ಇಸ್ರೇಲ್ ವಿರೋಧಿ ನೀತಿ: ನಮಗೆಲ್ಲಾ ಗೊತ್ತಿರುವಂತೆ 1948 ರಲ್ಲಿ ವಿಶ್ವಸಂಸ್ಥೆಯ ಆದೇಶದ ಮೇರೆಗೆ ಇಸ್ರೇಲಿಯರು ಏಕಾಏಕಿ ಪ್ಯಾಲೈಸ್ತೇನಿಯಾವನ್ನು ಆಕ್ರಮಿಸಿಕೊಂಡಾಗ
ಅಲ್ಲಿ ಒಂದು ದೊಡ್ಡ ರಕ್ತಪಾತವೇ ನಡೆದುಹೋಗುತ್ತದೆ. ಇಸ್ರೇಲಿಯರ ದಾಳಿಯಲ್ಲಿ ಅನೇಕ
ಊರುಗಳು ನಾಶವಾಗಿ ಎಷ್ಟೋ ಪ್ಯಾಲೈಸ್ತೇನಿಯನ್‍ರು (ಮುಸ್ಲಿಂರು) ತಮ್ಮ ಮನೆ-ಮಠ,
ಹೊಲ-ಗದ್ದೆಗಳನ್ನು ಕಳೆದುಕೊಂಡು ಬೀದಿಗೆ ಬರುತ್ತಾರಲ್ಲದೇ ತಮ್ಮದೇ ನೆಲದಲ್ಲಿ ಪರಕೀಯರಾಗಿ
ಜೀವಿಸತೊಡಗುತ್ತಾರೆ. ಜೆರುಸೆಲಂ ನಮ್ಮ ಪವಿತ್ರ ನಗರ, ಅದು ನಮಗೆ ಸೇರಬೇಕಾಗಿದ್ದು ಎಂದು
ಇಸ್ರೇಲಿಗರು. ಇಲ್ಲ ಇದು ನಮ್ಮ ನೆಲ, ಶತಶತಮಾನಗಳಿಂದ ನಾವಿಲ್ಲಿದ್ದೇವೆ ಎಂದು ಪ್ಯಾಲೈಸ್ತೇನಿಯನ್‍ರು.
ಈ ತಿಕ್ಕಾಟ ಈಗಲೂ ಮುಂದುವರಿಯುತ್ತಿದ್ದು ಪ್ಯಾಲೈಸ್ತೇನಿಯನಾವನ್ನು ಇಸ್ರೇಲ್‍ನಿಂದ
ಬಿಡುಗಡೆಗೊಳಿಸಿ ಅದನ್ನೊಂದು ಪ್ರತ್ಯೇಕ ರಾಜ್ಯವೆಂದು ಘೋಷಿಸಿ ಎಂದು ಅವರು ಕೇಳುತ್ತಲೇ ಇದ್ದಾರೆ.
ಆದರೆ ಅದಿನ್ನೂ ಸಾಧ್ಯವಾಗಿಲ್ಲ. ಇದು ಸಹಜವಾಗಿ ಬರೀ ಪ್ಯಾಲೈಸ್ತೇನಿಯನ್ ಮುಸ್ಲಿಂರನ್ನಷ್ಟೇ
ಅಲ್ಲದೇ ಇತರೆ ಮುಸ್ಲಿಂ ರಾಷ್ಟ್ರಗಳನ್ನು ಸಹ ಕೆರಳಿಸಿತು. ಇದು ತಮ್ಮ ಜನರಿಗಾದ ಅನ್ಯಾಯ. ಇದನ್ನು
ಸರಿಪಡಿಸಲೇಬೇಕೆಂದು ಬಹುತೇಕ ಎಲ್ಲಾ ಮುಸ್ಲಿಂ ರಾಷ್ಟ್ರಗಳು ಒಂದಾಗಿ 1967 ರಲ್ಲಿ ಇಸ್ರೇಲ್ ಮೇಲೆ
ಯುದ್ಧವನ್ನು ಘೋಷಿಸುತ್ತವೆ. ಆದರೆ ಈ ಸಮಯದಲ್ಲಿ ಅಮೆರಿಕಾದ ಮಿಲ್ಟ್ರಿ ಸಹಾಯ ಪಡೆದ ಇಸ್ರೇಲ್ ಈ
ಎಲ್ಲಾ ರಾಷ್ಟ್ರಗಳನ್ನು ಆರು ದಿನಗಳಲ್ಲಿ ಹೊಡೆದುರುಳಿಸಿ ಯುದ್ಧಕ್ಕೆ ಸಮಾಪ್ತಿ ಹಾಡುತ್ತದೆ.
ನಿಧಾನವಾಗಿ ಬಹಳಷ್ಟು ಮುಸ್ಲಿಂ ರಾಷ್ಟ್ರಗಳು ಇಸ್ರೇಲ್‍ಗೆ ಅಮೆರಿಕಾ, ಯೂರೋಪ್, ಹಾಗೂ ಇಂಗ್ಲಂಡ್
ದೇಶಗಳ ಅಪಾರ ಬೆಂಬಲವಿದೆ. ಅವರನ್ನು ಮುಟ್ಟಿದರೆ ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಮನಗಂಡು
ಇಸ್ರೇಲಿಗರ ಬಗೆಗೆ ಒಳಗೊಳಗೆ ದ್ವೇಷವಿದ್ದರೂ ಮೇಲೆ ಮಾತ್ರ ನಗುವಿನ ಮುಖವಾಡ ಹಾಕಿಕೊಂಡು ಅವರ
ಸೌಹಾರ್ದತೆಯನ್ನು ಸಂಪಾದಿಸಿಕೊಳ್ಳುವದರ ಮೂಲಕ ಅಮೆರಿಕಾ, ಯೂರೋಪ್, ಹಾಗೂ ಇಂಗ್ಲಂಡ್
ದೇಶಗಳೊಟ್ಟಿಗೆ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಂಡವು. ಆದರೆ ಕೆಲವೇ ಕೆಲವು ದೇಶಗಳು ಮಾತ್ರ
ಇಸ್ರೇಲಿಗರನ್ನು ಅಲ್ಲಿಂದ ಹೊಡೆದೋಡಿಸಲೇಬೇಕೆಂದು ಪಣತೊಟ್ಟು ನಿಂತವು. ಅವುಗಳಲ್ಲಿ ಇರಾಕ್
(ಸದ್ದಾಂ ಹುಸೇನ್), ಲಿಬಿಯಾ (ಮೌಮರ್ ಗಡಾಫಿ), ಸಿರಿಯಾ (ಬಸಾರ್ ಅಷಾದ್ ಹಾಗೂ ಅವನ ತಂದೆ) ಈಜೀಪ್ಟ್ (ಅಬ್ದುಲ್ ನಾಸರ್), ಸುಡಾನ್, ಲೆಬನಾನ್
ಹಾಗೂ ಇರಾನ್
ಮುಖ್ಯವಾದವುಗಳು. ನಿಮಗೆ ಗೊತ್ತಿರಲಿ-ಇಸ್ರೇಲಿಗರಿಗೆ ತೊಂದರೆ ಕೊಟ್ಟವರನ್ನು ಅಮೆರಿಕಾ ಮತ್ತು
ಮಿತ್ರ ರಾಷ್ಟ್ರಗಳು ಟಾರ್ಗೆಟ್ ಮಾಡುತ್ತಾ
ಬರುತ್ತವೆ. ಉದಾಹರಣೆಗೆ ಈ ಮೇಲೆ ಹೇಳಿದ ಎಲ್ಲಾ ರಾಷ್ಟ್ರಗಳ ಪೈಕಿ ಇರಾನ್‍ನ್ನು ಹೊರತುಪಡಿಸಿ
ಇತರೆ ರಾಷ್ಟ್ರಗಳು ಟಾರ್ಗೆಟ್ ಆಗಿರುವದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇರಾನ್
ಕೂಡಾ ಅವರ ಹಿಟ್ ಲಿಸ್ಟಿನಲ್ಲಿದೆ ಎಂಬುದನ್ನು ನಾವು ಗಮನಿಸಬೇಕು.
ಇನ್ನು ಗಡಾಫಿ ವಿಷಯದ ಬಗ್ಗೆ
ಹೇಳುವದಾದರೆ ಅವನು ಕೂಡಾ ಇಸ್ರೇಲಿಗರ ದ್ವೇಷಿಯಾಗಿದ್ದ ಮತ್ತು ಇಸ್ರೇಲಿಗರಿಂದ ಅನ್ಯಾಯಕ್ಕೊಳಗಾದ ಪ್ಯಾಲೈಸ್ತೇನಿಯನ್‍ರ ಬಗ್ಗೆ
ಆತನಿಗೆ ಸಹಜವಾಗಿ ಅನುಕಂಪವಿತ್ತು. ಅವನು 1956ರಲ್ಲಿ ಸೂಯೇಝ್
ಬಿಕ್ಕಟ್ಟಿನ ಸಂದರ್ಭದಲ್ಲಿ ಈಜಿಪ್ಟಿನ ಆಗಿನ ಮುತ್ಸದ್ಧಿ ಗಮಾಲ ಅಬ್ದುಲ್ ನಾಸೆರ್ ಜೊತೆ ಸೇರಿ
ನೈಲ್ ನದಿಯ ನೀರು ಇಸ್ರೇಲಿಗರಿಗೆ ಹೋಗದಂತೆ ಇಸ್ರೇಲ್ ವಿರೋಧಿ ಪ್ರಮುಖ ಪಾತ್ರವಹಿಸಿದ.
ಮಾತ್ರವಲ್ಲ 1967 ರಲ್ಲಿ ಕೆಲವು ಅರಬ್ ರಾಷ್ಟ್ರಗಳು ಇಸ್ರೇಲ್ ಮೇಲೆ ಯುದ್ಧವನ್ನು ಘೋಷಿಸಿದಾಗ ಅದು ಕೇವಲ ಆರೇ ಆರು ದಿನಗಳಲ್ಲಿ ಎಲ್ಲರನ್ನೂ ಹೊಡೆದು ಉರಳಿಸುತ್ತದೆ. ಆಗ ಪ್ಯಾಲೈಸ್ತೇನ್ ಸಂಪೂರ್ಣವಾಗಿ ಇಸ್ರೇಲಿಗರ ಅಧಿನಕ್ಕೆ ಒಳಪಡುತ್ತದೆ. ಆ ಸಂದರ್ಭದಲ್ಲಿಯೇ ಇಸ್ರೇಲಿಗರ ದಬ್ಬಾಳಿಕೆಯಿಂದ ಪ್ಯಾಲೈಸ್ತೇನಿಯನ್‍ರನ್ನು ಸಂರಕ್ಷಿಸಲು
Palestanian Liberation Organisation (PLO) ಎನ್ನುವ ಇಸ್ರೇಲ್ ವಿರೋಧಿ ಸಂಸ್ಥೆಯೊಂದು ಹುಟ್ಟಿಕೊಳ್ಳುತ್ತದೆ. ಅದಕ್ಕೆ ಗಡಾಫಿ ಸಂಪೂರ್ಣವಾಗಿ ತನ್ನ ಆರ್ಥಿಕ ಮತ್ತು ನೈತಿಕ ಬೆಂಬಲವನ್ನು ನೀಡುತ್ತಾನೆ. ವಿಪರ್ಯಾಸವೆಂದರೆ PLO ದ ಬೆಂಬಲಿಗರನ್ನು ಮತ್ತು ಅದರ ಸದಸ್ಯೆರನ್ನೆಲ್ಲಾ ಅಂತರಾಷ್ಟ್ರೀಯ ಸಮುದಾಯ ಉಗ್ರರ ಪಟ್ಟಿಗೆ ಸೇರಿಸುತ್ತಾ ಬರುತ್ತದೆ.
ಗಡಾಫಿ ಉಗ್ರ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡಿದ್ದು: ಇನ್ನೊಂದು ಸಾರಿ ಅಂದರೆ 1976 ಜೂನ್ 27 ರಂದು ಇಸ್ರೇಲ್ನಿಂದ ಫ್ರಾನ್ಸ್ನತ್ತ ಹೊರಟ Air France-139 ವಿಮಾನವನ್ನು PLO ದ ಬೆಂಬಲಿಗರು ಎಂದು ಹೇಳಲಾದ ನಾಲ್ಕು ಜನ ಉಗ್ರರು ಅಪಹರಿಸುತ್ತಾರೆ. ಆ ವಿಮಾನದಲ್ಲಿ ಬಹುತೇಕರು ಇಸ್ರೇಲಿಗರು ಸೇರಿದಂತೆ ಒಟ್ಟು 246 ಜನ ಪ್ರಯಾಣಿಕರಿದ್ದರು. ಇಸ್ರೇಲಿನ ಜೈಲಿನಲ್ಲಿದ್ದ ತಮ್ಮವರನ್ನು ಬಿಡುಗಡೆ ಮಾಡಿದರೆ ಮಾತ್ರ ಇವರನ್ನು ಬಿಡಲಾಗವದೆಂಬುದು ಈ ಉಗ್ರರ ಬೇಡಿಕೆಯಾಗಿತ್ತು. ಹಾಗೆ ಅಥೆನ್ಸ್ನಿಂದ ಅಪಹರಿಸಿದ ವಿಮಾನವನ್ನು ಅವರು ನೇರವಾಗಿ ಲಿಬಿಯಾದ ಬೆಂಗಾಜಿ ವಿಮಾನ ನಿಲ್ದಾಣಕ್ಕೆ ತಂದಿಳಿಸುತ್ತಾರೆ. ಅಲ್ಲಿ ಲಿಬಿಯಾದ ಅಧ್ಯಕ್ಷ ಮೊಹಮರ್ ಗಡಾಫಿಗೆ ತಾವಿದ್ದ ವಿಮಾನಕ್ಕೆ ತೈಲವನ್ನು ಕೊಡಬೇಕೆಂಬ ಬೇಡಿಕೆಯನ್ನು ಕಳಿಸುತ್ತಾರೆ. ಗಡಾಫಿ ಇಸ್ರೇಲ್ ವಿರೋಧಿ ಮತ್ತು ಪ್ಯಾಲೈಸ್ತೇನಿಯನ್‍ರ ಬೆಂಬಲಿಗನಾಗಿದ್ದರಿಂದ ಅವನು ಕೂಡಲೇ 42 ಟನ್ಗಳಷ್ಟು ತೈಲವನ್ನು ಕೊಟ್ಟುಕಳಿಸುತ್ತಾನೆ. ಅಲ್ಲಿಂದ ಅವರ ವಿಮಾನ ಉಗಾಂಡಕ್ಕೆ ಹೊರಡುತ್ತದೆ. ಉಗಾಂಡದ ನಾಯಕ ಈದಿ ಆಮಿನ್ ಮೊದಮೊದಲು ಇಸ್ರೇಲ್ ಜೊತೆ ಚನ್ನಾಗಿಯೇ ಇದ್ದ. ಆದರೆ 1972 ರಲ್ಲಿ ಈದಿ ಆಮಿನ್ ತನ್ನ ನೆರೆ ರಾಷ್ಟ್ರವಾದ ಕೀನ್ಯಾದ ಮೇಲೆ ದಾಳಿ ಮಾಡಲು ಇಸ್ರೇಲಿನ ಅಂದಿನ ಪ್ರಧಾನಿಗೆ ಯುದ್ಧ ವಿಮಾನಗಳನ್ನು ಒದಗಿಸಬೇಕೆಂದು ಕೇಳಿಕೊಂಡನು. ಆದರೆ ಇಸ್ರೇಲ್ ಅವನ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರಿಂದ ಅವನು ತನ್ನ ಸಂಪೂರ್ಣ ಬೆಂಬಲವನ್ನು ಇಸ್ರೇಲಿನ ಶತ್ರುವಾದ ಪ್ಯಾಲೈಸ್ತೇನಾದ ಕಡೆ ತಿರುಗಿಸುತ್ತಾನೆ. ಹಾಗಾಗಿ ಈದಿ ಆಮಿನ್ ಅವರಿಗೆ ಉಗಾಂಡದ ಎಂಟಿಬ್ಬೆ ಎನ್ನುವ ವಿಮಾನ ನಿಲ್ದಾಣಕ್ಕೆ ಬಂದಿಳಿಯುವಂತೆ ಸೂಚನೆ ಕೊಡುತ್ತಾನೆ. ಆ ವಿಮಾನ ನಿಲ್ದಾಣದಲ್ಲಿ ಉಗ್ರರು ಒತ್ತೆಯಾಳೆಗಳನ್ನು ಇರಿಸುತ್ತಾರೆ. ಆದರೆ ಇಸ್ರೇಲಿನ ಸೈನಿಕರು ಅಲ್ಲಿಗೆ ರಹಸ್ಯವಾಗಿ ಬಂದಿಳಿದು ಉಗ್ರರನ್ನು ದಮನ ಮಾಡಿ ಒತ್ತೆಯಾಳುಗಳನ್ನು ಬಿಡಿಸುತ್ತಾರೆ. ಈ ಕೃತ್ಯದಲ್ಲಿ ಗಡಾಫಿ ಮತ್ತು ಈದಿ ಆಮಿನ್ ಭಾಗಿಯಾಗಿದ್ದರಿಂದ ಅವರಿಬ್ಬರೂ ಇಸ್ರೇಲಿನ ಪರಮಾಪ್ತ ಮಿತ್ರರಾದ ಅಮೆರಿಕಾ ಮತ್ತು ಬ್ರಿಟನ್ನ ಕೆಂಗಣ್ಣಿಗೆ ಗುರಿಯಾಗುತ್ತಾರೆ.
ಈದಿ ಆಮಿನ್ ಮತ್ತು
ಗಡಾಫಿ: ಈದಿ ಆಮಿನ್ 1971 ರಲ್ಲಿ ಬ್ರಿಟನ್ ಮತ್ತು ಇಸ್ರೇಲ್ನ ಸಹಾಯದಿಂದ ಉಗಾಂಡದಲ್ಲಿ ಅಧಿಕಾರಕ್ಕೆ ಬರುತ್ತಾನೆ. ಅವನು ಒಬ್ಬ ಅನಕ್ಷರಸ್ಥನಾಗಿದ್ದರಿಂದ ಅವನನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಚನ್ನಾಗಿ ಬಳಸಿಕೊಳ್ಳಬಹುದು ಎನ್ನುವದು ಅವರ ದುರಾಲೋಚನೆಯಾಗಿರುತ್ತದೆ. ಅವನು ಅಧಿಕಾರಕ್ಕೆ ಬಂದಾಗ ಅಲ್ಲಿನ ಬಹಳಷ್ಟು ಜನ ಮುಸ್ಲಿಂರು ಕ್ರಿಶ್ಚಿಯನ್ರಿಂದ ತುಳಿಯಲ್ಪಟ್ಟಿದ್ದರು ಮತ್ತು ಆ ಅಸಮಾಧನದ ಹೊಗೆ ಅವರಲ್ಲಿ ಮನೆಮಾಡಿತ್ತು. ಇದನ್ನರಿತ ಈದಿ ಆಮಿನ್ ಕ್ರಿಶ್ಚಿಯನ್ರನ್ನು ಹತ್ತಿಕ್ಕುವ ನೆಪದಲ್ಲಿ ಅವರನ್ನು ಕೊಲೆ ಮಾಡಿಸುತ್ತಾ ಹೋಗುತ್ತಾನೆ. ಆದರೆ ಇದ್ಯಾವುದನ್ನು ಸರಿಯಾಗಿ ತಿಳಿದುಕೊಳ್ಳದೆ ಗಡಾಫಿ ಈದಿ ಆಮಿನ್ ಒಬ್ಬ ಮುಸ್ಲಿಂ ನಾಯಕ ಹಾಗೂ ಉಗಾಂಡ ಒಂದು ಮುಸ್ಲಿಂ ರಾಷ್ಟ್ರ ಎಂಬ ಕಾರಣಕ್ಕೆ ಅವನ ಸಹಾಯಕ್ಕೆ ನಿಲ್ಲುತ್ತಾನೆ. ಆ ಮೂಲಕ ಗಡಾಫಿ ಈ ಕೃತ್ಯದೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೆ. ಇನ್ನೊಂದು ಸಾರಿ ಅಂದರೆ 1979 ರಲ್ಲಿ ಉಗಾಂಡದ ಜನ ಈದಿ ಆಮಿನ್ನ ವಿರುದ್ಧ ದಂಗೆ ಎದ್ದಾಗ ಗಡಾಫಿ ಅವನ ಸಹಾಯಕ್ಕಾಗಿ ಸೈನ್ಯದ ತುಕುಡಿಯನ್ನು ಕಳಿಸುತ್ತಾನೆ. ಆ ಸೈನಿಕರು ಬಂಡುಕೋರರಿಗೆ ಹೆದರಿ ಬರಾರದಲ್ಲಿ ಬಾಂಬ್ ಹಾಕಬೇಕಿದ್ದ ವಿಮಾನಗಳು ತಪ್ಪಿ ನ್ಯಾರುಬಂಗಾ ಮತ್ತು ಬುರುಂದಿಯಲ್ಲಿ ಹಾಕುತ್ತವೆ. ಇದರಿಂದಾಗಿ ಅಪಾರ ಸಾವು ನೋವುಗಳುಂಟಾಗುತ್ತವೆ. ಈ ಘಟನೆ ಗಡಾಫಿಯನ್ನು ಶಾಶ್ವತವಾಗಿ ಉಗ್ರರ ಪಟ್ಟಿಯಲ್ಲಿ ಸೇರಿಸುತ್ತದೆ.
ಮತ್ತೊಂದು ಸಾರಿ ಅಂದರೆ 1988ರಲ್ಲಿ
ಸ್ಕಾಟ್ಲೆಂಡ್‍ನ ಪಾನ್ ಅಮ್ ವಿಮಾನದಲ್ಲಿ ಬಾಂಬಿಟ್ಟ ಅರೋಪ ಲಿಬಿಯಾದ ಮೇಲೆ ಬರುತ್ತದೆ. ಆ ಘಟನೆಯಲ್ಲಿ ಸುಮಾರು 250 ಜನ ಅಮೆರಿಕನ್ನರು ಸತ್ತಿದ್ದರು. ಹಾಗಾಗಿ ಅಮೆರಿಕಾ ಸರಕಾರ ಗಡಾಫಿಗೆ “ನಿನ್ನ ತಪ್ಪನ್ನು ಒಪ್ಪಿಕೊಂಡು ಮೃತರ ಕುಟುಂಬಕ್ಕೆ ಪರಿಹಾರ ನೀಡು. ಇಲ್ಲವಾದಲ್ಲಿ ದಿಗ್ಬಂಧನದ ಪರಿಣಾಮಗಳನ್ನು ಎದುರಿಸು” ಎಂದು ಖಡಾಖಂಡಿತವಾಗಿ ಹೇಳಿತು. ಆದರೆ ತಪ್ಪನ್ನೇ ಮಾಡದ ಗಡಾಫಿ ಇದನ್ನು ಬಹುಕಾಲ ನಿರಾಕರಿಸುತ್ತಲೇ ಬಂದ. ಸಿಟ್ಟೆಗೆದ್ದ ಅಮೆರಿಕಾ ಲಿಬಿಯಾದ ಮೇಲೆ ಹನ್ನೆರೆಡು ವರ್ಷಗಳ ಕಾಲ ದಿಗ್ಬಂಧನ ಹೇರಿತು. ಆ ಸಮಯದಲ್ಲಿ ಗಡಾಫಿ ಅಕ್ಕಪಕ್ಕದ ರಾಷ್ಟ್ರಗಳಿಂದ ದಿನನಿತ್ಯದ ವಸ್ತುಗಳನ್ನು ಒಂದಕ್ಕೆ ಮೂರರಷ್ಟನ್ನು ಕೊಟ್ಟು ಕೊಂಡುಕೊಂಡು ಅದ್ಹೇಗೋ ದೇಶವನ್ನು ನಡೆಸಿದ ಎಂದು ಇಲ್ಲಿನವರು ಹೇಳುತ್ತಾರೆ. ಹಾಗೆ ನೋಡಿದರೆ ಇದು ಕೂಡಾ ಅಮೆರಿಕಾದ ಒಂದು ವ್ಯವಸ್ಥಿತ ಸಂಚೇ ಆಗಿತ್ತು. ಅಮೆರಿಕಾವೇ ಇಬ್ಬರು ಲಿಬಿಯನ್‍ರಿಗೆ ಅಪಾರ ದುಡ್ಡು ಕೊಟ್ಟು ಅವರಿಂದ ಗಡಾಫಿಯೇ ನಮಗೆ ಬಾಂಬ್ ಇಡಲು ಹೇಳಿದ್ದು ಎಂದು ಸುಳ್ಳು ಹೇಳಿಸಿದ್ದರು. ಕೊನೆಗೆ ಗಡಾಫಿ ಈ ತಪ್ಪನ್ನು ಮಾಡದಿದ್ದರೂ ತಪ್ಪೊಪ್ಪಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಯಿತು. ಬೇರೆ ದಾರಿಯಿಲ್ಲದೆ ಗಡಾಫಿ
ತಪ್ಪೊಪ್ಪಿಕೊಂಡು ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕಾಗಿ ಬಂತು.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ