ಉದಯ್ ಅವರು ನನಗೆ
ಸುಮಾರು ವರ್ಷಗಳಿಂದ ಪರಿಚಿತರು. ನಾನು ’ಅವಧಿ’ ಅಂತರ್ಜಾಲ ಪತ್ರಿಕೆಯ ಉಪಸಂಪಾದಕಿಯಾಗಿದ್ದಾಗ
ಲಿಬಿಯಾ ಕುರಿತ ಅವರ ಈ ಲೇಖನಮಾಲಿಕೆ
’ಅವಧಿ’ಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಹಾಗಾಗಿಯೇ, ಇದು ಪುಸ್ತಕವಾಗುತ್ತದೆ ಎಂದು ಅವರು ಹೇಳಿದಾಗ ನನಗೆ ಬಹಳ ಸಂತೋಷವಾಗಿತ್ತು. ತೃತೀಯ ಜಗತ್ತಿನ ದೇಶವೊಂದರ ಬಗೆಗೆ
ಕೇವಲ ’ರಾಯ್ಟರ್ಸ್’, ’ಗೂಗಲ್’ ಕೊಡುವ ಅಭಿಪ್ರಾಯಗಳನ್ನಷ್ಟೇ ಓದಿರುವ
ನಮಗೆ, ಅಲ್ಲೇ ವರ್ಷಗಳನ್ನು ಕಳೆದು ಬಂದವರು ಕೊಡುವ ಅನುಭವ ಕಥನ ಸಿಗುತ್ತಿದೆ ಎನ್ನುವ ಕಾರಣದಿಂದ
ಬರುವ ಹಿಗ್ಗುಅದು. ಆದರೆ ಒಂದು ದಿನ ಉದಯ್ ಅವರು ಕರೆ ಮಾಡಿ, ಪುಸ್ತಕಕ್ಕೆ ನಾನು ಮುನ್ನುಡಿ
ಬರೆಯಬೇಕು ಎಂದು ಕೇಳಿದಾಗ ನಾನು ಗಾಬರಿ ಬಿದ್ದೆ! ಮೊದಲನೆಯದಾಗಿ, ಆಗ ತಾನೆ ಒಂದು ಹೊಸ ಪ್ರಾಜೆಕ್ಟ್ ನಲ್ಲಿ ಸೇರಿದ್ದ ನನಗೆ ಇದ್ದ ಕಾಲದ
ಅಭಾವ ಕಾರಣವಾಗಿದ್ದರೆ,
ಇನ್ನೊಂದು ಇಂತಹ ವಿಷಯದಲ್ಲಿ ಮುನ್ನುಡಿ ಬರೆಯುವಷ್ಟು ಆಳದ ಓದು ನನಗಿದೆಯೇ ಎನ್ನುವ ಸಂದೇಹ. ಆದರೆ
ಉದಯ್ ಅವರು ’ಒಂದು ಹೆಣ್ಣಾಗಿ ಇದನ್ನು ನೀವು ಹೇಗೆ ನೋಡುತ್ತೀರಿ ಎಂದು ಬರೆಯಿರಿ ಮೇಡಂ’ ಎಂದಾಗ,
ಅದಾದರೆ ನಾನು ಮಾಡಬಹುದು ಅನ್ನಿಸಿತ್ತು. ಹಾಗೆಯೇ ಇದನ್ನು
ಮತ್ತೊಮ್ಮೆ ಓದಲೆಂದು ಕೈಗೆತ್ತಿಕೊಂಡೆ.
ಹೊಸ ಊರು, ಹೊಸ
ಭಾಷೆ, ಹೊಸ ಕೆಲಸ, ಹೊಸ ಮನೆ, ಹೊಸ ಬಂಧ, ಹೊಸ ಸಂಬಂಧ ಎಲ್ಲವೂ ನಮಗೆ ಹೊಸದೇ ಆದ ಜಗತ್ತೊಂದನ್ನು
ಪರಿಚಯ ಮಾಡಿಸುತ್ತದೆ. ಕೆಲವು ಸಲ ಆ ಹೊಸತಿಗೆ ನಾವು ಅದರ ಪರಿಧಿಯಾಚೆಗೇ ನಿಂತು ‘ಹಲೋ’ ಎನ್ನುತ್ತೇವೆ, ಕೆಲವು ಸಲ ಅದರ ಗೋಡೆಗಳನ್ನು ದಾಟಿ
ಒಳಹೋಗಿ ಅದಕ್ಕೆ ನಮ್ಮ ಬದುಕನ್ನಿಷ್ಟು ಕೊಟ್ಟು, ಅದನ್ನು ನಮ್ಮ
ಬದುಕಿಗಿಷ್ಟು ಬಸಿದುಕೊಳ್ಳುತ್ತೇವೆ. ನಾವು ಇನ್ನೊಂದು
ದೇಶದ, ರಾಜ್ಯದ ಅಷ್ಟೇ ಏಕೆ, ಇನ್ನೊಂದು ಊರಿನ ಬಗ್ಗೆ ಬರೆಯುವಾಗಲೂ ಈ ವ್ಯತ್ಯಾಸ ಪ್ರಮುಖ ಪಾತ್ರ
ವಹಿಸುತ್ತದೆ. ಪರಿಧಿಯಾಚೆಗೆ ನಿಂತು ಬರೆಯುವುದು
ಪ್ರವಾಸ ಕಥನವಾಗುತ್ತದೆ, ಆ ಪರಿಧಿಯನ್ನು ದಾಟಿ, ಒಳಗೆ ಹೋಗಿ, ಅಲ್ಲಿ ಉಳಿದು, ಅಲ್ಲಿನವರೊಡನೆ
ಒಡನಾಡಿದಾಗ ಉದಯ್ ಇಟಗಿಯವರ ’ಲಿಬಿಯಾ ಡೈರಿ’ಯಂತಹ ಪುಸ್ತಕವೊಂದು
ರೂಪುಗೊಳ್ಳುತ್ತದೆ.
ಉದಯ್ ಅವರು ಅಲ್ಲಿ ಹೋಗಿರುವುದು
ಪ್ರವಾಸಕ್ಕಲ್ಲ, ಅಲ್ಲದೆ ಆ ದೇಶ ಪ್ರವಾಸೋದ್ಯಮಕ್ಕೆ ಹೆಸರಾಗಿರುವುದೂ ಅಲ್ಲ. ಅದು ಲಿಬಿಯಾ, ಗಡ್ಡಾಫಿಯ
ಲಿಬಿಯಾ, ಅಮೇರಿಕಾದಂತಹ ಅಮೇರಿಕಾಕ್ಕೆ ಸೆಡ್ಡು ಹೊಡೆದು, ’ಏನೀಗ?’ ಎಂದು ಕೇಳಿದ ಲಿಬಿಯಾ. ಉದಯ್
ಇಟಗಿಯವರ ಈ ಪುಸ್ತಕ ಓದುವಾಗ ನನ್ನ ಮನಸ್ಸಿನಲ್ಲಿದ್ದ ಇನ್ನೊಂದು ದೇಶ ಕ್ಯೂಬಾ. ಒಂದು
ಅಧಿವೇಶನದಲ್ಲಿ ಭಾಗವಹಿಸಲೆಂದು ಕ್ಯೂಬಾಕ್ಕೆ ಹೋಗಿದ್ದ ಹಿರಿಯ ಮಾಧ್ಯಮ ತಜ್ಞರಾದ ಜಿ ಎನ್ ಮೋಹನ್
ಅವರು ಕ್ಯೂಬಾವನ್ನು ನೆಪವಾಗಿಟ್ಟುಕೊಂಡು ಇಡೀ ಲ್ಯಾಟಿನ್ ಅಮೇರಿಕಾ ದೇಶಗಳನ್ನು ನಿಯಂತ್ರಿಸಲು
ದಾಳ ಉರುಳಿಸುವ ಅಮೇರಿಕಾದ ಹುನ್ನಾರಗಳನ್ನು ಬಿಡಿಸಿಡುತ್ತಾ ಹೋಗುತ್ತಾರೆ. ಉದಯ್ ಅವರು ಬರೆದ ಈ
ಪುಸ್ತಕದ ಹಲವಾರು ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ನನಗೆ ಜಿ ಎನ್ ಮೋಹನ್ ಅವರ ’ನನ್ನೊಳಗಿನ
ಹಾಡು ಕ್ಯೂಬಾ’ ನೆರವಾಯಿತು.
ಕ್ಯೂಬಾದಂತೆ
ಲಿಬಿಯಾ ಸಹ ಅಪಾರವಾದ ನೈಸರ್ಗಿಕ ಸಂಪತ್ತನ್ನು ಹೊಂದಿರುವ ದೇಶ. ಕ್ಯೂಬಾದಲ್ಲಿ ಸಕ್ಕರೆ ಹೊಳೆದರೆ,
ಲಿಬಿಯಾದಲ್ಲಿ ತೈಲ ಹರಿಯುತ್ತದೆ. ಎರಡೂ ದೇಶಗಳೂ ತಮ್ಮಲ್ಲಿನ ಸಂಪತ್ತಿನ ಕಾರಣದಿಂದಲೇ ಜಗತ್ತಿನ
ಬಲಶಾಲಿ ರಾಷ್ಟ್ರಗಳ ಕಣ್ಣು ಕುಕ್ಕುತ್ತಿರುತ್ತದೆ. ಕ್ಯೂಬಾದಲ್ಲಿ ಸ್ಪೇನ್ ತಳ ಊರಿದ್ದರೆ,
ಲಿಬಿಯಾದಲ್ಲಿ ಇಟಲಿ. ಆ ಎರಡೂ ರಾಷ್ಟ್ರಗಳೂ ತಮ್ಮ ಶಕ್ತ್ಯಾನುಸಾರ ಈ ವಸಾಹತು ದೇಶಗಳನ್ನು
ಕೊಳ್ಳೆ ಹೊಡೆಯುತ್ತಿರುತ್ತದೆ. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಕಡೆಯಲ್ಲಿ ವಿಶ್ವದ
’ನಿಯಂತ್ರಕ ಶಕ್ತಿ’ಯಾಗಿ ಹೊರಹೊಮ್ಮಿದ ಅಮೇರಿಕಾ ಕಾಸು ಸಿಗುವ ಕಡೆಯೆಲ್ಲಾ ಅಂಗಡಿ ತೆಗೆದುಕೊಂಡು
ಕೂರುತ್ತದೆ. ಅಷ್ಟುಹೊತ್ತಿಗಾಗಲೇ ಇಡೀ ವಿಶ್ವದ ಕಣ್ಣಿಗೆ ತನ್ನ ಕನ್ನಡಕ ಹಾಕಬಲ್ಲಂತಹ ಮಾಧ್ಯಮ
ತಾಕತ್ತು ಅಮೇರಿಕಾದ ಕೈಯ್ಯಲ್ಲಿರುತ್ತದೆ. ಹೀಗಾಗಿ ತನ್ನ
ಅಗತ್ಯಕ್ಕನುಗುಣವಾಗಿ ಅದು ವಿಶ್ವದ ಅಭಿಪ್ರಾಯಗಳನ್ನು ರೂಪಿಸುವ ಚಾಣಾಕ್ಷತೆ ಮೈಗೂಡಿಸಿಕೊಂಡಿರುತ್ತದೆ.
ಇಲ್ಲಿ ಎಲ್ ಬಸವರಾಜು ಅವರು ಹೇಳಿದರು ಎನ್ನಲಾದ ಒಂದು ಮಾತು ನೆನಪಾಗುತ್ತದೆ, ’ಯಾರು ಎಲ್ಲಿ
ಚೆಂಡನ್ನು ಯಾವ ಕಡೆಗೆ ಒದ್ದರೂ, ಗೋಲು ಮಾತ್ರ ಅಮೇರಿಕಾದ್ದೆ’. ಹಾಗಾಗಿ ಅಮೇರಿಕಾ
ಕ್ಯೂಬಾವನ್ನು ನೋಡಲು ಒಂದು ಕನ್ನಡಕ ಸಿದ್ಧಪಡಿಸಿಡುತ್ತದೆ, ಇರಾಕ್ ಅನ್ನು ನೋಡಲು ಒಂದು ಕನ್ನಡಕ
ತಯಾರಿಸಿಡುತ್ತದೆ, ಲಿಬಿಯಾವನ್ನು ನೋಡಲು ಮತ್ತೊಂದು ಕನ್ನಡಕವನ್ನು ತಯಾರಿಸಿಡುತ್ತದೆ. ಆ
ಕನ್ನಡಕಗಳ ದೆಸೆಯಿಂದ ಅಮೇರಿಕಾಕ್ಕೆ ಎದುರಾಗಿ ಕಾಲೂರಿ ನಿಂತು
ದೇಶವನ್ನು ಕಟ್ಟಿದ ಕ್ಯೂಬಾದ ಬಗ್ಗೆ ಸತ್ಯ ಹೊರ ಬರುವುದೇ ಇಲ್ಲ. ಅಮೇರಿಕಾವನ್ನು ಒಪ್ಪದೆ, ತನ್ನ
ನಿಯಮಗಳ ಪ್ರಕಾರ ಬದುಕಲೆತ್ನಿಸಿದ ಲಿಬಿಯಾದ ಹೋರಾಟ ಮರೆಯಾಗಿ, ಗಡ್ಡಾಫಿಯ ಚಾಣಾಕ್ಷತನ ಉದಾಸೀನಕ್ಕೊಳಗಾಗಿ
ಅವನ ಲೋಲುಪತೆ ಮಾತ್ರ ಜಗತ್ತಿಗೆ ಕಾಣುತ್ತದೆ, ಯುದ್ಧ ನಡೆದು, ಅಮೇರಿಕಾದ ಪ್ರಚಂಡ ಶಕ್ತಿಯೆದಿರು
ಸೋತ ಇರಾಕ್ ನಲ್ಲಿಸದ್ದಾಂ ಹುಸೇನ್ ಸತ್ತು ದಶಕ ಕಳೆದರೂ ಅಮೇರಿಕಾ ಹೇಳಿದ್ದ ’ಜಗತ್ತನ್ನೇ
ನಾಶಪಡಿಸುವಂತಹ ಶಸ್ತ್ರಾಸ್ತ್ರ’ ಕಾಣಸಿಗುವುದಿಲ್ಲ. ಇದೆಲ್ಲಾ ವಿಷಯಗಳನ್ನು ಹಿನ್ನೆಲೆಯಾಗಿಟ್ಟುಕೊಂಡು
ನಾವು ಉದಯ್ ಇಟಗಿಯವರ ಈ ಪುಸ್ತಕವನ್ನು ಓದಬೇಕಾಗುತ್ತದೆ.
ಲಿಬಿಯಾದ
ಕಾಲೇಜೊಂದರಲ್ಲಿ ಇಂಗ್ಲಿಷ್ ಕಲಿಸಲೆಂದು ಉದಯ್ ಲಿಬಿಯಾಗೆ ಹೋಗುತ್ತಾರೆ. ಅಲ್ಲಿ ಅವರು ಕಂಡ ಬದುಕು, ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳ
ಬಗ್ಗೆ ಅವರು ಬರೆಯುತ್ತಾರೆ. ಇದನ್ನು ಬರೆಯುವಾಗ ಉದಯ್ ಅವರು ಯಾವುದೇ ಆಕರವನ್ನು ನಮ್ಮೆದುರಿಗೆ
ಇಡುವುದಿಲ್ಲ. ಅದಕ್ಕೆ ನೆರವಾಗುವ ಯಾವುದೇ ಪುಸ್ತಕ, ಲೇಖನ, ಭಾಷಣವನ್ನು ಅವರು ಕೋಟ್ ಮಾಡುವುದಿಲ್ಲ. ಅವರ ಬರಹವನ್ನು ನಮಗೆ ಲಭ್ಯವಿರುವ ಮಾಹಿತಿಯ ಜೊತೆಗೆ ಹೋಲಿಸಿ ನೋಡೋಣ
ಎಂದರೆ ನಮ್ಮೆದುರಿಗಿರುವುದು ಪಾಶ್ಚಿಮಾತ್ಯ ರಾಷ್ಟ್ರ ಪ್ರಣೀತ ಸುದ್ದಿಮನೆಯ ಸುದ್ದಿಗಳು. ಹಾಗಾಗಿ
ನಾವು ಲಿಬಿಯಾವನ್ನು ಉದಯ್ ಅವರ ಕಣ್ಣಿನ ಮೂಲಕವೇ ನೋಡಬೇಕಾಗುತ್ತದೆ. ಅವರ ಬರವಣಿಗೆಯನ್ನು ನಾವು
ಮೂರು ನೆಲೆಗಳಿಂದ ಅರ್ಥೈಸಿಕೊಳ್ಳಬಹುದು. ಮೊದಲನೆಯದು ಲಿಬಿಯಾ, ಎರಡನೆಯದು ಲಿಬಿಯಾದಲ್ಲಿ ಉದಯ್
ಮತ್ತು ಮೂರನೆಯದು ಮತ್ತು ಉದಯ್ ಅವರ ಮಟ್ಟಿಗೆ ಮುಖ್ಯವಾದದ್ದು ಗಡ್ಡಾಫಿ ಮತ್ತು ಗಡ್ಡಾಫಿಯ
ಲಿಬಿಯಾ.
1968 ರಲ್ಲಿ, ತನ್ನ 27 ನೆ ವಯಸ್ಸಿನಲ್ಲಿ ಒಂದು ಕ್ರಾಂತಿಯ ಕೂಸಾಗಿ
ಲಿಬಿಯಾದ ಆಡಳಿತ ಸೂತ್ರವನ್ನು ಕೈಯಲ್ಲಿ ಹಿಡಿದವನು ಗಡ್ಡಾಫಿ. ’Brotherly Leader and Guide
of the First of September Great Revolution of the Socialist People's Libyan
Arab Jamahiriya’ ಎನ್ನುವ ಆಕರ್ಷಕ ಹೆಸರನ್ನಿಟ್ಟುಕೊಂಡು ಅವನು ಲಿಬಿಯಾವನ್ನು ಆಳಲು
ಪ್ರಾರಂಭಿಸುತ್ತಾನೆ, ಹಾಗೆ 47 ವರ್ಷಗಳ ಕಾಲ ಆಳುತ್ತಾನೆ. ಕ್ಯೂಬಾ ಮತ್ತು ಲಿಬಿಯಾಗೆ ಒಂದು
ಸಾಮ್ಯತೆ ಇದೆ. ಎರಡೂ ದೇಶಗಳಲ್ಲಿ ಅಪಾರ ಮೌಲ್ಯದ ನೈಸರ್ಗಿಕ ಸಂಪತ್ತು ಇರುತ್ತದೆ. ಆ ದೇಶಗಳನ್ನು
ವಸಾಹತು ಮಾಡಿಕೊಂಡ ರಾಷ್ಟ್ರಗಳು ಅದರ ಲಾಭ ಪಡೆಯುತ್ತಿರುತ್ತದೆ. ಕ್ಯೂಬಾದಲ್ಲಿ ಫಿಡೆಲ್
ಕ್ಯಾಸ್ಟ್ರೋ ಮತ್ತು ಲಿಬಿಯಾದಲ್ಲಿ ಗಡ್ಡಾಫಿ ಇದನ್ನು ವಿರೋಧಿಸುತ್ತಾರೆ. ’ನಮ್ಮ ದೇಶದ
ಸಂಪತ್ತಿಗೆ ನಾವು ಬೆಲೆ ನಿರ್ಧರಿಸುತ್ತೇವೆ’ ಎಂದು ಕಾಲೂರಿ ನಿಂತು ಬಿಡುತ್ತಾರೆ. ಅದರ ಜೊತೆ
ಜೊತೆಯಲ್ಲಿ ಇಬ್ಬರೂ ತಮ್ಮ ನೆಲದಲ್ಲಿ ನಿಂತಿದ್ದ ಅಮೇರಿಕಾ ಸೈನ್ಯ ನೆಲೆಯನ್ನು ಖಾಲಿ ಮಾಡಿಸಲು
ಅಣಿಯಾಗುತ್ತಾರೆ. ಆಗ ಶುರು ಆಗುತ್ತದೆ ಅಮೇರಿಕಾದ ಕುಟಿಲೋಪಾಯಗಳು. ಆರ್ಥಿಕ ದಿಗ್ಭಂದನ, ರಾಜಕೀಯ
ಒತ್ತಡ, ಅಂತರಾಷ್ಟ್ರೀಯ ಸಮುದಾಯದ ಮೂಲಕ ಒತ್ತಡ, ವ್ಯಕ್ತಿತ್ವಹರಣ, ತನಗಿರುವ ಅಪಾರವಾದ ಮಾಧ್ಯಮ
ಶಕ್ತಿಯ ಮೂಲಕ ಅವರ ವಿರುದ್ಧ ಅಭಿಪ್ರಾಯ ರೂಪಿಸುವುದು ಎಲ್ಲವನ್ನೂ ಅಮೇರಿಕಾ ಮಾಡುತ್ತದೆ. ಅಲ್ಲಿ
ಕ್ಯಾಸ್ಟ್ರೋ ಮತ್ತು ಇಲ್ಲಿ ಗಡ್ಡಾಫಿ ಇಬ್ಬರೂ ದೃಢವಾಗಿ ನಿಂತು ಅದನ್ನು ಎದುರಿಸುತ್ತಾರೆ. ಬಹುಶಃ
ಇಲ್ಲಿಗೆ ಅವರಿಬ್ಬರ ನಡುವಣ ಹೋಲಿಕೆ ಮುಗಿಯುತ್ತದೆ. ಗಡ್ಡಾಫಿ ತನ್ನ ಜನರಿಗೆ ಕೈತುಂಬಾ ಹಣವನ್ನೇನೋ ಸುರಿಯುತ್ತಾನೆ, ಆದರೆ ಲಿಬಿಯಾವನ್ನು ಕ್ಯೂಬಾದಂತಹ ರಾಷ್ಟ್ರವನ್ನಾಗಿ
ರೂಪಿಸುವುದರಲ್ಲಿ, ಸಮುದಾಯ ಆರೋಗ್ಯ, ವಿದ್ಯಾಭ್ಯಾಸದಂತಹ ಕ್ಷೇತ್ರದಲ್ಲಿ ಪ್ರಗತಿ
ಸಾಧಿಸುವುದರಲ್ಲಿ, ಅಮೇರಿಕಾದಂತಹ ದೈತ್ಯ ಶಕ್ತಿಯ ಎದುರಾಗಿ ಕ್ಯೂಬಾ ಹಣತೆ ದೀಪದಂತೆ ನಿಂತು
ನಿರಂತರವಾಗಿ ಉರಿಯುತ್ತಾ ಹೋದಂತೆ
ತನ್ನ ದೇಶವನ್ನು ರೂಪಿಸುವುದರಲ್ಲಿ ಗಡ್ಡಾಫಿ ಸೋಲುತ್ತಾನೆ. ಕ್ಯಾಸ್ಟ್ರೋ ’ನಿಮ್ಮ
ಬದ್ಧತೆಯನ್ನು ಕೊಡಿ, ನಿಮ್ಮ ಊಟದ ಒಂದು ತುತ್ತು, ನಿಮ್ಮ ಶ್ರಮದ ಒಂದು ದಿನ ಕೊಡಿ, ರಾಷ್ಟ್ರ
ಕಟ್ಟೋಣ’ ಎನ್ನುತ್ತಾರೆ, ಗಡ್ಡಾಫಿ ’ಇದೋ ಇನ್ನೂ ಒಂದು ಮುಷ್ಟಿ ಹಣ ಕೊಡುತ್ತೇನೆ, ನನ್ನ ಜೊತೆಗೆ
ನಿಲ್ಲಿ’ ಎನ್ನುತ್ತಾರೆ. ಅಮೇರಿಕಾದ ಸಿಐಎ ಎಷ್ಟೇ ಪ್ರಯತ್ನಿಸಿದರೂ ಕ್ಯಾಸ್ಟ್ರೋನನ್ನು
ಮುಟ್ಟಲಾಗುವುದಿಲ್ಲ, ಅದೇ ಅಮೇರಿಕಾ ಗಡ್ಡಾಫಿಯನ್ನು ಅವನ ದೇಶದ ಕ್ರಾಂತಿಕಾರರ ಕೈಲಿ ಹೀನಾಯವಾಗಿ
ಬೀದಿಯಲ್ಲಿ ಸಾಯಿಸಿಹಾಕುತ್ತದೆ. ಗಡ್ಡಾಫಿಯ
ದೀರ್ಘ ಆಡಳಿತದ ಮೊದಲು ಮತ್ತು ನಂತರದ ಲಿಬಿಯಾದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಲಿಬಿಯಾದ ಮೇಲೆ
ಒಂದು ಪೈಸೆ ಸಾಲ ಇರುವುದಿಲ್ಲ, ತಲಾ ಆದಾಯ ಅತ್ಯಂತ ಉನ್ನತ ಮಟ್ಟದಲ್ಲಿರುತ್ತದೆ ಎನ್ನುವಷ್ಟೇ
ಸತ್ಯ ಅಲ್ಲಿ ಭ್ರಷ್ಟತೆ ಸಹ ಮತ್ತಷ್ಟು ಹೆಚ್ಚಿರುತ್ತದೆ, ಆಡಳಿತ ಯಂತ್ರ ಮತ್ತಷ್ಟು
ಕುಸಿದಿರುತ್ತದೆ ಎನ್ನುವುದು. ಈ ’ಡೈರಿ’ ಅದರ ಕಾರಣಗಳನ್ನು ಶೋಧಿಸುವ ದೃಷ್ಟಿಯನ್ನು ನಮಗೆ
ಒದಗಿಸುತ್ತದೆ.
ಉದಯ್ ತಮ್ಮ
ಪುಸ್ತಕದಲ್ಲಿ ಹೇಗೆ ಗಡ್ಡಾಫಿ ಚಾಣಾಕ್ಷತನದಿಂದ ಅಮೇರಿಕಾವನ್ನು ಕಟ್ಟಿ ಹಾಕಿದ ಎಂದು
ವಿವರಿಸುತ್ತಾರೆ. ಆತ ಅಧಿಕಾರಕ್ಕೆ ಬಂದಾಗ ಇದ್ದ ತೈಲದ ಮಾರಾಟ ಬೆಲೆ ಒಂದು ಬ್ಯಾರೆಲ್ ಗೆ ಸುಮಾರು ೪೦ ಸೆಂಟ್ಸ್,
ಹಂತಹಂತವಾಗಿ ಆತ ಅದನ್ನು ಬ್ಯಾರೆಲ್ ಗೆ ೪೦ ಡಾಲರ್ ಗಳಿಗೂ
ಹೆಚ್ಚು ಮಾಡುತ್ತಾನೆ. ಪಾಶ್ಚಿಮಾತ್ಯ
ರಾಷ್ಟ್ರಗಳು ಅದನ್ನು ತೆರುವಂತೆ ಮಾಡುತ್ತಾನೆ. ಪ್ರಜೆಗಳಿಗೆ
ಒಳ್ಳೆಯ ವಿದ್ಯೆ ದೊರಕುವಂತೆ ಮಾಡುತ್ತಾನೆ. ವಿದ್ಯಾಭ್ಯಾಸದ ನಂತರ ಸರಿಯಾದ ಕೆಲಸ ಸಿಗದಿದ್ದರೆ
ಅವರ ಓದಿಗೆ ಸರಿಯಾದ ಸಹಾಯ ಧನ, ಮದುವೆ ಆದ ಕೂಡಲೆ ದಂಪತಿಗೆ ಮನೆ ಕಟ್ಟಿಕೊಳ್ಳಲು ಸಾಲ, ವ್ಯಾಪಾರ
ಮಾಡಲು ಸಾಲ, ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ವಾಹನ ಮತ್ತು ವಿದ್ಯಾರ್ಥಿ ವೇತನ ಹೀಗೆ
ಗಡ್ಡಾಫಿಯ ಆಡಳಿತ ವೈಖರಿಯನ್ನು ಲೇಖಕರು ಪ್ರಶಂಸಿಸುತ್ತಾ ಹೋಗುತ್ತಾರೆ. ಅವರು ತೆರೆದಿಡುವ
ಇನ್ನೊಂದು ಬಾಗಿಲು, ’ಸರ್ವಾಧಿಕಾರಿಯ ನಾಡಿನಲ್ಲಿದ್ದ ಸಮಾನತೆಯ ಬಾಳ್ವೆಯ’ನ್ನು ಕುರಿತಾದ್ದು.
ಹೇಗಿದ್ದ ಲಿಬಿಯಾ ಹೇಗಾಯಿತು ಮತ್ತು ಗಡ್ಡಾಫಿಯ ನಂತರ ಅದು ಏನಾಯಿತು ಎನ್ನುವುದನ್ನು ಅವರು
ವಿವರವಾಗಿ ಚಿತ್ರಿಸುತ್ತಾರೆ. ಎಲ್ಲೋ ಒಂದು ಕಡೆ ಅವರು ಗಡ್ಡಾಫಿಯ ವ್ಯಕ್ತಿತ್ವದ ಮೋಡಿಗೆ
ಸಿಲುಕಿರುವರೇನೋ ಎನ್ನಿಸುವಷ್ಟು ಗಡ್ಡಾಫಿ ಅವರಿಗೆ ಹತ್ತಿರವಾಗಿರುತ್ತಾನೆ. ವ್ಯಕ್ತಿ ಚಿತ್ರ
ಬರೆಯುವಾಗ ಆ ವ್ಯಕ್ತಿಯೊಡನೆ ಒಂದು ಅಂತರ ಕಾಯ್ದುಕೊಳ್ಳುವುದು ಕಷ್ಟ ಆದರೆ ಅತ್ಯಗತ್ಯ. ಹಾಗಾಗದಾಗ ಎಲ್ಲೋ ಒಂದು ಕಡೆ ಅದು ಬರವಣಿಗೆಗೆ ಒಂದು ಚೌಕಟ್ಟು ಕಟ್ಟಿಬಿಡುತ್ತದೆ. ಆ ಚೌಕಟ್ಟಿನೊಳಗೆ ಲಿಬಿಯಾ ಮತ್ತು ಗಡ್ಡಾಫಿಯನ್ನು ಪ್ರತ್ಯೇಕಿಸಿ ನೋಡುವುದು ಕಷ್ಟವಾಗಿ
ಬಿಡುತ್ತದೆ. ಗಡ್ಡಾಫಿಯ ವ್ಯಕ್ತಿತ್ವದ ದ್ವಂದ್ವ ಮತ್ತು
ವಿರೋದಾಭಾಸಗಳನ್ನು ಪುಸ್ತಕ ನಮ್ಮ ಕಣ್ಣೆದುರಿಗಿಡುವ ಘಳಿಗೆಯಲ್ಲಿ
ಲೇಖಕರು ತಮಗೇ ಅರಿವಿಲ್ಲದಂತೆ ಗಡ್ಡಾಫಿಯ ಸಹಾಯಕ್ಕೆ ಬಂದುಬಿಡುತ್ತಾರೆ. ಪುಸ್ತಕ ಬರೆಯುವಾಗಲೇ ಅವರು ಒಂದು ನಿರ್ಧಾರ ತೆಗೆದುಕೊಂಡು
ಅದನ್ನು ಸಾಬೀತು ಮಾಡಲು ಪುರಾವೆಗಳನ್ನು ಒದಗಿಸುತ್ತಾಹೋಗುತ್ತಿದ್ದಾರೆ ಎಂದೂ
ಅನ್ನಿಸಿಬಿಡುತ್ತದೆ.
ಒಂದು ವಿಶ್ವವಿದ್ಯಾಲಯದ ಡೀನ್ ಮತ್ತು ಅದೇ ಕಾಲೇಜಿನ ಒಬ್ಬ ಕರ್ಮಚಾರಿಯ ನಡುವೆ
ಇರುವ ಸಮಾನತೆಯ ಕೊಡುಕೊಳ್ಳುವಿಕೆಯ ಬಗ್ಗೆ ಬರೆಯುತ್ತಾ ಉದಯ್ ಅವರು
ತಮ್ಮ ಬರಹವನ್ನು ಪ್ರಾರಂಭಿಸುತ್ತಾರೆ, ಅದರೊಂದಿಗೆ ಪುಸ್ತಕಕ್ಕೆ ಒಂದು ಧನಾತ್ಮಕವಾದ ಆವರಣವನ್ನು
ಸಹ ನಿರ್ಮಿಸುತ್ತಾರೆ. ಅಷ್ಟೇ ಆಸಕ್ತಿಕಾರಿಯಾಗಿರುವುದು ಯಾರನ್ನಾದರೂ
ಮಾತನಾಡಿಸುವಾಗ ಲಿಬಿಯನ್ನರು ಅವರು, ಅವರ ಮನೆಯವರದಷ್ಟೇ ಅಲ್ಲದೆ ಅವರ ಮನೆಯ ಸಾಕುಪ್ರಾಣಿಗಳ
ಕ್ಷೇಮಸಮಾಚಾರವನ್ನು ಸಹ ವಿಚಾರಿಸುವುದು. ಅದನ್ನು ಓದುವಾಗ
ನಮಗರಿವಿಲ್ಲದಂತೇ ನಮ್ಮ ತುಟಿಗಳ ಮೇಲೆ ನಗು ಅರಳುತ್ತದೆ. ಪುಸ್ತಕವನ್ನು
ಆತ್ಮೀಯವಾಗಿಸುವುದರಲ್ಲಿ ಇಂತಹ ವಿವರಗಳು ಸಹಾಯ ಮಾಡುತ್ತವೆ.
ಲಿಬಿಯಾ ಕಂಡರೆ ನಮಗಿರಬಹುದಾದ
ಅನೇಕ ಭಾವನೆ ಮತ್ತು ಅಭಿಪ್ರಾಯಗಳನ್ನು ಒಡೆದು ಹಾಕಿ, ನಮಗೆ ಅಚ್ಚರಿ ಎನ್ನಿಸಬಹುದಾದ ಅನೇಕ
ವಿಷಯಗಳನ್ನು ಈ ಪುಸ್ತಕ ತಿಳಿಸಿಕೊಡುತ್ತದೆ. ಸಹರಾ ಮರುಭೂಮಿಯಲ್ಲಿ
ನಲ್ವತ್ತು ಅಡಿ ಆಳಕ್ಕೆ ತೋಡುವಷ್ಟರಲ್ಲಿ ನೀರಿನ ಚಿಲುಮೆ ಉಕ್ಕುತ್ತದೆಯಂತೆ. ಅಲ್ಲಿನ ಜನಕ್ಕೆ
ಕೃಷಿ ಮಾಡಲು ಅನುಕೂಲವಾಗುವಂತೆ ಗಡ್ಡಾಫಿ ಅತಿ ದೊಡ್ಡ ನೀರಾವರಿ ಯೋಜನೆಯೊಂದನ್ನು
ಕಲ್ಪಿಸಿಕೊಟ್ಟಿದ್ದ. ಆ ಯೋಜನೆ ಇಡೀ ವಿಶ್ವದಲ್ಲೇ ಮಾನವ ನಿರ್ಮಿತ ಅತಿದೊಡ್ದ
ನೀರಾವರಿ ಯೋಜನೆ ಎನಿಸಿಕೊಂಡಿದೆ ಹಾಗೂ ಅದನ್ನು ಜಗತ್ತಿನ ಎಂಟನೆಯ ಅದ್ಭುತ ಎಂದು ಗುರುತಿಸಲಾಗಿದೆ
ಎಂದು ಉದಯ್ ಹೇಳುತ್ತಾರೆ. ಅಷ್ಟೇ ಅಚ್ಚರಿಗೊಳಿಸುವ ಮತ್ತೊಂದು ಮಾಹಿತಿ, ಮರಳುಗಾಡಿನೊಳಗಡೆಯ
ಮೈನಡುಗಿಸುವ ಚಳಿಯನ್ನು ಕುರಿತಾದದ್ದು. ಹೊರಗೆ ಸುಡುಕೆಂಡದಂತಹ
ಬಿಸಿಯನ್ನೂ, ಒಳಗೆ ಕತ್ತರಿಸುವ ಚಳಿಯನ್ನೂ ಒಳಗೊಂಡ ಹಾಗೆಯೇ ದೇಶಬಿಟ್ಟು ದೇಶಕ್ಕೆ ದುಡಿಯಲು
ಹೋಗುವವರ ಅನಿವಾರ್ಯತೆ, ಹತಾಶೆ, ಒಂಟಿತನ, ನೆನಪು... ಸಹ. ಇದನ್ನು ಉದಯ್ ಹೀಗೆ ಬರೆಯುತ್ತಾರೆ, ’ಹಾಗೆ ನೋಡಿದರೆ ಹೊರದೇಶದಲ್ಲಿ ದುಡಿಯುತ್ತಿರುವ ನಮ್ಮಂಥವರು ಇಲ್ಲಿಗೆ ಬರುವ
ಮುನ್ನ ಈ ದುಡಿಮೆಯಿಂದ ಇದ್ದ ಬಿದ್ದ ಒಂದಷ್ಟು ಸಾಲಗಳನ್ನು ತೀರಿಸಿ ಮತ್ತೆ ಇಂಡಿಯಾಕ್ಕೆ
ವಾಪಾಸಾಗಿ ನಮ್ಮ ಎಂದಿನ ಕೆಲಸವನ್ನು ಮುಂದುವರಿಸದರಾಯಿತು ಎಂದುಕೊಂಡು ಬರುತ್ತೇವೆ. ಆದರೆ ಕ್ರಮೇಣ
ಮಕ್ಕಳನ್ನು ಒಳ್ಳೆ ಸ್ಕೂಲಿಗೆ ಸೇರಿಸಲು ಹಣ ಬೇಕು. ಅದಕ್ಕೆ ಇನ್ನೊಂದು ವರ್ಷ ದುಡಿದುಕೊಂಡು
ಹೋದರಾಯಿತು ಎಂದು ಇನ್ನೊಂದು ವರ್ಷ ಮುಂದುವರೆಸುತ್ತೇವೆ. ಅದು ಮುಗಿಯುತ್ತಿದ್ದಂತೆ ವಾರಿಗೆಯವರು,
ಸ್ನೇಹಿತರು ಒಂದು ಸೈಟ್ ತೆಗೆದುಕೊಂಡಿದ್ದಾರೆ.
ನಾನೂ ಒಂದು ತೆಗೆದುಕೊಳ್ಳಬೇಕು. ಮತ್ತೆ ಅದಕ್ಕೋಸ್ಕರ ಇನ್ನೊಂದೆರಡು ವರ್ಷ ಉಳಿಯುತ್ತೇವೆ.
ಅದರ ಕಮಿಟ್‍ಮೆಂಟ್ ಮುಗಿಯುತ್ತಿದ್ದಂತೆ ಇನ್ನೊಂದು ಸೈಟ್ ತೆಗೆದುಬಿಡೋಣ, ಕಷ್ಟಕಾಲಕ್ಕೆ ಆಗಬಹುದು
ಎನ್ನುವ ದೂರದ ಆಸೆ. ಅದಕ್ಕೋಸ್ಕರ ಮತ್ತೊಂದೆರಡು ವರ್ಷ. ಅದರ ಸಾಲ ಎಲ್ಲಾ ತೀರುತ್ತಿದ್ದಂತೆ ಹೇಗೂ
ಒಳ್ಳೆಯ ಸಂಬಳ ಇದೆ. ನಮ್ಮದೇ ಒಂದು ಸೂರನ್ನು ಯಾಕೆ ಮಾಡಿಕೊಳ್ಳಬಾರದು ಎನಿಸಿ
ಮತ್ತೆ ಅದಕ್ಕಾಗಿ ಇನ್ನೊಂದೆರಡು ವರ್ಷ ಉಳಿಯುತ್ತೇವೆ. ಅದೆಲ್ಲಾ ಮುಗಿಯುತ್ತಿದ್ದಂತೆ ಇಷ್ಟೊಂದು
ದೊಡ್ಡ ಮೊತ್ತದ ಸಂಬಳಕ್ಕೆ ಕೆಲಸಮಾಡಿ ಒಗ್ಗಿಹೋದ ಮನಸ್ಸು ಇಂಡಿಯಾದಲ್ಲಿ ಸಿಗುವ ಸಣ್ಣ ಮೊತ್ತದ
ಸಂಬಳಕ್ಕೆ ಕೆಲಸಮಾಡಲು ಅಣಿಯಾಗುತ್ತದೆಯೇ? ಹೀಗಾಗಿ ಮತ್ತೆ ಇನ್ನೊಂದೆರಡು ವರ್ಷ ದುಡಿದುಕೊಂಡು
ಬಂದ ಹಣವನ್ನು ಬ್ಯಾಂಕಿನಲ್ಲಿಟ್ಟುಕೊಂಡು ನೆಮ್ಮದಿಯ ಜೀವನ ನಡೆಸಿದರಾಯಿತು ಎಂದುಕೊಂಡು ಮತ್ತೆ
ಒಂದೆರೆಡು ವರ್ಷ ಮುಂದೂಡುತ್ತೇವೆ. ಹೀಗೆ, ಹೋಗಬೇಕೆಂದುಕೊಳ್ಳುವದು, ಮತ್ತೆ ಮುಂದೂಡುವದು, ಹೋಗಬೇಕೆಂದುಕೊಳ್ಳುವದು, ಮತ್ತೆ ಮುಂದೂಡುವದು
ನಡೆಯುತ್ತಲೇ ಇರುತ್ತದೆ. ಮನುಷ್ಯನ ಆಸೆಗಳಿಗೆ ಕೊನೆ ಎಲ್ಲಿ? ಹೀಗೆ ಒಂದಾದ ಮೇಲೊಂದರಂತೆ ಆಸೆಗಳನ್ನು ತೀರಿಸಿಕೊಳ್ಳುವಷ್ಟೊತ್ತಿಗೆ ನಮ್ಮ ಬದುಕಿನ
ಎಂಟತ್ತು ವರ್ಷಗಳನ್ನು ನಿಜವಾದ ಆಪ್ಯಾಯತೆಗಳಿಲ್ಲದೆ
ಕಳೆದುಬಿಟ್ಟಿರುತ್ತೇವೆ...’ ಓದುತ್ತಿರುವ ಕಣ್ಣುಗಳು ಒಂದು ಕ್ಷಣ ನಿಂತು ಮನಸ್ಸು
ಮ್ಲಾನವಾಗುತ್ತದೆ. ದೂರದಲ್ಲಿದ್ದು ಬಿಟ್ಟು ಬಂದ ಸಂಬಂಧಗಳನ್ನು ಕಾಯ್ದುಕೊಳ್ಳಬೇಕಾದ ಕಷ್ಟ ಸಣ್ಣದಲ್ಲ. ಇಂತಹ
ಒಳನೋಟಗಳಿಂದ ಪುಸ್ತಕ ಹೆಚ್ಚು ಆಪ್ತವಾಗುತ್ತಾ ಹೋಗುತ್ತದೆ. ಮುಂದುವರೆದು ಅವರು, ’ಆದರೆ ಕೇವಲ ಮೂವತ್ತು ಸಾವಿರ
ರೂಪಾಯಿಗೋಸ್ಕರ (ಊಟ ಮತ್ತು ಸಾಮೂಹಿಕ ವಸತಿ ಉಚಿತ) ಇಲ್ಲಿಗೆ ದುಡಿಯಲು ಬಂದ ಮೇಸ್ತ್ರಿಗಳು,
ಪ್ಲಂಬರ್ ಗಳು, ಎಲೆಕ್ಟ್ರೀಶಿಯನ್‍ಗಳ ಕಥೆ ಕೇಳುವದಂತೂ ಬೇಡವೇ ಬೇಡ. ಅವರಿಗೆ ಲ್ಯಾಪ್‍ಟಾಪ್,
ಇಂಟರ್ನೆಟ್ ಕನಸಿನ ಮಾತು. ಹೋಗಲಿ ಫೋನು ಆದರೂ ಮಾಡಿ ಊರಿನಲ್ಲಿರುವವರೊಂದಿಗೆ ಮಾತಾಡೋಣವೆಂದರೆ
ಭಾರಿ ಮೊತ್ತವನ್ನು ತೆರಬೇಕಾಗುತ್ತದೆಂದು ಸುಮ್ಮನಿದ್ದುಬಿಡುತ್ತಾರೆ. ಮಾಡಿದರೂ ಹತ್ತೋ ಹದಿನೈದು
ದಿವಸಗಳಿಗೊಂದು ಸಾರಿ ಮಾಡುತ್ತಾರೆ. ಮಾತನಾಡುವುದನ್ನೆಲ್ಲಾ ಒಂದು ಹಾಳೆಯಲ್ಲಿ
ಬರೆದುಕೊಂಡು ಬಡಬಡನೆ ಮಾತನಾಡಿ ಮುಗಿಸುತ್ತಾರೆ. ಅದೂ ಕೇವಲ ಐದಾರು ನಿಮಿಷಗಳಷ್ಟು ಮಾತ್ರ.
ಇಂಥವರು ತಮ್ಮ ಕಾಮನೆಗಳನ್ನಷ್ಟೇ ಅಲ್ಲ ಭಾವನೆಗಳನ್ನು ಕೂಡ ಹತ್ತಿಕ್ಕಿ ಬದುಕುತ್ತಾರೆ.’ – ಇಲ್ಲಿ ಅವರು
ವಿದೇಶಕ್ಕೆ ಹೋಗಿ ಪಡೆದುಕೊಂಡರೋ, ಇಲ್ಲ ಕಳೆದುಕೊಂಡರೊ?
ಹಾಗೆಂದು ಪುಸ್ತಕದಲ್ಲಿರುವ ಎಲ್ಲವನ್ನೂ ಮನಸ್ಸು
ಒಪ್ಪಿಕೊಳ್ಳುತ್ತದೆ ಎಂದೂ ಅಲ್ಲ. ಇಲ್ಲಿ ನನಗೆ ಕೆಲವು ತಕರಾರುಗಳು ಸಹ ಕಂಡವು, ಅದನ್ನು ಬರೆಯದಿದ್ದರೆ ಈ
ಬರಹ ಅಪೂರ್ಣ ಎನ್ನುವ ಕಾರಣಕ್ಕೆ ಅವನ್ನು ಇಲ್ಲಿ ನಮೂದಿಸುತ್ತಿದ್ದೇನೆಯೇ ಹೊರತು, ಅದನ್ನು ಬರಹದ
ದೋಷವನ್ನಾಗಿ ತೋರಿಸುವುದು ನನ್ನ ಉದ್ದೇಶವಲ್ಲ. ಮೊದಲನೆಯದಾಗಿ
ಇಟಗಿಯವರು ’Gaddafi’s Girls’ ಎಂದು ಕರೆಯುವ
ಗಡ್ಡಾಫಿಯ ಅಂಗರಕ್ಷಕಿಯರ ಬಗ್ಗೆ. ಗಡ್ಡಾಫಿಗೆ ಹೆಂಗಸರ ಕಾರ್ಯದಕ್ಷತೆಯಲ್ಲಿ ಅಪಾರವಾದ ನಂಬಿಕೆ
ಇತ್ತು. ಆ ಕಾರಣದಿಂದಲೇ ’ಅವನು ಮಹಿಳಾ ಅಂಗರಕ್ಷಕಿಯರನ್ನು ನೇಮಿಸಿಕೊಂಡು ತನ್ನ ವಿಶ್ವಾಸವನ್ನು
ಜಗತ್ತಿಗೆ ಸಾರಿದ ಮೊಟ್ಟಮೊದಲ ಗಂಡಸು’ ಎಂದು ಉದಯ್ ದೃಢವಾದ ದನಿಯಲ್ಲಿ ಹೇಳುತ್ತಾರೆ. ಗಡ್ಡಾಫಿ
ಅಂಗರಕ್ಷಕಿಯರ ಜೊತೆಗೆ ಉಕ್ರೇನಿಯನ್ ನರ್ಸ್ ಗಳನ್ನೂ ಸಹ ನೇಮಿಸಿಕೊಂಡಿರುತ್ತಾನೆ. ಆತನ
ಅಂಗರಕ್ಷಕಿಯರು ಯಾವುದೇ ಮಾಡೆಲ್ ಗೆ ಕಡಿಮೆ ಇಲ್ಲದಂತೆ ಅಲಂಕಂರಿಸಿಕೊಂಡಿರುವುದನ್ನು ಅವರ ಹಲವಾರು
ಚಿತ್ರಗಳು ತೋರಿಸುತ್ತವೆ. ಅದಕ್ಕೆ ಕಾರಣ ಗಡ್ಡಾಫಿಗೆ ಇದ್ದ ಸೌಂದರ್ಯೋಪಾಸನೆ ಎಂದು ಉದಯ್
ಸಮಜಾಯಿಶಿ ಕೊಡುತ್ತಾರೆ. ಮಹಿಳೆಯರು ಅಂತಹ ಜವಾಬ್ದಾರಿ ವಹಿಸಿರುವುದು ಅದೇ ಮೊದಲಲ್ಲ. ಒಂದು
ಉದಾಹರಣೆ ಕೊಡಬಹುದಾದರೆ, ತಮಿಳಿನ ಈಳಂ. ಅಲ್ಲೂ ಮಹಿಳಾ ಸೈನಿಕರಿದ್ದಾರೆ, ಪುರುಷರೂ ಇದ್ದಾರೆ. ಆ
ಸೈನ್ಯದಲ್ಲಿ ಕೆಲವರು ಹೆಂಗಸರಾಗಿರುವುದು ಕೇವಲ ಇನ್ಸಿಡೆಂಟಲ್. ಅಲ್ಲಿ ಅವರ ’ಹೆಣ್ತನ’ವನ್ನು
ಉದ್ದೀಪಿಸುವ ಯಾವುದೇ ಅಲಂಕಾರ, ವಸ್ತ್ರ ಕಾಣಸಿಗುವುದಿಲ್ಲ. ಆದರೆ ಗಡ್ಡಾಫಿಯ ಅಂಗರಕ್ಷಕ ಪಡೆ
ಹಾಗಲ್ಲ. ಅಲ್ಲಿ ಕೇವಲ ಚಿಕ್ಕವಯಸ್ಸಿನ ಸುಮಾರು ೩೦೦-೪೦೦ ಸುಂದರಿಯರು
ಇರುತ್ತಾರೆ. ಸೈನ್ಯದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಇದ್ದರೆ, ಅದು
ಸಮಾನತೆ. ಆದರೆ ಹುಡುಕಿ ಹುಡುಕಿ ಆಕರ್ಷಕ ರೂಪಿನ ಹೆಣ್ಣುಮಕ್ಕಳನ್ನೇ ನೇಮಿಸಿಕೊಳ್ಳುವುದನ್ನು
ನಾವು ಹಾಗೆ ಸರಳವಾಗಿ ನೋಡಲಾಗುವುದಿಲ್ಲ. ಜೊತೆಗೆ ಆತ ಅವರಿಗೆ
ವಿಧಿಸಿರುವ ನಿಭಂದನೆಯಂತೂ ಕ್ರೌರ್ಯವೇ ಸರಿ. ಆತನ ಪಡೆಯಲ್ಲಿದ್ದ ಯಾವ ಹೆಣ್ಣುಮಗಳೂ ಸಹ ನಿವೃತ್ತಿಯವರೆಗೂ ಮದುವೆ ಆಗುವಂತಿಲ್ಲ. ಇದನ್ನು ಕೇವಲ ಶಿಸ್ತಿನ ಕಾರಣಕ್ಕೆ ಆತ ಮಾಡಿದ
ಎಂದು ನಂಬುವುದು ಹೇಗೆ? ಅದು ಸರ್ವಾಧಿಕಾರಿಯೊಬ್ಬನ ವಿಲಾಸದಂತೆಯೇ ಕಾಣಿಸುತ್ತದೆ. ಅಲ್ಲದೆ ಅಷ್ಟು
’ಸೌಂದರ್ಯೋಪಾಸಕ’ನಾಗಿದ್ದ ಗಡ್ಡಾಫಿ ತನ್ನ ನರ್ಸುಗಳು ಮಾತ್ರ ಯಾವುದೇ ಅಲಂಕಾರ ಮಾಡಿಕೊಳ್ಳಬಾರದು,
ಸೇವೆಯೊಂದೇ ಅವರ ಬದುಕಿನ ಗುರಿಯಾಗಿರಬೇಕು ಎಂದು ಶಾಸಿಸಿರುತ್ತಾನೆ. ಜೊತೆಗೆ, ತನ್ನ ಜೊತೆ
ವಿದೇಶಯಾತ್ರೆಗೆ ಬರುವ ಅಂಗರಕ್ಷಕಿಗೆ ಆತ ಕೊಡುತ್ತಿದ್ದ ಎನ್ನಲಾಗುವ ಬಂಗಾರದ ವಾಚು ಸಹ
ಬೇರೇನನ್ನೋ ಸೂಚಿಸುತ್ತದೆ.
ನನ್ನ ಇನ್ನೊಂದು ತಕರಾರಿರುವುದು
ಉದಯ್ ಅವರು ’ಮೊರೆಟ್ಯಾನಿಯನ್ ಸುಂದರಿ’ಯರ ವಿಷಯವನ್ನು ಕಟ್ಟಿಕೊಡುವ ರೀತಿಗೆ.
ಅವರು ಹೇಗೆ ಎಲ್ಲರ ಮನಸ್ಸೆಳೆಯುತ್ತಿದ್ದರು, ಹೇಗೆ ಎಷ್ಟೋ ಜನ ಅವರ ಸಂಗ ಬಯಸಿ ಹೋಗುತ್ತಿದ್ದರು
ಎಂದು ಅವರೇ ಬರೆಯುತ್ತಾರೆ. ಮದುವೆ ಆಗಿದ್ದರೂ, ಆ ಹುಡುಗಿಯರ ಸಂಗ ಬಯಸಿ ಹೋಗುವ ಗಂಡಸರ ಬಗ್ಗೆ
ಏನೂ ಬರೆಯದೆ ಅವರು, ಆ ಹುಡುಗಿಯರನ್ನು ಮಾತ್ರ
ವೇಶ್ಯೆಯರಂತೆ ಚಿತ್ರಿಸುವುದು ತಪ್ಪಾಗುತ್ತದೆ. ಅವರನ್ನು ನಮ್ಮ ನೆಲದ ಹೌದು-ಇಲ್ಲಗಳ ಕಣ್ಣುಗಳಿಂದ ನೋಡುವುದು ಸರಿ ಅನ್ನಿಸುವುದಿಲ್ಲ. ಅವರ ಬದುಕಿನ ರೀತಿಯಲ್ಲಿ ಪುರುಷರೊಡನೆ ಸ್ನೇಹ,
ಮನಸ್ಸು ಮೆಚ್ಚಿದರೆ ಒಡನಾಟ ತೀರಾ ಸಹಜವೇ ಇರಬಹುದು. ಮದುವೆಯಾಚೆಗಿನ ಒಂದು ಸಂಬಂಧಕ್ಕೆ ಅವರು
ಕೈಚಾಚಿದರು ಎಂದಾಕ್ಷಣ ಅವರನ್ನು ವೇಶ್ಯೆಯರು ಎಂದು ಬರೆಯುವುದು ಯಾಕೋ ಸರಿ ಅನ್ನಿಸುವುದಿಲ್ಲ.
ಸಂಸಾರವನ್ನು ತಮ್ಮ ದೇಶಗಳಲ್ಲಿ ಬಿಟ್ಟುಹೋಗುವ ಗಂಡಸರ ಒಂಟಿತನದ ಬಗ್ಗೆ ಅಷ್ಟು ಆರ್ದ್ರವಾಗಿ
ಬರೆಯುವಾಗ ಅಲ್ಲಿರುವ ಹೆಣ್ಣುಗಳನ್ನೂ ಅದೇ ಒಂಟಿತನ
ಕಾಡಿರಬಹುದು ಎಂದು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆ ಬೇಕಾಗುತ್ತದೆ. ಇನ್ನೊಂದು ವಿಷಯ ಲಿಬಿಯಾದ ಹುಡುಗಿಯರ ಬಗ್ಗೆ
ಮಾತನಾಡುತ್ತಾ ಅವರು, ಆ ಹೆಣ್ಣುಮಕ್ಕಳು ಕಪ್ಪು ಮೈಬಣ್ಣದವರು, ಆದ್ದರಿಂದ ಅವರು ಆಕರ್ಷಕರಾಗಿಲ್ಲ
ಎಂದು ಬರೆಯುತ್ತಾರೆ. ಭಾರತೀಯರ ಸೌಂದರ್ಯ ಪ್ರಜ್ಞೆ ಮತ್ತು ಮೈಬಣ್ಣದ ಮೇಲಿನ ಭಾರತೀಯರ
ಪೂರ್ವಾಗ್ರಹಗಳ ಬಗ್ಗೆ ಲೋಹಿಯಾರವರು ಬರೆದ ದಿನದಿಂದ ಈ ಘಳಿಗೆಯವರೆಗೆ ಸಾಕಷ್ಟು ಚರ್ಚೆಗಳಾಗಿವೆ,
ಆಗುತ್ತಲಿವೆ. ಅವು ಚೆಲ್ಲಿದ ಬೆಳಕಿನಲ್ಲಿ ನಾವು ನಮ್ಮ ಹಲವಾರು ಪೂರ್ವಾಗ್ರಹಗಳನ್ನು
ಕಳಚಿಟ್ಟಿದ್ದೇವೆ. ಆದರೆ ಈಗಲೂ ಅದನ್ನೊಂದು ವಿಷಯ ಎನ್ನುವಂತೆ ಮಾತನಾಡುವುದು, ಬರೆಯುವುದು ಕಳವಳ
ಹುಟ್ಟಿಸುತ್ತದೆ. ಆ ಭಾವನೆ ಇನ್ನೂ ಕೆಲವರ ಮನಸ್ಸಿನಲ್ಲಿ ಇರಬಹುದು, ಅದನ್ನು ನಾನು
ನಿರಾಕರಿಸುವುದಿಲ್ಲ, ಆದರೆ ಲೇಖಕರೊಬ್ಬರು ಅದನ್ನು ಬರೆದಾಗ ಅದಕ್ಕೊಂದು ಶಾಶ್ವತ ಹಾಗು
ಸಾರ್ವತ್ರಿಕ ಗುಣ ಬಂದುಬಿಡುತ್ತದೆ. ಅದನ್ನು ನಾವು ಎಚ್ಚರದಿಂದ ಗಮನಿಸಬೇಕು. ಬರೆಯುವವರಾಗಿ ಅದು
ನಮ್ಮ ಜವಾಬ್ದಾರಿ ಸಹ. ನಾನು
ಮೊದಲೇ ಹೇಳಿದ ಹಾಗೆ ಇವು ನನ್ನ ತಕರಾರುಗಳು, ಇವನ್ನು ಹೊರತು ಪಡಿಸಿಯೂ ಪುಸ್ತಕ ಹಲವಾರು
ಚಾರಿತ್ರಿಕ ಕಾರಣಗಳಿಂದ ಮುಖ್ಯವಾಗುವ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಗಡ್ಡಾಫಿಯ ಬಗ್ಗೆ,
ಲಿಬಿಯಾದಲ್ಲಾದ ಬದಲಾವಣೆಗಳ ಬಗ್ಗೆ ಬರೆದ ನಂತರ ಉದಯ್ ಅಲ್ಲಿನ ಬದುಕಿನ ಬಗ್ಗೆ ಬರೆಯುತ್ತಾರೆ.
ಗೊತ್ತಿಲ್ಲದ ಊರಿನಲ್ಲಿ, ಗುರುತಿಲ್ಲದ ಅಪರಿಚಿತರು ಅಕಾರಣವಾಗಿ ತೋರಿಸುವ ಪ್ರೀತಿಯಲ್ಲಿ
ಪುಸ್ತಕ ಮತ್ತಷ್ಟು ಆರ್ದ್ರವಾಗುತ್ತದೆ. ಆ
ಮಟ್ಟಿಗೆ ಪುಸ್ತಕ ಒಂದು ಇತಿಹಾಸದ ದಾಖಲೆಯೂ ಹೌದು, ಪ್ರವಾಸ ಕಥನವೂ ಹೌದು, ’ಲಿಬಿಯಾ ಡೈರಿ’
ಇದಕ್ಕೆ ಸಾರ್ಥಕ ಹೆಸರು. ಇದರ ಹೊರತಾಗಿಯೂ ಲಿಬಿಯಾದ ಬಗ್ಗೆ ಅವರು ಬೆಳಕು
ಚೆಲ್ಲುವ ಹಲವಾರು ಸಂಗತಿಗಳಿವೆ. ಆ ಎಲ್ಲಾ ಕಾರಣಗಳಿಂದಾಗಿ ಈ
ಪುಸ್ತಕ ಮಹತ್ವ ಪಡೆಯುತ್ತದೆ.
ಉದಯ್ ಇಟಗಿಯವರು ಕತೆ, ಕವನ, ಪ್ರವಾಸ, ಅನುಭವ ಕಥನ ಎಲ್ಲದರಲ್ಲಿಯೂ
ಆಸಕ್ತಿ, ಅಭಿರುಚಿ ಇಟ್ಟುಕೊಂಡವರು. ಈ ಪುಸ್ತಕ ಅವರ ಮತ್ತಷ್ಟು ಪುಸ್ತಕಗಳಿಗೆ ದಾರಿಯಾಗಲಿ ಎಂದು
ಹಾರೈಸುತ್ತಾ, ಅವರನ್ನು ಅಭಿನಂದಿಸುತ್ತಾ ಈ ಬರಹವನ್ನು ಮುಗಿಸುತ್ತೇನೆ.
-
ಸಂಧ್ಯಾರಾಣಿ
ಖ್ಯಾತ ಲೇಖಕಿ ಮತ್ತು ’ಅವಧಿ’ ಉಪಸಂಪಾ