ಹಾಗಂತ ಇಂಗ್ಲೀಷಿನಲ್ಲಿ ಒಂದು ಗಾದೆ ಮಾತಿದೆ. ಈ ಮಾತು ಬೇರೆಯವರ ಜೀವನದಲ್ಲಿ ಎಷ್ಟರಮಟ್ಟಿಗೆ ನಿಜವಾಗಿದೆಯೋ ಗೊತ್ತಿಲ್ಲ. ಆದರೆ ನನ್ನ ಜೀವನದಲ್ಲಿ ಇದು ಅಕ್ಷರಶಃ ಸತ್ಯವಾಗಿದೆ. ಏಕೆಂದರೆ ನನ್ನ ಯಶೋಗಾಥೆಯ ಹಿಂದೆ ಬಹಳಷ್ಟು ಜನರ ಶ್ರಮ, ತ್ಯಾಗ, ಸಹಾಯ, ನಿಟ್ಟುಸಿರು ಎಲ್ಲವೂ ಇದೆ. ಅವರನ್ನೆಲ್ಲ ನೆನೆಯಲೆಂದೇ ಈ ಲೇಖನವನ್ನು ಬರೆಯುತ್ತಿದ್ದೇನೆ.
ನಾವು ಜೀವನದಲ್ಲಿ ಯಶಸ್ಸನ್ನು ಕಂಡಾಗ, ಆ ಯಶಸ್ಸಿಗೆ ಕಾರಣಿಕರ್ತರಾದವರನ್ನು ನಾವು ನೆನೆಯಲೇಬೇಕಾಗುತ್ತದೆ. ನಾವು ಬದುಕಿನಲ್ಲಿ ಗೆದ್ದು ವಿಜಯದ ಪತಾಕೆಯನ್ನು ಹಾರಿಸಿದ ಸಂದರ್ಭದಲ್ಲಿ ಅಂಥವರನ್ನು ಸ್ಮರಿಸಲೇಬೇಕಾಗುತ್ತದೆ ಹಾಗೂ ಅವರಿಗೊಂದು ಥ್ಯಾಂಕ್ಸ್ ಹೇಳಲೇಬೇಕಾಗುತ್ತದೆ. ಇಲ್ಲವಾದರೆ ನಾವು ಮನುಷ್ಯರಾಗಿರುವದರಲ್ಲಿ ಅರ್ಥವೇ ಇರುವದಿಲ್ಲ. ಹಾಗೆಂದೇ ನನ್ನ ಯಶೋಗಾಥೆಯ ಹಿಂದಿರುವ ಇವರೆಲ್ಲರ ಸಹಾಯ, ಶ್ರಮಕ್ಕೆ ಒಂದು ಕೃತಜ್ಞತೆ ಹೇಳಲೆಂದೇ ಈ ಲೇಖನವನ್ನು ಬರೆಯುತ್ತಿದ್ದೇನೆ ಹಾಗೂ ಈ ಲೇಖನವನ್ನು ಅವರೆಲ್ಲರಿಗೂ ಅರ್ಪಿಸುತ್ತಿದ್ದೇನೆ.
ಬೇಜವಾಬ್ದಾರಿ ಅಪ್ಪನ ಮಗನಾಗಿ ಹುಟ್ಟಿದ ನನ್ನ ಬದಕು ಮೊದಲಿನಿಂದಲೂ ಹರಿದು ಹಂಚಿಹೋದ ಬದುಕು. ನಾನು ಹುಟ್ಟಿದ್ದು ತಾಯಿಯ ತವರು ಮನೆಯಲ್ಲಾದರೂ ನನ್ನ ಮೊದಲ ಮೂರು ವರ್ಷದ ಬಾಲ್ಯ ಕಳೆದಿದ್ದು ನನ್ನೂರು ಮುಧೋಳದಲ್ಲಿ, ಅಪ್ಪ ಅಮ್ಮನ ಗರಡಿಯಲ್ಲಿ. ಅಪ್ಪ ಬೇಜವಾಬ್ದಾರಿಯಾಗಿದ್ದಕ್ಕೆ ಬೇಸತ್ತು ನನ್ನ ಸಂಬಂಧಿಕರು ಇಲ್ಲಿದ್ದರೆ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗಲಾರದು ಎಂಬ ಕಾರಣಕ್ಕೆ ಮೂರೂ ಜನ ಮಕ್ಕಳನ್ನು (ನಾನು, ಅಣ್ಣ, ತಂಗಿ) ತಂತಮ್ಮ ಊರಿಗೆ ಕರೆದುಕೊಂಡು ಹೋದರು. ಆ ಪ್ರಕಾರ ನನ್ನ ಅಣ್ಣನನ್ನು ನನ್ನ ದೊಡ್ಡಪ್ಪ (ತಂದೆಯ ಅಣ್ಣ- ಹೇಮಣ್ಣ ಕವಲೂರು) ತಮ್ಮೂರು ಅಳವಂಡಿಗೆ ಕರೆದುಕೊಂಡು ಹೋದರೆ, ನನ್ನನ್ನು ನನ್ನ ದೊಡ್ಡಮ್ಮ (ತಾಯಿಯ ಅಕ್ಕ-ಸರೋಜಿನಿ ಪಾಟೀಲ್) ತಮ್ಮೂರು ಕಲಕೋಟಿಗೆ ಕರೆದುಕೊಂಡು ಬಂದರು. ನನ್ನ ತಂಗಿಯನ್ನು ತಾಯಿಯ ತವರು ಮನೆ ಸುಲ್ತಾನಪೂರದವರು ಕರೆದುಕೊಂಡು ಬಂದರು. ಹೀಗಾಗಿ ನಾವು ಮೂರೂ ಜನ ಮಕ್ಕಳು ಬಾಲ್ಯದಿಂದಲೇ ತಂದೆ ತಾಯಿಯರ ಪ್ರೀತಿ, ವಾತ್ಸಲ್ಯದಿಂದ ವಂಚಿತರಾದೆವು. ಮೊದಲಿನಿಂದಲೂ ಅಷ್ಟಾಗಿ ತಂದೆ ತಾಯಿಯರ ಸಂಪರ್ಕವಿಲ್ಲದೆ ಬೆಳೆದಿದ್ದರಿಂದ ನಮ್ಮ ಮತ್ತು ಅವರ ನಡುವೆ ಅಂಥ ಹೇಳಿಕೊಳ್ಳುವಂಥ ಸಂಪರ್ಕ ಯಾವತ್ತಿಗೂ ಏರ್ಪಡಲಿಲ್ಲ. ಹೀಗಾಗಿ ಅವರು ಅಪರೂಪಕ್ಕೊಮ್ಮೆ ನಮ್ಮನ್ನು ನೋಡಲು ಬಂದಾಗ ನಾವು ಅವರನ್ನು ಅಪರಿಚಿತರಂತೆ ನೋಡುತ್ತಿದ್ದೆವು. ಅವರೊಂದಿಗೆ ಮಾತನಾಡಲೂ ಎಂಥದೋ ಮುಜುಗರವಾಗುತ್ತಿತ್ತು. ಹೀಗಿರುವಾಗ ನಮ್ಮನ್ನು ಒಪ್ಪಿ, ಅಪ್ಪಿ ಸಂತೈಸಿದ ಎಷ್ಟೋ ಬಂಧುಗಳು ನಮಗೆ ದಾರಿ ದೀಪವಾದರು ಹಾಗೂ ಅವರೇ ತಂದೆ ತಾಯಿಗಳಾದರು.
ನಾನು ನನ್ನ ಮೂರನೇ ವರ್ಷದಿಂದಲೇ ಕಲಕೋಟಿಯಲ್ಲಿ ದೊಡ್ಡಮ್ಮ ದೊಡ್ಡಪ್ಪರ ತುಂಬು ಆರೈಕೆಯಲ್ಲಿ ಬೆಳೆದೆ. ಅವರು ಒಂದು ಮಗುವಿಗೆ ಏನೆಲ್ಲಾ ಬೇಕೋ ಅದನ್ನೆಲ್ಲ ಧಾರೆಯೆರೆದು ಬೆಳೆಸಿದರು. ದೊಡ್ಡಮ್ಮ ದೊಡ್ಡಪ್ಪನಿಗೆ ಗಂಡುಮಕ್ಕಳಿಲ್ಲದಿದ್ದ ಕಾರಣಕ್ಕೇನೋ ನನ್ನನ್ನು ಅತಿ ಮುದ್ದಿನಿಂದ, ಪ್ರೀತಿಯಿಂದ ಬೆಳೆಸಿದರು. ನಾನು ಓದಿನಲ್ಲಿ ಸದಾ ಮುಂದಿದ್ದ ಕಾರಣಕ್ಕೆ ದೊಡ್ದಪ್ಪ (ಸೋಮನಗೌಡ ಪಾಟಿಲ್) ನಿಗೆ ನಾನು ಬಲು ಇಷ್ಟವಾಗುತ್ತಿದ್ದೆ. ಅವರು ಆಗಾಗ್ಗೆ ನನಗೆ ಕಾಮಿಕ್ಸ್ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಹೀಗಾಗಿ ನನಗೆ ಓದುವ ಹುಚ್ಚು ಚಿಕ್ಕಂದಿನಿಂದಲೇ ಶುರುವಾಯಿತು.
ಈ ಕಲಕೋಟಿಯಲ್ಲಿಯೇ ನನಗೆ ಗೌರಜ್ಜಿಯ ಪರಿಚಯವಾದದ್ದು. ಈಕೆ ನಮ್ಮ ಬಂಧು ಬಳಗದವಳಲ್ಲದಿದ್ದರೂ ನಮ್ಮ ದೊಡ್ಡಪ್ಪನ ಹಿರಿಯರು ಆಕೆಯ ಗಂಡನಿಗೆ ಹಿಂದೆ ಯಾವುದೋ ಸಹಾಯ ಮಾಡಿದ್ದರಿಂದ ಅದರ ಋಣ ತೀರಿಸಲೆಂದು ಆ ಮನೆಯನ್ನು ಹದ್ದುಗಣ್ಣಿನಿಂದ ಕಾಯುವದರ ಮೂಲಕ ಸಹಾಯ ಮಾಡುತ್ತಿದ್ದಳು. ಆಕೆ ಹೆಚ್ಚು ಕಡಿಮೆ ಮನೆಯವಳಂತೆ ಆಗಿದ್ದಳು. ಈಕೆಗೆ ರಾಮಾಯಣ ಮಹಾಭಾರತದ ಕಥೆಗಳೆಲ್ಲವೂ ಗೊತ್ತಿದ್ದರಿಂದ ಅವನ್ನು ನಾನು ಪ್ರಾಥಮಿಕ ಶಾಲೆಯನ್ನು ಸೇರುವ ಮೊದಲೇ ಅವಳ ಬೊಚ್ಚ ಬಾಯಿಂದ ಕೇಳಿ ಬೆಕ್ಕಸ ಬೆರಗಾಗುತ್ತಿದ್ದೆ. ಅದಲ್ಲದೆ ದೀಪಾವಳಿ ಮತ್ತು ಗೌರಿ ಹುಣ್ಣಿಮೆಯಂದು ಅವಳು ಹಾಡುತ್ತಿದ್ದ ಸೋಬಾನೆ ಪದಗಳು ನನ್ನ ಸುಪ್ತ ಮನಸ್ಸಿನ ಮೇಲೆಲ್ಲೋ ಪರಿಣಾಮ ಬೀರಿದ್ದರಿಂದ ನಾನು ಮುಂದೆ ಬರಹಗಾರನಾಗಲು ಸಾಕಷ್ಟು ಸಹಾಯವಾದವೆಂದು ಕಾಣುತ್ತದೆ. ಅದಕ್ಕಾಗಿ ಇಲ್ಲಿ ಅವಳಿಗೆ ವಿಶೇಷವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ದೊಡ್ದಮ್ಮ ಹೊತ್ತು ಹೊತ್ತಿಗೆ ತುತ್ತಿಟ್ಟು ಮುತ್ತಿಟ್ಟು ಬಲು ಅಕ್ಕರೆಯಿಂದ ನೋಡಿಕೊಂಡರು. ಅದಲ್ಲದೆ ಅವರೂ ಸಹ ನನಗೆ ಆಗಾಗ ಬೇರೆ ಬೇರೆ ಕಥೆಗಳನ್ನು ಹೇಳಿ ಖುಶಿಪಡಿಸುತ್ತಿದ್ದರು.
ನಾನು ಕಲಕೋಟಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ನನಗೆ ಅದೇ ಊರಿನಲ್ಲಿರುವ ನಮ್ಮ ದೂರದ ಸಂಬಂಧಿಕ ಮಲ್ಲೇಶಪ್ಪ ಸಣ್ಣಕಳ್ಳಿ ಎಂಬವರಿಂದ ಇಂಗ್ಲೀಷ ಪಾಠಾಭ್ಯಾಸ ಶುರುವಾಯಿತು. ಅವರು ವೃತ್ತಿಯಲ್ಲಿ ‘ಗ್ರಾಮ ಸೇವಕ’ ರಾಗಿ ಕೆಲಸ ಮಾಡುತ್ತಿದ್ದರೂ ಅವರಿಗೆ ಇಂಗ್ಲೀಷ ಭಾಷೆಯ ಬಗ್ಗೆ ಅಪಾರ ಜ್ಞಾನವಿತ್ತು. ದಿನಾ ಬೆಳಿಗ್ಗೆ ಹಾಗೂ ಸಾಯಂಕಾಲ ಅವರಲ್ಲಿಗೆ ಹೋಗಿ ಇಂಗ್ಲೀಷ ಪಾಠ ಹೇಳಿಸಿಕೊಳ್ಳಲು ಹೋಗುತ್ತಿದ್ದೆ. ನನಗೆ ಅದೇನೋ ಗೊತ್ತಿಲ್ಲ ನಾನು ಇಂಗ್ಲೀಷ ಭಾಷೆಯನ್ನು ಬಹಳ ಬೇಗ ಬೇಗನೆ ಕಲಿಯತೊಡಗಿದೆ. ನಿಮಗೆ ಅಚ್ಚರಿಯಾಗಬಹುದು ನಾನು ಎರಡನೇ ಕ್ಲಾಸಿನಲ್ಲಿರುವಾಗಲೇ ಮೊದಲನೇ ಭಾಷಾಂತರ ಪಾಠಮಾಲೆಯಲ್ಲಿನ ಶಬ್ಧಗಳನ್ನು ಹಾಗೂ ವಾಕ್ಯ ರಚನೆಗಳನ್ನು ಚನ್ನಾಗಿ ಕಲಿತುಕೊಂಡಿದ್ದೆ. ನಮ್ಮ ಶಾಲೆಯಲ್ಲಿ ಮೂರು ಜನ ಶಿಕ್ಷಕರಿದ್ದದರಿಂದ ಆ ಮೂವರೇ ಏಳು ಕ್ಲಾಸುಗಳನ್ನು ಹಂಚಿಕೊಂಡಿದ್ದರು. ಏಳನೆ ತರಗತಿಗೆ ಪಾಠ ಮಾಡುವ ಶಿಕ್ಷಕರು ವಿದ್ಯಾರ್ಥಿಗಳಿಗೇನಾದರು ಇಂಗ್ಲೀಷ ಪಾಠ ಓದಲು ಬಾರದಿದ್ದರೆ ನನ್ನನ್ನು ತಮ್ಮ ತರಗತಿಗೆ ಕರೆಸಿಕೊಂಡು ನನ್ನ ಕಡೆಯಿಂದ ಆ ಪಾಠ ಓದಿಸಿ ಆ ವಿದ್ಯಾರ್ಥಿಗಳಿಗೆ ಅವಮಾನ ಮಾಡುತ್ತಿದ್ದರು. ನಾನು ಅಷ್ಟರಮಟ್ಟಿಗೆ ಇಂಗ್ಲೀಷನ್ನು ಸರಾಗವಾಗಿ ಓದುವದು ಬರೆಯುವದನ್ನು ಮಾಡುತ್ತಿದ್ದೆ. ನನಗೆ ಇಂಗ್ಲೀಷ್ ಭಾಷೆಯ ಮೇಲೆ ವಿಶೇಷವಾದ ಒಲವು ಮತ್ತು ಆಸಕ್ತಿಗಳನ್ನು ಬೆಳೆಸುವದಕ್ಕೆ ಸಹಾಯ ಮಾಡಿದ ಈ ವ್ಯಕ್ತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಇಂದು ಇಲ್ಲ. ಬಹುಶಃ ಅವರು ಇದ್ದಿದ್ದರೆ ಇಂದು ನಾನು ಇಂಗ್ಲೀಷ ಭಾಷೆಯಲ್ಲಿ ಉಪನ್ಯಾಸಕನಾಗಿ ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದುದನ್ನು ನೋಡಿ ತುಂಬಾ ಖುಶಿ ಪಡುತ್ತಿದ್ದರೇನೋ!
ನಾನು ನಾಲ್ಕನೇ ತರಗತಿಯಲ್ಲಿರುವಾಗಲೆ ನನ್ನ ದೊಡ್ಡಪ್ಪ ಹೃದಯಾಘಾತದಿಂದ ನಿಧನ ಹೊಂದಿ ಮನೆಯಲ್ಲಿ ಅಗಾಧ ಬದಲಾವಣೆಗಳಾದವು. ಆಗ ಇದೇ ದೊಡ್ಡಪ್ಪನ ಮಗಳು ಅಂದರೆ ನನ್ನ ಅಕ್ಕ (ಜಯಶ್ರಿ ಗೌರಿಪೂರ್) ಗದುಗಿನಲ್ಲಿ ಗಂಡನ ಮನೆಯವರ ಕಾಟಕ್ಕೆ ಬೇಸತ್ತು ಬೇರೆ ಹೋಗಬೇಕಾಗಿ ಬಂದಾಗ ಜೊತೆಯಲ್ಲಿರಲಿ ಎಂದು ನನ್ನನ್ನು ತನ್ನ ಜೊತೆ ಕರೆದುಕೊಂಡು ಹೋದಳು. ಮನೆಯ ಹತ್ತಿರದಲ್ಲಿಯೇ ಇರುವ ಶಾಲೆಗೆ ನನ್ನನ್ನು ಸೇರಿಸಲಾಯಿತು. ಅಕ್ಕ ಎಷ್ಟೊಂದು ಕಟ್ಟುನಿಟ್ಟಾಗಿದ್ದಳೆಂದರೆ ನಾನು ಶಾಲೆಯಲ್ಲಿ ಸದಾ ಮೊದಲನೇ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡದಂತೆ ನೋಡಿಕೊಂಡಳು. ನಾನು ಶಾಲೆಯಿಂದ ಬಂದ ತಕ್ಷಣ ಆ ದಿನ ಶಾಲೆಯಲ್ಲಿ ಯಾವ್ಯಾವ ಪಾಠ ನಡೆಯಿತು ಎಂಬ ವರದಿಯನ್ನು ಒಪ್ಪಿಸಬೇಕಾಗಿತ್ತು. ಬಹುಶಃ, ಅವಳು ಇಷ್ಟೊಂದು ಕಾಳಜಿ ತೆಗೆದುಕೊಂಡಿದ್ದಕ್ಕೇನೋ ನಾನು ಏಳನೇ ತರಗತಿಯಲ್ಲಿ ಇಡಿ ಶಾಲೆಗೆ ಮೊದಲನೆಯವನಾಗಿ ತೇರ್ಗಡೆ ಹೊಂದಿದೆ. ನಂತರ ನಾನು ಎಂಟನೆ ತರಗತಿಯಿಂದ ಮಾಡೆಲ್ ಹೈಸ್ಕೂಲಿಗೆ ಸೇರಿದೆ. ಅಲ್ಲಿಯೂ ಸಹ ಅಕ್ಕ ಹತ್ತನೆ ತರಗತಿಯವರೆಗೂ ವರ್ಷ ವರ್ಷವೂ ಇಡಿ ಕ್ಲಾಸಿಗೆ ಫಸ್ಟ್ ಬರುವಂತೆ ನೋಡಿಕೊಂಡಳು. ನನ್ನ ಮಾಮಾ, ಅಂದರೆ ಅಕ್ಕನ ಗಂಡ (ಮಹದೇವಪ್ಪ ಗೌರಿಪೂರ್) ಸ್ವಲ್ಪ ಸಿಡುಕಿನ ಸ್ವಭಾವದವನಾಗಿದ್ದರೂ ನಾನು ಪ್ರತಿ ರಾತ್ರಿ ಊಟ ಮಾಡಿದೆನೋ ಇಲ್ವೋ ಎಂಬುದನ್ನು ವಿಚಾರಿಸಿ ಮಲಗುತ್ತಿದ್ದರು.
ನನ್ನ ಅಕ್ಕ ಜಯಶ್ರೀ ಗೌರಿಪೂರ್
ನಾನು ಗದುಗಿನಲ್ಲಿ ಓದುತ್ತಿರಬೇಕಾದರೆ ಇನ್ನೊಬ್ಬ ಮಹನಿಯರನ್ನು ನೆನೆಯದೇ ಹೋದರೆ ಮಹಾಪರಾಧವಾಗುತ್ತದೆ. ಅವರೆಂದರೆ ಅಣ್ಣಿಗೇರಿ ಸರ್. ಶ್ರಿಯುತ ಬಿ.ಜಿ. ಅಣ್ಣಿಗೇರಿಯವರ ಹೆಸರು ಇಡಿ ಗದುಗಿನ ತುಂಬಾ ಗೊತ್ತು. ಅವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಜೀವನ ಪರ್ಯಂತ ಬ್ರಹ್ಮಚಾರಿಯಾಗಿದ್ದುಕೊಂಡೇ ತಮ್ಮ ಜೀವನವನ್ನು ಮುಡಿಪಾಗಿಟ್ಟವರು.
ಗದುಗಿನಲ್ಲಿ ಅವರದೊಂದು ಆಶ್ರಮವಿದೆ. ಆ ಆಶ್ರಮದಲ್ಲಿ ಬೇರೆ ಊರಿನ ಬಡ ವಿದ್ಯಾರ್ಥಿಗಳು ಇದ್ದುಕೊಂಡು ತಂತಮ್ಮ ಊರಿನಿಂದ ಬುತ್ತಿ ತರಿಸಿಕೊಂಡು ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದರು. ಅವರಿಗೆ ಉಚಿತ ವಸತಿಯಲ್ಲದೆ ಉಚಿತ ವಿದ್ಯಾಭ್ಯಾಸವನ್ನು ಸಹ ಕೊಡುತ್ತಿದ್ದರು. ದಿನಾ ಬೆಳಿಗ್ಗೆ ಐದು ಗಂಟೆಯಷ್ಟೊತ್ತಿಗೆ ಎಲ್ಲ ವಿದ್ಯಾರ್ಥಿಗಳು ಸ್ನಾನ ಮುಗಿಸಿ ಪ್ರಾರ್ಥನೆಗೆ ಬರಬೇಕು. ಆನಂತರ ಬೆಳಿಗ್ಗೆ ಏಳರಿಂದ ಹತ್ತರವರೆಗೆ ಸತತವಾಗಿ 8, 9, 10ನೇ ತರಗತಿಗಳಿಗೆ ಕ್ಲಾಸುಗಳು ಆರಂಭವಾಗುತ್ತಿದ್ದವು. ಅಣ್ಣಿಗೇರಿ ಸರ್ ಅವರದು ಗಣಿತ ಮತ್ತು ಇಂಗ್ಲೀಷ್ ಹೇಳುವದರಲ್ಲಿ ಎತ್ತಿದ ಕೈ. ಇವರಲ್ಲದೆ ಹುಣಶಿಮರದ ಸರ್, ಗಾಣಿಗೇರ ಸರ್ ಅವರು ಬೇರೆ ಕಡೆ ಕೆಲಸ ಮಾಡುತ್ತಿದ್ದರೂ ಇಲ್ಲಿಗೆ ಬಂದು ಉಚಿತವಾಗಿ ಪಾಠ ಮಾಡಿ ಹೋಗುತ್ತಿದ್ದರು. ಈ ತರದ ಕ್ಲಾಸುಗಳು ಬರಿ ಆಶ್ರಮದಲ್ಲಿರುವವರಿಗೆ ಮಾತ್ರ ಸೀಮಿತವಾಗಿರಲಿಲ್ಲ ಹೊರಗಿನಿಂದಲೂ ಸಹ ಬೇರೆ ವಿದ್ಯಾರ್ಥಿಗಳು ಹೋಗಬಹುದಿತ್ತು. ಅಂಥ ಹೊರಗಿನ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬ. ಒಂದೊಂದು ತರಗತಿಯಲ್ಲಿ ನೂರಾರು ವಿದ್ಯಾರ್ಥಿಗಳು ಇರುತ್ತಿದ್ದರು. ಒಂದೊಂದು ಸಾರಿ ಆಶ್ರಮದ ದೊಡ್ದ ಕೋಣೆಯಲ್ಲೋ ಅಥವಾ ಬಯಲಲ್ಲಿರುವ ಮರದ ಕೆಳಗೋ ತರಗತಿಗಳು ನಡೆಯುತ್ತಿರುವಾಗ ನಮಗೆಲ್ಲ ಅವು ಗುರುಕುಲ ಪದ್ಧತಿಯನ್ನು ಜ್ಞಾಪಿಸುತ್ತಿದ್ದವು. ಒಂದು ನಯಾ ಪೈಸೆಯನ್ನೂ ತೆಗೆದುಕೊಳ್ಳದೆ ನನ್ನ ಜೀವನ ರೂಪಿಸುವದರಲ್ಲಿ ಅವರ ಪಾತ್ರ ಹಿರಿದಾಗಿದೆ. ಅವರ ಸಾಧನೆಯನ್ನು ಮೆಚ್ಚಿಕೊಂಡು ಈಗ್ಗೆ ಏಳೆಂಟು ವರ್ಷಗಳ ಹಿಂದೆ ಕರ್ನಾಟಕ ಸರಕಾರ ಅವರಿಗೆ ರಾಜ್ಯ ಪ್ರಶಸ್ತಿಯನ್ನಿಟ್ಟು ಗೌರವಿಸಿದೆ. ಅಂಥ ಗಣ್ಯವ್ಯಕ್ತಿಯನ್ನು ನಾನಿಲ್ಲಿ ವಿಶೇಷವಾಗಿ ನೆನೆಯುತ್ತೇನೆ.
ನಾನು S.S.L.C. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ತೆಗೆದುಕೊಂಡು ಪಾಸಾಗಿದ್ದರಿಂದ ಧಾರವಾಡದಲ್ಲಿ ಆಗಲೇ ವಕೀಲ ವೃತ್ತಿಯನ್ನು ಮಾಡುತ್ತಿದ್ದ ನನ್ನ ಚಿಕ್ಕಪ್ಪ (ಜಗದೀಶ್ ಇಟಗಿ) ಇನ್ನುಮುಂದೆ ನಾನು ಓದಿಸುತ್ತೇನೆಂದು ಮುಂದೆ ಬಂದನು. ನನಗೆ ಹೆಚ್ಚು ಅಂಕಗಳು ಬಂದಿದ್ದರಿಂದ ಸಹಜವಾಗಿ ಎಲ್ಲರ ಮನೆಯಲ್ಲೂ ಹೇಳುವಂತೆ ನಮ್ಮ ಮನೆಯಲ್ಲೂ ಸಾಯಿನ್ಸ್ ತೆಗೆದುಕೊಳ್ಳಲು ಹೇಳಿದರು. ಆದರೆ ನನಗೆ ಸಾಯಿನ್ಸ್ ಎಂದರೆ ಅಷ್ಟಕ್ಕಷ್ಟೆ ಇದ್ದುದರಿಂದ ನಾನು ಬೇಡ ಬೇಡವೆಂದೆ. ಯಾರೂ ಕೇಳಲಿಲ್ಲ. ಕೊನೆಗೆ ಸಾಯಿನ್ಸ್ ಗೆ ಸೇರಬೇಕಾಯಿತು. ಪರಿಣಾಮವಾಗಿ ದ್ವಿತಿಯ ಪಿ.ಯು.ಸಿ.ಯಲ್ಲಿ ಗೋತಾ ಹೊಡೆದೆ. ಬಹುಶಃ, ನಾನು ಪಾಸಾಗಿದ್ದರೆ ಅವರು ಮುಂದೆ ಓದಿಸುತ್ತಿದ್ದರೇನೋ. ಆದರೆ ನಾನು ಫೇಲಾಗಿದ್ದುದು ಅವರ ನಿರೀಕ್ಷೆಗೆ ಬಲು ಪೆಟ್ಟು ಬಿದ್ದಂತಾಗಿ ಅವರು ಕೈ ತೊಳೆದುಕೊಂಡರು. ಸರಿಯೆಂದು ಮುಂದಿನ ಎರಡು ವರ್ಷ ಅಲ್ಲಿ ಇಲ್ಲಿ ಕೆಲಸ ಮಾಡಿದೆ.
ಪಾರ್ವತಜ್ಜಿ
ಅದಕ್ಕೆ ನನ್ನ ಸೋದರ ಮಾವ (ವಿಶ್ವನಾಥ್ ಕರಚಣ್ಣನವರ) ಮತ್ತು ಅಜ್ಜಿ (ಪಾರ್ವತೆಮ್ಮ ಕರಚಣ್ಣನವರ) ಸಹಾಯ ಮಾಡಿದರು. ಇವರೆಲ್ಲರ ಉಪಕಾರವನ್ನು ನಾನು ಅತ್ಯಂತ ವಿನಮ್ರನಾಗಿ ನೆನೆಯುತ್ತೇನೆ.
ನಾನು ಪಿ.ಯು.ಸಿ ಪಾಸಾಗುತ್ತೇನೋ ಇಲ್ವೋ ನನಗೇ ಗೊತ್ತಿರಲಿಲ್ಲ. ಏಕೆಂದರೆ ಪಾಸಾದರೂ ಮುಂದೆ ನನ್ನ ಓದಿನ ಜವಾಬ್ದಾರಿ ತೆಗೆದುಕೊಳ್ಳುವವರು ಯಾರೆಂದು ಆತಂಕವಾಗಿತ್ತು. ಇತ್ತ ಅಳವಂಡಿಯಲ್ಲಿದ್ದ ನನ್ನಣ್ಣ ಬಿ.ಎ. ಹಾಗೂ ಟೀಚರ್ಸ್ ಟ್ರೇನಿಂಗ್ ಮುಗಿಸಿ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ. ಅವನಾದರು ನನ್ನ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸ್ಥಿತಿಯಲಿರಲಿಲ್ಲ. ಅಂಥ ಸಂದರ್ಭದಲ್ಲಿ ನನ್ನ ಅಳವಂಡಿ ದೊಡ್ಡಪ್ಪನ ಮಗ (ಡಾ. ರವಿ ಕವಲೂರು) ಅವನಾದಗಲೇ ವೆಟರ್ನರಿ ಡಾಕ್ಟರಾಗಿ ಆಗಷ್ಟೆ ಸರಕಾರಿ ಕೆಲಸಕ್ಕೆ ಸೇರಿದ್ದರಿಂದ ಮುಂದೆ ಬಂದು ನೀನು ಪಿ.ಯು.ಸಿ ಪಾಸಾದರೆ ಮುಂದೆ ನಾನು ಓದಿಸುತ್ತೇನೆ ಎಂದು ಹೇಳಿದ. ನನಗೆ ಎಲ್ಲಿಲ್ಲದ ಖುಶಿ! ಇನ್ನೇನು ನನ್ನ ಓದಿನ ಆಸೆ ಬಿಟ್ಟು ಬೇರೆ ಏನೋ ಒಂದು ಕೆಲಸ ಮಾಡಿಕೊಂಡಿರಬೇಕೆಂದವನಿಗೆ ಓಯಾಸಿಸ್ ತರ ಬಂದ. ಅದೇ ವರ್ಷ ಕಷ್ಟಪಟ್ಟು ಓದಿ ಅಂತೂ ಪಿ.ಯು.ಸಿ. ಪಾಸಾದೆ. ಅದೇ ವರ್ಷ ಅಂದರೆ 1995 ರಲ್ಲಿ ಅವನ ಮದುವೆಯಾಯಿತು. ಅವನ ಹೆಂಡತಿ ಅಂದರೆ ನನ್ನ ಅತ್ತಿಗೆಗೆ (ಉಷಾ ರವಿಂದ್ರ) ಮಂಡ್ಯದ ವಿ.ಸಿ.ಫಾರಂನಲ್ಲಿ ಕೆಲಸ ಸಿಕ್ಕು ಅಣ್ಣ ಗುಲ್ಬರ್ಗಾದಿಂದ ಟ್ರಾನ್ಸಫರ್ ತೆಗೆದುಕೊಂಡು ಮಂಡ್ಯಕ್ಕೆ ಬಂದನು.
ಅತ್ತಿಗೆ ಮತ್ತು ಅಣ್ಣ
ಆನಂತರ ನಾನು ಅವರೊಟ್ಟಿಗೆ ಇದ್ದುಕೊಂಡು ಮಂಡ್ಯದ ಪಿ.ಇಎಸ್ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗಕ್ಕೆ ಸೇರಿಕೊಂಡು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದೆ. ಮಂಡ್ಯ ನನಗೆ ಬಹಳಷ್ಟನ್ನು ಕೊಟ್ಟಿತು. ಹೊಸ ಬದುಕು, ಹೊಸ ಜನ, ಹೊಸ ವಾತಾವರಣ ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರು ಜೀವದ ಗೆಳೆಯರನ್ನು ಕೊಟ್ಟಿತು. ಇಲ್ಲಿಯೇ ನನ್ನೊಳಗೆ ಅದಾಗಲೇ ಮೊಳಕೆಯೊಡೆದು ಮುರುಟಿಹೋದ ನನ್ನ ಬರವಣಿಗೆ ಮತ್ತೆ ಚಿಗುರತೊಡಗಿತು. ಹೀಗೆ ನನಗೆ ವಿಶೇಷ ದಾರಿದೀಪವಾದ ಹಾಗೂ ನನ್ನ ಬದುಕಿಗೆ ಒಂದು ವಿಶೇಷ ತಿರುವನ್ನು ತಂದುಕೊಟ್ಟ ಅಣ್ಣ ಅತ್ತಿಗೆಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಇದೇ ಸಂದರ್ಭದಲ್ಲಿ ನಾನು ಓದುತ್ತಿದ್ದ ಕಾಲೇಜಿನಲ್ಲಿ ನನ್ನ ಗುರುಗಳು ಹಾಗು ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಸುರೇಶ್ ಹೊಳ್ಳ ಅವರನ್ನು ಅತ್ಯಂತ ಹೃದಯಪೂರ್ವಕವಾಗಿ ನೆನೆಯುತ್ತೇನೆ. ಏಕೆಂದರೆ ನಾನು ತರಗತಿಯಲ್ಲಿ ಸದಾ ಚಟುವಟಿಕಿಯಿಂದ ಇರುತ್ತಿದುದಕ್ಕೆ ಅವರಿಗೆ ನನ್ನನ್ನು ಕಂಡರೆ ಅದೇನೋ ಒಲವು ಹಾಗೂ ಅಕ್ಕರೆ. ಅವರು ಆಗಾಗ ತಮ್ಮ ವಿಭಾಗಕ್ಕೆ ನನ್ನನ್ನು ಕರೆದು ಇಂಗ್ಲೀಷ್ ಕಾದಂಬರಿಗಳನ್ನು, ನಾಟಕಗಳನ್ನು, ಕವನಗಳನ್ನು ಹೇಗೆ ಓದಬೇಕು, ಅವಗಳ ಮೇಲೆ ಹೇಗೆ ಪ್ರಬಂಧಗಳನ್ನು ಬರೆಯಬೇಕು ಮತ್ತು ಅವುಗಳನ್ನು ಹೇಗೆ ವಿಮರ್ಶಿಸಬೇಕೆಂಬುದನ್ನು ಹೇಳಿಕೊಡುತ್ತಿದ್ದರು. ತಮ್ಮಲಿರುವ ಪುಸ್ತಕಗಳನ್ನು ತಂದುಕೊಟ್ಟು ಓದು ಎಂದು ಹೇಳುತ್ತಿದ್ದರು. ಇವರಲ್ಲದೆ ನಮ್ಮ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಅನಂತ ಪದ್ಮನಾಭಯ್ಯ ಕ್ಲಾಸಿನಲ್ಲಿ ನನ್ನನ್ನು ರೇಗಿಸುತ್ತಾ ನನ್ನ ಮೇಲೆ ಉದಾಹರಣೆಗಳನ್ನು ಕೊಡುತ್ತಾ ಇತಿಹಾಸವನ್ನು ಹೇಗೆ ಓದಬೇಕೆಂಬದನ್ನು ಮನದಟ್ಟು ಮಾಡಿಕೊಟ್ಟರು. ಇವರ ಇಂಗ್ಲೀಷ ಜ್ಞಾನ ಅಪಾರವಾಗಿತ್ತಲ್ಲದೆ ಬೇರೆ ಬೇರೆ ವಿಷಯಗಳ ಬಗ್ಗೆ ಚನ್ನಾಗಿ ತಿಳಿದುಕೊಂಡಿದ್ದರು. ಹೀಗಾಗಿ ನಾವೆಲ್ಲರೂ ಅವರನ್ನು ವಾಕಿಂಗ್ ಎನ್ಸೈಕ್ಲೊಪೀಡಿಯಾ ಎಂದು ಕರೆಯುತ್ತಿದ್ದವು. ಇವರು ನನ್ನ ಭವಿಷ್ಯವನ್ನು ರೂಪಿಸುವದರಲ್ಲಿ ವಿಶೇಷವಾದ ಒಲವನ್ನು ತೋರಿಸಿದ್ದಾರೆ. ಅವರಿಗೆ ನಾನು ಚಿರಋಣಿಯಾಗಿದ್ದೇನೆ. ಇವರಲ್ಲದೆ ಅದೇ ಕಾಲೇಜಿನ ನಮ್ಮ ಇಂಗ್ಲೀಷ ವಿಭಾಗದ ಪ್ರೊ.ಮೋಹನ್ ರಾಜ್, ಪ್ರೊ.ಚಂದ್ರಶೇಖರ್, ಪ್ರೊ. ಅನೀಲ್ ಕುಮಾರ್ ಹಾಗೂ ಪ್ರೊ. ಮುರುಳಿಧರವರು ನನ್ನ ಓದಿನ ವಿಷಯದಲ್ಲಿ ಸಾಕಷ್ಟು ಮಾರ್ಗದರ್ಶನ ಮಾಡಿದ್ದರಿಂದ ಅವರೆಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ.
ನಾನು ಮಂಡ್ಯದಲ್ಲಿ ಬಿ.ಎ ಮುಗಿಸಿದ ಮೇಲೆ ಎಂ.ಎ.ಮಾಡಬೇಕಿತ್ತು. ಅದಕ್ಕಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಹೋಗಬೇಕಿತ್ತು. ಅಣ್ಣ ಅತ್ತಿಗೆಯರಿಬ್ಬರೂ ಇಲ್ಲೇ ಇದ್ದುಕೊಂಡು ಮಾಡೆಂದರು. ಆದರೆ ಅವರಿಗೆ ಈಗಾಗಲೇ ಮೂರು ವರ್ಷ ಹೊರೆಯಾಗಿದ್ದರಿಂದ ಮತ್ತೆರಡು ವರ್ಷ ಹೊರೆಯಾಗಲು ನನ್ನ ಮನಸ್ಸೇಕೋ ಒಪ್ಪಲಿಲ್ಲ. ಅಷ್ಟೊತ್ತಿಗಾಗಲೆ ನನ್ನ ಸ್ವಂತ ಅಣ್ಣನಿಗೆ ಶಿಕ್ಷಕ ಹುದ್ದೆಯ ಸರಕಾರಿ ಕೆಲಸ ಸಿಕ್ಕಿತ್ತು. ಆದರೆ ಅದೇ ವರ್ಷ ನನ್ನ ತಂಗಿಯ ಮದುವೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರಿಂದ ಅವನನ್ನು ಮುಂದೆ ಓದಿಸು ಎಂದು ನನಗೆ ಕೇಳುವ ಹಕ್ಕಿರಲಿಲ್ಲ. ಅದಾಗಲೇ ನನ್ನ ಮನಸ್ಸಿನಲ್ಲೊಂದು ಬೆಂಗಳೂರಿಗೆ ಹೋಗಿ ಏನಾದರೊಂದು ಕೆಲಸ ಮಾಡಿ ನನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಎನ್ನುವ ನಿರ್ಧಾರ ಹರಳುಗಟ್ಟುತ್ತಿತ್ತು. ಅಂಥ ಸಂದರ್ಭದಲ್ಲಿ ಮಂಡ್ಯದ ವೀ.ಸಿ.ಫಾರಂನಲ್ಲಿ ಸ್ನೇಹಿತನಾದ ಮಂಜು ಅದಾಗಲೇ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಅವನು ತನ್ನ ರೂಮಿನಲ್ಲಿದ್ದುಕೊಂಡು ಕೆಲಸ ಮಾಡುತ್ತಾ ಓದು ಮುಂದುವರಿಸಬಹುದು ಎನ್ನುವ ಆಹ್ವಾನವನ್ನಿತ್ತನು. ಅಷ್ಟೇ ಅಲ್ಲದೆ ದೂರಶಿಕ್ಷಣದಲ್ಲಿ ಎಂ.ಎ ಮಾಡಲು ಅವನೇ ಖುದ್ದಾಗಿ ಫೀಸು ಕಟ್ಟಿದ. ಹಾಗೆ ನೋಡಿದರೆ ಅವನು ನನಗೆ ಅಂಥ ಆತ್ಮೀಯನಾಗಿರಲಿಲ್ಲ. ಆದರೆ ಬೆಂಗಳೂರಿಗೆ ಬಂದ ಮೇಲೆ ನಮ್ಮಿಬ್ಬರ ಆತ್ಮೀಯತೆಯ ಗಾಢತೆ ಹೆಚ್ಚಿತು. ಬಹುಶಃ, ಅದಕ್ಕೆ ನಮ್ಮಿಬ್ಬರ ಹಿನ್ನೆಲೆ ಹೆಚ್ಚು ಕಡಿಮೆ ಒಂದೇ ಆಗಿರುವದು ಕಾರಣವಾಗಿರಬಹುದು. ನಾನು ಇವನೊಟ್ಟಿಗೆ ಬೆಂಗಳೂರಿನಲ್ಲಿರುವಾಗ ಆತನಿಗೆ ಒಳ್ಳೆಯ ಆದಾಯವಿತ್ತು. ನನಗೋ ಅವನ ಕಾಲುಭಾಗದಷ್ಟು ಕೂಡ ಬರುತ್ತಿರಲಿಲ್ಲ. ಆಗೆಲ್ಲ ಅವನು ತನ್ನ ದುಡ್ದನ್ನು ಒಂದು ಡಬ್ಬಿಯಲ್ಲಿಟ್ಟು ನಿನಗೆ ಹೇಗೆ ಬೇಕಾದರು ಖರ್ಚು ಮಾಡೆಂದು ಹೇಳುತ್ತಿದ್ದ. ಆದರೆ ಅವನು ಕೊಟ್ಟ ಸ್ವಾತಂತ್ರ್ಯವನ್ನು ಉಪಯೋಗಪಡಿಸಿಕೊಳ್ಳಲೂ ಮುಜುಗರವಾಗುತ್ತಿದ್ದುದರಿಂದ ನನಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೊಂಡು ಅವನಿಗೆ ಲೆಕ್ಕ ಕೊಡುತ್ತಿದ್ದೆ. ಆ ನಿಟ್ಟಿನಲ್ಲಿ ಅವನ ಉದಾರತನ, ಧಾರಾಳತನ ನಿಜಕ್ಕೂ ಶ್ಲಾಘನೀಯ.
ಜೀವದ ಗೆಳೆಯ ಮಂಜು
ನಾವಿಬ್ಬರೂ ಗಂಟೆಗಟ್ಟಲೆ ನಮ್ಮಿಬ್ಬರ ಸಮಸ್ಯೆಗಳು ಹಾಗೂ ಅವುಗಳನ್ನು ಬಗೆ ಹರಿಸಿಕೊಳ್ಳುವದರ ಬಗ್ಗೆ ಮಾತನಾಡುತ್ತಿದ್ದೆವು. ಈತ ಯಾವಾಗಲೂ ಲವಲವಿಕೆಯಿಂದ ನಗು ನಗುತ್ತಾ ಮಾತನಾಡುತ್ತಿದ್ದ. ಏನೇ ಸಮಸ್ಯೆ ಇರಲಿ ಅದನ್ನು ಸುಲಭವಾಗಿ ನಿಭಾಯಿಸುತ್ತಿದ್ದ. ನಾನು ಯಾವಾಗಲೂ ನನ್ನ ಇತಿಮಿತಿಗಳಲ್ಲಿ ಕನಸುಗಳನ್ನು ಕಾಣುತ್ತಿದ್ದೆ. ಆದರೆ ಈತನ ಕನಸುಗಳೆಲ್ಲ ತನ್ನ ಇತಿಮಿತಿಗಳ ಪರಧಿಯಾಚೆಯೇ ಇರುತ್ತಿದ್ದವು. ಆತ ಯಾವಾಗಲೂ ಹೇಳುತ್ತಿದ್ದ; ನಾವೇನಕ್ಕಾದರೂ ಕೈ ಹಾಕಿದರೆ ದೊಡ್ದದಕ್ಕೇ ಕೈ ಹಾಕಬೇಕು, ಅಂದಾಗಲೇ ನಾವು ಅನ್ಕೊಂಡಿದ್ದನ್ನು ಸಾಧಿಸಲು ಹಾಗೂ ನಮ್ಮ ಗುರಿ ಮುಟ್ಟಲು ಸಾಧ್ಯವಾಗುವದೆಂದು. ಆ ಮೂಲಕ ನನ್ನ ಬಣ್ಣಗೆಟ್ಟ ಬದುಕಿಗೆ ಒಂದಿಷ್ಟು ಬಣ್ಣ ತುಂಬಿದವನು ಇವನು. ಅಲ್ಲದೆ ನನಗೆ ಬಣ್ಣ ಬಣ್ಣದ ಕನಸುಗಳನ್ನು ಸಹ ಕಾಣಲು ಕಲಿಸಿದವನು ಇವನು. ನಾವು ಹೀಗೇ ಮಾತನಾಡುತ್ತಿರಬೇಕಾದರೆ “ಉದಯ್, ನೀನು ಒಂದಿಲ್ಲಾ ಒಂದು ದಿವಸ ವಿದೇಶಕ್ಕೆ ಹೋಗುತ್ತಿ. ನಿನಗೆ ಆ ಪ್ರತಿಭೆಯಿದೆ. ಆರಂಕಿ ಸಂಬಳ ತರುತ್ತಿ. ನಾನು ನಿನ್ನನ್ನು ಏರಪೋರ್ಟಿಗೆ ಸ್ವಾಗತ ಮಾಡಲು ಬರುತ್ತೇನೆ” ಎಂದೆಲ್ಲಾ ಹೇಳುವಾಗ ಮೈ ಜುಂ ಎನ್ನುತ್ತಿದ್ದರೂ ಬರೀ ಎಂ.ಎ ಮಾಡಿದವನಿಗೆ ವಿದೇಶಕ್ಕೆ ಹೋಗಲು ಸಾಧ್ಯವೆ? ಎಂದು ಕಲ್ಪಿಸಿಕೊಳ್ಳಲೂ ಸಾಧ್ಯವಾಗದೆ ಅವನು ಹೇಳುವದು ಯಾಕೋ ಉತ್ಪ್ರೇಕ್ಷೆ ಎನಿಸುತ್ತಿತ್ತು. ಆದರೆ ಈಗ ಆ ಕನಸು ನನಸಾಗಿದ್ದರಿಂದ ಅವನ ಮಾತುಗಳಲ್ಲಿ ಇನ್ನೂ ಹೆಚ್ಚಿನ ವಿಶ್ವಾಸ ಮೂಡಿದೆ. ನಮ್ಮಿಬ್ಬರಲ್ಲಿ ಆತ್ಮೀಯತೆ ಹೆಚ್ಚಿದಷ್ಟು ಒಬ್ಬರಿಗೊಬ್ಬರು ಜಗಳವಾಡಿದ್ದೇವೆ, ವಾದ ಮಾಡಿದ್ದೇವೆ, ಕಿತ್ತಾಡಿದ್ದೇವೆ, ಅಪಾರ್ಥ ಮಾಡಿಕೊಂಡಿದ್ದೇವೆ ಹಾಗೂ ಒಬ್ಬರಿಗೊಬ್ಬರು ಮುನಿಸಿಕೊಂಡು ಮಾತುಬಿಟ್ಟಿದ್ದೇವೆ. ಆದರೂ ಅವನ್ನೆಲ್ಲ ಮರೆತು ಮತ್ತೆ ಒಂದಾಗಿದ್ದೇವೆ. ಒಬ್ಬರಿಗೊಬ್ಬರು ಬೆಳೆಯಲು ಸಹಾಯಕವಾಗಿದ್ದೇವೆ. ಈಗಲೂ ಅಷ್ಟೆ ನಾವಿಬ್ಬರೂ ಎಲ್ಲೇ ಇದ್ದರೂ, ಹೇಗೆ ಇದ್ದರೂ ಅಮೃತವಾಹಿನಿಯೊಂದು ನಮ್ಮಿಬ್ಬರ ಎದೆಗಳ ನಡುವೆ ಹರಿಯುತ್ತಲೇ ಇರುತ್ತದೆ. ಅದಕೆಂದೇ ನನ್ನ ಹೆಂಡತಿ ನನಗೆ ಯಾವಾಗಲೂ “ಮಂಜು ನಿನ್ನ ಮೊದಲ ಹೆಂಡತಿಯೆಂದು” ಆಗಾಗ ತಮಾಷೆ ಮಾಡುವದುಂಟು. ಇದು ಮಾತ್ರವಲ್ಲದೆ ನನ್ನ ಬರವಣಿಗೆಯನ್ನು ಮೆಚ್ಚಿಕೊಂಡು ಹೀಗೆ ಬರೆಯುತ್ತಿರು ಎಂದು ಪ್ರೋತ್ಸಾಹಿಸಿದ್ದಾನೆ. ನಾನು ಬೆಂಗಳೂರಿನಲ್ಲಿ ಬೆಳೆಯಲು ಸಾಕಷ್ಟು ಸಹಾಯ ಮಾಡಿದ ಇವನನ್ನು ಎಷ್ಟು ನೆನೆದರೂ ಸಾಲದು.
ಮಂಜು ಬಗ್ಗೆ ಹೇಳಿದ ಮೇಲೆ ನನ್ನ ಇನ್ನೊಬ್ಬ ಆತ್ಮೀಯ ಗೆಳೆಯ ರಾಘುವಿನ ಬಗ್ಗೆ ಹೇಳಲೇಬೇಕು. ಹಾಗೆ ನೋಡಿದರೆ ಈತ ಮಂಜುಗಿಂತ ಹೆಚ್ಚು ಆತ್ಮೀಯವಾಗಿದ್ದವನು. ಹಾಗೆಂದೇ ಅವನೊಂದಿಗೆ ಇವತ್ತಿಗೂ ತೀರ ಪರ್ಸನಲ್ ಎನಿಸುವಂಥ ವಿಷಯಗಳನ್ನು ಶೇರ್ ಮಡಿಕೊಳ್ಳಲು ಸಾಧ್ಯವಾಗಿರುವದು. ಮಂಜುವಿನ ಹತ್ತಿರ ಶೇರ್ ಮಾಡಿಕೊಳ್ಳುವ ಕೆಲವು ವಿಷಯಗಳನ್ನು ಇವನ ಹತ್ತಿರ ಮಾಡಿಕೊಳ್ಳಲಾಗುವದಿಲ್ಲ. ಈತನ ಹತ್ತಿರ ಶೆರ್ ಮಾಡಿಕೊಳ್ಳುವ ಕೆಲವು ವಿಷ್ಯಗಳನ್ನು ಮಂಜುವಿನ ಹತ್ತಿರ ಶೇರ್ ಮಾಡಿಕೊಳ್ಳಲಾಗುವದಿಲ್ಲ. ಈತನ ಮನೆ ಇದ್ದದ್ದು ಬೆಂಗಳೂರಿನಲ್ಲಿ. ಆದರೆ ಕೆಲಸ ಮಾಡುತ್ತಿದ್ದುದು ಮಂಡ್ಯದ ವೀ.ಸಿ. ಫಾರಂನಲ್ಲಿ. ಮಂಡ್ಯದ ವೀ.ಸಿ.ಫಾರಂನಲ್ಲಿ ಈತ ನನಗೆ ಏನಕ್ಕಾದರೂ ನೊವಾದಾಗ, ಅಂಕಗಳು ಕಡಿಮೆ ಬಂದಾಗ ಸಾಂತ್ವನ ಹೇಳುತ್ತಿದ್ದ ಮತ್ತು ಒಂದಿಷ್ಟು ಭರವಸೆಯನ್ನು ತುಂಬುತ್ತಿದ್ದ. ನನಗೆ ನಮ್ಮ ಅಣ್ಣ ಅತ್ತಿಗೆಯರನ್ನು ದುಡ್ಡು ಕೇಳಲು ಮುಜುಗರವಾದಾಗ ಇವನೇ ಎಷ್ಟೋ ಸಾರಿ ಕೊಟ್ಟಿದ್ದಾನೆ ಮತ್ತು ನಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಮೇಲೆ ಹಿಂದಿರುಗಿಸಿದ್ದೇನೆ. ಅದಲ್ಲದೆ ನಾನು ಬೆಂಗಳೂರಿಗೆ ಬಂದ ಮೇಲೆ ಎಂ.ಎ ಮುಗಿಸಿದ ತಕ್ಷಣ ಬೇರೆ ಬೇರೆ ಕಾಲೇಜುಗಳಿಗೆ ಹೋಗಿ ನನ್ನ ರೆಸ್ಯೂಮ್ ಕೊಟ್ಟು ಬರಲು ಸಹಾಯ ಮಾಡಿದ್ದಾನೆ. ಈತನೊಂದಿಗೂ ತುಂಬಾ ಸಲ ಜಗಳವಾಡಿದ್ದೇನೆ. ಆದರೆ ಎಲ್ಲವನ್ನು ಮರೆತು ಮತ್ತೆ ಒಂದಾಗಿದ್ದೇನೆ. ಇವನಿಗೂ ಕೂಡ ಅನೇಕ ಥ್ಯಾಂಕ್ಸ್ ಗಳನ್ನು ಹೇಳುತ್ತೇನೆ.
ನಾನು ಮತ್ತು ರಾಘು
ನನ್ನ ಹೆಂಡತಿ ರೇಖಾ ಬಗ್ಗೆ ಎಷ್ಟು ಹೆಳಿದರೂ ಕಮ್ಮಿಯೇ! ಅವಳ ಅತಿಯಾದ ಕೋಪ, ಹಟ ಕಿರಿ ಕಿರಿಯೆನಿಸಿದರೂ ಅವಳ ಮಗುವಿನಂಥ ಮನಸ್ಸಿಗೆ ಸೋತು ಹೋಗುತ್ತೇನೆ. ನಾನು ಲಿಬಿಯಾಗೆ ಹೋಗುವಾಗ “ನಾನು, ಮನೆ ಮತ್ತು ಮಗಳು ಭೂಮಿ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ, ನೀನು ನೆಮ್ಮದಿಯಾಗಿ ಹೋಗಿ ಬಿಟ್ಟು ಬಾ” ಎಂದು ನಿರಾಂತಕವಾಗಿ ಕಳಿಸಿಕೊಟ್ಟಾಕೆ. ಬೇರೆಯವರ ಹೆಂಡತಿಯರ ತರ ನನ್ನನ್ನು ಒಡವೆ, ವಸ್ತ್ರ ಎಂದು ಯಾವುದಕ್ಕೂ ಪೀಡಿಸಿದವಳಲ್ಲ. ನನ್ನ ಕನಸುಗಳನ್ನು ಬೆಳೆಸಿದ್ದಾಳೆ. ನಾನು ಏನೇ ಮಾಡಿದರೂ ಅದಕ್ಕೆ ಸೈ ಎಂದಿದ್ದಾಳೆ. ಆಗಾಗ ದುಡ್ಡಿನ ಸಹಾಯ ಮಾಡಿದ್ದಾಳೆ. ನನ್ನ ಬರವಣಿಗೆಯನ್ನು ಮೆಚ್ಚಿಕೊಂಡು ಹುರಿದುಂಬಿಸಿದ್ದಾಳೆ. ಮನೆಯನ್ನು ನನ್ನ ಅನುಪಸ್ಥಿತಿಯಲ್ಲಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ. ಮಗಳು ಭೂಮಿಯನ್ನು ಚನ್ನಾಗಿ ಬೆಳೆಸಿದ್ದಾಳೆ. ಇದಕ್ಕಿಂತ ಹೆಚ್ಚಿಗೇನು ಬೇಕು ಒಬ್ಬ ಗಂಡನಿಗೆ? ಹೀಗಾಗಿ ಅವಳಿಗೆ “ನಿನ್ನ ಪ್ರೀತಿಗೆ, ಅದರ ರೀತಿಗೆ ನನ್ನ ಕಣ್ಣ ಹನಿಗಳೇ ಕಾಣಿಕೆ” ಎಂದು ಹೇಳುತ್ತೆನೆ.
ನಾನು ನನ್ನ ಹೆಂಡತಿ
ಇನ್ನು ನನ್ನ ಭಾವಮೈದುನ ವೆಂಕಟೇಶ್ ಮತ್ತು ನನ್ನ ಅತ್ತೆ ಮಂಗಲಗೌರಮ್ಮನವರ ಸಹಾಯ ದೊಡ್ದದು. ನನ್ನ ಭಾವಮೈದುನ ಸ್ವಭಾವತಃ ತುಂಬಾ ಮೃದು. ಅವರು ನಾನು ಲಿಬಿಯಾಗೆ ಬರುವಾಗ “ರೇಖಾ ಮತ್ತು ಮಗಳ ಭೂಮಿ ಚಿಂತೆ ಬಿಡಿ. ನಾವು ನೋಡಿಕೊಳ್ಳುತ್ತೇವೆ” ಎಂದು ಹೇಳಿ ಕಳಿಸಿಕೊಟ್ಟವರು. ಅಲ್ಲದೇ ನನ್ನ ಮಗಳು ಭೂಮಿಯನ್ನು ಆಗಾಗ್ಗೆ ತಮ್ಮ ಮನೆಯಲ್ಲಿಟ್ಟುಕೊಂಡು ಚನ್ನಾಗಿ ನೋಡಿಕೊಂಡಿದ್ದಾರೆ. ಇವರಿಗೆ ನನ್ನ ವಿಶೇಷವಾದ ಥ್ಯಾಂಕ್ಸ್ ಹೇಳುತ್ತೇನೆ.
ಇನ್ನು ನಾನು ಲಿಬಿಯಾಗೆ ಹೋಗಬೇಕಾದರೆ ನನ್ನ ಬಳಿ ಪಾಸ್ಪೋರ್ಟ್ ಇರಲಿಲ್ಲ. ಅದನ್ನು ತತ್ಕಾಲ್ ಸ್ಕೀಂನಲ್ಲಿ ತೆಗೆಸಿಕೊಡಲು ಸಹೋದ್ಯೋಗಿ ಹರೀಶನ ತಂದೆ ಗಂಗಾಧರವರು ತುಂಬಾ ಸಹಾಯ ಮಾಡಿದರು. ಅವರು ಬೆಂಗಳೂರಿನ ಪೋಲಿಷ್ ಕಚೇರಿಯ ವಿಭಾಗವೊಂದರಲ್ಲಿ D.Y.S.P ಆಗಿ ಕೆಲಸ ಮಾಡುತ್ತಿದ್ದರು. ಅವರು ಬೆಂಗಳೂರಿನ ಪೋಲಿಷ್ ಕಮೀಷನರ್ ಆಫೀಸಿನಲ್ಲಿರುವ A.C.P ರಘುವೀರ್ ಅವರಿಗೆ ಫೋನ್ ಮಾಡಿ ನನಗೆ ಸಹಾಯ ಮಾಡಲು ಹೇಳಿದರು. A.C.P. ರಘುವೀರ್ ಅವರು ಗಂಗಾಧರವರು ಹೇಳಿದ್ದಾರೆ ಎಂಬ ಕಾರಣಕ್ಕೆ ವಿಶೇಷವಾದ ಆಸಕ್ತಿ ವಹಿಸಿ ನನಗೆ ಬೇಗ ಬೇಗನೆ ಪೋಲಿಷ್ ವೆರಿಫಿಕೇಶನ್ ಮುಗಿಸಿ ಕೇವಲ ಎಂಟೇ ದಿನದಲ್ಲಿ ನನಗೆ ಪಾಸ್ಪೋರ್ಟ್ ಸಿಗುವಂತೆ ಮಾಡಿಕೊಟ್ಟರು. ಶ್ರೀಯುತ ಗಂಗಾಧರ್ ಹಾಗೂ ಶ್ರೀಯುತ ರಘುವೀರ್- ಇವರಿಬ್ಬರ ಸಹಾಯವಿರದಿದ್ದರೆ ಖಂಡಿತ ನನಗೆ ಪಾಸ್ಪೋರ್ಟ್ ಸಿಗುತ್ತಿರಲಿಲ್ಲ ಹಾಗೂ ನಾನು ಲಿಬಿಯಾಗೆ ಬರಲಾಗುತ್ತಿರಲಿಲ್ಲ. ಹೀಗಾಗಿ ಇವರಿಬ್ಬರನ್ನು ನಿತ್ಯವೂ ನೆನೆಯುತ್ತಿರುತ್ತೇನೆ.
ನಾನು ಲಿಬಿಯಾಗೆ ಬರಬೇಕಾದರೆ ಒಂದಿಷ್ಟು ದುಡ್ದಿನ ಸಹಾಯ ಮಾಡಿದ ನನ್ನಣ್ಣ ಪ್ರಕಾಶ್ ಮತ್ತು ನನ್ನ ಅಕ್ಕನ ಮಗ ರಾಜಾನಿಗೆ ವಿಶೇಷವಾದ ನಮನಗಳನ್ನು ಸಲ್ಲಿಸುತ್ತೇನೆ. ಒಂದೊಂದು ಸಾರಿ ಮಗಳು ಭೂಮಿ ಹುಶಾರು ತಪ್ಪಿದಾಗ ಬೆಳಿಗ್ಗೆಯೇ ಓಡಿ ಬಂದು ಆಸ್ಪತ್ರೆಗೆ ಸೇರಿಸಿದ ಹಾಗೂ ರೇಖಾಗೆ ಮೈನರ್ ಆಕ್ಷಿಡೆಂಟ್ ಆದಾಗ ಅವಳನ್ನೂ ಆಸ್ಪತ್ರೆಗೆ ಸೇರಿಸಿದ ಗೆಳೆಯ ಮಂಜುವಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಇವರಲ್ಲದೆ ನನ್ನ ಏಳಿಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದ ಬೇರೆ ಎಲ್ಲರನ್ನೂ ಇಲ್ಲಿ ನೆನೆಯುತ್ತೇನೆ.
ಅದಕ್ಕೇ ಹೇಳಿದ್ದು ಒಬ್ಬ ಮನುಷ್ಯನ ಯಶಸ್ಸಿನ ಹಿಂದೆ ಎಷ್ಟೊಂದು ಜನರಿರುತ್ತಾರಲ್ಲವೆ ಎಂದು. ಇವರೆಲ್ಲರ ಋಣ ನನ್ನ ಹೆಗಲ ಮೇಲಿದೆ. ಈ ಋಣವನ್ನು ತೀರಿಸುವದು ಹೇಗೆ? ಹಣದ ರೂಪದಲ್ಲಿಯೆ? ಅಥವಾ ಗಿಫ್ಟ್ ರೂಪದಲ್ಲಿಯೆ? ಹಾಗೆಲ್ಲ ಸಹಾಯವನ್ನು, ಪ್ರೀತಿಯನ್ನು ಹಣದ ರೂಪದಲ್ಲಿ ಅಳೆಯಲಾದೀತೆ? ಬರಿ ಹಣವೊಂದನ್ನೆ ನೀಡಿ ಮಾಡಿದ ಉಪಕಾರವನ್ನು, ಸಹಾಯವನ್ನು ಸಂದಾಯ ಮಾಡುವಂತಿದ್ದರೆ ನಾವೆಲ್ಲ ಋಣಮುಕ್ತರಾಗುತ್ತಿದ್ದೆವೆಯೇ? ಗೊತ್ತಿಲ್ಲ. ಈ ಋಣ ತೀರಿಸುತ್ತೇನೆಯೇ? ಅಥವಾ ಹಾಗೆ ಹೋಗುತ್ತೇನೆಯೇ? ಅದೂ ಗೊತ್ತಿಲ್ಲ.
-ಉದಯ್ ಇಟಗಿ