Demo image Demo image Demo image Demo image Demo image Demo image Demo image Demo image

ನನ್ನ ಆತ್ಮ ಸಂಗಾತಿ, ನನ್ನ ಅಕ್ಕ

  • ಶುಕ್ರವಾರ, ಅಕ್ಟೋಬರ್ 27, 2017
  • ಬಿಸಿಲ ಹನಿ
  • ಅವಳು ಅಬ್ಬರಿಸಿದಳು, ಆರ್ಭಟಿಸಿದಳು
    ಎಷ್ಟೋ ಸಲ ಸ್ಪೋಟಿಸಿದಳು
    ಮೇಲ್ಜಾತಿಯವರ ವಿರುದ್ಧ
    ಬ್ರಾಹ್ಮಣ್ಯದ ವಿರುದ್ಧ..
    ಸಿಡಿದೆದ್ದಳು ಅದರೊಳಗಿನ
    ಅಮಾನುಷ, ಅನ್ಯಾಯವ ಖಂಡಿಸಿ

     ತಾಳಿ ಒಂದು ನಿಮಿಷ,
    ಇವಳು ಅವಳೇನಾ?
    ಮೆಲು ದನಿಯವಳು?
    ಹಿತವಾಗಿ ಆಲಂಗಿಸಿದವಳು?
    ಕಂದಮ್ಮಗಳು
    ಅಸ್ಪ್ರಶ್ಯರು
    ಮುಸಲ್ಮಾನರು
    ಹೆಂಗಸರು
    ಅಲ್ಪಸಂಖ್ಯಾತರು
    ಮಾವೋವಾದಿಗಳ
    ತಬ್ಬಿದವಳು?

    ಕೆಲವು ಹಡಬೆ ನಾಯಿಗಳು
    ಅವಳನ್ನು ಹೆಣ್ನಾಯಿ ಎಂದು ಜರೆದವು
    ಇನ್ನು ಕೆಲವು ಹಾದರಗಿತ್ತಿ ಎಂದು ಸಂಭ್ರಿಮಿಸಿದವು
    ಏಕೆಂದರೆ ಅವಳು ಒಂಟಿಯಾಗಿ ಜೀವಿಸುತ್ತಿದ್ದಳು
    ತನಗಿಷ್ಟ ಬಂದಂತೆ ಬದುಕುತ್ತಿದ್ದಳು
    ಆದರೆ ನೂರಾರು ಜನ ಅವಳನ್ನು ಅಕ್ಕ ಎಂದು ಕರೆದರು
    ಸಾವಿರಾರು ಜನ ಅಮ್ಮ ಎಂದು ಆಲಂಗಿಸಿದರು
    ಈಗ ಲಕ್ಷಾಂತರ ಜನ ‘ನಾನೂ ಗೌರಿ’ ಎಂದು ಹೇಳುತ್ತಿದ್ದಾರೆ

    ಒಮ್ಮೆ ಕಾರಿನ ಕಿಟಕಿಯಿಂದ ಸಿಗರೇಟು ತುಂಡು
    ಬಿಸುಡಿದವರಿಗೆ ಹಿಗ್ಗಾಮುಗ್ಗಾ ಬಯ್ದಿದ್ದಳು
    ಟೂವೀಲರಿನವರ ಮೇಲೆ ಬಿದ್ದೀತೆಂದು

    ಅವಳ ಮನೆಯೇ ಒಂದು ತೋಟ
    ಅಲ್ಲಿ ಎಷ್ಟೋ ಹಾವುಗಳು ಹರಿದು ಬರುತ್ತಿದ್ದವು
    ಅವಳು ಕಾಯುತ್ತಿದ್ದಳು ಸಹನೆಯಿಂದ
    ಅವು ಸರಿದು ಹೋಗುವ ತನಕ
    ತಡೆಯದೇ, ಘಾಸಿಗೊಳಿಸದೇ, ಕೊಲ್ಲದೇ
    ಹೀಗೆ ಸಮಾಧಾನದಿಂದ ಕಾಯುತ್ತಲೇ ಇದ್ದಳು…….

    ಆದರೆ ಕೊನೆಗೊಂದು ದಿನ
    ಮನುಷ್ಯ ಹಾವೊಂದು
    ಎರಡು ಚಕ್ರದ ಮೇಲೆ ಹೊಂಚಿಕೊಂಡು ಬಂತು
    ಸರಿದು ಹೋಗಲೇ ಇಲ್ಲ
    ಅದು ಅವಳೊಳಗಿನ ಬೆಂಕಿ ನಂದಿಸಿದ ಹಾವು
    ಅವಳನ್ನು ಸುಮ್ಮನಾಗಿಸಿದ ಹಾವು

    ಗೌರಿಯನ್ನು ಸುಮ್ಮನಾಗಿಸುವದೇ?
    ಹ್ಹಹ್ಹಹ್ಹ! ಇದೊಳ್ಳೆ ಜೋಕು!
    ಅವಳು ಸಿಡಿದಳು ಸೂರ್ಯಕಾಂತಿಯ ಬೀಜದಂತೆ
    ಭಾರತದ ಉದ್ದಗಲಕ್ಕೂ
    ಪಸರಿಸಿದಳು
    ಇಲ್ಲೂ ಅಲ್ಲೂ ಎಲ್ಲೆಲ್ಲೂ
    ಸಾಗರದಾಚೆಗೂ
    ಈಗ ಮೌನವೇ ಗುಣುಗುಣಿಸುತ್ತಿದೆ,
    ಎಲ್ಲೆಲ್ಲೂ ಮಾರ್ದನಿಸುತ್ತಿದೆ
    ನಾವು ಗೌರಿಯರು ನಾವು ಗೌರಿಯರು

    ಮೂಲ ಇಂಗ್ಲೀಷ್: ಕವಿತಾ ಲಂಕೇಶ್
    ಕನ್ನಡಕ್ಕೆ: ಉದಯ್ ಇಟಗಿ