'ಚಾನ್ನೆ' ಕಥಾಸಂಕಲವನ್ನು ಈಗಷ್ಟೆ ಓದಿ ಮುಗಿಸಿದೆ. ಮನಸ್ಸಿಗೆ ತಾಕುವಂಥ ಕಥೆಗಳನ್ನು ಮುದಿರಾಜ್ ಬಾಣಾದವರು ಬರೆದಿದ್ದಾರೆ. ಮುನಿರಾಜು ಅವರು ಫೇಸ್ಬುಕ್ನಲ್ಲಿ ನನ್ನ ಫ್ರೆಂಡ್ ಆಗಿದ್ದರೂ ನಾವಿಬ್ಬರು ಮುಖಾಮುಖಿಯಾಗಿರಲಿಲ್ಲ. ಆದರೆ ಅವರು ನನ್ನೊಂದಿಗೆ ಮಾತನಾಡಿದ್ದು ಒಂದು ಅಪರೂಪದ ಘಟನೆಯ ಮೂಲಕ. ಅದೇನೆಂದರೆ ನಾನು ಇತ್ತೀಚೆಗೆ ನನ್ನ ಫೇಸ್ ಬುಕ್ ಪೇಜ್ ನಲ್ಲಿ ಇನ್ನೇನು ಹೊರಬರಲಿರುವ ನನ್ನ ಅನುವಾದಿತ ಕಥಾ ಸಂಕಲನದ ಮುಖಪುಟವನ್ನು ಹಾಕಿದ್ದೆ. ಅದರ ಕವರ್ ಪೇಜ್ ನಲ್ಲಿದ್ದ ಬೆನ್ನುಡಿಯಲ್ಲಿ “ನನ್ನ ಪ್ರಕಾರ ಕಥೆಯೆಂದರೆ ಓದುಗರಲ್ಲಿ ದಿಗ್ಭ್ರಮೆ ಅಥವಾ ಅಚ್ಚರಿಯನ್ನು ಹುಟ್ಟುಹಾಕಬೇಕು, ಇಲ್ಲವಾದರೆ ಅದು ಕತೆಯೇ ಅಲ್ಲ” ಎಂದು ಹೇಳಿದ್ದೆ. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಅವರು ನನಗೆ ಒಂದು ಮೆಸೇಜ್ ಅನ್ನು ಕಳಿಸಿದ್ದರು. ನನ್ನ ಕಥೆಗಳಲ್ಲಿ ಬಹುಶಃ ಈ ಅಂಶಗಳು ಸಿಗಬಹುದೇನೋ ಒಂದು ಸಾರಿ ನೋಡಿ ಎಂದು ಹೇಳಿದ್ದರು . ನಾನು ಮೆಸೆಂಜರ್ನಲ್ಲಿ ಕಾಲ್ ಮಾಡಿ ಅವರೊಂದಿಗೆ ಮಾತನಾಡಿದೆ. “ಸರ್, ನಾನು ನನ್ನ ಕಥಾ ಸಂಕಲವನ್ನು ಕಳಿಸಿಕೊಡುತ್ತೇನೆ. ಒಂದು ಸಾರಿ ಓದಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ” ಎಂದು ಕೇಳಿಕೊಂಡರು. ನಾನು “ಆಯ್ತು ಕಳಿಸಿ” ಎಂದು ಹೇಳಿದೆ.
ಒಂದು ವಾರದೊಳಗೆ ಅವರ ಕಥಾ ಸಂಕಲನ ನನ್ನ ಕೈ ಸೇರಿತು. ಓದಲು ಆರಂಭಿಸುತ್ತಿದ್ದಂತೆ ಇವರ ಎಲ್ಲ ಕತೆಗಳಿಗೂ ಓದಿಸಿಕೊಳ್ಳುವ ಗುಣವಿದೆ ಎಂಬ ಅಂಶ ತಿಳಿದುಬಂತು. ಇವರು ತಮ್ಮ ಬಹಳಷ್ಟು ಕಥೆಗಳಲ್ಲಿ ಸಂಬಂಧಗಳ ನಡುವಿನ ತಾಕಲಾಟವನ್ನು, ತಿಕ್ಕಾಟ- ಮುಕ್ಕಾಟವನ್ನು, ಹಾಗೂ ಅಸಹಾಯಕತೆಯನ್ನು ಅದ್ಭುತವಾಗಿ ಕಟ್ಟಿಕೊಡುತ್ತಾರೆ. ಅದರ ಜೊತೆಗೆ ಶಿಥಿಲವಾಗುತ್ತಿರುವ ಸಂಬಂಧಗಳ ಬಗ್ಗೆ ವಿಷಾದವನ್ನು ಸಹ ವ್ಯಕ್ತಪಡಿಸುತ್ತಾರೆ. ಬಿಸಿಲ ನಾಡಿನಿಂದ ಬಂದ ಈ ಹುಡುಗನ ಕಥೆಗಳಲ್ಲಿ ಮನುಷ್ಯ ಸಂಬಂಧಗಳ ಆರ್ದ್ರತೆ ಎದ್ದು ಕಾಣುತ್ತದೆ.
ಉದಾಹರಣೆಗೆ “ಅಂಬಿಕಾ” ಆಗಿರಬಹುದು ಅಥವಾ “ಆಸರೆ” ಆಗಿರಬಹುದು ಈ ಎಲ್ಲ ಕತೆಗಳಲ್ಲಿನ ನಾಯಕರು ಸಂಬಂಧಗಳನ್ನು ಉಳಿಸಿಕೊಳ್ಳುವದಕ್ಕಾಗಿ ಹೆಣಗಾಡಿದರೂ ಕೊನೆಯಲ್ಲಿ ಏನೂ ಮಾಡಲಾಗದ ಅಸಹಾಯಕತೆಯೊಂದಿಗೆ ಕೈಕಟ್ಟಿ ಕುಳಿತು ಬಿಡುತ್ತಾರೆ. ಇವರಲ್ಲಿರುವ ಆರ್ದತೆ ಭಾವ ಎಂಥವರನ್ನೂ ತಟ್ಟಿಬಿಡುತ್ತದೆ.
ಎಲ್ಲವನ್ನೂ ಹೇಳಿ ಏನನ್ನೂ ಹೇಳದೆ ಇರುವಂಥ ಅಂಶ ಕೆಲವು ಕತೆಗಳಲ್ಲಿ ಕಂಡರೆ ಏನನ್ನೂ ಹೇಳದ ಅಪೂರ್ಣತೆ ಇನ್ನು ಕೆಲವು ಕಥೆಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಅವರ “ಚಾನ್ನೆ’ ಕಥೆಯನ್ನೇ ತೆಗೆದುಕೊಂಡರೆ ಇದು ಸಣ್ಣ ಕಥೆಯ ಪರಿಧಿಯನ್ನು ದಾಟಲು ಪ್ರಯತ್ನಿಸುತ್ತಿದೆ ಎಂದನಿಸುತ್ತದೆ. ಏಕೆಂದರೆ ಈ ಸಂಕಲನಕ್ಕೆ ಮುನ್ನುಡಿಯನ್ನು ಬರೆದ ವಸುಧೇಂದ್ರರೇ ಹೇಳಿರುವಂತೆ ಇಲ್ಲಿ ಹಲವಾರು ಸಂಗತಿಗಳ ಪ್ರಸ್ತಾಪವಿದೆ. ಅಪ್ಪನ ಸಾವು ಸಹಜವಲ್ಲ ಅನ್ನುವ ಸಂಶಯ, ಅಪ್ಪನ ಎರಡನೆಯ ಹೆಂಡತಿಯ ಮಗ ಇದ್ದಕ್ಕಿದ್ದಂತೆ ಭೋಳಿ ಬಂದು ಬೀಳುವದು, ನಾಯಕ ಕ್ರೈಸ್ತ ಧರ್ಮದೆಡೆಗೆ ಆಕರ್ಷಿತನಾಗುವದು ಮತ್ತು ಆತ ತನ್ನ ಹಿಂದಿನ ಸಲಿಂಗಕಾಮದ ಕಥೆಯನ್ನು ನೆನಪಿಸಿಕೊಳ್ಳುವದು ಎಲ್ಲವೂ ಗೋಜಲು ಗೋಜಲು ಎನಿಸುತ್ತದೆ.
ಆದರೆ ಇಡೀ ಸಂಕಲನದಲ್ಲಿ ನನಗಿಷ್ಟವಾದ ಕಥೆ “ಹೇನು”. ಈ ಕಥೆಯು ಸಲಿಂಗ ಕಾಮದ ಬಗ್ಗೆ ಮಾತನಾಡುತ್ತಲೇ ಬೇರೆ ಇನ್ನೇನೋ ಹೇಳುತ್ತಿರುವಂತನಿಸುತ್ತದೆ. ಕೊನೆಯಲ್ಲಿ ನಾಯಕನ ಹೆಂಡತಿಯ ತಲೆಯಿಂದ ಉದುರಿಬೀಳುವ ’ಹೇನು’ ಗಹನವಾದ ವಿಚಾರವನ್ನು ಹೇಳುತ್ತದೆ. ಒಟ್ಟಿನಲ್ಲಿಮುದಿರಾಜ್ ಬಾಣದ್ ಅವರಿಗೆ ಕಥೆಯನ್ನು ಕಟ್ಟುವ ಕಲೆ ಚೆನ್ನಾಗಿ ತಿಳಿದಿದೆ. ಅದನ್ನು ಅವರು ಇನ್ನಷ್ಟು ಕುಸುರಿ ಕೆಲಸದೊಂದಿಗೆ ಕಟ್ಟಿದರೆ ಇನ್ನು ಚೆಂದವಾಗಿರುವುದಲ್ಲದೆ ಅರ್ಥಪೂರ್ಣವಾಗಿಯೂ ಇರುತ್ತದೆ ಎಂಬುದು ನನ್ನ ಭಾವನೆ. ಅವರಿಂದ ಮತ್ತಷ್ಟು ಕಥೆಗಳು ಹೊರಬರಲಿ ಎಂದು ಹಾರೈಸುತ್ತೇನೆ.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ