ರೋಹನಾ ತಲುಪುವವರೆಗೂ ಆ ಇಡಿ ಕಂಪಾರ್ಟ್‍ಮೆಂಟು ನನ್ನೊಬ್ಬನದೇ ಆಗಿತ್ತು. ಬಳಿಕ ಹುಡುಗಿಯೊಬ್ಬಳು ನನ್ನನ್ನು ಸೇರಿಕೊಂಡಳು. ಅವಳನ್ನು ಬೀಳ್ಕೊಡಲು ದಂಪತಿಗಳಿಬ್ಬರು ಬಂದಿದ್ದರು. ಬಹುಶಃ, ಅವರು ಆಕೆಯ ತಂದೆ-ತಾಯಂದಿರರಬೇಕು. ಅವಳ ಸುರಕ್ಷತೆಯ ಬಗ್ಗೆ ಅವರು ತುಸು ಹೆಚ್ಚೇ ಕಳವಳಗೊಂಡಂತೆ ಕಾಣುತ್ತಿತ್ತು. ಆ ಹೆಂಗಸು ಸಾಮಾನುಗಳನ್ನು ಎಲ್ಲಿಡಬೇಕು, ಕಿಟಕಿಯಿಂದಾಚೆ ಯಾವಾಗ ತಲೆಹಾಕಬಾರದು, ಹಾಗು ಅಪರಿಚಿತರೊಂದಿಗೆ ಮಾತನಾಡುವದನ್ನು ಹೇಗೆ ತಳ್ಳಿಹಾಕಬೇಕೆಂಬುದರ ಬಗ್ಗೆಯೆಲ್ಲಾ ಸಲಹೆ ಸೂಚನೆಗಳನ್ನು ಕೊಟ್ಟಳು.
ಅವರು ವಿದಾಯ ಹೇಳಿದರು. ರೈಲು ನಿಲ್ದಾಣದಿಂದ ಹೊರಟಿತು. ನಾನಾಗ ಸಂಪೂರ್ಣ ಕುರುಡನಾಗಿದ್ದೆ. ನನ್ನ ಕಂಗಳು ಕತ್ತಲೆ ಮತ್ತು ಬೆಳಕಿಗೆ ಮಾತ್ರ ಸ್ಪಂದಿಸುತ್ತಿದ್ದವು. ಹೀಗಾಗಿ ಆ ಹುಡುಗಿ ನೋಡಲು ಹೇಗೆ ಕಾಣುತ್ತಿದ್ದಳು ಎಂಬುದನ್ನು ಹೇಳಲು ಅಸಮರ್ಥನಾಗಿದ್ದೆ. ಆದರೆ ಅವಳು ನಡೆಯುವಾಗ ಅವಳ ಹಿಮ್ಮಡಿಗೆ ಬಡಿಯುತ್ತಿದ್ದ ಸಪ್ಪಳದಿಂದ ಆಕೆ ಚಪ್ಪಲಿ ಹಾಕಿದ್ದಳೆಂದು ಗೊತ್ತಾಯಿತು.
ಅವಳು ನೋಡಲು ಹೇಗಿದ್ದಾಳೆಂದು ತಿಳಿಯಲು ನನಗೆ ಸ್ವಲ್ಪ ಸಮಯ ಹಿಡಿಯಬಹುದು. ಅಥವಾ ಬಹುಶಃ, ಅದು ಸಾಧ್ಯವಾಗದೆಯೂ ಹೋಗಬಹುದು! ಆದರೆ ಅವಳ ಧ್ವನಿ ನಂಗೆ ತುಂಬಾ ಹಿಡಿಸಿತು. ಮಾತ್ರವಲ್ಲ ಅವಳ ಚಪ್ಪಲಿಯ ಸದ್ದು ಕೂಡ ಇಷ್ಟವಾಯಿತು.
“ನೀವು ಡೆಹರಾಗೆ ಹೋಗುತ್ತಿದ್ದೀರಾ?” ನಾನು ಕೇಳಿದೆ.
ಬಹುಶಃ, ನಾನು ಕತ್ತಲ ಮೂಲೆಯಲ್ಲಿ ಕುಳಿತಿರಬೇಕು. ಅವಳು ನನ್ನ ದನಿ ಕೇಳಿ ಬೆಚ್ಚಿಬಿದ್ದಳು. ಅವಳು ಸ್ವಲ್ಪ ಆಶ್ಚರ್ಯಚಕಿತಳಾಗಿ “ಓ! ಇಲ್ಲಿ ಯಾರಾದರು ಇದ್ದಾರೆಂದು ನನಗೆ ಗೊತ್ತಾಗಲಿಲ್ಲ” ಎಂದು ಉದ್ಗರಿಸಿದಳು.
ಕೆಲವೊಮ್ಮೆ ಹಾಗಾಗುತ್ತದೆ. ದೃಷ್ಟಿ ಚನ್ನಾಗಿರುವವರು ಕೂಡ ಒಮ್ಮೊಮ್ಮೆ ತಮ್ಮ ಮುಂದಿರುವದನ್ನು ಸರಿಯಾಗಿ ಗಮನಿಸುವದಿಲ್ಲ. ಅವರಿಗೆ ನೋಡಲು ಬಹಳಷ್ಟಿರುತ್ತದೆ. ಆದರೆ ಸರಿಯಾಗಿ ನೋಡುವದಿಲ್ಲ. ದೃಷ್ಟಿಹೀನರು (ಅಥವಾ ಮಂದ ದೃಷ್ಟಿಯುಳ್ಳವರು) ಹಾಗಲ್ಲ. ತಮ್ಮ ಇತರೆ ಇಂದ್ರಿಯಾನುಭವಗಳ ಮೂಲಕ ಬರೀ ಅಗತ್ಯವಿರುವದನ್ನಷ್ಟೇ ಗಮನಿಸಿದರೆ ಸಾಕು. ಆದರೆ ಅವರು ಅದಕ್ಕಿಂತ ಹೆಚ್ಚಾಗಿ ಗ್ರಹಿಸಿರುತ್ತಾರೆ.
“ನಾನು ಕೂಡ ನಿಮ್ಮನ್ನು ನೋಡಲಿಲ್ಲ” ನಾನು ಹೇಳಿದೆ, “ಆದರೆ ನೀವು ಒಳಬರುವದು ಕೇಳಿಸಿತು.”
ನಾನು ಕುರುಡ ಎಂಬುದನ್ನು ಅವಳಿಂದ ಮುಚ್ಚಿಡಲು ಇನ್ನಿಲ್ಲದ ಪ್ರಯತ್ನಮಾಡುತ್ತಿದ್ದೆ. ಅವಳಿಗೆ ಗೊತ್ತಾಗಬಾರದೆಂದು ಸೀಟಿಗೆ ಅಂಟಿಕೊಂಡೇ ಕುಳಿತೆ. ಹಾಗೆ ಕುಳಿತುಕೊಳ್ಳುವದು ನಂಗೇನೂ ಕಷ್ಟವಾಗಲಿಲ್ಲ.
“ನಾನು ಸಹರಾನಪುರದಲ್ಲಿ ಇಳಿಯುತ್ತೇನೆ. ಅಲ್ಲಿಗೆ ನನ್ನ ಆಂಟಿ ಬರುತ್ತಾರೆ ನನ್ನ ಕರೆದೊಯ್ಯಲು” ಹುಡುಗಿ ಹೇಳಿದಳು.
“ಹಾಗಿದ್ದರೆ ನಾನು ನಿಮ್ಮೊಂದಿಗೆ ಇಷ್ಟೊಂದು ಸಲಿಗೆಯಿಂದ ಇರಬಾರದಿತ್ತು”, ನಾನು ಹೇಳಿದೆ, “ಸಾಮಾನ್ಯವಾಗಿ ಈ ಆಂಟಿಯರೆಂದರೆ ಒಂಥರಾ ಭಯ ಹುಟ್ಟಿಸುವ ಪ್ರಾಣಿಗಳು.”
“ನೀವೆಲ್ಲಿಗೆ ಹೋಗುತ್ತಿದ್ದೀರಾ?” ಅವಳು ಕೇಳಿದಳು.
“ಡೆಹರಾಗೆ, ಅಲ್ಲಿಂದ ಮಸ್ಸೂರಿಗೆ”
“ಓ, ಹೌ ಲಕ್ಕಿ ಯು ಅರ್! ನಾನೂ ಮಸ್ಸೂರಿಗೆ ಹೋಗಬೇಕಿತ್ತು. ಅಲ್ಲಿಯ ಬೆಟ್ಟಗುಡ್ಡಗಳೆಂದರೆ ನಂಗೆ ತುಂಬಾ ಇಷ್ಟ. ಅದರಲ್ಲೂ ವಿಶೇಷವಾಗಿ ಅಕ್ಟೋಬರ್ ತಿಂಗಳಿನ ಬೆಟ್ಟಗುಡ್ಡಗಳೆಂದರೆ ಪಂಚಪ್ರಾಣ.”
“ಹೌದು, ಇದು ಪ್ರಶಸ್ತ ಸಮಯ.” ಎಲ್ಲವನ್ನು ನೆನಪಿಗೆ ತಂದುಕೊಳ್ಳುತ್ತಾ ಹೇಳಿದೆ. “ಈ ಸಮಯದಲ್ಲಿ ಗುಡ್ಡಗಳೆಲ್ಲಾ ಡೇರಾ ಹೂಗಳಿಂದ ಕಂಗೊಳಿಸುತ್ತಿರುತ್ತವೆ, ಸೂರ್ಯ ಆಹ್ಲಾದಕರವಾಗಿರುತ್ತಾನೆ, ಮತ್ತು ರಾತ್ರಿ ಹೊತ್ತು ಬೆಂಕಿಕಾಯಿಸುತ್ತಾ ಸ್ವಲ್ಪ ಬ್ರ್ಯಾಂಡಿ ಬೇಕಾದರೆ ಕುಡಿಬಹುದು. ಈ ಸಮಯದಲ್ಲಿ ಎಲ್ಲ ಪ್ರವಾಸಿಗರು ಹೊರಟುಹೋಗಿರುತ್ತಾರೆ, ರಸ್ತೆಗಳು ನಿರ್ಜನವಾಗಿರುತ್ತವೆ, ಹಾಗು ಇಡಿ ವಾತಾವರಣ ಪ್ರಶಾಂತತೆಯಿಂದ ಕೂಡಿರುತ್ತದೆ. ಹೌದು, ಅಕ್ಟೋಬರ್ ತಿಂಗಳು ಪ್ರಶಸ್ತ ಸಮಯ!”
ಅವಳು ಸುಮ್ಮನಿದ್ದಳು. ಬಹುಶಃ, ನನ್ನ ಮಾತುಗಳು ಅವಳನ್ನು ತಾಗಿರಬೇಕು. ಅಥವಾ ಅವಳು ನನ್ನನ್ನು ಒಬ್ಬ ‘ರೊಮ್ಯಾಂಟಿಕ್ ಫೂಲ್’ ಎಂದು ಭಾವಿಸಿದಳೇನೋ! ಆಗ ಇದ್ದಕ್ಕಿದ್ದಂತೆ ನಾನೊಂದು ತಪ್ಪು ಮಾಡಿದೆ.
“ಹೊರಗೆ ಏನು ಕಾಣ್ತಾ ಇದೆ?” ಎಂದು ಕೇಳಿದೆ.
ಅವಳು ನನ್ನ ಪ್ರಶ್ನೆಯೊಳಗಿನ ಅಸಹಜತೆಯನ್ನು ಗಮನಿಸಿದಂತೆ ಕಾಣಲಿಲ್ಲ. ಹಾಗಾದರೆ ನಾನು ಕುರುಡ ಎಂಬುದು ಅವಳಿಗೆ ಅದಾಗಲೇ ಗೊತ್ತಾಗಿಹೋಗಿದೆಯೇ? ಆದರೆ ಅವಳ ಮುಂದಿನ ಪ್ರಶ್ನೆ ನನ್ನ ಅನುಮಾನವನ್ನು ತೊಡೆದುಹಾಕಿತು.
“ನೀವೇ ಏಕೆ ಕಿಟಕಿಯಿಂದ ನೋಡಬಾರದು?” ಅವಳು ಕೇಳಿದಳು.
ನಾನು ಸಲೀಸಾಗಿ ಬರ್ತ್‍ಗುಂಟ ಸರಿಯುತ್ತಾ ಕಿಟಕಿಯ ಪಕ್ಕ ಬಂದು ಕುಳಿತೆ. ಕಿಟಕಿ ತೆರದೇ ಇತ್ತು. ಅದಕ್ಕೆ ಮುಖಮಾಡಿ ಹೊರಗಿನ ದೃಶ್ಯಗಳನ್ನು ನೋಡುತ್ತಿರುವವನಂತೆ ನಟಿಸುತ್ತಾ ಕುಳಿತೆ.
ಎಂಜಿನ್ ಹೊಗೆ ಉಗುಳುತ್ತಾ ಚುಕುಬುಕು ಎಂದು ಸದ್ದುಮಾಡುತ್ತಾ ರಭಸವಾಗಿ ಸಾಗುತ್ತಿತ್ತು, ಗಾಲಿಗಳು ದಡಲ್ ಬಡಲ್ ಎಂದು ಒಂದೇ ಗತಿಯಲ್ಲಿ ಲಯಬದ್ಧವಾಗಿ ಓಡುತ್ತಿದ್ದವು. ನನ್ನ ಒಳಗಣ್ಣಿಗೆ ಹೊರಗಿನ ಟೆಲಿಗ್ರಾಫ್ ಕಂಬಗಳು ಅತಿವೇಗದಲ್ಲಿ ಒಂದೊಂದಾಗಿ ಸರಿದುಹೋಗುತ್ತಿರುವಂತೆ ಭಾಸವಾಯಿತು.
“ನೀವು ಗಮನಿಸಿದ್ದೀರಾ” ನಾನು ನನ್ನ ಅಭಿಪ್ರಾಯವನ್ನು ಮುಂದಿಡುತ್ತಾ ಕೇಳಿದೆ, “ನಾವು ನಿಂತಿರುವಂತೆ, ಮರಗಳು ಓಡುತ್ತಿರುವಂತೆ ಕಾಣುತ್ತದಲ್ಲವೆ?”
“ಹೌದು, ಅದು ಸಾಮಾನ್ಯವಾಗಿ ಹಾಗೆ ಕಾಣುತ್ತೆ.” ಅವಳು ಹೇಳಿದಳು. “ಅಲ್ಲಿ ಯಾವುದಾದ್ರು ಪ್ರಾಣಿಗಳನ್ನು ನೋಡಿದ್ರಾ?”
“ಇಲ್ಲ” ನಾನು ಅತ್ಯಂತ ಖಚಿತವಾಗಿ ಹೇಳಿದೆ. ಡೆಹರಾದ ಕಾಡುಗಳಲ್ಲೀಗ ಯಾವುದೇ ಪ್ರಾಣಿಗಳಿಲ್ಲ ಎಂಬುದು ನಂಗೆ ಚನ್ನಾಗಿ ಗೊತ್ತಿತ್ತು.
ಈಗ ನಾನು ಕಿಟಕಿಯಿಂದ ತಿರುಗಿ ಆ ಹುಡುಗಿಗೆ ಮುಖಮಾಡಿ ಕುಳಿತೆ. ನಮ್ಮಿಬ್ಬರ ಮಧ್ಯ ಕ್ಷಣಹೊತ್ತು ಮೌನ ಆವರಿಸಿತು.
“ನಿಮ್ಮದು ಸುಂದರವಾದ ಮುಖ” ನಾನು ಅವಳ ಗಮನಸೆಳೆಯುತ್ತಾ ಹೇಳಿದೆ. ನಾನು ಕೊಂಚ ಸಲಿಗೆ ತೆಗೆದುಕೊಳ್ಳುತ್ತಾ ಧೈರ್ಯಮಾಡಿ ಹೇಳಿದೆ. ಆದರದು ಅಪಾಯರಹಿತ ಹೇಳಿಕೆಯಾಗಿದ್ದರಿಂದ ಅವಳು ಏನೂ ಅಂದುಕೊಳ್ಳಲಿಲ್ಲ. ಮೇಲಾಗಿ ಹೊಗಳಿಕೆಯನ್ನು ಯಾವ ಹುಡುಗಿ ತಾನೇ ಇಷ್ಟಪಡುವದಿಲ್ಲ?
ಅವಳು ನಕ್ಕಳು, ಆಪ್ಯಾಯಮಾನವಾಗಿ ನಕ್ಕಳು. ಕಿವಿಯಲ್ಲಿ ಮತ್ತೆ ಮತ್ತೆ ರಿಂಗಣಿಸುವ ತುಂಬುನಾದದ ನಗು ಅದು.
“ಥ್ಯಾಂಕ್ಸ್, ಆದರೆ ಇಷ್ಟು ದಿನ ಜನ ನನ್ನದು ಮುದ್ದು ಮುಖವೆಂದು ಹೇಳುತ್ತಿದ್ದುದನ್ನು ಕೇಳಿ ಕೇಳಿ ಸಾಕಾಗಿಹೋಗಿತ್ತು”
ಓ, ಹಾಗಾದರೆ ನಿನಗೆ ಮುದ್ದು ಮುಖವೂ ಇದೆಯೇ? ಪರ್ವಾಗಿಲ್ಲ ಎಂದು ನನ್ನಷ್ಟಕ್ಕೆ ನಾನೇ ಯೋಚಿಸುತ್ತಾ ಜೋರಾಗಿ ಹೇಳಿದೆ, “ವೆಲ್, ಸುಂದರವಾದ ಮುಖ ಮುದ್ದು ಮುಖವೂ ಆಗಬಲ್ಲದು.”
“ನೀವು ಭಾರಿ ರಸಿಕರು!” ಅವಳು ನಕ್ಕಳು.
ಆದರೆ ನಾನು ನಗಲಿಲ್ಲ. ಏನೊಂದು ಪ್ರತಿಕ್ರಿಯೆಯನ್ನು ತೋರದೆ ಸುಮ್ಮನೆ ಕುಳಿತಿದ್ದೆ.
“ಇಷ್ಟೊಂದು ಗಂಭೀರವಾಗಿ ಯಾಕೆ ಕುಳಿತಿದ್ದೀರಿ?” ಅವಳು ಕೇಳಿದಳು.
ನನಗಾಗ ಅವಳಿಗೋಸ್ಕರನಾದರೂ ನಗಲೇಬೇಕನಿಸಿತು. ಆದರೆ ಹಾಗೆ ನಗಬೇಕೆಂಬ ವಿಚಾರವೇ ಒಂದುಕ್ಷಣ ನನ್ನ ಮನವನ್ನು ಕಲುಕಿತು, ಒಂಟಿತನ ಕಾಡುವಂತೆ ಮಾಡಿತು.
“ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ ನಿಮ್ಮ ನಿಲ್ದಾಣದಲ್ಲಿರುತ್ತೇವೆ.” ನಾನು ಹೇಳಿದೆ.
“ಥ್ಯಾಂಕ್ ಗುಡ್‍ನೆಸ್, ಇದು ಅಲ್ಪಾವಧಿಯ ಪ್ರಯಾಣ! ನಾನು ರೈಲಿನಲ್ಲಿ ಎರಡ್ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳಲಾರೆ.”
ಆದರೆ ನಾನು ಅಲ್ಲಿ ಎಷ್ಟು ಹೊತ್ತು ಬೇಕಾದರು ಕೂರಲು ಸಿದ್ಧನಿದ್ದೆ ಕೇವಲ ಅವಳ ಮಾತುಗಳನ್ನು ಕೇಳಲು. ಅವಳ ಧ್ವನಿ ಅಷ್ಟೊಂದು ಇಂಪಾಗಿತ್ತು. ಹರಿವ ತೊರೆಯ ಝುಳುಝುಳು ನಿನಾದದ ಇಂಪು ಅದು. ಬಹುಶಃ, ಅವಳು ರೈಲಿನಿಂದ ಇಳಿಯುತ್ತಿದ್ದಂತೆ ನಮ್ಮಿಬ್ಬರ ಅಲ್ಪಾವಧಿಯ ಭೇಟಿಯನ್ನು ಮರೆಯಬಹುದು. ಆದರೆ ನಂಗೆ ಅವಳ ನೆನಪು ನನ್ನ ಪ್ರಯಾಣದ ಕಡೆತನಕವೂ ಹಾಗು ಅದರಾಚೆ ಸ್ವಲ್ಪ ದಿನಗಳವರೆಗೆಯಾದರೂ ಕಾಡುತ್ತಿರುತ್ತದೆ.
ಎಂಜಿನು ಕೀರಲು ದನಿಯಲ್ಲಿ ಸಿಳ್ಳು ಹಾಕಿತು, ಗಾಲಿಗಳು ತಮ್ಮ ವೇಗವನ್ನು ಕಡಿಮೆಗೊಳಿಸುತ್ತಾ ಲಯವನ್ನು ಬದಲಾಯಿಸಿದವು. ಹುಡುಗಿ ಎದ್ದುನಿಂತಳು. ಒಂದೊಂದಾಗಿ ತನ್ನ ಸಾಮಾನುಗಳನ್ನು ತೆಗೆದಿರಿಸಿದಳು. ನನಗೆ ಇದ್ದಕ್ಕಿದ್ದಂತೆ ಆ ಹುಡುಗಿಯ ಕೂದಲಿನ ಬಗ್ಗೆ ಕುತೂಹಲ ಹುಟ್ಟಿತು. ಆಕೆ ತನ್ನ ಕೂದಲನ್ನು ತುರುಬುಹಾಕಿ ಗಂಟುಕಟ್ಟಿದ್ದಾಳೆಯೆ? ಅಥವಾ ಅವನ್ನೆಲ್ಲಾ ಸೇರಿಸಿ ಜಡೆ ಹೆಣೆದಿದ್ದಾಳೆಯೆ? ಅಥವಾ ತನ್ನ ಭುಜದ ಮೇಲೆ ಹಾಗೆ ಇಳಿಬಿಟ್ಟಿದ್ದಾಳೆಯೆ? ಅಥವಾ ಸಣ್ಣದಾಗಿ ಕತ್ತರಿಸಿಕೊಂಡಿದ್ದಾಳೆಯೇ? ತಿಳಿದುಕೊಳ್ಳಬೇಕೆಂಬ ಹಂಬಲವುಂಟಾಯಿತು.
ರೈಲು ನಿಧಾನವಾಗಿ ನಿಲ್ದಾಣದಲ್ಲಿ ಬಂದುನಿಂತಿತು. ಹೊರಗಡೆ ಕೂಲಿಗಳು ಹಾಗು ಹೊತ್ತುಮಾರುವವರ ಕೂಗುಗಳು ಒಂದೇಸಮನೆ ಕೇಳುತ್ತಿದ್ದವು. ಇವರೆಲ್ಲರ ಮಧ್ಯ ಹೆಂಗಸೊಬ್ಬಳ ಏರುದನಿಯೊಂದು ನಮ್ಮ ಡಬ್ಬಿಯ ಬಾಗಿಲದ ಹತ್ತಿರ ಕೇಳಿಸುತ್ತಿತ್ತು. ಬಹುಶಃ, ಅದು ಆ ಹುಡುಗಿಯ ಆಂಟಿಯ ದನಿಯಾಗಿರಬಹುದು!
“ಗುಡ್‍ಬೈ” ಆ ಹುಡುಗಿ ವಿದಾಯ ಹೇಳಿದಳು.
ಅವಳು ನನಗೆ ತುಂಬಾ ಹತ್ತಿರದಲ್ಲಿ ನಿಂತಿದ್ದಳು; ಎಷ್ಟು ಹತ್ತಿರವೆಂದರೆ ಅವಳ ಕೂದಲಿಗೆ ಹಚ್ಚಿದ್ದ ಸುಗಂಧ ತೈಲದ ಘಮಲು ನನ್ನ ಮೂಗಿಗೆ ಬಡಿದು ನನ್ನಲ್ಲಿ ಆಸೆ ಹುಟ್ಟಿಸಿತು. ನನ್ನ ಕೈಯನ್ನೆತ್ತಿ ಒಮ್ಮೆ ಅವಳ ಕೂದಲನ್ನು ಮುಟ್ಟಬೇಕೆನಿಸಿತು. ಅಷ್ಟರಲ್ಲಿ ಅವಳು ಮುಂದೆ ಸರಿದಳು. ಆದರೆ ಅವಳ ಅತ್ತರಿನ ಘಮಲು ಇನ್ನೂ ಅಲ್ಲೇ ಸುಳಿದಾಡುತ್ತಿತ್ತು.
ಅವಳು ಬಾಗಿಲ ಬಳಿ ಹೋಗುತ್ತಿದ್ದಂತೆ ಅಲ್ಲಿ ಏನೋ ಗೊಂದಲವುಂಟಾಯಿತು. ಬಹುಶಃ, ಯಾತ್ರಿಕನೊಬ್ಬ ಒಳಬರುವ ಆತುರದಲ್ಲಿ ಅವಳಿಗೆ ಡಿಕ್ಕಿ ಹೊಡೆದಿರಬೇಕು. ಅವನು ಅವಳ ಹತ್ತಿರ ಕ್ಷಮೆ ಕೇಳಿದ. ಬಾಗಿಲು ಮುಚ್ಚಿತು. ನಂಗೆ ಜಗತ್ತಿನ ಬಾಗಿಲೇ ಮುಚ್ಚಿದಹಾಗಾಯಿತು. ನಾನು ನನ್ನ ಸೀಟಿಗೆ (ಬರ್ತ್‍ಗೆ) ವಾಪಾಸಾದೆ. ಗಾರ್ಡು ಸೀಟಿ ಊದಿದ. ರೈಲು ಹೊರಟಿತು. ಮತ್ತೊಮ್ಮೆ ನಾನು ಹೊಸ ಯಾತ್ರಿಕನೊಂದಿಗೆ ಆಟವೊಂದನ್ನು ಆಡಬೇಕಿತ್ತು.
ರೈಲು ನಿಧಾನಕ್ಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡಿತು. ಗಾಲಿಗಳು ಎಂದಿನಂತೆ ಲಯಬದ್ಧವಾಗಿ ಹಾಡತೊಡಗಿದವು. ನಮ್ಮ ಡಬ್ಬಿ ಕುಲುಕುತ್ತಾ ಮುಲುಗುತ್ತಾ ಮುಂದೆ ಹೊರಟಿತು. ನಾನು ಕಿಟಕಿಯನ್ನು ಹುಡುಕಿ ಅದಕ್ಕೆ ಮುಖಮಾಡಿ ಕುಳಿತುಕೊಂಡು ನನ್ನ ಪಾಲಿಗೆ ಕತ್ತಲಿನಂತಿರುವ ಹೊರಗಿನ ಹಗಲ ಬೆಳಕನ್ನು ದಿಟ್ಟಿಸತೊಡಗಿದೆ.
ಕಿಟಕಿಯಾಚೆ ಬಹಳಷ್ಟು ಸಂಗತಿಗಳು ಸಂಭವಿಸುತ್ತಿದ್ದವು. ಅವು ಏನಿರಬಹುದೆಂದು ಊಹಿಸಿಕೊಳ್ಳುವದೇ ನಂಗೆ ಒಂದು ಮೋಜಿನ ಆಟವಾಗಿತ್ತು.
ನನ್ನ ಡಬ್ಬಿಯೊಳಕ್ಕೆ ಬಂದ ಹೊಸ ಪ್ರಯಾಣಿಕ ನನ್ನನ್ನು ವಾಸ್ತವಕ್ಕೆ ಎಳೆದು ತಂದ.
“ದಯವಿಟ್ಟು ಕ್ಷಮಿಸಿ. ನಿಮಗೆ ನನ್ನಿಂದ ನಿರಾಶೆಯಾಗಿರಬಹುದು,” ಅವನು ಹೇಳಿದ, “ನಾನು, ಈಗಷ್ಟೆ ನಿಮ್ಮನ್ನು ಬಿಟ್ಟುಹೋದ ಆ ಸಹಪ್ರಯಾಣಿಕಳಷ್ಟು ಆಕರ್ಷಕವೆನಿಸದಿರಬಹುದು..........”
“ಶೀ ವಾಜ್ ಯ್ಯಾನ್ ಇಂಟರೆಸ್ಟಿಂಗ್ ಗರ್ಲ್,” ನಾನು ಹೇಳಿದೆ. “ಅವಳು ತನ್ನ ಕೂದಲನ್ನು ಹೇಗೆ ಬಿಟ್ಟಿದ್ದಳು ಎಂದು ಹೇಳುವಿರಾ, ಪ್ಲೀಸ್? ಉದ್ದವಾಗಿ ಬಿಟ್ಟಿದ್ದಳೆ? ಇಲ್ಲ ಮೋಟಾಗಿ ಕತ್ತರಿಸಿದ್ದಳೆ?”
“ಕ್ಷಮಿಸಿ.ನಂಗೆ ಸರಿಯಾಗಿ ನೆನಪಿಲ್ಲ,” ಅವನು ತಬ್ಬಿಬ್ಬಾಗಿದ್ದಂತೆ ಕಂಡಿತು. “ನಾನು ಅವಳ ಕಂಗಳನ್ನಷ್ಟೇ ಗಮನಿಸಿದೆ, ಕೂದಲನ್ನಲ್ಲ. ಅವಳಿಗೆ ಸುಂದರವಾದ ಕಂಗಳಿದ್ದವು. ಆದರೆ ಏನು ಪ್ರಯೋಜನ? ಅವಳು ಪೂರಾ ಕುರುಡಿಯಾಗಿದ್ದಳು. ನೀವಿದನ್ನು ಗಮನಿಸಲಿಲ್ಲವೇ?”
ಮೂಲ ಇಂಗ್ಲೀಷ್: ರಸ್ಕಿನ್ ಬಾಂಡ್
ಕನ್ನಡಕ್ಕೆ: ಉದಯ್ ಇಟಗಿ
ದಿನಾಂಕ 20-3-2012 ರಂದು ಉದಯವಾಣಿಯಲ್ಲಿ ಪ್ರಕಟವಾದ ಕಥೆ. ಅದರ ಲಿಂಕ್ ಇಲ್ಲಿದೆ. http://www.udayavani.com/news/148469L15-%E0%B2%86-%E0%B2%95-%E0%B2%97%E0%B2%B3----.html
ಬ್ರಾಹ್ಮೀ ಮತ್ತು ನಾಗರೀ ಲಿಪಿ ಕಲಿಯಿರಿ
2 ದಿನಗಳ ಹಿಂದೆ
1 ಕಾಮೆಂಟ್(ಗಳು):
ಒಳ್ಳೆಯ ಕಥೆ.ಆದರೆ ಇದಕ್ಕೂ ಮುಂಚೆ ಮತ್ತೆಲ್ಲೋ ಓದಿದ ನೆನಪು :)
ಕಾಮೆಂಟ್ ಪೋಸ್ಟ್ ಮಾಡಿ