ನಿಮಗೆ ಆಶ್ಚರ್ಯವಾಗಬಹುದು-ನನಗೆ ಹಸಿವೆಯೇ ಎನಿಸುತ್ತಿರಲಿಲ್ಲ. ಆದರೂ ಆಗೊಮ್ಮೆ ಈಗೊಮ್ಮೆ ಪಾರ್ಸಲ್ಲಿನಲ್ಲಿದ್ದ ಸಿಹಿತಿಂಡಿಯನ್ನು ತಿಂದು ನನ್ನ ಅಲ್ಪಸ್ವಲ್ಪ ಹಸಿವೆಯನ್ನು ನೀಗಿಸಿಕೊಳ್ಳುತ್ತಿದ್ದೆ. ಮರದಲ್ಲಿ ಸಿಹಿಯಾದ ಹಣ್ಣುಗಳು ಕಾಣಿಸಿದವು. ಆದರೆ ಅವನ್ನು ತಿನ್ನಲು ಹೋಗಲಿಲ್ಲ. ಏಕೆಂದರೆ ಅವುಗಳಲ್ಲಿ ಬಹಳಷ್ಟು ಹಣ್ಣುಗಳು ನೋಡಲು ಚನ್ನಾಗಿದ್ದರೂ ಕೆಲವೊಮ್ಮೆ ವಿಷಪೂರಿತವಾಗಿರುತ್ತವೆಂದು ನನಗೆ ಗೊತ್ತಿತ್ತು. ನಾನು ಮುಸ್ಸಂಜೆಯವರೆಗೂ ನಡೆಯುತ್ತಲೇ ಇದ್ದೆ. ಕೊನೆಗೆ ನದಿ ದಂಡೆ ಮೇಲೆ ಒಂದು ನುಣುಪಾದ ಜಾಗ ಸಿಕ್ಕಿತು. ಅಂದು ಆ ರಾತ್ರಿಯನ್ನು ಅಲ್ಲಿಯೇ ಕಳೆಯಲು ನಿರ್ಧರಿಸಿದೆ.
ಮರುದಿವಸ ಬೆಳಿಗ್ಗೆ ಎದ್ದಾಗ ಸೂರ್ಯ ಅದಾಗಲೇ ನೆತ್ತಿಯ ಮೇಲೆ ಬಂದಿದ್ದ. ದಿನನಿತ್ಯದ ವಾಡಿಕೆಯಂತೆ ಕೋಲಿನಿಂದ ಹುಲ್ಲನ್ನು ಸರಿಸುತ್ತಾ, ನೆಲವನ್ನು ತಡಕಾಡುತ್ತಾ, ಜೇಡರ ಹುಳುಗಳೇನಾದರೂ ಇವೆಯೋ ಎಂಬುದನ್ನು ಪರೀಕ್ಷಿಸುತ್ತಾ ಎಚ್ಚರಿಕೆಯಿಂದ ನಡೆಯುತ್ತಿದ್ದೆ. ಒಮ್ಮೊಮ್ಮೆ ನದಿ ದಂಡೆಯ ಮೇಲಿನ ರಸ್ತೆ ದುಸ್ತರವಾದಾಗ ಈಜಿಕೊಂಡು ಹೋಗುತ್ತಿದ್ದೆ. ಹೀಗೆ ನಡೆದುಕೊಂಡು ಹೋಗುತ್ತಿರುವಾಗ ನನ್ನ ಬ್ಯಾಗಿನಲ್ಲಿದ್ದ ಸಿಹಿತಿಂಡಿಗಳು ತೂತಿನ ಮೂಲಕ ಬಿದ್ದುಹೋಗಿದ್ದವು. ನನಗೆ ಹಸಿವಿಯೇ ಅನಿಸದಿದ್ದರಿಂದ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.
ನಡೆಯುತ್ತಾ ಹೋದಂತೆ ಸ್ವಲ್ಪ ದೂರದರಲ್ಲಿಯೇ ನನಗೆ ರಣಹದ್ದುಗಳು ಕಂಡವು. ಬಹುಶಃ, ಅಲ್ಲೆಲ್ಲೋ ಹೆಣಗಳಿರಬೇಕು. ಅವು ವಿಮಾನ ಅಪಘಾತದಲ್ಲಿ ಮಡಿದ ವ್ಯಕ್ತಿಗಳ ಮಾಂಸ ತಿನ್ನಲು ಅಲ್ಲಿ ಸೇರಿರಬೇಕು ಎಂದು ನನಗೆ ಕೂಡಲೇ ಗೊತ್ತಾಯಿತು. ಎಲ್ಲಿ ಹೆಣಗಳಿರುತ್ತವೋ ಅಲ್ಲಿ ಸಾಮಾನ್ಯವಾಗಿ ಹದ್ದುಗಳಿರುತ್ತವೆ.
ನಾನಿನ್ನೂ ನಮ್ಮ ವಿಮಾನದ ಭಗ್ನಾವಶೇಷಗಳು ಬಿದ್ದ ಜಾಗದಲ್ಲಿಯೇ ಇದ್ದೆ. ನಾನು ನಡೆದು ಹೋಗುತ್ತಿದ್ದಂತೆ ವಿಮಾನದ ಮೈಕಟ್ಟಿನ ಒಂದು ಭಾಗ ಅಲ್ಲಿ ಬಿದ್ದಿರುವದು ಕಾಣಿಸಿತು. ವಿಮಾನದ ಸಂಖ್ಯೆ ಇನ್ನೂ ಹಾಗೆ ಕಾಣುತ್ತಿತ್ತು. ಸ್ವಲ್ಪ ದೂರದರಲ್ಲಿಯೇ ಮುರಿದು ಬಿದ್ದ ವಿಮಾನದ ಇನ್ನೊಂದು ಭಾಗ ಕಾಣಿಸಿತು. ಅದು ಕ್ಯಾಬಿನ್ನಿನಂತಿದ್ದು ಅದರ ವೈರ್ ಗಳು ತಳಕುಹಾಕಿಕೊಂಡಿದ್ದವು.
ಅಲ್ಲಿ ಪೆಟ್ರೋಲ್ ವಾಸನೆ ಇನ್ನೂ ಹಾಗೆ ಇತ್ತು. ಆದರೆ ಬದುಕುಳಿದವರ ಬಗ್ಗೆ ಯಾವಂದೂ ಕುರುಹುಗಳು ಕಾಣಿಸಲಿಲ್ಲ. ಆ ಅವಶೇಷದ ಬಳಿ ನಾನು ಬಹಳ ಹೊತ್ತು ನಿಲ್ಲಲಿಲ್ಲ. ಏಕೆಂದರೆ ನಾನು ಮುಂದೆ ಸಾಗಲೇಬೇಕಿತ್ತು. ಆದರೂ ನಾನು ನಡೆದು ಹೋಗಬೇಕಾದ ದಾರಿ ನಿಧಾನವಾಗಿ ಸಾಗುತ್ತಿದ್ದರಿಂದ ನನ್ನ ಪಯಣ ಅಷ್ಟಾಗಿ ಪ್ರಗತಿ ಕಂಡಿರಲಿಲ್ಲ.
ಎರಡನೆಯ ದಿನವಾಗಲಿ, ಮೂರನೆಯ ದಿನವಾಗಲಿ ನನ್ನ ಗಾಯಗಳು ನಂಗೆ ಒಂಚೂರು ನೋವು ಕೊಡಲಿಲ್ಲ. ಬದಲಾಗಿ ಅತಿಯಾದ ಬಿಸಿಲಿನಿಂದ ನನ್ನ ಬೆನ್ನಲ್ಲಿ ಅಸಾಧ್ಯ ಉರಿಯೂತವುಂಟಾಯಿತು. ಏಕೆಂದರೆ ನನ್ನ ಡ್ರೆಸ್ಸಿನ ಹಿಂಭಾಗದಲ್ಲಿ ಕಟ್ಟಿಕೊಳ್ಳುವ ಬೆಲ್ಟಿನ ಗುಂಡಿ ಕಿತ್ತುಹೋಗಿತ್ತು ಹಾಗೂ ನನ್ನ ಬೆನ್ನು ಬಿಸಿಲಿಗೆ ತೆರೆದುಕೊಂಡಿತ್ತು. ಮರಗಳ ಸಂಧಿಯಿಂದ ತೂರಿ ಬರುವ ಸೂರ್ಯನ ಕಿರಣಗಳು ನನ್ನ ಬೆನ್ನನ್ನು ಸುಟ್ಟುಹಾಕಿದ್ದವು. ಪೆರುವಿನ ಕಾಡುಗಳಲ್ಲಿ ಎಷ್ಟು ಕೆಟ್ಟ ಮಳೆ ಇರುತ್ತದ್ ಅಷ್ಟೇ ಕೆಟ್ಟ ಬಿಸಿಲು ಕೂಡ ಇರುತ್ತದೆ. ಹಿತಮಿತವಾದ ಹವಾಮಾನ ಜೀವನಕ್ಕೆ ಒಗ್ಗಿಕೊಂಡ ಯೂರೋಪಿನ ಜನ ಇವೆರೆಡೂ ವೈಪರಿತ್ಯಗಳಿಗೆ ಹೊಂದಿಕೊಳ್ಳಲಾರರು.
ಎರಡನೆಯ ರಾತ್ರಿ ಸಾಕಷ್ಟು ವಿಶ್ರಾಂತಿ ತೆಗೆದುಕೊಂಡೆ. ಮಾರನೆಯ ದಿನ ಮತ್ತೆ ನನ್ನ ಪ್ರಯಾಣವನ್ನು ಮುಂದುವರೆಸಿದೆ. ಬೆನ್ನ ಮೇಲೆ ಅಸಾಧ್ಯ ಉರಿಯೂತವಿದ್ದಾಗ್ಯೂ ನಾನು ಸಾಕಷ್ಟು ದೂರವನ್ನು ನಡೆದೆ. ನಾನು ನೀರು ಮತ್ತು ಸಿಹಿತಿಂಡಿಗಳನ್ನು ಬಿಟ್ಟು ಬೇರೇನೂ ತಿನ್ನುತ್ತಿರಲಿಲ್ಲ. ಆದರೂ ನನ್ನಲ್ಲಿ ಶಕ್ತಿ ಇನ್ನೂ ಉಳಿದಿದೆ ಎಂದನಿಸುತ್ತಿತ್ತು. ಮೇಲಿಂದ ಮೇಲೆ ನನಗೆ ಸೊಳ್ಳೆಗಳು, ನೊಣಗಳು ಕಚ್ಚಿ ಹಿಂಸೆಯಿಡುತ್ತಿದ್ದವು. ಅವುಗಳನ್ನು ದೂರವಿಡಲು ಸಾಧ್ಯವಿರಲಿಲ್ಲ. ಅವನ್ನು ಲೆಕ್ಕಿಸದೆ ನಡೆಯಬೇಕಿತ್ತು. ಪ್ರತಿಸಾರಿ ಸೊಳ್ಳೆಗಳು ಕಚ್ಚಿದಾಗ ಅವು ನನ್ನ ಚರ್ಮದ ಕೆಳಗೆ ಮೊಟ್ಟೆಗಳನ್ನಿಡುತ್ತಿದ್ದವು ಹಾಗೂ ತದನಂತರದಲ್ಲಿ ಅವು ಮರಿಗಳಾಗಿ ಹೊರಬರುತ್ತಿದ್ದವು. ಇದನ್ನು ನಾನು ಗಮನಿಸಲೇ ಇಲ್ಲ.
ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ವಿಮಾನಗಳ ಹಾರಾಟದ ಸದ್ದು ಕೇಳಿಸಿತು. ನಾನು ಖುಶಿಯಿಂದ ವಿಮಾನದ ಸದ್ದು ಬಂದತ್ತ ಕೂಗಿದೆ. ಮತ್ತೆ ಮತ್ತೆ ಕೂಗಿದೆ ಹಾಗೆ ಜೋರಾಗಿ ಕೂಗುತ್ತಾ ಹೋದೆ. ನಂಗೆ ಗೊತ್ತಿತ್ತು ನಾನು ಕೂಗುವದು ಅವರಿಗೆ ಕೇಳಿಸುವದಿಲ್ಲ-ಅದೊಂದು ವ್ಯರ್ಥ ಪ್ರಯತ್ನವೆಂದು. ಆದರೂ ಬಿಡದೆ ಒಂದೇ ಸಮನೆ “ಹಲೋ, ಹೆಲ್ಪ್....ಹೆಲ್ಪ್” ಎಂದು ಕೂಗುತ್ತಾ ಹೋದೆ. ಬಾರಿ ಬಾರಿ ಕೂಗಿದೆ “ಹಲೋ, ಹೆಲ್ಪ್” ಎಂದು. ಊಹೂಂ, ಪ್ರಯೋಜನವಾಗಲಿಲ್ಲ.
ವಿಮಾನಗಳೇನೋ ನನಗೆ ಹತ್ತಿರವಾಗಿಯೇ ಇದ್ದವು. ಆದರೆ ವಿಮಾನ ಚಾಲಕರು ಮರದ ಕೆಳಗಿದ್ದ ನನ್ನನ್ನು ಹೇಗೆ ನೋಡಿಯಾರು? ಅಥವಾ ನನ್ನ ದನಿಯಾದರೂ ಅವರಿಗೆ ಹೇಗೆ ಕೇಳಿಸೀತು? ನಾನಾದರೂ ಆ ಮರಗಳ ಸಂಧಿಯಿಂದ ಅವರನ್ನು ಹೇಗೆ ನೋಡೇನು? ಯಾವುದೊಂದೂ ಸಾಧ್ಯವಿರಲಿಲ್ಲ! ಆದರೂ ಅವರ ಗಮನವನ್ನು ನನ್ನತ್ತ ಸೆಳೆಯಲು ಹರಸಾಹಸ ಮಾಡುತ್ತಿದ್ದೆ.
ವಿಮಾನದ ಸದ್ದು ಕ್ರಮೇಣ ಸತ್ತುಹೋಯಿತು. ನಾನು ಪುನಃ ಒಂಟಿಯಾದೆ. ಆದರೆ ದೃತಿಗೆಡಲಿಲ್ಲ. ಸುಮ್ಮನೆ ನಡೆಯುತ್ತಾ ಹೋದೆ. ನಂಗೆ ಹಸಿವೆ ಎನಿಸುತ್ತಿರಲಿಲ್ಲ. ಆಗಾಗ ಮಾತ್ರ ನದಿಯ ಶುಭ್ರ ನೀರನ್ನು ಕುಡಿದು ಮುಂದೆ ಸಾಗುತ್ತಿದ್ದೆ. ಕೈಯಲ್ಲಿ ಭರವಸೆ ಮಾತ್ರ ಇನ್ನೂ ಹಾಗೆಯೇ ಉಳಿದಿತ್ತು.
ನನ್ನ ಬಳಿಯಿದ್ದ ಸಿಹಿತಿಂಡಿಗಳೆಲ್ಲಾ ಇದೀಗ ಖಾಲಿಯಾಗಿದ್ದವು. ತಿನ್ನಲೂ ಏನೂ ಇರಲಿಲ್ಲ. ಆದರೂ ಯೋಚಿಸಲಿಲ್ಲ. ನಾನು ನದಿ ದಂಡೆಯ ಮೇಲೆ ಪ್ರಯಾಸದಿಂದ ಸಾಗುತ್ತಿದ್ದೆ. ಆಗೆಲ್ಲಾ ಮೊಸಳೆಗಳು ನನ್ನತ್ತ ಈಜಿಕೊಂಡು ಬರುತ್ತಿದ್ದವು. ನನಗೆ ತಕ್ಷಣ ಅಲ್ಲಿ ವಿಷಕಾರಿ ಮೀನುಗಳಿರುವದು ನೆನಪಿಗೆ ಬಂತು. ಅವು ಸಾಮಾನ್ಯವಾಗಿ ನದಿ ದಂಡೆ ಮೇಲೆಯೇ ಮಲಗಿರುತ್ತಿದ್ದವು. ನಾನು ಅಕಸ್ಮಾತಾಗಿ ಈ ಮೀನಿನ ಮೇಲೆ ಕಾಲಿಟ್ಟರೆ ನನ್ನ ಕಥೆ ಮುಗಿದಂತೆಯೇ ಸರಿ ಎಂದುಕೊಂಡು ಈಗ ಮತ್ತಷ್ಟು ಹುಶಾರಾಗಿ ನಡೆಯುತ್ತಾ ಹೋದೆ.
ಒಂಬತ್ತನೆಯ ದಿನ ನಡೆಯುತ್ತಾ ಹೋದಂತೆ ಅನತಿ ದೂರದಲ್ಲಿ ಒಂದು ದೋಣಿ ಇರುವದು ಕಾಣಿಸಿತು. ನಾನು ಮೊದಲು ಅದಾಗಲೇ ಯಾರೋ ಬಳಸಿ ಬೀಸಾಡಿದ ಮುರುಕಲು ದೋಣಿಯಾಗಿರಬಹುದೆಂದುಕೊಂಡೆ. ಆದರೆ ಹತ್ತಿರ ಹೋಗಿ ನೋಡಿದ ಮೇಲೆ ಗೊತ್ತಾಯಿತು ಅದೊಂದು ಗಟ್ಟಿ ಮರದಿಂದ ಹೊಸದಾಗಿ ಮಾಡಿದ ದೋಣಿಯೆಂದು.
ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ
ಕನ್ನಡಕ್ಕೆ: ಉದಯ್ ಇಟಗಿ
ಕಥನ ಮಥನ
1 ವಾರದ ಹಿಂದೆ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ