ಈಗ್ಗೆ ಸುಮಾರು ಹದಿನೈದು ದಿನಗಳ ಹಿಂದೆ ಅಂತಾ ಕಾಣುತ್ತೆ. ಸಾಯಂಕಾಲ ಆರು ಘಂಟೆಯಷ್ಟೊತ್ತಿಗೆ ನನ್ನ ಮೊಬೈಲ್ಗೊಂದು ಕರೆ ಬಂತು. ಆ ನಂಬರ್ ನನ್ನ ಮೊಬೈಲ್ನಲ್ಲಿ ಸೇವ್ ಆಗಿರದಿದ್ದುದರಿಂದ ನನಗೆ ಯಾರದು ಅಂತಾ ಗೊತ್ತಾಗಲಿಲ್ಲ. ಅತ್ತಕಡೆಯಿಂದ ಕರೆ ಮಾಡಿದವರು ಮಾತನಾಡಿದರು. "ಉದಯ ಇಟಗಿಯವರಾ ಮಾತನಾಡೋದು?" ನಾನು ಹೌದೆಂದೆ. ಮತ್ತೆ ಅವರು ಮುಂದುವರಿದು "ನಾನು ರೇಣುಕಾ ಪ್ರಕಾಶ. ಚಿತ್ರದುರ್ಗ ಆಕಾಶವಾಣಿಯ ಪ್ರೋಗ್ರಾಂ ಹೆಡ್. ನಾನು ನಿಮ್ಮ ’ಲಿಬಿಯಾ ಡೈರಿ” ಪುಸ್ತಕವನ್ನು ಓದಿದ್ದೇನೆ. ತುಂಬಾ ರಿಯಲಿಸ್ಟಿಕ್ ಆಗಿ ಬಂದಿದೆ. ನಿಮ್ಮ ಪುಸ್ತಕ ಕುರಿತಂತೆ ಮತ್ತು ಲಿಬಿಯಾದಲ್ಲಿನ ನಿಮ್ಮ ಅನುಭವಗಳ ಕುರಿತಂತೆ ನಮ್ಮ ಆಕಾಶವಾಣಿಯು ನಿಮ್ಮನ್ನು ಸಂದರ್ಶಿಸಲು ಬಯಸುತ್ತದೆ. ನೀವು ನಮ್ಮ ಸ್ಟುಡಿಯೋಗೆ ಬಂದು interview ಕೊಡಬೇಕು. ಹೇಳಿ, ನೀವು ಯಾವಾಗ ಫ್ರೀ ಇರುತ್ತೀರಾ? ಆವತ್ತೇ ಪ್ರೋಗ್ರಾಮ್ ಇಟ್ಕೊಳ್ಳೋಣ." ಅಂತಾ ಹೇಳಿದರು. ನನಗೆ ಸ್ವಲ್ಪ ಮುಜುಗುರವಾಗುವದರ ಜೊತೆಗೆ ಖುಷಿಯೂ ಆಯಿತು! ಪರ್ವಾಗಿಲ್ಲ, ತಡವಾಗಿಯಾದರೂ ಜನ ನನ್ನ ಪುಸ್ತಕವನ್ನು ಗುರುತಿಸುತ್ತಿದ್ದಾರೆ ಅಂತಾ. ಏಕೆಂದರೆ ಬಹಳಷ್ಟು ಜನ ನನ್ನ ಪುಸ್ತಕವನ್ನು ಓದಿ ನನಗೆ ಫೋನ್ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಸರ್, ನಿಮ್ಮ ಪುಸ್ತಕ ಓದಿದ ಮೇಲೆ ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳು ಸೇರಿಕೊಂಡು ಹೇಗೆ ತೃತಿಯ ಜಗತ್ತಿನ ರಾಷ್ಟ್ರಗಳನ್ನು ಹಾಳುಗೆಡವುತ್ತಿವೆ ಹಾಗೂ ಅವು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಹೇಗೆ ಹಸಿ ಹಸಿ ಸುಳ್ಳುಗಳನ್ನು ಹೇಳಿ ಹೊರಜಗತ್ತನ್ನು ನಂಬಿಸುತ್ತವೆಯೆಂದು ನಮಗೆ ಗೊತ್ತಾಗುವದರ ಜೊತೆಗೆ ನಿಮ್ಮ ಕೃತಿ ಮುಂದುವರಿದ ರಾಷ್ಟ್ರಗಳ ಸ್ವಾರ್ಥ, ಮೋಸ ಮತ್ತು ನಿಚತನವನ್ನು ಬಯಲಿಗೆಳೆಯುತ್ತದೆ ಮತ್ತು ಲಿಬಿಯಾದಲ್ಲಿನ ವಾಸ್ತವ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ ಹಾಗೂ ನಿಮ್ಮ ಪುಸ್ತಕ ಸಾರ್ವಜನಿಕವಾಗಿ ಚರ್ಚೆಯಾಗುವದರ ಮೂಲಕ ನಿಜವಾದ ಸತ್ಯವೇನು ಎಂಬುದು ಹೊರಜಗತ್ತಿಗೆ ಗೊತ್ತಾಗಬೇಕು" ಎಂದು ಹೇಳಿ ಹುರಿದುಂಬಿಸಿದ್ದಾರೆ. ಆಗೆಲ್ಲಾ ನಾನು ನಕ್ಕು ಸುಮ್ಮನಾಗಿದ್ದೇನೆ.
ನಾನು ರೇಣುಕಾ ಪ್ರಕಾಶ ಅವರೊಂದಿಗೆ ಮಾತನಾಡುತ್ತಾ "ಸಧ್ಯಕ್ಕೆ ನಾನು ದ್ಯಿತಿಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯ ಕೆಲಸದಲ್ಲಿ ಬಿಜಿಯಾಗಿದ್ದೇನೆ. ಅದಾದ ಮೇಲೆ ಇಟ್ಟುಕೊಳ್ಳೋಣ" ಅಂತಾ ಹೇಳಿದೆ. ಜೂನ್ 18 ಕ್ಕೆ ಇಂಗ್ಲೀಷ್ ಪರೀಕ್ಷೆ ಮುಗಿಯಿತು. ಅದರ ಮಾರನೆಯ ದಿನವೇ ರೇಣುಕಾ ಪ್ರಸಾದ್ ಅವರು ಮತ್ತೆ ಫೋನ್ ಮಾಡಿ "ಸರ್, ಇನ್ನೆರೆಡು ದಿನ ಬಿಟ್ಟು ನಮ್ಮ ಸ್ಟುಡಿಯೋಕ್ಕೆ ಬನ್ನಿ. ನಿಮ್ಮ ಪ್ರೋಗ್ರಾಮ್ ರೆಕಾರ್ಡ್ ಮಾಡಿಕೊಳ್ಳುತ್ತೇವೆ." ಎಂದು ಹೇಳಿದರು. ಆ ಪ್ರಕಾರ ನಾನು ಜೂನ್ 22 ಕ್ಕೆ ಆಕಾಶವಾಣಿಗೆ ಸಂಜೆ 5 ಘಂಟೆಗೆ ಹೋದೆ. ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಜೇಶನ್ ಮುಗಿಸಿ ರೇಣುಕಾ ಪ್ರಸಾದ ಅವರ ಕೊಠಡಿಗೆ ಹೋಗುತ್ತಿದ್ದಂತೆ ಅವರು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಹಳ ದಿನಗಳಿಂದ ಪರಿಚಯವಿರುವಂತೆ ಅವರು ನನ್ನೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾ ನಾನು ಲಿಬಿಯಾಗೆ ಹೋಗಿದ್ದು ಹೇಗೆ, ಅಲ್ಲಿನ ಕ್ರಾಂತಿಯ ಬಗ್ಗೆ, ವಿದ್ಯಾರ್ಥಿಗಳ ಬಗ್ಗೆ, ಶಿಕ್ಷಣದ ವ್ಯವಸ್ಥೆಯ ಬಗ್ಗೆ, ಅಲ್ಲಿನ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಇನ್ನೂ ಮುಂತಾದ ವಿಷಯಗಳ ಬಗ್ಗೆ ಕೇಳುತ್ತಾ ಸಣ್ಣದೊಂದು ಟಿಪ್ಪಣಿಯನ್ನು ಮಾಡಿಕೊಂಡರು. ಈ ನಡುವೆ ಕಾಫಿ ತರಿಸಿದರು. ಕಾಫಿ ಕುಡಿದು ಇಬ್ಬರೂ ಸ್ಟುಡಿಯೋದೊಳಗೆ ಹೋದೆವು. ಸುಮಾರು ಮೂವತೈದು ನಿಮಿಷಗಳ ಕಾಲ ತುಂಬಾ ಆತ್ಮೀಯವಾಗಿ ನನ್ನನ್ನು ಸಂದರ್ಶಿಸುತ್ತಾ ನನ್ನ ನೆನಪಿನ ಬುತ್ತಿಯನ್ನು ಬಿಚ್ಚಿದರು. ನಾನೂ ಅಷ್ಟೇ ಆತ್ಮೀಯವಾಗಿ ಮಾತನಾಡುತ್ತಾ ನನ್ನ ಬುತ್ತಿಯನ್ನು ಹಂಚಿಬಂದೆ. ಬರುವಾಗ ಅವರು ಹೇಳಿದರು "ನಿಮ್ಮ ಸಂದರ್ಶನ ಮೊದಲು ಬೆಂಗಳೂರು ಆಕಾಶವಾಣಿಯಿಂದ 15 ನಿಮಿಷಗಳ ಕಾಲ ಬಿತ್ತರವಾಗುತ್ತದೆ. ಅದರ ದಿನಾಂಕ ಮತ್ತು ಸಮಯವನ್ನು ಆಮೇಲೆ ತಿಳಿಸುತ್ತೇನೆ. ಆನಂತರ ನಮ್ಮ ಚಿತ್ರದುರ್ಗದ ಆಕಾಶವಾಣಿಯಿಂದ ಅರ್ಧ ಘಂಟೆಕಾಲ ಬಿತ್ತರಗೊಳ್ಳುತ್ತದೆ."
ಅವರು ನಿನ್ನೆ ಮತ್ತೆ ಫೋನ್ ಮಾಡಿದ್ದರು. ಇದೇ ತಿಂಗಳು 29 ರಂದು ಬೆಳಿಗ್ಗೆ 7.45 ಕ್ಕೆ ಬೆಂಗಳೂರು ಆಕಾಶವಾಣಿಯಿಂದ (FM Rainbow ಅಲ್ಲ) 15 ನಿಮಿಷಗಳ ಕಾಲ ನನ್ನ ಸಂದರ್ಶನ ಪ್ರಸಾರವಾಗಲಿದೆ ಹಾಗೂ ಆನಂತರ ಚಿತ್ರದುರ್ಗ ಆಕಾಶವಾಣಿಯಿಂದ ಅರ್ಧಘಂಟೆ ಬಿತ್ತರಗೊಳ್ಳಲಿದೆ. ಬೆಂಗಳೂರಿನಿಂದ ದೂರವಿರುವವರು NewsOnAir App ನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ಎಡಭಾಗದಲ್ಲಿ --- ಈ ತರ ಮೂರು ಗೆರೆಗಳಿರುವ ಜಾಗಕ್ಕೆ ಹೋಗಿ Live Radio ದ ಮೇಲೆ ಕ್ಲಿಕ್ ಮಾಡಿದರೆ ವಿವಿಧ ರಾಜ್ಯಗಳ ಪಟ್ಟಿ ಬರುತ್ತದೆ. ಅಲ್ಲಿ ಕರ್ನಾಟಕದ ಕೆಳಗೆ ಹೋಗಿ AIR Bengaluru ಮೇಲೆ ಕ್ಲಿಕ್ ಮಾಡಿ ಕಾರ್ಯಕ್ರಮವನ್ನು ಕೇಳಬಹುದು. ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಈ ಕಾರ್ಯಕ್ರಮವನ್ನು ನಡೆಸಿಕೊಟ್ಟ ಶ್ರೀಯುತ ರೇಣುಕಾ ಪ್ರಕಾಶ ಅವರಿಗೆ ಮತ್ತು ಅವರ ಸಿಬ್ಬಂದಿ ವರ್ಗದವರಿಗೆ ನನ್ನ ಹೃತ್ಪೂರ್ವಕ ನಮನಗಳು.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ