ಪ್ರವಾಸ ಮಾಡುತ್ತಲೇ ಇರು
ಇಲ್ಲದೆ ಹೋದರೆ ನೀನೊಬ್ಬ ರೇಸಿಸ್ಟ್ ಆಗಬಹುದು
ಅಥವಾ ನಿನ್ನ ಚರ್ಮದ ಬಣ್ಣವೇ ಪ್ರಪಂಚದ ಅತ್ಯಂತ ಶ್ರೇಷ್ಠ ಬಣ್ಣವಾಗಿದೆ ಎಂಬ ಭ್ರಮೆಗೆ ಒಳಗಾಗಬಹುದು.
ಅಥವಾ ನೀನಾಡುವ ಭಾಷೆಯೇ ಅತ್ಯಂತ ರೊಮ್ಯಾಂಟಿಕ್ ಭಾಷೆ ಎಂದು ನಿನಗನಿಸಬಹುದು
ಅಥವಾ ನೀನೇ ಮೊದಲಿಗರಲ್ಲಿ ಮೊದಲಿಗ ಎಂಬ ಹುಸಿ ನಂಬಿಕೆಯಲ್ಲಿ ಬದುಕತೊಡಗಬಹುದು.
ಪ್ರವಾಸ ಮಾಡುತ್ತಿರು
ಇಲ್ಲದೆ ಹೋದರೆ
ನಿನ್ನ ವಿಚಾರಧಾರೆಗಳು
ಗಟ್ಟಿಯಾಗುವದಿಲ್ಲ
ಅಥವಾ ಅವು ಹೊಸ ಹೊಳಹುಗಳಿಂದ ತುಂಬುವದಿಲ್ಲ
ನಿನ್ನ ಕನಸುಗಳು ಅಶಕ್ತ ಕಾಲುಗಳೊಂದಿಗೆ ಹುಟ್ಟುತ್ತವೆ
ಆಗ ನೀನು ಟಿ. ವಿ. ಶೋಗಳನ್ನು ನಂಬಲು ಶುರು ಮಾಡುತ್ತಿ ಮತ್ತು ಅಲ್ಲಿ ನಿನಗೆ ಸೃಷ್ಟಿಯಾಗುವ ಶತ್ರುಗಳೆಲ್ಲಾ
ದುಸ್ವಪ್ನವಾಗಿ ಕಾಡುತ್ತಾ ನೀನು ಸದಾ ಭಯದಲ್ಲಿ ಬದುಕುವಂತೆ ಮಾಡುತ್ತಾರೆ
ಪ್ರವಾಸ ಮಾಡುತ್ತಿರು
ಏಕೆಂದರೆ
ನೀನು ಕೈಗೊಳ್ಳುವ ಪ್ರವಾಸವು ನಿನಗೆ ಪ್ರಪಂಚದ ಮೂಲೆಮೂಲೆಯಲ್ಲಿರುವರೆಲ್ಲ ರಿಗೂ
ಗುಡ್ ಮಾರ್ನಿಂಗ್ ಹೇಳಲು ಕಲಿಸುತ್ತದೆ
ಪ್ರವಾಸ ಮಾಡುತ್ತಿರು
ಏಕೆಂದರೆ
ಪ್ರವಾಸವು ನಿನಗೆ
ನಿನ್ನ ಎದೆಯಲ್ಲಿ ಕತ್ತಲಿದ್ದಾಗ್ಗ್ಯೂ ಗುಡ್ ನೈಟ್ ಹೇಗೆ ಹೇಳಬೇಕೆಂಬುದನ್ನು ಕಲಿಸಿಕೊಡುತ್ತದೆ
ಪ್ರವಾಸ ಮಾಡುತ್ತಿರು
ಏಕೆಂದರೆ
ಪ್ರವಾಸವು ಪ್ರತಿಭಟಿಸುವದನ್ನು ಸ್ವಾವಲಂಬಿತನವನ್ನು ಮತ್ತು ಜನರು ಯಾರು ಎತ್ತ ಎಂಬುದನ್ನು ನೋಡದೆ ಎಲ್ಲರನ್ನೂ ಒಳಗೊಳ್ಳುವದನ್ನು ಕಲಿಸಿಕೊಡುತ್ತದೆ
ಮಾತ್ರವಲ್ಲ ನಾವೇನಾಗಿದ್ದೇವೆ
ಅವರೇನಾಗಿದ್ದಾರೆ
ನಾವೇನಾಗಿರಬೇಕಿತ್ತು
ಅವರೇನಾಗಿರಬೇಕಿತ್ತು ಎನ್ನುವದನ್ನು ಸಹ ಕಲಿಸಿಕೊಡುತ್ತದೆ.
ನಮ್ಮ ಸಾಮರ್ಥ್ಯವೇನು ಅವರ ಸಾಮರ್ಥ್ಯವೇನು ಹಾಗೂ
ಗಡಿಗಡಿಗಳಾಚೆ,
ಸಂಸ್ಕೃತಿ- ಸಂಪ್ರದಾಯಗಳಾಚೆಯೂ
ನಾವು ಹೇಗೆ ಒಂದೇ ಕುಟುಂಬದವರಾಗಿರ ಬಹುದೆನ್ನುವ ಸತ್ಯವನ್ನು ಹೇಳಿಕೊಡುತ್ತದೆ
ಒಟ್ಟಿನಲ್ಲಿ ಪ್ರವಾಸವು ಎಲ್ಲೆ ಮೀರುವದನ್ನು ಹೇಳಿಕೊಡುತ್ತದೆ.
ಪ್ರವಾಸ ಮಾಡುತ್ತಿರು
ಇಲ್ಲದೆ ಹೋದರೆ
ನೀನೇ ಒಂದು ದೊಡ್ಡ ಪನೊರಮ ಎಂದು ಭಾವಿಸಿಕೊಳ್ಳುತ್ತಿಯ
ಮತ್ತು ಹೊರಗಿರುವ ಅನೇಕ ಸುಂದರ ದೃಶ್ಯಗಳನ್ನು ಕಳೆದುಕೊಂಡು ಬಣ್ಣಗೆಟ್ಟ ಮನುಷ್ಯನಾಗಿ ಬದುಕುತ್ತೀ!
*ಮೂಲ ಇಟ್ಯಾಲಿಯನ್: ಗಿಯೋ ಇವನ್*
*ಕನ್ನಡಕ್ಕೆ: ಉದಯ ಇಟಗಿ*
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ