ಇರುವದೆಲ್ಲವನ್ನು ಬಿಟ್ಟು ಸಾವಿರ ಸಾವಿರ ಮೈಲಿಗಳನ್ನು ದಾಟಿ ಸಾಗರದಾಚೆಯ ನನ್ನ ಕೆಲಸದ ಜಾಗಕ್ಕೆ ಮತ್ತೆ ಬಂದು ಕುಳಿತಿದ್ದೇನೆ. ಮನಸ್ಸು ಭಾರವಾಗಿದೆ. ಹೃದಯ ನಿಡುಸೊಯ್ಯುತ್ತದೆ. ನೆನಪುಗಳು ಮತ್ತೆ ಮತ್ತೆ ಭಾರತವನ್ನು ಮೆಲಕು ಹಾಕುವಂತೆ ಮಾಡುತ್ತವೆ. ಮನಸಿನೊಳಗೆ ಹುಟ್ಟುವ ಕಸಿವಿಸಿಗಳು ಕಣ್ಣಂಚಿನ ಹನಿಗಳಾಗಿ ಕೊನೆಗುಳ್ಳುತ್ತವೆ. ಏಕೋ ಏನೋ ಖಾಲಿ ಖಾಲಿಯಾದ ಹಾಗೆ ಅನಿಸುತ್ತದೆ. ನನ್ನ ಕೆಲಸ ಮತ್ತು ಅದರ ಹಿಂದಿರುವ ದೊಡ್ಡ ಮೊತ್ತದ ಸಂಬಳ ಮತ್ತೆ ನನ್ನ ಈ ಜಾಗಕ್ಕೆ ಎಳೆದು ತಂದು ನಿಲ್ಲಿಸಿವೆ. ಬದುಕು ಎಷ್ಟೊಂದು ವಿಚಿತ್ರ? ಎಲ್ಲಿಂದ ಎಲ್ಲಿಗೆ ಎಳೆದು ತಂದು ಬಿಡುತ್ತದೆಯಲ್ಲವೆ? ಎಳೆದ ಜಾಗಕ್ಕೆ ನೊಗ ಕಟ್ಟಿಕೊಂಡು ಹೋಗಲೇಬೇಕಾದ ತುರ್ತು ಮತ್ತು ಅನಿವಾರ್ಯತೆಗಳನ್ನು ಹರಡಿ ಮುಂದೇನು ಮಾಡುವೆ? ಎಂದು ಕೇಳಿ ಉತ್ತರಕ್ಕೂ ಕಾಯದೆ ಅಲ್ಲಿಗೆ ಹೋಗುವಂತೆ ದೂಡಿಬಿಡುತ್ತದೆ. ಈ ಕಾರಣಕ್ಕಾಗಿಯೇ ನಾನು ಸಹ ಇರುವದೆಲ್ಲವನ್ನು ಬಿಟ್ಟು ಇಲ್ಲದ್ದನ್ನು ಹುಡುಕಿಕೊಂಡು ಮತ್ತೆ ಇಷ್ಟು ದೂರ ಬಂದುಬಿಟ್ಟೆ. ನಿಜಕ್ಕೂ ಆ ಅನಿವಾರ್ಯತೆಯಿತ್ತೆ? ಎಂದು ಕೇಳಿಕೊಳ್ಳುವಾಗೆಲ್ಲಾ ದೊಡ್ಡ ಮೊತ್ತದ ಸಂಬಳದ ಮುಂದೆ ಬದುಕಿನ ಬೇರೆಲ್ಲ ವಿಷಯಗಳು ಗೌಣ ಎನಿಸಿಬಿಡುತ್ತವೆ. ಹಾಗೆ ಅನಿಸಬಾರದು ಆದರೆ ಅನಿಸಿಬಿಡುತ್ತದೆ. ಅದೇ ಬದುಕಿನ ಕಟುವಾಸ್ತವ ವಿಪರ್ಯಾಸ!
ಮೊನ್ನೆಯಷ್ಟೆ ಇಲ್ಲಿಗೆ ಬಂದಿಳಿದಿದ್ದೇನೆ. ಆದರೂ ಮನಸ್ಸು ಮತ್ತೆ ಮತ್ತೆ ಭಾರತದ ಸುತ್ತ ಗಿರಕಿ ಹೊಡೆಯುತ್ತಲಿದೆ. ಆತ್ಮೀಯರನ್ನು, ಬಂಧು ಬಳಗದವರನ್ನು, ಜೀವದ ಗೆಳೆಯರನ್ನು, ಮಡದಿ, ಮಗಳನ್ನು ಬಿಟ್ಟು ಬಂದಿರುವಾಗ ಮತ್ತೆ ಮತ್ತೆ ಅವರದೇ ನೆನಪು ಕಾಡುತ್ತದೆ. ಅವರೊಟ್ಟಿಗೆ ಕಳೆದ ಕ್ಷಣಗಳನ್ನು ನೆನೆದು ಮನಸ್ಸು ಉಲ್ಲಾಸಿತವಾದಂತೆ ಬೇಡ ಬೇಡವೆಂದರೂ ಕೆಲವು ವಿಷಣ್ಣ ಸಂಗತಿಗಳು ಧಾಳಿಯಿಟ್ಟು ಮನಸ್ಸು ಮುದುಡುವಂತೆ ಮಾಡುತ್ತವೆ. ಆಗೆಲ್ಲಾ ಎಲ್ಲೋ ಓದಿದ ಒಂದು ಸಾಲು “ಬದುಕು ಸುಖವೂ ಅಲ್ಲ ದುಃಖವೂ ಅಲ್ಲ, ಅದು ಇವೆರಡರ ಮೊತ್ತ” ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೇನೆ.
ಬೆಂಗಳೂರಿಗೆ ಬಂದು ಇಳಿದ ಮೇಲೆ ವಿಮಾನ ನಿಲ್ದಾಣಕ್ಕೆ ಕಾರು ತೆಗೆದುಕೊಂಡು ಕರೆಯಲು ಬರುತ್ತೇನೆ ಎಂದು ಹೇಳಿದ ಜೀವದ ಗೆಳೆಯ ಮಂಜು ಬರದೇ ಹೋಗಿದ್ದು ಒಂದು ಕ್ಷಣ ಮನಸ್ಸಿಗೆ ಬೇಜಾರು ನೀಡಿತು. ಬಂದೇ ಬರುತ್ತಾನೆ ಎಂದು ನಿರೀಕ್ಷಿಸಿದ್ದೆ. ಆದರೆ ಬರಲಿಲ್ಲ. ನನ್ನ ನಿರೀಕ್ಷೆ ನೋವಾಗಿತ್ತು. ಅವನಿಗೆ ಬೆಂಗಳೂರಿನ ಬಿಜಿ ಬದುಕಲ್ಲಿ ಬಿಡುವು ಮಾಡಿಕೊಂಡು ಬರಲು ಪುರುಸೊತ್ತು ಸಿಕ್ಕಿರಲಿಕ್ಕಿಲ್ಲವೆಂದುಕೊಂಡು ನಾನೇ ಅಲ್ಲಿಂದ ಟ್ಯಾಕ್ಸಿಯೊಂದನ್ನು ಹಿಡಿದು ನೇರವಾಗಿ ನಮ್ಮ ಮನೆಗೆ ಬಂದೆವು. ಅಲ್ಲಿ ಸ್ವಾಗತಿಸುವವರು ಯಾರೂ ಇರದೆ ಇದ್ದುದರಿಂದ ಮುಚ್ಚಿದ ಬಾಗಿಲು ನಮ್ಮನ್ನು ನೋಡಿ ಅಣಕಿಸಿದಂತಾಯಿತು. ಬೀಗ ತೆಗೆದು ಸುಧಾರಿಸಿಕೊಳ್ಳುವಷ್ಟರಲ್ಲಿ ನನ್ನ ಬ್ಲಾಗ್ ಮಿತ್ರ ಶಿವು ಅವರ “Wel Come back to Bangalore” ಎನ್ನುವ ಸಂದೇಶವೊಂದು ನನ್ನ ಮೊಬೈಲಿಗೆ ಬಂದು ಬಿತ್ತು. ಅದನ್ನು ನೋಡಿ ಮುದಡಿದ್ದ ಮನಸ್ಸು ಮತ್ತೆ ಅರಳಿತು. ಅಲ್ಲಿಂದಾಚೆ ಬಂಧುಗಳು, ಸ್ನೇಹಿತರು, ಹಾಗೂ ಬ್ಲಾಗ್ ಮಿತ್ರರ ಕರೆಗಳು ಒಂದಾದ ಮೇಲೊಂದರಂತೆ ಬಂದ ನಂತರ ಪರ್ವಾಗಿಲ್ಲ ಆತ್ಮೀಯತೆ ಇನ್ನೂ ಹಾಗೆ ಉಳಿದುಕೊಂಡಿದೆ ಎನಿಸಿತು. ಅಂದೇ ಸಂಜೆ ಗೆಳೆಯ ಮಂಜು ಮನೆಗೆ ಬಂದು ಎಂದಿನಂತೆ ತನ್ನ ಬಿಗ್ ಸ್ಮೈಲ್‍ನೊಂದಿಗೆ ಒಂದು ವಾರ್ಮ್ ಹಗ್ ಕೊಟ್ಟಾಗ ಅವನ ಮೇಲಿನ ಕೋಪವೆಲ್ಲಾ ನೀರಾಗಿ ಕರಗಿತು.
ಬಂದ ತಕ್ಷಣ ಬಹುಶಃ ಅದೇ ಸಂಜೆ ನನಗಿಷ್ಟವಾದ ಯಡಿಯೂರಿನ ಹೆರಿಗೆ ಆಸ್ಪತ್ರೆ ಮುಂದಿರುವ ಪಾನಿಪೂರಿ ತಿನ್ನಲು ಓಡಿದೆ. ಅಲ್ಲಿ ಸಾಲುಸಾಲಾಗಿದ್ದ ಬಜ್ಜಿ, ಇಡ್ಲಿ, ಪಾನಿಪೂರಿ ಅಂಗಡಿಗಳೆಲ್ಲ ಬೇರೆ ಬೇರೆ ಕಡೆ ಸ್ಥಳಾಂತರಗೊಡಿದ್ದವು. ಕೊನೆಗೂ ಹುಡುಕಿ ಪಾನಿಪೂರಿ, ಬಜ್ಜಿಗಳನ್ನು ತಿನ್ನುವಾಗ ಏಕೋ ಅವು ಅಷ್ಟಾಗಿ ರುಚಿಸಲಿಲ್ಲ. ಬಂದ ಮೂರು ದಿವಸಕ್ಕೆ ಊರಲ್ಲಿ ತಂಗಿಯ ಸೀಮಂತ ಕಾರಣವಿತ್ತು. ಅಲ್ಲಿಗೆ ಹೋದೆ. ಅಲ್ಲಿ ಅದ್ದೂರಿ ಸ್ವಾಗತವಿತ್ತು, ಆತಿಥ್ಯವಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಆತ್ಮೀಯತೆಯಿತ್ತು. ಆ ಆತಿಥ್ಯ, ಆ ಆತ್ಮೀಯತೆ, ಆ ಕಾಳಜಿ ಬೆಂಗಳೂರಿನಲ್ಲಿ ಇಲ್ಲದ್ದು ನೋಡಿ ಬೇಸರವಾಗಿದ್ದಂತು ಸತ್ಯ. ಆದರೆ ಸಮಾರಂಭದ ಗಡಿಬಿಡಿಯಲ್ಲಿ ಎಲ್ಲರೊಂದಿಗೆ ಕುಳಿತು ಮಾತನಾಡಲು ಆಗಲಿಲ್ಲ. ನನಗೆ ಬದುಕಲು ಹೇಳಿಕೊಟ್ಟ ಹಾಗೂ ಆ ಬದುಕು ಒಂದು ಹಂತಕ್ಕೆ ಬಂದು ತಲುಪಲು ಹೆಣಗಾಡಿದ ಅಕ್ಕನೊಂದಿಗೆ ಕುಳಿತು ಮಾತನಾಡಲು ಆಗಲೇ ಇಲ್ಲ. ಆ ಗಿಲ್ಟ್ ಹೊತ್ತುಕೊಂಡೇ ಬೆಂಗಳೂರಿಗೆ ವಾಪಾಸಾದೆ. ನನ್ನ ಎತ್ತಿ ಆಡಿಸಿದ ಸೋದರ ಮಾವಂದಿರು, ಮನೆಯ ಆಳುಮಕ್ಕಳು ನನ್ನ ನೋಡಿ ಹುಬ್ಬೇರಿಸಿ ನನಗೆ ಒಂದು ತರದ ಮುಜುಗುರವನ್ನುಂಟು ಮಾಡಿದರು. ಇನ್ನು ಕೆಲವರು ಹಿಂದೆ ತೀರ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದವರು ಈಗ ನನ್ನೊಂದಿಗೆ ಮಾತನಾಡುವದಕ್ಕೆ ಸಹ ಸಂಕೋಚಪಟ್ಟುಕೊಂಡರು. ನಾನು ತುಂಬಾ ಬೆಳೆದು ಬಿಟ್ಟಿದ್ದೇನೆಂಬ ಕಾರಣಕ್ಕೆ ಕೆಲವರು ನನ್ನ ಮಾತನಾಡಿಸಲು ಹೆದರಿಕೊಂಡರು. ಇನ್ನು ಕೆಲವರಿಗೆ ಹಮ್ಮು ಬಿಮ್ಮುಗಳು! ನನ್ನ ಬದುಕು ಮೂರಾಬಟ್ಟೆಯಾಗಿ ಕೂತಿದ್ದಾಗ ಮಂಡ್ಯದಲ್ಲಿ ತಮ್ಮ ಮನೆಯಲ್ಲಿರಿಸಿಕೊಂಡು ಓದಿಸಿದ್ದ ಅತ್ತಿಗೆ, ಅಷ್ಟೊಂದು ಆತ್ಮೀಯವಾಗಿದ್ದ ಅತ್ತಿಗೆ ಸಮಾರಂಭಕ್ಕೆ ಬಂದಾಗ ಬರಿ ಒಂದೆರಡು ಮಾತುಗಳಲ್ಲಿ ಮಾತು ಮುಗಿಸಿದ್ದರು. ನಾನೇನು ಕಮ್ಮಿ? ಎನ್ನುವ ನನ್ನ ಅಹಂ ಕೂಡ ಅವರೊಂದಿಗೆ ಮಾತನಾಡದಂತೆ ತಡೆಹಿಡಿದುಬಿಟ್ಟಿತ್ತು. ನನಗೆ ಒಂದು ಸಂದಿಗ್ಧತೆ ಕಾಡುತ್ತದೆ. ನಾವು ಬೆಳೆಯುತ್ತಾ ಬೆಳೆಯುತ್ತಾ ಬದಲಾಗಿ ಬಿಡುತ್ತೇವೆಯಾ? ಅಥವಾ ನಮ್ಮ ಸುತ್ತಲಿನವರು ನಮ್ಮ ಬೆಳವಣಿಗೆಯನ್ನು ಕಂಡು ಅವರೇ ಬದಲಾಗಿ ಬಿಡುತ್ತಾರಾ? ಗೊತ್ತಿಲ್ಲ!
ನಾನು ಈ ಸಾರಿ ಬರುವಾಗ ಬೆಂಗಳೂರಿನಲ್ಲಿ ಒಂದು ಸೈಟ್ ತೆಗೆಯಲೇಬೇಕು ಎಂದು ನಿರ್ಧರಿಸಿಕೊಂಡು ಬಂದಿದ್ದೆ. ಏಕೆಂದರೆ ನನಗೊಂದು ಸೈಟ್ ಇಲ್ಲ ಎನ್ನುವ ಕಾರಣಕ್ಕೇನೆ ಹತ್ತಿರದವರಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅವಮಾನಕ್ಕೊಳಗಾಗಿದ್ದೇನೆ, ಕೀಳಾಗಿ ಕಾಣಲ್ಪಟ್ಟಿದ್ದೇನೆ. ನಮಗೆ ಬರುವ ಸಂಬಳ ಅಲ್ಲಿಗಲ್ಲಿಗೆ ಸಾಕಾಗುತ್ತಿರುವ ವಿಷಯ ಗೊತ್ತಿದ್ದರೂ ಮದುವೆಯಾಗಿ ಆರು ತಿಂಗಳಿಗೇ ಕೆಲವರು ‘ಅಲ್ಲೊಂದು ಸೈಟ್ ಇದೆ ತಗೊಳ್ತಿರಾ?’ ಎಂದು ಕೇಳಿ ನನ್ನ ಆರ್ಥಿಕ ಪರಿಸ್ಥಿತಿಯನ್ನು ಅಣಕಿಸಿದ್ದಿದೆ. ನಾನು ಸಾಮಾನ್ಯವಾಗಿ ಹೊರಗಿನವರು ಯಾರಾದರು ಏನಾದರು ಅಂದರೆ ತಲೆಕೆಡಿಸಿಕೊಳ್ಳುವದಿಲ್ಲ. ಆದರೆ ತೀರ ಹತ್ತಿರದವರು ನಮ್ಮ ಮುಂದೆ ಚನ್ನಾಗಿ ಮಾತಾಡಿ (ಶೇಕ್ಷಪೀಯರನ ಖಳನಾಯಕ ‘ಇಯಾಗೋ’ ತರ) ಹಿಂದೆ ನಮ್ಮ ಬಗ್ಗೆಯೇ ಪಿತೂರಿ ನಡೆಸುವವರನ್ನು ಕಂಡರೆ ನನ್ನ ಪಿತ್ತ ನೆತ್ತಿಗೇರುತ್ತದೆ. ಅಂಥ ಕಿಡಿಗೇಡಿಗಳಿಗೆ ನಾನು ಏನು ಎಂದು ನಿರೂಪಿಸಬೇಕಿತ್ತು. ಹೀಗಾಗಿ ಬಂದ ಮಾರನೇ ದಿನದಿಂದಲೇ ಸೈಟಿನ ಬೇಟೆ ಆರಂಭಿಸಿದೆ. ಅಬ್ಬಾ! ಆಸ್ತಿ, ಅಂತಸ್ತುಗಳ ಮುಂದೆ ಒಬ್ಬ ವ್ಯಕ್ತಿಯ ಒಳ್ಳೆಯತನ, ಪ್ರತಿಭೆ, ಕೌಶಲ್ಯಗಳೆಲ್ಲವೂ ಗೌಣ ಎನಿಸಿಬಿಡುತ್ತವಲ್ಲವೇ? ಎಂದು ನನಗೆ ಮನದಟ್ಟಾಗಿದ್ದು ಆಗಲೇ! ಆ ನಿಟ್ಟಿನಲ್ಲಿ ಸೈಟೊಂದನ್ನು ತೆಗೆಯಲೇಬೇಕು ಎಂಬ ಹಟದೊಂದಿಗೆ ಎಲ್ಲ ಕಡೆ ಹುಡುಕಿ ಹೊರಟೆ. ದಿನಾ ಬೆಳಿಗ್ಗೆ ಒಂಬತ್ತು ಗಂಟೆಗೆ ಮನೆ ಬಿಟ್ಟರೆ ಮತ್ತೆ ವಾಪಾಸಾಗುತ್ತಿದ್ದುದು ರಾತ್ರಿ ಏಳಕ್ಕೋ, ಎಂಟಕ್ಕೋ! ಅಂತೂ ಕೊನೆಗೆ ಗೆಳೆಯ ಮಂಜುವಿನ ಸಹಾಯದಿಂದ ರಾಜ ರಾಜೇಶ್ವರಿ ನಗರದಲ್ಲಿ ಒಂದನ್ನು ತೆಗೆದುಬಿಟ್ಟೆ.
ನಾನು ವೀಸಾವನ್ನು extend ಮಾಡಲು ಪ್ರಯತ್ನಿಸಿದೆ. ಸಾಧ್ಯವಾಗಲೇ ಇಲ್ಲ. ಆಗಿದ್ದರೆ ಇನ್ನೊಂದಿಷ್ಟು ದಿನ ಬೆಂಗಳೂರಿನಲ್ಲಿ ಸುಂದರ ಕ್ಷಣಗಳನ್ನು ಕಳೆಯಬಹುದಿತ್ತು. ಈ ನಡುವೆ ನನ್ನ ಕಾಲೇಜು ಗೆಳೆಯ ಶರತ್‍ನನ್ನು ಭೇಟಿ ಮಾಡಿ ಅವನ ಆರೋಗ್ಯದ ಬಗ್ಗೆ ವಿಚಾರಿಸಿದೆ. (ಅವನಿಗೆ ನಾಲ್ಕು ವರ್ಷಗಳ ಹಿಂದೆ kidney transplent ಆಗಿದೆ) ಈಗ ಪರ್ವಾಗಿಲ್ಲ ಮೊದಲಿಗಿಂತ ಲವಲವಿಕೆಯಿಂದ ಇದ್ದಾನೆ ಅನ್ನಿಸಿತು. ಇನ್ನೊಬ್ಬ ಕಾಲೇಜು ಗೆಳೆಯ ಮಂಡ್ಯದ ರಾಜೀವನನ್ನು ಭೇಟಿಯಾಗಲಾಗಲಿಲ್ಲ. ಕಾರಣ ಇಬ್ಬರಿಗೂ ಪುರುಸೊತ್ತು ಮಾಡಿಕೊಳ್ಳಲಾಗಲಿಲ್ಲ. ದೂರದ ಉಡುಪಿಯಿಂದ ಇನ್ನೊಬ್ಬ ಜೀವದ ಗೆಳೆಯ ರಾಘು ಬಂದಿದ್ದ. ನಾನು, ಮಂಜು ಮತ್ತು ಅವನು ಸೇರಿ ಹಳೆಯ ನೆನಪುಗಳ ಮೆರವಣಿಗೆಯಲ್ಲಿ ಮುಳುಗಿಹೋದೆವು. ಇಬ್ಬರೂ ಸೇರಿ ಮದುವೆಯನ್ನು ನಿರಾಕರಿಸುತ್ತಿರುವದರ ಬಗ್ಗೆ ಗೆಳೆಯ ಮಂಜುವಿನ ಮನಸ್ಸನ್ನು ಬದಲಾಯಿಸಲು ನೋಡಿದೆವು. ಆದರೆ ಬಹಳಷ್ಟು ಗಂಡ ಹೆಂಡತಿ ಸಂಬಂಧಗಳು ಹೊಂದಣಿಕೆಯಾಗದೆ ಬರಿ ಮುಸುಕಿನ ಗುದ್ದಾಟದಲ್ಲಿಯೇ ಮುಗಿದು ಹೋಗುವದರಿಂದ ಅವನು ಅದೇಕೋ ಮದುವೆಯಾಗಲು ಮನಸ್ಸೇ ಮಾಡಲಿಲ್ಲ! ನಾವೂ ಬಲವಂತ ಮಾಡಲುಹೋಗಲಿಲ್ಲ! ಈ ಮಧ್ಯ ಒಂದಿಷ್ಟು ಪುಸ್ತಕಗಳನ್ನು ಹಾಗು ನಾನು ನೋಡಿದ್ದ, ನೋಡಿರದ ಕೆಲವು ಪ್ರಶಸ್ತಿ ವಿಜೇತ ಚಿತ್ರಗಳ ಸೀಡಿಗಳನ್ನು ಕೊಂಡುಕೊಂಡು ಬಂದೆ.
ಈ ಮಧ್ಯ ರಾಘು ನಾನು ದೂರದಿಂದ ಅಪರೂಪಕ್ಕೆ ಹೋಗಿದ್ದರಿಂದ ನನಗೆ ಬೇಜಾರಾಗದಿರಲೆಂದು ತನ್ನ ಒಂದಿಷ್ಟು ಕೆಲವು ಕಷ್ಟಗಳನ್ನು ನನ್ನೊಂದಿಗೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದ. ಎಂಥ ಸಂದರ್ಭದಲ್ಲೂ ಏನೆಲ್ಲವನ್ನು ಹಂಚಿಕೊಳ್ಳುತ್ತಿದ್ದ ರಾಘು ಇವನೇನಾ? ಎನಿಸಿಬಿಟ್ಟಿತು. “ಈ ಫಾರ್ಮಾಲಿಟಿಸ್ ಎಲ್ಲ ಬೇಡಪ್ಪಾ ಅದೇನು ಹೇಳು” ಎಂದು ನಾನೇ ಬಲವಂತ ಮಾಡಿ ಕೇಳಿದಾಗ ಎಲ್ಲವನ್ನು ಹೇಳಿಕೊಂಡ. ಮನಸ್ಸು ಒದ್ದೆಯಾಯಿತು. ರಿಸೆಶನ್ ನಿಂದ ಕೆಲಸ ಕಳೆದುಕೊಂಡ ಅವನ ಭಾವಂದಿರಿಗೆ ಈ ದೇಶದಲ್ಲಿ ಕೆಲಸ ಕೊಡಿಸಲು ಸಾಧ್ಯವಾ ನೋಡುತ್ತಿದ್ದೇನೆ. ನನ್ನ ಇನ್ನೋರ್ವ ಗೆಳೆಯ ಮಂಜು ಎಲ್ಲ ದಿನಗಳನ್ನೂ ನನ್ನೊಂದಿಗೆ ಕಳೆದು ನನಗೆ ಬೇಜಾರಾಗದಂತೆ ನೋಡಿಕೊಂಡ. ಬಹುಶಃ ಅವನ ಸಹಾಯವಿರದಿದ್ದರೆ ನಾನು ಸೈಟ್ ತೆಗೆಯುವದಕ್ಕೆ ಸಾಧ್ಯವಾಗುತ್ತಲೇ ಇರಲಿಲ್ಲ. ಇತ್ತೀಚಿಗೆ ಕೆಲಸದ ಒತ್ತಡದಿಂದ ಅವನ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆಯಾದರೂ ಅವನ ಕಣ್ಣುಗಳಲ್ಲಿ ಹೊಸ ಹೊಸ ಕನಸುಗಳು ಪುಟಿಯುತ್ತಲೇ ಇದ್ದವು. ಅದೆಲ್ಲಿಂದ ಹುಡುಕುತ್ತಾನೋ ಮಾರಾಯಾ ಹೊಸ ಹೊಸ ಪ್ರಾಜೆಕ್ಟ್ ಗಳನ್ನು! ನನಗೂ ಒಂದೆರಡು ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ ಇನ್ನೊಂದೆರಡು ವರ್ಷ ಇದ್ದು ಬಂದುಬಿಡು ಮಾರಾಯ. ಇಲ್ಲೇ ಏನಾದರು ಮಾಡೋಣ ಎಂದು ಹೇಳಿದಾಗ ನನ್ನ ಕಣ್ಣುಗಳು ತುಂಬಿ ಬಂದವು. ಅವನೇ ನನಗೆ ಹೊಸ ಹೊಸ ಕನಸುಗಳನ್ನು ಕಟ್ಟಿಕೊಟ್ಟು ಹೀಗ್ಹೀಗೆ ಮಾಡೋಣ ಎಂದು ಹೇಳಿದ. ನಾನು ಸರಿ ಎಂದು ಬಂದೆ. ಈ ಸಾರಿ ಮಾತ್ರ ನಾವಿಬ್ಬರೂ ನಾಟಕ, ಸಿನಿಮಾ ಎಂದು ಎಲ್ಲೂ ಸುತ್ತಾಡಲಾಗಲಿಲ್ಲ.
ಇರುವ ಒಂದು ತಿಂಗಳ ರಜೆ ಬರಿ ಸೈಟ್ ಹುಡುಕುವದರಲ್ಲಿಯೇ ಮುಗಿದುಹೋಯಿತು. ಈ ಮಧ್ಯ ನನ್ನ ಬ್ಲಾಗ್ ಮಿತ್ರರನ್ನು ಒಂದೆಡೆ ಕಲೆಹಾಕಬೇಕು, ಅವರೊಂದಿಗೆ ಮನದಣಿಯೇ ಮಾತಾಡಬೇಕು ಎನ್ನುವ ಆಸೆ ಕೊನೆ ಘಳಿಗೆಯಲ್ಲಿ ಕೂಡಿಬಂತು. ನನಗೆ ಇರುವ ಅಲ್ಪ ಸಮಯದಲ್ಲಿ ಎಲ್ಲ ಮಿತ್ರರನ್ನು ಕರೆಯಲಾಗಲಿಲ್ಲ. ಕರೆದವರಲ್ಲಿ ಕೆಲವರು ಬಂದೂ ಇರಲಿಲ್ಲ. ಅಲ್ಲಿ ಸಾಹಿತ್ಯಿಕ ವಿಷಯದ ಬಗ್ಗೆ ಮಾತನಾಡಲಾಗಲೇ ಇಲ್ಲ. “ಸಂಪದ” ಸಂಪಾದಕ ಹರಿಪ್ರಸಾದ್ ಅವರು ಮುಂದೆ ಎಂದಾದರು ಊಟ, ತಿಂಡಿ ಅಂತೆಲ್ಲ ಇಟ್ಟುಕೊಳ್ಳದೆ ಬರಿ ಮಾತನಾಡಲೆಂದೇ ಸೇರೋಣವೆಂದರು. ನಾನು ಆಗಲಿ ಎಂದೆ. ಪ್ರಕಾಶ್ ಹೆಗಡೆಯವರು ಸದಾ ನಗು ನಗುತ್ತಾ ಎಲ್ಲರನ್ನು ನಗಿಸುತ್ತಾ ಬಾಳುವ ಇಂಟರೆಸ್ಟಿಂಗ್ ವ್ಯಕ್ತಿ ಅನಿಸಿತು. ಆ ದಿನ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಶಿವು ಮತ್ತು ಮಲ್ಲಿಕಾರ್ಜುನವರಿಂದ ಫೋಟೊ ತೆಗೆಸಿಕೊಂಡಿದ್ದು ಹೆಮ್ಮೆಯ ಮತ್ತು ಖುಶಿಯ ಸಂಗತಿಯಾಗಿತ್ತು. ಅವನ್ನೇ ಜಿ. ಮೋಹನ್ ಅವರು ಕನ್ನಡ ಬ್ಲಾಗರ್ಸ್ನಲ್ಲಿ ಹಾಕಿದ್ದರು. ಅದಕ್ಕೆ ಅವರಿಗೆ ನಾನು ಆಭಾರಿಯಾಗಿದ್ದೇನೆ. ಅವರನ್ನು ಭೇಟಿಯಾಗಲು ಸಾಧ್ಯವಾಗಲೇ ಇಲ್ಲ. ಎಲ್ಲ ಮುಗಿಸಿ ಹೊರಡುವಾಗ ನನ್ನೊಂದಿಗಿದ್ದಿದ್ದು ಅವರೊಂದಿಗೆ ಕಳೆದ ಅದ್ಬುತ ಕ್ಷಣಗಳ ನೆನಪುಗಳು ಮಾತ್ರ!
ನಾನು ಹೊರಡುವ ದಿನ ಹತ್ತಿರ ಬಂದಂತೆ ರೇಖಾಳಿಗೂ, ಮಂಜುವಿಗೂ ಕಸಿವಿಸಿ ಶುರುವಾಯಿತು. ಮಗಳು ಭೂಮಿ ಮಾತ್ರ ಇದ್ಯಾವುದರ ಪರಿವೆಯಿಲ್ಲದೆ ಎಂದಿನಂತೆ ನಗುಮುಖ ಹೊತ್ತು ಓಡಾಡುತ್ತಿದ್ದಳು. ರೇಖಾಳಿಗೆ ಆಗಷ್ಟೆ ಸರಕಾರಿ ಕೆಲಸ ಸಿಕ್ಕಿದ್ದರಿಂದ ಅವಳು ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಬಿಟ್ಟು ಬರಲು ಸಿದ್ಧಳಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಹೆಂಡತಿ ಹಾಗು ಮಗಳನ್ನು ಬಿಟ್ಟು ಹೊರಡಬೇಕಾಯಿತು. ನನಗೆ ಹೇಗೂ ಸರಕಾರಿ ಕೆಲಸ ಇರುತ್ತೆ ಇದೊಂದು ವರ್ಷ ಇದ್ದು ಬಿಟ್ಟು ಬಾ ಎಂದು ಹೇಳಿದಳು. ಇದೇ ಮಾತನ್ನು ಅವಳ ಅಮ್ಮನ ಮನೆಕಡೆಯವರು ಯಾರಾದರು ಹೇಳುತ್ತಾರೇನೋ ಎಂದು ಕೊನೆ ಘಳಿಗೆಯವರೆಗೆ ಕಾಯ್ದೆ. ಊಹೂಂ, ಅವರು ಈ ವಿಷಯದ ಬಗ್ಗೆ ಚಕಾರವೆತ್ತಲಿಲ್ಲ. ಏಕೋ ಬೇಸರವಾಯಿತು. ನಾನು ಹೊರಡುವದಿನ ನನ್ನ ಅಕ್ಕನ ಮಗ ರಾಜು ಬೆಂಗಳೂರಿನಲ್ಲಿದ್ದುದರಿಂದ ಅವನು ನನ್ನ ನೋಡಲು ಬಂದ. ರಾಘು ಮತ್ತು ಮಂಜು ಬೆಳಿಗ್ಗೆಯಿಂದ ಜೊತೆಯಲ್ಲಿಯೇ ಇದ್ದರು. ಮಂಜುವಿಗೆ ಎರಡು ದಿನದಿಂದಲೇ ಜ್ವರವಿತ್ತು. ಆದರೆ ಅಂದು ಜಾಸ್ತಿಯಾಯಿತು. ಹಂದಿಜ್ವರದ ಭೀತಿ ಬೆಂಗಳೂರಿನಲ್ಲಿ ಹೆಚ್ಚಾಗಿದ್ದರಿಂದ ಅವನನ್ನು ಮೊದಲು ಆಸ್ಪತ್ರೆಗೆ ಹೋಗು ಎಂದು ಹೇಳಿದೆವು. ಅವರಣ್ಣ ಬಂದು ಕಾರಿನಲ್ಲಿ ಕರೆದುಕೊಂಡು ಹೋದರು. ಹೋಗುವಾಗ ಮುಖ ಬಾಡಿತ್ತು. ಅದು ಜ್ವರಕ್ಕಿಂತ ಹೆಚ್ಚಾಗಿ ನಾನು ಹೋಗುತ್ತಿದ್ದೇನೆ ಎಂಬ ಕಾರಣಕ್ಕೇ ಹೆಚ್ಚು ಬಾಡಿತ್ತು. ಸ್ವಲ್ಪ ಹೊತ್ತಿನ ನಂತರ ಮಂಜುವಿಗೆ ಫೋನ್ ಮಾಡಿ ವಿಚಾರಿಸಿದಾಗ ಬರಿ ವೈರಲ್ ಫಿವರ್ ಎಂದು ತಿಳಿದು ಮನಸ್ಸಿಗೆ ಎಷ್ಟೋ ಸಮಾಧಾನವಾಗಿತ್ತು. ನಂತರ ರಾಘು ಅಂದೇ ಬೆಂಗಳೂರಿನ ಇನ್ನೊಂದು ಮೂಲೆಯಲ್ಲಿರುವ ಅವರಕ್ಕನನ್ನು ಭೇಟಿ ಮಾಡಿ ತಾನು ಕೆಲಸ ಮಾಡುವ ಜಾಗ ಉಡುಪಿಗೆ ಹೋಗಬೇಕಾಗಿದ್ದರಿಂದ ಅತ್ಯಂತ ಬೇಜಾರಿನಿಂದಲೇ ಹೊರಟ. ಅವನ ನಂತರ ನಮ್ಮ ರಾಜಾನೂ ಹೊರಟ ಮೇಲೆ ಮನೆ ಮನಗಳೆಲ್ಲ ಖಾಲಿ ಖಾಲಿ ಎನಿಸಿ ಬರುವ ದುಃಖವನ್ನು ಹತ್ತಿಕ್ಕಿ ಹಿಡಿದೆ. ಆ ಬಳಿಕ ಮನೆ ತುಂಬಾ ಬರಿ ಮೌನವೇ ಆವರಿಸಿತ್ತು. ಹೀಗೆ ಕುಳಿತಿರುವಾಗ ರಾತ್ರಿ ಎಂಟು ಘಂಟೆಗೆ ಗೆಳೆಯ ಮಂಜು ಫೋನ್ ಮಾಡಿ ‘ಉದಯ ನೀನು ಹೋಗುತ್ತಿದ್ದೀಯ ಇನ್ನು ಬರುವದು ಒಂದು ವರ್ಷದ ನಂತರವೇ. ನಾನು ಒಂಟಿ ಎನಿಸುತ್ತಿದೆ. ನೀನು ಹೋರುಡುವ ದಿನವೇ ಪೇಶೆಂಟಾಗಿ ಮಲಗಿದ್ದೇನೆ. ಇಲ್ಲವಾದರೆ ನಾನೇ ನಿಮ್ಮನ್ನು ಏರ್ ಪೋರ್ಟಿಗೆ ಡ್ರಾಪ್ ಮಾಡುತ್ತಿದ್ದೆ’ ಎಂದು ಇದ್ದಕ್ಕಿದ್ದಂತೆ ಜೋರಾಗಿ ಅಳತೊಡಗಿದರು. ಅಲ್ಲಿಯವರೆಗೆ ತಡೆಹಿಡಿದಿದ್ದ ನನ್ನ ದುಃಖದ ಕಟ್ಟೆಯೊಡೆಯಿತು. ಎಂದೂ ಯಾವತ್ತೂ ಅಳದ ಮಂಜು ಅಂದು ಅತ್ತದ್ದು ಮಾತ್ರ ನನ್ನ ಮನಸ್ಸನ್ನು ಹಿಂಡಿಬಿಟ್ಟಿತು. ಮನಸ್ಸು ತಡೆಯಲಿಲ್ಲ. ರೇಖಾಳೂ “ನೀವು ಹೊರಡುವ ಸಮಯದಲ್ಲಿ ಅವರು ಜೊತೆಯಲ್ಲಿದ್ದರೆ ಇಬ್ಬರಿಗೂ ಸಮಾಧಾನ ಹೋಗಿ ಕರೆದುಕೊಂಡು ಬಿಡಿ” ಎಂದು ಹೇಳಿದಳು. ನಾನು ರಾತ್ರಿ ಒಂದು ಗಂಟೆಗೆ ಏರ್ ಪೋರ್ಟಿನಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು. ಮನೆಯಿಂದ ಹೊರಡಲು ಇನ್ನೂ ಮೂರು ಗಂಟೆ ಬಾಕಿಯಿತ್ತು. ತಕ್ಷಣ ದೂರದ ರಾಜ ರಾಜೇಶ್ವರಿ ನಗರದಲ್ಲಿರುವ ಅವರ ಮನೆಗೆ ಹೋಗಿ ನೋಡಿಕೊಂಡು ಬರಬಹುದೆಂದು ಗಾಡಿ ತೆಗೆದುಕೊಂಡು ಹೊರಟೆ. ತುಂಬಾ ಮ್ಲಾನವದನರಾಗಿದ್ದರು. ನನ್ನ ನೋಡಿದವರೇ ಅಂಥ ಸ್ಥಿತಿಯಲ್ಲೂ ಮನೆಗೆ ಬರಲು ಒಪ್ಪಿದರು. ಕೊನೆಗೆ ಅವರ ಅಮ್ಮನ ಒಪ್ಪಿಗೆ ಪಡೆದು ಅವರಿಗೆ ಜರ್ಕಿನ್ ಹಾಗು ಮಫ್ಲರ್ ಹಾಕಿಸಿಕೊಂಡು ನನ್ನ ಎಲಿಚೇನಹಳ್ಳಿ ಮನೆಗೆ ಕರೆದುಕೊಂಡು ಬಂದೆ. ಬಂದ ನಂತರ ಇಬ್ಬರೂ ಮನಸ್ಪೂರ್ತಿ ಮಾತಾಡಿ ಮಲಗಿದೆವು. ಇಬ್ಬರಿಗೂ ಅದೆಂಥದೋ ಸಮಾಧಾನ. ರಾತ್ರಿ ಹನ್ನೆರಡು ಗಂಟೆಗೆ ಎದ್ದು ರೆಡಿಯಾಗಿ ಮಲಗಿರುವ ಮಗಳ ಚಿತ್ರವನ್ನು ಮನದ ತುಂಬಾ ಹೊತ್ತುಕೊಂಡು ರೇಖಾ ಮತ್ತು ಮಂಜುವಿಗೆ ವಿದಾಯ ಹೇಳಿ ಮಂಜುವಿನ ಅಣ್ಣನ ಕಾರಿನಲ್ಲಿ ಏರ್ ಪೋರ್ಟಿಗೆ ಹೊರಟೆ. ಹೋಗುವಾಗ ದಾರಿಯುದ್ದಕ್ಕೂ ಬೆಂಗಳೂರಿನ ತಂಗಾಳಿಯನ್ನು ಕೊನೆಯದೆಂಬಂತೆ ಒಮ್ಮೆ ಆಸ್ವಾದಿಸಿದೆ. ಇಮಿಗ್ರೇಶನ್ ಚೆಕ್ ಮುಗಿಸಿ ವೇಟಿಂಗ್ ಲಾಂಜಿನಲ್ಲಿ ಕುಳಿತಂತೆ ನೆನಪುಗಳು ಮತ್ತೆ ಮೆರವಣಿಗೆ ಹೊರಟವು. ಈ ನೆನಪುಗಳನ್ನೇ ಹೊತ್ತು ವಿಮಾನ ಹತ್ತಿದೆ. ವಿಮಾನ ಹಾರಾಟ ಆರಂಭಿಸಿ ಸ್ವಲ್ಪ ಹೊತ್ತಿಗೆ ಕನಸಿನ ನಿದ್ರೆ ಆವರಿಸಿಕೊಂಡಿತು. ಈ ನೆನಪುಗಳೆಲ್ಲಾ ಆ ಕನಸುಗಳಲ್ಲಿ ಕಳೆದುಹೋದವು.
-ಉದಯ ಇಟಗಿ
ಕಥನ ಮಥನ
1 ವಾರದ ಹಿಂದೆ
21 ಕಾಮೆಂಟ್(ಗಳು):
ಉದಯ ಅವರೆ...
ಊರಿಗೆ ಹೋದರೆ ಹಿಂದಿರುಗುವಾಗಿನ ಕ್ಷಣಗಳನ್ನು, ತಳಮಳಗಳನ್ನು ಹಾಗೆ ಹಾಗೆಯೇ ಮೂಡಿಸಿದ್ದೀರಿ.
ಸೆಪ್ಟೆಂಬರ್ ಹತ್ತರಂದು ನಾವಿರುವಲ್ಲಿಂದ ಅತ್ತೆಮಾವನವರು(ನನ್ನ ಯಜಮಾರ ತಂದೆತಾಯಿ) ಭಾರತಕ್ಕೆ ಮರಳಿದರು. ಮನೆಯೆಲ್ಲ ಭಣ ಭಣ.
ಎರಡು ತಿಂಗಳ ಬೇಸಿಗೆರಜ ಪೂರ್ತಿ ಅಜ್ಜಿತಾತರೊಂದಿಗೆ ಕಳೆದ ನಮ್ಮ ಮಗ ಇದೀಗ ಮನೆಯ ಮೂಲೆ ಮೂಲೆಯೊಳಗೂ ಅಜ್ಜಿತಾತರ ನೆನಪನ್ನು, ಅವರು ಕೊಟ್ಟುಹೋದ ಪ್ರೀತಿಯನ್ನು ಅರಸಿ ಅರಸಿ ಬಿಕ್ಕುತ್ತಾನೆ. ನಮ್ಮ ಮನಃಸ್ಥಿತಿಯೂ ನಮ್ಮ ಮಗನ ಮನಃಸ್ಥಿತಿಗಿಂತ ಹೊರತಾಗೇನಿಲ್ಲ. ಒಳಗೊಳಗೇ ಬಿಕ್ಕು.
ನಮ್ಮೊಳಗಿರುವಂಥದ್ದೇ ಮತ್ತೊಂದುಪರಿಯದಿದು ನಿಮ್ಮ ನೋವು. ಮಾಸಲು ಸುಮಾರು ದಿನ ಬೇಕು. ಮಾಸಲೇಬೇಕಾದ್ದು ಅನಿವಾರ್ಯ ಕೂಡ.
ಉದಯ್ ನಿಮ್ಮ ಈ ದೀರ್ಘ ಲೇಖನವನ್ನು ಓದುತ್ತಾ ಓದುತ್ತಾ ಇದೆಲ್ಲಾ ನನ್ನದೇ ಬದುಕಿನ ಇನ್ನೊಂದು ಮುಖಗಳೇನೋ ಎಂಬಂತೆ ಕಂಡು ಮನಸ್ಸಿನಲ್ಲಿ ಒದ್ದೆಯಾದ ಅನುಭವವಾಯಿತು. ನೀವು ಅನುಭವಿಸಿದ ಸಂತೋಷ, ದುಃಖ, ವಿಷಾದ ಎಲ್ಲವನ್ನೂ ಚುಟುಕಾಗಿ ಆದರೆ ಪರಿಣಾಮಕಾರಿಯಾಗಿ ತೆರೆದಿಟ್ಟುಬಿಟ್ಟಿದ್ದೀರಿ. ನಿಜವಾದ ಆತ್ಮಕಥನದ ಟ್ರಯಲ್ ಇದ್ದಂತಿದೆ ಈ ಬರಹ. ಒಂದು ತಿಂಗಳ ನಿಮ್ಮ ಬೆಂಗಳೂರು ಭೇಟಿ, ಮನುಷ್ಯ ಸಂಬಂದಗಳು, ಮನುಷ್ಯನ ಮನಸ್ಸಿನ ಜಂಜಾಟ, ದೊಡ್ಡಾಟ, ಸಣ್ಣಾಟಗಳನ್ನು ನಿಮಗೆ ತೆರೆದಿಟ್ಟಿದ್ದರೆ ಆಸ್ಚರ್ಯವೇನಿಲ್ಲ. ಇವುಗಳನ್ನು ಇಂತಹುದೊಂದು ಲೇಖನದಲ್ಲಿ ಬರೆದು ಸುಮ್ಮನಾಗುವುದಕ್ಕಿಂತ, ಒಂದು ಕಥೆಯಾಗೋ, ಕಿರುಕಾದಂಬರಿಯಾಗೋ ರೂಪಾಂತರಿಸುವ ನಿಟ್ಟಿನಲ್ಲಿ ಯೋಚನೆ ಂಆಡಿ ನೋಡಿ. ಆಗ ನೀವು ಭಾರತದಿಂದ ದೂರ ಇದ್ದುಕೊಂಡು ಇಲ್ಲಿನ ಬಗ್ಗೆ ಅಲ್ಲಿ ಯೋಚಿಸುತ್ತಾ ಒಮ್ಮೊಮ್ಮೆ ದುಃಖ, ವಿಷಾದ, ಯೋಚನೆ ಇವುಗಳಿಂದ ಶೂನ್ಯವನ್ನು ದಿಟ್ಟಿಸುವ ಬದಲು ಮನಸ್ಸಿಗೆ ಸವಾಲು ಒಡ್ಡಿಕೊಂಡಂತಾಗುತ್ತದೆ. ನೀವೇ ಹೇಳಿದಂತೆ ಬದುಕು ಸುಖವೂ ಅಲ್ಲ ದುಃಖವೂ ಅಲ್ಲ, ಅದು ಇವೆರಡರ ಮೊತ್ತ!!!!!!!
Uday avare....
E yella thumulagalu horadeshadalli iruvavarige idde iruthade... adikke heluvudu alve janani janma bhoomishcha swargaadapi gariyasi antha....
Nenapugalu nimage E dhukagalinda horabaralu shakthi needali endu haaraisuththene....
ಉದಯ್ ಸರ್,
ನಾನು ಭಾರತಕ್ಕೆ ಹೋದಾಗ ಇ ಸಲ ಇಂಥಹುದೇ ಅನುಭವಗಳಾದವು, ನಮ್ಮ ದೇ ಜನ ರ ನಡವಳಿಕೆ ತುಂಬಾ ಸೋಜಿಗವೆನಿಸಿತು, ಆತ್ಮೀಯ ಸ್ನೇಹಿತರ ಪ್ರೀತಿಯೊಂದೆ ಶಾಶ್ವತ ಎನಿಸಿಬಿಟ್ಟಿತು. ತುಂಬಾ ಒಳ್ಳೆಯ ಬರಹ. ದೇಶ ಬಿಟ್ಟು ಹೊರದೇಶದಲ್ಲಿರುವ ನಮಗೆ ಸದಾ ದೇಶದ ಮೇಲಿನ ತುಡಿತ ಇರುತ್ತದೆ, ಆದರೆ ಕೆಲವು ಅನಿವಾರ್ಯತೆಗಳು ನಮ್ಮ ಕೈ ಕಟ್ಟಿ ಹಾಕಿವೆ,
ತುಂಬಾ ಇಷ್ಟವಾಯಿತು ಬರಹ
ನಿಮ್ಮ ಮನಃಸ್ಥಿತಿಯನ್ನು, ದುಗುಡವನ್ನು ಚೆನ್ನಾಗಿ ಬಿಂಬಿಸುತ್ತಿದೆ ಲೇಖನ. ಆತ್ಮೀಯರನ್ನು ಪರಕೀಯರನ್ನಾಗಿಸಲು, ಪರಕೀಯರನ್ನು ಆತ್ಮೀಯರನ್ನಾಗಿಸಲು ಕಾಲನ ಕೈವಾಡವೇ ಕಾರಣ. ಏನೇ ಆದರೂ, ಹೋದರೂ, ಕಾಲನ ವಶಕ್ಕೆ ಸಿಲುಕದೇ, ಸ್ನೇಹಿತರನ್ನು, ಪ್ರೀತಿಪಾತ್ರರನ್ನು ಸದಾ ಕಾಪಾಡಿಕೊಳ್ಳಲು ಸಹಕರಿಸುವುದು ನಮ್ಮೊಳಗಿನ ನಿರ್ಮಲ ಸ್ನೇಹ ಹಾಗೂ ಪ್ರೇಮ ಮಾತ್ರ ಅಲ್ಲವೇ? ಆದಷ್ಟು ಬೇಗ ನೀವು ಮತ್ತೆ ನಿಮ್ಮ ಕುಟುಂಬದವರನ್ನು, ಸ್ನೇಹಿತರನ್ನು ಸೇರುವಂತಾಗಲೆಂದು ಹಾರೈಸುವೆ.
ಉದಯ್ ಸರ್,
ಒಂದು ತಿಂಗಳು. ಏನೆಲ್ಲಾ ನಡೆಸಿಬಿಡುತ್ತದೆ ಅಲ್ವಾ....
ನಾವು ಬೆಳೆಯುತ್ತಾ ಬೆಳೆಯುತ್ತಾ ಬದಲಾಗಿ ಬಿಡುತ್ತೇವೆಯಾ? ಅಥವಾ ನಮ್ಮ ಸುತ್ತಲಿನವರು ನಮ್ಮ ಬೆಳವಣಿಗೆಯನ್ನು ಕಂಡು ಅವರೇ ಬದಲಾಗಿ ಬಿಡುತ್ತಾರಾ? ಗೊತ್ತಿಲ್ಲ! ಇದಕ್ಕೆ ನಾನು ಉತ್ತರವನ್ನು ಹುಡುಕುತ್ತಿದ್ದೇನೆ. ಆದರೆ ಅದೇನೊ ಗೊತ್ತಿಲ್ಲ ಹಳಬರು ಹೀಗೆ ಹಿಂದೆ ಸರಿದರೆ ಹೊಸಬರು ಗೆಳೆಯರಾಗುತ್ತಿರುತ್ತಾರೆ. ಇದು ಇತ್ತೀಚಿನ ನನ್ನ ಬದುಕಿನ ಸತ್ಯಾನುಭವ.
ಖುಷಿ, ದುಃಖ, ಸ್ವಲ್ಪ ಆಹಂ, ಜೊತೆಗೊಂದಿಷ್ಟು ಆತ್ಮೀಯತೆ, ಪ್ರೀತಿ, ಮಮತೆ ವ್ಯಾಕುಲತೆ, ಗಡಿಬಿಡಿ, ಆತಂಕ ಎಲ್ಲಾವನ್ನು ಅನುಭವಸಿದ ಒಂದು ತಿಂಗಳ ನಿಮ್ಮ ಆನುಭವ ಪ್ರತಿಯೊಬ್ಬರ ಆನುಭವವೂ ಹೌದೆನ್ನಿಸುತ್ತದೆ...
ಆಹಾಂ, ಬ್ಲಾಗ್ ಗೆಳೆಯರನ್ನು ಒಟ್ಟಿಗೆ ಸೇರಿಸಿ ಸುಂದರವಾದ ಔತಣ ಮತ್ತು ಮಾತಿಗೆ ಥ್ಯಾಂಕ್ಸ್. ಆದರೆ ನಾನು ತೆಗೆದ ಫೋಟೊಗಳನ್ನು ನಿಮಗೆ ಕಳಿಸಲಾಗದಿದ್ದಕ್ಕೆ ಕ್ಷಮಿಸಿ. ನಂತರ ನನ್ನದೇ ಕೆಲಸದ ಒತ್ತಡದಲ್ಲಿ ಬಿದ್ದೆ. ಈಗ ನಾಳೆಯೇ ನಿಮ್ಮ ವಿಳಾಸಕ್ಕೆ ಕಳಿಸಿಬಿಡುತ್ತೇನೆ...
ಧನ್ಯವಾದಗಳು.
ಉದಯ,
ಜೀವನ ಎಷ್ಟು ವಿಚಿತ್ರ ಅಲ್ಲವೆ? ಒಂದು ಕ್ಷಣಕ್ಕೆ ಬಿಸಿಲಹನಿ; ಮತ್ತೊಂದು ಕ್ಷಣದಲ್ಲಿ ಮಳೆಹನಿ!
ಉದಯರೇ
ನಿಮ್ಮ ಮನದಾಳದ ಈ ಆಪ್ತ ಬರಹದಲ್ಲಿ ನಿಮ್ಮ ಆತ್ಮೀಯ ಮಿತ್ರರ ಬಗೆಗಿನ ನಿಮ್ಮ ಪ್ರೀತಿ, ಅವರು ನಿಮ್ಮ ಮೇಲಿಟ್ಟಿರುವ ವಿಶ್ವಾಸ, ಎಲ್ಲವು ವ್ಯಕ್ತವಾಗುತ್ತದೆ. ನೀವೊಬ್ಬ ಭಾವಜೀವಿ ಎ೦ಬುದನ್ನು ಮತ್ತೆ ಮತ್ತೆ ಸಾದರ ಪಡಿಸಿದ್ದೀರಿ. ನಿಮ್ಮನ್ನು ಖುದ್ದು ಕ೦ಡಾಗಲು ನನಗೆ ಮೊದಲ ನೋಟದಲ್ಲೇ ನಿಮ್ಮ ವ್ಯಕ್ತಿತ್ವ ನನಗಿಷ್ಟವಾಗಿತ್ತು. . ತಾಯ್ನೆಲ ಬಿಟ್ಟು ಹೊರಗಿರುವ ಎಲ್ಲ ಮನಗಳ ತುಡಿತ ಹೀಗೆಯೇ ಇರುತ್ತೆ ಅ೦ತ ಹೇಳೋಕಾಗೋಲ್ಲ, ಈ ಬರಹ ತು೦ಬಾನೆ ಭಾವಪೂರ್ಣ ವಾಗಿದೆ.
fantastic writing dear. i liked it ooodi.
ಶಾಂತಲಾ ಅವರೆ,
ನಿಮ್ಮ ಸ್ಫೂರ್ತಿದಾಯಕ ಹಾಗು ಸಮಾಧಾನದ ಮಾತುಗಳಿಗೆ ತುಂಬಾ ತುಂಬಾ ಥ್ಯಾಂಕ್ಸ್! ಏಕೋ ಏನೋ ನನ್ನೆದೆಯ ನೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದ್ದರಿಂದ ಇಷ್ಟೆಲ್ಲ ಬರೆಯಬೇಕಾಯಿತು. ನನಗೆ ಈ ಸಾರಿ ಬೆಂಗಳೂರಿಗೆ ಹೋದಾಗ ಏಕೋ ಮನುಷ್ಯ ಮನುಷ್ಯರ ನಡುವಿನ ಸಂಬಂಧ ಕ್ಷೀಣಿಸಿ ನಾವೆಲ್ಲಾ ದ್ವೀಪಗಳಾಗುತ್ತಿದ್ದೇವೇನೋ ಎಂದನಿಸಿತು.
ನಿಮ್ಮ ಅತ್ತೆ ಮಾವಂದಿರು ನಿಮ್ಮೊಂದಿಗೆ ಎರಡು ತಿಂಗಳು ಇದ್ದು ಕೊಟ್ಟು ಹೋದ ಪ್ರೀತಿಯ ಬಗ್ಗೆ ಬರಿದಿದ್ದೀರಿ. ಅದನ್ನೇ ಮತ್ತೆ ಮತ್ತೆ ಅರಸಿಕೊಂಡು ಹೊರಡುವ ನಿಮ್ಮ ಮತ್ತು ನಿಮ್ಮ ಮಗನ ಮನಸ್ಥಿತಿ ಮತ್ತೆ ಮೊದಲಿನ ಸ್ಥಿತಿಗೆ ಮರುಳಲೆಂದು ಹಾರೈಸುವೆ.
ಸತ್ಯನಾರಾಯಣ ಸರ್,
ಎಷ್ಟೊಂದು ವಿಚಿತ್ರ ನೋಡಿ! ನಮ್ಮ ಅನುಭವಗಳಿಗೆ ಇನ್ನೊಬ್ಬರ ಅನುಭವಗಳಿಗೆ ಎಷ್ಟೊಂದು ಸಾಮ್ಯವಿರುತ್ತದೆ. ನಾವು ಅದನ್ನು ಬರೆದು ಹೀಗೆ ಪ್ರಕಟಿಸಿದಾಗಲೇ ನಮಗೆ ಗೊತ್ತಾಗುವದು ಹಾಗೂ ಮನಸ್ಸುಗಳು ಹಗುರವಾಗುವದು.
ಇನ್ನು ಮನುಷ್ಯ ಸಂಬಂದಗಳು, ಮನುಷ್ಯನ ಮನಸ್ಸಿನ ಜಂಜಾಟಗಳ ಬಗ್ಗೆ ಕಥೆಯೋ, ಕಿರುಕಾದಂಬರಿಯೊಂದನ್ನು ಬರೆಯಲು ಹೇಳಿದ್ದೀರಿ. ನನಗೆ ಕಥೆ ಅಥವಾ ಕಾದಂಬರಿ ಬರೆಯಲು ಒಂಥರಾ ಅಲರ್ಜಿ! ಆದರೂ ಆ ನಿಟ್ಟಿನಲ್ಲಿ ಪ್ರಯತ್ನಿಸುವೆ. ಅಲ್ಲಿಯವರೆಗೆ ಬದುಕು ಸುಖವೂ ಅಲ್ಲ ದುಃಖವೂ ಅಲ್ಲ, ಅದು ಇವೆರಡರ ಮೊತ್ತ!!!!!!! ಎಂದು ಮತ್ತೆ ಮತ್ತೆ ನನ್ನಷ್ಟಕ್ಕೆ ನಾನೆ ಹೇಳಿಕೊಳ್ಳುವೆ.
ನಿಮ್ಮ ಸಾಂತ್ವನಕ್ಕೆ ಧನ್ಯವಾದಗಳು.
ಸುಧೇಶ್ ಅವರೆ,
ನೀವು ಹೇಳಿದಂತೆ ಹೊರದೇಶದಲ್ಲಿರುವವರಿಗೆ ತುಮುಲುಗಳು ಇದ್ದೇ ಇರುತ್ತವೆ. ಆದರೆ ಆ ತುಮುಲುಗಳನ್ನು ಹೊತ್ತುಕೊಂಡೇ ನಾವು ಅಲ್ಲಿ ಬದುಕಬೇಕಾದ ಅನಿವಾರ್ಯ ಪರಿಸ್ಥಿತಿ ಕೂಡ ಇರುತ್ತದೆ. ಅದೇ ಬದುಕಿನ ವಿಪರ್ಯಾಸ!
ನಿಮ್ಮ ಸಾಂತ್ವನದ ಮಾತುಗಳಿಗೆ ತುಂಬಾ ತುಂಬಾ ಥ್ಯಾಂಕ್ಸ್.
ಗುರುಮೂರ್ತಿಯವರೆ,
"ನಾನು ಭಾರತಕ್ಕೆ ಹೋದಾಗ ಈ ಸಲ ಇಂಥಹುದೇ ಅನುಭವಗಳಾದವು, ನಮ್ಮದೇ ಜನರ ನಡವಳಿಕೆ ತುಂಬಾ ಸೋಜಿಗವೆನಿಸಿತು, ಆತ್ಮೀಯ ಸ್ನೇಹಿತರ ಪ್ರೀತಿಯೊಂದೆ ಶಾಶ್ವತ ಎನಿಸಿಬಿಟ್ಟಿತು" ಅದು ಅವರ ಹೊಟ್ಟೆಉರಿಯೋ, ಸಣ್ಣತನವೋ, ಅಥವಾ ನಮ್ಮ ಅಹಂಕಾರವೋ ನಾವು ನಾವುಗಳೇ ಸೋಜಿಗವೆನಿಸಿಬಿಡುತ್ತೇವೆ. ಇಂಥ ಸಂದರ್ಭದಲ್ಲಿ ನೀವು ಹೇಳಿದಂತೆ ಆತ್ಮೀಯ ಸ್ನೇಹಿತರ ಪ್ರೀತಿಯೊಂದೇ ಶಾಶ್ವತ ಎನಿಸಿಬಿಡುತ್ತದಲ್ಲವೆ?
ಬರಹ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.
ತೇಜಸ್ವಿನಿಯವರೆ,
“ಆತ್ಮೀಯರನ್ನು ಪರಕೀಯರನ್ನಾಗಿಸಲು, ಪರಕೀಯರನ್ನು ಆತ್ಮೀಯರನ್ನಾಗಿಸಲು ಕಾಲನ ಕೈವಾಡವೇ ಕಾರಣ. ಏನೇ ಆದರೂ, ಹೋದರೂ, ಕಾಲನ ವಶಕ್ಕೆ ಸಿಲುಕದೇ, ಸ್ನೇಹಿತರನ್ನು, ಪ್ರೀತಿಪಾತ್ರರನ್ನು ಸದಾ ಕಾಪಾಡಿಕೊಳ್ಳಲು ಸಹಕರಿಸುವುದು ನಮ್ಮೊಳಗಿನ ನಿರ್ಮಲ ಸ್ನೇಹ ಹಾಗೂ ಪ್ರೇಮ ಮಾತ್ರ ಅಲ್ಲವೇ?” ಎಂಥ ಅದ್ಭುತ ಮಾತನ್ನು ಹೇಳಿದಿರಿ. ಆದರೆ ಒಮ್ಮೊಮ್ಮೆ ಹತ್ತಿರವಿದ್ದೂ ದೂರ ನಿಲ್ಲುವಂತೆ ನಮ್ಮ ಅಹಂ ನಮ್ಮನ್ನು ತಡೆಹಿಡಿದುಬಿಡುತ್ತದಲ್ಲವೆ? ಆದರೂ ನನಗೆ ಮನುಷ್ಯ ಸಂಬಂಧಗಳಲ್ಲಿ ಅಪಾರ ನಂಬಿಕೆ.
ಶಿವು ಅವರೆ,
ಹೊಸ ನೀರು ಹಳೆ ನೀರನ್ನು ಕೊಚ್ಚಿಕೊಂಡು ಹೋಗುವದು ಸಾಮಾನ್ಯ. ಆದರೆ ಸಂಬಂಧಗಳ ವಿಷಯದಲ್ಲಿ ಹಾಗಾಗಬಾರದು. ಮನುಷ್ಯ ಅಂದ ಮೇಲೆ ಖುಷಿ, ದುಃಖ, ಜೊತೆಗೊಂದಿಷ್ಟು ಆತ್ಮೀಯತೆ, ಪ್ರೀತಿ, ಮಮತೆ, ವ್ಯಾಕುಲತೆ, ಗಡಿಬಿಡಿ, ಆತಂಕ, ಕೋಪ ಇವೆಲ್ಲ ಇರುವದು ಸಾಮಾನ್ಯ. ಆದರೆ ಅಹಂಕಾರ ಇವೆಲ್ಲವನ್ನು ಮೀರಿ ನಿಂತಾಗ ಬದುಕು ದುಸ್ತರ ಎನಿಸುವದು.
ಫೋಟೋಗಳನ್ನು ನಾನು ಕಳಿಸಿರುವ ವಿಳಾಸಕ್ಕೆ ಕಳಿಸಿಕೊಡಿ. ಆ ನೆನಪುಗಳನ್ನು ಸೆರೆ ಹಿಡಿದು ಕೊಟ್ಟಿದ್ದಕ್ಕೆ ಧನ್ಯವಾದಗಳು.
ಸುನಾಥ್ ಸರ್,
ಬದುಕು ಬಿಸಿಲು, ಮಳೆ, ಗಾಳಿಗಳ ಸಂಗಮವಲ್ಲವೆ? ಅದನ್ನು ಸಮನಾಗಿ ನಿಭಾಯಿಸುವ ಶಕ್ತಿ ನಮಗೆ ಬರಬೇಕು.
ಪರಾಂಜಪೆ ಸರ್,
ನಾನೊಬ್ಬ ಭಾವ ಜೀವಿ ಎನ್ನುವದಕ್ಕಿಂತ ಹೆಚ್ಚಾಗಿ ನನಗೆ ಮನುಷ್ಯ ಪ್ರೀತಿಗಳಲ್ಲಿ ಅಪಾರ ನಂಬಿಕೆಯಿದೆ. ಆದರೆ ಕ್ಸುಲ್ಲಕ ಕಾರಣಗಳಿಗೆ ಅದು ಕಳೆದು ಹೋಗುತ್ತಿರುವದರ ಬಗ್ಗೆ ವಿಷಾದವಿದೆ.
ನನ್ನ ವಕ್ತಿತ್ವ ಹಾಗು ಬರಹ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್!
ಹೇ ರಾಘು,
ಬರಹ ಮೆಚ್ಚಿಕೊಂಡು ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್ ಕಣೊ
ಹೃದಯಸ್ಪರ್ಶಿ ಬರವಣಿಗೆ... ನಿಮಗೆ ಫೋನ್ ಮಾಡಿ ಮಾತನಾಡೋಣ ಅಂದುಕೊಂಡಿದ್ದೆ... ಆದರೆ ಈ ವೈರಲ್ ಫಿವೆರ್ ಮತ್ತು ಕೆಲವು ವಯಕ್ತಿಕ ತೊಂದರೆಗಳಿಂದಾಗಿ ಯಾವುದೂ ನೆನಪಾಗಲಿಲ್ಲ... ಕ್ಷಮೆಯಿರಲಿ...
ನೀವು ಹೇಳಿದ್ದು ಅಕ್ಷರಶಃ ನಿಜ.. ನಾವು ಬದಲಾಗುತ್ತೀವೋ , ಇಲ್ಲ ಜನರು ನಮ್ಮನ್ನು ನೋಡುವ ರೀತಿ ಬದಲಾಗುತ್ತೋ ಗೊತ್ತಿಲ್ಲ... ನೊಂದ ಮನಸ್ಸಿಗೆ ಸ್ನೇಹಿತರಲ್ಲದೆ ಯಾರೂ ಸಾಂತ್ವನ ನೀಡಲಾರರು ಅನ್ನೋದು ನನ್ನ ಅನುಭವ..
ರವಿಕಾಂತ ಗೋರೆಯವರೆ,
ನಿಮ್ಮ ಸಾಂತ್ವನಕ್ಕೆ ತುಂಬಾ ಥ್ಯಾಂಕ್ಸ್!
lekana manassannu bahalavaagi kaadibittithu. sambalada aakarshane mukyavagi bavanegalu suttu hoguvudannu oppalu manassu hindetu haakuthide.aadare eduveeee sathyavembudu bhayaanaka durantha.
ಕಾಮೆಂಟ್ ಪೋಸ್ಟ್ ಮಾಡಿ