Demo image Demo image Demo image Demo image Demo image Demo image Demo image Demo image

ಅಮೆರಿಕಾ ಅಮೆರಿಕಾ-2’ ಅಲ್ಲ; ಇದೊಂದು ಸುಂದರ ದಾಂಪತ್ಯಕಾವ್ಯ!

  • ಮಂಗಳವಾರ, ಅಕ್ಟೋಬರ್ 20, 2026
  • ಬಿಸಿಲ ಹನಿ
  • ಇವತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಮೆರಿಕಾ ಅಮೆರಿಕಾ-2' ಚಿತ್ರವನ್ನು ನೋಡಿದೆ. ಮೊದಲಿಗೆ ಇದು ಅವರ ಜನಪ್ರಿಯ 'ಅಮೆರಿಕಾ ಅಮೆರಿಕಾ' ಚಿತ್ರದ ಎರಡನೇ ಭಾಗವಿರಬಹುದು ಎಂದುಕೊಂಡಿದ್ದೆ. ಆದರೆ ಸಿನಿಮಾ ನೋಡಿದ ಮೇಲೆ ತಿಳಿಯಿತು—ಇದು ಸಂಪೂರ್ಣ ವಿಭಿನ್ನವಾದ, ತನ್ನದೇ ಆದ ಕಥಾ ಹಂದರವನ್ನು ಹೊಂದಿರುವ ಒಂದು ಸುಂದರ ವಿಭಿನ್ನ ದಾಂಪತ್ಯ ಪ್ರೇಮ ಕಥೆ ಎಂದು.

    ಪ್ರೀತಿ, ಪ್ರೇಮ, ಭಾವನೆ ಮತ್ತು ನೆನಪುಗಳನ್ನು ದೃಶ್ಯಗಳ ಮೂಲಕ ಕಟ್ಟಿಕೊಡುವ ಒಂದು ದೃಶ್ಯಕಾವ್ಯದಂತಿದೆ ಈ ಸಿನಿಮಾ. ಅಬ್ಬರ, ಆರ್ಭಟ ಮತ್ತು ಗದ್ದಲದ ಸಿನಿಮಾಗಳ ನಡುವೆ ಇಂಥದ್ದೊಂದು ಮೃದುವಾದ, ಭಾವನಾತ್ಮಕ ಸಿನಿಮಾ ನೋಡುವ ಅನುಭವವೇ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಮತ್ತು ಪ್ರಫುಲ್ಲತೆಯನ್ನು ನೀಡುತ್ತದೆ.

     ನುಡಿಯಾಗಿ ಸಾನ್ವಿತ್ ಶ್ರೀವಾತ್ಸವ್ ಮನಸ್ಸಿಗೆ ಹತ್ತಿರವಾಗುತ್ತಾರೆ. ಅವರ ಜೊತೆಯಲ್ಲಿ ನೀಲ್ ಪಾತ್ರದಲ್ಲಿ ಅಭಿನಯಿಸಿರುವ ಪೃಥ್ವಿ ಅಂಬರ್ ಎಂಬ ಯುವ ನಟನ ಅಭಿನಯವೂ ಗಮನ ಸೆಳೆಯುತ್ತದೆ. ಜೊತೆಗೆ ನಿನಾದ ಅಗಿ ನಿರೂಪ್ ಭಂಡಾರಿ ಅವರ ನಟನೆಯೂ ಕೂಡ ಅದ್ಭುತವಾಗಿ ಮೂಡಿ ಬಂದಿದ್ದು ಅವರು ಪ್ರೇಕ್ಷಕರ ಮನದಲ್ಲಿ ಬಹುಕಾಲ ನಿಂತು ನಮ್ಮನ್ನು ಕಾಡುತ್ತಾರೆ. ಇವರೆಲ್ಲರ ನಡುವಿನ ಪ್ರೀತಿ ಮತ್ತು ಭಾವನೆಗಳು ಸಹಜವಾಗಿ ಮೂಡಿಬಂದಿವೆ.
     ಹ್ಯಾಟ್ಸಾಫ್ ಟು ನಾಗತಿಹಳ್ಳಿ ಚಂದ್ರಶೇಖರ್ ಸರ್ ಗೆ. ತುಂಬಾ ದಿನಗಳ ನಂತರ ಒಂದು ಅತ್ಯುತ್ತಮವಾದ ನವಿರು ನವಿರಾದ ಪ್ರೀತಿಯ ವಸ್ತುವನ್ನು ಹೊಂದಿರುವ ಸಿನಿಮಾವನ್ನು ಕೊಟ್ಟಿದ್ದಕ್ಕೆ . ತಮಗೆ ಹೃತ್ಪೂರ್ವಕ ಅಭಿನಂದನೆಗಳು. 

    ವಿಶೇಷವಾಗಿ ಸವಿತಾ ನಾಗಭೂಷಣ್ ಅವರ ‘ಕಿಟಕಿಯಲ್ಲಿ ಚಂದಿರ’ ಹಾಡಿನ ಚಿತ್ರೀಕರಣ ಬಹಳ ಸುಂದರವಾಗಿದೆ. ಇದನ್ನು ನಾನು ನಾಲ್ಕೈದು ವರ್ಷಗಳ ಹಿಂದೆ ಇಂಗ್ಲಿಷ್ ಗೆ ಅನುವಾದಿಸಿದ್ದೆ. ಹಾಡು, ದೃಶ್ಯ ಮತ್ತು ಭಾವನೆಗಳು ಒಂದಕ್ಕೊಂದು ಬೆಸೆದುಕೊಂಡು ಸಿನಿಮಾದ ಸೌಂದರ್ಯವನ್ನು ಹೆಚ್ಚಿಸಿವೆ.

    ಒಟ್ಟಿನಲ್ಲಿ, ನಾಗತಿಹಳ್ಳಿ ಚಂದ್ರಶೇಖರ್ ಅವರು ‘ಅಮೆರಿಕಾ ಅಮೆರಿಕಾ’ ಮೂಲಕ ಕನ್ನಡಿಗರಿಗೆ ನೀಡಿದ್ದ ಪ್ರೇಮದ ಅಮೃತಧಾರೆಯನ್ನು, ಇದೀಗ ಮತ್ತೊಂದು ಹೊಸತನದ ರೂಪದಲ್ಲಿ ಹರಿಸಿದ್ದಾರೆ ಎನ್ನಬಹುದು.

    ಬಹಳ ದಿನಗಳ ನಂತರ ಮನಸ್ಸಿನಲ್ಲಿ ಉಳಿಯುವಂತಹ, ಪ್ರೀತಿಯನ್ನು ಮತ್ತೆ ನಂಬುವಂತೆ ಮಾಡುವ ಒಂದು ಸುಂದರ ಸಿನಿಮಾ ಇದು. ಮತ್ತೊಮ್ಮೆ ಮಗದೊಮ್ಮೆ ನೋಡಬಹುದಾದಂತ ಚಿತ್ರ ಇದು. 
    -ಉದಯ ಇಟಗಿ