್ನು ಸಾಕಷ್ಟು ಮರೆತುಬಿಡಬಹುದು. ನಿಮ್ಮ ಈ ಲೇಖನವೇ (ಎಷ್ಟು ದಿವಸಾಂತ ಇದೇ ಗುಂಗಿನಲ್ಲಿ ಕೂರುವದು?)ನಿಮ್ಮ ಧನಾತ್ಮಕ ಮನೋಭಾವವನ್ನು ತೋರಿಸುತ್ತಿದೆ. ಸಕ್ಕರೆ ಖಾಯಿಲೆ ಇರುವ ವಿಷಯ ತಿಳದ ಮೇಲೆ ಅದರ ಬಗ್ಗೆ ಮಾತ್ರ ಯೋಚಿಸಿದೆ, ಅದರ ಬಗ್ಗೆ ಸಾಕಷ್ಟು ಅಂಕಿ-ಅಂಶಗಳನ್ನು, ತಾಂತ್ರಿಕ ವಿಚಾರಗಳನ್ನು ಕಲೆ ಹಾಕಿ ಒಳ್ಳೆಯ ಲೇಖನ ಬರೆದಿದ್ದೀರಿ. ಮುಂದೆಯೂ ಹಾಗೆ ಮನಸ್ಸನ್ನು ಉಲ್ಲಸಾದಯಾಕವಾಗಿ ಇಡಬಲ್ಲ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಿ. ನಿಮ್ಮ ಮನೆಯವರೊಂದಿಗೆ ಹೆಚ್ಚು ಸಂಪರ್ಕದಲ್ಲಿರಿ. ಅವರೊಂದಿಗಿನ ನಿಮ್ಮ ಮಾತುಕತೆ ಅರ್ಧ ಸಮಸ್ಯೆಯನ್ನು ನಿವಾರಿಸಬಲ್ಲುದು ಎಂಬುದು ನನ್ನ ಅನಿಸಿಕೆ.
ಅಂದ ಹಾಗೆ ನಿಮ್ಮ ಬ್ಲಾಗಿನಹೊಸರೂಪ ಚೆನ್ನಾಗಿದೆ. ಆಲ್ ದಿ ಬೆಸ್ಟ್ ಉದಯ್
ಸ್ವಲ್ಪ ಪಥ್ಯ, ನಿಯಮತಿ ಜೀವನ ಶೈಲಿಯಿಂದ ಖಂಡಿತ ಈ ಕಾಯಿಲೆ ಯನ್ನು ಗೆಲ್ಲಬಹುದು. "ಧೈರ್ಯಂ ಸರ್ವತ್ರ ಸಾಧನಂ" ಎಂದಿದ್ದಾನೆ ಶ್ರೀಕೃಷ್ಣ. ನಿಮ್ಮ ಆತ್ಮವಿಶ್ವಾಸವೇ ಈ ಕಾಯಿಲೆಗೆ ರಾಮಬಾಣವಾಗುವುದು.
ಹೊಸವರುಷ ನಿಮಗೆ ಹೊಸ ಜೀವನ ಶೈಲಿಯನ್ನು ತಂದಿದೆ. ಅದು ನಿಮಗೆ ಉತ್ತಮ ಆರೋಗ್ಯ ಭಾಗ್ಯ ತರಲೆಂದು ಹಾರೈಸುವೆ.
ನಿಮ್ಮ ಬರಹ ಒಂದು ಆದರ್ಶದಂತಿದೆ,
ಕೆಲವೊಮ್ಮೆ ಅರೋಗ್ಯ ಸುಧಾರಣೆಗೆ ಇಂಥಹ ಕಾಯಿಲೆಗಳೂ ನೆರವಾಗುತ್ತವೆ ಎನಿಸುತ್ತದೆ
ಇಲ್ಲದಿರೆ ಯಾವ ಹಿಡಿತವೂ ದೇಹದ ಮೇಲೆ ಇಲ್ಲದೆ ಬದುಕು ನಿಯಂತ್ರಣ ಕಳೆದುಕೊಳ್ಳಬಹುದು ಎಂಬ ಭಯ
ಸತ್ಯನಾರಾಯಣವರೆ,
ನಿಮ್ಮ ಸಾಂತ್ವನ, ಸಲಹೆ ಹಾಗೂ ಹರಕೆಗೆ ತುಂಬಾ ತುಂಬಾ ಥ್ಯಾಂಕ್ಸ್. ನಾನು ಮೊದಲಿನಿಂದಲೂ ಜೀವನದಲ್ಲಿ ಬಂದಿದ್ದನ್ನು ಬಂದ ಹಾಗೆ ಸ್ವೀಕರಿಸುವ ಮನೋಭಾವದವನು. ಆದರೆ ಈ ಕಾಯಿಲೆಯ ವಿಷಯದಲ್ಲಿ ಸ್ವಲ್ಪ ಹತಾಶನಾಗಿದ್ದು ನಿಜ. ಆದರೆ ಇದೀಗ ಎಲ್ಲ ಸರಿ ಹೋಗಿ ಮಾಮೂಲಿನ ಸ್ಥಿತಿಗೆ ತಲುಪಿ ಇದೊಂದು ಕಾಯಿಲೆಯೇ ಅಲ್ಲ ಎನ್ನುವ ತರ ಬದುಕಿತ್ತಿದ್ದೇನೆ.
ತೇಜಸ್ವಿನಿಯವರೆ,
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ. ಸ್ವಲ್ಪ ಪಥ್ಯ, ನಿಯಮತಿ ಜೀವನ ಶೈಲಿಯಿಂದ ಖಂಡಿತ ಈ ಕಾಯಿಲೆಯನ್ನು ಗೆಲ್ಲಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಧೈರ್ಯವಿರಬೇಕು. ಅದನ್ನೀಗ ಬೆಳೆಸಿಕೊಂಡಿದ್ದೇನೆ. ನಿಮ್ಮ ಸಾಂತ್ವನಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.
ಗುರುಮೂರ್ತಿಯವರೆ,
ಖಂಡಿತ ನಿಮ್ಮ ಮಾತು ಸತ್ಯ. ಹಾಗೆಂದೇ ನಾನು ಆಗುವದೆಲ್ಲಾ ಒಳ್ಳೆಯದಕ್ಕೇ ಎಂದು ಈ ಕಾಯಿಲೆಯನ್ನು ಸ್ವೀಕರಿಸಿ ಹಾಯಾಗಿದ್ದೇನೆ.
ಉದಯರೇ,
ಚಿಂತಿಸಬೇಡಿ, ನಿಯಮಿತ ಆಹಾರಾಭ್ಯಾಸಗಳಿ೦ದ ಜಯಿಸಬಹುದು, ಇದು ಈಗ ಸರ್ವತ್ರ ಇರುವ ಸಾಮಾನ್ಯ ಕಾಯಿಲೆ. ಎಲ್ಲ ಸರಿ ಹೋಗುತ್ತದೆ. ನಿಮ್ಮ ಬರಹ ಮನಮುಟ್ಟುವ೦ತಿದೆ. ಅ೦ದ ಹಾಗೆ ನಿಮ್ಮ ಬ್ಲಾಗಿನ ಹೊಸ ವಿನ್ಯಾಸ ಕೂಡ ಆಕರ್ಷಕ ವಾಗಿದೆ.
ಪರಾಂಜಪೆ ಸರ್,
ನೀವು ಹೇಳಿದಂತೆ ನಿಯಮಿತ ಆಹಾರಾಭ್ಯಾಸಗಳಿಂದ ಖಂದಿತ ಈ ಕಾಯಿಲೆಯನ್ನು ಗೆಲ್ಲಬಹುದು. ಬರಹ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.
ಉದಯ್ ಸಾರ್...
ಇದಕ್ಕೆಲ್ಲಾ ಚಿಂತಿಸುತ್ತಾ ಕುಳಿತರೆ ಹೇಗೆ ಸಾರ್? ಎಲ್ಲವನ್ನೂ ಹಿಡಿತದಲ್ಲಿಟ್ಟುಕೊಳ್ಳುವ ಭಾಗ್ಯ ಮಾನವನಿಗಿದೆ. ನನ್ನೆಜಮಾನರಿಗೆ ಈ ಖಾಯಿಲೆ ಸುಮಾರ್ ೧೦ ವರ್ಷಗಳಿಂದಲೇ ಇದೆ. ಅವರಿಗೆ ಅಧಿಕ ಸ್ಟ್ರೆಸ್ ನಿಂದಾಗಿ ಬಂದಿತ್ತು... ಸ್ವಲ್ಪ ಪಥ್ಯ ಮತ್ತು ಮಾತ್ರೆ ಎರಡೂ ಮರೆಯದೆ, ಜೀವನವನ್ನು ಆನಂದದಿಂದ ಅನುಭವಿಸಿ ಮತ್ತು ಹೆಚ್ಚು ಬ್ಲಾಗ್ ಬರಹಗಳನ್ನು ಬರೆಯಿರಿ......
ಬ್ಲಾಗ್ ನ ಹೊಸ ರೂಪ ಆಕರ್ಷಕವಾಗಿದೆ...
ಶ್ಯಾಮಲ
ಉದಯ ಅವರೇ , ಒಂದು ಧನಾತ್ಮಕ ಮನೋಭಾವ್ ಎಂಥ ಕಷ್ಟ ಕಾಯಲೆಗಳನ್ನೂ ಎಷ್ಟು ಚಿಕ್ಕ ಚಿಕ್ಕ್ ವಿಷಯಗಳನ್ನಗಿಸಿ ಬೇಡುತ್ತದೆ ಅಂತ ನಿಮ್ಮ ಲೇಖನ ಹಾಗು ನಿಮ್ಮ ಮನೋಭಾವ್ ದಿಂದ ಕಲಿಬಹುದು. ನಾನು ಅಸ್ಟೆ ಮೊದಲೆಲ್ಲ ತುಂಬಾ ಚಿಕ್ಕ್ ಚಿಕ್ಕ್ ವಿಷಯಗಳಿಗೆ ಅಳುತ್ತ ಕೂರುತಿದ್ದೆ, ಆಕಾಶ್ ತಲೆ ಮೇಲೆ ಬಿದ್ದೊರೋ ಥರ ಆಡ್ತಾ ಇದ್ದೆ . ಆದ್ರೆ ಒಂದು ಘಟನೆ ನಡಿತು ನೋಡಿ , ನನ್ನ ಜೀವನ ಬದಲಾಯಿತು .ಕೆಲವೊಂದು ಸಲ ಈ ಥರ ಕಾಯಿಲೆಗಳು , ಕಷ್ಟಗಳು ನಮ್ಮನ ತುಂಬಾ ಪೋಸಿಟಿವೆ ಆಗಿ ಮಾಡಿಬಿಡುತ್ತವೆ . ಅದು ಒಂದು ರೀತಿ ಒಳ್ಳೆಯದೇ ಅಲ್ವಾ :) . ಇನ್ನೊಂದು ಏನಂದ್ರೆ ಸಾವು ಖಚಿತ ಅಲ್ವಾ , ಅದು ಬರಿ ಕಾಯಿಲೆದಿಂದ ಬರೋಲ್ಲ ಅಂತ ನಮಗೆಲ್ಲ ಗೊತ್ತು . ನೀವು ಹೇಳಿದ ಹಾಗೆ ದೊಡ್ಡ ಕಾಯಿಲೆ ಇರೋವರು 90 ವರ್ಷ ಬದುಕಿದ್ದು ವುಂಟು , ಅದೇ ಆರೋಗ್ಯವಂತರು 50 ವರ್ಷಕ್ಕೆ ಮುಂಚೆನೇ ಹೋಗಿದ್ದು ವುಂಟು . ಅದಕ್ಕೆ ನೋಡಿ ಪ್ರತಿ ದಿನ ನಮಗೆ ಹೊಸ ಹುಟ್ಟು , ಬೆಳಿಗ್ಗೆ ಏಳುವಾಗ ಹ್ಯಾಪಿ ಬರ್ತ್ಡೇ ಟು ಮೇ ಅಂತಾನೆ ಏಳೋದು ರೂಡಿಸಿಕೊಂಡಿದ್ದಿನೆ. ರಾತ್ರಿ ಇನ್ನೊಂದು ಬರ್ತ್ಡೇ ಆಚರಿಸೋ ಆಶೆಯಲ್ಲಿ ಮಲಗ್ತೀನಿ .
ಕಾಮೆಂಟ್ ಪೋಸ್ಟ್ ಮಾಡಿ