ಈ ಜಗತ್ತಿನಲ್ಲಿ ಹೆಸರಿಲ್ಲದವರು ಯಾರು ಇದ್ದಾರೆ ಹೇಳಿ? ಎಲ್ಲರಿಗೂ ಏನಾದರೊಂದು ಹೆಸರಿದ್ದೇ ಇರುತ್ತದಲ್ಲವೆ? ಹೀಗಾಗಿ ಎಲ್ಲರಿಗೂ ಇರುವಂತೆ ನಂಗೂ ಒಂದು ಹೆಸರು ಅಂತಾ ಇದೆ. ನಂಗೂ ನನ್ನದೇ ಆದಂತ ಒಂದು ಅಸ್ಥಿತ್ವ, ಊರು-ಕೇರಿ, ದೆಸೆ-ದಿಕ್ಕು ಎಲ್ಲ ಇವೆ. ಜೊತೆಗೆ ಒಂದಿಷ್ಟು ಬಂಧುಗಳು, ಹಿತೈಷಿಗಳು, ಗೆಳೆಯರು, ಶತ್ರುಗಳು ಎಲ್ಲರೂ ಇದ್ದಾರೆ. ಆದರೂ ನಾನೊಬ್ಬ ಅನಾಮೇಧಯ! ಹಾಗಂತ ನನ್ನನ್ನು ನಾನೇ ಕರೆದುಕೊಂಡಿದ್ದೇನೆ. ಹೆಸರಿದ್ದೂ ‘ನಾನೊಬ್ಬ ಅನಾಮೇಧಯ’ ಅಂತಾ ಹೇಳಿಕೊಳ್ಳುವದರಲ್ಲಿನ ನಿಜವಾದ ಖುಶಿ, ಆತ್ಮತೃಪ್ತಿ, ಪ್ರಾಮಾಣಿಕತೆ ಬೇರೆ ಯಾವುದರಲ್ಲೂ ಸಿಗುವದಿಲ್ಲ. ಏಕೆಂದರೆ ನಮ್ಮದಲ್ಲದ ಹೆಸರಿನಲ್ಲಿ ನಾವು ಬರೆದಾಗಲೇ ನಾಚಿಕೆ, ಮಾನ, ಅಪಮಾನಗಳ ಹಂಗನ್ನು ತೊರೆದು ಎಲ್ಲವನ್ನು ಬಿಚ್ಚಿಟ್ಟು ಬೆತ್ತಲಾಗೋಕೆ ಸಾಧ್ಯ. ನಾವು ಬದುಕುತ್ತಾ ಬದುಕುತ್ತಾ ನಾವಾಗಿ ಬದುಕಲಾಗುವದಿಲ್ಲ. ಅಥವಾ ಪರಿಸ್ಥಿತಿಗಳು ನಮ್ಮನ್ನು ಹಾಗೆ ಬದುಕಲು ಬಿಡುವದಿಲ್ಲ. ನಾವೆಲ್ಲಾ ಬದುಕುವದು ಒಳಗೊಂದು ಹೊರಗೊಂದರಂತೆ! ನಾವು ಎಷ್ಟೇ ನಾವು ನಾವಾಗಿ ಬದುಕುತ್ತೇವೆಂದರೆ ಅದು ಸಾಧ್ಯವಾಗುವದೇ ಇಲ್ಲ. ಒಂದೊಂದು ಸಾರಿ ನಮ್ಮೊಳಗೆ ನಾವೇ ಪ್ರಾಮಾಣಿಕರಾಗಿರುವದು ಕಷ್ಟವಾಗುತ್ತದೆ. ಹೀಗಾಗಿ ಈ ಬರಹದಲ್ಲಾದರೂ ನನ್ನೊಳಗನ್ನು ಒಮ್ಮೆ ಬಿಚ್ಚಿ ಬೆತ್ತಲಾಗಬೇಕು, ನನ್ನ ಸಾಚಾತನವನ್ನು ನಾನೇ ಬಯಲಿಗೆಳೆಯಬೇಕು, ನನ್ನ ಅಂತರಂಗದೊಡನೆ ನಾನೇ ಮುಖಾಮುಖಿಯಾಬೇಕು ಹಾಗೂ ಆ ಮೂಲಕ ನನ್ನನ್ನು ಇನ್ನೊಮ್ಮೆ ನಾನೇನೆಂದು ಕಂಡುಕೊಳ್ಳಬೇಕಾಗಿದೆ. ಹಾಗೆಂದೇ ಈ ಡೈರಿ ಬರೆಯುತ್ತಿದ್ದೇನೆ......
ಹೀಗೆ ನನ್ನನ್ನು ನಾನು ನಾನಿರುವಂತೆ ನನ್ನ ನಿಜ ನಾಮಧೇಯದಲ್ಲಿ ಬಿಚ್ಚಿಟ್ಟರೆ ನನ್ನ ಹೆಸರಿಗೊಂದು ಕಳಂಕ ಅಂಟಿಕೊಳ್ಳಬಹುದು ಎಂಬ ಆತಂಕ ನನಗಿದೆ. ಅದು ನನಗಿಷ್ಟವಿಲ್ಲ. ಇಷ್ಟವಿಲ್ಲ ಎನ್ನುವದಕ್ಕಿಂತ ಎಲ್ಲವನ್ನೂ ಬಿಚ್ಚಿಟ್ಟು ನಿಮ್ಮ ಮುಂದೆ ಬೆತ್ತಲಾಗುವ ಧೈರ್ಯ ನನಗಿಲ್ಲ. ಅಥವಾ ನನ್ನ ಬಗ್ಗೆ ಎಲ್ಲವನ್ನೂ ತಿಳಿಸಿ ಆಮೇಲಿಂದ ನಿಮ್ಮೊಂದಿಗೆ ಮುಜುಗುರಕ್ಕೀಡಾಗುವ ಪ್ರಸಂಗಗಳನ್ನೆದುರಿಸುವ ತಾಕತ್ತೂ ನನಗಿನ್ನೂ ಬಂದಿಲ್ಲ. ಒಂದು ವೇಳೆ ನಾನು ನನ್ನ ನಿಜವಾದ ಹಸರಿನಲ್ಲಿಯೇ ಬರೆದೆನೆಂದು ಇಟ್ಟುಕೊಳ್ಳಿ. ಆಗ ನನ್ನ ನೇರತನ, ಪ್ರಾಮಾಣಿಕತೆಯನ್ನು ನೀವು ಈಗ ಒಪ್ಪಿಕೊಂಡರೂ ಮುಂದೆ ಎಂದಾದರೂಂದು ದಿನ ಅದನ್ನು ಎತ್ತಿ ಆಡುವ, ಆಡಿಕೊಳ್ಳುವ, ಛೇಡಿಸುವ, ಛೇದಿಸುವ, ಚುಡಾಯಿಸುವ ಇಲ್ಲವೇ ಗೇಲಿ ಮಾಡುವ ಸಂಭವನೀಯತೆ ಇರುತ್ತದಾದ್ದರಿಂದ ನಾನು ನನ್ನದಲ್ಲದ ಹೆಸರಿನಲ್ಲಿ ಬರೆಯುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ನನ್ನ ಬಗ್ಗೆ ಬರೆದುಕೊಳ್ಳಬೇಕಾದರೆ ಸಹಜವಾಗಿ ನನ್ನ ಆಪ್ತವಲಯದವರ, ಬಂಧುಗಳ, ಸ್ನೇಹಿತರ ಬಗ್ಗೆಯೂ ಒಂಚೂರು ಹೇಳಬೇಕಾಗುತ್ತದೆ. ನಾನು ಹೀಗೆ ನೇರಾ ನೇರಾ ಅವರೆಲ್ಲರ ಅಪ್ಪಣೆಯಿಲ್ಲದೆ ಅವರ ಬಗ್ಗೆ ಬರೆದರೆ ಅವರಿಗೆ ಖಂಡಿತ ನೋವಾಗುತ್ತದೆ. ಒಂದು ವೇಳೆ ಅಪ್ಪಣೆ ಸಿಕ್ಕರೂ ತಮ್ಮ ಬಗ್ಗೆ ಕೆಟ್ಟ ಸಂಗತಿಗಳು ದಾಖಲಾಗುವದನ್ನು ಅವರು ಸಹಿಸಲಾರರು. ಏಕೆಂದರೆ ಅವರಿಗೆ ಅವರ ತಪ್ಪು-ಒಪ್ಪುಗಳು, ಅಂಕುಡೊಂಕುಗಳು, ಓರೆಕೋರೆಗಳು ಬಹಿರಂಗವಾಗುವದು ಇಷ್ಟವಾಗುವದಿಲ್ಲ. ಜಗತ್ತು ಇರುವದೇ ಹಾಗೆ! ಜನ ತಮ್ಮ ತಪ್ಪುಗಳನ್ನು ಎತ್ತಿ ತೋರಿಸಿ, ತಿದ್ದಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಆದರೆ ಹಾಗೆ ತೋರಿಸ ಹೊರಟರೆ ಖಂಡಿತ ಅವರಿಗದು ಇಷ್ಟವಾಗುವದಿಲ್ಲ. ಇನ್ನು ತಿದ್ದಿಕೊಳ್ಳುವ ಮಾತಂತೂ ದೂರವೇ ಉಳಿಯಿತು. ಇದು ನಾನು ಬುದ್ಧಿ ಬಂದಾಗಿನಿಂದ ಕಂಡುಕೊಂಡ ಸತ್ಯ! ಮೇಲಾಗಿ ನನಗೂ ಅವರ ಬಗ್ಗೆ ಹಾಗೆಲ್ಲಾ ಖುಲ್ಲಂಖುಲ್ಲಾ ಬರೆದು ಅವರಿಗೆ ಮುಜುಗುರವನ್ನಾಗಲಿ, ಕಸಿವಿಸಿಯನ್ನಾಗಲಿ ಉಂಟುಮಾಡಲು ಇಷ್ಟವಿಲ್ಲ.
ಹೀಗಾಗಿ ನಾನು ಅನಾಮೇಧಯ ಎಂಬ ಹಸರಿನಲ್ಲೇ ನನ್ನ ಡೈರಿಯನ್ನು ಬರೆಯುತ್ತೇನೆ. ಬೇಕಾದರೆ ನೀವು ನಿಮ್ಮ ಗುರುತಿಗೋಸ್ಕರ ನನ್ನನ್ನು ‘ಇಂತಿಂಥಾ ಜಿಲ್ಲೆಯ ಇಂತಿಂಥಾ ತಾಲೂಕಿನ ಇಂತಿಪ್ಪ ಪುಟ್ಟಹಳ್ಳಿಯಲ್ಲಿ ಇಂತೆಂಬವರಿಗೆ ಹುಟ್ಟಿದ ಇಂತಿಪ್ಪ ಎಂಬಾತ ಈಗ ಈ ಡೈರಿಯನ್ನು ಬರೆಯುತ್ತಿದ್ದಾನೆ’ ಎಂದು ಗುರುತಿಸಿಕೊಳ್ಳಿ. ನ್ನನ್ನದೇನೂ ಅಭಂತರವಿಲ್ಲ. ಆದರೆ ನಾನ್ಯಾರಿರಬಹುದು ಎಂದು ತಿಳಿದುಕೊಳ್ಳುವ ಹುಚ್ಚು ಸಾಹಸಕ್ಕೆ ಮಾತ್ರ ಕೈ ಹಾಕಬೇಡಿ. ಒಂದು ವೇಳೆ ಹುಡುಕಲು ಪ್ರಯತ್ನಪಟ್ಟರೂ ನಾನು ಹೊರಗೆಲ್ಲಿ ಸಿಗುವದಿಲ್ಲ. ಏಕೆಂದರೆ ನಾನು ನಿಮ್ಮೊಳಗೇ ಅಡಗಿ ಕುಳಿತಿದ್ದೇನೆ. ಇಲ್ಲಿ ನಾನು ಬರೆದುಕೊಳ್ಳುವದು ನನ್ನ ಬಗ್ಗೆಯೇ! ಆದರೆ ಮನುಷ್ಯ ಸದಾ ಒಂಟಿಯಾಗಿರಲು ಸಾಧ್ಯವಿಲ್ಲ ನೋಡಿ. ಹೀಗಾಗಿ ನನ್ನೊಂದಿಗೆ ನನ್ನ ಒಂದಿಷ್ಟು ಗೆಳೆಯರು, ಗೆಳತಿಯರು, ಬಂಧುಗಳು ಹಾಗು ಇತರೆ ಜನರು ಆಗಾಗ್ಗೆ ಈ ಡೈರಿಯಲ್ಲಿ ಬಂದು ಹೋಗುತ್ತಾರೆ. ಆಫ್ಕೋರ್ಸ್, ಅವರಿಗೂ ನನ್ನಂತೆಯೇ ಹೆಸರಿದೆಯಾದರೂ ಅವರನ್ನು ಅವರ ನಿಜದ ಹೆಸರಿನಲ್ಲಿ ಕರೆದು ಅವರ ಹೆಸರುಗಳನ್ನು ಬಹಿರಂಗಪಡಿಸುವದಿಲ್ಲ. ನಿಮಗೆ ಓದುವಾಗ ನಿಮ್ಮ ತಿಳುವಳಿಕಿಗಿರಲಿ ಹಾಗೂ ನಿಮಗೆ ಅರ್ಥಮಾಡಿಕೊಳ್ಳಲು ಯಾವುದೇ ಗೊಂದಲವಾಗಬಾರದೆಂದು ಅವರಿಗೆಲ್ಲಾ ಸುಳ್ಳು ಸುಳ್ಳು ಹೆಸರುಗಳನ್ನು ನೀಡಿದ್ದೇನೆ.
ನನಗೆ ಮೊದಲಿನಿಂದಲೂ ಒಂದು ಆಸೆಯಿತ್ತು: ನಾನಿರುವಂತೆ ನನ್ನ ಬಗ್ಗೆ ಬರೆದುಕೊಳ್ಳಬೇಕೆಂದು. ಅದು ಇವತ್ತು ಕೂಡಿ ಬಂದಿದೆ. ಬರೆಯುತ್ತಾ ಬರೆಯುತ್ತಾ ಯಾವುದೇ ಮುಚ್ಚುಮರೆಯಿಲ್ಲದೆ ನನ್ನೊಳಗನ್ನು ಒಮ್ಮೆ ನಿಮ್ಮ ಮುಂದೆ ತೆರೆದಿಡಬೇಕು, ನಿಮ್ಮೊಡನೆ ಒಮ್ಮೆ ಹಂಚಿಕೊಳ್ಳಬೇಕು, ಹಂಚಿ ಹಗುರಾಗಬೇಕು, ನೀವದನ್ನು ಕೇಳುತ್ತಾ ಕೇಳುತ್ತಾ ನಿಮ್ಮನ್ನು ನೀವು ನನ್ನೊಂದಿಗೆ ಗುರುತಿಸಕೊಳ್ಳಬೇಕು ಎಂದು. ಏಕೆಂದರೆ ನಾನು ಎಂಬುದು ಬರಿ ನಾನು ಮಾತ್ರವಲ್ಲ. ಅಲ್ಲಿ ನೀವಿದ್ದೀರಿ. ಅವನಿದ್ದಾನೆ. ಅವಳಿದ್ದಾಳೆ. ಅವರಿದ್ದಾರೆ, ಇವರಿದ್ದಾರೆ. ಇನ್ನೂ ಯಾರ್ಯಾರೋ ಇದ್ದಾರೆ. ಹೀಗಾಗಿ ನನ್ನಲ್ಲಿ ನೀವು ನಿಮ್ಮದೇ ಪ್ರತಿಬಿಂಬವನ್ನು, ನಿಮ್ಮ ಗೆಳೆಯ, ಗೆಳತಿಯರ ಪ್ರತಿಬಿಂಬಗಳನ್ನು ಅಥವಾ ನಿಮಗೆ ಹತ್ತಿರದವರ ಪ್ರತಿಬಿಂಬಗಳನ್ನು ಕಂಡರೆ ಅಚ್ಚರಿಯೇನಿಲ್ಲ. ಅಷ್ಟಕ್ಕೂ ನಾನಿಲ್ಲಿ ಬರೆಯುವದಾದರೂ ಏನನ್ನು? ನನ್ನ ಒಂದಿಷ್ಟು ಕನಸು-ಕನವರಿಕೆಗಳನ್ನು, ನೆನಪು-ನೇವರಿಕೆಗಳನ್ನು, ತವಕ-ತಲ್ಲಣಗಳನ್ನು, ನೋವ-ನಲಿವುಗಳನ್ನು, ಆಸೆ-ನಿರಾಶೆಗಳನ್ನು, ನನ್ನೊಳಗೇ ಹುಟ್ಟಿ ಸಾಯುವ ನನ್ನ ಒಂದಿಷ್ಟು ದ್ವಂದಗಳನ್ನು, ತಳಮಳಗಳನ್ನು, ಬದುಕಿನ ವಿಪರ್ಯಾಸಗಳನ್ನು ಹೀಗೆ ಇನ್ನೂ ಏನೇನೋ..........ಜೊತೆಗೆ ನನ್ನೊಳಗಿನ ಒಂದಷ್ಟು ಪುಳಕವನ್ನು, ಆತ್ಮವಂಚನೆಯನ್ನು, ಈರ್ಷೆಯನ್ನು, ಅಸಹಾಯಕತೆಯನ್ನು ಮತ್ತು ಯಾರೊಂದಿಗೂ ಹಂಚಿಕೊಳ್ಳಲಾಗದೆ ನನ್ನೊಳಗೇ ಬಚ್ಚಿಟ್ಟ ನನ್ನ ಒಂದಿಷ್ಟು ಪ್ರೇಮ-ಕಾಮಗಳನ್ನು ಹಾಗೂ ಮನುಷ್ಯ ಸಹಜ ದೌರ್ಬಲ್ಯಗಳಾದ ನನ್ನ ಸಿಟ್ಟು, ಆಕ್ರೋಶಗಳನ್ನು.
ಅಂದಹಾಗೆ ನಾನಿಲ್ಲಿ ಎದ್ದೆ, ಕೂತೆ, ತಿಂದೆ, ತಿರುಗಾಡಿದೆ ಎಂಬಂತಹ ನೀರಸ ವಿಷಯಗಳನ್ನು ಬರೆಯುಲು ಹೋಗುವದಿಲ್ಲ. ನಾ ಕಂಡಿದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ನನಗೆ ಬಿಡುವಾದಾಗ ನೇರಾನೇರ ದಾಖಲಿಸುತ್ತಾ ಹೋಗುತ್ತೇನಷ್ಟೆ. ಅದರಲ್ಲಿ ವರ್ತಮಾನ, ಭೂತ, ಭವಿಷತ್ ಕಾಲದ ಸಂಗತಿಗಳೆಲ್ಲಾ ಅಡಗಿರುತ್ತವೆ. ನೀವು ಬೇಕಾದರೆ ನನ್ನನ್ನು ಮೂರ್ಖನೆನ್ನಿ, ಹುಚ್ಚನೆನ್ನಿ, ವಿಕ್ಷಿಪ್ತ ಮನಸ್ಸಿನವನೆನ್ನಿ ಏನು ಬೇಕಾದರೂ ಅನ್ನಿ. ಐ ಡೋಂಟ್ ಕೇರ್!
ಮತ್ತೊಂದು ವಿಷ್ಯ. ಒಬ್ಬ ಮನುಷ್ಯನ ಬದುಕಿನಲ್ಲಿ ಕೆಲವೊಂದಿಷ್ಟ ದಿನಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ದಿನಗಳು ಪ್ರಮುಖವಾಗಿರುವದಲ್ಲಿವಾದ್ದರಿಂದ ನಾನು ನನ್ನ ಡೈರಿಯಲ್ಲಿ ದಿನಾಂಕವನ್ನು ನಮೂದಿಸುವ ಗೋಜಿಗೆ ಹೋಗಿಲ್ಲ. ಏನಾದರೊಂದು ಮಹತ್ತರವಾದದ್ದು ನಡೆದ ದಿನವನ್ನು ಮಾತ್ರ ಆ ದಿನಾಂಕ ಸಮೇತ ನಮೂದಿಸುತ್ತೇನೆ.
ಇನ್ನೊಂದು ವಿಷ್ಯ: ಮನುಷ್ಯರ ಬಗ್ಗೆ ಆಸಕ್ತಿಯಿರಬೇಕೇ ಹೊರತು ಕುತೂಹಲವಿರಬಾರದು. ಇಷ್ಟು ಸಾಕಲ್ಲವೆ? ಸಧ್ಯಕ್ಕೆ ಈ ಡೈರಿಯನ್ನು ಮುಚ್ಚಿಡಿ. ಮತ್ತೆ ಬಿಡುವಾದಾಗ ಮತ್ತೊಂದು ವಿಷಯವನ್ನು ಬರೆದಿಟ್ಟಿರುತ್ತೇನೆ. ಆಗ ಬಂದು ಓದಬಹುದು. ಅಲ್ಲಿಯವರೆಗೆ ಬೈ ಬೈ.......