Demo image Demo image Demo image Demo image Demo image Demo image Demo image Demo image

ಕಾಡಿಗೆ ಎದುರಾಗಿ ನಿಂತ ಹುಡುಗಿ ಭಾಗ - 2

  • ಮಂಗಳವಾರ, ಅಕ್ಟೋಬರ್ 25, 2011
  • ಬಿಸಿಲ ಹನಿ
  • ನಿಮಗೆ ಆಶ್ಚರ್ಯವಾಗಬಹುದು-ನನಗೆ ಹಸಿವೆಯೇ ಎನಿಸುತ್ತಿರಲಿಲ್ಲ. ಆದರೂ ಆಗೊಮ್ಮೆ ಈಗೊಮ್ಮೆ ಪಾರ್ಸಲ್ಲಿನಲ್ಲಿದ್ದ ಸಿಹಿತಿಂಡಿಯನ್ನು ತಿಂದು ನನ್ನ ಅಲ್ಪಸ್ವಲ್ಪ ಹಸಿವೆಯನ್ನು ನೀಗಿಸಿಕೊಳ್ಳುತ್ತಿದ್ದೆ. ಮರದಲ್ಲಿ ಸಿಹಿಯಾದ ಹಣ್ಣುಗಳು ಕಾಣಿಸಿದವು. ಆದರೆ ಅವನ್ನು ತಿನ್ನಲು ಹೋಗಲಿಲ್ಲ. ಏಕೆಂದರೆ ಅವುಗಳಲ್ಲಿ ಬಹಳಷ್ಟು ಹಣ್ಣುಗಳು ನೋಡಲು ಚನ್ನಾಗಿದ್ದರೂ ಕೆಲವೊಮ್ಮೆ ವಿಷಪೂರಿತವಾಗಿರುತ್ತವೆಂದು ನನಗೆ ಗೊತ್ತಿತ್ತು. ನಾನು ಮುಸ್ಸಂಜೆಯವರೆಗೂ ನಡೆಯುತ್ತಲೇ ಇದ್ದೆ. ಕೊನೆಗೆ ನದಿ ದಂಡೆ ಮೇಲೆ ಒಂದು ನುಣುಪಾದ ಜಾಗ ಸಿಕ್ಕಿತು. ಅಂದು ಆ ರಾತ್ರಿಯನ್ನು ಅಲ್ಲಿಯೇ ಕಳೆಯಲು ನಿರ್ಧರಿಸಿದೆ.

    ಮರುದಿವಸ ಬೆಳಿಗ್ಗೆ ಎದ್ದಾಗ ಸೂರ್ಯ ಅದಾಗಲೇ ನೆತ್ತಿಯ ಮೇಲೆ ಬಂದಿದ್ದ. ದಿನನಿತ್ಯದ ವಾಡಿಕೆಯಂತೆ ಕೋಲಿನಿಂದ ಹುಲ್ಲನ್ನು ಸರಿಸುತ್ತಾ, ನೆಲವನ್ನು ತಡಕಾಡುತ್ತಾ, ಜೇಡರ ಹುಳುಗಳೇನಾದರೂ ಇವೆಯೋ ಎಂಬುದನ್ನು ಪರೀಕ್ಷಿಸುತ್ತಾ ಎಚ್ಚರಿಕೆಯಿಂದ ನಡೆಯುತ್ತಿದ್ದೆ. ಒಮ್ಮೊಮ್ಮೆ ನದಿ ದಂಡೆಯ ಮೇಲಿನ ರಸ್ತೆ ದುಸ್ತರವಾದಾಗ ಈಜಿಕೊಂಡು ಹೋಗುತ್ತಿದ್ದೆ. ಹೀಗೆ ನಡೆದುಕೊಂಡು ಹೋಗುತ್ತಿರುವಾಗ ನನ್ನ ಬ್ಯಾಗಿನಲ್ಲಿದ್ದ ಸಿಹಿತಿಂಡಿಗಳು ತೂತಿನ ಮೂಲಕ ಬಿದ್ದುಹೋಗಿದ್ದವು. ನನಗೆ ಹಸಿವಿಯೇ ಅನಿಸದಿದ್ದರಿಂದ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

    ನಡೆಯುತ್ತಾ ಹೋದಂತೆ ಸ್ವಲ್ಪ ದೂರದರಲ್ಲಿಯೇ ನನಗೆ ರಣಹದ್ದುಗಳು ಕಂಡವು. ಬಹುಶಃ, ಅಲ್ಲೆಲ್ಲೋ ಹೆಣಗಳಿರಬೇಕು. ಅವು ವಿಮಾನ ಅಪಘಾತದಲ್ಲಿ ಮಡಿದ ವ್ಯಕ್ತಿಗಳ ಮಾಂಸ ತಿನ್ನಲು ಅಲ್ಲಿ ಸೇರಿರಬೇಕು ಎಂದು ನನಗೆ ಕೂಡಲೇ ಗೊತ್ತಾಯಿತು. ಎಲ್ಲಿ ಹೆಣಗಳಿರುತ್ತವೋ ಅಲ್ಲಿ ಸಾಮಾನ್ಯವಾಗಿ ಹದ್ದುಗಳಿರುತ್ತವೆ.

    ನಾನಿನ್ನೂ ನಮ್ಮ ವಿಮಾನದ ಭಗ್ನಾವಶೇಷಗಳು ಬಿದ್ದ ಜಾಗದಲ್ಲಿಯೇ ಇದ್ದೆ. ನಾನು ನಡೆದು ಹೋಗುತ್ತಿದ್ದಂತೆ ವಿಮಾನದ ಮೈಕಟ್ಟಿನ ಒಂದು ಭಾಗ ಅಲ್ಲಿ ಬಿದ್ದಿರುವದು ಕಾಣಿಸಿತು. ವಿಮಾನದ ಸಂಖ್ಯೆ ಇನ್ನೂ ಹಾಗೆ ಕಾಣುತ್ತಿತ್ತು. ಸ್ವಲ್ಪ ದೂರದರಲ್ಲಿಯೇ ಮುರಿದು ಬಿದ್ದ ವಿಮಾನದ ಇನ್ನೊಂದು ಭಾಗ ಕಾಣಿಸಿತು. ಅದು ಕ್ಯಾಬಿನ್ನಿನಂತಿದ್ದು ಅದರ ವೈರ್ ಗಳು ತಳಕುಹಾಕಿಕೊಂಡಿದ್ದವು.

    ಅಲ್ಲಿ ಪೆಟ್ರೋಲ್ ವಾಸನೆ ಇನ್ನೂ ಹಾಗೆ ಇತ್ತು. ಆದರೆ ಬದುಕುಳಿದವರ ಬಗ್ಗೆ ಯಾವಂದೂ ಕುರುಹುಗಳು ಕಾಣಿಸಲಿಲ್ಲ. ಆ ಅವಶೇಷದ ಬಳಿ ನಾನು ಬಹಳ ಹೊತ್ತು ನಿಲ್ಲಲಿಲ್ಲ. ಏಕೆಂದರೆ ನಾನು ಮುಂದೆ ಸಾಗಲೇಬೇಕಿತ್ತು. ಆದರೂ ನಾನು ನಡೆದು ಹೋಗಬೇಕಾದ ದಾರಿ ನಿಧಾನವಾಗಿ ಸಾಗುತ್ತಿದ್ದರಿಂದ ನನ್ನ ಪಯಣ ಅಷ್ಟಾಗಿ ಪ್ರಗತಿ ಕಂಡಿರಲಿಲ್ಲ.

    ಎರಡನೆಯ ದಿನವಾಗಲಿ, ಮೂರನೆಯ ದಿನವಾಗಲಿ ನನ್ನ ಗಾಯಗಳು ನಂಗೆ ಒಂಚೂರು ನೋವು ಕೊಡಲಿಲ್ಲ. ಬದಲಾಗಿ ಅತಿಯಾದ ಬಿಸಿಲಿನಿಂದ ನನ್ನ ಬೆನ್ನಲ್ಲಿ ಅಸಾಧ್ಯ ಉರಿಯೂತವುಂಟಾಯಿತು. ಏಕೆಂದರೆ ನನ್ನ ಡ್ರೆಸ್ಸಿನ ಹಿಂಭಾಗದಲ್ಲಿ ಕಟ್ಟಿಕೊಳ್ಳುವ ಬೆಲ್ಟಿನ ಗುಂಡಿ ಕಿತ್ತುಹೋಗಿತ್ತು ಹಾಗೂ ನನ್ನ ಬೆನ್ನು ಬಿಸಿಲಿಗೆ ತೆರೆದುಕೊಂಡಿತ್ತು. ಮರಗಳ ಸಂಧಿಯಿಂದ ತೂರಿ ಬರುವ ಸೂರ್ಯನ ಕಿರಣಗಳು ನನ್ನ ಬೆನ್ನನ್ನು ಸುಟ್ಟುಹಾಕಿದ್ದವು. ಪೆರುವಿನ ಕಾಡುಗಳಲ್ಲಿ ಎಷ್ಟು ಕೆಟ್ಟ ಮಳೆ ಇರುತ್ತದ್ ಅಷ್ಟೇ ಕೆಟ್ಟ ಬಿಸಿಲು ಕೂಡ ಇರುತ್ತದೆ. ಹಿತಮಿತವಾದ ಹವಾಮಾನ ಜೀವನಕ್ಕೆ ಒಗ್ಗಿಕೊಂಡ ಯೂರೋಪಿನ ಜನ ಇವೆರೆಡೂ ವೈಪರಿತ್ಯಗಳಿಗೆ ಹೊಂದಿಕೊಳ್ಳಲಾರರು.

    ಎರಡನೆಯ ರಾತ್ರಿ ಸಾಕಷ್ಟು ವಿಶ್ರಾಂತಿ ತೆಗೆದುಕೊಂಡೆ. ಮಾರನೆಯ ದಿನ ಮತ್ತೆ ನನ್ನ ಪ್ರಯಾಣವನ್ನು ಮುಂದುವರೆಸಿದೆ. ಬೆನ್ನ ಮೇಲೆ ಅಸಾಧ್ಯ ಉರಿಯೂತವಿದ್ದಾಗ್ಯೂ ನಾನು ಸಾಕಷ್ಟು ದೂರವನ್ನು ನಡೆದೆ. ನಾನು ನೀರು ಮತ್ತು ಸಿಹಿತಿಂಡಿಗಳನ್ನು ಬಿಟ್ಟು ಬೇರೇನೂ ತಿನ್ನುತ್ತಿರಲಿಲ್ಲ. ಆದರೂ ನನ್ನಲ್ಲಿ ಶಕ್ತಿ ಇನ್ನೂ ಉಳಿದಿದೆ ಎಂದನಿಸುತ್ತಿತ್ತು. ಮೇಲಿಂದ ಮೇಲೆ ನನಗೆ ಸೊಳ್ಳೆಗಳು, ನೊಣಗಳು ಕಚ್ಚಿ ಹಿಂಸೆಯಿಡುತ್ತಿದ್ದವು. ಅವುಗಳನ್ನು ದೂರವಿಡಲು ಸಾಧ್ಯವಿರಲಿಲ್ಲ. ಅವನ್ನು ಲೆಕ್ಕಿಸದೆ ನಡೆಯಬೇಕಿತ್ತು. ಪ್ರತಿಸಾರಿ ಸೊಳ್ಳೆಗಳು ಕಚ್ಚಿದಾಗ ಅವು ನನ್ನ ಚರ್ಮದ ಕೆಳಗೆ ಮೊಟ್ಟೆಗಳನ್ನಿಡುತ್ತಿದ್ದವು ಹಾಗೂ ತದನಂತರದಲ್ಲಿ ಅವು ಮರಿಗಳಾಗಿ ಹೊರಬರುತ್ತಿದ್ದವು. ಇದನ್ನು ನಾನು ಗಮನಿಸಲೇ ಇಲ್ಲ.

    ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ವಿಮಾನಗಳ ಹಾರಾಟದ ಸದ್ದು ಕೇಳಿಸಿತು. ನಾನು ಖುಶಿಯಿಂದ ವಿಮಾನದ ಸದ್ದು ಬಂದತ್ತ ಕೂಗಿದೆ. ಮತ್ತೆ ಮತ್ತೆ ಕೂಗಿದೆ ಹಾಗೆ ಜೋರಾಗಿ ಕೂಗುತ್ತಾ ಹೋದೆ. ನಂಗೆ ಗೊತ್ತಿತ್ತು ನಾನು ಕೂಗುವದು ಅವರಿಗೆ ಕೇಳಿಸುವದಿಲ್ಲ-ಅದೊಂದು ವ್ಯರ್ಥ ಪ್ರಯತ್ನವೆಂದು. ಆದರೂ ಬಿಡದೆ ಒಂದೇ ಸಮನೆ “ಹಲೋ, ಹೆಲ್ಪ್....ಹೆಲ್ಪ್” ಎಂದು ಕೂಗುತ್ತಾ ಹೋದೆ. ಬಾರಿ ಬಾರಿ ಕೂಗಿದೆ “ಹಲೋ, ಹೆಲ್ಪ್” ಎಂದು. ಊಹೂಂ, ಪ್ರಯೋಜನವಾಗಲಿಲ್ಲ.

    ವಿಮಾನಗಳೇನೋ ನನಗೆ ಹತ್ತಿರವಾಗಿಯೇ ಇದ್ದವು. ಆದರೆ ವಿಮಾನ ಚಾಲಕರು ಮರದ ಕೆಳಗಿದ್ದ ನನ್ನನ್ನು ಹೇಗೆ ನೋಡಿಯಾರು? ಅಥವಾ ನನ್ನ ದನಿಯಾದರೂ ಅವರಿಗೆ ಹೇಗೆ ಕೇಳಿಸೀತು? ನಾನಾದರೂ ಆ ಮರಗಳ ಸಂಧಿಯಿಂದ ಅವರನ್ನು ಹೇಗೆ ನೋಡೇನು? ಯಾವುದೊಂದೂ ಸಾಧ್ಯವಿರಲಿಲ್ಲ! ಆದರೂ ಅವರ ಗಮನವನ್ನು ನನ್ನತ್ತ ಸೆಳೆಯಲು ಹರಸಾಹಸ ಮಾಡುತ್ತಿದ್ದೆ.

    ವಿಮಾನದ ಸದ್ದು ಕ್ರಮೇಣ ಸತ್ತುಹೋಯಿತು. ನಾನು ಪುನಃ ಒಂಟಿಯಾದೆ. ಆದರೆ ದೃತಿಗೆಡಲಿಲ್ಲ. ಸುಮ್ಮನೆ ನಡೆಯುತ್ತಾ ಹೋದೆ. ನಂಗೆ ಹಸಿವೆ ಎನಿಸುತ್ತಿರಲಿಲ್ಲ. ಆಗಾಗ ಮಾತ್ರ ನದಿಯ ಶುಭ್ರ ನೀರನ್ನು ಕುಡಿದು ಮುಂದೆ ಸಾಗುತ್ತಿದ್ದೆ. ಕೈಯಲ್ಲಿ ಭರವಸೆ ಮಾತ್ರ ಇನ್ನೂ ಹಾಗೆಯೇ ಉಳಿದಿತ್ತು.

    ನನ್ನ ಬಳಿಯಿದ್ದ ಸಿಹಿತಿಂಡಿಗಳೆಲ್ಲಾ ಇದೀಗ ಖಾಲಿಯಾಗಿದ್ದವು. ತಿನ್ನಲೂ ಏನೂ ಇರಲಿಲ್ಲ. ಆದರೂ ಯೋಚಿಸಲಿಲ್ಲ. ನಾನು ನದಿ ದಂಡೆಯ ಮೇಲೆ ಪ್ರಯಾಸದಿಂದ ಸಾಗುತ್ತಿದ್ದೆ. ಆಗೆಲ್ಲಾ ಮೊಸಳೆಗಳು ನನ್ನತ್ತ ಈಜಿಕೊಂಡು ಬರುತ್ತಿದ್ದವು. ನನಗೆ ತಕ್ಷಣ ಅಲ್ಲಿ ವಿಷಕಾರಿ ಮೀನುಗಳಿರುವದು ನೆನಪಿಗೆ ಬಂತು. ಅವು ಸಾಮಾನ್ಯವಾಗಿ ನದಿ ದಂಡೆ ಮೇಲೆಯೇ ಮಲಗಿರುತ್ತಿದ್ದವು. ನಾನು ಅಕಸ್ಮಾತಾಗಿ ಈ ಮೀನಿನ ಮೇಲೆ ಕಾಲಿಟ್ಟರೆ ನನ್ನ ಕಥೆ ಮುಗಿದಂತೆಯೇ ಸರಿ ಎಂದುಕೊಂಡು ಈಗ ಮತ್ತಷ್ಟು ಹುಶಾರಾಗಿ ನಡೆಯುತ್ತಾ ಹೋದೆ.

    ಒಂಬತ್ತನೆಯ ದಿನ ನಡೆಯುತ್ತಾ ಹೋದಂತೆ ಅನತಿ ದೂರದಲ್ಲಿ ಒಂದು ದೋಣಿ ಇರುವದು ಕಾಣಿಸಿತು. ನಾನು ಮೊದಲು ಅದಾಗಲೇ ಯಾರೋ ಬಳಸಿ ಬೀಸಾಡಿದ ಮುರುಕಲು ದೋಣಿಯಾಗಿರಬಹುದೆಂದುಕೊಂಡೆ. ಆದರೆ ಹತ್ತಿರ ಹೋಗಿ ನೋಡಿದ ಮೇಲೆ ಗೊತ್ತಾಯಿತು ಅದೊಂದು ಗಟ್ಟಿ ಮರದಿಂದ ಹೊಸದಾಗಿ ಮಾಡಿದ ದೋಣಿಯೆಂದು.

    ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ
    ಕನ್ನಡಕ್ಕೆ: ಉದಯ್ ಇಟಗಿ

    ಮಹಾಪತನ

  • ಶುಕ್ರವಾರ, ಅಕ್ಟೋಬರ್ 21, 2011
  • ಬಿಸಿಲ ಹನಿ

  • ಆಫ್ರಿಕಾದ ಒಂದು ಮೂಲೆಯಲ್ಲಿ ಅರಬ್ ಜಗತ್ತಿಗೆ ಹತ್ತಿರವಾಗಿರುವ ಲಿಬಿಯಾ ಬುಡಕಟ್ಟುಗಳಿಂದ ತುಂಬಿದ ದೇಶ. ಗಡಾಫಿ ಹುಟ್ಟಿದ್ದು 1942ರಲ್ಲಿ ಸಿರ್ತ್ ನಲ್ಲಿ. ತಂದೆ-ತಾಯಿಗಳು ಅಲೆಮಾರಿ ಬುಡಕಟ್ಟೊಂದಕ್ಕೆ ಸೇರಿದವರು. ಶಿಕ್ಷಣ ಪಡೆಯಲು ಗಡಾಫಿಗೆ ಕಷ್ಟವಾಗಲಿಲ್ಲ. ಬೆಂಗಾಝಿ ವಿಶ್ವವಿದ್ಯಾನಿಲಯದಲ್ಲಿ ಭೂಗೋಳ ಕಲಿಯಲು ಸೇರಿದರೂ ರಾಜಕೀಯವಾಗಿ ಬಹಳ ಸಂವೇದನಾಶೀಲನಾಗಿದ್ದರಿಂದ ಪದವಿ ಪಡೆಯುವ ತನಕ ವಿಶ್ವವಿದ್ಯಾನಿಲಯದಲ್ಲಿ ಉಳಿಯಲಿಲ್ಲ. ಈಜಿಪ್ಟಿನ ಮುತ್ಸದ್ಧಿ ಗಮಾಲ ಅಬ್ದುಲ್ ನಾಸೆರ್ ಅವರ ಅರಬ್ ಸಮಾಜವಾದದಿಂದ ಪ್ರಭಾವಿತಾದ ಗಡಾಫಿ 1956ರಲ್ಲಿ ಸೂಯೇಝ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇಸ್ರೇಲ್ ವಿರೋಧಿ ಪ್ರಮುಖ ಪಾತ್ರವಹಿಸಿದ. ರಾಜಕೀಯ ಮಹತ್ವಾಕಾಂಕ್ಷೆಯ ಬಾಗವಾಗಿಯೇ ಸೇನೆಗೆ ಸೇರಿದ.


    ಗ್ರೀಸ್ ನಲ್ಲಿರುವ ಹೆಲೆನಿಕ್ ಮಿಲಿಟರ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಹೊತ್ತಿನಲ್ಲೇ ಲಿಬಿಯಾದ ರಾಜಸತ್ತೆಯನ್ನು ಕಿತ್ತೆಸೆಯುವ ಸಂಚು ರೂಪಿಸಿದ್ದ ಗಡಾಫಿಗೆ ಆಗ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಮುಂದೆ ಬ್ರಿಟನ್ ನಲ್ಲೂ ಸೇನಾ ಶಿಕ್ಷಣವನ್ನು ಪಡೆದು ಸ್ವದೇಶಕ್ಕೆ ಹಿಂದಿರುಗಿದ ಮೇಲೆ ತನ್ನ ಸಂಚನ್ನು ಕಾರ್ಯರೂಪಕ್ಕೆ ತಂದ. ಹಾಗೆ ನೋಡಿದರೆ ಲಿಬಿಯಾಕ್ಕೆ ಬಹುದೊಡ್ಡ ಅರಸೊತ್ತಿಗೆಯ ಇತಿಹಾಸವೇನೂ ಇಲ್ಲ. ಇಲ್ಲಿದ್ದದ್ದು ಏಕೈಕ ದೊರೆ ಇದ್ರಿಸ್. 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ನೇತೃತ್ವದ ಸೇನೆಯ ಕಿರಿಯ ಅಧಿಕಾರಿಗಳ ಗುಂಪೊಂದು ರಾಜಕುಮಾರನನ್ನು ಬಂಧನದಲ್ಲಿಟ್ಟಿತು. ಹೀಗೆ ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಿಬಿಯಾ ಅರಸೊತ್ತಿಗೆಯಿಂದ ಸ್ವತಂತ್ರವಾಗಿ ಅರಸನೆಂದು ಹೇಳಿಕೊಳ್ಳದ ಮತ್ತೊಬ್ಬ ಅರಸನ ಕೈವಶವಾಯಿತು.

    1969ರಿಂದಲೂ ಲಿಬಿಯಾ ದೇಶದ ಸರ್ವಾಧಿಕಾರಿಯಾಗಿದ್ದ ಕರ್ನಲ್ ಮೌಮರ್ ಗಡಾಫಿ ಲಿಬಿಯಾವನ್ನು ನಲವತ್ತೆರೆಡು ವರ್ಷಗಳ ಕಾಲ ಸಮರ್ಥವಾಗಿ ಆಳಿದವ. ಸಣ್ಣ ವಯಸ್ಸಿಗೇ ಅಧಿಕಾರಕ್ಕೇರಿದ ಗಡಾಫಿಯ ಬಗ್ಗೆ ಲಿಬಿಯಾದ ಜನರಿಗೂ, ಜಗತ್ತಿಗೂ ಒಂದಷ್ಟು ನಿರೀಕ್ಷೆಗಳಿದ್ದವು. ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಬದಲಾವಣೆಗಳು ನಡೆಯುತ್ತಿದ್ದ ಕಾಲ ಘಟ್ಟದಲ್ಲಿ ಅಧಿಕಾರಕ್ಕೇರಿದ ಯುವಕ ಗಡಾಫಿ ಅನೇಕರಿಗೆ ಆಫ್ರಿಕಾ ಹಾಗೂ ಅರಬ್ ಜಗತ್ತಿನ ಚೆಗುವಾರನಂತೆ ಕಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಇದಕ್ಕೆ ತಕ್ಕಂತೆ ದೇಶದ ಮುಖ್ಯಸ್ಥನಾಗಿ ಅಧಿಕಾರಕ್ಕೇರಿದ ನಂತರವೂ ಇತರರಂತೆ ತನ್ನನ್ನು ಸೇನೆಯ ಮುಖ್ಯಸ್ಥನಾಗಿ ಘೋಷಿಸಿಕೊಳ್ಳದೆ ’ಕರ್ನಲ್’ ಪದವಿಯಲ್ಲೇ ಉಳಿದುಕೊಂಡಿದ್ದು ಹಲವರಲ್ಲಿ ಭರವಸೆಯನ್ನು ಮೂಡಿಸಿತು.


    1969ರಲ್ಲಿ ಅಧಿಕಾರಕ್ಕೆ ಬಂದ ನಂತರ ಲಿಬಿಯಾ ಅಳವಡಿಸಿಕೊಂಡಿದ್ದ ಸಂವಿಧಾನವನ್ನು ರದ್ದು ಮಾಡಿ ತನ್ನದೇ ಆದ ಹೊಸ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಚಿಂತನೆಗಳಿರುವ “ದಿ ಗ್ರೀನ್ ಬುಕ್” ಪ್ರಕಟಿಸಿ ಅದರನುಸಾರ ಆಡಳಿತ ನಡೆಸಿದ. ಗಡಾಫಿಯ ಆಡಳಿತದಲ್ಲಿ ಲಿಬಿಯಾ ಅಪಾರ ಪ್ರಗತಿ ಸಾಧಿಸಿತು. ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ. ಕೃಷಿ-ಕೈಗಾರಿಕೆಗಳಲ್ಲಿ ಇಡೀ ಆಫ್ರಿಕಾದಲ್ಲೇ ಲಿಬಿಯಾ ಮೊದಲ ಸ್ಥಾನದಲ್ಲಿತ್ತು. ಜೊತೆಗೆ ಲಿಬಿಯಾದ ರಾಷ್ಟ್ರೀಯ ತಲಾದಾಯವು ಜಗತ್ತಿನ ಉತ್ತಮ ತಲಾದಾಯ ಇರುವ ದೇಶಗಳ ಸಾಲಿಗೆ ಸೇರಿತ್ತು.


    ಲಿಬಿಯಾದ ಕುರಿತಂತೆ ಹೊರಜಗತ್ತಿನಲ್ಲಿ ಸ್ವಲ್ಪಮಟ್ಟಿಗೆ ಒಳ್ಳೆಯ ಅಭಿಪ್ರಾಯವೇ ಇತ್ತು. ಐರ್ಲಂಡ್ ನಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆಗಳಿಗೆ ಲಿಬಿಯಾದ ಬೆಂಬಲವಿದೆಯೆಂಬ ಕಾರಣಕ್ಕೆ ಯೂರೋಪ್ ಮಾತ್ರ ಲಿಬಿಯಾವನ್ನು ’ಭಯೋತ್ಪದಕ’ ದೇಶಗಳ ಪಟ್ತಿಯಲ್ಲಿಟ್ಟಿತ್ತು. 1986ರಲ್ಲಿ ಬರಿನ್ ನ ನೈಟ್ ಕ್ಲಬ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಗಡಫಿಯ ಪಾತ್ರವನ್ನು ಸಂಶಯಿಸಿ ಅಮೆರಿಕಾ ಲಿಬಿಯಾದ ಮೇಲೆ ಬಾಂಬ್ ದಾಳಿ ನಡೆಸಿತ್ತು. 1988ರಲ್ಲಿ ಸ್ಕಾಟ್ಲೆಂಡ್ ನಲ್ಲಿ ಪಾನ್ ಅಮ್ ವಿಮಾನದಲ್ಲಿ ಬಂಬಿಟ್ತ ಅರೋಪವೂ ಲಿಬಿಯಾದ ಮೇಲಿತ್ತು. ಬಹುಕಾಲ ಇದನ್ನು ಗಡಫಿ ನಿರಾಕರಸುತ್ತಲೇ ಬಂದಿದ್ದ. ಈ ಕಾರಣಕ್ಕಾಗಿ ಲಿಬಿಯಾವನ್ನು ವಿಶ್ವಸಂಸ್ಥೆ ನಿಷೇಧಕ್ಕೆ ಗುರಿಪಡಿಸಿತ್ತು. 2003ರಲ್ಲಿ ಈ ಅಪರಾಧ ಒಪ್ಪಿಕೊಂಡು ಮೃತರಿಗೆ ಪರಿಹಾರ ಕೊಟ್ಟದ್ದು ಈಗ ಇತಿಹಾಸ.


    1969ರ ತನಕ ಲಿಬಿಯಾ ಎಣ್ಣೆ ಬಾವಿಗಳಿಂದ ಎಣ್ಣೆ ತೆಗೆಯುವ ತಂತ್ರಜ್ಞಾನಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಅವಲಂಬಿತವಾಗಿತ್ತು. ಇದನ್ನು ದುರುಪಯೋಗ ಪಡೆದುಕೊಂಡ ಹೊರದೇಶಿಯ ಕಂಪನಿಗಳು ತಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಎಣ್ಣೆಯ ದರವನ್ನು ನಿಗದಿಗೊಳಿಸಿ ಎಣ್ಣೆ ವ್ಯಾಪಾರದಲ್ಲಿ ಅರ್ಧ ಲಾಭವನ್ನು ಹೊಡೆಯುತ್ತಿದ್ದವು. ತೈಲ ಸಂಪನ್ಮೂಲವನ್ನೂ ಮಾರಿಕೊಂಡು, ಲಾಭವನ್ನೂ ಪಡೆಯದೆ ಲಿಬಿಯಾ ಸಂಕಷ್ಟದಲ್ಲಿತ್ತು. ಆದರೆ ಈತ 1969ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಪರದೇಶಿ ಕಂಪನಿಗಳ ಗುತ್ತಿಗೆಯನ್ನು ಮರುಪರಿಶೀಲಿಸಿ ಹತೋಟಿಗೆ ತೆಗೆದುಕೊಂಡ. ತನ್ನ ನಿರ್ಧಾರವನ್ನು ಒಪ್ಪದ ಕಂಪನಿಗಳಿಗೆ ಎಣ್ಣೆ ಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದ. ಇತರೆ ತೈಲ ರಾಷ್ಟ್ರಗಳಿಗೂ ಸಹ ತನ್ನ ನೀತಿಯನ್ನೇ ಅನುಸರಿಸಿ ಎಂದು ಗಡಾಫಿ ಸಲಹೆಯನ್ನಿತ್ತ. ಪರಿಣಾಮವಾಗಿ ಈ ರಾಷ್ಟ್ರಗಳು ಬಹಳ ಬೇಗ ಶ್ರೀಮಂತವಾದವು. ಲಿಬಿಯಾದಲ್ಲಿ ಹೇರಳ ತೈಲ ಸಂಪನ್ಮೂಲವಿತ್ತು. ಆದರೆ ಜನಸಂಖ್ಯೆ ಕಡಿಮೆಯಿತ್ತು. ಇದನ್ನರಿತ ಗಡಾಫಿ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ದೇಶದ ಉದ್ದಾರಕ್ಕಾಗಿ ಚೆಲ್ಲಿದ. ಹೀಗಾಗಿ ಲಿಬಿಯಾ ಬಹಳ ಬೇಗನೆ ಜಗತ್ತಿನ ಭೂಪಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ಮಿಂಚತೊಡಗಿತು.

    ನಾನು ಇವನ್ನೆಲ್ಲಾ ಈತ ರಾಜಕೀಯವಾಗಿ ಎಷ್ಟೊಂದು ಸಂವೇದನಾಶಿಲನಾಗಿದ್ದ, ಚಾಣಾಕ್ಷನಾಗಿದ್ದ ಎಂದು ತೋರಿಸಲು ಹೇಳಿದೆ. ಹಾಗಾದರೆ ಇನ್ನು ಲಿಬಿಯಾದ ಅಧ್ಯಕ್ಷನಾಗಿ ಆತ ಲಿಬಿಯನ್ನರಿಗೆ ಮಾಡಿದ್ದೇನು ಎಂಬುದನ್ನು ಹೇಳಿದರೆ ಅಲ್ಲಿ ನಿಜಕ್ಕೂ ಕ್ರಾಂತಿಯೊಂದರ ಅವಶ್ಯಕತೆಯಿತ್ತೆ? ಅದು ಗಡಾಫಿಯ ಹತ್ಯೆಯಲ್ಲಿ ಕೊನೆಯಾಗಬೇಕಿತ್ತೆ? ಖಂಡಿತ ಇದರ ಹಿಂದೆ ಅಮೆರಿಕಾದ ಕೈವಾಡವಿದೆಯಲ್ಲವೆ? ಎಂದು ನಿಮಗನಿಸಿದರೆ ಆಶ್ಚರ್ಯವಿಲ್ಲ. ದೂರದಲ್ಲಿ ಕುಳಿತಕೊಂಡ ನಾವೆಲ್ಲರೂ ಗಡಾಫಿ ಬಗ್ಗೆ ಆತ ಒಬ್ಬ ಕೄರ ಸರ್ವಾಧಿಕಾರಿ, ಲಂಪಟ, ಐಷಾರಾಮಿ ಜಿವನ ನಡೆಸುವವ, ತಿಕ್ಕಲು, ಸ್ತ್ರೀಲೋಲ, ಸಲಿಂಗಕಾಮಿ, ಲಿಬಿಯನ್ನರ ರಕ್ತ ಹೀರಿದವ ಎಂದು ಇನ್ನೂ ಏನೇನೋ ಆತನ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ವಾಸ್ತವದಲ್ಲಿ ಇವು ಅರ್ಧ ಸತ್ಯ. ಅರ್ಧ ಸುಳ್ಳು. ಹಾಗೆ ನೋಡಿದರೆ ಗಡಾಫಿ ತನ್ನ ವಿರುದ್ಧ ದನಿ ಎತ್ತಿದವರನ್ನು ಮುಗಿಸುವಷ್ಟು ಕೄರಿಯಾಗಿದ್ದನೆ ಹೊರತು ಲಿಬಿಯನ್ನರಿಗೆ ಕೆಟ್ಟ ಆಡಳಿತ ನೀಡುವಷ್ಟು ಕೄರ ಸರ್ವಾಧಿಕಾರಿಯಾಗಲಿ, ಸ್ವಾರ್ಥಿಯಾಗಲಿ ಯಾವತ್ತೂ ಆಗಿರಲಿಲ್ಲ. ಇದು ನಾನು ಲಿಬಿಯಾದಲ್ಲಿ ಮೂರೂವರೆ ವರ್ಷ ಇದ್ದು ಕಂಡುಕೊಂಡ ಸತ್ಯ. ಹಾಗೆ ಒಂದು ವೇಳೆ ಆತ ಅಷ್ಟೊಂದು ಕೄರಿಯಾಗಿದ್ದರೆ ಅಥವಾ ಕೆಟ್ಟ ಆಡಳಿತ ನಡೆಸಿದ್ದರೆ ಆತ 42 ವರ್ಷಗಳ ಕಾಲ ಆಳ್ವಿಕೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಸರಿಯಾಗಿ ಅಂತರಾಷ್ಟ್ರೀಯ ಚಾನೆಲ್ಗಂಳಾದ ಬಿ.ಬಿ.ಸಿ. ಮತ್ತು ಆಲ್ಜೇಜಿರಾಗಳು ಗಡಾಫಿಯನ್ನು ಒಬ್ಬ ಖಳನಾಯಕನಂತೆ ಚಿತ್ರಿಸಿಕೊಂಡು ಬಂದವು. ಇದು ಮುಂಚಿನಿಂದಲೂ ಲಿಬಿಯಾದ ತೈಲ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟ ಅಮೆರಿಕನ್ನರಿಗೆ ಲಿಬಿಯಾದ ಮೇಲೆ ಹಿಡಿತ ಸಾಧಿಸಲು ಮತ್ತಷ್ಟು ಅನುಕೂಲವನ್ನು ಮಾಡಿಕೊಟ್ಟಿತು.



    ಗಡಾಫಿ ಒಬ್ಬ ತಿಕ್ಕಲು ಸರ್ವಾಧಿಕಾರಿಯಾದರೂ ಆತ ರಾಜಕೀಯವಾಗಿ ಬಹಳ ಸಂವೇದನಾಶೀಲನಾಗಿದ್ದ. ಇಡಿ ಆಫ್ರಿಕಾ ಖಂಡದಲ್ಲಿ ಆಫ್ರಿಕಾದ ಇತರ ಅನೇಕ ದೇಶಗಳಿಗಿಂತ ಲಿಬಿಯಾವನ್ನು ಮುಂಚೂಣಿಯಲ್ಲಿಟ್ಟಿದ್ದ. ನೆರೆ ರಾಷ್ಟ್ರಗಳಾದ ಟ್ಯುನಿಶಿಯಾದಲ್ಲಿ, ಈಜಿಪ್ಟ್ನಲ್ಲಿ ಸರ್ಕಾರಗಳು ಉರುಳುತ್ತಿದ್ದಂತೆ ಲಿಬಿಯಾದಲ್ಲೂ ಜನರು ಬೀದಿಗಿಳಿದಿದ್ದಾರೆ ಎಂದು ನಾವೆಲ್ಲಾ ದೂರದಲ್ಲಿ ಕುಳಿತುಕೊಂಡು ಯೋಚಿಸಿದ್ದೆವು. ಆದರೆ ನಾನು ಅಲ್ಲಿ ಮೂರುವರೆ ವರ್ಷಗಳಿಂದ ಇದ್ದು ಗಮನಿಸಿದ್ದೇನೆಂದರೆ ದಂಗೆಯೇಳುವಷ್ಟು ಕೆಟ್ಟದಾಗಿ ಲಿಬಿಯಾ ಯಾವತ್ತೂ ಈ ಎರಡು ರಾಷ್ಟ್ರಗಳಂತಿರಲಿಲ್ಲ. ಅದು ಸದಾ ಪ್ರಗತಿಯ ಮುಂಚೂಣಿಯಲ್ಲಿರಲು ಕೆಲಸ ಮಾಡುತ್ತಿತ್ತು. ಏಕೆಂದರೆ ಅಭಿವೃದ್ಧಿಯ ವಿಚಾರದಲ್ಲಿ ಗಡಾಫಿಯದು ಎತ್ತಿದ ಕೈ. ಪ್ರತಿಯೊಂದು ಹಳ್ಳಿ ಹಳ್ಳಿಗೂ ಆಸ್ಪತ್ರೆ, ಶಾಲೆ, ಕಾಲೇಜು, ಬ್ಯಾಂಕು, ಪೋಸ್ಟ್ ಅಫೀಸು, ಒಳ್ಳೆಯ ರಸ್ತೆ ಇನ್ನೂ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದ. ಅಲ್ಲಿನ ಜನಕ್ಕೆ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡಿದ್ದ. ಮಾತ್ರವಲ್ಲ ಅಲ್ಲಿನ ಬಹುತೇಕ ಪ್ರಜೆಗಳು ಸರಕಾರಿ ಕೆಲಸದಲ್ಲಿದ್ದಾರೆ. ಒಂದು ವೇಳೆ ಅವರ ವಿದ್ಯಾಭ್ಯಾಸ ಮುಗಿದ ಮೇಲೆ ತಕ್ಷಣಕ್ಕೆ ಕೆಲಸ ಸಿಗದೆ ಹೋದರೆ ಅವರಿಗೆ ಆಯಾ ಹುದ್ದೆಗೆ ನಿಗದಿಪಡಿಸಿದಷ್ಟು ಸಂಬಳವನ್ನು ಕೆಲಸ ಸಿಗುವವರಿಗೂ ಪ್ರತಿ ತಿಂಗಳು ನೀಡುತ್ತಿದ್ದ. ಅಲ್ಲಿನ ವಿದ್ಯಾವಂತ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್ ಮುಂತಾದ ದೇಶಗಳಿಗೆ ಸ್ಕಾಲರ್ ಶಿಪ್ ಕೊಟ್ಟು ಕಳಿಸುತ್ತಿದ್ದ. ಜೊತೆಗೆ ಅವರು ಓದು ಮುಗಿಸುವವರೆಗೂ ಅವರ ವಸತಿ ಮತ್ತು ಕಾರಿನ ಖರ್ಚುವೆಚ್ಚವನ್ನು ಅವನೇ ಭರಿಸುತ್ತಿದ್ದ. ಅವರಿಗೆ ಮಾತ್ರವಲ್ಲ ಹಾಗೆ ಹೋಗುವವರ ಹೆಂಡತಿ ಮತ್ತು ಮಕ್ಕಳಿಗೆ ತಿಂಗಳಿಗೆ ಅಲ್ಲಿನ ಖರ್ಚು ವೆಚ್ಚಕ್ಕಾಗಿ ತಲಾ 3೦೦೦ ಡಾಲರ್ ಕೊಡುತ್ತಿದ್ದ. ನಮಗೆ ಲಂಡನ್ ಮತ್ತು ಅಮೆರಿಕಾದಲ್ಲಿ ಓದುವದು ಕನಸಿನ ಮಾತಾದರೆ ಅವರಿಗೆ ಅತಿ ಸುಲಭದಲ್ಲಿ ಎಟಕುತ್ತಿತ್ತು.

    ಇತ್ತೀಚಿಗೆ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸುವದರ ಮೂಲಕ ಹಂಚಿದ್ದ. ಶೀಘ್ರದಲ್ಲಿಯೇ ಒಂದು ದಿನಾರಿಗೆ (ಅಂದರೆ ಭಾರತದ 36-37 ರೂ.ಗೆ) 6 ಲೀಟರ್ ನಷ್ಟು ದೊರೆಯುತ್ತಿದ್ದ ಪೆಟ್ರೋಲನ್ನು 10 ಲೀಟರಿಗೆ ಹೆಚ್ಚಿಸುವವನಿದ್ದ. ಅಲ್ಲಿನ ಜನಕ್ಕೆ ಬಡ್ಡಿರಹಿತ ಲೋನ್ ಮೇಲೆ ವಾಸಿಸಲು ಮನೆಗಳನ್ನು ಕಟ್ಟಿಸಿಕೊಡುತ್ತಿದ್ದ. ಹಾಗೆ ನೋಡಿದರೆ ಲಿಬಿಯನ್ನರು ಆ ಸಾಲದ (ಅಸಲನ್ನು) ಐದೋ, ಆರೋ ಕಂತುಗಳನ್ನು ಕಟ್ಟಿಬಿಟ್ಟು ಕೈ ತೊಳೆದುಕೊಂಡುಬಿಡುತ್ತಿದ್ದರು. ಮುಂದಿನದನ್ನು ಏಕೆ ಕಟ್ಟಲಿಲ್ಲ ಎಂದು ಕೂಡ ಆತ ಕೇಳುವದಕ್ಕೆ ಹೋಗುತ್ತಿರಲಿಲ್ಲ. ಕಾರುಗಳನ್ನು ಫ್ಯಾಕ್ಟರಿಗಳು ನಿಗದಿಪಡಿಸಿದ ದರದಲ್ಲಿಯೇ ಮಾರಾಟ ಮಾಡುತ್ತಿದ್ದ.

    ಆತನ ಆಡಳಿತದಲ್ಲಿ ಲಿಬಿಯಾ ದೇಶ ಯಾರಿಂದಲೂ ಒಂದು ಪೈಸೆಯಷ್ಟು ಸಾಲ ತೆಗೆದುಕೊಂಡಿರಲಿಲ್ಲ. ಒಬ್ಬೇ ಒಬ್ಬ ಭಿಕ್ಷುಕನನ್ನು ಅಲ್ಲಿ ಕಾಣುವಂತಿರಲಿಲ್ಲ. ಹಾಗೆ ಒಂದು ವೇಳೆ ಕಂಡರೆ ಅವರು ಲಿಬಿಯಾದ ಭಿಕ್ಷುರಲ್ಲ. ಬದಲಾಗಿ, ಅವರು ಈಜಿಪ್ಟ್ ಅಥವಾ ನೈಜರ್, ನೈಜಿರೀಯಾ ದೇಶದ ಭಿಕ್ಷುಕರಾಗಿರುತ್ತಾರೆ. ಹೆಣ್ಣುಮಕ್ಕಳ ವಿಷಯದಲ್ಲಿ ಕೂಡ ಗಡಾಫಿ ಔದಾರ್ಯವನ್ನು ತೋರಿಸಿದ್ದ. ಇತರೆ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳು ಹೊರಗೆ ಹೋಗುವಾಗ ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ನಿಯಮಗಳಿರುವಂತೆ ಅಂಥ ಕಟ್ಟಳೆಗಳ್ಯಾವದನ್ನು ಅವನು ವಿಧಿಸಿರಲಿಲ್ಲ. ಅವರಿಗೆ ಎಲ್ಲ ರಂಗಗಳಲ್ಲೂ ಸರಿ ಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದ. ದುರಂತವೆಂದರೆ ಜಗತ್ತಿನ ಎಲ್ಲ ಪತ್ರಿಕೆಗಳು, ಟೀವಿ ಚಾನಲ್ ಗಳು ಮತ್ತು ಇತರೆ ಮಾಧ್ಯಮಗಳು ಆತ ಲಿಬಿಯನ್ನರಿಗೆ ಕೊಟ್ಟ ಸೌಲತ್ತುಗಳನ್ನಾಗಲಿ ಅಥವಾ ಆತನ ಇನ್ನೊಂದು ಮುಖವನ್ನು ತೆರೆದಿಡುವ ಪ್ರಯತ್ನವನ್ನಾಗಲಿ ಯಾವತ್ತೂ ಮಾಡಲೇ ಇಲ್ಲ.

    ಗಡಾಫಿ ಯಾವತ್ತೂ IMFನಿಂದಾಗಲಿ, ವರ್ಲ್ದ್ ಬ್ಯಾಂಕಿನಿಂದಾಗಲಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಲು ಒಪ್ಪುತ್ತಿರಲಿಲ್ಲ. ಲಿಬಿಯಾವನ್ನು ಆರ್ಥಿಕವಾಗಿ ಆದಷ್ಟೂ ಸ್ವತಂತ್ರವಾಗಿಟ್ಟಿದ್ದ. ಗಡಾಫಿ, ತೈಲ ಉತ್ಪನ್ನ ರಾಷ್ಟ್ರಗಳಿಗೆ ತೈಲ ಮಾರಾಟ ಮಾಡಿದ ಹಣವನ್ನು ಡಾಲರ್ ಗಳಲ್ಲಾಗಲಿ, ಯೂರೋಗಳಾಲ್ಲಗಲಿ ಸ್ವೀಕರಿಸಬೇಡಿ ಬದಲಾಗಿ ಚಿನ್ನದ ರೂಪದಲ್ಲಿ ಸ್ವೀಕರಿಸಿ ಎಂದು ಹೇಳಿದ್ದ. ಆದರೆ ಅಮೆರಿಕಾವೂ ಸೇರಿದಂತೆ ಬೇರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತೈಲವನ್ನು ಕೊಳ್ಳುವಷ್ಟು ಚಿನ್ನವಿರಲಿಲ್ಲ. ಒಂದು ವೇಳೆ ಗಡಾಫಿ ಹೇಳಿದಂತೆ ಚಿನ್ನ ಕೊಟ್ಟು ತೈಲವನ್ನು ಕೊಂಡುಕೊಂಡಿದ್ದರೆ ಈ ಎಲ್ಲ ರಾಷ್ಟ್ರಗಳು ದಿವಾಳಿಯೇಳುವ ಸಂಭವವಿತ್ತು. ಇದೇ ಗಡಾಫಿಯ ಹತ್ಯೆಗೆ ಮೂಲ ಕಾರಣವಾಯಿತು. ಇದೆಲ್ಲದಕ್ಕೆ ಅಲ್ಲಿ ಎದ್ದ ಕ್ರಾಂತಿಯೊಂದು ನೆಪವಾಯಿತಷ್ಟೆ. ಸದಾ ತನ್ನ ಹಿತಾಸಕ್ತಿಯ ಬಗ್ಗೆಯೇ ಯೋಚಿಸುತ್ತಲೇ ಬೇರೆಯವರಿಗೆ ಸಹಾಯ ಮಾಡುವ ನೆಪದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಅಮೆರಿಕಾದ ಪರಮನೀಚತನಕ್ಕೆ ಕೊನೆಯಾದರು ಇದೆಯೇ?



    ಏನಾದರಾಗಲಿ 42 ವರ್ಷ ಲಿಬಿಯಾದ ಅವಿಭಾಜ್ಯ ಅಂಗವೇ ಆಗಿದ್ದ ಗಡಾಫೆ ಈಗ ಅಲ್ಲಿಲ್ಲ. ಅವನಿಲ್ಲದ ಲಿಬಿಯಾ ಹೇಗಿರುತ್ತದೆ? ಅವನ ನಂತರದ ದಿನಗಳು ಹೇಗಿರುತ್ತವೆ? ಮುಂದೇನಾಗಬಹುದು? ಲಿಬಿಯಾವನ್ನು ಸಂಕ್ರಮಣ ಕಾಲಘಟ್ಟಕ್ಕೆ ತಂದು ನಿಲ್ಲಿಸುರುವ NTC (National Transition Council) ಲಿಬಿಯಾದ ಜನತೆಗೆ ಗಡಾಫಿ ಕೊಟ್ಟ ಆಡಳಿತವನ್ನೇ ಮುಂದುವರಿಸುತ್ತದೆಯೇ? ಅಥವಾ ಅವನಿಗಿಂತ ಚನ್ನಾಗಿ ನಡೆಸುತ್ತದೆಯೆ? ಅಥವಾ ಇರಾಕಿನಂತೆ, ಅಫಘಾನಿಸ್ತಾದಂತೆ ಲಿಬಿಯಾ ಸಹ ಅಮೆರಿಕಾದ ಕೈಗೊಂಬೆಯಾಗಿ ಉಳಿಯುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು. ಒಟ್ಟಿನಲ್ಲಿ ಗಡಾಫಿಯ ಸಾವನ್ನು ಲಿಬಿಯಾ ದೇಶದ ದುರಂತವೆನ್ನಬೇಕೋ ಅಥವಾ ಕಾಲದ ವ್ಯಂಗ್ಯವೆನ್ನಬೇಕೋ ತಿಳಿಯುತ್ತಿಲ್ಲ.

    -ಉದಯ್ ಇಟಗಿ


    ಈ ಲೇಖನ ಇವತ್ತಿನ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ. ಇದರ ಲಿಂಕ್ ಇಲ್ಲಿದೆ http://kendasampige.com/article.php?id=4828

    ಕಾಡಿಗೆ ಎದುರಾಗಿ ನಿಂತ ಹುಡುಗಿ - ಭಾಗ 1

  • ಭಾನುವಾರ, ಅಕ್ಟೋಬರ್ 02, 2011
  • ಬಿಸಿಲ ಹನಿ
  • ನನಗೆ ವಿಮಾನ ಹಾರಾಟವೆಂದರೆ ಬಲು ಇಷ್ಟ. ನಾನು ಈಗಾಗಲೇ ಬಹಳಷ್ಟು ಸಾರಿ ವಿಮಾನದಲ್ಲಿ ಪ್ರಯಾಣಿಸಿದ್ದರಿಂದ ನನಗೆ ವಿಮಾನವೆಂದರೆ ಒಂಚೂರು ಹೆದರಿಕೆಯೆನಿಸುತ್ತಿರಲಿಲ್ಲ. ಹೀಗಾಗಿ ಲೀಮಾದಲ್ಲಿ ನಾನು ನನ್ನ ತಾಯಿಯೊಡನೆ ವಿಮಾನದೊಳಕ್ಕೆ ಕುಳಿತಂತೆ ನನಗೆ ನಿರಾತಂಕವೆನಿಸಿತು. ಅದು ಕ್ರಿಸ್ಮಸ್ ಮುನ್ನಾ ದಿನ. ನಾವು ಪುಕಲ್ಪಾದಲ್ಲಿ ಕಾಡಿನಿಂದಾಚೆಯಿರುವ ನನ್ನ ತಂದೆಯನ್ನು ನೋಡಲು ಹೋಗುತ್ತಿದ್ದೆವು. ನಮಗೆ ಈಗಾಗಲೇ ನನ್ನ ತಂದೆ ಹಬ್ಬಕ್ಕಾಗಿ ಕ್ರಿಸ್ಮಸ್ ಗಿಡವನ್ನು ತಯಾರಿಸಿಟ್ಟುಕೊಂಡು ನಮ್ಮನ್ನು ಸ್ವಾಗತಿಸಲು ಕಾಯುತ್ತಿದ್ದನೆಂದು ಗೊತ್ತಿತ್ತು.

    ಬೆಳಿಗ್ಗೆ 7 ಗಂಟೆಗೆ ಹೊರಡಬೇಕಿದ್ದ ನಮ್ಮ ವಿಮಾನ ’ಲಾಕ್-ಹೀಡ್ ಎಲೆಕ್ಟ್ರಾ’ 11.15 ಆದರೂ ಇನ್ನೂ ಹೊರಡದೇ ಇದ್ದದ್ದು ನಂಗೆ ಒಂಚೂರು ಬೇಸರ ಮೂಡಿಸಲಿಲ್ಲ. ಏಕೆಂದರೆ ಪೆರುವಿನಲ್ಲಿ ವಿಮಾನಗಳು ಸಮಯಕ್ಕೆ ಸರಿಯಾಗಿ ಹೊರಡುವದು ತುಂಬಾ ಅಪರೂಪವಾಗಿತ್ತು ಮತ್ತು ನನಗದು ಒಗ್ಗಿಹೋಗಿತ್ತು. ವಿಮಾನದಲ್ಲಿ ಒಟ್ಟು 80 ಜನ ಪ್ರಯಾಣಿಕರಿದ್ದರು. ಆದರೆ ನಾನು ಅದ್ಹೇಗೋ 19ನೇ ಸಾಲಿನಲ್ಲಿರುವ ಬಲಬದಿಯ ಕಿಟಕಿ ಪಕ್ಕದ ಆಸನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಎಲ್ಲವೂ ಸಹಜವಾಗಿಯೇ ಇತ್ತು: ವಿಮಾನ ನೆಲದಿಂದ ಮೇಲಕ್ಕೆ ಹಾರುವದು, ಪೆಸಿಫಿಕ್ ಸಾಗರದ ಮೇಲೆ ಸುತ್ತು ಹಾಕುವದು, ನಿಧಾನಕ್ಕೆ ಎತ್ತರ ಹೆಚ್ಚಿಸಿಕೊಳ್ಳುವದು, ಆಂಡೀಸ್ ಪರ್ವತಗಳನ್ನು ದಾಟುವದು, ಮಧ್ಯಾಹ್ನದ ಊಟ ಹಾಗೂ ಗಗನ ಸಖಿಯರ ಮಂದಹಾಸಳು.........ಹೀಗೆ ಎಲ್ಲವೂ ಸುಖಕರವಾಗಿತ್ತು.

    ನಾವು ಹಿಮದಿಂದಾವೃತವಾದ ಆಂಡೀಸ್ ಪರ್ವತ ಶಿಖರಗಳನ್ನೂ ಹಾಗೂ ಪೂರ್ವದುದ್ದಕ್ಕೂ ಚಾಚಿಕೊಂಡು ನಿಂತಿರುವ ದಟ್ಟ ಕಾಡುಗಳನ್ನೂ ನೋಡುತ್ತಾ ಕುಳಿತೆವು. ಸ್ವಲ್ಪ ಹೊತ್ತಿನ ನಂತರ ಗಗನ ಸಖಿಯರು ಮಂದಹಾಸ ಬೀರುತ್ತಾ ಊಟದ ತಟ್ಟೆಗಳನ್ನು ಎತ್ತಲು ಬಂದರು. ಅಷ್ಟೊತ್ತಿಗಾಗಲೆ ಕೆಲವು ಪ್ರಯಾಣಿಕರು ನಿದ್ರೆ ಹೋಗಿದ್ದರು.

    ಲೀಮಾದಿಂದ ಪುಕಲ್ಪಾದವರಿಗೆ ವಿಮಾನ ಪ್ರಯಾಣದ ಸಮಯ ಕೇವಲ ಒಂದು ಗಂಟೆಯಷ್ಟೆ. ಹೊರಗಡೆ ಯಾವುದೇ ಮಂಜಿನ ಮುಸುಕಗಳಿಲ್ಲದೆ ಎಲ್ಲವೂ ನಿಚ್ಛಳವಾಗಿದ್ದರೆ ಜಗತ್ತಿನಲ್ಲಿಯೇ ಈ ವಿಮಾನ ಹಾರಾಟ ಅತ್ಯಂತ ನಯನ ಮನೋಹರವಾಗಿರುತ್ತದೆ. ಆದರೆ ಹಾರಾಟ ಆರಂಭಿಸಿ ಅರ್ಧ ಗಂಟೆಯೊಳಗೆ ಹೊರಗಿನ ದೃಶ್ಯಗಳೆಲ್ಲವೂ ಮಂಕಾದವು. ಇದ್ದಕ್ಕಿದ್ದಂತೆ ನಾವು ಕುಳಿತ ವಿಮಾನ ಕುಲುಕಾಡತೊಡಗಿತು. ಆ ಕುಲುಕಾಟ ರಭಸವಾಗುತ್ತಿದ್ದಂತೆ ನಮಗೆಲ್ಲರಿಗೂ ಸೀಟು ಬೆಲ್ಟುಗಳನ್ನು ಬಿಗಿದುಕೊಳ್ಳುವಂತೆ ಸೂಚನೆ ನೀಡಲಾಯಿತು. ಆಗಲೂ ಸಹ ನಾನು ಎದೆಗುಂದಲಿಲ್ಲ. ಏಕೆಂದರೆ ಈ ರೀತಿಯ ಹವಾಮಾನ ಪ್ರಕ್ಷುಬ್ಧತೆ ಪರ್ವತಗಳು ಪೂರ್ವ ದಿಕ್ಕಿನೆಡೆಗೆ ಬಾಗಿ ಚಾಚಿಕೊಂಡಿರುವ ಕಡೆಯಲ್ಲೆಲ್ಲಾ ಸರ್ವೇ ಸಾಮಾನ್ಯವೆಂದು ನನಗೆ ಗೊತ್ತಿತ್ತು.

    ಇದ್ದಕ್ಕಿದ್ದಂತೆ ನಮ್ಮ ಕಿಟಕಿಗಿ ಅಡ್ದಲಾಗಿ ಮಳೆ ಪಟಪಟನೆ ಬೀಳತೊಡಗಿತು. ಈಗ ನಮ್ಮ ವಿಮಾನ ಲಂಬವಾಗಿ ಚಲಿಸತೊಡಗಿತು. ಮೊಟ್ಟಮೊದಲಬಾರಿಗೆ ವಿಮಾನದಲ್ಲಿದ್ದ ಪ್ರಯಾಣಿಕರು ಒಮ್ಮೆ ಕಿರುಚಿದರು.

    ನಾನು ಕಿಟಕಿಯಿಂದಾಚೆ ಮೋಡಗಳಲ್ಲಿ ಮಿಂಚಿ ಮರೆಯಾದ ಕೋಲ್ಮಿಂಚೊಂದನ್ನು ನೋಡಿದೆ. ಅದು ತೀರಾ ಅಪಾಯಕಾರಿ ಎನಿಸುವಷ್ಟರಮಟ್ಟಿಗೆ ನಮ್ಮ ಹತ್ತಿರದಲ್ಲಿ ಹಾದುಹೋಯಿತು. ನಾವು ಪುಕಾಲ್ಪವನ್ನು ಬಹಳ ಸಮಯದ ಹಿಂದೆಯೇ ಸೇರಿರಬೇಕಾಗಿತ್ತು. ಆದರೆ ಇನ್ನೂ ಹೋಗುತ್ತಲೇ ಇದ್ದೆವು. ಮತ್ತೆ ವಿಮಾನದ ಕುಲುಕಾಟ ತೀವ್ರವಾಯಿತು. ಈಗ ಮತ್ತಷ್ಟು ಕಿರಿಚಾಟಗಳು ಕೇಳಿಸಿದವು. ಈ ಸಾರಿ ಅದು ಮೊದಲಿಗಿಂತ ಜೋರಾಗಿತ್ತು. ಹಿಂದೆಯೇ ರ್ಯಾಕಿನಲ್ಲಿಟ್ಟಿದ್ದ ಕೆಲವು ಹ್ಯಾಂಡ್ ಲಗೇಜುಗಳು ಕೆಳಗೆ ಬಿದ್ದವು.

    “ಇದೇ ಕೊನೆ” ನನ್ನ ಅಮ್ಮ ಹೇಳಿದಳು. ಅಮ್ಮ, ಒಮ್ಮೆ ಅಮೆರಿಕಾದಲ್ಲೆಲ್ಲೋ ವಿಮಾನದಲ್ಲಿ ಪ್ರಯಾಣಿಸುವಾಗ ಕೆಟ್ಟ ಬಿರುಗಾಳಿಗೆ ಸಿಕ್ಕು ಭಾರಿ ಹೊಯ್ದಾಟಕ್ಕೆ ಸಿಲುಕಿದ್ದಳು. ಅಂದಿನಿಂದ ಅವಳಿಗೆ ವಿಮಾನ ಹಾರಾಟವೆಂದರೆ ಭಯವಿತ್ತು. ಆದರೆ ಈ ಸಾರಿ ಅವಳಿಗೆ ಗಾಬರಿಯಾಗಿದ್ದು ವಿಮಾನದ ಹೊಯ್ದಾಟದಿಂದಲ್ಲ. ಆದರೆ ಅದಕ್ಕೆ ತಗುಲಿಕೊಂಡಿರುವ ಬೆಂಕಿಯಿಂದ.

    ನಾನು ವಿಮಾನದ ಬಲಭಾಗದ ರೆಕ್ಕೆಯಿಂದ ಹೊರಹೊಮ್ಮುವ ಶುಭ್ರ ಹಳದಿ ಬೆಂಕಿಯ ಜ್ವಾಲೆಗಳನ್ನು ನೋಡಿದೆ. ನನ್ನ ಅಮ್ಮನನ್ನೂ ನೋಡಿದೆ. ಅವಳು ಭಯದಿಂದ ನಡಗುತ್ತಿದ್ದಳು. ಅದೇ ವೇಳೆಗೆ ವಿಮಾನ ಒಮ್ಮೆ ಭಯಂಕರವಾಗಿ ಕುಲುಕಿತು. ಅಷ್ಟೆ, ಮರುಕ್ಷಣ ನಾನು ವಿಮಾನದೊಳಗಿಲ್ಲ ಎಂಬ ಅರಿವಾಯಿತು. ನಾನು ವಿಮಾನದ ಹೊರಗೆ ನನ್ನ ಸೀಟಿನಲ್ಲಿ ಕುಳಿತುಕೊಂಡು ತೆರೆದ ಗಾಳಿಯಲ್ಲಿ ಹಾರಾಡುತ್ತಿದ್ದೆ.




    ನಂಗಿನ್ನೂ ಚನ್ನಾಗಿ ನೆನಪಿದೆ-ನಾನು ಬಿಗಿಯಾಗಿ ಸೀಟು ಬೆಲ್ಟನ್ನು ಬಿಗಿದುಕೊಂಡಿದ್ದರಿಂದ ನನ್ನ ಹೊಟ್ಟೆ ಒತ್ತಿದಂತಾಗಿ ನನಗೆ ಉಸಿರಾಡಲಾಗುತ್ತಿರಲಿಲ್ಲ. ಜೊತೆಗೆ ನಾನು ಗಾಳಿಯಲ್ಲಿ ಗಿರಗಿರನೆ ತಿರುಗುತ್ತಾ ಕೆಳಗೆ ಬೀಳುತ್ತಿದ್ದನೆಂದು ಅರಿವಾಯಿತು. ಹಾಗೆ ಎತ್ತರದಿಂದ ಗಿರಗಿರನೆ ಕೆಳಗೆ ಬೀಳುವಾಗ ನನ್ನ ಕೆಳಗಿರುವ ಕಾಡಿನ ಮರಗಳು ಕಾಲಿಫ್ಲವರಿನಂತೆ, ಬಹಳಷ್ಟು ಕಾಲಿಫ್ಲವರಿನಂತೆ ವೃತ್ತಾಕಾರವಾಗಿ ಸುತ್ತುತ್ತಿರುವಂತೆ ಭಾಸವಾದವು. ಆಮೇಲೇನಾಯಿತೋ ನನಗೆ ಗೊತ್ತಿಲ್ಲ. ಅಷ್ಟರಲ್ಲಿ ನನಗೆ ಎಚ್ಚರ ತಪ್ಪಿತು.

    ಮಾರನೆಯ ದಿನ ಮಳೆಯಿಂದಾಗಿ ನನಗೆ ಎಚ್ಚರವಾಯ್ತು. ಮಳೆ ಬಿರುಸಾಗಿ ಸುರಿಯುತ್ತಿತ್ತು. ಗುಡುಗುಗಳ ಆರ್ಭಟ ಕೇಳಿಸುತ್ತಿತ್ತು. ಬೆಳಕು ಗೋಚರಿಸುತ್ತಿತ್ತು.

    ನಾನು ನನ್ನ ಸೀಟಿನ ಕೆಳಗೆ ಮಲಗಿದ್ದೆ. ಆದರೆ ನನ್ನ ಪಕ್ಕದ ಸೀಟು ಖಾಲಿಯಾಗಿತ್ತು. ನನ್ನ ಅಮ್ಮನ ಬಗ್ಗೆ ಯಾವೊಂದು ಕುರುಹು ಇರಲಿಲ್ಲ. ಮಾತ್ರವಲ್ಲ, ನನ್ನ ಅಮ್ಮನ ಎಡಭಾಗಕ್ಕೆ ಕುಳಿತ ವ್ಯಕ್ತಿಯ ಬಗ್ಗೆಯೂ ಸಹ ಯಾವೊಂದು ಕುರುಹು ಕಾಣಿಸಲಿಲ್ಲ. ವಿಮಾನ ಜೋರಾಗಿ ಕುಲುಕಿದಾಗ ಅವನಿನ್ನೂ ನಿದ್ರೆ ಮಾಡುತ್ತಲೇ ಇದ್ದ. ಅಲ್ಲಿ ವಿಮಾನದ ಕುರುಹುಗಳಾಗಲಿ, ಅವಶೇಷಗಳಾಗಲಿ ನನಗೆ ಎಲ್ಲೂ ಕಾಣಿಸಲಿಲ್ಲ. ನಾನು ಒಬ್ಬಂಟಿಯಾಗಿ ಬಿದ್ದಿದ್ದೆ. ನನ್ನೊಟ್ಟಿಗೆ ವಟಗುಟ್ಟುವ ಕಪ್ಪೆಗಳು ಮತ್ತು ಜಿರ್ರಗೂಡುವ ಹುಳುಗಳು ಮಾತ್ರ ಇದ್ದವು.

    ನಾನು ಸುತ್ತಮುತ್ತಲು ಕಣ್ಣು ಬಿಟ್ಟು ನೋಡಿದೆ. ತಕ್ಷಣ ನಾನು ಭೂಮಿಗೆ ತುಸು ಇಳಿಜಾರಾಗಿರುವ ಕಾಡೊಂದರಲ್ಲಿ ಬಿದ್ದಿರುವೆನೆಂದು ಅರಿವಾಯಿತು.
    ನಿಮಗೆ ಆಶ್ಚರ್ಯವಾಗಬಹುದು. ನಾನು ಅಷ್ಟು ಎತ್ತರದಿಂದ ಕೆಳಕ್ಕೆ ಬಿದ್ದರೂ ನನಗೆ ಅಷ್ಟಾಗಿ ಬಿದ್ದಿದ್ದೇನೆ ಅನಿಸಿರಲಿಲ್ಲ. ನನ್ನ ಸೀಟು ಬೆಲ್ಟು ಕಿತ್ತು ಹೋಗಿತ್ತು. ಜೊತೆಗೆ ನನ್ನ ಶೂ, ಕನ್ನಡಕ, ಹಾಗೂ ನನ್ನ ಅಮ್ಮ ಉಡುಗೊರೆಯಾಗಿ ಕೊಟ್ಟ ಉಂಗುರ ಎಲ್ಲವೂ ಕಳೆದುಹೋಗಿದ್ದವು. ನಾನು ಹಾಕಿಕೊಂಡಿದ್ದ ’ಹಿಪ್ಪೀ’ ಡ್ರೆಸ್ಸು ಒಂಚೂರು ಹರಿಯದೆ ಹಾಗೆ ಇದ್ದದ್ದು ನನಗೆ ಆಶ್ಚರ್ಯವನ್ನುಂಟುಮಾಡಿತ್ತು. ನನ್ನ ಕುತ್ತಿಗೆಯ ಕೆಳಭಾಗದ ಮೂಳೆಯೊಂದು ವಿಚಿತ್ರ ರೀತಿಯಲ್ಲಿ ಹೊರಚಾಚಿಕೊಂಡಿತ್ತು. ಮೊದಮೊದಲು ನಾನದನ್ನು ನನ್ನ ಶರ್ಟಿನ ಕಾಲರ್ ಇರಬಹುದೆಂದುಕೊಂಡೆ. ಆಮೇಲೆ ಅದು ಕುತ್ತಿಗೆಯ ಕೆಳಭಾಗದ ಮೂಳೆಯೆಂದು ಖಾತ್ರಿಯಾಯಿತು. ನನ್ನ ಒಂದು ಕಣ್ಣು ಊದಿಕೊಂಡಿತ್ತು. ತಲೆಯ ಮೇಲೆ ಹೊಡೆತ ಬಿದ್ದಿತ್ತು ಹಾಗೂ ಪಾದದ ಮೇಲೆ ಸಣ್ಣ ಗಾಯವಾಗಿತ್ತು. ಆದರೂ ನಂಗೆ ಒಂಚೂರು ನೋವಿರಲಿಲ್ಲ. ಆದರೆ ಏಳಲು ಹಾಗು ಎದ್ದು ಸುತ್ತಮುತ್ತ ನೋಡಲು ನನ್ನಲ್ಲಿ ಒಂಚೂರು ಚೈತನ್ಯ ಇರಲಿಲ್ಲವಾದ್ದರಿಂದ ನಾನು ಇಡಿ ರಾತ್ರಿಯನ್ನು ಅರೆ ನಿದ್ರೆ, ಅರೆ ಎಚ್ಚರದಲ್ಲಿ ಕಳೆದೆ.

    ಮರುದಿವಸ ಬೆಳಿಗ್ಗೆ ಎದ್ದಾಗ ಒಂದು ಕ್ಷಣ ನನ್ನ ತಲೆ ತಿರುಗಿದಂತೆ ಭಾಸವಾಯಿತು. ನನ್ನ ಬಳಿ ಪಾರ್ಸಲ್ಲೊಂದು ಬಿದ್ದಿತ್ತು. ತೆರೆದು ನೋಡಿದೆ ಅದರೊಳಗೆ ಒಂದು ಕೇಕು ಹಾಗೂ ಕೆಲವು ಆಟಿಕೆಗಳಿದ್ದವು. ಆ ಕೇಕು, ಅವತ್ತು ಕ್ರಿಸ್ಮಸ್ ಹಬ್ಬವಿದೆಯೆಂದು ಜ್ಞಾಪಿಸಿತು. ನನಗೆ ನನ್ನ ಅಪ್ಪ ಮತ್ತು ಅವನ ಕ್ರಿಸ್ಮಸ್ ಗಿಡ ನೆನಪಾಯಿತು. ತಕ್ಷಣ ನಾನು ನಿರ್ಧರಿಸಿದೆ; ಬಹುಶಃ ಅಪ್ಪ, ಅದಾಗಲೇ ಅವನ ಹೆಂಡತಿಯನ್ನು ಕಳೆದುಕೊಂಡಾಗಿದೆ. ಇನ್ನು ಉಳಿದಿರುವದು ಮಗಳು. ಆತ ಅವಳನ್ನೂ ಸಹ ಕಳೆದುಕೊಳ್ಳುವಂತಾಗಬಾರದು-ಅದಕ್ಕೋಸ್ಕರವಾದರೂ ನಾನು ಬದುಕಲೇ ಬೇಕು.

    ನನ್ನ ಅಪ್ಪ-ಅಮ್ಮ ನನಗೆ ಈ ಮೊದಲೇ ಕಾಡಿನ ಗಂಡಾಂತರಗಳ ಬಗ್ಗೆ ಅಲ್ಪ ಸ್ವಲ್ಪ ತಿಳಿವಳಿಕೆ ಕೊಟ್ಟಿದ್ದರು; ಉದಾಹರಣೆಗೆ ದೊಡ್ಡ ದೊಡ್ದ ಪ್ರಾಣಿಗಳಾದ ಓಸ್ಲಾಟ್, ಜಾಗೂರ್, ಅಥವಾ ಟೇಪ್ರೀಸ್ ಅಂಥ ಅಪಾಯಕಾರಿಯಲ್ಲ ಆದರೆ ಸಣ್ಣ ಸಣ್ಣ ಹುಳುಹುಪ್ಪಡಿಗಳಾದ ಜೇಡರಹುಳು, ಇರುವೆಗಳು, ನೊಣಗಳು, ಸೊಳ್ಳೆಗಳು ತುಂಬಾ ಅಪಾಯಕಾರಿಯೆಂದು. ಜೊತೆಗೆ ಒಂದು ವೇಳೆ ಕಾಡಿನಲ್ಲಿ ಕಳೆದುಹೋದರೆ ಮೊದಲು ನದಿಯೊಂದನ್ನು ಕಂಡುಹಿಡಿಯಲು ಪ್ರಯತ್ನಪಡಬೇಕು. ಏಕೆಂದರೆ ನದಿಯ ದಂಡೆಗುಂಟ ಮರ ಕಡಿಯುವ ಕೊನಿಬೋ, ಶಿಪಿಬೋ, ಕ್ಯಾಕ್ಟೈಬೋ, ಜನಾಂಗಕ್ಕೆ ಸೇರಿದ ರೆಡ್ ಇಂಡಿಯನ್ನರು ಅಲ್ಲಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಇಲ್ಲವೇ ಬೇಸಾಯ ಮಾಡಿಕೊಂಡಿರುವ ಬಿಳಿಯರು ಕಾಣಸಿಗುತ್ತಾರೆ. ನದಿಗಳೇ ಅವರ ರಸ್ತೆಗಳು. ಕೊನೆಗೆ ಈ ಎಲ್ಲ ರಸ್ತೆಗಳು ರಿಯೊ ಉಕ್ಯಾಲಿ ಎಂಬ ನದಿಗುಂಟ ಇರುವ ದೊಡ್ಡ ರಸ್ತೆಗೆ ಬಂದು ಸೇರುತ್ತವೆ. ಮುಂದೆ ರಿಯೊ ಉಕ್ಯಾಲಿ ನದಿಯು ಹರಿದುಕೊಂಡು ಬಂದು ದೊಡ್ಡದಾದ ಅಮೇಜಾನ್ ನದಿಯನ್ನು ಸೇರುತ್ತದೆ ಎಂದು ಹೇಳಿದ್ದರು.




    ಹೀಗಾಗಿ ಮೊದಲು ನಾನು ನದಿಯೊಂದನ್ನು ಕಂಡುಹಿಡಿಯಲೇಬೇಕಿತ್ತು; ಅದರಲ್ಲೂ ರಿಯೊ ಉಕ್ಯಾಲಿ ನದಿಯನ್ನು. ಏಕೆಂದರೆ ಪುಕಲ್ಪಾ ಇದ್ದದ್ದು ಉಕ್ಯಾಲಿ ನದಿ ದಂಡೆ ಮೇಲೆ. ಅಲ್ಲಿ ನನ್ನ ಅಪ್ಪ ಕಾಯುತ್ತಿದ್ದ-ನಮಗಾಗಿ.

    ನಾನು ಆ ಕ್ರಿಸ್ಮಸ್ ಕೇಕು ತಿನ್ನಲು ಹೋಗಲಿಲ್ಲ. ಬರೀ ಒಂದೇ ಒಂದು ತುಂಡು ರುಚಿ ನೋಡಿ ಬಿಟ್ಟೆ. ಅದು ನೆನೆದು ಹಸಿಯಾಗಿದ್ದರಿಂದ ಅಷ್ಟೇನೂ ರುಚಿಯಾಗಿರಲಿಲ್ಲ. ಬದಲಾಗಿ, ಆ ಪಾರ್ಸಲ್ಲಿನಿಂದ ಬೇರೆ ಕೆಲವು ಸಿಹಿತಿಂಡಿಗಳ ಪೊಟ್ಟಣವನ್ನು ಹೊರತೆಗೆದು ತಿಂದೆ. ಅದನ್ನು ಯಾರೋ ಕ್ರಿಸ್ಮಸ್ ಉಡುಗೂರೆಯಾಗಿ ತೆಗೆದುಕೊಂಡು ಹೋಗುತ್ತಿದ್ದರೆಂದು ಕಾಣುತ್ತದೆ.

    ನನಗೆ ಅಲ್ಲೊಂದು ಕೋಲು ಸಿಕ್ಕಿತು. ಆ ಕೋಲಿನ ಸಹಾಯದಿಂದ ದಾರಿಗಾಗಿ ತಡಕಾಡುತ್ತಾ ಮತ್ತು ಆ ದಾರಿಯಲ್ಲಿ ಯಾವುದೇ ಜೇಡ, ಇರುವೆ, ಹಾವುಗಳಿಲ್ಲವೆಂದು ಖಚಿತಪಡಿಸಿಕೊಳ್ಳುತ್ತಾ ನಡೆಯುತ್ತಾ ಹೊರಟೆ. ಒಂದೆರೆಡು ಹೆಜ್ಜೆ ಕಿತ್ತಿಟ್ಟಿರಲಿಕ್ಕಿಲ್ಲ, ಮತ್ತೆ ತಲೆ ತಿರುಗಿತು. ಮೇಲಿಂದ ಮೇಲೆ ನಾನು ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು. ಏಕೆಂದರೆ ಪ್ರತಿ ನಾಲ್ಕು ಹೆಜ್ಜೆಗೆ ಇಡಿ ಭೂಮಿಯೇ ಗಿರಗಿರನೆ ತಿರುಗಿದಂತೆ ಭಾಸವಾಗುತ್ತಿದ್ದುದರಿಂದ ನನಗೆ ಏನನ್ನೂ ಗಮನವಿಟ್ಟು ನೋಡಲು ಸಾಧ್ಯವಾಗುತ್ತಿರಲಿಲ್ಲ.

    ಕ್ರಮೇಣ ನನಗೆ ಅತಿ ಹತ್ತಿರದಲ್ಲೆಲ್ಲೋ ನೀರಿನ ಝುಳುಝುಳು ಶಬ್ಧ ಕೇಳಿಸಿತು. ನನ್ನ ಕಿವಿಗಳು ತಟ್ಟನೆ ನಿಮಿರಿದವು- ಈ ಶಬ್ಧ ನದಿಯೊಂದರ ಹರಿವ ಶಬ್ಧದಂತೆ ಇದೆಯೆಲ್ಲಾ ಎಂದು.
    ಹೋಗಿ ನೋಡಿದೆ. ಆದರದು ನದಿಯಾಗಿರಲಿಲ್ಲ. ಅಲ್ಲಿ ನದಿಯೊಂದು ಸಣ್ಣ ಹಳ್ಳವಾಗಿ ಮಾರ್ಪಟ್ಟಿತ್ತು ಅಷ್ಟೆ. ಅದರ ನೀರು ತಿಳಿಯಾಗಿದ್ದರಿಂದ ಅಲ್ಲಿ ಒಂದಷ್ಟು ನೀರನ್ನು ಕುಡಿದು ವಿಶ್ರಮಿಸಿದೆ. ಅಲ್ಲಿಂದ ಆ ಹಳ್ಳ ದೊಡ್ದದಾದ ಹಳ್ಳವೊಂದಕ್ಕೆ ದಾರಿ ತೋರಿಸಲಿತ್ತು.

    ಪೆರುವಿನ ಕಾಡಿನಲ್ಲಿ ಹರಿಯುವ ನದಿಗಳು ನೇರವಾಗಿ ಒಂದೇ ಸರಳ ರೇಖೆಯಲ್ಲಿ ಹರಿಯುವದಿಲ್ಲ. ಅವು ವಕ್ರ ವಕ್ರವಾಗಿ ಅನೇಕ ತಿರುವುಗಳಲ್ಲಿ ಹರಿಯುತ್ತವಾದ್ದರಿಂದ ನದಿ ದಂಡೆಗುಂಟ ಸುತ್ತು ಹಾಕಿಕೊಂಡು ಮೈಲಿಗಟ್ಟಲೆ ನಡೆದರೂ ಕೊನೆಯಲ್ಲಿ ನೂರು ಗಜದಷ್ಟು ದಾರಿ ಕೂಡ ಸವೆದಿರುವದಿಲ್ಲ.
    ಅಲ್ಲಿ ಸೊಳ್ಳೆಗಳಿದ್ದವು. ಭಯಂಕರ ಸೊಳ್ಳೆಗಳು. ಭಾರಿ ಪ್ರಮಾಣದ ಸಂಖ್ಯೆಯಲ್ಲಿದ್ದು ಅಕ್ಷರಶಃ ನರಕವನ್ನು ತೆರೆದಿಟ್ಟಿದ್ದವು. ಇವಲ್ಲದೆ ನದಿಯ ದಂಡೆಯ ಮೇಲೆ ಮೊಸಳೆಗಳು ಮಲಗಿದ್ದವು; ಆಸೆಬುರುಕ ಮೊಸಳೆಗಳು. ಜೊತೆಗೆ ಅಲ್ಲಿ ಚೂಪು ಹಲ್ಲಿನ ಮೀನುಗಳು ಬೇರೆ ಇದ್ದವು. ಅವು ಸದಾ ರಕ್ತ ಒಸರುವ ಗಾಯಗಳಿಗಾಗಿ ಹಾತೊರೆಯುತ್ತಿದ್ದವು. ನನ್ನ ಪಾದದ ಮೇಲೆ ಬೇರೆ ½ ಇಂಚು ಆಳ ಹಾಗೂ 2 ½ ಇಂಚು ಅಗಲದಷ್ಟು ಗಾಯವಾಗಿತ್ತಲ್ಲ? ಹೀಗಾಗಿ ನಾನು ತಕ್ಷಣ ಹುಶಾರಾದೆ.

    ಆದಾಗ್ಯೂ ನಾನು ನದಿಯ ಬಳಿಯೇ ಇರಬೇಕಿತ್ತು. ಅದನ್ನು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ನದಿ ದಂಡೆಗಳು ದಟ್ಟವಾಗಿ ಬೆಳೆದಿದ್ದರಿಂದ ಅಲ್ಲಿ ಪ್ರತಿ ಹೆಜ್ಜೆಯೂ ಕಷ್ಟಕರವಾಗಿತ್ತು. ಕೆಲವು ಸಾರಿ ನಾನು ನದಿಯ ಮೂಲಕ ಹಾದುಹೋಗಬೇಕಿತ್ತು. ಏಕೆಂದರೆ ಒಮ್ಮೊಮ್ಮೆ ಒಣಗಿದ ಎಲೆಗಳು ಇಲ್ಲವೇ ಮರದ ಟೊಂಗೆಗಳು ರಾಶಿರಾಶಿಯಾಗಿ ಮುರಿದುಕೊಂಡು ಬಿದ್ದು ನನ್ನ ದಾರಿಯನ್ನು ಮುಚ್ಚಿಹಾಕುತ್ತಿದ್ದವು.

    ಹೀಗೆ ನಡೆದುಕೊಂಡು ಹೋಗುತ್ತಿರುವಾಗ ತಕ್ಷಣ ನನಗೆ ಗುಂಯ್ಯಗುಡುವ ನೊಣಗಳ ಸದ್ದು ಕೇಳಿಸಿತು. ಅದರ ಹಿಂದೆಯೇ ವಿಮಾನದ ಮೂರು ಸೀಟುಗಳು ಕಾಣಿಸಿದವು. ಪಕ್ಕದಲ್ಲಿಯೇ ಮೂರು ಹುಡುಗಿಯರ ಹೆಣಗಳು ಬಿದ್ದಿದ್ದವು. ಅವು ಕೊಳೆತು ನಾರುತ್ತಿದ್ದು ಅವುಗಳ ಸುತ್ತಲೂ ನೊಣಗಳು ಮುತ್ತಿಕೊಂಡಿದ್ದವು. ನಾನು ಅವುಗಳ ಪಕ್ಕದಲ್ಲಿ ಹಾದುಹೋಗುತ್ತಿದ್ದಂತೆ ಅವುಗಳಲ್ಲಿ ನನ್ನ ಅಮ್ಮನ ಹೆಣ ಇರಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ.


    ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ
    ಕನ್ನಡಕ್ಕೆ: ಉದಯ್ ಇಟಗಿ

    ಶಿಕ್ಷಣದ ಸಂತೆಯಲ್ಲೊಬ್ಬ ಸಂತ

  • ಸೋಮವಾರ, ಸೆಪ್ಟೆಂಬರ್ 05, 2011
  • ಬಿಸಿಲ ಹನಿ

  • ಕಳೆದ ವರ್ಷ ಶ್ರಾವಣದ ಒಂದು ದಿನ ಗದುಗಿನ ಕಾಟನ್ ಮಾರ್ಕೆಟ್ ರೋಡಿನಲ್ಲಿರುವ ಅಣ್ಣಿಗೇರಿ ಮಾಸ್ತರರ ಆಶ್ರಮ ಹೊಕ್ಕಾಗ ಬೆಳಿಗ್ಗೆ 11.45 ರ ಸಮಯ. ಅದಾಗಲೇ ಹುಡುಗರೆಲ್ಲಾ ಸಾಲಿಗೆ ಹೋಗಿದ್ದರಿಂದ ಎಲ್ಲೆಡೆ ನೀರವ ಮೌನ ಆವರಿಸಿತ್ತು. ಆದರೆ ಆ ಆಶ್ರಮದ ಮರದಲ್ಲಿರುವ ಪಕ್ಷಿಗಳು ಆಗೊಮ್ಮೆ ಈಗೊಮ್ಮೆ ಕೂಗು ಹಾಕುತ್ತಾ ಅಲ್ಲಿ ಆವರಿಸಿದ್ದ ಮೌನವನ್ನು ಮುರಿಯಲು ಪ್ರಯತ್ನಿಸುತ್ತಿದ್ದವು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಕಣ್ಣಾಮುಚ್ಚಾಲೆಯಾಡುವ ಸೂರ್ಯ ಅಂದು ಅದೇನೋ ಬೆಳಿಗ್ಗಿನಿಂದಲೇ ಪ್ರಖರವಾಗಿ ಬೆಳಗುತ್ತಿದ್ದ. ನಾವು ಅವರ ಹತ್ತಿರ ಅಪಾಯಿಂಟ್ಮೆಂಟ್ ತೆಗೆದುಕೊಂಡಿರಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ನೇರವಾಗಿ ಭೇಟಿಯಾಗಬಹುದಿತ್ತು. ಹೀಗಾಗಿ ಕೇಳಬೇಕಾದ್ದನ್ನು ಒಂದಷ್ಟು ಮನಸ್ಸಲ್ಲೇ ಯೋಚಿಸಿಕೊಂಡು ಹೊರಟೆ.




    ನಾವು ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆ ಆಶ್ರಮದ ಕೋಣೆಯೊಂದರ ಮುಂದೆ ಖುರ್ಚಿ ಹಾಕಿಕೊಂಡು ತಾವೇ ಬೆಳೆಸಿದ ಹೂದೋಟದತ್ತ ದೃಷ್ಟಿ ನೆಟ್ಟು ಕುಳಿತಿದ್ದ ಅಣ್ಣಿಗೇರಿ ಮಾಸ್ತರರು ನಮ್ಮನ್ನು ನೋಡಿದವರೆ ಎದ್ದು ನಿಂತು ಹಣೆಗೆ ಕೈ ಹಚ್ಚಿ ತಮ್ಮ ಕನ್ನಡಕದೊಳಗಿಂದ ನಮ್ಮನ್ನು ನೋಡತೊಡಗಿದರು. ನಾವು ಅವರಿಗೆ ಗೊತ್ತು ಸಿಗದೇ ಹೋದರೂ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಕಡೆ “ಬರ್ರೀ,... ಬರ್ರೀ..... ಒಳಗ ಬರ್ರೀ.” ಎಂದು ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವಂತೆ ನಮ್ಮನ್ನು ಸಹ ಆತ್ಮೀಯವಾಗಿ ಸ್ವಾಗತಿಸಿದರು. ಬೆನ್ನಹಿಂದೆಯೇ “ಲೇ ತಮ್ಮಾ, ಅಲ್ಲೊಂದೆರೆಡು ಖುರ್ಚಿ ತಗೊಂಬಾರೋ” ಎಂದು ಅಲ್ಲೇ ಇದ್ದ ಶಿಷ್ಯನಿಗೆ ಆಜ್ಞೆಯಿತ್ತರು. ಆ ಶಿಷ್ಯ ಓಡಿಹೋದವನೆ ಮಾಸ್ತರರ ಪಕ್ಕದಲ್ಲಿ ಒಂದೆರೆಡು ಖುರ್ಚಿಯನ್ನು ತಂದುಹಾಕಿದ. ಅಂದು ಆ ಹುಡುಗ ಮೈಯಲ್ಲಿ ಹುಶಾರಿಲ್ಲದ ಕಾರಣ ಸಾಲಿಗೆ ಹೋಗದೆ ಆಶ್ರಮದಲ್ಲೇ ಉಳಿದಿದ್ದ. ಆಗಷ್ಟೆ ಚೇತರಿಸಿಕೊಂಡು ತಕ್ಕಮಟ್ಟಿಗೆ ಓಡಾಡುತ್ತಿದ್ದ.




    ಆಗ ತಾನೆ ವಿದ್ಯಾರ್ಥಿಗಳನ್ನು ಕಳಿಸಿ ಹೊರಗೆ ಖುರ್ಚಿಯ ಮೆಲೆ ಬಿಳಿ ನೆಹರೂ ಶರ್ಟ್, ಬಿಳಿ ಪಂಚೆಯನ್ನು ಹಾಕಿಕೊಂಡು ಕುಳಿತಿದ್ದ ಮಾಸ್ತರರು ಥೇಟ್ ಗಾಂಧಿವಾದಿಯಂತೆ ಕಂಡರು. ಅವರಿಗೆ 82 ವರ್ಷ ವಯಸ್ಸಾಗಿದೆ ಎಂದು ಹೇಳಿದರೆ ನಮಗೆ ನಂಬಲಸಾಧ್ಯವಾಗಿತ್ತು. ಏಕೆಂದರೆ ನಾನು ಎರಡು ದಶಕಗಳ ಹಿಂದೆ ಅವರ ಕೈಲಿ ಓದುವಾಗ ಅವರ ಕಂಗಳಲ್ಲಿ ಯಾವ ಹೊಳಪು ಇತ್ತೋ ಅದೇ ಹೊಳಪು ಇನ್ನೂ ಹಾಗೆ ಇತ್ತು. ಮುಖದಲ್ಲಿ ಎಂದಿನಂತೆ ಅದೇ ಲವಲವಿಕೆ, ಉತ್ಸಾಹ, ಚೈತನ್ಯ ಎಲ್ಲವೂ ಹಾಗೆ ಇದ್ದವು. ನಾನು ಅವರನ್ನು ನೋಡಿದವನೆ ಅವರ ಪಾದಗಳಿಗೆ ನಮಸ್ಕರಿಸಿ “ನಾನು ಉದಯ್ ಇಟಗಿ ಅಂತಾ-ನಿಮ್ಮ ಹಳೆಯ ವಿದ್ಯಾರ್ಥಿ. 88 ರಿಂದ 91 ರವರೆಗೆ ನಿಮ್ಮ ಕೈಯಲ್ಲಿ ಕಲಿತವನು. ಈಗ ನಾನು ಇಂಗ್ಲೀಷ್ ಉಪನ್ಯಾಸಕನಾಗಿ ಲಿಬಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದು ನನ್ನನ್ನು ನಾನು ಪರಿಚಯಿಸಿಕೊಂಡೆ. ಸಾವಿರ ಸಾವಿರ ಶಿಷ್ಯ ಬಳಗವನ್ನು ಹೊಂದಿರುವ ಮಾಸ್ತರರು ನನ್ನನ್ನು ಹೇಗೆ ತಾನೆ ಗುರುತು ಹಿಡಿದಾರು? ಆದರೂ “ಗುಡ್, ವೇರಿಗುಡ್” ಎಂದು ಹೆಮ್ಮೆಯಿಂದ ಬೀಗುತ್ತಾ ನನ್ನ ಬೆನ್ನು ಚಪ್ಪರಿಸಿದರು. ಮುಂದುವರೆದು “ಬಾಳ ಜನ ಹುಡುಗ್ರು ನೋಡ್ರಿ. ಗೊತ್ತು ಹತ್ತಂಗಿಲ್ಲ. ನೀವs ಗೊತ್ತುಪಡಿಸ್ಕೋಬೇಕ್ರಿ. ನಿಮ್ಮನ್ನ ಗೊತ್ತುಹಿಡಿದಿದ್ದಕ ಮನಸ್ಸಿಗೆ ಕೆಟ್ಟ ಮಾಡ್ಕೋಬ್ಯಾಡ್ರಿ.” ಎಂದು ಕ್ಷಮೆ ಯಾಚಿಸುವ ದನಿಯಲ್ಲಿ ಹೇಳಿದರು.




    ನಾನು “ಇರ್ಲಿ ಸರ್. ನಿಮಗಾದ್ರು ಹೆಂಗ ಗೊತ್ತು ಹಿಡಿಲಿಕ್ಕಾದಾತು? ಎಲ್ಲಾ ಶಿಕ್ಷಕರು ತಮ್ಮ ಎಲ್ಲಾ ಶಿಷ್ಯರನ್ನು ನೆನಪಿನಲ್ಲಿಟ್ಕೋಳಿದಿಕ್ಕೆ ಆಗೋದಿಲ್ರಿ. ಬಾಳ ಕಷ್ಟ ಐತಿ” ಎಂದು ನಕ್ಕೆ. “ನೀವೂ ಮಾಸ್ತರ ಅಲ್ರಿ ಮತ್ತ? ನಮ್ಮದು ನಿಮ್ಮದು ಒಂದ ಅನುಭವ! ಇದರ ಮ್ಯಾಲೆ ಹೆಚ್ಚಿಂದು ಹೇಳೋದರ ಏನ ಐತಿ. ಎಲ್ಲಾನೂ ಅರ್ಥ ಮಾಡ್ಕೋತಿರಿ” ಎಂದು ಅವರೂ ನಕ್ಕರು. ಆ ನಗೆಯಲ್ಲಿ ಅದಮ್ಯ ಜೀವನೋತ್ಸಾಹ ಪುಟಿಯುತ್ತಿತ್ತು. ನಾನು ಅವರನ್ನು ಎರಡು ದಶಕಗಳ ಹಿಂದೆ ನೋಡಿದ್ದಕ್ಕೂ, ಈಗ ನೋಡುವದಕ್ಕೂ ದೈಹಿಕವಾಗಿ ಒಂಚೂರು ವ್ಯತ್ಯಾಸ ಕಾಣಿಸಲಿಲ್ಲ. ಅದೇ ಸದೃಢ ದೇಹ. ಅದೇ ಹೊಳೆಯುವ ಕಂಗಳು. ಅದೇ ಕಂಠ, ಅದೇ ಮಾತು, ಅದೆ ಹಾಸ್ಯಪ್ರಜ್ಞೆ, ಅದೇ ಚೈತನ್ಯ ಎಲ್ಲವೂ ಇನ್ನೂ ಹಾಗೇ ಇದ್ದವು.



    ಮಾಸ್ತರರು ಪ್ರಚಾರಪ್ರಿಯರಲ್ಲ. ಮೊದಲಿನಿಂದಲೂ ಸದ್ದಿಲ್ಲದೆ ಕೆಲಸ ಮಾಡುತ್ತಾ ಬಂದವರು. ಮೀಡಿಯಾ, ಪತ್ರಿಕೆಯವರು, ಫೋಟೋ ಎಂದರೆ ಅವರಿಗೆ ಅಲರ್ಜಿ ಎನ್ನುವದು ನನಗೆ ಚನ್ನಾಗಿ ಗೊತ್ತಿತ್ತು. ಹೀಗಾಗಿ ನಾನೇ ಸಂಕೋಚದಿಂದ “ಸರ್, ದಿನಪತ್ರಿಕೆಯೊಂದಕ್ಕೆ ನಿಮ್ಮ ಮೇಲೆ ಒಂದು ಲೇಖನ ಬರಿಬೇಕಂತ ಮಾಡೇನ್ರಿ. ಹಿಂಗಾಗಿ ನಿಮ್ಮಕೂಡ ಒಂದಷ್ಟು ಮಾತಾಡಿ ವಿಷಯ ಸಂಗ್ರಹಣೆ ಮಾಡಿ ಬರಿತೇನ್ರಿ. ಅದಕ ಅವಕಾಶ ಮಾಡಿಕೊಡ್ರಿ” ಎಂದು ಅತ್ಯಂತ ವಿನಮ್ರತೆಯಿಂದ ಕೇಳಲೋ ಬೇಡ್ವೋ ಎಂಬಂತೆ ಕೇಳಿದೆ. ನಾನು ಅಷ್ಟು ಕೇಳಿದ್ದೇ ತಡ “ಹುಚ್ಚರು ಅದೀರಿ ನೀವು. ಅಲ್ರಿ, ನಾ ಏನ್ ಮಾಡೇನಿ ಅಂತಾ ನನ್ನ ಮೇಲೆ ಲೇಖನ ಬರಿಯೋಕೆ ಹೊಂಟೀರಿ ನೀವು? ಎಷ್ಟೊಂದು ಜನ ಎಷ್ಟೊಂದು ಮಾಡ್ಯಾರ? ಎಷ್ಟೊಂದು ಸಾಧಿಸ್ಯಾರ? ಅವರ ಬಗ್ಗೆ ಬರೀರಿ. ಅವರಿಗೆ ಇನ್ನೂ ಹುರುಪು ಬರ್ತದ. ನಾ ಏನ್ ಸಾಧಿಸೀನಿ ಅಂತಾ ಬರಿತೀರಿ? I am just an ordinary man. What is there to write about me? ಸುಮ್ಮನೆ ಕೂತ್ಕೊಂಡು ಮಾತಾಡಂಗ ಇದ್ರ ಮಾತಾಡ್ರಿ” ಎಂದು ಗದರಿದರು. ನನಗೆ ಮೊದಲೇ ಇವರನ್ನು ಈ ವಿಷ್ಯದಲ್ಲಿ ಒಪ್ಪಿಸುವದು ಕಷ್ಟ ಎಂದು ಚನ್ನಾಗಿ ಗೊತ್ತಿದ್ದರಿಂದ ಪಟ್ಟು ಬಿಡದೇ ಕೊನೆಪಕ್ಷ ನನ್ನ ಬ್ಲಾಗಿನಲ್ಲಾದರೂ ಬರೆಯಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದೆ. ನಾನು ಬೇಡಿಕೊಳ್ಳುವ ರೀತಿಯನ್ನು ನೋಡಿ ಮಾಸ್ತರರು ಕೊನೆಗೂ ಕರಗಿದರು, ಒಪ್ಪಿಕೊಂಡರು. “ಅಲ್ರೀ, ನನ್ನ ಬಗ್ಗೆ ಬರಿತೇನಿ ಅಂತೀರಿ. ಬರೆಯೋದಾದ್ರ ಬರೆ ಒಳ್ಳೇದ ಬರಿಬ್ಯಾಡ್ರಿ. ಕೆಟ್ಟದ್ದೂ ಬರೀರಿ. ನಾನೂ ಮನುಷ್ಯಾ ಅದೀನಿ. ನಂದರಾಗು ಒಳ್ಳೇದು ಕೆಟ್ಟದ್ದೂ ಎರಡೂ ಅದವು. ಹೌದಲ್ರಿ?” ಎಂದು ಕೇಳಿದರು.

    ನಾನು “ನೀವು ಹೇಳೋದು ಖರೆ ಐತ್ರಿ ಸರ್. ಆದ್ರ ನಾನು ಇಷ್ಟು ದಿವಸ ನಿಮ್ಮನ್ನು ಗುರಗಳನ್ನಾಗಿಯೇ ನೋಡಿದ್ರಿಂದ ನಂಗ ಇದವರೆಗೂ ನಿಮ್ಮಲ್ಲಿ ಯಾವ್ದೂ ಕೆಟ್ಟದ್ದು ಕಂಡಿಲ್ರಿ. ಮೇಲಾಗಿ, ನಿಮ್ಮ ಕೆಟ್ಟತನದ ಬಗ್ಗೆ ತಿಳ್ಕೊಬೇಕಂದ್ರ ನಾನು ನಿಮ್ಮ ಹತ್ತಿರದ ಒಡನಾಡಿಯಾಗಿರಬೇಕು, ಇಲ್ಲ ಗೆಳೆಯನಾಗಿರಬೇಕು. ಆದ್ರ ನಾನು ಇವೆರೆಡೂ ಅಲ್ಲಲ್ರಿ?” ಎಂದು ನಕ್ಕೆ. ಜೊತೆಗೆ ಅವರೂ ನಕ್ಕರು. ನಾನು ಮುಂದುವರೆದು “ಕೆಟ್ಟದ್ದು ಬರೆಯುವಂಥದ್ದು ಕೆಟ್ಟದೇನು ಮಾಡೀರಿ ನೀವು? ನೀವು ಮಾಸ್ತರಾದಾಗಿಂದ ನಿಮ್ಮ ಜೀವನಾನ ವಿದ್ಯಾರ್ಥಿಗಳಿಗೋಸ್ಕರ ತೇದಿರಿ. ನಮ್ಮಂತ ವಿದ್ಯಾರ್ಥಿಗಳನ್ನು ರೂಪಿಸಿದ್ದೀರಿ. ನಿಮ್ಮ ಬಗ್ಗೆ ಕೆಟ್ಟದ್ದು ಬರದ್ರ ನನಗ ಕೆಟ್ಟಾಕೈತ್ರೀ” ಎಂದು ತರ್ಕದ ಮಾತನಾಡಿ ಮಾಸ್ತರರ ಬಾಯಿ ಕಟ್ಟಿಬಿಟ್ಟೆ.

    ಮುಂದೆ ಮಾಸ್ತರರು ಹೆಚ್ಚಿಗೇನೂ ಮಾತನಡದೆ ನಾನು ಮಾಡುವ ಕೆಲಸಕ್ಕೆ ಮೌನ ಸಮ್ಮತಿಯನ್ನು ಕೊಟ್ಟರು. ನಾನು ನನ್ನ ಕ್ಯಾಮರಾವನ್ನು ನನ್ನ ಅಕ್ಕನ ಮಗನ ಕೈಗಿಡುತ್ತಾ ಆಶ್ರಮದ ಒಂದಿಷ್ಟು ಫೋಟೋಗಳನ್ನು ಹಾಗೂ ನಾವು ಮಾತನಾಡುವದನ್ನು ಮಾಸ್ತರರಿಗೆ ಗೊತ್ತಾಗದಂತೆ ಕ್ಲಿಕ್ಕಿಸು ಎಂದು ಸೂಚನೆಯನ್ನು ಕೊಟ್ಟು ಮಾಸ್ತರರೊಂದಿಗೆ ಮಾತಿಗಿಳಿದೆ. ಆದರೆ ಅವನು ಒಂದಷ್ಟು ಫೋಟೋಗಳನ್ನು ತೆಗೆದಿರಲಿಕ್ಕಿಲ್ಲ, ಆಗಲೇ ಮಾಸ್ತರರಿಗೆ ಅವನು ಕದ್ದು ಫೋಟೋ ತೆಗೆಯುವದು ಗೊತ್ತಾಗಿಹೋಯಿತು. “ಏಯ್, ಬ್ಯಾಡ್ರಿ, ಫೋಟೋ, ಗೀಟೋ ಏನು ಬ್ಯಾಡ್ರಿ. ಹಿಂಗಾದ್ರ ನಾನು ನಿಮ್ಮ ಕೂಡ ಮಾತಾಡಂಗಿಲ್ಲ ನೋಡ್ರಿ” ಎಂದು ಮನಿಸಿಕೊಂಡರು. ನಾನು ಅವರನ್ನು ಮತ್ತೆ ಪರಿಪರಿಯಾಗಿ ಓಲೈಸುತ್ತಾ at least ನಾವು ಮಾತನಾಡುವದನ್ನಾದರೂ ವಿಡಿಯೋ ತೆಗೆದುಕೊಳ್ಳಲು ಅನುಮತಿ ಕೊಡಬೇಕು ಎಂದು ಕೇಳಿಕೊಂಡೆ. ನಾನು ನನ್ನ ಅಕ್ಕನ ಮಗನಿಗೆ ವಿಡಿಯೋ ತೆಗೆಯಲು ಹೇಳಿ ನಾನು ಮಾಸ್ತರರೊಂದಿಗೆ ಮಾತಿಗಿಳಿದೆ. ಕಾಲು ಗಂಟೆ ಅವನು ವಿಡಿಯೋ ತೆಗೆದಿರಲಿಕ್ಕಿಲ್ಲ ಆಗಲೇ ಮಾಸ್ತರರು “ಸಾಕು ಬಿಡ್ರಿ, ಸಾಕು. ಎಷ್ಟು ತೆಗಿತೀರಿ? ಕ್ಯಾಮರಾ ಬಂದ್ ಮಾಡಬಿಡ್ರಿ” ಎಂದು ಹೇಳಿದರು. ನಾನು “ದಯವಿಟ್ಟು ನಮ್ಮ ಮಾತುಕತೆ ಮುಗಿಯುವರೆಗೂ ರೆಕಾರ್ಡ್ ಆಗಲಿ. ಇದು ಲೇಖನ ಬರೆಯುವದಕ್ಕೆ ಸಹಾಯವಾಗುತ್ತೆ” ಎಂದೆ. ಅವರು ಮನಸ್ಸಿಲ್ಲದೆ ಒಪ್ಪಿಕೊಂಡರು.

    ಶಿಕ್ಷಣ ಎಂಬುದು ವ್ಯಾಪಾರೀಕರಣಗೊಂಡು ಉದ್ಯಮದ ರೂಪ ಪಡೆದ ಈ ಹೊತ್ತಿನಲ್ಲಿ ಹಾಗೂ ಟೂಷನ್ ಎಂಬ ಮಹಾಮಾರಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ದಂಧೆಯಾಗಿ ನಡೆಯುತ್ತಿರುವ ಇವತ್ತಿನ ದಿನಗಳಲ್ಲಿ ಇಲ್ಲೊಬ್ಬ ನಿವೃತ್ತ ಶಿಕ್ಷಕರು ಮಕ್ಕಳಿಗೋಸ್ಕರ ಉಚಿತ ಅಕ್ಷರ ದಾಸೋಹ ನಡೆಸುತ್ತಾರೆ. ಅವರೇ ಶ್ರೀಯುತ ಬಿ.ಜಿ. ಅಣ್ಣಿಗೇರಿಯವರು. ಶಿಕ್ಷಣದ ಸಂತೆಯಲ್ಲೊಬ್ಬ ಸಂತನಂತಿರುವ ಈ ಶಿಕ್ಷಕ ಗದುಗಿನ ತುಂಬಾ ಅಣ್ಣಿಗೇರಿ ಸರ್, ಅಣ್ಣಿಗೇರಿ ಮಾಸ್ತರ್ ಎಂದೇ ಹೆಸರಾದವರು. ನಿರಂತರವಾಗಿ 56 ವರ್ಷಗಳಿಂದ ಉಚಿತ ಶಿಕ್ಷಣ ದಾಸೋಹ ನಡೆಸುತ್ತಿರುವ ಇವರು ಮೊದಲಿನಿಂದಲೂ ಸದ್ದುಗದ್ದಲವಿಲ್ಲದೇ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಬಂದವರು. ಈ ಕಾರಣಕ್ಕಾಗಿಯೇ ಅವರು ಈ ಭಾಗದ ಬಡ ವಿದ್ಯಾರ್ಥಿಗಳ ಪಾಲಿಗೆ ಆರಾಧ್ಯ ದೈವವಾಗಿದ್ದಾರೆ. ಜೀವನ ಪರ್ಯಂತ ಬ್ರಹ್ಮಚಾರಿಯಾಗಿದ್ದುಕೊಂಡೇ ವಿದ್ಯಾರ್ಥಿಗಳ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆಶ್ರಮದ ಮಕ್ಕಳೇ ತಮ್ಮ ಮಕ್ಕಳೆಂದು ಭಾವಿಸಿ ಸತತ 56ವರ್ಷಗಳಿಂದ ಆ ಮಕ್ಕಳಿಗೆ ತಮ್ಮದೆಲ್ಲವನ್ನೂ ಧಾರೆಯೆರೆದಿದ್ದಾರೆ. ಮದುವೆ ಯಾಕೆ ಆಗಲಿಲ್ಲ ಎಂದು ಕೇಳಿದರೆ ಮೊದಲಿನಿಂದಲೂ ಬಡತನದಲ್ಲಿಯೇ ಬೆಂದೆದ್ದು ಬಂದಿದ್ದರಿಂದ ಮದುವೆಯ ಬಗೆಗಿನ ಮಧುರ ಕಲ್ಪನೆಗಳು ನನ್ನಲ್ಲಿ ಹುಟ್ಟಲೇ ಇಲ್ಲ ಎಂದು ಹೇಳುತ್ತಾರೆ. ತಮ್ಮ 33ನೇ ವಯಸ್ಸಿನಲ್ಲಿ ಒಮ್ಮೆ ಮದುವೆಯ ಯೋಚನೆ ಬಂತಂತೆ. ಆದರೆ ಅವರು ನಡೆಸುತ್ತಿದ್ದ ವಿಶೇಷ ತರಗತಿಗಳಿಂದಾಗಿ ಮದುವೆಯ ಬಗ್ಗೆ ಚಿಂತಿಸಲು ಅವಕಾಶ ಸಿಗಲಿಲ್ಲ ಎಂದು ನಗುತ್ತಾ ಹೇಳುತ್ತಾರೆ.
    ಶ್ರೀಯುತ ಅಣ್ಣಿಗೇರಿಯವರು ಗದಗ್ ಜಿಲ್ಲೆಯ ರೋಣ ತಾಲೂಕಿನ ಮುದೇನಗೂಡಿಯಲ್ಲಿ ಜೂನ್ 3, 1930ರಲ್ಲಿ ಬಡ ಕುಟುಂಬವೊಂದರಲ್ಲಿ ಹುಟ್ಟಿದರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗ್ರಾಮಸ್ಥರ ಹಣಕಾಸಿನ ಸಹಾಯದಿಂದ ಮುದೇನಗೂಡಿಯಲ್ಲಿ ಮುಗಿಸಿದರು. ಮುಂದೆ ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ರೋಣಕ್ಕೆ ಹೋದರು. ಅಲ್ಲಿ ವಾರಾನ್ನ ತಿಂದುಕೊಂಡು ಓದಿದರು. 1954 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿ.ಎ. ಬಿ. ಇಡ್ ಪದವಿ ಪದವಿ ಪಡೆದುಕೊಂಡು ಅದೇ ವರ್ಷ ಗದುಗಿನ ಮಾಡೆಲ್ ಹೈಸ್ಕೂಲಿನಲ್ಲಿ (ಈಗಿನ ಸಿ.ಎಸ್.ಪಾಟೀಲ್ ಹೈಸ್ಕೂಲಿನಲ್ಲಿ) ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ಮುಂದೆ ಅದೇ ಹೈಸ್ಕೂಲಿನ ಹೆಡ್ಮಾಸ್ಟರ್ ಆಗಿ 1988 ರಲ್ಲಿ ನಿವೃತ್ತರಾದವರು. ಅವರ ಕಾಲದಲ್ಲಿ ಮಾಡೆಲ್ ಹೈಸ್ಕೂಲ್ ಕೀರ್ತಿಯು ಉತ್ತುಂಗ ಶಿಖರವನ್ನು ಮುಟ್ಟಿತ್ತು.



    ಅವರು ಗದುಗಿಗೆ ಬಂದ ವರ್ಷವೇ ಅಲ್ಲಿಯ ದಲಾಲರ ಸಹಾಯದಿಂದ ಕಾಟನ್ ಮಾರ್ಕೆಟ್ ರೋಡಿನಲ್ಲಿರುವ ಒಂದು ವಕಾರದಲ್ಲಿ ಸಣ್ಣದೊಂದು ಕೋಲಿ ಹಿಡಿದು, ದೂರದ ಊರಿಂದ ಗದುಗಿಗೆ ಓದಲು ಬರುವ ಹುಡುಗರನ್ನು ತಮ್ಮಲ್ಲಿರಿಸಿಕೊಂಡು ಓದಿಸತೊಡಗಿದರು. ಮುಂದೆ ಅದು ಒಂದು ಪರಿಪಾಠವಾಗಿ ಬೆಳೆದು ಇವತ್ತು ಒಂದು ಸಣ್ಣ ಆಶ್ರಮವಾಗಿ ನಿಂತಿದೆ. ಇಲ್ಲಿ 80ಕ್ಕೂ ಹೆಚ್ಚು ಜನರು ತಂತಮ್ಮ ಊರಿನಿಂದ ಬುತ್ತಿ ತರಿಸಿಕೊಂಡು ಬೆಳಿಗ್ಗೆ ಊಟ ಮಾಡುತ್ತಾರೆ. ಮಧ್ಯಾಹ್ನಕ್ಕೆ ಸಾಲಿಯಲ್ಲಿ ಕೊಡುವ ಬಿಸಿಯೂಟ ಮಾಡುತ್ತಾರೆ. ರಾತ್ರಿ ಹಳೆ ವಿದ್ಯಾರ್ಥಿಯೊಬ್ಬರು ಕೊಡಿಸಿದ ಅಕ್ಕಿಯಿಂದ ಅನ್ನ ತಯಾರಿಸಿ, ತೋಂಟದಾರ್ಯ ಮಠದಿಂದ ಸಾರು ತಂದು ಊಟ ಮಾಡುತ್ತಾರೆ.

    ಅಣ್ಣಿಗೇರಿ ಮಾಸ್ತರರದು ಶಿಸ್ತುಬದ್ಧ ಜೀವನ. ಆ ಇಳಿ ವಯಸ್ಸಿನಲ್ಲೂ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಐದಾರು ಕಿಲೊಮೀಟರಿನಷ್ಟು ವಾಕ್ ಹೋಗುತ್ತಾರೆ. ನಂತರ ಸ್ನಾನ, ಪ್ರಾರ್ಥನೆ ಮಾಡುತ್ತಾರೆ, ಪ್ರಾರ್ಥನೆಯಲ್ಲಿ ಆಶ್ರಮದ ಮಕ್ಕಳು ಸಹ ಭಾಗಿಯಾಗುತ್ತಾರೆ. ಇದಾದ ಬಳಿಕ ಏಳು ಗಂಟೆಯಿಂದ ಹತ್ತು ಗಂಟೆಯವರೆಗೆ ತರಗತಿಗಳಿಗೆ ಹೋಗುತ್ತಾರೆ. ಆನಂತರ ಲಘು ಉಪಾಹಾರ, ಒಂದಷ್ಟು ಅಧ್ಯಯನ, ಮಧ್ಯಾಹ್ನ ಮಿತವಾದ ಆಹಾರ ಸೇವನ, ಬಳಿಕ ವಿಶ್ರಾಂತಿ, ನಂತರ ಸುಮಾರು ಎರಡು ಗಂಟೆಗಳಷ್ಟು ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಅಷ್ಟೊತ್ತಿಗೆ ಸಾಯಂಕಾಲದ ಪಾಠಕ್ಕಾಗಿ ಮಕ್ಕಳು ಬಂದಿರುತ್ತಾರೆ. ಮತ್ತೆ ಅವರಿಗೆ ಸಂಜೆ ಆರರಿಂದ ಏಳು ಗಂಟೆಯವರೆಗೆ ಪಾಠ ತೆಗೆದುಕೊಳ್ಳುತ್ತಾರೆ. ಆನಂತರ ತಮ್ಮ ಆಶ್ರಮದಲ್ಲಿ ವಸತಿಯಿರುವ ಮಕ್ಕಳೊಂದಿಗೆ ಸಮಾಲೋಚನೆ ನಡೆಸುತ್ತಾ, ಅವರ ಕುಂದುಕೊರತೆಗಳನ್ನು ಗಮನಿಸುತ್ತಾ, ಅವರ ವಿಧ್ಯಾಭ್ಯಾಸದ ಪ್ರಗತಿಯ ಬಗ್ಗೆ ವಿಚಾರಿಸುತ್ತಾ, ಅವರಿಗೆ ಬುದ್ಧಿವಾದ ಹೇಳುತ್ತಾ, ತಪ್ಪಿದ್ದರೆ ಬಯ್ಯುತ್ತಾ, ಅವರನ್ನು ತಿದ್ದುತ್ತಾ, ಓದುವದಕ್ಕೆ ಹುರಿದುಂಬಿಸುತ್ತಾ ತಮ್ಮ ಸಮಯ ಕಳೆಯತ್ತಾರೆ. ಈ ತರದ ಜೀವನಕ್ರಮವನ್ನು ಕಟ್ಟುನಿಟ್ಟಾಗಿ ಚಾಚೂತಪ್ಪದೇ ಪಾಲಿಸುತ್ತಾರೆ.

    ಮೊದಲೆಲ್ಲಾ ಇವರೊಟ್ಟಿಗೆ ಹುಣಶಿಮರದ ಸರ್, ಗಾಣಿಗೇರ ಸರ್ ಅವರು ಇಲ್ಲಿಗೆ ಬಂದು ಉಚಿತವಾಗಿ ವಿಜ್ಞಾನ ಮತ್ತು ಗಣಿತದ ಪಾಠಗಳನ್ನು ಹೇಳಿ ಹೋಗುತ್ತಿದ್ದರು. ಆದರೆ ಅವರೆಲ್ಲಾ ಈಗ ಬರುವದನ್ನು ನಿಲ್ಲಿಸಿದ್ದಾರೆ. ಯಾಕೆಂದು ಕೇಳಿದರೆ “ಅಲ್ರಿ ಅವರೂ exist ಆಗಬೇಕಲ್ರಿ. ಅವರಿಗೂ ಮದುವೆಯಾಯಿತು. ಹೆಂಡತಿ ಮಕ್ಕಳಿರೋರು. ಬರೇ ಪುಗಸೆಟ್ಟಿ ಪಾಠ ಮಾಡು ಅಂದ್ರ ಎಷ್ಟು ದಿವಸ ಮಾಡ್ತಾರ?” ಎಂದು ನಗುತ್ತಾ ನಮಗೇ ಮರುಪ್ರಶ್ನೆ ಹಾಕುತ್ತಾರೆ ಮಾಸ್ತರರು.

    ಹೀಗಾಗಿ ಈಗ ಬರೀ ಅಣ್ಣಿಗೇರಿ ಮಾಸ್ತರ್ ಒಬ್ಬರೇ ಎಲ್ಲ ತರಗತಿಗಳಿಗೆ ಇಂಗ್ಲೀಷ್ ಮತ್ತು ಗಣಿತದ ಪಾಠ ಹೇಳುತ್ತಾರೆ. ಆದರೆ ಸಮಾಯಾಭಾವ ಹಾಗೂ ಒಬ್ಬರೇ ಎಲ್ಲವನ್ನೂ ನಿಭಾಯಿಸಬೇಕಿದ್ದರಿಂದ ಈಗ ಬರೀ 9 ಮತ್ತು 10ನೇ ತರಗತಿಗಳಿಗೆ ಮಾತ್ರ ಪಾಠ ಮಾಡುತ್ತಾರೆ. ಅಣ್ಣಿಗೇರಿ ಸರ್ ಅವರದು ಗಣಿತ ಮತ್ತು ಇಂಗ್ಲೀಷ್ ಹೇಳುವದರಲ್ಲಿ ಎತ್ತಿದ ಕೈ. ಇವರು ಪಾಠ ಮಾಡುವ ರೀತಿ ಹೇಗಿರುತ್ತದೆಂದರೆ ಎಲ್ಲವನ್ನೂ ಬುನಾದಿಯಿಂದಲೇ ಆರಂಭಿಸುತ್ತಾರೆ. ಉದಾಹರಣೆಗೆ ಲಂಭಕೋನ ತ್ರಿಭುಜಕ್ಕೆ ಸಂಬಂಧಪಟ್ಟಹಾಗೆ ಪೈಥಾಗೋರಸ್ ನ ಪ್ರಮೇಯವನ್ನು ಬೇರೆಯವರ ಹಾಗೆ ನೇರವಾಗಿ ಆರಂಭಿಸುವ ಮೊದಲು ಲಂಭಕೋನ ತ್ರಿಭುಜ ಎಂದರೇನು? ಅದರ ಲಕ್ಷಣಗಳೇನು? ಹಾಗೂ ಹೇಗೆ ಲಂಭಕೋನ ತ್ರಿಭುಜದಲ್ಲಿ ವಿಕರ್ಣದ ವರ್ಗವು ಉಳಿದೆರೆಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ ಎನ್ನುವದನ್ನು ಅನೇಕ ಉದಾಹರಣೆಗಳ ಮೂಲಕ ವಿವರಿಸುತ್ತಾ ಪೈಥಾಗೋರಸ್ ನ ಪ್ರಮೇಯದೊಳಕ್ಕೆ ಇಳಿಯುತ್ತಾರೆ. ಪ್ರಮೇಯ ಹೇಳಿಕೊಟ್ಟ ಮಲೆ ಅಷ್ಟಕ್ಕೆ ಸುಮ್ಮನಾಗುವದಿಲ್ಲ. ಅದನ್ನು ಮತ್ತೆ ಮತ್ತೆ ಹೇಳುತ್ತಾ, ವಿದ್ಯಾರ್ಥಿಗಳ ಕೈಲಿ ಹೇಳಿಸುತ್ತಾ ವಿದ್ಯಾರ್ಥಿಗಳಿಗೆ ಮನದಟ್ಟುಮಾಡಿಕೊಡುವದರ ಮೂಲಕ ಎಂಥ ದಡ್ಡನನ್ನೂ ಅರ್ಥ ಮಾಡಿಸುತ್ತಾರೆ. ಇಂಗ್ಲೀಷನ್ನೂ ಅವರು ಹೆಚ್ಚು ಕಮ್ಮಿ ಇದೇ ರೀತಿ ಹೇಳಿಕೊಡುತ್ತಾರೆ, ಇಂಗ್ಲೀಷ್ ಗ್ರಾಮೀಣ ಭಾಗದ ಮಕ್ಕಳಿಗೆ ಕಬ್ಬಿಣದ ಕಡಲೆಯಿದ್ದಂತೆ. ಆದರೆ ಅಣ್ಣಿಗೇರಿ ಮಾಸ್ತರರು ಅದನ್ನು ಸರಳವಾಗಿಸುತ್ತಾ, ಇಂಗ್ಲೀಷಿನ ಸಣ್ಣ ಸಣ್ಣ ವಾಕ್ಯಗಳಲ್ಲಿ ಹೇಳುತ್ತಾ ಅರ್ಥ ಮಾಡಿಸುತ್ತಾರೆ. ಮಾತ್ರವಲ್ಲ, ಮದ್ಯ ಮಧ್ಯ ವಿದ್ಯಾರ್ಥಿಗಳನ್ನು ನಗಿಸುತ್ತಾ, ತಾವು ಅವರೊಂದಿಗೆ ಮಕ್ಕಳಾಗಿ ಎಲ್ಲೂ ಬೋರಾಗದಂತೆ ಪಾಠ ಹೇಳಿಕೊಡುತ್ತಾರೆ. ಇದು ಅವರು ಪಾಠ ಮಾಡುವ ವೈಖರಿ.



    ಈ ತರದ ಕ್ಲಾಸುಗಳು ಬರಿ ಆಶ್ರಮದಲ್ಲಿರುವವರಿಗೆ ಮಾತ್ರ ಸೀಮಿತವಾಗಿರುವದಿಲ್ಲ. ಹಳ್ಳಿಯ ಬಡಮಕ್ಕಳು ಸೇರಿದಂತೆ ಗದಗ-ಬೇಟಗೇರಿಯ ಶ್ರೀಮಂತರ ಮಕ್ಕಳೂ ಸಹ ಅವರ ಬಳಿ 100ಕ್ಕೂ ಹೆಚ್ಚು ಜನ ಟೂಷನ್ ಗೆ ಬರುತ್ತಾರೆ. ನಾನು ಅವರ ಬಳಿ ಪಾಠಕ್ಕೆ ಹೋಗುವಾಗ (ಅಂದರೆ 1990 ರಲ್ಲಿ) ಒಂದೊಂದು ತರಗತಿಯಲ್ಲಿ ಇನ್ನೂರು ವಿದ್ಯಾರ್ಥಿಗಳು ಇರುತ್ತಿದ್ದರು. ಒಂದೊಂದು ಸಾರಿ ಕೋಣೆ ಹಿಡಿಸದೆ ಇದ್ದಾಗ ಬಯಲಲ್ಲಿರುವ ಮರದ ಕೆಳಗೆ ತರಗತಿಗಳು ನಡೆಯುತ್ತಿದ್ದವು. ಆಗ ಅವು ನಮಗೆಲ್ಲಾ ಗುರುಕುಲ ಪದ್ಧತಿಯನ್ನು ಜ್ಞಾಪಿಸುತ್ತಿದ್ದವು. ಆದರೆ ಈಗ ಕ್ಲಾಸಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಾರಣ ಕೇಳಿದರೆ ಮಾಸ್ತರರು ಹಸನ್ಮುಖಿಯಾಗಿ “ಅಲ್ರೀ, ಈಗಿನ ಸ್ಟೂಡೆಂಟ್ಸ್ ಗೆ ಆಗಿನ ಸ್ಟೂಡೆಂಟ್ಸ್ ಗೆ ಬಾಳ ಫರಕ್ ಐತ್ರಿ. ಈಗಿನ ಹುಡುಗರು ’ಅಣ್ಣಿಗೇರಿ ಮಾಸ್ತರಗ ವಯಸ್ಸಾಗೇತಿ. ಅವ ಏನ್ ಪಾಠ ಮಾಡ್ತಾನ?’ ಅಂತಾರ್ರಿ. ಇನ್ನು ಅವರ ಪೇರೆಂಟ್ಸ್ ’ಅಣ್ಣಿಗೇರಿ ಮಾಸ್ತರ್ ರೊಕ್ಕಾನ ತಗೊಳಲ್ಲ. ರೊಕ್ಕ ತಗೊಳ್ಳದಾಂವ ಅದೇನು ಪಾಠ ಮಾಡ್ತಾನ? ಸುಮ್ನ ಬೇರೆ ಕಡೆ ಪಾಠಕ್ಕ ಹೊಗಿ ಉದ್ಧಾರ ಆಗ್ರಿ’ ಅಂತಾ ಹೇಳ್ತಾರಂತರೀ” ಎಂದು ಈಗಿನ ವಿದ್ಯಾರ್ಥಿಗಳು ಹಾಗೂ ಅವರ ತಂದೆತಾಯಿಗಳ ಮನೋಸ್ಥಿತಿಯ ಬಗ್ಗೆ ವಿಷಾದ ಮಿಶ್ರಿತ ತಿಳಿಹಾಸ್ಯದಲ್ಲಿ ಹೇಳುತ್ತಾರೆ.

    ಇವತ್ತು ಅವರ ಕೈಯಲ್ಲಿ ಕಲಿತವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಅವರೆಲ್ಲಾ ಸೇರಿ ಆಶ್ರಮವನ್ನು ನವೀಕರಿಸಿ ಕೊಟ್ಟಿದ್ದಾರೆ. ಆದರೆ ಈಗ್ಗೆ ಕೆಲವು ವರ್ಷಗಳಿಂದ ಅವರನ್ನು ಅವರಿದ್ದ ಜಾಗದಿಂದ ಒಕ್ಕಲೆಬ್ಬಿಸುವ ಸಂಚು ನಡೆಯಿತು. ಈ ಸಂದರ್ಭದಲ್ಲಿ ಗದುಗಿನ ಪ್ರಸಿದ್ಧ ದಲಾಲಿ ವ್ಯಾಪಾರಿ ದಿವಂಗತ ಮಲ್ಲೇಶಪ್ಪ ಗೌರಿಪೂರವರು ಅವರ ಸಹಾಯಕ್ಕೆ ಬಂದು ಅವರಿರುವ ಜಾಗವನ್ನು ಅವರ ಹೆಸರಿಗೆ ಮಾಡಿಸಿಕೊಟ್ಟರು. ಅವರ ಈ ಸಹಾಯವನ್ನು ಮಾಸ್ತರರು ವಿಶೇಷ ಕೃತಜ್ಞತೆಯಿಂದ ನೆನೆಯುತ್ತಾರೆ.

    33 ವರ್ಷ ಸರ್ಕಾರಿ ಶಿಕ್ಷಕರಾಗಿದ್ದರೂ ಮಾಸ್ತರರು ತಮಗೇ ಅಂತಾ ಆಸ್ತಿ ಮಾಡಿಕೊಳ್ಳಲಿಲ್ಲ, ಹಣ ಗಳಿಸಲಿಲ್ಲ, ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಲಿಲ್ಲ. ಮುಂಚಿನಿಂದಲೂ ಏನನ್ನೂ ಅಪೇಕ್ಷಿಸದೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡವರು. ಆದರೆ ಇವರ ಈ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರ ಅವರಿಗೆ 2003 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಇವರು ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಲು ಬೆಂಗಳೂರಿಗೆ ಬಂದಾಗ ಪತ್ರಕರ್ತನೊಬ್ಬ “ಪ್ರಶಸ್ತಿ ಸ್ವೀಕರಿಸುವದಕ್ಕೆ ಗದುಗಿನಿಂದ ಬೆಂಗಳೂರಿಗೆ ಬಂದಿದ್ದೀರಿ. ನಿಮಗೇನನಿಸುತ್ತೆ?” ಅಂತಾ ಕೇಳಿದ್ದ. ಅದಕ್ಕೆ ಮಾಸ್ತರರು “ನಂಗ ಬಾಳ ತ್ರಾಸು ಅನಸಾಕ ಹತೈತ್ರಿ. ಯಾಕಂದ್ರ ಎರಡು ದಿವಸ ಆತು ಮಕ್ಕಳನ್ನ ಅಷ್ಟ ಆಶ್ರಮದಾಗ ಬಿಟ್ಟು ಬಂದಿದೇನ್ರಿ. ಪಾಪ, ಅವರು ಹೆಂಗ ಇರ್ತಾರ ಏನ? ಈ ಕಾರ್ಯಕ್ರಮ ಮುಗಿದ ತಕ್ಷಣ ಇವತ್ತ ರಾತ್ರಿನ ಗದಿಗ್ಗೆ ಬಸ್ ಹತ್ತತೇನ್ರಿ.” ಎಂದಾಗ ಆ ಪತ್ರಕರ್ತ ’ಸಾಮಾನ್ಯವಾಗಿ ಎಲ್ಲರೂ ಈ ಸಂದರ್ಭದಲ್ಲಿ ತಾವು ಮಾಡಿದ್ದನ್ನು ಹಾಡಿ ಹೊಗಳುತ್ತಾ ಪ್ರಶಸ್ತಿ ಬಂದಿದ್ದಕ್ಕೆ ಖುಶಿಯಾಯಿತು. ಹಾಗೆ ಹೀಗೆ” ಅಂತಾ ಹೇಳ್ತಾರೆ ಆದರೆ ಅದರ ಬದಲು ಆ ಸಮಯದಲ್ಲೂ ತಮ್ಮ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದನ್ನು ಕೇಳಿ ಬೆರಗಾಗಿದ್ದ.

    ಇಂಥವರು ನನ್ನ ಗುರುಗಳಾಗಿದ್ದೇ ನನ್ನ ಅದೃಷ್ಟ. ಇವರ ಕೈಲಿ ಮೂರು ವರ್ಷ ವಿದ್ಯಾರ್ಥಿಯಾಗಿ ಕಲಿತಿದ್ದೆನಾದರೂ ಈಗ ಮತ್ತೆ ಅವರೊಂದಿಗೆ ಮಾತನಾಡುವದೇ ಒಂದು ಸೌಭಾಗ್ಯ ಎಂದು ಭಾವಿಸಿ ಮಾತಿಗಿಳಿದೆ. ಮಾತನಾಡುತ್ತಾ ಮಾಸ್ತರರು ಐದು ದಶಕಗಳ ಹಿಂದಿನಿಂದ ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿ ಏನೇನು ನಡೆಯಿತು ಎನ್ನುವದನ್ನೆಲ್ಲಾ ಕಟ್ಟಿಕೊಟ್ಟರು. ಮೂರು ಗಂಟೆ ಕಳೆದಿದ್ದೇ ಗೊತ್ತಾಗಲಿಲ್ಲ. ಈ ಮಧ್ಯ ಮಾಸ್ತರರು “ಲೇ ತಮ್ಮಾ, ಸಾಹೇಬರಿಗೆ ಒಂದೆರೆಡು ಚಹಾ ತಗೊಂಬಾರೋ” ಎಂದು ತಮ್ಮ ಶಿಷ್ಯನಿಗೆ ಆಜ್ಞೆಯಿತ್ತರು. ನಾನು ಬೇಡವೆಂದೆ. ಮಾಸ್ತರರು ಕೇಳಲಿಲ್ಲ. ಒತ್ತಾಯ ಮಾಡಿ “ಏಯ್, ತಗೊಂಬಾ ಹೋಗೋ” ಎಂದು ಮತ್ತೊಮ್ಮೆ ಶಿಷ್ಯನಿಗೆ ಹೇಳಿದರು. ಶಿಷ್ಯ ಚಹಾ ತರಲು ರೆಡಿಯಾದ. ನಾನಾಗ “ಒಂದು ಶುಗರ್ ಲೆಸ್ ಇರಲಿ” ಎಂದೆ. ಮಾಸ್ತರರು ಅಚ್ಚರಿಯಿಂದ ನನ್ನತ್ತ ನೋಡಿದರು. ನಾನು “ಹೌದು, ಕಳೆದ ಒಂದು ವರ್ಷದಿಂದ ನಾನು ಡಯಾಬಿಟಿಕ್ ಆಗಿದ್ದೇನೆ” ಎಂದೆ. ಆಗ ಮಾಸ್ತರರು ಕಳಕಳಿಯಿಂದ “ಏಯ್. ಏನ್ರೀ ಇದು? ಇಷ್ಟ ಸಣ್ಣ ವಯಸ್ಸಿಗೆ ಡಯಾಬಿಟಿಸ್ ಬಂದಿದೆಯಾ? ಹುಷಾರ್ರೀ, ಆರೋಗ್ಯದ ಬಗ್ಗೆ ಕಾಳಜಿ ತಗೊಳ್ರೀ. ನೀವಿನ್ನೂ ಬಾಳ ದಿವಸ ಬದುಕಿ ಬಾಳಬೇಕಾದವರು” ಎಂದು ಪ್ರೀತಿಯ ಸಲಹೆಯನ್ನಿತ್ತರು. ನಾನು ಅವರಿಗೆ ಕಣ್ಣಲ್ಲೇ ಥ್ಯಾಂಕ್ಸ್ ಹೇಳಿ ಸಂದರ್ಶಿಸತೊಡಗಿದೆ.



    • ನಿಮ್ಮ ದೃಷ್ಟಿಯಲ್ಲಿ ಗುರು ಎಂದರೆ ಯಾರು? ಅವನು ಹೇಗಿರಬೇಕು?
    ಅಲ್ರಿ, ಗುರು ಅನ್ನಂವಗ ಅಸ್ಥಿತ್ವ ಬರೋದ ವಿದ್ಯಾರ್ಥಿಗಳಿಂದ! ವಿದ್ಯಾರ್ಥಿಗಳ ಇಲ್ಲದ ಮೇಲೆ ಗುರು ಎಲ್ಲಿರತಾನ? ಹಿಂಗಾಗಿ ಮೊದ್ಲು ಶಿಷ್ಯರು ಹುಟ್ತಾರ. ಆಮೇಲೆ ಗುರುಗಳು ಹುಟ್ತಾರ. ಈ ವಿಷ್ಯಕ್ಕೆ ಎಲ್ಲಾ ಗುರುಗಳು ತಮ್ಮ ಶಿಷ್ಯರ ಬಗ್ಗೆ ಋಣಿಯಾಗಿರಲೇಬೇಕು. ಯಾಕಂದ್ರ ಒಬ್ಬ ಗುರು ದೊಡ್ಡವನಾಗೋದು ಅವನ ಶಿಷ್ಯರಿಂದ. ಅವರು ಮಾಡಿದ ಸಾಧನೆಯಿಂದ. ದ್ರೋಣಾಚಾರ್ಯ ಒಬ್ಬ ಗುರು ಅಂತಾ ಜಗತ್ತಿಗೆ ಗೊತ್ತಾಗಿದ್ದು ಏಕಲವ್ಯನಂಥ ಶಿಷ್ಯನಿಂದ. ಅರಿಸ್ಟಾಟಲ್ ಬೆಳಕಿಗೆ ಬಂದಿದ್ದು ಅವನ ಶಿಷ್ಯ ಸಾಕ್ರೇಟಿಸ್ ನಿಂದ. ಈಗ ನಾನೂ ಒಬ್ಬ ಗುರು ಅಂತಾ ಗೊತ್ತಾಗಿದ್ದು ಕೂಡ ನಿಮ್ಮಂತ ವಿದ್ಯಾರ್ಥಿಗಳಿಂದ. ಹಾಗೆ ನೋಡಿದ್ರ ಗುರುಗಳದು ಹೇಳಿಕೊಳ್ಳುವಂಥ ರೋಲ್ ಏನೂ ಇರಲ್ರಿ. He is just a guide. ಆದರೆ ಸತತ ಪರಿಶ್ರಮದಿಂದ ಒಬ್ಬ ವಿದ್ಯಾರ್ಥಿ ಮುಂದೆ ಬರ್ತಾನಲ್ಲ ಅವನಿಗೆ ನಾವು ಮೊದಲು ಕೃತಜ್ಞತೆ ಸಲ್ಲಿಸಬೇಕು.

    ಗುರು ಆದವನು ಹಿಂಗಿಂಗ ಇರಬೇಕು ಅಂತಾ ಹೇಳಾಕ ನಾನ್ಯಾರ್ರಿ?

    • ಇವತ್ತಿನ ವಿದ್ಯಾರ್ಥಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?

    ಈಗೀಗ ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಬಗ್ಗೆ ಸ್ವಲ್ಪ ಗೌರವ ಕಮ್ಮಿಯಾಗಿದೆ ಅನ್ನೋದು ನಿಜ. ಹಿಂದೆ ವಿದ್ಯಾರ್ಥಿಗಳು ವಿಧೇಯಕರಾಗಿರುತ್ತಿದ್ದರು. ಹೇಳಿದ ಮಾತು ಕೇಳೋರು. ಹೇಳಿದ ಕೆಲಸ ಮಾಡೋರು. ಆದ್ರ ಈಗ ಏನರ ಹೇಳಾಕ ಹೋದ್ರ “ನೀ ಯಾರು ನಂಗ ಹೇಳಾಂವ?” ಅಂತಾ ನಮ್ಮನ್ನ ಕೇಳ್ತಾರ.
    ಮೊನ್ನೆ ನಮ್ಮ ಆಶ್ರಮದಾಗ ಒಬ್ಬ ಹುಡುಗ ಊಟದ ತಾಟು ತಿಪ್ಯಾಗ ಒಗದಿದ್ದ. ಕಾಲಾಗ ಹಾಕ್ಕೊಳ್ಳೋ ಬೂಟನ್ನು ಕೋಲ್ಯಾಗ ಇಟ್ಟು ಅದರ ಮ್ಯಾಲೆ ಚಾದರ ಹೊಚ್ಚಿ ಭದ್ರವಾಗಿ ಇಟ್ಟಿದ್ದ. ಇದನ್ನ ನೋಡಿ ನಂಗ ಬಾಳ ಕೆಟ್ಟ ಅನಿಸ್ತು. ಸಿಟ್ಟು ಬಂತು. ಸಿಟ್ಟಿನ್ಯಾಗ ಒಂದು ನಾಲ್ಕ ಹೊಡೆದೆ. ಊಟ ಮಾಡೋ ತಾಟು ತಿಪ್ಯಾಗ ಒಗಿಬ್ಯಾಡ ಅಂತಾ ಹೇಳಿದೆ. ಆಗ ಆ ಹುಡುಗ ನನ್ನ ಮುಂದ ಏನೂ ಮಾತಾಡಲಿಲ್ಲ. ಆದ್ರ ಮಾಳೆ ಮರುದಿವಸ ಎಲ್ಲಾರ ಮುಂದ “ನಮ್ಮ ಅಪ್ಪಗ ಬುದ್ಧಿ ಇಲ್ಲ. ಅಂವಾ ಇಲ್ಲಿ ನನ್ನ ಸಾಲಿ ಕಲಿಯಾಕ ಬಿಟ್ಟಾನ. ಅಣ್ಣಿಗೇರಿ ಮಾಸ್ತರಗ ಬುದ್ಧಿ ಇಲ್ಲ, ಅಂವಾ ಅದನ್ನ ಮಾಡಬ್ಯಾಡ, ಇದನ್ನ ಮಾಡಬ್ಯಾಡ ಅಂತಾ ಹೇಳ್ತಾನ” ಇಂಥದಕ್ಕ ಏನು ಹೇಳೋದು?

    • ಈ ರೀತಿ ವಿಧ್ಯಾರ್ಥಿಗಳು ಆಗೋದಕ್ಕ ಯಾರು ಕಾರಣ? ತಂದೆ-ತಾಯಿಗಳೋ? ಶಿಕ್ಷಕರೋ?

    ಇಬ್ಬರೂ ಅಲ್ರೀ. ಯಾಕಂದ್ರ ಯಾವ ತಂದ–ತಾಯಿನೂ ಮಕ್ಕಳಿಗೆ ಉಡಾಳಾಗು ಅಂತಾ ಹೇಳಲ್ರೀ. ಹಂಗs ಯಾವ ಶಿಕ್ಷಕನೂ ಹೇಳಂಗಿಲ್ರೀ. ನನಗನಿಸ್ತದ ಇವತ್ತಿನ ದುನಿಯಾದಾಗ ಮಕ್ಕಳನ್ನು ಬೆಳಿಸೋದರಲ್ಲಿ ಎಲ್ಲೋ ಏನೋ ಮಿಸ್ ಆಗಾಕಹತೈತಿ. ಅದು ಏನೂ ಅಂತಾ ಇನ್ನೂ ಹುಡಕೋದರಾಗ ಅದೇವಿ.

    • ಹಾಗಾದ್ರೆ ಇವತ್ತಿನ ಶಿಕ್ಷಣ ಪದ್ಧತಿ ಕಾರಣ ಅಂತಿರೇನು?

    ಹಂಗೂ ಅಲ್ರೀ. ಯಾಕಂದ್ರ ಎಲ್ಲಾ ಮಕ್ಕಳು ತಮ್ಮ ಸಾಲ್ಯಾಗ ’ಮಾರಲ್ ಎಜುಕೇಶನ್’ ಅನೋ ಪಿರಿಯಡ್ನ್ಯಾಗ ಮೊದಲಿನಿಂದಲೂ ನೀತಿಕಥೆ ಕಲ್ಕೋತ ಬಂದಿರ್ತಾರ್ರೀ. ಆದ್ರ ನೀತಿಕಥೆಗಳು ಎಲ್ಲಾ ಮಕ್ಕಳ ಮೇಲೆ ಪರಿಣಾಮ ಬೀರ್ತವ ಅಂತಾ ಹೇಳಾಕ ಬರಂಗಿಲ್ಲ ನೋಡ್ರಿ. ಹಿಂಗಾಗಿ ನೀತಿಕಥೆಗಳು ನೀತಿಕಥೆಗಳಾಗಿಯೇ ಉಳಿದುಬಿಡ್ತವ. ಎಲ್ಲೋ ಒಂದಿಬ್ಬರು ಇವನ್ನ ಅಳವಡಿಸಿಕೊಂಡು ಒಳ್ಳೆಯವರಾಗ್ತಾರ.

    • ನಿಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಯಾರಾದರೂ ಇದ್ದಾರಾ?

    ನಾನು ಎಂಟನೇ ಕ್ಲಾಸಿನಲ್ಲಿರಬೇಕಾದ್ರ ಭಯಂಕರ ಜ್ವರ ಬಂದು ನನ್ನ ಸೊಂಟ ಪೂರ್ತಿ ಸ್ವಾದೀನ ಕಳಕೊಂಡು ನಡ್ಯಾಕ ಬರಲಾರದಂಗಾತು. ಸ್ವಲ್ಪ ದಿವಸ ಆದ ಮೇಲೆ ಜ್ವರ ಬಿಟ್ಟಿತು. ಆದ್ರ ಸೊಂಟದ ನೋವು ಇನ್ನೂ ಹಂಗ ಇತ್ತು. ಸಾಲಿಗೆ ಹೋಗಲಾರದಂಗಾತು. ಆಗ ನಮ್ಮ ಮನ್ಯಾಗಿನಿವರು ’ಇವ ಸಾಲಿಗೆ ಹೋಗೋದು ಹತೈತಿ ಅಂತಾ ಹೇಳಿ ಹಿಂಗ ನಾಟ್ಕ ಮಾಡಾಕ ಹತ್ಯಾನ’ ಅಂತಾ ಆಡಿಕೊಂಡ್ರು. ಆಗ ನನಗೆ ರೋಣದ ಹೈಸ್ಕೂಲಿನ ಹೆಡ್ಮಾಸ್ಟರ್ ಜಿ.ವಿ.ಕುಲಕರ್ಣಿಯವರ ಕಡಿಂದ ಬುದ್ಧಿ ಹೇಳಸಲಿಕ್ಕೆ ನಮ್ಮ ಅಪ್ಪ ಮತ್ತು ನನ್ನ ಪ್ರೈಮರಿ ಸ್ಕೂಲ್ ಟೀಚರ್ ಒಬ್ಬರು ಕರಕೊಂಡು ಹೋದ್ರು. ಅವರು ನನ್ನ ಅಪ್ಪನ್ನ ನೋಡಿ ನೀವೇನಾಗಬೇಕು ಇವಗ ಅಂತಾ ಕೇಳಿದರು. ನಮ್ಮ ಅಪ್ಪ ನಾನು ಈ ಹುಡುಗನ ತಂದಿರೀ ಅಂದ. ನಮ್ಮ ಮಾಸ್ತರನ್ನು ನೋಡಿ ನೀವೇನಾಗಬೇಕು ಇವಗ ಅಂತಾ ಕೇಳಿದರು. ಅವರು ನಾನು ಇವನ ಮಾಸ್ತರು ಅಂದ್ರು. ಅವರು ತಕ್ಷಣ ನನ್ನ ಮುಖವನ್ನು ನೋಡಿ ಕೈ ಬಿಡ್ರಿ ಅವನ್ನ ಅವ ಓದ್ತಾನ. ಓದಿ ಶಾಣ್ಯಾ ಆಗತಾನ. ನಾನು ಅವನ್ನ ಓದಿಸ್ತೇನೆ ಅಂದ್ರು. ತಕ್ಷಣ ನನಗೆ ಆ ವ್ಯಕ್ತಿಯ ಬಗ್ಗೆ ಎಲ್ಲಿಲ್ಲದ ಗೌರವ ಬಂತು. ನನ್ನ, ನನ್ನಪ್ಪ ನಂಬಲಿಲ್ಲ, ನನಗ ಕಲಿಸಿದ ಮಾಸ್ತರು ನಂಬಲಿಲ್ಲ. ಆದ್ರ ಗುರ್ತು ಪರಿಚಯ ಇಲ್ಲದ ಹೊರಗಿನವರು ನಂಬಿದರಲ್ಲಾ ಅಂತಾ ಬಾಳ ಖುಶಿಯಾಯಿತು. What a great man he is! ಅಂತಾ ಅನಿಸ್ತು. ನಾನಾಗ ವಾರಾನ್ನ ತಿಂದು ಓದ್ತಿದ್ದೆ. ವಾರಾನ್ನ ಬಿಡಿಸಿ ಮುಂದ ಅವರು ನನಗೋಸ್ಕರ ಅಂತಾನ ಒಂದು ಬೋರ್ಡಿಂಗ್ ತೆರೆದರು. ಅಲ್ಲಿ ಮೊದಲಿಗೆ ನಾನೂ ಸೇರಿ ಮೂರೇ ಮೂರು ವಿದ್ಯಾರ್ಥಿಗಳಿದ್ದೆವು. ಮುಂದ ಅದು ಬೆಳಕೊಂತ ಹೋತು. ಇವತ್ತು ಅದು ಬಸವೇಶ್ವರ ಬೋರ್ಡಿಂಗ್ ಆಗಿ ಇನ್ನೂ ಐತಿ. ಒಬ್ಬ ಶಿಕ್ಷಕನಲ್ಲಿರಬೇಕಾದ ನಿಜವಾದ ಗುಣ ಅಂದ್ರ ಇದು. ಇಂಥವರನ್ನು ಯಾವತ್ತಾದರೂ ಮರೆಯಲು ಸಾದ್ಯವೆ?

    • ನೀವು ಕಲಿಸುವದರ ಜೊತೆಗೆ ವಿದ್ಯಾರ್ಥಿಗಳಿಂದ ಏನಾದರು ಕಲಿತಿದ್ದಿದೆಯಾ?

    ಖಂಡಿತ ಐತ್ರಿ. ಒಬ್ಬ ಶಿಕ್ಷಕ ಕಲಿಸೋದಕ್ಕಿಂತ ತನ್ನ ವಿದ್ಯಾರ್ಥಿಗಳಿಂದ ಬಾಳ ಕಲಿತಾನ್ರಿ. ನಾನು ಅಂಥಾ ಎರಡು ಪ್ರಸಂಗ ಹೇಳತೇನಿ ಕೇಳ್ರಿ. ನನಗೊಬ್ಬ ಸುರೇಶ್ ಶಾಬಾದಿಮಠ ಅಂತಾ ಹೇಳಿ ಒಬ್ಬ ಸ್ಟೂಡೆಂಟ್ ಇದ್ದ. ಅವನು ಓದೋದರಲ್ಲಿ ಬಾಳ ಮುಂದ ಇದ್ದ ಮತ್ತು ಯಾವಾಗ್ಲೂ ನಂಬರ್ ಹಚ್ಚಿ ಪಾಸ್ ಆಗತಿದ್ದ. ಆದ್ರ ಅವನ ಜತಿ ಓದೋ ಇನ್ನೊಬ್ಬ ಹುಡುಗ ಇವನ್ನ ಓದೋದರಲ್ಲಿ ಹೆಂಗರಾ ಮಾಡಿ ಹಿಂದ ಒಗಿಬೇಕು ಅಂತಾ ಅವನೂ ಬಾಳ ಕಷ್ಟಪಟ್ಟು ಓದ್ತಾ ಇದ್ದ. ಆದ್ರ ಶಾಬಾದಿಮಠನ್ನ ಹಿಂದ ಒಗಿಲಿಕ್ಕೆ ಇವನ ಕೈಲಿಂದ ಆಗ್ತಾನ ಇರಲಿಲ್ಲ. ಇದೇ ಕಾರಣಕ್ಕ ಆ ಹುಡುಗ ಶಾಬಾದಿಮಠನ್ನ ದ್ವೇಷಿಸುತ್ತಿದ್ದ ಮತ್ತು ಆ ವಿಷಯ ಶಾಬಾದಿಮಠನಿಗೂ ಗೊತ್ತಿತ್ತು. ಮುಂದ ನಾವು ಶೈಕ್ಷಣಿಕ ಟೂರ್ ಇಟ್ಟಾಗ ಶಾಬಾದಿಮಠನ ವೈರಿಗೆ ಬರಾಕ ಆಗಲಿಲ್ಲ. ಯಾಕಂದ್ರ ಅವ ಬಾಳ ಬಡವ ಇದ್ದ. ಅದನ್ನು ತಿಳಿದ ಶಾಬಾದಿಮಠ ಖುದ್ದಾಗಿ ತಾನೇ ಕೈಯಿಂದ ರೊಕ್ಕಾ ಹಾಕಿ ಆ ಹುಡುಗನ್ನು ಕರಕೊಂಡು ಬಂದ. ನನಗ ಇದನ್ನು ನೋಡಿ ಬಾಳ ಆಶ್ಚರ್ಯ ಆಯ್ತು. ನಿಮ್ಮ ವೈರಿಗಳನ್ನೂ ಪ್ರೀತಿಸಿ ಎನ್ನುವ ವಿವೇಕಾನಂದರ ಮಾತನ್ನು ಆತ ಪ್ರ್ಯಾಕ್ಟಿಕಲಿ ಮಾಡಿ ತೋರಿಸಿದ್ದ. ನಾವಿನ್ನೂ ವಿವೇಕಾನಂದರ ಆ ಮಾತನ್ನು ಥೆಯರ್ಯಾಟಿಕಲಿ ಪಾಲಿಸ್ತಾ ಇದ್ರ ಅವ ಪ್ರ್ಯಾಕ್ಟಿಕಲಿ ಪಾಲಿಸಿ ತೋರಿಸಿದ್ದ.

    ಇನ್ನೊಬ್ಬಳು ವಿಜಯಲಕ್ಷ್ಮಿ ಅಂಗಡಿ ಅಂತಾ. ಅಕಿ ಗೆಳತಿಯೊಬ್ಬಳು ಹಿರೇಮಠ ಅಂತಾ ಬಾಳ ಬಡವಿ. ವಿಜಯಲಕ್ಷ್ಮಿ ತನ್ನ ಗೆಳತಿ ಪರಿಸ್ಥಿತಿ ನೋಡಿ ತನ್ನ ಅಪ್ಪನಿಗೆ ಹೇಳಿ ಆಕೆಯನ್ನು ತನ್ನ ಮನೆಯಲ್ಲಿಟ್ಟುಕೊಂಡು ಓದಿಸಿದಳು. ಇಂಥ ಔದಾರ್ಯ ಮೆರೆದ ಆ ಹುಡುಗಿಯನ್ನು ಮರೆಯುವದಾದರೂ ಹೇಗೆ? ಇಂಥ ಔನತ್ಯ ಎಷ್ಟು ಜನಕ್ಕೆ ಬರುತ್ತದೆ? ಮಾನವೀಯತೆಯ ಮೇಲೆ ನಾವು ಬರೇ ದೊಡ್ಡ ದೊಡ್ಡ ಭಾಷಣ ಬಿಗಿತೇವಿ, ದೊಡ್ಡ ದೊಡ್ಡ ಪುಸ್ತಕ ಬರಿತೇವಿ. ಆದ್ರ ಎಷ್ಟು ಜನ ನಾವು ಈ ಮಾನವೀಯತೆಯನ್ನು ಮೆರೆದಿದ್ದೇವೆ ಹೇಳ್ರಿ ನೋಡೋಣ? ಇದಕ್ಕಿಂತ ಹೆಚ್ಚಿಂದು ಒಬ್ಬ ಶಿಕ್ಷಕ ವಿದ್ಯಾರ್ಥಿಗಳಿಂದ ಕಲಿಯೋದಾದರು ಏನಿದೆ ಹೇಳ್ರಿ?
    ಈ ಮೇಲಿನ ವಿದ್ಯಾರ್ಥಿಗಳಿಬ್ಬರು ಸಾಮಾನ್ಯರು. ದೊಡ್ಡವರು ಮಾಡೋದು ದೊಡ್ಡದಲ್ಲ. ಸಣ್ಣವರು ಮಾಡೋದು ದೊಡ್ಡದಾಗುತ್ತೆ. ದೊಡ್ಡವರು ಮಾಡಿದ್ದನ್ನು ಹೈಲೈಟ್ ಮಾಡೋದು ಬಿಟ್ಟು ಸಣ್ಣವರ ಔದಾರ್ಯವನ್ನು ಹೈಲೈಟ್ ಮಾಡ್ರಿ. ಆಗ ನಮ್ಮ ದೇಶ ಮುಂದಕ ಬರತೈತಿ.

    • ನೀವು ಬಿ.ಎ. ಬಿ.ಇಡ್ ಅಂತೀರಿ. ಆದರೆ ಅದ್ಹೇಗೆ ಗಣಿತ ಕಲಿಸ್ತೀರಿ?

    ನಾನು ಈ ಆಶ್ರಮ ಶುರು ಮಾಡಿದಾಗ ಎಂಟು ಜನ ಇದ್ದರು. ಆಗ ನಾನು ಬರೀ ಇಂಗ್ಲೀಷ್ ಮತ್ತು ಸಮಾಜ ಹೇಳತಿದ್ದೆ. ಆದ್ರ ನಮ್ಮ ಹುಡುಗರು ಗಣಿತನೂ ಹೇಳು ಅಂದ್ರು. ನಾನು ನನಗ ಗಣಿತ ಬರಂಗಿಲ್ಲ. ಇನ್ನ ನಾ ಹೆಂಗ ನಿಮಗೆ ಹೇಳ್ಲೀ ಅಂದೆ. ಅವರು ಹೆಂಗಾರ ಮಾಡಿ ಹೇಳ್ರಿ ಅಂತಾ ಒತ್ತಾಯ ಮಾಡಾಕ ಶುರು ಮಾಡಿದರು. ಆಗ ನಮ್ಮ ಸಾಲ್ಯಾಗ ಎಸ್.ಪಿ.ಗಾರ್ಗಿ ಅಂತಾ ಒಬ್ಬರು ಗಣಿತ ಮಾಸ್ತರ್ ಇದ್ದರು. ಅವರು ಆಗಲೇ ರಿಟ್ರೈಡ್ ಆಗಿದ್ದರು. ನಾನು ದಿನಾ ಅವರ ಮನಿಗೆ ಹೋಗಿ ಗಣಿತ ಹೇಳಿಸ್ಕೊಂಡು ಬರ್ತಿದ್ದೆ. ಅದನ್ನ ಬಂದು ಹುಡುಗರಿಗೆ ಹೇಳತಿದ್ದೆ. ಹುಡುಗರಿಗೂ ಇಂಟ್ರೆಸ್ಟ್ ಬಂತು. ನಂಗೂ ಇಂಟ್ರೆಸ್ಟ್ ಬಂತು. ಹಿಂಗ ಹೇಳಕೋತ ಹೋದೆ. ಅದ ವರ್ಷsನಾ ನನ್ನ ಕೈಯಾಗ ಕಲಿತ ಒಂದು ಹುಡುಗ S.S.L.C. ಪರೀಕ್ಷೆಯಲ್ಲಿ 10ನೇ ರ್ಯಾಂಕ್ ಬಂದ. ನನಗ ಬಾಳ ಖುಶಿ ಆತು. ಮುಂದ 1981ರಾಗ Text Books ಚೇಂಜ್ ಆದವು. ಆಗ ಕಾಲೇಜು ಮಾಥ್ಸ್ ಇಟ್ರು. ನನಗ ಈ ಮ್ಯಾಥ್ಸ್ ಬರ್ತಾನ ಇರಲಿಲ್ಲ. ಆಗ ನನ್ನ ಕೈಯಾಗ ಕಲಿತ ಹುಡುಗನೊಬ್ಬ ಕಾಲೇಜಿನ್ಯಾಗ ಮ್ಯಾಥ್ಸ್ ಲೆಕ್ಚರರ್ ಆಗಿದ್ದ. ಅವನ್ನ ಕರಿಸಿ ನೀನು ಪಾಠ ಮಾಡು ನಾನು ಕೇಳ್ತೀನಿ ಅಂದೆ. ಅವ ಆ ರೀತಿ ಪಾಠ ಮಾಡ್ಕೋತ ಹೋದ. ನಾನು ಕೇಳ್ಕೋತ ಹೋದೆ. ಎಲ್ಲಾ ಕೇಳಕೊಂಡ ಮ್ಯಾಲೆ ನಾನು ಕಲಿಸೋಕ ಶುರು ಮಾಡಿದೆ. ಹಿಂಗ ನಾನೂ ಒಬ್ಬ ಗಣಿತದ ಮಾಸ್ತರ್ ಆದೆ.



    • ಈ ಸಂದರ್ಭದಲ್ಲಿ ನೀವು ಶಿಕ್ಷಕರಿಗೆ ಏನಾದ್ರೂ ಕಿಮಾತು ಹೇಳ್ತೀರಾ?

    ಅಯ್ಯಯ್ಯೊ! ನಾನು ಕಿವಿಮಾತು ಹೇಳುವಷ್ಟು ದೊಡ್ಡವನಲ್ರಿ. ಆದ್ರ ಒಂದ ಒಂದು ಮಾತು ಏನು ಹೇಳ್ತೀನಿ ಅಂದ್ರ ಪಾಠದ ವಿಷಯದಲ್ಲಿ ನಿಮ್ಮನ್ನು ನಂಬಿಕೊಂಡು ಬಂದ ಮಕ್ಕಳಿಗೆ ಮೋಸ ಮಾಡಬ್ಯಾಡ್ರಿ ಅಷ್ಟ.

    • ನಿಮ್ಮ ನಂತರ ಈ ಆಶ್ರಮದ ಉಸ್ತುವಾರಿ ಯಾರು ವಹಿಸಿಕೊಳ್ಳುತ್ತಾರೆ? ಈ ಪರಂಪರೆ ಹೀಗೆ ಮುಂದುವರಿಯುತ್ತಾ?

    God alone knows! ಮರಿಸ್ವಾಮಿ ಬಿಡಾಕ ನಾ ಏನ್ ಮಠ ಕಟ್ಟೇನೇನ್ರೀ? ನಂಗ ಮೊನ್ನೆ ಒಂದಷ್ಟು ಜನ ಬಂದು ನಿಮ್ಮ ಹಸರಿನ್ಯಾಗ ಒಂದು ಟ್ರಸ್ಟ್ ಮಾಡ್ತೀವಿ ಅಂತಾ ಹೇಳಿದ್ರು. ನಾನು ಬ್ಯಾಡ ಅಂದೆ. ಯಾಕಂದ್ರ ನನ್ನ ಹೆಸರಿನ್ಯಾಗ ಟ್ರಸ್ಟ್ ಮಾಡೋದು, ಸಂಸ್ಥೆ ಕಟ್ಟೋದು ನಂಗ ಇಷ್ಟ ಇಲ್ಲ. ಯಾಕಂದ್ರ ಒಂದು ಟ್ರಸ್ಟ್ ಆಂತಾದ್ರ ಮುಂದ ಅದಕ ಒಬ್ಬ ಪ್ರಸಿಡೆಂಟ್ ಅಂತಾ ಆಗಬೇಕು, ಸೆಕ್ರೇಟರಿ ಅಂತಾ ಆಗಬೇಕು. ಇನ್ನ ಆ ಅಧಿಕಾರಕ್ಕೆ ಜಗಳ ಶುರು ಆಕೈತಿ. ಹಣದ ದುರಪಯೋಗವೂ ಆಗಬಹುದು. ನನ್ನ ಹೆಸರಿನ್ಯಾಗ ಇದೆಲ್ಲಾ ನಡೆಯೋದು ನಂಗೆ ಒಂಚೂರು ಇಷ್ಟ ಇಲ್ಲ. ಹಿಂಗಾಗಿ ನನ್ನ ತರಾನ ಯೋಚ್ನೆ ಮಾಡೋರು ಯಾರದರೂ ಇದನ್ನು ನಡೆಸಿಕೊಂಡು ಹೋದ್ರೂ ಸಂತೋಷ. ಹೋಗದಿದ್ದರೂ ಸಂತೋಷ. (ನಗತೊಡಗಿದರು)


    ಅಣ್ಣಿಗೇರಿ ಮಾಸ್ತರರೊಂದಿಗೆ ಮಾತನಾಡುವದೆಲ್ಲಾ ಮುಗಿದ ಮೇಲೆ “ಸರ್, ನಿಮ್ಮ ಆಶ್ರಮಕ್ಕೆ ಏನಾದರೂ ಬೇಕಾದ್ರೆ ಹೇಳಿ. ಕೊಡಿಸಿ ಹೋಗ್ತೀನಿ. ಇಲ್ಲ ಅಂದ್ರ ದುಡ್ಡು ಕೊಡ್ತಿನಿ ನಿಮಗ ಹೆಂಗ ಬೇಕೋ ಹಂಗ ಉಪಯೋಗಿಸಿಕೊಳ್ಳಿ” ಎಂದು ಚೆಕ್ ಕೊಡಲು ಹೋದಾಗ ಅತ್ಯಂತ್ರ ವಿನಮ್ರರಾಗಿ ಏನೂ ಬೇಡ ಎಂದು ನಿರಾಕರಿಸಿದರು. ನಾನು ಮತ್ತೆ ಮತ್ತೆ ಒತ್ತಾಯಿಸಿದೆ. ಆದರೆ ಅವರು ಏನೂ ಮಾಡಿದರೂ ತೆಗೆದುಕೊಳ್ಳಲಿಲ್ಲ. ಸರ್, ನಿಮಗೆ ನಿಮ್ಮ ಪಿಂಚಣಿಯೊಂದರಿಂದಲೇ ಇಲ್ಲಿರುವ ಮಕ್ಕಳಿಗೆ ಊಟ ಹಾಕುವದು ಕಷ್ಟವಾಗಬಹುದು. ದಯವಿಟ್ಟು ತೆಗೆದುಕೊಳ್ಳಿ ಎಂದೆ. ಅವರು ಸಧ್ಯ ಈಗ ಎಲ್ಲ ಇದೆ. ಮುಂದೆ ಬೇಕಾದರೆ ಕೇಳುತ್ತೇನೆ ಎಂದರು. ನಾನು ನನ್ನ ಬೆಂಗಳೂರಿನ ವಿಳಾಸ ಹಾಗೂ ಫೋನ್ ನಂಬರ್ ಕೊಟ್ಟು ಬಂದೆ.

    ಬರುವಾಗ ತಲೆತುಂಬಾ ಮಾಸ್ತರರದೇ ಧ್ಯಾನ. ಎಂಥ ಅದ್ಭುತ ವ್ಯಕ್ತಿತ್ವ! ಎಂಥ ವಿಶಾಲ ಹೃದಯ! ಎಂಥ ಅದ್ಭುತ ಶಿಕ್ಷಕ! ಇವರ ನಡೆ ನುಡಿ ನಮಗೆಲ್ಲಾ ಮಾದರಿಯಾಗಲಿ, ಸ್ಪೂರ್ತಿಯಾಗಲಿ, ದಾರಿದೀಪವಾಗಲಿ. ಶಿಕ್ಷಕರ ದಿನಾಚಾರಣೆಯಂದು ನಾವು ನಮ್ಮ ಶಿಕ್ಷಕರಿಗೆ ವಿಶ್ ಮಾಡುವದರ ಜೊತೆಗೆ ಇಂಥವರನ್ನು ಹುಡುಕಿ ತೆಗೆದು ಅವರನ್ನು ಸನ್ಮಾನ ಮಾಡಿದರೆ ಆ ಆಚರಣೆಗೊಂದು ಅರ್ಥವಾದರೂ ಸಿಕ್ಕೀತು. ಅಲ್ಲವೇ?

    -ಉದಯ್ ಇಟಗಿ

    ಈ ಲೇಖನ ಸಪ್ಟಂಬರ್ 5, 2011 ರ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ. http://kendasampige.com/article.php?id=4703

    ಫೋಟೋಗಳು: ಶಿವರಾಜ್ ಗೌರಿಪೂರು

    ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ........

  • ಭಾನುವಾರ, ಆಗಸ್ಟ್ 21, 2011
  • ಬಿಸಿಲ ಹನಿ
  • ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ
    ಎಲ್ಲಿ ಮತ್ತು ಹೇಗೆ? – ನನಗೆ ಗೊತ್ತಿಲ್ಲ.
    ಬಹುಶಃ, ನಾನು ನೀನು ಬಿಡಿಸುವ ಚಿತ್ರಕ್ಕೆ
    ಕಲ್ಪನೆಯ ವಸ್ತುವಾಗಬಹುದು.
    ಅಥವಾ ನಿನ್ನ ಕ್ಯಾನ್ವಾುಸ್ ಮೇಲೆ
    ನೀನೆ ಬಿಡಿಸಿಟ್ಟ ನಿಗೂಢ ಗೆರೆಗಳೆಲ್ಲೆಲ್ಲೋ ಅಡಗಿಕೊಂಡು
    ನಿಧಾನವಾಗಿ ಕ್ಯಾನ್ವಾೂಸ್ ತುಂಬಾ ಹರಡಿಕೊಂಡು
    ನಿನ್ನನ್ನೇ ದಿಟ್ಟಿಸಿ ನೋಡುತ್ತಾ ಕುಳಿತುಕೊಳ್ಳಬಹುದು.

    ಪ್ರಾಯಶಃ, ನಾನೊಂದು ಸೂರ್ಯ ರಶ್ಮಿಯಾಗಿ
    ನಿನ್ನ ಬಣ್ಣಗಳ ಆಲಿಂಗನದಲ್ಲಿ ಕಳೆದುಹೋಗಬಹುದು.
    ಇಲ್ಲವೇ ನಿನ್ನ ಕ್ಯಾನ್ವಾ್ಸ್ ಮೇಲೆ
    ನಾನೇ ಬಣ್ಣ ಬಳಿದುಕೊಂಡು
    ಒಂದು ಚಿತ್ರವಾಗಿ ಮೂಡಬಹುದು.
    ಒಟ್ಟಿನಲ್ಲಿ ಖಂಡಿತ ನಿನ್ನ ಸಂಧಿಸುತ್ತೇನೆ
    ಆದರೆ ಹೇಗೆ ಮತ್ತು ಎಲ್ಲಿ? – ನನಗೆ ಗೊತ್ತಿಲ್ಲ.

    ಬಹುಶಃ, ನಾನೊಂದು ನೀರಿನ ಬುಗ್ಗೆಯಾಗಬಹುದು.
    ಬುಗ್ಗೆಯಾಗಿ ಅದರಿಂದ ಉಕ್ಕುವ
    ನೊರೆನೊರೆ ನೀರಿನ ಹನಿಗಳನ್ನು
    ನಿನ್ನ ಎದೆಯ ಮೇಲೆ ಚಿಮುಕಿಸಿ ಉಜ್ಜುತ್ತೇನೆ.
    ಉಜ್ಜುತ್ತಾ ಉಜ್ಜುತ್ತಾ ನಿನ್ನನ್ನು ನನ್ನೆದೆಗೆ ಒತ್ತಿಕೊಂಡು ಮುತ್ತಿಡುತ್ತೇನೆ
    ನನಗೆ ಇದು ಬಿಟ್ಟರೆ ಬೇರೇನೂ ಗೊತ್ತಿಲ್ಲ
    ಏನಾದರಾಗಲಿ, ನಾನು ಮತ್ತೆ ನಿನ್ನೊಂದಿಗಿರುತ್ತೇನೆ.


    ಈ ದೇಹ ಹೋದರೆ
    ಎಲ್ಲವೂ ಹೋದಂತೆ.
    ಆದರೆ ಅದರೊಂದಿಗೆ ಹೆಣೆದುಕೊಂಡ
    ನೆನಪಿನ ದಾರದುಂಡೆಗಳು
    ಮತ್ತೆ ಎಳೆ ಎಳೆಯಾಗಿ ಬಿಚ್ಚಿಕೊಳ್ಳತೊಡಗುತ್ತವೆ.
    ನಾನು ಆ ಎಳೆಗಳನ್ನೆ ಹಿಡಿದುಕೊಂಡು
    ಮತ್ತೆ ದಾರದುಂಡೆಗಳನ್ನಾಗಿ ಸುತ್ತುತ್ತೇನೆ.
    ಸುತ್ತುತ್ತಾ ಸುತ್ತುತ್ತಾ ಅಲ್ಲಿ ನಿನ್ನ ಕಾಣುತ್ತೇನೆ.
    ಆ ಮೂಲಕ ಮತ್ತೆ ನಿನ್ನನ್ನು ಬಂದು ಸೆರುತ್ತೇನೆ..

    ಮೂಲ ಪಂಜಾಬಿ; ಅಮೃತಾ ಪ್ರೀತಂ
    ಇಂಗ್ಲೀಷಿಗೆ: ನಿರುಪಮಾ ದತ್ತ
    ಕನ್ನಡಕ್ಕೆ: ಉದಯ್ ಇಟಗಿ
    (ಕವಯತ್ರಿ ಅಮೃತಾ ಪ್ರೀತಂ ಕಾಯಿಲೆಯಿಂದ ಹಾಸಿಗೆ ಹಿಡಿದಾಗ ತನ್ನ ಪತಿ ಇಮ್ರೋಜ್ ಗೋಸ್ಕರ ಈ ಕವನ ಬರೆದಿದ್ದು. ಇಮ್ರೋಜ್ ಒಬ್ಬ ಚಿತ್ರಕಲಾವಿದನಾಗಿದ್ದ.)




    ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು - ನನ್ನದಲ್ಲದ ಹೆಸರಿನಲ್ಲಿ ಬರೆಯುವ ಖುಶಿ!

  • ಶುಕ್ರವಾರ, ಜುಲೈ 01, 2011
  • ಬಿಸಿಲ ಹನಿ


  • ಈ ಜಗತ್ತಿನಲ್ಲಿ ಹೆಸರಿಲ್ಲದವರು ಯಾರು ಇದ್ದಾರೆ ಹೇಳಿ? ಎಲ್ಲರಿಗೂ ಏನಾದರೊಂದು ಹೆಸರಿದ್ದೇ ಇರುತ್ತದಲ್ಲವೆ? ಹೀಗಾಗಿ ಎಲ್ಲರಿಗೂ ಇರುವಂತೆ ನಂಗೂ ಒಂದು ಹೆಸರು ಅಂತಾ ಇದೆ. ನಂಗೂ ನನ್ನದೇ ಆದಂತ ಒಂದು ಅಸ್ಥಿತ್ವ, ಊರು-ಕೇರಿ, ದೆಸೆ-ದಿಕ್ಕು ಎಲ್ಲ ಇವೆ. ಜೊತೆಗೆ ಒಂದಿಷ್ಟು ಬಂಧುಗಳು, ಹಿತೈಷಿಗಳು, ಗೆಳೆಯರು, ಶತ್ರುಗಳು ಎಲ್ಲರೂ ಇದ್ದಾರೆ. ಆದರೂ ನಾನೊಬ್ಬ ಅನಾಮೇಧಯ! ಹಾಗಂತ ನನ್ನನ್ನು ನಾನೇ ಕರೆದುಕೊಂಡಿದ್ದೇನೆ. ಹೆಸರಿದ್ದೂ ‘ನಾನೊಬ್ಬ ಅನಾಮೇಧಯ’ ಅಂತಾ ಹೇಳಿಕೊಳ್ಳುವದರಲ್ಲಿನ ನಿಜವಾದ ಖುಶಿ, ಆತ್ಮತೃಪ್ತಿ, ಪ್ರಾಮಾಣಿಕತೆ ಬೇರೆ ಯಾವುದರಲ್ಲೂ ಸಿಗುವದಿಲ್ಲ. ಏಕೆಂದರೆ ನಮ್ಮದಲ್ಲದ ಹೆಸರಿನಲ್ಲಿ ನಾವು ಬರೆದಾಗಲೇ ನಾಚಿಕೆ, ಮಾನ, ಅಪಮಾನಗಳ ಹಂಗನ್ನು ತೊರೆದು ಎಲ್ಲವನ್ನು ಬಿಚ್ಚಿಟ್ಟು ಬೆತ್ತಲಾಗೋಕೆ ಸಾಧ್ಯ. ನಾವು ಬದುಕುತ್ತಾ ಬದುಕುತ್ತಾ ನಾವಾಗಿ ಬದುಕಲಾಗುವದಿಲ್ಲ. ಅಥವಾ ಪರಿಸ್ಥಿತಿಗಳು ನಮ್ಮನ್ನು ಹಾಗೆ ಬದುಕಲು ಬಿಡುವದಿಲ್ಲ. ನಾವೆಲ್ಲಾ ಬದುಕುವದು ಒಳಗೊಂದು ಹೊರಗೊಂದರಂತೆ! ನಾವು ಎಷ್ಟೇ ನಾವು ನಾವಾಗಿ ಬದುಕುತ್ತೇವೆಂದರೆ ಅದು ಸಾಧ್ಯವಾಗುವದೇ ಇಲ್ಲ. ಒಂದೊಂದು ಸಾರಿ ನಮ್ಮೊಳಗೆ ನಾವೇ ಪ್ರಾಮಾಣಿಕರಾಗಿರುವದು ಕಷ್ಟವಾಗುತ್ತದೆ. ಹೀಗಾಗಿ ಈ ಬರಹದಲ್ಲಾದರೂ ನನ್ನೊಳಗನ್ನು ಒಮ್ಮೆ ಬಿಚ್ಚಿ ಬೆತ್ತಲಾಗಬೇಕು, ನನ್ನ ಸಾಚಾತನವನ್ನು ನಾನೇ ಬಯಲಿಗೆಳೆಯಬೇಕು, ನನ್ನ ಅಂತರಂಗದೊಡನೆ ನಾನೇ ಮುಖಾಮುಖಿಯಾಬೇಕು ಹಾಗೂ ಆ ಮೂಲಕ ನನ್ನನ್ನು ಇನ್ನೊಮ್ಮೆ ನಾನೇನೆಂದು ಕಂಡುಕೊಳ್ಳಬೇಕಾಗಿದೆ. ಹಾಗೆಂದೇ ಈ ಡೈರಿ ಬರೆಯುತ್ತಿದ್ದೇನೆ......

    ಹೀಗೆ ನನ್ನನ್ನು ನಾನು ನಾನಿರುವಂತೆ ನನ್ನ ನಿಜ ನಾಮಧೇಯದಲ್ಲಿ ಬಿಚ್ಚಿಟ್ಟರೆ ನನ್ನ ಹೆಸರಿಗೊಂದು ಕಳಂಕ ಅಂಟಿಕೊಳ್ಳಬಹುದು ಎಂಬ ಆತಂಕ ನನಗಿದೆ. ಅದು ನನಗಿಷ್ಟವಿಲ್ಲ. ಇಷ್ಟವಿಲ್ಲ ಎನ್ನುವದಕ್ಕಿಂತ ಎಲ್ಲವನ್ನೂ ಬಿಚ್ಚಿಟ್ಟು ನಿಮ್ಮ ಮುಂದೆ ಬೆತ್ತಲಾಗುವ ಧೈರ್ಯ ನನಗಿಲ್ಲ. ಅಥವಾ ನನ್ನ ಬಗ್ಗೆ ಎಲ್ಲವನ್ನೂ ತಿಳಿಸಿ ಆಮೇಲಿಂದ ನಿಮ್ಮೊಂದಿಗೆ ಮುಜುಗುರಕ್ಕೀಡಾಗುವ ಪ್ರಸಂಗಗಳನ್ನೆದುರಿಸುವ ತಾಕತ್ತೂ ನನಗಿನ್ನೂ ಬಂದಿಲ್ಲ. ಒಂದು ವೇಳೆ ನಾನು ನನ್ನ ನಿಜವಾದ ಹಸರಿನಲ್ಲಿಯೇ ಬರೆದೆನೆಂದು ಇಟ್ಟುಕೊಳ್ಳಿ. ಆಗ ನನ್ನ ನೇರತನ, ಪ್ರಾಮಾಣಿಕತೆಯನ್ನು ನೀವು ಈಗ ಒಪ್ಪಿಕೊಂಡರೂ ಮುಂದೆ ಎಂದಾದರೂಂದು ದಿನ ಅದನ್ನು ಎತ್ತಿ ಆಡುವ, ಆಡಿಕೊಳ್ಳುವ, ಛೇಡಿಸುವ, ಛೇದಿಸುವ, ಚುಡಾಯಿಸುವ ಇಲ್ಲವೇ ಗೇಲಿ ಮಾಡುವ ಸಂಭವನೀಯತೆ ಇರುತ್ತದಾದ್ದರಿಂದ ನಾನು ನನ್ನದಲ್ಲದ ಹೆಸರಿನಲ್ಲಿ ಬರೆಯುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ನನ್ನ ಬಗ್ಗೆ ಬರೆದುಕೊಳ್ಳಬೇಕಾದರೆ ಸಹಜವಾಗಿ ನನ್ನ ಆಪ್ತವಲಯದವರ, ಬಂಧುಗಳ, ಸ್ನೇಹಿತರ ಬಗ್ಗೆಯೂ ಒಂಚೂರು ಹೇಳಬೇಕಾಗುತ್ತದೆ. ನಾನು ಹೀಗೆ ನೇರಾ ನೇರಾ ಅವರೆಲ್ಲರ ಅಪ್ಪಣೆಯಿಲ್ಲದೆ ಅವರ ಬಗ್ಗೆ ಬರೆದರೆ ಅವರಿಗೆ ಖಂಡಿತ ನೋವಾಗುತ್ತದೆ. ಒಂದು ವೇಳೆ ಅಪ್ಪಣೆ ಸಿಕ್ಕರೂ ತಮ್ಮ ಬಗ್ಗೆ ಕೆಟ್ಟ ಸಂಗತಿಗಳು ದಾಖಲಾಗುವದನ್ನು ಅವರು ಸಹಿಸಲಾರರು. ಏಕೆಂದರೆ ಅವರಿಗೆ ಅವರ ತಪ್ಪು-ಒಪ್ಪುಗಳು, ಅಂಕುಡೊಂಕುಗಳು, ಓರೆಕೋರೆಗಳು ಬಹಿರಂಗವಾಗುವದು ಇಷ್ಟವಾಗುವದಿಲ್ಲ. ಜಗತ್ತು ಇರುವದೇ ಹಾಗೆ! ಜನ ತಮ್ಮ ತಪ್ಪುಗಳನ್ನು ಎತ್ತಿ ತೋರಿಸಿ, ತಿದ್ದಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಆದರೆ ಹಾಗೆ ತೋರಿಸ ಹೊರಟರೆ ಖಂಡಿತ ಅವರಿಗದು ಇಷ್ಟವಾಗುವದಿಲ್ಲ. ಇನ್ನು ತಿದ್ದಿಕೊಳ್ಳುವ ಮಾತಂತೂ ದೂರವೇ ಉಳಿಯಿತು. ಇದು ನಾನು ಬುದ್ಧಿ ಬಂದಾಗಿನಿಂದ ಕಂಡುಕೊಂಡ ಸತ್ಯ! ಮೇಲಾಗಿ ನನಗೂ ಅವರ ಬಗ್ಗೆ ಹಾಗೆಲ್ಲಾ ಖುಲ್ಲಂಖುಲ್ಲಾ ಬರೆದು ಅವರಿಗೆ ಮುಜುಗುರವನ್ನಾಗಲಿ, ಕಸಿವಿಸಿಯನ್ನಾಗಲಿ ಉಂಟುಮಾಡಲು ಇಷ್ಟವಿಲ್ಲ.

    ಹೀಗಾಗಿ ನಾನು ಅನಾಮೇಧಯ ಎಂಬ ಹಸರಿನಲ್ಲೇ ನನ್ನ ಡೈರಿಯನ್ನು ಬರೆಯುತ್ತೇನೆ. ಬೇಕಾದರೆ ನೀವು ನಿಮ್ಮ ಗುರುತಿಗೋಸ್ಕರ ನನ್ನನ್ನು ‘ಇಂತಿಂಥಾ ಜಿಲ್ಲೆಯ ಇಂತಿಂಥಾ ತಾಲೂಕಿನ ಇಂತಿಪ್ಪ ಪುಟ್ಟಹಳ್ಳಿಯಲ್ಲಿ ಇಂತೆಂಬವರಿಗೆ ಹುಟ್ಟಿದ ಇಂತಿಪ್ಪ ಎಂಬಾತ ಈಗ ಈ ಡೈರಿಯನ್ನು ಬರೆಯುತ್ತಿದ್ದಾನೆ’ ಎಂದು ಗುರುತಿಸಿಕೊಳ್ಳಿ. ನ್ನನ್ನದೇನೂ ಅಭಂತರವಿಲ್ಲ. ಆದರೆ ನಾನ್ಯಾರಿರಬಹುದು ಎಂದು ತಿಳಿದುಕೊಳ್ಳುವ ಹುಚ್ಚು ಸಾಹಸಕ್ಕೆ ಮಾತ್ರ ಕೈ ಹಾಕಬೇಡಿ. ಒಂದು ವೇಳೆ ಹುಡುಕಲು ಪ್ರಯತ್ನಪಟ್ಟರೂ ನಾನು ಹೊರಗೆಲ್ಲಿ ಸಿಗುವದಿಲ್ಲ. ಏಕೆಂದರೆ ನಾನು ನಿಮ್ಮೊಳಗೇ ಅಡಗಿ ಕುಳಿತಿದ್ದೇನೆ. ಇಲ್ಲಿ ನಾನು ಬರೆದುಕೊಳ್ಳುವದು ನನ್ನ ಬಗ್ಗೆಯೇ! ಆದರೆ ಮನುಷ್ಯ ಸದಾ ಒಂಟಿಯಾಗಿರಲು ಸಾಧ್ಯವಿಲ್ಲ ನೋಡಿ. ಹೀಗಾಗಿ ನನ್ನೊಂದಿಗೆ ನನ್ನ ಒಂದಿಷ್ಟು ಗೆಳೆಯರು, ಗೆಳತಿಯರು, ಬಂಧುಗಳು ಹಾಗು ಇತರೆ ಜನರು ಆಗಾಗ್ಗೆ ಈ ಡೈರಿಯಲ್ಲಿ ಬಂದು ಹೋಗುತ್ತಾರೆ. ಆಫ್ಕೋರ್ಸ್, ಅವರಿಗೂ ನನ್ನಂತೆಯೇ ಹೆಸರಿದೆಯಾದರೂ ಅವರನ್ನು ಅವರ ನಿಜದ ಹೆಸರಿನಲ್ಲಿ ಕರೆದು ಅವರ ಹೆಸರುಗಳನ್ನು ಬಹಿರಂಗಪಡಿಸುವದಿಲ್ಲ. ನಿಮಗೆ ಓದುವಾಗ ನಿಮ್ಮ ತಿಳುವಳಿಕಿಗಿರಲಿ ಹಾಗೂ ನಿಮಗೆ ಅರ್ಥಮಾಡಿಕೊಳ್ಳಲು ಯಾವುದೇ ಗೊಂದಲವಾಗಬಾರದೆಂದು ಅವರಿಗೆಲ್ಲಾ ಸುಳ್ಳು ಸುಳ್ಳು ಹೆಸರುಗಳನ್ನು ನೀಡಿದ್ದೇನೆ.

    ನನಗೆ ಮೊದಲಿನಿಂದಲೂ ಒಂದು ಆಸೆಯಿತ್ತು: ನಾನಿರುವಂತೆ ನನ್ನ ಬಗ್ಗೆ ಬರೆದುಕೊಳ್ಳಬೇಕೆಂದು. ಅದು ಇವತ್ತು ಕೂಡಿ ಬಂದಿದೆ. ಬರೆಯುತ್ತಾ ಬರೆಯುತ್ತಾ ಯಾವುದೇ ಮುಚ್ಚುಮರೆಯಿಲ್ಲದೆ ನನ್ನೊಳಗನ್ನು ಒಮ್ಮೆ ನಿಮ್ಮ ಮುಂದೆ ತೆರೆದಿಡಬೇಕು, ನಿಮ್ಮೊಡನೆ ಒಮ್ಮೆ ಹಂಚಿಕೊಳ್ಳಬೇಕು, ಹಂಚಿ ಹಗುರಾಗಬೇಕು, ನೀವದನ್ನು ಕೇಳುತ್ತಾ ಕೇಳುತ್ತಾ ನಿಮ್ಮನ್ನು ನೀವು ನನ್ನೊಂದಿಗೆ ಗುರುತಿಸಕೊಳ್ಳಬೇಕು ಎಂದು. ಏಕೆಂದರೆ ನಾನು ಎಂಬುದು ಬರಿ ನಾನು ಮಾತ್ರವಲ್ಲ. ಅಲ್ಲಿ ನೀವಿದ್ದೀರಿ. ಅವನಿದ್ದಾನೆ. ಅವಳಿದ್ದಾಳೆ. ಅವರಿದ್ದಾರೆ, ಇವರಿದ್ದಾರೆ. ಇನ್ನೂ ಯಾರ್ಯಾರೋ ಇದ್ದಾರೆ. ಹೀಗಾಗಿ ನನ್ನಲ್ಲಿ ನೀವು ನಿಮ್ಮದೇ ಪ್ರತಿಬಿಂಬವನ್ನು, ನಿಮ್ಮ ಗೆಳೆಯ, ಗೆಳತಿಯರ ಪ್ರತಿಬಿಂಬಗಳನ್ನು ಅಥವಾ ನಿಮಗೆ ಹತ್ತಿರದವರ ಪ್ರತಿಬಿಂಬಗಳನ್ನು ಕಂಡರೆ ಅಚ್ಚರಿಯೇನಿಲ್ಲ. ಅಷ್ಟಕ್ಕೂ ನಾನಿಲ್ಲಿ ಬರೆಯುವದಾದರೂ ಏನನ್ನು? ನನ್ನ ಒಂದಿಷ್ಟು ಕನಸು-ಕನವರಿಕೆಗಳನ್ನು, ನೆನಪು-ನೇವರಿಕೆಗಳನ್ನು, ತವಕ-ತಲ್ಲಣಗಳನ್ನು, ನೋವ-ನಲಿವುಗಳನ್ನು, ಆಸೆ-ನಿರಾಶೆಗಳನ್ನು, ನನ್ನೊಳಗೇ ಹುಟ್ಟಿ ಸಾಯುವ ನನ್ನ ಒಂದಿಷ್ಟು ದ್ವಂದಗಳನ್ನು, ತಳಮಳಗಳನ್ನು, ಬದುಕಿನ ವಿಪರ್ಯಾಸಗಳನ್ನು ಹೀಗೆ ಇನ್ನೂ ಏನೇನೋ..........ಜೊತೆಗೆ ನನ್ನೊಳಗಿನ ಒಂದಷ್ಟು ಪುಳಕವನ್ನು, ಆತ್ಮವಂಚನೆಯನ್ನು, ಈರ್ಷೆಯನ್ನು, ಅಸಹಾಯಕತೆಯನ್ನು ಮತ್ತು ಯಾರೊಂದಿಗೂ ಹಂಚಿಕೊಳ್ಳಲಾಗದೆ ನನ್ನೊಳಗೇ ಬಚ್ಚಿಟ್ಟ ನನ್ನ ಒಂದಿಷ್ಟು ಪ್ರೇಮ-ಕಾಮಗಳನ್ನು ಹಾಗೂ ಮನುಷ್ಯ ಸಹಜ ದೌರ್ಬಲ್ಯಗಳಾದ ನನ್ನ ಸಿಟ್ಟು, ಆಕ್ರೋಶಗಳನ್ನು.

    ಅಂದಹಾಗೆ ನಾನಿಲ್ಲಿ ಎದ್ದೆ, ಕೂತೆ, ತಿಂದೆ, ತಿರುಗಾಡಿದೆ ಎಂಬಂತಹ ನೀರಸ ವಿಷಯಗಳನ್ನು ಬರೆಯುಲು ಹೋಗುವದಿಲ್ಲ. ನಾ ಕಂಡಿದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ನನಗೆ ಬಿಡುವಾದಾಗ ನೇರಾನೇರ ದಾಖಲಿಸುತ್ತಾ ಹೋಗುತ್ತೇನಷ್ಟೆ. ಅದರಲ್ಲಿ ವರ್ತಮಾನ, ಭೂತ, ಭವಿಷತ್ ಕಾಲದ ಸಂಗತಿಗಳೆಲ್ಲಾ ಅಡಗಿರುತ್ತವೆ. ನೀವು ಬೇಕಾದರೆ ನನ್ನನ್ನು ಮೂರ್ಖನೆನ್ನಿ, ಹುಚ್ಚನೆನ್ನಿ, ವಿಕ್ಷಿಪ್ತ ಮನಸ್ಸಿನವನೆನ್ನಿ ಏನು ಬೇಕಾದರೂ ಅನ್ನಿ. ಐ ಡೋಂಟ್ ಕೇರ್!

    ಮತ್ತೊಂದು ವಿಷ್ಯ. ಒಬ್ಬ ಮನುಷ್ಯನ ಬದುಕಿನಲ್ಲಿ ಕೆಲವೊಂದಿಷ್ಟ ದಿನಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ದಿನಗಳು ಪ್ರಮುಖವಾಗಿರುವದಲ್ಲಿವಾದ್ದರಿಂದ ನಾನು ನನ್ನ ಡೈರಿಯಲ್ಲಿ ದಿನಾಂಕವನ್ನು ನಮೂದಿಸುವ ಗೋಜಿಗೆ ಹೋಗಿಲ್ಲ. ಏನಾದರೊಂದು ಮಹತ್ತರವಾದದ್ದು ನಡೆದ ದಿನವನ್ನು ಮಾತ್ರ ಆ ದಿನಾಂಕ ಸಮೇತ ನಮೂದಿಸುತ್ತೇನೆ.

    ಇನ್ನೊಂದು ವಿಷ್ಯ: ಮನುಷ್ಯರ ಬಗ್ಗೆ ಆಸಕ್ತಿಯಿರಬೇಕೇ ಹೊರತು ಕುತೂಹಲವಿರಬಾರದು. ಇಷ್ಟು ಸಾಕಲ್ಲವೆ? ಸಧ್ಯಕ್ಕೆ ಈ ಡೈರಿಯನ್ನು ಮುಚ್ಚಿಡಿ. ಮತ್ತೆ ಬಿಡುವಾದಾಗ ಮತ್ತೊಂದು ವಿಷಯವನ್ನು ಬರೆದಿಟ್ಟಿರುತ್ತೇನೆ. ಆಗ ಬಂದು ಓದಬಹುದು. ಅಲ್ಲಿಯವರೆಗೆ ಬೈ ಬೈ.......

    ‘ಪುಟ್ಟಕ್ಕನ ಹೈವೇ’ ನಲ್ಲಿ ಒಂದಷ್ಟು ಹೊತ್ತು..............

  • ಭಾನುವಾರ, ಮೇ 29, 2011
  • ಬಿಸಿಲ ಹನಿ

  • ಮೊಟ್ಟ ಮೊದಲಿಗೆ ನಾನು ಬಿ. ಸುರೇಶ್ ಅವರಿಗೆ ಒಂದು ಹ್ಯಾಟ್ಸಾಫ್ ಹೇಳುತ್ತೇನೆ-ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಪುಟ್ಟಕ್ಕನ ಮೆಡಿಕಲ್ ಕಾಲೇಜು’ ಎನ್ನುವ ಸಣ್ಣಕತೆಯೊಂದನ್ನು ‘ಪುಟ್ಟಕ್ಕನ ಹೈವೇ’ ಎಂಬ ಸುಮಾರು ಎರಡು ಗಂಟೆಗಳಷ್ಟು ಅದ್ಭುತ ಸಿನಿಮಾವೊಂದನ್ನಾಗಿ ಮಾರ್ಪಡಿಸಿದ್ದಕ್ಕೆ. ಬಿ.ಸುರೇಶ್ ಅವರ ಬಹಳಷ್ಟು ಟೀವಿ ಧಾರಾವಾಹಿಗಳು ಹತ್ತರಲ್ಲಿ ಹನ್ನೊಂದಾಗಿ ಹೊರಬರುತ್ತವೆಯಾದರೂ ಅವರು ಆಗೊಮ್ಮೆ ಈಗೊಮ್ಮೆ ತಯಾರಿಸುವ ಸಿನಿಮಾಗಳು ಅತ್ಯದ್ಭುತವಾಗಿರುತ್ತವೆ. ಈ ಹಿಂದೆ ಅವರು ತಯಾರಿಸಿದ ‘ಅರ್ಥ’ ಸಿನಿಮಾ ಕೂಡ ಒಳ್ಳೆಯ ಸಿನಿಮಾವಾಗಿದ್ದು, ಅದು ಮೊದಲ ಅತುತ್ತಮ ಚಲನಚಿತ್ರವೆಂದು ರಾಜ್ಯ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತ್ತು. ಈ ಸಿನಿಮಾದ ನಾಯಕ ಎಲ್ಲವನ್ನೂ ಎಲ್ಲರನ್ನೂ ಅರ್ಥಮಾಡಿಕೊಳ್ಳಲು ಹೋಗಿ ಕೊನೆಗೆ ಏನೂ ಅರ್ಥವಾಗದೆ ಕಂಗಾಲಾಗುತ್ತಾನೆ. ಆ ಮೂಲಕ ಸುರೇಶ್ ಅವರು ಇಲ್ಲಿ ಮನುಷ್ಯರು ಹಾಗೂ ಅವರ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲುಹೋದಷ್ಟೂ ಅವರು ಸಂಕೀರ್ಣವಾಗುತ್ತಾ ಹೋಗುತ್ತಾರೆ ಎನ್ನುವ ಸಂದೇಶವನ್ನು ಕೊಡುತ್ತಾರೆ. ಆದರೆ ಈ ಸಾರಿ ಸಣ್ಣಕತೆಯೊಂದನ್ನು ತೆಗೆದುಕೊಂಡು ಅದನ್ನು ಸಮಕಾಲೀನ ಸಮಸ್ಯೆಗಳಿಗೆ ಸರಿಹೊಂದುವಂತೆ ಮಾರ್ಪಡಿಸಿ ಅದನ್ನೊಂದು ಒಳ್ಳೆ ಸಿನಿಮಾವನ್ನಾಗಿ ತಯಾರಿಸಿದ್ದಾರೆ. ಇದೀಗ ಅದು ಬಿಡುಗಡೆಯಾಗಿದ್ದು ಹಾಗೂ ಈಗಷ್ಟೆ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದು ನಮಗೆಲ್ಲಾ ಗೊತ್ತೇ ಇದೆ. ಬಿ.ಸುರೇಶ್ ಅವರೇ ಹೇಳುವಂತೆ ಅವರ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿದ್ದು ಹಾಗೂ ರಾಷ್ಟ್ರಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದು ಕೇವಲ ಕಾಕತಾಳಿಯ ಮಾತ್ರ.

    ‘ಪುಟ್ಟಕ್ಕನ ಹೈವೇ’ ಹೆಸರೇ ಹೇಳುವಂತೆ ಹೈವೇ ಬರುವದಕ್ಕಿಂತ ಮುಂಚೆ ಪುಟ್ಟಕ್ಕನ ಬದುಕಿನ ಆಸು ಪಾಸುಗಳು ಹೇಗಿದ್ದವು ಮತ್ತು ಅವು ಹೈವೇ ಬಂದಮೇಲೆ ಹೇಗಾದವು ಎನ್ನುವದನ್ನು ತುಂಬಾ ಕಲಾತ್ಮಾಕವಾಗಿ ಕಟ್ಟಿಕೊಡುತ್ತದೆ. ಅದನ್ನು ಸುಂದರ ನಿರೂಪಣೆ ಮತ್ತು ಅರ್ಥಗರ್ಭಿತ ದೃಶ್ಯ ರೂಪಕಗಳೊಂದಿಗೆ ಸುರೇಶ್ ಮತ್ತಷ್ಟು ಮೆರಗುಗೊಳಿಸುತ್ತಾರೆ. ಆಧುನಿಕ ಅಭಿವೃದ್ಧಿಯ ನೆಪದಲ್ಲಿ ಏನೊಂದು ಅರಿಯದ ಪುಟ್ಟಕ್ಕ ಮತ್ತು ಅವಳಂಥವರ (ಮುಖ್ಯವಾಗಿ ರೈತರ) ಶೋಷಣೆ ಹೇಗೆ ಆಗುತ್ತದೆ ಎನ್ನುವದನ್ನು ಹೇಳುತ್ತಲೇ ಎಲ್ಲರೂ ಸಮಾನರೇ ಎಂದು ಸಾರುವ ಈ ದೇಶದಲ್ಲಿ ಬಡವರ ಪಾಲಿಗೆ ನ್ಯಾಯ ಎನ್ನುವದು ಯಾವಾಗಲೂ ಹೇಗೆ ಮರಿಚಿಕೆಯಾಗಿ ಉಳಿಯುತ್ತದೆ ಎನ್ನುವದನ್ನು ನೋಡಿದರೆ ನಮ್ಮ ಕರುಳು ಚುರ್ರೆನ್ನುತ್ತದೆ. ಬಡವರ ಶೋಷಣೆ, ಹತಾಶೆ, ನೋವುಗಳು ನಮ್ಮನ್ನು ತಟ್ಟುತ್ತಿದ್ದಂತೆಯೇ ನಮಗೆ ಅವರ ಮೇಲೆ ಅನುಕಂಪ ಬರುವದು ಸಹಜ. ಆದರೆ ಅದರ ಬೆನ್ನ ಹಿಂದೆಯೇ ದಿನಾ ಕಾರು, ಬೈಕಲ್ಲಿ ಓಡಾಡುವವ ನಮ್ಮಂತವರಿಗೆ ಇಂಥದೊಂದು ಹೈವೇ ಬೇಕೆನಿಸುವದು ಅಷ್ಟೇ ಸಹಜ. ಆ ಸಹಜ ಹಂಬಲದ ಹಿಂದೆ ಪುಟ್ಟಕ್ಕನಂತವರ ತ್ಯಾಗ, ಶೋಷಣೆ ಹಾಗೂ ನೋವು ಇರುತ್ತದೆ ಎಂದು ನಮಗೆ ಒಂಚೂರು ಅನಿಸುವದೇ ಇಲ್ಲ. ಅದನ್ನು ನಮಗೆ ಮನದಟ್ಟು ಮಾಡಲೆಂದೇ ನಿರ್ದೇಶಕ ಪುಟ್ಟಕ್ಕನ ಕಥೆಯನ್ನು ಅದ್ಭುತವಾಗಿ ಹೇಳುತ್ತಾ ಹೋಗುತ್ತಾರೆ. ಚಿತ್ರದಲ್ಲಿ ಪುಟ್ಟಕ್ಕ ಹೇಳುತ್ತಾಳೆ- ‘ಈ ಬದುಕಿನ್ಯಾಗೆ ಸೋಲಿನ ಮೇಲೆ ಸೋಲು ಬರ್ತವೆ. ಆದರೆ ಹೋರಾಡೋ ಹುಮ್ಮಸ್ಸು ಮಾತ್ರ ಹೋಗೋದೇ ಇಲ್ಲ ನೋಡು.’ ಆದರೆ ಕೊನೆಯಲ್ಲಿ ಅವಳ ಬದುಕಿಗಿಂತ ಅವಳಿರುವ ವ್ಯವಸ್ಥೆ ಅವಳ ಹುಮ್ಮಸ್ಸನ್ನು ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ. ಅವಳು ಮಾತ್ರವಲ್ಲ ಅವಳಂತೆ ಹೋರಾಡುವ ಎಲ್ಲರೂ ಹುಮ್ಮಸ್ಸು ಕಳೆದುಕೊಂಡು ಪರಿಸ್ಥಿತಿಯೊಂದಿಗೆ ರಾಜಿಮಾಡಿಕೊಂಡು ಹೊಸ ಬದುಕು ಕಟ್ಟಿಕೊಳ್ಳುತ್ತಾರೆ. ಆದರೆ ಪುಟ್ಟಕ್ಕ ಮಾತ್ರ ಇತ್ತ ತನ್ನ ಮೊದಲಿನ ಬದುಕು ಸಿಗದೆ ಅತ್ತ ರಾಜಿಮಾಡಿಕೊಳ್ಳದೆ ದಿಕ್ಕು ತೋಚದವಳಾಗುತ್ತಾಳೆ.

    ‘ಪುಟ್ಟಕ್ಕನ ಹೈವೇ’ ಆರಂಭವಾಗುವದೇ ಅವಳು ಹೈವೇಗುಂಟ ನಡೆದುಕೊಂಡು ಹೋಗುವ ದೃಶ್ಯದೊಂದಿಗೆ. ಹಾಗೆ ನಡೆದುಕೊಂಡು ಹೋಗುತ್ತಲೇ ಅವಳು ಫ್ಲ್ಯಾಶ್ ಬ್ಯಾಕ್ ಗೆ ಜಾರುತ್ತಾಳೆ. ಆ ಹೈವೇ ಬರುವದಕ್ಕಿಂತ ಮುಂಚೆ ಅಲ್ಲಿ ಒಂದಷ್ಟು ಹೊಲ ಮಾಡಿಕೊಂಡು ಅವಳು ತನ್ನ ಗಂಡನೊಟ್ಟಿಗೆ ನೆಮ್ಮದಿಯಿಂದ ಇರುತ್ತಾಳೆ. ಆದರೆ ವಿಧಿಯಾಟವೇನೋ ಗಂಡ ಹೃದಯಾಘಾತದಿಂದ ಸತ್ತುಹೋಗುತ್ತಾನೆ. ಆದರೂ ಅವಳು ಛಲ ಬಿಡದೆ ಅದೇ ಹೊಲದಲ್ಲಿ ಗೇಯ್ಮೆ ಮಾಡಿಕೊಂಡು ತನ್ನ ಮಗಳೊಟ್ಟಿಗೆ ನೆಮ್ಮದಿಯ ಜೀವನ ನಡೆಸುತ್ತಾಳೆ. ಆಮೇಲಿಂದ ಅಲ್ಲೊಂದು ಹೈವೇ ಮಾಡಬೇಕೆಂದು ಸರಕಾರ ತೀರ್ಮಾನಿಸಿದಾಗ ಅವಳು ಮತ್ತು ಇನ್ನಿತರರು ಹೊಲ ಕಳೆದುಕೊಳ್ಳುವ ಪ್ರಸಂಗ ಬರುತ್ತದೆ. ಆಗ ಪ್ರತಿಭಟನೆಗಳು, ಹೋರಾಟಗಳು ಶುರುವಾಗುತ್ತವೆ. ಅದರಲ್ಲಿ ಪುಟ್ಟಕ್ಕನೂ ಭಾಗಿಯಾಗುತ್ತಾಳೆ. ಆದರೆ ದಿನಕಳೆದಂತೆ ಅವಳಿಗೆ ತನಗೆ ಬೆಂಬಲ ಸೂಚಿಸುವವರು ಹಾಗೂ ಸರಕಾರಿ ಅಧಿಕಾರಿಗಳ ಸೋಗಲಾಡಿತನ ಗೊತ್ತಾಗಿ ಮತ್ತಷ್ಟು ಹತಾಶಳಾಗುತ್ತಾಳೆ. ಕೊನೆಯಲ್ಲಿ ತನ್ನ ಮುಂದಿನ ಗತಿಯೇನಾಗುತ್ತದೆ ಎಂದು ಜಿಲ್ಲಾಧಿಕಾರಿಯಿಂದ ತಿಳಿದುಕೊಳ್ಳಲು ಹೋದಾಗ ಅವಳಿಗೆ ಒಂದು ಸತ್ಯ ಗೊತ್ತಾಗುತ್ತದೆ. ಅದೇನೆಂದರೆ ಅವಳು ಮತ್ತು ಅವಳೂರಿನ ಒಂದಷ್ಟು ಜನ ಈ ಹಿಂದೆ ಸರಕಾರ ಅವರಿದ್ದ ಜಾಗದಲ್ಲಿ ಒಂದು ಆಣೆಕಟ್ಟು ಕಟ್ಟಬೇಕೆಂದು ಅವರ ಜಮೀನನ್ನು ಕಿತ್ತುಕೊಂಡು ಬೇರೆ ಕಡೆ ಒಂದಷ್ಟು ಜಮೀನನ್ನು ಪರಿಹಾರ ರೂಪವಾಗಿ ನೀಡಿ ಕೈ ತೊಳೆದುಕೊಂದು ಬಿಡುತ್ತದೆ. ಅವರು ಪಾಲಿಗೆ ಬಂದಿದ್ದು ಪಂಚಾಮೃತ ಎಂದುಕೊಂಡು ಅಲ್ಲಿ ಹೇಗೋ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಪುಟ್ಟಕ್ಕ ಮತ್ತು ಅವಳ ಗಂಡ ಅದನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕು ಎನ್ನುವ ತಿಳುವಳಿಕೆ ಇರದಷ್ಟು ಅಮಾಯಕರು. ಈಗ ಸರಕಾರ ಅಲ್ಲಿ ಹೈವೇ ಮಾಡಬೆಕೆಂದು ಏನೋ ಒಂದಿಷ್ಟು ಪರಿಹಾರ ನೀಡಿ ಮತ್ತೆ ಅವರ ಜಮೀನನ್ನು ಕಿತ್ತುಕೊಳ್ಳಲು ನೋಡುತ್ತದೆ. ಆದರೆ ಪುಟ್ಟಕ್ಕನಿಗೆ ಅವಳ ಹೊಲ ಅವಳ ಹೆಸರಲ್ಲಿಲ್ಲ ಎಂಬ ಕಾರಣಕ್ಕಾಗಿ ಅವಳಿಗೆ ಆ ಪರಿಹಾರ ಸಿಗದೆ ಹೋಗುತ್ತದೆ. ಪುಟ್ಟಕ್ಕ ದಿಗ್ಭ್ರಾಂತಳಾಗಿ ಮುಂದೇನು ಮಾಡಬಹುದೆಂದು ಜಿಲ್ಲಾಧಿಕಾರಿಯನ್ನು ಕೇಳುತ್ತಾಳೆ. ಆಕೆ ಪುಟ್ಟಕ್ಕನಿಗೆ “ಈಗ ನಿನ್ನನ್ನು ಉಳಿಸೋದಕ್ಕೆ ಆ ಮುಖ್ಯಮಂತ್ರಿಯಿಂದ ಮಾತ್ರ ಸಾಧ್ಯ. ನೀನು ಅವರನ್ನೇ ಹೋಗಿ ಕಾಣು” ಎಂದು ಹೇಳುತ್ತಾಳೆ. ಆ ಪ್ರಕಾರ ಪುಟ್ಟಕ್ಕ ಬೆಂಗಳೂರಿಗೆ ಹೊರಡಲು ಅನುವಾಗುತ್ತಾಳೆ. ಹೋಗುವ ಮುನ್ನ ತನಗಿದ್ದ ಒಬ್ಬಳೇ ಒಬ್ಬಳು ಮಗಳನ್ನು ತನ್ನ ಆಪ್ತ ಗೆಳತಿ ಅಂಬಕ್ಕನ ಸುಪರ್ದಿಗೆ ಒಪ್ಪಿಸಿ “ನಾ ಬರೋಗಂಟ ನನ್ನ ಮಗಳು ನಿನ್ನ ಹತ್ರಾನೆ ಇರ್ಲಿ. ನೀನು ಅವಳನ್ನ ಚನ್ನಾಗಿ ನೋಡಿಕೊಳ್ಳತೀಯಾ ಅನ್ನೋ ನಂಬಿಕೆ ನನಗಿದೆ” ಎಂದು ಹೇಳಿ ಆ ಭರವಸೆಯಲ್ಲಿ ಬೆಂಗಳೂರಿಗೆ ಹೊರಡುತ್ತಾಳೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಯ ಮನೆಗೆ ಬರುತ್ತಿದ್ದಂತೆ ಸರಕಾರ ಬಿದ್ದುಹೋಗಿ ಎಲ್ಲರೂ ತಂತಮ್ಮ ಖುರ್ಚಿಯನ್ನು ಉಳಿಸಿಕೊಳ್ಳುವದರಲ್ಲಿ ನಿರತರಾಗಿದ್ದಾರೆ ಇನ್ನು ಅವಳ ಸಮಸ್ಯೆಗೆ ಪರಿಹಾರ ಸೂಚಿಸುವವರು ಅಲ್ಲಿ ಯಾರೂ ಇಲ್ಲ ಎನ್ನುವದು ಗೊತ್ತಾಗುತ್ತದೆ. ಮುಖ್ಯಮಂತ್ರಿಯ ಮನೆಯ ಮುಂದೆ ಒಬ್ಬ ಟೀವಿ ಮಾಧ್ಯಮದ ಪ್ರತಿನಿಧಿಯಿದ್ದಾನೆ. ಅವನು ಈಗಾಗಲೇ ಬಿದ್ದ ಸರಕಾರದ ಬಗ್ಗೆ ವರದಿಯನ್ನು ನೀಡಲು ಬಂದಿದ್ದಾನೆ. ಈ ಹಿಂದೆ ಅವನು ಹೈವೇ ಬರುವದಕ್ಕಿಂತ ಮುಂಚೆ ರೈತರ ಹೋರಾಟದ ಸಂದರ್ಭದಲ್ಲಿ ಪುಟ್ಟಕ್ಕನನ್ನು ಸಂದರ್ಶಿಸಿದ್ದರಿಂದ ಆಕೆ ಅವನಿಗೆ ಗೊತ್ತು. ಅವನನ್ನು ನೋಡಿದವಳೆ ಅವನಿಂದೇನಾದರೂ ತನಗೆ ನ್ಯಾಯ ಸಿಗುತ್ತದಾ ಎಂದು ಪುಟ್ಟಕ್ಕ ಅವನ ಹತ್ತಿರ ತನ್ನ ದುಃಖ ತೋಡಿಕೊಳ್ಳುತ್ತಾಳೆ. ಅವನೋ ಯವುದಕ್ಕೂ ಇರಲಿ ತನ್ನ ಟೀವಿಗೆ ಒಂದು ಒಳ್ಳೆ ಶೋ ಆಗುತ್ತದೆಂದು ಹೀಗ್ಙೀಗೆ ಹೇಳು, ಹೀಗ್ಙೀಗೆ ಅಧಿಕಾರಿಗಳ ವಿರುದ್ಧ ಬಯ್ಯಿ ಎಂದು ಹೇಳಿ ಅವಳು ಹೇಳುವದನ್ನೆಲ್ಲಾ ಶೂಟ್ ಮಾಡಿಕೊಂಡು ನೆಟ್ಟಗೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಪುಟ್ಟಕ್ಕ ಕುಸಿದುಬೀಳುತ್ತಾಳೆ. ಆಮೇಲಿಂದ ಪುಟ್ಟಕ್ಕ ತನ್ನೂರು ಬಿಸಲಳ್ಳಿಗೆ ಬರುವಷ್ಟರಲ್ಲಿ ಊರಲ್ಲಿ ಅದಾಗಲೇ ಹೈವೇ ಬಂದು ಬಹಳಷ್ಟು ಬದಲಾಗಿರುತ್ತದೆ. ತನ್ನ ಹೊಲ ಎಲ್ಲಿ ಎಂದು ಕೇಳುತ್ತಾ ಬರುತ್ತಾಳೆ. ಯಾರೋ ಅವಳ ಗೆಳತಿ ಅಂಬಕ್ಕನ ಮನೆಯನ್ನು ತೋರಿಸುತ್ತಾರೆ. ಪುಟ್ಟಕ್ಕ ಅಂಬಕ್ಕನ ಮನೆಗೆ ಬರುತ್ತಿದ್ದಂತೆಯೇ ಅವಳು ಮತ್ತು ಅವಳ ಗಂಡ ಇಬ್ಬರೂ ಸೇರಿ ಹೈವೇ ಪಕ್ಕದಲ್ಲಿಯೇ ಒಂದು ಡಾಬಾ ತೆರೆದಿದ್ದು ಗೊತ್ತಾಗುತ್ತದೆ. ಪುಟ್ಟಕ್ಕ ವಾಪಾಸು ಬರುವದೇ ಇಲ್ಲ ಎಂದುಕೊಂಡಿದ್ದ ಅಂಬಕ್ಕ ಗೆಳತಿಯನ್ನು ಸಡಗರದಿಂದ ಬರಮಾಡಿಕೊಳ್ಳುತ್ತಾಳೆ. ಪುಟ್ಟಕ್ಕ ಮೊದಲು ತನ್ನ ಮಗಳ ಬಗ್ಗೆ ಕೇಳದೆ ತನ್ನ ಹೊಲ ಎಲ್ಲಿದೆ ಎಂದು ಕೇಳುತ್ತಾಳೆ. ಅದಕ್ಕೆ ಅಂಬಕ್ಕ ಅವಳು ನಿಂತಿರುವ ಜಾಗವೇ ಅವಳ ಹೊಲ ಎಂದು ಹೇಳುತ್ತಾಳೆ. ಆಗ ಅಂಬಕ್ಕನ ಗಂಡ ನಡೆದಿದ್ದಲ್ಲೆವನ್ನು ಹೇಳುತ್ತಾನೆ. ಅವಳು ಬೆಂಗಳೂರಿಗೆ ಹೋದ ಮೇಲೆ ಅವಳ ಹೊಲವನ್ನು ಸರಕಾರದವರು ಆಕ್ರಮಿಸಿಕೊಂಡಿದ್ದು, ಅಲ್ಲಿಂದ ಸರಕಾರ ಬೇಗನೆ ಕಾಮಗಾರಿಯನ್ನು ಆರಂಭಿಸಿದ್ದು, ಹೈವೇ ಅವಳ ಗಂಡನ ಗೋರಿಯ ಮೇಲೆ ಹಾದು ಹೊದದ್ದು ಹಾಗೂ ಈಗ ಅವನು ಅವಳ ಹೊಲದಲ್ಲಿ ಉಳಿದ ನಾಲ್ಕು ಗುಂಟೆ ಜಾಗವನ್ನು ಸರಕಾರದಿಂದ ಕೊಂಡುಕೊಂಡು ಅಲ್ಲೊಂದ ಡಾಬಾ ಅರಂಭಿಸಿದ್ದು ಎಲ್ಲವನ್ನೂ ಹೇಳುತ್ತಾನೆ. ಪುಟ್ಟಕ್ಕ ಇದೆಲ್ಲವನ್ನು ಕೇಳಿ ಜರ್ಝರಿತಳಾಗುತ್ತಿದ್ದಂತೆ ಅವಳಿಗೆ ಹೈವೇ ಕೆಳಗಿನಿಂದ ತನ್ನ ಮಗಳು ಸೆರಗು ಮತ್ತು ಕೂದಲನ್ನು ಸರಿಪಡಿಸಿಕೊಳ್ಳುತ್ತಾ ಬರುವದು ಕಾಣಿಸುತ್ತದೆ. ಅವಳಿಗೆ ತಕ್ಷಣ ತನ್ನ ಮಗಳು ಸೂಳೆಗಾರಿಕೆಗೆ ಇಳಿದಿದ್ದಾಳೆ ಎಂದು ಗೊತ್ತಾಗಿಹೋಗುತ್ತದೆ. ಅಂಬಕ್ಕ ಅಪರಾಧಿ ಪ್ರಜ್ಞೆಯಿಂದ ನಲುಗಿಹೋಗುತ್ತಾ “ನಿನ್ನ ಮಗಳನ್ನು ನಾನು ನಿಂಗೆ ಕೊಟ್ಟ ಮಾತಿನಂತೆ ನೋಡಿಕೊಳ್ಳಲಾಗಲಿಲ್ಲ ಕ್ಷಮಿಸಿಬಿಡೆ ಪುಟ್ಟಕ್ಕ” ಎಂದು ಅಳುತ್ತಾಳೆ. ಪುಟ್ಟಕ್ಕ ಮಾತ್ರ ಉದಾರತಯಿಂದ ಗೆಳತಿಯನ್ನು ಕ್ಷಮಿಸಿ ತನ್ನ ಮಗಳು ಹಾಗೂ ಗೆಳತಿಯನ್ನು ಕರೆದುಕೊಂಡು ಮಣ್ಣುಹಾದಿಯಲ್ಲಿ ನಡೆಯುತ್ತಾ ಹೋಗುತ್ತಾಳೆ. ಇತ್ತಕಡೆ ಹೈವೇ ಮೇಲೆ ಮುಂದಿನ ಎಲೆಕ್ಷನ್ ಗಾಗಿ ಪ್ರಚಾರ ಭರದಿಂದ ಸಾಗುವದನ್ನು ಕಾಣುತ್ತೇವೆ. ಆ ಪ್ರಚಾರದಲ್ಲಿ ಅಂಬಕ್ಕನ ಗಂಡನೂ ಇರುತ್ತಾನೆ.

    ‘ಪುಟ್ಟಕ್ಕನ ಹೈವೇ’ಯಲ್ಲಿ ಸೃಜನಶೀಲ ಮನಸ್ಸೊಂದು ಘಟನೆಯೊಂದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ಆ ಕಥೆಯ ಮೂಲಕ ಒಬ್ಬ ನಿರ್ದೇಶಕನಾದವನು ಹೇಗೆ ತನ್ನ ಆತಂಕಗಳನ್ನು ಬಿಚ್ಚಿಬಿಡಬಲ್ಲ ಎನ್ನುವದನ್ನು ಬಿ. ಸುರೇಶ್ ಸಮರ್ಥವಾಗಿ ತೋರಿಸಿಕೊಟ್ಟಿದ್ದಾರೆ. ಇಲ್ಲಿ ಸುರೇಶ್ ಅಭಿವೃದ್ಧಿ ಬೇಡ ಎಂದು ಹೇಳುತ್ತಿಲ್ಲ. ಆದರೆ ಅಭಿವೃದ್ಧಿಯ ನೆಪದಲ್ಲಿ ನಡೆಯುವ ಡೊಂಬರಾಟಗಳನ್ನು ಹೇಳುತ್ತಲೇ, ಪುಟ್ಟಕ್ಕನಂತ ಮುಗ್ಧ ಜನರ ಬದುಕು ಹೇಗೆ ಮೂರಾಬಟ್ಟಿಯಾಗುತ್ತದೆ ಎನುವದನ್ನು ಮನದಟ್ಟು ಮಾಡುತ್ತಾರೆ. ಇನ್ನು ಚಿತ್ರದಲ್ಲಿ ಬರುವ ರೂಪಕಗಳು ಅದ್ಭುತವಾಗಿವೆ. ಸಾಲಾಗಿ ಹರಿಯುವ ಇರುವೆಗಳು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಗುಳೆ ಹೊರಡುತ್ತಲೇ ಇರಬೇಕಾದ ಮುಗ್ಧ ಜನರನ್ನು, ಬಲೆ ನೇಯುವ ಜೇಡ ಮೇಲಾಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು, ಕಣ್ಣಾಮುಚ್ಚಾಲೆ ಆಡುವ ಮಿಡತೆ ನಮ್ಮ ಅಕ್ಕ ಪಕ್ಕದಲ್ಲೇ ಇರುವ ಮೋಸಗಾರರನ್ನು, ಹಾಗೂ ರಸ್ತೆಯ ಮೇಲೆ ತೆವಳುತ್ತಾ ಸಾಗುವ ಬಸವನಹುಳು ಅಭಿವೃದ್ಧಿಯನ್ನು ಒಪ್ಪಿಕೊಂದು ನಡೆಯುವ ಜನವನ್ನು ಅತ್ಯಂತ ಮಾರ್ಮಿಕವಾಗಿ ಸೂಚಿಸುತ್ತವೆ. ಇನ್ನು ಪಾತ್ರಗಳ ವಿಷಯದ ಬಗ್ಗೆ ಹೆಳುವದಾದರೆ ಶೃತಿ ಪುಟ್ಟಕ್ಕನ ನೋವು ಸಂಕಟ, ತೊಳಲಾಟವೆಲ್ಲವನ್ನು ಚನ್ನಾಗಿ ಅರ್ಥಮಾಡಿಕೊಂಡೇ ಅಭಿನಯಿಸಿದ್ದಾರೆ. ಪ್ರಕಾಶ್ ರೈ ಶನಿಕೃಷ್ಣನಾಗಿ ನಗು ನಗುತ್ತಲೇ ಪುಟ್ಟಕ್ಕನಂತವರ ನಡ ಮುರಿಯುತ್ತಾನೆ. ಇತ್ತ ಅಭಿವೃದ್ಧಿಯ ಪರವೂ ನಿಲ್ಲದೆ ಅತ್ತ ಸಂಪೂರ್ಣವಾಗಿ ವಿರೋಧಿಸದೇ ನಡುವೆ ತನ್ನ ಬೇಳೆ ಬೇಯಿಸಿಕೊಳ್ಳಲು ನೋಡುತ್ತಾನೆ. ಕೊನೆಗೆ ತನ್ನ ಮೂಲ ಐಡೆಂಟಿಯನ್ನೇ ಕಳೆದುಕೊಂಡು ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಳ್ಳುವದರ ಮೂಲಕ ಹೊಸದೊಂದು ಐಡೆಂಟಿಟಿಯನ್ನು ಕಂಡುಕೊಳ್ಳುತ್ತಾನೆ. ಪುಟ್ಟಕ್ಕನ ಗೆಳತಿಯ ಪಾತ್ರದಲ್ಲಿ ಅಂಬಕ್ಕನಾಗಿ ವೀಣಾ ಸುಂದರ್ ಬಹುಕಾಲ ನೆನಪಿನಲ್ಲಿ ಉಳಿಯುತ್ತಾರೆ. ಇನ್ನುಳಿದಂತೆ ಶ್ರೀನಿವಾಸ ಪ್ರಭು, ಅಚ್ಯುತಕುಮಾರ್ ತಮ್ಮ ಎಂದಿನ ನಟನೆಯಿಂದ ಗಮನ ಸೆಳೆಯುತ್ತಾರೆ.

    ಚಿತ್ರಕ್ಕೆ ರಾಮಚಂದ್ರರ ಛಾಯಾಗ್ರಹಣ ಹಾಗೂ ಹಂಸಲೆಖ ಅವರ ಸಂಗೀತ ಸಮರ್ಥವಾಗಿ ಒದಗಿಬಂದಿವೆ. ಆದರೆ ಚಿತ್ರದ ಕೊನೆಯಲ್ಲಿ ಪುಟ್ಟಕ್ಕ ಬೆಂಗಳೂರಿಗೆ ಹೋಗಿ ವಾಪಾಸಾಗುವಾಗ ಅವಳು ತನ್ನ ಗಂಟನ್ನು ಕಳೆದುಕೊಳ್ಳುವದು ಹಾಗೂ ಅದರಿಂದಲೇ ಏನೋ ಅವಳು ತನ್ನೂರು ಬಿಸಲಳ್ಳಿಗೆ ವಾಪಾಸಾಗುವಷ್ಟರಲ್ಲಿ ಎರಡು ತಿಂಗಳಾಗಿರುವದು, ಮತ್ತು ಆ ಎರಡು ತಿಂಗಳಲ್ಲೇ ಆ ಊರಿಗೆ ಹೈವೇ ಬಂದು ಸಾಕಷ್ಟು ಬದಲಾವಣೆಯಾಗಿದ್ದು ತೀರ ನಾಟಕೀಯವೆನಿಸುತ್ತದೆ. ಏನೇ ಆಗಲಿ ನಿರ್ದೇಶಕನಾಗಿ ಸುರೇಶ್ ಹೊಸ ಸಾಧ್ಯತೆಗಳಿಗೆ ಹಂಬಲಿಸಿರುವ ಚಿತ್ರವಿದು. ತುಂಬಾ ದಿನದ ಮೇಲೆ ಒಂದು ಒಳ್ಳೆಯ ಸಿನಿಮಾ ನೊಡಿದ ಅನುಭವವಾಗುತ್ತದೆ. ಸುರೇಶ್ ಅವರಿಂದ ಇಂಥ ಚಿತ್ರಗಳು ಮತ್ತಷ್ಟು ಬರಲಿ.

    -ಉದಯ್ ಇಟಗಿ

    ಹೊರನಾಡ ಕನ್ನಡಿಗರ ಕನ್ನಡ ಅನುಕಂಪದ ಕನ್ನಡವಾಗಬಾರದು

  • ಭಾನುವಾರ, ಏಪ್ರಿಲ್ 24, 2011
  • ಬಿಸಿಲ ಹನಿ
  • ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಗಾಗಿ ‘“ವಿದೇಶದಲ್ಲಿ ಕನ್ನಡ”’ ಎನ್ನುವ ವಿಷಯದ ಮೇಲೆ ಡಾ. ಹಂ. ಪ.ನಾಗರಾಜಯ್ಯನವರು ಒಂದು ಲೇಖನವನ್ನು ಬರೆದು ಕಳಿಸಿ ಎಂದು ನನ್ನ ಕೇಳಿದಾಗ ಸಮಯದಭಾವ ಮತ್ತು ನನ್ನ ಒಂದಿಷ್ಟು ಸೋಂಬೇರಿತನದಿಂದಾಗಿ ಲೇಖನ ಕಳಿಸಿಕೊಡಲಾಗಲಿಲ್ಲ. ಈಗ ವಿಶ್ವ ಕನ್ನಡ ಸಮ್ಮೇಳನ ಮುಗಿದು ಅದರ ಸ್ಮರಣ ಸಂಚಿಕೆಯೂ ಬಿಡುಗಡೆಯಾಗಿದ್ದು ಹಳೆಯ ಮಾತು. ಆದರೆ ಅದರ ಸಂಪಾದಕ ಮಂಡಳಿ ಇದೀಗ ಮತ್ತೆ ಆ ಪುಸ್ತಕವನ್ನು ಪುನರ್ ಪರಿಶೀಲಿಸಿ ಪ್ರಕಟಿಸುವದರಿಂದ ನನಗೆ ಮತ್ತೆ ಲೇಖನ ಬರೆದುಕೊಡಲು ಕೇಳಿದ್ದಾರೆ. ಹೀಗೆ ಕೇಳಿದ ಮೇಲೂ ನಾನು ಬರೆಯದೆ ಸುಮ್ಮನೆ ಕುಳಿತರೆ ಅದು ನನ್ನ ಅಹಂಕಾರವನ್ನು ಹಾಗೂ ನಿರ್ಲಕ್ಷ್ಯತನವನ್ನು ತೋರಿಸುವದರಿಂದ ಈ ಸಾರಿ ತಪ್ಪಿಸಿಕೊಳ್ಳಲು ನನ್ನ ಮನಸ್ಸು ಒಪ್ಪಲಿಲ್ಲ. ಅದರ ಪರಿಣಾಮವೇ ಈ ಲೇಖನ.


    ಸಂಪಾದಕ ಮಂಡಳಿ ಹೊರನಾಡ ಕನ್ನಡಿಗರಿಗೆ ಮುಖ್ಯವಾಗಿ ಮೂರು ಪ್ರಶ್ನೆಗಳನ್ನು ಕೇಳಿತ್ತು. ಅವು ಯಾವುವೆಂದರೆ-
    1. ನೀವು ಕಂಡಂತೆ ವಿದೇಶದಲ್ಲಿ ಕನ್ನಡ ಬೆಳೆದು ಬಂದ ಬಗೆ ಹೇಗೆ?
    2. ಒಳನಾಡಿನ ಕನ್ನಡಿಗರಿಗಿಂತ ಹೊರನಾಡ ಕನ್ನಡಿಗರಿಗೆ ಕನ್ನಡ ಭಾಷೆಯ ಮೆಲೆ ಹೆಚ್ಚು ಪ್ರೀತಿ ಹಾಗೂ ಒಲವಿರುತ್ತದಂತೆ, ಹೌದೆ?
    3. ಅಲ್ಲಿಯ ಕನ್ನಡ ಸಂಘಗಳಿಂದ ನಡೆಸುವ ಚಟುವಟಿಕೆಗಳು/ಕಾರ್ಯಕ್ರಮಗಳು ಹೇಗಿರುತ್ತವೆ? ಹಾಗೂ ಅಂಥ ಕಾರ್ಯಕ್ರಮಗಳನ್ನು ನಡೆಸುವಾಗ ಸ್ಥಳೀಯ ಸರಕಾರದಿಂದ ಪ್ರೋತ್ಸಾಹವೇನಾದರೂ ಸಿಗುತ್ತದೆಯೇ? ಅಥವಾ ತೊಂದರೆಗಳೇನಾದರೂ ಎದುರಾಗುತ್ತವೆಯೇ?


    ಈ ಮೇಲಿನ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಲೇಖನ ಸಿದ್ಧಪಡಿಸಿ ಎಂದು ಹೇಳಿತ್ತು. ಆದ ಕಾರಣ ಲೇಖನದಲ್ಲಿ ನನಗನಿಸಿದ್ದನ್ನು ನೇರವಾಗಿ ಹೇಳಿದ್ದೇನೆ. ಇದೀಗ ಅದು ಪ್ರಿಂಟಾಗಿ ಹೊರಬರಲಿದೆ ಎಂದು ಅದರ ಜವಾಬ್ದಾರಿಯನ್ನು ಹೊತ್ತುಕೊಂಡ ಜಿ. ಎನ್. ಮೋಹನ್ ಸರ್ ಹೇಳಿದ್ದಾರೆ. ಅದೇ ಲೇಖನವನ್ನು ನನ್ನ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.


    ವಿದೇಶಿ ಕನ್ನಡಿಗರು ಹಾಗೂ ಅವರ ಕನ್ನಡ ಪ್ರೇಮ ಕುರಿತಂತೆ ಒಂದು ವಿಶೇಷವಾದ ಪ್ರೀತಿ ಹಾಗು ಅಭಿಮಾನದಿಂದ ಮಾತನಾಡುವ ಚಟ ನಮ್ಮಲ್ಲಿ ಮೊದಲಿನಿಂದಲೂ ಜಾರಿಯಲ್ಲಿದೆ. ಏಕೆಂದರೆ ನಮಗೆ ಹತ್ತಿರದಲ್ಲಿರುವವರಿಗಿಂತ ದೂರದಲ್ಲಿರುವವರ ಬಗ್ಗೆಯೇ ಹೆಚ್ಚು ಕುತೂಹಲ ಹಾಗೂ ಆಸಕ್ತಿ. ಹೀಗಾಗಿ ಅವರೇನೇ ಮಾಡಿದರು ಅದು ವಿಶೇಷ ಅನಿಸುತ್ತದೆ ಹಾಗೂ ಸಹಜವಾಗಿ ಬೇರೆಯವರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನನಗೆ ಒಂದೊಂದು ಸಾರಿ ಈ ರೀತಿಯ ಮೆಚ್ಚುಗೆ ಉತ್ಪ್ರೇಕ್ಷೆ ಅನಿಸಿಬಿಡುತ್ತದೆ. ಏಕೆಂದರೆ ಒಬ್ಬನು ವಿದೇಶದಲ್ಲಿದ್ದು ತನ್ನ ತಾಯ್ನಾಡಿಗೆ ಮರಳಿ ಬಂದು ಕನ್ನಡದಲ್ಲಿ ಮಾತನಾಡಿದರೆ ‘“ಓ! ಪರ್ವಾಗಿಲ್ರಿ ಅವನಿನ್ನೂ ಕನ್ನಡದಲ್ಲಿಯೇ ಮಾತನಾಡುತ್ತಾನೆ”’ ಎಂದು ಉದ್ಗಾರ ತೆಗೆಯುತ್ತಾರೆ. ಉದಾಹರಣೆಗೆ ಮೊನ್ನೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹೊರನಾಡ ಕನ್ನಡತಿ ಐಶ್ಚರ್ಯ್ ರೈ ತಪ್ಪು ತಪ್ಪು ಕನ್ನಡದಲ್ಲಿ ಮಾತನಾಡಿದಾಗಲೂ ಸಹ ಜನ ಚಪ್ಪಾಳೆ ಹೊಡೆದರು. ಆಕೆಯ ಭಾಷಣಕ್ಕೆ ಚಪ್ಪಾಳೆ ಹೊಡೆದಷ್ಟು ಅನಂತಮೂರ್ತಿಯವರ ಭಾಷಣಕ್ಕಾಗಲಿ, ಶಿವರುದ್ರಪ್ಪನವರ ಭಾಷಣಕ್ಕಾಗಲಿ ಹೊಡೆಯಲಿಲ್ಲ. ಏಕೆಂದರೆ ಆಕೆ ಒಬ್ಬ ಸಿನಿಮಾ ತಾರೆ, ವಿಶ್ವ ಸುಂದರಿ ಎನ್ನುವದರ ಜೊತೆಗೆ ಹೊರನಾಡ ಕನ್ನಡತಿ ಎಂಬ ಕಾರಣವೂ ಇದ್ದಿರಬಹುದಲ್ಲವೆ ಆಕೆಗೆ ವಿಶೇಷ ರಿಯಾಯಿತಿ ತೋರಿಸಲು? ಪರ್ವಾಗಿಲ್ಲ ಇಷ್ಟಾದರು ಕನ್ನಡದಲ್ಲಿ ಮಾತನಾಡಿದಳಲ್ಲ ಎಂದು ಜನ ಅಷ್ಟಕ್ಕೆ ಸಮಾಧಾನಪಟ್ಟುಕೊಂಡರು. ಇನ್ನು ಅಲ್ಲಿಗೆ ಬಂದ ಕೆಲವು ವಿದೇಶಿ ಕನ್ನಡಿಗರು ಸಭೆಯನ್ನು ಉದ್ದೇಶಿಸಿ ಮಾತನಡುವಾಗ ಮಧ್ಯ ಮಧ್ಯ ಒಂದೆರೆಡು ವಾಕ್ಯಗಳನ್ನು ಇಂಗ್ಲೀಷಿನಲ್ಲಿಯೇ ಉದ್ದರಿಸಿದರು. ಆದರೂ ಅವರು ಅಡಿದ್ದೆಲ್ಲವೂ ಚೆಂದವಾಗಿಯೇ ಕಂಡಿತು. ಅದನ್ಯಾರು ಪ್ರತಿಭಟಿಸಲು ಹೋಗಲಿಲ್ಲ. ಏಕೆಂದರೆ ಅವರೆಲ್ಲಾ ಅಷ್ಟಾದರೂ ಕನ್ನಡಕ್ಕೆ ಕಿಂಚಿತ್ತು ಸೇವೆ ಸಲ್ಲಿಸುತ್ತಿದ್ದಾರಲ್ಲ ಎಂದು ಜನ ಭಾವಿಸಿದಂತಿತ್ತು. ಇನ್ನು ವಿದೇಶದಲ್ಲಿದ್ದವನು ಬರಹಗಾರನಾಗಿದ್ದರಂತೂ ಮುಗಿದೇಹೋಯಿತು. ಅವನದು ಕಳಪೆ ಸಾಹಿತ್ಯವಾಗಿದ್ದರೂ ಸರಿಯೇ. ದೂರದ ದೇಶದಲ್ಲಿದ್ದರೂ ಅವರಿಗೆ ಕನ್ನಡ ಭಾಷೆಯ ಮೇಲೆ ವಿಶೇಷ ಅಕ್ಕರೆ ಹಾಗೂ ಒಲವು ಎಂಬ ಕನಿಕರ ಭಾವಕ್ಕೊಳಗಾಗುತ್ತದೆ. ಮಾತ್ರವಲ್ಲ ಅವರು ಬರೆದಿದ್ದು ‘ಕನ್ನಡದ ಕೈಂಕರ್ಯ’ ಎಂಬ ಅನುಕಂಪದ ಲೇಬಲ್ ನಡಿ ವಿಶೇಷ ಸ್ಥಾನಮಾನ ಗಳಿಸಿಬಿಡುತ್ತದೆ. ನನ್ನ ಪ್ರಕಾರ ಇದೇ ರೀತಿಯ ಬೆಳವಣಿಗೆಗಳು ಮುಂದುವರೆದರೆ ಇಂಥ ಕಳಪೆ ಸಾಹಿತ್ಯವನ್ನೇ ಮುಂದೆ ಎಂದಾದರೂ ಒಂದು ದಿನ ಶ್ರೇಷ್ಟ ಸಾಹಿತ್ಯ ಎಂದು ಪರಿಗಣಿಸುವ ದಿನಗಳು ದೂರವಿಲ್ಲ ಎಂದನಿಸುತ್ತದೆ.


    ನಾನು ಈ ಮೊದಲೇ ಹೇಳಿದಂತೆ ಹೊರನಾಡ ಕನ್ನಡಿಗರ ಬಗ್ಗೆ ‘ವಿದೇಶದಲ್ಲಿದ್ದರೂ ಕನ್ನಡ ಭಾಷೆಯ ಮೇಲೆ ಅವರಿಗೆ ಅಪಾರ ಪ್ರೀತಿ, ಒಲವು ಹಾಗೂ ಕನ್ನಡ ಭಾಷೆಯ ಮೇಲೆ ಎಲ್ಲರಿಗಿಂತ ತುಸು ಹೆಚ್ಚೇ ಅಭಿಮಾನವಿರುತ್ತದೆ’ ಎಂದು ಜನ ವೈಭವಿಕರಿಸಿ ಹೇಳುವದು ವಾಡಿಕೆ. ಆದರೆ ನನ್ನ ಪ್ರಕಾರ ಅದು ಶುದ್ಧ ತಪ್ಪು. ಅದೇನಿದ್ದರೂ ಬರೀ ಹಪಹಪಿಕೆ ಅಷ್ಟೇ. ಒಬ್ಬ ಕನ್ನಡಿಗ ಉದ್ಯೋಗ ನಿಮಿತ್ತ ಹೊರನಾಡಿಗೆ ಹೋದಾಗ ಕನ್ನಡಿಗರಿಲ್ಲದ ನೆಲದಲ್ಲಿ ಆತ ತನ್ನ ಮಾತೃಭಾಷೆಯಾದ ಕನ್ನಡವನ್ನು ಕುರಿತು ಯೋಚಿಸುವದು ಸರ್ವೇಸಾಮಾನ್ಯ. ಏಕೆಂದರೆ ಅಲ್ಲಿ ಕನ್ನಡದಲ್ಲಿ ಮಾತನಾಡುವವರು ಯಾರಾದರೂ ಸಿಗುತ್ತಾರೆಯೇ ಎಂದು ಸದಾ ಹಂಬಲಿಸುತ್ತಿರುತ್ತಾನೆ, ಹಪಹಪಿಸುತ್ತಿರುತ್ತಾನೆ. ಈ ಹಪಹಪಿಕೆಯನ್ನೇ ನಾವು ಅಭಿಮಾನವೆಂದು ತಪ್ಪಾಗಿ ಗ್ರಹಿಸುವದು ಎಷ್ಟರಮಟ್ಟಿಗೆ ಸರಿ?


    ನಾವು ನಮ್ಮ ಕನ್ನಡ ನೆಲದಿಂದ ಉದ್ಯೋಗ ಅರಸಿ ಹೊರನಾಡಿಗೆ ಹೋದಾಗ ಸಹಜವಾಗಿ ನಮ್ಮ ನಾಡಿನ ಬಗ್ಗೆ, ಭಾಷೆಯ ಬಗ್ಗೆ ಒಂದು ಪ್ರೀತಿ ಇದ್ದೇ ಇರುತ್ತದೆ. ಈ ಪ್ರೀತಿಯೇ ನಮ್ಮನ್ನು ನಮ್ಮ ಭಾಷೆಯ ಬಗ್ಗೆ ಸದಾ ಯೋಚಿಸುವಂತೆ, ಚಿಂತಿಸುವಂತೆ ಮಾಡುತ್ತದೆ. ಜೊತೆಗೆ ಕನ್ನಡ ಸಂಘಗಳನ್ನು ಹುಟ್ಟುಹಾಕುವಂತೆ ಪ್ರೇರಣೆ ನೀಡುತ್ತದೆ. ನಾವು ಇಂಥ ಸಂಘಗಳನ್ನು ಹುಟ್ಟುಹಾಕುವ ಮೂಲ ಉದ್ದೇಶ ಅಲ್ಲಿರುವ ಕನ್ನಡಿಗರೆಲ್ಲರನ್ನೂ ಒಂದು ಕಡೆ ಕಲೆ ಹಾಕುವದಕ್ಕೆ. ಬರೀ ಸಂಘವೊಂದಿದ್ದರೆ ಎಲ್ಲರೂ ಒಟ್ಟಾಗಿ ಸೇರಲು ಹೇಗೆ ಸಾಧ್ಯ? ಅಲ್ಲಿ ಏನಾದರೊಂದು ಕಾರ್ಯಕ್ರಮ ನಡೆದರೆ ತಾನೆ ಸಾಧ್ಯವಾಗೋದು? ಹೀಗಾಗಿ ಅಲ್ಲಿ ಒಂದಿಷ್ಟು ಕಾರ್ಯಕ್ರಮಗಳು ನಡೆಯುತ್ತವೆ. ಇಂಥ ಕಾರ್ಯಕ್ರಮಗಳು ಕನ್ನಡದಲ್ಲಿಯೇ ನಡೆಯುತ್ತಾವಾದರೂ ಅವು ಕನ್ನಡ ಭಾಷೆಯ ಬೆಳವಣಿಗೆಗೆ ಒಂಚೂರು ಸಹಾಯ ಮಾಡುವದಿಲ್ಲ ಎನ್ನುವದು ನನ್ನ ಅಭಿಪ್ರಾಯ. ಏಕೆಂದರೆ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾಗುವಂಥ ಯಾವೊಂದೂ ಗಂಭೀರ ಚಿಂತನೆಯೂ ಅಲ್ಲಿ ನಡೆಯುವದಿಲ್ಲ. ಅಕಸ್ಮಾತ್ ಆ ಸಂಘಗಳು ಸಾಹಿತ್ಯಿಕ ಪತ್ರಿಕೆಗಳನ್ನೇನಾದರೂ ಹೊರತರುತ್ತಿದ್ದರೆ ಅವು ಗುಣಮಟ್ಟದಲ್ಲಿ ಅತ್ಯಂತ ಕೆಳದರ್ಜೆಯಿಂದ ಕೂಡಿದ್ದು ಅವುಗಳಲ್ಲಿ ಕೇವಲ ಬೆರಳಣಿಕೆಯಷ್ಟು ಲೇಖನಗಳು ಮಾತ್ರ ಚನ್ನಾಗಿರುತ್ತವೆ. ಇನ್ನುಳಿದಂತೆ ಇತರೆ ಪುಟಗಳ ತುಂಬ ಬರೀ ‘ಪುಷ್ಫ ಕವಿ’, ‘ಪೋರಿ ಕವಿ’, ‘ಮತ್ಸ್ಯ ಕವಿ’ ‘ಪತಂಗ ಕವಿ’ಗಳ ಕವನಗಳೇ ರಾರಾಜಿಸುತ್ತಿರುತ್ತವೆ. ಈ ನಿಟ್ಟಿನಲ್ಲಿ ವಿದೇಶದಲ್ಲಿ ನಾವು ಹುಟ್ಟುಹಾಕಿದ ಕನ್ನಡದ ವೇದಿಕೆಗಳಿಂದ ನಿಜಕ್ಕೂ ಕನ್ನಡ ಭಾಷೆಯ ಬೆಳವಣಿಗೆಯಾಗುತ್ತದೆ ಎನ್ನುವದು ಬರಿ ಭ್ರಮೆ ಅಷ್ಟೇ.


    ಇನ್ನು ಈ ತರದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಾಗ ನಮ್ಮಲ್ಲಿ ಅಲ್ಲಿಯ ಸರಕಾರದಿಂದ ಯಾವುದೇ ಪ್ರೋತ್ಸಾಹ ಸಿಗುವದಿಲ್ಲ. ಹಾಗೆ ನಿರೀಕ್ಷಿಸುವದು ಕೂಡ ತಪ್ಪಾಗುತ್ತದೆ. ಆದರೆ ಇದುವರೆಗೂ ಲಿಬಿಯಾದಲ್ಲಿ ನಮ್ಮ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆಯಾಗಲಿ, ಆತಂಕವಾಗಲಿ ಎದುರಾಗಿಲ್ಲ. ಹಾಗೆ ನೋಡಿದರೆ ಕರ್ನಾಟಕದಲ್ಲಿಯೇ ಇಂಥ ಪ್ರಸಂಗಗಳು ಎದುರಾಗೋದು ಹೆಚ್ಚು. ಉದಾಹರಣೆಗೆ ಕರ್ನಾಟಕದ ಕೆಲವು ಭಾಗಗಳಲ್ಲಿ ಅಂದರೆ ಹೆಚ್ಚಾಗಿ ಗಡಿ ಭಾಗಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ನೆರೆರಾಜ್ಯದವರಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಈಗ ವಿಶ್ವ ಕನ್ನಡ ಸಮ್ಮೇಳನವನ್ನೇ ನೋಡಿ. ಅದನ್ನು ಬೆಳಗಾವಿಯಲ್ಲಿ ನಡೆಸಕೂಡದೆಂದು ಮರಾಠಿಗರು ಎಷ್ಟೊಂದು ಬೆದರಿಕೆಯನ್ನು ಒಡ್ಡಿದ್ದರು. ಸಮ್ಮೇಳನ ಮುಗಿಯುವವರೆಗೂ ಅವರು ಏನಾದರೂ ತೊಂದರೆ ಮಾಡಿಯಾರು ಎಂಬ ಭಯ, ಆತಂಕವಿದ್ದೇ ಇತ್ತು. ಈ ತರದ ತೊಂದರೆಗಳ್ಯಾವವು ಅಲ್ಲಿ ಜರಗುವದಿಲ್ಲ ಎನ್ನುವದು ಮಾತ್ರ ನೆಮ್ಮದಿಯ ವಿಷಯ.


    - ಉದಯ್ ಇಟಗಿ

    ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ

  • ಶನಿವಾರ, ಮಾರ್ಚ್ 12, 2011
  • ಬಿಸಿಲ ಹನಿ
  • ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವದಕ್ಕೆ ಎಂಟು ದಿನ ಮುನ್ನವೇ ನಾನು ಹದಿನೈದು ದಿನದ ಮಟ್ಟಿಗೆ ನನ್ನ ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿದ್ದೆ. ಅಸಲಿಗೆ ನಾನು ಲಿಬಿಯಾ ಬಿಡುವ ಮುನ್ನ ಅಲ್ಲಿ ಹೀಗೊಂದು ಕ್ರಾಂತಿಯಾಗಬಹುದೆಂದು ನಾನು ಕನಸಿನಲ್ಲೂ ಸಹ ಯೋಚಿಸಿರಲಿಲ್ಲ. ನಾನಿರಲಿ, ಬಹುಶಃ ಲಿಬಿಯನ್ನರು ಕೂಡ ಅಂದುಕೊಂಡಿದ್ದರೋ ಇಲ್ವೋ ನಾ ಕಾಣೆ. ಏಕೆಂದರೆ ಅಲ್ಲಿನ ಅಧ್ಯಕ್ಷ ಮೌಮೂರ್ ಗಡಾಫಿ ಅಷ್ಟರ ಮಟ್ಟಿಗೆ ಅವರನ್ನು ನೆಮ್ಮದಿಯಿಂದ ಇಟ್ಟಿದ್ದ ಎಂದು ನನ್ನೊಟ್ಟಿಗೆ ಕೆಲಸ ಮಾಡುವ ಎಷ್ಟೋ ಲಿಬಿಯನ್ನರು ಹೇಳಿದ್ದರು. ಆದರೆ ನಾನು ಇಲ್ಲಿಗೆ ಬಂದು ಎಂಟು ದಿನಗಳ ನಂತರ ಲಿಬಿಯಾದಲ್ಲೂ ದಂಗೆ ಶುರುವಾಗಿದೆ ಎಂದು ಪತ್ರಿಕೆಗಳಲ್ಲಿ ಓದಿದಾಗ ಬಹುಶಃ, ಇದು ಪಕ್ಕದ ರಾಷ್ಟ್ರ ಈಜಿಪ್ಟಿನಲ್ಲಿ ಆಗಷ್ಟೇ ಉಂಟಾದ ಬದಲಾವಣೆಯ ಪರಿಣಾಮ ವಿರಬೇಕು, ಎರಡು ದಿನ ಕಳೆದ ಮೇಲೆ ಎಲ್ಲ ತಣ್ಣಗಾಗುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಇಂಥವರನ್ನು ಹೇಗೆ ಬಗ್ಗು ಬಡಿಯುಬೇಕೆಂದು ಗಡಾಫೆಗೆ ಚನ್ನಾಗಿ ಗೊತ್ತು, ಎಲ್ಲವೂ ಸರಿಹೋಗುತ್ತದೆ ಎಂದುಕೊಂಡಿದ್ದೆ. ಆದರೆ ನೋಡನೋಡುತ್ತಿದ್ದಂತೆಯೇ ಲಿಬಿಯಾದ ಉತ್ತರ ಭಾಗ ಹೊತ್ತಿ ಉರಿಯತೊಡಗಿ ಇಡಿ ಲಿಬಿಯಾದಲ್ಲಿ ಅಂತರ್ಜಾಲ ಮತ್ತು ದೂರಸಂಪರ್ಕ ಕಡಿದು ಹೋಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಭಾರತೀಯರ ಕುಟುಂಬಗಳು ತಮ್ಮವರು ಹೇಗಿದ್ದಾರೋ ಎಂದು ಇಲ್ಲಿ ಪರಿತಪಿಸುತ್ತಿರಬೇಕಾದರೆ ನನ್ನ ಮನೆಯವರು “ಸಧ್ಯ, ನೀನು ಇಲ್ಲೇ ಇದ್ದೀಯಲ್ಲ” ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ದಿನಕಳೆದಂತೆ ಆಶ್ಚರ್ಯಕರ ರೀತಿಯಲ್ಲಿ ಅಲ್ಲಿನ ಬೆಳವಣಿಗೆಗಳು ತೀವ್ರತೆಯ ಸ್ವರೂಪ ಪಡೆದುಕೊಂಡು ಲಿಬಿಯಾಕ್ಕೆ ವಿಮಾನಗಳ ಹಾರಾಟವೂ ಸ್ಥಗಿತಗೊಂಡಿದ್ದರಿಂದ ನಾನು ಇಲ್ಲೇ ಉಳಿಯಬೇಕಾಯಿತು.


    ಈಗ್ಗೆ ನಾಲ್ಕು ವರ್ಷಗಳ ಹಿಂದೆ ನಾನು ಲಿಬಿಯಾಕ್ಕೆ ಬರುವ ಮುನ್ನ ‘ಅದು ನಿರಂಕುಶವಾದಿ ಮೌಮೂರ್ ಗಡಾಫಿಯ ಹಿಡಿತದಲ್ಲಿರುವ ದೇಶ, ಅಲ್ಲಿನ ಸ್ಥಿತಿಗತಿಗಳು ಅಷ್ಟೇನೂ ಚನ್ನಾಗಿರಲಿಕ್ಕಿಲ್ಲ. ಅಲ್ಲಿಗ್ಯಾಕ್ರೀ ಹೋಗ್ತೀರಿ?’ ಎಂದು ಬಹಳಷ್ಟು ಜನ ಉಪದೇಶ ನೀಡಿದ್ದರು. ಮೇಲಾಗಿ ಅವನೊಬ್ಬ ವಿಕ್ಷಿಪ್ತ ಮನಸ್ಸಿನವ, ಮಹಾನ್ ತಂಟೆಕೋರ, ತರ್ಲೆ, ಹೆಣ್ಣು ಬಾಕ ಎಂದೆಲ್ಲಾ ಕೇಳಿ ತಿಳಿದುಪಟ್ಟಿದ್ದೆ. ಅಷ್ಟೇ ಅಲ್ಲ ಅವನು ವಿಶ್ವದ ಬಲಾಡ್ಯ ರಾಷ್ಟ್ರವಾದ ಅಮೆರಿಕನ್ನರಿಗೇ ಸೆಡ್ಡು ಹೊಡೆದು ನಿಲ್ಲುವಂಥವನು ಎಂದು ಕೂಡ ತಿಳಿದುಕೊಂಡಿದ್ದೆ. ಆದರೆ ಲಿಬಿಯಾಗೆ ಬಂದ ಮೇಲೆ ತಿಳಿಯಿತು; ಈ ಮೇಲಿನ ಸಂಗತಿಗಳಲ್ಲಿ ಬಹಳಷ್ಟು ಉತ್ಪ್ರೇಕ್ಷಿಯಿಂದ ಕೂಡಿದ್ದವೆಂದು. ಅವನು ಅಮೆರಿಕಾದ ವಿಮಾನವೊಂದಕ್ಕೆ ಬಾಂಬ್ ಇಡಿಸಿದ್ದನೆಂಬ ಆರೋಪದ ಮೇಲೆ ಆತ ಅಮೇರಿಕನ್ನರ ವಿರೋಧ ಕಟ್ಟಿಕೊಂಡಿದ್ದು ನಿಜ ಹಾಗೂ ಹಾಗೆ ವಿರೋಧ ಕಟ್ಟಿಕೊಂಡು ಎಷ್ಟೆಲ್ಲ ಪಾಡು ಪಡಬೇಕಾಯಿತು ಎನ್ನುವದೂ ಅಷ್ಟೇ ನಿಜ. ಅವನು ಅದೆಂಥ ಅಮೆರಿಕನ್ನರ ವಿರೋಧಿಯಾಗಿದ್ದನೆಂದರೆ ಅವರನ್ನು ಮಾತ್ರವಲ್ಲದೆ ಅವರ ಮಾತೃಭಾಷೆಯಾದ ಇಂಗ್ಲೀಷ್ ಭಾಷೆಯನ್ನು ಕೂಡ ದ್ವೇಷಿಸುತ್ತಿದ್ದನಂತೆ. ಹೀಗಾಗಿ ಹಠಾತ್ತಾಗಿ ಇಂಗ್ಲೀಷ್ ಭಾಷೆಯನ್ನೇ ತನ್ನ ದೇಶದ ಜನ ಕಲಿಯಕೂಡದೆಂದು ತಾಕೀತು ಮಾಡಿ ಅದರ ಮೇಲೆ ಹತ್ತು ವರ್ಷಗಳ ಕಾಲ ನಿಷೇಧ ಹೇರುವದರ ಮೂಲಕ ಒಂದು ತಲೆಮಾರಿನ ಜನಾಂಗವನ್ನು ಇಂಗ್ಲೀಷ್ ಭಾಷೆಯ ಕಲಿಕೆಯಿಂದ ವಂಚಿತಗೊಳಿಸಿದನಂತೆ. ಆದರೆ ಮುಂದೆ ಲಿಬಿಯಾ ಮತ್ತು ಅಮೇರಿಕಾದ ನಡುವಿನ ಸಂಬಂಧ ಸರಿಹೋದ ಮೇಲೆ ಇಂಗ್ಲೀಷ್ ಭಾಷೆಯ ಮಹತ್ವವನ್ನು ಅರಿತುಕೊಂಡು ಮತ್ತೆ ಅದನ್ನು ಶಾಲಾ, ಕಾಲೇಜುಗಳಲ್ಲಿ ಆರಂಭಿಸಿದನಂತೆ. ಆದರೂ ಅವನು ಈಗಲೂ ಅಮೆರಿಕನ್ನರ ದ್ವೇಷಿ! ಅವನು ಮಾತ್ರವಲ್ಲ ಅಲ್ಲಿಯ ಬಹಳಷ್ಟು ಜನ ಅಮೆರಿಕನ್ನರ ದ್ವೇಷಿಗಳೇ! ಅವನ ಪ್ರಕಾರ ಅಮೆರಿಕಾದವರೆಂದರೆ ಸಂಚು ಹೂಡುವವರು, ಕುತಂತ್ರಿಗಳೆಂದೇ ಲೆಕ್ಕಾಚಾರ. ಈಗಲೂ ಸಹ ಈ ದಂಗೆಯ ಹಿಂದೆ ತನ್ನ ದೇಶದ ತೈಲ ಸಂಪನ್ಮೂಲಗಳನ್ನು ದೋಚಲು ಅಮೆರಿಕನ್ನರು ನಡೆಸಿದ ಸಂಚು ಇರಬಹುದೆ ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಿದ್ದಾನೆ.




    ನನಗೆ ಅಷ್ಟೆಲ್ಲ ಜನ ಲಿಬಿಯಾಕ್ಕೆ ಹೋಗಬೇಡವೆಂದು ಕೇಳಿಕೊಂಡರೂ ನಾನು ಲೆಕ್ಕಿಸದೇ ‘ಏನಾದರಾಗಲಿ, ಒಂದು ಸಾರಿ ಈ ನಿರಂಕುಶ ಪ್ರಭುತ್ವದ ಒಡೆತನದಲ್ಲಿರುವ ದೇಶದಲ್ಲಿ ಜೀವನ ಹೇಗಿರುತ್ತದೆ ನೋಡಿಯೇ ಬಿಡೋಣ’ ಎಂದುಕೊಂಡು ಒಂದು ತರದ ಭಂಡ ಧೈರ್ಯದ ಮೇಲೆ ಲಿಬಿಯಾಕ್ಕೆ ಹೊರಟು ಬಂದಿದ್ದೆ. ಆದರೆ ನಾನಂದುಕೊಂಡಿದ್ದಕ್ಕಿಂತ ಅಲ್ಲಿಯ ಜೀವನ ವಿಭಿನ್ನವಾಗಿತ್ತು. ನಾನು ಮೊಟ್ಟಮೊದಲಬಾರಿಗೆ ಲಿಬಿಯಾದ ರಾಜಧಾನಿ ಟ್ರೀಪೋಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಥಟ್ಟನೆ ನನ್ನ ಗಮನ ಸೆಳೆದಿದ್ದು ಅಲ್ಲಿಯೇ ನೇತುಹಾಕಿದ್ದ ಬೋರ್ಡೊಂದರ ಮೇಲೆ ಬರೆದ ಸಾಲು. ಅದು ಅಲ್ಲಿನ ಕೆಳದರ್ಜೆಯ ಕೆಲಸಗಾರರ ಕುರಿತಾಗಿ ಬರೆದಿತ್ತು. ಅದು ಹೀಗಿತ್ತು: “Do not call them porters , they are your fellow workers” ಈ ಸಾಲನ್ನು ಓದಿ ಒಬ್ಬ ಸರ್ವಾಧಿಕಾರಿಯ ನಾಡಿನಲ್ಲಿ ಇಂಥದೊಂದು ಸಮಾನತೆಯ ಸಿದ್ಧಾಂತ ಜಾರಿಯಲ್ಲಿರಲು ಸಾಧ್ಯವೆ? ಎಂದು ನನ್ನಷ್ಟಕ್ಕೆ ನನಗೇ ಆಶ್ಚರ್ಯ ಮತ್ತು ಅನುಮಾನಗಳೆರೆಡೂ ಒಟ್ಟಿಗೆ ಮೂಡಿದ್ದವು. ಆದರೆ ನಾನು ಯಾವಾಗ ಲಿಬಿಯನ್ನರೊಟ್ಟಿಗೆ ಕೆಲಸ ಮಾಡತೊಡಗಿದನೋ ಆಗ ಅಲ್ಲಿ ಎಲ್ಲರೂ ಸಮಾನರೇ ಎಂಬ ಸತ್ಯದ ಅರಿವಾಗಿತ್ತು. ಒಬ್ಬ ಅಟೆಂಡರ್ ನಿಂದ ಹಿಡಿದು ಕಾಲೇಜಿನ ಡೀನ್ ವರೆಗೂ ಎಲ್ಲರೂ ಸರಿ ಸಮಾನರೇ. ಅಟೆಂಡರ್ ನಾದವನು ಡೀನ್ ಕುರ್ಚಿಯ ಮೇಲೆ ಕುಳಿತುಕೊಳ್ಳಬಹುದು. ಆತನ ಅಪ್ಪಣೆಯಿಲ್ಲದೆ ಆತನ ಕಂಪ್ಯೂಟರ್ ನ್ನು ಬಳಸಬಹುದು. ಹಾಗೆಯೆ ಡೀನ್ ಆದವನು ಕುಳಿತಲ್ಲಿಂದಲೇ ಎಲ್ಲ ಕೆಲಸ ತೆಗೆಯಬೇಕು ಎಂದೇನೂ ನಿಯಮವಿಲ್ಲ. ಅಗತ್ಯ ಬಿದ್ದರೆ ಅವನು ಒಬ್ಬ ಗುಮಾಸ್ತನವರೆಗೂ ನಡೆದುಕೊಂಡುಬಂದು ಕೆಲಸ ಮಾಡಿಸಿಕೊಳ್ಳಬೇಕಾಗುತ್ತದೆ. ಅಸಲಿಗೆ ಇಂಥದೊಂದು ವ್ಯವಸ್ಥೆ ಸೋ ಕಾಲ್ಡ್ ಪ್ರಜಾರಾಜ್ಯ ಎನಿಸಿಕೊಂಡ ನಮ್ಮ ದೇಶದಲ್ಲಿ ಇರಬೇಕು (ಇಲ್ಲ ಎನ್ನುವದು ಬೇರೆ ಮಾತು). ಆದರೆ ಸರ್ವಾಧಿಕಾರಿಯ ನಾಡಿನಲ್ಲಿದ್ದಿದ್ದುನ್ನು ಕಂಡು ಆಶ್ಚರ್ಯಪಟ್ಟಿದ್ದೆ. ಅಷ್ಟೇ ಏಕೆ? ನಾನು ಕೆಲಸ ಮಾಡುವ ಜಾಗ ‘ಘಾತ್’ ಪ್ರಾಂತ್ಯದ ಕಾರ್ಮಿಕ ಮಂತ್ರಿಯೊಬ್ಬರು ನನ್ನ ಸಹೋದ್ಯೋಗಿ. ಅವರು ತಮ್ಮದೇ ಸ್ವಂತ ಕಾರಿನಲ್ಲಿ ಯಾವುದೇ ಸೆಕ್ಯೂರಿಟಿ, ಎಸ್ಕಾರ್ಟ್ ಇಲ್ಲದೆ ನಮ್ಮ ಕಾಲೇಜಿಗೆ ಬಂದು ಪಾಠ ಮಾಡಿಹೋಗುತ್ತಿದ್ದರು. ಅವರು ಬ್ಯಾಂಕಿಗೆ ಬಂದರೆ ಅವರಿಗೆ ವಿಶೇಷ ರಿಯಾಯಿತಿ ತೋರಿಸುತ್ತಿರಲಿಲ್ಲ. ಎಲ್ಲರಂತೆ ಅವರು ಕೂಡ ಸರದಿಯಲ್ಲಿ ಕಾಯಬೇಕಿತ್ತು. ಬಹುಶಃ, ಈ ಹಿನ್ನೆಲೆಯಲ್ಲಿಯೇ ಗಡಾಫಿ ಮೊನ್ನೆ “ನಾನು ಯಾವತ್ತೂ ನಿರಂಕುಶವಾದಿಯಂತೆ ನಡೆದುಕೊಂಡಿಲ್ಲ. ಇಲ್ಲಿ ಎಲ್ಲರೂ ಸರಿ ಸಮಾನರು. ಇದೊಂದು ಸೋಶಿಯಲಿಸ್ಟ್ ಕಂಟ್ರಿ. ನಾನು ಇಲ್ಲಿ ಇರುವದು ಕೇವಲ ನೆಪ ಮಾತ್ರ. ಪ್ರಜೆಗಳೇ ಅಧಿಕಾರ ನಡೆಸುವವರು. ಅವರ ಕೈಯಲ್ಲಿಯೇ ದೇಶವನ್ನು ಇಟ್ಟಿದ್ದೇನೆ.” ಎಂದು ಒತ್ತಿ ಒತ್ತಿ ಹೇಳಿದ್ದು ನಿಜವೆನಿಸುತ್ತದೆ. ಆದರೆ ಅದರ ಮರುಕ್ಷಣವೇ ಇಷ್ಟೆಲ್ಲ ಹೇಳುವವ ತನ್ನ ಅಧಿಕಾರ ಗದ್ದುಗೆಯನ್ನು ಏಕೆ ಅಷ್ಟು ಸುಲಭವಾಗಿ ಬೇರೆಯವರಿಗೆ ಬಿಟ್ಟುಕೊಡಲಾರ ಎಂಬ ಅನುಮಾನವೂ ಮೂಡುತ್ತದೆ. ಅಂದರೆ ಈತ ಇತ್ತ ಸಂಪೂರ್ಣ ಸಮಾಜವಾದಿಯೂ ಅಲ್ಲದ ಅತ್ತ ನಿರಂಕುಶವಾದಿಯೂ ಅಲ್ಲದ ಎಡೆಬಿಡಂಗಿಯಾಗಿ ಕಾಣುತ್ತಾನೆ.


    ನೆರೆ ರಾಷ್ಟ್ರಗಳಾದ ಈಜಿಪ್ಟ್ ಮತ್ತು ತುನಿಶಿಯಾಗಳಲ್ಲಿ ಜನ ದಂಗೆ ಎದ್ದಂತೆ ಇಲ್ಲಿಯೂ ಜನ ದಂಗೆ ಎದ್ದಿದ್ದಾರೆ ಎಂದು ನಾವೆಲ್ಲಾ ದೂರದಲ್ಲಿ ಕುಳಿತುಕೊಂಡು ಯೋಚಿಸುತ್ತೇವೆ. ಆದರೆ ನಾನು ಅಲ್ಲಿ ಮೂರುವರೆ ವರ್ಷಗಳಿಂದ ಇದ್ದು ಗಮನಿಸಿದ್ದೇನೆಂದರೆ ದಂಗೆಯೇಳುವಷ್ಟು ಕೆಟ್ಟದಾಗಿ ಲಿಬಿಯಾ ಯಾವತ್ತೂ ಈ ಎರಡು ರಾಷ್ಟ್ರಗಳಂತಿರಲಿಲ್ಲ. ಅದು ಸದಾ ಪ್ರಗತಿಯ ಮುಂಚೂಣಿಯಲ್ಲಿರಲು ಕೆಲಸ ಮಾಡುತ್ತಿತ್ತು. ಏಕೆಂದರೆ ಅಭಿವೃದ್ಧಿಯ ವಿಚಾರದಲ್ಲಿ ಅವನದು ಎತ್ತಿದ ಕೈ. ಪ್ರತಿಯೊಂದು ಹಳ್ಳಿ ಹಳ್ಳಿಗೂ ಆಸ್ಪತ್ರೆ, ಶಾಲೆ, ಕಾಲೇಜು, ಬ್ಯಾಂಕು, ಪೋಸ್ಟ್ ಅಫೀಸು, ಒಳ್ಳೆಯ ರಸ್ತೆ ಇನ್ನೂ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅಲ್ಲಿನ ಜನಕ್ಕೆ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡಿದ್ದಾನೆ. ಮಾತ್ರವಲ್ಲ ಅಲ್ಲಿನ ಬಹುತೇಕ ಪ್ರಜೆಗಳು ಸರಕಾರಿ ಕೆಲಸದಲ್ಲಿದ್ದಾರೆ. ದುಬೈ ವಿಮಾನ ನಿಲ್ದಾಣಕ್ಕೆ ಸರಿಗಟ್ಟುವಂತಹ ಅಂತರಾಷ್ಟ್ರೀಯ ವಿಮಾನನಿಲ್ದಾಣವೊಂದನ್ನು ಟ್ರೀಪೋಲಿಯಲ್ಲಿ ಕಟ್ಟಿಸುತ್ತಿದ್ದಾನೆ. ಅಲ್ಲಿನ ವಿದ್ಯಾವಂತ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್ ಮುಂತಾದ ದೇಶಗಳಿಗೆ ಸ್ಕಾಲರ್ ಶಿಪ್ ಕೊಟ್ಟು ಕಳಿಸುತ್ತಿದ್ದಾನೆ. ಅವರಿಗೆ ಮಾತ್ರವಲ್ಲ ಹಾಗೆ ಹೋಗುವವರ ಹೆಂಡತಿ ಮತ್ತು ಮಕ್ಕಳಿಗೆ ತಿಂಗಳಿಗೆ ಅಲ್ಲಿನ ಖರ್ಚು ವೆಚ್ಚಕ್ಕಾಗಿ ತಲಾ 3೦೦೦ ಡಾಲರ್ ಕೊಡುತ್ತಾನೆ. ನಮಗೆ ಲಂಡನ್ ಮತ್ತು ಅಮೆರಿಕಾದಲ್ಲಿ ಓದುವದು ಕನಸಿನ ಮಾತಾದರೆ ಅವರಿಗೆ ಅತಿ ಸುಲಭದಲ್ಲಿ ಎಟಕುತ್ತದೆ. ಇತ್ತೀಚಿಗೆ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸುವದರ ಮೂಲಕ ಹಂಚಿದ್ದ. ಶೀಘ್ರದಲ್ಲಿಯೇ ಒಂದು ದಿನಾರಿಗೆ (ಅಂದರೆ ಭಾರತದ 36 ರೂ.ಗೆ) 6 ಲೀಟರ್ ನಷ್ಟು ದೊರೆಯುತ್ತಿದ್ದ ಪೆಟ್ರೋಲನ್ನು 10 ಲೀಟರಿಗೆ ಹೆಚ್ಚಿಸುವವನಿದ್ದ. ಅಲ್ಲಿನ ಜನಕ್ಕೆ ಲೋನ್ ಮೇಲೆ ವಾಸಿಸಲು ಮನೆಗಳನ್ನು ಕಟ್ಟಿಸಿಕೊಡುತ್ತಿದ್ದಾನೆ. ಹಾಗೆ ನೋಡಿದರೆ ಲಿಬಿಯನ್ನರು ಆ ಸಾಲದ ಐದೋ, ಆರೋ ಕಂತುಗಳನ್ನು ಕಟ್ಟಿಬಿಟ್ಟು ಕೈ ತೊಳೆದುಕೊಂಡುಬಿಡುತ್ತಾರೆ. ಮುಂದಿನದನ್ನು ಏಕೆ ಕಟ್ಟಲಿಲ್ಲ ಎಂದು ಕೂಡ ಆತ ಕೇಳುವದಕ್ಕೆ ಹೋಗುವದಿಲ್ಲ. ಇನ್ನು ಇತರೆ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳು ಹೊರಗೆ ಹೋಗುವಾಗ ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ನಿಯಮಗಳಿರುವಂತೆ ಅಂಥ ಕಟ್ಟಳೆಗಳ್ಯಾವದನ್ನು ಅವನು ವಿಧಿಸಿಲ್ಲ. ಅವರಿಗೆ ಎಲ್ಲದರಲ್ಲೂ ಸರಿ ಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾನೆ. ಹಾಗೆ ನೋಡಿದರೆ ಲಿಬಿಯನ್ನರೇ ಶುದ್ಧ ಸೋಂಬೇರಿಗಳು. ಐದು ಜನರಲ್ಲಿ ಒಬ್ಬ ಮಾತ್ರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೆ. ಇನ್ನುಳಿದವರು ಸದಾ ಕೆಲಸ ಕದಿಯುವವರೇ. ತಕ್ಕ ಮಟ್ಟಿಗೆ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರವಿದೆ.




    ದೇಶದ ಭದ್ರತಾ ವ್ಯವಸ್ಥೆಯಲ್ಲೂ ಕೂಡ ಗಡಾಫಿ ಅಷ್ಟೇ ಕಟ್ಟುನಿಟ್ಟು. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕಾದರೆ ಚೆಕ್ ಪಾಯಿಂಟಿನಲ್ಲಿ ಪೋಲಿಸರು ಟ್ಯಾಕ್ಸಿಯಲ್ಲಿರುವವರ ಗುರುತು ಪತ್ರ ಮುಂತಾದ ವಿವರಗಳನ್ನು ಕೇಳುತ್ತಾರೆ. ಒಂದೊಂದು ಸಾರಿ ಈ ರೀತಿಯ ವಿಪರೀತ ತಪಾಸಣೆಗೊಳಗಾಗುವದು ನಮಗೆ ಕಿರಿಕಿರಿ ಎನಿಸುತ್ತದೆ. ಮೊನ್ನೆ ಅಂದರೆ ನವೆಂಬರ್ ತಿಂಗಳ ಕೊನೆವಾರದಲ್ಲಿ ನಾನಿರುವ ಸ್ಥಳ ಘಾತ್ ನಲ್ಲಿ ಅಲ್ಜೀರಿಯಾದ ಇಬ್ಬರು ಉಗ್ರರನ್ನು ಕೊಲ್ಲಲಾಯಿತು. ಅವರು ಸಹರಾ ಮರಭೂಮಿಯಲ್ಲಿ ಅಲ್ಜೀರಿಯಾದಿಂದ ನಡೆದುಕೊಂಡು ಬಂದು ಘಾತ್ ಮೂಲಕ ನುಸುಳಿ ದೊಡ್ಡ ಪಟ್ಟಣಗಳಾದ ಟ್ರ‍ೀಪೋಲಿ, ಬೆಂಗಾಜಿಯನ್ನು ಸ್ಪೋಟಿಸಲು ಸಂಚು ಹೂಡಿದ್ದರು. ಆದರೆ ಆದೃಷ್ಟವಶಾತ್ ಪೋಲಿಸರ ಕೈಗೆ ಸಿಕ್ಕಿಬಿದ್ದು ಅಲ್ಲಿಯೇ ಕೊಲ್ಲಲ್ಪಟ್ಟರು. ಈ ತರದ ಘಟನೆ ಲಿಬಿಯಾದಲ್ಲಿ ನಡೆದಿದ್ದು ಮೂವತ್ತು ವರ್ಷಗಳ ನಂತರವೇ ಎಂದು ಅಲ್ಲಿಯ ಜನ ಮಾತಾಡಿಕೊಂಡಿದ್ದನ್ನು ಕೇಳಿದರೆ ಅವನ ಭದ್ರತಾ ಸುವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಮನದಟ್ಟಾಗುತ್ತದೆ. ಇದಾದ ನಂತರ ಗಡಾಫಿ ಅಲ್ಲಿಯ ಪೋಲಿಸರನ್ನು ಚನ್ನಾಗಿ ತರಾಟೆಗೆ ತೆಗೆದುಕೊಂಡು ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದ. ಹಾಗಂತ ಅಲ್ಲಿ ಯಾವುದೇ ಕ್ರೈಮ್ ನಡೆಯುತ್ತಿರಲಿಲ್ಲ ಎಂದು ಹೇಳಲಾರೆ. ಸಣ್ಣ ಪುಟ್ಟ ಕಳ್ಳತನ, ದರೋಡೆ, ಸುಲಿಗೆಗಳು ಹೆಚ್ಚಾಗಿ ರಾಜಧಾನಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿದ್ದವು.


    ಹೀಗಾಗಿ ನಾ ಕಂಡಂತೆ ಅಲ್ಲಿನವರು ಗಡಾಫಿಯ ಬಗ್ಗೆ ಅತೃಪ್ತಿಯನ್ನಾಗಲಿ, ಅಸಮಾಧಾನವನ್ನಾಗಲಿ ವ್ಯಕ್ತಪಡಿಸಿದ್ದನ್ನು ನಾನು ಯಾವತ್ತೂ ಕೆಳಿದ್ದಿಲ್ಲ. ಬದಲಾಗಿ ಬಹಳಷ್ಟು ಜನ ಅವನನ್ನು ಹಾಡಿ ಹೊಗಳಿದವರೇ ಹೆಚ್ಚು. ಅಥವಾ ಹಾಗೆ ಹಾಡಿ ಹೊಗಳಲೇಬೇಕೆಂಬ ಅಲಿಖಿತ ನಿಯಮವೇನಾದರೂ ಜಾರಿಯಲ್ಲಿತ್ತೇ ನನಗೆ ಗೊತ್ತಿಲ್ಲ. ನಾನಿರುವದು ಲಿಬಿಯಾದ ದಕ್ಷಿಣ ಭಾಗದಲ್ಲಿ. ಆ ಕಡೆಯೆಲ್ಲಾ ಅವನ ಬೆಂಬಲಿಗರೇ ಹೆಚ್ಚು. ಅಲ್ಲಿ ಯಾವುದೇ ಗಲಾಟೆಗಳು ನಡೆಯುತ್ತಿಲ್ಲ ಎಂದು ನನ್ನ ಭಾರತೀಯ ಸಹೋದ್ಯೋಗಿಗಳು ಹೇಳಿದ್ದಾರೆ. ನಾವಂದುಕೊಂಡಂತೆ ಲಿಬಿಯಾದಿಡಿ ಗಲಭೆಗಳು ಸಂಭವಿಸುತ್ತಿಲ್ಲ. ಟ್ಯಾಕ್ಸಿಗಳು, ಕಾಲೇಜು, ಆಸ್ಪತ್ರೆ, ಬ್ಯಾಂಕ್ ಎಲ್ಲವೂ ಎಂದಿನಂತೆ ಓಡುತ್ತಿವೆ. ಬೆಂಗಾಜಿ, ಟ್ರಿಪೊಲಿ ಕಡೆ ಮಾತ್ರ ಗಲಾಟೆ ಆಗುತ್ತಿರುವದನ್ನು ನಾವು ಟೀವಿಯಲ್ಲಿ ನೋಡಬಹುದು. ಆದರೆ ಅಲ್ಲಿಯ ಜನರ ಆತಂಕವೇನೆಂದರೆ, ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕೆಲಸಗಳು ಈಗ ಸ್ಥಗಿತಗೊಂಡಿವೆ ಎನ್ನುವದು. ಪೆಟ್ರೋಲ್ ಶೇಖರಣೆ ಸದ್ಯಕ್ಕೆ ನಿಂತಿದೆ. ಅಂತರಾಷ್ಟ್ರೀಯ ತೈಲ ಕಂಪನಿಗಳು ಬಾಗಿಲು ಮುಚ್ಚಿವೆ. ಇನ್ನು ನನ್ನ ಲಿಬಿಯನ್ ಸಹೋದ್ಯೋಗಿಗಳೊಂದಿಗೆ ಚಾಟ್ ಮಾಡುತ್ತಾ “ನೀವು ದಕ್ಷಿಣದ ಕಡೆಯವರು ಏಕೆ ದಂಗೆ ಎದ್ದಿಲ್ಲ?” ಎಂದು ಕೇಳಿದೆ. ಅದಕ್ಕವರು “ಸಕಲ ಸೌಲತ್ತುಗಳನ್ನು ಕೊಟ್ಟವನ ವಿರುದ್ಧ ನಾವೇಕೆ ದಂಗೆ ಏಳಬೇಕು? ಹಾಗೆ ಒಂದು ವೇಳೆ ನಾವು ದಂಗೆಯೆದ್ದರೆ ಅದು ನಮ್ಮ ಮೂರ್ಖತನವಾಗುತ್ತದೆ. ಹರಾಮಿಕೋರತನವಾಗುತ್ತದೆ” ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಇಡಿ ಈಜಿಪ್ಟಿನ ಜನ ಹೊಸ್ನಿ ಮುಬಾರಕ್ ನ ವಿರುದ್ಧ ಎದ್ದು ನಿಂತಂತೆ ಇಡಿ ಲಿಬಿಯಾದ ಜನ ಮೌಮೂರ್ ಗಡಾಫಿಯ ವಿರುದ್ಧ ಎದ್ದು ನಿಂತಿಲ್ಲ ಎನ್ನುವದು. ಅಂದರೆ ಲಿಬಿಯಾದಲ್ಲಿ ಮುಂದೇನಾಗಬಹುದು ಎಂದು ಈಗಲೇ ಊಹಿಸುವದು ಕಷ್ಟಸಾಧ್ಯ. ಏಕೆಂದರೆ ಮೌಮೂರ್ ಗಡಾಫಿ ಅಷ್ಟು ಸುಲಭವಾಗಿ ತನ್ನ ಅಧಿಕಾರ ಗದ್ದುಗೆಯನ್ನು ಬಿಟ್ಟುಕೊಡುವಂತೆ ಕಾಣುತ್ತಿಲ್ಲ. ಅವನು ಮೊನ್ನೆ ಲಿಬಿಯನ್ನರನ್ನು ಉದ್ದೇಶಿಸಿ “ನಿಮಗೆ ಇಷ್ಟೆಲ್ಲಾ ಕೊಟ್ಟರೂ ನಿಷ್ಟೆ ಎನ್ನುವದು ಇಲ್ಲ. ನಾಯಿಗಳೇ ನಿಮಗಿಂತ ಎಷ್ಟೋ ವಾಸಿ” ಎಂದು ಬಯ್ದಿದ್ದನ್ನು ಸ್ಥಳೀಯ ಟೀವಿ ಚಾನಲ್ ವೊಂದು ಪ್ರಸಾರ ಮಾಡಿದೆಯೆಂದು ಅಲ್ಲಿಯ ನನ್ನ ಇಂಡಿಯನ್ ಮಿತ್ರರು ಹೇಳಿದ್ದಾರೆ. ಈ ಮಾತು ಲಿಬಿಯನ್ನರನ್ನ ಮತ್ತಷ್ಟು ಕೆರಳಿಸಿದೆಯಂತೆ. ಗಡಾಫಿ ಕೆಳಗಿಳಿಯುತ್ತಾನೋ? ಅಥವಾ ತನ್ನ ವಿರೋಧಿಗಳನ್ನು ಬಗ್ಗು ಬಡಿದು ಅವನೇ ಮುಂದುವರಿಯುತ್ತಾನೋ? ಕಾದು ನೋಡಬೇಕಾಗಿದೆ. ಆದರೆ ಅಕಸ್ಮಾತ್ ಗಡಾಫಿಯ ಮೇಲೆ ಒತ್ತಡ ಹೆಚ್ಚಾಗಿ ಅವನೇನಾದರು ಕೆಳಗಿಳಿದರೆ ಅದರ ಬಿಸಿ ನಿರಂಕುಶ ಪ್ರಭುತ್ವದ ಒಡೆತನದಲ್ಲಿರುವ ಮಧ್ಯಪ್ರಾಚ್ಯದ ರಾಷ್ಟ್ರಗಳಿಗೂ ತಟ್ಟುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಹೇಳಲು ಈಗಾಗಲೇ ಆಯಾಯ ದೇಶಗಳಲ್ಲಿ ಸಣ್ಣಗೆ ಆರಂಭವಾಗುತ್ತಿರುವ ಪ್ರತಿಭಟನೆಗಳೇ ಸಾಕ್ಷಿ.


    ಹಾಗಾದರೆ ಎಲ್ಲವೂ ಸರಿಯಿರುವಾಗ ಲಿಬಿಯಾದಲ್ಲಿ ಹೀಗೆ ಇದ್ದಕ್ಕಿದ್ದಂತೆ ಧಿಗ್ಗೆಂದು ಹೊತ್ತಿಕೊಂಡ ಕ್ರಾಂತಿಗೆ ಕಾರಣವಾದರು ಏನು? ಲಿಬಿಯನ್ನರು ಇಷ್ಟೆಲ್ಲಾ ಸಿಕ್ಕ ಮೇಲು ಇನ್ನೂ ಹೆಚ್ಚಿನದನ್ನು ಅವನಿಂದ ನಿರೀಕ್ಷಿಸಿದ್ದರೆ? ಅಥವಾ ನಮ್ಮ ಕಣ್ಣಿಗೆ ಕಾಣದ ಆಂತರಿಕ ರಾಜಕೀಯ ಕಲಹಗಳೇನಾದರೂ ಇದ್ದವೆ? ಅಥವಾ ಗಡಾಫಿ ಆಳ್ವಿಕೆ ಸಾಕು ಬೆರೆ ಯಾರಾದರು ಆಳಲಿ ಎಂದು ಜನ ಹೊಸತನಕ್ಕೆ ಬಯಸಿದರೆ? ಅಥವಾ ಇಲ್ಲಿನ ಜನರು ಅಧಿಕಾರ, ಸಂಪತ್ತಿನ ಆಸೆಯಿಂದಾಗಿ ಪ್ರತಿಭಟನೆಯೆದ್ದರೆ? ಅಥವಾ ಅಲ್ಲಿಯ ಜನಕ್ಕೆ ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆಯೊಂದು ಬೇಕಾಗಿದೆಯೇ? ಅಥವಾ ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ಹತೋಟಿ ಸಾಧಿಸಲು ಲಿಬಿಯಾದ ವಿರುದ್ಧ ಅಮೆರಿಕಾ ಮತ್ತು ಇಟಲಿ ದೇಶಗಳು ಜಂಟಿಯಾಗಿ ಸಂಚು ನಡೆಸುತ್ತಿವೆಯೇ? ಅಥವಾ ಇದು ಧಾರ್ಮಿಕ ಮೂಲಭಾತವಾದ ಮತ್ತು ನವವಸಾಹತುಶಾಹಿಗಳು ರಚಿಸಿದ ವ್ಯೂಹವೆ? ಅಥವಾ ಅದರ ಹಿಂದೆ ಮತ್ಯಾವುದೋ ಕಾಣದ ಕೈಗಳ ಕೈವಾಡಯಿದೆಯೇ? ಈ ಎಲ್ಲಾ ಪ್ರಶ್ನೆ, ಊಹೆಗಳಿಗೆ ಕಾಲವೇ ಉತ್ತರ ನೀಡುತ್ತದೆ. ಅಲ್ಲಿಯವರೆಗೆ ನಾವು ತಾಳ್ಮೆಯಿಂದ ಕಾಯಬೇಕಷ್ಟೇ.

    -ಉದಯ್ ಇಟಗಿ

    12-3-2011 ರ ಉದಯವಾಣಿಯಲ್ಲಿ ಪ್ರಕಟಿತ. ಅದರ ಲಿಂಕ್ ಇಲ್ಲಿದೆ. http://74.127.61.106/epaper/PDFList.aspx?Pg=H&Edn=MN&DispDate=3/12/2011

    ಕನಸು ನನಸುಗಳ ನಡುವಿನ ನೆನಪು (ಭಾಗ-3)

  • ಶನಿವಾರ, ಜನವರಿ 22, 2011
  • ಬಿಸಿಲ ಹನಿ
  • ಈ ನಡುವೆ ನನ್ನ ಪಿ.ಯು.ಸಿ ಪರೀಕ್ಷೆಗೆ ಮತ್ತೆ ಕಟ್ಟಿದ್ದೆನಾದರೂ ಪರೀಕ್ಷೆ ತೆಗೆದುಕೊಳ್ಳಲು ಹೋಗಲಿಲ್ಲ. ಓದುವ, ಪರೀಕ್ಷೆ ತೆಗೆದುಕೊಳ್ಳುವ ಉತ್ಸಾಹವೇ ಇರಲಿಲ್ಲ. ಓದಿ ಪಾಸ್ ಮಾಡಿದರೆ ಮುಂದೆ ಓದಿಸುವವರು ಯಾರು? ಎಲ್ಲರಿಗೂ ಅವರವರ ಬದುಕು ಭಾರವಾಗಿತ್ತು. ಅಪ್ಪನಿಗೇ ಇಲ್ಲದ ಕಾಳಜಿ ಬೇರೆಯವರಿಗೆ ಎಲ್ಲಿಂದ ಬಂದೀತು? ಇದ್ದೊಬ್ಬ ಅಣ್ಣ ಬಿ.ಎ. ಮಾಡಿ ಟೀಚರ್ಸ್ ಟ್ರೇನಿಂಗ್ ಮುಗಿಸಿ ದೊಡ್ಡಪ್ಪನ ಊರಲ್ಲಿ ಅವರ ಹೊಲಗದ್ದೆಗಳನ್ನು ನೋಡಿಕೊಂಡಿದ್ದನು. ಏಕಾಏಕಿ ಆ ಹಂಗಿನಿಂದ ಹೊರಗೆ ಬಂದು ಆಚೆ ಕಡೆ ಏನಾದರೊಂದು ಕೆಲಸ ಮಾಡುವದು ಆ ಸಮಯದಲ್ಲಿ ಅವನಿಗೂ ಸಾಧ್ಯವಿರಲಿಲ್ಲ. ಮುಂದೆ ಸ್ವಲ್ಪ ದಿನ ನನ್ನ ತಾಯಿ ತವರು ಮನೆ ಸುಲ್ತಾನಪೂರದಲ್ಲಿ, ಸ್ವಲ್ಪ ದಿನ ನನ್ನ ದೊಡ್ಡಮ್ಮನ ಊರು ಕಲಕೋಟಿಯಲ್ಲಿ ಅವರ ಒಕ್ಕಲುತನದ ಕೆಲಸಗಳಲ್ಲಿ ಸಹಾಯಮಾಡುತ್ತಾ ಕಾಲ ಕಳೆದೆ. ಆಗೆಲ್ಲಾ ಅವರಿಗೆ ತುಂಬಾ ಭಾರವಾಗುತ್ತಿದ್ದೇನಲ್ಲ ಎಂದನಿಸಿ ಅತೀವ ಮುಜುಗರವಾಗುತ್ತಿತ್ತು. ಈ ನಡುವೆ ನನ್ನ ಅಕ್ಕ “ನೀನು ಓದಿ ಪಾಸ್ ಮಾಡಿದರೆ ತಾನೆ ಯಾರಾದರೂ ನಿನ್ನನ್ನು ಓದಿಸಲು ಯೋಚಿಸೋದು. ಮೊದಲು ಓದಿ ಪಾಸ್ ಮಾಡು. ಆಮೇಲೆ ನಾವ್ಯಾರಾದರು ಓದಿಸುತ್ತೇವೆ” ಎಂದು ಒಂದಿಷ್ಟು ಧೈರ್ಯ ಹೇಳಿ ಗದುಗಿಗೆ ಕರೆತಂದಳು. ಅಕ್ಕನ ಸಹಾಯದಿಂದ ಧಾರವಾಡಕ್ಕೆ ಹೋಗಿ ಮತ್ತೆ ಪರೀಕ್ಷೆ ಕಟ್ಟಿ ಬಂದೆ.

    ನನಗೆ ಅಲ್ಲಿಯೂ ಅವರಿಗೆ ಭಾರವಾಗಿರಲು ಇಷ್ಟವಿರಲಿಲ್ಲ. ನನ್ನ ಖರ್ಚಿಗಾಗುವಷ್ಟನ್ನಾದರೂ ನಾನು ಸಂಪಾದಿಸಬೇಕಿತ್ತು. ಹೀಗಾಗಿ ಗೆಳೆಯರಾದ ನೀಲಗುಂದ ಮತ್ತು ಭುಜರಿಯ ಸಹಾಯದಿಂದ ಗದುಗಿನ ಪ್ರತಿಷ್ಠಿತ ಫೋಟೋ ಸ್ಟುಡಿಯೊವೊಂದರಲ್ಲಿ ಕೆಲಸ ಹಿಡಿದೆ. ಸ್ಟುಡಿಯೋದಲ್ಲಿ ದೊಡ್ಡ ದೊಡ್ಡ ಡೆವಲಿಪ್ಪಿಂಗ್ ಮತ್ತು ಪ್ರಿಂಟಿಂಗ್ ಮಶಿನ್ ಗಳಿದ್ದವು. ನನಗೆ ಅವನ್ನು ಮುಟ್ಟಲು ಸಹ ಭಯವಾಗುತ್ತಿತ್ತು. ಏನೋ ಮಾಡಲು ಹೋಗಿ ಏನಾದರು ಆಗಿಬಿಟ್ಟರೆ? ಏನು ಮಾಡುವದು? ದುಡ್ಡು ಎಲ್ಲಿಂದ ತರುವದು? ಹೀಗಾಗಿ ಪ್ರಿಂಟಿಗ್ ಬಿಟ್ಟು ಡೆವಲಪ್ ಆದ ನೆಗಟಿವ್ ಗಳನ್ನು ಕವರ್ ನಲ್ಲಿ ಸೇರಿಸುವದು, ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ಕತ್ತರಿಸಿ ಕೊಡುವದು, ಪ್ರಿಂಟ್ ಹಾಕಿದ ಫೋಟೊಗಳನ್ನು ಡೆಲಿವರಿ ಡೆಸ್ಕಿಗೆ ಕಳಿಸುವದು, ಒಂದೊಂದು ಸಾರಿ ಆರ್ಡರ್ಸ್ ತೆಗೆದುಕೊಳ್ಳುವದು.... ಹೀಗೆ ಒಂದೊಂದಾಗಿ ಫೋಟೋಗ್ರಾಫಿಗೆ ಸಂಬಂಧಪಟ್ಟ ಕೆಲಸಗಳನ್ನು ಕಲಿಯುತ್ತಿದ್ದಂತೆ ನನಗೇ ಗೊತ್ತಿಲ್ಲದಂತೆ ನನ್ನೊಳಗೊಬ್ಬ ಫೋಟೊಗ್ರಾಫರ್ ಮೊಳಕೆಯೊಡೆದಿದ್ದ. ಎಷ್ಟೋ ಸಲ ಹೆಗಲಿಗೊಂದು ಕ್ಯಾಮೆರಾ ಏರಿಸಿ ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ಓಡಾಡಿ ಫೋಟೊ ತೆಗೆಯುವ ಕನಸನ್ನು ಕಂಡಿದ್ದಿದೆ. ಆದರೆ ತಿಂಗಳಾಗುವಷ್ಟೊತ್ತಿಗೆ ಮಾಲೀಕರು ಒಂದು ತಿಂಗಳ ಸಂಬಳವನ್ನು ಕೈಗಿತ್ತು ಕಾರಣ ಹೇಳದೆ ನಾಳೆಯಿಂದ ಬರಬೇಡ ಎಂದಷ್ಟೆ ಹೇಳಿ ಕಳುಹಿಸಿದರು. ಬಹುಶಃ, ಅವರು ನಾನು ಒಂದು ತಿಂಗಳಲ್ಲಿಯೇ ಎಲ್ಲ ಕೆಲಸವನ್ನು ಕಲಿತುಕೊಳ್ಳುತ್ತೇನೆ ಎಂದು ನಿರೀಕ್ಷಿಸಿದ್ದರೋ ಅಥವಾ ಅವರಿಗೆ ನನ್ನನ್ನು ಕೆಲಸದಿಂದ ತಗೆಯಬೇಕಿತ್ತೋ ಗೊತ್ತಿಲ್ಲ. ಅಂತೂ ಆ ಕೆಲಸಕ್ಕೆ ಇತಿಶ್ರೀ ಹಾಡಿದೆ. ಆ ಮೂಲಕ ನನ್ನೊಳಗೆ ಚಿಗುರೊಡೆದಿದ್ದ ಫೋಟೋಗ್ರಾಫರ್ ಸತ್ತು ಹೋದ. ಒಂದು ಕೆಲಸವನ್ನು ನಾವಾಗಿಯೇ ಬಿಡುವದಕ್ಕೂ ಅದಾಗಿಯೇ ಹೋಗುವದಕ್ಕೂ ತುಂಬಾ ವ್ಯತ್ಯಾಸವಿದೆ; ಮೊದಲನೆಯದು ಈ ಕೆಲಸ ನನ್ನ ಯೋಗ್ಯತೆಗೆ ತಕ್ಕದಾಗಿಲ್ಲ ಎನ್ನುವ ಅರ್ಥವನ್ನು ಕೊಟ್ಟರೆ ಎರಡನೆಯದು ಕಾರಣ ಏನೇ ಇದ್ದರೂ ನಾನು ಆ ಕೆಲಸಕ್ಕೆ ಯೋಗ್ಯನಲ್ಲ ಎನ್ನುವ ಸಂದೇಶವನ್ನು ಕೊಡುತ್ತದೆ. ಕೆಲಸ ಕಳೆದುಕೊಂಡ ಅವಮಾನ ನನ್ನನ್ನು ಮತ್ತಷ್ಟು ಜರ್ಝರಿತನನ್ನಾಗಿ ಮಾಡಿತು.

    ಸರಿ, ಮುಂದೆ ಏನು ಮಾಡುವದು? ಕಲಕೋಟಿಯಲ್ಲಿ ನನಗೆ ಕಲಿಸಿದ್ದ ನನ್ನ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಗದುಗಿಗೆ ಆಗಷ್ಟೆ ವರ್ಗವಾಗಿ ಬಂದಿದ್ದರು. ಮೊದಲಿನಿಂದಲೂ ಅವರಿಗೆ ನನ್ನ ಜಾಣತನದ ಬಗ್ಗೆ ಗೊತ್ತಿದ್ದರಿಂದ ಅವರು ತಮ್ಮ ಮನೆ ಹತ್ತಿರ ತೀರ ಸಣ್ಣ ಮಕ್ಕಳಿಗೆ ನಾನು ಯಾಕೆ ಟ್ಯೂಶನ್ ಮಾಡಬಾರದು ಎಂಬ ಸಲಹೆ ಕೊಟ್ಟರು. ‘ಪಿ.ಯು.ಸಿ ಫೇಲಾದವನೊಬ್ಬ ಯಾವ ತರದ ಟ್ಯೂಶನ್ ಮಾಡಿಯಾನು?’ ಎಂಬ ನನ್ನ ಆತಂಕವನ್ನು ಅವರ ಮುಂದಿಟ್ಟಾಗ “ನೀನು ಮೊದಲಿನಿಂದಲೂ ಜಾಣ ವಿದ್ಯಾರ್ಥಿ, ನಿನ್ನ ಇಂಗ್ಲೀಷ್ ಮತ್ತು ಗಣಿತ ಚನ್ನಾಗಿದೆ. ದೊಡ್ಡವರಿಗಲ್ಲದಿದ್ದರೂ ಸಣ್ಣ ಮಕ್ಕಳಿಗಿ ಪಾಠ ಹೇಳುವಷ್ಟು ಸಾಮರ್ಥ್ಯ ನಿನ್ನಲ್ಲಿದೆ. ನಿನ್ಯಾಕೆ ಪ್ರಯತ್ನಿಸಬಾರದು?” ಎಂದು ಧೈರ್ಯ ತುಂಬಿದರು. ಆ ಪ್ರಕಾರ ದಿನಾಲೂ ಅಕ್ಕನ ಮನೆಯಿಂದ ಅವರ ಮನೆಗೆ ಹೋಗಿ ಪಾಠ ಹೇಳಿ ಬರುತ್ತಿದ್ದೆ. ಪಾಠ ಮಾಡುತ್ತಾ ಮಾಡುತ್ತಾ ನಾನು ಬರೀ ಚಿಕ್ಕ ಮಕ್ಕಳಿಗೆ ಮಾತ್ರವಲ್ಲ SSLC ಮಕ್ಕಳಿಗೂ ಸಹ ಗಣಿತ ಮತ್ತು ಇಂಗ್ಲೀಷ್ ಹೇಳಿಕೊಡಬಲ್ಲೆ ಎನ್ನುವ ಆತ್ಮವಿಶ್ವಾಸ ಮೂಡಿತ್ತು. ಏಕೆಂದರೆ SSLC ಯಲ್ಲಿ ನಾನು ನನ್ನ ಗುರುಗಳಾದ ಅಣ್ಣಿಗೇರಿ ಮಾಸ್ತರರಿಂದ ಕಲಿತ ಗಣಿತ ಮತ್ತು ಇಂಗ್ಲೀಷ್ ನನ್ನ ತಲೆಯಲ್ಲಿ ಇನ್ನೂ ಹಾಗಾಗೆ ಉಳಿದಿದ್ದವು. ಹಾಗೆ ಮೆಲ್ಲಗೆ ನನ್ನೊಳಗೆ ಹುಟ್ಟಿದ ಶಿಕ್ಷಕನೊಬ್ಬ ಮುಂದೊಂದು ದಿನ ಬೃಹದಾಕಾರವಾಗಿ ನಿಲ್ಲುತ್ತಾನೆಂದು ನಾನೆಣಿಸಿರಲಿಲ್ಲ. ನನ್ನ ಹತ್ತಿರ ಟ್ಯೂಶನ್ ಬರುವ ಮಕ್ಕಳೆಲ್ಲಾ ಒಳ್ಳೆ ಅಂಕಗಳನ್ನು ತೆಗೆದುಕೊಂಡು ಪಾಸಾಗತೊಡಗಿದರು. ಇದರಿಂದ ಹೆಚ್ಚಿನ ಮಕ್ಕಳು ಬರತೊಡಗಿದರು. ನಾನು ನಿರೀಕ್ಷಿಸಿದ್ದಕ್ಕಿಂತ ದುಡ್ಡು ಕೂಡ ಚನ್ನಾಗಿ ಬರತೊಡಗಿತು. ಈಗಾಗಲೇ ಪಿ.ಯು.ಸಿ. ಪರೀಕ್ಷಿಗೆ ಕಟ್ಟಿಬಂದಿದ್ದರಿಂದ ನನ್ನ ಕೆಲಸದ ಜೊತೆಜೊತೆಗೆ ಪರೀಕ್ಷೆಗೆ ತಯಾರಾಗತೊಡಗಿದೆ.

    ಇದೇ ಸಂದರ್ಭದಲ್ಲಿ ಆಗಷ್ಟೇ ಮದುವೆಯಾಗಿದ್ದ ನನ್ನ ಅಣ್ಣ ಅಂದರೆ ನನ್ನ ದೊಡ್ಡಪ್ಪನ ಮಗ “ನೀನು ಪಿ.ಯು.ಸಿ. ಪಾಸ್ ಮಾಡಿದರೆ ಮುಂದೆ ನಮ್ಮ ಜೊತೆ ಇದ್ದುಕೊಂಡು ಓದಬಹುದು” ಎಂದು ಭರವಸೆ ಕೊಟ್ಟ. ನನಗೋ ಎಲ್ಲಿಲ್ಲದ ಖುಶಿ! ನಾನು ಓದಲಾರದೆ ಹಾಗೆ ಉಳಿದು ಬಿಡುತ್ತೆನೆ ಎಂದುಕೊಂಡವನಿಗೆ ಸ್ವರ್ಗ ಮೂರೇ ಗೇಣು! ಆ ವರ್ಷ 1995. ನನ್ನ ಟ್ಯೂಶನ್ ಕೆಲಸದ ಜೊತೆ ಕಷ್ಟಬಿದ್ದು ಓದಿದೆ. ಈ ವರ್ಷ ಓದಿ ಪಾಸ್ ಮಾಡದೇ ಹೋದರೆ ಸಿಕ್ಕ ಅವಕಾಶ ಎಲ್ಲಿ ಕೈತಪ್ಪಿ ಹೋಗುತ್ತದೋ ಎಂಬ ಭಯದಿಂದ ಹಟಕ್ಕೆ ಬಿದ್ದು ಓದಿದೆ. ಏಪ್ರಿಲ್ ತಿಂಗಳಲ್ಲಿ ಧಾರವಾಡಕ್ಕೆ ಹೋಗಿ ಪರೀಕ್ಷೆ ಬರೆದು ಬಂದೆ. ಪರೀಕ್ಷೆಯಲ್ಲಿ ಪಾಸಾಗುತ್ತೆನೆ ಎಂಬ ಅತ್ಮವಿಶ್ವಾಸವಿತ್ತು. ಅಕಸ್ಮಾತ್ ಫೇಲಾಗಿ ಬಿಟ್ಟರೆ? ಇದ್ದೇ ಇದೆಯಲ್ಲ ಟ್ಯೂಶನ್ ಮಾಡ್ಕೊಂಡು ಹೋಗೋದು ಎಂದು ಟ್ಯೂಶನ್ ನಡೆಸಲು ತಯಾರಿ ಮಾಡಿಕೊಳ್ಳತೊಡಗಿದೆ. ಜೂನ್ ಮೊದಲ ವಾರದಲ್ಲಿ ಪಿ.ಯು.ಸಿ. ಫಲಿತಾಂಶ ಹೊರಬಿತ್ತು. ನನಗೋ ಏನಾಗುತ್ತದೋ ಎಂಬ ಆತಂಕ! ಧಾರವಾಡಕ್ಕೆ ಹೋಗಿ ರಿಸಲ್ಟ್ ನೋಡಿದೆ. ನನ್ನ ಅದೃಷ್ಟಕ್ಕೆ ಪಾಸಾಗಿದ್ದೆ. ಕುಣಿದುಕುಪ್ಪಳಿಸಿಬಿಟ್ಟೆ. ಅದೇ ಖುಶಿಯಲ್ಲಿ ಧಾರವಾಡದ ವಿಜಯಾ ಥೇಟರ್ ನಲ್ಲಿ ಆಗಷ್ಟೆ ಬಿಡುಗಡೆಯಾದ ಉಪೇಂದ್ರನ “ಓಂ” ಸಿನಿಮಾ ನೋಡಿ ಗದುಗಿಗೆ ವಾಪಾಸಾಗಿದ್ದೆ.

    ನಾವು ಪ್ರೀತಿಸದೆ ಯಾರನ್ನೂ ದ್ವೇಷಿಸಲಾರೆವು!

  • ಶನಿವಾರ, ಜನವರಿ 15, 2011
  • ಬಿಸಿಲ ಹನಿ

  • ನಾವಿಬ್ಬರೂ ಚನ್ನಾಗಿಯೇ ಇರುತ್ತಿದ್ದೆವು; ಕಿಲಕಿಲ ನಗುತ್ತಾ, ರೇಗಿಸುತ್ತಾ, ತಮಾಷೆ ಮಾಡುತ್ತಾ ಜಗತ್ತಿನಲ್ಲಿ ನಾವಿಬ್ಬರೇ ಪ್ರೀತಿಸುತ್ತಿರುವಂತೆ ಒಬ್ಬರಿಗೊಬ್ಬರು ಸದಾ ಅಂಟಿಕೊಂಡೇ ಇರುತ್ತಿದ್ದೆವು. ಆದರೆ ಒಮ್ಮೊಮ್ಮೆ ಶರಂಪರ ಜಗಳಾಡಿ, ಕಿತ್ತಾಡಿಕೊಂಡು, ಮಾತುಬಿಟ್ಟು, ಮೌನವೃತ ಹಿಡಿದು ನಾನೊಂದು ದಿಕ್ಕು ನೀನೊಂದು ದಿಕ್ಕಾಗಿ ಕುಳಿತು ಬಿಡುತ್ತಿದ್ದೆವು. ಅಲ್ಲಿ ನೀನಿರುತ್ತಿದ್ದೆ, ನಾನಿರುತ್ತಿದ್ದೆ. ಅದರೂ ನಾವಿಲ್ಲವಾಗಿರುತ್ತಿದ್ದೆವು. ಅದೇನೋ ಗೊತ್ತಿಲ್ಲ ಒಮ್ಮೊಮ್ಮೆ ಇದ್ದಕ್ಕಿಂದ್ದಂತೆ ಈ ಜಗಳ ಇಬ್ಬರ ಮಧ್ಯ ಧುತ್ತೆಂದು ವಕ್ಕರಿಸಿಬಿಡುತ್ತಿತ್ತು. ಅಸಲಿಗೆ ಅದಕ್ಕೊಂದು ಕಾರಣಾಂತ ಇರುತ್ತಿರಲಿಲ್ಲ. ಒಂದೊಂದು ಸಲ ತಮಾಷೆಯೇ ಜಗಳಕ್ಕೆ ತಿರುಗಿಬಿಡೋದು. ಆಗೆಲ್ಲಾ ಒಬ್ಬರೊನ್ನೊಬ್ಬರು ಆಪಾದಿಸುತ್ತಾ, ಟೀಕಿಸುತ್ತಾ, ಶಪಿಸುತ್ತಾ, ಸಣ್ಣ ಸಣ್ಣ ತಪ್ಪುಗಳನ್ನು ದೊಡ್ಡದಾಗಿಸುತ್ತಾ ಇಬ್ಬರೂ ಒಬ್ಬರೊನ್ನೊಬ್ಬರು ಇನ್ನಿಲ್ಲದಂತೆ ದ್ವೇಷಿಸುತ್ತಿದ್ದೆವು. ಈ ದ್ವೇಷದಲ್ಲಿ ನಗು, ಮಾತು, ಎಲ್ಲವೂ ಮರೆತು ಹೋಗುತ್ತಿತ್ತು. ಸದಾ ಜೇನಹನಿಗಳಂತೆ ಸುರಿಯುತ್ತಿದ್ದ ನಮ್ಮ ಮಾತುಗಳು ವಿಷದ ಮುಳ್ಳುಗಳಾಗಿ ಚುಚ್ಚುತ್ತಿದ್ದವು. ಗಂಡ ಹೆಂಡಿರ ಜಗಳ ಹಾಸಿಗೆಯಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ ನಮ್ಮದು ಹಾಸಿಗೆಯಲ್ಲೂ ಭುಸುಗುಟ್ಟಿ ನಾನೊಂದು ಮಗ್ಗಲು, ನೀನೊಂದು ಮಗ್ಗಲಾಗಿ ಮಲಗುತ್ತಿದ್ದೆವು. ಈ ಜಗಳದಲ್ಲಿ ನಾವಿಬ್ಬರೂ ಎಷ್ಟು ಅಸಹ್ಯವಾಗಿ ವರ್ತಿಸುತ್ತಿದ್ದೆವೆಂದರೆ ನಾವು ಸುಸಂಸ್ಕೃತರು, ವಿದ್ಯಾವಂತರು ಎಂಬುದನ್ನು ಕೂಡ ಮರೆತು ಬಿಡುತ್ತಿದ್ದೆವು. ಸಭ್ಯತೆ, ನಾಗರಿಕತೆಯ ಮುಸುಕು ಹೊದ್ದ ನಮ್ಮಿಬ್ಬರೊಳಗೆ ಅದೆಂಥ ಅಸಹ್ಯದ ಭಾವಗಳಿರುತ್ತಿದ್ದವು!

    ಜಗಳದಲ್ಲಿ ವಾಗ್ವುದ್ಧ ಭರ್ಜರಿಯಾಗಿ ನಡೆಯುತ್ತಿತ್ತು. ಮಾತೆಲ್ಲ ಮುಗಿದ ಮೇಲೆ ಮತ್ತೆ ಒಂದಷ್ಟು ದಿವಸ ಮೌನ ಯುದ್ಧ ನಡೆಯುತ್ತಿತ್ತು. ಅದು ಮಾತಿನ ಯುದ್ಧಕ್ಕಿಂತ ಇನ್ನೂ ಭಯಂಕರವಾಗಿರುತ್ತಿತ್ತು. ಅದೂ ಮುಗಿದು ಇನ್ನೇನು ಮತ್ತೆ ಇಬ್ಬರೂ ಒಂದಾಗಬೇಕೆನ್ನುವಷ್ಟರಲ್ಲಿ ನಮ್ಮಿಬ್ಬರ ಅಹಂ ಅಡ್ದಿ ಬರುತ್ತಿತ್ತು. ನಾನು ಮೊದಲು ಮಾತಾಡಲಿಯೆಂದು ನೀನು....... ನೀನು ಮೊದಲು ಮಾತಾಡಲಿಯೆಂದು ನಾನು.......ಹೀಗೆ ನಾವಿಬ್ಬರೂ ನಮ್ಮ ನಮ್ಮ ಅಹಮ್ಮಿನ ಕೋಟೆಯೊಳಗೆ ಬಂಧಿಯಾಗಿ ಹತ್ತಿರವಿದ್ದೂ ದೂರ ದೂರ ಉಳಿಯುತ್ತಿದ್ದೆವು. ನಮ್ಮಿಬ್ಬರ ನಡುವಿನ ಮೌನ ಮಾತಾಡುವ ಘಳಿಗೆಗಳಿಗಾಗಿ ತವಕಿಸುತ್ತಿತ್ತು. ಸರಿ, ಆ ಮೌನ ಮುರಿಯುವರಾದರೂ ಯಾರು? ನೀವು ಹುಡುಗಿಯರು ಅಷ್ಟು ಬೇಗ ಸೋಲುವದಿಲ್ಲ ಎಂದು ಗೊತ್ತಿದ್ದರಿಂದ ನಾನೇ ಮಾತಾಡಲು ಮುಂದಾಗುತ್ತಿದ್ದೆ. ಆಗೆಲ್ಲಾ ನಾನು “ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ, ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ?” ಎಂದು ನನ್ನಷ್ಟಕ್ಕೆ ನಾನೆ ಹಾಡಿಕೊಳ್ಳುತ್ತಾ ನಿನಗೆ ಹತ್ತಿರವಾಗಲು ನೋಡುತ್ತಿದ್ದೆ. ಆದರೆ ನೀನು ಮತ್ತೆ ಕೆಕ್ಕರಿಸಿದ ಕಣ್ಣುಗಳಿಂದ ನನ್ನ ದೂರ ತಳ್ಳುತ್ತಿದ್ದೆ. ಅಸಲಿಗೆ ನಾನು ಆ ಹಾಡನ್ನು ನಮ್ಮಿಬ್ಬರ ನಡುವಿನ ಬಿಗಿಯಾದ ವಾತಾವರಣವನ್ನು ತಿಳಿಗೊಳಿಸಲು ಹಾಡುವದಕ್ಕಿಂತ ಹೆಚ್ಚಾಗಿ ನಿನ್ನನ್ನು ಚುಚ್ಚಲು, ಛೇಡಿಸಲು ಹಾಡುತ್ತಿದ್ದೆ ಎಂದು ನೆನೆಸಿಕೊಂಡರೆ ನನಗೀಗ ನಗು ಬರುತ್ತದೆ. ಇರಲಿ. ಎಲ್ಲದಕ್ಕೂ ಒಂದು ಕೊನೆಯಂತಾ ಇರಲೇಬೇಕಲ್ಲವೆ? ಹಾಗೆಯೇ ನಮ್ಮ ಜಗಳಕ್ಕೂ ಒಂದು ಕೊನೆಯಿರುತ್ತಿತ್ತು. ದಿನಕಳೆದಂತೆ ನಮ್ಮಿಬ್ಬರ ನಡುವೆ ಕಟ್ಟಿಕೊಂಡಿದ್ದ ಚೀನಾ ಗೋಡೆ ಕರಗಿ ಮೊದಲಿನಂತಾಗಿ ಮೆಲ್ಲನೆ ನಾವಿಬ್ಬರೂ ಮತ್ತೆ ಜಮುನೆ ಗಂಗೆಯರಂತೆ ಸಂಗಮಿಸಿ ಹರಿಯುತ್ತಿದ್ದೆವು.

    ನಮ್ಮಿಬ್ಬರ ಪ್ರೀತಿ ಮತ್ತೆ ಕೂಡಿಕೊಂಡು ತೋಳುಗಳು ತಬ್ಬಿಕೊಂಡ ಹೊತ್ತಿನಲ್ಲಿ ನೀನು ನನ್ನ ಕೇಳುತ್ತಿದ್ದೆ “ಯಾಕೆ ನನ್ನೊಂದಿಗೆ ಇಷ್ಟೊಂದು ಜಗಳವಾಡುತ್ತೀಯಾ? ಯಾಕೆ ನನ್ನ ಮೇಲೆ ಇಷ್ಟೊಂದು ಸಿಡಿಮಿಡಿಗುಟ್ಟುತ್ತೀಯಾ? ಯಾಕೆ ನನ್ನನ್ನು ಇಷ್ಟೊಂದು ದ್ವೇಷಿಸುತ್ತೀಯಾ? ಕಾರಣವೇನು?” ನಾನಾಗ ಮೆಲ್ಲಗೆ “ನಿನ್ನ ಪ್ರೀತಿಸುವದೇ ಈ ಎಲ್ಲ ದ್ವೇಷಕ್ಕೆ ಕಾರಣ.” ಎಂದು ಹೇಳುತ್ತಿದ್ದೆ. ನೀನು ಅರ್ಥವಾಗದೆ ನನ್ನನ್ನು ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದೆ. ನಾನು ನಿಧಾನಕ್ಕೆ ಎಲ್ಲವನ್ನೂ ಅರ್ಥಮಾಡಿಸುತ್ತಾ ಹೋಗುತ್ತಿದ್ದೆ.

    ಯಾರು ಹೆಚ್ಚು ಜಗಳಾಡ್ತಾ ಇರ್ತಾರೆ ಅವರು ಹೆಚ್ಚು ಪ್ರೀತಿಸ್ತಾರೆ. ಬಹಳ ಇಷ್ಟ ಇರೋವ್ರ ಜೊತೆನೇ ಅಲ್ವ ನಮ್ಮ ಜಗಳ? ನಾನು ನಿನ್ನನ್ನು ಹೆಚ್ಚು ಪ್ರಿತಿಸುತ್ತೇನೆ. ಅದಕ್ಕೇ ನಿನ್ನೊಂದಿಗೆ ಈ ಕೋಪ, ತಾಪ, ದ್ವೇಷ ಎಲ್ಲ! ಬರೀ ನಿನ್ನೊಂದಿಗೆ ಮಾತ್ರವಲ್ಲ ನನಗೆ ಹತ್ತಿರವಾದ ಎಲ್ಲರೊಂದಿಗೂ ಇದು ಇದ್ದದ್ದೇ. ಅದೇ ಜೀವನ! ಹಾಗೆ ನೋಡಿದರೆ ಪ್ರೀತಿಯ ಇನ್ನೊಂದು ಮುಖವೇ ದ್ವೇಷ. ಪ್ರೀತಿ ಎಲ್ಲಿರುತ್ತದೋ ಅಲ್ಲಿ ದ್ವೇಷ ಇರಲೇಬೇಕು! ನಾವು ದ್ವೇಷಿಸುವದು ಪರಸ್ಪರ ಪರಿಚಯವಿರುವವರನ್ನೇ, ಅಪರಿಚಿತರನ್ನಲ್ಲ! ನಮ್ಮಿಂದ ಪ್ರೀತಿಸಲ್ಪಟ್ಟ ವ್ಯಕ್ತಿಯೇ ದ್ವೇಷಕ್ಕೆ ತುತ್ತಾಗುವದು. ನಮ್ಮ ದ್ವೇಷಕ್ಕೆ ಬಲಿಯಾಗುವವನು ಪರಿಚಿತ ವ್ಯಕ್ತಿಯೇ! ಪರಿಚಯವು ಗಾಢವಾದಾಗಲೇ ವ್ಯಕ್ತಿಯ ಬಗೆಗೆ ಸಲಿಗೆ ಹೆಚ್ಚಾಗುತ್ತದೆ. ಆ ಸಲಿಗೆ ಸ್ನೇಹಕ್ಕೆ, ಸ್ನೇಹ ಪ್ರೀತಿಗೆ ತಿರುಗುತ್ತದೆ. ಆ ಪ್ರೀತಿ ಹೆಚ್ಚಾದಂತೆ ಅವನ ಮೇಲೆ ಅಧಿಕಾರ, ಹಕ್ಕು ಚಲಾಯಿಸಲು ನೋಡುತ್ತೇವೆ. ಆಗಲೇ ಈ ಜಗಳ ಶುರುವಾಗಿ ದ್ವೇಷಕ್ಕೆ ತಿರುಗೋದು. ಆ ದ್ವೇಷ ಜ್ವಾಲಾಗ್ನಿಯಾಗಿ ಉರಿಯೋದು. ಕಾಲ ಸರಿದಂತೆಲ್ಲಾ ಆ ಜ್ವಾಲಾಗ್ನಿ ಉರಿದು ಬೂದಿಯಾಗುತ್ತದೆ. ಕ್ರಮೆಣ ಪ್ರೀತಿಯ ಫಿನಿಕ್ಸ್ ಹಕ್ಕಿಯೊಂದು ಆ ಬೂದಿಯಿಂದಲೇ ಹುಟ್ಟಿಬರುತ್ತದೆ! ನಾವು ಮತ್ತೆ ಇನ್ನಿಲ್ಲದಂತೆ ಪ್ರೀತಿಸಲು ನೋಡುತ್ತೇವೆ.

    ಬದುಕೆಂದರೆ ಇದೇ ಅಲ್ಲವೆ?

    -ಉದಯ್ ಇಟಗಿ

    ಚಿತ್ರಕೃಪೆ: ಅವಧಿ

    ಕನಸು ನನಸುಗಳ ನಡುವಿನ ನೆನಪು ಭಾಗ-2

  • ಶುಕ್ರವಾರ, ಜನವರಿ 07, 2011
  • ಬಿಸಿಲ ಹನಿ
  • ನಾನು S.S.L.C. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ತೆಗೆದುಕೊಂಡು ಪಾಸಾಗಿದ್ದರಿಂದ ಧಾರವಾಡದಲ್ಲಿ ಆಗಲೇ ವಕೀಲ ವೃತ್ತಿಯನ್ನು ಮಾಡುತ್ತಿದ್ದ ನನ್ನ ಚಿಕ್ಕಪ್ಪ (ಜಗದೀಶ್ ಇಟಗಿ) ಇನ್ನುಮುಂದೆ ನಾನು ಓದಿಸುತ್ತೇನೆಂದು ಕರೆದುಕೊಂಡು ಬಂದನು. ನನಗೆ ಹೆಚ್ಚು ಅಂಕಗಳು ಬಂದಿದ್ದರಿಂದ ಸಹಜವಾಗಿ ಎಲ್ಲರ ಮನೆಯಲ್ಲೂ ಹೇಳುವಂತೆ ನಮ್ಮ ಮನೆಯಲ್ಲೂ ಸಾಯಿನ್ಸ್ ತೆಗೆದುಕೊಳ್ಳಲು ಹೇಳಿದರು. ನನಗೆ ಮೊದಲಿನಿಂದಲೂ ಕಥೆ ಕಾದಂಬರಿಗಳ ಹುಚ್ಚು ಇದ್ದುದರಿಂದ “ನಾನು ಆರ್ಟ್ಸ್ ತಗೋತಿನಿ. ನನಗೆ ಸಾಯಿನ್ಸ್ ಅಂದ್ರ ಅಷ್ಟಕ್ಕಷ್ಟ. ದಯವಿಟ್ಟು ಆರ್ಟ್ಸ್ ತಗೊಳ್ಳೋಕೆ ಬಿಡ್ರಿ” ಎಂದು ಗೋಗರೆದರೂ ನಮ್ಮ ಮನೆಯವರು “ಆರ್ಟ್ಸ್ ತಗೊಂಡು ಏನ್ಮಾಡ್ತಿ? ಮಣ್ಣು ತಿಂತಿಯಾ? ಸುಮ್ಕ ಸಾಯಿನ್ಸ್ ತಗೊಂಡು ಉದ್ದಾರ ಆಗು” ಎಂದು ಹೇಳಿದರು. ಅದರ ಹಿಂದೆ ಅವರ ಕಾಳಜಿಯಿತ್ತಾದರೂ ಆ ಕಾಳಜಿ ನನಗೆ ಹಿಂಸೆ ಎನಿಸಿದ್ದಂತೂ ಸತ್ಯ.

    ನನಗೋ ಅತ್ತ ಖಡಾಖಂಡಿತವಾಗಿ ಬೇಡ ಎಂದು ಹೇಳಲಾಗದೆ ಇತ್ತ ಒಪ್ಪಿಕೊಳ್ಳಲಾಗದ ಸಂದಿಗ್ಧತೆ ಹುಟ್ಟಿತು. ಒಟ್ಟಿನಲ್ಲಿ ನನಗೆ ಆ ಸಂದಿಗ್ಧತೆಯಿಂದ ಹೇಗಾದರು ಪಾರಾದರೆ ಸಾಕೆಂದು “ನನಗ ಫಿಜಿಕ್ಸ್, ಕೆಮಿಸ್ಟ್ರಿ ಅಂದ್ರ ಆಗಲ್ಲ. ನಾನು ಅರ್ಟ್ಸೇ ತಗೊಳ್ಳತೀನಿ” ಎಂದು ಬಚಾವಾಗಲು ನೋಡಿದೆ. ಆದರೆ ಅದಾಗಲೇ ಸಾಯಿನ್ಸ್ ತಗೊಂಡು ವೆಟರ್ನರಿ ಡಾಕ್ಟರ್ ಆಗಿದ್ದ ನನ್ನ ದೊಡ್ಡಪ್ಪನ ಮಗ “ನಿನಗೆ ಮ್ಯಾಥ್ಸ್ ನಲ್ಲಿ ಒಳ್ಳೆ ಮಾರ್ಕ್ಸ್ ಬಂದಿದೆ. ಮ್ಯಾಥ್ಸ್ ಬಂದ್ರ ಫಿಜಿಕ್ಸ್, ಕೆಮಿಸ್ಟ್ರಿ ಬಂದಂಗ” ಎಂದು ಅದ್ಯಾವ ತರ್ಕದ ಮೇಲೆ ಈ ಐಡಿಯಾ ಕೊಟ್ಟನೋ ಅಂತೂ ನಾನೂ ಕನ್ವಿನ್ಸ್ ಆಗಿ ಅವರಿಚ್ಛೆಯಂತೆ ನಡೆದುಕೊಂಡಿದ್ದಾಯಿತು. ಮೇಲಾಗಿ ನನಗೆ ಗಣಿತ ಅಚ್ಚುಮೆಚ್ಚಿನ ವಿಷಯವಾಗಿತ್ತು ಹಾಗೂ ನಾನು ಅತ್ಯಂತ ಪ್ರೀತಿಯಿಂದ, ಶ್ರದ್ಧೆಯಿಂದ ಲೆಕ್ಕಗಳನ್ನು ಅಚ್ಚುಕಟ್ಟಾಗಿ ಬಿಡಿಸುತ್ತಿದ್ದೆ. ಈಗಲೂ ಅಷ್ಟೆ ನನಗೆ ಗಣಿತವೆಂದರೆ ಪಂಚಪ್ರಾಣ! ಹೇಗೂ ಗಣಿತವಿರುತ್ತದಲ್ಲ? ಅದರ ಜೊತೆ ಇನ್ನುಳಿದಿದ್ದನ್ನು ಕಷ್ಟಪಟ್ಟು ಓದಿ ಪಾಸ್ ಮಾಡಿದರಾಯಿತು ಎಂದುಕೊಂಡು ಒಂದುತರದ ಹುಂಬತನದ ಮೇಲೆ ಸಾಯಿನ್ಸ್ ತಗೊಂಡಾಯ್ತು.

    ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ನಾನು ಅಟೆಂಡ್ ಮಾಡುತ್ತಿದ್ದುದು ಬರಿ ಮೂರೇ ಮೂರು ಕ್ಲಾಸು; ಕನ್ನಡ,ಇಂಗ್ಲೀಷ್ ಮತ್ತು ಗಣಿತ. ಉಳಿದವುಗಳನ್ನು ಬಲವಂತವಾಗಿ ಕಷ್ಟಪಟ್ಟು ಕೇಳಿಸಿಕೊಂಡರೂ ತಲೆಗೆ ಹೋಗದು. ಇಷ್ಟವೇ ಇಲ್ಲದ ಮೇಲೆ ಹೇಗೆ ತಾನೆ ತಲೆಗೆ ಹೋದೀತು? ನನ್ನ ಕಾಲೇಜಿನ ಅವಧಿಯನ್ನು ಬಹಳಷ್ಟು ಸಾರಿ ಕಾಲೇಜು ಲೈಬ್ರರಿಯಲ್ಲೋ ಇಲ್ಲ ವಿದ್ಯಾವರ್ಧಕ ಸಂಘದ ಲೈಬ್ರರಿಯಲ್ಲೋ ಕಳೆಯುತ್ತಿದ್ದೆ. ಪರಿಣಾಮ, ದ್ವಿತಿಯ ಪಿ.ಯು.ಸಿ.ಯಲ್ಲಿ ಫಿಜಿಕ್ಸ್ ಮತ್ತು ಕೆಮಿಸ್ಟ್ರಿ ವಿಷಯಗಳಲ್ಲಿ ಗೋತಾ ಹೊಡೆದೆ. ಇದರಿಂದ ನನ್ನ ಮೇಲೆ ಅಗಾಧ ನಿರೀಕ್ಷೆ ಇಟ್ಟುಕೊಂಡವರಿಗೆ ಬಲವಾದ ಪೆಟ್ಟುಬಿತ್ತು. ನಾನು ಫೇಲಾಗಿದ್ದು ಕೇಳಿ ನಮ್ಮ ಮನೆಯವರೆಲ್ಲರೂ ತುಚ್ಛವಾಗಿ ಕಂಡರು. ನನಗೆ ಆಶ್ರಯ ಕೊಟ್ಟಿದ್ದ ಚಿಕ್ಕಪ್ಪ “ನೀನು ಚನ್ನಾಗಿ ಓದುತ್ತೀಯೆಂದು ಕರೆದುಕೊಂಡುಬಂದೆ. ಇನ್ನು ನಿಂದು ನೀ ನೋಡ್ಕೋ” ಎಂದು ಹೇಳಿ ಕೈ ತೊಳೆದುಕೊಂಡರು.
    ಸರಿ, ಮುಂದೆ ಏನು ಮಾಡುವದು? ಎಲ್ಲಿಗೆ ಹೋಗುವದು? ಇನ್ಮುಂದೆ ನನ್ನ ಜವಾಬ್ದಾರಿ ತೆಗೆದುಕೊಳ್ಳೋರು ಯಾರು? ನನ್ನೂರಿಗೆ ಹೋಗುವದೆ? ಮೊದಲಿನಿಂದಲೂ ನನ್ನೂರಿನಲ್ಲಿ ಇದ್ದು ಅಭ್ಯಾಸವಿಲ್ಲದ್ದರಿಂದ ಅಲ್ಲಿಗೆ ಹೋಗಿ ಮಾಡುವದಾದರು ಏನನ್ನು? ಯಾರ ಹತ್ತಿರ ಇರಬೇಕು? ಹೀಗೆ ಹತ್ತಾರು ಪ್ರಶ್ನೆಗಳು ನನ್ನ ಕಾಡತೊಡಗಿದವು. ಬಣ್ಣಬಣ್ಣದ ಕನಸು ಕಾಣಬೇಕಾದ ಹದಿಹರೆಯದಲ್ಲಿ ಇನ್ನು ಮುಂದೆ ಹೇಗೆ ಬದುಕಬೇಕು ಎನ್ನುವದರ ಕುರಿತು ಸುದೀರ್ಘವಾಗಿ ಆಲೋಚಿಸುತ್ತಿದ್ದೆ. ಅಲ್ಲಿಂದ ನನ್ನ ಬದುಕು ಹಳಿ ತಪ್ಪುತ್ತಲೇ ಹೋಯಿತು.

    ಮುಂದೆ ಒಂದೆರೆಡು ತಿಂಗಳು ದೊಡ್ಡಮ್ಮನ ಊರು ಕಲಕೋಟಿ, ಹಾಗೂ ಅಕ್ಕನ ಬಳಿ ಗದುಗಿನಲ್ಲಿ ಕಳೆದೆ. ಒಂದೊಂದು ಸಾರಿ ನಾನು ಹುಟ್ಟಿ ಏನು ಪ್ರಯೋಜನ ಎಂದು ನನ್ನಷ್ಟಕ್ಕೆ ನಾನೇ ಒಬ್ಬನೇ ಕುಳಿತು ಬಿಕ್ಕುತ್ತಿದ್ದೆ. ಆ ಬಿಕ್ಕುಗಳಿಗೆ ಅಲ್ಲಿ ಆ ಕ್ಷಣದ ಸಾಂತ್ವನ ಮಾತ್ರವಿತ್ತು. ಈ ಸಮಯದಲ್ಲಾದರೂ ಅಪ್ಪನಾದವನು ಮುಂದೆ ಏನು ಮಾಡುತ್ತಿ? ಹೇಗೆ? ಏನು? ಎತ್ತ? ಎಂದು ಕೇಳುವ ವ್ಯವಧಾನವನ್ನು ಒಂಚೂರು ತೋರಲಿಲ್ಲ. ಮುಂಚಿನಿಂದಲೂ ಆತನ ಬಗ್ಗೆ ಗೊತ್ತಿದ್ದರಿಂದ ನಾನು ಕೂಡ ಆತನನ್ನು ‘ಮುಂದೆ ಹೇಗೆ?’ ಎಂದು ಕೇಳುವ ಗೊಡವೆಗೆ ಹೋಗಲಿಲ್ಲ. ಆದರೆ ನನ್ನ ಸಿಟ್ಟು, ಆಕ್ರೋಶಗಳು ಒಳಗೊಳಗೆ ಭುಸಗುಟ್ಟುತ್ತಲೇ ಇದ್ದವು.
    ಹೀಗಿರುವಾಗ ನನ್ನ ಸೋದರ ಮಾವ ಲಕ್ಷ್ಮೇಶ್ವರದ ದವಾಖಾನೆಯೊಂದರಲ್ಲಿ ಕೌಂಪೊಂಡರ್ ಕೆಲಸ ಹುಡುಕಿ ಅಲ್ಲಿಗೆ ನನ್ನ ಸೇರಿಸಿದರು. ಅದು ಅವರೂರು ಸುಲ್ತಾನಪೂರಕ್ಕೆ ಹತ್ತು ಕಿಲೊಮೀಟರ್ ದೂರದಲ್ಲಿತ್ತು. ನನ್ನ ಮಾವ ದಿನಾ ಬಸ್ಸಿಗೆ ಇಲ್ಲಿಂದಾನೆ ಓಡಾಡು ಎಂದರು. ಆ ಪ್ರಕಾರ ದಿನಾ ಬೆಳಿಗ್ಗೆ ಬುತ್ತಿಕಟ್ಟಿಕೊಂಡು ಎಂಟು ಗಂಟಗೆ ಹೋಗಿ ರಾತ್ರಿ ಎಂಟರ ಬಸ್ಸಿಗೆ ಇಲ್ಲವಾದರೆ ಒಮ್ಮೊಮ್ಮೆ ಹತ್ತರ ಬಸ್ಸಿಗೆ ವಾಪಾಸಾಗುತ್ತಿದ್ದೆ. ಅದು ನಾನು ಜೀವನದಲ್ಲಿ ಮೊಟ್ಟಮೊದಲಬಾರಿಗೆ ಹಿಡಿದ ಕೆಲಸವಾಗಿತ್ತು. ಆ ದವಾಖಾನೆ ಇಡಿ ಲಕ್ಷ್ಮೇಶ್ವರದಲ್ಲಿಯೇ ಪ್ರಸಿದ್ದಿ ಪಡೆದ ದವಾಖಾನೆಯಾಗಿತ್ತು. ಅಲ್ಲಿ ನನ್ನ ಜೊತೆ ಇನ್ನೊಬ್ಬ ಕೌಂಪೊಂಡರ ಈಗಾಗಲೇ ತುಂಬಾ ವರ್ಷದಿಂದ ಕೆಲಸ ಮಾಡುತ್ತಿದ್ದ. ಅವನಿಂದ ಡ್ರೆಸ್ಸಿಂಗ್ ಮಾಡುವದು, ಆಪರೇಶನ್ ಥೇಟರ್ ರೆಡಿ ಮಾಡುವದು, ಡಾಕ್ಟರ್ ಗಳಿಗೆ ಸಹಾಯ ಮಾಡುವದು, VRL ಮೂಲಕ ದೂರದ ಊರಿಂದ ಬರುವ ಔಷಧಿಗಳನ್ನು ಆಸ್ಪತ್ರೆಯ ಔಷಧಿ ಅಂಗಡಿಗೆ ತಂದುಹಾಕುವದು ಇವೆ ಮೊದಲಾದ ಕೆಲಸಗಳನ್ನು ಕಲಿತುಕೊಂಡೆ.

    ನಾನು ಮಾಡುವ ಕೆಲಸವನ್ನು ಅತ್ಯಂತ ಖುಶಿಯಿಂದಲೇ ಮಾಡುತ್ತಿದ್ದೆ. ನನಗೆ ಕೌಂಪೊಂಡರ್ ಕೆಲಸ ಕೀಳಾಗಿ ಕಾಣಲಿಲ್ಲ. ಇದು ಬಿಟ್ಟರೆ ಬೇರೆ ಅವಕಾಶಗಳು ಇರಲಿಲ್ಲ. ಪಿ.ಯು.ಸಿ ಫೇಲಾದವನಿಗೆ ಇದಕ್ಕಿಂತ ಬೇರೆ ಯಾವ ಕೆಲಸ ತಾನೆ ಸಿಕ್ಕೀತು? ಮೇಲಾಗಿ ಈ ಕೆಲಸ ಇಲ್ಲದಿದ್ದರೆ ಬೇರೆ ಎಲ್ಲ ರೀತಿಯಿಂದಲೂ ನಾನು ಇನ್ನೊಬ್ಬರ ಮೇಲೆ ಅವಲಂಬನೆಯಾಗಬೇಕಿತ್ತು. ಅದು ನನಗೆ ಇಷ್ಟವಿರಲಿಲ್ಲ. ಏನಾದರಾಗಲಿ ಸ್ವತಂತ್ರವಾಗಿ ಬದುಕಬೇಕು ಎಂದುಕೊಂಡು ಕೆಲಸವನ್ನು ಚನ್ನಾಗಿ ಕಲಿಯತೊಡಗಿದೆ. ಅವತ್ತು ಶುರುವಾದ ನನ್ನ ಸ್ವಾಲಂಬನೆಯ ಪ್ರಜ್ಞೆ ಮುಂದೆ ನನ್ನಲ್ಲಿ ಬಲಗೊಳ್ಳುತ್ತಲೇ ಹೋಯಿತು.

    ಮೊಟ್ಟಮೊದಲಬಾರಿಗೆ ಬದುಕನ್ನು ಕಟ್ಟಿಕೊಳ್ಳುವ ನೆಪದಲ್ಲಿ ಜಗತ್ತಿನೆದುರು ನಿಂತಿದ್ದೆ. ಅಲ್ಲಿ ಕ್ರಮೇಣ ಜಗತ್ತಿನ ಇನ್ನೊಂದು ಮುಖದ ಪರಿಚಯವಾಗತೊಡಗಿತು. ಅಲ್ಲಿಯವರೆಗೂ ಕಥೆ, ಕಾದಂಬರಿಗಳಂತೆ ಜೀವನವಿರುತ್ತದೆ ಎಂದು ಕಲ್ಪಿಸಿಕೊಂಡಿದ್ದವನಿಗೆ ವಾಸ್ತವದ ಕಹಿಸತ್ಯಗಳು ಬೇರೊಂದು ಸತ್ಯವನ್ನು ತೆರೆದಿಟ್ಟಿದ್ದವು. ಮೊಟ್ಟಮೊದಲಬಾರಿಗೆ ಕಲ್ಪನೆಗೂ ವಾಸ್ತವಕ್ಕೂ ಇರುವ ಅಂತರ ತಿಳಿದಿತ್ತು. ನನ್ನಿಂದ ನಾನು ಆಚೆ ನಿಂತು ಜಗತ್ತು ನೋಡಿದ್ದೆ. ಹುಚ್ಚಿಗೆ ಬಿದ್ದು ಕಥೆ, ಕಾದಂಬರಿಗಳನ್ನು ಓದಿ ಖುಶಿಪಡುತ್ತಿದ್ದವನಿಗೆ ವಾಸ್ತವದ ಬದುಕು ಭ್ರಮೆನಿರಸನಗೊಳಿಸಿತ್ತು. “ಕಥೆ, ಕಾದಂಬರಿಯಂತೆ ಜೀವನ ಇರೋದಿಲ್ಲಾ. ಅವನ್ನೋದಿ ಹಾಳಾಗಬೇಡ” ಎಂದು ನಮ್ಮ ಮನೆಯಲ್ಲಿ ದೊಡ್ಡವರು ಆಗಾಗ್ಗೆ ಹೇಳುತ್ತಿದ್ದುದು ಸ್ವಂತ ಅನುಭವಕ್ಕೆ ಬಂದಿತ್ತು. ದವಾಖಾನೆಯಲ್ಲಿ ಕಣ್ಣೆದುರಿಗೆ ನಡೆಯುವ ಮೋಸ, ವಂಚನೆ, ಸುಲಿಗೆಗಳನ್ನು ನೋಡಿ ಅಸಹಾಯಕನಾಗಿದ್ದೆ. ಮನಸ್ಸು ಆದರ್ಶ ಮತ್ತು ವಾಸ್ತವಗಳ ನಡುವೆ ತೂಗುತ್ತಿತ್ತು. ಇಂಥ ಕಡೆ ನಾನು ಕೆಲಸ ಮಾಡಬೇಕೆ? ಎಂಬ ಸಂದಿಗ್ಧತೆಯೂ ಆಗಾಗ ಎದುರಾಗುತ್ತಿತ್ತು. ಆದರೆ ಬೇರೆ ದಾರಿಯೇ ಇರಲಿಲ್ಲ! ಮೆಲ್ಲನೆ ಆದರ್ಶಗಳಿಗಿಂತ ಬದುಕು ದೊಡ್ಡದು ಎನಿಸತೊಡಗಿತು. ವಿಚಿತ್ರವೆಂದರೆ ಸಾಹಿತ್ಯ ಮತ್ತು ವಾಸ್ತವಬದುಕಿನ ನಡುವಿನ ಅಂತರ ತಿಳಿದ ಮೇಲೂ ನಾನು ಸಾಹಿತ್ಯ ಓದುವದನ್ನು ಕೈ ಬಿಡಲಿಲ್ಲ. ಅದು ಕೂಡ ಅಷ್ಟೆ; ನನ್ನನ್ನು ಯಾವತ್ತೂ ಕೈ ಬಿಡಲಿಲ್ಲ. ನಾನು ಸೋತಾಗ, ಹತಾಶಗೊಳಗಾದಾಗ, ಅವಮಾನಕ್ಕೀಡಾದಾಗ, ನೋವನ್ನುಂಡಾಗ..... ಹೀಗೆ ಬದುಕಿನ ಬೇರೆ ಬೇರೆ ಸಂದರ್ಭಗಳಲ್ಲಿ ನನ್ನ ಜೊತೆಗಿದ್ದುಕೊಂಡೇ ನನಗೊಂದಿಷ್ಟು ಸಮಾಧಾನ ಹೇಳಿದೆ.

    ಈ ಎಲ್ಲದರ ಮಧ್ಯ ಒಂದಿಷ್ಟು ಕನಸುಗಳು ಚಿಗುರತೊಡಗಿದ್ದವು. ಅವು ಕೌಂಪೊಂಡರ್ ಆಗುವ ಕನಸುಗಳು. ಅವನ್ನು ನನ್ನ ಕೆಲಸ ಹುಟ್ಟುಹಾಕಿದ್ದೋ ಇಲ್ಲ ಬೇರೆಯವರು ನನ್ನ ಕೌಂಪೊಂಡರ್ ಕೆಲಸ ನೋಡಿ ಅವನ್ನು ಮನದಲ್ಲಿ ಬಿತ್ತಿ ಬೆಳೆದರೋ ಗೊತ್ತಿಲ್ಲ. ಅಂತೂ ಕೌಂಪೊಂಡರ್ ಆಗುವ ಕನಸು ಕಾಣತೊಡಗಿದೆ. ಆಗ ನಮ್ಮ ಮನೆಯವರು “ಕೌಂಪೊಂಡರ್ ಆಗಿ ಒಳ್ಳೆ ಕೆಲಸ ಮಾಡಿದೆ. ಹಾಗೆ ಮುಂದುವರಿ. ನಿನಗೆ ಒಳ್ಳೆ ಭವಿಷ್ಯವಿದೆ. ಕೌಂಪೊಂಡರ್ ಆಗಿ ಕೆಲಸ ಕಲಿತ ಮೇಲೆ ನಾಲ್ಕಾರು ಹಳ್ಳಿ ಸುತ್ತಿ ಪೇಶೆಂಟ್ಸ್ ನೋಡಿ ಬಂದ್ರ ಒಳ್ಳೆ ದುಡ್ದು ಮಾಡಬಹುದು.” ಎಂದೆಲ್ಲಾ ಪ್ರೋತ್ಸಾಹಿಸುವಾಗ ನಾನು ಕೌಂಪೊಂಡರ್ ಆಗಿ ಕಾಸು ಎಣಿಸೋ ಕನಸು ಕಂಡಿದ್ದೇನೆ. ಆದರೆ ಆ ಕನಸು ಒಂದು ತಿಂಗಳು ಮುಗಿಯುವಷ್ಟೊತ್ತಿಗೆ ಮುರುಟಿಬಿತ್ತು. ಏಕೆಂದರೆ ಅಲ್ಲಿ ಕೆಲಸಕ್ಕೆ ಸೇರುವ ಮುನ್ನ ನನ್ನ ಸಂಬಳ ಇಷ್ಟಿಷ್ಟೇ ಅಂತ ನಿಗದಿಯಾಗಿರಲಿಲ್ಲ. ಕರುಣೆ ಆಧಾರದ ಮೇಲೆ ಕೆಲಸ ಕೊಡುವವರನ್ನು ಇಷ್ಟಿಷ್ಟೇ ಕೊಡಿ ಅಂತ ಕರಾರುವಕ್ಕಾಗಿ ಹೇಗೆ ಕೇಳೋದು? ತಿಂಗಳ ಕೊನೆಯಲ್ಲಿ ಆ ಡಾಕ್ಟರು ಕೊಟ್ಟಿದ್ದು ಬರೀ 200 ರೂಪಾಯಿ. ಆ ಸಂಬಳ ನಾನು ದಿನಾಲೂ ಹೋಗಿ ಬರುವ ಬಸ್ ಚಾರ್ಜಿಗೂ ಸಾಕಾಗುತ್ತಿರಲಿಲ್ಲವಾದ್ದರಿಂದ ಆ ಕೆಲಸಕ್ಕೆ ಎಳ್ಳು ನೀರು ಬಿಡಬೇಕಾಯಿತು. ಅಲ್ಲಿಂದ ನನ್ನ ಬದುಕು ಮತ್ತಷ್ಟು ಮೂರಾಬಟ್ಟೆಯಾಗುತ್ತಾ ಹೋಯಿತು.